M’Cheyne Bible Reading Plan
ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು
28 ತರುವಾಯ, ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದರು. ಆಕೀಷನು, “ನೀನು ಮತ್ತು ನಿನ್ನ ಜನರು ಇಸ್ರೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೊತೆಗೂಡಬೇಕೆಂಬುದನ್ನು ನೀನು ಅರ್ಥಮಾಡಿಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು.
2 ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು.
ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು.
ಸೌಲನು ಮತ್ತು ಏಂದೋರಿನ ಯಕ್ಷಿಣಿ
3 ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು.
ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು.
4 ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು. 5 ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು. 6 ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲಿಲ್ಲ. 7 ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು.
ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು.
8 ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಆ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು.
9 ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು.
10 ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು.
11 ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು.
ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು.
12 ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು.
13 ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು.
ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ[a] ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು.
14 ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು.
ಆ ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು.
ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗನಮಸ್ಕಾರ ಮಾಡಿದನು. 15 ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು.
ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲೀ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು.
16 ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ? 17 ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ಆ ನೆರೆಯವನು. 18 ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದ್ದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ. 19 ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು.
20 ಆ ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುವೇಲನು ಹೇಳಿದ ಮಾತುಗಳನ್ನು ಕೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗಲು ಮತ್ತು ರಾತ್ರಿ ಏನನ್ನೂ ತಿಂದಿರಲಿಲ್ಲ; ಆದ್ದರಿಂದ ಅವನು ಬಹಳ ಬಲಹೀನನಾಗಿದ್ದನು.
21 ಆ ಹೆಂಗಸು ಸೌಲನ ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವುದನ್ನು ಅವಳು ನೋಡಿ, “ಇಲ್ಲಿ ನೋಡು, ನಾನು ನಿನ್ನ ಸೇವಕಿ. ನಾನು ನಿನಗೆ ವಿಧೇಯಳಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಣಿಸಿ ನೀನು ಹೇಳಿದ್ದನ್ನು ಮಾಡಿದೆ. 22 ಈಗ ದಯವಿಟ್ಟು ನನ್ನ ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಕೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಿರುವುದು” ಎಂದು ಹೇಳಿದಳು.
23 ಆದರೆ ಸೌಲನು ನಿರಾಕರಿಸಿ, “ನಾನು ತಿನ್ನುವುದಿಲ್ಲ” ಅಂದನು.
ಊಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಮಂಚದ ಮೇಲೆ ಕುಳಿತನು. 24 ಆ ಹೆಂಗಸಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯ್ದಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ನಾದಿದಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು. 25 ಆ ಹೆಂಗಸು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳು ಊಟಮಾಡಿದರು. ನಂತರ ಆ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು.
ಪೌಲನು ಉಪಯೋಗಿಸಿಲ್ಲದ ಹಕ್ಕುಗಳು
9 ನಾನು ಸ್ವತಂತ್ರನಾಗಿದ್ದೇನೆ; ಅಪೊಸ್ತಲನಾಗಿದ್ದೇನೆ; ನಮ್ಮ ಪ್ರಭುವಾದ ಯೇಸುವನ್ನು ನೋಡಿದ್ದೇನೆ. ನಾನು ಪ್ರಭುವಿನಲ್ಲಿ ಮಾಡಿದ ಸೇವೆಯ ಫಲವು ನೀವೇ ಆಗಿದ್ದೀರಿ. 2 ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.
3 ಕೆಲವು ಜನರು ನಮ್ಮನ್ನು ವಿಚಾರಣೆ ಮಾಡಲು ಬಯಸುತ್ತಾರೆ. ನಾನು ಅವರಿಗೆ ಕೊಡುವ ಉತ್ತರ ಇಂತಿದೆ: 4 ಊಟಮಾಡುವುದಕ್ಕೆ ಮತ್ತು ಪಾನೀಯಗಳನ್ನು ಕುಡಿಯುವುದಕ್ಕೆ ನಮಗೆ ಹಕ್ಕಿಲ್ಲವೇ? 5 ಕ್ರಿಸ್ತ ವಿಶ್ವಾಸಿಯಾದ ಹೆಂಡತಿಯನ್ನು ನಮ್ಮೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಲು ಉಳಿದ ಅಪೊಸ್ತಲರಂತೆ, ಪ್ರಭುವಿನ ಸಹೋದರರಂತೆ ಮತ್ತು ಕೇಫನಂತೆ ನಮಗೆ ಹಕ್ಕಿಲ್ಲವೇ? 6 ಬಾರ್ನಬನು ಮತ್ತು ನಾನು ಮಾತ್ರ ನಮ್ಮ ಜೀವನಕ್ಕೆ ಬೇಕಾದದ್ದನ್ನು ದುಡಿದು ಸಂಪಾದಿಸಿಕೊಳ್ಳಬೇಕೇ? 7 ಸೈನ್ಯದಲ್ಲಿ ಸೇವೆಮಾಡುವ ಯಾವ ಸೈನಿಕನಾದರೂ ತನಗೆ ತಾನೇ ಸಂಬಳವನ್ನು ಕೊಡುವುದಿಲ್ಲ. ಯಾವ ದ್ರಾಕ್ಷಿತೋಟಗಾರನಾಗಲಿ ತಾನು ಬೆಳೆದ ಹಣ್ಣಿನಲ್ಲಿ ಸ್ವಲ್ಪವನ್ನು ತಿನ್ನದೆ ಇರುವುದಿಲ್ಲ. ಹಸುಗಳನ್ನು ಸಾಕಿದ ಯಾವನೇ ಆಗಲಿ ಅವುಗಳ ಹಾಲಿನಲ್ಲಿ ಸ್ವಲ್ಪವನ್ನು ಕುಡಿಯದೆ ಇರುವುದಿಲ್ಲ.
8 ಇವುಗಳು ಕೇವಲ ಮಾನುಷ ಉದಾಹರಣೆಗಳಲ್ಲ. ದೇವರ ಧರ್ಮಶಾಸ್ತ್ರವೂ ಈ ಸಂಗತಿಗಳನ್ನು ತಿಳಿಸುತ್ತದೆ. 9 “ಕಣ ತುಳಿಯುವ ಎತ್ತು ಧಾನ್ಯ ತಿನ್ನದಂತೆ ಅದರ ಬಾಯನ್ನು ಕಟ್ಟಬೇಡಿ”(A) ಎಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಹೀಗೆ ಹೇಳಿದಾಗ, ಕಣತುಳಿಯುವ ಎತ್ತಿನ ಬಗ್ಗೆ ಮಾತ್ರ ಆತನು ಆಲೋಚಿಸುತ್ತಿದ್ದನೇ? ಇಲ್ಲ! 10 ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ. 11 ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ. 12 ತಮಗೆ ಅಗತ್ಯವಾದುವುಗಳನ್ನು ನಿಮ್ಮಿಂದ ಪಡೆದುಕೊಳ್ಳಲು ಇತರರಿಗೆ ಹಕ್ಕಿದೆ. ಆದ್ದರಿಂದ ಖಂಡಿತವಾಗಿ ನಮಗೂ ಈ ಹಕ್ಕಿದೆ. ಆದರೆ ನಾವು ಈ ಹಕ್ಕನ್ನು ಉಪಯೋಗಿಸುವುದಿಲ್ಲ. ಕ್ರಿಸ್ತನ ಸುವಾರ್ತೆಗೆ ವಿಧೇಯರಾಗಲು ಯಾರಿಗೂ ತೊಂದರೆ ಆಗಕೂಡದೆಂದು ನಾವು ಪ್ರತಿಯೊಂದನ್ನು ಸಹಿಸಿಕೊಳ್ಳುತ್ತೇವೆ. 13 ದೇವಾಲಯದಲ್ಲಿ ಸೇವೆಮಾಡುವ ಜನರು ದೇವಾಲಯದಿಂದಲೇ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಯಜ್ಞವೇದಿಕೆಯ ಬಳಿ ಸೇವೆ ಮಾಡುವವರು ಯಜ್ಞವೇದಿಕೆಯ ಮೇಲೆ ಅರ್ಪಿತವಾದದ್ದರಲ್ಲಿ ಸ್ವಲ್ಪಭಾಗವನ್ನು ಪಡೆದುಕೊಳ್ಳುವರು. 14 ಸುವಾರ್ತೆಯನ್ನು ಬೋಧಿಸುವ ಜನರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸುವಾರ್ತೆಯನ್ನು ಬೋಧಿಸುವವರು ತಮಗೆ ಅಗತ್ಯವಾದುವುಗಳನ್ನು ಈ ಸೇವೆಯ ಮೂಲಕ ಪಡೆದುಕೊಳ್ಳಬೇಕೆಂದು ಪ್ರಭುವು ಆಜ್ಞಾಪಿಸಿದ್ದಾನೆ.
15 ಆದರೆ ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಉಪಯೋಗಿಸಲಿಲ್ಲ. ನನಗೆ ಅಗತ್ಯವಾದುವುಗಳನ್ನು ಪಡೆದುಕೊಳ್ಳುವುದಕ್ಕಾಗಿಯೂ ನಾನು ಪ್ರಯತ್ನಿಸುತ್ತಿಲ್ಲ. ನಿಮಗೆ ಇದನ್ನು ಬರೆಯುತ್ತಿರುವ ಉದ್ದೇಶವೂ ಅದಲ್ಲ. ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ನನಗೆ ಲೇಸು. 16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ! 17 ನಾನು ನನ್ನ ಸ್ವಂತ ಇಷ್ಟದಿಂದ ಸುವಾರ್ತೆಯನ್ನು ಬೋಧಿಸುವುದಾಗಿದ್ದರೆ, ಬಹುಮಾನಕ್ಕೆ ಅರ್ಹನಾಗಿದ್ದೇನೆ. ಆದರೆ ಬೇರೊಂದನ್ನು ಆರಿಸಿಕೊಳ್ಳಲು ನನಗೆ ಅವಕಾಶವೇ ಇಲ್ಲ. ನಾನು ಸುವಾರ್ತೆಯನ್ನು ಸಾರಲೇಬೇಕು. ಇದು ನನಗೆ ಕೊಡಲ್ಪಟ್ಟಿರುವ ಕರ್ತವ್ಯವಷ್ಟೆ. 18 ಹೀಗಿರಲು, ನನಗೆ ಯಾವ ಬಹುಮಾನ ಸಿಕ್ಕುವುದು? ಸುವಾರ್ತೆಯನ್ನು ಉಚಿತವಾಗಿ ಬೋಧಿಸುವುದೊಂದೇ ನನಗೆ ದೊರೆಯುವ ಬಹುಮಾನವಾಗಿದೆ. ಆದ್ದರಿಂದ ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳುವುದಿಲ್ಲ.
19 ನಾನು ಸ್ವತಂತ್ರನಾಗಿದ್ದೇನೆ; ಯಾರ ಅಧೀನದಲ್ಲಿಯೂ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಜನರನ್ನು ರಕ್ಷಣಾ ಮಾರ್ಗಕ್ಕೆ ನಡೆಸಲು ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ. 20 ಯೆಹೂದ್ಯರನ್ನು ರಕ್ಷಣಾಮಾರ್ಗಕ್ಕೆ ತರಲು ಅವರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಾಗಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ಅಧೀನರಾಗಿರುವ ಜನರನ್ನು ರಕ್ಷಣಾಮಾರ್ಗಕ್ಕೆ ತರಬೇಕೆಂದು ಧರ್ಮಶಾಸ್ತ್ರಕ್ಕೆ ಅಧೀನನಾದೆನು. 21 ಧರ್ಮಶಾಸ್ತ್ರವಿಲ್ಲದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಧರ್ಮಶಾಸ್ತ್ರವಿಲ್ಲದ ವ್ಯಕ್ತಿಯಂತಾದೆನು. (ಆದರೆ ನಿಜವಾಗಿಯೂ, ನಾನು ಧರ್ಮಶಾಸ್ತ್ರವಿಲ್ಲದವನಲ್ಲ. ನಾನು ಕ್ರಿಸ್ತನ ಧರ್ಮಶಾಸ್ತ್ರಕ್ಕೆ ಅಧೀನನಾಗಿದ್ದೇನೆ.) 22 ಬಲಹೀನರಾದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಬಲಹೀನನಂತಾದೆನು. ಯಾವ ರೀತಿಯಲ್ಲಾದರೂ ರಕ್ಷಣಾ ಮಾರ್ಗಕ್ಕೆ ನಡೆಸಬೇಕೆಂದು ಯಾರ್ಯಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದೆನು. 23 ಇವುಗಳನ್ನೆಲ್ಲ ಮಾಡುವುದು ಸುವಾರ್ತೆಗಾಗಿಯೇ. ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇವುಗಳನ್ನೆಲ್ಲ ಮಾಡುತ್ತೇನೆ.
24 ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ರೀತಿಯಲ್ಲಿ ಓಡಿರಿ; ಗೆಲ್ಲುವುದಕ್ಕಾಗಿ ಓಡಿರಿ. 25 ಪಂದ್ಯಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಪದಕಗಳಿಸಲು ಕಟ್ಟುನಿಟ್ಟಾದ ತರಬೇತಿಯಲ್ಲಿರುತ್ತಾರೆ. ಆದರೆ ಈ ಲೋಕದ ಆ ಪದಕವು ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು. 26 ಆದ್ದರಿಂದ ಗುರಿಯನ್ನು ಹೊಂದಿರುವ ವ್ಯಕ್ತಿಯಂತೆ ಓಡುತ್ತೇನೆ. ಕೇವಲ ಗಾಳಿಯನ್ನು ಗುದ್ದದೆ, ನಿಜವಾಗಿಯೂ ಗುದ್ದಿ ಮುಷ್ಠಿಕಾಳಗ ಮಾಡುವ ವ್ಯಕ್ತಿಯಂತೆ ಹೋರಾಡುತ್ತೇನೆ. 27 ನಾನು ಗುದ್ದುವುದು ನನ್ನ ಸ್ವಂತ ದೇಹವನ್ನೇ. ಇತರ ಜನರಿಗೆ ಬೋಧಿಸಿದ ಮೇಲೆ ಸ್ವತಃ ನಾನೇ ತಿರಸ್ಕೃತನಾಗದಂತೆ ಅದನ್ನು ನನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ.
ಜೆರುಸಲೇಮಿಗೆ ಬರುವ ದುರ್ಗತಿ
7 ಯೆಹೋವನ ಸಂದೇಶವು ನನಗೆ ಬಂದಿತು. 2 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಇಸ್ರೇಲ್ ದೇಶಕ್ಕೆ ನೀಡು.
“ಅಂತ್ಯ,
ಅಂತ್ಯವು ಬರುವುದು.
ಇಡೀ ದೇಶವು ಹಾಳಾಗಿಹೋಗುವದು.
3 ನಿನ್ನ ಅಂತ್ಯವು ಈಗ ಬರುವುದು.
ನಿನ್ನ ಮೇಲೆ ನನಗೆ ಎಷ್ಟು ಕೋಪವಿದೆ ಎಂದು ನಾನು ತೋರಿಸುವೆನು.
ನಿನ್ನ ದುಷ್ಕೃತ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.
ನಿನ್ನ ಅಸಹ್ಯಕೃತ್ಯಗಳಿಗಾಗಿ ನಾನು ಪ್ರತೀಕಾರ ಮಾಡುವೆನು.
4 ನಿನಗೆ ನಾನು ಇನ್ನು ಕರುಣೆಯನ್ನು ತೋರಿಸೆನು.
ನಿನ್ನ ವಿಷಯದಲ್ಲಿ ನಾನು ದುಃಖಿಸುವದಿಲ್ಲ.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನಿನ್ನನ್ನು ಶಿಕ್ಷಿಸುವೆನು.
ನೀನು ಅಂಥಾ ಭಯಂಕರ ಕೃತ್ಯಗಳನ್ನು ಮಾಡಿದ್ದೀ.
ಈಗ ನಾನೇ ಯೆಹೋವನೆಂದು ನೀನು ತಿಳಿಯುವಿ.”
5 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಂದರ ಮೇಲೊಂದು ದುರ್ಘಟನೆಗಳು ನಡೆಯುವವು. 6 ಅಂತ್ಯವು ಬರುವುದು. ಅದು ಬೇಗನೆ ಬರುವದು. 7 ಇಸ್ರೇಲ್ ದೇಶದಲ್ಲಿ ವಾಸಿಸುವ ಜನರೇ, ನಿಮಗೆ ಆಪತ್ತು ಬರುವುದು, ಸಮಯವು ಬರುತ್ತಿದೆ. ದಿನವು ಸಮೀಪಿಸಿದೆ. ಬೆಟ್ಟಗಳ ಮೇಲೆ ಆನಂದ ಬೋಷಗಳ ಬದಲು ಯುದ್ಧದ ಕೂಗಾಟಗಳು ಇರುತ್ತವೆ. 8 ಇನ್ನು ಸ್ವಲ್ಪ ಸಮಯದಲ್ಲಿ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂದು ನಿಮಗೆ ತೋರಿಸುವೆನು. ನನ್ನ ಕೋಪವನ್ನೆಲ್ಲಾ ನಿಮಗೆ ತೋರಿಸುವೆನು. ನಿಮ್ಮ ದುಷ್ಕ್ರಿಯೆಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಅಸಹ್ಯಕೃತ್ಯಗಳಿಗಾಗಿ ನಾನು ಸೇಡನ್ನು ತೀರಿಸಿಕೊಳ್ಳುವೆನು. 9 ನಾನು ನಿಮಗೆ ಕರುಣೆ ತೋರಿಸೆನು. ನಿಮಗಾಗಿ ನಾನು ದುಃಖಿಸುವದಿಲ್ಲ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ಅಂಥಾ ಭಯಂಕರವಾದ ಕೃತ್ಯಗಳನ್ನು ನೀವು ಮಾಡಿದ್ದೀರಿ. ನಿಮ್ಮನ್ನು ದಂಡಿಸಿದಾತನು ಯೆಹೋವನಾದ ನಾನೇ ಎಂಬುದು ಆಗ ನಿಮಗೆ ತಿಳಿಯುವುದು.
10 “ಆ ಶಿಕ್ಷೆಯ ಸಮಯವು ಬಂದಿದೆ. ಆಪತ್ತು ಬರುತ್ತಿದೆ. ಹಿಂಸೆಯು ಅರಳಿದೆ. ದುರಹಂಕಾರವು ಮೊಗ್ಗು ಬಿಟ್ಟಿದೆ. 11 ದುಷ್ಟತನವನ್ನು ದಂಡಿಸಲು ಹಿಂಸೆಯು ಬೆಳೆದು ಕೋಲಾಗಿದೆ. ಜನರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿ ಒಬ್ಬರೂ ಉಳಿಯುವುದಿಲ್ಲ. ಅವರ ಐಶ್ವರ್ಯದಲ್ಲಿ ಏನೂ ಉಳಿಯುವದಿಲ್ಲ; ಪ್ರಮುಖರಾದವರಲ್ಲಿ ಯಾರೂ ಉಳಿಯುವುದಿಲ್ಲ.
12 “ಆ ಶಿಕ್ಷೆಯ ಸಮಯವು ಬಂತು. ಆ ದಿವಸವು ಇಲ್ಲಿಯೇ ಇದೆ. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಸಂತೋಷಪಡಕೂಡದು. ವಸ್ತುಗಳನ್ನು ಮಾರುವವರು ಮಾರುವದಕ್ಕೆ ದುಃಖಿಸಕೂಡದು. ಯಾಕೆಂದರೆ ಆ ಭಯಂಕರ ಶಿಕ್ಷೆಯು ಎಲ್ಲರಿಗೂ ಉಂಟಾಗುವುದು. 13 ತಮ್ಮ ಆಸ್ತಿಗಳನ್ನು ಮಾರಿದ ಜನರು ಅಲ್ಲಿಗೆ ತಿರುಗಿ ಹೋಗುವುದಿಲ್ಲ. ಒಬ್ಬನು ಜೀವಂತವಾಗಿ ತಪ್ಪಿಸಿಕೊಂಡರೂ ತನ್ನ ಆಸ್ತಿಗೆ ಹೋಗುವುದಿಲ್ಲ. ಯಾಕೆಂದರೆ ಈ ದರ್ಶನವು ಎಲ್ಲಾ ಜನಸಮೂಹಕ್ಕಾಗಿದೆ. ಇದು ಬದಲಾಗುವುದಿಲ್ಲ; ಅವರ ಪಾಪಗಳ ದೆಸೆಯಿಂದ ಅವರಲ್ಲಿ ಒಬ್ಬನಾದರೂ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವುದಿಲ್ಲ.
14 “ಅವರು ಜನರನ್ನು ಎಚ್ಚರಿಸುವುದಕ್ಕಾಗಿ ತುತ್ತೂರಿಯನ್ನು ಊದುವರು. ಜನರು ಯುದ್ಧಕ್ಕೆ ತಯಾರಾಗುವರು. ಆದರೆ ಅವರು ರಣರಂಗಕ್ಕೆ ಹೋಗುವುದಿಲ್ಲ. ಯಾಕೆಂದರೆ ಆ ಜನಸಮೂಹಕ್ಕೆ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಬುದನ್ನು ತೋರಿಸುತ್ತೇನೆ. 15 ಖಡ್ಗಧಾರಿಯಾದ ವೈರಿಯು ಪಟ್ಟಣದ ಹೊರಗಿದ್ದಾನೆ. ರೋಗ ಮತ್ತು ಹಸಿವೆ ಪಟ್ಟಣದೊಳಗಿವೆ. ಒಬ್ಬನು ಹೊರಗೆ ಹೊಲದ ಬಳಿ ಹೋದರೆ ವೈರಿಸೈನಿಕನು ಅವನನ್ನು ಕೊಲ್ಲುವನು. ಪಟ್ಟಣದೊಳಗೇ ಉಳಿದರೆ ರೋಗ ಮತ್ತು ಹಸಿವೆಯು ಅವನನ್ನು ಕೊಲ್ಲುವವು.
16 “ಆದರೂ ಕೆಲವರು ತಪ್ಪಿಸಿಕೊಳ್ಳುವರು. ಅವರು ಬೆಟ್ಟಕ್ಕೆ ಓಡುವರು. ಆದರೆ ಅವರು ಸಂತೋಷಪಡುವುದಿಲ್ಲ. ತಮ್ಮ ಪಾಪಗಳಿಗಾಗಿ ಅವರು ದುಃಖಿತರಾಗುವರು. ಪಾರಿವಾಳಗಳಂತೆ ಮೂಲುಗುವರು, ಅಳುವರು. 17 ತಮ್ಮ ಕೈಗಳನ್ನು ಮೇಲಕ್ಕೆ ಎತ್ತುವಷ್ಟು ದುಃಖ ಮತ್ತು ಆಯಾಸ ಅವರಲ್ಲಿದೆ. ಅವರ ಕಾಲುಗಳು ನೀರಿನಂತಿರುತ್ತವೆ. 18 ಅವರು ಶೋಕಬಟ್ಟೆಗಳನ್ನು ಧರಿಸಿ ಭಯಗ್ರಸ್ತರಾಗುವರು. ಪ್ರತೀ ಮುಖದಲ್ಲಿ ನಾಚಿಕೆಯು ಕಾಣಿಸುವುದು. ತಮ್ಮ ದುಃಖವನ್ನು ಪ್ರದರ್ಶಿಸಲು ತಮ್ಮ ತಲೆಗಳನ್ನು ಬೋಳಿಸುವರು. 19 ಅವರು ತಮ್ಮ ಬೆಳ್ಳಿಯ ವಿಗ್ರಹಗಳನ್ನು ರಸ್ತೆಗೆ ಬಿಸಾಡುವರು, ಅವರು ಬಂಗಾರದ ವಿಗ್ರಹವನ್ನು ಅಶುದ್ಧ ವಸ್ತುವಿನಂತೆ ನೋಡುವರು. ಯೆಹೋವನು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರಗಳ ವಿಗ್ರಹಗಳು ಅವರನ್ನು ರಕ್ಷಿಸಲಾರವು. ಅವು ಅವರ ಹಸಿವನ್ನು ನೀಗಿಸಲಾರವು ಅಥವಾ ಅವರ ಹೊಟ್ಟೆಗಳನ್ನು ತುಂಬಿಸಲಾರವು. ಜನರು ಪಾಪದಲ್ಲಿ ಬೀಳುವಂತೆ ಅವು ಮಾಡಿದವು.
20 “ಆ ಜನರು ತಮ್ಮ ಬೆಳ್ಳಿಬಂಗಾರಗಳ ಆಭರಣಗಳನ್ನು ಅಲಂಕಾರದ ವಸ್ತುಗಳನ್ನಾಗಿ ಪರಿವರ್ತಿಸಿದರು. ಅವುಗಳಿಂದ ತಮ್ಮ ಕೊಳಕಾದ ಮತ್ತು ಅಸಹ್ಯಕರವಾದ ವಿಗ್ರಹಗಳನ್ನು ಮಾಡಿಕೊಂಡರು. ಆದ್ದರಿಂದ ಅವರ ಬೆಳ್ಳಿಬಂಗಾರಗಳನ್ನು ಅವರಿಗೆ ಕೊಳೆಯ ಬಟ್ಟೆಯನ್ನಾಗಿ ಮಾಡುವೆನು. 21 ಬೇರೆ ದೇಶದವರು ಅವರ ಐಶ್ವರ್ಯವನ್ನು ಲೂಟಿಮಾಡಿಕೊಂಡು ಹೋಗಲು ನಾನು ಅವಕಾಶಕೊಡುವೆನು. ಭೂಮಿಯ ಮೇಲಿರುವ ಅತ್ಯಂತ ದುಷ್ಟರಾದ ಜನರಿಗೆ ನಾನು ಅದನ್ನು ಕೊಳ್ಳೆಯನ್ನಾಗಿ ಕೊಡುವೆನು. ಅವರು ಅದನ್ನು ಹೊಲಸು ಮಾಡುವರು. 22 ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಿಕೊಳ್ಳುವೆನು. ಆ ಪರದೇಶಿಯರು ನನ್ನ ಅಮೂಲ್ಯವಾದ ಆಲಯವನ್ನು ಹೊಲಸು ಮಾಡುವರು. ದರೋಡೆಕೋರರು ಅದರೊಳಗೆ ನುಗ್ಗಿ ಅದಕ್ಕೆ ಅಪಮಾನ ಮಾಡುವರು.
23 “ಸೆರೆಯವರಿಗಾಗಿ ಸರಪಣಿಗಳನ್ನು ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ. 24 ಇಸ್ರೇಲ್ ಜನರ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅತೀ ದುಷ್ಟ ಜನಾಂಗಗಳನ್ನು ಬರಮಾಡುವೆನು. ನಾನು ಗರ್ವಿಷ್ಠರ ಸೊಕ್ಕನ್ನು ಮುರಿಯುವೆನು; ಅವರ ಆರಾಧನೆಯ ಸ್ಥಳಗಳು ಅಪರಿಶುದ್ಧಗೊಳ್ಳುವವು.
25 “ಜನರು ಭಯದಿಂದ ನಡುಗುವರು. ಅವರು ಶಾಂತಿಗಾಗಿ ಹುಡುಕುವರು, ಆದರೆ ಅವರಿಗೆ ಅದು ಸಿಗುವುದಿಲ್ಲ. 26 ಒಂದರ ಮೇಲೊಂದು ಆಪತ್ತು ಸಂಭವಿಸುವುದು. ಸುಳ್ಳುಸುದ್ದಿಗೊಂದು ಸುಳ್ಳುಸುದ್ದಿ ಸೇರಿಕೊಳ್ಳುವುದು. ಅವರು ಪ್ರವಾದಿಯಿಂದ ದರ್ಶನಕ್ಕಾಗಿ ಹುಡುಕುತ್ತಲೇ ಇರುವರು. ಆದರೆ ಯಾವ ದರ್ಶನಗಳೂ ಆಗುವದಿಲ್ಲ. ಜನರಿಗೆ ಉಪದೇಶಿಸಲು ಯಾಜಕರಲ್ಲಿ ಏನೂ ಇರುವುದಿಲ್ಲ. ಜನರಿಗೆ ಕೊಡಲು ಹಿರಿಯರಲ್ಲಿ ಯಾವ ಬುದ್ಧಿವಾದವೂ ಇರುವುದಿಲ್ಲ. 27 ಸತ್ತುಹೋದ ಜನರಿಗಾಗಿ ನಿಮ್ಮ ರಾಜನು ಗೋಳಾಡುವನು; ನಾಯಕನಿಗೆ ನಿರೀಕ್ಷೆಯು ಇಲ್ಲವಾಗುವುದು. ಸಾಮಾನ್ಯ ಜನರು ಭಯಗ್ರಸ್ತರಾಗುವರು. ಯಾಕೆಂದರೆ ನಾನು ಅವರ ನಡತೆಗೆ ತಕ್ಕಂತೆ ಅವರಿಗೆ ಮಾಡುವೆನು; ಅವರು ಬೇರೆಯವರಿಗೆ ನ್ಯಾಯ ತೀರಿಸಿದಂತೆ ನಾನು ಅವರಿಗೆ ನ್ಯಾಯತೀರಿಸುವೆನು. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”
ರಚನೆಗಾರರು: ಕೋರಹೀಯರು.
45 ಒಂದು ದಿವ್ಯ ವಿಷಯವನ್ನು ಹೇಳಲು
ನನ್ನ ಹೃದಯವು ತವಕಪಡುತ್ತದೆ;
ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ.
ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿದೆ.
2 ನೀನು ಎಲ್ಲರಿಗಿಂತಲೂ ಅತಿಸುಂದರನಾಗಿರುವೆ.
ನಿನ್ನ ಮಾತುಗಳು ಮನೋಹರವಾಗಿವೆ.
ದೇವರ ಆಶೀರ್ವಾದವು ನಿನ್ನ ಮೇಲೆ ಸದಾಕಾಲವಿರುವುದು.
3 ನಿನ್ನ ಖಡ್ಗವನ್ನು ಕಟ್ಟಿಕೊ.
ನಿನ್ನ ಮಹಿಮಾವಸ್ತ್ರವನ್ನು ಧರಿಸಿಕೊ.
4 ನೀನು ವೈಭವಯುತವಾಗಿ ಕಾಣುತ್ತಿರುವೆ! ಒಳ್ಳೆಯದಕ್ಕಾಗಿಯೂ ನ್ಯಾಯಕ್ಕಾಗಿಯೂ ಹೋರಾಡಿ ಗೆಲ್ಲು.
ಶಕ್ತಿಯುತವಾದ ನಿನ್ನ ಬಲತೋಳಿನಿಂದ ಮಹತ್ಕಾರ್ಯಗಳನ್ನು ಮಾಡು.
5 ನಿನ್ನ ಬಾಣಗಳು ತೀಕ್ಷ್ಣವಾಗಿವೆ.
ಅವು ನಿನ್ನ ಶತ್ರುಗಳ ಎದೆಗೆ ನಾಟಿಕೊಳ್ಳುತ್ತವೆ;
ಶತ್ರುಗಳು ನಿನ್ನ ಕಣ್ಣೆದುರಿನಲ್ಲೇ ನೆಲಕ್ಕುರುಳುವರು.
6 ದೇವರೇ,[a] ನಿನ್ನ ಸಿಂಹಾಸನವು ಶಾಶ್ವತವಾದದ್ದು.
ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
7 ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ.
ಆದ್ದರಿಂದ ನಿನ್ನ ದೇವರಾಗಿರುವಾತನು
ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[b]
8 ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ.
ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
9 ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ,
ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.
10 ರಾಣಿಯೇ, ನನಗೆ ಕಿವಿಗೊಡು.
ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11 ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[c]
12 ತೂರ್ ಪಟ್ಟಣದ ಶ್ರೀಮಂತರು
ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.
13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.
16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.
Kannada Holy Bible: Easy-to-Read Version. All rights reserved. © 1997 Bible League International