Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 18

ದಾವೀದನು ಯುದ್ಧಕ್ಕೆ ಸಿದ್ಧನಾಗುವನು

18 ದಾವೀದನು ತನ್ನ ಜನರನ್ನು ಲೆಕ್ಕಮಾಡಿದನು. ಅವನು ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. ದಾವೀದನು ತನ್ನ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಅವರನ್ನು ಹೊರಗೆ ಕಳುಹಿಸಿದನು. ಯೋವಾಬನು ಮೊದಲನೆ ಗುಂಪನ್ನು, ಅಬೀಷೈ ಎರಡನೆ ಗುಂಪನ್ನು, ಗತ್‌ನ ಇತ್ತೈಯನು ಮೂರನೆ ಗುಂಪನ್ನು ನಡೆಸಿದರು.

ರಾಜನಾದ ದಾವೀದನು, “ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಅವರಿಗೆ ಹೇಳಿದನು.

ಆದರೆ ಅವರು, “ಬೇಡ, ನೀನು ನಮ್ಮ ಜೊತೆ ಬರುವುದು ಬೇಡ. ಏಕೆಂದರೆ ನಾವು ಯುದ್ಧರಂಗದಿಂದ ಓಡಿಹೋಗಿಬಿಟ್ಟರೆ, ಅಬ್ಷಾಲೋಮನ ಜನರು ಲಕ್ಷಿಸುವುದಿಲ್ಲ. ನಮ್ಮಲ್ಲಿ ಅರ್ಧದಷ್ಟು ಜನರು ಸತ್ತರೂ, ಅಬ್ಷಾಲೋಮನ ಜನರು ಲಕ್ಷಿಸುವುದಿಲ್ಲ. ಆದರೆ ನೀನು ನಮ್ಮ ಹತ್ತು ಸಾವಿರ ಜನರಷ್ಟು ಬೆಲೆಯುಳ್ಳವನಾಗಿರುವೆ! ನೀನು ನಗರದಲ್ಲಿರುವುದೇ ಉತ್ತಮ. ಅಲ್ಲಿಂದಲೇ ನೀನು ನಮಗೆ ಸಹಾಯ ಮಾಡಬಹುದು” ಎಂದು ಹೇಳಿದರು.

ರಾಜನು ತನ್ನ ಜನರಿಗೆ, “ನೀವು ಉತ್ತಮವೆಂದು ಯೋಚಿಸಿದ ಕಾರ್ಯವನ್ನು ನಾನು ಮಾಡುತ್ತೇನೆ” ಎಂದು ಹೇಳಿದನು.

ಆಗ ರಾಜನು ಊರಬಾಗಿಲಿನ ಪಕ್ಕದಲ್ಲಿ ನಿಂತುಕೊಂಡನು. ಸೈನ್ಯವು ಹೊರಗೆ ಹೋಯಿತು. ಅವರು ನೂರು ಮತ್ತು ಒಂದು ಸಾವಿರ ಮಂದಿಯ ಗುಂಪುಗಳಾಗಿ ಹೋದರು.

“ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿರಿ!”

ರಾಜನು ಯೋವಾಬನಿಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ, “ನೀವು ನನಗೋಸ್ಕರವಾಗಿ ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿ!” ಎಂದು ಆಜ್ಞಾಪಿಸಿದನು. ಅಬ್ಷಾಲೋಮನ ಬಗ್ಗೆ ತನ್ನ ಸೇನಾಪತಿಗಳಿಗೆ ರಾಜನು ನೀಡಿದ ಆಜ್ಞೆಯು ಜನರೆಲ್ಲರಿಗೂ ಕೇಳಿಸಿತು.

ದಾವೀದನ ಸೈನ್ಯವು ಅಬ್ಷಾಲೋಮನ ಸೈನ್ಯವನ್ನು ಸೋಲಿಸಿತು

ದಾವೀದನ ಸೈನ್ಯವು ಇಸ್ರೇಲರಾದ ಅಬ್ಷಾಲೋಮನ ವಿರುದ್ಧ ಎಫ್ರಾಯೀಮ್ ಕಾಡಿನಲ್ಲಿ ಯುದ್ಧಮಾಡಿತು. ದಾವೀದನ ಸೈನ್ಯವು ಇಸ್ರೇಲರನ್ನು ಸೋಲಿಸಿತು. ಅಂದು ಇಪ್ಪತ್ತು ಸಾವಿರ ಜನರು ಕೊಲ್ಲಲ್ಪಟ್ಟರು. ಯುದ್ಧವು ದೇಶವನ್ನೆಲ್ಲ ವ್ಯಾಪಿಸಿತು. ಆದರೆ ಅಂದು ಕತ್ತಿಯಿಂದ ಸತ್ತ ಜನರಿಗಿಂತ ಹೆಚ್ಚು ಜನರು ಕಾಡಿನಲ್ಲಿ ಸತ್ತರು.

ಅಬ್ಷಾಲೋಮನು ದಾವೀದನ ಸೈನಿಕರ ಕೈಗೆ ಸಿಕ್ಕಿಕೊಂಡನು. ಅವನು ಹೇಸರಕತ್ತೆಯ ಮೇಲೆ ಸವಾರಿ ಮಾಡುತ್ತಾ ತಪ್ಪಿಸಿಕೊಳ್ಳಲು ಹೋದನು. ಆ ಹೇಸರಕತ್ತೆಯು ದೊಡ್ಡ ಓಕ್ ಮರದ ರೆಂಬೆಗಳ ಕೆಳಗೆ ಓಡುತ್ತಾ ಹೋಯಿತು. ಆ ರೆಂಬೆಗಳು ದಟ್ಟವಾಗಿದ್ದುದರಿಂದ ಅಬ್ಷಾಲೋಮನ ತಲೆಯು ಮರದಲ್ಲಿ ಸಿಕ್ಕಿಹಾಕಿಕೊಂಡಿತು. ಅವನು ಕುಳಿತುಕೊಂಡಿದ್ದ ಹೇಸರಕತ್ತೆಯು ಓಡಿಹೋದುದರಿಂದ ಅಬ್ಷಾಲೋಮನು ಮರದಲ್ಲಿ[a] ನೇತಾಡುವವನಾದನು.

10 ಇದನ್ನು ಕಂಡ ಒಬ್ಬನು ಯೋವಾಬನ ಬಳಿಗೆ ಹೋಗಿ, “ಅಬ್ಷಾಲೋಮನು ಒಂದು ಓಕ್ ಮರದಲ್ಲಿ ನೇತಾಡುತ್ತಿದ್ದುದನ್ನು ನಾನು ನೋಡಿದೆ” ಎಂದು ತಿಳಿಸಿದನು.

11 ಯೋವಾಬನು ಆ ಮನುಷ್ಯನಿಗೆ, “ನೀನು ಅವನನ್ನು ಕೊಂದು ನೆಲಕ್ಕುರುಳಿಸಲಿಲ್ಲವೇಕೆ? ನಾನು ನಿನಗೆ ಒಂದು ಸೊಂಟಪಟ್ಟಿಯನ್ನು ಮತ್ತು ಹತ್ತು ಬೆಳ್ಳಿರೂಪಾಯಿಗಳನ್ನು ಕೊಡುತ್ತಿದ್ದೆನಲ್ಲ!” ಎಂದನು.

12 ಆ ಮನುಷ್ಯನು ಯೋವಾಬನಿಗೆ, “ನೀನು ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟಿದ್ದರೂ ನಾನು ರಾಜನ ಮಗನನ್ನು ಕೊಲ್ಲಲು ಪ್ರಯತ್ನಿಸುತ್ತಿರಲಿಲ್ಲ. ಏಕೆಂದರೆ ನಿನಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ ರಾಜನು ನೀಡಿದ್ದ ಆಜ್ಞೆಯನ್ನು ನಾವು ಕೇಳಿದ್ದೇವೆ. ‘ಎಚ್ಚರದಿಂದಿರಿ, ಯುವಕನಾದ ಅಬ್ಷಾಲೋಮನಿಗೆ ಕೇಡುಮಾಡದಿರಿ’ ಎಂದು ರಾಜನು ಹೇಳಿದ್ದಾನೆ. 13 ನಾನು ಅಬ್ಷಾಲೋಮನನ್ನು ಕೊಂದಿದ್ದರೆ ಸ್ವತಃ ರಾಜನೇ ಕಂಡು ಹಿಡಿಯುತ್ತಿದ್ದನು. ನೀನೇ ನನ್ನನ್ನು ದಂಡಿಸುತ್ತಿದ್ದೆ” ಎಂದು ಹೇಳಿದನು.

14 ಯೋವಾಬನು, “ನಿನ್ನೊಂದಿಗೆ ನಾನಿಲ್ಲಿ ನನ್ನ ಕಾಲವನ್ನು ವ್ಯರ್ಥಮಾಡುವುದಿಲ್ಲ” ಎಂದನು.

ಅಬ್ಷಾಲೋಮನು ಓಕ್ ಮರದಲ್ಲಿ ನೇತಾಡುತ್ತಾ ಇನ್ನೂ ಜೀವಂತವಾಗಿದ್ದನು. ಯೋವಾಬನು ಮೂರು ಬರ್ಜಿಗಳನ್ನು ತೆಗೆದುಕೊಂಡು ಅಬ್ಷಾಲೋಮನತ್ತ ಎಸೆದನು. ಬರ್ಜಿಗಳು ಅಬ್ಷಾಲೋಮನ ಹೃದಯವನ್ನು ಛೇದಿಸಿಕೊಂಡು ಹೋದವು. 15 ಯೋವಾಬನೊಂದಿಗೆ ಹತ್ತು ಮಂದಿ ಯುವಕರು ಅವನಿಗೆ ಯುದ್ಧದಲ್ಲಿ ಸಹಾಯ ಮಾಡಿದರು. ಈ ಹತ್ತು ಜನರೂ ಅಬ್ಷಾಲೋಮನನ್ನು ಸುತ್ತುವರಿದು ಅವನನ್ನು ಕೊಂದರು.

16 ಯೋವಾಬನು ತುತೂರಿಯನ್ನು ಊದಿ, ಅಬ್ಷಾಲೋಮನ ಕಡೆಯವರಾದ ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಜನರನ್ನು ನಿಲ್ಲಿಸಿದನು. 17 ನಂತರ ಯೋವಾಬನ ಜನರು ಅಬ್ಷಾಲೋಮನ ದೇಹವನ್ನು ತೆಗೆದುಕೊಂಡು ಹೋಗಿ, ಕಾಡಿನ ಒಂದು ದೊಡ್ಡ ಕುಣಿಯಲ್ಲಿ ಎಸೆದರು. ಅವರು ಆ ದೊಡ್ಡ ಕುಣಿಯನ್ನು ಕಲ್ಲುಗಳಿಂದ ತುಂಬಿಸಿದರು.

ಅಬ್ಷಾಲೋಮನನ್ನು ಹಿಂಬಾಲಿಸಿಕೊಂಡು ಬಂದಿದ್ದ ಇಸ್ರೇಲರೆಲ್ಲ ಮನೆಗೆ ಓಡಿಹೋದರು.

18 ಅಬ್ಷಾಲೋಮನು ಬದುಕಿದ್ದಾಗ, ರಾಜನ ಕಣಿವೆಯಲ್ಲಿ ಒಂದು ಸ್ತಂಭವನ್ನು ನೆಡಿಸಿದ್ದನು. ಅಬ್ಷಾಲೋಮನು, “ನನ್ನ ಹೆಸರನ್ನು ಜೀವಂತವಾಗಿರಿಸಲು ನನಗೆ ಗಂಡುಮಕ್ಕಳಿಲ್ಲ” ಎಂದು ಹೇಳಿ ಆ ಸ್ತಂಭಕ್ಕೆ ತನ್ನ ಹೆಸರನ್ನೇ ಕೊಟ್ಟಿದ್ದನು. ಆ ಸ್ತಂಭವನ್ನು “ಅಬ್ಷಾಲೋಮನ ಸ್ಮಾರಕಸ್ತಂಭ” ಎಂದು ಇಂದಿಗೂ ಕರೆಯುತ್ತಾರೆ.

ಯೋವಾಬನು ದಾವೀದನಿಗೆ ವರ್ತಮಾನವನ್ನು ಕಳುಹಿಸಿದನು

19 ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಈಗ ಓಡುತ್ತಾಹೋಗಿ ರಾಜನಾದ ದಾವೀದನಿಗೆ ಈ ವರ್ತಮಾನವನ್ನು ತಿಳಿಸುತ್ತೇನೆ. ಯೆಹೋವನು ನಿನ್ನ ಶತ್ರುವನ್ನು ನಾಶಮಾಡಿದನೆಂದು ನಾನು ಅವನಿಗೆ ಹೇಳುತ್ತೇನೆ” ಎಂದನು.

20 ಯೋವಾಬನು ಅಹೀಮಾಚನಿಗೆ, “ಇಲ್ಲ, ದಾವೀದನಿಗೆ ಇಂದು ನೀನು ಈ ವರ್ತಮಾನವನ್ನು ತಿಳಿಸುವಂತಿಲ್ಲ. ನೀನು ಬೇರೊಂದು ದಿನದಲ್ಲಿ ವರ್ತಮಾನವನ್ನು ತಿಳಿಸಬಹುದು, ಏಕೆಂದರೆ ಇಂದು ರಾಜನ ಮಗನು ಸತ್ತಿದ್ದಾನೆ” ಎಂದು ಉತ್ತರಿಸಿದನು.

21 ಆಗ ಯೋವಾಬನು ಇಥಿಯೋಪ್ಯನಾದ ಒಬ್ಬನಿಗೆ, “ಹೋಗು, ನೀನು ನೋಡಿದ ಸಂಗತಿಗಳನ್ನು ರಾಜನಿಗೆ ತಿಳಿಸು” ಎಂದು ಹೇಳಿದನು.

ಇಥಿಯೋಪ್ಯನು ಯೋವಾಬನಿಗೆ ಸಾಷ್ಟಾಂಗನಮಸ್ಕಾರಮಾಡಿ ದಾವೀದನಿಗೆ ಹೇಳಲು ಓಡಿಹೋದನು.

22 ಆದರೆ ಚಾದೋಕನ ಮಗನಾದ ಅಹೀಮಾಚನು ಯೋವಾಬನನ್ನು ಮತ್ತೆ ಬೇಡುತ್ತಾ, “ಏನು ಸಂಭವಿಸುತ್ತದೆಯೊ ಸಂಭವಿಸಲಿ, ಇಥಿಯೋಪ್ಯದವನ ಹಿಂದೆ ಓಡಿಹೋಗಲು ನನಗೆ ಅವಕಾಶಕೊಡು!” ಎಂದನು.

ಯೋವಾಬನು, “ಮಗನೇ, ಈ ವರ್ತಮಾನವನ್ನು ತೆಗೆದುಕೊಂಡು ಹೋಗಲು ನೀನು ಏಕೆ ಇಚ್ಛಿಸುವೆ? ನೀನು ತೆಗೆದುಕೊಂಡು ಹೋಗುವ ವರ್ತಮಾನಕ್ಕೆ ನಿನಗೆ ಯಾವ ಬಹುಮಾನವೂ ಸಿಕ್ಕುವುದಿಲ್ಲ” ಎಂದನು.

23 ಅಹೀಮಾಚನು, “ಏನಾದರೂ ಆಗಲಿ, ನಾನು ಓಡಿಹೋಗುತ್ತೇನೆ” ಎಂದು ಉತ್ತರಿಸಿದನು.

“ಓಡು” ಎಂದು ಯೋವಾಬನು ಅಹೀಮಾಚನಿಗೆ ಹೇಳಿದನು.

ಆಗ ಅಹೀಮಾಚನು ಜೋರ್ಡನ್ ಕಣಿವೆಯ ಮೂಲಕ ಓಡಿಹೋದನು. ಅವನು ಇಥಿಯೋಪ್ಯದವನಿಗಿಂತ ಮೊದಲೇ ಹೋದನು.

ದಾವೀದನು ಸುದ್ದಿಯನ್ನು ಕೇಳಿದ್ದು

24 ದಾವೀದನು ನಗರದ ಎರಡು ಬಾಗಿಲುಗಳ ನಡುವೆ ಕುಳಿತಿದ್ದನು. ಕಾವಲುಗಾರನು ಊರಬಾಗಿಲುಗಳ ಮಾಳಿಗೆಯ ಮೇಲಕ್ಕೆ ಹೋದನು. ಕಾವಲುಗಾರನು ದೃಷ್ಟಿಸಿ ನೋಡಿದಾಗ, ಒಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡಿಬರುತ್ತಿರುವುದನ್ನು ನೋಡಿದನು. 25 ರಾಜನಿಗೆ ಹೇಳುವುದಕ್ಕಾಗಿ ಕಾವಲುಗಾರನು ಜೋರಾಗಿ ಕೂಗಿದನು.

ರಾಜನಾದ ದಾವೀದನು, “ಆ ಮನುಷ್ಯನು ಒಬ್ಬಂಟಿಗನಾಗಿದ್ದರೆ ಅವನು ಸುದ್ದಿಯನ್ನು ತರುತ್ತಿದ್ದಾನೆ” ಎಂದನು.

ಆ ಮನುಷ್ಯನು ಓಡುತ್ತಾ ನಗರದ ಹತ್ತಿರಕ್ಕೆ ಬಂದನು. 26 ಅವನ ಹಿಂದೆ ಇನ್ನೊಬ್ಬ ಮನುಷ್ಯನು ಓಡಿಬರುತ್ತಿರುವುದನ್ನು ಕಾವಲುಗಾರನು ನೋಡಿದನು. ಕಾವಲುಗಾರನು ದ್ವಾರಪಾಲಕನನ್ನು ಕರೆದು, “ನೋಡು! ಇನ್ನೊಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡುತ್ತಾ ಬರುತ್ತಿದ್ದಾನೆ” ಎಂದನು.

ರಾಜನು, “ಅವನು ಸಹ ಸುದ್ದಿಯನ್ನು ತರುತ್ತಿದ್ದಾನೆ” ಎಂದನು.

27 ಕಾವಲುಗಾರನು, “ಮೊದಲನೆಯ ಮನುಷ್ಯನು ಓಡುತ್ತಿರುವುದು ಚಾದೋಕನ ಮಗನಾದ ಅಹೀಮಾಚನಂತಿದೆಯೆಂದು ನನ್ನ ಭಾವನೆ” ಎಂದು ಹೇಳಿದನು.

ರಾಜನು, “ಅಹೀಮಾಚನು ಒಳ್ಳೆಯ ಮನುಷ್ಯ. ಅವನು ಶುಭಸಮಾಚಾರವನ್ನು ತರುತ್ತಿರಬೇಕು” ಎಂದನು.

28 ಅಹೀಮಾಚನು ರಾಜನ ಬಳಿಗೆ ಬಂದು, “ಎಲ್ಲವೂ ಶುಭಕರವಾಗಿದೆ” ಎಂದು ಹೇಳಿ ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಅಹೀಮಾಚನು, “ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ರಾಜನಾದ ಒಡೆಯನೇ, ನಿನ್ನ ವಿರುದ್ಧವಾಗಿದ್ದ ಜನರನ್ನು ಯೆಹೋವನು ಸೋಲಿಸಿದ್ದಾನೆ” ಎಂದು ಹೇಳಿದನು.

29 ರಾಜನು, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.

ಅಹೀಮಾಚನು, “ಯೋವಾಬನು ನನ್ನನ್ನು ಕಳುಹಿಸಿದಾಗ, ನಾನು ಒಂದು ದೊಡ್ಡ ಕೋಲಾಹಲವನ್ನು ನೋಡಿದೆನು. ಆದರೆ ಅದು ಏನೆಂದು ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದನು.

30 ಆಗ ರಾಜನು, “ಅತ್ತ ಸರಿದು ನಿಲ್ಲು” ಎಂದನು. ಅಹೀಮಾಚನು ಸರಿದು ನಿಂತುಕೊಂಡನು.

31 ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.

32 ರಾಜನು ಅವನಿಗೆ, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.

ಇಥಿಯೋಪ್ಯದವನು, “ನಿನ್ನ ಶತ್ರುಗಳು ಮತ್ತು ನಿನಗೆ ಕೇಡುಮಾಡಲು ನಿನಗೆ ವಿರುದ್ಧವಾಗಿ ಬಂದ ಜನರೆಲ್ಲರು ಈ ಯುವಕನಂತೆಯೇ ದಂಡಿಸಲ್ಪಡುವರು” ಎಂದು ಉತ್ತರಿಸಿದನು.

33 ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.

2 ಕೊರಿಂಥದವರಿಗೆ 11

ಪೌಲನು ಮತ್ತು ಸುಳ್ಳು ಅಪೊಸ್ತಲರು

11 ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಮೆಯಿಂದಿರಬೇಕೆಂದು ಅಪೇಕ್ಷಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ತಾಳ್ಮೆಯಿಂದಿದ್ದೀರಿ. ನಿಮ್ಮ ವಿಷಯದಲ್ಲಿ ನಾನು ಚಿಂತಿಸುತ್ತೇನೆ. ಈ ಚಿಂತೆಯು ದೇವರಿಂದ ಬಂದದ್ದು. ನಿಮ್ಮನ್ನು ಕ್ರಿಸ್ತನಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಕ್ರಿಸ್ತನೊಬ್ಬನೇ ನಿಮ್ಮ ಪತಿಯಾಗಿರಬೇಕು. ನಾನು ನಿಮ್ಮನ್ನು ಕ್ರಿಸ್ತನಿಗೆ ಆತನ ಶುದ್ಧ ವಧುವನ್ನಾಗಿ ಕೊಡಲು ಅಪೇಕ್ಷಿಸುತ್ತೇನೆ. ಹವ್ವಳು ಸರ್ಪದ ಕುಯುಕ್ತಿಯಿಂದ ಮೋಸಗೊಂಡಂತೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧತೆಯನ್ನೂ ಬಿಟ್ಟು ಕೆಟ್ಟುಹೋದೀತೆಂಬ ಭಯ ನನಗಿದೆ. ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಮೆಯಿಂದಿರುತ್ತೀರಿ. ನೀವು ನಮ್ಮಿಂದ ಸ್ವೀಕರಿಸಿಕೊಂಡ ಪವಿತ್ರಾತ್ಮನಿಗೂ ಸುವಾರ್ತೆಗೂ ಭಿನ್ನವಾದ ಆತ್ಮವನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇಷ್ಟವುಳ್ಳವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಮೆಯಿಂದಿರಬೇಕು.

ಆ “ಮಹಾ ಅಪೊಸ್ತಲರು” ನನಗಿಂತ ಮಿಗಿಲಾದವರೆಂದು ನಾನು ಭಾವಿಸುವುದಿಲ್ಲ. ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.

ನಾನು ನಿಮಗೆ ದೇವರ ಸುವಾರ್ತೆಯನ್ನು ಉಚಿತವಾಗಿ ಬೋಧಿಸಿದೆನು. ನಿಮ್ಮನ್ನು ಪ್ರಮುಖರನ್ನಾಗಿ ಮಾಡಲು ನನ್ನನ್ನು ತಗ್ಗಿಸಿಕೊಂಡೆನು. ಅದು ತಪ್ಪೆಂದು ಭಾವಿಸುತ್ತೀರೋ? ನಾನು ಇತರ ಸಭೆಗಳಿಂದ ನಿಮ್ಮ ಮಧ್ಯದಲ್ಲಿ ಸೇವೆ ಮಾಡುವುದಕ್ಕಾಗಿ ಹಣವನ್ನು ತೆಗೆದುಕೊಂಡೆನು. ನಾನು ನಿಮ್ಮಲ್ಲಿದ್ದಾಗ ನನ್ನ ಯಾವ ಕೊರತೆಯಲ್ಲಿಯೂ ನಿಮಗೆ ತೊಂದರೆ ಕೊಡಲಿಲ್ಲ. ಮಕೆದೋನಿಯದಿಂದ ಬಂದಿದ್ದ ಸಹೋದರರು ನನಗೆ ಬೇಕಾಗಿದ್ದದ್ದನ್ನೆಲ್ಲ ಕೊಟ್ಟರು. ನಾನು ನಿಮಗೆ ಯಾವ ರೀತಿಯಲ್ಲಿಯೂ ಭಾರವಾಗದಂತೆ ನೋಡಿಕೊಂಡೆನು. ಇನ್ನು ಮುಂದೆಯೂ ನಾನು ನಿಮಗೆ ಭಾರವಾಗಿರುವುದಿಲ್ಲ. 10 ಈ ವಿಷಯದಲ್ಲಿ ನಾನು ಹೆಮ್ಮೆಪಡುವುದನ್ನು ಅಖಾಯದಲ್ಲಿರುವ ಯಾರೂ ನಿಲ್ಲಿಸಲಾರರು. ಕ್ರಿಸ್ತನ ಸತ್ಯವು ನನ್ನೊಳಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ. 11 ನಾನು ನಿಮಗೆ ಭಾರವಾಗದಿರುವುದು ನಿಮ್ಮ ಮೇಲೆ ನನಗೆ ಪ್ರೀತಿಯಿಲ್ಲದಿರುವ ಕಾರಣದಿಂದಲೋ? ಇಲ್ಲ! ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತಿದೆ.

12 ಈಗ ನಾನು ಮಾಡುತ್ತಿರುವುದನ್ನು ಮುಂದುವರೆಸುತ್ತೇನೆ. ಆ ಜನರಿಗೆ ಹೊಗಳಿಕೊಳ್ಳಲು ಯಾವ ಕಾರಣವೂ ಸಿಕ್ಕಬಾರದೆಂದು ಇದನ್ನು ಮುಂದುವರಿಸುತ್ತೇನೆ. ಅವರು ತಮ್ಮ ಕೆಲಸದ ಬಗ್ಗೆ ಜಂಬಪಡುತ್ತಾರೆ. ತಾವು ಮಾಡುವ ಆ ಕೆಲಸವು ನಮ್ಮ ಕೆಲಸದಂತೆಯೇ ಇದೆಯೆಂದು ಹೇಳಿಕೊಳ್ಳಲು ಬಯಸುತ್ತಾರೆ. 13 ಅವರು ನಿಜ ಅಪೊಸ್ತಲರಲ್ಲ. ಅವರು ಮೋಸಗಾರರಾದ ಕೆಲಸಗಾರರು. ತಾವು ಕ್ರಿಸ್ತನ ಅಪೊಸ್ತಲರಲ್ಲದಿದ್ದರೂ ಜನರು ತಮ್ಮನ್ನು ಕ್ರಿಸ್ತನ ಅಪೊಸ್ತಲರೆಂದು ತಿಳಿದುಕೊಳ್ಳುವಂತೆ ನಟಿಸುತ್ತಾರೆ. 14 ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ. ಏಕೆಂದರೆ ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ. 15 ಹೀಗಿರಲು ಸೈತಾನನ ಸೇವಕರು ತಾವು ಸರಿಯಾದ ಕೆಲಸವನ್ನು ಮಾಡುತ್ತಿರುವವರಂತೆ ನಟಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅವರು ಮಾಡುತ್ತಿರುವ ಕೆಲಸಗಳ ಪ್ರತಿಫಲವಾಗಿ ಅವರಿಗೆ ಕೊನೆಯಲ್ಲಿ ದಂಡನೆಯಾಗುವುದು.

ಪೌಲನು ತನಗಾದ ಹಿಂಸೆಯ ಬಗ್ಗೆ ತಿಳಿಸುವನು

16 ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು. 17 ನನಗೆ ನನ್ನ ವಿಷಯದಲ್ಲಿ ಭರವಸೆ ಇರುವುದರಿಂದ ನಾನು ಹೊಗಳಿಕೊಳ್ಳುತ್ತೇನೆ. ಆದರೆ ಪ್ರಭು ಮಾತಾಡುವಂತೆ ನಾನು ಮಾತಾಡುತ್ತಿಲ್ಲ. ನಾನು ಬುದ್ಧಿಹೀನನೆಂದು ಹೊಗಳಿಕೊಳ್ಳುತ್ತಿದ್ದೇನೆ. 18 ಅನೇಕ ಜನರು ತಮ್ಮ ಪ್ರಾಪಂಚಿಕ ಜೀವನದ ಬಗ್ಗೆ ಹೊಗಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾನು ಸಹ ಹೊಗಳಿಕೊಳ್ಳುತ್ತೇನೆ. 19 ನೀವು ಬುದ್ಧಿವಂತರಾಗಿರುವುದರಿಂದ ಬುದ್ಧಿಹೀನರ ವಿಷಯದಲ್ಲಿ ಸಂತೋಷದಿಂದ ತಾಳ್ಮೆಯಿಂದಿರುತ್ತೀರಿ. 20 ಏಕೆಂದರೆ ನಿಮ್ಮಿಂದ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುವವನ ಮತ್ತು ನಿಮ್ಮನ್ನು ಉಪಯೋಗಿಸಿಕೊಳ್ಳುವವನ ವಿಷಯದಲ್ಲಿಯೂ ಸಹ ತಾಳ್ಮೆಯಿಂದಿರುತ್ತೀರಿ. ನಿಮ್ಮನ್ನು ಮೋಸಗೊಳಿಸುವವರ, ತಮ್ಮನ್ನು ನಿಮಗಿಂಥ ಉತ್ತಮರೆಂದು ಭಾವಿಸಿಕೊಂಡಿರುವವರ ಮತ್ತು ನಿಮ್ಮ ಮುಖದ ಮೇಲೆ ಹೊಡೆಯುವವರ ವಿಷಯದಲ್ಲಿಯೂ ನೀವು ತಾಳ್ಮೆಯಿಂದಿರುತ್ತೀರಿ. 21 ಇದನ್ನು ಹೇಳುವುದಕ್ಕೇ ನಾಚಿಕೆಯಾಗುತ್ತದೆ. ಆದರೆ, ನಿಮ್ಮೊಂದಿಗೆ ಆ ರೀತಿ ನಡೆದುಕೊಳ್ಳುವಷ್ಟು “ಬಲ” ನಮಗಿರಲಿಲ್ಲ!

ಆದರೆ ಹೊಗಳಿಕೊಳ್ಳಲು ಯಾರಿಗಾದರೂ ಸಾಕಷ್ಟು ಧೈರ್ಯವಿದ್ದರೆ ನಾನು ಸಹ ಧೈರ್ಯದಿಂದ ಹೊಗಳಿಕೊಳ್ಳುತ್ತೇನೆ. (ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ.) 22 ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು. 23 ಅವರು ಕ್ರಿಸ್ತನ ಸೇವೆಮಾಡುತ್ತಿದ್ದಾರೋ? ನಾನು ಸಹ ಅವರಿಗಿಂತಲೂ ಹೆಚ್ಚಾಗಿ ಸೇವೆಮಾಡುತ್ತಿದ್ದೇನೆ. (ನಾನು ಹುಚ್ಚನಂತೆ ಹೀಗೆ ಮಾತಾಡುತ್ತಿದ್ದೇನೆ.) ನಾನು ಅವರಿಗಿಂತಲೂ ಹೆಚ್ಚು ಕಷ್ಟಪಟ್ಟು ದುಡಿದಿದ್ದೇನೆ; ಹೆಚ್ಚು ಸಲ ಸೆರೆಮನೆಯಲ್ಲಿದ್ದೆನು. ಹೆಚ್ಚು ಏಟುಗಳನ್ನು ತಿಂದಿದ್ದೇನೆ, ನಾನು ಅನೇಕ ಸಲ ಮರಣದ ಸಮೀಪದಲ್ಲಿದ್ದೆನು.

24 ಚಾವಟಿಯಿಂದ ಮೂವತ್ತೊಂಭತ್ತು ಏಟುಗಳನ್ನು ಹೊಡೆಯಿಸಿಕೊಳ್ಳುವ ಶಿಕ್ಷೆಯನ್ನು ಯೆಹೂದಿಯರು ನನಗೆ ಐದು ಸಲ ವಿಧಿಸಿದರು. 25 ಮೂರು ಸಲ ಕಬ್ಬಿಣದ ಸರಳುಗಳಿಂದ ಏಟನ್ನು ತಿಂದಿದ್ದೇನೆ. ಒಂದು ಸಲ ಕಲ್ಲೆಸೆದು ನನ್ನನ್ನು ಅರೆಜೀವ ಮಾಡಿದರು. ಮೂರು ಸಲ ನಾನಿದ್ದ ಹಡಗುಗಳು ಒಡೆದುಹೋದವು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರಬೇಕಾಯಿತು. 26 ಅನೇಕ ಪ್ರಯಾಣಗಳನ್ನು ಮಾಡಿದೆನು. ನದಿಗಳಿಂದಲೂ ಕಳ್ಳರಿಂದಲೂ ನನ್ನ ಸ್ವಂತ ಜನರಾದ ಯೆಹೂದ್ಯರಿಂದಲೂ ಮತ್ತು ಯೆಹೂದ್ಯರಲ್ಲದವರಿಂದಲೂ ಅಪಾಯಕ್ಕೀಡಾಗಿದ್ದೆನು. ಪಟ್ಟಣಗಳಲ್ಲಿಯೂ ಜನರು ವಾಸವಾಗಿಲ್ಲದ ಸ್ಥಳಗಳಲ್ಲಿಯೂ ಸಮುದ್ರಗಳಲ್ಲಿಯೂ ಸುಳ್ಳುಸಹೋದರರ ಮಧ್ಯದಲ್ಲಿಯೂ ಅಪಾಯಕ್ಕೀಡಾಗಿದ್ದೆನು.

27 ಕಷ್ಟಕರವಾದ ಮತ್ತು ಅಪಾಯಕರವಾದ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಲ ನಿದ್ರಿಸಲೂ ಇಲ್ಲ. ಹಸಿವೆ ಬಾಯಾರಿಕೆಗಳಿಂದ ಕಷ್ಟಪಟ್ಟಿದ್ದೇನೆ. ಅನೇಕಸಲ ನನಗೆ ಊಟ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರೂ ಬಟ್ಟೆಯಿರಲಿಲ್ಲ. 28 ಹೀಗೆ ನಾನು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಎಲ್ಲಾ ಸಭೆಗಳ ಮೇಲೆ ನನಗಿರುವ ಚಿಂತೆಯೂ ಇವುಗಳಲ್ಲಿ ಒಂದು. ನಾನು ಪ್ರತಿನಿತ್ಯ ಅವುಗಳ ಬಗ್ಗೆ ಚಿಂತಿಸುತ್ತೇನೆ. 29 ಯಾವನಾದರೂ ಬಲಹೀನನಾಗಿರುವಾಗ ನಾನೂ ಬಲಹೀನನಾಗಿರುತ್ತೇನೆ. ಯಾವನಾದರೂ ಪಾಪದಲ್ಲಿ ನಡೆಸಲ್ಪಟ್ಟರೆ ನನ್ನೊಳಗೆ ಕೋಪಗೊಳ್ಳುತ್ತೇನೆ.

30 ಹೊಗಳಿಕೊಳ್ಳಬೇಕಾದರೆ, ನನ್ನನ್ನು ಬಲಹೀನನೆಂದು ತೋರಿಸುವ ಸಂಗತಿಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ. 31 ನಾನು ಸುಳ್ಳು ಹೇಳುತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಆತನು ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿದ್ದಾನೆ. ಆತನಿಗೆ ಸದಾಕಾಲ ಸ್ತೋತ್ರ ಸಲ್ಲಿಸಬೇಕು. 32 ನಾನು ದಮಸ್ಕದಲ್ಲಿದ್ದಾಗ ರಾಜನಾದ ಅರೇತನ ಅಧೀನದಲ್ಲಿದ್ದ ರಾಜ್ಯಪಾಲನು ನನ್ನನ್ನು ಬಂಧಿಸಬೇಕೆಂದಿದ್ದನು. ಅವನು ಪಟ್ಟಣದ ಸುತ್ತಲೂ ಕಾವಲುಗಾರರನ್ನು ನಿಲ್ಲಿಸಿದನು. 33 ಆದರೆ ನನ್ನ ಕೆಲವು ಸ್ನೇಹಿತರು ನನ್ನನ್ನು ಬುಟ್ಟಿಯೊಳಗೆ ಕುಳ್ಳಿರಿಸಿ, ಗೋಡೆಯ ಕಿಟಕಿಯೊಳಗಿಂದ ಕೆಳಗಿಳಿಸಿದರು. ಹೀಗೆ ನಾನು ರಾಜ್ಯಪಾಲನಿಂದ ತಪ್ಪಿಸಿಕೊಂಡೆನು.

ಯೆಹೆಜ್ಕೇಲ 25

ಅಮ್ಮೋನಿಗೆ ವಿರುದ್ಧ ಪ್ರವಾದನೆ

25 ಒಡೆಯನಾದ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೀಗೆ ಹೇಳಿದನು: “ನರಪುತ್ರನೇ, ಅಮ್ಮೋನಿನ ಕಡೆಗೆ ಮುಖಮಾಡಿ, ಅವರಿಗೆ ವಿರುದ್ಧವಾಗಿ ಪ್ರವಾದಿಸು. ಅಮ್ಮೋನಿಯರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನ ಮಾತುಗಳನ್ನು ಕೇಳಿರಿ. ಆತನು ಹೇಳುವುದೇನೆಂದರೆ, ನನ್ನ ಪವಿತ್ರಾಲಯವು ಅಪವಿತ್ರಗೊಂಡಾಗಲೂ ಇಸ್ರೇಲ್ ದೇಶವು ನಾಶವಾದಾಗಲೂ ಯೆಹೂದದ ಜನರು ಸೆರೆ ಒಯ್ಯಲ್ಪಟ್ಟಾಗಲೂ ನೀವು ಸಂತೋಷಪಟ್ಟಿರಿ. ಅದಕ್ಕಾಗಿ ನಾನು ನಿಮ್ಮನ್ನು ಪೂರ್ವದ ಜನರಿಗೆ ಬಿಟ್ಟುಕೊಡುವೆನು. ಅವರು ಬಂದು ನಿಮ್ಮ ದೇಶವನ್ನು ಕಿತ್ತುಕೊಳ್ಳುವರು. ಅವರ ಸೈನ್ಯವು ಬಂದು ನಿಮ್ಮ ದೇಶದೊಳಗೆ ಪಾಳೆಯ ಮಾಡುವದು. ಅವರು ನಿಮ್ಮ ಮಧ್ಯದಲ್ಲಿ ವಾಸಿಸಿ ನಿಮ್ಮ ಹಣ್ಣುಗಳನ್ನು ತಿಂದು ನಿಮ್ಮ ಹಾಲನ್ನು ಕುಡಿಯುವರು.

“‘ನಾನು ರಬ್ಬಾ ನಗರವನ್ನು ಒಂಟೆಗಳು ಮೇಯುವ ಸ್ಥಳವನ್ನಾಗಿಯೂ, ಅಮ್ಮೋನ್ ದೇಶವನ್ನು ಕುರಿಹಟ್ಟಿಯನ್ನಾಗಿಯೂ ಮಾಡುವೆನು. ಆಗ ನಾನು ಯೆಹೋವನೆಂದು ನಿಮಗೆ ಗೊತ್ತಾಗುವದು. ಯೆಹೋವನು ಹೇಳುವುದೇನೆಂದರೆ: ಜೆರುಸಲೇಮ್ ನಾಶವಾಯಿತೆಂದು ನೀವು ಸಂತೋಷಪಟ್ಟಿರಿ. ನೀವು ಚಪ್ಪಾಳೆತಟ್ಟಿ ಕಾಲಿನಿಂದ ನೆಲವನ್ನು ಬಡಿದಿರಿ. ಇಸ್ರೇಲ್ ದೇಶವನ್ನು ಕಡೆಗಣಿಸಿ ನಗಾಡಿದಿರಿ. ಅದಕ್ಕಾಗಿ ನಾನು ನಿಮ್ಮನ್ನು ದಂಡಿಸುವೆನು. ಜನಾಂಗಗಳಿಂದ ನಿಮ್ಮನ್ನು ಕೊಳ್ಳೆ ಹೊಡೆಸಿ ನಿರ್ಮೂಲ ಮಾಡುವೆನು. ದೇಶಗಳೊಳಗಿಂದ ನಿಮ್ಮ ಹೆಸರನ್ನು ಅಳಿಸಿಹಾಕುವೆನು; ನಿಮ್ಮನ್ನು ನಾಶಮಾಡುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.’”

ಮೋವಾಬ್ ಮತ್ತು ಸೇಯೀರ್ ವಿರುದ್ಧ ಪ್ರವಾದನೆ

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಮೋವಾಬ್ ಮತ್ತು ಸೇಯೀರ್, ‘ಯೆಹೂದ ಜನಾಂಗದವರು ಇತರ ಎಲ್ಲಾ ಜನಾಂಗಗಳವರಂತಿದ್ದಾರೆ.’ ಎಂದು ಹೇಳುತ್ತಾರೆ. ಮೋವಾಬಿನ ಗಡಿಯನ್ನು ಸಂರಕ್ಷಿಸುತ್ತಿರುವ ಪಟ್ಟಣಗಳು ಆಕ್ರಮಣಕ್ಕೆ ಗುರಿಯಾಗುವಂತೆ ಮಾಡುತ್ತೇನೆ. ಬೇತ್‌ಯೆಷೀಮೋತ್, ಬಾಳ್‌ಮೆಯೋನ್, ಕಿರ್ಯಾಥಯಿಮ್, ಅದರ ವೈಭವಯುತವಾದ ಸರಹದ್ದಿನ ಪಟ್ಟಣಗಳನ್ನು ನಾನು ತೆಗೆದುಹಾಕುವೆನು. 10 ಪೂರ್ವದಿಕ್ಕಿನ ಜನರು ಮೋವಾಬನ್ನೂ ಅಮ್ಮೋನನ್ನೂ ಗೆದ್ದುಕೊಳ್ಳುವಂತೆ ನಾನು ಮಾಡುವೆನು. ಆಗ ಜನರು ಮೋವಾಬಿನವರನ್ನು ಮರೆತುಬಿಡುವರು. 11 ಹೀಗೆ ನಾನು ಮೋವಾಬನ್ನು ಶಿಕ್ಷಿಸುವೆನು. ಆಗ ನಾನೇ ಯೆಹೋವನೆಂದು ಅವರು ತಿಳಿಯುವರು.”

ಎದೋಮ್ ವಿರುದ್ಧ ಪ್ರವಾದನೆಗಳು

12 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: “ಎದೋಮ್ಯರು ಯೆಹೂದದ ಜನರು ಮೇಲೆ ಕ್ರೂರವಾದ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರ ಮೇಲೆ ಸತತವಾಗಿ ಸೇಡು ತೀರಿಸಿಕೊಳ್ಳುವುದರ ಮೂಲಕ ಎದೋಮ್ಯರು ಮಹಾಪರಾಧ ಮಾಡಿದ ದೋಷಿಗಳಾಗಿದ್ದಾರೆ.” 13 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದೋಮನ್ನು ಶಿಕ್ಷಿಸುವೆನು. ಎದೋಮಿನ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆನು. ತೇಮಾನಿನಿಂದ ಹಿಡಿದು ದೆದಾನ್‌ತನಕ ಆ ದೇಶವನ್ನೆಲ್ಲಾ ನಾಶಮಾಡುವೆನು. ಎದೋಮ್ಯರು ರಣರಂಗದಲ್ಲಿ ಸಾಯುವರು. 14 ನಾನು ನನ್ನ ಇಸ್ರೇಲ್ ಜನರನ್ನು ಉಪಯೋಗಿಸಿ ಎದೋಮ್ಯರಿಗೆ ಮುಯ್ಯಿ ತೀರಿಸುವೆನು. ಈ ರೀತಿಯಾಗಿ ಎದೋಮಿನ ಮೇಲಿರುವ ನನ್ನ ಕೋಪವನ್ನು ಇಸ್ರೇಲರು ಅವರಿಗೆ ತೋರಿಸುವರು. ಆಗ ಎದೋಮ್ಯರು ನಾನು ಅವರನ್ನು ಶಿಕ್ಷಿಸಿದ್ದೇನೆಂದು ತಿಳಿದುಕೊಳ್ಳುವರು.” ಇದು ನನ್ನ ಒಡೆಯನಾದ ಯೆಹೋವನ ವಾಕ್ಯ.

ಫಿಲಿಷ್ಟಿಯರ ವಿರುದ್ಧ ಪ್ರವಾದನೆಗಳು

15 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಫಿಲಿಷ್ಟಿಯರು ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ಆವೇಶದಿಂದ ತಿರಸ್ಕರಿಸಿ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ತಮ್ಮ ದೀರ್ಘಕಾಲದ ದ್ವೇಷದಿಂದ ನಾಶನವು ಬರುವಂತೆ ಮಾಡಿದ್ದಾರೆ.” 16 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನಾನು ಫಿಲಿಷ್ಟಿಯರನ್ನು ಶಿಕ್ಷಿಸುವೆನು, ಹೌದು, ಕೆರೇತದ ಆ ಜನರನ್ನು ನಾಶಮಾಡುವೆನು. ಸಮುದ್ರ ಕರಾವಳಿಯಲ್ಲಿ ವಾಸಿಸುವ ಉಳಿದ ಜನರನ್ನೆಲ್ಲಾ ನಾಶಮಾಡುವೆನು. 17 ನಾನು ಅವರೊಂದಿಗೆ ಮುಯ್ಯಿತೀರಿಸಿಕೊಳ್ಳುವೆನು. ನನ್ನ ಕೋಪವು ಅವರಿಗೆ ಪಾಠ ಕಲಿಸುವದು. ನಾನು ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ಕೀರ್ತನೆಗಳು 73

ಮೂರನೆ ಭಾಗ

(ಕೀರ್ತನೆಗಳು 73–89)

ಸ್ತುತಿಗೀತೆ. ರಚನೆಗಾರ: ಆಸಾಫ.

73 ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ!
    ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
ಆದರೆ ನನ್ನ ಕಾಲುಗಳು ಜಾರಿದವು;
    ನನ್ನ ಹೆಜ್ಜೆಗಳು ತಪ್ಪಿದವು.
ದುಷ್ಟರ ಏಳಿಗೆಯನ್ನು ಕಂಡು
    ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
ಅವರು ಆರೋಗ್ಯವಂತರಾಗಿದ್ದಾರೆ.
    ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.[a]
ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ.
    ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ;
    ದ್ವೇಷವು ಅವರಿಗೆ ಉಡುಪಾಗಿದೆ.
ಅವರ ಕಣ್ಣುಗಳು ಕೊಬ್ಬಿವೆ;
    ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು.
    ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ,
    ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
10 ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು;
    ಅವರು ಹೇಳಿದಂತೆಯೇ ಮಾಡುವರು.
11 “ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!”
    ಎಂದು ಆ ದುಷ್ಟರು ಹೇಳಿಕೊಳ್ಳುವರು.

12 ಆ ಗರ್ವಿಷ್ಠರು ದುಷ್ಟರೇ ಸರಿ!
    ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
13 ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ?
    ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
14 ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ.
    ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.

15 ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ.
    ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
16 ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ
    ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
17 ಆದರೆ ನಿನ್ನ ಆಲಯಕ್ಕೆ ಹೋದಮೇಲೆ
    ನನಗೆ ಅರ್ಥವಾಯಿತು.
18 ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ.
    ಅವರು ಸುಲಭವಾಗಿ ಬಿದ್ದು ನಾಶವಾಗುವರು.
19 ಇದ್ದಕ್ಕಿದ್ದಂತೆ ಆಪತ್ತು ಬರುವುದು,
    ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ;
    ಆಗ ಅವರು ಅಂತ್ಯಗೊಳ್ಳುವರು.
20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ
    ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ
    ನೀನು ಅವರನ್ನು ಮಾಯಗೊಳಿಸುವೆ.

21-22 ನಾನು ಬಹು ಮೂಢನಾಗಿದ್ದೆ.
    ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
    ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
    ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
    ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
    ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
    ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
    ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
    ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
    ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
    ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International