M’Cheyne Bible Reading Plan
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು
6 ಇಸ್ರೇಲಿನ ಜನರು ಈಜಿಪ್ಟನ್ನು ಬಿಟ್ಟ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ ರಾಜನಾದ ಸೊಲೊಮೋನನು ಇಸ್ರೇಲನ್ನು ಆಳಲಾರಂಭಿಸಿದ ನಾಲ್ಕನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣವು ಆರಂಭಗೊಂಡಿತು. ಅದು ವರ್ಷದ ಎರಡನೆಯ ತಿಂಗಳಾದ ಜೀವ್ (ವೈಶಾಖ) ತಿಂಗಳಲ್ಲಿ ಆರಂಭಗೊಂಡಿತು. 2 ದೇವಾಲಯವು ತೊಂಭತ್ತು ಅಡ್ಡಿ ಉದ್ದ, ಮೂವತ್ತು ಅಡಿ ಅಗಲ ಮತ್ತು ನಲವತ್ತೈದು ಅಡಿ ಎತ್ತರವಾಗಿತ್ತು. 3 ದೇವಾಲಯದ ಮುಂದಿನ ಮಂಟಪವು ಮೂವತ್ತು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲವಾಗಿತ್ತು. ಮುಂದಿನ ಮಂಟಪವು ದೇವಾಲಯದ ಮುಖ್ಯಸ್ಥಳದುದ್ದಕ್ಕೂ ವ್ಯಾಪಿಸಿತ್ತು. ಮಂಟಪದ ಉದ್ದವು ದೇವಾಲಯದ ಅಗಲಕ್ಕೆ ಸಮನಾಗಿತ್ತು. 4 ದೇವಾಲಯದಲ್ಲಿ ಕಿರಿದಾದ ಕಿಟಿಕಿಗಳಿದ್ದವು. ಈ ಕಿಟಕಿಗಳು ಹೊರಗಡೆಯಲ್ಲಿ ಕಿರಿದಾಗಿಯೂ ಮತ್ತು ಒಳಗಡೆ ದೊಡ್ಡದಾಗಿಯೂ ಇದ್ದವು. 5 ನಂತರ ಸೊಲೊಮೋನನು ದೇವಾಲಯದ ಗೋಡೆಯ ಸುತ್ತಲೂ ಸಾಲಾಗಿ ಕೊಠಡಿಗಳನ್ನು ನಿರ್ಮಿಸಿದನು. ಈ ಕೊಠಡಿಗಳನ್ನು ಒಂದರ ಮೇಲೆ ಮತ್ತೊಂದನ್ನು ಕಟ್ಟಿಸಿದನು. ಈ ಸಾಲು ಕೊಠಡಿಗಳು ಮೂರು ಅಂತಸ್ತುಗಳನ್ನು ಹೊಂದಿದ್ದವು. 6 ಈ ಕೊಠಡಿಗಳು ದೇವಾಲಯದ ಗೋಡೆಯನ್ನು ಸ್ಪರ್ಶಿಸಿದರೂ, ಅವುಗಳ ತೊಲೆಗಳು ಗೋಡೆಯಲ್ಲಿ ಸೇರಿಕೊಂಡಿರಲಿಲ್ಲ. ಆ ದೇವಾಲಯದ ಗೋಡೆಯ ಮೇಲ್ಭಾಗವು ತೆಳುವಾಗಿತ್ತು. ಆ ಕೊಠಡಿಗಳ ಒಂದು ಕಡೆಯ ಗೋಡೆಯು, ಅದರ ಕೆಳಭಾಗದ ಗೋಡೆಗಿಂತ ತೆಳುವಾಗಿತ್ತು. ಕೆಳ ಅಂತಸ್ತಿನ ಕೊಠಡಿಗಳ ಅಗಲ ಏಳುವರೆ ಅಡಿಗಳು. ಮಧ್ಯದ ಅಂತಸ್ತಿನ ಕೊಠಡಿಗಳ ಅಗಲ ಒಂಭತ್ತು ಅಡಿಗಳು. ಅದರ ಮೇಲಿನ ಕೊಠಡಿಗಳ ಅಗಲ ಹತ್ತೂವರೆ ಅಡಿಗಳು. 7 ಈ ಗೋಡೆಗಳನ್ನು ಕಟ್ಟಲು ಕೆಲಸಗಾರರು ದೊಡ್ಡದೊಡ್ಡ ಕಲ್ಲುಗಳನ್ನು ಬಳಸಿದ್ದರು. ಕಲ್ಲುಗಣಿಯಿಂದ ಕಲ್ಲುಗಳನ್ನು ಹೊರಗೆ ತೆಗೆಯುವಾಗಲೇ ಕೆಲಸಗಾರರು ಈ ಕಲ್ಲುಗಳನ್ನು ಕೆತ್ತಿದ್ದರು. ಆದ್ದರಿಂದ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಉಪಕರಣಗಳ ಶಬ್ದವು ದೇವಾಲಯದಲ್ಲಿ ಕೇಳಿಸುತ್ತಿರಲಿಲ್ಲ.
8 ಕೆಳಅಂತಸ್ತಿನ ಕೊಠಡಿಗಳ ಪ್ರವೇಶವು ದೇವಾಲಯದ ದಕ್ಷಿಣದ ಕಡೆಗಿತ್ತು. ಎರಡನೆಯ ಅಂತಸ್ತಿನ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳು ಒಳಗಡೆಯಿದ್ದು, ಅಲ್ಲಿಂದ ಮೂರನೆಯ ಅಂತಸ್ತಿನ ಕೊಠಡಿಗಳಿಗೂ ಹೋಗಬಹುದಾಗಿತ್ತು.
9 ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. ದೇವಾಲಯದೊಳಗಿನ ಪ್ರತಿಯೊಂದು ಭಾಗವನ್ನು ದೇವದಾರು ಮರದ ಹಲಗೆಗಳಿಂದ ಹೊದಿಸಿದನು. 10 ಸೊಲೊಮೋನನು ದೇವಾಲಯದ ಸುತ್ತಲಿನ ಕೊಠಡಿಗಳ ನಿರ್ಮಾಣವನ್ನೂ ಮುಗಿಸಿದನು. ಒಂದೊಂದು ಅಂತಸ್ತು ಏಳೂವರೆ ಅಡಿಗಳಷ್ಟು ಎತ್ತರವಾಗಿತ್ತು. ಈ ಕೊಠಡಿಗಳ ದೇವದಾರು ತೊಲೆಗಳು ದೇವಾಲಯವನ್ನು ಸ್ಪರ್ಶಿಸುತ್ತ್ತಿದ್ದವು.
11-12 ಯೆಹೋವನು ಸೊಲೊಮೋನನಿಗೆ, “ನನ್ನ ಎಲ್ಲಾ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ನೀನು ವಿಧೇಯನಾಗಿದ್ದರೆ, ನಿನ್ನ ತಂದೆಯಾದ ದಾವೀದನಿಗೆ ನಾನು ವಾಗ್ದಾನ ಮಾಡಿದವುಗಳನ್ನು ನಿನಗಾಗಿ ಈಡೇರಿಸುತ್ತೇನೆ. 13 ನೀನು ನಿರ್ಮಿಸುತ್ತಿರುವ ಈ ದೇವಾಲಯದಲ್ಲಿ ನಾನು ಇಸ್ರೇಲರೊಂದಿಗೆ ವಾಸಿಸುತ್ತೇನೆ. ನಾನು ಅವರನ್ನು ಎಂದೆಂದಿಗೂ ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು.
14 ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. 15 ದೇವಾಲಯದ ಒಳಗಿನ ಗೋಡೆಗಳಿಗೆ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಕಲ್ಲಿನ ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಸಿದ್ದರು. 16 ದೇವಾಲಯದ ಹಿಂಭಾಗದಲ್ಲಿ ಅವರು ಮೂವತ್ತು ಅಡಿ ಉದ್ದವಾಗಿರುವ ಒಂದು ಕೊಠಡಿಯನ್ನು ನಿರ್ಮಿಸಿದ್ದರು. ಈ ಕೊಠಡಿಯ ಗೋಡೆಗಳಿಗೂ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಈ ಕೊಠಡಿಯನ್ನು ಮಹಾ ಪವಿತ್ರಸ್ಥಳವೆಂದು ಕರೆದರು. 17 ಈ ಮಹಾ ಪವಿತ್ರಸ್ಥಳದ ಎದುರಿನಲ್ಲಿ ದೇವಾಲಯದ ಮುಖ್ಯ ಭಾಗವಿದೆ. ಈ ಕೊಠಡಿಯ ಉದ್ದ ಅರವತ್ತು ಅಡಿ. 18 ಈ ಕೊಠಡಿಯ ಗೋಡೆಗಳಿಗೆ ದೇವದಾರು ಮರದ ಹೊದಿಕೆಗಳನ್ನು ಹೊದಿಸಲಾಗಿದ್ದು ಈ ಗೋಡೆಗಳಲ್ಲಿದ್ದ ಯಾವುದೇ ಕಲ್ಲುಗಳು ಕಂಡುಬರುತ್ತಿರಲಿಲ್ಲ. ಈ ದೇವದಾರು ಮರದ ಹಲಗೆಗಳ ಮೇಲೆ ಹೂಗಳ ಮತ್ತು ಬಳ್ಳಿಗಳ ಚಿತ್ರಗಳನ್ನು ಕೆತ್ತಲಾಗಿತ್ತು.
19 ಸೊಲೊಮೋನನು ದೇವಾಲಯದ ಹಿಂದಿನ ಭಾಗದಲ್ಲಿ ಒಳಗಡೆ ಒಂದು ಕೋಣೆಯನ್ನು ಸಿದ್ಧಪಡಿಸಿದನು. ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡುವುದಕ್ಕಾಗಿಯೇ ಈ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು. 20 ಈ ಕೊಠಡಿಯು ಮೂವತ್ತು ಅಡಿ ಉದ್ದ ಮೂವತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಎತ್ತರವಾಗಿತ್ತು. 21 ಸೊಲೊಮೋನನು ಶುದ್ಧ ಚಿನ್ನದ ತಗಡನ್ನು ಈ ಕೊಠಡಿಗೆ ಹೊದಿಸಿದನು. ಈ ಕೊಠಡಿಯ ಮುಂದೆ ಧೂಪವೇದಿಕೆಯನ್ನು ಅವನು ನಿರ್ಮಿಸಿದನು. ಅವನು ಆ ವೇದಿಕೆಗೆ ಚಿನ್ನದ ಹೊದಿಕೆಯನ್ನೂ ಅದರ ಸುತ್ತಲೂ ಚಿನ್ನದ ಸರಪಣಿಗಳನ್ನೂ ಜೋಡಿಸಿದನು. ಆ ಕೊಠಡಿಯಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳಿದ್ದವು. ಆ ಪ್ರತಿಮೆಗಳಿಗೆ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. 22 ದೇವಾಲಯಕ್ಕೆಲ್ಲ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. ಅಲ್ಲದೆ, ಮಹಾ ಪವಿತ್ರಸ್ಥಳದ ಮುಂದಿನ ಯಜ್ಞವೇದಿಕೆಗೂ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.
23 ಕೆಲಸಗಾರರು ರೆಕ್ಕೆಗಳಿರುವ ಎರಡು ಕೆರೂಬಿಗಳ ಪ್ರತಿಮೆಗಳನ್ನು ಆಲೀವ್ ಮರದಿಂದ ಮಾಡಿ ಅವುಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಒಂದೊಂದು ಪ್ರತಿಮೆಯು ಹದಿನೈದು ಅಡಿ ಎತ್ತರವಾಗಿತ್ತು. 24-26 ಈ ಎರಡು ಕೆರೂಬಿಗಳು ಅಳತೆಯಲ್ಲಿಯೂ ಆಕಾರದಲ್ಲಿಯೂ ಒಂದೇ ರೀತಿಯಾಗಿದ್ದವು. ಪ್ರತಿಯೊಂದು ಕೆರೂಬಿಗಳಿಗೆ ಎರಡು ರೆಕ್ಕೆಗಳಿದ್ದವು. ಪ್ರತಿಯೊಂದು ರೆಕ್ಕೆಯ ಉದ್ದ ಏಳುವರೆ ಅಡಿಗಳು. ಒಂದು ರೆಕ್ಕೆಯಿಂದ ಮತ್ತೊಂದು ರೆಕ್ಕೆಯ ಕೊನೆಗಿರುವ ಅಂತರ ಹದಿನೈದು ಅಡಿಗಳು. ಪ್ರತಿಯೊಂದು ಕೆರೂಬಿಯ ಎತ್ತರ ಹದಿನೈದು ಅಡಿಗಳು. 27 ಈ ಕೆರೂಬಿಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಅವುಗಳು ಒಂದಕ್ಕೊಂದು ಸಮೀಪದಲ್ಲಿದ್ದವು. ಅವುಗಳ ರೆಕ್ಕೆಗಳು ಕೊಠಡಿಯ ಮಧ್ಯಭಾಗದಲ್ಲಿ ಒಂದನ್ನೊಂದು ತಾಕುತ್ತಿದ್ದವು. ಉಳಿದೆರಡು ರೆಕ್ಕೆಗಳು ಎರಡು ಕಡೆಗಳಲ್ಲಿದ್ದ ಗೋಡೆಗಳನ್ನು ತಾಕುತ್ತಿದ್ದವು. 28 ಈ ಎರಡು ಕೆರೂಬಿಗಳಿಗೆ ಚಿನ್ನದ ತಗಡನ್ನು ಹೊದಿಸಲಾಗಿತ್ತು.
29 ಮುಖ್ಯಕೊಠಡಿಯ ಮತ್ತು ಒಳಕೋಣೆಯ ಗೋಡೆಗಳ ಮೇಲೆ ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಕೆತ್ತಿದ್ದರು. 30 ಈ ಎರಡು ಕೊಠಡಿಗಳ ನೆಲಕ್ಕೆ ಚಿನ್ನದ ತಗಡನ್ನು ಹಾಸಿದ್ದರು.
31 ಕೆಲಸಗಾರರು ಆಲೀವ್ ಮರದ ಎರಡು ಬಾಗಿಲುಗಳನ್ನು ಮಾಡಿದರು. ಅವರು ಮಹಾಪವಿತ್ರ ಸ್ಥಳದ ಪ್ರವೇಶದ್ವಾರದಲ್ಲಿ ಈ ಎರಡು ಬಾಗಿಲುಗಳನ್ನು ಇಟ್ಟರು. ಬಾಗಿಲಿನ ಚೌಕಟ್ಟನ್ನು ಪಂಚಕೋಣಾಕೃತಿಯಲ್ಲಿ ಮಾಡಿದ್ದರು. 32 ಅವರು ಆಲೀವ್ ಮರದಿಂದ ಎರಡು ಬಾಗಿಲುಗಳನ್ನು ಮಾಡಿದರು. ಕೆಲಸಗಾರರು ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದರು. ನಂತರ ಬಾಗಿಲುಗಳಿಗೆ ಚಿನ್ನವನ್ನು ಹೊದಿಸಿದರು.
33 ಅವರು ಮುಖ್ಯ ಕೊಠಡಿಯ ಪ್ರವೇಶಕ್ಕೂ ಬಾಗಿಲುಗಳನ್ನು ಮಾಡಿದರು. ಅವರು ಚೌಕಾಕಾರದ ಬಾಗಿಲಿನ ಚೌಕಟ್ಟನ್ನು ಆಲೀವ್ ಮರದಿಂದ ಮಾಡಿದರು. 34 ನಂತರ ಅವರು ತುರಾಯಿ ಮರದ ಬಾಗಿಲುಗಳನ್ನು ಮಾಡಿದರು. ಅಲ್ಲಿ ಎರಡು ಬಾಗಿಲುಗಳಿದ್ದು, ಪ್ರತಿಯೊಂದೂ ಮಡಿಸುವಂತಹ ಎರಡು ಭಾಗಗಳನ್ನು ಹೊಂದಿದ್ದವು. 35 ಅವರು ಕೆರೂಬಿಗಳ, ಖರ್ಜೂರವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದ್ದರು. ಅವರು ಅವುಗಳಿಗೆ ಚಿನ್ನವನ್ನು ಹೊದಿಸಿದರು.
36 ನಂತರ ಅವರು ಒಳಾಂಗಣವನ್ನು ನಿರ್ಮಿಸಿದರು. ಅವರು ಒಳಾಂಗಣದ ಸುತ್ತಲೂ ಗೋಡೆಗಳನ್ನು ನಿರ್ಮಿಸಿದರು. ಪ್ರತಿಯೊಂದು ಗೋಡೆಯು ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನೂ ದೇವದಾರುಮರದ ತೊಲೆಗಳ ಒಂದು ಸಾಲನ್ನೂ ಹೊಂದಿತ್ತು.
37 ಅವರು ವರ್ಷದ ಎರಡನೆಯ ತಿಂಗಳಿನ ಜೀವ್ (ವೈಶಾಖ) ಮಾಸದಲ್ಲಿ ದೇವಾಲಯವನ್ನು ಕಟ್ಟಲಾರಂಭಿಸಿದರು. ಇಸ್ರೇಲನ್ನು ಸೊಲೊಮೋನನು ಆಳಲು ಆರಂಭಿಸಿದ ನಾಲ್ಕನೆಯ ವರ್ಷದಲ್ಲಿ ಇದು ನಡೆಯಿತು. 38 ಈ ದೇವಾಲಯದ ನಿರ್ಮಾಣವು ವರ್ಷದ ಎಂಟನೇ ತಿಂಗಳಾದ ಬುಲ್ (ಕಾರ್ತಿಕ) ತಿಂಗಳಲ್ಲಿ ಮುಗಿಯಿತು. ಅದು ಸೊಲೊಮೋನನ ಆಳ್ವಿಕೆಯ ಹನ್ನೊಂದನೆಯ ವರ್ಷವಾಗಿತ್ತು. ದೇವಾಲಯವನ್ನು ಕಟ್ಟಲು ಏಳು ವರ್ಷ ಹಿಡಿಯಿತು. ದೇವಾಲಯವನ್ನು ಅದರ ನಿಯಮಾನುಸಾರವಾಗಿ ಕಟ್ಟಿದರು.
ಅನ್ಯಜನರಿಗಾಗಿ ಪೌಲನ ಸೇವೆ
3 ನಾನು ಕ್ರಿಸ್ತಯೇಸುವಿನ ಸೆರೆಯಾಳು. ಯೆಹೂದ್ಯರಲ್ಲದ ನಿಮಗೋಸ್ಕರ ನಾನು ಸೆರೆಯಾಳಾಗಿದ್ದೇನೆ. 2 ದೇವರು ತನ್ನ ಕೃಪೆಯ ಮೂಲಕ ನನಗೆ ಈ ಕೆಲಸವನ್ನು ಕೊಟ್ಟನೆಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ದೇವರು ಈ ಕೆಲಸವನ್ನು ನನಗೆ ಕೊಟ್ಟನು. 3 ದೇವರು ತನ್ನ ರಹಸ್ಯವಾದ ಯೋಜನೆಯನ್ನು ನನಗೆ ತಿಳಿಸಿದನು ಮತ್ತು ತೋರಿಸಿದನು. ಇದರ ಬಗ್ಗೆ ನಾನು ಆಗಲೇ ನಿಮಗೆ ಸ್ವಲ್ಪ ಬರೆದಿದ್ದೇನೆ. 4 ನಾನು ಬರೆದಿರುವ ಈ ಸಂಗತಿಗಳನ್ನು ನೀವು ಓದಿದರೆ ಕ್ರಿಸ್ತನ ರಹಸ್ಯವಾದ ಸತ್ಯವನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂಬುದು ನಿಮಗೇ ತಿಳಿಯುತ್ತದೆ. 5 ಹಿಂದಿನ ಕಾಲಗಳಲ್ಲಿದ್ದ ಜನರಿಗೆ ಆ ರಹಸ್ಯಸತ್ಯವನ್ನು ಆತನು ತಿಳಿಸಲಿಲ್ಲ. ಈಗಲಾದರೊ ದೇವರು ತನ್ನ ಆತ್ಮನ ಮೂಲಕವಾಗಿ ಆ ರಹಸ್ಯಸತ್ಯವನ್ನು ತನ್ನ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ತೋರಿಸಿದ್ದಾನೆ. 6 ಇದು ಆ ರಹಸ್ಯಸತ್ಯ: ಯೆಹೂದ್ಯರಲ್ಲದವರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಇರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹಕ್ಕೆ ಸೇರಿದವರೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆ.
7 ದೇವರು ನೀಡಿದ ವಿಶೇಷವಾದ ಕೃಪಾವರದಿಂದ ನಾನು ಸುವಾರ್ತೆಯನ್ನು ತಿಳಿಸಲು ಸೇವಕನಾದೆನು. ದೇವರು ತನ್ನ ಶಕ್ತಿಯನ್ನು ಪ್ರಯೋಗಿಸಿ ನನಗೆ ಆ ಕೃಪಾವರವನ್ನು ಕೊಟ್ಟನು. 8 ದೇವಜನರಲ್ಲಿ ನಾನೇ ಅತ್ಯಲ್ಪನು. ಕ್ರಿಸ್ತನ ಐಶ್ವರ್ಯವನ್ನು ಕುರಿತಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂದು ದೇವರು ನನಗೆ ಈ ಕೃಪಾವರವನ್ನು ಕೊಟ್ಟನು. ಆ ಐಶ್ವರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. 9 ರಹಸ್ಯವಾಗಿದ್ದ ತನ್ನ ಯೋಜನೆಯನ್ನು ಜನರೆಲ್ಲರಿಗೆ ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಆದಿಯಿಂದಲೂ ಅದು ದೇವರಲ್ಲಿ ಮರೆಯಾಗಿತ್ತು. ಪ್ರತಿಯೊಂದನ್ನೂ ಸೃಷ್ಟಿಸಿದಾತನು ದೇವರೇ. 10 ತನ್ನ ನಾನಾ ವಿಧವಾದ ಜ್ಞಾನವು ಆಕಾಶಮಂಡಲದಲ್ಲಿರುವ ಎಲ್ಲಾ ಅಧಿಪತಿಗಳಿಗೂ ಅಧಿಕಾರಿಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶವಾಗಿತ್ತು. 11 ಅನಾದಿಕಾಲದಿಂದಲೂ ಇದೇ ದೇವರ ಯೋಜನೆಯಾಗಿತ್ತು. ದೇವರು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ತನ್ನ ಯೋಜನೆಗನುಸಾರವಾಗಿ ಮಾಡಿದನು. 12 ನಾವು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ದೇವರ ಬಳಿಗೆ ಸ್ವತಂತ್ರದಿಂದ ಮತ್ತು ನಿರ್ಭಯದಿಂದ ಹೋಗಲು ಸಾಧ್ಯವಾಯಿತು. 13 ಹೀಗಿರಲಾಗಿ ನಾನು ನಿಮಗೋಸ್ಕರ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ನಿರಾಶರಾಗಿ ಧೈರ್ಯಗೆಡಬೇಡಿ. ನನ್ನ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಕ್ರಿಸ್ತನ ಪ್ರೀತಿ
14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ. 15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ. 16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ. 17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ. 18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. 19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು. 21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.
ಇಸ್ರೇಲ್ ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದು
36 “ನರಪುತ್ರನೇ, ನನ್ನ ಪರವಾಗಿ ಇಸ್ರೇಲಿನ ಪರ್ವತದೊಂದಿಗೆ ಮಾತನಾಡು. ಅವುಗಳಿಗೆ ಯೆಹೋವನ ಮಾತುಗಳನ್ನು ಕೇಳಲು ಹೇಳು. 2 ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಅವುಗಳಿಗೆ ಹೇಳು. ‘ವೈರಿಗಳು ನಿನಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನಾಡಿದ್ದಾರೆ. ಒಳ್ಳೆಯದಾಯಿತು. ಈಗ ಪುರಾತನ ಪರ್ವತಗಳು ನಮ್ಮದಾದವು ಎಂದು ಹೇಳುತ್ತಾರೆ.’
3 “ಆದ್ದರಿಂದ ಹೋಗಿ ಇಸ್ರೇಲಿನ ಪರ್ವತಗಳಿಗೆ ನನ್ನ ಪರವಾಗಿ ಹೇಳು. ಇದು ಒಡೆಯನಾದ ಯೆಹೋವನ ನುಡಿ ಎಂದು ಹೇಳು. ‘ವೈರಿಗಳು ನಿನ್ನ ಪಟ್ಟಣಗಳನ್ನೆಲ್ಲಾ ನಾಶಮಾಡಿ ಎಲ್ಲಾ ದಿಕ್ಕುಗಳಿಂದ ನುಗ್ಗಿ ನಿನ್ನ ಮೇಲೆ ಧಾಳಿ ಮಾಡಿರುತ್ತಾರೆ. ನೀನು ಬೇರೆಯವರ ವಶವಾಗಬೇಕೆಂಬದಾಗಿ ಹೀಗೆ ಮಾಡಿದರು. ಜನರು ನಿನ್ನ ವಿಷಯವಾಗಿ ಗುಜುಗುಜು ಮಾತನಾಡಿದರು.’”
4 ಆದ್ದರಿಂದ ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಮಾತುಗಳಿಗೆ ಕಿವಿಗೊಡಿರಿ! ನನ್ನ ಒಡೆಯನಾದ ಯೆಹೋವನು ಬೆಟ್ಟಗುಡ್ಡಗಳಿಗೂ ತೊರೆಗಳಿಗೂ ಕಣಿವೆಗಳಿಗೂ ಪಾಳುಬಿದ್ದ ಸ್ಥಳಗಳಿಗೂ ಮತ್ತು ಅನ್ಯಜನರಿಂದ ಕೊಳ್ಳೆಹೊಡೆಯಲ್ಪಟ್ಟು ಅಪಹ್ಯಾಸಕ್ಕೆ ಒಳಗಾಗಿ ನಿರ್ಜನವಾಗಿರುವ ಪಟ್ಟಣಗಳಿಗೂ ಹೀಗೆನ್ನುತ್ತಾನೆ: 5 “ಎದೋಮಿನ ಬಗ್ಗೆಯೂ ಉಳಿದ ಆ ವಿದೇಶಗಳ ಬಗ್ಗೆಯೂ ನಾನು ರೋಷದಿಂದ ಮಾತಾಡುತ್ತಿದ್ದೇನೆಂದು ಪ್ರಮಾಣ ಮಾಡುತ್ತೇನೆ. ಆ ಜನಾಂಗಗಳು ನನ್ನ ದೇಶವನ್ನು ತಮ್ಮ ಸ್ವಾಸ್ತ್ಯವನ್ನಾಗಿ ಸಂತೋಷದಿಂದ ತೆಗೆದುಕೊಂಡರು. ಅವರು ಅದನ್ನು ವಶಪಡಿಸಿಕೊಂಡು ಸೂರೆ ಮಾಡಿದಾಗ ಮತ್ತು ನನ್ನ ಜನರಿಗೆ ಅವಮಾನ ಮಾಡಿದಾಗ ನನ್ನ ಜನರನ್ನು ಅವರು ಎಷ್ಟೊಂದು ದ್ವೇಷಿಸುತ್ತಾರೆಂದು ತೋರಿಸುತ್ತಾ ಉಲ್ಲಾಸಪಟ್ಟರು.
6 “ಇಸ್ರೇಲ್ ದೇಶದ ವಿಷಯವಾಗಿ ಅವರಿಗೆ ಹೇಳು. ಪರ್ವತ, ಬೆಟ್ಟ, ತಗ್ಗು, ಹೊಳೆಗಳಿಗೆ ಹೇಳು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ತಿಳಿಸು. ‘ನೀನು ಆ ದೇಶಗಳವರ ನಿಂದನೆಯ ಮಾತುಗಳನ್ನು ಕೇಳಬೇಕಾಯಿತಲ್ಲಾ ಎಂದು ನನ್ನ ಹೃದಯವು ಸಿಟ್ಟಿನಲ್ಲಿ ಕುದಿಯುತ್ತದೆ.’”
7 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಸುತ್ತಲೂ ಇರುವ ದೇಶಗಳು ನಿನ್ನ ವಿರುದ್ಧವಾಗಿ ಅವಮಾನಕರವಾದ ಮಾತುಗಳನ್ನು ಆಡಿದ್ದರಿಂದ ಅವುಗಳನ್ನು ನಾನು ದಂಡಿಸುವುದಾಗಿ ಪರಲೋಕದ ಕಡೆಗೆ ನನ್ನ ಕೈಯೆತ್ತಿ ಪ್ರಮಾಣ ಮಾಡುತ್ತೇನೆ.
8 “ಆದರೆ ಇಸ್ರೇಲಿನ ಪರ್ವತಗಳೇ, ನೀವು ಹೊಸ ಮರಗಳನ್ನು ಬೆಳೆಯಿಸಿ ನನ್ನ ಜನರಾದ ಇಸ್ರೇಲರಿಗೆ ಹಣ್ಣುಗಳನ್ನು ಒದಗಿಸುತ್ತೀರಿ. 9 ನಾನು ನಿನ್ನೊಂದಿಗಿದ್ದು ಸಹಾಯಮಾಡುತ್ತೇನೆ. ಜನರು ನಿನ್ನ ನೆಲವನ್ನು ಉಳುವರು; ಬೀಜವನ್ನು ಬಿತ್ತುವರು. 10 ನಿನ್ನಲ್ಲಿ ಅನೇಕಾನೇಕ ಮಂದಿ ವಾಸಿಸುವರು. ಇಡೀ ಇಸ್ರೇಲ್ ಜನಾಂಗದವರು ಅಲ್ಲಿ ವಾಸಮಾಡುವರು. ಪಟ್ಟಣಗಳು ಜನಭರಿತವಾಗುವವು. ಹಾಳಾದ ಸ್ಥಳಗಳೆಲ್ಲಾ ತಿರುಗಿ ಕಟ್ಟಲ್ಪಡುವವು. 11 ನಾನು ನಿನಗೆ ಅನೇಕ ಜನರನ್ನೂ ಪ್ರಾಣಿಗಳನ್ನೂ ಕೊಡುವೆನು. ಪ್ರಾಣಿಗಳು ವೃದ್ಧಿಯಾಗುವವು ಮತ್ತು ಜನರು ಹೆಚ್ಚು ಮಕ್ಕಳನ್ನು ಪಡೆಯುವರು. ಹಿಂದಿನ ಕಾಲದಲ್ಲಿ ನಿನ್ನ ದೇಶ ಜನಭರಿತವಾಗಿದ್ದಂತೆ ಈಗಲೂ ಆಗುವ ಹಾಗೆ ನಾನು ಜನರನ್ನು ತರಿಸುವೆನು. ನಿನ್ನ ದೇಶವು ಹಿಂದೆ ಇದ್ದುದಕ್ಕಿಂತಲೂ ಉತ್ತಮ ದೇಶವನ್ನಾಗಿ ಮಾಡುವೆನು. ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವೆ. 12 ಹೌದು, ನಾನು ಅನೇಕಾನೇಕ ಇಸ್ರೇಲ್ ಜನರನ್ನು ನಿನ್ನ ದೇಶಕ್ಕೆ ನಡೆಸುವೆನು. ನೀನು ಅವರ ಸೊತ್ತಾಗುವೆ. ಅವರ ಮಕ್ಕಳನ್ನು ನೀನು ಮತ್ತೆಂದಿಗೂ ತೆಗೆದುಹಾಕುವುದಿಲ್ಲ.”
13 ನನ್ನ ಒಡೆಯನಾದ ಯೆಹೋವನು ಹೇಳಿದ ಮಾತುಗಳಿವು, “ಇಸ್ರೇಲ್ ದೇಶವೇ, ಜನರು ನಿನ್ನ ವಿಷಯದಲ್ಲಿ ಕೆಟ್ಟ ಮಾತುಗಳನ್ನು ಆಡುತ್ತಾರೆ. ನೀನು ನಿನ್ನ ಜನರನ್ನು ನಾಶ ಮಾಡಿದಿ ಎಂದು ಹೇಳುತ್ತಾರೆ. ನಿನ್ನ ಮಕ್ಕಳನ್ನು ನೀನೇ ತೆಗೆದುಹಾಕಿದಿ ಎಂದು ಹೇಳುತ್ತಾರೆ. 14 ಆದರೆ ಇನ್ನು ಮುಂದೆ ನೀನು ಜನರನ್ನು ನಾಶಮಾಡುವುದಿಲ್ಲ. ಅವರ ಮಕ್ಕಳನ್ನು ನೀನು ತೆಗೆದುಬಿಡುವುದಿಲ್ಲ.” ಇದು ಒಡೆಯನಾದ ಯೆಹೋವನ ನುಡಿ. 15 “ನಾನು ಆ ಜನಾಂಗಗಳು ಇನ್ನು ಮೇಲೆ ನಿನ್ನನ್ನು ತುಚ್ಛೀಕರಿಸಲು ಬಿಡುವದಿಲ್ಲ. ಅವರ ಮಾತುಗಳಿಂದ ಇನ್ನು ನೀನು ಬೇಸರಪಟ್ಟುಕೊಳ್ಳಲಾರೆ. ನಿನ್ನ ಜನರಿಂದ ಮಕ್ಕಳನ್ನು ಕಿತ್ತುಕೊಳ್ಳಲಾರೆ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಯೆಹೋವನು ತನ್ನ ಪರಿಶುದ್ಧ ನಾಮವನ್ನು ಅಪಕೀರ್ತಿಗೆ ಒಳಪಡಿಸುವದಿಲ್ಲ
16 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, 17 “ನರಪುತ್ರನೇ, ಇಸ್ರೇಲ್ ಜನಾಂಗವು ತನ್ನ ಸ್ವದೇಶದಲ್ಲಿ ವಾಸಿಸಿತು. ಆದರೆ ಅವರು ನಡೆಸಿದ ದುಷ್ಟತನದಿಂದ ದೇಶವನ್ನು ಮುಟ್ಟಾದ ಸ್ತ್ರೀಯಂತೆ ಅಶುದ್ಧಗೊಳಿಸಿದರು. 18 ಆ ದೇಶದಲ್ಲಿ ಜನರನ್ನು ಕೊಲೆಮಾಡಿ ಅವರ ರಕ್ತವನ್ನು ನೆಲದ ಮೇಲೆ ಸುರಿದರು. ತಮ್ಮ ವಿಗ್ರಹಗಳಿಂದ ದೇಶವನ್ನು ಹೊಲಸು ಮಾಡಿದರು. ಆದ್ದರಿಂದ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಬುದನ್ನು ನಾನು ತೋರಿಸಿದೆನು. 19 ದೇಶಾಂತರಕ್ಕೆ ಅವರನ್ನು ಚದರಿಸಿ, ಎಲ್ಲಾ ದೇಶಗಳಲ್ಲಿ ಅವರನ್ನು ಹರಡಿಸಿಬಿಟ್ಟೆನು. ಅವರು ಮಾಡಿದ ದುಷ್ಟತನಕ್ಕೆ ನಾನು ಶಿಕ್ಷಿಸಿದೆನು. 20 ಆ ದೇಶಗಳಲ್ಲಿರುವಾಗಲೂ ಅವರು ನನ್ನ ಹೆಸರಿಗೆ ಅಪಕೀರ್ತಿ ತಂದರು. ಹೇಗೆ? ‘ಇವರು ಯೆಹೋವನ ಜನರು. ಆತನು ಕೊಟ್ಟ ದೇಶವನ್ನು ಇವರು ತೊರೆದರು.’ ಎಂದು ಆ ದೇಶದ ಜನರು ಅನ್ನುವಂತೆ ಮಾಡಿದರು.
21 “ಇಸ್ರೇಲರು ತಾವು ಹೋದ ದೇಶಗಳಲ್ಲೆಲ್ಲಾ ನನ್ನ ಹೆಸರಿಗೆ ಅವಮಾನ ಮಾಡಿದರು. ಆದ್ದರಿಂದ ನನ್ನ ಹೆಸರನ್ನು ಕುರಿತಾಗಿ ದುಃಖಪಟ್ಟೆನು. 22 ಆದ್ದರಿಂದ ಇಸ್ರೇಲರಿಗೆ ಹೀಗೆ ಹೇಳು: ‘ಇಸ್ರೇಲರೇ, ನೀವು ಹೋದ ಕಡೆಗಳಲ್ಲೆಲ್ಲಾ ನನ್ನ ಹೆಸರಿಗೆ ಅವಮಾನ ಮಾಡಿದ್ದೀರಿ. ನಾನು ಇದನ್ನು ನಿಲ್ಲಿಸುವುದಕ್ಕೆ ಎನುಬೇಕಾದರೂ ಮಾಡುತ್ತೇನೆ. ಇಸ್ರೇಲೇ, ನಾನು ಈ ಕಾರ್ಯವನ್ನು ನಿನ್ನ ಹೆಸರಿಗೋಸ್ಕರ ಮಾಡದೆ ನನ್ನ ಪರಿಶುದ್ಧ ಹೆಸರಿನ ನಿಮಿತ್ತ ನಾನು ಮಾಡುತ್ತೇನೆ. 23 ನನ್ನ ಹೆಸರು ಅತ್ಯಂತ ಪವಿತ್ರವಾದದ್ದು ಎಂದು ನಾನು ಅವರಿಗೆ ತೋರಿಸುವೆನು. ನನ್ನ ಪವಿತ್ರ ನಾಮವನ್ನು ಆ ದೇಶಗಳಲ್ಲಿ ಅವಮಾನಪಡಿಸಿದಿರಿ. ಆದರೆ ನಾನು ಪವಿತ್ರನೆಂದು ನಿಮಗೆ ತೋರಿಸುತ್ತೇನೆ. ನನ್ನ ನಾಮವನ್ನು ಗೌರವಿಸಲು ನಾನು ನಿಮಗೆ ಕಲಿಸುವೆನು. ಆಗ ಆ ದೇಶದವರಿಗೆ ನಾನು ಯೆಹೋವನು ಎಂದು ಗೊತ್ತಾಗುವದು.’” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
24 ದೇವರು ಹೇಳಿದ್ದೇನೆಂದರೆ, “ನಾನು ಆ ದೇಶಗಳಿಂದ ನಿಮ್ಮನ್ನು ತೆಗೆದು, ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಸ್ವದೇಶಕ್ಕೆ ತಿರುಗಿ ಬರಮಾಡುವೆನು. 25 ಆಗ ನಾನು ಶುದ್ಧ ನೀರನ್ನು ನಿಮ್ಮ ಮೇಲೆ ಚಿಮುಕಿಸಿ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವೆನು. ಆ ವಿಗ್ರಹಗಳ ಹೊಲಸನ್ನು ನಿಮ್ಮಿಂದ ನಾನು ತೊಳೆದುಹಾಕಿ ನಿಮ್ಮನ್ನು ಶುದ್ಧರನ್ನಾಗಿ ಮಾಡುವೆನು.” 26 ದೇವರು ಹೇಳಿದ್ದೇನೆಂದರೆ, “ನಾನು ನಿಮ್ಮಲ್ಲಿ ಒಂದು ಹೊಸ ಆತ್ಮವನ್ನಿಟ್ಟು ನಿಮ್ಮ ಯೋಚನೆಯ ರೀತಿಯನ್ನು ಬದಲಾಯಿಸುವೆನು. ನಿಮ್ಮ ಕಲ್ಲಿನ ಹೃದಯವನ್ನು ತೆಗೆದುಬಿಟ್ಟು ಮೃದುವಾದ ಮಾನವ ಹೃದಯವನ್ನು ಕೊಡುವೆನು. 27 ನಾನು ನನ್ನ ಆತ್ಮವನ್ನು ನಿಮ್ಮಲ್ಲಿರಿಸುವೆನು. ನೀವು ನನ್ನ ನಿಯಮಗಳಿಗೆ ವಿಧೇಯರಾಗುವಷ್ಟು ನಿಮ್ಮ ಮನಸ್ಸನ್ನು ಬದಲಾಯಿಸುವೆನು. ಆಗ ನೀವು ನನ್ನ ಆಜ್ಞೆಗಳನ್ನು ಜಾಗ್ರತೆಯಿಂದ ಪಾಲಿಸುವಿರಿ. 28 ಆಗ ನಾನು ನಿಮ್ಮ ಪೂರ್ವಿಕರಿಗೆ ಕೊಟ್ಟ ದೇಶದಲ್ಲಿ ನೀವು ಬಾಳುವಿರಿ. ನೀನು ನನ್ನ ಜನರಾಗುವಿರಿ. ನಾನು ನಿಮ್ಮ ದೇವರಾಗಿರುವೆನು.” 29 ದೇವರು ಹೇಳಿದ್ದೇನೆಂದರೆ, “ಅದೇ ಸಮಯದಲ್ಲಿ ನೀನು ಅಶುದ್ಧರಾಗದ ಹಾಗೇ ನಾನು ನೋಡಿಕೊಳ್ಳುವೆನು. ಬೀಜ ಬೆಳೆಯಲು ನಾನು ಆಜ್ಞಾಪಿಸುವೆನು. ನಿಮಗೆ ಹಸಿವೆಯಾಗಲು ಬಿಡುವದಿಲ್ಲ. 30 ನಿಮ್ಮ ಮರಗಳಿಂದ ಯಥೇಚ್ಛವಾಗಿ ಹಣ್ಣು ದೊರಕುವಂತೆ ಮಾಡುವೆನು. ಹೊಲಗಳು ಒಳ್ಳೆಯ ಬೆಳೆಗಳನ್ನು ಕೊಡುವಂತೆ ಮಾಡಿ ನೀವು ಅನ್ಯದೇಶದಲ್ಲಿ ಹಸಿವಿನಿಂದ ನರಳುವ ದಿವಸಗಳು ತಿರುಗಿ ಬಾರದಂತೆ ಮಾಡುವೆನು. 31 ನೀವು ಮಾಡಿದ ದುಷ್ಟತನವನ್ನು ನೀವು ಜ್ಞಾಪಿಸಿಕೊಳ್ಳುವಿರಿ. ಅವುಗಳು ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳುವಿರಿ. ಆಗ ನೀವು ಮಾಡಿದ ಪಾಪಕೃತ್ಯಗಳಿಗಾಗಿ ನಿಮ್ಮನ್ನೆ ನೀವು ಅಸಹ್ಯಪಟ್ಟುಕೊಳ್ಳುವಿರಿ.”
32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀವು ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ನಾನು ಈ ಕಾರ್ಯಗಳನ್ನು ನಿಮಗಾಗಿ ಮಾಡದೆ ನನ್ನ ನಾಮದ ಘನತೆಗಾಗಿ ಮಾಡುತ್ತಿದ್ದೇನೆ. ಇಸ್ರೇಲ್ ಜನರೇ, ನಿಮ್ಮ ಜೀವಿತದ ಕುರಿತಾಗಿ ನೀವು ನಾಚಿಕೆಯಿಂದ ವ್ಯಸನಪಡುವವರಾಗಿರಬೇಕು.”
33 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ನಿಮ್ಮನ್ನು ನಿಮ್ಮ ಪಾಪಗಳಿಂದ ಶುದ್ಧೀಕರಿಸುವ ದಿನದಲ್ಲಿ ನಿಮ್ಮ ಪಟ್ಟಣಗಳನ್ನು ಪುನರ್ ಸ್ಥಾಪಿಸುವೆನು. ನಾನು ಹಾಳುಬಿದ್ದ ಕಟ್ಟಡಗಳನ್ನು ಮತ್ತೆ ಕಟ್ಟುವೆನು. 34 ಜನರು ಹೊಲದಲ್ಲಿ ತಿರುಗಿ ಕೆಲಸ ಮಾಡಲು ಪ್ರಾರಂಭಿಸುವರು. ದಾಟಿಹೋಗುವ ಜನರು ಇನ್ನು ಮೇಲೆ ಪಾಳುಬಿದ್ದ ಕುರುಹುಗಳನ್ನು ಕಾಣರು. 35 ‘ಹಿಂದಿನ ಕಾಲದಲ್ಲಿ ದೇಶವು ಹಾಳಾಗಿ ಹೋಗಿತ್ತು. ಈಗ ಇದು ಏದೆನ್ ತೋಟದಂತಿದೆ. ಪಟ್ಟಣಗಳು ನಾಶವಾಗಿದ್ದವು, ಬರಿದಾಗಿದ್ದವು. ಈಗಲಾದರೋ ಅವು ಸುರಕ್ಷಿತವಾಗಿದ್ದು ಜನಭರಿತವಾಗಿವೆ’” ಎಂದು ಜನರು ಅನ್ನುವರು.
36 ದೇವರು ಹೇಳುವುದೇನೆಂದರೆ, “ಯೆಹೋವನಾದ ನಾನೇ ಹಾಳುಬಿದ್ದ ಆ ಕಟ್ಟಡಗಳನ್ನು ಮತ್ತೆ ಕಟ್ಟಿದೆನೆಂದೂ ಮತ್ತು ಬರಿದಾಗಿದ್ದ ಈ ದೇಶದಲ್ಲಿ ಬೆಳೆಯಿಸುವೆನೆಂದೂ ನಿನ್ನ ಸುತ್ತಲೂ ಇನ್ನೂ ಇರುವ ಜನಾಂಗಗಳು ತಿಳಿದುಕೊಳ್ಳುವವು. ನಾನೇ ಯೆಹೋವನು. ಇವುಗಳನ್ನು ನಾನೇ ಹೇಳಿದ್ದೇನೆ ಮತ್ತು ನಾನೇ ಇವುಗಳನ್ನು ನೆರವೇರಿಸುವೆನು.”
37 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಇಸ್ರೇಲ್ ಜನರು ನನ್ನ ಬಳಿಗೆ ಬಂದು ಹೀಗೆ ಮಾಡಬೇಕೆಂದು ನನ್ನನ್ನು ಕೇಳಿಕೊಳ್ಳಲು ಅವಕಾಶ ಕೊಡುವೆನು. ನಾನು ಅವರನ್ನು ಅಭಿವೃದ್ಧಿಪಡಿಸಿ ಅವರ ಸಂಖ್ಯೆಯನ್ನು ಕುರಿಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು. 38 ಹಬ್ಬದ ದಿವಸಗಳಲ್ಲಿ ಜೆರುಸಲೇಮ್ ಪರಿಶುದ್ಧಮಾಡಲ್ಪಟ್ಟ ಮಂದೆಗಳಿಂದ ತುಂಬಿಹೋಗುವಂತೆ ಜನರು ಹಾಳುಬಿದ್ದಿದ್ದ ನಗರ ಪಟ್ಟಣಗಳಲ್ಲಿ ತುಂಬಿಕೊಳ್ಳುವರು. ಆಗ ನಾನೇ ದೇವರಾದ ಯೆಹೋವನು ಎಂದು ಅವರು ತಿಳಿದುಕೊಳ್ಳುವರು.”
ಪ್ರಾರ್ಥನೆ. ರಚನೆಗಾರ: ದಾವೀದ.
86 ನಾನು ಬಡವನೂ ನಿಸ್ಸಹಾಯಕನೂ ಆಗಿದ್ದೇನೆ.
ಯೆಹೋವನೇ, ದಯವಿಟ್ಟು ನನಗೆ ಕಿವಿಗೊಡು; ನನ್ನ ಪ್ರಾರ್ಥನೆಗೆ ಉತ್ತರಿಸು.
2 ಯೆಹೋವನೇ, ನಾನು ನಿನ್ನ ಭಕ್ತನು! ದಯವಿಟ್ಟು ನನ್ನನ್ನು ಸಂರಕ್ಷಿಸು!
ನಾನು ನಿನ್ನ ಸೇವಕನು, ನೀನು ನನ್ನ ದೇವರು.
ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ರಕ್ಷಿಸು.
3 ನನ್ನ ಯೆಹೋವನೇ, ನನಗೆ ಕರುಣೆತೋರು.
ನಾನು ದಿನವೆಲ್ಲಾ ನಿನಗೆ ಪ್ರಾರ್ಥಿಸುತ್ತಿದ್ದೇನೆ.
4 ಯೆಹೋವನೇ, ನನ್ನ ಜೀವಿತವನ್ನು ನಿನ್ನ ಕೈಗಳಲ್ಲಿಟ್ಟಿದ್ದೇನೆ.
ನಿನ್ನ ಸೇವಕನಾದ ನನ್ನನ್ನು ಸಂತೋಷಗೊಳಿಸು.
5 ಯೆಹೋವನೇ, ನೀನು ಒಳ್ಳೆಯವನೂ ಕರುಣಾಮಯನೂ ಆಗಿರುವೆ.
ನಿನ್ನ ಜನರು ಸಹಾಯಕ್ಕಾಗಿ ನಿನಗೆ ಮೊರೆಯಿಡುವರು.
ನೀನು ಅವರನ್ನು ನಿಜವಾಗಿಯೂ ಪ್ರೀತಿಸುವಿ.
6 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ಕರುಣೆಗೋಸ್ಕರ ಮೊರೆಯಿಡುತ್ತಿರುವ ನನಗೆ ಕಿವಿಗೊಡು.
7 ಯೆಹೋವನೇ, ಆಪತ್ತಿನ ಸಮಯದಲ್ಲಿ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನೀನು ಉತ್ತರವನ್ನು ದಯಪಾಲಿಸುವೆಯೆಂದು ನನಗೆ ಗೊತ್ತಿದೆ.
8 ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
ನೀನು ಮಾಡಿರುವ ಕಾರ್ಯಗಳನ್ನು ಬೇರೆ ಯಾರೂ ಮಾಡಲಾರರು.
9 ಯೆಹೋವನೇ, ಪ್ರತಿಯೊಬ್ಬ ವ್ಯಕ್ತಿಯನ್ನು ಸೃಷ್ಟಿಸಿದವನು ನೀನೇ.
ಅವರೆಲ್ಲರೂ ಬಂದು ನಿನ್ನನ್ನು ಆರಾಧಿಸಲಿ.
ಅವರೆಲ್ಲರೂ ನಿನ್ನ ಹೆಸರನ್ನು ಸನ್ಮಾನಿಸಲಿ.
10 ದೇವರೇ, ನೀನು ಮಹೋನ್ನತನಾಗಿರುವೆ! ನೀನು ಅದ್ಭುತಕಾರ್ಯಗಳನ್ನು ಮಾಡುವಾತನಾಗಿರುವೆ!
ನೀನೇ, ಹೌದು, ನೀನೊಬ್ಬನೇ ದೇವರು!
11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.
Kannada Holy Bible: Easy-to-Read Version. All rights reserved. © 1997 Bible League International