M’Cheyne Bible Reading Plan
ದಾವೀದನು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದು
8 ತರುವಾಯ, ದಾವೀದನು ಫಿಲಿಷ್ಟಿಯರನ್ನು ಸೋಲಿಸಿ ಬಹುವಿಸ್ತಾರವಾದ ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಅವರ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡನು. 2 ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು.
3 ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು. 4 ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು.
5 ಚೋಬದ ರಾಜನಾದ ಹದದೆಜೆರನ ಸಹಾಯಕ್ಕೆ ದಮಸ್ಕದ ಅರಾಮ್ಯರು ಬಂದರು. ಆದರೆ ದಾವೀದನು ಆ ಇಪ್ಪತ್ತೆರಡು ಸಾವಿರ ಅರಾಮ್ಯರನ್ನು ಸಂಹರಿಸಿದನು. 6 ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು.
7 ಹದದೆಜೆರನ ಸೇವಕರಿಗೆ ಸೇರಿದ ಚಿನ್ನದ ಗುರಾಣಿಗಳನ್ನು ದಾವೀದನು ವಶಪಡಿಸಿಕೊಂಡನು. ದಾವೀದನು ಅವುಗಳನ್ನು ಜೆರುಸಲೇಮಿಗೆ ತಂದನು. 8 ಹದದೆಜೆರನಿಗೆ ಸೇರಿದ ನಗರಗಳಾದ ಬೆಟಹ ಮತ್ತು ಬೇರೋತೈಗಳಿಂದ ಹಿತ್ತಾಳೆಯ ಅನೇಕಾನೇಕ ವಸ್ತುಗಳನ್ನು ದಾವೀದನು ವಶಪಡಿಸಿಕೊಂಡನು.
9 ಹದದೆಜೆರನ ಸೈನ್ಯವನ್ನೆಲ್ಲ ದಾವೀದನು ಸೋಲಿಸಿದನೆಂಬ ವರ್ತಮಾನವು ಹಮಾತಿನ ರಾಜನಾದ ತೋವಿಗೆ ತಿಳಿಯಿತು. 10 ಆಗ ತೋವಿಯು ತನ್ನ ಮಗನಾದ ಯೋರಾಮನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾಮನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾಮನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು. 11 ದಾವೀದನು ಆ ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು. 12 ಆತನು ಸೋಲಿಸಿದ ದೇಶಗಳು ಯಾವುವೆಂದರೆ: ಅರಾಮ್, ಮೋವಾಬ್, ಅಮ್ಮೋನಿಯ, ಫಿಲಿಷ್ಟಿಯ ಮತ್ತು ಅಮಾಲೇಕ್ಯ. ಚೋಬದ ರಾಜನಾದ ರೆಹೋಬನ ಮಗ ಹದದೆಜೆರನನ್ನು ಸಹ ದಾವೀದನು ಸೋಲಿಸಿದನು. 13 ದಾವೀದನು ಉಪ್ಪಿನ ಕಣಿವೆಯಲ್ಲಿ ಹದಿನೆಂಟು ಸಾವಿರ ಎದೋಮ್ಯರನ್ನು ಸೋಲಿಸಿದನು. ಅವನು ಮನೆಗೆ ಹಿಂದಿರುಗುವಷ್ಟರಲ್ಲಿ ಪ್ರಸಿದ್ಧನಾಗಿದ್ದನು. 14 ದಾವೀದನು ಎದೋಮಿನ ಎಲ್ಲಾ ಕಡೆಯಲ್ಲೂ ಕಾವಲುದಂಡನ್ನು ಇರಿಸಿದನು. ಎದೋಮಿನ ಜನರೆಲ್ಲರೂ ದಾವೀದನ ಸೇವಕರಾದರು. ದಾವೀದನು ಹೋದ ಕಡೆಗಳಲ್ಲೆಲ್ಲಾ ಯೆಹೋವನು ಜಯವನ್ನು ಉಂಟುಮಾಡಿದನು.
ದಾವೀದನ ರಾಜ್ಯಾಡಳಿತ
15 ದಾವೀದನು ಸಮಸ್ತ ಇಸ್ರೇಲರನ್ನು ಆಳಿದನು. ದಾವೀದನು ಜನರಿಗೆ ನ್ಯಾಯವಾದ ಮತ್ತು ಸರಿಯಾದ ತೀರ್ಪುಗಳನ್ನು ಕೊಡುತ್ತಿದ್ದನು. 16 ಚೆರೂಯಳ ಮಗನಾದ ಯೋವಾಬನು ಅವನ ಸೈನ್ಯದ ಅಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 17 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು. 18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಾಧಿಕಾರಿಗಳಾಗಿದ್ದರು.[a]
ಸೌಲನ ಕುಟುಂಬಕ್ಕೆ ದಾವೀದನು ತೋರಿದ ಅನುಕಂಪ
9 ದಾವೀದನು, “ಸೌಲನ ಕುಟುಂಬದಲ್ಲಿ ಇನ್ನೂ ಯಾರಾದರೂ ಉಳಿದಿರುವರೇ? ಯೋನಾತಾನನಿಗೋಸ್ಕರ ನಾನು ಆ ವ್ಯಕ್ತಿಗೆ ದಯೆ ತೋರಿಸಬೇಕಾಗಿದೆ” ಎಂದು ಕೇಳಿದನು.
2 ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು.
ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು.
3 ರಾಜನಾದ ದಾವೀದನು, “ಸೌಲನ ಕುಟುಂಬದಲ್ಲಿ ಯಾವ ವ್ಯಕ್ತಿಯಾದರೂ ಉಳಿದಿರುವನೇ? ನಾನು ಆ ವ್ಯಕ್ತಿಗೆ ದೇವರ ಕರುಣೆಯನ್ನು ತೋರಿಸಬೇಕಾಗಿದೆ” ಎಂದು ಹೇಳಿದನು.
ಚೀಬನು ರಾಜನಾದ ದಾವೀದನಿಗೆ, “ಯೋನಾತಾನನ ಮಗನೊಬ್ಬನು ಇನ್ನೂ ಇದ್ದಾನೆ. ಅವನ ಎರಡೂ ಕಾಲುಗಳು ಕುಂಟಾಗಿವೆ” ಎಂದನು.
4 ರಾಜನಾದ ದಾವೀದನು ಚೀಬನಿಗೆ, “ಅವನು ಎಲ್ಲಿದ್ದಾನೆ?” ಎಂದು ಕೇಳಿದನು.
ಚೀಬನು ರಾಜನಿಗೆ, “ಅವನು ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿದ್ದಾನೆ” ಎಂದನು.
5 ಆಗ ರಾಜನಾದ ದಾವೀದನು ಲೋದೆಬಾರಿನಲ್ಲಿ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಯೋನಾತಾನನ ಮಗನನ್ನು ಕರೆತರಲು ಸೇವಕರನ್ನು ಕಳುಹಿಸಿದನು. 6 ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು.
ದಾವೀದನು, “ಮೆಫೀಬೋಶೆತನೇ” ಎಂದನು.
ಮೆಫೀಬೋಶೆತನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ” ಎಂದನು.
7 ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.
8 ಮೆಫೀಬೋಶೆತನು ದಾವೀದನಿಗೆ ಮತ್ತೆ ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನಿನ್ನ ಸೇವಕನಾದ ನನಗೆ ಬಹಳ ದಯಾಪರನಾಗಿರುವೆ, ನಾನು ಸತ್ತ ನಾಯಿಗಿಂತ ಉತ್ತಮನೇನಲ್ಲ!” ಎಂದು ಹೇಳಿದನು.
9 ಆಗ ರಾಜನಾದ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಒಡೆಯನಾದ ಸೌಲನ ಕುಟುಂಬಕ್ಕೆ ಸೇರಿದ ಎಲ್ಲವನ್ನೂ ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ. 10 ನೀನು ಮೆಫೀಬೋಶೆತನಿಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡು. ನಿನ್ನ ಮಕ್ಕಳೂ ನಿನ್ನ ಸೇವಕರೂ ಮೆಫೀಬೋಶೆತನಿಗಾಗಿ ಇದನ್ನು ಮಾಡಲಿ. ನೀನು ಬೆಳೆಗಳನ್ನು ಕೊಯ್ದು ಸುಗ್ಗಿಮಾಡು. ಆಗ ನಿನ್ನ ಒಡೆಯನ ಮೊಮ್ಮಗನಿಗೆ ಬೇಕಾದಷ್ಟು ಆಹಾರವಿರುತ್ತದೆ. ಆದರೆ ನಿನ್ನ ಒಡೆಯನ ಮೊಮ್ಮಗನಾದ ಮೆಫೀಬೋಶೆತನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟ ಮಾಡಬೇಕು” ಎಂದನು.
ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ, ಇಪ್ಪತ್ತು ಮಂದಿ ಸೇವಕರೂ ಇದ್ದರೂ. 11 ಚೀಬನು ರಾಜನಾದ ದಾವೀದನಿಗೆ, “ನಾನು ನಿನ್ನ ಸೇವಕ. ರಾಜನಾದ ಒಡೆಯನು ನನಗೆ ಆಜ್ಞಾಪಿಸಿದ್ದೆಲ್ಲವನ್ನೂ ನಾನು ಮಾಡುತ್ತೇನೆ” ಎಂದನು.
ಆದ್ದರಿಂದ ಮೆಫೀಬೋಶೆತನು, ರಾಜನ ಗಂಡುಮಕ್ಕಳಲ್ಲಿ ಒಬ್ಬನಂತೆ, ದಾವೀದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದನು. 12 ಮೆಫೀಬೋಶೆತನಿಗೆ ಮೀಕನೆಂಬ ಚಿಕ್ಕ ಮಗನಿದ್ದನು. ಚೀಬನ ಕುಟುಂಬದ ಜನರೆಲ್ಲರೂ ಮೆಫೀಬೋಶೆತನ ಸೇವಕರಾದರು. 13 ಮೆಫೀಬೋಶೆತನ ಎರಡೂ ಕಾಲುಗಳು ಕುಂಟಾಗಿದ್ದವು. ಮೆಫೀಬೋಶೆತನು ಜೆರುಸಲೇಮಿನಲ್ಲಿ ನೆಲೆಸಿದ್ದನು. ಅವನು ಪ್ರತಿದಿನವೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.
2 ಆದ್ದರಿಂದ ನಾನು ನಿಮಗೆ ನೀಡಲಿರುವ ಮುಂದಿನ ಸಂದರ್ಶನವು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಶನವಾಗಿರಬಾರದೆಂದು ನಿರ್ಧರಿಸಿದೆನು. 2 ನಾನು ನಿಮ್ಮನ್ನು ದುಃಖಗೊಳಿಸಿದರೆ, ನನ್ನನ್ನು ಸಂತೋಷಗೊಳಿಸುವವರು ಯಾರು? ನನ್ನಿಂದ ದುಃಖಿತರಾದ ನೀವು ಮಾತ್ರ ನನ್ನನ್ನು ಸಂತೋಷಪಡಿಸಬಲ್ಲಿರಿ. 3 ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂತೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆದೆನು. ನೀವೆಲ್ಲರೂ ನನ್ನ ಆನಂದದಲ್ಲಿ ಪಾಲುಗಾರರಾಗುತ್ತೀರಿ ಎಂಬ ಭರವಸೆ ನನಗಿತ್ತು. 4 ನಾನು ಮೊದಲೊಮ್ಮೆ ನಿಮಗೆ ಬರೆದಾಗ, ನನ್ನ ಹೃದಯವು ಬಹಳ ಗಲಿಬಿಲಿಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಡುತ್ತಾ ನಿಮಗೆ ಬರೆದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದಷ್ಟೆ.
ತಪ್ಪು ಮಾಡಿದ ಆ ವ್ಯಕ್ತಿಯನ್ನು ಕ್ಷಮಿಸಿರಿ
5 ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೊಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸ್ತವ ಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿ ಕಾಣುವಂತೆ ಮಾಡಲು ನನಗೆ ಇಷ್ಟವಿಲ್ಲ.) 6 ನಿಮ್ಮ ಸಭೆಯ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ. 7 ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕು. ಆಗ ಅವನು ಅತೀವ ದುಃಖದಿಂದ ಸಂಪೂರ್ಣವಾಗಿ ಸೋತುಹೋಗಲು ಸಾಧ್ಯವಾಗುವುದಿಲ್ಲ. 8 ಆದ್ದರಿಂದ ನೀವು ಅವನನ್ನು ಪ್ರೀತಿಸುತ್ತೀರೆಂಬುದನ್ನು ಅವನಿಗೆ ತೋರಿಸಿಕೊಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 9 ನೀವು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದೀರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ನಿಮಗೆ ಬರೆದೆನು. 10 ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು. 11 ಸೈತಾನನು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಬಾರದೆಂದು ನಾನು ಹೀಗೆ ಮಾಡಿದೆನು. ಸೈತಾನನ ಯೋಜನೆಗಳು ಯಾವುವೆಂದು ನಮಗೆ ಚೆನ್ನಾಗಿ ತಿಳಿದಿವೆ.
ತ್ರೋವದಲ್ಲಿ ಪೌಲನ ಉದ್ವೇಗ
12 ನಾನು ಕ್ರಿಸ್ತನ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ತ್ರೋವಕ್ಕೆ ಹೋದೆನು. ಪ್ರಭುವು ಅಲ್ಲಿ ನನಗೆ ಒಳ್ಳೆಯ ಅವಕಾಶವನ್ನು ಕೊಟ್ಟನು. 13 ಆದರೆ ನನ್ನ ಸಹೋದರನಾದ ತೀತನನ್ನು ನಾನು ಅಲ್ಲಿ ಕಾಣಲಿಲ್ಲವಾದ್ದರಿಂದ ನನಗೆ ಸಮಾಧಾನವಿರಲಿಲ್ಲ. ಆದ್ದರಿಂದ ನಾನು ಅವರನ್ನು ವಂದಿಸಿ ಮಕೆದೋನಿಯಕ್ಕೆ ಹೊರಟೆನು.
14 ದೇವರಿಗೆ ಸ್ತೋತ್ರವಾಗಲಿ. ದೇವರು ನಮ್ಮನ್ನು ಕ್ರಿಸ್ತನ ಮೂಲಕ ಯಾವಾಗಲೂ ವಿಜಯೋತ್ಸವದತ್ತ ನಡೆಸುತ್ತಿದ್ದಾನೆ. ದೇವರು ತನ್ನ ಜ್ಞಾನವೆಂಬ ಪರಿಮಳವನ್ನು ಎಲ್ಲಾ ಕಡೆಗಳಲ್ಲಿಯೂ ಹರಡಲು ನಮ್ಮನ್ನು ಉಪಯೋಗಿಸುತ್ತಿದ್ದಾನೆ. 15 ರಕ್ಷಣಾಮಾರ್ಗದಲ್ಲಿರುವವರ ಮತ್ತು ನಾಶನಮಾರ್ಗದಲ್ಲಿರುವವರ ಮಧ್ಯದಲ್ಲಿ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಮ್ಮ ಕಾಣಿಕೆ. 16 ನಾಶನಮಾರ್ಗದಲ್ಲಿರುವ ಜನರಿಗೆ ಮರಣವನ್ನು ಉಂಟುಮಾಡುವ ಮರಣದ ವಾಸನೆಯಾಗಿದ್ದೇವೆ. ಆದರೆ ರಕ್ಷಣಾಮಾರ್ಗದಲ್ಲಿರುವ ಜನರಿಗೆ ಜೀವವನ್ನು ಉಂಟುಮಾಡುವ ಜೀವದ ವಾಸನೆಯಾಗಿದ್ದೇವೆ. ಹೀಗಿರಲಾಗಿ, ಈ ಕಾರ್ಯವನ್ನು ಮಾಡಲು ಯಾರು ಯೋಗ್ಯರಾಗಿದ್ದಾರೆ? 17 ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.
ಜೆರುಸಲೇಮಿನ ಮೇಲೆ ಯೆಹೋವನ ಪ್ರೀತಿ
16 ಮತ್ತೆ ಯೆಹೋವನ ವಾಕ್ಯವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಜೆರುಸಲೇಮ್ ಪಟ್ಟಣಕ್ಕೆ ಅದರ ಅಸಹ್ಯವಾದ ಆಚರಣೆಗಳ ಬಗ್ಗೆ ಹೇಳು. ದುಷ್ಟತ್ವದ ಕುರಿತು ಅವರಿಗೆ ತಿಳಿಸು. 3 ನೀನು ಏನು ಹೇಳಬೇಕೆಂದರೆ, ‘ಜೆರುಸಲೇಮಿಗೆ ನನ್ನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಿನ್ನ ಇತಿಹಾಸವನ್ನು ನೋಡು. ನೀನು ಕಾನಾನ್‌ನಲ್ಲಿ ಜನಿಸಿರುತ್ತೀ. ನಿನ್ನ ತಂದೆಯು ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. 4 ಜೆರುಸಲೇಮೇ, ನೀನು ಹುಟ್ಟಿದ ಆ ದಿವಸದಲ್ಲಿ ನಿನ್ನ ಹೊಕ್ಕಳ ನಾಳವನ್ನು ಕೊಯ್ಯಲು ಯಾರೂ ಇದ್ದಿಲ್ಲ. ನಿನ್ನ ಮೈಯನ್ನು ನೀರು ಹಾಕಿ ಯಾರೂ ತೊಳೆದು ಶುದ್ಧಮಾಡಿಲ್ಲ. ನಿನ್ನನ್ನು ಯಾರೂ ಉಪ್ಪಿನಿಂದ ಉಜ್ಜಿಲ್ಲ. ಯಾರೂ ನಿನಗೆ ಬಟ್ಟೆ ಸುತ್ತಲಿಲ್ಲ. 5 ಇವುಗಳಲ್ಲಿ ಯಾವುದನ್ನೇ ಮಾಡಲು ನಿನಗೋಸ್ಕರ ಯಾರೂ ಸಾಕಷ್ಟು ಮರುಕಪಡಲಿಲ್ಲ. ಜೆರುಸಲೇಮೇ, ನೀನು ಜನಿಸಿದ ದಿನದಲ್ಲಿ ನಿನಗೆ ಜನ್ಮವಿತ್ತವರು ನಿನ್ನನ್ನು ಹೊರಗೆ ಬಯಲಿನಲ್ಲಿ ಎಸೆದುಬಿಟ್ಟರು. ನೀನು ತಿರಸ್ಕರಿಸಲ್ಪಟ್ಟಿದ್ದೆ.
6 “‘ಆಗ ನಾನು (ದೇವರು) ಆ ಮಾರ್ಗವಾಗಿ ಹಾದುಹೋಗುವಾಗ ನೀನು ರಕ್ತಮಯವಾಗಿ ಹೊರಳಾಡುತ್ತಾ ಬಿದ್ದಿದ್ದೆ. ಆಗ ನಾನು “ಜೀವಿಸು” ಅಂದೆನು. ಹೌದು, ನೀನು ರಕ್ತದಲ್ಲಿ ಮುಳುಗಿದ್ದೀ. ಆಗ ನಾನು “ಜೀವಿಸು” ಅಂದೆನು. 7 ನಾನು, ಹೊಲದಲ್ಲಿ ಸಸಿಯು ಹೇಗೆ ಬೆಳೆಯುತ್ತದೋ ಹಾಗೆಯೇ ನೀನು ಬೆಳೆಯಲು ಸಹಾಯ ಮಾಡಿದೆನು. ನೀನು ಬೆಳೆಯುತ್ತಾ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ಹೆಂಗಸಿನಂತಾದೆ. ನಿನಗೆ ಮುಟ್ಟು ಪ್ರಾರಂಭವಾಯಿತು. ನಿನ್ನ ಸ್ತನಗಳು ಬೆಳೆದವು. ಕೂದಲುಗಳು ಬೆಳೆದವು. ಆದರೂ ನೀನು ಬಟ್ಟೆಯಿಲ್ಲದವಳಾಗಿ ಬೆತ್ತಲೆಯಾಗಿದ್ದೆ. 8 ನಾನು ಮತ್ತೆ ಹಾದುಹೋಗುವಾಗ ನಿನ್ನನ್ನು ನೋಡಲಾಗಿ ನೀನು ಸಂಭೋಗಿಸಲು ತಯಾರಾಗಿದ್ದೆ. ನಾನು ನನ್ನ ಹೊದಿಕೆಯನ್ನು ನಿನ್ನ ಮೇಲೆ ಹಾಕಿ ನಿನ್ನ ಬೆತ್ತಲೆ ದೇಹವನ್ನು ಮುಚ್ಚಿದೆನು. ನಿನ್ನನ್ನು ವಿವಾಹವಾಗಲು ಮಾತುಕೊಟ್ಟೆನು. ನಾನು ನಿನ್ನೊಡನೆ ಒಡಂಬಡಿಕೆ ಮಾಡಿಕೊಂಡೆನು. ಆಗ ನೀನು ನನ್ನವಳಾದೆ.’” ಇದು ನನ್ನ ಒಡೆಯನಾದ ಯೆಹೋವನ ನುಡಿ. 9 “‘ನಾನು ನಿನ್ನನ್ನು ನೀರಿನಲ್ಲಿ ತೊಳೆದೆನು. ನಿನ್ನ ರಕ್ತವನ್ನು ತೊಳೆದೆನು. ನಿನ್ನ ಮೈಗೆ ಎಣ್ಣೆ ಹಚ್ಚಿ ಉಜ್ಜಿದೆನು. 10 ನಿನಗೆ ಅಂದವಾದ ಉಡುಪನ್ನು ಕೊಟ್ಟು ಕಾಲಿಗೆ ನಯವಾದ ಚರ್ಮದ ಕೆರಗಳನ್ನು ಕೊಟ್ಟೆನು. ನಿನ್ನ ತಲೆಗೆ ನಾರುಮಡಿಯ ತಲೆಕಟ್ಟನ್ನು ಕೊಟ್ಟೆನು ಮತ್ತು ನಿನಗೆ ರೇಷ್ಮೆಯ ಬಟ್ಟೆಯನ್ನು ಹೊದಿಸಿದೆನು. 11 ಅನಂತರ ನಿನಗೆ ಕೆಲವು ಆಭರಣಗಳನ್ನು ಕೊಟ್ಟೆನು. ನಿನ್ನ ತೋಳುಗಳಿಗೆ ತೋಳುಕಟ್ಟುಗಳನ್ನು, ಕುತ್ತಿಗೆಗೆ ಹಾರವನ್ನು ತೊಡಿಸಿದೆನು. 12 ನಿನಗೆ ಮೂಗುತಿ, ಕಿವಿಗೆ ಕಿವಿಯುಂಗುರಗಳನ್ನು ಮತ್ತು ಒಂದು ಅಂದವಾದ ಕಿರೀಟವನ್ನು ಧರಿಸಲು ಕೊಟ್ಟೆನು. 13 ನಿನ್ನ ಚಿನ್ನ, ಬೆಳ್ಳಿ, ಆಭರಣ, ನಾರುಮಡಿ, ರೇಷ್ಮೆ ಮತ್ತು ಕಸೂತಿ ಹಾಕಿದ ಬಟ್ಟೆಗಳಲ್ಲಿ ನೀನು ಸುಂದರಳಾಗಿ ಕಾಣಿಸುತ್ತಿದ್ದೆ. ನೀನು ಉತ್ತಮವಾದ ಆಹಾರವನ್ನು ಊಟ ಮಾಡಿದೆ: ಉತ್ತಮ ಗೋಧಿಹಿಟ್ಟು, ಜೇನುತುಪ್ಪ ಮತ್ತು ಆಲೀವ್ ಎಣ್ಣೆ. ನೀನು ಅತ್ಯಂತ ಸುಂದರಿಯಾದೆ. ಮತ್ತು ನೀನು ರಾಣಿಯಾಗಿದ್ದೆ. 14 ಹೌದು, ನೀನು ನಿನ್ನ ಸಂಪೂರ್ಣವಾದ ಸೌಂದರ್ಯಕ್ಕಾಗಿ ಜನಾಂಗಗಳ ಮಧ್ಯದಲ್ಲಿ ಹೆಸರು ವಾಸಿಯಾಯಿತು. ಯಾಕೆಂದರೆ ನಾನು ನಿನ್ನನ್ನು ಅತ್ಯಂತ ಸೌಂದರ್ಯವತಿಯನ್ನಾಗಿ ಮಾಡಿದೆನು.’” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು.
ಜೆರುಸಲೇಮ್ ನೀತಿಗೆಟ್ಟ ವಧುವು
15 ದೇವರು ಹೀಗೆಂದನು: “ನೀನು ನಿನ್ನ ಸೌಂದರ್ಯದ ಮೇಲೆ ಭರವಸೆ ಉಳ್ಳವಳಾಗಿದ್ದೆ. ನಿನ್ನ ಪ್ರಖ್ಯಾತಿಯಿಂದಾಗಿ ನನಗೆ ಅಪನಂಬಿಗಸ್ತಳಾದಿ. ನಿನ್ನನ್ನು ಹಾದುಹೋಗುವ ಪ್ರತಿವ್ಯಕ್ತಿಯೊಂದಿಗೆ ನೀನು ವೇಶ್ಯೆಯಂತೆ ನಡೆದುಕೊಂಡಿ. ನೀನು ನಿನ್ನನ್ನು ಅವರಿಗೊಪ್ಪಿಸಿದಿ. 16 ನೀನು ನಿನ್ನ ಬಟ್ಟೆಗಳಲ್ಲಿ ಕೆಲವನ್ನು ತೆಗೆದುಕೊಂಡು ನಿನ್ನ ಪೂಜಿಸುವ ಸ್ಥಳಗಳನ್ನು ವರ್ಣರಂಜಿತವನ್ನಾಗಿ ಮಾಡಿದೆ ಮತ್ತು ಆ ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ನಿನ್ನನ್ನು ಒಪ್ಪಿಸಿಕೊಟ್ಟೆ. 17 ನಾನು ನಿನಗೆ ಕೊಟ್ಟ ಬೆಳ್ಳಿಬಂಗಾರಗಳ ಆಭರಣಗಳಿಂದ ನೀನು ಗಂಡು ವಿಗ್ರಹಗಳನ್ನು ಮಾಡಿಕೊಂಡು ಅವುಗಳೊಂದಿಗೆ ಸೂಳೆಯಂತೆ ವರ್ತಿಸಿದೆ. 18 ನಂತರ ನೀನು ಅಂದವಾದ ಬಟ್ಟೆಯಿಂದ ಆ ವಿಗ್ರಹಗಳಿಗೆ ಹೊದಿಸಿದೆ. ನಾನು ನಿನಗೆ ಕೊಟ್ಟಿದ್ದ ಧೂಪ, ಪರಿಮಳದ್ರವ್ಯವನ್ನು ನೀನು ಆ ವಿಗ್ರಹಗಳ ಮುಂದೆ ಹಾಕಿದಿ. 19 ನಾನು ನಿನಗೆ ರೊಟ್ಟಿ, ಜೇನು ಮತ್ತು ಎಣ್ಣೆಯನ್ನು ಕೊಟ್ಟಿದ್ದೆನು. ಆದರೆ ನೀನು ಆ ಆಹಾರವನ್ನು ಮೂರ್ತಿಗಳಿಗೆ ಕೊಟ್ಟೆ. ಆ ಸುಳ್ಳು ದೇವರುಗಳನ್ನು ಮೆಚ್ಚಿಸುವದಕ್ಕೋಸ್ಕರ ನೀನು ಅವುಗಳನ್ನು ಸುಗಂಧವಾಸನೆಯ ಕಾಣಿಕೆಯಂತೆ ಅರ್ಪಿಸಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.
20 ದೇವರು ಹೇಳಿದ್ದೇನೆಂದರೆ, “ನನ್ನ ಮಕ್ಕಳಾಗಿದ್ದ ನಿನ್ನ ಪುತ್ರಪುತ್ರಿಯರನ್ನು ನೀನು ತೆಗೆದುಕೊಂಡು ಅವರನ್ನು ಆಹಾರವನ್ನಾಗಿ ವಿಗ್ರಹಗಳಿಗೆ ಯಜ್ಞ ಅರ್ಪಿಸಿದೆ. ನಿನ್ನ ಸೂಳೆತನವು ಸಾಕಾಗಿರಲಿಲ್ಲವೇ? 21 ನೀನು ನನ್ನ ಗಂಡುಮಕ್ಕಳನ್ನು ಸಂಹರಿಸಿ ಬೆಂಕಿಯಲ್ಲಿ ದಾಟಿಸಿ ಆ ಸುಳ್ಳುದೇವರಿಗೆ ಕೊಟ್ಟೆ. 22 ನಿನ್ನ ಅಸಹ್ಯಕೃತ್ಯಗಳನ್ನೂ ಸೂಳೆಯಂತೆ ವರ್ತಿಸುತ್ತಿರುವುದನ್ನೂ ನಿನ್ನ ಎಳೆತನದ ಸಮಯವನ್ನೂ ಮತ್ತು ನಿನ್ನ ಸ್ವಂತ ರಕ್ತದಲ್ಲಿ ಬೆತ್ತಲೆಯಾಗಿ ಹೊರಳಾಡುತ್ತಿದ್ದುದನ್ನೂ ನೀನು ಮರೆತುಬಿಟ್ಟೆ.
23 “ಓ ಜೆರುಸಲೇಮೇ, ಎಂಥಾ ಭಯಂಕರ, ನಿನಗೆಂಥಾ ಭಯಂಕರವಾಗಿರುವುದು ಸಂಭವಿಸುತ್ತದೆ!” ಎನ್ನುತ್ತಾನೆ ನನ್ನ ಒಡೆಯನಾದ ಯೆಹೋವನು. 24 “ನೀನು ಎಲ್ಲಾ ದುಷ್ಕೃತ್ಯಗಳನ್ನು ಮಾಡಿದ ನಂತರ ಸುಳ್ಳು ದೇವರುಗಳಿಗಾಗಿ ಎತ್ತರವಾದ ಸ್ಥಳಗಳಲ್ಲಿ ಹೆಚ್ಚು ಪೂಜಾಸ್ಥಳಗಳನ್ನು ಮಾಡಿದೆ. ಪ್ರತಿಯೊಂದು ರಸ್ತೆಯ ಚೌಕಗಳಲ್ಲಿ ಅನ್ಯದೇವರುಗಳಿಗಾಗಿ ಪೂಜಾಸ್ಥಳಗಳನ್ನು ಮಾಡಿದೆ. 25 ಪ್ರತೀ ರಸ್ತೆಯ ಪ್ರಾರಂಭದಲ್ಲಿ ಅಂಥಾ ಪೂಜಾಸ್ಥಳಗಳನ್ನು ನಿರ್ಮಿಸಿದ್ದೀ. ನೀನು ನಿನ್ನ ಸೌಂದರ್ಯವನ್ನು ಹಾಳುಮಾಡಿಕೊಂಡಿ. ನೀನು ಅಸಹ್ಯವಾದ ಕಾರ್ಯಗಳನ್ನು ಮಾಡಲು ನಿನ್ನ ಸೌಂದರ್ಯವನ್ನು ಬಳಸಿಕೊಂಡೆ. ಹಾದಿಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ಲೈಂಗಿಕ ತೃಪ್ತಿ ನೀಡಿ ನಿನ್ನ ಸೂಳೆತನವನ್ನು ಹೆಚ್ಚಿಸಿಕೊಂಡೆ. 26 ಬಳಿಕ ನಿನ್ನ ನೆರೆಯವರೂ ಅತೀ ಕಾಮುಕರೂ ಆಗಿದ್ದ ಈಜಿಪ್ಟಿನವರ ಬಳಿಗೆ ನೀನು ಹೋದೆ. ನನ್ನನ್ನು ಕೋಪಗೊಳಿಸುವುದಕ್ಕಾಗಿ ನೀನು ಅವರೊಂದಿಗೆ ಹಲವಾರು ಸಲ ಲೈಂಗಿಕ ಸಂಪರ್ಕ ಮಾಡಿದೆ. 27 ಆಗ ನಾನು ನಿನ್ನನ್ನು ಶಿಕ್ಷಿಸಿದೆನು. ನಾನು ನಿನಗೆ ಕೊಟ್ಟ ದೇಶದಿಂದ ಸ್ವಲ್ಪ ಭಾಗವನ್ನು ಕಿತ್ತುಕೊಂಡೆನು. ನಿನ್ನ ಶತ್ರುಗಳಾದ ಫಿಲಿಷ್ಟಿಯರ ಹೆಣ್ಣುಮಕ್ಕಳು ನಿನ್ನೊಂದಿಗೆ ತಮಗೆ ಇಷ್ಟ ಬಂದಂತೆ ವರ್ತಿಸಲುಬಿಟ್ಟೆನು. ನಿನ್ನ ಕೆಟ್ಟಕಾರ್ಯಗಳನ್ನು ನೋಡಿ ಅವರೂ ಅಚ್ಚರಿಗೊಂಡರು. 28 ಆ ಬಳಿಕ ನೀನು ಅಶ್ಶೂರದವರೊಂದಿಗೆ ಸಂಭೋಗಿಸಲು ಹೋದಿ. ನೀನು ತೃಪ್ತಿಗೊಳ್ಳುವಷ್ಟು ಆನಂದ ಸಿಗಲಿಲ್ಲ. ನೀನೆಂದೂ ತೃಪ್ತಿಗೊಂಡವಳಲ್ಲ. 29 ಆದ್ದರಿಂದ ನೀನು ವ್ಯಾಪಾರದ ದೇಶವಾದ ಬಾಬಿಲೋನಿನ ಕಡೆಗೆ ಮುಖ ಮಾಡಿಕೊಂಡೆ. ಆದರೂ ನೀನು ತೃಪ್ತಿ ಪಡೆಯಲಿಲ್ಲ. 30 ನಾಚಿಕೆಯಿಲ್ಲದ ಸೂಳೆಯಂತೆ ನೀನು ಮಾಡಿದ ಈ ಎಲ್ಲಾ ಕಾರ್ಯಗಳಿಂದ ನಾನು ನಿನ್ನ ವಿರುದ್ಧ ಕೋಪದಿಂದ ತುಂಬಿರುವೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.
31 ದೇವರು ಹೇಳಿದ್ದೇನೆಂದರೆ, “ಆದರೆ ನೀನು ವೇಶ್ಯೆಯ ಹಾಗೆ ಪೂರ್ಣವಾಗಿರಲಿಲ್ಲ. ನೀನು ಎತ್ತರದ ಪೂಜಾಸ್ಥಳಗಳನ್ನು ಪ್ರತೀ ರಸ್ತೆಯ ಪ್ರಾರಂಭದಲ್ಲಿಯೂ ಯಜ್ಞವೇದಿಕೆಗಳನ್ನು ಪ್ರತೀ ರಸ್ತೆಯ ಮೂಲೆಗಳಲ್ಲಿಯೂ ಕಟ್ಟಿಸಿರುವೆ. ಆ ಎಲ್ಲಾ ಪುರುಷರೊಂದಿಗೆ ನೀನು ಸಂಭೋಗಿಸಿರುವೆ. ಆದರೆ ಸೂಳೆಯಂತೆ ಅವರಿಂದ ನೀನು ಹಣ ತೆಗೆದುಕೊಳ್ಳಲಿಲ್ಲ. 32 ವ್ಯಭಿಚಾರಿಣಿಯೇ, ನೀನು ನಿನ್ನ ಸ್ವಂತ ಗಂಡನಿಗಿಂತ ಪರಪುರುಷನನ್ನೇ ಹೆಚ್ಚಾಗಿ ಆಶಿಸುವವಳಾಗಿರುವೆ. 33 ವೇಶ್ಯೆಯರು ತಮ್ಮೊಡನೆ ಕೂಡುವದಕ್ಕಾಗಿ ಪುರುಷರಿಂದ ಹಣ ವಸೂಲಿ ಮಾಡುವರು. ಆದರೆ ನಿನ್ನ ಪ್ರಿಯತಮರಿಗೆ ನೀನೇ ಹಣವನ್ನು ಕೊಟ್ಟಿರುವೆ. ನಿನ್ನೊಂದಿಗೆ ಸಂಭೋಗ ಮಾಡಲು ನೀನೇ ಅವರಿಗೆ ಹಣವನ್ನು ಕೊಟ್ಟಿರುವೆ. 34 ನೀನು ಸೂಳೆಯರಿಗೇ ವಿರುದ್ಧವಾಗಿ ನಡೆದಿರುವೆ. ಅವರು ಪುರುಷರಿಂದ ಹಣ ತೆಗೆದುಕೊಳ್ಳುವಾಗ ನೀನೇ ಅವರಿಗೆ ಹಣಕೊಟ್ಟಿರುವೆ.”
35 ಸೂಳೆಯೇ, ಯೆಹೋವನ ಸಂದೇಶವನ್ನು ಕೇಳು: 36 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಅತಿಯಾದ ಶರೀರದಾಶೆಯಿಂದಾಗಿ, ನಿನ್ನ ಬೆತ್ತಲೆಯ ದೇಹವನ್ನು ನೋಡಿ ನಿನ್ನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ನೀನು ನಿನ್ನ ಪ್ರಿಯತಮರಿಗೂ, ನಿನ್ನ ಹೊಲಸು ದೇವರುಗಳಿಗೂ ಅವಕಾಶ ಮಾಡಿಕೊಟ್ಟೆ. ನೀನು ನಿನ್ನ ಮಕ್ಕಳನ್ನು ಕೊಂದು ಅವರ ರಕ್ತವನ್ನು ಸುರಿಸಿರುವೆ. ಇದು ಆ ಹೊಲಸು ದೇವರುಗಳಿಗೆ ನೀನು ಕೊಟ್ಟ ದಾನ. 37 ಈ ಕಾರಣದಿಂದ, ನೀನು ಸುಖ ಕೊಟ್ಟಿರುವ ನಿನ್ನ ಎಲ್ಲಾ ಪ್ರಿಯರನ್ನು ಅಂದರೆ ಈಗಿನ ಪ್ರಿಯರನ್ನು ಮತ್ತು ನೀನು ತಿರಸ್ಕರಿಸಿರುವ ಹಿಂದಿನ ಪ್ರಿಯರನ್ನೂ ಒಟ್ಟಾಗಿ ಸೇರಿಸಿ, ನಿನ್ನ ಬೆತ್ತಲೆತನವನ್ನು ಅವರು ನೋಡುವಂತೆ ಮಾಡುವೆನು. ಅವರು ನಿನ್ನನ್ನು ಪೂರ್ತಿಯಾಗಿ ನೋಡುವರು. 38 ಬಳಿಕ, ಕೊಲೆಗಾರ್ತಿಯರೂ ವ್ಯಭಿಚಾರಿಣಿಯರೂ ಶಿಕ್ಷಿಸಲ್ಪಡುವಂತೆ ನಾನು ನಿನ್ನನ್ನು ದಂಡಿಸುವೆನು. ನನ್ನ ಭಯಂಕರವಾದ ಕೋಪದಿಂದ ನಿನಗೆ ಮರಣದಂಡನೆಯನ್ನು ವಿಧಿಸುವೆನು. 39 ಆ ನಿನ್ನ ಪ್ರಿಯತಮರಿಗೆ ನಿನ್ನನ್ನು ಬಿಟ್ಟುಕೊಡುವೆನು. ಅವರು ನಿನ್ನ ದಿಬ್ಬಗಳನ್ನು ನಾಶಮಾಡುವರು ಮತ್ತು ಪೂಜಾಯಜ್ಞವೇದಿಕೆಗಳನ್ನು ಕೆಡವಿಹಾಕುವರು. ನಿನ್ನ ಬಟ್ಟೆಗಳನ್ನು ಕಿತ್ತುಕೊಳ್ಳುವರು ಮತ್ತು ಚಂದವಾದ ಆಭರಣಗಳನ್ನು ತೆಗೆದುಕೊಂಡು ಹೋಗುವರು. ಮತ್ತು ನಿನ್ನನ್ನು ಬೆತ್ತಲೆಯಾಗಿ ಮಾಡುವರು. 40 ನಿನ್ನನ್ನು ಕಲ್ಲುಗಳಿಂದ ಕೊಲ್ಲುವದಕ್ಕಾಗಿ ಅವರು ಜನರನ್ನು ಒಂದುಗೂಡಿಸುವರು. ಬಳಿಕ ಅವರು ನಿನ್ನನ್ನು ಖಡ್ಗಗಳಿಂದ ತುಂಡುತುಂಡಾಗಿ ಕತ್ತರಿಸುವರು. 41 ಬಳಿಕ, ಅನೇಕ ಸ್ತ್ರೀಯರು ನೋಡಲೆಂದು ನಿನ್ನ ಮನೆಗಳನ್ನು ಸುಟ್ಟು, ನಿನ್ನನ್ನು ದಂಡಿಸುವರು. ನೀನು ಸೂಳೆಯಂತೆ ಜೀವಿಸುವದನ್ನು ನಾನು ನಿಲ್ಲಿಸುವೆನು. ನೀನು ನಿನ್ನ ಪ್ರಿಯತಮರಿಗೆ ಹಣ ಕೊಡುವದನ್ನು ನಿಲ್ಲಿಸುತ್ತೇನೆ. 42 ಬಳಿಕ ನಿನ್ನ ಮೇಲೆ ನನಗಿರುವ ಕೋಪವನ್ನು ತೊಲಗಿಸುವೆನು; ನಾನು ಶಾಂತನಾಗುವೆನು; ಆ ಬಳಿಕ ನಾನು ಸಿಟ್ಟುಗೊಳ್ಳುವುದೇ ಇಲ್ಲ. 43 ಇವೆಲ್ಲಾ ಯಾಕೆ ಸಂಭವಿಸಬೇಕು? ಯಾಕೆಂದರೆ ನೀನು ಎಳೆಯವಳಾಗಿದ್ದಾಗ ಏನು ಸಂಭವಿಸಿತೆಂದು ಮರೆತುಬಿಟ್ಟಿರುವೆ. ನೀನು ಕೆಟ್ಟಕೆಲಸಗಳನ್ನು ಮಾಡಿ ನಾನು ಕೋಪಿಸಿಕೊಳ್ಳುವಂತೆ ಮಾಡಿರುವೆ. ಆದ್ದರಿಂದ ಆ ಕೆಟ್ಟಕಾರ್ಯ ಮಾಡಿದ್ದಕ್ಕಾಗಿ ನಿನ್ನನ್ನು ಶಿಕ್ಷಿಸಬೇಕಾಗಿ ಬಂತು. ನೀನು ಅದಕ್ಕಿಂತಲೂ ಭಯಂಕರಕೃತ್ಯ ನಡಿಸಲು ಯೋಜನೆ ಹಾಕಿಕೊಂಡಿರುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
44 “ಜ್ಞಾನೋಕ್ತಿಗಳನ್ನು ಉಲ್ಲೇಖಿಸಲು ಇಚ್ಛಿಸುವ ಪ್ರತಿಯೊಬ್ಬನು ನಿನ್ನ ವಿರುದ್ಧವಾಗಿ ಇದನ್ನು ಉಲ್ಲೇಖಿಸುವನು: ‘ತಾಯಿಯಂತೆ ಮಗಳು.’ 45 ನೀನು ನಿನ್ನ ತಾಯಿಯ ಮಗಳು. ನೀನು ನಿನ್ನ ಗಂಡನನ್ನು ಮತ್ತು ಮಕ್ಕಳನ್ನು ತಿರಸ್ಕರಿಸಿರುವೆ. ನೀನು ನಿನ್ನ ಸಹೋದರಿಯಂತಿರುವೆ. ನೀವು ನಿಮ್ಮ ಗಂಡಂದಿರನ್ನೂ ಮಕ್ಕಳನ್ನೂ ತಿರಸ್ಕರಿಸಿದಿರಿ. ನೀವು ನಿಮ್ಮನ್ನು ಹೆತ್ತವರ ತರಹ ಇದ್ದೀರಿ. ನಿಮ್ಮ ತಾಯಿ ಹಿತ್ತಿಯಳಾಗಿದ್ದಳು. ನಿಮ್ಮ ತಂದೆಯು ಅಮೋರಿಯದವನಾಗಿದ್ದನು. 46 ನಿನ್ನ ಅಕ್ಕ ಸಮಾರ್ಯಳು. ಆಕೆಯು ನಿನ್ನ ಉತ್ತರ ದಿಕ್ಕಿನಲ್ಲಿ ತನ್ನ ಹೆಣ್ಣು ಮಕ್ಕಳೊಂದಿಗೆ (ಪಟ್ಟಣಗಳು) ವಾಸ ಮಾಡಿದ್ದಳು. ನಿನ್ನ ತಂಗಿಯು ಸೊದೋಮಳು. ಆಕೆ ನಿನ್ನ ದಕ್ಷಿಣದಲ್ಲಿ ತನ್ನ ಹೆಣ್ಣುಮಕ್ಕಳೊಂದಿಗೆ (ಪಟ್ಟಣಗಳು) ವಾಸಿಸಿದ್ದಳು. 47 ಅವರಿಗಿಂತಲೂ ಹೆಚ್ಚು ಕೆಟ್ಟು ಹೋಗಲು ನಿನಗೆ ಸ್ವಲ್ಪ ಸಮಯವೇ ಸಾಕಾಯಿತು. ಅವರಿಗಿಂತಲೂ ಇನ್ನೂ ಭಯಂಕರವಾದ ಕೆಲಸಗಳನ್ನು ನೀನು ಮಾಡಿರುವೆ. 48 ದೇವರಾದ ಯೆಹೋವನು ಹೀಗೆನ್ನುತ್ತಾನೆ, ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮಳು ಮತ್ತು ಆಕೆಯ ಹೆಣ್ಣುಮಕ್ಕಳು ನೀನು ನಡಿಸಿದಷ್ಟು ದುಷ್ಟತ್ವವನ್ನು ನಡಿಸಲಿಲ್ಲ.”
49 ದೇವರು ಹೇಳಿದ್ದೇನೆಂದರೆ, “ನಿನ್ನ ತಂಗಿ ಸೊದೋಮ್ ಮತ್ತು ಆಕೆಯ ಹೆಣ್ಣುಮಕ್ಕಳು ಕೊಬ್ಬಿದ ಕಣ್ಣುಳ್ಳವರಾಗಿದ್ದರು. ಅವರಿಗೆ ತಿನ್ನಲು ಬೇಕಾದಷ್ಟಿತ್ತು. ಅವರು ಶಾಂತಿಕರವಾದ ಸುಭದ್ರತೆಯಲ್ಲಿ ಜೀವಿಸಿದರು. ಅವರು ಬಡವರಿಗೆ ಸಹಾಯ ಮಾಡಲಿಲ್ಲ. 50 ಸೊದೋಮಿಗೂ ಮತ್ತು ಆಕೆಯ ಹೆಣ್ಣು ಮಕ್ಕಳಿಗೂ ಅತಿರೇಕ ಜಂಬವು ಬಂದು ಭಯಂಕರ ಕೃತ್ಯಗಳನ್ನು ನನ್ನ ಮುಂದೆಯೇ ಮಾಡಿದರು. ಆದ್ದರಿಂದ ನಾನು ಅವರನ್ನು ನನ್ನಿಂದ ದೂರ ಮಾಡಿದೆನು.”
51 ದೇವರು ಹೇಳಿದ್ದೇನೆಂದರೆ: “ನೀನು ಮಾಡಿದ ದುಷ್ಕೃತ್ಯಗಳ ಅರ್ಧದಷ್ಟು ಸಮಾರ್ಯವು ಮಾಡಿತ್ತು. ಸಮಾರ್ಯದವರಿಗಿಂತಲೂ ಹೆಚ್ಚಾದ ಭಯಂಕರಕೃತ್ಯಗಳನ್ನು ನೀನು ಮಾಡಿರುವೆ. ನಿನ್ನ ಅಕ್ಕತಂಗಿಯರಿಗಿಂತ ಹೆಚ್ಚಾಗಿ ನೀನು ದುಷ್ಕೃತ್ಯಗಳನ್ನು ಮಾಡಿರುವೆ. ಸಮಾರ್ಯ ಮತ್ತು ಸೊದೋಮ್ ನಿನ್ನೊಂದಿಗೆ ಹೋಲಿಸಿ ನೋಡಿದರೆ ಅವು ಒಳ್ಳೆಯ ಪಟ್ಟಣಗಳಂತೆ ತೋರಿಬರುತ್ತವೆ. 52 ಆದ್ದರಿಂದ ನಿನ್ನ ಅವಮಾನವನ್ನು ನೀನು ಸಹಿಸಿಕೊಳ್ಳಬೇಕು. ನಿನಗಿಂತ ನಿನ್ನ ಸಹೋದರಿಯರು ನೀತಿವಂತರಂತೆ ತೋರುತ್ತಾರೆ. ಯಾಕೆಂದರೆ ನಿನ್ನ ಪಾಪಗಳು ಬಹಳ ಅಸಹ್ಯವಾಗಿದ್ದವು. ಆದ್ದರಿಂದ ನಿನಗೆ ಅವಮಾನವಾಗಲೇಬೇಕು; ನೀನು ನಾಚಿಕೆಯನ್ನು ಅನುಭವಿಸಲೇಬೇಕು ಯಾಕೆಂದರೆ ನೀನು ನಿನ್ನ ಸಹೋದರಿಯರನ್ನು ನಿರಪರಾಧಿಗಳಾಗಿ ಕಾಣುವಂತೆ ಮಾಡಿರುವೆ.”
53 ದೇವರು ಹೇಳಿದ್ದೇನೆಂದರೆ: “ಸೊದೋಮ್ ಮತ್ತು ಅದರ ಸುತ್ತಲೂ ಇದ್ದ ನಗರಗಳನ್ನು ನಾನು ನಾಶಮಾಡಿದೆನು. ನಾನು ಸಮಾರ್ಯವನ್ನು ನಾಶಮಾಡಿದೆನು. ಮತ್ತು ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆ. ಆದರೆ ನಾನು ತಿರುಗಿ ಆ ಪಟ್ಟಣಗಳನ್ನು ಕಟ್ಟುವೆನು. ಜೆರುಸಲೇಮೇ, ನಾನು ನಿನ್ನನ್ನೂ ಕಟ್ಟುವೆನು. 54 ಆಗ, ನೀನು ಮಾಡಿದ ಭಯಂಕರ ಕೃತ್ಯಗಳನ್ನು ನಿನ್ನ ನೆನಪಿಗೆ ತಂದುಕೊಳ್ಳುವೆ. ಆಗ ನೀನು ನಾಚಿಕೆಪಡುವೆ. ಅದೇ ಸಮಯದಲ್ಲಿ ನೀನು ನಿನ್ನ ಸಹೋದರಿಯರನ್ನು ಸಂತೈಸುವೆ. 55 ಆಗ ನೀನೂ ನಿನ್ನ ಸಹೋದರಿಯರೂ ತಿರುಗಿ ಕಟ್ಟಲ್ಪಡುವಿರಿ. ಸೊದೋಮಳೂ ಆಕೆಯ ಸುತ್ತಲಿರುವ ಪಟ್ಟಣಗಳೂ, ಸಮಾರ್ಯಳು ಮತ್ತು ಆಕೆಯ ಸುತ್ತಲಿರುವ ಪಟ್ಟಣಗಳೆಲ್ಲಾ ತಿರುಗಿ ಕಟ್ಟಲ್ಪಡುವವು.”
56 ದೇವರು ಹೇಳಿದ್ದೇನೆಂದರೆ, “ಹಿಂದೆ, ನೀನು ಜಂಬದಿಂದ ನಿನ್ನ ತಂಗಿ ಸೊದೋಮಳ ವಿಷಯವಾಗಿ ಗೇಲಿ ಮಾಡಿದ್ದೀ. ಹಾಗೆ ನೀನು ತಿರುಗಿ ಮಾಡುವುದಿಲ್ಲ. 57 ಈಗಿನಂತೆ, ನಿನ್ನ ದುಷ್ಟತನವು ಹೊರಬರುವುದಕ್ಕಿಂತ ಮೊದಲು ನೀನು ಅದನ್ನು ಮಾಡಿದೆ. ಈಗ ಎದೋಮಿನ ಹೆಣ್ಣುಮಕ್ಕಳು (ಪಟ್ಟಣಗಳು) ಮತ್ತು ಆಕೆಯ ನೆರೆಯವರು ನಿನ್ನನ್ನು ಗೇಲಿ ಮಾಡುವರು. ಫಿಲಿಷ್ಟಿಯರ ಹೆಣ್ಣುಮಕ್ಕಳು ಸಹ ನಿನ್ನನ್ನು ಗೇಲಿ ಮಾಡುವರು. ನಿನ್ನ ಸುತ್ತಲೂ ಇರುವವರು ನಿನ್ನನ್ನು ಕಡೆಗಾಣಿಸುವರು. 58 ಈಗ ನೀನು ಮಾಡಿದ ಭಯಂಕರ ಕೃತ್ಯಗಳ ಸಲುವಾಗಿ ಶಿಕ್ಷೆ ಅನುಭವಿಸಲೇಬೇಕು.” ಇದು ಒಡೆಯನಾದ ಯೆಹೋವನ ನುಡಿ.
ದೇವರ ನಂಬಿಗಸ್ತಿಕೆಯು ಅಚಲ
59 ಈ ಮಾತುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು. “ನೀನು ಮಾಡಿರುವದನ್ನು ನಾನೂ ನಿನಗೆ ಮಾಡುವೆನು. ನೀನು ನಿನ್ನ ಮದುವೆ ಒಡಂಬಡಿಕೆಯನ್ನು ಮುರಿದುಬಿಟ್ಟೆ. ನಮ್ಮ ಒಡಂಬಡಿಕೆಗೆ ನೀನು ಮಹತ್ವ ಕೊಡಲಿಲ್ಲ. 60 ಆದರೆ ನೀನು ಎಳೆಯವಳಾಗಿದ್ದಾಗ ನಿನ್ನೊಡನೆ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ. ನಾನು ಅದನ್ನು ಶಾಶ್ವತವಾದ ಒಡಂಬಡಿಕೆಯನ್ನಾಗಿ ಮಾಡುವೆನು. 61 ನಿನ್ನ ಅಕ್ಕತಂಗಿಯಂದಿರನ್ನು ನಾನು ನಿನ್ನ ಬಳಿಗೆ ತಂದು ಅವರನ್ನು ನಿನ್ನ ಮಕ್ಕಳನ್ನಾಗಿ ಮಾಡುವೆನು. ಅದು ನಮ್ಮ ಒಡಂಬಡಿಕೆಯಲ್ಲಿಲ್ಲದಿದ್ದರೂ ನಾನು ಅದನ್ನು ನಿನಗಾಗಿ ಮಾಡುವೆನು. ಆಗ ನೀನು ಮಾಡಿದ ಭಯಂಕರ ಸಂಗತಿಗಳನ್ನು ಜ್ಞಾಪಕಕ್ಕೆ ತಂದು ನೀನು ನಾಚಿಕೊಳ್ಳುವಿ. 62 ನಾನು ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವೆನು. ಮತ್ತು ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ. 63 ಹೀಗಿರಲು, ನಿನ್ನ ಕಾರ್ಯಗಳನ್ನೆಲ್ಲಾ ನಾನು ಕ್ಷಮಿಸುವಾಗ, ನೀನು ಅವುಗಳನ್ನು ಜ್ಞಾಪಿಸಿಕೊಂಡು ನಾಚಿಕೆಪಡುವೆ. ಅಹಂಕಾರದಿಂದ ಮಾತನಾಡಲು ಮತ್ತೊಮ್ಮೆ ಬಾಯಿ ತೆರೆಯಲಾಗದಂತೆ ನೀನು ಬಹಳವಾಗಿ ಅವಮಾನಿತಳಾಗುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
ರಚನೆಗಾರ: ದಾವೀದ.
58 ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ?
ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
2 ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ;
ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
3 ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು.
ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
4 ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ.[a]
ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
5 ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು.
ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.
6 ಯೆಹೋವನೇ, ಅವರು ಸಿಂಹಗಳಂತಿದ್ದಾರೆ.
ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
7 ಹರಿದು ಕಾಣದೆಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ.
ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
8 ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ.
ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
9 ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು
ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.
10 ದುಷ್ಟರಿಗಾಗುವ ಪ್ರತಿದಂಡನೆಯನ್ನು
ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು;
ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.
ಸೌಲನು ದಾವೀದನನ್ನು ಕೊಲ್ಲಲು ಮುತ್ತಿಗೆ ಹಾಕಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
59 ನನ್ನ ದೇವರೇ, ವೈರಿಗಳಿಂದ ನನ್ನನ್ನು ಬಿಡಿಸು.
ನನಗೆ ವಿರೋಧವಾಗಿ ಎದ್ದಿರುವ ಜನರಿಂದ ನನ್ನನ್ನು ಸಂರಕ್ಷಿಸು.
2 ಆ ದುಷ್ಟರಿಂದ ನನ್ನನ್ನು ವಿಮೋಚಿಸು.
ಆ ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
3 ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ.
ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ.
4 ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ.
ಯೆಹೋವನೇ, ಸ್ವತಃ ನೀನೇ ಬಂದು ನೋಡು!
5 ಸೇನಾಧೀಶ್ವರನಾದ ಯೆಹೋವನೇ, ಇಸ್ರೇಲರ ದೇವರೇ, ಎದ್ದೇಳು!
ಅವರನ್ನು ದಂಡಿಸು!
ಆ ದುಷ್ಟ ದ್ರೋಹಿಗಳಿಗೆ ಕರುಣೆಯನ್ನೇ ತೋರಬೇಡ.
6 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
7 ತಮ್ಮ ನಾಲಿಗೆಗಳೇ ಆಯುಧಗಳೆಂಬಂತೆ
ಅಪಮಾನಕರವಾದ ನುಡಿಗಳನ್ನು ಬೊಗಳುತ್ತಾರೆ.
ಯಾರು ಕೇಳಿಸಿಕೊಂಡರೂ ಅವರಿಗೆ ಚಿಂತೆಯಿಲ್ಲ.
8 ಯೆಹೋವನೇ, ಅವರನ್ನು ನೋಡಿ ನಗು.
ಅವರೆಲ್ಲರನ್ನು ಅಪಹಾಸ್ಯ ಮಾಡು.
9 ನನ್ನ ಬಲವೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ದೇವರೇ, ಬೆಟ್ಟಗಳ ಶಿಖರದಲ್ಲಿರುವ ಆಶ್ರಯದುರ್ಗ ನೀನೇ.
10 ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು.
ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
11 ಯೆಹೋವನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಕೊಲ್ಲಬೇಡ, ಇಲ್ಲವಾದರೆ, ನನ್ನ ಜನರು ಮರೆತುಬಿಡಬಹುದು.
ನನ್ನ ಒಡಯನೇ, ಸಂರಕ್ಷಕನೇ, ಅವರನ್ನು ಚದರಿಸಿಬಿಡು; ನಿನ್ನ ಬಲದಿಂದ ಸೋಲಿಸಿಬಿಡು.
12 ಆ ದುಷ್ಟರು ಶಪಿಸುತ್ತಾರೆ, ಸುಳ್ಳಾಡುತ್ತಾರೆ.
ಅವರ ಮಾತುಗಳ ನಿಮಿತ್ತವೇ ಅವರನ್ನು ದಂಡಿಸು.
ಅವರು ತಮ್ಮ ಗರ್ವದಿಂದಲೇ ಸಿಕ್ಕಿಬೀಳಲಿ.
13 ನೀನು ಅವರನ್ನು ಕೋಪದಿಂದ ನಾಶಮಾಡು.
ಅವರನ್ನು ಸಂಪೂರ್ಣವಾಗಿ ನಾಶಮಾಡು.
ಯಾಕೋಬನ ವಂಶದವರನ್ನು ಆಳುತ್ತಿರುವವನು ನೀನೇ ಎಂದು ಆಗ ಲೋಕದವರಿಗೆಲ್ಲಾ ಗೊತ್ತಾಗುವುದು.
14 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
15 ಅವರು ಊಟಕ್ಕಾಗಿ ಹುಡುಕಾಡಿದರೂ ಸಿಕ್ಕುವುದಿಲ್ಲ;
ಮಲಗಲು ಸ್ಥಳವೂ ಸಿಕ್ಕುವುದಿಲ್ಲ.
16 ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ;
ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು;
ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.
17 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆ.
ಯಾಕೆಂದರೆ ನೀನೇ ನನಗೆ ಆಶ್ರಯದುರ್ಗವಾಗಿರುವೆ.
ನನ್ನನ್ನು ಪ್ರೀತಿಸುವ ದೇವರು ನೀನೇ!
Kannada Holy Bible: Easy-to-Read Version. All rights reserved. © 1997 Bible League International