Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 2

ಹೆಬ್ರೋನಿಗೆ ದಾವೀದನ ಆಗಮನ

ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು.

“ಹೋಗು” ಎಂಬುದಾಗಿ ಯೆಹೋವನು ಹೇಳಿದನು.

“ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು.

“ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು.

ಆದ್ದರಿಂದ ದಾವೀದನು ಅಲ್ಲಿಗೆ ಹೋದನು. ಅವನ ಇಬ್ಬರು ಹೆಂಡತಿಯರೂ ಅವನ ಜೊತೆಯಲ್ಲಿ ಹೋದರು. ಅವರು ಯಾರೆಂದರೆ: ಇಜ್ರೇಲಿನ ಅಹೀನೋವಮಳು ಮತ್ತು ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳು. ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.

ಯೆಹೂದದ ಜನರು ಬಂದು ದಾವೀದನನ್ನು ಯೆಹೂದದ ರಾಜನನ್ನಾಗಿ ಅಭಿಷೇಕಿಸಿದರು. ಬಳಿಕ ಅವರು ದಾವೀದನಿಗೆ, “ಸೌಲನ ಸಮಾಧಿ ಮಾಡಿದವರು ಯಾಬೇಷ್ ಗಿಲ್ಯಾದಿನವರೇ” ಎಂದು ಹೇಳಿದರು.

ಯಾಬೇಷ್ ಗಿಲ್ಯಾದಿನ ಜನರಿಗೆ ದಾವೀದನು ಸಂದೇಶಕರನ್ನು ಕಳುಹಿಸಿ, “ಸೌಲನ ದೇಹದ ಬೂದಿಯನ್ನು[a] ಸಮಾಧಿಮಾಡುವುದರ ಮೂಲಕ ನೀವು ನಿಮ್ಮ ಒಡೆಯನಾದ ಸೌಲನಿಗೆ ಕರುಣೆ ತೋರಿದ್ದೀರಿ. ಅದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. ಆತನು ನಿಮಗೆ ಕೃಪಾಳುವೂ ನಂಬಿಗಸ್ತನೂ ಆಗಿರಲಿ. ನೀವು ಸೌಲನ ಬೂದಿಯನ್ನು ಸಮಾಧಿಮಾಡಿದ್ದರಿಂದ ನಾನೂ ನಿಮಗೆ ಕರುಣೆ ತೋರಿಸುವೆನು. ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.

ಈಷ್ಬೋಶೆತನು ರಾಜನಾದನು

ಸೌಲನ ಸೈನ್ಯದಲ್ಲಿ ನೇರನ ಮಗನಾದ ಅಬ್ನೇರನು ಸೇನಾಧಿಪತಿಯಾಗಿದ್ದನು. ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನು ಮಹನಯಿಮಿಗೆ ಕರೆದೊಯ್ದನು. ಆ ಸ್ಥಳದಲ್ಲಿ ಅಬ್ನೇರನು ಈಷ್ಬೋಶೆತನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್ ಮತ್ತು ಬೆನ್ಯಾಮೀನ್ ಜನರ ಮೇಲೆಯೂ ಮತ್ತು ಇಸ್ರೇಲಿಗೆಲ್ಲ ರಾಜನನ್ನಾಗಿ ಮಾಡಿದನು.

10 ಈಷ್ಬೋಶೆತನು ಸೌಲನ ಮಗ. ಈಷ್ಬೋಶೆತನು ಇಸ್ರೇಲನ್ನು ಆಳಲು ಆರಂಭಿಸಿದಾಗ ನಲವತ್ತು ವರ್ಷ ವಯಸ್ಸಿನವನಾಗಿದ್ದನು. ಅವನು ಎರಡು ವರ್ಷ ಆಳಿದನು. ಆದರೆ ಯೆಹೂದ ಕುಲದವರು ದಾವೀದನನ್ನು ಹಿಂಬಾಲಿಸಿದರು. 11 ದಾವೀದನು ಯೆಹೂದ ಕುಲದವರಿಗೆ ಹೆಬ್ರೋನಿನಲ್ಲಿ ಏಳು ವರ್ಷ ಆರು ತಿಂಗಳುಗಳ ಕಾಲ ರಾಜನಾಗಿದ್ದನು.

ಈಷ್ಬೋಶೆತನ ಜನರು ಮತ್ತು ದಾವೀದನ ಜನರು ಪರಸ್ಪರ ಹೋರಾಡಿದರು

12 ನೇರನ ಮಗನಾದ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಯನ್ನು ಬಿಟ್ಟು ಗಿಬ್ಯೋನಿಗೆ ಹೋದರು. 13 ಚೆರೂಯಳ ಮಗನಾದ ಯೋವಾಬನು ಮತ್ತು ದಾವೀದನ ಸೈನಿಕರು ಸಹ ಗಿಬ್ಯೋನಿಗೆ ಹೋದರು. ಅವರು ಅಬ್ನೇರನನ್ನು ಮತ್ತು ಈಷ್ಬೋಶೆತನ ಸೇವಕರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಅಬ್ನೇರನ ಗುಂಪಿನವರು ಕೆರೆಯ ಒಂದು ಕಡೆ ಕುಳಿತರು. ಯೋವಾಬನ ಗುಂಪಿನವರು ಕೆರೆಯ ಮತ್ತೊಂದು ಕಡೆ ಕುಳಿತರು.

14 ಅಬ್ನೇರನು ಯೋವಾಬನಿಗೆ, “ಯುವಜನರೆಲ್ಲ ಮೇಲೆದ್ದು, ಇಲ್ಲಿ ಹೋರಾಡಲಿ” ಎಂದು ಹೇಳಿದನು.

ಯೋವಾಬನು “ಆಗಲಿ, ಅವರು ಹೋರಾಡಲಿ” ಎಂದನು.

15 ನಂತರ ಯುವಜನರು ಮೇಲೆದ್ದರು. ಎರಡು ಗುಂಪಿನವರೂ ಹೋರಾಡುವುದಕ್ಕಾಗಿ ತಮ್ಮತಮ್ಮ ಜನರನ್ನು ಲೆಕ್ಕ ಹಾಕಿದರು. ಸೌಲನ ಮಗನಾದ ಈಷ್ಬೋಶೆತನಿಗಾಗಿ ಬೆನ್ಯಾಮೀನ್ ಕುಲದ ಹನ್ನೆರಡು ಜನರನ್ನು ಆರಿಸಲಾಯಿತು. ದಾವೀದನ ಸೇವಕರಲ್ಲಿ ಹನ್ನೆರಡು ಜನರನ್ನು ಆರಿಸಲಾಯಿತು. 16 ಪ್ರತಿಯೊಬ್ಬರೂ ತಮ್ಮ ಎದುರಾಳಿಯ ತಲೆಯನ್ನು ಹಿಡಿದುಕೊಂಡರು ಮತ್ತು ಖಡ್ಗದಿಂದ ಅವರ ಪಕ್ಕೆಗಳಿಗೆ ತಿವಿದರು. ಆದ್ದರಿಂದ ಅವರು ಒಟ್ಟಾಗಿ ಕೆಳಕ್ಕೆ ಬಿದ್ದರು. ಆದಕಾರಣವೇ ಆ ಸ್ಥಳವನ್ನು “ಹರಿತ ಕತ್ತಿಯ ಹೊಲ” ಎಂದು ಕರೆಯುತ್ತಾರೆ. ಈ ಸ್ಥಳವು ಗಿಬ್ಯೋನಿನಲ್ಲಿದೆ. 17 ಆ ದಿನ ಘೋರವಾದ ಯುದ್ಧ ಸಂಭವಿಸಿತು. ದಾವೀದನ ಸೇವಕರು ಅಬ್ನೇರನನ್ನು ಮತ್ತು ಇಸ್ರೇಲರನ್ನು ಸೋಲಿಸಿದರು.

ಅಸಾಹೇಲನನ್ನು ಅಬ್ನೇರನು ಕೊಲ್ಲುವನು

18 ಚೆರೂಯಳಿಗೆ ಯೋವಾಬ್, ಅಬೀಷೈ ಮತ್ತು ಅಸಾಹೇಲ್ ಎಂಬ ಮೂವರು ಮಕ್ಕಳಿದ್ದರು. ಅವರೆಲ್ಲಾ ಅಲ್ಲಿದ್ದರು. ಅಸಾಹೇಲನು ವೇಗದ ಓಟಗಾರ. ಅವನು ಕಾಡಿನ ಜಿಂಕೆಯಂತೆ ವೇಗವಾಗಿ ಓಡಬಲ್ಲವನಾಗಿದ್ದನು. 19 ಅಸಾಹೇಲನು ಯಾವ ಕಡೆಗೂ ತಿರುಗದೆ ನೇರವಾಗಿ ಅಬ್ನೇರನ ಕಡೆಗೆ ಹೋದನು. 20 ಅಬ್ನೇರನು ಹಿಂದಕ್ಕೆ ತಿರುಗಿ, “ನೀನು ಅಸಾಹೇಲನಲ್ಲವೇ?” ಎಂದು ಕೇಳಿದನು.

“ಹೌದು” ಎಂದು ಅಸಾಹೇಲನು ಹೇಳಿದನು.

21 ಆಗ ಅಬ್ನೇರನು ಅವನಿಗೆ, “ನೀನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿ ಒಬ್ಬ ಯುವಕನನ್ನು ಹಿಡಿದುಕೊಂಡು ಅವನ ಬಳಿಯಿರುವ ಆಯುಧವನ್ನು ನಿನಗಾಗಿ ತೆಗೆದುಕೊ” ಎಂದು ಹೇಳಿದನು. ಆದರೆ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲಿಲ್ಲ.

22 ಅಬ್ನೇರನು ಮತ್ತೆ ಅಸಾಹೇಲನಿಗೆ, “ನನ್ನನ್ನು ಅಟ್ಟಿಸಿಕೊಂಡು ಬರಬೇಡ; ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ. ನಾನು ನಿನ್ನನ್ನು ಕೊಂದುಬಿಟ್ಟರೆ, ನಿನ್ನ ಸೋದರನಾದ ಯೋವಾಬನ ಮುಖವನ್ನು ನಾನು ಮತ್ತೆ ನೋಡಲಾಗುವುದಿಲ್ಲ” ಎಂದು ಹೇಳಿದನು.

23 ಆದರೂ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದನು. ಆದ್ದರಿಂದ ಅಬ್ನೇರನು ತನ್ನ ಬರ್ಜಿಯ ಹಿಡಿಕೆಯನ್ನು ಹಿಡಿದುಕೊಂಡು ಅದನ್ನು ಅಸಾಹೇಲನ ಹೊಟ್ಟೆಗೆ ತಿವಿದನು. ಆ ಬರ್ಜಿಯು ಅಸಾಹೇಲನ ಹೊಟ್ಟೆಯೊಳಗೆ ಆಳವಾಗಿ ಚುಚ್ಚಿಕೊಂಡು ಅವನ ಬೆನ್ನಿನಿಂದ ಹಾಯ್ದು ಬಂದಿತು. ಅಸಾಹೇಲನು ಕೂಡಲೇ ಅಲ್ಲೇ ಸತ್ತುಬಿದ್ದನು.

ಅಬ್ನೇರನನ್ನು ಯೋವಾಬ್ ಮತ್ತು ಅಬೀಷೈ ಅಟ್ಟಿಸಿಕೊಂಡು ಹೋಗುವರು

ಅಸಾಹೇಲನ ದೇಹವು ನೆಲದ ಮೇಲೆ ಬಿದ್ದಿತ್ತು. ಜನರು ಅವನ ಬಳಿಗೆ ಹೋಗಿ ಅಲ್ಲಿಯೇ ನಿಂತರು. 24 ಆದರೆ ಯೋವಾಬ್ ಮತ್ತು ಅಬೀಷೈ ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದರು. ಅವರು “ಅಮ್ಮಾ” ಬೆಟ್ಟಕ್ಕೆ ಬರುವಷ್ಟರಲ್ಲಿ ಸೂರ್ಯನು ಮುಳುಗಿದನು. (ಗಿಬ್ಯೋನಿನ ಮರಳುಗಾಡಿನ ಮಾರ್ಗದಲ್ಲಿರುವ ಗೀಯದ ಎದುರಿಗಿರುವುದೇ “ಅಮ್ಮಾ” ಬೆಟ್ಟ.) 25 ಬೆನ್ಯಾಮೀನ್ ಕುಲದವರೆಲ್ಲರು ಅಬ್ನೇರನ ಹತ್ತಿರಕ್ಕೆ ಬಂದರು. ಅವರೆಲ್ಲ ಬೆಟ್ಟದ ಮೇಲೆ ಒಟ್ಟಾಗಿ ನಿಂತರು.

26 ಅಬ್ನೇರನು ಯೋವಾಬನಿಗೆ, “ನಾವು ಎಂದೆಂದಿಗೂ ಯುದ್ಧ ಮಾಡಿ ಒಬ್ಬರನ್ನೊಬ್ಬರು ಕೊಲ್ಲಬೇಕೇ? ಇದು ಹಗೆತನದಲ್ಲಿ ಅಂತ್ಯಗೊಳ್ಳುತ್ತದೆಂಬುದು ನಿಜವಾಗಿಯೂ ನಿನಗೆ ತಿಳಿದಿದೆ. ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲು ನಿನ್ನ ಜನರಿಗೆ ಹೇಳು” ಎಂದು ಕೂಗಿ ಹೇಳಿದನು.

27 ಆಗ ಯೋವಾಬನು, “ನೀನು ಒಳ್ಳೆಯ ಮಾತನ್ನೇ ಆಡಿರುವೆ. ನೀನು ಹೀಗೆ ಹೇಳದೆ ಇದ್ದಿದ್ದರೆ, ಯೆಹೋವನಾಣೆಗೂ ಜನರು ನಾಳೆ ಮುಂಜಾನೆವರೆಗೂ ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುತ್ತಿದ್ದರು” ಎಂದು ಹೇಳಿದನು. 28 ಆಗ ಯೋವಾಬನು ತುತ್ತೂರಿಯನ್ನು ಊದಿದನು. ಅವನ ಜನರು ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದರು. ಅವರು ಇಸ್ರೇಲರ ವಿರುದ್ಧ ಹೋರಾಡಲು ಪ್ರಯತ್ನಿಸಲೇ ಇಲ್ಲ.

29 ಅಬ್ನೇರನು ತನ್ನ ಜನರೊಂದಿಗೆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ಪ್ರಯಾಣಮಾಡಿ, ಜೋರ್ಡನ್ ನದಿಯನ್ನು ದಾಟಿ ಮಹನಯಿಮಿಗೆ ಬಂದನು.

30 ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದ ನಂತರ ಯೋವಾಬನು ಹಿಂತಿರುಗಿ ಬಂದನು. ಯೋವಾಬನು ತನ್ನ ಜನರನ್ನೆಲ್ಲ ಒಟ್ಟಾಗಿ ಸೇರಿಸಿದಾಗ, ದಾವೀದನ ಭಟರಲ್ಲಿ ಹತ್ತೊಂಭತ್ತು ಮಂದಿ ಕಾಣಲಿಲ್ಲ. ಅಸಾಹೇಲನು ಸಹ ಕಾಣಲಿಲ್ಲ. 31 ಆದರೆ ಅಬ್ನೇರನ ಹಿಂಬಾಲಕರೂ ಬೆನ್ಯಾಮೀನ್ ಕುಟುಂಬದ ಗುಂಪಿನವರೂ ಆದ ಮುನ್ನೂರೈವತ್ತು ಜನರನ್ನು ದಾವೀದನ ಭಟರು ಕೊಂದಿದ್ದರು. 32 ದಾವೀದನ ಭಟರು ಅಸಾಹೇಲನ ಶವವನ್ನು ಬೆತ್ಲೆಹೇಮಿಗೆ ತಂದು, ಅವನ ತಂದೆಯ ಶ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು.

ಯೋವಾಬನು ತನ್ನ ಜನರೊಂದಿಗೆ ರಾತ್ರಿಯೆಲ್ಲ ಪ್ರಯಾಣಮಾಡಿ ಹೆಬ್ರೋನನ್ನು ತಲುಪಿದಾಗ ಸೂರ್ಯೋದಯವಾಯಿತು.

1 ಕೊರಿಂಥದವರಿಗೆ 13

ಪ್ರೀತಿ

13 ನಾನು ಮನುಷ್ಯರ ಭಾಷೆಗಳನ್ನಲ್ಲದೆ ದೇವದೂತರ ಭಾಷೆಗಳನ್ನು ಮಾತಾಡಬಹುದು. ಆದರೆ ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ, ನಾನು ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ತಾಳ. ಪ್ರವಾದಿಸುವ ವರ ನನಗಿರಬಹುದು; ದೇವರ ರಹಸ್ಯ ಸಂಗತಿಗಳನ್ನೆಲ್ಲಾ ಮತ್ತು ಜ್ಞಾನವನ್ನೆಲ್ಲಾ ನಾನು ಅರ್ಥಮಾಡಿಕೊಂಡಿರಬಹುದು ಮತ್ತು ಬೆಟ್ಟಗಳನ್ನು ಚಲಿಸಬಲ್ಲಂಥ ಮಹಾನಂಬಿಕೆ ನನಗಿರಬಹುದು. ಇವುಗಳೆಲ್ಲಾ ನನ್ನಲ್ಲಿ ಇದ್ದರೂ ಪ್ರೀತಿಯು ಇಲ್ಲದಿದ್ದರೆ, ನಾನು ನಿಷ್ಪ್ರಯೋಜಕನಾಗಿದ್ದೇನೆ. ನಾನು ನನ್ನಲ್ಲಿರುವ ಪ್ರತಿಯೊಂದನ್ನು ಜನರ ಊಟಕ್ಕಾಗಿ ಕೊಟ್ಟುಬಿಡಬಹುದು. ಹೆಮ್ಮೆಪಡುವುದಕ್ಕಾಗಿ ನಾನು ನನ್ನ ದೇಹವನ್ನೇ ಸಜೀವದಹನವನ್ನಾಗಿ ಒಪ್ಪಿಸಿಕೊಡಬಹುದು. ಆದರೆ ಈ ಕಾರ್ಯಗಳನ್ನೆಲ್ಲ ಮಾಡಿದರೂ ಪ್ರೀತಿಯು ಇಲ್ಲದಿದ್ದರೆ ನನಗೇನೂ ಪ್ರಯೋಜನವಿಲ್ಲ.

ಪ್ರೀತಿಯು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಅಸೂಯೆಪಡುವುದಿಲ್ಲ; ಹೊಗಳಿಕೊಳ್ಳುವುದಿಲ್ಲ; ಗರ್ವಪಡುವುದಿಲ್ಲ. ಪ್ರೀತಿಯು ನಾಚಿಕೆಕರವಾದ ರೀತಿಯಲ್ಲಿ ವರ್ತಿಸುವುದಿಲ್ಲ; ಸ್ವಾರ್ಥಿಯಲ್ಲ ಮತ್ತು ಬೇಗನೆ ಕೋಪಗೊಳ್ಳುವುದಿಲ್ಲ; ತನಗಾದ ಅಪಕಾರಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ. ಪ್ರೀತಿಯು ಕೆಟ್ಟದ್ದರ ಬಗ್ಗೆ ಸಂತೋಷಪಡದೆ ಸತ್ಯದ ಬಗ್ಗೆ ಸಂತೋಷಪಡುತ್ತದೆ. ಪ್ರೀತಿಯು ಎಲ್ಲವನ್ನು ತಾಳ್ಮೆಯಿಂದ ಸ್ವೀಕರಿಸಿಕೊಳ್ಳುತ್ತದೆ; ಯಾವಾಗಲೂ ನಂಬುತ್ತದೆ; ಯಾವಾಗಲೂ ನಿರೀಕ್ಷಿಸುತ್ತದೆ; ಯಾವಾಗಲೂ ದೃಢವಾಗಿರುತ್ತದೆ.

ಪ್ರೀತಿಯು ಎಂದಿಗೂ ಕೊನೆಗೊಳ್ಳುವುದಿಲ್ಲ. ಪ್ರವಾದಿಸುವ ವರಗಳಿವೆ, ಆದರೆ ಅವು ಕೊನೆಗೊಳ್ಳುತ್ತವೆ. ವಿವಿಧ ಭಾಷೆಗಳಲ್ಲಿ ಮಾತಾಡುವ ವರಗಳಿವೆ, ಆದರೆ ಆ ವರಗಳು ಕೊನೆಗೊಳ್ಳುತ್ತವೆ. ಜ್ಞಾನವೆಂಬ ವರವೂ ಇದೆ, ಆದರೆ ಅದೂ ಕೊನೆಗೊಳ್ಳುವುದು. ಏಕೆಂದರೆ ನಮಗಿರುವ ಈ ಜ್ಞಾನವು ಮತ್ತು ಈ ಪ್ರವಾದನೆಗಳು ಸಂಪೂರ್ಣವಾದುವುಗಳಲ್ಲ. 10 ಆದರೆ ಸಂಪೂರ್ಣತೆಯು ಬಂದಾಗ ಸಂಪೂರ್ಣವಲ್ಲದವುಗಳು ಕೊನೆಗೊಳ್ಳುತ್ತವೆ.

11 ನಾನು ಬಾಲಕನಾಗಿದ್ದಾಗ ಬಾಲಕನಂತೆ ಮಾತಾಡಿದೆನು, ಆಲೋಚಿಸಿದೆನು, ಯೋಜನೆಗಳನ್ನು ಮಾಡಿದೆನು. ಆದರೆ ನಾನು ಪ್ರಾಯಸ್ಥನಾದ ಮೇಲೆ ಬಾಲ್ಯದ ನಡವಳಿಕೆಯನ್ನು ಬಿಟ್ಟುಬಿಟ್ಟೆನು. 12 ನಮಗೂ ಸಹ ಇದು ಅನ್ವಯಿಸುತ್ತದೆ. ಕನ್ನಡಿಯಲ್ಲಿ ಕೇವಲ ಪ್ರತಿಬಿಂಬ ಕಾಣುವಂತೆ ಈಗ ನಾವು ನೋಡುತ್ತಿದ್ದೇವೆ. ಆದರೆ ಮುಂದಿನ ಕಾಲದಲ್ಲಿ ನಾವು ಮುಖಾಮುಖಿಯಾಗಿ ಕಾಣುತ್ತೇವೆ. ಈಗ ನನಗೆ ತಿಳಿದಿರುವುದು ಕೇವಲ ಒಂದು ಭಾಗವಷ್ಟೆ, ಆದರೆ ಆ ಕಾಲದಲ್ಲಿ ದೇವರು ನನ್ನನ್ನು ತಿಳಿದಿರುವಂತೆ ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು. 13 ಆದ್ದರಿಂದ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಶಾಶ್ವತವಾದವುಗಳಾಗಿವೆ. ಆದರೆ ಇವುಗಳಲ್ಲಿ ಅತ್ಯುನ್ನತವಾದದ್ದು ಪ್ರೀತಿಯೇ.

ಯೆಹೆಜ್ಕೇಲ 11

ನಾಯಕರ ವಿರುದ್ಧ ಪ್ರವಾದನೆಗಳು

11 ಆಗ ಆತ್ಮವು ನನ್ನನ್ನು ಯೆಹೋವನಾಲಯದ ಪೂರ್ವದ ಬಾಗಿಲಿಗೆ ಕೊಂಡೊಯ್ಯಿತು. ಬಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನ್ನು ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನ್ನು, ಬೆನಾಯನ ಮಗನಾದ ಪೆಲತ್ಯನನ್ನು ನಾನು ನೋಡಿದೆನು. ಅವರಿಬ್ಬರು ಜನರಿಗೆ ನಾಯಕರಾಗಿದ್ದರು.

ಆದ ದೇವರು ನನ್ನೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ, “ನರಪುತ್ರನೇ, ಈ ಪಟ್ಟಣದಲ್ಲಿ ದುಷ್ಟಯೋಜನೆಗಳನ್ನು ಮಾಡುವವರೂ ಕೆಡುಕಿನ ಸಲಹೆಗಳನ್ನು ನೀಡುವವರೂ ಇವರೇ. ‘ಮನೆಗಳನ್ನು ಕಟ್ಟುವ ಅಗತ್ಯ ಈಗಿಲ್ಲ. ಪಟ್ಟಣವು ಮಡಕೆಯಂತಿದೆ ಮತ್ತು ನಾವು ಮಾಂಸದಂತಿದ್ದೇವೆ’ ಎಂದು ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ನೀನು ನನ್ನ ಪರವಾಗಿ ಅವರೊಂದಿಗೆ ಮಾತನಾಡಬೇಕು. ನರಪುತ್ರನೇ, ನೀನು ಹೋಗಿ ಅವರಿಗೆ ದೈವವಾಣಿ ನುಡಿ.”

ಆಗ ಯೆಹೋವನ ಆತ್ಮನು ನನ್ನ ಮೇಲೆ ಬಂದನು. ಆತನು ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನರಿಗೆ ತಿಳಿಸು: ಇಸ್ರೇಲ್ ಮನೆತನವೇ, ನೀನು ದೊಡ್ಡದೊಡ್ಡ ವಿಷಯಗಳನ್ನು ಆಲೋಚಿಸುತ್ತೀ. ನೀನು ಏನೂ ಯೋಚಿಸುತ್ತೀ ಎಂದು ನಾನು ಬಲ್ಲೆನು. ನೀನು ಈ ನಗರದಲ್ಲಿ ಅನೇಕ ಜನರನ್ನು ಕೊಲೆ ಮಾಡಿರುತ್ತೀ. ರಸ್ತೆಗಳನ್ನು ಹೆಣಗಳಿಂದ ತುಂಬಿಸಿರುತ್ತೀ. ಈಗ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಆ ಹೆಣಗಳು ಮಾಂಸದಂತಿವೆ. ನಗರವು ಮಡಕೆಯಂತಿದೆ. ಆದರೆ ನಾನು ನಿಮ್ಮನ್ನು ಸುರಕ್ಷಿತವಾದ ಆ ಮಡಕೆಯಿಂದ ತೆಗೆದುಬಿಡುವೆನು. ನೀನು ಖಡ್ಗಕ್ಕೆ ಭಯಪಡುವವನಾದರೂ ನಾನು ನಿನ್ನ ಮೇಲೆ ಖಡ್ಗವನ್ನು ತರುವೆನು. ನಮ್ಮ ಒಡೆಯನಾದ ಯೆಹೋವನು ಈ ಮಾತುಗಳನ್ನು ನುಡಿದಿರುವದರಿಂದ ಇದು ನಡೆಯುವುದು.’”

ದೇವರು ಮುಂದುವರಿಸುತ್ತಾ, “ಈ ನಗರದೊಳಗಿಂದ ನಿಮ್ಮನ್ನು ಹೊರಡಿಸಿ ನಿಮ್ಮನ್ನು ಪರದೇಶಿಯರಿಗೆ ವಶಪಡಿಸುತ್ತೇನೆ; ಮತ್ತು ನಿಮ್ಮನ್ನು ದಂಡಿಸುತ್ತೇನೆ. 10 ನೀವು ಕತ್ತಿಯಿಂದಲೇ ಸಾಯುವಿರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ದಂಡಿಸುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು. 11 ಹೌದು, ಈ ಸ್ಥಳವು ಬೇಯಿಸುವ ಪಾತ್ರೆ ಮತ್ತು ನೀವು ಆ ಪಾತ್ರೆಯಲ್ಲಿ ಬೇಯಿಸಲ್ಪಡುವ ಮಾಂಸವಾಗಿರುತ್ತೀರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ಶಿಕ್ಷಿಸುವೆನು. 12 ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ. ನನ್ನ ಆಜ್ಞೆಗೆ ನೀವು ಅವಿಧೇಯರಾದಿರಿ. ನನ್ನ ಕಟ್ಟಳೆಗಳಿಗೆ ನೀವು ವಿಧೇಯರಾಗಲಿಲ್ಲ. ನಿಮ್ಮ ಸುತ್ತಲೂ ಇರುವ ಜನಾಂಗಗಳಂತೆ ಇರಲು ನೀವು ನಿರ್ಧರಿಸಿರುತ್ತೀರಿ.”

13 ನಾನು ದೇವರ ಪರವಾಗಿ ಮಾತನಾಡುವದನ್ನು ನಿಲ್ಲಿಸಿದ ಕೂಡಲೇ, ಬೆನಾಯನ ಮಗನಾದ ಪೆಲತ್ಯನು ಸತ್ತನು. ನಾನು ನೆಲದ ಮೇಲೆ ಬಗ್ಗಿ, “ನನ್ನ ಒಡೆಯನಾದ ಯೆಹೋವನೇ, ನೀನು ಇಸ್ರೇಲಿನಲ್ಲಿ ಅಳಿದುಳಿದವರನ್ನು ಸಂಪೂರ್ಣವಾಗಿ ನಾಶಮಾಡುವಿಯೋ?” ಎಂದು ಗಟ್ಟಿಯಾಗಿ ಕೂಗಿಕೊಂಡೆನು.

ಜೆರುಸಲೇಮಿನ ಚದರಿಸಲ್ಪಟ್ಟ ಜನರ ಕುರಿತು ಪ್ರವಾದನೆ

14 ಯೆಹೋವನ ಸಂದೇಶ ನನಗೆ ದೊರೆಯಿತು: 15 “ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನ್ನ ಸಹೋದರರ, ನಿನ್ನ ಸ್ವಂತ ಸಂಬಂಧಿಕರ ಮತ್ತು ಇಡೀ ಇಸ್ರೇಲ್ ವಂಶದವರ ಬಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ಈ ದೇಶವು ನಮಗೆ ನಮ್ಮ ಸ್ವಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.

16 “ಆದ್ದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನ್ನ ಜನರನ್ನು ಬಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನ್ನು ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸ್ವಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು. 17 ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿಮ್ಮನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನ್ನು ಕೊಡುವೆನು. 18 ನನ್ನ ಜನರು ಹಿಂದಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಹೊಲಸು ವಿಗ್ರಹಗಳನ್ನು ತೆಗೆದುಹಾಕುವರು. 19 ಅವರನ್ನು ಹಿಂದಕ್ಕೆ ಬರಮಾಡಿ ಒಗ್ಗಟ್ಟಿನಲ್ಲಿರುವಂತೆ ಮಾಡುವೆನು. ಅವರಲ್ಲಿ ಹೊಸ ಆತ್ಮವನ್ನು ಇರಿಸುವೆನು. ಅವರಲ್ಲಿರುವ ಕಲ್ಲಿನ ಹೃದಯವನ್ನು ತೆಗೆದು ಮೃದುವಾದ ಹೃದಯವನ್ನಿಡುವೆನು. 20 ಆಗ ಅವರು ನನ್ನ ಆಜ್ಞಾವಿಧಿಗಳಿಗೆ ವಿಧೇಯರಾಗುವರು. ನಾನು ಹೇಳುವದನ್ನು ಅವರು ಮಾಡುವರು. ಅವರು ನಿಜವಾಗಿಯೂ ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.’”

ಯೆಹೋವನ ಮಹಿಮೆ ಜೆರುಸಲೇಮ್‌ನ್ನು ಬಿಟ್ಟಿದ್ದು

21 ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು. 22 ಆಗ ಕೆರೂಬಿದೂತರು ತಮ್ಮ ರೆಕ್ಕೆಗಳನ್ನು ಚಾಚಿ ಆಕಾಶದಲ್ಲಿ ಹಾರಿಹೋದರು. ಚಕ್ರಗಳು ಅವುಗಳೊಂದಿಗೆ ಹೋದವು. ಮತ್ತು ಇಸ್ರೇಲಿನ ದೇವರ ಮಹಿಮೆಯು ಅವರ ಮೇಲ್ಗಡೆ ಇತ್ತು. 23 ಯೆಹೋವನ ಮಹಿಮೆಯು ಆಕಾಶಕ್ಕೆ ಎತ್ತಲ್ಪಟ್ಟು ಜೆರುಸಲೇಮಿಗೆ ಪೂರ್ವದಲ್ಲಿರುವ ಬೆಟ್ಟದ ಮೇಲೆ ನಿಂತಿತು. 24 ಆಗ ಆತ್ಮವು ನನ್ನನ್ನು ಆಕಾಶಕ್ಕೆ ಎತ್ತಿ ಬಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆ ಒಯ್ಯಲ್ಪಟ್ಟಿದ್ದ ಜನರ ಮಧ್ಯೆ ನಾನು ಬಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಆ ಎಲ್ಲಾ ವಿಷಯಗಳನ್ನು ಕಂಡೆನು. ಬಳಿಕ, ನಾನು ಕಂಡ ಆ ದರ್ಶನವು ನನ್ನನ್ನು ಬಿಟ್ಟುಹೋಯಿತು. 25 ನನ್ನೊಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಬಗ್ಗೆ ಹೇಳಿದೆನು.

ಕೀರ್ತನೆಗಳು 50

ರಚನೆಗಾರ: ಆಸಾಫ.

50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
    ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
    ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
    ಆತನ ಸುತ್ತಲೂ ಬಿರುಗಾಳಿ ಬೀಸುವುದು.
ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
    ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
    ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.

ದೇವರೊಬ್ಬನೇ ನ್ಯಾಯಾಧಿಪತಿ;
    ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.

ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
    ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
    ದೇವರಾದ ನಾನೇ ನಿಮ್ಮ ದೇವರು!
ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
    ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
    ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
    ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
    ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
    ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
    ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”

14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
    ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
    ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”

16 ದೇವರು ದುಷ್ಟರಿಗೆ ಹೀಗೆನ್ನುವನು:
    “ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
    ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
    ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
    ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
    ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
    ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
    ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
    ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
    ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
    ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
    ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International