M’Cheyne Bible Reading Plan
ದಾವೀದ ಮತ್ತು ನಾಬಾಲ್
25 ಸಮುವೇಲನು ಮರಣಹೊಂದಿದನು. ಇಸ್ರೇಲರೆಲ್ಲರೂ ಒಟ್ಟಾಗಿ ಸೇರಿ ಸಮುವೇಲನ ಮರಣಕ್ಕಾಗಿ ಗೋಳಾಡಿದರು. ಅವರು ಸಮುವೇಲನನ್ನು ಅವನ ನಿವಾಸವಿದ್ದ ರಾಮದಲ್ಲಿ ಸಮಾಧಿಮಾಡಿದರು.
ನಂತರ ದಾವೀದನು ಪಾರಾನ್ ಮರಳುಗಾಡಿಗೆ ಹೋದನು. 2 ಮಾವೋನ್‌ನಲ್ಲಿ ಒಬ್ಬ ಮನುಷ್ಯನು ವಾಸಿಸುತ್ತಿದ್ದನು. ಈ ಮನುಷ್ಯನು ಬಹಳ ಶ್ರೀಮಂತನಾಗಿದ್ದನು. ಅವನು ಮೂರು ಸಾವಿರ ಕುರಿಗಳನ್ನೂ ಒಂದು ಸಾವಿರ ಆಡುಗಳನ್ನೂ ಹೊಂದಿದ್ದನು. ಅವನು ಕರ್ಮೆಲಿನಲ್ಲಿ ವ್ಯಾಪಾರ ಮಾಡುತ್ತಿದ್ದನು. ಒಮ್ಮೆ ಅವನು ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕರ್ಮೆಲಿಗೆ ಹೋಗಿದ್ದನು. 3 ಈ ಮನುಷ್ಯನ ಹೆಸರು ನಾಬಾಲ್. ಅವನ ಹೆಂಡತಿಯ ಹೆಸರು ಅಬೀಗೈಲ್. ಅಬೀಗೈಲಳು ಬುದ್ಧಿವಂತೆಯೂ ಸುಂದರಿಯೂ ಆಗಿದ್ದಳು. ಆದರೆ ನಾಬಾಲನು ಕ್ರೂರಿ ಮತ್ತು ಕೀಳಾದ ವ್ಯಕ್ತಿ. ನಾಬಾಲನು ಕಾಲೇಬನ ಕುಟುಂಬಕ್ಕೆ ಸೇರಿದವನು.
4 ನಾಬಾಲನು ತನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿದ್ದಾನೆಂಬ ಸುದ್ದಿಯು ಮರಳುಗಾಡಿನಲ್ಲಿದ್ದ ದಾವೀದನಿಗೆ ತಿಳಿಯಿತು. 5 ಆದ್ದರಿಂದ ನಾಬಾಲನ ಸಂಗಡ ಮಾತನಾಡಲು ದಾವೀದನು ಹತ್ತು ಜನ ಯುವಕರನ್ನು ಕರೆದು ಅವರಿಗೆ, “ಕರ್ಮೆಲಿಗೆ ಹೋಗಿ ನಾಬಾಲನನ್ನು ಕಂಡುಹಿಡಿಯಿರಿ. ಅವನಿಗೆ ನನ್ನ ಪರವಾಗಿ ಶುಭವನ್ನು ಕೋರಿ.” 6 ಈ ಸಂದೇಶವನ್ನು ಅವನಿಗೆ ಹೇಳಿರಿ: “ನೀನು ಮತ್ತು ನಿನ್ನ ಕುಟುಂಬದವರು ಕ್ಷೇಮವಾಗಿದ್ದೀರೆಂದು ನಾನು ನಂಬಿದ್ದೇನೆ. ನಿನ್ನ ಸಕಲ ಸಂಪತ್ತು ಚೆನ್ನಾಗಿರುವುದೆಂದು ನಾನು ನಂಬಿದ್ದೇನೆ. 7 ನೀನು ನಿನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿರುವುದು ನನಗೆ ತಿಳಿಯಿತು. ನಿನ್ನ ಕುರುಬರು ನಮ್ಮೊಡನೆ ಸ್ವಲ್ಪ ಸಮಯವಿದ್ದರು. ನಾವು ಅವರಿಗೆ ಕೆಟ್ಟದ್ದೇನನ್ನೂ ಮಾಡಲಿಲ್ಲ. ಅವರು ಕರ್ಮೆಲಿನಲ್ಲಿ ಸ್ವಲ್ಪ ಸಮಯವಿದ್ದಾಗ ನಾವು ಅವರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ. 8 ನಿನ್ನ ಸೇವಕರನ್ನು ಕೇಳು, ಇದು ನಿಜವೆಂಬುದನ್ನು ಅವರು ನಿನಗೆ ತಿಳಿಸುತ್ತಾರೆ. ನನ್ನ ಯುವಕರ ಬಗ್ಗೆ ದಯವಿಟ್ಟು ದಯಾಳುವಾಗಿರು. ಈ ಶುಭಸಂದರ್ಭದಲ್ಲಿ ನಾವು ನಿಮ್ಮ ಹತ್ತಿರಕ್ಕೆ ಬರುತ್ತೇವೆ. ಸ್ನೇಹಿತನಾದ[a] ದಾವೀದನಿಗಾಗಿ ನಿನಗೆ ಸಾಧ್ಯವಿದ್ದಷ್ಟನ್ನು ದಯವಿಟ್ಟು ಈ ಯುವಕರಿಗೆ ಕೊಡು” ಎಂದು ಹೇಳಿ ಕಳುಹಿಸಿದನು.
9 ದಾವೀದನ ಜನರು ನಾಬಾಲನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸಿದರು. 10 ಆದರೆ ನಾಬಾಲನು ಅವರನ್ನು ಕೀಳಾಗಿ ಕಂಡು, “ದಾವೀದನು ಯಾರು? ಈ ಇಷಯನ ಮಗನೆಂಬವನು ಯಾರು? ಇತ್ತೀಚಿನ ದಿನಗಳಲ್ಲಿ ತಮ್ಮ ಒಡೆಯರ ಹತ್ತಿರದಿಂದ ಓಡಿ ಹೋಗಿರುವ ಅನೇಕ ಗುಲಾಮರುಗಳಿದ್ದಾರೆ! 11 ನನ್ನ ಬಳಿ ನೀರು ಮತ್ತು ರೊಟ್ಟಿಗಳಿವೆ. ನನ್ನ ಕುರಿಗಳಿಂದ ತುಪ್ಪಟವನ್ನು ಕತ್ತರಿಸುತ್ತಿರುವ ಸೇವಕರಿಗೋಸ್ಕರ ಮಾಂಸವೂ ನನ್ನಲ್ಲಿದೆ. ಆದರೆ ನನಗೆ ಗೊತ್ತಿಲ್ಲದ ಜನರಿಗೆ ನಾನು ಕೊಡುವುದೇ ಇಲ್ಲ!” ಎಂದು ಹೇಳಿದನು.
12 ದಾವೀದನ ಜನರು ಹಿಂತಿರುಗಿ ಹೋಗಿ ನಾಬಾಲನು ಹೇಳಿದ್ದನ್ನೆಲ್ಲಾ ದಾವೀದನಿಗೆ ತಿಳಿಸಿದರು. 13 ಆಗ ದಾವೀದನು ತನ್ನ ಜನರಿಗೆ, “ನಿಮ್ಮ ಆಯುಧಗಳನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ!” ಎಂದು ಹೇಳಿದನು. ದಾವೀದನು ಮತ್ತು ಅವನ ಜನರು ಆಯುಧಗಳನ್ನು ಕಟ್ಟಿಕೊಂಡರು. ದಾವೀದನ ಸಂಗಡ ಸುಮಾರು ನಾನೂರು ಜನರು ಹೋದರು; ಇನ್ನೂರು ಜನರು ಸರಕುಗಳ ಬಳಿಯಲ್ಲಿ ಉಳಿದುಕೊಂಡರು.
ಅಬೀಗೈಲಳು ಕೇಡಿನಿಂದ ತಪ್ಪಿಸುವಳು
14 ನಾಬಾಲನ ಸೇವಕನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಒಡೆಯನನ್ನು ವಂದಿಸಲು ದಾವೀದನು ಅರಣ್ಯದಿಂದ ಸಂದೇಶಕರನ್ನು ಕಳುಹಿಸಿದ್ದನು. ಆದರೆ ನಾಬಾಲನು ದಾವೀದನ ಸಂದೇಶಕರೊಂದಿಗೆ ಕೀಳಾಗಿ ನಡೆದುಕೊಂಡನು. 15 ಈ ಜನರು ನಮಗೆ ಬಹಳ ಒಳ್ಳೆಯವರಾಗಿದ್ದರು. ನಾವು ಆಡುಗಳೊಂದಿಗೆ ಹೊಲಗಳಿಗೆ ಹೋಗಿದ್ದಾಗ ದಾವೀದನ ಜನರು ಆ ಸಮಯದಲ್ಲೆಲ್ಲ ನಮ್ಮ ಜೊತೆಗಿದ್ದರು! ಅವರು ನಮಗೆ ಯಾವುದೇ ಕೆಡುಕನ್ನು ಮಾಡಲಿಲ್ಲ! ಅವರು ನಮ್ಮೊಂದಿಗಿದ್ದ ಸಮಯದಲ್ಲೆಲ್ಲ ನಮ್ಮಿಂದ ಏನನ್ನೂ ಕದಿಯಲಿಲ್ಲ! 16 ನಾವು ಕುರಿಗಳನ್ನು ಕಾಯುತ್ತಿದ್ದಾಗ ದಾವೀದನ ಜನರು ನಮ್ಮನ್ನು ಹಗಲುರಾತ್ರಿ ರಕ್ಷಿಸಿದರು! ಅವರು ನಮ್ಮ ಸುತ್ತಲೂ ಗೋಡೆಯಂತಿದ್ದರು. 17 ಈಗ ಅದರ ಬಗ್ಗೆ ಯೋಚಿಸಿ ನೀನು ಮಾಡಬೇಕಾದದ್ದನ್ನು ತೀರ್ಮಾನಿಸು. ಮೂರ್ಖನಾದ ನಾಬಾಲನೊಂದಿಗೆ ಮಾತಾಡಿ ಅವನ ಮನಸ್ಸನ್ನು ಬದಲಾಯಿಸುವುದು ಅಸಾಧ್ಯ. ನಮ್ಮ ಒಡೆಯನಿಗೂ ಅವನ ಕುಟುಂಬಕ್ಕೂ ಭೀಕರವಾದ ಕೇಡು ಬರಲಿದೆ” ಎಂದು ಹೇಳಿದನು.
18 ಅಬೀಗೈಲಳು ಇನ್ನೂರು ರೊಟ್ಟಿಗಳನ್ನೂ ಎರಡು ದ್ರಾಕ್ಷಾರಸದ ಚೀಲಗಳನ್ನೂ ಐದು ಕುರಿಗಳ ಬೇಯಿಸಿದ ಮಾಂಸವನ್ನೂ ಹದಿನೇಳು ಕಿಲೋಗ್ರಾಂ ಬೇಯಿಸಿದ ಕಾಳನ್ನೂ ನೂರುಗೊಂಚಲು ಒಣದ್ರಾಕ್ಷಿಯನ್ನೂ ಅಂಜೂರ ಹಣ್ಣಿನ ಇನ್ನೂರು ಉಂಡೆಗಳನ್ನೂ ತ್ವರಿತವಾಗಿ ತೆಗೆದುಕೊಂಡಳು. ಅವಳು ಅವುಗಳನ್ನು ಕತ್ತೆಗಳ ಮೇಲೆ ಹೇರಿದಳು. 19 ನಂತರ ಅಬೀಗೈಲಳು ತನ್ನ ಸೇವಕರಿಗೆ, “ಮುಂದೆ ನಡೆಯಿರಿ, ನಾನು ನಿಮ್ಮ ಹಿಂದೆ ಬರುತ್ತೇನೆ” ಎಂದಳು. ಆದರೆ ಅವಳು ತನ್ನ ಗಂಡನಿಗೆ ಹೇಳಲಿಲ್ಲ.
20 ಅಬೀಗೈಲಳು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನೂ ಸಂಧಿಸಿದಳು.
21 ಅಬೀಗೈಲಳನ್ನು ಸಂಧಿಸುವುದಕ್ಕೆ ಮುಂಚೆ ದಾವೀದನು, “ನಾಬಾಲನ ಆಸ್ತಿಯನ್ನು ನಾನು ಅರಣ್ಯದಲ್ಲಿ ಕಾಪಾಡಿದೆನು. ಅವನ ಕುರಿಗಳಲ್ಲಿ ಒಂದೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಂಡೆನು. ನಾನು ಅವನಿಂದ ಏನನ್ನೂ ಅಪೇಕ್ಷಿಸದೆ ಇದನ್ನೆಲ್ಲ ಮಾಡಿದೆ! ನಾನು ಅವನಿಗೆ ಒಳ್ಳೆಯದನ್ನು ಮಾಡಿದೆ; ಆದರೆ ಅವನು ನನಗೆ ಕೆಟ್ಟವನಾದನು. 22 ನಾಳೆ ಬೆಳಗಾಗುವುದರೊಳಗಾಗಿ ನಾಬಾಲನ ಕುಟುಂಬದಲ್ಲಿ ಒಬ್ಬರಾದರೂ ಜೀವದಿಂದ ಉಳಿದುಕೊಳ್ಳಲು ನಾನು ಅವಕಾಶಕೊಟ್ಟರೆ ದೇವರು ನನ್ನನ್ನು ದಂಡಿಸಲಿ” ಎಂದು ಹೇಳಿದ್ದನು.
23 ಅಬೀಗೈಲಳು ದಾವೀದನನ್ನು ಕಂಡ ಕೂಡಲೆ ಕತ್ತೆಯಿಂದ ಬೇಗನೆ ಇಳಿದು ದಾವೀದನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. 24 ಅಬೀಗೈಲಳು ದಾವೀದನ ಪಾದಗಳಿಗೆ ಬಿದ್ದು, “ಒಡೆಯನೇ, ನಿನ್ನೊಂದಿಗೆ ಮಾತನಾಡಲು ದಯವಿಟ್ಟು ನನಗೆ ಅವಕಾಶ ಕೊಡು. ನಾನು ಹೇಳುವುದನ್ನು ಆಲಿಸು. ನಡೆದುಹೋದ ಸಂಗತಿಗೆ ನನ್ನನ್ನೇ ನಿಂದಿಸು. 25 ನೀನು ಕಳುಹಿಸಿದ ಜನರನ್ನು ನಾನು ನೋಡಲಿಲ್ಲ. ಒಡೆಯನೇ, ಮೂರ್ಖನಾದ ಆ ಮನುಷ್ಯನ ಮೇಲೆ ಯಾವ ಲಕ್ಷ್ಯವನ್ನೂ ಇಡಬೇಡ. ಅವನು ತನ್ನ ಹೆಸರಿಗೆ ತಕ್ಕಂತೆ ಇದ್ದಾನೆ. ಅವನ ಹೆಸರಿನ ಅರ್ಥವೂ ‘ಮೂರ್ಖ’ ಮತ್ತು ಅವನು ನಿಜವಾಗಿಯೂ ಮೂರ್ಖ. 26 ಮುಗ್ದಜನರನ್ನು ಕೊಂದು ಅಪರಾಧಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆಯಾಗಿಯೂ ನಿನ್ನ ಆಣೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುಮಾಡುವವರೂ ನಾಬಾಲನಂತಾಗಲಿ. 27 ಈಗ ನಾನು ನಿನಗಾಗಿ ಈ ಕೊಡುಗೆಗಳನ್ನು ತಂದಿದ್ದೇನೆ. ನಿನ್ನನ್ನು ಹಿಂಬಾಲಿಸುತ್ತಿರುವ ನಿನ್ನ ಸೇವಕರಿಗೆ ದಯವಿಟ್ಟು ಇವುಗಳನ್ನು ಕೊಡು. 28 ನಾನು ಮಾಡಿದ ತಪ್ಪನ್ನು ದಯವಿಟ್ಟು ಕ್ಷಮಿಸು. ಯೆಹೋವನು ನಿನ್ನ ಕುಟುಂಬವನ್ನು ಪ್ರಬಲಗೊಳಿಸುತ್ತಾನೆಂದೂ ನಿನ್ನ ಕುಟುಂಬದಿಂದ ಅನೇಕ ರಾಜರು ಬರುತ್ತಾರೆಂದೂ ನನಗೆ ತಿಳಿದಿದೆ! ನೀನು ಯೆಹೋವನ ಯುದ್ಧಗಳಲ್ಲಿ ಹೋರಾಡುವುದರಿಂದ ಯೆಹೋವನು ಇದನ್ನು ನೆರವೇರಿಸುತ್ತಾನೆ. ನೀನು ಜೀವಿಸಿರುವ ತನಕ ಜನರು ನಿನ್ನಲ್ಲಿ ಯಾವುದೇ ಬಗೆಯ ಕೆಟ್ಟದನ್ನು ಕಂಡುಹಿಡಿಯುವುದಿಲ್ಲ! 29 ನಿನ್ನನ್ನು ಕೊಲ್ಲಲು ಒಬ್ಬ ವ್ಯಕ್ತಿಯು ಅಟ್ಟಿಸಿಕೊಂಡು ಬಂದರೆ, ನಿನ್ನ ದೇವರಾದ ಯೆಹೋವನು ನಿನ್ನ ಜೀವವನ್ನು ರಕ್ಷಿಸುತ್ತಾನೆ! ಆದರೆ ಯೆಹೋವನು ನಿನ್ನ ಶತ್ರುಗಳನ್ನು ಕವಣೆಯ ಕಲ್ಲನ್ನು ಎಸೆಯುವಂತೆ ಎಸೆದುಬಿಡುತ್ತಾನೆ! 30 ನಿನಗಾಗಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ. ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನೂ ನೆರವೇರಿಸುತ್ತಾನೆ! ದೇವರು ನಿನ್ನನ್ನು ಇಸ್ರೇಲರ ನಾಯಕನನ್ನಾಗಿ ಮಾಡಿದಾಗ 31 ನಿರಪರಾಧಿಗಳ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನು ಗುರಿಯಾಗುವುದಿಲ್ಲ; ನೀನು ಆ ಬಲೆಗೂ ಬೀಳುವುದಿಲ್ಲ. ನೀನು ಆ ಮಹಾಪದವಿಗೆ ಬಂದಾಗ ನನ್ನನ್ನು ಮರೆತುಬಿಡಬೇಡ” ಎಂದು ಹೇಳಿದಳು.
32 ಆಗ ದಾವೀದನು ಅಬೀಗೈಲಳಿಗೆ, “ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ದೇವರೇ ನಿನ್ನನ್ನು ನನ್ನ ಬಳಿಗೆ ಕಳುಹಿಸಿದ್ದಾನೆ. 33 ನಿನ್ನ ಒಳ್ಳೆಯ ತೀರ್ಪಿಗಾಗಿ ದೇವರು ನಿನ್ನನ್ನು ಆಶೀರ್ವದಿಸಲಿ. ಈ ದಿನ ನಾನು ನಿರ್ದೋಷಿಗಳನ್ನು ಕೊಲ್ಲದಂತೆ ನೀನು ನನ್ನನ್ನು ತಡೆದೆ. 34 ಇಸ್ರೇಲರ ದೇವರಾದ ಯೆಹೋವನಾಣೆ, ನೀನು ನನ್ನನ್ನು ಸಂಧಿಸಲು ಬೇಗನೆ ಬರದಿದ್ದರೆ ನಾಳೆ ಹೊತ್ತಾರೆಯ ವೇಳೆಗೆ ನಾಬಾಲನ ಕುಟುಂಬದಲ್ಲಿ ಒಬ್ಬನೂ ಜೀವಸಹಿತ ಉಳಿಯುತ್ತಿರಲಿಲ್ಲ” ಎಂದು ಹೇಳಿದನು.
35 ನಂತರ ದಾವೀದನು ಅಬೀಗೈಲಳ ಕೊಡುಗೆಗಳನ್ನು ಸ್ವೀಕರಿಸಿ ಆಕೆಗೆ, “ಶಾಂತಿಯಿಂದ ಮನೆಗೆ ಹಿಂದಿರುಗು. ನಾನು ನಿನ್ನ ಮಾತುಗಳನ್ನು ಆಲಿಸಿದ್ದೇನೆ ಮತ್ತು ನೀನು ಕೇಳಿಕೊಂಡಿರುವುದನ್ನು ನೆರವೇರಿಸುತ್ತೇನೆ” ಎಂದು ಹೇಳಿದನು.
ನಾಬಾಲನ ಮರಣ
36 ಅಬೀಗೈಲಳು ನಾಬಾಲನ ಬಳಿಗೆ ಹಿಂದಿರುಗಿ ಹೋದಳು. ನಾಬಾಲನು ಮನೆಯಲ್ಲಿಯೇ ಇದ್ದನು. ನಾಬಾಲನು ರಾಜನಂತೆ ತಿನ್ನುತ್ತಾ ಕುಡಿದು ಮತ್ತನಾಗಿದ್ದನು. ಆದ್ದರಿಂದ ಅಬೀಗೈಲಳು ಮಾರನೆಯ ದಿನದ ಹೊತ್ತಾರೆಯವರೆಗೆ ನಾಬಾಲನಿಗೆ ಏನನ್ನೂ ಹೇಳಲಿಲ್ಲ. 37 ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾಘಾತವಾಯಿತು. ಅವನು ಸ್ತಬ್ಧನಾದನು. 38 ಹತ್ತು ದಿನಗಳಾದ ಮೇಲೆ, ಯೆಹೋವನು ನಾಬಾಲನಿಗೆ ಸಾವನ್ನು ಬರಮಾಡಿದನು.
39 ನಾಬಾಲನು ಸತ್ತನೆಂಬುದು ದಾವೀದನಿಗೆ ತಿಳಿಯಿತು. ದಾವೀದನು, “ಯೆಹೋವನಿಗೆ ಸ್ತೋತ್ರವಾಗಲಿ! ನಾಬಾಲನು ನನ್ನ ಬಗ್ಗೆ ಕೆಟ್ಟಮಾತುಗಳನ್ನು ಆಡಿದನು, ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ನಾನು ತಪ್ಪುಮಾಡದಂತೆ ಯೆಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯೆಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು.
ನಂತರ ದಾವೀದನು ಅಬೀಗೈಲಳಿಗೆ ಒಂದು ಸಂದೇಶವನ್ನು ಕಳುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿಕೊಂಡನು. 40 ದಾವೀದನ ಸೈನಿಕರು ಕರ್ಮೆಲಿಗೆ ಹೋಗಿ ಅಬೀಗೈಲಳಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕೆಂಬುದು ದಾವೀದನ ಅಪೇಕ್ಷೆ” ಎಂದು ಹೇಳಿದರು.
41 ಅಬೀಗೈಲಳು ಸಾಷ್ಟಾಂಗನಮಸ್ಕಾರಮಾಡಿ, “ನಾನು ನಿಮ್ಮ ದಾಸಿ. ನಾನು ನಿಮ್ಮ ಸೇವೆಗೆ ಸಿದ್ಧಳಾಗಿದ್ದೇನೆ. ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯಲು ಸಿದ್ಧಳಾಗಿರುವೆ” ಎಂದಳು.
42 ಅಬೀಗೈಲಳು ಬೇಗನೆ ಒಂದು ಕತ್ತೆಯ ಮೇಲೇರಿ, ದಾವೀದನ ಸಂದೇಶಕರೊಂದಿಗೆ ಹೊರಟುಹೋದಳು. ಅಬೀಗೈಲಳು ಐದು ಜನ ಸೇವಕಿಯರನ್ನು ತನ್ನೊಂದಿಗೆ ಕರೆದುಕೊಂಡು ಹೋದಳು. ಅವಳು ದಾವೀದನ ಹೆಂಡತಿಯಾದಳು. 43 ದಾವೀದನು ಇಜ್ರೇಲಿನವಳಾದ ಅಹೀನೋವಮಳನ್ನು ಸಹ ಮದುವೆಯಾದನು. ಅಹೀನೋವಮಳು ಮತ್ತು ಅಬೀಗೈಲರಿಬ್ಬರೂ ದಾವೀದನ ಪತ್ನಿಯರು. 44 ಸೌಲನ ಮಗಳಾದ ಮೀಕಲಳೂ ದಾವೀದನ ಪತ್ನಿ. ಆದರೆ ಸೌಲನು ಅವಳನ್ನು ಗಲ್ಲೀಮ್‌ನ ಲಯಿಷನ ಮಗನಾದ ಪಲ್ಟೀ ಎಂಬವನಿಗೆ ಮದುವೆ ಮಾಡಿಕೊಟ್ಟನು.
ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು
6 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು? 2 ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ. 3 ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು. 4 ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ. 5 ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ? 6 ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!
7 ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು. 8 ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.
9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.
ದೇವರ ಮಹಿಮೆಗಾಗಿ ನಿಮ್ಮ ದೇಹಗಳನ್ನು ಉಪಯೋಗಿಸಿರಿ
12 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ಪ್ರತಿಯೊಂದೂ ಜನರಿಗೆ ಪ್ರಯೋಜಕವಲ್ಲ. “ಪ್ರತಿಯೊಂದನ್ನೂ ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ನಾನು ಯಾವುದನ್ನೂ ನನ್ನ ಒಡೆಯನನ್ನಾಗಿ ಮಾಡಿಕೊಳ್ಳುವುದಿಲ್ಲ. 13 “ಆಹಾರವು ಹೊಟ್ಟೆಗೋಸ್ಕರವಿದೆ, ಹೊಟ್ಟೆಯು ಆಹಾರಕ್ಕೋಸ್ಕರವಿದೆ.” ಹೌದು, ದೇವರು ಅವೆರಡನ್ನು ನಾಶಮಾಡುವನು. ದೇಹವಿರುವುದು ಲೈಂಗಿಕ ಪಾಪಮಾಡುವುದಕ್ಕಾಗಿಯಲ್ಲ. ದೇಹವು ಪ್ರಭುವಿಗೋಸ್ಕರವಿದೆ, ಪ್ರಭುವು ದೇಹಕ್ಕೋಸ್ಕರವಿದ್ದಾನೆ. 14 ದೇವರು ತನ್ನ ಶಕ್ತಿಯಿಂದ ಪ್ರಭು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ದೇವರು ನಮ್ಮನ್ನು ಸಹ ಜೀವಂತವಾಗಿ ಎಬ್ಬಿಸುವನು. 15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಹೀಗಿರಲಾಗಿ, ನಾನು ಕ್ರಿಸ್ತನ ಅಂಗಗಳನ್ನು ತೆಗೆದುಕೊಂಡು ಅವುಗಳನ್ನು ಸೂಳೆಯ ಅಂಗಗಳನ್ನಾಗಿ ಮಾಡಕೂಡದು. 16 “ಇಬ್ಬರೂ ಒಂದೇ ದೇಹವಾಗುತ್ತಾರೆ”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ದರಿಂದ ಸೂಳೆಯೊಂದಿಗೆ ಲೈಂಗಿಕ ಸಂಬಂಧವಿರುವವನು ಆಕೆಯೊಂದಿಗೆ ಒಂದೇ ದೇಹವಾಗಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು. 17 ಆದರೆ ಪ್ರಭುವಿನೊಂದಿಗೆ ಸಂಬಂಧವನ್ನು ಹೊಂದಿರುವಂಥವನು ಆತ್ಮದಲ್ಲಿ ಪ್ರಭುವಿನೊಂದಿಗೆ ಒಂದಾಗಿರುತ್ತಾನೆ.
18 ಆದ್ದರಿಂದ ಲೈಂಗಿಕ ಪಾಪದಿಂದ ಓಡಿಹೋಗಿರಿ. ಒಬ್ಬನು ಮಾಡುವ ಇತರ ಪಾಪಗಳೆಲ್ಲಾ ಅವನ ದೇಹದ ಹೊರಗಾಗಿವೆ. ಆದರೆ ಲೈಂಗಿಕ ಪಾಪ ಮಾಡುವ ವ್ಯಕ್ತಿ ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. 19 ನಿಮ್ಮ ದೇಹವು ಪವಿತ್ರಾತ್ಮನಿಗೆ ಆಲಯವಾಗಿದೆ ಎಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮೊಳಗಿದ್ದಾನೆ. ನೀವು ದೇವರಿಂದ ಆತನನ್ನು ಹೊಂದಿಕೊಂಡಿರಿ. ನೀವು ನಿಮ್ಮ ಸ್ವಂತ ಸ್ವತ್ತುಗಳಲ್ಲ. 20 ನೀವು ದೇವರಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರು. ಆದ್ದರಿಂದ ನಿಮ್ಮ ದೇಹಗಳಿಂದ ದೇವರನ್ನು ಘನಪಡಿಸಿರಿ.
ಜೆರುಸಲೇಮಿನ ನಾಶನದ ಕುರಿತು ಮುನ್ನೆಚ್ಚರಿಕೆ
4 “ನರಪುತ್ರನೇ, ಒಂದು ಇಟ್ಟಿಗೆಯನ್ನು ತೆಗೆದುಕೊ, ಅದನ್ನು ನಿನ್ನ ಮುಂದೆ ಇಟ್ಟು ಅದರ ಮೇಲೆ ಒಂದು ಚಿತ್ರವನ್ನು ಅಂದರೆ ಜೆರುಸಲೇಮ್ ನಗರದ ಚಿತ್ರವನ್ನು ಕೊರೆ. 2 ಆಮೇಲೆ, ನೀನೇ ಒಂದು ಸೈನ್ಯದೊಂದಿಗೆ ಆ ನಗರವನ್ನು ಮುತ್ತಿಗೆ ಹಾಕಿದವನಂತೆ ನಟನೆ ಮಾಡು. ನಗರದ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿ ನೀನು ಅದಕ್ಕೆ ಧಾಳಿ ಮಾಡಲು ಸಹಾಯವಾಗುವಂತೆ ಮಾಡು. ನಗರದ ಪೌಳಿಗೋಡೆಯ ತನಕ ಒಂದು ರಸ್ತೆಯನ್ನು ತಯಾರಿಸು. ಒಂದು ಭಿತ್ತಿಭೇದಕ ಯಂತ್ರವನ್ನು ತಂದು ಸೈನ್ಯದ ಪಾಳೆಯಗಳನ್ನು ನಗರದ ಸುತ್ತಲೂ ನಿರ್ಮಿಸು. 3 ಆ ಬಳಿಕ ಒಂದು ಕಬ್ಬಿಣದ ರೊಟ್ಟಿ ಕಲ್ಲನ್ನು ನಿನಗೂ ನಗರಕ್ಕೂ ಮಧ್ಯೆ ಇಡು. ಅದು ನಿನಗೂ ನಗರಕ್ಕೂ ನಡುವೆ ಇರುವ ಕಬ್ಬಿಣದ ಗೋಡೆಯಂತಿರುವುದು. ಈ ರೀತಿಯಾಗಿ ನೀನು ಆ ನಗರಕ್ಕೆ ವಿರುದ್ಧವಾಗಿರುವಂತೆ ಕಂಡುಬರುವೆ. ನೀನು ಆ ನಗರಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧ ಮಾಡುವಿ. ಯಾಕೆಂದರೆ, ಶೀಬ್ರದಲ್ಲೇ ಏನು ಸಂಭವಿಸುತ್ತದೆ ಎಂಬುದಕ್ಕೆ ಇಸ್ರೇಲ್ ಜನರಿಗೆ ಇದು ಸೂಚನೆಯಾಗಿದೆ.
4 “ಆಮೇಲೆ ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿಕೊಂಡು ಇಸ್ರೇಲ್ ಜನರ ದೋಷವನ್ನು ನಿನ್ನ ಎಡಮಗ್ಗುಲ ಮೇಲೆ ಹಾಕು. ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿರುವಷ್ಟು ದಿನ ಇಸ್ರೇಲರ ದೋಷಗಳನ್ನು ಹೊತ್ತುಕೊಳ್ಳುವೆ. 5 ನೀನು ಮುನ್ನೂರತೊಂಭತ್ತು ದಿವಸಗಳ ತನಕ ಇಸ್ರೇಲರ ದೋಷಗಳನ್ನು ಹೊತ್ತುಕೊಳ್ಳಬೇಕು. ಈ ರೀತಿಯಾಗಿ ಇಸ್ರೇಲರು ಎಷ್ಟು ಕಾಲ ಶಿಕ್ಷೆ ಅನುಭವಿಸುವರೆಂದು ತೋರಿಸುತ್ತೇನೆ. ಆ ಒಂದು ದಿವಸವು ಒಂದು ವರ್ಷದಂತಿರುವುದು.
6 “ಅನಂತರ ನೀನು ನಿನ್ನ ಬಲಗಡೆಯಲ್ಲಿ ನಲವತ್ತು ದಿವಸಗಳ ಕಾಲ ಮಲಗಬೇಕು. ಈ ಸಾರಿ ನೀನು ಯೆಹೂದದ ದೋಷಗಳನ್ನು ನಲವತ್ತು ದಿವಸ ಹೊತ್ತುಕೊಳ್ಳುವೆ. ಒಂದು ದಿವಸವು ಒಂದು ವರ್ಷಕ್ಕೆ ಸಮಾನ. ಯೆಹೂದವು ಎಷ್ಟು ಕಾಲ ಶಿಕ್ಷೆಯನ್ನು ಅನುಭವಿಸಬೇಕೆಂದು ಇದು ತೋರಿಸುವುದು.”
7 ದೇವರು ಮತ್ತೆ ಹೇಳಿದ್ದೇನೆಂದರೆ: “ಈಗ ನೀನು ನಿನ್ನ ಬಟ್ಟೆಯ ತೋಳನ್ನು ಮೇಲಕ್ಕೆ ಮಡಿಚಿ ನಿನ್ನ ಕೈಯನ್ನು ಇಟ್ಟಿಗೆಯ ಮೇಲೆ ಚಾಚು. ಜೆರುಸಲೇಮ್ ನಗರದ ಮೇಲೆ ಯುದ್ಧ ಮಾಡುವವನಂತೆ ನಟಿಸು. ಪಟ್ಟಣದ ವಿರುದ್ಧವಾಗಿ ಪ್ರವಾದಿಸು. 8 ನೋಡು, ಈಗ ನಾನು ನಿನ್ನನ್ನು ಹಗ್ಗದಿಂದ ಕಟ್ಟುತ್ತಿದ್ದೇನೆ. ನೀನು ಜೆರುಸಲೇಮ್ ನಗರದ ಮೇಲೆ ನಿನ್ನ ಆಕ್ರಮಣವನ್ನು ಮುಗಿಸುವ ತನಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳಲು ನಿನ್ನಿಂದಾಗುವದಿಲ್ಲ.”
9 ದೇವರು ಮತ್ತೆ ಹೇಳಿದ್ದೇನೆಂದರೆ: “ನೀನು ರೊಟ್ಟಿಯನ್ನು ಮಾಡಲು ಕಾಳುಗಳನ್ನು ತರಬೇಕು. ಸ್ವಲ್ಪ ಗೋಧಿ, ಬಾರ್ಲಿ, ಅಲಸಂದೆ, ಸಾವೆ, ಕಡಲೆ ಇವುಗಳನ್ನೆಲ್ಲಾ ಒಂದು ಬೋಗುಣಿಯಲ್ಲಿ ಹಾಕಿ ಬೀಸಿ ಹಿಟ್ಟು ಮಾಡು. ಈ ಹಿಟ್ಟನ್ನು ನಾದಿ ರೊಟ್ಟಿ ಮಾಡು. ನೀನು ಮುನ್ನೂರತೊಂಭತ್ತು ದಿವಸಗಳ ಕಾಲ ನಿನ್ನ ಎಡಮಗ್ಗುಲಲ್ಲಿ ಮಲಗಿರುವಾಗ ಅದನ್ನು ಮಾತ್ರ ತಿನ್ನುವೆ. 10 ನೀನು ದಿನವೊಂದಕ್ಕೆ ಎಂಟು ರೊಟ್ಟಿಗಳನ್ನು ತಿನ್ನುವೆ. ನೀನು ಅವುಗಳನ್ನು ಪ್ರತಿದಿನ ಒಂದೇ ಸಮಯದಲ್ಲಿ ತಿನ್ನಬೇಕು. 11 ನೀನು ದಿನಕ್ಕೆ ಮೂರು ಲೋಟ ನೀರನ್ನು ಮಾತ್ರ ಕುಡಿಯಬೇಕು. ನೀನು ಅವುಗಳನ್ನು ಪ್ರತಿದಿನ ಒಂದೇ ಸಮಯದಲ್ಲಿ ಕುಡಿಯಬೇಕು. 12 ನೀನು ಬಾರ್ಲಿ ರೊಟ್ಟಿಗಳನ್ನು ಮಾಡುವಂತೆ ತಿನ್ನುವದಕ್ಕಾಗಿ ನೀನು ಪ್ರತಿದಿನ ರೊಟ್ಟಿಯನ್ನು ಮಾಡಬೇಕು. ಒಣಗಿದ ಮನುಷ್ಯನ ಮಲದಲ್ಲಿ ಅದನ್ನು ಸುಡಬೇಕು. ಈ ಬೆಂಕಿಯ ಮೇಲೆ ರೊಟ್ಟಿಯನ್ನು ಕಾಯಿಸಬೇಕು. ನೀನು ಈ ರೊಟ್ಟಿಯನ್ನು ಜನರ ಮುಂದೆ ಮಾಡಿ ತಿನ್ನಬೇಕು.” 13 ಬಳಿಕ ಯೆಹೋವನು, “ನಾನು ಇಸ್ರೇಲ್ ಜನರನ್ನು ಬಲವಂತವಾಗಿ ಕಳುಹಿಸುವ ಪರದೇಶಗಳಲ್ಲಿ ಅವರು ಅಶುದ್ಧವಾದ ರೊಟ್ಟಿಗಳನ್ನು ತಿನ್ನುತ್ತಾರೆಂದು ಇದು ಸೂಚಿಸುತ್ತದೆ” ಎಂದು ಹೇಳಿದನು.
14 ಆಗ ನಾನು ಹೇಳಿದ್ದೇನೆಂದರೆ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನಾನು ಎಂದೂ ಅಶುದ್ಧ ಆಹಾರವನ್ನು ತಿನ್ನಲಿಲ್ಲ. ತಾನಾಗಿಯೇ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿಯು ಕೊಂದ ಪ್ರಾಣಿಯ ಮಾಂಸವನ್ನಾಗಲಿ ಎಂದೂ ತಿಂದದ್ದಿಲ್ಲ. ಬಾಲ್ಯ ಪ್ರಾಯದಿಂದ ಈ ದಿವಸ ಪರ್ಯಂತ ಅಶುದ್ಧ ಆಹಾರ ತಿಂದಿಲ್ಲ; ಅಂತಹ ಮಾಂಸವೂ ನನ್ನ ಬಾಯೊಳಕ್ಕೆ ಹೋಗಲಿಲ್ಲ.”
15 ಆಗ ದೇವರು ನನಗೆ, “ಸರಿ! ಹಾಗಾದರೆ, ರೊಟ್ಟಿಯನ್ನು ಮಾಡುವದಕ್ಕಾಗಿ ಮನುಷ್ಯನ ಮಲದ ಬದಲಾಗಿ ದನದ ಒಣಗಿದ ಸಗಣಿಯನ್ನು ಉಪಯೋಗಿಸು” ಎಂದು ಉತ್ತರಕೊಟ್ಟನು.
16 ಬಳಿಕ ದೇವರು ನನಗೆ, “ನರಪುತ್ರನೇ, ನಾನು ಜೆರುಸಲೇಮಿಗೆ ರೊಟ್ಟಿಯ ಸರಬರಾಜನ್ನು ನಿಲ್ಲಿಸುವೆನು. ಜನರಿಗೆ ತಿನ್ನಲು ಕೊಂಚ ರೊಟ್ಟಿ ಸಿಗುವುದು. ಆಹಾರವು ಮುಗಿದು ಹೋಗುತ್ತಿರುವದರಿಂದ ಅವರು ಬಹಳವಾಗಿ ಚಿಂತಿಸುವರು. ಅವರಿಗೆ ಸ್ವಲ್ಪವೇ ಕುಡಿಯುವ ನೀರು ಇರುವುದು. ಆ ನೀರನ್ನು ಕುಡಿಯುವಾಗ ಅವರಿಗೆ ಭಯಹಿಡಿಯುವುದು. 17 ಯಾಕೆಂದರೆ ಎಲ್ಲರಿಗೆ ಸಾಕಾಗುವಷ್ಟು ಆಹಾರಸಾಮಾಗ್ರಿಯಾಗಲಿ ನೀರಾಗಲಿ ಇರುವದಿಲ್ಲ. ಅವರು ಒಬ್ಬರನ್ನೊಬ್ಬರು ಕಂಡು ಗಾಬರಿಗೊಳ್ಳುವರು. ತಮ್ಮ ಪಾಪಗಳ ನಿಮಿತ್ತವಾಗಿ ಅವರು ಬಡಕಲಾಗಿಯೂ ಹಸಿವೆಯಿಂದಲೂ ಇರುವರು.
ರಚನೆಗಾರ: ದಾವೀದ.
40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
2 ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3 ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
4 ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
5 ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
ಅವು ಅಸಂಖ್ಯಾತವಾಗಿವೆ.
6 ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
7 ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
8 ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
9 ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.
12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.
17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.
ರಚನೆಗಾರ: ದಾವೀದ.
41 ಯಾವನು ಬಡಜನರನ್ನು[c] ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
2 ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
3 ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
ಯೆಹೋವನು ಅವನಿಗೆ ಬಲವನ್ನು ಕೊಡುವನು.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
4 ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
5 ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
6 ನನ್ನನ್ನು ನೋಡಲು ಬಂದವರು ಕಪಟದ ಮಾತನ್ನಾಡುವರು;
ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
7 ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
ನನಗೆ ಕೇಡುಮಾಡಲು ಆಲೋಚಿಸುವರು.
8 “ಅವನು ಯಾವುದೋ ತಪ್ಪು ಮಾಡಿರುವುದರಿಂದ
ಅವನಿಗೆ ಕಾಯಿಲೆ ಬಂದಿದೆ,
ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
9 ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
10 ಯೆಹೋವನೇ, ದಯವಿಟ್ಟು ನನಗೆ ದಯೆತೋರು;
ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
11 ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
12 ನಿರಪರಾಧಿಯಾದ ನನಗೆ ಸಹಾಯಮಾಡು.
ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
13 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು.
ಆಮೆನ್, ಆಮೆನ್!
Kannada Holy Bible: Easy-to-Read Version. All rights reserved. © 1997 Bible League International