M’Cheyne Bible Reading Plan
ಜನಗಣತಿ ಮತ್ತು ಅದರ ಫಲ
24 ಯೆಹೋವನು ಇಸ್ರೇಲರ ಮೇಲೆ ಮತ್ತೆ ಕೋಪಗೊಂಡು ಇಸ್ರೇಲರ ವಿರುದ್ಧನಾಗುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು, “ಇಸ್ರೇಲಿನ ಮತ್ತು ಯೆಹೂದದ ಜನಗಣತಿ ಮಾಡಿರಿ” ಎಂದು ಆಜ್ಞಾಪಿಸಿದನು.
2 ರಾಜನಾದ ದಾವೀದನು ಸೈನ್ಯದ ಸೇನಾಧಿಪತಿಯಾದ ಯೋವಾಬನಿಗೆ, “ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಸಂಚರಿಸಿ ಜನರನ್ನು ಲೆಕ್ಕಹಾಕಿರಿ. ಆಗ ಅಲ್ಲಿ ಎಷ್ಟು ಜನರಿದ್ದಾರೆಂಬುದು ನನಗೆ ತಿಳಿಯುತ್ತದೆ” ಎಂದು ಹೇಳಿದನು.
3 ಆದರೆ ಯೋವಾಬನು ರಾಜನಿಗೆ, “ಅಲ್ಲಿ ಎಷ್ಟು ಜನರಿದ್ದಾರೆಂಬುದು ಅಗತ್ಯವಿಲ್ಲ. ನಿನ್ನ ದೇವರಾದ ಯೆಹೋವನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚು ಜನರನ್ನು ದಯಪಾಲಿಸಲಿ! ಈ ಕಾರ್ಯವು ಸಂಭವಿಸುವುದನ್ನು ನಿನ್ನ ಕಣ್ಣುಗಳಿಂದಲೇ ನೋಡು. ಆದರೆ ನೀನು ಈ ಕಾರ್ಯವನ್ನು ಮಾಡಬೇಕೆಂದಿರುವುದೇಕೆ?” ಎಂದು ಕೇಳಿದನು.
4 ಆದರೆ ರಾಜನಾದ ದಾವೀದನು ಯೋವಾಬನಿಗೆ ಮತ್ತು ಸೈನ್ಯದ ಸೇನಾಪತಿಗಳಿಗೆ ಜನರನ್ನು ಲೆಕ್ಕಹಾಕಲು ಆಜ್ಞಾಪಿಸಿದನು. ಆದ್ದರಿಂದ ಯೋವಾಬನು ಸೈನ್ಯದ ಸೇನಾಪತಿಗಳೊಡನೆ ಇಸ್ರೇಲಿನ ಜನರನ್ನು ಲೆಕ್ಕಹಾಕಲು ಹೊರಟನು. 5 ಅವರು ಜೋರ್ಡನ್ ನದಿಯನ್ನು ದಾಟಿ ಅರೋಯೇರಿನಲ್ಲಿ ಪಾಳೆಯ ಮಾಡಿಕೊಂಡರು. ಅವರ ಪಾಳೆಯವು ನಗರದ ಬಲ ಅಂಚಿನಲ್ಲಿತ್ತು. (ಆ ನಗರವು ಗಾದ್ ಕಣಿವೆಯ ಮಧ್ಯಭಾಗದಲ್ಲಿಯೂ ಯಗ್ಜೇರಿನ ಮಾರ್ಗದಲ್ಲಿಯೂ ಇತ್ತು.)
6 ಆಗ ಅವರು ಗಿಲ್ಯಾದಿಗೆ ಮತ್ತು ತಖ್ತೀಮ್ ಹೊಜೀ ಪ್ರದೇಶಕ್ಕೂ ಯಾನಿನದಾನಿಗೂ, ಚೀದೋನಿನ ಸುತ್ತಲೂ ಹೋದರು. 7 ಅವರು ತೂರ್ ಕೋಟೆಗೂ ಹಿವ್ವಿಯರ ಮತ್ತು ಕಾನಾನ್ಯರ ಎಲ್ಲಾ ನಗರಗಳಿಗೂ ಯೆಹೂದದ ದಕ್ಷಿಣಕ್ಕಿರುವ ಬೇರ್ಷೆಬಕ್ಕೂ ಹೋದರು. 8 ಅವರು ದೇಶದಲ್ಲೆಲ್ಲಾ ಸಂಚರಿಸಿ ಒಂಭತ್ತು ತಿಂಗಳು ಮತ್ತು ಇಪ್ಪತ್ತು ದಿನಗಳ ತರುವಾಯ ಜೆರುಸಲೇಮಿಗೆ ಬಂದರು.
9 ಯೋವಾಬನು ರಾಜನಿಗೆ ಜನರ ಪಟ್ಟಿಯನ್ನು ಕೊಟ್ಟನು. ಇಸ್ರೇಲಿನಲ್ಲಿ ಕತ್ತಿಯನ್ನು ಬಳಸಬಲ್ಲ ಎಂಟು ಲಕ್ಷ ಜನರಿದ್ದರು. ಯೆಹೂದದಲ್ಲಿ ಐದು ಲಕ್ಷ ಜನರಿದ್ದರು.
ಯೆಹೋವನು ದಾವೀದನನ್ನು ದಂಡಿಸಿದನು
10 ದಾವೀದನು ಜನರನ್ನು ಲೆಕ್ಕಹಾಕಿದ ನಂತರ ಅವಮಾನಗೊಂಡಂತೆ ಭಾವಿಸಿದನು. ದಾವೀದನು ಯೆಹೋವನಿಗೆ, “ನಾನು ಈ ಕಾರ್ಯವನ್ನು ಮಾಡಿ ಮಹಾಪಾಪಕ್ಕೆ ಒಳಗಾದೆನು! ಯೆಹೋವನೇ, ನನ್ನ ಪಾಪಕ್ಕಾಗಿ ನನ್ನನ್ನು ಕ್ಷಮಿಸೆಂದು ಬೇಡುತ್ತೇನೆ. ನಾನು ಬಹಳ ಮೂರ್ಖನಾಗಿಬಿಟ್ಟೆ” ಎಂದು ಹೇಳಿದನು.
11 ದಾವೀದನು ಹೊತ್ತಾರೆಯಲ್ಲಿ ಎದ್ದಾಗ, ಅವನ ದರ್ಶಿಯಾದ ಗಾದನಿಗೆ ಯೆಹೋವನ ಮಾತುಗಳು ಬಂದವು. 12 ಯೆಹೋವನು ಅವನಿಗೆ, “ನೀನು ಹೋಗಿ, ದಾವೀದನಿಗೆ ಹೋಗಿ ಹೇಳು, ‘ಯೆಹೋವನು ಹೀಗೆ ಹೇಳುತ್ತಾನೆ, ನಾನು ಮೂರು ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಒಂದನ್ನು ಆರಿಸಿಕೋ’” ಎಂದು ಹೇಳಿದನು.
13 ಗಾದನು ದಾವೀದನ ಬಳಿಗೆ ಹೋಗಿ, “ಈ ಮೂರು ಶಿಕ್ಷೆಗಳಲ್ಲಿ ಒಂದನ್ನು ಆರಿಸಿಕೊ: ನಿನಗೆ ಮತ್ತು ನಿನ್ನ ದೇಶಕ್ಕೆ ಏಳು ವರ್ಷಗಳ ಕಾಲ ಬರಗಾಲ ಬರಬೇಕೇ? ಅಥವಾ ನಿನ್ನ ಶತ್ರುಗಳು ನಿನ್ನನ್ನು ಮೂರು ತಿಂಗಳ ಕಾಲ ಅಟ್ಟಿಸಬೇಕೇ? ಅಥವಾ ಮೂರು ದಿನಗಳ ಕಾಲ ನಿನ್ನ ದೇಶದಲ್ಲಿ ರೋಗರುಜಿನಗಳು ವ್ಯಾಪಿಸಬೇಕೇ? ಇವುಗಳ ಬಗ್ಗೆ ಯೋಚಿಸು, ನನ್ನನ್ನು ಕಳುಹಿಸಿದ ಯೆಹೋವನಿಗೆ ನಾನು ಏನು ಹೇಳಬೇಕೆಂಬುದನ್ನು ನೀನು ತೀರ್ಮಾನಿಸು” ಎಂದು ಹೇಳಿದನು.
14 ದಾವೀದನು ಗಾದನಿಗೆ, “ನಾನು ನಿಜವಾಗಿಯೂ ತೊಂದರೆಗೆ ಒಳಗಾದೆ! ಆದರೆ ಯೆಹೋವನು ಕೃಪಾಪೂರ್ಣನಾಗಿದ್ದಾನೆ. ಆದ್ದರಿಂದ ಆತನು ನನ್ನನ್ನು ದಂಡಿಸಲಿ; ಆದರೆ ಅದು ಜನರಿಂದ ಬಾರದಿರಲಿ” ಎಂದು ಹೇಳಿದನು.
15 ಆದ್ದರಿಂದ ಯೆಹೋವನು ಇಸ್ರೇಲಿಗೆ ರೋಗರುಜಿನಗಳನ್ನು ಬರಮಾಡಿದನು. ಇವು ಹೊತ್ತಾರೆಯಿಂದ ಆರಂಭವಾಗಿ ನಿಯಮಿತಕಾಲದವರೆಗೆ ಮುಂದುವರಿದವು. ದಾನ್‌ನಿಂದ ಬೇರ್ಷೆಬದವರೆಗೆ ಎಪ್ಪತ್ತುಸಾವಿರ ಜನರು ಸತ್ತರು. 16 ದೇವದೂತನು ಜೆರುಸಲೇಮನ್ನು ನಾಶಗೊಳಿಸಲು ಅದರತ್ತ ತನ್ನ ಕೈಯನ್ನು ಚಾಚಿದನು. ಆದರೆ ಸಂಭವಿಸಿದ ಕೆಟ್ಟಕಾರ್ಯಗಳ ಬಗ್ಗೆ ಯೆಹೋವನು ಪಶ್ಚಾತ್ತಾಪಪಟ್ಟನು. ಯೆಹೋವನು ಜನರನ್ನು ನಾಶಗೊಳಿಸಿದ ದೇವದೂತನಿಗೆ, “ಇಲ್ಲಿಗೆ ಸಾಕು! ನಿನ್ನ ಕೈಯನ್ನು ಕೆಳಗಿಳಿಸು” ಎಂದು ಹೇಳಿದನು. ಆಗ ಆ ಯೆಹೋವನ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.
ದಾವೀದನು ಅರೌನನ ಕಣವನ್ನು ಕೊಂಡುಕೊಂಡನು
17 ಜನರನ್ನು ಕೊಂದ ದೂತನನ್ನು ದಾವೀದನು ನೋಡಿ ಯೆಹೋವನೊಂದಿಗೆ ಮಾತನಾಡಿದನು. ದಾವೀದನು ಯೆಹೋವನಿಗೆ, “ನಾನು ಪಾಪ ಮಾಡಿದೆನು. ನಾನು ತಪ್ಪು ಮಾಡಿದೆನು. ಆದರೆ ಈ ಜನರು ಕೇವಲ ಕುರಿಗಳಂತೆ ನಿರಪರಾಧಿಗಳು. ಅವರು ಯಾವ ತಪ್ಪನ್ನೂ ಮಾಡಲಿಲ್ಲ. ದಯಮಾಡಿ ನಿನ್ನ ದಂಡನೆಯು ನನಗೆ ಮತ್ತು ನನ್ನ ತಂದೆಯ ಕುಲದ ವಿರುದ್ಧವಾಗಿರಲಿ” ಎಂದು ಹೇಳಿದನು.
18 ಆ ದಿನ ಗಾದನು ದಾವೀದನ ಬಳಿಗೆ ಬಂದು, “ಹೋಗಿ, ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸು” ಎಂದು ಹೇಳಿದನು. 19 ಅಂತೆಯೇ ದಾವೀದನು ಯೆಹೋವನ ಆಜ್ಞೆಗೆ ವಿಧೇಯನಾಗಿ ಅರೌನನನ್ನು ನೋಡಲು ಹೋದನು. 20 ರಾಜನು ಅವನ ಸೇವಕರೊಂದಿಗೆ ತನ್ನ ಕಡೆ ಬರುತ್ತಿರುವುದನ್ನು ಅರೌನನು ನೋಡಿದನು. ಅರೌನನು ಹೊರಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. 21 ಅರೌನನು, “ರಾಜನಾದ ನನ್ನ ಒಡೆಯನೇ, ನನ್ನ ಬಳಿ ಬಂದದ್ದೇಕೆ?” ಎಂದು ಕೇಳಿದನು.
ದಾವೀದನು, “ನಿನ್ನಿಂದ ಕಣವನ್ನು ಕೊಂಡುಕೊಳ್ಳುವುದಕ್ಕಾಗಿ ಬಂದೆನು. ನಾನು ಯೆಹೋವನಿಗೆ ಒಂದು ಯಜ್ಞವೇದಿಕೆಯನ್ನು ನಿರ್ಮಿಸುತ್ತೇನೆ. ಆಗ ರೋಗರುಜಿನಗಳು ನಿಲ್ಲುತ್ತವೆ” ಎಂದನು.
22 ಅರೌನನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ಯಜ್ಞವನ್ನು ಸಮರ್ಪಿಸಲು ನೀನು ಏನನ್ನು ಬೇಕಾದರೂ ತೆಗೆದುಕೊ. ಸರ್ವಾಂಗಹೋಮವನ್ನು ಅರ್ಪಿಸಲು ಇಲ್ಲಿ ಕೆಲವು ಹೋರಿಗಳಿವೆ, ನೊಗ ಮುಂತಾದ ಮರದ ಸಲಕರಣೆಗಳಿವೆ. 23 ರಾಜನೇ, ನಾನು ಎಲ್ಲವನ್ನೂ ನಿನಗೆ ಅರ್ಪಿಸುತ್ತೇನೆ” ಎಂದು ಹೇಳಿದನು. ಇದಲ್ಲದೆ ಅರೌನನು ರಾಜನಿಗೆ, “ನಿನ್ನ ದೇವರಾದ ಯೆಹೋವನು ನಿನ್ನನ್ನು ಮೆಚ್ಚಿಕೊಳ್ಳಲಿ” ಎಂದೂ ಹೇಳಿದನು.
24 ಆದರೆ ರಾಜನು ಅರೌನನಿಗೆ, “ಇಲ್ಲ, ನಾನು ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನಾನು ನಿನ್ನ ಭೂಮಿಗೆ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ನಾನು ನನ್ನ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.
ಆದ್ದರಿಂದ ದಾವೀದನು ಕಣವನ್ನು ಮತ್ತು ಹೋರಿಗಳನ್ನು ಐವತ್ತು ಶೆಕೆಲ್‌ಗಳಿಗೆ ಕೊಂಡುಕೊಂಡನು. 25 ನಂತರ ದಾವೀದನು ಅಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು. ದಾವೀದನು ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದನು.
ಅವನು ದೇಶಕ್ಕಾಗಿ ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ಯೆಹೋವನು ಇಸ್ರೇಲಿನ ರೋಗರುಜಿನಗಳನ್ನು ನಿಲ್ಲಿಸಿದನು.
4 ನಾನು ಮತ್ತೆ ಹೇಳುವುದೇನೆಂದರೆ: ಬಾಧ್ಯಸ್ತನು ಬಾಲಕನಾಗಿರುವಾಗ ಅವನಿಗೂ ಗುಲಾಮನಿಗೂ ಯಾವ ವ್ಯತ್ಯಾಸವೂ ಇಲ್ಲ. ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಅವನು ಗುಲಾಮನಂತಿರುವನು. 2 ಏಕೆಂದರೆ ಅವನಿನ್ನೂ ಬಾಲಕನಾಗಿರುವಾಗ ಪರಿಪಾಲಕರಿಗೆ ಮತ್ತು ನಿರ್ವಾಹಕರಿಗೆ ವಿಧೇಯನಾಗಿರಬೇಕು. ಆದರೆ ತನ್ನ ತಂದೆಯು ಗೊತ್ತುಪಡಿಸಿದ ವಯಸ್ಸನ್ನು ತಲುಪಿದಾಗ ಆ ಬಾಲಕನು ಸ್ವತಂತ್ರನಾಗುವನು. 3 ಅದೇ ರೀತಿಯಲ್ಲಿ ನಾವು ಮೊದಲು ಮಕ್ಕಳಂತಿದ್ದೆವು. ಈ ಪ್ರಪಂಚದ ಉಪಯೋಗವಿಲ್ಲದ ನಿಯಮಗಳಿಗೆ ನಾವು ಗುಲಾಮರಾಗಿದ್ದೆವು. 4 ಆದರೆ ತಕ್ಕ ಕಾಲ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿದನು. ದೇವರ ಮಗನು ಸ್ತ್ರೀಯಲ್ಲಿ ಜನಿಸಿ, ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸಿದನು. 5 ಧರ್ಮಶಾಸ್ತ್ರದ ಅಧೀನದಲ್ಲಿದ್ದ ನಮ್ಮನ್ನು ಬಿಡಿಸಿ ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಬೇಕೆಂಬುದೇ ದೇವರ ಉದ್ದೇಶವಾಗಿತ್ತು.
6 ನೀವು ದೇವರ ಮಕ್ಕಳು. ಆದಕಾರಣವೇ ದೇವರು ತನ್ನ ಆತ್ಮವನ್ನು ನಿಮ್ಮ ಹೃದಯಗಳಿಗೆ ಕಳುಹಿಸಿದನು. “ತಂದೆಯೇ, ಅಪ್ಪಾ ತಂದೆಯೇ” ಎಂದು ಆತ್ಮನು ಕೂಗುತ್ತಾನೆ. 7 ಆದ್ದರಿಂದ ಈಗ ನೀನು ಮೊದಲಿನಂತೆ ಗುಲಾಮನಲ್ಲ. ನೀನು ದೇವರ ಮಗನು. ನೀನು ದೇವರ ಮಗನಾಗಿರುವುದರಿಂದ ಆತನು ನಿನ್ನನ್ನು ಬಾಧ್ಯಸ್ತನನ್ನಾಗಿಯೂ ಮಾಡಿದ್ದಾನೆ.
ಗಲಾತ್ಯ ಕ್ರೈಸ್ತರ ಮೇಲೆ ಪೌಲನ ಪ್ರೀತಿ
8 ಪೂರ್ವಕಾಲದಲ್ಲಿ ನೀವು ದೇವರನ್ನು ತಿಳಿಯದೆ ಸುಳ್ಳು ದೇವರುಗಳಿಗೆ ಗುಲಾಮರಾಗಿದ್ದಿರಿ. 9 ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ? 10 ವಿಶೇಷವಾದ ದಿನಗಳ, ಮಾಸಗಳ, ಕಾಲಮಾನಗಳ ಮತ್ತು ವರ್ಷಗಳ ಕುರಿತು ಧರ್ಮಶಾಸ್ತ್ರವು ಹೇಳುವ ಉಪದೇಶವನ್ನು ಇನ್ನೂ ಅನುಸರಿಸುತ್ತಿದ್ದೀರಿ. 11 ನಿಮ್ಮ ವಿಷಯದಲ್ಲಿ ನನಗೆ ಭಯವಾಗಿದೆ. ನಿಮಗೋಸ್ಕರ ನಾನು ಪಟ್ಟ ಪ್ರಯಾಸವು ವ್ಯರ್ಥವಾಗುವುದೆಂಬ ಭಯ ನನಗಿದೆ.
12 ಸಹೋದರ ಸಹೋದರಿಯರೇ, ನಾನೂ ನಿಮ್ಮಂತಿದ್ದೆನು. ಆದ್ದರಿಂದ ದಯವಿಟ್ಟು ನನ್ನಂತೆ ಆಗಿರಿ. 13 ಮೊದಲು ನೀವು ನನಗೆ ಬಹು ಒಳ್ಳೆಯವರಾಗಿದ್ದಿರಿ. ನಾನು ನಿಮ್ಮ ಬಳಿಗೆ ಮೊದಲನೆ ಸಲ ಬಂದದ್ದು ನನ್ನ ಅನಾರೋಗ್ಯದ ನಿಮಿತ್ತವೆಂದು ನಿಮಗೆ ಗೊತ್ತಿದೆ. ನಾನು ನಿಮಗೆ ಸುವಾರ್ತೆಯನ್ನು ತಿಳಿಸಿದ್ದು ಆವಾಗಲೇ. 14 ನನ್ನ ಅನಾರೋಗ್ಯವು ನಿಮಗೆ ಹೊರೆಯಾಗಿತ್ತು. ಆದರೆ ನೀವು ನನ್ನ ವಿಷಯದಲ್ಲಿ ಬೇಸರಮಾಡಿಕೊಳ್ಳಲಿಲ್ಲ. ನೀವು ನನ್ನನ್ನು ಕಳುಹಿಸಿಬಿಡಲಿಲ್ಲ. ದೇವದೂತನೋ ಎಂಬಂತೆ ನೀವು ನನ್ನನ್ನು ಸ್ವಾಗತಿಸಿದಿರಿ; ಸ್ವತಃ ಯೇಸು ಕ್ರಿಸ್ತನೋ ಎಂಬಂತೆ ನನ್ನನ್ನು ಸ್ವೀಕರಿಸಿಕೊಂಡಿರಿ. 15 ಆಗ ನೀವು ಬಹು ಸಂತೋಷವುಳ್ಳವರಾಗಿದ್ದಿರಿ. ಆ ಆನಂದವು ಈಗ ಎಲ್ಲಿದೆ? ನನಗೆ ಸಹಾಯ ಮಾಡಲು ನೀವು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಾಗಿದ್ದಿರೆಂಬುದು ನನ್ನ ನೆನಪಿನಲ್ಲಿದೆ. ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಟ್ಟುಬಿಡುತ್ತಿದ್ದಿರಿ. 16 ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ಈಗ ನಿಮ್ಮ ಶತ್ರುವಾಗಿದ್ದೇನೋ?
17 ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು. 18 ಆದರೆ ಅವರ ಉದ್ದೇಶವು ಒಳ್ಳೆಯದಾಗಿದ್ದಾಗ ಮಾತ್ರ ನಿಮಗೆ ಒಳ್ಳೆಯದಾಗುತ್ತದೆ. ಇದು ಸತ್ಯ. ನಾನು ನಿಮ್ಮೊಂದಿಗಿರುವಾಗಲೂ ನಿಮ್ಮಿಂದ ದೂರವಿರುವಾಗಲೂ ಇದು ಸತ್ಯ. 19 ನನ್ನ ಪ್ರಿಯ ಮಕ್ಕಳೇ, ಪ್ರಸವವೇದನೆಪಡುವ ತಾಯಿಯಂತೆ ನಾನು ನಿಮ್ಮ ವಿಷಯದಲ್ಲಿ ನೋವುಳ್ಳವನಾಗಿದ್ದೇನೆ. ನೀವು ನಿಜವಾಗಿಯೂ ಕ್ರಿಸ್ತನಂತಾಗುವ ತನಕ ನನಗೆ ಈ ನೋವಿರುತ್ತದೆ. 20 ಈಗ ನಾನು ನಿಮ್ಮೊಂದಿಗಿದ್ದಿದ್ದರೆ ಬೇರೊಂದು ರೀತಿಯಲ್ಲಿ ತಿಳಿಸಬಹುದಾಗಿತ್ತು. ನಿಮ್ಮ ವಿಷಯದಲ್ಲಿ ಈಗ ಏನು ಮಾಡಬೇಕೊ ನನಗೆ ತಿಳಿಯದು.
ಹಾಗರಳ ಮತ್ತು ಸಾರಳ ಉದಾಹರಣೆ
21 ನಿಮ್ಮಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಅಧೀನರಾಗಿರಲು ಇಷ್ಟಪಡುತ್ತೀರಿ. ಧರ್ಮಶಾಸ್ತ್ರವು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ನನಗೆ ತಿಳಿಸಿ. 22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು. 23 ಮಾನವ ಸಹಜವಾದ ರೀತಿಯಲ್ಲಿ ಅಬ್ರಹಾಮನ ಮಗನು ಆ ದಾಸಿಯಲ್ಲಿ ಹುಟ್ಟಿದನು. ಸ್ವತಂತ್ರಳಾಗಿದ್ದ ಸ್ತ್ರೀಯಲ್ಲಿ ಹುಟ್ಟಿದ ಮಗನಾದರೋ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಫಲವಾಗಿದ್ದನು.
24 ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು. 25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ. 26 ಆದರೆ ಪರಲೋಕದಲ್ಲಿರುವ ಜೆರುಸಲೇಮ್ ಸ್ವತಂತ್ರಳಾದ ಸ್ತ್ರೀಯಂತಿದೆ. ಇದೇ ನಮ್ಮ ತಾಯಿ. 27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:
“ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ,
ಸಂತೋಷಪಡು.
ಪ್ರಸವವೇದನೆಯಿಲ್ಲದವಳೇ,
ಸ್ವರವೆತ್ತಿ ಕೂಗು.
ಗಂಡನುಳ್ಳವಳಿಗಿಂತ ಗಂಡ
ಬಿಟ್ಟವಳಿಗೆ ಮಕ್ಕಳು ಹೆಚ್ಚು.”(A)
28-29 ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ. 30 ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.”(B) 31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.
ಅಶ್ಶೂರವು ದೇವದಾರು ಮರದಂತಿರುವದು
31 ಸೆರೆಹಿಡಿದ ಹನ್ನೊಂದನೇ ವರ್ಷದ ಮೂರನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಇದನ್ನು ಈಜಿಪ್ಟಿನ ರಾಜನಾದ ಫರೋಹನಿಗೂ ಅವನ ಜನರಿಗೂ ಹೇಳು:
“‘ನೀನು ಅತ್ಯಂತ ಪ್ರಭಾವಶಾಲಿ,
ನಿನ್ನನ್ನು ಯಾರಿಗೆ ಹೋಲಿಸಲಿ?
3 ಅಶ್ಶೂರವು ಲೆಬನೋನಿನಲ್ಲಿರುವ ದೇವದಾರು ಮರದಂತೆ ಎತ್ತರವಾಗಿ,
ಸುಂದರವಾದ ಕೊಂಬೆಗಳಿಂದಲೂ
ಕಾಡಿನ ನೆರಳಿನಲ್ಲಿಯೂ ಶೋಭಿಸುತ್ತದೆ.
ಅದರ ಮೇಲಿನ ತುದಿಯು ಮುಗಿಲನ್ನು ಮುಟ್ಟುವದು.
4 ನೀರು ಆ ಮರವನ್ನು ಬೆಳೆಯುವಂತೆ ಮಾಡಿತು.
ನದಿಯು ಅದನ್ನು ಎತ್ತರವಾಗುವಂತೆ ಮಾಡಿತು.
ಆ ಮರವು ನೆಡಲ್ಪಟ್ಟ ಸ್ಥಳದ ಸುತ್ತಲೂ ಹೊಳೆಯು ಹರಿಯುತ್ತಿದೆ.
ಆ ಮರದಿಂದ ಬೇರೆ ಮರಗಳಿಗೆ ಸಣ್ಣ ಕಾಲುವೆಗಳು ಹೊರಡುತ್ತವೆ.
5 ಯಾಕೆಂದರೆ ಈ ಮರವು ಬೇರೆ ಮರಗಳಿಗಿಂತ ಉನ್ನತವಾಗಿ ಕಾಣಿಸಿಕೊಳ್ಳಲು,
ಅದು ಅನೇಕ ಕೊಂಬೆಗಳನ್ನು ಬಿಟ್ಟಿತು.
ಅಲ್ಲಿ ಬೇಕಾದಷ್ಟು ನೀರು ಇದ್ದುದರಿಂದ
ಕೊಂಬೆಗಳು ಉದ್ದವಾಗಿಯೂ ವಿಶಾಲವಾಗಿಯೂ ಬೆಳೆದವು.
6 ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಗೂಡುಗಳನ್ನು ಕಟ್ಟಿದವು.
ಆ ಮರದ ಅಡಿಯಲ್ಲಿ ಪ್ರಾಣಿಗಳು ಮರಿಗಳನ್ನು ಈದವು.
ಆ ಮರದ ನೆರಳಿನಲ್ಲಿ
ಎಲ್ಲಾ ದೊಡ್ಡ ಜನಾಂಗಗಳು ವಾಸಿಸಿದವು.
7 ಆ ಮರವು ಮನೋಹರವಾಗಿತ್ತು.
ಅದು ದೊಡ್ಡದಾಗಿತ್ತು.
ಅದರ ಕೊಂಬೆಗಳು ವಿಶಾಲವಾಗಿದ್ದವು.
ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.
8 ದೇವರ ತೋಟದಲ್ಲಿರುವ ದೇವದಾರು ಮರಗಳೂ
ಈ ಮರದಷ್ಟು ಎತ್ತರವಾಗಿರಲಿಲ್ಲ.
ಈ ಮಹಾ ಮರಕ್ಕಿರುವಷ್ಟು ಕೊಂಬೆಗಳು ಸೈಪ್ರಸ್ ಮರಗಳಿಗೂ ಇಲ್ಲ.
ದೇವರ ತೋಟದಲ್ಲಿದ್ದ ಯಾವ ಮರವಾದರೂ ಇದರಷ್ಟು ಅಂದವಾಗಿರಲಿಲ್ಲ.
9 ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು
ಅಂದವಾಗಿ ಕಾಣುವಂತೆ ಮಾಡಿದೆನು.
ದೇವರ ತೋಟವಾಗಿರುವ ಏದೆನಿನಲ್ಲಿರುವ
ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’”
10 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಆ ಮರವು ಎತ್ತರವಾಗಿ ಬೆಳೆಯಿತು. ಅದರ ತುದಿ ಮುಗಿಲನ್ನು ಮುಟ್ಟಿತು. ಇದು ಅದಕ್ಕೆ ಹೆಮ್ಮೆಯನ್ನು ತಂದಿತು. 11 ಆಗ ನಾನು ಒಬ್ಬ ಬಲಾಢ್ಯನಾದ ರಾಜನು ಬಂದು ಆ ಮರವನ್ನು ತೆಗೆದುಕೊಳ್ಳುವಂತೆ ಮಾಡಿದೆನು. ಆ ರಾಜನು ಮರವು ಮಾಡಿದ ದುಷ್ಕೃತ್ಯಗಳಿಗಾಗಿ ಅದನ್ನು ಶಿಕ್ಷಿಸಿದನು. ಆ ಮರವನ್ನು ನಾನು ನನ್ನ ತೋಟದಿಂದ ತೆಗೆದು ಹಾಕಿದೆನು. 12 ಪರದೇಶದ ಕ್ರೂರ ಜನರು ಅದನ್ನು ಕಡಿದು ಅದರ ರೆಂಬೆಗಳನ್ನೆಲ್ಲಾ ಬೆಟ್ಟ, ಬಯಲು, ತಗ್ಗುಗಳಲ್ಲಿ ಚದರಿಸಿಬಿಟ್ಟರು. ಅದರ ಮುರಿಯಲ್ಪಟ್ಟ ಕೊಂಬೆಗಳು ಆ ದೇಶದಲ್ಲಿ ಹರಿಯುವ ನದಿಯಲ್ಲಿ ತೇಲಿದವು. ಆ ಮರದಡಿಯಲ್ಲಿ ಈಗ ನೆರಳು ಇಲ್ಲ. ಆದ್ದರಿಂದ ಅಲ್ಲಿ ವಾಸವಾಗಿದ್ದ ಜನರೆಲ್ಲಾ ಅಲ್ಲಿಂದ ಹೊರಟುಹೋದರು. 13 ಕೆಳಗೆ ಬಿದ್ದ ಮರದ ಮೇಲೆ ಪಕ್ಷಿಗಳು ವಾಸಿಸಿದವು. ಕೆಳಗೆ ಬಿದ್ದ ಅದರ ಕೊಂಬೆಗಳ ಮೇಲೆ ಕಾಡುಪ್ರಾಣಿಗಳು ನಡೆದವು.
14 “ಈಗ ಆ ನೀರಿನ ಬಳಿಯಲ್ಲಿರುವ ಯಾವ ಮರಗಳೂ ಹೆಮ್ಮೆಪಡುವದಿಲ್ಲ. ಅವು ಮುಗಿಲನ್ನು ಮುಟ್ಟಲು ಪ್ರಯತ್ನಿಸುವದಿಲ್ಲ. ಚೆನ್ನಾಗಿ ಬೆಳೆದ ಮರಗಳು ಆ ನೀರನ್ನು ಕುಡಿದು ತಾನು ಉದ್ದವಾಗಿ ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವದಿಲ್ಲ. ಯಾಕೆಂದರೆ ಎಲ್ಲವೂ ಸಾಯುವುದಕ್ಕಾಗಿ ನೇಮಕಗೊಂಡಿವೆ. ಅವುಗಳೆಲ್ಲಾ ಮರಣದ ಸ್ಥಳವನ್ನು ಸೇರುವವು. ಅಲ್ಲಿ ಸತ್ತು, ಮರಣದ ಆ ಸ್ಥಳಕ್ಕೆ ಹೋಗಿ ಪಾತಾಳಕ್ಕೆ ಸೇರಿದವರನ್ನು ಸೇರುವವು.”
15 ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ: “ಆ ಮರವು ಪಾತಾಳಕ್ಕೆ ಹೋದ ದಿವಸದಲ್ಲಿ ನಾನು ಜನರನ್ನು ಅಳುವಂತೆ ಮಾಡಿದೆನು. ಅದನ್ನು ನಾನು ಆಳವಾದ ಸಾಗರದಿಂದ ಮುಚ್ಚಿಬಿಟ್ಟೆನು. ನಾನು ಅದರ ನದಿಗಳನ್ನೂ ಬೇರೆ ನೀರಿನ ತೊರೆಗಳನ್ನೂ ನಿಲ್ಲಿಸಿಬಿಟ್ಟೆನು. ಲೆಬನೋನ್ ಅದಕ್ಕಾಗಿ ಶೋಕಿಸುವಂತೆ ಮಾಡಿದೆನು. ಆ ದೊಡ್ಡ ಮರವು ಹೋದುದಕ್ಕಾಗಿ ಆ ಪ್ರಾಂತ್ಯದ ಬೇರೆ ಎಲ್ಲಾ ಮರಗಳು ದುಃಖದಿಂದ ಕಾಯಿಲೆಯಲ್ಲಿ ಬಿದ್ದವು. 16 ನಾನು ಆ ಮರವನ್ನು ಬೀಳಿಸಿದೆನು. ಬೀಳುವ ಅದರ ಶಬ್ದವನ್ನು ಕೇಳಿ ರಾಜ್ಯಗಳೆಲ್ಲಾ ಭಯದಿಂದ ನಡುಗಿದವು. ನಾನು ಆ ಮರವನ್ನು ಪಾತಾಳಕ್ಕೆ ಕಳುಹಿಸಿದೆನು. ಅದು ಹೋಗಿ ಅದಕ್ಕಿಂತ ಮೊದಲೇ ಆ ಆಳವಾದ ಗುಂಡಿಗೆ ಹೋಗಿರುವವರೊಂದಿಗೆ ಸೇರಿಕೊಂಡಿತು. ಗತಿಸಿದ ದಿವಸಗಳಲ್ಲಿ ಏದೆನಿನಲ್ಲಿದ್ದ ಎಲ್ಲಾ ಮರಗಳು, ಲೆಬನೋನಿನ ಉತ್ಕೃಷ್ಟ ಮರಗಳು ಆ ನೀರನ್ನು ಕುಡಿದಿದ್ದವು. ಅವೆಲ್ಲವೂ ಪಾತಾಳದಲ್ಲಿ ಸಂತೈಸಿಕೊಂಡವು. 17 ಹೌದು, ಆ ಮರವೂ ಅದರ ನೆರಳಿನ ಆಶ್ರಯವನ್ನು ಪಡೆದುಕೊಂಡಿದ್ದ ಅದರ ಎಲ್ಲಾ ಸಂತತಿಗಳವರೂ ಯುದ್ಧದಲ್ಲಿ ಸತ್ತುಹೋಗಿದ್ದ ಸೈನಿಕರೊಂದಿಗೆ ಇರುವದಕ್ಕಾಗಿ ಪಾತಾಳಕ್ಕೆ ಇಳಿದು ಹೋಗಿದ್ದವು.
18 “ಈಜಿಪ್ಟೇ, ಏದೆನಿನಲ್ಲಿ ಎಷ್ಟೋ ದೊಡ್ಡ, ಬಲಶಾಲಿಯಾಗಿರುವ ಮರಗಳಿವೆ. ಅದರ ಯಾವ ಮರಕ್ಕೆ ನಿನ್ನನ್ನು ಹೋಲಿಸಲಿ? ಅವೆಲ್ಲವೂ ಭೂಮಿಯ ಕೆಳಗೆ ಪಾತಾಳವನ್ನು ಸೇರಿದವು. ನೀನು ಕೂಡಾ ಆ ಪರದೇಶಸ್ಥರೊಂದಿಗೆ ಆ ಸ್ಥಳಕ್ಕೆ ಸೇರುವೆ. ರಣರಂಗದಲ್ಲಿ ಸತ್ತವರೊಂದಿಗೆ ನೀನು ಬಿದ್ದುಕೊಳ್ಳುವೆ.
“ಹೌದು, ಈ ರೀತಿಯಾಗಿ ಫರೋಹನಿಗೂ ಅವನೊಂದಿಗಿರುವ ಜನರ ಗುಂಪಿಗೂ ಆಗುವದು.” ಇದು ಒಡೆಯನಾದ ಯೆಹೋವನ ನುಡಿ.
ಸ್ತುತಿಗೀತೆ. ರಚನೆಗಾರ: ಆಸಾಫ.
79 ದೇವರೇ, ಅನ್ಯ ಜನಾಂಗಗಳು ನಿನ್ನ ಜನರಿಗೆ ಮುತ್ತಿಗೆ ಹಾಕಿದ್ದಾರೆ.
ಅವರು ನಿನ್ನ ಪವಿತ್ರಾಲಯವನ್ನು ಹೊಲಸು ಮಾಡಿದರು;
ಜೆರುಸಲೇಮನ್ನು ನಾಶ ಮಾಡಿದರು.
2 ಅವರು ನಿನ್ನ ಸೇವಕರ ಸತ್ತದೇಹಗಳನ್ನು ಕ್ರೂರ ಪಕ್ಷಿಗಳಿಗೆ ಆಹಾರ ಮಾಡಿದರು.
ಅವರು ನಿನ್ನ ಭಕ್ತರ ದೇಹಗಳನ್ನು ಕ್ರೂರ ಪ್ರಾಣಿಗಳಿಗೆ ಹಾಕಿದರು.
3 ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು.
ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.
4 ನಮ್ಮ ನೆರೆಹೊರೆಯ ದೇಶಗಳವರು ನಮಗೆ ಅವಮಾನ ಮಾಡಿದರು.
ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ನಮ್ಮನ್ನು ನೋಡಿ ನಗುತ್ತಾ ಗೇಲಿ ಮಾಡಿದರು.
5 ದೇವರೇ, ಇನ್ನೆಷ್ಟರವರೆಗೆ ನೀನು ನಮ್ಮ ಮೇಲೆ ಕೋಪದಿಂದಿರುವೆ?
ನಿನ್ನ ಕೋಪಾಗ್ನಿಯು ಉರಿಯುತ್ತಲೇ ಇರಬೇಕೇ?
6 ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ
ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
7 ಯಾಕೆಂದರೆ ಆ ಜನಾಂಗಗಳು
ಯಾಕೋಬ್ಯರನ್ನೂ ಅವರ ದೇಶವನ್ನೂ ನಾಶಮಾಡಿದರು.
8 ನಮ್ಮ ಪೂರ್ವಿಕರು ಮಾಡಿದ ಪಾಪಕ್ಕೆ ಬರಬೇಕಾದ ದಂಡನೆಯನ್ನು ನಮ್ಮ ಮೇಲೆ ಬರಗೊಡಿಸಬೇಡ.
ಬೇಗನೆ ನಿನ್ನ ಕರುಣೆಯನ್ನು ನಮಗೆ ತೋರು!
ನೀನು ನಮಗೆ ಎಷ್ಟೋ ಅಗತ್ಯವಾಗಿರುವೆ!
9 ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು!
ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು!
ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ
ನಮ್ಮ ಪಾಪಗಳನ್ನು ಅಳಿಸಿಬಿಡು.
10 ಅನ್ಯ ಜನಾಂಗಗಳು, “ನಿಮ್ಮ ದೇವರು ಎಲ್ಲಿ? ಆತನು ನಿಮಗೆ ಸಹಾಯಮಾಡಲಾರನೇ?”
ಎಂದು ಹೇಳಲು ಅವಕಾಶ ಕೊಡಬೇಡ.
ದೇವರೇ, ಅವರು ನಿನ್ನ ಸೇವಕರನ್ನು ಕೊಂದದ್ದಕ್ಕಾಗಿ
ನಮ್ಮ ಕಣ್ಣೆದುರಿನಲ್ಲಿಯೇ ಅವರನ್ನು ದಂಡಿಸು.
11 ದಯವಿಟ್ಟು, ಸೆರೆಯಾಳುಗಳ ಗೋಳಾಟಕ್ಕೆ ಕಿವಿಗೊಡು!
ಸಾಯಲಿರುವವರನ್ನು ನಿನ್ನ ಮಹಾಶಕ್ತಿಯಿಂದ ಕಾಪಾಡು.
12 ಒಡೆಯನೇ, ನಮ್ಮ ಸುತ್ತಮುತ್ತಲಿನ ಜನರು ಮಾಡಿದ ಕಾರ್ಯಗಳಿಗಾಗಿ
ಅವರನ್ನು ಏಳರಷ್ಟು ದಂಡಿಸು.
ನಿನಗೆ ಅವಮಾನಮಾಡಿದ್ದರಿಂದ ಅವರನ್ನು ದಂಡಿಸು.
13 ನಾವು ನಿನ್ನ ಜನರೂ ನೀನು ಪಾಲಿಸುವ ಮಂದೆಯೂ ಆಗಿದ್ದೇವೆ.
ನಾವು ನಿನ್ನನ್ನು ಎಂದೆಂದಿಗೂ ಕೊಂಡಾಡುವೆವು.
ನಿನ್ನನ್ನು ಸದಾಕಾಲ ಸ್ತುತಿಸುವೆವು.
Kannada Holy Bible: Easy-to-Read Version. All rights reserved. © 1997 Bible League International