M’Cheyne Bible Reading Plan
1 ಆ ಕಾಲದಲ್ಲಿ ರಾಜನಾದ ದಾವೀದನು ಬಹಳ ಮುದುಕನಾಗಿದ್ದನು. ಅವನ ದೇಹವು ಬೆಚ್ಚಗಾಗುತ್ತಲೇ ಇರಲಿಲ್ಲ. ಅವನ ಸೇವಕರು ಅವನಿಗೆ ಕಂಬಳಿಗಳನ್ನು ಹೊದಿಸಿದರೂ ಅವನ ದೇಹವು ತಣ್ಣಗೇ ಇರುತ್ತಿತ್ತು. 2 ಆದ್ದರಿಂದ ಅವನ ಸೇವಕರು ಅವನಿಗೆ, “ನಾವು ನಿನ್ನ ಆರೈಕೆಗಾಗಿ ಒಬ್ಬ ಯುವಕನ್ನಿಕೆಯನ್ನು ಹುಡುಕುವೆವು. ಅವಳು ನಿನ್ನನ್ನು ಒತ್ತರಿಸಿಕೊಂಡು ಮಲಗಿ ಬೆಚ್ಚಗಿಡುತ್ತಾಳೆ” ಎಂದು ಹೇಳಿದರು. 3 ಆದ್ದರಿಂದ ರಾಜನ ಸೇವಕರು ಇಸ್ರೇಲಿನ ಎಲ್ಲ ಕಡೆಗಳಲ್ಲೂ ಯುವತಿಯೊಬ್ಬಳನ್ನು ಹುಡುಕಲಾರಂಭಿಸಿದರು. ಅವರು ರಾಜನನ್ನು ಬೆಚ್ಚಗಿಡಲು ಒಬ್ಬ ಸುಂದರ ಹುಡುಗಿಯನ್ನು ಹುಡುಕಲಾರಂಭಿಸಿದರು. ಅವರಿಗೆ ಅಬೀಷಗ್ ಎಂಬ ಹೆಸರಿನ ಯುವತಿಯು ಸಿಕ್ಕಿದಳು. ಅವಳು ಶೂನೇಮ್ ನಗರದವಳು. ಅವರು ಆ ಯುವತಿಯನ್ನು ರಾಜನ ಬಳಿಗೆ ಕರೆದುಕೊಂಡು ಬಂದರು. 4 ಆ ಯುವತಿಯು ಬಹಳ ಸೌಂದರ್ಯವತಿಯಾಗಿದ್ದಳು. ಅವಳು ರಾಜನ ಆರೈಕೆಯನ್ನು ಮಾಡಿದಳು ಮತ್ತು ಅವನ ಸೇವೆಯನ್ನೂ ಮಾಡಿದಳು. ರಾಜನಾದ ದಾವೀದನು ಅವಳನ್ನು ಕೂಡಲಿಲ್ಲ.
5 ರಾಜನಾದ ದಾವೀದನ ಮಗನಾದ ಅದೋನೀಯನು ಬಹಳ ಗರ್ವಿಷ್ಠನಾದನು. ಅವನು, “ನಾನೇ ರಾಜನಾಗುತ್ತೇನೆ” ಎಂದು ಹೇಳಿಕೊಂಡನು. (ಅದೋನೀಯನ ತಾಯಿಯ ಹೆಸರು ಹಗ್ಗೀತ.) ಅದೋನೀಯನು ರಾಜನಾಗಬೇಕೆಂಬುದಾಗಿ ಬಹಳ ಆಸೆಪಟ್ಟನು. ಆದ್ದರಿಂದ ಅವನು ತನಗಾಗಿ ಒಂದು ರಥವನ್ನು, ಕುದುರೆಗಳನ್ನು ಮತ್ತು ರಥದ ಮುಂದೆ ಓಡುವಂತಹ ಐವತ್ತು ಜನರನ್ನು ಪಡೆದನು. 6 ರಾಜನಾದ ದಾವೀದನು ತನ್ನ ಮಗನಾದ ಅದೋನೀಯನನ್ನು ಎಂದೂ ತಿದ್ದಲಿಲ್ಲ. ದಾವೀದನು, “ನೀನು ಹೀಗೇಕೆ ಮಾಡುತ್ತಿರುವೆ?” ಎಂದು ಅವನನ್ನು ಒಂದು ಸಾರಿಯಾದರೂ ಕೇಳಲಿಲ್ಲ. ಅದೋನೀಯನು ಅಬ್ಷಾಲೋಮನ ಬಳಿಕ ಹುಟ್ಟಿದ ಮಗ. ಅದೋನೀಯನು ಬಹಳ ಸುಂದರನಾಗಿದ್ದನು.
7 ಅದೋನೀಯನು ಚೆರೂಯಳ ಮಗನಾದ ಯೋವಾಬ ಮತ್ತು ಯಾಜಕನಾದ ಎಬ್ಯಾತಾರನೊಂದಿಗೆ ಮಾತನಾಡಿದನು. ತಾನು ರಾಜನಾಗಬೇಕೆಂಬ ಅದೋನೀಯನ ಯೋಜನೆಗೆ ಅವರು ಬೆಂಬಲ ನೀಡಿದರು. 8 ಆದರೆ ಅದೋನೀಯನ ಕಾರ್ಯವನ್ನು ಒಪ್ಪದ ಅನೇಕರು ದಾವೀದನಿಗೆ ನಂಬಿಗಸ್ತರಾಗಿದ್ದರು. ಇವರು ಯಾರೆಂದರೆ: ಯಾಜಕನಾದ ಚಾದೋಕ, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಮತ್ತು ರಾಜನಾದ ದಾವೀದನ ವಿಶೇಷ ಅಂಗರಕ್ಷಕರು. ಇವರಲ್ಲಿ ಯಾರೂ ಅದೋನೀಯನ ಸಂಗಡ ಸೇರಲಿಲ್ಲ.
9 ಒಂದು ದಿನ, ಅದೋನೀಯನು ಎನ್‌ರೋಗೆಲಿನ ಹತ್ತಿರದ ಚೋಹೆಲೆತ್ ಎಂಬ ಬಂಡೆಯ ಬಳಿ ಕೆಲವು ಕುರಿಗಳನ್ನು, ಹಸುಗಳನ್ನು ಮತ್ತು ಕೊಬ್ಬಿದ ಕರುಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅದೋನೀಯನು ತನ್ನ ಸಹೋದರರನ್ನು (ರಾಜನ ಇತರ ಗಂಡುಮಕ್ಕಳನ್ನು) ಮತ್ತು ಯೆಹೂದದ ಅಧಿಕಾರಿಗಳನ್ನು ಆಹ್ವಾನಿಸಿದನು. 10 ಆದರೆ ಅದೋನೀಯನು ಪ್ರವಾದಿಯಾದ ನಾತಾನನನ್ನಾಗಲಿ ಬೆನಾಯನನ್ನಾಗಲಿ ಅವನ ತಂದೆಯ ವಿಶೇಷ ಅಂಗರಕ್ಷಕರನ್ನಾಗಲಿ ಅವನ ಸೋದರ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ.
11 ನಾತಾನನಿಗೆ ಇದು ತಿಳಿದಾಗ, ಅವನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಹೋಗಿ, “ಹಗ್ಗೀತಳ ಮಗನಾದ ಅದೋನೀಯನು ಮಾಡುತ್ತಿರುವುದನ್ನು ನೀನು ಕೇಳಿದೆಯಾ? ಅವನು ತನ್ನನ್ನು ತಾನೇ ರಾಜನನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ನಮ್ಮ ಒಡೆಯನಾದ ರಾಜ ದಾವೀದನಿಗೆ ಇದು ತಿಳಿದಿಲ್ಲ. 12 ನಿನ್ನ ಜೀವ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವ ಅಪಾಯದಲ್ಲಿರುವಂತಿದೆ. ಆದರೆ ನೀನು ನಿನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನಾನು ನಿನಗೆ ತಿಳಿಸುತ್ತೇನೆ. 13 ರಾಜನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ರಾಜನೇ, ನನ್ನ ಮಗನಾದ ಸೊಲೊಮೋನನು ನಿನ್ನ ನಂತರದ ರಾಜನೆಂದು ನೀನು ನನಗೆ ವಾಗ್ದಾನ ಮಾಡಿದ್ದೆ. ಹೀಗಿರುವಾಗ ಅದೋನೀಯನು ನೂತನ ರಾಜನಾದದ್ದು ಏಕೆ?’ ಎಂದು ಹೇಳು. 14 ನೀನು ಅವನೊಂದಿಗೆ ಮಾತನಾಡುತ್ತಿರುವಾಗ ನಾನು ಒಳಗೆ ಬಂದು ಅದೋನೀಯನ ಬಗ್ಗೆ ನೀನು ಹೇಳಿದ್ದೆಲ್ಲವೂ ನಿಜ ಎಂದು ಹೇಳುತ್ತೇನೆ” ಎಂಬುದಾಗಿ ತಿಳಿಸಿದನು.
15 ಆದ್ದರಿಂದ ಬತ್ಷೆಬೆಳು ರಾಜನನ್ನು ನೋಡಲು ಅವನ ಮಲಗುವ ಕೊಠಡಿಗೆ ಹೋದಳು. ರಾಜನು ಬಹಳ ವೃದ್ಧನಾಗಿದ್ದನು. ಶೂನೇಮಿನ ಯುವತಿಯಾದ ಅಬೀಷಗಳು ಅಲ್ಲಿ ಅವನ ಆರೈಕೆಯನ್ನು ಮಾಡುತ್ತಿದ್ದಳು. 16 ರಾಜನ ಎದುರಿನಲ್ಲಿ ಬತ್ಷೆಬೆಳು ಬಾಗಿ ನಮಸ್ಕರಿಸಿದಳು. ರಾಜನು, “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.
17 ಬತ್ಷೆಬೆಳು, “ನನ್ನ ಒಡೆಯನೇ, ನಿನ್ನ ದೇವರಾದ ಯೆಹೋವನ ಆಣೆಯಾಗಿ ನೀನು ನನಗೆ ಒಂದು ವಾಗ್ದಾನವನ್ನು ಮಾಡಿದ್ದೆ. ‘ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನು. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತು ಆಳುವನು’ ಎಂಬುದೇ ಆ ಪ್ರಮಾಣ. 18 ಆದರೆ ಈಗ ಅದೋನೀಯನು ತನ್ನನ್ನು ರಾಜನಾಗಿ ಮಾಡಿಕೊಳ್ಳುತ್ತಿದ್ದಾನೆ. ಇದು ನಿನಗೆ ತಿಳಿದಿಲ್ಲ. 19 ಅದೋನೀಯನು ಅನೇಕ ಹಸುಗಳನ್ನು, ಕೊಬ್ಬಿದ ಕರುಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದ್ದಾನೆ. ಅವನು ನಿನ್ನ ಎಲ್ಲಾ ಗಂಡುಮಕ್ಕಳನ್ನು ಆಹ್ವಾನಿಸಿದ್ದನು. ಅವನು ಯಾಜಕನಾದ ಎಬ್ಯಾತಾರನನ್ನು ಮತ್ತು ನಿನ್ನ ಸೇನಾಧಿಪತಿಯಾದ ಯೋವಾಬನನ್ನು ಆಹ್ವಾನಿಸಿದ್ದನು. ಆದರೆ ಅವನು ನಿನ್ನ ಸೇವೆಮಾಡುವ ನಿನ್ನ ಮಗನಾದ ಸೊಲೊಮೋನನನ್ನು ಆಹ್ವಾನಿಸಲಿಲ್ಲ. 20 ನನ್ನ ಒಡೆಯನಾದ ರಾಜನೇ, ನಿನ್ನ ನಂತರ ಯಾರು ರಾಜನಾಗಬೇಕೆಂಬ ನಿನ್ನ ತೀರ್ಮಾನಕ್ಕಾಗಿ ಇಸ್ರೇಲರೆಲ್ಲರೂ ಕಾಯುತ್ತಿದ್ದಾರೆ. 21 ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಸೊಲೊಮೋನನನ್ನು ಮತ್ತು ನನ್ನನ್ನು ಅಪರಾಧಿಗಳೆಂದು ಜನರೆಲ್ಲರೂ ಹೇಳುವರು” ಎಂದು ಹೇಳಿದಳು.
22 ರಾಜನೊಡನೆ ಬತ್ಷೆಬೆಳು ಮಾತಾಡುತ್ತಿರುವಷ್ಟರಲ್ಲಿ ಪ್ರವಾದಿಯಾದ ನಾತಾನನು ಅವನನ್ನು ನೋಡಲು ಬಂದನು. 23 ಸೇವಕರು ರಾಜನಿಗೆ, “ಪ್ರವಾದಿಯಾದ ನಾತಾನನು ಬಂದಿರುವನು” ಎಂದು ಹೇಳಿದರು. ಆಗ ನಾತಾನನು ಪ್ರವೇಶಿಸಿ, ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. 24 ಆಗ ನಾತಾನನು, “ನನ್ನ ರಾಜನೇ, ನನ್ನ ಒಡೆಯನೇ, ನಿನ್ನ ನಂತರ ಅದೋನೀಯನು ನೂತನ ರಾಜನಾಗಿ ಜನರನ್ನು ಆಳಲೆಂದು ನೀನು ತೀರ್ಮಾನಿಸಿ ಪ್ರಕಟಿಸಿರುವೆಯಾ? 25 ಈ ದಿನ ಅವನು ಅನೇಕ ಹೋರಿಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅವನು ನಿನ್ನ ಇತರ ಗಂಡುಮಕ್ಕಳನ್ನು, ಸೇನಾಧಿಪತಿಗಳನ್ನು ಮತ್ತು ಯಾಜಕನಾದ ಎಬ್ಯಾತಾರನನ್ನು ಆಹ್ವಾನಿಸಿದ್ದನು. ಅವರು ಈಗ ಅವನೊಡನೆ ತಿನ್ನುತ್ತಾ ಕುಡಿಯುತ್ತಾ ಇದ್ದಾರೆ. ‘ರಾಜನಾದ ಅದೋನೀಯನು ಚಿರಾಯುವಾಗಿರಲಿ’ ಎಂದು ಅವರು ಹೇಳುತ್ತಿದ್ದಾರೆ. 26 ಆದರೆ ಅವನು ನನ್ನನ್ನಾಗಲಿ ಯಾಜಕನಾದ ಚಾದೋಕನನ್ನಾಗಲಿ ಯೆಹೋಯಾದಾವನ ಮಗನಾದ ಬೆನಾಯನನ್ನಾಗಲಿ ನಿನ್ನ ಮಗನಾದ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ. 27 ನನ್ನ ಒಡೆಯನಾದ ರಾಜನೇ, ನಮಗೆ ಹೇಳದೆ ಇದನ್ನು ಮಾಡಿದೆಯಾ? ದಯವಿಟ್ಟು ಹೇಳು, ನಿನ್ನ ನಂತರ ರಾಜನಾಗುವವನು ಯಾರು?” ಎಂದು ಕೇಳಿದನು.
28 ಆಗ ರಾಜನಾದ ದಾವೀದನು, “ಒಳಗೆ ಬರಲು ಬತ್ಷೆಬೆಳಿಗೆ ಹೇಳಿ!” ಎಂದು ಹೇಳಿದನು. ಬತ್ಷೆಬೆಳು ರಾಜನ ಎದುರಿಗೆ ಬಂದಳು.
29 ಆಗ ರಾಜನು ಈ ಪ್ರಮಾಣವನ್ನು ಮಾಡಿದನು: “ದೇವರಾದ ಯೆಹೋವನು ನನ್ನನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಿದನು. ದೇವರಾಣೆಯಾಗಿಯೂ ನಾನು ನಿನಗೆ ಈ ಪ್ರಮಾಣವನ್ನು ಮಾಡುತ್ತೇನೆ. 30 ಅಂದು ನಾನು ನಿನಗೆ ಮಾಡಿದ ಪ್ರಮಾಣವನ್ನು ಇಂದು ಪೂರೈಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ನಾನು ನಿನಗೆ ಆ ಪ್ರಮಾಣವನ್ನು ಮಾಡಿದ್ದೆನು. ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನೆಂದೂ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ನಿನಗೆ ಪ್ರಮಾಣ ಮಾಡಿದ್ದೆನು. ನಾನು ನನ್ನ ವಾಗ್ದಾನವನ್ನು ಈಡೇರಿಸುತ್ತೇನೆ” ಎಂದು ಹೇಳಿದನು.
31 ಆಗ ಬತ್ಷೆಬೆಳು ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. ಅವಳು, “ರಾಜನಾದ ದಾವೀದನು ಚಿರಾಯುವಾಗಿರಲಿ!” ಎಂದು ಹೇಳಿದಳು.
ಸೊಲೊಮೋನನು ಹೊಸ ರಾಜನಾಗಿ ಆರಿಸಲ್ಪಟ್ಟದ್ದು
32 ಆಗ ರಾಜನಾದ ದಾವೀದನು, “ಯಾಜಕನಾದ ಚಾದೋಕನಿಗೆ, ಪ್ರವಾದಿಯಾದ ನಾತಾನನಿಗೆ ಮತ್ತು ಯೆಹೋಯಾದಾವನ ಮಗನಾದ ಬೆನಾಯನಿಗೆ ಇಲ್ಲಿಗೆ ಬರಲು ಹೇಳು” ಎಂದು ಹೇಳಿದನು. ಈ ಮೂವರು ರಾಜನ ಬಳಿಗೆ ಬಂದರು. 33 ಆಗ ರಾಜನು ಅವರಿಗೆ, “ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ. 34 ಅಲ್ಲಿ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಅವನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಲಿ. ಅನಂತರ ತುತ್ತೂರಿಯನ್ನು ಊದಿರಿ; ಎಲ್ಲರೂ ‘ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಆರ್ಭಟಿಸಲಿ. 35 ನಂತರ ಅವನೊಂದಿಗೆ ಹಿಂದಿರುಗಿ ಇಲ್ಲಿಗೆ ಬನ್ನಿ. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಹೊಸ ರಾಜನಾಗಿ ರಾಜ್ಯಭಾರ ಮಾಡಲಿ. ನಾನು ಸೊಲೊಮೋನನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
36 ಯೆಹೋಯಾದಾವನ ಮಗನಾದ ಬೆನಾಯನು, “ಆಮೆನ್, ನಿನ್ನ ದೇವರಾದ ಯೆಹೋವನು ಇದನ್ನು ಕಾರ್ಯಗತಗೊಳಿಸಲಿ. 37 ನನ್ನ ಒಡೆಯನಾದ ರಾಜನೇ, ನಿನಗೆ ಯಾವಾಗಲೂ ಸಹಾಯಮಾಡಿದ ಯೆಹೋವನು ಸೊಲೊಮೋನನಿಗೂ ಸಹಾಯ ಮಾಡಲಿ. ನಿನ್ನ ರಾಜ್ಯಕ್ಕಿಂತಲೂ ಸೊಲೊಮೋನನ ರಾಜ್ಯವು ಹೆಚ್ಚು ಬಲಿಷ್ಠವಾಗಲಿ.” ಎಂದು ಉತ್ತರಿಸಿದನು.
38 ಚಾದೋಕನು, ನಾತಾನನು, ಬೆನಾಯನು ಮತ್ತು ರಾಜನ ಅಧಿಕಾರಿಗಳು ರಾಜನಾದ ದಾವೀದನಿಗೆ ವಿಧೇಯರಾದರು. ಅವರು ಸೊಲೊಮೋನನನ್ನು ರಾಜನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿ, ಅವನೊಂದಿಗೆ ಗೀಹೋನಿಗೆ ಹೋದರು. 39 ಯಾಜಕನಾದ ಚಾದೋಕನು ಪವಿತ್ರಗುಡಾರದಿಂದ ಎಣ್ಣೆಯನ್ನು ತೆಗೆದುಕೊಂಡು ಬಂದನು. ಸೊಲೊಮೋನನು ರಾಜನೆಂದು ತೋರಿಸಲು ಅವನ ತಲೆಯ ಮೇಲೆ ಚಾದೋಕನು ಎಣ್ಣೆಯನ್ನು ಸುರಿದನು. ದಾವೀದನ ಜನರು ತುತ್ತೂರಿಯನ್ನು ಊದಿದರು. ಆಗ ಎಲ್ಲಾ ಜನರೂ, “ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು. 40 ಜನರೆಲ್ಲರೂ ಸೊಲೊಮೋನನನ್ನು ಹಿಂಬಾಲಿಸುತ್ತಾ ನಗರಕ್ಕೆ ಬಂದರು. ಅವರು ಕೊಳಲುಗಳನ್ನು ಊದುತ್ತಾ ಸಂತಸದಿಂದ ಕೂಗಾಡುತ್ತಾ ಬಂದರು. ಅವರು ಮಾಡಿದ ಶಬ್ದವು ಭೂಮಿಯನ್ನೇ ನಡುಗಿಸುವಂತಿತ್ತು.
41 ಆ ಸಮಯಕ್ಕೆ ಅದೋನೀಯನು ಮತ್ತು ಅವನೊಂದಿಗಿದ್ದ ಅತಿಥಿಗಳು ಊಟವನ್ನು ಮುಗಿಸುತ್ತಿದ್ದರು. ಅವರಿಗೆ ತುತ್ತೂರಿಯ ಶಬ್ದವು ಕೇಳಿಸಿತು. ಯೋವಾಬನು, “ಆ ಶಬ್ದವು ಏನು? ನಗರದಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದನು.
42 ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು.
43 ಆದರೆ ಯೋನಾತಾನನು, “ಇಲ್ಲ! ಇದು ನಿನಗೆ ಶುಭ ಸಮಾಚಾರವಲ್ಲ! ನಮ್ಮ ರಾಜನಾದ ದಾವೀದನು ಸೊಲೊಮೋನನನ್ನು ನೂತನ ರಾಜನನ್ನಾಗಿ ಮಾಡಿದನು. 44 ರಾಜನಾದ ದಾವೀದನು ಯಾಜಕನಾದ ಚಾದೋಕನನ್ನು, ಪ್ರವಾದಿಯಾದ ನಾತಾನನನ್ನು, ಯೆಹೋಯಾದಾವನ ಮಗನಾದ ಬೆನಾಯನನ್ನು ಮತ್ತು ರಾಜನ ಎಲ್ಲಾ ಅಧಿಕಾರಿಗಳನ್ನು ಅವನೊಂದಿಗೆ ಕಳುಹಿಸಿದನು. ಅವರು ಸೊಲೊಮೋನನನ್ನು ರಾಜನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿದರು. 45 ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು. 46-47 ಸೊಲೊಮೋನನು ಈಗ ರಾಜನ ಸಿಂಹಾಸನದ ಮೇಲೆ ಕುಳಿತಿದ್ದಾನೆ. ರಾಜನಾದ ದಾವೀದನು ಒಳ್ಳೆಯ ಕಾರ್ಯಮಾಡಿದನೆಂದು ಹೇಳಲು ರಾಜನ ಸೇವಕರೆಲ್ಲರೂ ಬಂದಿದ್ದಾರೆ. ‘ನಿನ್ನ ದೇವರು ಸೊಲೊಮೋನನನ್ನು ನಿನಗಿಂತಲೂ ಪ್ರಖ್ಯಾತನನ್ನಾಗಿ ಮಾಡಲಿ. ದೇವರು ಸೊಲೊಮೋನನ ರಾಜ್ಯವನ್ನು ನಿನ್ನ ರಾಜ್ಯಕ್ಕಿಂತಲೂ ಹೆಚ್ಚು ಬಲಿಷ್ಠಗೊಳಿಸಲಿ. ಅವನು ನಿನಗಿಂತಲೂ ಉತ್ತಮನಾಗಲಿ!’ ಎಂದು ಅವರು ಹೇಳುತ್ತಿದ್ದಾರೆ. ರಾಜನಾದ ದಾವೀದನೂ ಅಲ್ಲಿದ್ದನು. ಅವನು ತನ್ನ ಹಾಸಿಗೆಯಲ್ಲಿ ತಲೆಬಾಗಿಸಿಕೊಂಡು, 48 ‘ನಾನು ಕಣ್ಣಾರೆ ಕಾಣುವಂತೆ ನನ್ನ ಮಕ್ಕಳಲ್ಲಿ ಒಬ್ಬನನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿದ ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಎಂದನು.
49 ಆಗ ಅದೋನೀಯನ ಅತಿಥಿಗಳೆಲ್ಲರೂ ಭಯಗೊಂಡು ಓಡಿಹೋದರು. 50 ಅದೋನೀಯನೂ ಹೆದರಿಕೊಂಡು ಯಜ್ಞವೇದಿಕೆಯ ಬಳಿಗೆ ಹೋಗಿ, ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು.[a] 51 ಆಗ ಯಾರೋ ಒಬ್ಬರು ಸೊಲೊಮೋನನಿಗೆ, “ಅದೋನೀಯನು ನಿನಗೆ ಬಹಳವಾಗಿ ಹೆದರಿಕೊಂಡು ಪವಿತ್ರಗುಡಾರದ ಯಜ್ಞವೇದಿಕೆಯ ಬಳಿಗೆ ಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಬಿಡದೆ ಹಿಡಿದುಕೊಂಡೇ ಇದ್ದಾನೆ, ‘ನನ್ನನ್ನು ಕೊಲ್ಲುವುದಿಲ್ಲವೆಂದು ಪ್ರಮಾಣ ಮಾಡುವಂತೆ ರಾಜನಾದ ಸೊಲೊಮೋನನಿಗೆ ತಿಳಿಸಿ’ ಎಂಬುದಾಗಿ ಅದೋನೀಯನು ಕೇಳಿಕೊಳ್ಳುತ್ತಿದ್ದಾನೆ” ಎಂದು ಹೇಳಿದನು.
52 ಆದ್ದರಿಂದ ಸೊಲೊಮೋನನು, “ಅದೋನೀಯನು ತಾನು ಒಳ್ಳೆಯ ಮನುಷ್ಯನೆಂದು ನಿರೂಪಿಸಿದರೆ ಅವನ ತಲೆಯ ಒಂದು ಕೂದಲಿಗೂ ತೊಂದರೆಯಾಗುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ಆದರೆ ಅವನೇನಾದರೂ ಕೇಡನ್ನು ಮಾಡಿದರೆ ಸಾಯುವನು” ಎಂದು ಹೇಳಿದನು. 53 ರಾಜನಾದ ಸೊಲೊಮೋನನು ಅದೋನೀಯನನ್ನು ಕರೆತರಲು ಕೆಲವು ಜನರನ್ನು ಕಳುಹಿಸಿದನು. ಅವರು ಅದೋನೀಯನನ್ನು ರಾಜನಾದ ಸೊಲೊಮೋನನ ಬಳಿಗೆ ಕರೆದುತಂದರು. ಅದೋನೀಯನು ರಾಜನಾದ ಸೊಲೊಮೋನನ ಬಳಿಗೆ ಬಂದು, ಸಾಷ್ಟಾಂಗನಮಸ್ಕಾರ ಮಾಡಿದನು. ಸೊಲೊಮೋನನು ಅವನಿಗೆ, “ಮನೆಗೆ ಹೋಗು” ಎಂದನು.
ಸ್ವತಂತ್ರರಾಗಿರಿ
5 ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ. 2 ಕೇಳಿ, ನಾನೇ ಪೌಲನು. ನೀವು ಸುನ್ನತಿ ಮಾಡಿಸಿಕೊಂಡು ಧರ್ಮಶಾಸ್ತ್ರಕ್ಕೆ ಹಿಂತಿರುಗಿಕೊಳ್ಳುವುದಾದರೆ ಕ್ರಿಸ್ತನಿಂದ ನಿಮಗೇನೂ ಪ್ರಯೋಜನವಿಲ್ಲ. 3 ಮತ್ತೆ ನಾನು ಪ್ರತಿಯೊಬ್ಬನನ್ನೂ ಎಚ್ಚರಿಸುತ್ತೇನೆ. ನೀವು ಸುನ್ನತಿ ಮಾಡಿಸಿಕೊಂಡರೆ, ಧರ್ಮಶಾಸ್ತ್ರವನ್ನೆಲ್ಲಾ ಅನುಸರಿಸಬೇಕು. 4 ನೀವು ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಲು ಪ್ರಯತ್ನಿಸುವವರಾಗಿದ್ದರೆ, ದೇವರ ಕೃಪಾಶ್ರಯದಿಂದ ಬಿದ್ದುಹೋದ ಕಾರಣ ಕ್ರಿಸ್ತನೊಂದಿಗಿರುವ ನಿಮ್ಮ ಜೀವಿತವು ಅಂತ್ಯಗೊಳ್ಳುವುದು. 5 ಆದರೆ ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ ಎಂಬ ನಿರೀಕ್ಷೆ ನಮಗುಂಟು. ದೇವರಾತ್ಮನ ಸಹಾಯದಿಂದ ಈ ನಿರೀಕ್ಷೆ ಸಫಲವಾಗುವುದೆಂದು ತವಕದಿಂದ ಎದುರುನೋಡುತ್ತಿದ್ದೇವೆ. 6 ಒಬ್ಬನು ಕ್ರಿಸ್ತ ಯೇಸುವಿನಲ್ಲಿರುವಾಗ ಸುನ್ನತಿ ಹೊಂದಿದ್ದಾನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯವಾದದ್ದೇನೆಂದರೆ ಪ್ರೀತಿಯಿಂದ ಕಾರ್ಯನಡೆಸುವ ನಂಬಿಕೆ.
7 ನೀವು ಚೆನ್ನಾಗಿ ಓಡುತ್ತಾ ಇದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗಿದ್ದಿರಿ. ಸತ್ಯಮಾರ್ಗವನ್ನು ಅನುಸರಿಸದಂತೆ ನಿಮ್ಮನ್ನು ಒತ್ತಾಯಪಡಿಸಿದವರ್ಯಾರು? 8 ಆ ಒತ್ತಾಯವು ಬಂದದ್ದು ನಿಮ್ಮನ್ನು ಆರಿಸಿಕೊಂಡಾತನಿಂದಲ್ಲ. 9 ಎಚ್ಚರಿಕೆಯಿಂದಿರಿ! “ಸ್ವಲ್ಪ ಹುಳಿಯಿಂದ ಪಾತ್ರೆಯಲ್ಲಿರುವ ನಾದಿದ ಹಿಟ್ಟೆಲ್ಲಾ ಹುಳಿಯಾಗುವುದು.” 10 ಆ ಬೇರೆ ಅಭಿಪ್ರಾಯಗಳನ್ನು ನೀವು ನಂಬುವುದಿಲ್ಲವೆಂದು ಪ್ರಭುವಿನಲ್ಲಿ ನಿಮ್ಮನ್ನು ಕುರಿತು ಭರವಸೆಯಿಂದಿದ್ದೇನೆ. ಯಾರೊ ಒಬ್ಬನು ಆ ಅಭಿಪ್ರಾಯಗಳಿಂದ ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾನೆ. ಅವನು ಯಾರೇ ಆಗಿದ್ದರೂ ದಂಡನೆ ಹೊಂದುವನು.
11 ನನ್ನ ಸಹೋದರ ಸಹೋದರಿಯರೇ, ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನು ಬೋಧಿಸುವುದಿಲ್ಲ. ಸುನ್ನತಿಯ ಅಗತ್ಯತೆಯನ್ನು ಕುರಿತು ಉಪದೇಶಿಸುವವನಾಗಿದ್ದರೆ, ನಾನಿನ್ನೂ ಹಿಂಸೆಗೆ ಒಳಗಾಗಿರುವುದೇಕೆ? ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನಿನ್ನೂ ಉಪದೇಶಿಸುವುದಾಗಿದ್ದರೆ, ಶಿಲುಬೆಯ ವಿಷಯವಾದ ನನ್ನ ಬೋಧನೆಗೆ ಅಡ್ಡಿಯಾಗುವುದೇ ಇಲ್ಲ. 12 ನಿಮ್ಮನ್ನು ಕಳವಳಪಡಿಸುತ್ತಿರುವವರು ತಮಗಾಗಿರುವ ಸುನ್ನತಿಯಲ್ಲದೆ ತಮ್ಮ ಅಂಗವನ್ನೇ ಕತ್ತರಿಸಿಕೊಂಡರೆ ಒಳ್ಳೆಯದು.
13 ನನ್ನ ಸಹೋದರ ಸಹೋದರಿಯರೇ, ನೀವು ಸ್ವತಂತ್ರರಾಗಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾನೆ. ಆದರೆ ಪಾಪಮಯವಾದ ನಿಮ್ಮ ಸ್ವಭಾವವನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಸ್ವತಂತ್ರವನ್ನು ನೆಪಮಾಡಿಕೊಳ್ಳಬೇಡಿ. ಆದರೆ ಪ್ರೀತಿಯಿಂದ ಒಬ್ಬರ ಸೇವೆಯನ್ನೊಬ್ಬರು ಮಾಡಿರಿ. 14 “ನೀವು ನಿಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಿರಿ”(A) ಎಂಬ ಒಂದೇ ಒಂದು ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ಅಡಕವಾಗಿದೆ. 15 ನೀವು ಒಬ್ಬರನ್ನೊಬ್ಬರು ಕಚ್ಚಿ ಹರಿದುಹಾಕಿ ನುಂಗುವುದಾದರೆ ಒಬ್ಬರಿಂದೊಬ್ಬರು ನಾಶವಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಿರಿ!
ದೇವರಾತ್ಮನು ಮತ್ತು ಮಾನವ ಸ್ವಭಾವ
16 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಪವಿತ್ರಾತ್ಮನನ್ನು ಅನುಸರಿಸುವವರಾಗಿರಿ. ಆಗ, ನಿಮ್ಮ ಶರೀರಭಾವವು ಬಯಸುವ ಕೆಟ್ಟ ಸಂಗತಿಗಳನ್ನು ನೀವು ಮಾಡುವುದಿಲ್ಲ. 17 ನಮ್ಮ ಶರೀರಭಾವವು ದೇವರಾತ್ಮನಿಗೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತದೆ. ದೇವರಾತ್ಮನು ನಮ್ಮ ಶರೀರಭಾವಕ್ಕೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತಾನೆ. ಆದ್ದರಿಂದ ನೀವು ನಿಜವಾಗಿಯೂ ಬಯಸುವಂಥವುಗಳನ್ನು ಮಾಡಲಾಗದಂತೆ ಅವು ಒಂದಕ್ಕೊಂದು ಹೋರಾಡುತ್ತವೆ. 18 ಆದರೆ ನೀವು ನಿಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಟ್ಟರೆ ನೀವು ಧರ್ಮಶಾಸ್ತ್ರದ ಅಧೀನದಲ್ಲಿಲ್ಲ.
19 ನಮ್ಮ ಶರೀರಭಾವವು ಮಾಡುವ ಕೆಟ್ಟ ಸಂಗತಿಗಳು ಸ್ಪಷ್ಟವಾಗಿವೆ. ಜಾರತ್ವ, ಅಶುದ್ಧತ್ವ, 20 ಸುಳ್ಳುದೇವರುಗಳ ಆರಾಧನೆ, ಮಾಟಮಂತ್ರ, ದ್ವೇಷ, ಜಗಳ, ಹೊಟ್ಟೆಕಿಚ್ಚು, ಕಡುಕೋಪ, ಸ್ವಾರ್ಥ, ಸಿಟ್ಟು, ಕಕ್ಷಭೇದ, 21 ಮತ್ಸರ, ಕುಡಿಕತನ ಮತ್ತು ಸ್ವೇಚ್ಫಾಚಾರದ ಕೂಟ, ಮೊದಲಾದವುಗಳೇ. ನಾನು ನಿಮ್ಮನ್ನು ಮೊದಲು ಎಚ್ಚರಿಸಿದಂತೆ ಈಗಲೂ ಎಚ್ಚರಿಸುತ್ತೇನೆ. ಇಂಥವುಗಳನ್ನು ಮಾಡುವ ಜನರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 22 ಆದರೆ ದೇವರಾತ್ಮನು ಹುಟ್ಟಿಸುವುದು ಪ್ರೀತಿ, ಆನಂದ, ಶಾಂತಿ, ತಾಳ್ಮೆ, ಕರುಣೆ, ಉಪಕಾರ, ನಂಬಿಗಸ್ತಿಕೆ, 23 ಸಾಧುತ್ವ, ಇಂದ್ರಿಯ ನಿಗ್ರಹ ಇಂಥವುಗಳೇ. ಇವುಗಳನ್ನು ತಪ್ಪೆಂದು ಯಾವ ಧರ್ಮಶಾಸ್ತ್ರವೂ ಹೇಳುವುದಿಲ್ಲ. 24 ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಶಿಲುಬೆಗೇರಿಸಿದ್ದಾರೆ. ಅವರು ತಮ್ಮ ಹಳೆಯ ಸ್ವಾರ್ಥಪರವಾದ ಅಭಿಲಾಷೆಗಳನ್ನು ಮತ್ತು ತಾವು ಮಾಡಬೇಕೆಂದಿದ್ದ ಕೆಟ್ಟಕಾರ್ಯಗಳನ್ನು ಬಿಟ್ಟುಕೊಟ್ಟವರಾಗಿದ್ದಾರೆ. 25 ನಮ್ಮ ಹೊಸ ಜೀವಿತವನ್ನು ಪವಿತ್ರಾತ್ಮನಿಂದ ಪಡೆದುಕೊಂಡಿರುವುದರಿಂದ ನಾವು ಆತನನ್ನೇ ಅನುಸರಿಸಬೇಕು. 26 ನಾವು ಅಹಂಕಾರಿಗಳಾಗಬಾರದು, ಒಬ್ಬರನ್ನೊಬ್ಬರು ಕೆಣಕುವವರಾಗಬಾರದು, ಒಬ್ಬರಮೇಲೊಬ್ಬರು ಮತ್ಸರ ಉಳ್ಳವರಾಗಬಾರದು.
ಫರೋಹನು ಮೃಗರಾಜನೋ, ಪೇರ್ಮೊಸಳೆಯೋ?
32 ಸೆರೆಹಿಡಿದ ಹನ್ನೆರಡನೇ ವರ್ಷದ, ಹನ್ನೆರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು:
“‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ.
ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ.
ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ.
ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ.
ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”
3 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ಅನೇಕರನ್ನು ನಾನು ಒಟ್ಟುಗೂಡಿಸಿದ್ದೇನೆ.
ಈಗ ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು.
ಆಗ ಅವರು ನಿನ್ನನ್ನು ಒಳಸೆಳೆಯುವರು.
4 ಆಮೇಲೆ ನಿನ್ನನ್ನು ಒಣನೆಲದ ಮೇಲೆ ಹಾಕುವೆನು.
ಹೊಲದ ಮೇಲೆ ನಿನ್ನನ್ನು ಬಿಸಾಡುವೆನು.
ಎಲ್ಲಾ ಪಕ್ಷಿಗಳು ನಿನ್ನನ್ನು ತಿಂದುಬಿಡುವಂತೆ ಮಾಡುವೆನು.
ಎಲ್ಲಾ ಕಡೆಗಳಿಂದ ಕಾಡುಮೃಗಗಳು ಬಂದು ನಿನ್ನನ್ನು ಹೊಟ್ಟೆತುಂಬಾ ತಿನ್ನುವಂತೆ ಮಾಡುವೆನು.
5 ಪರ್ವತಗಳ ಮೇಲೆ ನಿನ್ನ ದೇಹವನ್ನು ಬಿಸಾಡುವೆನು.
ಬಯಲು ಪ್ರದೇಶವನ್ನು ನಿನ್ನ ಹೆಣಗಳಿಂದ ತುಂಬಿಸುವೆನು.
6 ನಿನ್ನ ರಕ್ತವನ್ನು ಪರ್ವತಗಳ ಮೇಲೆ ಚೆಲ್ಲುವೆನು,
ಅದು ನೆಲವನ್ನು ಒದ್ದೆ ಮಾಡುವದು.
ಹೊಳೆಗಳಲ್ಲಿ ನೀನು ತುಂಬಿರುವಿ.
7 ನೀನು ಕಾಣೆಯಾಗುವಂತೆ ನಾನು ಮಾಡುವೆನು.
ಆಕಾಶವನ್ನು ಮುಚ್ಚಿ ನಕ್ಷತ್ರಗಳನ್ನು ಹೊಳೆಯದಂತೆ ಮಾಡುವೆನು.
ಸೂರ್ಯನನ್ನು ಮೋಡವು ಮುಚ್ಚುವಂತೆ ಮಾಡುವೆನು.
ಚಂದ್ರನು ಪ್ರಕಾಶಿಸದಂತೆ ಮಾಡುವೆನು.
8 ನಿನ್ನ ಮೇಲೆ ಆಕಾಶದಲ್ಲಿ ಹೊಳೆಯುವ ಜ್ಯೋತಿಗಳನ್ನು ಮಂಕುಗೊಳಿಸುವೆನು;
ನಿನ್ನ ದೇಶದಲ್ಲಿ ಕತ್ತಲನ್ನು ಬರಮಾಡುವೆನು”
ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.
9 “ನಿನ್ನನ್ನು ನಾಶಮಾಡಲು ನಾನು ನಿನ್ನ ಶತ್ರುವನ್ನು ಬರಮಾಡುವಾಗ ಅನೇಕ ಜನರು ದುಃಖಿತರಾಗಿ ಗಲಿಬಿಲಿಗೊಳ್ಳುವರು. ನಿನ್ನನ್ನು ಅರಿಯದ ರಾಜ್ಯದವರೂ ಗಲಿಬಿಲಿಗೊಳ್ಳುವರು. 10 ಅನೇಕ ಮಂದಿ ನಿನಗೆ ಸಂಭವಿಸಿದ್ದನ್ನು ನೋಡಿ ಚಕಿತರಾಗುವರು. ನಾನು ನಿನ್ನ ಕಡೆಗೆ ಖಡ್ಗ ಬೀಸುವಾಗ ಅವರ ಅರಸರು ಬಹಳ ಭಯಗ್ರಸ್ತರಾಗುವರು; ನೀನು ಬೀಳುವ ದಿವಸದಲ್ಲಿ ಅರಸರು ಹೆದರಿ ನಡುಗುವರು. ಪ್ರತಿಯೊಬ್ಬ ರಾಜನು ತನ್ನ ಜೀವವನ್ನು ಉಳಿಸಿಕೊಳ್ಳಲು ಆತುರಪಡುವನು.”
11 ಯಾಕೆಂದರೆ ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಬಾಬಿಲೋನಿನ ರಾಜನ ಖಡ್ಗವು ನಿನ್ನೊಂದಿಗೆ ಯುದ್ಧಮಾಡಲು ಬರುವದು. 12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನ್ನ ಜನರನ್ನು ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನ್ನೂ ಅವರು ಹೆಮ್ಮೆಪಡುವಂತ ವಸ್ತುಗಳನ್ನೂ ಆ ಸೈನಿಕರು ನಾಶಗೊಳಿಸುವರು. 13 ಈಜಿಪ್ಟಿನ ಹೊಳೆಯ ತೀರದಲ್ಲಿ ಅನೇಕ ಪ್ರಾಣಿಗಳಿವೆ. ನಾನು ಅವುಗಳನ್ನು ನಾಶಮಾಡುವೆನು. ಜನರು ಹೊಳೆಯ ನೀರನ್ನು ತಮ್ಮ ಕಾಲುಗಳಿಂದ ಕೆಸರಾಗಿ ಇನ್ನು ಮಾಡಲಾರರು. ದನಗಳ ಗೊರಸುಗಳು ನೀರನ್ನು ಕೆಸರನ್ನಾಗಿ ಮಾಡುವದಿಲ್ಲ. 14 ನಾನು ಈಜಿಪ್ಟಿನ ನೀರನ್ನು ತಿಳಿಗೊಳಿಸುವೆನು; ಅದರ ನದಿಗಳು ಎಣ್ಣೆಯಷ್ಟೇ ನಯವಾಗಿ ಹರಿಯುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು. 15 “ಈಜಿಪ್ಟ್ ದೇಶವನ್ನು ನಾನು ಬರಿದುಮಾಡುವೆನು. ಆ ದೇಶವು ಎಲ್ಲವನ್ನು ಕಳೆದುಕೊಳ್ಳುವದು. ಈಜಿಪ್ಟಿನಲ್ಲಿ ವಾಸಿಸುವ ಎಲ್ಲಾ ಜನರನ್ನು ನಾನು ಶಿಕ್ಷಿಸುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ತಿಳುಕೊಳ್ಳುವರು.
16 “ಜನರು ಈಜಿಪ್ಟಿನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು. ಬೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನ್ನು ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನ್ನು ಹಾಡುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
ಈಜಿಪ್ಟ್ ನಾಶವಾಗಲಿದೆ
17 ಸೆರೆಹಿಡಿಯಲ್ಪಟ್ಟ ಹನ್ನೆರಡನೆ ವರ್ಷದ, ಹನ್ನೆರಡನೆ ತಿಂಗಳಿನ, ಹದಿನೈದನೆಯ ದಿನದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದುಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನ್ನು ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನ್ನು[a] ಸಮಾಧಿಗೆ ಕಳುಹಿಸು.
19 “ಈಜಿಪ್ಟೇ, ನೀನು ಬೇರೆಯವರಿಗಿಂತ ಉತ್ತಮಳೇನೂ ಅಲ್ಲ. ಮರಣದ ಸ್ಥಳಕ್ಕೆ ಹೋಗು. ಅಲ್ಲಿ ಪರದೇಶದವರೊಂದಿಗೆ ಹೋಗಿ ಬಿದ್ದುಕೊ. 20 ರಣರಂಗದಲ್ಲಿ ಮಡಿದ ಜನರೊಂದಿಗೆ ಈಜಿಪ್ಟ್ ಹೋಗುವದು. ಶತ್ರುಗಳು ಆಕೆಯನ್ನೂ ಆಕೆಯ ಜನರನ್ನೂ ಎಳೆದುಬಿಟ್ಟಿದ್ದಾರೆ.
21 “ಶೂರರು, ಬಲಶಾಲಿಗಳು ಯುದ್ಧದಲ್ಲಿ ಮಡಿದಿದ್ದಾರೆ, ಆ ಪರದೇಶಿಗಳು ಮರಣದ ಸ್ಥಳಕ್ಕೆ ಹೋದರು. ಅವರು ಅಲ್ಲಿದ್ದುಕೊಂಡು ಈಜಿಪ್ಟಿನವರೊಂದಿಗೆ ಮತ್ತು ಅದರ ಸಹಾಯಕರೊಂದಿಗೆ ಮಾತನಾಡುವರು.
22-23 “ಅಶ್ಶೂರವೂ ಅದರ ಎಲ್ಲಾ ಸೈನ್ಯವೂ ಆ ಪಾತಾಳದಲ್ಲಿರುವದು. ಅವರ ಸ್ಥಳವು ಆಳವಾದ ಗುಂಡಿಯಲ್ಲಿರುವದು. ಆ ಅಶ್ಶೂರದ ಸೈನಿಕರೆಲ್ಲಾ ರಣರಂಗದಲ್ಲಿ ಮಡಿದವರೇ. ಅವರ ಸಮಾಧಿಗಳು ಅಶ್ಶೂರದ ಸಮಾಧಿಯ ಸುತ್ತಮುತ್ತ ಇವೆ. ಅವರು ಜೀವಂತರಾಗಿರುವಾಗ ಜನರನ್ನು ಭೀತಿಗೊಳಿಸುತ್ತಿದ್ದರು. ಆದರೆ ಈಗ ಮೌನವಾಗಿದ್ದಾರೆ. ಅವರೆಲ್ಲಾ ಯುದ್ಧದಲ್ಲಿ ಸತ್ತರು.
24 “ಏಲಾಮು ಕೂಡಾ ಅಲ್ಲಿದೆ. ಆಕೆಯ ಸೈನ್ಯವೆಲ್ಲಾ ಆಕೆಯ ಸಮಾಧಿಯ ಸುತ್ತಲಿದೆ. ಅವರೆಲ್ಲಾ ಯುದ್ಧದಲ್ಲಿ ಮಡಿದರು. ಆ ಪರದೇಶದವರು ಪಾತಾಳವನ್ನು ಸೇರಿದರು. ಅವರು ಜೀವಿಸಿದ್ದಾಗ ಜನರನ್ನು ಭಯಗೊಳಿಸಿದರು. ಆದರೆ ಈಗ ನಾಚಿಕೆಯೊಂದಿಗೆ ಅವರು ಪಾತಾಳವನ್ನು ಸೇರಿದರು. 25 ಏಲಾಮ್ ಮತ್ತು ಯುದ್ಧದಲ್ಲಿ ಮಡಿದ ಅದರ ಎಲ್ಲಾ ಸೈನಿಕರಿಗೂ ಅಲ್ಲಿ ಅವರು ಹಾಸಿಗೆಯನ್ನು ಸಿದ್ಧಮಾಡಿದರು. ಏಲಾಮಿನ ಸೈನ್ಯವು ಅದರ ಸಮಾಧಿಯ ಸುತ್ತಲೂ ಇವೆ. ಅವರೆಲ್ಲಾ ರಣರಂಗದಲ್ಲಿ ಸತ್ತವರು. ಅವರು ಜೀವದಿಂದಿರುವಾಗ ಜನರನ್ನು ಹೆದರಿಸಿದ್ದರು. ಆದರೆ ಅವರೀಗ ತಮ್ಮ ನಾಚಿಕೆಯೊಂದಿಗೆ ಪಾತಾಳ ಸೇರಿದ್ದಾರೆ. ಅವರು ಸತ್ತವರೊಂದಿಗೆ ಸೇರಿರುತ್ತಾರೆ.
26 “ಮೆಷಕ್, ತೂಬಲ್ ಮತ್ತು ಅವರ ಎಲ್ಲಾ ಸೈನ್ಯದವರು ಅಲ್ಲಿದ್ದಾರೆ. ಅವರ ಸಮಾಧಿಗಳು ಸುತ್ತಲೂ ಇವೆ. ಅವರೆಲ್ಲಾ ಯುದ್ಧದಲ್ಲಿ ಸತ್ತವರು. ಅವರು ಜೀವಿಸಿದ್ದಾಗ ಜನರಿಗೆ ಹೆದರಿಕೆಯನ್ನು ಉಂಟುಮಾಡಿದ್ದರು. 27 ಈಗ ಅವರು ಬಹಳ ಕಾಲದ ಹಿಂದೆ ಸತ್ತ ವೀರರೊಂದಿಗೆ ಬಿದ್ದುಕೊಂಡಿದ್ದಾರೆ. ಅವರು ತಮ್ಮ ಆಯುಧಗಳೊಂದಿಗೆ ಹೂಣಿಡಲ್ಪಟ್ಟರು. ಅವರ ತಲೆಯ ಕೆಳಗೆ ಅವರ ಕತ್ತಿಯು ಇಡಲ್ಪಟ್ಟಿತ್ತು. ಆದರೆ ಅವರ ಪಾಪವು ಅವರ ಎಲುಬುಗಳಲ್ಲಿವೆ. ಯಾಕೆಂದರೆ ಅವರು ಜೀವಿಸಿದ್ದಾಗ ಜನರನ್ನು ಭಯಪಡಿಸಿದರು.
28 “ಈಜಿಪ್ಟೇ, ನೀನೂ ಸಹ ನಾಶಮಾಡಲ್ಪಡುವೆ. ನೀನೂ ಆ ಪರದೇಶದವರೊಂದಿಗೆ ಬಿದ್ದುಕೊಂಡಿರುವೆ. ಯುದ್ಧದಲ್ಲಿ ಸತ್ತ ಸೈನಿಕರೊಂದಿಗೆ ನೀನು ಮಲಗುವೆ.
29 “ಎದೋಮನೂ ಅಲ್ಲಿರುವನು. ಅವನ ರಾಜರೂ ಹಿರಿಯರೂ ಅಲ್ಲಿರುವರು. ಅವರೆಲ್ಲಾ ವೀರರಾಗಿದ್ದರೂ ಈ ಬೇರೆ ಜನರೊಂದಿಗೆ ಮಲಗಿದ್ದಾರೆ; ಆ ಪರದೇಶದವರೊಂದಿಗೆ ಪಾತಾಳದಲ್ಲಿ ಬಿದ್ದುಕೊಂಡಿದ್ದಾರೆ.
30 “ಉತ್ತರ ದೇಶದ ನಾಯಕರೆಲ್ಲಾ ಅಲ್ಲಿದ್ದಾರೆ. ಚೀದೋನಿನ ಸೈನಿಕರೂ ಅಲ್ಲಿದ್ದಾರೆ. ಅವರ ಬಲವು ಜನರನ್ನು ಭಯಗ್ರಸ್ತರನ್ನಾಗಿ ಮಾಡಿತ್ತು. ಅವರೂ ಈಗ ಯುದ್ಧದಲ್ಲಿ ಮಡಿದ ಇತರರೊಂದಿಗೆ ಬಿದ್ದುಕೊಂಡಿದ್ದಾರೆ. ತಮ್ಮ ನಾಚಿಕೆಯೊಂದಿಗೆ ಪಾತಾಳವನ್ನು ಸೇರಿದ್ದಾರೆ.
31 “ಪಾತಾಳಕ್ಕೆ ಸೇರಿದ ಜನರನ್ನು ಫರೋಹನು ನೋಡುವನು. ಅವನೂ ಅವನೊಂದಿಗಿರುವ ಜನರೂ ಸಮಾಧಾನ ಹೊಂದುವರು. ಹೌದು, ಫರೋಹನೂ ಅವನ ಎಲ್ಲಾ ಸೈನಿಕರೂ ಯುದ್ಧದಲ್ಲಿ ಸಾಯುವರು.” ಇದು ಒಡೆಯನಾದ ಯೆಹೋವನ ನುಡಿ.
32 “ಫರೋಹನು ತನ್ನ ಕಾಲದಲ್ಲಿ ಜನರನ್ನು ಭಯಗೊಳಿಸಿದ್ದನು. ಈಗಲಾದರೋ, ಫರೋಹನೂ ಅವನ ಸೈನಿಕರೂ ಪರದೇಶದವರೊಂದಿಗೆ ಮತ್ತು ಯುದ್ಧದಲ್ಲಿ ಹತರಾದವರೊಂದಿಗೆ ಬಿದ್ದುಕೊಳ್ಳುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
ಸ್ತುತಿಗೀತೆ. ರಚನೆಗಾರ: ಆಸಾಫ.
80 ಇಸ್ರೇಲನ್ನು ಕಾಯುವ ಕುರುಬನೇ,
ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
2 ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
ಬಂದು ನಮ್ಮನ್ನು ರಕ್ಷಿಸು.
3 ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
4 ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
5 ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
6 ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
ಶತ್ರುಗಳು ನಮ್ಮನ್ನು ನೋಡಿ ನಗುವರು.
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
8 ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
9 “ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11 ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.
17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
ನಮ್ಮನ್ನು ಬದುಕಿಸು.
ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
Kannada Holy Bible: Easy-to-Read Version. All rights reserved. © 1997 Bible League International