M’Cheyne Bible Reading Plan
ದಾವೀದನು ಯೆಹೋವನಿಗಾಗಿ ರಚಿಸಿದ ಸ್ತುತಿಗೀತೆ
22 ಯೆಹೋವನು ದಾವೀದನನ್ನು ಸೌಲನಿಂದ ಮತ್ತು ಅವನ ಇತರ ಎಲ್ಲಾ ಶತ್ರುಗಳಿಂದ ರಕ್ಷಿಸಿದನು. ಆ ಸಮಯದಲ್ಲಿ ದಾವೀದನು ಈ ಹಾಡನ್ನು ರಚಿಸಿ ಹಾಡಿದನು:
2 ಯೆಹೋವನು ನನ್ನ ಬಂಡೆ; ನನ್ನ ಕೋಟೆ; ನನ್ನ ವಿಮೋಚಕ.
3 ನಾನು ಸಹಾಯಕ್ಕಾಗಿ ದೇವರ ಬಳಿಗೆ ಓಡಿಹೋಗುತ್ತೇನೆ.
ಆತನೇ ನನ್ನ ಆಶ್ರಯಗಿರಿ. ಯೆಹೋವನು ನನ್ನ ಗುರಾಣಿ. ಆತನ ಶಕ್ತಿಯು ನನ್ನನ್ನು ರಕ್ಷಿಸುತ್ತದೆ.
ಆತನು ನಾನು ಅಡಗಿಕೊಳ್ಳುವ ಸ್ಥಳ; ಬೆಟ್ಟಗಳ ಮೇಲಿರುವ ನನ್ನ ಸುರಕ್ಷಿತ ಸ್ಥಳ;
ಆತನು ನನ್ನನ್ನು ಕ್ರೂರ ಶತ್ರುಗಳಿಂದ ರಕ್ಷಿಸುವನು!
4 ಯೆಹೋವನು ಸ್ತೋತ್ರಕ್ಕೆ ಅರ್ಹನಾಗಿದ್ದಾನೆ.
ನಾನು ಸಹಾಯಕ್ಕಾಗಿ ಆತನನ್ನು ಕರೆಯುವೆನು.
ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುವನು.
5 ಸಾವಿನ ಅಲೆಗಳು ನನ್ನನ್ನು ಸುತ್ತುವರೆದಿವೆ;
ತೊಂದರೆಗಳು ಪ್ರವಾಹದಂತೆ ನುಗ್ಗಿಬಂದಿವೆ.
ಅವೆಲ್ಲ ನನ್ನಲ್ಲಿ ಭೀತಿಯನ್ನು ಉಂಟುಮಾಡಿವೆ.
6 ಪಾತಾಳದ ಪಾಶಗಳು ನನ್ನನ್ನು ಸುತ್ತುವರೆದಿವೆ;
ಮರಣಕರವಾದ ಉರುಲುಗಳು ನನ್ನೆದುರಿನಲ್ಲಿವೆ.
7 ನಾನು ಅವುಗಳಲ್ಲಿ ಸಿಲುಕಿಕೊಂಡಿದ್ದಾಗ ಯೆಹೋವನಿಗೆ ಪ್ರಾರ್ಥಿಸಿದೆನು.
ಹೌದು, ನನ್ನ ದೇವರಿಗೆ ನಾನು ಮೊರೆಯಿಟ್ಟೆನು;
ತನ್ನ ಆಲಯದಲ್ಲಿದ್ದ ಆತನಿಗೆ ನನ್ನ ಸ್ವರ ಕೇಳಿಸಿತು;
ಸಹಾಯಕ್ಕಾಗಿ ನಾನಿಟ್ಟ ಮೊರೆಗೆ ಆತನು ಕಿವಿಗೊಟ್ಟನು.
8 ಆಗ ಭೂಮಿಯು ಗಡಗಡನೆ ನಡುಗಿತು.
ಆಕಾಶದ ಅಡಿಪಾಯಗಳು ಅಲುಗಾಡಿದವು.
ಏಕೆಂದರೆ ಯೆಹೋವನಿಗೆ ಸಿಟ್ಟೇರಿತ್ತು!
9 ಆತನ ಮೂಗಿನ ಹೊಳ್ಳೆಗಳಿಂದ ಹೊಗೆಯು ಹೊರಬಂದಿತು.
ಬೆಂಕಿಕಿಡಿಯ ಜ್ವಾಲೆಗಳು ಆತನ ಬಾಯಿಂದ ಹೊರಬಂದವು;
ದಹಿಸುವ ಬೆಂಕಿಯು ಆತನ ಬಾಯೊಳಗಿಂದ ಬಂದಿತು.
10 ಆತನು ಆಕಾಶವನ್ನು ಇಬ್ಭಾಗಮಾಡಿ ಕೆಳಗಿಳಿದು ಬಂದನು!
ಆತನ ಕಾಲುಗಳ ಕೆಳಗೆ ಕತ್ತಲೆ ಕವಿದಿತ್ತು.
11 ಕೆರೂಬಿಗಳ ಮೇಲೆ ಆಸೀನನಾಗಿ ವಾಯುವೇ
ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
12 ಆತನು ಕಾರ್ಮೋಡಗಳನ್ನೇ ತನ್ನ ಸುತ್ತಲೂ ಗುಡಾರದಂತಾಗಿಸಿಕೊಂಡನು.
ಆತನು ಆಕಾಶದ ನೀರನ್ನು, ಗುಡುಗುವ ದೊಡ್ಡ ಮೋಡಗಳನ್ನು ತನ್ನ ಸುತ್ತಲೂ ಕವಿಸಿಕೊಂಡನು.
13 ಉರಿಯುವ ಕಲ್ಲಿದ್ದಲಿನಂತಿದ್ದ ಕಿಡಿಗಳು
ಆತನ ಸುತ್ತಲೂ ಇದ್ದ ಬೆಳಕಿನಿಂದ ಬಂದವು.
14 ಯೆಹೋವನು ಆಕಾಶದಿಂದ ಗುಡುಗಿದನು!
ಸರ್ವೋನ್ನತನಾದ ದೇವರು ತನ್ನ ಸ್ವರ ಕೇಳುವಂತೆ ಮಾಡಿದನು.
15 ಆತನಿಂದ ಹೊರಟ ಬಾಣಗಳು ಶತ್ರುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದವು.
ಆತನು ಸಿಡಿಲನ್ನು ಉಂಟುಮಾಡಿದನು, ಜನರು ಭೀತಿಯಿಂದ ಓಡಿಹೋದರು.
16 ಯೆಹೋವನೇ, ನೀನು ಗದರಿಸಿದಾಗ
ನಿನ್ನ ಬಾಯಿಂದ ಪ್ರಬಲವಾದ ಗಾಳಿಯು ಬೀಸಿತು;
ನೀರು ಹಿಂದಕ್ಕೆ ತಳ್ಳಲ್ಪಟ್ಟಿತು. ಸಮುದ್ರದ ತಳವೂ
ಭೂಮಿಯ ಅಸ್ತಿವಾರಗಳು ಕಣ್ಣಿಗೆ ಗೋಚರವಾದವು.
17 ಆತನು ಮೇಲಿನ ಲೋಕದಿಂದ ಕೆಳಗಿಳಿದನು.
ಆತನು ನನ್ನನ್ನು ಹಿಡಿದುಕೊಂಡು ನನ್ನನ್ನು ನೀರಿನಡಿಯಿಂದ ಮೇಲಕ್ಕೆತ್ತಿದನು.
18 ನನ್ನನ್ನು ದ್ವೇಷಿಸುತ್ತಿದ್ದ ಶತ್ರುಗಳಿಂದ ಆತನೇ ರಕ್ಷಿಸಿದನು.
ನನ್ನ ಶತ್ರುಗಳು ನನಗಿಂತಲೂ ಬಹಳ ಬಲಿಷ್ಠರೂ ಸೊಕ್ಕಿದವರೂ ಆಗಿದ್ದರು.
ಅವರ ಕೈಯಿಂದ ಆತನೇ ನನ್ನನ್ನು ರಕ್ಷಿಸಿದನು.
19 ಶತ್ರುಗಳು ನನಗೆ ಮುತ್ತಿಗೆ ಹಾಕಿದಾಗ ನಾನು ತೊಂದರೆಯಲ್ಲಿದ್ದೆನು.
ಆದರೆ ನನಗೆ ಯೆಹೋವನು ಸಹಾಯ ಮಾಡಿದನು.
20 ಆತನು ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ತಂದನು.
ಆತನು ನನ್ನನ್ನು ಪ್ರೀತಿಸಿ ರಕ್ಷಿಸಿದನು.
21 ನಾನು ನೀತಿಗನುಸಾರವಾಗಿ ನಡೆದುಕೊಂಡಿದ್ದರಿಂದ ಯೆಹೋವನು ನನಗೆ ಪ್ರತಿಫಲವನ್ನು ಕೊಟ್ಟನು.
ನಾನು ನಿರ್ದೋಷಿಯಾಗಿದ್ದರಿಂದ ಆತನು ನನಗೆ ಒಳ್ಳೆಯದನ್ನೇ ಮಾಡಿದನು.
22 ನಾನು ಆತನ ಮಾರ್ಗಗಳನ್ನೇ ಅನುಸರಿಸಿದೆನು.
ನನ್ನ ದೇವರ ವಿರುದ್ಧ ನಾನು ಪಾಪವನ್ನು ಮಾಡಲಿಲ್ಲ.
23 ನಾನು ಯೆಹೋವನ ಆಜ್ಞೆಗಳನ್ನು ಯಾವಾಗಲೂ ಜ್ಞಾಪಿಸಿಕೊಂಡೆನು.
ನಾನು ಯಾವಾಗಲೂ ಆತನ ಕಟ್ಟಳೆಗನುಸಾರವಾಗಿಯೇ ನಡೆದುಕೊಂಡೆನು.
24 ನಾನು ದೋಷಿಯಲ್ಲವೆಂಬುದು ಆತನಿಗೆ ತಿಳಿದಿದೆ.
ನಾನು ಪಾಪದಲ್ಲಿ ಬೀಳದಂತೆ ಎಚ್ಚರಿಕೆ ವಹಿಸಿದೆನು.
25 ನಾನು ಒಳ್ಳೆಯದನ್ನೇ ಮಾಡಿದೆನು.
ಯೆಹೋವನ ದೃಷ್ಟಿಯಲ್ಲಿ ನಾನು ತಪ್ಪೇನೂ ಮಾಡಲಿಲ್ಲ,
ಆದ್ದರಿಂದ ಆತನು ನನಗೆ ಪ್ರತಿಫಲ ಕೊಡುವನು!
26 ನಿನ್ನನ್ನು ಪ್ರೀತಿಸುವವರನ್ನು ನೀನು ಪ್ರೀತಿಸುತ್ತಿ.
ನಿನ್ನ ಮುಂದೆ ದೋಷವಿಲ್ಲದವನಾಗಿ ನಡೆಯುವವನಿಗೆ ನಿರ್ದೋಷಿಯಾಗಿರುತ್ತಿ.
27 ನೀನು ಪರಿಶುದ್ಧರಿಗೆ ಪರಿಶುದ್ಧನಾಗಿರುವೆ;
ಮೋಸಗಾರರಿಗೆ ಜಾಣನಾಗಿರುವೆ.
28 ನೀನು ದೀನರನ್ನು ಮೇಲಕ್ಕೆತ್ತುವೆ;
ಗರ್ವಿಷ್ಠರನ್ನಾದರೋ ತುಳಿದುಬಿಡುವೆ.
29 ಯೆಹೋವನೇ, ನನ್ನ ದೀಪವು ನೀನೇ.
ಯೆಹೋವನು ನನಗೆ ಬೆಳಕು ಕೊಟ್ಟು ನನ್ನ ಸುತ್ತಲಿನ ಅಂಧಕಾರವನ್ನು ಪ್ರಕಾಶಮಯವಾಗುವಂತೆ ಮಾಡುವನು.
30 ನಿನ್ನ ಸಹಾಯದಿಂದಲೇ, ನಾನು ವೈರಿಗಳ ಮೇಲೆ ಬೀಳುವೆನು.
ನಿನ್ನ ಸಹಾಯದಿಂದಲೇ ನಾನು ಶತ್ರುಗಳ ಗೋಡೆಗಳನ್ನು ಹತ್ತಬಲ್ಲೆನು.
31 ದೇವರ ಶಕ್ತಿಯು ಪರಿಪೂರ್ಣವಾದದ್ದು.
ಯೆಹೋವನ ಮಾತು ಪರೀಕ್ಷಿಸಲ್ಪಟ್ಟದ್ದು;
ಆತನು ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸುತ್ತಾನೆ.
32 ಯೆಹೋವನ ಹೊರತು ಬೇರೆ ದೇವರಿಲ್ಲ.
ನಮ್ಮ ದೇವರ ಹೊರತು ಬೇರೆ ಬಂಡೆಯಿಲ್ಲ.
33 ದೇವರು ನನ್ನ ಬಲವೂ ಕೋಟೆಯೂ ಆಗಿದ್ದಾನೆ.
ಆತನು ನನ್ನ ಮಾರ್ಗವನ್ನು ದೋಷವಿಲ್ಲದ್ದಾಗಿ ಮಾಡುತ್ತಾನೆ.
34 ನಾನು ಉನ್ನತ ಪ್ರದೇಶಗಳಲ್ಲಿ ನಿಲ್ಲುವಂತೆ
ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳಂತೆ ಮಾಡುತ್ತಾನೆ.
35 ಆತನು ಯುದ್ಧಕ್ಕಾಗಿ ನನ್ನನ್ನು ತರಬೇತುಗೊಳಿಸುವನು.
ಆದ್ದರಿಂದ ನನ್ನ ತೋಳುಗಳು ಹಿತ್ತಾಳೆಯ ಬಿಲ್ಲನ್ನೂ ಬಗ್ಗಿಸಬಲ್ಲವು.
36 ದೇವರೇ, ನೀನು ನನ್ನನ್ನು ಸಂರಕ್ಷಿಸಿ ಜಯಹೊಂದಲು ನನಗೆ ಸಹಾಯಮಾಡಿರುವೆ.
ನನ್ನ ಶತ್ರುವನ್ನು ಸೋಲಿಸಲು ನೀನು ನನಗೆ ಸಹಾಯ ಮಾಡಿರುವೆ.
37 ನನ್ನ ಕಾಲುಗಳನ್ನೂ ಕೀಲುಗಳನ್ನೂ ಬಲಗೊಳಿಸು;
ಆಗ ನಾನು ಎಡವದೆ ವೇಗವಾಗಿ ನಡೆಯಬಲ್ಲೆನು.
38 ನಾನು ನನ್ನ ಶತ್ರುಗಳನ್ನು ಅಟ್ಟಿಸಿಕೊಂಡು ಹೋದೆನು.
ನಾನು ಅವರನ್ನು ನಾಶಗೊಳಿಸಿದೆನು!
ನಾನು ನನ್ನ ಶತ್ರುಗಳನ್ನು ನಾಶಗೊಳಿಸುವ ತನಕ ಹಿಂದಿರುಗುವುದಿಲ್ಲ.
39 ನಾನು ನನ್ನ ಶತ್ರುಗಳನ್ನು ನಾಶಗೊಳಿಸಿದೆನು!
ನಾನು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆನು.
ಅವರು ಮತ್ತೆ ಮೇಲೇಳುವುದಿಲ್ಲ.
ಹೌದು, ನನ್ನ ಶತ್ರುಗಳು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ.
40 ದೇವರೇ, ನೀನು ನನ್ನನ್ನು ಯುದ್ಧಕ್ಕಾಗಿ ಬಲಪಡಿಸಿರುವೆ.
ನನ್ನ ಶತ್ರುಗಳನ್ನು ನನಗೆ ಅಧೀನರಾಗುವಂತೆ ಮಾಡಿರುವೆ.
41 ನನ್ನ ಶತ್ರುಗಳು ಓಡಿಹೋಗಲು ನೀನೇ ಕಾರಣ.
ಆದ್ದರಿಂದಲೇ ನನ್ನನ್ನು ದ್ವೇಷಿಸಿದ ಜನರನ್ನು ನಾನು ನಾಶ ಮಾಡಿದೆನು.
42 ನನ್ನ ಶತ್ರುಗಳು ಸಹಾಯಕ್ಕಾಗಿ ನೋಡಿದರು.
ಆದರೆ ಅವರನ್ನು ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.
ಅವರು ಯೆಹೋವನ ಕಡೆಗೂ ನೋಡಿದರು;
ಆದರೆ ಆತನು ಅವರಿಗೆ ಉತ್ತರ ಕೊಡಲಿಲ್ಲ.
43 ನಾನು ನನ್ನ ಶತ್ರುಗಳನ್ನು
ತುಂಡುತುಂಡಾಗಿ ಕತ್ತರಿಸಿಹಾಕಿದೆ.
ಅವರು ನೆಲದ ಮೇಲಿನ ಧೂಳಿನಂತಾದರು.
ನನ್ನ ಶತ್ರುಗಳನ್ನು ರಸ್ತೆಯಲ್ಲಿನ ಮಣ್ಣಿನಂತಾಗುವವರೆಗೆ ತುಳಿದುಬಿಟ್ಟೆನು.
44 ಜನರು ನನ್ನ ವಿರುದ್ಧ ವಾದಿಸಿದಾಗ ನೀನು ನನ್ನನ್ನು ರಕ್ಷಿಸಿದೆ.
ನೀನು ನನ್ನನ್ನು ಜನಾಂಗಗಳಿಗೆ ಅಧಿಪತಿಯನ್ನಾಗಿ ಮಾಡಿದೆ.
ನಾನು ತಿಳಿಯದ ಜನರೂ ನನ್ನ ಸೇವೆಮಾಡುತ್ತಾರೆ!
45 ಅನ್ಯದೇಶದ ಜನರೂ ನನಗೆ ವಿಧೇಯರಾಗಿರುವರು!
ಅವರು ನನ್ನ ಬಗ್ಗೆ ಕೇಳಿದಾಗ, ತಕ್ಷಣವೇ ನನಗೆ ವಿಧೇಯರಾಗುವರು!
ಆ ಪರದೇಶಿಯರು ನನಗೆ ಭಯಪಡುವರು.
46 ಅನ್ಯದೇಶದ ಜನರು ಭಯಗೊಳ್ಳುವರು;
ತಾವು ಅಡಗಿದ್ದ ಸ್ಥಳಗಳಿಂದ ನಡುಗುತ್ತಾ ಹೊರಬರುವರು.
47 ಯೆಹೋವನು ಜೀವಸ್ವರೂಪನಾಗಿದ್ದಾನೆ.
ನನ್ನ ಬಂಡೆಗೆ ಸ್ತೋತ್ರವಾಗಲಿ.
ಯೆಹೋವನು ಮಹೋನ್ನತನು!
ನನ್ನನ್ನು ರಕ್ಷಿಸುವ ಬಂಡೆಯಾದಾತನಿಗೆ ಸ್ತುತಿಯುಂಟಾಗಲಿ.
48 ನನ್ನ ಶತ್ರುಗಳನ್ನು ನನಗಾಗಿ ದಂಡಿಸುವ ದೇವರು ಆತನೇ.
ಆತನು ಜನರನ್ನು ನನ್ನ ಅಧೀನತೆಗೆ ಒಳಪಡಿಸುವನು.
49 ನನ್ನ ಶತ್ರುಗಳಿಂದ ನನ್ನನ್ನು ಸ್ವತಂತ್ರನಾಗಿಸುವವನು ದೇವರೇ.
ಹೌದು, ನೀನು ನನ್ನನ್ನು ನನ್ನ ಶತ್ರುಗಳಿಂದ ತಪ್ಪಿಸಿ ಮೇಲಕ್ಕೇರಿಸುವೆ.
ನನ್ನನ್ನು ಹಿಂಸಿಸಬೇಕೆನ್ನುವ ಮನುಷ್ಯನಿಂದ ನೀನು ನನಗೆ ರಕ್ಷಣೆ ನೀಡುವೆ.
50 ಯೆಹೋವನೇ, ಈ ಕಾರಣದಿಂದಲೇ ನಾನು ಅನ್ಯ ಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
ಈ ಕಾರಣದಿಂದಲೇ ನಿನ್ನ ಹೆಸರಿನ ಮೇಲೆ ಹಾಡುಗಳನ್ನು ಹಾಡುವೆನು.
51 ಆತನು ತಾನು ನೇಮಿಸಿದ ರಾಜನಿಗೆ ಸಹಾಯಮಾಡಿ ಯುದ್ಧಗಳಲ್ಲಿ ಜಯ ದಯಪಾಲಿಸುವನು.
ಆತನು ನನ್ನ ರಕ್ಷಣಾದುರ್ಗವಾಗಿದ್ದಾನೆ.
ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಪ್ರೀತಿಯನ್ನು ಮತ್ತು ದಯೆಯನ್ನು ತೋರುವನು.
ದಾವೀದನಿಗೆ ಮತ್ತು ಅವನ ಸಂತತಿಯವರಿಗೆ ಆತನು ಎಂದೆಂದಿಗೂ ಕೃಪೆ ತೋರಿಸುವವನಾಗಿದ್ದಾನೆ.
ಇತರ ಅಪೊಸ್ತಲರು ಪೌಲನನ್ನು ಸ್ವೀಕರಿಸಿಕೊಂಡರು
2 ಹದಿನಾಲ್ಕು ವರ್ಷಗಳ ನಂತರ ಬಾರ್ನಬನ ಜೊತೆಯಲ್ಲಿ ತೀತನನ್ನು ಕರೆದುಕೊಂಡು ಮತ್ತೆ ಜೆರುಸಲೇಮಿಗೆ ಹೋದೆನು. 2 ನಾನು ಹೋಗಲೇಬೇಕೆಂದು ದೇವರು ನನಗೆ ತಿಳಿಸಿದ್ದರಿಂದ ವಿಶ್ವಾಸಿಗಳ ನಾಯಕರಾದ ಈ ಜನರ ಬಳಿಗೆ ಹೋದೆನು. ನಾವಷ್ಟೇ ಇದ್ದಾಗ, ಯೆಹೂದ್ಯರಲ್ಲದವರಿಗೆ ಸಾರುವ ಸುವಾರ್ತೆಯನ್ನು ಇವರಿಗೆ ತಿಳಿಸಿದೆನು. ನಾನು ಮೊದಲು ಮಾಡಿದ ಸೇವೆ ಮತ್ತು ಈಗ ಮಾಡುತ್ತಿರುವ ಸೇವೆ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಇವರಿಗೆ ಅರ್ಥವಾಗುವಂತೆ ನನ್ನ ಸೇವೆಯ ಬಗ್ಗೆ ತಿಳಿಸಿದೆನು.
3-4 ತೀತನು ನನ್ನೊಂದಿಗಿದ್ದನು. ಅವನು ಗ್ರೀಕನಾಗಿದ್ದನು. ಆದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಯಾರೂ ಬಲವಂತ ಮಾಡಲಿಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಮಾತಾಡಲೇಬೇಕಿತ್ತು. ಏಕೆಂದರೆ ಕೆಲವು ಸುಳ್ಳು ಸಹೋದರರು ಬಂದು ನಮ್ಮ ಸಭೆಯೊಳಗೆ ಸೇರಿಕೊಂಡಿದ್ದರು. ಯೇಸು ಕ್ರಿಸ್ತನಲ್ಲಿ ನಮಗಿರುವ ಸ್ವಾತಂತ್ರ್ಯದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು ಅವರು ಬಂದಿದ್ದರು. 5 ಆದರೆ ಆ ಸುಳ್ಳುಸಹೋದರರು ಬಯಸಿದ ಯಾವುದಕ್ಕೂ ನಾವು ಒಂದು ಕ್ಷಣವಾದರೂ ಒಪ್ಪಿಗೆ ಕೊಡಲಿಲ್ಲ. ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂಬುದೇ ನಮ್ಮ ಅಪೇಕ್ಷೆಯಾಗಿತ್ತು.
6 ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) 7 ಆದರೆ ಪೇತ್ರನಂತೆ ನನಗೂ ದೇವರು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆಂಬುದನ್ನು ಈ ನಾಯಕರು ತಿಳಿದುಕೊಂಡರು. ಯೆಹೂದ್ಯರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ಪೇತ್ರನಿಗೆ ಕೊಟ್ಟನು. ಆದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. 8 ಯೆಹೂದ್ಯರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ದೇವರು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ನನಗೂ ವಹಿಸಿ ಕೊಟ್ಟನು. 9 ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು. 10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.
ಪೇತ್ರನ ತಪ್ಪನ್ನು ಪೌಲನು ತೋರಿಸಿದನು
11 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ, ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗಿ ತೋರಿದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ನಡೆದ ಸಂಗತಿ ಏನೆಂದರೆ: ಪೇತ್ರನು ಮೊದಲು ಅಂತಿಯೋಕ್ಯಕ್ಕೆ ಬಂದಾಗ ಅವನು ಯೆಹೂದ್ಯರಲ್ಲದವರೊಂದಿಗೆ ಊಟಮಾಡಿದನು ಮತ್ತು ಅನ್ಯೋನ್ಯತೆಯಿಂದಿದ್ದನು. ಆ ಬಳಿಕ ಯಾಕೋಬನಿಂದ ಕಳುಹಿಸಲ್ಪಟ್ಟಿದ್ದ ಕೆಲವು ಯೆಹೂದ್ಯರು ಬಂದರು. ಆಗ, ಪೇತ್ರನು ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ನಿಲ್ಲಿಸಿದನು. ಪೇತ್ರನು ತನ್ನನ್ನು ಯೆಹೂದ್ಯರಲ್ಲದವರಿಂದ ಬೇರ್ಪಡಿಸಿಕೊಂಡನು. ಯೆಹೂದ್ಯರಲ್ಲದವರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಂಬಿಕೊಂಡಿದ್ದ ಯೆಹೂದ್ಯರಿಗೆ ಅವನು ಹೆದರಿಕೊಂಡನು. 13 ಹೀಗೆ ಪೇತ್ರನು ಕಪಟತನದಿಂದ ವರ್ತಿಸಿದನು. ಯೆಹೂದ್ಯರಾದ ವಿಶ್ವಾಸಿಗಳು ಸಹ ಪೇತ್ರನನ್ನೇ ಅನುಸರಿಸಿ ಕಪಟತನದಿಂದ ವರ್ತಿಸಿದರು. ಇವರ ವರ್ತನೆಯಿಂದ ಬಾರ್ನಬನು ಸಹ ಪ್ರಭಾವಿತನಾದನು. 14 ಈ ಯೆಹೂದ್ಯರ ವರ್ತನೆಯನ್ನು ನಾನು ಗಮನಿಸಿದೆನು. ಅವರು ಸುವಾರ್ತೆಯ ಸತ್ಯವನ್ನು ಅನುಸರಿಸದೆ ಇರುವುದನ್ನು ಕಂಡು ಅಲ್ಲಿದ್ದ ಯೆಹೂದ್ಯರೆಲ್ಲರಿಗೂ ಕೇಳಿಸುವಂತೆ ನಾನು ಪೇತ್ರನಿಗೆ, “ನೀನು ಯೆಹೂದ್ಯನಾಗಿರುವೆ. ಆದರೆ ನೀನು ಯೆಹೂದ್ಯನಂತೆ ಜೀವಿಸುತ್ತಿಲ್ಲ. ನೀನು ಯೆಹೂದ್ಯನಲ್ಲದವನಂತೆ ಜೀವಿಸುತ್ತಿರುವೆ. ಹೀಗಿರಲು ನೀನು ಯೆಹೂದ್ಯರಲ್ಲದವರಿಗೆ ಯೆಹೂದ್ಯರಂತೆ ಜೀವಿಸಬೇಕೆಂದು ಒತ್ತಾಯಮಾಡುವುದೇಕೆ?” ಎಂದು ಕೇಳಿದೆನು.
15 ನಾವಂತೂ ಹುಟ್ಟು ಯೆಹೂದ್ಯರು. ನಾವು ಪಾಪಿಗಳೆನಿಸಿಕೊಂಡಿರುವ ಅನ್ಯಜನರಲ್ಲ. 16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.
17 ಯೆಹೂದ್ಯರಾದ ನಾವು ನೀತಿವಂತರಾಗಲು ಕ್ರಿಸ್ತನ ಬಳಿಗೆ ಬಂದೆವು. ಆದ್ದರಿಂದ ನಾವು ಸಹ ಪಾಪಿಗಳಾಗಿದ್ದೇವೆಂಬುದು ಸ್ಪಷ್ಟವಾಗಿದೆ. ಕ್ರಿಸ್ತನು ನಮ್ಮನ್ನು ಪಾಪಿಗಳನ್ನಾಗಿ ಮಾಡುತ್ತಾನೆಂಬುದು ಇದರ ಅರ್ಥವೇ? ಇಲ್ಲ. 18 ಆದರೆ ನಾನು ತೊರೆದುಬಿಟ್ಟ ಆ ಸಂಗತಿಗಳನ್ನು ಮತ್ತೆ ಬೋಧಿಸಲಾರಂಭಿಸಿದರೆ ನಿಜವಾಗಿಯೂ ತಪ್ಪು ಮಾಡಿದವನಾಗುತ್ತೇನೆ. 19 ನಾನು ಧರ್ಮಶಾಸ್ತ್ರಕ್ಕಾಗಿ ಜೀವಿಸುವುದನ್ನು ತೊರೆದುಬಿಟ್ಟೆನು. ನನ್ನನ್ನು ಧರ್ಮಶಾಸ್ತ್ರವೇ ಕೊಂದಿತು. ಈಗ ನಾನು ದೇವರಿಗಾಗಿ ಜೀವಿಸಬೇಕೆಂದು ಧರ್ಮಶಾಸ್ತ್ರದ ಪಾಲಿಗೆ ಸತ್ತುಹೋದೆನು. ನಾನು ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟೆನು. 20 ಆದ್ದರಿಂದ ಈಗ ನನ್ನೊಳಗೆ ಜೀವಿಸುತ್ತಿರುವವನು ನಿಜವಾಗಿಯೂ ನಾನಲ್ಲ, ಕ್ರಿಸ್ತನೇ ನನ್ನೊಳಗೆ ಜೀವಿಸುತ್ತಿದ್ದಾನೆ. ನಾನಿನ್ನೂ ದೇಹಾರೂಢನಾಗಿದ್ದೇನೆ. ಆದರೆ ನಾನು ಜೀವಿಸುತ್ತಿರುವುದು ದೇವರ ಮಗನ ಮೇಲೆ ನನಗಿರುವ ನಂಬಿಕೆಯಿಂದಲೇ. ನನ್ನನ್ನು ಪ್ರೀತಿಸಿದಾತನು ಯೇಸುವೇ ಮತ್ತು ನನ್ನನ್ನು ರಕ್ಷಿಸುವುದಕ್ಕಾಗಿ ಆತನು ತನ್ನನ್ನೇ ಕೊಟ್ಟುಬಿಟ್ಟನು. 21 ಇದು ದೇವರ ವರವಾಗಿದೆ ಮತ್ತು ನನಗೆ ಅತಿಮುಖ್ಯವಾದದ್ದಾಗಿದೆ. ಏಕೆಂದರೆ ಧರ್ಮಶಾಸ್ತ್ರವು ನಮ್ಮನ್ನು ನೀತಿವಂತರನ್ನಾಗಿ ಮಾಡಬಹುದಾಗಿದ್ದರೆ, ಕ್ರಿಸ್ತನು ಸಾಯುವ ಅಗತ್ಯವೇ ಇರಲಿಲ್ಲ.
ಈಜಿಪ್ಟಿನ ವಿರುದ್ಧ ಸಂದೇಶ
29 ಸೆರೆ ಒಯ್ಯಲ್ಪಟ್ಟ ಹತ್ತನೇ ವರ್ಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿವಸದಲ್ಲಿ ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನ ಕಡೆಗೆ ಮುಖಮಾಡು. ಅವನಿಗೂ ಈಜಿಪ್ಟಿಗೂ ವಿರುದ್ಧವಾಗಿ ನನ್ನ ಪರವಾಗಿ ಮಾತನಾಡು. 3 ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು,
“‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ,
“ಇದು ನಾನು ನಿರ್ಮಿಸಿದ ಹೊಳೆ”
ಎಂದು ನೀನು ಹೇಳಿಕೊಳ್ಳುವೆ.
4 “‘ಆದರೆ ನಾನು ನಿನ್ನ ದವಡೆಗಳಿಗೆ ಕೊಂಡಿಗಳನ್ನು ಸಿಕ್ಕಿಸುವೆನು.
ನೈಲ್ ನದಿಯ ಮೀನುಗಳು ನಿನ್ನ ಪೊರೆಗಳಿಗೆ ಸಿಲುಕಿಕೊಳ್ಳುವವು.
5 ನಾನು ನಿನ್ನನ್ನೂ ನಿನ್ನ ಮೀನುಗಳನ್ನೂ
ನೀರಿನೊಳಗಿಂದ ಹೊರಕ್ಕೆತ್ತಿ ಒಣನೆಲದ ಮೇಲೆ ಹಾಕುವೆನು.
ನೀನು ನೆಲದ ಮೇಲೆ ಬೀಳುವೆ.
ಯಾರೂ ನಿನ್ನನ್ನು ಮೇಲಕ್ಕೆ ಎತ್ತುವುದೂ ಇಲ್ಲ ಹೂಣಿಡುವುದೂ ಇಲ್ಲ.
ನಾನು ನಿನ್ನನ್ನು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಕೊಡುವೆನು.
ಅವರಿಗೆ ನೀನು ಆಹಾರವಾಗುವೆ.
6 ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ
ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು.
“‘ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ?
ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
7 ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು.
ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು.
ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”
8 ಆದ್ದರಿಂದ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ನಿನಗೆ ವಿರುದ್ಧವಾಗಿ ಖಡ್ಗವನ್ನು ತರುವೆನು.
ನಾನು ನಿನ್ನ ಜನರನ್ನೂ ಪ್ರಾಣಿಗಳನ್ನೂ ಸಂಪೂರ್ಣವಾಗಿ ಸಂಹರಿಸುವೆನು.
9 ಈಜಿಪ್ಟ್ ನಿಶ್ಯೇಷವಾಗಿ ನಾಶವಾಗುವದು.
ಆಗ ಅವರು ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
ದೇವರು ಹೀಗೆಂದನು, “ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ. ಯಾಕೆಂದರೆ ನೀನು, ‘ಇದು ನನ್ನ ನದಿ, ಇದನ್ನು ನಾನು ಮಾಡಿದೆನು’ ಎಂದು ಹೇಳಿದೆ. 10 ಆದ್ದರಿಂದ ನಾನು ನಿನಗೆ ವಿರೋಧವಾಗಿರುತ್ತೇನೆ. ನೈಲ್ ನದಿಯ ಅನೇಕ ಶಾಖೆಗಳಿಗೂ ನಾನು ವಿರೋಧವಾಗಿದ್ದೇನೆ. ಈಜಿಪ್ಟನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಮಿಗ್ದೋಲ್‌ನಿಂದ ಅಸ್ವಾನ್ ತನಕ ಇರುವ ಪಟ್ಟಣಗಳು ಬರಿದಾಗುವವು. ಇಥಿಯೋಪ್ಯದ ಮೇರೆಯ ತನಕವೂ ಬರಿದಾಗುವದು. 11 ಯಾವನೂ, ಯಾವ ಪ್ರಾಣಿಯೂ ಈಜಿಪ್ಟ್ ದೇಶವನ್ನು ದಾಟುವುದಿಲ್ಲ. ನಲವತ್ತು ವರ್ಷದ ತನಕ ಯಾರೂ ಅಲ್ಲಿ ನೆಲೆಸುವದಿಲ್ಲ. 12 ನಾನು ಈಜಿಪ್ಟನ್ನು ನಾಶಮಾಡುತ್ತೇನೆ. ಅದರ ನಗರಗಳು ನಲವತ್ತು ವರ್ಷಗಳ ತನಕ ನಿರ್ಜನವಾಗಿರುವದು. ಈಜಿಪ್ಟ್ ಜನರನ್ನು ಬೇರೆ ದೇಶಗಳಿಗೆ ಅಟ್ಟಿಬಿಡುವೆನು. ಪರದೇಶಗಳಲ್ಲಿ ಅವರು ಪ್ರವಾಸಿಗಳಂತಿರುವರು.”
13 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ: “ಈಜಿಪ್ಟಿನ ಜನರನ್ನು ನಾನು ಅನೇಕ ದೇಶಗಳಲ್ಲಿ ಚದರಿಸಿಬಿಡುವೆನು. ನಲವತ್ತು ವರ್ಷದ ಕೊನೆಯಲ್ಲಿ ಅವರನ್ನು ತಿರಿಗಿ ಒಟ್ಟುಗೂಡಿಸುವೆನು. 14 ಸೆರೆಹಿಡಿಯಲ್ಪಟ್ಟ ಈಜಿಪ್ಟರನ್ನು ಪತ್ರೋಸ್ ದೇಶಕ್ಕೆ ಬರಮಾಡುವೆನು. ಅವರ ಜನ್ಮಸ್ಥಳಕ್ಕೆ ಅವರನ್ನು ತಿರುಗಿ ಬರಮಾಡುವೆನು. ಆದರೆ ಅವರ ರಾಜ್ಯಕ್ಕೆ ಮಹತ್ವವಿರುವುದಿಲ್ಲ. 15 ಅದು ಯಾವ ಮಹತ್ವವೂ ಇಲ್ಲದ ರಾಜ್ಯವಾಗಿರುವುದು. ಬೇರೆ ರಾಜ್ಯಗಳಿಗಿಂತ ಅದು ಎಂದಿಗೂ ಉನ್ನತಸ್ಥಾನದಲ್ಲಿರದು. ಅದು ಅಷ್ಟು ಚಿಕ್ಕ ರಾಜ್ಯವಾಗುವುದರಿಂದ ಬೇರೆ ದೇಶಗಳ ಮೇಲೆ ಅಧಿಕಾರ ನಡೆಸದು. 16 ಇಸ್ರೇಲರು ಅವರ ಮೇಲೆ ಇನ್ನು ಎಂದಿಗೂ ಭರವಸವಿಡುವುದಿಲ್ಲ. ಇಸ್ರೇಲರು ಸಹಾಯಕ್ಕಾಗಿ ದೇವರ ಬಳಿಗೆ ಹೋಗದೆ ಈಜಿಪ್ಟಿನವರ ಮೇಲೆ ಭರವಸವಿಟ್ಟಿದ್ದ ಪಾಪವನ್ನು ಅರಿತುಕೊಳ್ಳುವರು. ಆಗ ಅವರು ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.”
ಬಾಬಿಲೋನ್ ಈಜಿಪ್ಟನ್ನು ಸೆರೆಹಿಡಿಯುವದು
17 ಯೆಹೋಯಾಖೀನನು ಸೆರೆಹಿಡಿಯಲ್ಪಟ್ಟ ಇಪ್ಪತ್ತೇಳನೇ ವರ್ಷದ, ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಸೈನ್ಯವು ತೂರ್ ದೇಶದವರೊಂದಿಗೆ ಉಗ್ರವಾಗಿ ಹೋರಾಡುವಂತೆ ನಡೆಸಿದನು. ಪ್ರತಿ ಸೈನಿಕನ ತಲೆಯನ್ನು ಬೋಳಿಸಿದರು. ಪ್ರತಿಯೊಬ್ಬನ ಭುಜಗಳು ಭಾರ ಹೊತ್ತುಹೊತ್ತು ಸವೆದುಹೋಗಿದ್ದವು. ನೆಬೂಕದ್ನೆಚ್ಚರ್ ಮತ್ತು ಅವನ ಸೈನ್ಯವು ತೂರ್ ದೇಶವನ್ನು ಸೋಲಿಸಲು ಬಹಳವಾಗಿ ಪ್ರಯಾಸಪಡಬೇಕಾಗಿ ಬಂತು. ಆದರೆ ಅವರ ಪ್ರಯಾಸದ ಪ್ರತಿಫಲವಾಗಿ ಏನೂ ದೊರಕಲಿಲ್ಲ.” 19 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ರಾಜನಾದ ನೆಬೂಕದ್ನೆಚ್ಚರನಿಗೆ ನಾನು ಈಜಿಪ್ಟ್ ದೇಶವನ್ನು ಕೊಡುವೆನು. ನೆಬೂಕದ್ನೆಚ್ಚರನು ಈಜಿಪ್ಟಿನವರನ್ನು ಸೆರೆಹಿಡಿದು ಕೊಂಡೊಯ್ವನು. ಈಜಿಪ್ಟಿನ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚುವನು. ಇದು ಅವನ ಸೈನಿಕರ ಸಂಬಳವಾಗುವುದು. 20 ನೆಬೂಕದ್ನೆಚ್ಚರನು ಪ್ರಯಾಸದ ಕೆಲಸ ಮಾಡಿದ್ದರಿಂದ ನಾನು ಅವನಿಗೆ ಪ್ರತಿಫಲವಾಗಿ ಈಜಿಪ್ಟ್ ದೇಶವನ್ನು ಕೊಟ್ಟೆನು. ಯಾಕೆಂದರೆ ಅವರು ನನಗೋಸ್ಕರ ಪ್ರಯಾಸಪಟ್ಟರು.” ಇದು ಒಡೆಯನಾದ ಯೆಹೋವನ ನುಡಿ.
21 “ಆ ದಿವಸದಲ್ಲಿ ಇಸ್ರೇಲ್ ವಂಶವನ್ನು ನಾನು ಬಲಪಡಿಸುವೆನು. ಯೆಹೆಜ್ಕೇಲನೇ, ನೀನು ಅವರೊಂದಿಗೆ ಮಾತನಾಡುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವನೆಂದು ತಿಳಿದುಕೊಳ್ಳುವರು.”
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
5 ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
6 ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
7 ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
8 ಜನರು ತಮ್ಮ ಮಕ್ಕಳಿಗೆ ದೇವರ ಆಜ್ಞೆಗಳನ್ನು ಉಪದೇಶಿಸಿದರೆ,
ಮಕ್ಕಳು ತಮ್ಮ ಪೂರ್ವಿಕರಂತಾಗುವುದಿಲ್ಲ.
ಅವರ ಪೂರ್ವಿಕರು ದೇವರಿಗೆ ವಿಮುಖರಾಗಿ ಆತನಿಗೆ ವಿಧೇಯರಾಗಲಿಲ್ಲ.
ಅವರು ಮೊಂಡರಾಗಿದ್ದರು.
ಅವರು ದೇವರಿಗೆ ನಂಬಿಗಸ್ತರಾಗಿರಲಿಲ್ಲ.
9 ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸುಸಜ್ಜಿತರಾಗಿದ್ದರು.
ಆದರೆ ಅವರು ಯುದ್ಧದಿಂದ ಓಡಿಹೋದರು.
10 ದೇವರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಅವರು ಪಾಲಿಸಲಿಲ್ಲ.
ಅವರು ಆತನ ಉಪದೇಶಗಳಿಗೆ ವಿಧೇಯರಾಗಲಿಲ್ಲ.
11 ದೇವರ ಮಹತ್ಕಾರ್ಯಗಳನ್ನೂ ಆತನು ಅವರಿಗೆ ತೋರಿಸಿದ ಸೂಚಕಕಾರ್ಯಗಳನ್ನೂ
ಎಫ್ರಾಯಿಮಿನ ಜನರು ಮರೆತುಬಿಟ್ಟರು.
12 ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ
ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13 ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು.
ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14 ಹಗಲಿನಲ್ಲಿ ಮೋಡದಿಂದಲೂ
ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15 ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ
ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16 ಆತನು ಬಂಡೆಯಿಂದ ನೀರನ್ನು
ನದಿಯಂತೆ ಬರಮಾಡಿದನು.
17 ಆದರೂ ಅವರು ಅರಣ್ಯದಲ್ಲಿ
ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
“ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
21 ಆ ಜನರು ಹೇಳಿದ್ದನ್ನು ಕೇಳಿ
ಯೆಹೋವನು ಕೋಪಗೊಂಡನು.
ಆತನು ಯಾಕೋಬ್ಯರ ಮೇಲೆಯೂ
ಇಸ್ರೇಲರ ಮೇಲೆಯೂ ಕೋಪಗೊಂಡನು.
22 ಯಾಕೆಂದರೆ ಜನರು ಆತನಲ್ಲಿ ಭರವಸೆ ಇಡಲಿಲ್ಲ.
ದೇವರು ತಮ್ಮನ್ನು ರಕ್ಷಿಸಬಲ್ಲನೆಂದು ಅವರು ನಂಬಲಿಲ್ಲ.
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
30 ಅವರು ತಮ್ಮ ಆಸೆಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲಿಲ್ಲ.
ಆ ಲಾವಕ್ಕಿಗಳ ರಕ್ತವನ್ನು ಪೂರ್ತಿಯಾಗಿ ತೆಗೆಯುವ ಮೊದಲೇ ಅವುಗಳ ಮಾಂಸವನ್ನು ತಿಂದುಬಿಟ್ಟರು.
31 ಆಗ ಆತನು ಅವರ ಮೇಲೆ ಬಹು ಕೋಪಗೊಂಡು, ಅವರಲ್ಲಿ ಅನೇಕರನ್ನು ಕೊಂದುಹಾಕಿದನು.
ದೃಢಕಾಯರಾಗಿದ್ದ ಅನೇಕ ಯುವಕರಿಗೆ ಆತನು ಸಾವನ್ನು ಬರಮಾಡಿದನು.
32 ಆದರೂ ಅವರು ಪಾಪಮಾಡುತ್ತಾ ಬಂದರು.
ಆತನ ಅದ್ಭುತಕಾರ್ಯಗಳನ್ನು ಅವರು ನಂಬದೆ ಹೋದರು.
33 ಆದ್ದರಿಂದ ಆತನು ಆಪತ್ತುಗಳನ್ನು ಬರಮಾಡಿ
ಅವರ ಅಯೋಗ್ಯ ಜೀವಿತಗಳನ್ನು ಉಸಿರಿನಂತೆ ಅಂತ್ಯಗೊಳಿಸಿದನು.
34 ಅವರಲ್ಲಿ ಕೆಲವರನ್ನು ದೇವರು ಕೊಂದಾಗಲೆಲ್ಲಾ,
ಉಳಿದವರು ಆತನ ಕಡೆಗೆ ತಿರುಗಿಕೊಂಡು ಓಡಿ ಬರುತ್ತಿದ್ದರು.
35 ದೇವರೇ ತಮ್ಮ ಆಶ್ರಯಸ್ಥಾನವೆಂಬುದನ್ನೂ
ಮಹೋನ್ನತನಾದ ದೇವರೇ ತಮ್ಮ ರಕ್ಷಕನೆಂಬುದನ್ನೂ ಅವರು ಜ್ಞಾಪಿಸಿಕೊಳ್ಳುತ್ತಿದ್ದರು.
36 ಆದರೆ ಅವರು ಯಥಾರ್ಥವಾಗಿರದೆ ಸುಳ್ಳಾಡಿದರು.
37 ಅವರ ಹೃದಯಗಳು ಆತನಲ್ಲಿ ನೆಲೆಗೊಂಡಿರಲಿಲ್ಲ.
ಆತನ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International