M’Cheyne Bible Reading Plan
ಸೌಲನು ಮಾಡಿದ ಮೊದಲ ತಪ್ಪು
13 ಆ ಸಮಯದಲ್ಲಿ ಸೌಲನು ರಾಜನಾಗಿ ಒಂದು ವರ್ಷವಾಗಿತ್ತು. ಸೌಲನು ಎರಡು ವರ್ಷಗಳ ಕಾಲ ಇಸ್ರೇಲನ್ನು ಆಳಿದ ನಂತರ, 2 ಅವನು ಮೂರು ಸಾವಿರ ಇಸ್ರೇಲ್ ಗಂಡಸರನ್ನು ಆರಿಸಿಕೊಂಡನು. ಅವರಲ್ಲಿ ಎರಡು ಸಾವಿರ ಗಂಡಸರು ಗುಡ್ಡಗಾಡು ಪ್ರದೇಶವಾದ ಬೇತೇಲಿನಲ್ಲಿಯೂ ಮಿಕ್ಮಾಷಿನಲ್ಲಿಯೂ ಅವನೊಂದಿಗೆ ಇದ್ದರು. ಉಳಿದ ಒಂದು ಸಾವಿರ ಗಂಡಸರು ಬೆನ್ಯಾಮೀನನ ಗಿಬೆಯದಲ್ಲಿ ಯೋನಾತಾನನೊಂದಿಗೆ ಇದ್ದರು. ಸೌಲನು ಸೈನ್ಯದಲ್ಲಿದ್ದ ಇತರರನ್ನು ಅವರವರ ಮನೆಗಳಿಗೆ ಮರಳಿ ಕಳುಹಿಸಿದನು.
3 ಯೋನಾತಾನನು ಫಿಲಿಷ್ಟಿಯರನ್ನು ಅವರ ಶಿಬಿರವಿದ್ದ ಗೆಬದಲ್ಲಿ ಸೋಲಿಸಿದನು. ಫಿಲಿಷ್ಟಿಯರು ಈ ವಿಚಾರವನ್ನು ಕೇಳಿ, “ಇಬ್ರಿಯರು ದಂಗೆ ಎದ್ದಿದ್ದಾರೆ” ಎಂದು ಹೇಳಿದರು.
ಸೌಲನು, “ಏನು ನಡೆಯಿತೆಂಬುದು ಇಬ್ರಿಯರಿಗೆ ತಿಳಿಯಲಿ” ಎಂದು ಹೇಳಿದನು. ಆದ್ದರಿಂದ ಸೌಲನು ಇಸ್ರೇಲ್ ದೇಶದಲ್ಲೆಲ್ಲಾ ಕೊಂಬೂದಿಸಬೇಕೆಂದು ಜನರಿಗೆ ಹೇಳಿದನು. 4 ಇಸ್ರೇಲರೆಲ್ಲರೂ ಈ ಸುದ್ದಿಯನ್ನು ಕೇಳಿ, “ಸೌಲನು ಫಿಲಿಷ್ಟಿಯರ ನಾಯಕನನ್ನು ಕೊಂದನು. ಈಗ ಫಿಲಿಷ್ಟಿಯರು ಇಸ್ರೇಲರನ್ನು ನಿಜವಾಗಿಯೂ ದ್ವೇಷಿಸುತ್ತಾರೆ” ಎಂದು ಹೇಳಿದರು.
ಇಸ್ರೇಲರೆಲ್ಲ ಗಿಲ್ಗಾಲಿನಲ್ಲಿ ಸೌಲನನ್ನು ಜೊತೆಸೇರಲು ಕರೆಹೋಯಿತು. 5 ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಒಟ್ಟುಗೂಡಿದರು. ಫಿಲಿಷ್ಟಿಯರಲ್ಲಿ ಮೂರು ಸಾವಿರ[a] ರಥಗಳಿದ್ದವು; ಆರು ಸಾವಿರ ಅಶ್ವಸೈನಿಕರಿದ್ದರು. ಫಿಲಿಷ್ಟಿಯರಲ್ಲಿ ನದಿದಂಡೆಯ ಮರಳಿನ ಕಣಗಳಷ್ಟು ಯೋಧರಿದ್ದರು. ಫಿಲಿಷ್ಟಿಯರು ಬೇತಾವೆನಿನ ಪೂರ್ವ ದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.
6 ಇಸ್ರೇಲರು ತಾವು ತೊಂದರೆಗೆ ಒಳಗಾಗಿರುವುದನ್ನೂ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿರುವುದನ್ನೂ ತಿಳಿದುಕೊಂಡರು. ಅವರು ಗವಿಗಳಲ್ಲಿ ಮತ್ತು ಬಂಡೆಗಲ್ಲುಗಳ ಸಂಧಿಗಳಲ್ಲಿ ಅಡಗಿಕೊಳ್ಳಲು ಓಡಿಹೋದರು. ಅವರು ಬಂಡೆಗಳ ಮಧ್ಯದಲ್ಲಿಯೂ ಬಾವಿಗಳಲ್ಲಿಯೂ ಮತ್ತು ನೆಲದ ಕುಳಿಗಳಲ್ಲಿಯೂ ಅಡಗಿಕೊಂಡರು. 7 ಇಬ್ರಿಯರಲ್ಲಿ ಕೆಲವರು ಜೋರ್ಡನ್ ನದಿಯನ್ನು ದಾಟಿ ಗಾದ್ ಮತ್ತು ಗಿಲ್ಯಾದ್ ಪ್ರದೇಶಕ್ಕೆ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸೈನ್ಯದಲ್ಲಿದ್ದ ಜನರೆಲ್ಲ ಭಯದಿಂದ ನಡುಗತೊಡಗಿದರು.
8 ಸಮುವೇಲನು ತಾನು ಸೌಲನನ್ನು ಗಿಲ್ಗಾಲಿನಲ್ಲಿ ಭೇಟಿಮಾಡುವುದಾಗಿ ಹೇಳಿಕಳುಹಿಸಿದನು. ಆದ್ದರಿಂದ ಸೌಲನು ಏಳು ದಿನಗಳವರೆಗೆ ಅಲ್ಲಿ ಕಾದುಕೊಂಡಿದ್ದನು. ಆದರೆ ಸಮುವೇಲನು ಗಿಲ್ಗಾಲಿಗೆ ಬರುವುದಕ್ಕಿಂತ ಮೊದಲೇ ಸೈನಿಕರು ಸೌಲನನ್ನು ಬಿಟ್ಟುಹೋಗ ತೊಡಗಿದರು. 9 ಆದ್ದರಿಂದ ಸೌಲನು, “ಸರ್ವಾಂಗಹೋಮಕ್ಕೂ ಸಮಾಧಾನಯಜ್ಞಕ್ಕೂ ಬೇಕಾದವುಗಳನ್ನು ತನ್ನಿ” ಎಂದು ಹೇಳಿದನು. ಬಳಿಕ ಸೌಲನು ಸರ್ವಾಂಗಹೋಮವನ್ನು ಅರ್ಪಿಸಿದನು. 10 ಸೌಲನು ಸರ್ವಾಂಗಹೋಮವನ್ನು ಅರ್ಪಿಸಿ ಮುಗಿಸುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸಲು ಹೊರಗೆ ಹೋದನು.
11 ಸಮುವೇಲನು, “ನೀನು ಮಾಡಿದ್ದೇನು?” ಎಂದು ಕೇಳಿದನು.
ಸೌಲನು, “ಸೈನಿಕರು ನನ್ನನ್ನು ಬಿಟ್ಟುಹೋಗುತ್ತಿರುವುದನ್ನೂ ನೀನು ನಿಯಮಿತಕಾಲದಲ್ಲಿ ಇಲ್ಲಿ ಇಲ್ಲದಿರುವುದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಒಟ್ಟುಗೂಡುತ್ತಿರುವುದನ್ನೂ ನೋಡಿದೆನು. 12 ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಇಲ್ಲಿಗೆ ಬಂದು ಗಿಲ್ಗಾಲಿನಲ್ಲಿ ನನ್ನ ಮೇಲೆ ಆಕ್ರಮಣ ಮಾಡುತ್ತಾರೆ. ನಮಗೆ ಸಹಾಯ ಮಾಡುವಂತೆ ನಾನು ದೇವರಲ್ಲಿ ಇನ್ನೂ ಪ್ರಾರ್ಥಿಸಿಲ್ಲ. ಆದ್ದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ಸರ್ವಾಂಗಹೋಮವನ್ನು ಅರ್ಪಿಸಿದೆನು’” ಎಂದನು.
13 ಸಮುವೇಲನು, “ನೀನು ಬುದ್ಧಿಹೀನಕೃತ್ಯವನ್ನು ಮಾಡಿದೆ. ನಿನ್ನ ದೇವರಾದ ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಿದ್ದರೆ, ನಿನ್ನ ಕುಟುಂಬವು ಇಸ್ರೇಲನ್ನು ಶಾಶ್ವತವಾಗಿ ಆಳುವಂತೆ ಯೆಹೋವನು ಮಾಡುತ್ತಿದ್ದನು. 14 ಆದರೆ ಈಗ ನಿನ್ನ ಆಳ್ವಿಕೆಯು ಮುಂದುವರಿಯುವುದಿಲ್ಲ. ಯೆಹೋವನು ತನಗೆ ವಿಧೇಯನಾಗಿರುವಂತಹ ಮನುಷ್ಯನಿಗಾಗಿ ಹುಡುಕುತ್ತಿದ್ದನು. ಯೆಹೋವನಿಗೆ ಅಂತಹ ಮನುಷ್ಯನು ಸಿಕ್ಕಿದ್ದಾನೆ. ತನ್ನ ಜನರನ್ನು ಆಳಲು ಯೆಹೋವನು ಅವನನ್ನು ಹೊಸ ನಾಯಕನನ್ನಾಗಿ ನೇಮಿಸುತ್ತಾನೆ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಲಿಲ್ಲ. ಆದ್ದರಿಂದ ಯೆಹೋವನು ಹೊಸ ನಾಯಕನನ್ನು ಆರಿಸಿಕೊಳ್ಳುವನು” ಎಂದು ಹೇಳಿದನು. 15 ನಂತರ ಸಮುವೇಲನು ಎದ್ದು ಗಿಲ್ಗಾಲನ್ನು ಬಿಟ್ಟುಹೊರಟನು.
ಮಿಕ್ಮಾಷಿನ ಕದನ
ಸೌಲನು ತನ್ನ ಸೈನ್ಯಸಮೇತವಾಗಿ ಗಿಲ್ಗಾಲಿನಿಂದ ಹೊರಟನು. ಅವರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು. ಸೌಲನು ತನ್ನೊಂದಿಗೆ ಇನ್ನೂ ಇದ್ದ ಜನರನ್ನು ಲೆಕ್ಕ ಹಾಕಿದನು. ಅವನ ಜೊತೆಯಲ್ಲಿ ಆರುನೂರು ಜನರಿದ್ದರು. 16 ಸೌಲನು ಮತ್ತು ಅವನ ಮಗನಾದ ಯೋನಾತಾನನು ಮತ್ತು ಸೈನಿಕರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು.
ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು. 17 ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಸ್ರೇಲರನ್ನು ಶಿಕ್ಷಿಸಲು ಫಿಲಿಷ್ಟಿಯರು ತೀರ್ಮಾನಿಸಿದ್ದರು. ಆದ್ದರಿಂದ ಅವರ ಬಲಿಷ್ಠ ಸೈನ್ಯವು ಆಕ್ರಮಣಕ್ಕಾಗಿ ಆ ಸ್ಥಳವನ್ನು ಬಿಟ್ಟುಹೊರಟಿತು. ಫಿಲಿಷ್ಟಿಯ ಸೈನ್ಯವನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಒಂದು ಗುಂಪು ಉತ್ತರದಿಕ್ಕಿನ ಒಫ್ರದ ಮಾರ್ಗವಾಗಿ ಶುವಲ್ ದೇಶಕ್ಕೆ ಹೊರಟಿತು. 18 ಎರಡನೆ ಗುಂಪು ಈಶಾನ್ಯ ದಿಕ್ಕಿನ ಮಾರ್ಗವಾಗಿ ಬೇತ್‌ಹೋರೋನಿನ ಕಡೆಗೆ ಹೊರಟಿತು. ಆ ಮೂರನೆಯ ಗುಂಪು ಪೂರ್ವದಿಕ್ಕಿನ ಗಡಿಪ್ರದೇಶದ ಕಡೆಗೆ ಹೊರಟಿತು. ಆ ರಸ್ತೆಯು ಜೆಬೋಯೀಮ್ ಕಣಿವೆಯ ಮರುಭೂಮಿಯ ಕಡೆಗೆ ಹೋಗುತ್ತಿತ್ತು.
19 ಕಬ್ಬಿಣದಿಂದ ಆಯುಧಗಳನ್ನು ತಯಾರಿಸಲು ಇಸ್ರೇಲರಿಗೆ ಗೊತ್ತಿರಲಿಲ್ಲ. ಇಸ್ರೇಲಿನಲ್ಲಿ ಯಾವ ಕಮ್ಮಾರರೂ ಇರಲಿಲ್ಲ. ಇಸ್ರೇಲರು ಕಬ್ಬಿಣದಿಂದ ಕತ್ತಿಗಳನ್ನು ಮತ್ತು ಈಟಿಗಳನ್ನು ತಯಾರಿಸಬಹುದೆಂಬ ಭೀತಿಯು ಫಿಲಿಷ್ಟಿಯರಿಗೆ ಇದ್ದಕಾರಣ ಅವರು ಇಸ್ರೇಲರಿಗೆ ಕಬ್ಬಿಣದಿಂದ ತಯಾರಿಸುವ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಿರಲಿಲ್ಲ. 20 ಫಿಲಿಷ್ಟಿಯರು ಮಾತ್ರ ಕಬ್ಬಿಣದ ವಸ್ತುಗಳನ್ನು ಹರಿತಗೊಳಿಸುತ್ತಿದ್ದರು. ಆದ್ದರಿಂದ ಇಸ್ರೇಲರು ತಮ್ಮ ನೇಗಿಲುಗಳನ್ನು, ಗುದ್ದಲಿಗಳನ್ನು, ಸಲಿಕೆಗಳನ್ನು ಮತ್ತು ಕೊಡಲಿಗಳನ್ನು ಹರಿತಗೊಳಿಸಲು ಫಿಲಿಷ್ಟಿಯರ ಹತ್ತಿರಕ್ಕೆ ಹೋಗಬೇಕಾಗಿತ್ತು. 21 ಫಿಲಿಷ್ಟಿಯರ ಕಮ್ಮಾರರು ನೇಗಿಲನ್ನಾಗಲಿ ಕಳೆಗುದ್ದಲಿಗಳನ್ನಾಗಲಿ ಹರಿತಗೊಳಿಸಲು 1/3 ತೊಲ ಬೆಳ್ಳಿಯನ್ನು ದರವಾಗಿ ತೆಗೆದುಕೊಳ್ಳುತ್ತಿದ್ದರು; ಸಲಿಕೆಯನ್ನಾಗಲಿ ಕೊಡಲಿಯನ್ನಾಗಲಿ ನೇಗಿಲಿನ ಗುಳವನ್ನಾಗಲಿ ಹರಿತಗೊಳಿಸಲು 1/6 ತೊಲ ಬೆಳ್ಳಿಯನ್ನು ತೆಗೆದುಕೊಳ್ಳುತ್ತಿದ್ದರು. 22 ಆದ್ದರಿಂದ ಯುದ್ಧದ ದಿನ ಸೌಲನ ಬಳಿಯಿದ್ದ ಸೈನಿಕರಲ್ಲಿ ಯಾರ ಹತ್ತಿರವೂ ಕತ್ತಿಯಾಗಲಿ ಈಟಿಯಾಗಲಿ ಇರಲಿಲ್ಲ. ಸೌಲ ಮತ್ತು ಅವನ ಮಗನಾದ ಯೋನಾತಾನನ ಹತ್ತಿರ ಮಾತ್ರ ಕಬ್ಬಿಣದ ಆಯುಧಗಳಿದ್ದವು.
23 ಫಿಲಿಷ್ಟಿಯರ ಸೈನ್ಯದ ಒಂದು ಗುಂಪು ಮಿಕ್ಮಾಷಿನ ಕಣಿವೆಗೆ ಕಾವಲಾಗಿತ್ತು.
ದೇವರು ತನ್ನ ಜನರನ್ನು ಮರೆತಿಲ್ಲ
11 ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ. 2 ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ. 3 ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ”(A) ಎಂದು ಪ್ರಾರ್ಥಿಸಿದನು. 4 ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ”(B) ಎಂದು ಉತ್ತರಕೊಟ್ಟನು.
5 ಈಗಲೂ ಅದರಂತೆಯೇ ಆಗಿದೆ. ದೇವರು ತನ್ನ ಕೃಪೆಯ ಮೂಲಕ ಆರಿಸಿಕೊಂಡಿರುವ ಕೆಲವು ಜನರು ಇದ್ದಾರೆ. 6 ದೇವರ ಕೃಪೆಯ ಮೂಲಕ ಆರಿಸಲ್ಪಟ್ಟಿರುವ ಅವರು ದೇವರ ಮಕ್ಕಳಾದದ್ದು ತಮ್ಮ ಕ್ರಿಯೆಗಳಿಂದಲ್ಲ. ಇಲ್ಲದಿದ್ದರೆ, ದೇವರ ಕೃಪಾವರವು ಕೃಪಾವರವೆನಿಸಿಕೊಳ್ಳುತ್ತಿರಲಿಲ್ಲ.
7 ಆದ್ದರಿಂದ ನಡೆದ ಸಂಗತಿಯಿಷ್ಟೆ: ಇಸ್ರೇಲಿನ ಜನರು ನೀತಿವಂತರಾಗಲು ಪ್ರಯತ್ನಿಸಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಿರಲು, ದೇವರಿಂದ ಆರಿಸಲ್ಪಟ್ಟಿದ್ದ ಜನರು ನೀತಿವಂತರಾದರು. ಆದರೆ ಉಳಿದ ಜನರು ಕಠಿಣರಾಗಿ ದೇವರಿಗೆ ಕಿವಿಗೊಡಲಿಲ್ಲ. 8 ಪವಿತ್ರ ಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
“ಜನರಿಗೆ ಅರ್ಥವಾಗದಂತೆ ದೇವರು ಅವರನ್ನು ಮಂಕುಗೊಳಿಸಿದನು.”(C)
“ಅವರು ಇಂದಿನವರೆಗೂ ಕಣ್ಣಿದ್ದರೂ ಕಾಣದಂತೆ
ಕಿವಿಯಿದ್ದರೂ ಕೇಳದಂತೆ ದೇವರು ಅವುಗಳನ್ನು ಮುಚ್ಚಿಬಿಟ್ಟನು.”(D)
9 ದಾವೀದನು ಹೀಗೆನ್ನುತ್ತಾನೆ:
“ಅವರು ತಮ್ಮ ಔತಣಗಳಲ್ಲಿ ಸಿಕ್ಕಿಕೊಂಡು ಬಂಧಿತರಾಗಲಿ;
ಎಡವಿಬಿದ್ದು ದಂಡನೆ ಹೊಂದಲಿ.
10 ಅವರ ಕಣ್ಣು ಕುರುಡಾಗಲಿ;
ನಿರಂತರ ಭಾರದಿಂದ ಬೆನ್ನು ಗೂನಾಗಲಿ.”(E)
11 ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು. 12 ಯೆಹೂದ್ಯರ ಅಪರಾಧವು ಜಗತ್ತಿಗೆ ಅಧಿಕವಾದ ಆಶೀರ್ವಾದಗಳನ್ನೂ ಅವರ ಅಪಜಯವು ಯೆಹೂದ್ಯರಲ್ಲದ ಜನರಿಗೆ ಅಧಿಕವಾದ ಆಶೀರ್ವಾದಗಳನ್ನೂ ತರಲು ಕಾರಣವಾದರೆ, ದೇವರ ಇಚ್ಛೆಗನುಸಾರವಾಗಿ ಯೆಹೂದ್ಯರೆಲ್ಲರು ಪರಿವರ್ತನೆ ಹೊಂದಿದಾಗ ಜಗತ್ತು ಮತ್ತಷ್ಟು ಅಗಾಧವಾದ ಆಶೀರ್ವಾದಗಳನ್ನು ಹೊಂದುವುದು ನಿಶ್ಚಯವಲ್ಲವೇ?
13 ಈಗ ನಾನು ಯೆಹೂದ್ಯರಲ್ಲದ ಜನರೊಂದಿಗೆ ಮಾತಾಡುತ್ತಿದ್ದೇನೆ. ನಾನು ಅವರಿಗೆ ಅಪೊಸ್ತಲನಾಗಿದ್ದೇನೆ. ಆದ್ದರಿಂದ ನಾನು ಈ ಕೆಲಸವನ್ನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿಯೇ ಮಾಡುತ್ತೇನೆ. 14 ನಾನು ನನ್ನ ಸ್ವಂತ ಜನರಲ್ಲಿ (ಯೆಹೂದ್ಯರಲ್ಲಿ) ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರಾದರೂ ರಕ್ಷಣೆ ಹೊಂದುವಂತೆ ಮಾಡಬಲ್ಲೆನೆಂಬ ನಿರೀಕ್ಷೆ ನನಗಿದೆ. 15 ಇಸ್ರೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾದಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವ ಪಡೆದುಕೊಂಡಂತಾಗುವುದಿಲ್ಲವೇ? 16 ರೊಟ್ಟಿಯ ಮೊದಲನೇ ತುಂಡನ್ನು ದೇವರಿಗೆ ಅರ್ಪಿಸಿದಾಗ, ಇಡೀ ರೊಟ್ಟಿಯೇ ಪವಿತ್ರವಾಯಿತು. ಮರದ ಬೇರುಗಳು ಪವಿತ್ರವಾಗಿದ್ದರೆ, ಆ ಮರದ ಕೊಂಬೆಗಳು ಸಹ ಪವಿತ್ರವಾಗಿವೆ.
17 ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ. 18 ಆದ್ದರಿಂದ ಮುರಿಯಲ್ಪಟ್ಟ ಆ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ. 19 “ನಾವು ಆ ಮರದ ಕೊಂಬೆಗಳಿಗೆ ಸೇರಿಕೊಳ್ಳಬೇಕೆಂದು ಆ ಕೊಂಬೆಗಳು ಮುರಿಯಲ್ಪಟ್ಟವು” ಎಂದು ನೀವು ಹೇಳಬಹುದು. 20 ಅದು ಸತ್ಯ. ಆ ಕೊಂಬೆಗಳು ಮುರಿಯಲ್ಪಟ್ಟವು. ಅದಕ್ಕೆ ಅಪನಂಬಿಕೆಯೇ ಕಾರಣ. ನೀವು ಆ ಮರದ ಒಂದು ಭಾಗವಾದದ್ದು ನಿಮ್ಮ ನಂಬಿಕೆಯಿಂದಲೇ. ಆದ್ದರಿಂದ ಗರ್ವಪಡಬೇಡ, ಭಯದಿಂದಿರು. 21 ದೇವರು ಸಹಜವಾದ ಕೊಂಬೆಗಳನ್ನೇ ಉಳಿಸಿಲ್ಲದಿರುವುದರಿಂದ ನೀವು ನಂಬದಿದ್ದರೆ ಆತನು ನಿನ್ನನ್ನು ಉಳಿಸುವುದಿಲ್ಲ.
22 ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು. 23 ಯೆಹೂದ್ಯರು ತಮ್ಮ ಅಪನಂಬಿಕೆಯನ್ನು ಬಿಡುವುದಾದರೆ, ದೇವರು ಅವರನ್ನು ಮತ್ತೆ ಸ್ವೀಕರಿಸಿಕೊಳ್ಳುವನು. ಅವರ ಮೊದಲಿನ ಸ್ಥಾನವನ್ನು ಅವರಿಗೆ ಕೊಡಲು ದೇವರು ಶಕ್ತನಾಗಿದ್ದಾನೆ. 24 ಕಾಡುಕೊಂಬೆಯೊಂದು ಒಳ್ಳೆಯ ಮರದ ಕೊಂಬೆಯಾಗುವುದು ಸಹಜವಾದದ್ದಲ್ಲ. ಆದರೆ ಯೆಹೂದ್ಯರಲ್ಲದ ನೀವು ಕಾಡು ಆಲಿವ್ ಮರದಿಂದ ಕತ್ತರಿಸಲ್ಪಟ್ಟ ಕೊಂಬೆಯಾಗಿದ್ದು ಒಳ್ಳೆಯ ಆಲಿವ್ ಮರಕ್ಕೆ ಕಸಿಕಟ್ಟಲ್ಪಟ್ಟಿದ್ದೀರಿ. ಯೆಹೂದ್ಯರಾದರೋ ಒಳ್ಳೆಯ ಆಲಿವ್ ಮರದಲ್ಲಿ ಬೆಳೆದ ರೆಂಬೆಗಳು. ಆದ್ದರಿಂದ ಅವರು ತಮ್ಮ ಸ್ವಂತ ಮರಕ್ಕೆ ಮತ್ತೆ ಸೇರಿಸಲ್ಪಡಲು ಖಂಡಿತವಾಗಿಯೂ ಸಾಧ್ಯ.
25 ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು. 26 ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಸಿಯೋನಿನಿಂದ ರಕ್ಷಕನು ಬರುವನು:
ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
27 ನಾನು ಆ ಜನರ ಪಾಪಗಳನ್ನು ಪರಿಹರಿಸುವಾಗ
ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.”(F)
28 ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ. 29 ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ. 30 ಒಂದು ಕಾಲದಲ್ಲಿ ನೀವು ಆತನಿಗೆ ವಿಧೇಯರಾಗಿರಲಿಲ್ಲ. ಈಗಲಾದರೋ ನೀವು ಕರುಣೆಯನ್ನು ಹೊಂದಿಕೊಂಡಿರಿ. ಏಕೆಂದರೆ ಅವರು (ಯೆಹೂದ್ಯರು) ಆತನಿಗೆ ಅವಿಧೇಯರಾದರು. 31 ದೇವರು ನಿಮಗೆ ಕರುಣೆ ತೋರಿದ್ದರಿಂದ ಈಗ ಯೆಹೂದ್ಯರು ವಿಧೇಯರಾಗುವುದಿಲ್ಲ. ಆದರೆ ಅವರು ಸಹ ದೇವರಿಂದ ಕರುಣೆಯನ್ನು ಹೊಂದಿಕೊಳ್ಳಲೆಂದು ಹೀಗಾಯಿತು. 32 ಎಲ್ಲರೂ ದೇವರಿಗೆ ಅವಿಧೇಯರಾದರು. ದೇವರು ಎಲ್ಲರಿಗೂ ಕರುಣೆಯನ್ನು ತೋರಬೇಕೆಂದು ಎಲ್ಲರನ್ನೂ ಒಟ್ಟಾಗಿ ಅವಿಧೇಯತ್ವದಿಂದ ಬಂಧಿಸಿದ್ದಾನೆ.
ದೇವರಿಗೆ ಸ್ತೋತ್ರವಾಗಲಿ
33 ಹೌದು, ದೇವರ ಐಶ್ವರ್ಯವು ಎಷ್ಟೋ ಅಪಾರವಾಗಿದೆ! ದೇವರ ವಿವೇಕಕ್ಕೂ ಜ್ಞಾನಕ್ಕೂ ಕೊನೆಯೇ ಇಲ್ಲ! ದೇವರು ನಿರ್ಧರಿಸುವ ಸಂಗತಿಗಳನ್ನು ಯಾವನೂ ವಿವರಿಸಲಾರನು. ದೇವರ ಮಾರ್ಗಗಳನ್ನು ಯಾವನೂ ಅರ್ಥಮಾಡಿಕೊಳ್ಳಲಾರನು. 34 ಪವಿತ್ರ ಗ್ರಂಥ ಹೇಳುವಂತೆ:
“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
ದೇವರಿಗೆ ಸಲಹೆಯನ್ನು ಯಾರು ಕೊಡಬಲ್ಲರು?”(G)
35 “ಮೊದಲು ದೇವರಿಗೆ ಕೊಟ್ಟು ಪ್ರತಿಫಲ ಪಡೆದವರ್ಯಾರು?
ದೇವರು ಯಾರಿಗೂ ಸಾಲಗಾರನಾಗಿಲ್ಲ.”(H)
36 ಹೌದು, ದೇವರು ಸಮಸ್ತವನ್ನು ಸೃಷ್ಟಿಸಿದನು. ಸಮಸ್ತವು ದೇವರ ಮೂಲಕವಾಗಿಯೂ ದೇವರಿಗಾಗಿಯೂ ಮುಂದುವರಿಯುತ್ತಿದೆ. ದೇವರಿಗೆ ಸದಾಕಾಲವೂ ಸ್ತೋತ್ರ! ಆಮೆನ್.
ಬಾಬಿಲೋನಿನ ಬಗ್ಗೆ ದೈವೋಕ್ತಿ
50 ಬಾಬಿಲೋನ್ ಮತ್ತು ಬಾಬಿಲೋನಿನ ಜನರ ಬಗ್ಗೆ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಯೆಹೋವನು ಯೆರೆಮೀಯನ ಮುಖಾಂತರ ಕೊಟ್ಟನು.
2 “ಎಲ್ಲಾ ಜನಾಂಗಗಳಲ್ಲಿ ಪ್ರಚಾರಪಡಿಸಿರಿ,
ಒಂದು ಧ್ವಜವನ್ನು ಹಾರಿಸಿ ಈ ಸಂದೇಶವನ್ನೆಲ್ಲಾ ಸಾರಿರಿ.
‘ಬಾಬಿಲೋನ್ ಜನಾಂಗವನ್ನು ವಶಪಡಿಸಿಕೊಳ್ಳಲಾಗುವುದು.
ಬೇಲ್ ದೇವತೆ ನಾಚಿಕೆಪಡುವುದು.
ಮೆರೋದಾಕ್ ದೇವತೆಯು ಭಯಪಡುವುದು.
ಬಾಬಿಲೋನಿನ ವಿಗ್ರಹಗಳು ನಾಚಿಕೆಪಡುವವು.
ಅಲ್ಲಿಯ ದೇವತೆಗಳು ಹೆದರಿಕೊಳ್ಳುವವು.’
3 ಉತ್ತರದ ಒಂದು ಜನಾಂಗವು ಬಾಬಿಲೋನಿನ ಮೇಲೆ ಧಾಳಿ ಮಾಡುವುದು.
ಆ ಜನಾಂಗವು ಬಾಬಿಲೋನನ್ನು ಒಂದು ಬರಿದಾದ ಮರುಭೂಮಿಯನ್ನಾಗಿ ಮಾಡುವದು.
ಅಲ್ಲಿ ಯಾರೂ ವಾಸಮಾಡಲಾರರು.
ಪ್ರಾಣಿಗಳು ಮತ್ತು ಮನುಷ್ಯರು ಅಲ್ಲಿಂದ ಪಲಾಯನ ಮಾಡುವರು.”
4 ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ
ಇಸ್ರೇಲಿನ ಮತ್ತು ಯೆಹೂದದ ಜನರು ಒಟ್ಟಿಗೆ ಸೇರುವರು.
ಅವರು ಒಟ್ಟುಗೂಡಿ ಬಹಳವಾಗಿ ಗೋಳಾಡುವರು;
ತಮ್ಮ ದೇವರಾದ ಯೆಹೋವನನ್ನು ಹುಡುಕಲು ಹೋಗುವರು.
5 ಅವರು ಚೀಯೋನಿಗೆ ಹೋಗುವ ಮಾರ್ಗವನ್ನು ವಿಚಾರಿಸುವರು.
ಆ ದಿಕ್ಕಿನಲ್ಲಿ ಹೋಗಲು ಪ್ರಾರಂಭಿಸುವರು.
‘ಬನ್ನಿ, ನಾವೆಲ್ಲರೂ ಯೆಹೋವನ ಆಶ್ರಯಪಡೆಯೋಣ.
ಆತನೊಂದಿಗೆ ಶಾಶ್ವತವಾದ ಮತ್ತು ನಾವೆಂದೂ ಮರೆಯಲಾಗದ
ಒಡಂಬಡಿಕೆಯನ್ನು ಮಾಡಿಕೊಳ್ಳೋಣ’ ಎಂದು ಅವರು ಹೇಳುವರು.
6 “ನನ್ನ ಜನರು ತಪ್ಪಿಸಿಕೊಂಡ ಕುರಿಗಳಂತಿದ್ದಾರೆ.
ಅವರ ಕುರುಬರು ಅವರನ್ನು ತಪ್ಪು ದಾರಿಗೆ ಎಳೆದಿದ್ದಾರೆ.
ಅವರ ನಾಯಕರುಗಳು ಅವರನ್ನು ಬೆಟ್ಟಗಳಲ್ಲಿ ಅಲೆಯುವಂತೆ ಮಾಡಿದ್ದಾರೆ.
ಅವರ ವಿಶ್ರಾಂತಿಸ್ಥಾನವನ್ನು ಅವರು ಮರೆತುಬಿಟ್ಟಿದ್ದಾರೆ.
7 ನನ್ನ ಜನರನ್ನು ಕಂಡವರೆಲ್ಲ ಅವರನ್ನು ನೋಯಿಸಿದ್ದಾರೆ.
ಆ ಶತ್ರುಗಳು,
‘ನಾವು ಮಾಡಿದ್ದು ತಪ್ಪಲ್ಲ.
ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ.
ಯೆಹೋವನು ಅವರ ನಿಜವಾದ ನಿವಾಸವಾಗಿದ್ದನು.
ಯೆಹೋವನು ಅವರ ಪೂರ್ವಿಕರು ನಂಬಿದ್ದ ದೇವರಾಗಿದ್ದನು’ ಎಂದರು.
8 “ಬಾಬಿಲೋನಿನಿಂದ ಓಡಿಹೋಗಿರಿ.
ಬಾಬಿಲೋನಿನ ಪ್ರದೇಶವನ್ನು ಬಿಟ್ಟುಬಿಡಿ.
ಕುರಿಮಂದೆಯ ಮುಂದೆ ಹೋಗುವ ಹೋತದಂತೆ ಹೋಗಿರಿ.
9 ಉತ್ತರ ದಿಕ್ಕಿನ ಹಲವು ಜನಾಂಗಗಳನ್ನು ನಾನು ಒಟ್ಟುಗೂಡಿಸಿ ತರುವೆನು.
ಆ ಜನಾಂಗಗಳ ಸಮುದಾಯವು ಬಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತದೆ.
ಬಾಬಿಲೋನ್ ಅವರಿಗೆ ವಶವಾಗುವುದು.
ಆ ಜನಾಂಗಗಳ ಜನರು ಬಾಬಿಲೋನಿನ ಮೇಲೆ ಹಲವು ಬಾಣಗಳನ್ನು ಪ್ರಯೋಗ ಮಾಡುವರು.
ಆ ಬಾಣಗಳೆಲ್ಲ ಬರಿಗೈಯಲ್ಲಿ ಯುದ್ಧದಿಂದ ಹಿಂದಿರುಗದ ಶೂರ ಸೈನಿಕರಂತಿರುವವು.
10 ಕಸ್ದೀಯ ಸಂಪತ್ತನ್ನೆಲ್ಲ ಶತ್ರು ಕೊಳ್ಳೆಹೊಡೆಯುವನು.
ಶತ್ರು ಸೈನಿಕರು ತಮಗೆ ಬೇಕಾದದ್ದೆಲ್ಲವನ್ನು ತೆಗೆದುಕೊಳ್ಳುವರು”
ಇದು ಯೆಹೋವನ ನುಡಿ.
11 “ಬಾಬಿಲೋನೇ, ನೀನು ಉಲ್ಲಾಸದಲ್ಲಿರುವೆ ಮತ್ತು ಸಂತೋಷದಲ್ಲಿರುವೆ.
ನೀನು ನನ್ನ ಪ್ರದೇಶವನ್ನು ತೆಗೆದುಕೊಂಡೆ.
ನೀನು ಕಣತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿರುವೆ.
ನಿನ್ನ ನಗು ಕುದುರೆಗಳ ಸಂತೋಷಭರಿತ ಕೆನೆತದಂತೆ ಇದೆ.
12 ಈಗ ನಿನ್ನ ತಾಯಿಯು ಬಹಳ ನಾಚಿಕೆಪಡುವಳು.
ನಿನಗೆ ಜನ್ಮಕೊಟ್ಟ ಆ ಸ್ತ್ರೀಯು ಅಪಮಾನ ಹೊಂದುವಳು.
ಎಲ್ಲಾ ಜನಾಂಗಗಳಲ್ಲಿ ಬಾಬಿಲೋನ್ ಕನಿಷ್ಟವೆನಿಸುವುದು.
ಅದು ಬರಿದಾದ ಮರುಭೂಮಿಯಂತಾಗುವುದು.
13 ದೇವರು ಅವಳ ಮೇಲೆ ತನ್ನ ಕೋಪವನ್ನು ಪ್ರಕಟಿಸುವನು
ಆದ್ದರಿಂದ ಅಲ್ಲಿ ಯಾರೂ ವಾಸಮಾಡಲಾರರು.
ಬಾಬಿಲೋನ್ ನಗರವು ಸಂಪೂರ್ಣವಾಗಿ ನಿರ್ಜನವಾಗುವುದು.
ಬಾಬಿಲೋನಿನಿಂದ ಹಾದುಹೋಗುವವರೆಲ್ಲ ಭಯಪಡುವರು.
ಅದಕ್ಕೆ ಉಂಟಾದ ದುರ್ಗತಿಯನ್ನು ನೋಡಿ ಅವರು ತಮ್ಮ ತಲೆಯಾಡಿಸುವರು.
14 “ಬಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧತೆಗಳನ್ನು ಮಾಡಿರಿ.
ಬಿಲ್ಲುಗಾರರೇ, ಬಾಬಿಲೋನಿನ ಮೇಲೆ ಬಾಣ ಪ್ರಯೋಗ ಮಾಡಿರಿ.
ನಿಮ್ಮ ಬಾಣಗಳಲ್ಲಿ ಒಂದನ್ನೂ ಉಳಿಸಿಕೊಳ್ಳಬೇಡಿರಿ.
ಅದು ಯೆಹೋವನ ವಿರುದ್ಧವಾಗಿ ಪಾಪ ಮಾಡಿದೆ.
15 ಬಾಬಿಲೋನಿನ ಸುತ್ತಲೂ ಇರುವ ಸೈನಿಕರೇ,
ಜಯಘೋಷಮಾಡಿರಿ.
ಈಗ ಬಾಬಿಲೋನ್ ಶರಣಾಗತವಾಗಿದೆ.
ಅದರ ಪೌಳಿಗೋಡೆಗಳನ್ನು ಮತ್ತು ಕೊತ್ತಲಗಳನ್ನು ಬೀಳಿಸಲಾಗಿದೆ.
ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಿದ್ದಾನೆ.
ಎಲ್ಲಾ ಜನಾಂಗಗಳವರು ಬಾಬಿಲೋನಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು.
16 ಬಾಬಿಲೋನಿನ ಜನರಿಗೆ ಬೀಜಗಳನ್ನು ಬಿತ್ತಲು ಬಿಡಬೇಡಿ.
ಸುಗ್ಗಿ ಮಾಡಲು ಅವರಿಗೆ ಬಿಡಬೇಡಿ.
ಬಾಬಿಲೋನಿನ ಸೈನಿಕರು ಹಲವಾರು ಸೆರೆಯಾಳುಗಳನ್ನು ಹಿಡಿದುತಂದಿದ್ದಾರೆ.
ಈಗ ಶತ್ರು ಸೈನಿಕರು ಬಂದುದರಿಂದ
ಆ ಸೆರೆಯಾಳುಗಳು ತಮ್ಮ ಪ್ರದೇಶಗಳಿಗೆ ಹಿಂತಿರುಗುತ್ತಿದ್ದಾರೆ,
ಆ ಸೆರೆಯಾಳುಗಳು ತಮ್ಮ ದೇಶಗಳಿಗೆ ಓಡುತ್ತಿದ್ದಾರೆ.
17 “ಇಸ್ರೇಲು ದೇಶಗಳಲ್ಲೆಲ್ಲಾ
ಚದರಿಹೋದ ಕುರಿಹಿಂಡಿನಂತಾಗಿದೆ.
ಸಿಂಹಗಳಿಗೆ ಹೆದರಿ ಓಡಿಹೋದ
ಕುರಿಗಳಂತಾಗಿದೆ ಇಸ್ರೇಲು.
ಅದನ್ನು ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ
ಅಶ್ಶೂರದ ರಾಜನು.
ಅದರ ಎಲುಬುಗಳನ್ನು ಜಗಿದ ಕೊನೆಯ ಸಿಂಹವೆಂದರೆ
ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು.
18 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು:
‘ನಾನು ಬಾಬಿಲೋನಿನ ರಾಜನನ್ನು ಮತ್ತು ಅವನ ದೇಶವನ್ನು ಬಹುಬೇಗ ದಂಡಿಸುವೆನು.
ಅಶ್ಶೂರದ ರಾಜನನ್ನು ದಂಡಿಸಿದಂತೆ ನಾನು ಅವನನ್ನು ದಂಡಿಸುವೆನು.
19 “‘ಆದರೆ ಇಸ್ರೇಲನ್ನು ಪುನಃ ಅದರ ಹುಲ್ಲುಗಾವಲಿಗೆ ತರುವೆನು.
ಅದು ಕರ್ಮೆಲ್ ಬೆಟ್ಟದ ಮೇಲೆ ಮತ್ತು ಬಾಷಾನಿನ ಪ್ರದೇಶದಲ್ಲಿ ಮೇಯುವದು.
ಅದು ತಿಂದು ತೇಗುವದು.
ಅದು ಎಫ್ರಾಯೀಮಿನ ಮತ್ತು ಗಿಲ್ಯಾದಿನ ಬೆಟ್ಟಗಳಲ್ಲಿ ತಿಂದು ತೃಪ್ತಿಪಡುವದು.’”
20 ಇದು ಯೆಹೋವನ ನುಡಿ. “ಆ ಸಮಯದಲ್ಲಿ ಜನರು ಇಸ್ರೇಲಿನ ದೋಷವನ್ನು ಕಂಡುಹಿಡಿಯಲು ಪ್ರಯತ್ನಿಸುವರು.
ಆದರೆ ಯಾವ ದೋಷಗಳೂ ಇರುವದಿಲ್ಲ.
ಜನರು ಯೆಹೂದದ ಪಾಪಗಳನ್ನು ಹುಡುಕುವ ಪ್ರಯತ್ನ ಮಾಡುವರು.
ಆದರೆ ಯಾವ ಪಾಪಗಳೂ ಸಿಕ್ಕುವದಿಲ್ಲ.
ಏಕೆಂದರೆ ಇಸ್ರೇಲಿನ ಮತ್ತು ಯೆಹೂದದ ಜನರಲ್ಲಿ ಅಳಿದುಳಿದ ಕೆಲವು ಜನರನ್ನು ನಾನು ರಕ್ಷಿಸುತ್ತೇನೆ.
ಅವರ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ.”
21 ಯೆಹೋವನು ಹೀಗೆನ್ನುತ್ತಾನೆ: “ಮೆರಾಥಯಿಮ್ ದೇಶದ ಮೇಲೆ ಧಾಳಿ ಮಾಡಿರಿ.
ಪೆಕೋದ ಪ್ರದೇಶದಲ್ಲಿ ವಾಸಮಾಡುವ ಜನಗಳ ಮೇಲೆ ಧಾಳಿ ಮಾಡಿರಿ.
ಅವರ ಮೇಲೆ ಧಾಳಿ ಮಾಡಿ ಅವರನ್ನು ಕೊಂದು ಸಂಪೂರ್ಣವಾಗಿ ನಾಶಮಾಡಿರಿ.
ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡಿರಿ.
22 “ಯುದ್ಧದ ಆರ್ಭಟವು ದೇಶದಲ್ಲೆಲ್ಲ ಕೇಳಿಬರುತ್ತಿದೆ.
ಅದು ಮಹಾವಿನಾಶದ ಧ್ವನಿಯಾಗಿದೆ.
23 ಬಾಬಿಲೋನು ಇಡೀ ಭೂಮಂಡಲಕ್ಕೆ
‘ಸುತ್ತಿಗೆ’ಯಂತಿದೆ.
ಆದರೆ ಈಗ ಆ ‘ಸುತ್ತಿಗೆ’ಯು ಮುರಿದು ಚೂರುಚೂರಾಗಿದೆ.
ಬಾಬಿಲೋನ್ ನಿಜವಾಗಿಯೂ ಎಲ್ಲಕ್ಕಿಂತಲೂ ಹೆಚ್ಚು ಹಾಳಾದ ಜನಾಂಗವಾಗಿದೆ.
24 ಬಾಬಿಲೋನೇ, ನಾನು ನಿನಗಾಗಿ ಒಂದು ಬಲೆಯನ್ನು ಒಡ್ಡಿದೆ.
ನೀನು ತಿಳಿಯದೆ ಸಿಕ್ಕಿಹಾಕಿಕೊಂಡೆ.
ನೀನು ಯೆಹೋವನ ವಿರುದ್ಧ ಹೋರಾಡಿದೆ.
ಆದ್ದರಿಂದ ನಿನ್ನನ್ನು ಹುಡುಕಿ ವಶಪಡಿಸಿಕೊಳ್ಳಲಾಯಿತು.
25 ಯೆಹೋವನು ತನ್ನ ಆಯುಧಶಾಲೆಯನ್ನು ತೆರೆದಿದ್ದಾನೆ.
ಆತನು ತನ್ನ ಆಯುಧಶಾಲೆಯಿಂದ ತನ್ನ ರೋಷದ ಶಸ್ತ್ರಾಸ್ತ್ರಗಳನ್ನು ಹೊರತೆಗೆದಿದ್ದಾನೆ.
ತಾನು ಮಾಡಬೇಕಾದ ಕಾರ್ಯಕ್ಕಾಗಿ ಸರ್ವಶಕ್ತನಾದ ಆತನು ಆ ಶಸ್ತ್ರಾಸ್ತ್ರಗಳನ್ನು ಹೊರಗೆ ತೆಗೆದಿದ್ದಾನೆ.
ಕಸ್ದೀಯರ ದೇಶದಲ್ಲಿ ಆತನು ಮಾಡಬೇಕಾದ ಕಾರ್ಯವೊಂದಿದೆ.
26 “ಅತಿ ದೂರದಿಂದ ಬಾಬಿಲೋನಿನ ಮೇಲೆ ಬೀಳಲು ಬನ್ನಿ.
ಅದರ ಧಾನ್ಯದ ಕಣಜಗಳನ್ನು ತೆರೆಯಿರಿ.
ಬಾಬಿಲೋನನ್ನು ಸಂಪೂರ್ಣವಾಗಿ ನಾಶಮಾಡಿರಿ;
ಯಾರನ್ನೂ ಜೀವಂತ ಉಳಿಸಬೇಡಿ.
ಧಾನ್ಯಗಳ ಗುಡ್ಡೆಗಳ ಹಾಗೆ ಶವಗಳ ದೊಡ್ಡದೊಡ್ಡ ಗುಡ್ಡೆಗಳನ್ನು ಹಾಕಿರಿ.
27 ಬಾಬಿಲೋನಿನ ಎಲ್ಲಾ ತರುಣರನ್ನು ಕೊಂದುಹಾಕಿರಿ.
ಅವರನ್ನು ಕತ್ತರಿಸಿಬಿಡಿ.
ಅವರನ್ನು ಸೋಲಿಸುವ ಸಮಯ ಬಂದಿದೆ. ಇದು ಅವರಿಗೆ ಕೇಡಿನ ಕಾಲ.
ಇದು ಅವರನ್ನು ದಂಡಿಸುವ ಸಮಯ.
28 ಬಾಬಿಲೋನಿನ ಜನರು ಓಡಿಹೋಗುತ್ತಿದ್ದಾರೆ.
ಅವರು ಆ ದೇಶದಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾರೆ.
ಆ ಜನರು ಚೀಯೋನಿಗೆ ಬಂದು ಬಾಬಿಲೋನಿನಲ್ಲಿ ಯೆಹೋವನು ಮಾಡುತ್ತಿದ್ದ ವಿನಾಶದ ಬಗ್ಗೆ ಎಲ್ಲರಿಗೂ ಹೇಳುತ್ತಿದ್ದಾರೆ.
ಯೆಹೋವನು ಬಾಬಿಲೋನಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಿರುವದರ ಬಗ್ಗೆ ಹೇಳುತ್ತಿದ್ದಾರೆ.
ಬಾಬಿಲೋನ್ ಯೆಹೋವನ ಆಲಯವನ್ನು ನಾಶಮಾಡಿತು.
ಆದ್ದರಿಂದ ಈಗ ಯೆಹೋವನು ಬಾಬಿಲೋನನ್ನು ನಾಶಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ.
29 “ಬಾಬಿಲೋನಿನ ಮೇಲೆ ಬಾಣ ಪ್ರಯೋಗ ಮಾಡಲು
ಬಿಲ್ಲುಗಾರರಿಗೆ ಹೇಳಿರಿ.
ಆ ಜನರಿಗೆ ನಗರವನ್ನು ಮುತ್ತಲು ಹೇಳಿರಿ.
ಯಾರೂ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಿ.
ಅದು ಮಾಡಿದ ದುಷ್ಕೃತ್ಯಗಳಿಗಾಗಿ ಮುಯ್ಯಿತೀರಿಸಿರಿ.
ಬೇರೆ ಜನಾಂಗಗಳಿಗೆ ಅದು ಮಾಡಿದಂತೆ ಅದಕ್ಕೆ ಮಾಡಿರಿ.
ಬಾಬಿಲೋನ್ ಯೆಹೋವನನ್ನು ಗೌರವಿಸಲಿಲ್ಲ.
ಪರಿಶುದ್ಧನಿಗೆ ಅವಮಾನ ಮಾಡಿದೆ.
ಆದ್ದರಿಂದ ಬಾಬಿಲೋನನ್ನು ಶಿಕ್ಷಿಸಬೇಕು.
30 ಬಾಬಿಲೋನಿನ ತರುಣರನ್ನು ಬೀದಿಗಳಲ್ಲಿ ಕೊಲ್ಲಲಾಗುವುದು.
ಅದರ ಎಲ್ಲಾ ಸೈನಿಕರು ಅಂದು ಸಾಯುವರು.”
ಯೆಹೋವನು ಹೀಗೆನ್ನುತ್ತಾನೆ:
31 “ಬಾಬಿಲೋನೇ, ನೀನು ತುಂಬಾ ದುರಹಂಕಾರಿ.
ನಾನು ನಿನಗೆ ವಿರುದ್ಧವಾಗಿದ್ದೇನೆ.”
ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ.
“ನಾನು ನಿನಗೆ ವಿರುದ್ಧವಾಗಿದ್ದೇನೆ.
ನಿನ್ನನ್ನು ದಂಡಿಸುವ ಸಮಯ ಬಂದಿದೆ.
32 ದುರಹಂಕಾರಿಯಾದ ಬಾಬಿಲೋನ್ ಎಡವಿಬೀಳುವುದು.
ಅದನ್ನು ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಅದರ ಪಟ್ಟಣಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು.
ಆ ಬೆಂಕಿಯು ಅದರ ಸುತ್ತಮುತ್ತಲಿನ ಎಲ್ಲರನ್ನೂ ಸುಟ್ಟುಬಿಡುವದು.”
33 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಇಸ್ರೇಲಿನ ಮತ್ತು ಯೆಹೂದದ ಜನರು ಗುಲಾಮರಾಗಿದ್ದಾರೆ.
ವೈರಿಯು ಅವರನ್ನು ಹಿಡಿದುಕೊಂಡಿದ್ದಾನೆ.
ಆ ವೈರಿಯು ಇಸ್ರೇಲರನ್ನು ಹೋಗಬಿಡುವದಿಲ್ಲ.
34 ಆದರೆ ದೇವರು ಅವರನ್ನು ಹಿಂದಕ್ಕೆ ಕರೆತರುವನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
ಆತನು ಆ ಜನರನ್ನು ನಿಶ್ಚಯವಾಗಿ ಕಾಪಾಡುವನು.
ಭೂಮಿಗೆ ವಿಶ್ರಾಂತಿಯನ್ನು ಕೊಡುವ ಉದ್ದೇಶದಿಂದ ಆತನು ಅವರನ್ನು ಕಾಪಾಡುವನು.
ಆದರೆ ಬಾಬಿಲೋನಿನಲ್ಲಿ ವಾಸಿಸುವ ಜನರಿಗೆ ಆತನು ವಿಶ್ರಾಂತಿಯನ್ನು ಕೊಡುವದಿಲ್ಲ.”
35 ಯೆಹೋವನು ಹೀಗೆನ್ನುತ್ತಾನೆ:
“ಖಡ್ಗವೇ, ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾಶಮಾಡು!
ಖಡ್ಗವೇ, ಬಾಬಿಲೋನಿನ ಸಾಮಾನ್ಯ ಜನರನ್ನು,
ಅಧಿಕಾರಿಗಳನ್ನು ಮತ್ತು ಪಂಡಿತರನ್ನು ಕೊಂದುಹಾಕು!
36 ಖಡ್ಗವೇ, ಬಾಬಿಲೋನಿನ ಯಾಜಕರನ್ನೂ ಸುಳ್ಳುಪ್ರವಾದಿಗಳನ್ನೂ ಕೊಲ್ಲು!
ಅವರು ಮೂರ್ಖರಂತಾಗುವರು.
ಖಡ್ಗವೇ, ಬಾಬಿಲೋನಿನ ಸೈನಿಕರನ್ನು ಕೊಲ್ಲು,
ಆ ಸೈನಿಕರು ಭಯಭೀತರಾಗಿರುವರು.
37 ಖಡ್ಗವೇ, ಬಾಬಿಲೋನಿನ ಕುದುರೆಗಳನ್ನು ಮತ್ತು ರಥಗಳನ್ನು ಧ್ವಂಸಮಾಡು!
ಖಡ್ಗವೇ, ಪರದೇಶಗಳಿಂದ ಕರೆಸಿದ ಸೈನಿಕರನ್ನು ಕೊಂದುಹಾಕು!
ಆ ಸೈನಿಕರು ಹೆದರಿದ ಹೆಂಗಸರಂತಾಗಿರುವರು.
ಖಡ್ಗವೇ, ಬಾಬಿಲೋನಿನ ಭಂಡಾರಗಳನ್ನು ನಾಶಮಾಡು!
ಆ ಐಶ್ವರ್ಯವು ಸೂರೆಗೊಳ್ಳುವುದು.
38 ಬಾಬಿಲೋನಿನ ನೀರಿನ ಮೇಲೆ ಒಂದು ಖಡ್ಗ ಬೀಳಲಿ.
ಆ ನೀರು ಬತ್ತಿಹೋಗುವದು.
ಬಾಬಿಲೋನ್ ದೇಶದಲ್ಲಿ ಅನೇಕಾನೇಕ ವಿಗ್ರಹಗಳಿವೆ.
ಬಾಬಿಲೋನಿನ ಜನರು ಮೂರ್ಖರೆಂಬುದನ್ನು ಆ ವಿಗ್ರಹಗಳು ತೋರಿಸುತ್ತವೆ.
ಆ ಜನರಿಗೆ ದುರ್ಗತಿ ಬರುತ್ತದೆ.
39 ಬಾಬಿಲೋನಿನಲ್ಲಿ ಪುನಃ ಜನರು ವಾಸಿಸುವದಿಲ್ಲ.
ಕಾಡುನಾಯಿ, ಉಷ್ಟ್ರಪಕ್ಷಿ ಮತ್ತು ಇನ್ನುಳಿದ ಮರುಭೂಮಿಯ ಪ್ರಾಣಿಗಳು ಅಲ್ಲಿ ವಾಸಿಸುವವು.
ಆದರೆ ಎಂದೆಂದಿಗೂ ಅಲ್ಲಿ ಮಾನವರು ವಾಸಿಸುವದಿಲ್ಲ.
40 ದೇವರು ಸೊದೋಮ್ ಗೊಮೋರ ನಗರಗಳನ್ನೂ
ಅವುಗಳ ಸುತ್ತಮುತ್ತಲಿನ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದನು.
ಈಗ ಅಲ್ಲಿ ಯಾರೂ ವಾಸಿಸುವದಿಲ್ಲ.
ಅದೇ ರೀತಿ ಬಾಬಿಲೋನಿನಲ್ಲಿ ಯಾರೂ ವಾಸಮಾಡುವದಿಲ್ಲ.
ವಾಸಮಾಡಲು ಅಲ್ಲಿಗೆ ಯಾರೂ ಹೋಗುವದಿಲ್ಲ.”
41 “ಇಗೋ, ಉತ್ತರದಿಂದ ಜನರು ಬರುತ್ತಿದ್ದಾರೆ.
ಅವರು ಒಂದು ಪ್ರಬಲ ರಾಷ್ಟ್ರದಿಂದ ಬರುತ್ತಿದ್ದಾರೆ.
ಇಡೀ ಜಗತ್ತಿನ ಹಲವಾರು ರಾಜರುಗಳು ಒಟ್ಟುಗೂಡಿ ಬರುತ್ತಿದ್ದಾರೆ.
42 ಅವರ ಸೈನಿಕರ ಹತ್ತಿರ ಬಿಲ್ಲುಗಳು ಮತ್ತು ಭರ್ಜಿಗಳು ಇವೆ.
ಆ ಸೈನಿಕರು ಕ್ರೂರಿಗಳಾಗಿದ್ದಾರೆ. ಅವರಿಗೆ ದಯೆದಾಕ್ಷಿಣ್ಯ ಇಲ್ಲ.
ಆ ಸೈನಿಕರು ತಮ್ಮ ಕುದುರೆಗಳ ಮೇಲೆ ಬರುತ್ತಿದ್ದಾರೆ.
ಅವರ ಧ್ವನಿ ಆರ್ಭಟಿಸುವ ಸಮುದ್ರದಂತಿದೆ.
ಅವರು ಯುದ್ಧಕ್ಕೆ ಸಿದ್ಧರಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದಾರೆ.
ಬಾಬಿಲೋನ್ ನಗರವೇ, ಅವರು ನಿನ್ನ ಮೇಲೆ ಧಾಳಿಮಾಡಲು ಸಿದ್ಧರಾಗಿದ್ದಾರೆ.
43 ಬಾಬಿಲೋನಿನ ರಾಜನು ಆ ಸೈನ್ಯಗಳ ಬಗ್ಗೆ
ಕೇಳಿ ಬಹಳ ಗಾಬರಿಗೊಂಡನು;
ಹೆದರಿಕೆಯಿಂದ ಅವನ ಕೈಗಳು ಚಲಿಸದಂತಾಗಿವೆ.
ಪ್ರಸವವೇದನೆಯಂತೆ ಅವನಿಗೆ ವೇದನೆಯಾಗಿದೆ.”
44 ಯೆಹೋವನು ಹೀಗೆನ್ನುತ್ತಾನೆ:
“ಜೋರ್ಡನ್ ನದಿಯ ಸಮೀಪದ ದಟ್ಟವಾದ ಅರಣ್ಯದಿಂದ
ಒಮ್ಮೆ ಒಂದು ಸಿಂಹವು ಬರುವುದು.
ಆ ಸಿಂಹವು ಜನರ ಸಾಕುಪ್ರಾಣಿಗಳಿದ್ದ ಹೊಲಗಳಿಗೆ ನುಗ್ಗುವುದು.
ಆ ಪ್ರಾಣಿಗಳೆಲ್ಲ ಓಡಿಹೋಗುವವು.
ನಾನು ಆ ಸಿಂಹದಂತಾಗುವೆನು.
ನಾನು ಬಾಬಿಲೋನನ್ನು ಅದರ ಪ್ರದೇಶದಿಂದ ಓಡಿಸಿಬಿಡುವೆನು.
ಈ ಕಾರ್ಯ ಮಾಡಲು ನಾನು ಯಾರನ್ನು ಆರಿಸಲಿ?
ನನ್ನತೆ ಯಾರೂ ಇಲ್ಲ. ನನ್ನನ್ನು ಪ್ರತಿಭಟಿಸುವವರು ಯಾರೂ ಇಲ್ಲ.
ಆದ್ದರಿಂದ ನಾನೇ ಅದನ್ನು ಮಾಡುತ್ತೇನೆ.
ನನ್ನನ್ನು ಓಡಿಸಲು ಯಾವ ಕುರುಬನೂ ಬರಲಾರನು.
ನಾನು ಬಾಬಿಲೋನಿನ ಜನರನ್ನು ಓಡಿಸಿಬಿಡುವೆನು.”
45 ಯೆಹೋವನು ಬಾಬಿಲೋನಿನ ವಿರುದ್ಧ
ಮಾಡಬೇಕೆಂದಿರುವುದನ್ನು ಕೇಳಿರಿ.
“ಬಾಬಿಲೋನಿನ ಜನರ ವಿರುದ್ಧ
ಯೆಹೋವನು ನಿಶ್ಚಯಿಸಿರುವುದನ್ನು ಕೇಳಿರಿ.
ಶತ್ರುವು ಬಾಬಿಲೋನಿನ ಕುರಿಮರಿಗಳನ್ನು (ಜನರನ್ನು) ಕೊಂಡೊಯ್ಯುವನು.
ಬಾಬಿಲೋನಿನ ಹುಲ್ಲುಗಾವಲುಗಳು ಸಂಭವಿಸಿದ ನಾಶನಕ್ಕೆ ಬೆದರುವವು.
46 ಬಾಬಿಲೋನ್ ಪತನವಾಗುವುದು.
ಆ ಪತನವು ಭೂಮಂಡಲವನ್ನು ಅಲುಗಾಡಿಸುವುದು.
ಎಲ್ಲಾ ಜನಾಂಗಗಳ ಜನರು
ಬಾಬಿಲೋನಿನ ವಿನಾಶದ ವಿಷಯವನ್ನು ಕೇಳುವರು.”
ರಚನೆಗಾರ: ದಾವೀದ.
28 ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
ಜನರು ನನ್ನನ್ನು ಪರಿಗಣಿಸುವರು.
2 ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
3 ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
4 ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
5 ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
6 ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
7 ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
8 ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
ರಚನೆಗಾರ: ದಾವೀದ.
29 ದೇವಪುತ್ರರೇ,[b] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[c]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
Kannada Holy Bible: Easy-to-Read Version. All rights reserved. © 1997 Bible League International