M’Cheyne Bible Reading Plan
ದಾವೀದನು ಫಿಲಿಷ್ಟಿಯರ ಜೊತೆಯಲ್ಲಿ ವಾಸಿಸುವನು
27 ಆದರೆ ದಾವೀದನು, “ಸೌಲನು ಎಂದಾದರೂ ಒಂದು ದಿನ ನನ್ನನ್ನು ಹಿಡಿದುಕೊಳ್ಳುವನು. ಈಗ ಫಿಲಿಷ್ಟಿಯರ ರಾಜ್ಯಕ್ಕೆ ತಪ್ಪಿಸಿಕೊಂಡು ಹೋಗುವುದೇ ನಾನು ಮಾಡಬಹುದಾದ ಒಳ್ಳೆಯ ಕೆಲಸ. ಆಗ ಸೌಲನು ಇಸ್ರೇಲಿನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟುಬಿಡುತ್ತಾನೆ. ಸೌಲನಿಂದ ತಪ್ಪಿಸಿಕೊಳ್ಳಲು ಇದೇ ಸರಿಯಾದ ಮಾರ್ಗ” ಎಂದು ತನ್ನಲ್ಲೇ ಯೋಚಿಸಿದನು.
2 ಆದ್ದರಿಂದ ದಾವೀದನು ತನ್ನ ಆರುನೂರು ಜನರೊಡನೆ ಇಸ್ರೇಲನ್ನು ಬಿಟ್ಟುಹೋದನು. ಅವನು ಮಾವೋಕನ ಮಗನಾದ ಆಕೀಷನಲ್ಲಿಗೆ ಹೋದನು. ಆಕೀಷನು ಗತ್‌ನ ರಾಜ. 3 ದಾವೀದನೂ ಅವನ ಜನರೂ ಅವರ ಕುಟುಂಬಗಳವರೂ ಆಕೀಷನೊಂದಿಗೆ ಗತ್‌ನಲ್ಲಿ ನೆಲೆಸಿದರು. ದಾವೀದನ ಜೊತೆಯಲ್ಲಿ ಅವನ ಇಬ್ಬರು ಹೆಂಡತಿಯರೂ ಇದ್ದರು. ಅವರು ಯಾರೆಂದರೆ, ಇಜ್ರೇಲ್ಯಳಾದ ಅಹೀನೋವಮಳು ಮತ್ತು ಕರ್ಮೆಲಿನ ಅಬೀಗೈಲಳು. ಅಬೀಗೈಲಳು ನಾಬಾಲನ ವಿಧವೆ. 4 ದಾವೀದನು ಗತ್‌ಗೆ ಓಡಿಹೋದನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು ಅವನನ್ನು ಹುಡುಕುವುದನ್ನು ಬಿಟ್ಟುಬಿಟ್ಟನು.
5 ದಾವೀದನು ಆಕೀಷನಿಗೆ, “ನೀನು ನನ್ನನ್ನು ಮೆಚ್ಚಿಕೊಂಡಿದ್ದರೆ ಯಾವುದಾದರೊಂದು ಊರಲ್ಲ್ಲಿ ನನಗೆ ಸ್ಥಳವನ್ನು ಕೊಡು. ನಾನು ನಿನ್ನ ಸೇವಕನಷ್ಟೆ. ನಾನು ನಿನ್ನೊಡನೆ ಈ ರಾಜಧಾನಿಯಲ್ಲಿ ಇರುವುದಕ್ಕಿಂತ ಅಲ್ಲಿ ವಾಸಮಾಡುತ್ತೇನೆ” ಎಂದು ಹೇಳಿದನು.
6 ಆಕೀಷನು ಕೂಡಲೆ ದಾವೀದನಿಗೆ ಚಿಕ್ಲಗ್ ಎಂಬ ಊರನ್ನು ಕೊಟ್ಟನು. ಅಂದಿನಿಂದಲೂ ಚಿಕ್ಲಗ್ ಊರು ಯೆಹೂದದ ರಾಜನಿಗೆ ಸೇರಿರುತ್ತದೆ. 7 ದಾವೀದನು ಫಿಲಿಷ್ಟಿಯರೊಂದಿಗೆ ಒಂದು ವರ್ಷ ನಾಲ್ಕು ತಿಂಗಳು ವಾಸಮಾಡಿದನು.
ದಾವೀದನು ರಾಜನಾದ ಆಕೀಷನನ್ನು ಮೋಸಗೊಳಿಸುವನು
8 ದಾವೀದನು ಮತ್ತು ಅವನ ಜನರು ಅಮಾಲೇಕ್ಯರ ಮೇಲೆಯೂ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಯುದ್ಧಮಾಡಲು ಹೋದರು. ದಾವೀದನ ಜನರು ಅವರನ್ನು ಸೋಲಿಸಿ ಅವರ ಸಂಪತ್ತನ್ನು ವಶಪಡಿಸಿಕೊಂಡರು. ಈಜಿಪ್ಟಿನವರೆಗೆ ವಿಸ್ತರಿಸಿರುವ ಶೂರಿನ ಸಮೀಪದ ತೇಲಾಮಿನವರೆಗೂ ಆ ಜನರು ವಾಸಿಸುತ್ತಿದ್ದರು. 9 ದಾವೀದನು ಆ ಪ್ರದೇಶದ ಜನರೊಂದಿಗೆ ಯುದ್ಧಮಾಡಿ ಯಾರನ್ನೂ ಜೀವಸಹಿತ ಬಿಡಲಿಲ್ಲ. ಅವರಿಗೆ ಸೇರಿದ ಕುರಿಗಳನ್ನು ದನಗಳನ್ನು, ಹೇಸರಕತ್ತೆಗಳನ್ನು, ಒಂಟೆಗಳನ್ನು ಮತ್ತು ಬಟ್ಟೆಗಳನ್ನು ದಾವೀದನು ವಶಪಡಿಸಿಕೊಂಡನು. ನಂತರ ಅವುಗಳನ್ನು ಆಕೀಷನ ಬಳಿಗೆ ತಂದನು.
10 ದಾವೀದನು ಅನೇಕ ಸಲ ಹೀಗೆ ಮಾಡಿದನು. ಪ್ರತಿಸಲವೂ ಆಕೀಷನು ದಾವೀದನನ್ನು, “ನೀನು ಎಲ್ಲಿ ಯುದ್ಧಮಾಡಿದೆ ಮತ್ತು ಇವುಗಳನ್ನು ಎಲ್ಲಿಂದ ತಂದೆ” ಎಂದು ಕೇಳುತ್ತಿದ್ದನು. ದಾವೀದನು, “ನಾನು ಯೆಹೂದ ದೇಶದ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲಿ, “ನಾನು ಎರಹ್ಮೇಲ್ಯರ ದಕ್ಷಿಣಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ “ನಾನು ಕೇನ್ಯರ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ ಹೇಳುತ್ತಿದ್ದನು. 11 ದಾವೀದನು ಒಬ್ಬ ಗಂಡಸನ್ನಾಗಲಿ ಹೆಂಗಸನ್ನಾಗಲಿ ಗತ್ ಊರಿಗೆ ಜೀವಸಹಿತ ಎಂದೂ ತರಲಿಲ್ಲ. ದಾವೀದನು, “ನಾವು ಒಬ್ಬ ಮನುಷ್ಯನನ್ನು ಜೀವಸಹಿತ ಬಿಟ್ಟರೆ, ನಾನು ನಿಜವಾಗಿ ಮಾಡುತ್ತಿರುವುದನ್ನು ಅವನು ಆಕೀಷನಿಗೆ ತಿಳಿಸಬಹುದು” ಎಂದು ಯೋಚಿಸಿದನು.
ದಾವೀದನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಹೀಗೆಯೇ ಮಾಡುತ್ತಿದ್ದನು. 12 ಆಕೀಷನು ದಾವೀದನಲ್ಲಿ ಭರವಸೆ ಇಡತೊಡಗಿದನು. ಆಕೀಷನು ತನ್ನೊಳಗೆ, “ಈಗ ದಾವೀದನ ಸ್ವಂತ ಜನರೇ ಅವನನ್ನು ದ್ವೇಷಿಸುವರು. ಇಸ್ರೇಲರು ದಾವೀದನನ್ನು ಬಹಳವಾಗಿ ದ್ವೇಷಿಸುತ್ತಾರೆ. ಈಗ ದಾವೀದನು ಶಾಶ್ವತವಾಗಿ ನನ್ನ ಸೇವೆಮಾಡುವನು” ಎಂದುಕೊಂಡನು.
ವಿಗ್ರಹಗಳಿಗೆ ಅರ್ಪಿತವಾದ ಆಹಾರದ ಬಗ್ಗೆ ಚರ್ಚೆ
8 ವಿಗ್ರಹಗಳಿಗೆ ಯಜ್ಞ ಮಾಡಿದ ಪಶುವಿನ ಮಾಂಸದ ಬಗ್ಗೆ ಈಗ ನಾನು ಬರೆಯುತ್ತೇನೆ. “ನಮಗೆಲ್ಲರಿಗೂ ಜ್ಞಾನವಿದೆ” ಎಂಬುದು ನಮಗೆ ಗೊತ್ತಿದೆ. “ಜ್ಞಾನವು” ನಮ್ಮನ್ನು ಅಹಂಕಾರದಿಂದ ತುಂಬಿಸುತ್ತದೆ. ಆದರೆ ಪ್ರೀತಿಯು ಬೇರೆಯವರಲ್ಲಿ ಭಕ್ತಿವೃದ್ಧಿಯನ್ನು ಮಾಡುತ್ತದೆ. 2 ಇಂಥಿಂಥದ್ದನ್ನು ತಿಳಿದುಕೊಂಡಿದ್ದೇನೆಂದು ಭಾವಿಸುವವನು ತಾನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿಲ್ಲ. 3 ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನು ದೇವರು ತಿಳಿದುಕೊಂಡಿದ್ದಾನೆ.
4 ಹೀಗಿರಲಾಗಿ, ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ತಿನ್ನುವುದರ ಬಗ್ಗೆ ನಾನು ಹೇಳುವುದೇನೆಂದರೆ: ಜಗತ್ತಿನಲ್ಲಿ ವಿಗ್ರಹವು ಕ್ಷುಲ್ಲಕವಾದದ್ದೆಂದು ನಮಗೆ ಗೊತ್ತಿದೆ. ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ನಮಗೆ ಗೊತ್ತಿದೆ. 5 ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ ದೇವರುಗಳೆಂದು ಕರೆಯಲ್ಪಡುವ ವಸ್ತುಗಳಿದ್ದರೆ ಅವು ನಿಜವಾಗಿಯೂ ನಮಗೆ ಮುಖ್ಯವಲ್ಲ. (ಅನೇಕ ವಸ್ತುಗಳನ್ನು ಜನರು “ದೇವರು”ಗಳೆಂತಲೂ “ಪ್ರಭು”ಗಳೆಂತಲೂ ಕರೆಯುತ್ತಾರೆ.) 6 ನಮಗಾದರೋ ಒಬ್ಬನೇ ಒಬ್ಬ ದೇವರಿದ್ದಾನೆ. ಆತನು ನಮ್ಮ ತಂದೆ. ಸಮಸ್ತವನ್ನು ಆತನೇ ಸೃಷ್ಟಿ ಮಾಡಿದನು. ನಾವು ಆತನಿಗೋಸ್ಕರ ಜೀವಿಸುತ್ತೇವೆ. ಒಬ್ಬನೇ ಒಬ್ಬ ಪ್ರಭುವಿದ್ದಾನೆ. ಆತನೇ ಯೇಸು ಕ್ರಿಸ್ತನು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು. ಆತನ ಮೂಲಕವಾಗಿ ನಾವು ಜೀವವನ್ನು ಹೊಂದಿದ್ದೇವೆ.
7 ಆದರೆ ಎಲ್ಲಾ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಕೆಲವು ಜನರು ಇಂದಿನವರೆಗೂ ವಿಗ್ರಹಗಳನ್ನು ಆರಾಧಿಸುವ ರೂಢಿಯಲ್ಲಿದ್ದಾರೆ. ಹೀಗಿರಲಾಗಿ, ಆ ಜನರು ಮಾಂಸವನ್ನು ತಿನ್ನುವಾಗ ಅದು ವಿಗ್ರಹಕ್ಕೆ ಅರ್ಪಿತವಾದದ್ದೆಂದು ಆಲೋಚಿಸುತ್ತಾರೆ. ಆದರೆ ಈ ಮಾಂಸವನ್ನು ತಿನ್ನುವುದು ತಪ್ಪಲ್ಲ ಎಂಬ ದೃಢನಂಬಿಕೆ ಅವರಲ್ಲಿಲ್ಲ. ಆದ್ದರಿಂದ, ಅವರು ಮಾಂಸವನ್ನು ತಿನ್ನುವಾಗ ತಮ್ಮನ್ನು ದೋಷಿಗಳೆಂದು ಭಾವಿಸಿಕೊಳ್ಳುತ್ತಾರೆ. 8 ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ತರಲಾರದು. ನಾವು ಮಾಂಸವನ್ನು ತಿನ್ನದಿದ್ದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಕಡಿಮೆಯೇನೂ ಆಗುವುದಿಲ್ಲ. ಅದೇ ರೀತಿ, ಮಾಂಸವನ್ನು ತಿಂದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಹೆಚ್ಚೇನೂ ಆಗುವುದಿಲ್ಲ.
9 ಆದರೆ ನಿಮ್ಮ ಸ್ವತಂತ್ರದ ಬಗ್ಗೆ ಎಚ್ಚರಿಕೆಯಿಂದಿರಿ. ನಂಬಿಕೆಯಲ್ಲಿ ಬಲಹೀನರಾಗಿರುವ ಜನರನ್ನು ನಿಮ್ಮ ಸ್ವಾತಂತ್ರ್ಯವು ಪಾಪಕ್ಕೆ ಬೀಳಿಸುವ ಸಾಧ್ಯತೆಯಿದೆ. 10 ನಿಮಗೆ ತಿಳುವಳಿಕೆ ಇರುವುದರಿಂದ ನೀವು ವಿಗ್ರಹದ ಗುಡಿಯೊಂದರಲ್ಲಿ ಸಂಕೋಚವಿಲ್ಲದೆ ಊಟ ಮಾಡಬಹುದು. ನೀವು ಅಲ್ಲಿ ಊಟ ಮಾಡುವುದನ್ನು ನಂಬಿಕೆಯಲ್ಲಿ ಬಲಹೀನನಾದ ವ್ಯಕ್ತಿಯೊಬ್ಬನು ನೋಡಿ, ವಿಗ್ರಹಗಳಿಗೆ ಅರ್ಪಿತವಾದ ಮಾಂಸವನ್ನು ತಿನ್ನಲು ಪ್ರೋತ್ಸಾಹಗೊಳ್ಳಬಹುದು. ಆದರೆ ಅದನ್ನು ತಿನ್ನಕೊಡದೆಂಬ ಭಾವನೆ ಅವನಲ್ಲಿ ಆಳವಾಗಿ ಬೇರೂರಿದೆ. 11 ಹೀಗಿರಲಾಗಿ, ಈ ಬಲಹೀನ ಸಹೋದರನು ನಿಮ್ಮ ತಿಳುವಳಿಕೆಯ ದೆಸೆಯಿಂದ ಹಾಳಾದನು. ಕ್ರಿಸ್ತನು ಈ ಸಹೋದರನಿಗೋಸ್ಕರವಾಗಿ ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ. 12 ಹೀಗೆ ನಿಮ್ಮ ಸಹೋದರ ಸಹೋದರಿಯರಿಗೆ ವಿರೋಧವಾಗಿ ಪಾಪ ಮಾಡುವಾಗ ಮತ್ತು ಅವರು ತಪ್ಪೆಂದು ಭಾವಿಸುವ ಕಾರ್ಯಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಕೇಡನ್ನು ಉಂಟುಮಾಡುವಾಗ ನೀವು ಕ್ರಿಸ್ತನಿಗೆ ವಿರೋಧವಾಗಿಯೂ ಪಾಪ ಮಾಡುವವರಾಗಿದ್ದೀರಿ. 13 ಹೀಗಿರಲಾಗಿ, ನಾನು ತಿನ್ನುವ ಆಹಾರವು ನನ್ನ ಸಹೋದರನನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ. ನನ್ನ ಸಹೋದರನ ಪಾಪಕ್ಕೆ ನಾನು ಕಾರಣನಾಗಬಾರದೆಂದು ನಾನು ಮಾಂಸ ತಿನ್ನುವುದನ್ನು ನಿಲ್ಲಿಸುತ್ತೇನೆ.
ಇಸ್ರೇಲಿನ ವಿರುದ್ಧ ಪ್ರವಾದನೆ
6 ಮತ್ತೆ ಯೆಹೋವನ ಸಂದೇಶವು ನನಗೆ ಬಂದಿತು. 2 ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲಿನ ಪರ್ವತಗಳ ಕಡೆಗೆ ಮುಖ ಮಾಡು. ಅವುಗಳ ವಿರುದ್ಧವಾಗಿ ನನಗೋಸ್ಕರ ಮಾತನಾಡಿ ಹೀಗೆ ಹೇಳು: 3 ‘ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಸಂದೇಶಕ್ಕೆ ಕಿವಿಗೊಡಿರಿ. ಬೆಟ್ಟಗಳಿಗೂ ಪರ್ವತಗಳಿಗೂ ಕೊರಕಲುಗಳಿಗೂ ಕಣಿವೆಗಳಿಗೂ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಾನು ವೈರಿಯನ್ನು ನಿಮ್ಮ ವಿರುದ್ಧ ಯುದ್ಧ ಮಾಡಲು ಕಳುಹಿಸುವೆನು. ನಿಮ್ಮ ಎಲ್ಲಾ ಉನ್ನತ ಸ್ಥಳಗಳನ್ನು ನಾಶಮಾಡುವೆನು. 4 ನಿಮ್ಮ ಯಜ್ಞವೇದಿಕೆಗಳು ನಾಶವಾಗುವವು. ನಿಮ್ಮ ಧೂಪವೇದಿಕೆಗಳು ಕೆಡವಲ್ಪಡುವವು. ನಿಮ್ಮ ಹೆಣಗಳನ್ನು ನಿಮ್ಮ ಹೊಲಸು ವಿಗ್ರಹಗಳ ಮುಂದೆ ಬಿಸಾಡುವೆನು. 5 ಇಸ್ರೇಲ್ ಜನರ ಸತ್ತ ಹೆಣಗಳನ್ನು ಅವರ ಹೊಲಸು ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಎಲುಬುಗಳನ್ನು ನಿಮ್ಮ ಯಜ್ಞವೇದಿಗಳ ಸುತ್ತಲೂ ಹರಡುವೆನು. 6 ನಿಮ್ಮ ಜನರು ವಾಸಮಾಡುವಲ್ಲೆಲ್ಲಾ ಕೆಟ್ಟಸಂಗತಿಗಳು ನಡೆಯುವವು; ಪಟ್ಟಣಗಳು ಕಲ್ಲಿನ ರಾಶಿಗಳಾಗುವವು; ಪೂಜಾಸ್ಥಳಗಳು ನಾಶಮಾಡಲ್ಪಡುವವು. ನಿಮ್ಮ ಯಜ್ಞವೇದಿಕೆಗಳು ಕೆಡವಲ್ಪಟ್ಟು ಹಾಳಾಗಿಹೋಗುವವು; ನಿಮ್ಮ ವಿಗ್ರಹಗಳು ಮುರಿಯಲ್ಪಟ್ಟು ನಾಶವಾಗುವವು. ಜನರು ಅವುಗಳನ್ನು ಇನ್ನು ಎಂದಿಗೂ ಪೂಜಿಸರು. ನಿಮ್ಮ ಧೂಪವೇದಿಕೆಗಳು ಕತ್ತರಿಸಲ್ಪಡುವವು. ನೀವು ಮಾಡಿಕೊಂಡ ವಿಗ್ರಹಗಳು ಅಳಿದುಹೋಗುವವು. 7 ಜನರು ನಿಮ್ಮ ಮಧ್ಯದಲ್ಲಿ ಕೊಲ್ಲಲ್ಪಟ್ಟು ಬೀಳುವರು. ಆಗ ನೀನು, ನಾನು ಯೆಹೋವನೆಂದು ತಿಳಿಯುವಿ.’”
8 ದೇವರು ಹೇಳಿದ್ದೇನೆಂದರೆ: “ಆದರೆ ನಾನು ನಿಮ್ಮ ಜನರಲ್ಲಿ ಕೆಲವರನ್ನು ಉಳಿದುಕೊಳ್ಳುವಂತೆ ಮಾಡುವೆನು. ನೀವು ಬೇರೆ ದೇಶಗಳಲ್ಲಿ ಚದರಿಹೋಗಿರುವಾಗ ಜನಾಂಗಗಳ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಕೊಲ್ಲಲ್ಪಡುವುದಿಲ್ಲ. 9 ಆಗ ಉಳಿದವರು ಸೆರೆಹಿಡಿಯಲ್ಪಡುವರು. ಅವರು ಪರದೇಶಕ್ಕೆ ಒಯ್ಯಲ್ಪಟ್ಟು ಅಲ್ಲಿ ವಾಸಿಸುವರು. ಅಲ್ಲಿ ಅಳಿದುಳಿದ ಜನರು ನನ್ನನ್ನು ಜ್ಞಾಪಿಸಿಕೊಳ್ಳುವರು ಮತ್ತು ಅವರ ಅಪನಂಬಿಗಸ್ತಿಕೆಯ ಹೃದಯವನ್ನು ನಾನು ಜಜ್ಜಿದೆನು. ತಾವು ಮಾಡಿದ ಕೆಟ್ಟ ಕೆಲಸಗಳಿಗಾಗಿ ತಮ್ಮನ್ನು ತಾವೇ ದ್ವೇಷಿಸುವರು. ಹಿಂದಿನ ಕಾಲದಲ್ಲಿ ಅವರು ನನ್ನಿಂದ ದೂರವಾಗಿ ನನ್ನನ್ನು ತ್ಯಜಿಸಿದರು. ತಮ್ಮ ಹೊಲಸು ವಿಗ್ರಹಗಳ ಹಿಂದೆ ಹೋದರು. ಗಂಡನನ್ನು ಬಿಟ್ಟು ಬೇರೆ ಪುರುಷನ ಸಂಗಡ ಓಡುವ ಸ್ತ್ರೀಯಂತೆ ಅವರಿದ್ದರು. ಅವರು ಇನ್ನೂ ಅನೇಕ ಅಸಹ್ಯಕರವಾದ ಕಾರ್ಯಗಳನ್ನು ಮಾಡಿದರು. 10 ನಾನೇ ಯೆಹೋವನೆಂದು ಅವರಿಗೆ ತಿಳಿಯುವುದು. ಈ ಆಪತ್ತನ್ನು ಬರಮಾಡುವೆನು ಎಂದು ನಾನು ಹೇಳಿದ್ದಕ್ಕೆ ಸರಿಯಾದ ಕಾರಣವಿತ್ತೆಂದು ಅವರು ಗ್ರಹಿಸಿಕೊಳ್ಳುವರು.”
11 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ಚಪ್ಪಾಳೆ ತಟ್ಟು, ನಿನ್ನ ಕಾಲುಗಳನ್ನು ನೆಲಕ್ಕೆ ಒದ್ದು, ‘ಅಯ್ಯೋ, ಬೇಡ!’ ಎಂದು ಹೇಳು. ಯಾಕೆಂದರೆ ಇಸ್ರೇಲ್ ಜನರು ಎಲ್ಲಾ ಅಸಹ್ಯಕರವಾದ ಮತ್ತು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಅವರು ಯುದ್ಧದಿಂದಲೂ ಕ್ಷಾಮದಿಂದಲೂ ಭಯಂಕರವಾದ ಕಾಯಿಲೆಗಳಿಂದಲೂ ಸಾಯುವರು. 12 ದೂರದಲ್ಲಿರುವ ಜನರು ರೋಗಗಳಿಂದ ಸಾಯುವರು. ಹತ್ತಿರದಲ್ಲಿರುವವರು ಕತ್ತಿಯಿಂದ ಸಾಯುವರು. ತಪ್ಪಿಸಿಕೊಂಡವರೂ ಉಳಿಸಲ್ಪಟ್ಟವರೂ ಹಸಿವೆಯಿಂದ ಸಾಯುವರು. ಆಗಲೇ ನನ್ನ ಕೋಪವು ಶಮನವಾಗುವದು. 13 ಆಗಲೇ ನಾನು ಯೆಹೋವನೆಂದು ನೀವು ಅರಿಯುವಿರಿ. ಅವರ ದೇಶದಲ್ಲಿರುವವರ ಹೆಣಗಳು ಅವರ ಹೊಲಸು ವಿಗ್ರಹಗಳ ಸುತ್ತಲೂ ಯಜ್ಞವೇದಿಗಳ ಸುತ್ತಲೂ ಎತ್ತರವಾದ ಸ್ಥಳಗಳ ಮೇಲೆಯೂ ಬೆಟ್ಟಗಳಲ್ಲಿಯೂ ಮತ್ತು ಪ್ರತಿಯೊಂದು ಹಸಿರು ಮರದ ಕೆಳಗೂ ಬೀಳುವಾಗ ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು. ಅವರು ಈ ಎಲ್ಲಾ ಸ್ಥಳಗಳಲ್ಲಿ ತಮ್ಮ ಎಲ್ಲಾ ಹೊಲಸು ವಿಗ್ರಹಗಳಿಗೆ ಪರಿಮಳಭರಿತವಾದ ಯಜ್ಞಗಳನ್ನು ಅರ್ಪಿಸಿದರು. 14 ನಾನು ಅವರ ಮೇಲೆ ನನ್ನ ಕೈಯೆತ್ತಿ ಅವರನ್ನು ದಂಡಿಸುವೆನು ಮತ್ತು ಮರುಭೂಮಿಯಿಂದ ದಿಬ್ಲದವರೆಗೆ ಅವರು ಯಾವುದೇ ದೇಶದಲ್ಲಿ ವಾಸವಾಗಿದ್ದರೂ ನಾಶಮಾಡುವೆನು. ಆಗ ನಾನೇ ಯೆಹೋವನೆಂಬುದು ಅವರಿಗೆ ತಿಳಿಯುವುದು.”
ರಚನೆಗಾರರು: ಕೋರಹೀಯರು.
44 ದೇವರೇ, ಪೂರ್ವಕಾಲದಲ್ಲಿ ನೀನು ಮಾಡಿದ
ಮಹತ್ಕಾರ್ಯಗಳ ಕುರಿತು ಕೇಳಿದ್ದೇವೆ.
ಅವುಗಳ ಕುರಿತು ನಮ್ಮ ಪೂರ್ವಿಕರೇ ನಮಗೆ ತಿಳಿಸಿದರು.
2 ದೇವರೇ, ನಿನ್ನ ಮಹಾಶಕ್ತಿಯಿಂದ ನೀನು ಈ ದೇಶವನ್ನು
ಅನ್ಯಜನಾಂಗಗಳಿಂದ ನಮಗೆ ಕೊಟ್ಟಿರುವೆ.
ಆ ವಿದೇಶಿಯರನ್ನು ನೀನು ಜಜ್ಜಿಹಾಕಿದೆ.
ಈ ದೇಶದಿಂದ ನೀನು ಅವರನ್ನು ಹೊರಡಿಸಿಬಿಟ್ಟೆ.
3 ಈ ದೇಶವು ನಮಗೆ ದೊರೆತದ್ದು ನಮ್ಮ ಪೂರ್ವಿಕರ ಖಡ್ಗಗಳಿಂದಲ್ಲ.
ಅವರನ್ನು ಜಯಶಾಲಿಗಳನ್ನಾಗಿ ಮಾಡಿದ್ದು ಅವರ ಭುಜಬಲವಲ್ಲ.
ನಮ್ಮ ಪೂರ್ವಿಕರೊಂದಿಗೆ ನೀನಿದ್ದುದರಿಂದ ಅವರಿಗೆ ಜಯವು ದೊರೆಯಿತು.
ದೇವರೇ, ನಿನ್ನ ಮಹಾಶಕ್ತಿಯು ಅವರನ್ನು ರಕ್ಷಿಸಿತು.
ಅವರ ಮೇಲೆ ನಿನಗಿದ್ದ ಪ್ರೀತಿಯನ್ನು ಅದು ತೋರಿಸಿತು.
4 ನನ್ನ ದೇವರೇ, ನೀನೇ ನನ್ನ ರಾಜನು.
ಆಜ್ಞಾಪಿಸಿ ಯಾಕೋಬನಿಗೆ ಜಯವನ್ನು ದಯಪಾಲಿಸು.
5 ನಿನ್ನ ಸಹಾಯದಿಂದಲೇ ನಮ್ಮ ಶತ್ರುಗಳನ್ನು ಹಿಂದಟ್ಟುವೆವು.
ನಿನ್ನ ಹೆಸರಿನಿಂದ, ನಮ್ಮ ಶತ್ರುಗಳ ಮೇಲೆ ನಡೆದಾಡುವೆವು.
6 ನನ್ನ ಬಿಲ್ಲುಬಾಣಗಳಲ್ಲಿ ನಾನು ಭರವಸೆವಿಡುವುದಿಲ್ಲ.
ನನ್ನ ಖಡ್ಗವು ನನ್ನನ್ನು ರಕ್ಷಿಸಲಾರದು.
7 ನೀನು ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದೆ.
ನಮ್ಮ ಶತ್ರುಗಳನ್ನು ನಾಚಿಕೆಗೆ ಗುರಿಮಾಡಿದೆ.
8 ದಿನವೆಲ್ಲಾ ದೇವರನ್ನು ಕೊಂಡಾಡಿದೆವು.
ನಿನ್ನ ಹೆಸರನ್ನು ಸದಾಕಾಲ ಸ್ತುತಿಸುವೆವು.
9 ಆದರೆ, ದೇವರೇ, ಈಗ ನೀನು ನಮ್ಮನ್ನು ಕೈಬಿಟ್ಟಿರುವೆ.
ನಮ್ಮನ್ನು ಅವಮಾನಕ್ಕೆ ಗುರಿಮಾಡಿರುವೆ.
ನೀನು ನಮ್ಮೊಂದಿಗೆ ಯುದ್ಧಕ್ಕೆ ಬರಲಿಲ್ಲ.
10 ನಮ್ಮ ವೈರಿಗಳು ನಮ್ಮನ್ನು ಹಿಂದಟ್ಟುವಂತೆ ಮಾಡಿದೆ.
ನಮ್ಮ ವೈರಿಗಳು ನಮ್ಮ ಐಶ್ವರ್ಯವನ್ನು ತೆಗೆದುಕೊಂಡರು.
11 ಕೊಯ್ಯಲ್ಪಡುವ ಕುರಿಗಳೋ ಎಂಬಂತೆ ನೀನು ನಮ್ಮನ್ನು ಅವರಿಗೆ ಒಪ್ಪಿಸಿಕೊಟ್ಟಿರುವೆ;
ಅನ್ಯ ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಟ್ಟಿರುವೆ.
12 ನಿನ್ನ ಜನರನ್ನು ಅತ್ಯಲ್ಪ ಬೆಲೆಗೆ ಮಾರಿಬಿಟ್ಟೆ.
ಬೆಲೆಯ ಬಗ್ಗೆ ವಾದವನ್ನೂ ನೀನು ಮಾಡಲಿಲ್ಲ.
13 ನೀನು ನಮ್ಮನ್ನು ನೆರೆಹೊರೆಯವರಿಗೆ ತಮಾಷೆಯನ್ನಾಗಿ ಮಾಡಿರುವೆ.
ನಮ್ಮ ನೆರೆಹೊರೆಯವರು ನಮ್ಮನ್ನು ಕಂಡು ನಗುತ್ತಾರೆ; ನಮ್ಮನ್ನು ಗೇಲಿ ಮಾಡುತ್ತಾರೆ.
14 ನಾವು ಜನರಿಗೆ ಗಾದೆಯ ಮಾತಾಗಿದ್ದೇವೆ.
ಸ್ವದೇಶವನ್ನು ಹೊಂದಿಲ್ಲದವರು ಸಹ ನಮ್ಮನ್ನು ಕಂಡು ತಲೆಯಾಡಿಸುತ್ತಾ ನಗುತ್ತಾರೆ.
15 ನಾಚಿಕೆಯು ನನ್ನನ್ನು ಕವಿದುಕೊಂಡಿದೆ.
ಅವಮಾನವು ದಿವವೆಲ್ಲಾ ನನ್ನೆದುರಿನಲ್ಲೇ ಇದೆ.
16 ನನ್ನ ವೈರಿಗಳ ಮತ್ತು ದೂಷಕರ
ನಿಂದೆಯ ಮಾತುಗಳು ನನ್ನೆದುರಿನಲ್ಲಿ ಇವೆ.
17 ನಾವು ನಿನ್ನನ್ನು ಮರೆತಿಲ್ಲದಿದ್ದರೂ
ನಾವು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿಲ್ಲದಿದ್ದರೂ ಇವೆಲ್ಲಾ ನಮಗೆ ಬಂದಿವೆ.
18 ನಾವು ನಿನಗೆ ವಿಮುಖರಾಗದೆ
ನಿನ್ನನ್ನೇ ಹಿಂಬಾಲಿಸಿದೆವು.
19 ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ.
ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.
20 ನಮ್ಮ ದೇವರ ಹೆಸರನ್ನು ನಾವು ಮರೆತುಬಿಟ್ಟೆವೋ?
ಅನ್ಯದೇವರುಗಳಿಗೆ ನಾವು ಪ್ರಾರ್ಥಿಸಿದೆವೋ? ಇಲ್ಲ!
21 ದೇವರಿಗೆ ಇವು ಖಂಡಿತವಾಗಿ ತಿಳಿದಿವೆ.
ನಮ್ಮ ಅಂತರಾಳದ ರಹಸ್ಯಗಳನ್ನು ಸಹ ಆತನು ಬಲ್ಲನು.
22 ನಿನ್ನ ನಿಮಿತ್ತ ನಾವು ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ;
ಕೊಯ್ಯಲು ಕೊಂಡೊಯ್ಯುವ ಕುರಿಗಳಂತಾಗಿದ್ದೇವೆ.
23 ನನ್ನ ಒಡೆಯನೇ, ಎದ್ದೇಳು!
ನೀನು ನಿದ್ರಿಸುತ್ತಿರುವುದೇಕೆ?
ಎದ್ದೇಳು! ನಮ್ಮನ್ನು ಶಾಶ್ವತವಾಗಿ ಕೈಬಿಡಬೇಡ.
24 ನೀನು ನಮಗೆ ಮರೆಯಾಗಿರುವುದೇಕೆ?
ನೀನು ನಮ್ಮ ನೋವುಗಳನ್ನೂ ತೊಂದರೆಗಳನ್ನೂ ಮರೆತುಬಿಟ್ಟಿರುವೆಯಾ?
25 ನಾವು ಧೂಳಿಗೆ ತಳ್ಳಲ್ಪಟ್ಟವರಾಗಿದ್ದೇವೆ.
ನಮ್ಮ ಶರೀರವು ನೆಲಕ್ಕೆ ಹತ್ತಿಕೊಂಡಿದೆ.
26 ಎದ್ದು ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯ ನಿಮಿತ್ತ ನಮ್ಮನ್ನು ರಕ್ಷಿಸು.
Kannada Holy Bible: Easy-to-Read Version. All rights reserved. © 1997 Bible League International