M’Cheyne Bible Reading Plan
ಯೋನಾತಾನನು ಮತ್ತು ಅವನ ಸಹಾಯಕನು ಫಿಲಿಷ್ಟಿಯರನ್ನು ಆಕ್ರಮಣ ಮಾಡುವರು
14 ಅಂದು ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊತ್ತುತರುವ ಯುವಕನೊಂದಿಗೆ ಮಾತನಾಡುತ್ತಾ, “ಕಣಿವೆಯ ಆಚೆಗಿರುವ ಫಿಲಿಷ್ಟಿಯರ ಪಾಳೆಯಕ್ಕೆ ಹೋಗೋಣ” ಎಂದು ಹೇಳಿದನು. ಆದರೆ ಯೋನಾತಾನನು ತನ್ನ ತಂದೆಗೆ ಇದನ್ನು ತಿಳಿಸಲಿಲ್ಲ.
2 ಸೌಲನು ಮಿಗ್ರೋನಿನ ಬೆಟ್ಟದ ತುದಿಯಲ್ಲಿರುವ ಒಂದು ದಾಳಿಂಬೆ ಮರದ ಅಡಿಯಲ್ಲಿ ಕುಳಿತಿದ್ದನು. ಅದು ಆ ಸ್ಥಳದ ಕಣಕ್ಕೆ ಸಮೀಪವಾಗಿತ್ತು. ಸೌಲನ ಜೊತೆಯಲ್ಲಿ ಆರುನೂರು ಜನರಿದ್ದರು. 3 ಅವರಲ್ಲಿ ಅಹೀಯನೂ ಒಬ್ಬನು. ಶೀಲೋವಿನಲ್ಲಿ ಏಲಿಯು ಯೆಹೋವನ ಯಾಜಕನಾಗಿದ್ದನು. ಏಫೋದನ್ನು ಧರಿಸಿದ್ದ ಅಹೀಯನು ಆಗ ಅಲ್ಲಿ ಯಾಜಕನಾಗಿದ್ದನು. ಅಹೀಯನು ಈಕಾಬೋದನ ಸೋದರನಾದ ಅಹೀಟೂಬನ ಮಗ. ಈಕಾಬೋದನು ಫೀನೆಹಾಸನ ಮಗ. ಫೀನೆಹಾಸನು ಏಲಿಯ ಮಗ.
ಯೋನಾತಾನನು ಹೊರಟುಹೋದನೆಂಬುದು ಜನರಿಗೆ ಗೊತ್ತಿರಲಿಲ್ಲ. 4 ಆ ಮಾರ್ಗದ ಎರಡು ಕಡೆಗಳಲ್ಲೂ ದೊಡ್ಡದೊಡ್ಡ ಬಂಡೆಗಲ್ಲುಗಳಿದ್ದವು. ಯೋನಾತಾನನು ಫಿಲಿಷ್ಟಿಯರ ಪಾಳೆಯಕ್ಕೆ ಆ ಮಾರ್ಗದಲ್ಲಿ ಹೋಗಲು ಉಪಾಯ ಮಾಡಿದನು. ಆ ಮಾರ್ಗದ ಒಂದು ಕಡೆಗಿದ್ದ ಬಂಡೆಗಲ್ಲಿಗೆ ಬೋಚೇಚ್ ಎಂದು ಹೆಸರು; ಇನ್ನೊಂದು ಕಡೆಗಿದ್ದ ಬಂಡೆಗಲ್ಲಿಗೆ ಸೆನೆ ಎಂದು ಹೆಸರು. 5 ಒಂದು ಬಂಡೆಗಲ್ಲು ಉತ್ತರದಿಕ್ಕಿನ ಮಿಕ್ಮಾಷಿನ ಕಡೆಗೂ ಇನ್ನೊಂದು ಬಂಡೆಗಲ್ಲು ದಕ್ಷಿಣದಿಕ್ಕಿನ ಗೆಬದ ಕಡೆಗೂ ಇದ್ದವು.
6 ಯೋನಾತಾನನು ತನ್ನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಸಹಾಯಕನಿಗೆ, “ಆ ಹೊರದೇಶಿಯರ ಪಾಳೆಯಕ್ಕೆ ಹೋಗೋಣ ಬಾ. ಈ ಜನರನ್ನು ಸೋಲಿಸಲು ಯೆಹೋವನು ಬಹುಶಃ ನಮ್ಮನ್ನು ಬಳಸಬಹುದು. ಯೆಹೋವನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ಸೈನಿಕರಿದ್ದರೂ ಇಲ್ಲವೆ ಕೆಲವೇ ಸೈನಿಕರಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ” ಎಂದು ಹೇಳಿದನು.
7 ಯೋನಾತಾನನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಕನು, “ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು. ನಿನ್ನ ಕೆಲಸದಲ್ಲೆಲ್ಲಾ ನಾನು ನಿನ್ನೊಂದಿಗಿರುತ್ತೇನೆ” ಎಂದು ಹೇಳಿದನು.
8 ಯೋನಾತಾನನು, “ನಾವು ಕಣಿವೆಯನ್ನು ದಾಟಿ ಫಿಲಿಷ್ಟಿಯ ಕಾವಲುಗಾರರ ಕಡೆಗೆ ಹೋಗಿ ಅವರಿಗೆ ಕಾಣಿಸಿಕೊಳ್ಳೋಣ. 9 ಅವರು, ‘ನಾವು ಬರುವ ತನಕ ನೀವು ಅಲ್ಲೇ ನಿಲ್ಲಿ’ ಎಂದು ಹೇಳಿದರೆ, ನಾವು ನಿಂತಲ್ಲೇ ನಿಲ್ಲೋಣ. ನಾವು ಮೇಲೆ ಹತ್ತಿ ಅವರ ಹತ್ತಿರಕ್ಕೆ ಹೋಗುವುದು ಬೇಡ. 10 ಆದರೆ ಫಿಲಿಷ್ಟಿಯರು, ‘ನಮ್ಮ ಬಳಿಗೆ ಹತ್ತಿ ಬನ್ನಿ’ ಎಂದರೆ, ನಾವು ಅವರ ಬಳಿಗೆ ಹತ್ತಿ ಹೋಗೋಣ; ಯಾಕೆಂದರೆ ಅದು ದೇವರ ಗುರುತು. ದೇವರು ಅವರನ್ನು ಸೋಲಿಸಲು ನಮಗೆ ಅವಕಾಶ ಕಲ್ಪಿಸಿದ್ದಾನೆ ಎಂಬುದೇ ಅದರ ಅರ್ಥ” ಎಂದು ಹೇಳಿದನು.
11 ಹೀಗೆ ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರಿಗೆ ಕಾಣಿಸಿಕೊಂಡರು. ಫಿಲಿಷ್ಟಿಯರ ಕಾವಲುಗಾರರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಬರುತ್ತಿದ್ದಾರೆ” ಎಂದು ಹೇಳಿದರು. 12 ಆ ಕೋಟೆಯಲ್ಲಿದ್ದ ಫಿಲಿಷ್ಟಿಯರು ಯೋನಾತಾನ ಮತ್ತು ಅವನ ಸಹಾಯಕನಿಗೆ, “ನಮ್ಮ ಹತ್ತಿರಕ್ಕೆ ಬನ್ನಿ. ನಾವು ನಿಮಗೆ ಒಂದು ಪಾಠ ಕಲಿಸುತ್ತೇವೆ” ಎಂದು ಕೂಗಿ ಹೇಳಿದರು.
ಯೋನಾತಾನನು ತನ್ನ ಸಹಾಯಕನಿಗೆ, “ಬೆಟ್ಟದ ಮೇಲಿನವರೆಗೆ ನನ್ನನ್ನು ಹಿಂಬಾಲಿಸು. ಯೆಹೋವನು ಇಸ್ರೇಲರ ವಶಕ್ಕೆ ಫಿಲಿಷ್ಟಿಯರನ್ನು ಒಪ್ಪಿಸಿದ್ದಾನೆ” ಎಂದು ಹೇಳಿದನು.
13-14 ಯೋನಾತಾನನು ತನ್ನ ಕೈಕಾಲುಗಳಿಂದ ಬೆಟ್ಟವನ್ನು ಹತ್ತಿದನು. ಅವನನ್ನು ಹಿಂಬಾಲಿಸಿಕೊಂಡು ಅವನ ಸಹಾಯಕನೂ ಬೆಟ್ಟವನ್ನು ಹತ್ತಿದನು. ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡಿದರು ಅವರು ಮೊದಲ ಆಕ್ರಮಣದಲ್ಲಿ ಅರ್ಧಎಕರೆ ಸ್ಥಳದಲ್ಲಿದ್ದ ಇಪ್ಪತ್ತು ಮಂದಿ ಫಿಲಿಷ್ಟಿಯರನ್ನು ಕೊಂದರು. ಆಕ್ರಮಣಮಾಡಲು ಬಂದವರೊಡನೆ ಯೋನಾತಾನನು ಮುಖಾಮುಖಿಯಾಗಿ ಹೋರಾಡಿದನು. ಯೋನಾತಾನನ ಸಹಾಯಕನು ಅವನ ಹಿಂದೆ ಬರುತ್ತಾ ಗಾಯಾಳುಗಳನ್ನು ಕೊಂದನು.
15 ಹೊರವಲಯದ ಪಾಳೆಯದಲ್ಲಿದ್ದ ಮತ್ತು ಕೋಟೆಯಲ್ಲಿದ್ದ ಎಲ್ಲಾ ಫಿಲಿಷ್ಟಿಯ ಸೈನಿಕರು ಭಯದಿಂದ ನಡುಗಿದರು. ಹೊಲದಲ್ಲಿದ್ದ ಸೈನಿಕರು ಸಹ ಹೆದರಿಕೊಂಡಿದ್ದರು. ಅತ್ಯಂತ ಧೈರ್ಯವಂತರಾದ ಸೈನಿಕರು ಸಹ ಹೆದರಿಕೊಂಡಿದ್ದರು. ಭೂಮಿಯು ನಡುಗಿದ್ದರಿಂದ ಫಿಲಿಷ್ಟಿಯ ಸೈನಿಕರು ನಿಜವಾಗಿಯೂ ಹೆದರಿಕೊಂಡರು.
16 ಫಿಲಿಷ್ಟಿಯ ಸೈನಿಕರು ದಿಕ್ಕುಪಾಲಾಗಿ ಚದರಿ ಓಡಿಹೋಗುತ್ತಿರುವುದನ್ನು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯದಲ್ಲಿದ್ದ ಸೌಲನ ಕಾವಲುಗಾರರು ನೋಡಿದರು. 17 ಸೌಲನು ತನ್ನೊಡನೆ ಇದ್ದ ಸೈನಿಕರಿಗೆ, “ಪಾಳೆಯದಲ್ಲಿರುವ ಜನರನ್ನು ಲೆಕ್ಕಹಾಕಿ. ಯಾರು ಪಾಳೆಯದಿಂದ ಹೊರಗೆ ಹೋಗಿದ್ದಾರೆ ಎಂಬುದನ್ನು ನಾನು ತಿಳಿಯಬೇಕು” ಎಂದು ಹೇಳಿದನು.
ಅವರು ಲೆಕ್ಕಹಾಕಿದಾಗ, ಯೋನಾತಾನನೂ ಅವನ ಸಹಾಯಕನೂ ಹೊರಗೆ ಹೋಗಿರುವುದು ತಿಳಿಯಿತು.
18 ಸೌಲನು ಅಹೀಯನಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು. (ಆ ಸಮಯದಲ್ಲಿ ದೇವರ ಪವಿತ್ರ ಪೆಟ್ಟಿಗೆಯು ಇಸ್ರೇಲರೊಂದಿಗೆ ಇತ್ತು.) 19 ಸೌಲನು ಯಾಜಕನಾದ ಅಹೀಯನ ಜೊತೆ ಮಾತನಾಡುತ್ತಿದ್ದನು. ಸೌಲನು ಯೆಹೋವನ ಸಲಹೆಗಾಗಿ ಕಾಯುತ್ತಿದ್ದನು. ಆದರೆ ಫಿಲಿಷ್ಟಿಯರ ಪಾಳೆಯದಲ್ಲಿ ಗದ್ದಲವೂ ಗಲಿಬಿಲಿಯೂ ಹೆಚ್ಚತೊಡಗಿದವು. ಸೌಲನು ತಾಳ್ಮೆಯಿಲ್ಲದಂತಾದನು. ಕೊನೆಯದಾಗಿ ಸೌಲನು ಯಾಜಕನಾದ ಅಹೀಯನಿಗೆ, “ಅಷ್ಟೇ ಸಾಕು, ಕೈಗಳನ್ನು ಕೆಳಗಿಳಿಸಿ ಪ್ರಾರ್ಥನೆಯನ್ನು ನಿಲ್ಲಿಸು” ಎಂದು ಹೇಳಿದನು.
20 ಸೌಲನು ಸೈನಿಕರನ್ನೆಲ್ಲ ಒಟ್ಟುಗೂಡಿಸಿಕೊಂಡು ಯುದ್ಧಕ್ಕೆ ಹೋದನು. ಫಿಲಿಷ್ಟಿಯ ಸೈನಿಕರಲ್ಲಿ ನಿಜವಾಗಿಯೂ ಗಲಿಬಿಲಿಯುಂಟಾಗಿತ್ತು. ಅವರು ತಮ್ಮತಮ್ಮಲ್ಲಿಯೇ ಕತ್ತಿಗಳಿಂದ ಹೋರಾಡುತ್ತಿದ್ದರು. 21 ಫಿಲಿಷ್ಟಿಯರ ಸೇವೆಯಲ್ಲಿ ಮೊದಲಿಂದಲೂ ಇದ್ದ ಇಬ್ರಿಯರು ಈಗಲೂ ಅವರ ಪಾಳೆಯದಲ್ಲಿದ್ದರು. ಆದರೆ ಆಗ ಈ ಇಬ್ರಿಯರು ಸೌಲ ಮತ್ತು ಯೋನಾತಾನರೊಂದಿಗೆ ಸೇರಿಕೊಂಡರು. 22 ಫಿಲಿಷ್ಟಿಯ ಸೈನಿಕರು ಓಡಿಹೋಗುತ್ತಿರುವುದನ್ನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅಡಗಿಕೊಂಡಿದ್ದ ಎಲ್ಲ ಇಸ್ರೇಲರೂ ಕೇಳಿದರು. ಆದ್ದರಿಂದ ಆ ಇಸ್ರೇಲರೂ ಯುದ್ಧದಲ್ಲಿ ಭಾಗಿಗಳಾಗಿ ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋದರು.
23 ಹೀಗೆ ಯೆಹೋವನು ಅಂದು ಇಸ್ರೇಲರನ್ನು ರಕ್ಷಿಸಿದನು. ಯುದ್ಧವು ಬೇತಾವೆನಿನ ಆಚೆಯ ತನಕ ನಡೆಯಿತು. ಸೌಲನ ಬಳಿ ಒಟ್ಟು ಹತ್ತು ಸಾವಿರ ಮಂದಿ ಸೈನಿಕರಿದ್ದರು. ಎಫ್ರಾಯೀಮ್ ಬೆಟ್ಟಪ್ರದೇಶದ ಎಲ್ಲಾ ನಗರಗಳಿಗೂ ಯುದ್ಧವು ಹಬ್ಬಿತು.
ಸೌಲನು ಮಾಡಿದ ಇನ್ನೊಂದು ತಪ್ಪು
24 ಆದರೆ ಸೌಲನು ಆ ದಿನ ಮತ್ತೊಂದು ದೊಡ್ಡ ತಪ್ಪನ್ನು ಮಾಡಿದನು. ಇಸ್ರೇಲರು ಬಳಲಿದ್ದರು ಮತ್ತು ಹಸಿದಿದ್ದರು. ಸೌಲನು ಅವರಿಗೆ, “ನಾನು ಶತ್ರುಗಳನ್ನು ಸೋಲಿಸಬೇಕಾಗಿರುವುದರಿಂದ ನಿಮ್ಮಲ್ಲಿ ಸಾಯಂಕಾಲದೊಳಗೆ ಊಟಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟು ಹೇಳಿದ್ದರಿಂದ ಇಸ್ರೇಲಿನ ಯಾವ ಸೈನಿಕನೂ ಊಟಮಾಡಲಿಲ್ಲ.
25-26 ಯುದ್ಧವು ನಡೆಯುತ್ತಲೇ ಇದ್ದುದರಿಂದ ಅವರೆಲ್ಲ ಕಾಡಿನೊಳಗೆ ಹೋದರು. ಅಲ್ಲಿ ನೆಲದ ಮೇಲೆಲ್ಲಾ ಇದ್ದ ಜೇನನ್ನು ನೋಡಿದರು. ಇಸ್ರೇಲರು ಜೇನು ಕಟ್ಟಿರುವ ಸ್ಥಳಕ್ಕೆ ಬಂದರು. ಅವರು ಹಸಿದಿದ್ದರೂ ಬಳಲಿದ್ದರೂ ಆ ಜೇನನ್ನು ತಿನ್ನಲಿಲ್ಲ. ತಾವು ಶಾಪಕ್ಕೆ ಗುರಿಯಾಗುತ್ತೇವೆ ಎಂಬ ಭಯ ಅವರಿಗಿತ್ತು. 27 ಆದರೆ ಯೋನಾತಾನನಿಗೆ ಈ ಶಾಪದ ಕುರಿತು ತಿಳಿದಿರಲಿಲ್ಲ; ತನ್ನ ತಂದೆಯು ಜನರಿಗೆ ಆಣೆಯಿಟ್ಟು ಹೇಳಿದ್ದೂ ಗೊತ್ತಿರಲಿಲ್ಲ. ಯೋನಾತಾನನ ಕೈಯಲ್ಲಿ ಒಂದು ಕೋಲಿತ್ತು. ಅವನು ಆ ಕೋಲನ್ನು ಜೇನುಗೂಡಿನಲ್ಲಿ ಚುಚ್ಚಿ ಸ್ವಲ್ಪ ಜೇನನ್ನು ತೆಗೆದುಕೊಂಡು ತಿಂದನು. ಆಗ ಅವನು ಸ್ವಲ್ಪ ಬಲಗೊಂಡನು.
28 ಸೈನಿಕನೊಬ್ಬ ಯೋನಾತಾನನಿಗೆ, “‘ಈ ದಿನ ಸಾಯಂಕಾಲದೊಳಗೆ ಊಟಮಾಡುವವನು ಶಾಪಗ್ರಸ್ತನಾಗಲಿ’ ಎಂದು ನಿಮ್ಮ ತಂದೆ ಆಣೆಯಿಟ್ಟು ಹೇಳಿದ್ದಾನೆ ಆದಕಾರಣವೇ ಸೈನಿಕರು ಬಲಹೀನರಾಗಿದ್ದಾರೆ” ಎಂದು ತಿಳಿಸಿದನು.
29 ಬಳಲಿಹೋಗಿದ್ದ ಜನರನ್ನು ಕಂಡ ಯೋನಾತಾನನು, “ನನ್ನ ತಂದೆಯು ದೇಶಕ್ಕೆ ತೊಂದರೆ ಮಾಡಿದನು. ನಾನು ಸ್ವಲ್ಪ ಜೇನನ್ನು ತಿಂದ ಮೇಲೆ ಎಷ್ಟೋ ಚೈತನ್ಯ ಬಂದಿತು. 30 ಈ ದಿನ ಶತ್ರುಗಳಿಂದ ವಶಪಡಿಸಿಕೊಂಡ ಆಹಾರವನ್ನು ತಿನ್ನಲು ಜನರಿಗೆ ಅವಕಾಶ ಕೊಟ್ಟಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು; ನಾವು ಮತ್ತಷ್ಟು ಫಿಲಿಷ್ಟಿಯರನ್ನು ಕೊಲ್ಲಬಹುದಾಗಿತ್ತು” ಎಂದು ಹೇಳಿದನು.
31 ಅಂದು ಇಸ್ರೇಲರು ಫಿಲಿಷ್ಟಿಯರನ್ನು ಸೋಲಿಸಿದರು. ಅವರು ಮಿಕ್ಮಾಷಿನಿಂದ ಅಯ್ಯಾಲೋನಿನವರೆಗೂ ದಾರಿಯುದ್ದಕ್ಕೂ ಹೋರಾಡಿದರು. ಆದಕಾರಣ ಜನರು ಬಹಳವಾಗಿ ಬಳಲಿದ್ದರು ಮತ್ತು ಹಸಿದಿದ್ದರು. 32 ಅವರು ಫಿಲಿಷ್ಟಿಯರಿಂದ ಕುರಿಗಳನ್ನೂ ದನಕರುಗಳನ್ನೂ ಕೊಳ್ಳೆ ಹೊಡೆದಿದ್ದರು. ಆಗ ಇಸ್ರೇಲರು ಎಷ್ಟು ಹಸಿದಿದ್ದರೆಂದರೆ ಆ ಪಶುಗಳನ್ನು ನೆಲದ ಮೇಲೆಯೇ ಕೊಂದು ಅವುಗಳ ಮಾಂಸವನ್ನು ತಿಂದರು. ಆ ಮಾಂಸದಲ್ಲಿ ಇನ್ನೂ ರಕ್ತವಿತ್ತು.
33 ಒಬ್ಬನು ಸೌಲನಿಗೆ, “ಜನರೆಲ್ಲ ಯೆಹೋವನಿಗೆ ವಿರೋಧವಾಗಿ ಪಾಪ ಮಾಡುತ್ತಿದ್ದಾರೆ. ಅವರು ಮಾಂಸವನ್ನು ರಕ್ತಸಮೇತವಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿದನು.
ಅದಕ್ಕೆ ಸೌಲನು, “ಅದು ಪಾಪವೇ ಹೌದು! ಈಗ ನೀನು ಒಂದು ದೊಡ್ಡ ಕಲ್ಲನ್ನು ಇಲ್ಲಿಗೆ ಉರುಳಿಸಿದ ನಂತರ 34 ಜನರ ಹತ್ತಿರಕ್ಕೆ ಹೋಗಿ, ‘ನಿಮ್ಮ ದನಕುರಿಗಳನ್ನು ಇಲ್ಲಿಗೆ ತಂದು ಕೊಯ್ದು ತಿನ್ನಬೇಕೆಂದೂ ಮಾಂಸವನ್ನು ರಕ್ತ ಸಮೇತವಾಗಿ ತಿಂದು ಯೆಹೋವನಿಗೆ ವಿರೋಧವಾಗಿ ಪಾಪಮಾಡಬಾರದೆಂದೂ ತಿಳಿಸು’” ಎಂದು ಹೇಳಿ ಕಳುಹಿಸಿದನು.
ಆ ರಾತ್ರಿ ಎಲ್ಲರೂ ಅವರವರ ಪಶುಗಳನ್ನು ಅಲ್ಲಿಗೆ ತಂದು ಕೊಯ್ದು ತಿಂದರು. 35 ಸೌಲನು ಯೆಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ನಿರ್ಮಿಸಿದನು. ಯೆಹೋವನಿಗಾಗಿ ಆ ಯಜ್ಞವೇದಿಕೆಯನ್ನು ಸ್ವತಃ ಸೌಲನೇ ಕಟ್ಟಿದನು.
36 ಸೌಲನು ತನ್ನ ಸೈನಿಕರಿಗೆ, “ಈ ರಾತ್ರಿಯೇ ಫಿಲಿಷ್ಟಿಯರ ಬೆನ್ನಟ್ಟೋಣ. ಅವರಲ್ಲಿರುವುದನ್ನೆಲ್ಲ ವಶಪಡಿಸಿಕೊಂಡು ಅವರನ್ನೆಲ್ಲ ಕೊಲ್ಲೋಣ” ಎಂದು ಹೇಳಿದನು.
ಸೈನಿಕರು, “ನಿನಗೆ ಸರಿಕಂಡದ್ದನ್ನು ಮಾಡು” ಎಂದು ಉತ್ತರಕೊಟ್ಟರು. ಆದರೆ ಯಾಜಕನು, “ದೇವರನ್ನು ಕೇಳೋಣ” ಎಂದು ಹೇಳಿದನು.
37 ಆದ್ದರಿಂದ ಸೌಲನು ದೇವರನ್ನು, “ನಾವು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಬೇಕೇ? ನಾವು ಫಿಲಿಷ್ಟಿಯರನ್ನು ಸೋಲಿಸುವಂತೆ ನೀನು ಮಾಡುವಿಯೋ?” ಎಂದು ಕೇಳಿದನು. ಆದರೆ ದೇವರು ಆ ದಿನ ಸೌಲನಿಗೆ ಉತ್ತರಿಸಲಿಲ್ಲ.
38 ಸೌಲನು, “ಎಲ್ಲಾ ನಾಯಕರನ್ನೂ ನನ್ನ ಹತ್ತಿರಕ್ಕೆ ಕರೆದು ತನ್ನಿ. ಈ ದಿನ ಯಾರು ಪಾಪಮಾಡಿದ್ದಾರೆಂಬುದನ್ನು ಗುರುತಿಸೋಣ. 39 ಇಸ್ರೇಲನ್ನು ರಕ್ಷಿಸುವ ಯೆಹೋವನಾಣೆಯಿಟ್ಟು ಹೇಳುತ್ತಿದ್ದೇನೆ, ನನ್ನ ಸ್ವಂತ ಮಗನಾದ ಯೋನಾತಾನನೇ ಈ ಪಾಪ ಮಾಡಿದ್ದರೂ ಅವನು ಸಾಯಲೇಬೇಕು” ಎಂದು ಹೇಳಿದನು. ಜನರಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ.
40 ಆಗ ಸೌಲನು, “ನೀವು ಈ ಕಡೆ ನಿಲ್ಲಿ. ನಾನು ಮತ್ತು ನನ್ನ ಮಗನಾದ ಯೋನಾತಾನನು ಆ ಕಡೆ ನಿಲ್ಲುತ್ತೇವೆ” ಎಂದು ಇಸ್ರೇಲರಿಗೆಲ್ಲ ಹೇಳಿದನು.
ಅವರೆಲ್ಲ “ನಿಮ್ಮ ಇಷ್ಟದಂತಾಗಲಿ, ಸ್ವಾಮಿ” ಎಂದರು.
41 ಆಗ ಸೌಲನು, “ಇಸ್ರೇಲಿನ ದೇವರಾದ ಯೆಹೋವನೇ, ನಾನು ನಿನ್ನ ಸೇವಕ. ಈ ದಿನ ನೀನು ನನಗೇಕೆ ಉತ್ತರಿಸಲಿಲ್ಲ? ನಾನಾಗಲಿ ನನ್ನ ಮಗನಾದ ಯೋನಾತಾನನಾಗಲಿ ಇಸ್ರೇಲರಾಗಲಿ ಪಾಪಮಾಡಿದ್ದರೆ ಅದನ್ನು ನಮಗೆ ತಿಳಿಸಿಕೊಡು” ಎಂದು ಪ್ರಾರ್ಥಿಸಿದನು.
ಚೀಟುಹಾಕಿದಾಗ ಅದು ಸೌಲನಿಗೂ ಯೋನಾತಾನನಿಗೂ ಬಂದಿತು. ಜನರೆಲ್ಲಾ ಬಿಡುಗಡೆಗೊಂಡರು. 42 ಸೌಲನು, “ಪಾಪ ಮಾಡಿದವನು ನಾನೋ ಅಥವಾ ನನ್ನ ಮಗ ಯೋನಾತಾನನೋ ಎಂಬುದನ್ನು ತೋರಿಸಲು ಚೀಟುಹಾಕಿರಿ” ಎಂದು ಹೇಳಿದನು. ಚೀಟು ಯೋನಾತಾನನಿಗೆ ಬಂದಿತು.
43 ಸೌಲನು ಯೋನಾತಾನನಿಗೆ, “ನೀನು ಏನು ಮಾಡಿದೆಯೆಂಬುದನ್ನು ನನಗೆ ತಿಳಿಸು” ಎಂದು ಕೇಳಿದನು.
ಯೋನಾತಾನನು ಸೌಲನಿಗೆ, “ನಾನು ನನ್ನ ಕೋಲಿನ ತುದಿಯಿಂದ ಸ್ವಲ್ಪ ಜೇನನ್ನು ತೆಗೆದುಕೊಂಡು ತಿಂದೆನು. ನಾನು ಅದಕ್ಕಾಗಿ ಸಾಯಬೇಕೇ?” ಎಂದು ಕೇಳಿದನು.
44 ಸೌಲನು, “ನಾನು ನನ್ನ ಆಣೆಯನ್ನು ನೆರವೇರಿಸದಿದ್ದರೆ ಯೆಹೋವನು ಬಹುಶಃ ನನಗೆ ಬಹಳ ಕೆಟ್ಟದ್ದನ್ನು ಮಾಡಬಹುದು. ಯೋನಾತಾನನು ಸಾಯಲೇಬೇಕು” ಎಂದು ಹೇಳಿದನು.
45 ಆದರೆ ಸೈನಿಕರು ಸೌಲನಿಗೆ, “ಈ ದಿನ ಇಸ್ರೇಲರನ್ನು ಮುನ್ನಡೆಸಿ ಮಹಾವಿಜಯವನ್ನು ಉಂಟುಮಾಡಿದ ಯೋನಾತಾನನು ಸಾಯಬೇಕೋ? ಇಲ್ಲ! ಜೀವಸ್ವರೂಪನಾದ ಯೆಹೋವನಾಣೆ, ಯೋನಾತಾನನ ತಲೆಕೂದಲುಗಳಲ್ಲಿ ಒಂದಾದರೂ ನೆಲಕ್ಕೆ ಬೀಳಲು ನಾವು ಬಿಡುವುದಿಲ್ಲ. ಇಂದು ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಯೋನಾತಾನನಿಗೆ ಸಹಾಯಮಾಡಿದ್ದಾನೆ” ಎಂದು ಹೇಳಿದರು. ಹೀಗೆ ಜನರು ಯೋನಾತಾನನನ್ನು ರಕ್ಷಿಸಿದರು. ಅವನನ್ನು ಸಾಯಿಸಲಿಲ್ಲ.
46 ಸೌಲನು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಲಿಲ್ಲ. ಫಿಲಿಷ್ಟಿಯರು ತಮ್ಮ ಸ್ವಸ್ಥಳಕ್ಕೆ ಹಿಂದಿರುಗಿದರು.
ಸೌಲನು ಇಸ್ರೇಲರ ಶತ್ರುಗಳೊಡನೆ ಹೋರಾಡುವನು
47 ಸೌಲನು ಇಸ್ರೇಲನ್ನು ಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡು ತಾನು ರಾಜನೆಂಬುದನ್ನು ತೋರಿಸಿಕೊಟ್ಟನು. ಸೌಲನು ಇಸ್ರೇಲಿನ ಸುತ್ತಲೂ ವಾಸಿಸುತ್ತಿದ್ದ ಶತ್ರುಗಳೊಡನೆ ಅಂದರೆ ಮೋವಾಬ್ಯರೊಡನೆ, ಅಮ್ಮೋನಿಯರೊಡನೆ, ಎದೋಮ್ಯರೊಡನೆ, ಚೋಬದ ಅರಸರೊಡನೆ ಮತ್ತು ಫಿಲಿಷ್ಟಿಯರೊಡನೆ ಹೋರಾಡಿದನು. ಸೌಲನು ತಾನು ಹೋದ ಕಡೆಯಲ್ಲೆಲ್ಲಾ ಇಸ್ರೇಲರ ಶತ್ರುಗಳನ್ನು ಸೋಲಿಸಿದನು. 48 ಸೌಲನು ಬಹಳ ಧೈರ್ಯಶಾಲಿ. ಅವನು ಅಮಾಲೇಕ್ಯರನ್ನೂ ಸೋಲಿಸಿದನು. ಇಸ್ರೇಲರನ್ನು ಕೊಳ್ಳೆಹೊಡೆಯಬೇಕೆಂದಿದ್ದ ಶತ್ರುಗಳಿಂದ ಸೌಲನು ಇಸ್ರೇಲರನ್ನು ರಕ್ಷಿಸಿದನು.
49 ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಇಷ್ವಿ ಮತ್ತು ಮಲ್ಕೀಷೂವ. ಸೌಲನ ಹಿರಿಯ ಮಗಳ ಹೆಸರು ಮೇರಾಬ್, ಸೌಲನ ಕಿರಿಯ ಮಗಳ ಹೆಸರು ಮೀಕಲ್. 50 ಸೌಲನ ಹೆಂಡತಿಯ ಹೆಸರು ಅಹೀನೋವಮ್. ಅಹೀನೋವಮಳ ತಂದೆ ಅಹೀಮಾಚ.
ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದ ಸೇನಾಪತಿ. ನೇರನು ಸೌಲನ ಚಿಕ್ಕಪ್ಪ. 51 ಸೌಲನ ತಂದೆಯಾದ ಕೀಷನೂ ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.
52 ಸೌಲನು ತನ್ನ ಜೀವಮಾನವೆಲ್ಲ ಶೌರ್ಯದಿಂದ ಫಿಲಿಷ್ಟಿಯರ ವಿರುದ್ಧ ತೀವ್ರವಾಗಿ ಹೋರಾಡಿದನು. ಸೌಲನು ವೀರನನ್ನಾಗಲಿ ಧೈರ್ಯಶಾಲಿಯನ್ನಾಗಲಿ ಯಾವಾಗಲಾದರೂ ನೋಡಿದರೆ, ಅಂತಹವರನ್ನು ಸೈನ್ಯಕ್ಕೆ ತೆಗೆದುಕೊಂಡು, ಅವರನ್ನು ರಾಜನ ಅಂಗರಕ್ಷಕ ಪಡೆಗೆ ಸೇರಿಸಿಕೊಳ್ಳುತ್ತಿದ್ದನು.
ನಿಮ್ಮ ಜೀವಿತಗಳನ್ನು ದೇವರಿಗೆ ಕೊಡಿರಿ
12 ಆದ್ದರಿಂದ ಸಹೋದರ ಸಹೋದರಿಯರೇ, ದೇವರ ಮಹಾಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವ ಯಜ್ಞಗಳಾಗಿ ಅರ್ಪಿಸಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ. 2 ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.
3 ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ. 4 ಪ್ರತಿಯೊಬ್ಬರಿಗೂ ಒಂದು ದೇಹವಿದೆ. ಆ ದೇಹಕ್ಕೆ ಅನೇಕ ಅಂಗಾಂಗಗಳಿವೆ. ಆ ಅಂಗಾಂಗಗಳು ಒಂದೇ ಕಾರ್ಯವನ್ನು ಮಾಡುವುದಿಲ್ಲ. 5 ಹೀಗೆ ನಮ್ಮಲ್ಲಿ ಅನೇಕರಿದ್ದರೂ ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ನಾವು ಆ ದೇಹದ ಅಂಗಗಳಾಗಿದ್ದೇವೆ. ಆ ದೇಹದ ಪ್ರತಿಯೊಂದು ಅಂಗವು ಇತರ ಅಂಗಗಳಿಗೂ ಸೇರಿಕೊಂಡಿದೆ.
6 ನಾವೆಲ್ಲರೂ ಬೇರೆಬೇರೆ ವರಗಳನ್ನು ಹೊಂದಿದ್ದೇವೆ. ದೇವರು ನಮಗೆ ಕೊಟ್ಟಿರುವ ಕೃಪೆಯಿಂದಲೇ ಪ್ರತಿಯೊಂದು ವರವು ಬಂದಿದೆ. ಪ್ರವಾದಿಸುವ ವರವನ್ನು ಹೊಂದಿರುವವನು ತನಗಿರುವ ನಂಬಿಕೆಯೊಂದಿಗೆ ಆ ವರವನ್ನು ಉಪಯೋಗಿಸಬೇಕು. 7 ಸೇವೆಮಾಡುವ ವರವನ್ನು ಹೊಂದಿರುವವನು ಸೇವೆಮಾಡಬೇಕು. 8 ಉಪದೇಶಮಾಡುವ ವರವನ್ನು ಹೊಂದಿರುವವನು ಉಪದೇಶ ಮಾಡಬೇಕು. ಸಂತೈಸುವ ವರವನ್ನು ಹೊಂದಿರುವವನು ಬೇರೆಯವರನ್ನು ಸಂತೈಸಬೇಕು. ದಾನಮಾಡುವ ವರವನ್ನು ಹೊಂದಿರುವವನು ಉದಾರವಾಗಿ ಕೊಡಬೇಕು. ನಾಯಕತ್ವದ ವರವನ್ನು ಹೊಂದಿರುವವನು ನಾಯಕತ್ವವನ್ನು ವಹಿಸಿಕೊಂಡಿರುವಾಗ ಕಷ್ಟಪಟ್ಟು ದುಡಿಯಬೇಕು. ಕನಿಕರವನ್ನು ತೋರುವ ವರವನ್ನು ಹೊಂದಿರುವವನು ಆನಂದದಿಂದ ಆ ಕಾರ್ಯವನ್ನು ಮಾಡಬೇಕು.
9 ನಿಮ್ಮ ಪ್ರೀತಿಯು ಯಥಾರ್ಥವಾಗಿರಲಿ. ದುಷ್ಕೃತ್ಯಗಳನ್ನು ದ್ವೇಷಿಸಿರಿ. ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಿರಿ. 10 ಸಹೋದರ ಸಹೋದರಿಯರೆಂಬ ಅನ್ಯೋನ್ಯಭಾವದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ನೀವು ನಿಮಗೋಸ್ಕರ ಬಯಸುವ ಮರ್ಯಾದೆಗಿಂತಲೂ ಹೆಚ್ಚು ಮರ್ಯಾದೆಯನ್ನು ನಿಮ್ಮ ಸಹೋದರ ಸಹೋದರಿಯರಿಗೆ ಕೊಡಿರಿ. 11 ನೀವು ಪ್ರಭುವಿಗೋಸ್ಕರ ಸೇವೆಮಾಡುವುದು ಅಗತ್ಯವಿರುವಾಗ ಸೋಮಾರಿಗಳಾಗಿರಬೇಡಿರಿ. ಆತ್ಮಿಕವಾದ ಉತ್ಸಾಹದಿಂದ ಆತನ ಸೇವೆಮಾಡಿರಿ. 12 ನಿಮಗೆ ನಿರೀಕ್ಷೆಯಿರುವುದರಿಂದ ಸಂತೋಷವಾಗಿರಿ. ನಿಮಗೆ ಸಂಕಟಗಳಿರುವಾಗ ತಾಳ್ಮೆಯಿಂದಿರಿ. ಎಲ್ಲಾ ಸಮಯದಲ್ಲಿ ಪ್ರಾರ್ಥಿಸಿರಿ. 13 ಕೊರತೆಯಲ್ಲಿರುವ ದೇವಜನರಿಗೆ ಸಹಾಯ ಮಾಡಿರಿ. ಅತಿಥಿಸತ್ಕಾರದ ಅಗತ್ಯವಿರುವವರನ್ನು ಗುರುತಿಸಿ, ನಿಮ್ಮ ಮನೆಗಳಿಗೆ ಆಹ್ವಾನಿಸಿರಿ.
14 ನಿಮಗೆ ಕೇಡುಮಾಡುವವರನ್ನು ಶಪಿಸದೆ ಆಶೀರ್ವದಿಸಿರಿ. 15 ಸಂತೋಷಪಡುವವರ ಸಂಗಡ ಸಂತೋಷಪಡಿರಿ. ದುಃಖಪಡುವವರೊಂದಿಗೆ ದುಃಖಪಡಿರಿ. 16 ನೀವು ಒಬ್ಬರಿಗೊಬ್ಬರು ಸಮಾಧಾನದಿಂದ ಒಟ್ಟಾಗಿ ಜೀವಿಸಿರಿ. ಗರ್ವಪಡಬೇಡಿರಿ. ಸಮಾಜದಲ್ಲಿ ಗಣನೆಗೆ ಬಾರದ ಜನರೊಂದಿಗೆ ಸ್ನೇಹದಿಂದಿರಲು ಅಪೇಕ್ಷಿಸಿರಿ. ನಿಮ್ಮನ್ನು ನೀವೆ, ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.
17 ಯಾವನಾದರು ನಿಮಗೆ ಕೇಡುಮಾಡಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಕೇಡುಮಾಡಬೇಡಿ. ಎಲ್ಲಾ ಜನರು ಒಳ್ಳೆಯದೆಂದು ಯೋಚಿಸುವ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ. 18 ಎಲ್ಲಾ ಜನರೊಂದಿಗೆ ಶಾಂತಿಯಿಂದ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನಿಸಿರಿ. 19 ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ”(A) ಎಂಬುದಾಗಿ ಬರೆಯಲ್ಪಟ್ಟಿದೆ. 20 ನೀವು ಮಾಡಬೇಕಾದದ್ದೇನೆಂದರೆ,
“ನಿಮ್ಮ ವೈರಿಯು ಹಸಿವೆಗೊಂಡಿದ್ದರೆ,
ಅವನಿಗೆ ಊಟ ಕೊಡಿರಿ.
ನಿಮ್ಮ ವೈರಿಯು ಬಾಯಾರಿದ್ದರೆ,
ಅವನಿಗೆ ಕುಡಿಯಲು ನೀರು ಕೊಡಿರಿ.
ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”(B)
21 ಕೆಟ್ಟತನವು ನಿಮ್ಮನ್ನು ಸೋಲಿಸುವುದಕ್ಕೆ ಅವಕಾಶಕೊಡದೆ ಒಳ್ಳೆಯದನ್ನು ಮಾಡುವುದರ ಮೂಲಕವಾಗಿ ಕೆಟ್ಟತನವನ್ನು ಸೋಲಿಸಿರಿ.
51 ಯೆಹೋವನು ಹೀಗೆನ್ನುತ್ತಾನೆ:
“ನಾನು ಭಯಂಕರವಾದ ಬಿರುಗಾಳಿ ಬೀಸುವಂತೆ ಮಾಡುವೆನು.
ಅದು ಬಾಬಿಲೋನಿನ ಮೇಲೂ ಬಾಬಿಲೋನಿನ ಜನರ ಮೇಲೂ ಬೀಸುವಂತೆ ಮಾಡುವೆನು.
2 ಬಾಬಿಲೋನನ್ನು ತೂರುವದಕ್ಕಾಗಿ ನಾನು ವಿದೇಶಿಯರನ್ನು ಕಳಿಸುವೆನು.
ಅವರು ಬಾಬಿಲೋನನ್ನು ತೂರುವರು.
ಆ ಜನರು ಬಾಬಿಲೋನನ್ನು ಬರಿದುಗೊಳಿಸುವರು.
ಸೈನಿಕರು ನಗರವನ್ನು ಮುತ್ತುವರು; ಅಪಾರ ವಿನಾಶ ಸಂಭವಿಸುವದು.
3 ಬಾಬಿಲೋನಿನ ಸೈನಿಕರು ತಮ್ಮ ಬಿಲ್ಲುಬಾಣಗಳನ್ನು ಉಪಯೋಗಿಸಲಾರರು.
ಅವರು ತಮ್ಮ ಕವಚಗಳನ್ನು ಧರಿಸಲಾರರು.
ಬಾಬಿಲೋನಿನ ಯೋಧರಿಗೆ ಮರುಕ ತೋರಿಸಬೇಡಿ.
ಅದರ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿರಿ.
4 ಕಸ್ದೀಯರ ಪ್ರದೇಶದಲ್ಲಿಯೇ ಬಾಬಿಲೋನಿನ ಸೈನಿಕರನ್ನು ಕೊಲ್ಲಲಾಗುವುದು.
ಬಾಬಿಲೋನಿನ ಬೀದಿಗಳಲ್ಲಿಯೇ ಅವರು ಗಾಯಗೊಳ್ಳುವರು.”
5 ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ಮತ್ತು ಯೆಹೂದವನ್ನು ವಿಧವೆಯಾಗಿ ಮಾಡಿಲ್ಲ.
ಆತನು ಅವರ ಕೈಬಿಟ್ಟಿಲ್ಲ. ಅವರು ಇಸ್ರೇಲಿನ ಪರಿಶುದ್ಧನನ್ನು ತೊರೆದು ಅಪರಾಧ ಮಾಡಿದರು.
ಅವರು ಆತನನ್ನು ತ್ಯಜಿಸಿದರು.
ಆದರೆ ಆತನು ಅವರನ್ನು ತ್ಯಜಿಸಲಿಲ್ಲ.
6 ಬಾಬಿಲೋನಿನಿಂದ ದೂರ ಓಡಿಹೋಗಿರಿ.
ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಓಡಿಹೋಗಿರಿ.
ಇಲ್ಲವಾದರೆ ಬಾಬಿಲೋನಿನ ಪಾಪದಿಂದ ನೀವೂ ಮರಣಕ್ಕೆ ಗುರಿಯಾಗುವಿರಿ.
ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದೇವರು ಬಾಬಿಲೋನಿನ ಜನರನ್ನು ಶಿಕ್ಷಿಸುವ ಕಾಲವಿದು.
ಅದು ತಕ್ಕ ಶಿಕ್ಷೆಯನ್ನು ಪಡೆಯುವುದು.
7 ಬಾಬಿಲೋನ್ ಯೆಹೋವನ ಕೈಯಲ್ಲಿನ ಬಂಗಾರದ ಪಾತ್ರೆಯಂತಿತ್ತು.
ಲೋಕವೆಲ್ಲವೂ ಮದ್ಯಪಾನ ಮಾಡುವಂತೆ ಬಾಬಿಲೋನ್ ಮಾಡಿತು.
ಜನಾಂಗಗಳು ಬಾಬಿಲೋನಿನ ದ್ರಾಕ್ಷಾರಸವನ್ನು
ಕುಡಿದು ಹುಚ್ಚಾದವು.
8 ಬಾಬಿಲೋನ್ ಬೀಳುವುದು; ಬೇಗನೆ ಮುರಿದುಹೋಗುವುದು.
ಅದರ ಸಲುವಾಗಿ ಗೋಳಾಡಿರಿ.
ಅದರ ನೋವಿಗಾಗಿ ಔಷಧಿಯನ್ನು ತೆಗೆದುಕೊಂಡು ಬನ್ನಿ,
ಒಂದುವೇಳೆ ಅದು ಗುಣಹೊಂದಬಹುದು.
9 ನಾವು ಬಾಬಿಲೋನನ್ನು ವಾಸಿಮಾಡುವ ಪ್ರಯತ್ನ ಮಾಡಿದೆವು.
ಆದರೆ ಅದನ್ನು ವಾಸಿಮಾಡಲು ಆಗುವದಿಲ್ಲ.
ಆದ್ದರಿಂದ ಅದನ್ನು ಬಿಟ್ಟುಬಿಡೋಣ.
ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ.
ಪರಲೋಕದ ದೇವರು ಬಾಬಿಲೋನಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವನು.
ಬಾಬಿಲೋನಿಗೆ ಏನಾಗಬೇಕೆಂಬುದನ್ನು ಆತನು ನಿರ್ಧರಿಸುವನು.
10 ನಮ್ಮ ಬಗ್ಗೆಯೂ ಯೆಹೋವನು ನಿರ್ಧಾರ ಕೈಗೊಂಡಿದ್ದಾನೆ.
ಬನ್ನಿ, ಅದರ ಬಗ್ಗೆ ನಾವು ಚೀಯೋನಿನಲ್ಲಿ ಹೇಳೋಣ.
ನಮ್ಮ ದೇವರಾದ ಯೆಹೋವನು ಮಾಡಿದ್ದನ್ನು ನಾವು ಹೇಳೋಣ.
11 ನಿಮ್ಮ ಬಾಣಗಳನ್ನು ಮಸೆಯಿರಿ.
ನಿಮ್ಮ ಕವಚಗಳನ್ನು ಧರಿಸಿರಿ.
ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ.
ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ.
ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ.
ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು.
ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
12 ಬಾಬಿಲೋನಿನ ಕೋಟೆಗೋಡೆಯ ವಿರುದ್ಧ ಧ್ವಜವನ್ನು ಎತ್ತಿ ಹಾರಿಸಿರಿ.
ಹೆಚ್ಚಿನ ಸಂಖ್ಯೆಯಲ್ಲಿ ಕಾವಲುಗಾರರನ್ನು ಕರೆದುತನ್ನಿರಿ.
ಯೋಧರನ್ನು ಅವರವರ ಸ್ಥಾನಗಳಲ್ಲಿ ನಿಲ್ಲಿಸಿರಿ.
ಗುಪ್ತವಾಗಿ ಧಾಳಿ ಮಾಡುವುದಕ್ಕೆ ಸಿದ್ಧರಾಗಿರಿ.
ಯೆಹೋವನು ತನ್ನ ಯೋಜನೆಗಳಂತೆ ಕಾರ್ಯ ನೆರವೇರಿಸುವನು.
ಯೆಹೋವನು ಬಾಬಿಲೋನಿನ ಜನರ ವಿರುದ್ಧ ಹೇಳಿರುವಂತೆಯೇ ಮಾಡುವನು.
13 ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ.
ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ.
ಆದರೆ ಒಂದು ಜನಾಂಗವಾಗಿ ನೀನು ಬಹಳ ಕಾಲ ಮುಂದುವರೆಯಲಾರೆ.
ನಿನ್ನ ವಿನಾಶ ಕಾಲ ಸಮೀಪಿಸಿದೆ.
14 ಸರ್ವಶಕ್ತನಾದ ಯೆಹೋವನು ತನ್ನ ಮೇಲೆ ಆಣೆ ಇಟ್ಟುಕೊಂಡು ಹೀಗೆ ಹೇಳಿದ್ದಾನೆ:
“ಬಾಬಿಲೋನೇ, ನಾನು ಖಂಡಿತವಾಗಿ ನಿನ್ನನ್ನು ವೈರಿ ಸೈನಿಕರಿಂದ ತುಂಬಿಸಿಬಿಡುವೆನು.
ಅವರು ಮಿಡತೆಗಳ ಸಮೂಹದಂತೆ ವ್ಯಾಪಿಸುವರು.
ಆ ಸೈನಿಕರು ನಿನ್ನ ವಿರುದ್ಧ ಯುದ್ಧದಲ್ಲಿ ಜಯಗಳಿಸುವರು.
ಅವರು ನಿನ್ನ ಮೇಲೆ ನಿಂತುಕೊಂಡು ಜಯಘೋಷ ಮಾಡುವರು.”
15 ಯೆಹೋವನು ತನ್ನ ಅಪಾರ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದನು.
ತನ್ನ ಜ್ಞಾನದಿಂದ ಈ ಲೋಕವನ್ನು ನಿರ್ಮಿಸಿದನು.
ತನ್ನ ವಿವೇಕದಿಂದ ಆಕಾಶವನ್ನು ಹರಡಿದನು.
16 ಆತನು ಗರ್ಜಿಸಿದಾಗ ಸಮುದ್ರದ ನೀರು ಭೋರ್ಗರೆಯುತ್ತದೆ.
ಆತನು ಇಡೀ ಭೂಮಂಡಲದಿಂದ ಮೋಡಗಳು ಮೇಲೆ ಹೋಗುವಂತೆ ಮಾಡುತ್ತಾನೆ.
ಆತನು ಮಳೆಯ ಜೊತೆ ಮಿಂಚನ್ನು ಕಳುಹಿಸುತ್ತಾನೆ.
ತನ್ನ ಭಂಡಾರದಿಂದ ಗಾಳಿಯನ್ನು ಹೊರಗೆ ಬಿಡುತ್ತಾನೆ.
17 ಆದರೆ ಜನರು ಬುದ್ಧಿಹೀನರಾಗಿ
ದೇವರ ಕಾರ್ಯವನ್ನು ತಿಳಿಯದವರಾಗಿದ್ದಾರೆ.
ಕುಶಲಕೆಲಸಗಾರರು ಸುಳ್ಳುದೇವರುಗಳ ಪ್ರತಿಮೆಗಳನ್ನು ಮಾಡುತ್ತಾರೆ.
ಆ ಪ್ರತಿಮೆಗಳು ಕೇವಲ ಸುಳ್ಳುದೇವರುಗಳೇ.
ಆ ಕೆಲಸಗಾರರು ಎಷ್ಟು ಮೂರ್ಖರೆಂಬುದನ್ನು ಅವು ತೋರಿಸುತ್ತವೆ.
ಆ ಪ್ರತಿಮೆಗಳು ಜೀವಂತವಾಗಿರುವದಿಲ್ಲ.
18 ಆ ವಿಗ್ರಹಗಳು ನಿಷ್ಪ್ರಯೋಜಕವಾದವುಗಳೇ.
ಆ ವಿಗ್ರಹಗಳನ್ನು ಮಾಡಿದವರು ಜನರೇ.
ಅವುಗಳು ಕೇವಲ ಹಾಸ್ಯಾಸ್ಪದ ವಸ್ತುಗಳಲ್ಲದೆ ಮತ್ತೇನೂ ಅಲ್ಲ.
ಅವುಗಳ ಬಗ್ಗೆ ತೀರ್ಪುಕೊಡುವ ಕಾಲ ಬರುವದು;
ಆ ವಿಗ್ರಹಗಳನ್ನು ನಾಶಮಾಡಲಾಗುವುದು.
19 ಆದರೆ ಯಾಕೋಬ್ಯರ ಸ್ವಾಸ್ತ್ಯವಾದಾತನು ಆ ನಿಷ್ಪ್ರಯೋಜಕ ವಿಗ್ರಹಗಳಂತಲ್ಲ.
ಜನರು ದೇವರನ್ನು ಸೃಷ್ಟಿಸಲಿಲ್ಲ.
ದೇವರು ತನ್ನ ಜನರನ್ನು ಸೃಷ್ಟಿಸಿದನು.
ದೇವರು ಎಲ್ಲವನ್ನು ಸೃಷ್ಟಿಸಿದನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
20 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನೇ, ನೀನು ನನ್ನ ಗದೆ.
ಜನಾಂಗಗಳನ್ನು ಜಜ್ಜಿಹಾಕಲೂ
ರಾಜ್ಯಗಳನ್ನು ಧ್ವಂಸ ಮಾಡಲೂ ನಾನು ನಿನ್ನನ್ನು ಬಳಸುತ್ತೇನೆ.
21 ಕುದುರೆಗಳನ್ನೂ ಅದರ ಸವಾರರನ್ನೂ ಜಜ್ಜಿಹಾಕಲು ನಾನು ನಿನ್ನನ್ನು ಬಳಸುತ್ತೇನೆ.
ರಥಗಳನ್ನೂ ಸಾರಥಿಗಳನ್ನೂ ಪುಡಿಪುಡಿ ಮಾಡಲು ನಾನು ನಿನ್ನನ್ನು ಬಳಸುತ್ತೇನೆ.
22 ಗಂಡಸರನ್ನೂ ಹೆಂಗಸರನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ವೃದ್ಧರನ್ನೂ ತರುಣರನ್ನೂ ನಾಶಪಡಿಸಲು ನಾನು ನಿನ್ನನ್ನು ಬಳಸುತ್ತೇನೆ.
ತರುಣರನ್ನೂ ತರುಣಿಯರನ್ನೂ ಧ್ವಂಸ ಮಾಡಲು ನಾನು ನಿನ್ನನ್ನು ಬಳಸುತ್ತೇನೆ.
23 ಕುರುಬರನ್ನೂ ಕುರಿಹಿಂಡನ್ನೂ ನಾಶಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ರೈತರನ್ನೂ ಮತ್ತು ಹಸುಗಳನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ಅಧಿಪತಿಗಳನ್ನೂ ಪ್ರಮುಖ ಅಧಿಕಾರಿಗಳನ್ನೂ ನುಚ್ಚುನೂರು ಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
24 ಆದರೆ ನಾನು ಬಾಬಿಲೋನಿಗೆ ಮುಯ್ಯಿತೀರಿಸುವೆನು.
ನಾನು ಬಾಬಿಲೋನಿನ ಎಲ್ಲಾ ಜನರಿಗೆ ಮುಯ್ಯಿತೀರಿಸುವೆನು.
ಅವರು ಚೀಯೋನಿಗೆ ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಮುಯ್ಯಿತೀರಿಸುವೆನು.
ಯೆಹೂದವೇ, ನಿನ್ನ ಎದುರಿನಲ್ಲಿಯೇ ಅವರಿಗೆ ಮುಯ್ಯಿತೀರಿಸುವೆನು.”
ಇದು ಯೆಹೋವನ ನುಡಿ.
25 ಯೆಹೋವನು ಹೀಗೆನ್ನುತ್ತಾನೆ:
“ಬಾಬಿಲೋನೇ, ನೀನು ಇಡೀ ದೇಶವನ್ನು
ನಾಶಪಡಿಸುವ ಜ್ವಾಲಾಮುಖಿಯಂತಿರುವೆ.
ಆದರೆ ನಾನು ನಿನಗೆ ವಿರುದ್ಧವಾಗಿ ತಿರುಗಿದ್ದೇನೆ.
ನಾನು ನಿನ್ನನ್ನು ಸುಟ್ಟುಹೋದ ಪರ್ವತವನ್ನಾಗಿ ಮಾಡುವೆನು.
26 ನಿಮ್ಮಿಂದ ಜನರಿಗೆ ಮೂಲೆಗಲ್ಲಾಗುವಷ್ಟು ದೊಡ್ಡ ಕಲ್ಲು ಸಹ ಸಿಗಲಾರದು.
ಜನರು ತಮ್ಮ ಕಟ್ಟಡದ ಅಸ್ತಿವಾರಕ್ಕಾಗಿ ಒಂದು ಕಲ್ಲುಬಂಡೆಯನ್ನು ಬಾಬಿಲೋನಿನಿಂದ ತೆಗೆದುಕೊಂಡು ಹೋಗಲಾರರು.
ಏಕೆಂದರೆ ಶಾಶ್ವತವಾಗಿ ನಿಮ್ಮ ನಗರವು ಒಡೆದ ಕಲ್ಲುಗಳ ಗುಡ್ಡೆಯಾಗುವುದು.”
ಯೆಹೋವನು ಹೀಗೆನ್ನುತ್ತಾನೆ:
27 “ಎಲ್ಲಾ ದೇಶಗಳಲ್ಲಿ ಯುದ್ಧದ ಧ್ವಜವನ್ನು ಹಾರಿಸಿರಿ.
ಎಲ್ಲಾ ರಾಷ್ಟ್ರಗಳಲ್ಲಿ ತುತ್ತೂರಿಗಳನ್ನು ಊದಿರಿ.
ಬಾಬಿಲೋನಿನ ವಿರುದ್ಧ ಹೋರಾಡಲು ಎಲ್ಲಾ ಜನಾಂಗಗಳನ್ನು ಸಿದ್ಧಗೊಳಿಸಿರಿ.
ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಜ್ಯಗಳನ್ನು ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಕರೆಯಿರಿ.
ಸೈನ್ಯದ ಮುಂದಾಳಾಗಿರಲು ಒಬ್ಬ ಸೇನಾಧಿಪತಿಯನ್ನು ಆರಿಸಿರಿ.
ಮಿಡತೆಯ ದಂಡಿನಂತೆ ಅಪಾರವಾಗಿರುವ ಅಶ್ವಬಲವನ್ನು ಕಳುಹಿಸಿರಿ.
28 ಅದರ ವಿರುದ್ಧ ಯುದ್ಧಕ್ಕಾಗಿ ಜನಾಂಗಗಳನ್ನು ಸಿದ್ಧಮಾಡಿರಿ.
ಮೇದ್ಯರ ರಾಜರನ್ನು ಸಿದ್ಧಮಾಡಿರಿ.
ಅವರ ಅಧಿಪತಿಗಳನ್ನು ಮತ್ತು ಎಲ್ಲಾ ಮುಖ್ಯ ಅಧಿಕಾರಿಗಳನ್ನು ಸಿದ್ಧಗೊಳಿಸಿರಿ.
ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಅವರು ಆಳುವ ಎಲ್ಲಾ ದೇಶಗಳನ್ನು ಸನ್ನದ್ಧಗೊಳಿಸಿರಿ.
29 ನೋವಿನಿಂದಲೋ ಎಂಬಂತೆ ಭೂಮಿಯು ನಡುಗುತ್ತದೆ ಮತ್ತು ಹೊರಳಾಡುತ್ತದೆ.
ಯೆಹೋವನು ತಾನು ಯೋಚಿಸಿದಂತೆ ಬಾಬಿಲೋನಿಗೆ ಮಾಡಿದಾಗ ಅದು ನಡುಗುತ್ತದೆ.
ಬಾಬಿಲೋನನ್ನು ಯಾರೂ ವಾಸಮಾಡದ ಮರುಭೂಮಿಯನ್ನಾಗಿ
ಮಾಡಬೇಕೆಂಬುದು ಯೆಹೋವನ ಯೋಜನೆ.
30 ಬಾಬಿಲೋನಿನ ಸೈನಿಕರು ಕಾದಾಡುವದನ್ನು ನಿಲ್ಲಿಸಿದ್ದಾರೆ.
ಅವರು ತಮ್ಮ ಕೋಟೆಗಳಲ್ಲಿದ್ದಾರೆ.
ಅವರ ಬಲ ನಷ್ಟವಾಗಿದೆ.
ಅವರು ಭಯಪಟ್ಟ ಹೆಂಗಸಿನಂತಾಗಿದ್ದಾರೆ.
ಬಾಬಿಲೋನಿನ ಮನೆಗಳು ಉರಿಯುತ್ತಿವೆ.
ಅದರ ಬಾಗಿಲಿನ ಅಗುಳಿಗಳು ಮುರಿದುಹೋಗಿವೆ.
31 ಒಬ್ಬ ಸಂದೇಶಕನ ನಂತರ ಇನ್ನೊಬ್ಬ ಸಂದೇಶಕನು ಬರುವನು.
ಸಂದೇಶಕರ ಮೇಲೆ ಸಂದೇಶಕರು ಬಂದು,
ಇಡೀ ನಗರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು
ಅವರು ಬಾಬಿಲೋನಿನ ರಾಜನಿಗೆ ತಿಳಿಸುತ್ತಾರೆ.
32 ಹಾಯ್ಗಡಗಳನ್ನು ವಶಪಡಿಸಿಕೊಂಡಿದ್ದಾರೆ;
ಜವುಗು ನೆಲವು ಉರಿಯುತ್ತಿದೆ.
ಬಾಬಿಲೋನಿನ ಎಲ್ಲಾ ಸೈನಿಕರು ಅಂಜಿಕೊಂಡಿದ್ದಾರೆ.”
33 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ನಗರವು ಒಂದು ಕಣದಂತೆ ಇದೆ.
ಸುಗ್ಗಿಕಾಲದಲ್ಲಿ ಜನರು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸುವದಕ್ಕಾಗಿ ಅದನ್ನು ಬಡಿಯುತ್ತಾರೆ.
ಬಾಬಿಲೋನಿನ ಸುಗ್ಗಿಕಾಲ (ವಿನಾಶ ಕಾಲ) ಹತ್ತಿರವಾಗುತ್ತಲಿದೆ.
34 “ಹಿಂದಿನ ಕಾಲದಲ್ಲಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮ್ಮನ್ನು ಹಾಳುಮಾಡಿದನು;
ನಮ್ಮನ್ನು ಹಿಂಸಿಸಿದನು;
ನಮ್ಮ ಜನರನ್ನು ಸೆರೆ ಒಯ್ದನು.
ಆಗ ನಾವು ಒಂದು ಬರಿದಾದ ಪಾತ್ರೆಯಂತಾದೆವು.
ಅವನು ನಮ್ಮ ಎಲ್ಲಾ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಹೋದನು.
ತನಗೆ ತೃಪ್ತಿಯಾಗುವವರೆಗೆ ಎಲ್ಲವನ್ನು ತಿಂದು ತೇಗಿದ ರಾಕ್ಷಸನಂತಿದ್ದನು.
ಅವನು ನಮ್ಮೆಲ್ಲ ಉತ್ಕೃಷ್ಠ ವಸ್ತುಗಳನ್ನು
ಕಿತ್ತುಕೊಂಡು ನಮ್ಮನ್ನು ದೂರ ಎಸೆದನು.
35 ನಮ್ಮನ್ನು ನೋಯಿಸಲು ಬಾಬಿಲೋನ್ ಭಯಂಕರ ಕೆಲಸವನ್ನು ಮಾಡಿತು.
ಈಗ ಬಾಬಿಲೋನಿಗೂ ಅಂಥಾ ಸ್ಥಿತಿ ಬರಲೆಂದು ನನ್ನ ಆಶೆ.”
ಚೀಯೋನ್ ನಿವಾಸಿಗಳು ಹೀಗೆಂದರು:
“ಬಾಬಿಲೋನಿನ ಜನರು ನಮ್ಮ ಜನರನ್ನು ಕೊಲ್ಲುವ ಪಾಪವನ್ನು ಮಾಡಿದ್ದಾರೆ.
ಈಗ ಅವರು ಮಾಡಿದ ದುಷ್ಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ”
ಎಂದು ಜೆರುಸಲೇಮ್ ನಗರ ಹೇಳುವುದು.
36 ಯೆಹೋವನು ಹೀಗೆನ್ನುವನು:
“ಯೆಹೂದವೇ, ನಾನು ನಿನ್ನನ್ನು ರಕ್ಷಿಸುವೆನು.
ನಿಶ್ಚಿತವಾಗಿ ಬಾಬಿಲೋನಿಗೆ ಶಿಕ್ಷೆ ಆಗುವಂತೆ ನಾನು ನೋಡಿಕೊಳ್ಳುತ್ತೇನೆ.
ನಾನು ಬಾಬಿಲೋನಿನ ಸಮುದ್ರವನ್ನು ಒಣಗಿಸಿಬಿಡುವೆನು.
ಅದರ ನೀರಿನ ಚಿಲುಮೆಗಳು ಬತ್ತುವಂತೆ ಮಾಡುತ್ತೇನೆ.
37 ಬಾಬಿಲೋನು ನಾಶವಾದ ಕಟ್ಟಡಗಳ ಗುಡ್ಡೆಯಾಗುವುದು.
ಬಾಬಿಲೋನು ಕಾಡುನಾಯಿಗಳ ನಿವಾಸವಾಗುವುದು.
ಜನರು ಕಲ್ಲುಬಂಡೆಗಳ ಗುಡ್ಡೆಯನ್ನು ನೋಡಿ ಆಶ್ಚರ್ಯಪಡುವರು.
ಬಾಬಿಲೋನಿನ ಬಗ್ಗೆ ಜನರು ತಲೆಯಾಡಿಸುವರು.
ಬಾಬಿಲೋನು ನಿರ್ಜನ ಪ್ರದೇಶವಾಗುವುದು.
38 “ಬಾಬಿಲೋನಿನ ಜನರು ಗರ್ಜಿಸುವ ಪ್ರಾಯದ ಸಿಂಹಗಳಂತಿದ್ದಾರೆ.
ಅವರು ಮರಿಸಿಂಹಗಳಂತೆ ಗುರುಗುಟ್ಟುವರು.
39 ಆ ಜನರು ಬಲಶಾಲಿಗಳಾದ ಸಿಂಹಗಳಂತೆ ವರ್ತಿಸುತ್ತಿದ್ದಾರೆ.
ನಾನು ಅವರಿಗೊಂದು ಔತಣವನ್ನೇರ್ಪಡಿಸುವೆನು.
ಅವರಿಗೆ ಮತ್ತೇರುವಂತೆ ಕುಡಿಸುವೆನು.
ಅವರು ನಗುನಗುತ್ತಾ ಸಂತೋಷದಿಂದ ಕಾಲ ಕಳೆಯುವರು.
ಆಮೇಲೆ ಅವರು ಶಾಶ್ವತವಾಗಿ ಮಲಗುವರು.
ಅವರು ಮತ್ತೆ ಏಳಲಾರರು.”
ಇದು ಯೆಹೋವನ ನುಡಿ.
40 “ನಾನು ಬಾಬಿಲೋನಿನ ಜನರನ್ನು ವಧೆಗಾಗಿ ತೆಗೆದುಕೊಂಡು ಹೋಗುವೆನು.
ಬಾಬಿಲೋನಿನ ಗತಿ ವಧೆಗಾಗಿ ತಂದ
ಕುರಿ, ಟಗರು ಮತ್ತು ಹೋತಗಳಂತೆ ಆಗುವುದು.
41 “ಶೇಷಕನು”[a] ಶತ್ರುಗಳ ವಶವಾಗುವನು.
ಲೋಕದಲ್ಲಿಯೇ ಅತ್ಯುತ್ತಮವಾದ ಮತ್ತು ಹೆಮ್ಮೆಪಡುವ ದೇಶವು ವೈರಿಗಳ ಕೈವಶವಾಗುವುದು.
ಬೇರೆ ಜನಾಂಗದ ಜನರು ಬಾಬಿಲೋನಿನ ಕಡೆಗೆ ನೋಡಿದಾಗ
ಅಲ್ಲಿನ ಸ್ಥಿತಿಗತಿಗಳನ್ನು ಕಂಡು ಭಯಪಡುವರು.
42 ಸಮುದ್ರವು ಬಾಬಿಲೋನಿನ ಮೇಲೆ ನುಗ್ಗುವುದು.
ಅದರ ಆರ್ಭಟಿಸುವ ತೆರೆಗಳು ಅದನ್ನು ಮುಚ್ಚಿಬಿಡುವವು.
43 ಬಾಬಿಲೋನಿನ ಪಟ್ಟಣಗಳು ಬರಿದಾದ ಊರುಗಳಾಗುವವು.
ಬಾಬಿಲೋನು ಮರುಭೂಮಿಯಾಗುವುದು.
ಅದು ನಿರ್ಜನವಾದ ನೆಲವಾಗುವುದು.
ಜನರು ಬಾಬಿಲೋನಿನ ಮೂಲಕ ಪ್ರಯಾಣ ಮಾಡಲಾಗದು.
44 ನಾನು ಬಾಬಿಲೋನಿನ ಬೇಲ್ ದೇವರನ್ನು ದಂಡಿಸುವೆನು.
ಅವನು ನುಂಗಿದ ಜನರನ್ನು ಅವನು ಕಕ್ಕುವಂತೆ ಮಾಡುವೆನು.
ಬೇರೆ ಜನಾಂಗಗಳು ಬಾಬಿಲೋನಿಗೆ ಬರಲಾರವು.
ಬಾಬಿಲೋನಿನ ಸುತ್ತಲಿನ ಗೋಡೆಯು ಬೀಳುವುದು.
45 ನನ್ನ ಜನರೇ, ಬಾಬಿಲೋನ್ ನಗರದಿಂದ ಹೊರಗೆ ಬನ್ನಿ.
ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲು ಓಡಿಹೋಗಿರಿ.
ಯೆಹೋವನ ಭಯಂಕರ ಕೋಪದಿಂದ ತಪ್ಪಿಸಿಕೊಳ್ಳಲು ಓಡಿಹೋಗಿರಿ.
46 “ನನ್ನ ಜನರೇ, ದುಃಖಿಸಬೇಡಿ,
ಸುದ್ದಿಗಳು ಹಬ್ಬುತ್ತವೆ. ಆದರೆ ಹೆದರಬೇಡಿ.
ಒಂದು ಸುದ್ದಿ ಈ ವರ್ಷ ಬರುವುದು.
ಮುಂದಿನ ವರ್ಷ ಮತ್ತೊಂದು ಸುದ್ದಿ ಬರಬಹುದು.
ದೇಶದಲ್ಲಿ ಭಯಂಕರವಾದ ಯುದ್ಧದ ಬಗ್ಗೆ ಸುದ್ದಿಗಳು ಕೇಳಿಬರುವವು.
ರಾಜರುಗಳು ಬೇರೆ ರಾಜರುಗಳೊಂದಿಗೆ ಯುದ್ಧ ಮಾಡುತ್ತಿರುವ ವದಂತಿಗಳು ಕೇಳಿಬರುವವು.
47 ನಾನು ಬಾಬಿಲೋನಿನ ಸುಳ್ಳುದೇವತೆಗಳನ್ನು ದಂಡಿಸುವ ಸಮಯ ಖಂಡಿತವಾಗಿ ಬರುವುದು.
ಬಾಬಿಲೋನಿನ ಇಡೀ ಪ್ರದೇಶವು ನಾಚಿಕೆಪಡುವುದು.
ನಗರದ ಬೀದಿಗಳಲ್ಲಿ
ಅನೇಕಾನೇಕ ಶವಗಳು ಬಿದ್ದಿರುವವು.
48 ಆಗ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸಮಸ್ತ ವಸ್ತುಗಳು
ಬಾಬಿಲೋನಿನ ಬಗ್ಗೆ ಹರ್ಷಧ್ವನಿ ಮಾಡುವವು.
ಏಕೆಂದರೆ ಸೈನ್ಯವು ಉತ್ತರದಿಂದ ಬಂದಿತು,
ಬಾಬಿಲೋನಿನ ವಿರುದ್ಧ ಯುದ್ಧಮಾಡಿತು”
ಇದು ಯೆಹೋವನ ನುಡಿ.
49 “ಬಾಬಿಲೋನ್ ಇಸ್ರೇಲರನ್ನು ಕೊಂದಿತು.
ಬಾಬಿಲೋನ್ ಭೂಮಂಡಲದ ಎಲ್ಲೆಡೆಯ ಜನರನ್ನು ಕೊಂದಿತು.
ಅದಕ್ಕಾಗಿ ಬಾಬಿಲೋನ್ ಪತನವಾಗಲೇಬೇಕು.
50 ನೀವು ಖಡ್ಗಗಳಿಂದ ತಪ್ಪಿಸಿಕೊಂಡಿರಿ.
ನೀವು ಅವಸರ ಮಾಡಿ ಬಾಬಿಲೋನನ್ನು ಬಿಡಬೇಕು.
ತಡೆಯಬೇಡಿ,
ನೀವು ಬಹಳ ದೂರಪ್ರದೇಶದಲ್ಲಿ ಇದ್ದೀರಿ.
ಆದರೆ ನೀವು ಇರುವಲ್ಲಿಯೇ ಯೆಹೋವನನ್ನು ಸ್ಮರಿಸಿರಿ; ಜೆರುಸಲೇಮನ್ನೂ ಸ್ಮರಿಸಿಕೊಳ್ಳಿರಿ.
51 “ಯೆಹೂದದ ಜನರಾದ ನಾವು ನಾಚಿಕೆಪಟ್ಟೆವು.
ಜನರು ನಮ್ಮನ್ನು ಅಪಮಾನಗೊಳಿಸಿದ್ದರಿಂದ ನಾವು ನಾಚಿಕೆಪಟ್ಟಿದ್ದೇವೆ.
ಏಕೆಂದರೆ ಯೆಹೋವನ ಆಲಯದ
ಪವಿತ್ರ ಸ್ಥಳಗಳಲ್ಲಿ ಅಪರಿಚಿತರು ಪ್ರವೇಶಗೈದಿದ್ದಾರೆ.”
52 ಯೆಹೋವನು ಹೀಗೆನ್ನುವನು: “ಬಾಬಿಲೋನಿನ ವಿಗ್ರಹಗಳನ್ನು
ನಾನು ದಂಡಿಸುವ ಕಾಲ ಬರುತ್ತಿದೆ.
ಆಗ ಆ ದೇಶದಲ್ಲೆಲ್ಲಾ ಗಾಯಗೊಂಡ ಜನರು
ನೋವಿನಿಂದ ಗೋಳಾಡುವರು.
53 ಬಾಬಿಲೋನ್ ನಗರವು ಗಗನ ಚುಂಬಿಯಾಗಿ ಬೆಳೆಯಬಹುದು.
ಅದು ತನ್ನ ಕೋಟೆಗಳನ್ನು ಭದ್ರಪಡಿಸಿಕೊಳ್ಳಬಹುದು.
ಆದರೆ ಆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
ಆ ಜನರು ಅದನ್ನು ನಾಶಮಾಡುವರು.”
ಇದು ಯೆಹೋವನ ನುಡಿ.
54 “ಬಾಬಿಲೋನಿನಲ್ಲಿ ಜನರು ರೋಧಿಸುವದನ್ನು ನಾವು ಕೇಳುವೆವು.
ಬಾಬಿಲೋನ್ ಪ್ರದೇಶದಲ್ಲಿ ವಸ್ತುಗಳನ್ನು ನಾಶಮಾಡುವ ಜನರ ಧ್ವನಿಯನ್ನು ನಾವು ಕೇಳುವೆವು.
55 ಯೆಹೋವನು ಬಾಬಿಲೋನನ್ನು ಬಹುಬೇಗನೆ ನಾಶಮಾಡುವನು.
ಆ ನಗರದ ದೊಡ್ಡ ಧ್ವನಿಗಳು ಶಾಂತವಾಗುವಂತೆ ಆತನು ಮಾಡುವನು.
ವೈರಿಗಳು ಸಾಗರದ ತರಂಗಮಾಲೆಗಳಂತೆ ಗರ್ಜಿಸುತ್ತಾ ಬರುವರು.
ಸುತ್ತಮುತ್ತಲಿನ ಜನರೆಲ್ಲರು ಆ ಗರ್ಜನೆಯನ್ನು ಕೇಳುವರು.
56 ಸೈನ್ಯವು ಬಂದು ಬಾಬಿಲೋನನ್ನು ನಾಶಮಾಡುವುದು.
ಬಾಬಿಲೋನಿನ ಸೈನಿಕರನ್ನು ವಶಪಡಿಸಿಕೊಳ್ಳಲಾಗುವುದು.
ಅವರ ಬಿಲ್ಲುಗಳನ್ನು ಮುರಿಯಲಾಗುವುದು.
ಏಕೆಂದರೆ ಯೆಹೋವನು ಜನರನ್ನು ಅವರು ಮಾಡುವ ದುಷ್ಕೃತ್ಯಗಳಿಗಾಗಿ ಶಿಕ್ಷಿಸುತ್ತಾನೆ.
ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಸಂಪೂರ್ಣವಾಗಿ ಕೊಡುತ್ತಾನೆ.
57 ಬಾಬಿಲೋನಿನ ಮುಖ್ಯ ಅಧಿಕಾರಿಗಳಿಗೂ
ಪಂಡಿತರಿಗೂ ದ್ರಾಕ್ಷಾರಸ ಕುಡಿಯುವಂತೆ ಮಾಡುತ್ತೇನೆ.
ಅಲ್ಲಿಯ ಅಧಿಪತಿಗಳಿಗೂ ಅಧಿಕಾರಿಗಳಿಗೂ ಸೈನಿಕರಿಗೂ ದ್ರಾಕ್ಷಾರಸ ಕುಡಿಸುತ್ತೇನೆ.
ಆಮೇಲೆ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ.
ಅವರು ಎಚ್ಚರಗೊಳ್ಳುವುದೇ ಇಲ್ಲ.”
ಸರ್ವಶಕ್ತನಾದ ಯೆಹೋವನೆಂಬ
ನಾಮಧೇಯದ ರಾಜಾಧಿರಾಜನ ನುಡಿಯಿದು.
58 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು.
ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು.
ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು.
ಆದರೆ ಅದು ನಿಷ್ಪ್ರಯೋಜಕವಾಗುವುದು.
ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು.
ಆದರೆ ಅವರು ಕೇವಲ ಅಗ್ನಿಗೆ ಆಹುತಿಯಾಗುವರು.”
ಬಾಬಿಲೋನಿಗೆ ಯೆರೆಮೀಯನ ಸಂದೇಶ
59 ಯೆರೆಮೀಯನು ಸೆರಾಯ ಎಂಬ ಅಧಿಕಾರಿಯ ಕೈಗೆ ಕೊಟ್ಟ ಸಂದೇಶವಿದು. ಸೆರಾಯನು ಯೆಹೂದದ ನೇರೀಯನ ಮಗ. ನೇರೀಯನು ಮಹ್ಸೇಯನ ಮಗನು. ಸೆರಾಯನು ಯೆಹೂದದ ರಾಜನಾದ ಚಿದ್ಕೀಯನ ಜೊತೆಗೆ ಬಾಬಿಲೋನಿಗೆ ಹೋದನು. ಈ ಸಂಗತಿ ಯೆಹೂದದಲ್ಲಿ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ನಡೆದದ್ದು. ಆ ಸಮಯದಲ್ಲಿ ಯೆರೆಮೀಯನು ಸೆರಾಯನೆಂಬ ಅಧಿಕಾರಿಯ ಕೈಗೆ ಈ ಸಂದೇಶವನ್ನು ಕೊಟ್ಟನು. 60 ಬಾಬಿಲೋನಿಗೆ ಉಂಟಾಗುವ ಎಲ್ಲಾ ಕೇಡನ್ನು ಯೆರೆಮೀಯನು ಒಂದು ಸುರಳಿಯಲ್ಲಿ ಬರೆದಿದ್ದನು. ಅವನು ಬಾಬಿಲೋನಿನ ಬಗ್ಗೆ ಈ ವಿಷಯಗಳನ್ನೆಲ್ಲ ಬರೆದಿದ್ದನು.
61 ಯೆರೆಮೀಯನು ಸೆರಾಯನಿಗೆ ಹೀಗೆ ಹೇಳಿದನು: “ಸೆರಾಯನೇ, ಬಾಬಿಲೋನಿಗೆ ಹೋಗು. ಎಲ್ಲರಿಗೂ ಕೇಳಿಸುವಂತೆ ಈ ಸಂದೇಶವನ್ನು ಖಂಡಿತವಾಗಿ ಓದು. 62 ಆಮೇಲೆ ಹೀಗೆ ಹೇಳು: ‘ಯೆಹೋವನೇ, ಬಾಬಿಲೋನ್ ನಗರವನ್ನು ನಾಶಮಾಡುವೆನೆಂದು ನೀನು ಹೇಳಿರುವೆ. ಪ್ರಾಣಿಗಳು ಅಥವಾ ಮನುಷ್ಯರು ಯಾರೂ ಇಲ್ಲಿ ವಾಸಮಾಡದಂತೆ, ಇದು ಎಂದೆಂದಿಗೂ ಹಾಳುಬಿದ್ದ ಸ್ಥಳವಾಗಿರುವಂತೆ ಇದನ್ನು ನಾಶಮಾಡುವದಾಗಿ ಹೇಳಿರುವೆ.’ 63 ಈ ಸುರುಳಿಯನ್ನು ಓದಿಮುಗಿಸಿದ ಮೇಲೆ ಅದಕ್ಕೊಂದು ಕಲ್ಲನ್ನು ಕಟ್ಟಿ ಆ ಕಾಗದದ ಸುರುಳಿಯನ್ನು ಯೂಫ್ರೇಟೀಸ್ ನದಿಯಲ್ಲಿ ಎಸೆದುಬಿಡು. 64 ಆಮೇಲೆ ‘ಇದೇ ರೀತಿಯಲ್ಲಿ ಬಾಬಿಲೋನ್ ಕೂಡ ಮುಳುಗಿಹೋಗುವುದು. ಬಾಬಿಲೋನ್ ಎಂದಿಗೂ ಮೇಲಕ್ಕೆ ಏಳುವದಿಲ್ಲ. ಅಲ್ಲಿ ನಾನು ಬರಮಾಡುವ ಅನೇಕ ವಿಪತ್ತುಗಳಿಂದಾಗಿ ಬಾಬಿಲೋನ್ ಮುಳುಗಿಹೋಗುವುದು’” ಎಂದು ಹೇಳು.
ಯೆರೆಮೀಯನ ಸಂದೇಶ ಇಲ್ಲಿಗೆ ಮುಗಿಯುತ್ತದೆ.
ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
ಆದ್ದರಿಂದ ನಿನ್ನನ್ನು ಕೊಂಡಾಡುವೆನು.
2 ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
ನೀನು ನನ್ನನ್ನು ಗುಣಪಡಿಸಿದೆ.
3 ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]
4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವಿರುವುದು.
ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
6 ನಾನು ಸುರಕ್ಷಿತವಾಗಿದ್ದಾಗ
ನನಗೆ ಕೇಡೇ ಇಲ್ಲವೆಂದುಕೊಂಡೆನು.
7 ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
ಭಯದಿಂದ ನಡುಗತೊಡಗಿದೆ.
8 ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
9 “ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
ಅವರು ನಿನ್ನನ್ನು ಸ್ತುತಿಸುವುದಿಲ್ಲ!
ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.
Kannada Holy Bible: Easy-to-Read Version. All rights reserved. © 1997 Bible League International