Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 12

ಸಮುವೇಲನು ಇಸ್ರೇಲರಿಗೆ ರಾಜನ ಕುರಿತು ಹೇಳಿದ ಮಾತುಗಳು

12 ಸಮುವೇಲನು ಇಸ್ರೇಲರೆಲ್ಲರಿಗೆ, “ನೀವು ನನ್ನಿಂದ ಅಪೇಕ್ಷಿಸಿದ ಎಲ್ಲವನ್ನೂ ನಾನು ಮಾಡಿರುತ್ತೇನೆ. ನಾನು ನಿಮಗಾಗಿ ಒಬ್ಬ ರಾಜನನ್ನು ನೇಮಿಸಿದ್ದೇನೆ. ಈಗ ನಿಮ್ಮನ್ನು ಮುನ್ನಡೆಸಲು ಒಬ್ಬ ರಾಜನಿದ್ದಾನೆ. ನಾನು ಮುದುಕನಾಗಿರುವೆ ಮತ್ತು ನನ್ನ ತಲೆ ನರೆತುಹೋಗಿದೆ. ನನ್ನ ಗಂಡುಮಕ್ಕಳು ನಿಮ್ಮೊಂದಿಗಿದ್ದಾರೆ. ನಾನು ಚಿಕ್ಕಂದಿನಿಂದಲೇ ನಿಮ್ಮ ನಾಯಕನಾಗಿದ್ದೆ. ನಾನು ಇಲ್ಲಿದ್ದೇನೆ. ನಾನು ಯಾವ ತಪ್ಪುಗಳನ್ನಾದರೂ ಮಾಡಿದ್ದರೆ, ನೀವು ಯೆಹೋವನಿಗೆ ಮತ್ತು ಆತನು ಆರಿಸಿರುವ ರಾಜನಿಗೆ ಅವುಗಳನ್ನು ಹೇಳಲೇಬೇಕು. ನಾನು ಬೇರೊಬ್ಬರ ಹಸುವನ್ನಾಗಲಿ ಕತ್ತೆಯನ್ನಾಗಲಿ ಕದ್ದಿರುವೆನೇ? ನಾನು ಯಾರನ್ನಾದರೂ ನೋಯಿಸಿರುವೆನೇ? ವಂಚಿಸಿರುವೆನೇ? ನಾನು ತಪ್ಪುಮಾಡಲು ಯಾರಿಂದಲಾದರೂ ಹಣವನ್ನಾಗಲೀ ಪಾದರಕ್ಷೆಗಳನ್ನಾಗಲೀ ತೆಗೆದುಕೊಂಡಿರುವೆನೇ? ನಾನು ಈ ಕಾರ್ಯಗಳನ್ನು ಮಾಡಿರುವುದಾದರೆ ತಿಳಿಸಿ, ಅವುಗಳನ್ನು ಸರಿಪಡಿಸುತ್ತೇನೆ” ಎಂದು ಹೇಳಿದನು.

ಇಸ್ರೇಲರು, “ಇಲ್ಲ, ನೀನು ನಮಗೆ ಕೆಟ್ಟದ್ದೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಎಂದೂ ವಂಚಿಸಿಲ್ಲ; ನಮ್ಮಿಂದ ಏನನ್ನೂ ತೆಗೆದುಕೊಂಡಿಲ್ಲ” ಎಂದು ಉತ್ತರಿಸಿದರು.

ಸಮುವೇಲನು ಇಸ್ರೇಲರಿಗೆ, “ನಿಮ್ಮ ಮಾತುಗಳಿಗೆಲ್ಲ ಯೆಹೋವನೇ ಸಾಕ್ಷಿ. ಯೆಹೋವನಿಂದ ಆಯ್ಕೆಯಾದ ರಾಜನೂ ಈ ದಿನ ಸಾಕ್ಷಿಯಾಗಿದ್ದಾನೆ. ನೀವು ನನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲವೆನ್ನುವುದಕ್ಕೆ ಈ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದನು. ಜನರು, “ಹೌದು, ಯೆಹೋವನೇ ಸಾಕ್ಷಿ” ಎಂದು ಉತ್ತರಿಸಿದರು.

ಆಗ ಸಮುವೇಲನು ಜನರಿಗೆ, “ಯೆಹೋವನೇ ಸಾಕ್ಷಿ. ಯೆಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಆತನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಇಲ್ಲಿ ನಿಂತುಕೊಂಡು ಕೇಳಿರಿ. ಯೆಹೋವನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತಿಳಿಸುತ್ತೇನೆ.

“ಯಾಕೋಬನು ಈಜಿಪ್ಟಿಗೆ ಹೋದನು. ತರುವಾಯ, ಈಜಿಪ್ಟಿನವರು ಅವನ ವಂಶದವರಿಗೆ ಜೀವನವನ್ನು ಕಠಿಣಗೊಳಿಸಿದರು. ಆದ್ದರಿಂದ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯೆಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದು ಇಲ್ಲಿ ನೆಲೆಗೊಳಿಸಿದರು.

“ಆದರೆ ನಿಮ್ಮ ಪೂರ್ವಿಕರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟದ್ದರಿಂದ ಆತನು ಅವರನ್ನು ಸೀಸೆರನ ಗುಲಾಮರಾಗಲು ಬಿಟ್ಟುಬಿಟ್ಟನು. ಸೀಸೆರನು ಹಾಚೋರಿನ ಸೈನ್ಯಾಧಿಪತಿ. ನಂತರ ಯೆಹೋವನು ಅವರನ್ನು ಫಿಲಿಷ್ಟಿಯರ ಮತ್ತು ಮೋವಾಬ್ ರಾಜನ ಗುಲಾಮರಾಗುವಂತೆ ಬಿಟ್ಟುಬಿಟ್ಟನು. ಅವರೆಲ್ಲರು ನಿಮ್ಮ ವಂಶದವರ ವಿರುದ್ಧ ಹೋರಾಡಿದರು. 10 ಆದರೆ ನಿಮ್ಮ ಪೂರ್ವಿಕರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟು, ‘ನಾವು ಯೆಹೋವನಾದ ನಿನ್ನನ್ನು ಬಿಟ್ಟು ಸುಳ್ಳುದೇವರಾದ ಬಾಳನ ಮತ್ತು ಸುಳ್ಳುದೇವತೆಯಾದ ಅಷ್ಟೋರೆತಳ ಸೇವೆ ಮಾಡಿ ಪಾಪಮಾಡಿದ್ದೇವೆ. ಆದರೆ ಈಗ ನಮ್ಮನ್ನು ಶತ್ರುಗಳಿಂದ ರಕ್ಷಿಸು; ಆಗ ನಾವು ನಿನ್ನ ಸೇವೆಮಾಡುತ್ತೇವೆ’ ಎಂದು ಹೇಳಿದರು.

11 “ಆದ್ದರಿಂದ ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ ಮತ್ತು ಸಮುವೇಲ ಎಂಬವರನ್ನು ಕಳುಹಿಸಿದನು. ನಿಮ್ಮನ್ನು ಸುತ್ತುವರಿದಿದ್ದ ಶತ್ರುಗಳಿಂದ ಯೆಹೋವನು ರಕ್ಷಿಸಿದನು. ನೀವು ಸುರಕ್ಷಿತವಾಗಿ ವಾಸಿಸಿದಿರಿ. 12 ಆದರೆ ಅಮ್ಮೋನಿಯರ ರಾಜನಾದ ನಾಹಾಷನು ನಿಮ್ಮ ವಿರುದ್ಧ ಹೋರಾಡಲು ಬರುತ್ತಿರುವುದನ್ನು ಕಂಡು ನೀವು, ‘ನಮ್ಮನ್ನಾಳಲು ನಮಗೆ ಒಬ್ಬ ರಾಜ ಬೇಕು’ ಎಂದು ಕೇಳಿದಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ರಾಜನಾಗಿದ್ದರೂ ನೀವು ಹೀಗೆ ಕೇಳಿದಿರಿ. 13 ಇಗೋ, ನೀವು ಆಸೆಪಟ್ಟು ಆರಿಸಿದ ರಾಜನು ಇಲ್ಲಿರುವನು. ಯೆಹೋವನು ಈ ರಾಜನನ್ನು ನಿಮಗೆ ನೇಮಿಸಿದ್ದಾನೆ. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ನಿರಂತರವಾಗಿ ರಕ್ಷಿಸುತ್ತಾನೆ. ಆದರೆ ನೀವು ಈ ಕಾರ್ಯಗಳನ್ನು ಮಾಡಿದರೆ ಮಾತ್ರ ದೇವರು ನಿಮ್ಮನ್ನು ರಕ್ಷಿಸುತ್ತಾನೆ: ನೀವು ಯೆಹೋವನನ್ನು ಗೌರವಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನ ಆಜ್ಞೆಗಳನ್ನು ವಿರೋಧಿಸಬಾರದು. ನಿಮ್ಮ ದೇವರಾದ ಯೆಹೋವನ ಮಾರ್ಗವನ್ನು ನೀವು ಮತ್ತು ನಿಮ್ಮನ್ನು ಆಳುವ ರಾಜನು ಅನುಸರಿಸಬೇಕು. ನೀವು ಈ ಕಾರ್ಯಗಳನ್ನು ಮಾಡಿದಾಗ ದೇವರು ನಿಮ್ಮನ್ನು ರಕ್ಷಿಸುತ್ತಾನೆ. 15 ಆದರೆ ನೀವು ಯೆಹೋವನಿಗೆ ವಿಧೇಯರಾಗಿ ನಡೆಯದಿದ್ದರೆ ಮತ್ತು ಆತನ ಆಜ್ಞೆಗಳನ್ನು ವಿರೋಧಿಸಿದರೆ, ಆತನು ನಿಮ್ಮ ಪೂರ್ವಿಕರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವನು.

16 “ಈಗ ಯೆಹೋವನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಮಹತ್ಕಾರ್ಯಗಳನ್ನು ನೋಡುವುದಕ್ಕಾಗಿ ಅಲುಗಾಡದೆ ನಿಂತುಕೊಳ್ಳಿ. 17 ಈಗ ಗೋಧಿಯ ಸುಗ್ಗಿಕಾಲ. ನಾನು ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ. ಆತನು ಗುಡುಗನ್ನು ಮತ್ತು ಮಳೆಯನ್ನು ಕಳುಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. ರಾಜನು ಬೇಕೆಂದು ನೀವು ಕೇಳಿದ್ದು ಯೆಹೋವನಿಗೆ ವಿರುದ್ಧವಾಗಿ ನೀವು ಮಾಡಿದ ಎಂತಹ ಕೆಟ್ಟಕಾರ್ಯವಾಗಿದೆ ಎಂಬದನ್ನು ನಿಮಗೇ ತಿಳಿಯುತ್ತದೆ” ಎಂದು ಹೇಳಿದನು.

18 ಸಮುವೇಲನು ಯೆಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯೆಹೋವನು ಗುಡುಗು ಮತ್ತು ಮಳೆಗಳನ್ನು ಕಳುಹಿಸಿದನು. ಜನರು ಯೆಹೋವನ ಬಗ್ಗೆ ಮತ್ತು ಸಮುವೇಲನ ಬಗ್ಗೆ ಬಹಳ ಭಯಗೊಂಡರು. 19 ಜನರೆಲ್ಲಾ ಸಮುವೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯೆಹೋವನಲ್ಲಿ ಪ್ರಾರ್ಥಿಸು. ನಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲ ಪಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು ಕೇಳಿಕೊಂಡಿದ್ದು ನಮ್ಮ ಪಾಪಗಳೊಂದಿಗೆ ಮತ್ತೊಂದು ಪಾಪವನ್ನು ಮಾಡಿದಂತಾಯಿತು” ಎಂದು ಹೇಳಿದರು.

20 ಸಮುವೇಲನು, “ಭಯಪಡಬೇಡಿ. ಅದೇನೋ ನಿಜ. ನೀವು ಆ ಕೆಟ್ಟಕಾರ್ಯಗಳನ್ನೆಲ್ಲಾ ಮಾಡಿದಿರಿ. ಆದರೆ ಯೆಹೋವನ ಮಾರ್ಗದಲ್ಲಿ ನಡೆಯುವುದನ್ನು ನಿಲ್ಲಿಸದಿರಿ. ಯೆಹೋವನ ಸೇವೆಯನ್ನು ಪೂರ್ಣಹೃದಯದಿಂದ ಮಾಡಿರಿ. 21 ವಿಗ್ರಹಗಳು ಕೇವಲ ಪ್ರತಿಮೆಗಳಷ್ಟೇ. ಅವು ನಿಮಗೆ ಸಹಾಯ ಮಾಡಲಾರವು. ಆದ್ದರಿಂದ ಅವುಗಳನ್ನು ಪೂಜಿಸಬೇಡಿ. ವಿಗ್ರಹಗಳು ನಿಮಗೆ ಸಹಾಯ ಮಾಡಲಾರವು ಮತ್ತು ರಕ್ಷಿಸಲಾರವು. ಅವುಗಳಿಂದ ಪ್ರಯೋಜನವೇನೂ ಇಲ್ಲ.

22 “ಆದರೆ ಯೆಹೋವನು ತನ್ನ ಜನರನ್ನು ಕೈಬಿಡುವುದಿಲ್ಲ. ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನರನ್ನಾಗಿ ಮಾಡಿಕೊಳ್ಳಲು ಇಷ್ಟಪಟ್ಟನು. ಆದ್ದರಿಂದ ಆತನು ತನ್ನ ಮಹಾ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ತ್ಯಜಿಸುವುದಿಲ್ಲ. 23 ನಾನು ನಿಮಗಾಗಿ ಪ್ರಾರ್ಥಿಸದಿದ್ದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವನಾಗುತ್ತೇನೆ. ನಾನು ನಿಮಗೆ ಒಳ್ಳೆಯದೂ ಯೋಗ್ಯವೂ ಆಗಿರುವ ಮಾರ್ಗವನ್ನು ಉಪದೇಶಿಸುತ್ತೇನೆ. 24 ಆದರೆ ನೀವು ಯೆಹೋವನನ್ನು ಗೌರವಿಸಬೇಕು. ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವನ ಸೇವೆಯನ್ನು ನಿಜವಾಗಿಯೂ ಮಾಡಬೇಕು. ಆತನು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೆನಸಿಕೊಳ್ಳಿರಿ. 25 ಆದರೆ ನೀವು ಮೊಂಡರಾಗಿ ಕೆಟ್ಟಕಾರ್ಯಗಳನ್ನು ಮಾಡಿದ್ದಾದರೆ ಯೆಹೋವನು ನಿಮ್ಮನ್ನು ಮತ್ತು ನಿಮ್ಮ ರಾಜನನ್ನು ನಾಶಪಡಿಸುತ್ತಾನೆ” ಎಂದು ಹೇಳಿದನು.

ರೋಮ್ನಗರದವರಿಗೆ 10

10 ಸಹೋದರ ಸಹೋದರಿಯರೇ, ಇಸ್ರೇಲರೆಲ್ಲರೂ ರಕ್ಷಣೆ ಹೊಂದಬೇಕೆಂಬುದೇ ನನ್ನ ಮಹಾಭಿಲಾಷೆ. ನಾನು ದೇವರಲ್ಲಿ ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ನಾನು ಯೆಹೂದ್ಯರ ಬಗ್ಗೆ ಹೀಗೆ ಹೇಳಬಲ್ಲೆನು: ಅವರು ದೇವರನ್ನು ಹಿಂಬಾಲಿಸಲು ನಿಜವಾಗಿಯೂ ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿಲ್ಲ. ನೀತಿವಂತರನ್ನಾಗಿ ಮಾಡುವ ದೇವರ ಮಾರ್ಗವನ್ನು ಅವರು ತಿಳಿದಿಲ್ಲದ ಕಾರಣ ತಮ್ಮ ಸ್ವಂತ ಮಾರ್ಗದ ಮೂಲಕವಾಗಿ ತಮ್ಮನ್ನು ನೀತಿವಂತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು. ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನೀತಿನಿರ್ಣಯ ಹೊಂದಬೇಕೆಂದು ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.

ಧರ್ಮಶಾಸ್ತ್ರದಿಂದಾಗುವ ನೀತಿಯ ಬಗ್ಗೆ, “ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಜೀವವನ್ನು ಪಡೆದುಕೊಳ್ಳಲು ಬಯಸುವವನು, ಧರ್ಮಶಾಸ್ತವು ಹೇಳುವ ಕಾರ್ಯಗಳನ್ನು ಮಾಡಲೇಬೇಕು”(A) ಎಂದು ಮೋಶೆ ಹೇಳಿದ್ದಾನೆ. ಆದರೆ ನಂಬಿಕೆಯ ಮೂಲಕ ನೀತಿನಿರ್ಣಯ ಹೊಂದುವುದರ ಬಗ್ಗೆ, “(ಕ್ರಿಸ್ತನನ್ನು ಕೆಳಕ್ಕೆ ಕರೆದುಕೊಂಡು ಬರಲು) ‘ಯಾರು ಪರಲೋಕಕ್ಕೆ ಏರಿಹೋಗಬಲ್ಲರು?’” ಎಂದಾಗಲಿ (ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು.) “‘ಯಾರು ಪಾತಾಳಕ್ಕೆ ಇಳಿದುಹೋಗಬಲ್ಲರು’ ಎಂದಾಗಲಿ ಹೇಳಬೇಡಿ” ಎಂದು ಪವಿತ್ರ ಗ್ರಂಥವು ಹೇಳುತ್ತದೆ.

ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು. “ಯೇಸುವೇ ಪ್ರಭು”ವೆಂದು ನಿನ್ನ ಬಾಯಿಯ ಮೂಲಕ ಹೇಳುವುದಾದರೆ ಮತ್ತು ಯೇಸುವನ್ನು ಸತ್ತವರೊಳಗಿಂದ ಜೀವಂತನಾಗಿ ಎಬ್ಬಿಸಿದವನು ದೇವರೇ ಎಂದು ನಿನ್ನ ಹೃದಯದಲ್ಲಿ ನಂಬುವುದಾದರೆ, ನೀನು ರಕ್ಷಣೆ ಹೊಂದುವೆ. 10 ಹೌದು, ನಾವು ನಮ್ಮ ಹೃದಯಗಳಲ್ಲಿ ನಂಬುವುದರ ಮೂಲಕ ನೀತಿವಂತರಾಗುತ್ತೇವೆ. “ನಂಬುತ್ತೇವೆ” ಎಂದು ಬಾಯಾರೆ ಹೇಳುವುದರ ಮೂಲಕ ರಕ್ಷಣೆ ಹೊಂದುತ್ತೇವೆ.

11 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ.”(B) 12 ಏಕೆಂದರೆ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಒಬ್ಬನೇ ಪ್ರಭು. ತನ್ನಲ್ಲಿ ನಂಬಿಕೆಯಿಡುವ ಜನರೆಲ್ಲರಿಗೆ ಪ್ರಭುವು ಅನೇಕ ಆಶೀರ್ವಾದಗಳನ್ನು ಕೊಡುತ್ತಾನೆ. 13 ಹೌದು, ಪವಿತ್ರ ಗ್ರಂಥವು ಹೇಳುವಂತೆ, “ಪ್ರಭುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ರಕ್ಷಣೆ ಹೊಂದುವನು.”(C)

14 ಪ್ರಭುವಿನಲ್ಲಿ ನಂಬಿಕೆಯಿಲ್ಲದೆ ಆತನಲ್ಲಿ ಭರವಸೆವಿಡುವುದಾದರೂ ಹೇಗೆ? ಪ್ರಭುವಿನ ವಿಷಯವನ್ನು ಕೇಳದೆ ಆತನಲ್ಲಿ ನಂಬಿಕೆ ಇಡುವುದಾದರೂ ಹೇಗೆ? ಮತ್ತೊಬ್ಬನು ತಿಳಿಸದ ಹೊರತು ಪ್ರಭುವಿನ ಬಗ್ಗೆ ಕೇಳುವುದಾದರೂ ಹೇಗೆ? 15 ಬೋಧಕರನ್ನು ಕಳುಹಿಸದ ಹೊರತು ಜನರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದಲೇ, “ಸುವಾರ್ತಿಕರ ಪಾದಗಳು ಸುಂದರವಾಗಿವೆ”(D) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

16 ಆದರೆ ಯೆಹೂದ್ಯರೆಲ್ಲರೂ ಆ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. “ಪ್ರಭುವೇ, ನಾವು ಅವರಿಗೆ ಹೇಳಿದ ಸಂಗತಿಗಳನ್ನು ಯಾರು ನಂಬಿದರು?”(E) ಎಂದು ಯೆಶಾಯ ಹೇಳಿದ್ದಾನೆ. 17 ಹೀಗಿರಲು, ಸುವಾರ್ತೆಯನ್ನು ಕೇಳುವುದರ ಮೂಲಕ ನಂಬಿಕೆ ಬರುತ್ತದೆ. ಕ್ರಿಸ್ತನ ಬಗ್ಗೆ ಹೇಳುವುದರ ಮೂಲಕ ಸುವಾರ್ತೆ ಪ್ರಕಟವಾಗುತ್ತದೆ.

18 ಆದರೆ, “ಜನರು ಸುವಾರ್ತೆಯನ್ನು ಕೇಳಲಿಲ್ಲವೇ?” ಎಂದು ನಾನು ಪ್ರಶ್ನಿಸುತ್ತೇನೆ. ಹೌದು, ಅವರು ಕೇಳಿದರು ಪವಿತ್ರ ಗ್ರಂಥ ಹೇಳುವಂತೆ:

“ಅವರ ಸ್ವರಗಳು ಲೋಕದಲ್ಲೆಲ್ಲಾ ಪ್ರಸಾರಗೊಂಡವು.
    ಅವರ ಮಾತುಗಳು ಪ್ರಪಂಚದ ಎಲ್ಲಾ ಕಡೆಗಳಿಗೂ ಹೋದವು.”(F)

19 “ಇಸ್ರೇಲಿನ ಜನರು ಅರ್ಥಮಾಡಿಕೊಳ್ಳಲಿಲ್ಲವೇ?” ಎಂದು ನಾನು ಮತ್ತೆ ಕೇಳುತ್ತೇನೆ. ಹೌದು, ಅವರು ಅರ್ಥಮಾಡಿಕೊಂಡರು. ಮೊದಲನೆಯದಾಗಿ, ದೇವರು ಮೋಶೆಯ ಮೂಲಕ ಹೀಗೆ ತಿಳಿಸಿದ್ದಾನೆ:

“ಜನಾಂಗವೆನಿಸಿಕೊಳ್ಳದವರ ಮೂಲಕ ಹೀಗೆ ನಾನು ನಿಮ್ಮಲ್ಲಿ ಅಸೂಯೆ ಹುಟ್ಟಿಸುವೆನು.
    ಬುದ್ದಿಹೀನರೆನಿಸಿಕೊಂಡ ಜನಾಂಗದ ಮೂಲಕ ನಾನು ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು.”(G)

20 ಬಳಿಕ ಯೆಶಾಯನು ದೇವರ ಈ ನುಡಿಯನ್ನು ಧೈರ್ಯವಾಗಿ ಹೇಳಿದ್ದಾನೆ:

“ನನ್ನನ್ನು ಹುಡುಕದೆ ಇದ್ದ ಜನರು
    ನನ್ನನ್ನು ಕಂಡುಕೊಂಡರು.
ನನಗಾಗಿ ಕೇಳಿಕೊಳ್ಳದ ಜನರಿಗೆ ನನ್ನನ್ನು ತೋರ್ಪಡಿಸಿಕೊಂಡೆನು.”(H)

21 ಆದರೆ ಇಸ್ರೇಲಿನ ಜನರ ಬಗ್ಗೆ ದೇವರು:

“ನಾನು ಆ ಜನರಿಗಾಗಿ ದಿನವೆಲ್ಲಾ ಕಾದುಕೊಂಡಿದ್ದೆನು,
    ಆದರೆ ಅವರು ವಿಧೇಯರಾಗಲಿಲ್ಲ; ನನ್ನನ್ನು ಹಿಂಬಾಲಿಸಲಿಲ್ಲ” ಎನ್ನುತ್ತಾನೆ.(I)

ಯೆರೆಮೀಯ 49

ಅಮ್ಮೋನಿನ ಬಗ್ಗೆ ಸಂದೇಶ

49 ಈ ಸಂದೇಶ ಅಮ್ಮೋನ್ಯರನ್ನು ಕುರಿತದ್ದು. ಯೆಹೋವನು ಹೀಗೆ ಹೇಳಿದನು:

“ಅಮ್ಮೋನ್ಯರೇ, ಇಸ್ರೇಲಿನ ಜನರಿಗೆ ಮಕ್ಕಳಿಲ್ಲವೆಂದು
    ನೀವು ತಿಳಿದುಕೊಂಡಿರುವಿರೇನು?
ತಂದೆತಾಯಿಗಳು ಸತ್ತಮೇಲೆ ಭೂಮಿಯನ್ನು ತೆಗೆದುಕೊಳ್ಳುವದಕ್ಕೆ
    ಅವರ ವಾರಸುದಾರರು ಇಲ್ಲವೆಂದು ನೀವು ತಿಳಿದುಕೊಂಡಿರುವಿರೇನು?
ಅದಕ್ಕಾಗಿಯೇ ಮಲ್ಕಾಮ್ ದೇವತೆಯು ಗಾದನ ಸೀಮೆಯನ್ನು ಸ್ವಾಧೀನ ಮಾಡಿಕೊಂಡಳೇ?”

ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು
    ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ.
ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು.
    ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು.
ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು.
    ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.”
ಯೆಹೋವನು ಹೀಗೆನ್ನುತ್ತಾನೆ:

“ಹೆಷ್ಬೋನಿನ ಜನರೇ, ಗೋಳಾಡಿರಿ;
    ಏಕೆಂದರೆ ಆಯಿ ಎಂಬ ಪಟ್ಟಣ ನಾಶವಾಯಿತು.
ರಬ್ಬಾದ ಸ್ತ್ರೀಯರೇ, ಅಮ್ಮೋನಿನ ಸ್ತ್ರೀಯರೇ, ಗೋಳಾಡಿರಿ.
    ದುಃಖಸೂಚಕ ವಸ್ತ್ರಗಳನ್ನು ಧರಿಸಿಕೊಂಡು ಗೋಳಾಡಿರಿ.
ರಕ್ಷಣೆಗಾಗಿ ನಗರಕ್ಕೆ ಓಡಿಹೋಗಿರಿ.
    ಏಕೆಂದರೆ ನಿಮ್ಮ ಶತ್ರುಗಳು ಬರುತ್ತಿದ್ದಾರೆ.
ಅವರು ಮಲ್ಕಾಮ್ ದೇವತೆಯನ್ನು ತೆಗೆದುಕೊಂಡು ಹೋಗುತ್ತಾರೆ.
    ಶತ್ರುಗಳು ಮಲ್ಕಾಮ್ ದೇವತೆಯ ಯಾಜಕರನ್ನೂ ಪ್ರಧಾನರನ್ನೂ ತೆಗೆದುಕೊಂಡು ಹೋಗುವರು.
ನೀನು ನಿನ್ನ ಬಲದ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿರುವೆ,
    ಆದರೆ ನೀನು ನಿನ್ನ ಬಲವನ್ನು ಕಳೆದುಕೊಳ್ಳುತ್ತಿರುವೆ.
ನಿನ್ನ ಹಣ ನಿನ್ನನ್ನು ರಕ್ಷಿಸುವದೆಂದು ನೀನು ನಂಬಿರುವೆ.
    ಯಾರೂ ನಿನ್ನ ಮೇಲೆ ಧಾಳಿಮಾಡುವ ವಿಚಾರ ಸಹ ಇಟ್ಟುಕೊಂಡಿಲ್ಲವೆಂದು ನೀನು ತಿಳಿದುಕೊಂಡಿರುವೆ.”
ಆದರೆ ಸರ್ವಶಕ್ತನಾದ ಯೆಹೋವನು ಹೀಗೆನ್ನುವನು,
“ನಾನು ಎಲ್ಲೆಡೆಗಳಿಂದಲೂ ನಿಮಗೆ ಆಪತ್ತುಗಳನ್ನು ತರುವೆನು.
ನೀವೆಲ್ಲರೂ ಭಯದಿಂದ ಓಡಿಹೋಗುವಿರಿ.
    ಯಾರೂ ನಿಮ್ಮನ್ನು ಪುನಃ ಒಂದಡೆ ಸೇರಿಸಲಾರರು.”

“ಅಮ್ಮೋನ್ಯರನ್ನು ಸೆರೆಯಾಳುಗಳನ್ನಾಗಿ ಕೊಂಡೊಯ್ಯಲಾಗುವುದು. ಆದರೆ ಅಮ್ಮೋನ್ಯರನ್ನು ನಾನು ಪುನಃ ಹಿಂದಕ್ಕೆ ಕರೆತರುವ ಕಾಲ ಬರುವದು.” ಇದು ಯೆಹೋವನ ನುಡಿ.

ಎದೋಮಿನ ಬಗ್ಗೆ ಸಂದೇಶ

ಈ ಸಂದೇಶ ಎದೋಮನ್ನು ಕುರಿತದ್ದು. ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:

“ತೇಮಾನ್ ಪಟ್ಟಣನಿವಾಸಿಗಳಲ್ಲಿ ಈಗ ಬುದ್ಧಿ ಉಳಿದಿಲ್ಲವೇ?
    ಎದೋಮಿನ ವಿವೇಕಿಗಳು ಒಳ್ಳೆಯ ಸಲಹೆಗಳನ್ನು ಕೊಡಲು ಸಮರ್ಥರಾಗಿಲ್ಲವೇ?
    ಅವರು ತಮ್ಮ ಜ್ಞಾನವನ್ನು ಕಳೆದುಕೊಂಡರೇ?
ದೆದಾನಿನ ನಿವಾಸಿಗಳೇ, ಓಡಿಹೋಗಿರಿ, ಅಡಗಿಕೊಳ್ಳಿರಿ;
    ಏಕೆಂದರೆ ಏಸಾವನು[a] ಮಾಡಿದ ತಪ್ಪಿಗಾಗಿ ನಾನು ಅವನನ್ನು ದಂಡಿಸುವೆನು.

“ಕೆಲಸಗಾರರು ನಿಮ್ಮ ದ್ರಾಕ್ಷಿತೋಟಕ್ಕೆ ಬಂದು ದ್ರಾಕ್ಷಿಯನ್ನು ಕೀಳುವರು;
    ಆದರೆ ಬಳ್ಳಿಯಲ್ಲಿ ಕೆಲವು ದ್ರಾಕ್ಷಿಗಳನ್ನು ಬಿಡುವರು;
ರಾತ್ರಿಯಲ್ಲಿ ಕಳ್ಳರು ಬಂದರೆ
    ಅವರು ತಮಗೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
10 ಆದರೆ ಏಸಾವನಿಂದ ನಾನು ಎಲ್ಲವನ್ನು ಕಿತ್ತುಕೊಳ್ಳುವೆನು.
    ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನ್ನು ನಾನು ಪತ್ತೆ ಹಚ್ಚುವೆನು.
ಅವನು ನನ್ನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.
    ಅವನ ಮಕ್ಕಳು, ಬಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.
11 ನಿನ್ನ ಅನಾಥಮಕ್ಕಳನ್ನು ನಾನು ಸಂರಕ್ಷಿಸುವೆನು.
    ನಿನ್ನ ವಿಧವೆಯರು ನನ್ನಲ್ಲಿ ಭರವಸೆ ಇಡಲಿ.”

12 ಯೆಹೋವನು ಹೀಗೆನ್ನುತ್ತಾನೆ: “ಕೆಲವು ಜನರು ದಂಡನೆಗೆ ಅರ್ಹರಾಗಿರುವದಿಲ್ಲ. ಆದರೂ ಅವರು ಕಷ್ಟ ಅನುಭವಿಸುವರು. ಎದೋಮೇ, ನೀನು ದಂಡನೆಗೆ ಯೋಗ್ಯಳಾಗಿರುವೆ. ಆದ್ದರಿಂದ ನಿಜವಾಗಿಯೂ ನಿನ್ನನ್ನು ದಂಡಿಸಲಾಗುವುದು. ನಿನಗೆ ಸಿಗಬೇಕಾದ ದಂಡನೆಯಿಂದ ನೀನು ತಪ್ಪಿಸಿಕೊಳ್ಳಲಾರೆ. ನಿನ್ನನ್ನು ದಂಡಿಸಲಾಗುವುದು.” 13 ಯೆಹೋವನು ಹೀಗೆನ್ನುತ್ತಾನೆ, “ನನ್ನ ಸ್ವಸಾಮರ್ಥ್ಯದಿಂದ ನಾನು ಈ ಪ್ರಮಾಣ ಮಾಡುವೆನು. ನಾನು ಆಣೆಯಿಟ್ಟು ಹೇಳುವೆನು. ಬೊಚ್ರ ನಗರವನ್ನು ನಾಶಮಾಡಲಾಗುವುದು. ಆ ನಗರ ಒಂದು ಹಾಳು ದಿಬ್ಬವಾಗುವುದು. ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಶಪಿಸುವಾಗ ಜನರು ‘ಬೊಚ್ರದಂತೆ ಹಾಳಾಗಲಿ’ ಎಂದು ಈ ನಗರದ ಉದಾಹರಣೆಯನ್ನು ಕೊಡುವರು. ಜನರು ಈ ನಗರವನ್ನು ಅವಮಾನ ಮಾಡುವರು. ಬೊಚ್ರ ನಗರದ ಸುತ್ತಮುತ್ತಲಿನ ಪಟ್ಟಣಗಳು ಶಾಶ್ವತವಾಗಿ ಹಾಳುಬೀಳುವವು.”

14 ಯೆಹೋವನ ಒಂದು ಸಂದೇಶವನ್ನು ಕೇಳಿದೆ.
    ಯೆಹೋವನು ಎಲ್ಲಾ ಜನಾಂಗಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದನು.
ಆ ಸಂದೇಶ ಹೀಗಿದೆ:
“ನಿಮ್ಮ ಸೈನ್ಯಗಳನ್ನು ಒಂದಡೆ ಸೇರಿಸಿರಿ.
    ಯುದ್ಧಕ್ಕೆ ಸಿದ್ಧರಾಗಿರಿ.
    ಎದೋಮ್ ಜನಾಂಗದ ವಿರುದ್ಧ ದಂಡಯಾತ್ರೆ ಮಾಡಿರಿ.
15 ಎದೋಮೇ, ನಾನು ನಿನಗೆ ಪ್ರಮುಖನಾಗಲು ಬಿಡುವುದಿಲ್ಲ.
    ಪ್ರತಿಯೊಬ್ಬರು ನಿನ್ನನ್ನು ದ್ವೇಷಿಸುವರು.
16 ಎದೋಮೇ, ನೀನು ಬೇರೆ ಜನಾಂಗಗಳನ್ನು ಹೆದರಿಸಿದೆ.
    ಆದ್ದರಿಂದ ನೀನು ನಿನ್ನನ್ನೇ ಪ್ರಮುಖನೆಂದು ಭಾವಿಸಿಕೊಂಡೆ.
ಆದರೆ ಅದು ನಿನ್ನ ಮೂರ್ಖತನ.
    ನಿನ್ನ ಅಹಂಭಾವ ನಿನಗೆ ಮೋಸಮಾಡಿದೆ.
ಎದೋಮೇ, ನೀನು ಎತ್ತರದ ಬೆಟ್ಟಗಳಲ್ಲಿರುವೆ.
    ಬೆಟ್ಟಗುಡ್ಡಗಳಿಂದ ರಕ್ಷಿತವಾದ ಸ್ಥಳಗಳಲ್ಲಿ ನೀನು ವಾಸಿಸುವೆ.
ಆದರೆ ರಣಹದ್ದು ಗೂಡುಕಟ್ಟುವಷ್ಟು ಎತ್ತರದ ಸ್ಥಳದಲ್ಲಿ ನೀನು ಮನೆಕಟ್ಟಿದರೂ ನಾನು ನಿನ್ನನ್ನು ಹಿಡಿಯುತ್ತೇನೆ.
    ಅಲ್ಲಿಂದ ನಿನ್ನನ್ನು ಕೆಳಗೆ ತರುತ್ತೇನೆ.”
ಇದು ಯೆಹೋವನ ನುಡಿ.

17 “ಎದೋಮನ್ನು ನಾಶಮಾಡಲಾಗುವುದು.
    ಹಾಳಾದ ನಗರಗಳನ್ನು ಕಂಡು ಜನರು ಬೆರಗಾಗುವರು.
    ನಾಶವಾದ ನಗರಗಳನ್ನು ಕಂಡು ಜನರು ಆಶ್ಚರ್ಯಚಕಿತರಾಗಿ ಸಿಳ್ಳುಹಾಕುವರು.
18 ಸೊದೋಮ್ ಗೊಮೋರನಗರಗಳಂತೆಯೂ ಅವುಗಳ ಸುತ್ತಲಿನ ಪಟ್ಟಣಗಳಂತೆಯೂ ಎದೋಮ್ ನಾಶವಾಗುವುದು.
    ಅಲ್ಲಿ ಯಾರೂ ವಾಸಮಾಡಲಾರರು”
ಯೆಹೋವನು ಹೀಗೆನ್ನುತ್ತಾನೆ:

19 “ಜೋರ್ಡನ್ ನದಿಯ ಸಮೀಪದ ದಟ್ಟವಾದ ಕಾಡಿನಿಂದ ಫಕ್ಕನೆ ಒಂದು ಸಿಂಹ ಬರುವದು. ಅದು ಹೊಲಗಳಲ್ಲಿದ್ದ ಜನರ ದನಕುರಿಗಳ ಹಟ್ಟಿಗಳಿಗೆ ನುಗ್ಗುವುದು. ನಾನು ಆ ಸಿಂಹದಂತೆ ಇದ್ದೇನೆ. ನಾನು ಎದೋಮ್ ನಗರಕ್ಕೆ ಹೋಗಿ ಆ ಜನರನ್ನು ಹೆದರಿಸುವೆನು; ಅವರು ಓಡಿಹೋಗುವಂತೆ ಮಾಡುವೆನು. ಅವರ ತರುಣರಲ್ಲಿ ಯಾರೂ ನನ್ನನ್ನು ತಡೆಯಲಾರರು. ನನ್ನತೆ ಯಾರೂ ಇಲ್ಲ. ಯಾರೂ ನನ್ನನ್ನು ಪ್ರತಿಭಟಿಸುವದಿಲ್ಲ. ಅವರ ನಾಯಕರಲ್ಲಿ ಯಾರೂ ನನ್ನ ವಿರುದ್ಧ ನಿಲ್ಲುವದಿಲ್ಲ.”

20 ಎದೋಮ್ಯರಿಗೆ ಯೆಹೋವನು
    ಮಾಡಬೇಕೆಂದಿರುವುದನ್ನು ಕೇಳಿರಿ.
ತೇಮಾನ್ಯರ ಬಗ್ಗೆ ಯೆಹೋವನು
    ಏನು ನಿರ್ಧರಿಸಿದ್ದಾನೆಂಬುದನ್ನು ಕೇಳಿರಿ.
ಎದೋಮಿನ ಕುರಿಮರಿಗಳನ್ನು (ಜನರನ್ನು)
    ಶತ್ರು ಎಳೆದುಕೊಂಡು ಹೋಗುವನು.
ಸಂಭವಿಸಿದ ಸಂಗತಿಯನ್ನು ನೋಡಿ
    ಎದೋಮಿನ ಹುಲ್ಲುಗಾವಲುಗಳು ಬೆದರುವವು.
21 ಎದೋಮ್ಯರ ಪತನದ ಶಬ್ಧಕ್ಕೆ ಭೂಮಿಯು ನಡುಗುವುದು.
    ಅವರ ಗೋಳಾಟದ ಧ್ವನಿಯು ಕೆಂಪು ಸಮುದ್ರದವರೆಗೂ ಕೇಳಿಸುವುದು.

22 ಯೆಹೋವನು ತಾನು ಎರಗಬೇಕಾದ ಪ್ರಾಣಿಯ ಮೇಲೆ ಹಾರಾಡುವ ರಣಹದ್ದಿನಂತೆ ಇರುವನು.
    ಆತನು ಬೊಚ್ರ ನಗರದ ಮೇಲೆ ತನ್ನ ರೆಕ್ಕೆಗಳನ್ನು ಹರಡುವ ರಣಹದ್ದಿನಂತಿದ್ದಾನೆ.
ಆ ಸಮಯದಲ್ಲಿ ಎದೋಮಿನ ಸೈನಿಕರು ಭಯಪಡುವರು.
    ಪ್ರಸವವೇದನೆಪಡುವ ಹೆಂಗಸಿನಂತೆ ಅವರು ಭಯದಿಂದ ಗೋಳಾಡುವರು.

ದಮಸ್ಕದ ವಿಷಯವಾಗಿ ದೈವೋಕ್ತಿ

23 ಈ ಸಂದೇಶವು ದಮಸ್ಕ ನಗರದ ಕುರಿತಾಗಿದೆ:

“ಹಮಾತ್ ಮತ್ತು ಅರ್ಪಾದ್ ನಗರಗಳು ಹೆದರಿಕೊಂಡಿವೆ.
    ಅವು ಕೆಟ್ಟ ಸಮಾಚಾರವನ್ನು ಕೇಳಿದ್ದರಿಂದ ಹೆದರಿಕೊಂಡಿವೆ.
ಅವುಗಳು ನಿರಾಶೆಗೊಂಡಿವೆ.
    ಅವು ಆತಂಕಪಡುತ್ತಿವೆ ಮತ್ತು ಭಯಪಡುತ್ತಿವೆ.
24 ದಮಸ್ಕ ನಗರವು ನಿಬರ್ಲವಾಗಿದೆ.
    ಜನರು ಓಡಿಹೋಗಬಯಸುತ್ತಾರೆ,
    ಜನರು ಗಾಬರಿಗೊಂಡಿದ್ದಾರೆ.
ಪ್ರಸವವೇದನೆಪಡುವ ಸ್ತ್ರೀಯಂತೆ
    ಸಂಕಟಪಡುತ್ತಿದ್ದಾರೆ.

25 “ದಮಸ್ಕವು ಸಂತೋಷಭರಿತವಾದ ನಗರವಾಗಿದೆ.
    ಜನರು ಇನ್ನೂ ಆ ‘ಮೋಜಿನ ನಗರವನ್ನು’ ಬಿಟ್ಟಿಲ್ಲ.
26 ಆದ್ದರಿಂದ ತರುಣರು ನಗರದ ಚೌಕಗಳಲ್ಲಿ ಮರಣಹೊಂದುವರು.
    ಆ ಕಾಲದಲ್ಲಿ ದಮಸ್ಕದ ಎಲ್ಲಾ ಸೈನಿಕರು ಕೊಲ್ಲಲ್ಪಡುವರು.”
ಇದು ಸರ್ವಶಕ್ತನಾದ ಯೆಹೋವನ ನುಡಿ.
27 “ದಮಸ್ಕದ ಗೋಡೆಗಳಿಗೆ ನಾನು ಬೆಂಕಿ ಹಚ್ಚುವೆನು.
    ಆ ಬೆಂಕಿಯು ಬೆನ್‌ಹದದನ ಭದ್ರವಾದ ಕೋಟೆಯನ್ನು ಸುಟ್ಟುಹಾಕುವುದು.”

ಕೇದಾರ ಮತ್ತು ಹಾಚೋರಿನ ಬಗ್ಗೆ ಸಂದೇಶ

28 ಈ ಸಂದೇಶವು ಕೇದಾರ್ ಕುಲವನ್ನೂ ಹಾಚೋರಿನ ಅಧಿಪತಿಗಳನ್ನೂ ಕುರಿತದ್ದು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಅವರನ್ನು ಸೋಲಿಸಿದನು. ಯೆಹೋವನು ಹೀಗೆನ್ನುತ್ತಾನೆ:

“ಹೋಗಿ ಕೇದಾರ ಕುಲದವರ ಮೇಲೆ ಧಾಳಿ ಮಾಡಿರಿ.
    ಪೂರ್ವದಿಕ್ಕಿನ ಜನರನ್ನು ನಾಶಮಾಡಿರಿ.
29 ಅವರ ಗುಡಾರಗಳನ್ನು ಮತ್ತು ಹಿಂಡುಗಳನ್ನು ತೆಗೆದುಕೊಂಡು ಹೋಗಲಾಗುವುದು.
    ಅವರ ಗುಡಾರಗಳನ್ನು, ಅವರ ಎಲ್ಲಾ ವಸ್ತುಗಳನ್ನು ಎತ್ತಿಕೊಂಡು ಹೋಗಲಾಗುವುದು.
    ಅವರ ಶತ್ರುಗಳು ಒಂಟೆಗಳನ್ನು ತೆಗೆದುಕೊಂಡು ಹೋಗುವರು.
‘ನಮ್ಮ ಸುತ್ತಲೂ ಭಯಂಕರ ಘಟನೆಗಳು ನಡೆಯುತ್ತಿವೆ’
    ಎಂದು ತಮ್ಮತಮ್ಮಲ್ಲಿಯೇ ಕೂಗಿಕೊಳ್ಳುವರು.
30 ಹಾಚೋರಿನ ನಿವಾಸಿಗಳೇ, ಬೇಗನೆ ಓಡಿಹೋಗಿರಿ,
    ಅಡಗಿಕೊಳ್ಳುವದಕ್ಕೆ ಒಂದು ಒಳ್ಳೆಯ ಸ್ಥಳವನ್ನು ಹುಡುಕಿಕೊಳ್ಳಿರಿ.”
ಇದು ಯೆಹೋವನ ಸಂದೇಶ.
“ನೆಬೂಕದ್ನೆಚ್ಚರನು ನಿಮ್ಮ ವಿರುದ್ಧ ಯೋಜನೆ ಮಾಡಿದ್ದಾನೆ.
    ನಿಮ್ಮನ್ನು ಸೋಲಿಸಲು ಒಳ್ಳೆಯ ಸಂಚನ್ನು ಮಾಡಿದ್ದಾನೆ.

31 “ಒಂದು ಜನಾಂಗವು ಯಾರೂ ತಮ್ಮನ್ನು ಸೋಲಿಸಲಾರರು ಎಂದು ನೆಮ್ಮದಿಯಿಂದಲೂ ಸಮಾಧಾನದಿಂದಲೂ ಇದೆ.
    ಅದು ತನ್ನ ರಕ್ಷಣೆಗಾಗಿ ಒಂದು ಕೋಟೆಯನ್ನಾಗಲಿ ಒಂದು ಬಾಗಿಲನ್ನಾಗಲಿ ಹೊಂದಿಲ್ಲ.
ಆ ಜನರು ಪ್ರತ್ಯೇಕವಾಗಿ ವಾಸವಾಗಿದ್ದಾರೆ.
    ಆ ಜನಾಂಗದ ಮೇಲೆ ಧಾಳಿ ಮಾಡಿರಿ.” ಎಂದು ಯೆಹೋವನು ಹೇಳಿದನು.
32 “ವೈರಿಯು ಅವರ ಒಂಟೆಗಳನ್ನು ಮತ್ತು
    ಅವರ ದನಗಳ ಮಂದೆಗಳನ್ನು ಅಪಹರಿಸುವನು.
    ವೈರಿಯು ಅವರ ದೊಡ್ಡದೊಡ್ಡ ಮಂದೆಗಳನ್ನು ಅಪಹರಿಸುವನು.
ತಮ್ಮ ಗಡ್ಡದ ಕೂದಲಿನ ಮೂಲೆಗಳನ್ನು[b] ಕತ್ತರಿಸಿಕೊಂಡ ಜನರನ್ನು ನಾನು ಭೂಮಂಡಲದ ಎಲ್ಲೆಡೆಗಳಲ್ಲಿ ಚದರಿಸುವೆನು.
    ಎಲ್ಲಾ ಕಡೆಯಿಂದಲೂ ಅವರ ಮೇಲೆ ವಿಪತ್ತುಗಳನ್ನು ಬರಮಾಡುವೆನು.”
ಇದು ಯೆಹೋವನ ನುಡಿ.
33 “ಹಾಚೋರ್ ಪ್ರದೇಶವು ಕಾಡುನಾಯಿಗಳ ನಿವಾಸಸ್ಥಾನವಾಗುವುದು.
    ಅದು ಶಾಶ್ವತವಾಗಿ ಒಂದು ಬರಿದಾದ ಮರುಭೂಮಿಯಾಗುವುದು.
ಅಲ್ಲಿ ಯಾರೂ ವಾಸಮಾಡಲಾರರು.
    ಆ ಸ್ಥಳದಲ್ಲಿ ಯಾವ ಮನುಷ್ಯನೂ ವಾಸಮಾಡುವದಿಲ್ಲ.”

ಏಲಾಮಿನ ಬಗ್ಗೆ ದೈವೋಕ್ತಿ

34 ಚಿದ್ಕೀಯನು ಯೆಹೂದದ ರಾಜನಾದ ಹೊಸದರಲ್ಲಿಯೇ ಪ್ರವಾದಿಯಾದ ಯೆರೆಮೀಯನು ಯೆಹೋವನಿಂದ ಒಂದು ಸಂದೇಶವನ್ನು ಪಡೆದನು. ಈ ಸಂದೇಶವು ಏಲಾಮ್ ಜನಾಂಗವನ್ನು ಕುರಿತದ್ದು.

35 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
“ನಾನು ಅತಿ ಶೀಘ್ರದಲ್ಲಿ ಏಲಾಮಿನ ಬಿಲ್ಲನ್ನು ಮುರಿದುಹಾಕುವೆನು.
    ಏಲಾಮಿಗೆ ಬಿಲ್ಲು ಬಹು ಮುಖ್ಯವಾದ ಆಯುಧವಾಗಿದೆ.
36 ನಾನು ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು
    ಆಕಾಶದ ನಾಲ್ಕು ಮೂಲೆಗಳಿಂದ ಬರಮಾಡುವೆನು.
ಆ ನಾಲ್ಕು ಗಾಳಿಗಳು ಬೀಸುವ ಎಲ್ಲಾ ಕಡೆಗಳಲ್ಲಿಯೂ
    ಏಲಾಮ್ಯರನ್ನು ಚದುರಿಸುವೆನು.
ಏಲಾಮಿನ ಸೆರೆಯಾಳುಗಳು ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಸಿಕ್ಕುವರು.
37 ಅವರ ಶತ್ರುಗಳ ಕಣ್ಣೆದುರಿನಲ್ಲಿಯೇ
    ನಾನು ಏಲಾಮನ್ನು ಚೂರುಚೂರು ಮಾಡುವೆನು.
ಏಲಾಮ್ಯರನ್ನು ಕೊಲ್ಲಬೇಕೆಂದಿರುವ ಜನರೆದುರಿಗೆ
    ನಾನು ಎಲಾಮ್ಯರನ್ನು ಮುರಿದುಬಿಡುವೆನು.
ನಾನು ಅವರ ಮೇಲೆ ಭಯಂಕರವಾದ ವಿಪತ್ತುಗಳನ್ನು ತರುವೆನು.
    ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ನಾನು ಅವರಿಗೆ ತೋರಿಸುವೆನು.”
ಇದು ಯೆಹೋವನ ನುಡಿ.
“ಏಲಾಮನ್ನು ಬೆನ್ನಟ್ಟಲು ನಾನೊಂದು ಖಡ್ಗವನ್ನು ಕಳುಹಿಸುವೆನು.
    ನಾನು ಏಲಾಮ್ಯರನ್ನೆಲ್ಲ ಕೊಂದುಹಾಕುವವರೆಗೆ ಆ ಖಡ್ಗವು ಅವರನ್ನು ಬೆನ್ನಟ್ಟುವುದು.
38 ಏಲಾಮಿನ ಅಧಿಪತ್ಯ ನನಗೆ ಸೇರಿದ್ದು ಎಂಬುದನ್ನು ನಾನು ಏಲಾಮ್ಯರಿಗೆ ತೋರಿಸಿಕೊಡುವೆನು.
    ನಾನು ಅಲ್ಲಿಯ ರಾಜನನ್ನು ಮತ್ತು ರಾಜನ ಅಧಿಕಾರಿಗಳನ್ನು ನಾಶಮಾಡುವೆನು.”
ಇದು ಯೆಹೋವನ ನುಡಿ.
39 “ಆದರೆ ಭವಿಷ್ಯದಲ್ಲಿ ನಾನು ಏಲಾಮಿಗೆ ಒಳ್ಳೆಯದನ್ನು ಮಾಡುವೆನು.”
ಇದು ಯೆಹೋವನ ನುಡಿ.

ಕೀರ್ತನೆಗಳು 26-27

ರಚನೆಗಾರ: ದಾವೀದ.

26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
    ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
    ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
    ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
    ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
    ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.

ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
    ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
    ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
    ನನಗೆ ಎಷ್ಟೋ ಪ್ರಿಯವಾಗಿವೆ.

ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
    ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
    ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
    ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
    ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!
ದುಷ್ಟರು ನನ್ನನ್ನು ಕೊಲ್ಲಲು ಆಕ್ರಮಣಮಾಡುವಾಗ
    ತಾವೇ ಮುಗ್ಗರಿಸಿ ಬೀಳುವರು.
ಮಹಾಸೈನ್ಯವೇ ನನಗೆ ಮುತ್ತಿಗೆ ಹಾಕಿದರೂ ನಾನು ಭಯಪಡುವುದಿಲ್ಲ.
    ಸೈನಿಕರು ನನ್ನ ಮೇಲೆ ಆಕ್ರಮಣ ಮಾಡಿದರೂ ನಾನು ಹೆದರುವುದಿಲ್ಲ.
    ಯಾಕೆಂದರೆ ನಾನು ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[b] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International