Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 21-22

ದಾವೀದನು ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು

21 ನಂತರ ದಾವೀದನು ಹೊರಟುಹೋದನು. ಯೋನಾತಾನನು ಪಟ್ಟಣಕ್ಕೆ ಹಿಂದಿರುಗಿದನು. ದಾವೀದನು ನೋಬ್ ಎಂಬ ಪಟ್ಟಣದ ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು.

ಅಹೀಮೆಲೆಕನು ದಾವೀದನನ್ನು ಸಂಧಿಸಲು ಹೊರಗೆ ಬಂದನು. ಅಹೀಮೆಲೆಕನು ಭಯದಿಂದ ನಡುಗುತ್ತಿದ್ದನು. ಅಹೀಮೆಲೆಕನು ದಾವೀದನಿಗೆ, “ನೀನು ಒಬ್ಬಂಟಿಗನಾಗಿ ಬಂದಿರುವುದೇಕೆ? ಬೇರೆ ಯಾವ ವ್ಯಕ್ತಿಯೂ ನಿನ್ನ ಜೊತೆಯಲ್ಲಿಲ್ಲದಿರುವುದೇಕೆ?” ಎಂದು ಕೇಳಿದನು.

ದಾವೀದನು ಅಹೀಮೆಲೆಕನಿಗೆ, “ರಾಜನು ನನಗೆ ಒಂದು ವಿಶೇಷ ಆಜ್ಞೆಯನ್ನು ಕೊಟ್ಟಿರುವನು. ಅವನು ನನಗೆ, ‘ಈ ಕೆಲಸದ ಬಗ್ಗೆ ಬೇರೆ ಯಾರಿಗೂ ತಿಳಿಸಬೇಡ. ನಾನು ನಿನಗೆ ಮಾಡಲು ಹೇಳಿದ ಕೆಲಸವು ಯಾರಿಗೂ ತಿಳಿಯಕೂಡದು’ ಎಂದು ಹೇಳಿದ್ದಾನೆ. ನಾನು ನನ್ನ ಜನರಿಗೆ ನನ್ನನ್ನು ಎಲ್ಲಿ ಭೇಟಿಯಾಗಬೇಕೆಂದು ತಿಳಿಸಿದ್ದೇನೆ. ಈಗ, ನಿನ್ನ ಬಳಿ ತಿನ್ನಲು ಏನಾದರೂ ಆಹಾರವಿದೆಯೋ? ನನಗೆ ಐದು ರೊಟ್ಟಿಗಳನ್ನಾಗಲಿ ಅಥವಾ ಬೇರೆ ಯಾವ ಆಹಾರಪದಾರ್ಥವನ್ನಾಗಲಿ ಕೊಡು” ಎಂದು ಹೇಳಿದನು.

ಯಾಜಕನು ದಾವೀದನಿಗೆ, “ನನ್ನ ಬಳಿ ಸಾಧಾರಣವಾದ ರೊಟ್ಟಿಗಳಿಲ್ಲ. ಆದರೆ ಕೆಲವು ಪವಿತ್ರ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅವುಗಳನ್ನು ತಿನ್ನಬಹುದು” ಎಂದನು.

ದಾವೀದನು ಯಾಜಕನಿಗೆ, “ನಾವು ಯಾವ ಹೆಂಗಸಿನೊಂದಿಗೂ ಲೈಂಗಿಕ ಸಂಬಂಧ ಹೊಂದಿಲ್ಲ. ನನ್ನ ಜನರು ಯುದ್ಧಕ್ಕೆ ಹೋಗುವಾಗಲೂ ಸಾಧಾರಣಕಾರ್ಯಕ್ಕೆ ಹೋಗುವಾಗಲೂ ತಮ್ಮ ದೇಹಗಳನ್ನು ಶುಚಿಯಾಗಿಟ್ಟುಕೊಳ್ಳುತ್ತಾರೆ. ನಮ್ಮ ಇಂದಿನ ಕಾರ್ಯವು ವಿಶೇಷವಾದ್ದರಿಂದ ನಾವು ಖಂಡಿತವಾಗಿ ಪವಿತ್ರರಾಗಿದ್ದೇವೆ” ಎಂದು ಹೇಳಿದನು.

ಅಲ್ಲಿ ಪವಿತ್ರ ರೊಟ್ಟಿಯ ಹೊರತು ಬೇರೆ ರೊಟ್ಟಿಯು ಇರಲಿಲ್ಲ. ಆದ್ದರಿಂದ ಯಾಜಕನು ಆ ರೊಟ್ಟಿಯನ್ನು ದಾವೀದನಿಗೆ ಕೊಟ್ಟನು. ಯಾಜಕರು ಯೆಹೋವನ ಸನ್ನಿಧಿಯಲ್ಲಿ ಪವಿತ್ರ ಮೇಜಿನ ಮೇಲಿಟ್ಟಿದ್ದ ರೊಟ್ಟಿಯೇ ಅದಾಗಿತ್ತು. ಈ ರೊಟ್ಟಿಯನ್ನು ಪ್ರತಿದಿನವೂ ಹೊರ ತೆಗೆಯುತ್ತಿದ್ದರು ಮತ್ತು ಹೊಸ ರೊಟ್ಟಿಯನ್ನು ಆ ಸ್ಥಳದಲ್ಲಿ ಇಡುತ್ತಿದ್ದರು.

ಸೌಲನ ಅಧಿಕಾರಿಗಳಲ್ಲಿ ಒಬ್ಬನು ಆ ದಿನ ಅಲ್ಲಿದ್ದನು. ಅವನು ದೋಯೇಗನೆಂಬ ಎದೋಮ್ಯನು. ದೋಯೇಗನನ್ನು ಯೆಹೋವನ ಸನ್ನಿಧಿಯಲ್ಲಿ ಇಟ್ಟಿದ್ದರು. ಸೌಲನ ಕುರಿಗಳನ್ನು ಕಾಯುವವರಿಗೆ ದೋಯೇಗನು ನಾಯಕನಾಗಿದ್ದನು.

ದಾವೀದನು ಅಹೀಮೆಲೆಕನಿಗೆ, “ನಿನ್ನ ಹತ್ತಿರ ಖಡ್ಗವಾಗಲಿ ಭರ್ಜಿಯಾಗಲಿ ಇದೆಯೇ? ರಾಜನ ಕಾರ್ಯಭಾರವು ಬಹುಮುಖ್ಯವಾದುದು. ನಾನು ಬೇಗ ಹೋಗಬೇಕಾಗಿದೆ. ನಾನು ಕತ್ತಿಯನ್ನಾಗಲೀ ಇತರ ಆಯುಧವನ್ನಾಗಲೀ ತರಲಿಲ್ಲ” ಎಂದು ಕೇಳಿದನು.

ಯಾಜಕನು, “ಇಲ್ಲಿರುವುದು ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವೊಂದೇ. ಏಲಾ ಕಣಿವೆಯಲ್ಲಿ ನೀನು ಅವನನ್ನು ಕೊಂದು ಅವನಿಂದ ನೀನು ಕಿತ್ತುಕೊಂಡ ಖಡ್ಗವೇ ಅದು. ಆ ಖಡ್ಗವನ್ನು ಬಟ್ಟೆಯಲ್ಲಿ ಸುತ್ತಿ ಎಫೋದಿನ ಹಿಂಭಾಗದಲ್ಲಿ ಇಟ್ಟಿದೆ. ನಿನಗೆ ಬೇಕಿದ್ದರೆ ಅದನ್ನು ತೆಗೆದುಕೋ” ಎಂದು ಉತ್ತರಿಸಿದನು.

ದಾವೀದನು, “ಅದನ್ನು ನನಗೆ ಕೊಡು. ಗೊಲ್ಯಾತನ ಖಡ್ಗಕ್ಕೆ ಸಮನಾದ ಬೇರೊಂದು ಖಡ್ಗವಿಲ್ಲ!” ಎಂದನು.

ದಾವೀದನು ಗತ್‌ಗೆ ಹೋದನು

10 ಆ ದಿನ ದಾವೀದನು ಸೌಲನಿಗೆ ಭಯಪಟ್ಟು ಗತ್‌ಗೆ ರಾಜನಾದ ಆಕೀಷನ ಬಳಿಗೆ ಹೋದನು. 11 ಆಕೀಷನ ಅಧಿಕಾರಿಗಳಿಗೆ ದಾವೀದನ ಆಗಮನ ಇಷ್ಟವಾಗಲಿಲ್ಲ. ಅವರು, “ಇವನು ದಾವೀದನು, ಇಸ್ರೇಲ್ ದೇಶದ ರಾಜನು. ಇವನನ್ನು ಕುರಿತೇ ಇಸ್ರೇಲರು ಹಾಡುತ್ತಾರೆ. ಅವರು ಇವನಿಗಾಗಿ ಹಾಡಿ ಕುಣಿಯುತ್ತಾರೆ.

“ಸೌಲನು ಸಾವಿರಾರು ಶತ್ರುಗಳನ್ನು ಕೊಂದನು.
    ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು!

ಎಂಬ ಈ ಹಾಡನ್ನು ಇಸ್ರೇಲರು ಹಾಡುತ್ತಾರೆ” ಎಂದು ಮಾತಾಡಿಕೊಂಡರು.

12 ಈ ಸಂಗತಿಗಳನ್ನು ಕೇಳಿದ ದಾವೀದನು ಗತ್‌ನ ರಾಜನಾದ ಆಕೀಷನಿಗೆ ಬಹಳವಾಗಿ ಭಯಪಟ್ಟನು. 13 ಆದ್ದರಿಂದ ದಾವೀದನು ಆಕೀಷನ ಮತ್ತು ಅವನ ಅಧಿಕಾರಿಗಳ ಎದುರಿನಲ್ಲಿ ಹುಚ್ಚನಂತೆ ನಟಿಸಿದನು. ದಾವೀದನು ಅವರೊಂದಿಗೆ ಇರುವಾಗಲೆಲ್ಲ ಹುಚ್ಚನಂತೆ ವರ್ತಿಸಿದನು. ಅವನು ದ್ವಾರದ ಬಾಗಿಲುಗಳ ಮೇಲೆ ಉಗುಳಿದನು; ಅವನ ಜೊಲ್ಲು ಗಡ್ಡದವರೆಗೂ ಸುರಿಯುವಂತೆ ಮಾಡಿಕೊಂಡನು.

14 ಆಕೀಷನು ತನ್ನ ಅಧಿಕಾರಿಗಳಿಗೆ, “ಅವನೊಬ್ಬ ಹುಚ್ಚ! ಅವನನ್ನು ನನ್ನ ಬಳಿಗೆ ಏಕೆ ಕರೆತಂದಿರಿ? 15 ನನ್ನ ಹತ್ತಿರ ಬೇಕಾದಷ್ಟು ಹುಚ್ಚರಿದ್ದಾರೆ. ನನ್ನ ಎದುರಿನಲ್ಲಿ ಇವನು ಮಾಡುವ ಹುಚ್ಚಾಟವನ್ನು ನಾನು ನೋಡಲೆಂದು ಕರೆ ತಂದಿರುವಿರೋ? ಇವನು ಮತ್ತೆ ನನ್ನ ಮನೆಯೊಳಕ್ಕೆ ಬರಲು ಅವಕಾಶ ಕೊಡಬೇಡಿ” ಅಂದನು.

ದಾವೀದನು ಬೇರೆಬೇರೆ ಸ್ಥಳಗಳಿಗೆ ಹೋದನು

22 ದಾವೀದನು ಗತ್ ಊರನ್ನು ಬಿಟ್ಟು ಅದುಲ್ಲಾಮ್ ಗವಿಗೆ ಓಡಿಹೋದನು. ದಾವೀದನು ಅದುಲ್ಲಾಮಿನಲ್ಲಿರುವುದು ಅವನ ಅಣ್ಣಂದಿರಿಗೂ ಬಂಧುಗಳಿಗೂ ತಿಳಿಯಿತು. ಅವರು ದಾವೀದನನ್ನು ನೋಡಲು ಅಲ್ಲಿಗೆ ಹೋದರು. ದಾವೀದನ ಜೊತೆ ಅನೇಕ ಜನರು ಸೇರಿಕೊಂಡರು. ತೊಂದರೆಯಲ್ಲಿರುವವರು, ಸಾಲಗಾರರು ಮತ್ತು ಅತೃಪ್ತರಾದವರು ದಾವೀದನನ್ನು ಆಶ್ರಯಿಸಿಕೊಂಡರು. ದಾವೀದನು ಅವರಿಗೆಲ್ಲಾ ನಾಯಕನಾದನು. ದಾವೀದನೊಂದಿಗೆ ನಾನೂರು ಜನರಿದ್ದರು.

ದಾವೀದನು ಅದುಲ್ಲಾಮನ್ನು ಬಿಟ್ಟು ಮೋವಾಬಿನ ಮಿಚ್ಪೆಗೆ ಹೋದನು. ದಾವೀದನು ಮೋವಾಬ್ ರಾಜನಿಗೆ, “ದೇವರು ನನಗೇನು ಮಾಡುತ್ತಾನೆಂಬುದನ್ನು ನಾನು ತಿಳಿದುಕೊಳ್ಳುವ ತನಕ, ನನ್ನ ತಂದೆತಾಯಿಗಳು ನಿನ್ನಲ್ಲಿಗೆ ಬಂದು ಇರಲು ದಯವಿಟ್ಟು ನನಗೆ ಅವಕಾಶ ಕೊಡು” ಎಂದು ಕೇಳಿಕೊಂಡನು. ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ರಾಜನ ಹತ್ತಿರ ಬಿಟ್ಟನು. ದಾವೀದನ ತಂದೆತಾಯಿಗಳು ಅವನು ಕೋಟೆಯಲ್ಲಿರುವ ತನಕ ಮೋವಾಬಿನ ರಾಜನೊಂದಿಗೆ ನೆಲೆಸಿದರು.

ಆದರೆ ಗಾದ್ ಪ್ರವಾದಿಯು ದಾವೀದನಿಗೆ, “ನೀನು ಕೋಟೆಯಲ್ಲಿರಬೇಡ. ಯೆಹೂದ್ಯರ ದೇಶಕ್ಕೆ ಹೋಗು” ಎಂದು ಹೇಳಿದನು. ಆದ್ದರಿಂದ ದಾವೀದನು ಹೆರೆತ್ ಅರಣ್ಯಕ್ಕೆ ಹೊರಟುಹೋದನು.

ಸೌಲನಿಂದ ಅಹೀಮೆಲೆಕನ ಕುಟುಂಬದ ನಾಶನ

ದಾವೀದನ ಮತ್ತು ಅವನ ಜನರ ಬಗ್ಗೆ ಜನರು ತಿಳಿದಿದ್ದಾರೆಂಬುದು ಸೌಲನಿಗೆ ಗೊತ್ತಾಯಿತು. ಗಿಬೆಯ ಬೆಟ್ಟದ ಮೇಲಿನ ಮರದ ಕೆಳಗೆ ಸೌಲನು ಕುಳಿತಿದ್ದನು. ಸೌಲನ ಕೈಯಲ್ಲಿ ಭರ್ಜಿಯಿತ್ತು. ಸೌಲನ ಅಧಿಕಾರಿಗಳೆಲ್ಲ ಅವನ ಸುತ್ತಲೂ ನಿಂತಿದ್ದರು. ಸೌಲನು ತನ್ನ ಸುತ್ತಲೂ ನಿಂತಿದ್ದ ಅಧಿಕಾರಿಗಳಿಗೆ, “ಬೆನ್ಯಾಮೀನನ ಜನರೇ, ಕೇಳಿ! ಇಷಯನ ಮಗನಾದ ದಾವೀದನು ನಿಮಗೆ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಕೊಡುತ್ತಾನೆಂದು ತಿಳಿದಿರುವಿರಾ? ದಾವೀದನು ನಿಮಗೆ ಸಹಸ್ರಾಧಿಪತಿಗಳಾಗಿ ಮತ್ತು ಶತಾಧಿಪತಿಗಳಾಗಿ ಬಡ್ತಿ ನೀಡುತ್ತಾನೆಂದು ನೀವು ತಿಳಿದಿರುವಿರಾ? ನೀವು ನನ್ನ ವಿರುದ್ಧವಾಗಿ ಸಂಚುನಡೆಸುತ್ತಿರುವಿರಿ! ನೀವು ರಹಸ್ಯಯೋಜನೆಗಳನ್ನು ಮಾಡಿದ್ದೀರಿ. ನನ್ನ ಮಗ ಯೋನಾತಾನನ ಬಗ್ಗೆ ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ಅವನು ಇಷಯನ ಮಗನ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ನಿಮ್ಮಲ್ಲಿ ಒಬ್ಬರೂ ನನ್ನ ಬಗ್ಗೆ ಚಿಂತಿಸುವುದಿಲ್ಲ! ನನ್ನ ಮಗ ಯೋನಾತಾನನು ದಾವೀದನನ್ನು ಪ್ರೋತ್ಸಾಹಿಸಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ. ಅಡಗಿಕೊಂಡು ನನ್ನ ಮೇಲೆ ಆಕ್ರಮಣ ಮಾಡುವಂತೆ ನನ್ನ ಸೇವಕನಾದ ದಾವೀದನಿಗೆ ಯೋನಾತಾನನು ಹೇಳಿಕೊಟ್ಟಿದ್ದಾನೆ! ಈಗ ದಾವೀದನು ಮಾಡುತ್ತಿರುವುದು ಅದನ್ನೇ!” ಎಂದು ಹೇಳಿದನು.

ಸೌಲನ ಅಧಿಕಾರಿಗಳೊಂದಿಗೆ ಎದೋಮ್ಯನಾದ ದೋಯೇಗನು ನಿಂತಿದ್ದನು. ದೋಯೇಗನು, “ನಾನು ನೋಬಿನಲ್ಲಿ ಇಷಯನ ಮಗನನ್ನು ನೋಡಿದೆನು. ದಾವೀದನು ಅಹೀಟೂಬನ ಮಗನಾದ ಅಹೀಮೆಲೆಕನನ್ನು ನೋಡಲು ಬಂದಿದ್ದನು. 10 ಅಹೀಮೆಲೆಕನು ದಾವೀದನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಅಹೀಮೆಲೆಕನು ದಾವೀದನಿಗೆ ಆಹಾರವನ್ನೂ ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನೂ ಕೊಟ್ಟನು” ಎಂದು ಹೇಳಿದನು.

11 ಆಗ ರಾಜನಾದ ಸೌಲನು ಯಾಜಕನನ್ನು ತನ್ನ ಹತ್ತಿರಕ್ಕೆ ಕರೆತರಲು ಕೆಲವು ಜನರಿಗೆ ಅಪ್ಪಣೆಕೊಟ್ಟನು. ಸೌಲನು, ಅಹೀಟೂಬನ ಮಗನಾದ ಅಹೀಮೆಲೆಕನನ್ನೂ ಅವನ ಎಲ್ಲ ಬಂಧುಗಳನ್ನೂ ಕರೆತರಲು ಅವರಿಗೆ ಹೇಳಿದನು. ಅಹೀಮೆಲೆಕನ ಬಂಧುಗಳು ನೋಬಿನಲ್ಲಿ ಯಾಜಕರಾಗಿದ್ದರು. ಅವರೆಲ್ಲ ರಾಜನ ಹತ್ತಿರಕ್ಕೆ ಬಂದರು. 12 ಸೌಲನು ಅಹೀಮೆಲೆಕನಿಗೆ, “ಅಹೀಟೂಬನ ಮಗನೇ, ಈಗ ನನ್ನ ಮಾತನ್ನು ಕೇಳು” ಎಂದು ಹೇಳಿದನು.

ಅಹೀಮೆಲೆಕನು, “ಆಗಲೀ, ಸ್ವಾಮಿ” ಎಂದು ಉತ್ತರಿಸಿದನು.

13 ಸೌಲನು ಅಹೀಮೆಲೆಕನಿಗೆ, “ನೀನು ಮತ್ತು ಇಷಯನ ಮಗ ನನ್ನ ವಿರುದ್ಧ ರಹಸ್ಯಯೋಜನಗೆಳನ್ನು ಏಕೆ ಮಾಡಿದಿರಿ? ನೀನು ದಾವೀದನಿಗೆ ರೊಟ್ಟಿಯನ್ನೂ ಖಡ್ಗವನ್ನೂ ಕೊಟ್ಟೆ! ನೀನು ಅವನಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ಈಗ ದಾವೀದನು ನನ್ನ ಮೇಲೆ ಆಕ್ರಮಣಮಾಡಲು ಕಾಯುತ್ತಿದ್ದಾನೆ!” ಎಂದು ಹೇಳಿದನು.

14 ಅಹೀಮೆಲೆಕನು, “ದಾವೀದನು ನಿನಗೆ ಬಹಳ ನಂಬಿಗಸ್ತನಾಗಿದ್ದಾನೆ. ದಾವೀದನಷ್ಟು ನಂಬಿಗಸ್ತನು ನಿನ್ನ ಇತರ ಅಧಿಕಾರಿಗಳಲ್ಲಿ ಇಲ್ಲವೇ ಇಲ್ಲ. ದಾವೀದನು ನಿನ್ನ ಸ್ವಂತ ಅಳಿಯ. ದಾವೀದನು ನಿನ್ನ ಅಂಗರಕ್ಷಕ ದಳಪತಿ. ದಾವೀದನನ್ನು ನಿನ್ನ ಸ್ವಂತ ಕುಟುಂಬವೆಲ್ಲ ಗೌರವಿಸುತ್ತದೆ. 15 ದಾವೀದನಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದು ಅದು ಮೊದಲನೆಯ ಸಲವಂತೂ ಅಲ್ಲವೇ ಅಲ್ಲ. ನನ್ನ ಮೇಲಾಗಲಿ ನನ್ನ ಬಂಧುಗಳ ಮೇಲಾಗಲಿ ತಪ್ಪು ಹೊರಿಸಬೇಡ. ನಾವೆಲ್ಲ ನಿನ್ನ ಸೇವಕರು. ಈಗ ಏನು ನಡೆಯುತ್ತಿದೆಯೋ ಅದು ನನಗೆ ಸ್ವಲ್ಪವೂ ತಿಳಿದಿಲ್ಲ” ಎಂದು ಉತ್ತರಿಸಿದನು.

16 ಆದರೆ ರಾಜನು, “ಅಹೀಮೆಲೆಕನೇ, ನೀನು ಮತ್ತು ನಿನ್ನ ಬಂಧುಗಳೆಲ್ಲರೂ ಸಾಯಲೇಬೇಕು!” ಎಂದು ಹೇಳಿದನು. 17 ನಂತರ ರಾಜನು ತನ್ನ ಸಿಪಾಯಿಗಳಿಗೆ, “ನೀವು ಹೋಗಿ ಯೆಹೋವನ ಯಾಜಕರನ್ನು ಕೊಂದುಹಾಕಿ. ಅವರು ದಾವೀದನ ಪಕ್ಷ ವಹಿಸಿದ್ದಾರೆ. ದಾವೀದನು ಓಡಿಹೋಗುತ್ತಿರುವುದು ತಿಳಿದಿದ್ದರೂ ಅವರು ನನಗೆ ತಿಳಿಸಲಿಲ್ಲ!” ಎಂದನು.

ಆದರೆ ಯೆಹೋವನ ಯಾಜಕರನ್ನು ಕೊಲ್ಲಲು ಸೈನಿಕರು ನಿರಾಕರಿಸಿದರು. 18 ಆದ್ದರಿಂದ ರಾಜನು ದೋಯೇಗನಿಗೆ, “ನೀನು ಹೋಗಿ ಯಾಜಕರನ್ನು ಕೊಂದುಹಾಕು” ಎಂದು ಹೇಳಿದನು. ಆದ್ದರಿಂದ ಎದೋಮ್ಯನಾದ ದೋಯೇಗನು ಹೋಗಿ ಆ ದಿನ ಎಂಭತ್ತೈದು ಮಂದಿ ಯಾಜಕರನ್ನು ಕೊಂದನು. 19 ನೋಬ್ ಪಟ್ಟಣವು ಯಾಜಕರ ನಗರವಾಗಿತ್ತು. ದೋಯೇಗನು ನೋಬ್ ಪಟ್ಟಣದ ಎಲ್ಲ ಜನರನ್ನೂ ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಹಸುಗೂಸುಗಳನ್ನೂ ತನ್ನ ಖಡ್ಗದಿಂದ ಕೊಂದುಹಾಕಿದನು. ದೋಯೇಗನು ಅವರ ಹಸುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಕೊಂದುಬಿಟ್ಟನು.

20 ಆದರೆ ಎಬ್ಯಾತಾರನು ತಪ್ಪಿಸಿಕೊಂಡನು. ಎಬ್ಯಾತಾರನು ಅಹೀಮೆಲೆಕನ ಮಗ. ಅಹೀಮೆಲೆಕನು ಅಹೀಟೂಬನ ಮಗ. ಎಬ್ಯಾತಾರನು ಓಡಿಹೋಗಿ ದಾವೀದನ ಜೊತೆ ಸೇರಿಕೊಂಡನು. 21 ಯೆಹೋವನ ಯಾಜಕರನ್ನು ಸೌಲನು ಕೊಲ್ಲಿಸಿದನೆಂದು ಎಬ್ಯಾತಾರನು ದಾವೀದನಿಗೆ ತಿಳಿಸಿದನು. 22 ಆಗ ದಾವೀದನು ಎಬ್ಯಾತಾರನಿಗೆ, “ನಾನು ಎದೋಮ್ಯನಾದ ದೋಯೇಗನನ್ನು ಆ ದಿನ ನೋಬ್ ಪಟ್ಟಣದಲ್ಲಿ ನೋಡಿದೆ. ಅವನು ಸೌಲನಿಗೆ ತಿಳಿಸುತ್ತಾನೆಂದು ನನಗೆ ಗೊತ್ತಿತ್ತು! ನಿನ್ನ ತಂದೆಯ ಕುಟುಂಬದ ಮರಣಕ್ಕೆ ನಾನೇ ಕಾರಣ. 23 ನಿನ್ನನ್ನು ಕೊಲ್ಲಲು ಯಾವ ಮನುಷ್ಯ ಬಯಸಿರುವನೋ ಅವನು ನನ್ನನ್ನು ಸಹ ಕೊಲ್ಲಲು ಬಯಸಿದ್ದಾನೆ. ನನ್ನ ಜೊತೆಯಲ್ಲಿರು. ಆಗ ನೀನು ಸುರಕ್ಷಿತವಾಗಿರುವೆ” ಎಂದು ಹೇಳಿದನು.

1 ಕೊರಿಂಥದವರಿಗೆ 3

ಮನುಷ್ಯರನ್ನು ಅನುಸರಿಸುವುದು ತಪ್ಪು

ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು. ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ. ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ. ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ.

ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು. ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ. ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ. ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ.

ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ. 10 ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. 11 ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು. 12 ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು. 13 ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು. 14 ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು. 15 ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.

16 ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ. 17 ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.

18 ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು. 19 ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. 20 “ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ”(B) ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 21 ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ. 22 ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ. 23 ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.

ಯೆಹೆಜ್ಕೇಲ 1

ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು

1-3 ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು.

ಯೆಹೋವನ ರಥ—ದೇವರ ಸಿಂಹಾಸನ

ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜ್ವಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು. ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು. ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು. ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು. ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು; ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು.

10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. 11 ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. 12 ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ. 13 ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು.

ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು.

15-16 ಆ ಜೀವಿಗಳನ್ನು ನಾನು ನೋಡುತ್ತಿರುವಾಗ, ನೆಲಕ್ಕೆ ತಾಕಿದ್ದ ನಾಲ್ಕು ಚಕ್ರಗಳನ್ನು ಕಂಡೆನು. ಒಂದೊಂದು ಜೀವಿಯ ಪಕ್ಕದಲ್ಲಿ ಒಂದೊಂದು ಚಕ್ರಗಳಿದ್ದವು. ಆ ಎಲ್ಲಾ ಚಕ್ರಗಳು ಒಂದೇ ಪ್ರಕಾರವಾಗಿ ಕಾಣುತ್ತಿದ್ದವು. ಅವುಗಳು ಹೊಳೆಯುವ ಹಳದಿ ಬಣ್ಣದ ರತ್ನಗಳಿಂದ ಮಾಡಲ್ಪಟ್ಟಂತೆ ತೋರುತ್ತಿದ್ದವು. ಆ ಚಕ್ರದೊಳಗೆ ಇನ್ನೊಂದು ಚಕ್ರವಿದ್ದಂತೆ ತೋರುತ್ತಿತ್ತು. 17 ಆ ಚಕ್ರಗಳು ಹೊರಳುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗೆ ಬೇಕಾದರೂ ತಿರುಗಬಲ್ಲವುಗಳಾಗಿದ್ದವು. ಆದರೆ ಜೀವಿಗಳು ಚಲಿಸುತ್ತಿರುವಾಗ ಅವು ತಿರುಗುತ್ತಿರಲಿಲ್ಲ.

18 ಚಕ್ರಗಳ ಅಂಚು ಎತ್ತರವಾಗಿದ್ದು ಭಯಾನಕವಾಗಿ ಕಾಣುತ್ತಿದ್ದವು. ಆ ನಾಲ್ಕು ಚಕ್ರಗಳ ಅಂಚುಗಳ ತುಂಬ ಕಣ್ಣುಗಳಿದ್ದವು.

19 ಚಕ್ರಗಳು ಜೀವಿಗಳೊಂದಿಗೆ ಯಾವಾಗಲೂ ಚಲಿಸುತ್ತಿದ್ದವು. ಜೀವಿಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಚಕ್ರಗಳು ಸಹ ಅವುಗಳ ಜೊತೆಯಲ್ಲಿಯೇ ಚಲಿಸುತ್ತಿದ್ದವು. 20 ದೇವರಾತ್ಮನು ನಡೆಸಿದ ಕಡೆಗೆ ಜೀವಿಗಳು ಹೋದವು. ಚಕ್ರಗಳು ಸಹ ಅವುಗಳೊಂದಿಗೆ ಚಲಿಸಿದವು. ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿತ್ತು. 21 ಹೀಗೆ ಜೀವಿಗಳು ಚಲಿಸಿದಾಗ ಚಕ್ರಗಳು ಚಲಿಸಿದವು. ಜೀವಿಗಳು ನಿಂತಾಗ ಚಕ್ರಗಳೂ ನಿಂತವು. ಜೀವಿಗಳು ಗಾಳಿಯಲ್ಲಿ ಮೇಲಕ್ಕೆ ಹೋದರೆ, ಚಕ್ರಗಳೂ ಅವುಗಳೊಂದಿಗೆ ಮೇಲಕ್ಕೆ ಹೋದವು; ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿ ಇತ್ತು.

22 ಆ ಜೀವಿಗಳ ತಲೆಗಳ ಮೇಲೆ ಆಶ್ಚರ್ಯಕರವಾದ ಒಂದು ಗುಮಟದಂತಿರುವ ವಸ್ತುವು ಹರಡಿಕೊಂಡಿತ್ತು. ಅದು ತಲೆಕೆಳಕಾಗಿ ಇಟ್ಟಿದ್ದ ಬೋಗುಣಿಯಂತಿತ್ತು. ಅದು ಸ್ಪಟಿಕದಂತೆ ಸ್ವಚ್ಫವಾಗಿತ್ತು. 23 ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.

24 ಜೀವಿಗಳು ಚಲಿಸಿದಾಗಲೆಲ್ಲಾ ಅವುಗಳ ರೆಕ್ಕೆಗಳ ಗಟ್ಟಿಯಾದ ಶಬ್ದ ನನಗೆ ಕೇಳಿಸಿತು. ಅದು ನೀರು ಭೋರ್ಗರೆಯುವ ಶಬ್ದದಂತಿತ್ತು. ಸರ್ವಶಕ್ತನಾದ ದೇವರ ಶಬ್ದದಂತೆ ಅದು ಗಟ್ಟಿಯಾಗಿತ್ತು. ಅದು ದೊಡ್ಡ ಸೈನ್ಯದ ಅಥವಾ ಜನಸಮೂಹದ ಶಬ್ದದಂತಿತ್ತು. ಜೀವಿಗಳು ಚಲಿಸುವುದನ್ನು ನಿಲ್ಲಿಸಿದಾಗ ಅವುಗಳು ತಮ್ಮ ರೆಕ್ಕೆಗಳನ್ನು ತಮ್ಮ ಪಾರ್ಶ್ವಗಳಲ್ಲಿ ಕೆಳಗಿಳಿಸುತ್ತಿದ್ದವು.

25 ಜೀವಿಗಳು ಚಲಿಸುವದನ್ನು ನಿಲ್ಲಿಸಿ ರೆಕ್ಕೆಗಳನ್ನು ಕೆಳಗಿಳಿಸಿದವು. ಆಗ ಇನ್ನೊಂದು ದೊಡ್ಡ ಶಬ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಬೋಗುಣಿಯ ಮೇಲಿನಿಂದ ಆ ಶಬ್ದವು ಹೊರಟಿತ್ತು. 26 ಆ ಬೋಗುಣಿಯ ಮೇಲೆ ಸಿಂಹಾಸನದಂತಿದ್ದ ವಸ್ತುವು ಇತ್ತು. ಅದು ನೀಲಮಣಿಯಂತೆ ನೀಲಿ ಬಣ್ಣದ್ದಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಒಬ್ಬನು ಮನುಷ್ಯನಂತೆ ಕಾಣುತ್ತಿದ್ದನು. 27 ನಾನು ಆತನ ಸೊಂಟದ ಮೇಲ್ಭಾಗವನ್ನು ನೋಡಿದಾಗ, ಆತನು ಬೆಂಕಿಯಿಂದ ಸುತ್ತುವರಿದ ಕಾದಲೋಹದಂತೆ ಕಂಡನು. ನಾನು ಆತನ ಸೊಂಟದಿಂದ ಕೆಳಭಾಗವನ್ನು ನೋಡಿದಾಗ ಆತನು ಬೆಂಕಿಯಂತೆ ಕಂಡನು. ಆತನ ಸುತ್ತಲೂ ಪ್ರಕಾಶಮಾನವಾದ ಬೆಳಕಿತ್ತು. 28 ಆತನ ಸುತ್ತಲೂ ಇದ್ದ ಪ್ರಕಾಶವು ಮೇಘಬಿಲ್ಲಿನಂತೆಯೂ ಯೆಹೋವನ ಮಹಿಮೆಯಂತೆಯೂ ಕಾಣುತ್ತಿತ್ತು. ನಾನು ಅದನ್ನು ನೋಡಿದ ಕೂಡಲೇ ನೆಲಕ್ಕೆ ಬಿದ್ದೆನು. ಮುಖವನ್ನು ನೆಲದ ಮೇಲಿಟ್ಟು ಅಡ್ಡಬಿದ್ದೆನು. ಆಗ ನನ್ನೊಂದಿಗೆ ಮಾತನಾಡುತ್ತಿದ್ದ ಸ್ವರವನ್ನು ಕೇಳಿದೆನು.

ಕೀರ್ತನೆಗಳು 37

ರಚನೆಗಾರ: ದಾವೀದ

37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
    ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
ದುಷ್ಟರು ಹುಲ್ಲಿನಂತೆಯೂ
    ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
    ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
    ನಿನಗೆ ಬೇಕಾದುದನ್ನು ಆತನೇ ಕೊಡುವನು.
ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
    ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
ನಿನ್ನ ನೀತಿಯೂ ನ್ಯಾಯವೂ
    ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
    ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
    ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
ದುಷ್ಟರಾದರೋ ನಾಶವಾಗುವರು.
    ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
    ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
    ಸಮಾಧಾನವನ್ನು ಅನುಭವಿಸುವರು.

12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
    ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
    ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
    ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
    ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
    ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
    ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.
18 ಯೆಹೋವನು ತನ್ನ ಭಕ್ತರನ್ನು ಅವರ ಜೀವಮಾನ ಪೂರ್ತಿ ಕಾಪಾಡುವನು.
    ಅವರ ಭೂಮಿಯು ಸದಾಕಾಲ ಅವರದೇ ಆಗಿರುವುದು.
19 ಆಪತ್ಕಾಲದಲ್ಲಿ ನೀತಿವಂತರು ನಾಶವಾಗುವುದಿಲ್ಲ.
    ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ.
    ಅವರು ನಾಶವಾಗುವರು.
ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ;
    ಅವರು ಹೊಗೆಯಂತೆ ಇಲ್ಲವಾಗುವರು.
21 ದುಷ್ಟನು ತಾನು ಮಾಡಿದ ಸಾಲವನ್ನು ತೀರಿಸುವುದಿಲ್ಲ.
    ನೀತಿವಂತನಾದರೋ ಬೇರೆಯವರಿಗೆ ಉದಾರವಾಗಿ ಕೊಡುವನು.
22 ನೀತಿವಂತರು ಆಶೀರ್ವದಿಸಿದರೆ, ವಾಗ್ದಾನಮಾಡಲ್ಪಟ್ಟ ಭೂಮಿಯನ್ನು ಜನರು ಪಡೆದುಕೊಳ್ಳುವರು.
    ಆದರೆ ಅವರು ಶಪಿಸಿದರೆ, ಜನರು ನಾಶವಾಗುವರು.
23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು
    ಮತ್ತು ಅವನನ್ನು ಮೆಚ್ಚಿಕೊಳ್ಳುವನು.
24 ಅವನು ಎಡವಿದರೂ ಬೀಳುವುದಿಲ್ಲ;
    ಯಾಕೆಂದರೆ ಯೆಹೋವನು ಅವನ ಕೈಹಿಡಿದುಕೊಂಡಿದ್ದಾನೆ.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ.
    ನೀತಿವಂತರನ್ನು ದೇವರು ತೊರೆದುಬಿಟ್ಟದ್ದನ್ನಾಗಲಿ ಅವನ ಮಕ್ಕಳು ಆಹಾರಕ್ಕಾಗಿ ಬೇಡುವುದನ್ನಾಗಲಿ ನಾನೆಂದೂ ಕಾಣಲಿಲ್ಲ.
26 ನೀತಿವಂತನು ಬೇರೆಯವರಿಗೆ ಉದಾರವಾಗಿ ಕೊಡುವನು.
    ಅವನ ಮಕ್ಕಳು ಆಶೀರ್ವಾದ ಹೊಂದುವರು.
27 ನೀನು ಕೆಟ್ಟದ್ದನ್ನು ಮಾಡದೆ
    ಒಳ್ಳೆಯದನ್ನೇ ಮಾಡಿದರೆ ಸದಾಕಾಲ ಬದುಕುವೆ.
28 ಯೆಹೋವನು ನ್ಯಾಯವನ್ನು ಪ್ರೀತಿಸುವನು.
    ಆತನು ತನ್ನ ಭಕ್ತರನ್ನು ತೊರೆದುಬಿಡದೆ
ಅವರನ್ನು ಯಾವಾಗಲೂ ಕಾಪಾಡುವನು.
    ದುಷ್ಟರನ್ನಾದರೋ ಆತನು ನಾಶಮಾಡುವನು.
29 ದೇವರು ವಾಗ್ದಾನ ಮಾಡಿದ ಭೂಮಿಯನ್ನು
    ನೀತಿವಂತರು ಪಡೆದುಕೊಂಡು ಅಲ್ಲಿ ಸದಾಕಾಲ ವಾಸಿಸುವರು.
30 ನೀತಿವಂತನು ಒಳ್ಳೆಯ ಬುದ್ಧಿವಾದ ಹೇಳುವನು.
    ಅವನ ತೀರ್ಮಾನಗಳು ನ್ಯಾಯಬದ್ಧವಾಗಿರುತ್ತವೆ.
31 ಯೆಹೋವನ ಉಪದೇಶವು ನೀತಿವಂತನ ಹೃದಯದಲ್ಲಿರುತ್ತದೆ.
    ಅವನು ನೀತಿಮಾರ್ಗದಲ್ಲಿ ನಡೆಯವನು.

32 ಕೆಡುಕರಾದರೋ ನೀತಿವಂತರಿಗೆ
    ಕೇಡುಮಾಡಲು ಹೊಂಚುಹಾಕುವರು.
33 ಆದರೆ ಯೆಹೋವನು ನೀತಿವಂತರನ್ನು ತೊರೆದುಬಿಡುವುದಿಲ್ಲ.
    ನೀತಿವಂತರಿಗೆ ಅಪರಾಧಿಗಳೆಂದು ತೀರ್ಪಾಗಲು ಆತನು ಬಿಡುವುದಿಲ್ಲ.
34 ಯೆಹೋವನನ್ನೇ ನಿರೀಕ್ಷಿಸಿಕೊಂಡು ಆತನ ಮಾರ್ಗವನ್ನು ಅನುಸರಿಸಿರಿ.
    ಆಗ ಆತನು ನಿಮ್ಮನ್ನು ಜಯಶಾಲಿಗಳನ್ನಾಗಿ ಮಾಡುವನು;
    ದೇವರು ವಾಗ್ದಾನ ಮಾಡಿದ ಭೂಮಿಯನ್ನು ನೀವು ಪಡೆದುಕೊಳ್ಳುವಿರಿ.

35 ಮಹಾದುಷ್ಟನನ್ನು ನಾನು ನೋಡಿದ್ದೇನೆ.
    ಅವನು ಮಹಾವೃಕ್ಷದಂತೆ ಬಲಿಷ್ಠನಾಗಿದ್ದನು.
36 ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು.
    ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
37 ಪವಿತ್ರರನ್ನೂ ಯಥಾರ್ಥರನ್ನೂ ಗಮನಿಸು.
    ಶಾಂತಿಪ್ರಿಯರು ಅನೇಕ ಸಂತಾನಗಳನ್ನು ಹೊಂದಿಕೊಳ್ಳುವರು.
38 ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರು ಸಂಪೂರ್ಣವಾಗಿ ನಾಶವಾಗುವರು.
    ಅವರ ಮಕ್ಕಳೂ ನಾಶವಾಗುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
    ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
    ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International