M’Cheyne Bible Reading Plan
ದಾವೀದನಿಂದ ಸೌಲನಿಗಾದ ಅವಮಾನ
24 ಸೌಲನು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಿ ಓಡಿಸಿದನಂತರ, ಅವನಿಗೆ ಜನರು, “ದಾವೀದನು ಏಂಗೆದಿಯ ಹತ್ತಿರದ ಮರಳುಗಾಡಿನಲ್ಲಿದ್ದಾನೆ” ಎಂದು ಹೇಳಿದರು.
2 ಇಸ್ರೇಲಿನ ಮೂರು ಸಾವಿರ ಜನರನ್ನು ಸೌಲನು ಆರಿಸಿದನು. ಸೌಲನು ಈ ಜನರೊಂದಿಗೆ ದಾವೀದನನ್ನು ಮತ್ತು ಅವನ ಜನರನ್ನು ಹುಡುಕಲು ಆರಂಭಿಸಿದನು. ಅವರು ಕಾಡು ಹೋತದ ಬಂಡೆಗಳ ಹತ್ತಿರ ಹುಡುಕಿದರು. 3 ಸೌಲನು ರಸ್ತೆಯ ಪಕ್ಕದ ಕುರಿದೊಡ್ಡಿಗೆ ಬಂದನು. ಅಲ್ಲಿಗೆ ಸಮೀಪದಲ್ಲಿ ಒಂದು ಗವಿಯಿದ್ದಿತು. ಸೌಲನು ಶೌಚಕ್ಕೋಸ್ಕರ ಗವಿಯ ಒಳಗಡೆಗೆ ಹೋದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂದಗಡೆ ಅಡಗಿಕೊಂಡಿದ್ದರು. 4 ಜನರು ದಾವೀದನಿಗೆ, “ಯೆಹೋವನು ಈ ದಿನವನ್ನೇ ಕುರಿತು ನಿನ್ನೊಂದಿಗೆ ಮಾತನಾಡಿದನು. ಯೆಹೋವನು ನಿನಗೆ, ‘ನಾನು ನಿನ್ನ ಶತ್ರುವನ್ನು ನಿನಗೆ ಒಪ್ಪಿಸುತ್ತೇನೆ. ನಿನ್ನ ಇಷ್ಟದಂತೆ ಶತ್ರುವಿಗೆ ಏನು ಬೇಕಾದರೂ ಮಾಡು’ ಎಂದು ಹೇಳಿದನು” ಎಂದರು.
ನಂತರ ದಾವೀದನು ಸೌಲನ ಹತ್ತಿರಕ್ಕೆ ತೆವಳುತ್ತಾ ಹೋಗಿ ಸೌಲನ ಅಂಗಿಯ ಒಂದು ಮೂಲೆಯನ್ನು ಕತ್ತರಿಸಿದನು. ದಾವೀದನನ್ನು ಸೌಲನು ನೋಡಲಿಲ್ಲ. 5 ತರುವಾಯ ಸೌಲನ ಅಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ದಾವೀದನಿಗೆ ಅಸಮಾಧಾನವಾಯಿತು. 6 ದಾವೀದನು ತನ್ನ ಜನರಿಗೆ, “ಸೌಲನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ರಾಜನೂ ಆಗಿರುವುದರಿಂದ ನಾನು ಅವನ ವಿರುದ್ಧವಾಗಿ ಏನೂ ಮಾಡಬಾರದು!” ಎಂದು ಹೇಳಿದನು. 7 ದಾವೀದನು ತನ್ನ ಜನರನ್ನು ತಡೆಯಲು ಈ ಮಾತುಗಳನ್ನು ಹೇಳಿದನು. ಸೌಲನನ್ನು ಆಕ್ರಮಿಸಲು ದಾವೀದನು ತನ್ನ ಜನರಿಗೆ ಅವಕಾಶ ಕೊಡಲಿಲ್ಲ.
ಸೌಲನು ಗವಿಯನ್ನು ಬಿಟ್ಟು ತನ್ನ ದಾರಿಯಲ್ಲಿ ಹೊರಟನು. 8 ದಾವೀದನು ಗವಿಯಿಂದ ಹೊರಗೆ ಬಂದನು. ದಾವೀದನು ಸೌಲನಿಗೆ, “ಅರಸನೇ, ನನ್ನ ಒಡೆಯನೇ!” ಎಂದು ಕೂಗಿದನು.
ಸೌಲನು ಹಿಂದಿರುಗಿ ನೋಡಿದಾಗ ದಾವೀದನು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿ, 9 “‘ದಾವೀದನು ನಿನಗೆ ಕೇಡುಮಾಡಲು ಸಂಚುಗಳನ್ನು ಮಾಡುತ್ತಿದ್ದಾನೆ’ ಎಂಬುದಾಗಿ ಜನರು ಹೇಳುವಾಗ ನೀನು ಕೇಳುವುದೇಕೆ? 10 ನಾನು ನಿನಗೆ ಕೇಡುಮಾಡಲು ಇಚ್ಛಿಸುವುದಿಲ್ಲ! ನೀನು ಅದನ್ನು ನಿನ್ನ ಸ್ವಂತ ಕಣ್ಣುಗಳಿಂದ ನೋಡಬಹುದು! ಈ ದಿನ ಗವಿಯಲ್ಲಿ ಯೆಹೋವನು ನಿನ್ನನ್ನು ನನಗೆ ಒಪ್ಪಿಸಿದ್ದನು. ಆದರೆ ನಾನು ನಿನ್ನನ್ನು ಕೊಲ್ಲಲು ನಿರಾಕರಿಸಿದೆ. ನಾನು ನಿನಗೆ ದಯಾಳುವಾಗಿದ್ದೆ. ‘ನಾನು ನನ್ನ ಒಡೆಯನಿಗೆ ಕೇಡು ಮಾಡುವುದಿಲ್ಲ. ಸೌಲನು ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜ!’ 11 ನನ್ನ ತಂದೆಯೇ, ನನ್ನ ಕೈಯಲ್ಲಿರುವ ಚೂರು ಬಟ್ಟೆಯನ್ನು ನೋಡು. ನಾನು ನಿನ್ನ ಅಂಗಿಯ ಮೂಲೆಯನ್ನು ಕತ್ತರಿಸಿಹಾಕಿದೆ. ನಾನು ನಿನ್ನನ್ನು ಕೊಲ್ಲಬಹುದಿತ್ತು, ಆದರೆ ಕೊಲ್ಲಲಿಲ್ಲ! ನೀನು ಇದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸಿದ್ದೇನೆ. ನಾನು ನಿನ್ನ ವಿರುದ್ಧವಾಗಿ ಯಾವ ಸಂಚನ್ನೂ ಮಾಡುತ್ತಿಲ್ಲವೆಂದು ನೀನು ತಿಳಿದುಕೊಳ್ಳಬೇಕಾಗಿದೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ಆದರೆ ನೀನು ನನ್ನನ್ನು ಹುಡುಕುತ್ತಿರುವೆ; ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವೆ. 12 ಯೆಹೋವನೇ ನಮಗೆ ನ್ಯಾಯಾಧೀಶನಾಗಿರಲಿ! ನೀನು ಮಾಡಿರುವ ತಪ್ಪಿಗಾಗಿ ಯೆಹೋವನು ನಿನ್ನನ್ನು ದಂಡಿಸಲಿ. ಆದರೆ ನಾನು ನಿನ್ನೊಡನೆ ಹೋರಾಡುವುದಿಲ್ಲ.
13 ‘ಕೆಟ್ಟಕಾರ್ಯಗಳನ್ನು ಕೆಟ್ಟ ಜನರೇ ಮಾಡುತ್ತಾರೆ!’
ಎಂಬ ಹಳೆಯ ನಾಣ್ಣುಡಿಯೊಂದಿದೆ.
“ನಾನು ಕೆಟ್ಟದ್ದನ್ನೇನೂ ಮಾಡಿಲ್ಲ! ನಾನು ಕೆಟ್ಟ ವ್ಯಕ್ತಿಯಲ್ಲ! ಆದ್ದರಿಂದ ನಾನು ನಿನಗೆ ಕೇಡು ಮಾಡುವುದಿಲ್ಲ! 14 ನೀನು ಯಾರನ್ನು ಅಟ್ಟಿಸಿಕೊಂಡು ಹೋಗುತ್ತಿರುವೆ? ಇಸ್ರೇಲರ ರಾಜನಾದ ನೀನು ಯಾರೊಂದಿಗೆ ಹೋರಾಡಬೇಕೆಂದಿರುವೆ? ನಿನಗೆ ಕೇಡು ಮಾಡಬಹುದಾದವನನ್ನು ನೀನು ಅಟ್ಟಿಸಿಕೊಂಡು ಹೋಗುತ್ತಿಲ್ಲ! ನೀನು ಸತ್ತ ನಾಯಿಯನ್ನೋ ಇಲ್ಲವೆ ಚಿಟ್ಟೆಯನ್ನೋ ಅಟ್ಟಿಸಿಕೊಂಡು ಹೋಗುತ್ತಿರುವೆ! 15 ಯೆಹೋವನೇ ನಮ್ಮಿಬ್ಬರಿಗೂ ನ್ಯಾಯಾಧೀಶನಾಗಿದ್ದು ತೀರ್ಪು ನೀಡಲಿ. ಯೆಹೋವನು ನನ್ನ ಪರವಾಗಿ ವಾದಿಸಿ ನಾನು ನೀತಿವಂತನೆಂದು ನಿರೂಪಿಸಿ ನನ್ನನ್ನು ನಿನ್ನಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.
16 ದಾವೀದನು ಈ ಮಾತುಗಳನ್ನು ಹೇಳಿದಾಗ ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು. ನಂತರ ಸೌಲನು ಅಳಲಾರಂಭಿಸಿದನು. ಸೌಲನು ಬಹಳ ಅತ್ತನು. 17 ಸೌಲನು, “ನೀನೇ ನೀತಿವಂತನು. ನಾನು ತಪ್ಪು ಮಾಡಿದೆ. ನೀನು ನನಗೆ ಒಳ್ಳೆಯವನಾಗಿದ್ದೆ; ಆದರೆ ನಾನು ನಿನಗೆ ಕೆಟ್ಟವನಾದೆ. 18 ನೀನು ನನಗೆ ಮಾಡಿದ ಒಳ್ಳೆಯ ಕಾರ್ಯಗಳ ಬಗ್ಗೆ ನನಗೆ ತಿಳಿಸಿರುವೆ. ಯೆಹೋವನು ನನ್ನನ್ನು ನಿನ್ನ ಬಳಿಗೆ ಕರೆದು ತಂದನು, ಆದರೆ ನೀನು ನನ್ನನ್ನು ಕೊಲ್ಲಲಿಲ್ಲ. 19 ಒಬ್ಬ ಮನುಷ್ಯನು ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನಿಗೆ ಕೇಡನ್ನು ಮಾಡದೆ ಕಳುಹಿಸಿಬಿಡುವನೇ? ಅವನು ಶತ್ರುವಿಗೆ ಒಳ್ಳೆಯದನ್ನು ಮಾಡುವುದಿಲ್ಲ. ನೀನು ನನಗೆ ಈ ದಿನ ಒಳ್ಳೆಯದನ್ನು ಮಾಡಿರುವುದರಿಂದ ಯೆಹೋವನು ನಿನಗೆ ಒಳ್ಳೆಯದನ್ನು ಮಾಡಲಿ. 20 ನೀನು ನೂತನ ರಾಜನಾಗುವೆಯೆಂಬುದು ನನಗೆ ತಿಳಿದಿದೆ. ಇಸ್ರೇಲ್ ರಾಜ್ಯವನ್ನು ನೀನು ಆಳುವೆ. 21 ಈಗ ನೀನು ನನಗೆ ಒಂದು ಪ್ರಮಾಣವನ್ನು ಮಾಡು. ನನ್ನ ಸಂತಾನದವರನ್ನು ನೀನು ಕೊಲ್ಲುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ನನಗೆ ಪ್ರಮಾಣಮಾಡು. ನನ್ನ ತಂದೆಯ ಕುಲದಲ್ಲಿ ನನ್ನ ಹೆಸರನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡು” ಎಂದು ಬೇಡಿಕೊಂಡನು.
22 ಸೌಲನ ವಂಶದವರನ್ನು ಕೊಲ್ಲುವುದಿಲ್ಲವೆಂದು ದಾವೀದನು ಪ್ರಮಾಣಮಾಡಿದನು. ನಂತರ ಸೌಲನು ಮನೆಗೆ ಹಿಂದಿರುಗಿದನು. ದಾವೀದನು ಮತ್ತು ಅವನ ಜನರು ತಾವು ಅಡಗಿಕೊಂಡಿದ್ದ ಸ್ಥಳಕ್ಕೆ ಹೊರಟುಹೋದರು.
ಸಭೆಯಲ್ಲಿ ನೈತಿಕ ಸಮಸ್ಯೆ
5 ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿದೆಯೆಂದು ಜನರು ನಿಜವಾಗಿಯೂ ಹೇಳುತ್ತಿದ್ದಾರೆ. ದೇವರನ್ನು ತಿಳಿದಿಲ್ಲದ ಜನರ ನಡುವೆಯೂ ಇಲ್ಲದಂಥ ಕೆಟ್ಟ ಬಗೆಯ ಲೈಂಗಿಕ ಪಾಪ ಅದಾಗಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನೆಂದು ಜನರು ಹೇಳುತ್ತಿದ್ದಾರೆ. 2 ಆದರೆ ನೀವು ನಿಮ್ಮ ವಿಷಯದಲ್ಲಿ ಇನ್ನೂ ಹೆಚ್ಚಳಪಡುತ್ತಿದ್ದೀರಿ. ನೀವು ದುಃಖಭರಿತರಾಗಿರಬೇಕಿತ್ತು. ಆ ಪಾಪ ಮಾಡಿದ ವ್ಯಕ್ತಿಯನ್ನು ನಿಮ್ಮ ಸಭೆಯಿಂದ ಹೊರಗೆ ಹಾಕಬೇಕಿತ್ತು. 3 ನನ್ನ ದೇಹ ನಿಮ್ಮೊಂದಿಗೆ ಇಲ್ಲದಿದ್ದರೂ ನಾನು ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಆ ಪಾಪ ಮಾಡಿದ ವ್ಯಕ್ತಿಗೆ ನಾನು ಆಗಲೇ ತೀರ್ಪು ಮಾಡಿದ್ದೇನೆ. ನಾನು ಅಲ್ಲಿದ್ದಿದ್ದರೆ ಯಾವ ತೀರ್ಪನ್ನು ಕೊಡುತ್ತಿದ್ದೆನೋ ಅದೇ ತೀರ್ಪನ್ನು ಕೊಟ್ಟಿದ್ದೇನೆ. 4 ನಮ್ಮ ಪ್ರಭುವಾದ ಯೇಸುವಿನ ಹೆಸರಿನಲ್ಲಿ ಒಟ್ಟಾಗಿ ಸೇರಿಬನ್ನಿ. ನಾನು ಆತ್ಮದಲ್ಲಿ ನಿಮ್ಮೊಂದಿಗಿರುವೆನು. ನಮ್ಮ ಪ್ರಭುವಾದ ಯೇಸುವಿನ ಶಕ್ತಿಯೂ ನಿಮ್ಮೊಂದಿಗೆ ಇರುವುದು. 5 ಆ ಮನುಷ್ಯನ ಪಾಪಸ್ವಭಾವವು ನಾಶವಾಗುವುದಕ್ಕಾಗಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಿರಿ. ಆಗ ಪ್ರಭುವಿನ ದಿನದಂದು ಅವನ ಜೀವಾತ್ಮವು ರಕ್ಷಣೆಹೊಂದಲು ಸಾಧ್ಯವಾಗುವುದು.
6 ನೀವು ಅಹಂಕಾರಪಡುವುದು ಒಳ್ಳೆಯದಲ್ಲ. “ಒಂದಿಷ್ಟು ಹುಳಿಯು ಹಿಟ್ಟನ್ನೆಲ್ಲಾ ಉಬ್ಬಿಸುತ್ತದೆ” ಎಂಬ ನುಡಿಯು ನಿಮಗೆ ಗೊತ್ತೇ ಇದೆ. 7 ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ. 8 ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.
9 ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. 10 ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ. 11 ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.
12-13 ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ”(A) ಎಂದು ಪವಿತ್ರ ಗ್ರಂಥ ಹೇಳುತ್ತದೆ.
3 ದೇವರು ನನಗೆ, “ನರಪುತ್ರನೇ, ನೀನು ನೋಡುತ್ತಿರುವ ಈ ಸುರುಳಿಯನ್ನು ತಿನ್ನು. ಆಮೇಲೆ ಹೋಗಿ ಇಸ್ರೇಲ್ ವಂಶದವರಿಗೆ ಈ ವಿಷಯಗಳ ಬಗ್ಗೆ ಹೇಳು” ಎಂದು ಅಪ್ಪಣೆಕೊಟ್ಟನು.
2 ಆಗ ನಾನು ನನ್ನ ಬಾಯನ್ನು ತೆರೆಯಲು ಆತನು ಆ ಸುರುಳಿಯನ್ನು ನನ್ನ ಬಾಯೊಳಗೆ ಹಾಕಿದನು. 3 ಆಗ ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಈ ಸುರುಳಿಯನ್ನು ನಿನಗೆ ಕೊಡುತ್ತೇನೆ. ಇದನ್ನು ನುಂಗು. ಇದು ನಿನ್ನ ಹೊಟ್ಟೆಯನ್ನು ತುಂಬಲಿ.”
ಆಗ ನಾನು ಆ ಸುರುಳಿಯನ್ನು ತಿಂದೆನು. ಅದು ನನ್ನ ಬಾಯಲ್ಲಿ ಜೇನುತುಪ್ಪದ ಸಿಹಿಯಂತೆ ರುಚಿಯಾಗಿತ್ತು.
4 ಆಗ ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲ್ ವಂಶದವರ ಬಳಿಗೆ ಹೋಗಿ ನನ್ನ ಮಾತುಗಳನ್ನು ಅವರಿಗೆ ತಿಳಿಸು. 5 ನೀನು ಕಷ್ಟಕರವಾದ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಲಿ ಮಾತನಾಡುವುದಕ್ಕಾಗಲಿ ಪರದೇಶಿಯರ ಬಳಿಗೆ ನಾನು ಕಳುಹಿಸುತ್ತಿಲ್ಲ. ನಾನು ಇಸ್ರೇಲ್ ವಂಶದವರ ಬಳಿಗೆ ನಿನ್ನನ್ನು ಕಳುಹಿಸುತ್ತಿದ್ದೇನೆ. 6 ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದ ಅಥವಾ ಮಾತಾಡಲು ಕಷ್ಟವಾದ ಅಥವಾ ಪದಗಳನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವಾಗದ ಅನೇಕ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತಿಲ್ಲ. ಆ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸಿದರೆ ಅವರು ಖಂಡಿತವಾಗಿಯೂ ಕಿವಿಗೊಡುವರು. 7 ಆದರೆ ನಾನು ಇಸ್ರೇಲ್ ವಂಶದವರ ಬಳಿಗೆ ನಿನ್ನನ್ನು ಕಳುಹಿಸುತ್ತಿದ್ದೇನೆ. ಇವರಿಗೆ ಮೊಂಡತನವಿರುವದು. ನಿನ್ನ ಮಾತನ್ನು ಕೇಳಲು ನಿರಾಕರಿಸುವರು. ಅವರಿಗೆ ನನ್ನ ಮಾತುಗಳನ್ನು ಕೇಳಲು ಇಷ್ಟವಿಲ್ಲ. 8 ಅವರು ಕಠಿಣರಾಗಿರುವಂತೆಯೇ ನಾನು ನಿನ್ನನ್ನೂ ಕಠಿಣಗೊಳಿಸುತ್ತೇನೆ. ನಿನಗೂ ಅವರಂತೆ ಮೊಂಡತನವನ್ನು ಕೊಡುವೆನು. 9 ವಜ್ರವು ಬಂಡೆಕಲ್ಲಿಗಿಂತ ಗಟ್ಟಿಯಾದ ವಸ್ತು. ಅದೇ ಪ್ರಕಾರ ನಿನ್ನ ತಲೆ ಅವರ ತಲೆಗಿಂತ ಗಟ್ಟಿಯಾಗಿರುವುದು. ಆ ಜನರಿಗೆ ಭಯಪಡಬೇಡ. ಅವರು ದಂಗೆಕೋರರಾಗಿದ್ದರೂ ಅವರ ಸಮ್ಮುಖದಲ್ಲಿ ಭಯಪಡಬೇಡ.”
10 ದೇವರು ನನಗೆ ಮತ್ತೇ ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಹೇಳುವ ಪ್ರತಿಯೊಂದು ಮಾತನ್ನು ನೀನು ಕಿವಿಗೊಟ್ಟು ಕೇಳಬೇಕು. ಆ ಮಾತುಗಳನ್ನು ನೀನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. 11 ಬಳಿಕ ಸೆರೆವಾಸದಲ್ಲಿರುವ ನಿನ್ನ ಸ್ವಜನರ ಬಳಿಗೆ ಹೋಗು. ಅವರು ಕೇಳಲಿ, ಕೇಳದಿರಲಿ, ನೀನು ಅವರಿಗೆ, ‘ದೇವರಾದ ಯೆಹೋವನು ಹೀಗೆ ಹೇಳುತ್ತಾನೆ’” ಎಂದು ಹೇಳು.
12 ಆಗ ದೇವರಾತ್ಮವು ನನ್ನನ್ನು ಮೇಲಕ್ಕೆ ಎತ್ತಿತು. ಯೆಹೋವನ ಮಹಿಮೆಯು ತನ್ನ ಸ್ಥಳದಿಂದ ಮೇಲೇರಿದಾಗ ನನ್ನ ಹಿಂಭಾಗದಲ್ಲಿ ಮಹಾ ಗುಡುಗುವ ಶಬ್ದವನ್ನು ಕೇಳಿದೆನು. ಅದು ಯೆಹೋವನಿಗೆ ಆತನ ನಿವಾಸದಲ್ಲಿ ಸ್ತೋತ್ರವಾಗಲಿ ಎಂಬ ವಾಣಿಯೊಂದಿಗೆ ಕೇಳಿಸುತ್ತಿತ್ತು. 13 ಅದು ಜೀವಿಗಳು ತಮ್ಮ ರೆಕ್ಕೆಗಳನ್ನು ಒಂದಕ್ಕೊಂದು ಬಡಿದಾಡುವ ಸಪ್ಪಳ ಮತ್ತು ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಸಪ್ಪಳ. 14 ಆತ್ಮವು ನನ್ನನ್ನು ಅಲ್ಲಿಂದ ಎತ್ತಿಕೊಂಡು ಹೋಯಿತು. ನಾನು ಆಗ ದುಃಖಗೊಂಡು ನನ್ನ ಆತ್ಮದಲ್ಲಿ ತತ್ತರಗೊಂಡೆನು. ಆದರೆ ಯೆಹೋವನ ಶಕ್ತಿಯು ನನ್ನನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ತೆಗೆದುಕೊಂಡಿತು. 15 ಕೆಬಾರ್ ಕಾಲುವೆ ಪಕ್ಕದಲ್ಲಿದ್ದ ತೇಲ್ ಆಬೀಬ್‌ನಲ್ಲಿ ಸೆರೆಯಾಳುಗಳಾಗಿದ್ದ ಇಸ್ರೇಲ್ ಜನರ ಬಳಿಗೆ ನಾನು ಒಯ್ಯಲ್ಪಟ್ಟೆನು. ಅಲ್ಲಿದ್ದ ಜನರ ಮಧ್ಯೆ ನಾನು ಏಳು ದಿವಸ ಸ್ತಬ್ಧನಾಗಿದ್ದೆನು.
ಇಸ್ರೇಲಿಗೆ ಕಾವಲುಗಾರನಾಗಿ
16 ಏಳು ದಿವಸಗಳ ತರುವಾಯ, ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: 17 “ನರಪುತ್ರನೇ, ನಾನು ನಿನ್ನನ್ನು ಇಸ್ರೇಲರಿಗೆ ಕಾವಲುಗಾರನನ್ನಾಗಿ ಮಾಡಿದ್ದೇನೆ. ನಾನು ಅವರಿಗೆ ಸಂಭವಿಸುವ ಕೆಟ್ಟ ವಿಷಯಗಳನ್ನು ನಿನಗೆ ಹೇಳುತ್ತಿದ್ದೇನೆ. ಮತ್ತು ನೀನು ನನ್ನ ಪರವಾಗಿ ಅವರನ್ನು ಎಚ್ಚರಿಸು. 18 ನಾನು ದುಷ್ಟನಿಗೆ, ‘ನೀನು ಸಾಯುವೆ’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸಬೇಕು. ಅವನು ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುವದಕ್ಕಾಗಿ ತನ್ನ ಜೀವಿತವನ್ನು ಮಾರ್ಪಡಿಸಿಕೊಂಡು ದುಷ್ಕೃತ್ಯ ನಿಲ್ಲಿಸಬೇಕೆಂದು ನೀನು ಅವನಿಗೆ ಹೇಳಬೇಕು. ನೀನು ಅವನನ್ನು ಎಚ್ಚರಿಸದಿದ್ದರೆ ಅವನು ತನ್ನ ಪಾಪದ ದೆಸೆಯಿಂದ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೇ ಹೊಣೆಗಾರನನ್ನಾಗಿ ಮಾಡುತ್ತೇನೆ.
19 “ಒಂದುವೇಳೆ ನೀನು ಒಬ್ಬ ದುಷ್ಟಮನುಷ್ಯನನ್ನು ಎಚ್ಚರಿಸಿ ಅವನು ಪಾಪ ಮಾಡದಂತೆ ಮತ್ತು ಅವನ ಜೀವಿತವನ್ನು ಬದಲಾವಣೆ ಮಾಡಲು ಹೇಳಿದ್ದಲ್ಲಿ ಆ ಮನುಷ್ಯನು ನಿನ್ನ ಮಾತುಗಳನ್ನು ಕೇಳಲು ನಿರಾಕರಿಸಿದರೆ, ಅವನು ಪಾಪ ಮಾಡುವುದರಿಂದ ಸಾಯುವನು. ಆದರೆ ನೀನು ನಿನ್ನ ಜೀವವನ್ನು ರಕ್ಷಿಸಿಕೊಳ್ಳುವಿ.
20 “ಒಳ್ಳೆಯವನು ತನ್ನ ಒಳ್ಳೆಯತನವನ್ನು ತೊರೆದು ಕೆಟ್ಟದ್ದನ್ನು ಮಾಡಿದರೆ, ನಾನು ಅವನ ಹಾದಿಗೆ ತಡೆಯನ್ನು ಹಾಕಿ ಅವನು ಬೀಳುವಂತೆ ಮಾಡುವೆನು; ಅವನು ಸಾಯುವನು. ನೀನು ಅವನನ್ನು ಎಚ್ಚರಿಸಲಿಲ್ಲವಾದ್ದರಿಂದ ಅವನು ತನ್ನ ಪಾಪದ ನಿಮಿತ್ತ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೆ ಹೊಣೆಗಾರನನ್ನಾಗಿ ಮಾಡುತ್ತೇನೆ. ಜನರು ಅವನ ಒಳ್ಳೆಯ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
21 “ನೀನು ಆ ಒಳ್ಳೆಯವನಿಗೆ ಪಾಪ ಮಾಡದಂತೆ ಎಚ್ಚರಿಸಿದರೆ ಮತ್ತು ಅವನು ಪಾಪ ಮಾಡುವದನ್ನು ನಿಲ್ಲಿಸಿದರೆ, ಆ ಮನುಷ್ಯನು ಸಾಯುವದಿಲ್ಲ; ಯಾಕೆಂದರೆ ಅವನು ನಿನ್ನ ಎಚ್ಚರಿಕೆಗೆ ಕಿವಿಗೊಟ್ಟನು ಮತ್ತು ನೀನು ನಿನ್ನ ಸ್ವಂತ ಪ್ರಾಣವನ್ನು ರಕ್ಷಿಸಿಕೊಂಡಿರುವೆ.”
22 ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನಗೆ, “ಎದ್ದೇಳು, ಬಯಲು ಸೀಮೆಗೆ ಹೋಗು. ಅಲ್ಲಿ ನಾನು ನಿನ್ನೊಂದಿಗೆ ಮಾತನಾಡುವೆನು” ಎಂದು ಹೇಳಿದನು.
23 ನಾನೆದ್ದು ಬಯಲು ಸೀಮೆಗೆ ಹೋದೆನು. ಕೆಬಾರ್ ನದಿಯ ಪಕ್ಕದಲ್ಲಿ ನಾನು ಕಂಡ ಮಹಿಮೆಯಂತಿದ್ದ ಯೆಹೋವನ ಮಹಿಮೆಯು ಅಲ್ಲಿ ಇತ್ತು. ನಾನು ನನ್ನ ಮುಖವನ್ನು ನೆಲಕ್ಕೆ ತಾಗಿಸಿ ಬಗ್ಗಿ ನಮಸ್ಕರಿಸಿದೆ. 24 ಆಗ ಆತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಬಳಿಕ ಆತನು ನನಗೆ, “ನೀನು ನಿನ್ನ ಮನೆಯೊಳಗೆ ಹೋಗಿ ಒಳಗಿನಿಂದ ಕದವನ್ನು ಹಾಕಿಕೊ. 25 ನರಪುತ್ರನೇ, ನಿನ್ನ ಸ್ವಜನರು ಹಗ್ಗ ಹಿಡಿದುಕೊಂಡು ಬಂದು ನಿನ್ನನ್ನು ಕಟ್ಟುವರು. ನಿನ್ನನ್ನು ಜನರ ಮಧ್ಯದಿಂದ ಹೊರಹೋಗದಂತೆ ಮಾಡುವರು. 26 ನಿನ್ನ ನಾಲಿಗೆಯು ಸೇದಿ ಹೋಗುವಂತೆ ಮಾಡುವೆನು. ನಿನಗೆ ಮಾತನಾಡಲು ಆಗದು. ಆದ್ದರಿಂದ ಅವರನ್ನು ಖಂಡಿಸಲು ಯಾರೂ ಇರುವದಿಲ್ಲ. ಯಾಕೆಂದರೆ ಆ ಜನರು ಯಾವಾಗಲೂ ನನ್ನ ವಿರುದ್ಧವಾಗಿ ವರ್ತಿಸುವರು. 27 ಆದರೆ ನಾನು ನಿನ್ನೊಂದಿಗೆ ಮಾತನಾಡುವಾಗ, ನಿನ್ನನ್ನು ಮಾತನಾಡಲಾಗುವಂತೆ ಮಾಡುವೆನು. ಆಗ ನೀನು ಅವರಿಗೆ, ‘ನಮ್ಮ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ’ ಎಂದು ಹೇಳಬೇಕು. ಕೆಲವರು ಕಿವಿಗೊಡುವರು; ಕೆಲವರು ಕಿವಿಗೊಡರು; ಯಾಕೆಂದರೆ ಅವರು ಯಾವಾಗಲೂ ನನಗೆ ವಿರುದ್ಧವಾಗಿಯೇ ಇರುವರು.
ರಚನೆಗಾರ: ದಾವೀದ.
39 “ನಾನು ಜಾಗರೂಕನಾಗಿ ಮಾತಾಡುವೆ.
ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ.
ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಅಂದುಕೊಂಡೆನು.
2 ನಾನು ಮೌನವಾಗಿದ್ದೆನು.
ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು.
ಆದರೆ ನನ್ನ ವೇದನೆಯು ಹೆಚ್ಚಾಯಿತು.
3 ನಾನು ಬಹುಕೋಪಗೊಂಡಿದ್ದೆ.
ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು.
ಆಗ ನಾನು ಬಾಯಿತೆರೆದು,
4 ಯೆಹೋವನೇ, ನನ್ನ ಗತಿಯನ್ನು ತಿಳಿಸು!
ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು?
ನಾನೆಷ್ಟು ಕಾಲ ಬದುಕುವೆ?
5 ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ.
ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು.
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ.
ಯಾವನೂ ಸದಾಕಾಲ ಬದುಕುವುದಿಲ್ಲ!
6 ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ.
ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ.
ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.
7 ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು?
ನನ್ನ ನಿರೀಕ್ಷೆಯು ನೀನೇ.
8 ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು.
ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ.
9 ನಾನು ಬಾಯಿತೆರೆದು ಮಾತಾಡುವುದಿಲ್ಲ.
ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು.
ಇಲ್ಲವಾದರೆ, ನಾನು ಸತ್ತೇ ಹೋಗುವೆನು.
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ.
ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ.
ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ.
12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು!
ನನ್ನ ಮೊರೆಗೆ ಕಿವಿಗೊಡು!
ನನ್ನ ಕಣ್ಣೀರನ್ನು ನೋಡು!
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ.
ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು.
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ.
ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!
Kannada Holy Bible: Easy-to-Read Version. All rights reserved. © 1997 Bible League International