M’Cheyne Bible Reading Plan
ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತಂದರು
6 ಇಸ್ರೇಲಿನಲ್ಲಿ ಆರಿಸಲ್ಪಟ್ಟ ಮೂವತ್ತು ಸಾವಿರ ಮಂದಿಯನ್ನು ದಾವೀದನು ಮತ್ತೆ ಒಟ್ಟುಗೂಡಿಸಿದನು. 2 ಆಗ ದಾವೀದನು ತನ್ನ ಜನರೊಂದಿಗೆ ಯೆಹೂದದ ಬಾಳಾ ಎಂಬಲ್ಲಿಗೆ ಹೋದನು. ಯೆಹೂದದ ಬಾಳಾ ಎಂಬ ಸ್ಥಳದಲ್ಲಿದ್ದ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದನು. ಯೆಹೋವನನ್ನು ಆರಾಧಿಸುವುದಕ್ಕಾಗಿ ಜನರು ಪವಿತ್ರ ಪೆಟ್ಟಿಗೆಯ ಬಳಿ ಹೋಗುತ್ತಿದ್ದರು. ಪವಿತ್ರ ಪೆಟ್ಟಿಗೆಯು ಯೆಹೋವನ ಪೀಠದಂತಿತ್ತು. ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಯೆಹೋವನು ರಾಜನಂತೆ ದೂತರ ಮೇಲೆ ಆಸೀನನಾಗಿದ್ದನು. 3 ದಾವೀದನ ಜನರು ಪವಿತ್ರ ಪೆಟ್ಟಿಗೆಯನ್ನು ಹೊಸಬಂಡಿಯ ಮೇಲಿಟ್ಟರು. ಅವರು ಬೆಟ್ಟದ ಮೇಲಿರುವ ಅಬೀನಾದಾಬನ ಮನೆಯಿಂದ ದೇವರ ಪವಿತ್ರ ಪೆಟ್ಟಿಗೆಯನ್ನು ತಂದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ಹೊಡೆದರು.
4 ಬೆಟ್ಟದ ಮೇಲಿನ ಅಬೀನಾದಾಬನ ಮನೆಯಿಂದ ಹೊಸ ಬಂಡಿಯನ್ನು ತರುವಾಗ ಉಜ್ಜನೂ ಅಹಿಯೋವನೂ ಮುನ್ನಡೆಸಿದರು. ಈ ಬಂಡಿಯ ಮೇಲೆ ದೇವರ ಪವಿತ್ರ ಪೆಟ್ಟಿಗೆಯಿತ್ತು. ಉಜ್ಜನೂ ಬಂಡಿಯ ಮೇಲಿದ್ದನು. ಪವಿತ್ರ ಪೆಟ್ಟಿಗೆಯ ಮುಂದೆ ಅಹಿಯೋವನು ನಡೆಯುತ್ತಿದ್ದನು. 5 ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು. 6 ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು. 7 ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು.[a] ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು. 8 ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ.
9 ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು 10 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್‌ನ ಓಬೇದೆದೋಮನ ಮನೆಯಲ್ಲಿಟ್ಟನು. 11 ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು.
12 ತರುವಾಯ ಜನರು ದಾವೀದನಿಗೆ, “ದೇವರ ಪವಿತ್ರ ಪೆಟ್ಟಿಗೆಯು ಓಬೇದೆದೋಮನ ಮನೆಯಲ್ಲಿರುವುದರಿಂದ ಯೆಹೋವನು ಅವನ ಕುಟುಂಬವನ್ನೂ ಅವನ ಸಮಸ್ತವನ್ನೂ ಆಶೀರ್ವದಿಸಿದನು.” ಎಂದು ಹೇಳಿದರು. ಆದ್ದರಿಂದ ದಾವೀದನು ಹೋಗಿ ಓಬೇದೆದೋಮನ ಮನೆಯಿಂದ ಪವಿತ್ರ ಪೆಟ್ಟಿಗೆಯನ್ನು ಸಂತೋಷದಿಂದ ತಂದನು. 13 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತವರು ಆರು ಹೆಜ್ಜೆಗಳನ್ನು ನಡೆದು ನಿಂತಾಗ ದಾವೀದನು ಒಂದು ಹೋರಿಯನ್ನು ಮತ್ತು ಕೊಬ್ಬಿದ ಕರುವನ್ನು ಯಜ್ಞವಾಗಿ ಅರ್ಪಿಸಿದನು. 14 ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ತನ್ನ ಶಕ್ತಿಮೀರಿ ನರ್ತಿಸಿದನು. ಅವನು ಏಫೋದನ್ನು ಧರಿಸಿದ್ದನು.
15 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಗರಕ್ಕೆ ತರುವಾಗ ದಾವೀದನು ಮತ್ತು ಇಸ್ರೇಲರೆಲ್ಲರು ಸಂತೋಷದಿಂದ ಆರ್ಭಟಿಸಿದರು; ತುತ್ತೂರಿಯನ್ನು ಊದಿದರು. 16 ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹೊರಗೆ ನೋಡುತ್ತಿದ್ದಳು. ಅದೇ ಸಮಯದಲ್ಲಿ ಯೆಹೋವನ ಪವಿತ್ರ ಪೆಟ್ಟಿಗೆಯು ನಗರಕ್ಕೆ ಬಂದಿತು. ದಾವೀದನು ಯೆಹೋವನ ಸನ್ನಿಧಿಯಲ್ಲಿ ಜಿಗಿಯುತ್ತಾ ಕುಣಿದಾಡುತ್ತಿದ್ದನು. ಮೀಕಲಳು ಇದನ್ನು ಕಂಡು ದಾವೀದನನ್ನು ತನ್ನ ಹೃದಯದಲ್ಲಿ ತಿರಸ್ಕರಿಸಿದಳು; ಅವನು ತನ್ನನ್ನು ತಾನೇ ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆಲೋಚಿಸಿಕೊಂಡಳು.
17 ದಾವೀದನು ಪವಿತ್ರ ಪೆಟ್ಟಿಗೆಗಾಗಿ ಒಂದು ಗುಡಾರವನ್ನು ನಿರ್ಮಿಸಿದನು. ಇಸ್ರೇಲರು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಗುಡಾರದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಇಟ್ಟರು. ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.
18 ಬಳಿಕ, ದಾವೀದನು ಸರ್ವಶಕ್ತನಾದ ಯೆಹೋವನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. 19 ದಾವೀದನು ಇಸ್ರೇಲಿನ ಜನರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ತುಂಡು ರೊಟ್ಟಿಯನ್ನೂ ಒಣಗಿದ ದ್ರಾಕ್ಷೆಹಣ್ಣಿನ ಉಂಡೆಯನ್ನೂ ಒಂದು ತುಂಡು ಮಾಂಸವನ್ನೂ ಕೊಟ್ಟನು. ಆಗ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
ಮೀಕಲಳು ದಾವೀದನನ್ನು ತಿರಸ್ಕರಿಸಿದಳು
20 ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸಲು ಹೋದನು. ಆದರೆ ಸೌಲನ ಮಗಳಾದ ಮೀಕಲಳು ಅವನನ್ನು ಭೇಟಿಮಾಡಲು ಹೊರಗೆ ಬಂದು, “ಇಸ್ರೇಲರ ರಾಜನು ಈ ದಿನ ತನ್ನ ಗೌರವವನ್ನು ಕಾಪಾಡಿಕೊಳ್ಳಲಿಲ್ಲ! ನಾಚಿಕೆಯಿಲ್ಲದೆ ತನ್ನೆಲ್ಲ ಬಟ್ಟೆಗಳನ್ನೂ ತೆಗೆದುಹಾಕುವ ಮೂರ್ಖನಂತೆ, ನೀನು ನಿನ್ನ ಸೇವಕರ ಮತ್ತು ದಾಸಿಯರ ಮುಂದೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದು ಹಾಕಿದೆಯಲ್ಲ”[b] ಎಂದಳು.
21 ಆಗ ದಾವೀದನು ಮೀಕಲಳಿಗೆ, “ಯೆಹೋವನು ನಿನ್ನ ತಂದೆಯನ್ನಾಗಲಿ ಅವರ ಕುಟುಂಬದ ಇತರ ಯಾರನ್ನೇ ಆಗಲಿ ಆರಿಸಿಕೊಳ್ಳದೆ ನನ್ನನ್ನೇ ಇಸ್ರೇಲರ ನಾಯಕನನ್ನಾಗಿ ಆರಿಸಿಕೊಂಡಿದ್ದಾನೆ. ಆದ್ದರಿಂದಲೇ ನಾನು ಯೆಹೋವನ ಸನ್ನಿಧಿಯಲ್ಲಿ ಕುಣಿದಾಡಿದೆನು. 22 ಆತನ ಮುಂದೆ ಇನ್ನೂ ಹೀನವಾಗಿ ಕಾಣಿಸಿಕೊಳ್ಳುವುದಕ್ಕೂ ನನ್ನನ್ನು ನಾನು ಕಡೆಗಣಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ. ಬಹುಶಃ ನೀನು ನನ್ನನ್ನು ಗೌರವಿಸದಿರಬಹುದು, ಆದರೆ ನೀನು ಯಾವ ದಾಸಿಯರ ಬಗ್ಗೆ ಮಾತನಾಡಿದೆಯೋ ಅವರು ನನ್ನನ್ನು ಗೌರವಿಸುತ್ತಾರೆ” ಎಂದು ಹೇಳಿದನು.
23 ಸೌಲನ ಮಗಳಾದ ಮೀಕಲಳು ಬಂಜೆಯಾಗಿ ಉಳಿದಳು. ಅವಳು ಮಕ್ಕಳೇ ಇಲ್ಲದೆ ಸತ್ತುಹೋದಳು.
ಇತರ ವಿಶ್ವಾಸಿಗಳಿಗಾಗಿ ಹಣ ಸಂಗ್ರಹಣೆ
16 ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಈಗ ನಾನು ಬರೆಯುತ್ತೇನೆ. ನಾನು ಗಲಾತ್ಯ ಸಭೆಗಳಿಗೆ ಹೇಳಿಕೊಟ್ಟಂತೆ ನೀವೂ ಮಾಡಿರಿ. 2 ನಿಮ್ಮಲ್ಲಿ ಪ್ರತಿಯೊಬ್ಬನು ತನಗಾದ ಅಭಿವೃದ್ಧಿಗೆ ತಕ್ಕಂತೆ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಪ್ರತಿವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ, ವಿಶೇಷವಾದ ಸ್ಥಳವೊಂದರಲ್ಲಿ ಇಟ್ಟಿರಬೇಕು. ಆಗ ನಾನು ನಿಮ್ಮಲ್ಲಿಗೆ ಬಂದ ನಂತರ ಹಣವನ್ನು ಸಂಗ್ರಹಿಸುವ ಅವಶ್ಯಕತೆಯಿರುವುದಿಲ್ಲ. 3 ನಾನು ಬಂದಾಗ, ನಿಮ್ಮ ಕೊಡುಗೆಯನ್ನು ಕೆಲವರ ಮೂಲಕ ಜೆರುಸಲೇಮಿಗೆ ಕಳುಹಿಸುವೆನು. ನೀವೆಲ್ಲರೂ ಯಾರನ್ನು ಇಷ್ಟಪಡುತ್ತೀರೋ ಅವರಿಗೆ ನಾನು ಪರಿಚಯದ ಪತ್ರಗಳನ್ನು ಕೊಟ್ಟು ಕಳುಹಿಸುವೆನು. 4 ಒಂದುವೇಳೆ, ನಾನು ಸಹ ಹೋಗುವುದು ಒಳ್ಳೆಯದೆನಿಸಿದರೆ, ಆ ಜನರು ನನ್ನೊಂದಿಗೆ ಬರಲಿ.
ಪೌಲನ ಯೋಜನೆಗಳು
5 ನಾನು ಮಕೆದೋನಿಯದ ಮೂಲಕ ಹೋಗಬೇಕೆಂದಿರುವೆ. ಆದ್ದರಿಂದ ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ನಿಮ್ಮಲ್ಲಿಗೆ ಬರುವೆನು. 6 ನಾನು ನಿಮ್ಮೊಂದಿಗೆ ಸ್ವಲ್ಪಕಾಲ ಇಳಿದುಕೊಳ್ಳಬಹುದು. ಒಂದುವೇಳೆ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಬಳಿಕ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು. 7 ಈಗ ನಿಮ್ಮ ಬಳಿಗೆ ಬರಲು ನನಗೆ ಇಷ್ಟವಿಲ್ಲ. ಏಕೆಂದರೆ ನಾನು ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವುದರಿಂದ ನಿಮ್ಮೊಂದಿಗೆ ಬಹಳ ಕಾಲವಿರಲು ಸಾಧ್ಯವಿಲ್ಲ. ಪ್ರಭುವು ಅವಕಾಶಕೊಡುವುದಾದರೆ, ನಾನು ನಿಮ್ಮೊಂದಿಗೆ ದೀರ್ಘಕಾಲ ತಂಗುವ ನಿರೀಕ್ಷೆಯಿಂದಿದ್ದೇನೆ. 8 ಆದರೆ ನಾನು ಪಂಚಾಶತ್ತಮ ಹಬ್ಬದವರೆಗೆ ಎಫೆಸದಲ್ಲಿ ಇರುತ್ತೇನೆ. 9 ಯಾಕೆಂದರೆ ಮಹತ್ವವಾದ ಮತ್ತು ಫಲಭರಿತವಾದ ಸೇವೆಯನ್ನು ಮಾಡಲು ಇಲ್ಲಿ ನನಗೆ ಒಳ್ಳೆಯ ಅವಕಾಶಗಳಿವೆ. ಆದರೂ ಇಲ್ಲಿ ನನಗೆ ಅನೇಕ ವಿರೋಧಿಗಳಿದ್ದಾರೆ.
10 ತಿಮೊಥೆಯನು ನಿಮ್ಮ ಬಳಿಗೆ ಬರಬಹುದು. ಅವನು ನಿಮ್ಮೊಂದಿಗಿರುವಾಗ ಅವನಿಗೆ ಚಿಂತೆಯಾಗದಂತೆ ನೋಡಿಕೊಳ್ಳಿರಿ. ನಾನು ಪ್ರಭುವಿಗೋಸ್ಕರ ಕೆಲಸ ಮಾಡುತ್ತಿರುವಂತೆ ಅವನು ಸಹ ಮಾಡುತ್ತಿದ್ದಾನೆ. 11 ಆದ್ದರಿಂದ ನಿಮ್ಮಲ್ಲಿ ಯಾರೂ ಅವನನ್ನು ತಿರಸ್ಕರಿಸಬಾರದು. ಅವನನ್ನು ನನ್ನ ಬಳಿಗೆ ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ನಾನು ಎದುರು ನೋಡುತ್ತಿದ್ದೇನೆ.
12 ನಮ್ಮ ಸಹೋದರನಾದ ಅಪೊಲ್ಲೋಸನ ಬಗ್ಗೆ ನಾನು ಹೇಳುವುದೇನೆಂದರೆ, ಇತರ ಸಹೋದರರೊಂದಿಗೆ ನಿಮ್ಮನ್ನು ಸಂದರ್ಶಿಸಲು ನಾನು ಅವನನ್ನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ಆದರೆ ಈಗ ಬರುವುದಕ್ಕೆ ಅವನಿಗೆ ನಿಶ್ಚಯವಾಗಿ ಇಷ್ಟವಿರಲಿಲ್ಲ. ಆದರೆ ಅವಕಾಶ ಸಿಕ್ಕಿದಾಗ ಅವನು ನಿಮ್ಮ ಬಳಿಗೆ ಬರುವನು.
ಅಂತಿಮ ಮಾತುಗಳು
13 ಜಾಗರೂಕರಾಗಿರಿ, ನಂಬಿಕೆಯಲ್ಲಿ ದೃಢವಾಗಿರಿ. ಧೈರ್ಯದಿಂದಿರಿ ಮತ್ತು ಬಲಿಷ್ಠರಾಗಿರಿ. 14 ಪ್ರತಿಯೊಂದನ್ನು ಪ್ರೀತಿಯಿಂದ ಮಾಡಿರಿ.
15 ಅಖಾಯದಲ್ಲಿ ಪ್ರಥಮ ವಿಶ್ವಾಸಿಗಳಾದ ಸ್ತೆಫನನನ್ನು ಮತ್ತು ಅವನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ದೇವರ ಸೇವೆಗಾಗಿ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, 16 ಈ ರೀತಿಯ ಮುಂದಾಳುಗಳನ್ನು ಮತ್ತು ಅವರೊಂದಿಗೆ ಕೆಲಸ ಮಾಡುವವರನ್ನು ಹಾಗೂ ಸೇವೆ ಮಾಡುವವರನ್ನು ಹಿಂಬಾಲಿಸಿರಿ.
17 ಸ್ತೆಫನನು, ಪೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. 18 ಅವರು ನನ್ನ ಆತ್ಮಕ್ಕೂ ನಿಮ್ಮ ಆತ್ಮಗಳಿಗೂ ವಿಶ್ರಾಂತಿಯನ್ನು ಕೊಟ್ಟಿದ್ದಾರೆ. ಇಂಥ ಜನರ ಮೌಲ್ಯವನ್ನು ನೀವು ಗುರುತಿಸಬೇಕು.
19 ಏಷ್ಯಾದ ಸಭೆಗಳವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ಅಕ್ವಿಲನು ಮತ್ತು ಪ್ರಿಸ್ಕಿಲ್ಲಳು ಪ್ರಭುವಿನ ಹೆಸರಿನಲ್ಲಿ ನಿಮಗೆ ಬಹಳ ವಂದನೆಗಳನ್ನು ತಿಳಿಸಿದ್ದಾರೆ. ಅವರ ಮನೆಯಲ್ಲಿ ಸೇರಿಬರುವ ಸಭೆಯವರು ಸಹ ನಿಮಗೆ ವಂದನೆ ತಿಳಿಸಿದ್ದಾರೆ. 20 ಇಲ್ಲಿರುವ ಎಲ್ಲಾ ಸಹೋದರ ಸಹೋದರಿಯರು ನಿಮಗೆ ವಂದನೆ ತಿಳಿಸಿದ್ದಾರೆ. ನೀವು ಒಬ್ಬರನ್ನೊಬ್ಬರು ಭೇಟಿಯಾಗುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ.
21 ಪೌಲನಾದ ನಾನು ನನ್ನ ಕೈಯಾರೆ ಈ ವಂದನೆಗಳನ್ನು ಬರೆಯುತ್ತಿದ್ದೇನೆ.
22 ಯಾವನಾದರೂ ಪ್ರಭುವನ್ನು ಪ್ರೀತಿಸದಿದ್ದರೆ, ಅವನು ಜೀವದಿಂದ ಬೇರ್ಪಟ್ಟು ನಿತ್ಯನಾಶನ ಹೊಂದಲಿ!
ಪ್ರಭುವೇ ಬಾ!
23 ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
24 ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿಯಿರಲಿ!
ವಿಗ್ರಹಾರಾಧಕರ ವಿರುದ್ಧ ಎಚ್ಚರಿಕೆ
14 ಇಸ್ರೇಲರ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಲು ಕುಳಿತುಕೊಂಡರು. 2 ಆಗ ಯೆಹೋವನ ವಾಕ್ಯವು ನನಗೆ ಬಂತು. ಆತನು ನನಗೆ ಹೇಳಿದ್ದೇನೆಂದರೆ, 3 “ನರಪುತ್ರನೇ, ಈ ಜನರು ತಮ್ಮ ವಿಗ್ರಹಗಳಿಗೆ ಪ್ರತಿಷ್ಠಿತರಾಗಿದ್ದಾರೆ ಮತ್ತು ಪಾಪಕ್ಕೆ ಬೀಳಲು ತಮಗೆ ತಾವೇ ಅವಕಾಶಮಾಡಿಕೊಡುತ್ತಾರೆ. ಸಹಾಯಕ್ಕಾಗಿ ನನ್ನನ್ನು ಕೇಳಿಕೊಳ್ಳಲು ಅವರಿಗೆ ಅವಕಾಶ ಕೊಡಬೇಕೇ? ಇಲ್ಲ. 4 ಆದರೆ ನಾನು ಅವರಿಗೆ ಉತ್ತರಕೊಡುವೆನು. ಅವರಿಗೆ ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಇಸ್ರೇಲರಲ್ಲಿ ಯಾರಾದರೂ ಪ್ರವಾದಿಯ ಬಳಿಗೆ ಬಂದು ನನ್ನ ಸಲಹೆಯನ್ನು ಕೇಳಿದರೆ, ನಾನೇ ಆ ಮನುಷ್ಯನಿಗೆ ಉತ್ತರ ಕೊಡುವೆನು. ಅವನ ಬಳಿಯಲ್ಲಿ ಹೊಲಸು ವಿಗ್ರಹಗಳಿದ್ದರೂ, ಅವನನ್ನು ಪಾಪದಲ್ಲಿ ಬೀಳುವಂತೆ ಮಾಡಿದ ವಸ್ತುಗಳನ್ನು ಅವನು ಇಟ್ಟುಕೊಂಡಿದ್ದರೂ, ಅವನು ಆ ವಿಗ್ರಹಗಳನ್ನು ಇನ್ನೂ ಪೂಜೆ ಮಾಡುತ್ತಿದ್ದರೂ ನಾನು ಅವನೊಂದಿಗೆ ಮಾತನಾಡುವೆನು. ಅವನ ವಿಗ್ರಹಾರಾಧನೆಗೆ ತಕ್ಕ ಉತ್ತರವನ್ನೇ ಕೊಡುವೆನು. 5 ಯಾಕೆಂದರೆ ನಾನು ಅವರ ಹೃದಯಗಳನ್ನು ಪರಿವರ್ತಿಸಬೇಕು. ಅವರು ನನ್ನನ್ನು ತೊರೆದು ಹೊಲಸು ವಿಗ್ರಹಗಳನ್ನು ಪೂಜಿಸಿದರೂ ನಾನು ಅವರನ್ನು ಪ್ರೀತಿಸುತ್ತೇನೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.’ ಇದೇ ನನ್ನ ಉದ್ದೇಶ
6 “ಆದ್ದರಿಂದ ಇಸ್ರೇಲ್ ಜನರಿಗೆ ಈ ವಿಷಯವನ್ನು ತಿಳಿಸು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಿಮ್ಮ ಹೊಲಸು ವಿಗ್ರಹಗಳನ್ನು ತೊರೆದುಬಿಟ್ಟು ನನ್ನ ಬಳಿಗೆ ಹಿಂತಿರುಗಿರಿ. ಆ ಭಯಂಕರ ಸುಳ್ಳು ದೇವರಿಂದ ತೊಲಗಿರಿ. 7 ಯೆಹೋವನಾದ ನಾನೇ ಸ್ವತಃ ಪ್ರತಿಯೊಬ್ಬನಿಗೂ ಉತ್ತರಿಸುವೆನು ಅಂದರೆ ಅವನು ತನ್ನನ್ನು ಪಾಪಕ್ಕೆ ಬೀಳಿಸುವ ವಿಗ್ರಹಗಳನ್ನು ಹೊಂದಿದ್ದರೂ ಆ ವಿಗ್ರಹಗಳನ್ನು ಪೂಜಿಸುತ್ತಿದ್ದರೂ ಮತ್ತು ನನ್ನಿಂದ ತನ್ನನ್ನು ಬೇರ್ಪಡಿಸಿಕೊಳ್ಳುತ್ತಿದ್ದರೂ ನನ್ನ ಉಪದೇಶಕ್ಕಾಗಿ ನನ್ನ ಬಳಿಗೆ ಬಂದರೆ ಅವನು ಇಸ್ರೇಲನಾಗಿದ್ದರೂ ಇಸ್ರೇಲಿನಲ್ಲಿ ವಾಸವಾಗಿರುವ ಪರದೇಶಿಯಾಗಿದ್ದರೂ ನಾನು ಶಾಪವೆಂಬ ಉತ್ತರ ಕೊಡುವೆನು. 8 ನಾನು ಅವನ ವಿರುದ್ಧವಾಗಿ ತಿರುಗಿ ಅವನನ್ನು ನಾಶಮಾಡುವೆನು. ಅವನು ಇಸ್ರೇಲರಿಗೆ ನಿದರ್ಶನವಾಗಿರಬೇಕು, ಜನರು ಅವನನ್ನು ನೋಡಿ ನಗಾಡುವರು. ನಾನು ಅವನನ್ನು ನನ್ನ ಜನರ ಮಧ್ಯದಿಂದ ತೆಗೆದು ಬಿಡುವೆನು. ಆಗ ನೀವು ನಾನೇ ಯೆಹೋವನೆಂದು ತಿಳಿಯುವಿರಿ. 9 ಆದರೆ ಒಬ್ಬ ಪ್ರವಾದಿಯು ಅವನಿಗೆ ತನ್ನದೇ ಆದ ಉತ್ತರವನ್ನು ಕೊಡುವಷ್ಟು ಮೂರ್ಖನಾಗಿದ್ದರೆ, ಆಗ ನಾನು, ಅವನು ಎಂಥಾ ಮೂರ್ಖನಾಗಿದ್ದಾನೆಂದು ತೋರಿಸುವೆನು. ಅವನ ಮೇಲೆ ನನ್ನ ಸಾಮರ್ಥ್ಯವನ್ನು ಪ್ರಯೋಗಿಸುವೆನು. ಅವನನ್ನು ನಾಶಮಾಡಿ ನನ್ನ ಜನರ ಮಧ್ಯದಿಂದ ಅವನನ್ನು ತೆಗೆದುಬಿಡುವೆನು. 10 ಹೀಗೆ, ಸಲಹೆ ಕೇಳಲು ಬಂದ ಮನುಷ್ಯನೂ ಅವನಿಗೆ ಉತ್ತರಕೊಟ್ಟ ಪ್ರವಾದಿಯೂ ಒಂದೇ ಶಿಕ್ಷೆಯನ್ನು ಹೊಂದುವರು. 11 ಆಗ ಇಸ್ರೇಲಿನ ಜನರು ಇನ್ನೆಂದಿಗೂ ನನ್ನ ನಾಯಕತ್ವವನ್ನು ತೊರೆದು ಅಲೆದಾಡುವದಿಲ್ಲ. ಹೀಗೆ, ಅವರು ತಮ್ಮ ದಂಗೆಕೋರತನದ ಮಾರ್ಗಗಳಿಂದ ಇನ್ನೆಂದಿಗೂ ತಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುವುದಿಲ್ಲ. ಆಗ ಅವರು ನಿಜವಾಗಿಯೂ ನನ್ನ ಜನರಾಗಿರುವರು ಮತ್ತು ನಾನು ಅವರ ದೇವರಾಗಿರುವೆನು.’” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
ಜೆರುಸಲೇಮ್ ದಂಡಿಸಲ್ಪಡುವುದು
12 ಆಗ ಯೆಹೋವನ ನುಡಿ ನನಗೆ ಬಂತು. ಆತನು ಹೀಗೆ ಹೇಳಿದನು, 13 “ನರಪುತ್ರನೇ, ನನಗೆ ಅಪನಂಬಿಗಸ್ತರಾಗಿದ್ದು ನನ್ನ ವಿರುದ್ಧ ಪಾಪಮಾಡುವ ಯಾವ ದೇಶವನ್ನಾದರೂ ನಾನು ದಂಡಿಸುತ್ತೇನೆ. ನಾನು ಅವರ ಆಹಾರ ಸರಬರಾಜನ್ನು ನಿಲ್ಲಿಸುತ್ತೇನೆ. ನಾನು ಕ್ಷಾಮವನ್ನು ಕಳುಹಿಸಿ ಅವರ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆ. 14 ಆ ದೇಶದಲ್ಲಿ ನೋಹ, ದಾನಿಯೇಲ, ಯೋಬ ಜೀವಿಸಿದ್ದರೂ ಆ ಮೂವರು ತಮ್ಮ ಸತ್ಕಾರ್ಯಗಳಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ಇಡೀ ದೇಶವನ್ನು ರಕ್ಷಿಸಲಾಗುತ್ತಿರಲಿಲ್ಲ.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
15 ದೇವರು ಹೇಳಿದ್ದೇನೆಂದರೆ: “ಒಂದುವೇಳೆ, ನಾನು ಕ್ರೂರಪ್ರಾಣಿಗಳನ್ನು ದೇಶದೊಳಗೆ ಕಳುಹಿಸಿ ಜನರನ್ನು ಕೊಂದರೆ, ಅವುಗಳ ದೆಸೆಯಿಂದ ಯಾವನೂ ದೇಶದಲ್ಲಿ ಪ್ರಯಾಣಮಾಡಲಾಗುತ್ತಿರಲಿಲ್ಲ. 16 ನನ್ನ ಜೀವದಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ದೇಶವು ನಿರ್ಜನವಾಗುತ್ತಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
17 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ಅವರ ವಿರುದ್ಧ ಹೋರಾಡಲು ನಾನು ಶತ್ರುಸೈನ್ಯವೊಂದನ್ನು ಕಳುಹಿಸಿದರೆ, ಎಲ್ಲಾ ಜನರು ಮತ್ತು ಎಲ್ಲಾ ಪ್ರಾಣಿಗಳು ನಾಶವಾಗುತ್ತಿದ್ದವು. 18 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
19 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ನಾನು ದೇಶದ ಮೇಲೆ ರೋಗಗಳನ್ನು ಬರಮಾಡಿದರೆ, ಅಥವಾ ನನ್ನ ಕೋಪವನ್ನು ಸುರಿದು ಜನರನ್ನು ಕೊಂದುಹಾಕಿದರೆ ಮತ್ತು ಪ್ರಾಣಿಗಳನ್ನು ನಾಶಮಾಡಿದರೆ, 20 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
21 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಭಯಂಕರವಾದ ನಾಲ್ಕು ದಂಡನೆಗಳನ್ನು ನಾನು ಜೆರುಸಲೇಮ್ ಪಟ್ಟಣದ ಮೇಲೆ ಕಳುಹಿಸುವೆನು. ಆದ್ದರಿಂದ ಜೆರುಸಲೇಮಿಗೆ ಇನ್ನೂ ಎಷ್ಟು ಹೆಚ್ಚಾಗಿ ಕಷ್ಟಕರವಾಗಬಹುದೆಂದು ಯೋಚಿಸಿರಿ. ನಾನು ಆ ನಗರದ ವಿರುದ್ಧವಾಗಿ ಶತ್ರು ಸೈನಿಕರನ್ನು, ಹಸಿವೆ, ರೋಗ ಮತ್ತು ಕ್ರೂರಜಂತುಗಳನ್ನು ಕಳುಹಿಸುತ್ತೇನೆ. ದೇಶದಲ್ಲಿರುವ ಎಲ್ಲಾ ಜನರನ್ನೂ ಪಶುಗಳನ್ನೂ ನಿರ್ಮೂಲ ಮಾಡುವೆನು. 22 ಆದರೆ ಆಶ್ಚರ್ಯಕರವಾಗಿ, ಕೆಲವರು ಅದರಲ್ಲಿ ಉಳಿದುಕೊಳ್ಳುವರು, ಪುತ್ರಪುತ್ರಿಯರನ್ನು ನಿಮ್ಮ ಬಳಿಗೆ ಜೀವಂತವಾಗಿ ತರಲಾಗುವುದು. ಆ ಜನರು ಎಷ್ಟು ದುಷ್ಟರೆಂಬುದನ್ನು ಸ್ವತಃ ನೀವೇ ಅರ್ಥಮಾಡಿಕೊಳ್ಳುವಿರಿ. ನಾನು ಜೆರುಸಲೇಮಿನ ಮೇಲೆ ಬರಮಾಡಿದ ಇಡೀ ಆಪತ್ತಿನ ಬಗ್ಗೆ ನೀವು ಬಹಳವಾಗಿ ನೊಂದುಕೊಳ್ಳುವಿರಿ. 23 ಅವರು ಜೀವಿಸುವ ರೀತಿ, ದುಷ್ಟತನವನ್ನು ನಡಿಸುವ ರೀತಿಯನ್ನು ನೀವು ನೋಡುವಿರಿ. ಆಗ ನಾನು ಯಾಕೆ ಅವರನ್ನು ಶಿಕ್ಷಿಸುತ್ತೇನೆಂದು ನಿಮಗೆ ಗೊತ್ತಾಗುವದು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ರಚನೆಗಾರ: ದಾವೀದ.
55 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು.
ನನ್ನ ವಿಜ್ಞಾಪನೆಗೆ ಕಿವಿಗೊಡು.
2 ನನ್ನ ಮೊರೆಯನ್ನು ಆಲಿಸಿ ಸದುತ್ತರವನ್ನು ದಯಪಾಲಿಸು.
ನಾನು ನಿನ್ನೊಂದಿಗೆ ಮಾತಾಡುವೆನು; ನನಗಾಗಿರುವ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳುವೆನು.
3 ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ಆ ದುಷ್ಟರು ನನ್ನ ಮೇಲೆ ಅಬ್ಬರಿಸಿದರು.
ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು.
ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು.
4 ನನ್ನ ಹೃದಯ ಬಡಿತವು ಮಿತಿಮೀರಿದೆ;
ಮರಣ ಭಯವು ನನ್ನನ್ನು ಆವರಿಸಿಕೊಂಡಿದೆ.
5 ನಾನು ಭಯದಿಂದ ನಡುಗುತ್ತಿದ್ದೇನೆ.
ನಾನು ದಿಗಿಲುಗೊಂಡಿದ್ದೇನೆ.
6 ಆಹಾ, ನನಗೆ ಪಾರಿವಾಳದಂತೆ ರೆಕ್ಕೆಗಳಿದ್ದರೆ,
ನಾನು ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
7 ನಾನು ಅರಣ್ಯದಲ್ಲಿ ಬಹು ದೂರಕ್ಕೆ ಹಾರಿಹೋಗುತ್ತಿದ್ದೆನು.
8 ನಾನು ಓಡಿಹೋಗಿ
ಹಾನಿಕರವಾದ ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೆನು.
9 ನನ್ನ ಒಡೆಯನೇ, ಅವರ ಸುಳ್ಳುಗಳನ್ನು ನಿಲ್ಲಿಸು.
ಈ ಪಟ್ಟಣದಲ್ಲಿ ಹಿಂಸೆಕಲಹಗಳು ಕಾಣುತ್ತಿವೆ.
10 ಹಗಲಿರುಳು, ಈ ನಗರದಲ್ಲೆಲ್ಲಾ ಅಪರಾಧ
ಮತ್ತು ಬಲಾತ್ಕಾರಗಳು ತುಂಬಿಕೊಂಡಿವೆ.
11 ಬೀದಿಗಳಲ್ಲಿ ಅಪರಾಧಗಳು ಅತಿಯಾಗಿವೆ.
ಜನರು ಎಲ್ಲೆಲ್ಲಿಯೂ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ.
12 ನನಗೆ ಅವಮಾನ ಮಾಡುವವನು
ವೈರಿಯಾಗಿದ್ದಿದ್ದರೆ ತಾಳಿಕೊಳ್ಳಬಹುದಿತ್ತು.
ನನ್ನ ಮೇಲೆ ಆಕ್ರಮಣ ಮಾಡುವವರು ನನ್ನ ಶತ್ರುವಾಗಿದ್ದಿದ್ದರೆ
ಅಡಗಿಕೊಳ್ಳಬಹುದಿತ್ತು.
13 ಆದರೆ ನನಗೆ ಕೇಡುಮಾಡುತ್ತಿರುವವನು ನನ್ನ ಸಂಗಡಿಗನಾದ ನೀನೇ;
ನನ್ನ ಸಹೋದ್ಯೋಗಿಯೂ ನನ್ನ ಸ್ನೇಹಿತನೂ ಆದ ನೀನೇ.
14 ನಾವು ಜನಸಮೂಹದ ನಡುವೆ ದೇವಾಲಯಕ್ಕೆ ಹೋಗುವಾಗ,
ಗುಟ್ಟಾದ ವಿಷಯಗಳನ್ನು ಮಾತಾಡುತ್ತಿದ್ದೆವಲ್ಲಾ!
15 ನನ್ನ ಶತ್ರುಗಳಿಗೆ ಮರಣವು ಇದ್ದಕ್ಕಿದ್ದಂತೆ ಬರಲಿ!
ಭೂಮಿಯು ಬಾಯ್ದೆರೆದು ಅವರನ್ನು ಜೀವಂತವಾಗಿ ನುಂಗಿಬಿಡಲಿ!
ಯಾಕೆಂದರೆ ಅವರು ಒಟ್ಟಾಗಿ ಸೇರಿ ಅಂಥಾ ಭಯಂಕರವಾದವುಗಳನ್ನು ಆಲೋಚಿಸುವರು.
16 ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು.
ಯೆಹೋವನು ನನಗೆ ಉತ್ತರ ಕೊಡುವನು.
17 ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು.
ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
18 ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ.
ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
19 ದೇವರು ನನಗೆ ಕಿವಿಗೊಡುವನು.
ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು.
ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ.
ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
20 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು;
ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
21 ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು;
ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು.
ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ
ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.
22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು.
ಆತನು ನಿನ್ನನ್ನು ಉದ್ಧಾರ ಮಾಡುವನು.
ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.
23 ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ.
ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು.
ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.
Kannada Holy Bible: Easy-to-Read Version. All rights reserved. © 1997 Bible League International