M’Cheyne Bible Reading Plan
ಸಮುವೇಲನಿಂದ ಸೌಲನಿಗೆ ಅಭಿಷೇಕ
10 ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ: 2 ಈ ದಿನ ನನ್ನನ್ನು ಬಿಟ್ಟು ನೀನು ಮುಂದೆ ಸಾಗಿದಾಗ, ಬೆನ್ಯಾಮೀನನ ಮೇರೆಯಲ್ಲಿರುವ ಚೆಲ್ಚಹಿನಲ್ಲಿನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಗೆ, ‘ನೀನು ಹುಡುಕುತ್ತಿದ್ದ ಕತ್ತೆಗಳು ಒಬ್ಬನಿಗೆ ಸಿಕ್ಕಿವೆ. ನಿನ್ನ ತಂದೆಯು ಕತ್ತೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಬಲಿಸುತ್ತಿದ್ದಾನೆ’ ಎಂದು ಹೇಳುವರು” ಎಂದನು.
3 ಸಮುವೇಲನು, “ನೀನು ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಓಕ್ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಟಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಧನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿ ಹೋತಗಳನ್ನೂ ಎರಡನೆಯವನು ಮೂರು ರೊಟ್ಟಿಗಳನ್ನೂ ಮೂರನೆಯವನು ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ. 4 ಈ ಮೂವರೂ ನಿನ್ನ ಕ್ಷೇಮವನ್ನು ವಿಚಾರಿಸುತ್ತಾರೆ. ಅವರು ನಿನಗೆ ಎರಡು ರೊಟ್ಟಿಗಳನ್ನು ಕೊಡುತ್ತಾರೆ. ನೀನು ಆ ಎರಡು ರೊಟ್ಟಿಗಳನ್ನು ಅವರಿಂದ ತೆಗೆದುಕೊಳ್ಳುವೆ. 5 ನಂತರ ನೀನು ಗಿಬಿಯತ್ ಎಲೋಹಿಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಷ್ಟಿಯರ ಕೋಟೆಯಿದೆ. ನೀನು ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು ಆರಾಧನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಡಿಯನ್ನೂ ಕೊಳಲನ್ನೂ ಕಿನ್ನರಿಯನ್ನೂ ನುಡಿಸುತ್ತಿರುತ್ತಾರೆ. 6 ಆಗ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ನಿನ್ನ ಮೈಮೇಲೆ ಬರುತ್ತದೆ. ನೀನು ಮಾರ್ಪಾಟಾಗಿ ಬೇರೊಬ್ಬ ಮನುಷ್ಯನಾಗುವೆ. ನೀನೂ ಆ ಪ್ರವಾದಿಗಳಂತೆ ಪ್ರವಾದಿಸಲು ಆರಂಭಿಸುವೆ. 7 ಈ ಕಾರ್ಯಗಳು ಸಂಭವಿಸಿದ ಮೇಲೆ, ನೀನು ನಿನ್ನ ನಿರ್ಧಾರದಂತೆ ಮಾಡು. ಯಾಕೆಂದರೆ ದೇವರು ನಿನ್ನೊಂದಿಗಿರುತ್ತಾನೆ.
8 “ನನಗಿಂತ ಮೊದಲು ನೀನು ಗಿಲ್ಗಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ. ನಾನು ಅಲ್ಲಿ ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಪಿಸುತ್ತೇನೆ. ಆದರೆ ನೀನು ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನೀನು ಮಾಡಬೇಕಾದದ್ದನ್ನು ತಿಳಿಸುತ್ತೇನೆ” ಎಂದು ಹೇಳಿದನು.
ಸೌಲನು ಪ್ರವಾದಿಗಳಂತಾಗುವನು
9 ಸೌಲನು ಸಮುವೇಲನನ್ನು ಬಿಟ್ಟುಹೊರಡಲು ತಿರುಗಿದಂತೆಯೇ ದೇವರು ಸಹ ಸೌಲನ ಜೀವಿತವನ್ನು ಮಾರ್ಪಾಟು ಮಾಡಿದನು. ಅಂದು ಆ ಸಂಗತಿಗಳೆಲ್ಲಾ ಸಂಭವಿಸಿದವು. 10 ಸೌಲನು ಮತ್ತು ಅವನ ಸೇವಕನು ಗಿಬಿಯತ್ ಎಲೋಹಿಮಿಗೆ ಹೋದರು. ಸೌಲನು ಆ ಸ್ಥಳದಲ್ಲಿ ಪ್ರವಾದಿಗಳ ಸಮೂಹವನ್ನು ಸಂಧಿಸಿದನು. ದೇವರ ಆತ್ಮವು ಮಹಾಶಕ್ತಿಯೊಡನೆ ಸೌಲನ ಮೈಮೇಲೆ ಬಂದಿತು. ಆಗ ಸೌಲನು ಪ್ರವಾದಿಗಳ ಜೊತೆಯಲ್ಲಿ ಪ್ರವಾದಿಸಿದನು. 11 ಸೌಲನನ್ನು ಮೊದಲು ನೋಡಿದ್ದ ಜನರು, ಪ್ರವಾದಿಗಳ ಜೊತೆಯಲ್ಲಿ ಸೌಲನು ಪ್ರವಾದಿಸುತ್ತಿರುವುದನ್ನು ಕಂಡರು. ಈ ಜನರು, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನೇ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
12 ಆಗ ಗಿಬಿಯತ್ ಎಲೋಹಿಮಿನಲ್ಲಿ ವಾಸಿಸುತ್ತಿದ್ದ ಮನುಷ್ಯನೊಬ್ಬನು, “ಹೌದು, ಅವನು ಅವರ ನಾಯಕನಂತೆ ಕಾಣುತ್ತಿದ್ದಾನೆ” ಎಂದು ಹೇಳಿದನು. ಆದ್ದರಿಂದಲೇ, “ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನು” ಎಂಬ ಗಾದೆಯು ಹುಟ್ಟಿಕೊಂಡಿತು.
ಮನೆಗೆ ಸೌಲನ ಆಗಮನ
13 ಸೌಲನು ಪ್ರವಾದಿಸಿದ ನಂತರ, ತನ್ನ ಮನೆಯ ಸಮೀಪದಲ್ಲಿದ್ದ ಸ್ಥಳಕ್ಕೆ ಆರಾಧನೆಗೋಸ್ಕರ ಹೋದನು.
14 ಸೌಲನ ಚಿಕ್ಕಪ್ಪನು ಸೌಲನನ್ನು ಮತ್ತು ಅವನ ಸೇವಕನನ್ನು, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು.
ಸೌಲನು ಅವನಿಗೆ, “ನಾವು ಕತ್ತೆಗಳನ್ನು ಹುಡುಕುತ್ತಿದ್ದೆವು. ನಾವು ಅವುಗಳನ್ನು ಕಂಡುಕೊಳ್ಳಲಾರದೆ ಹೋದಾಗ ಸಮುವೇಲನನ್ನು ನೋಡಲು ಹೋದೆವು” ಎಂದು ಹೇಳಿದನು.
15 ಸೌಲನ ಚಿಕ್ಕಪ್ಪನು, “ಸಮುವೇಲನು ನಿನಗೆ ಹೇಳಿದ್ದನ್ನು ನನಗೆ ದಯವಿಟ್ಟು ತಿಳಿಸು” ಎಂದು ಹೇಳಿದನು.
16 ಸೌಲನು ಅವನಿಗೆ, “ಕತ್ತೆಗಳು ಈಗಾಗಲೇ ಸಿಕ್ಕಿವೆ ಎಂದು ಸಮುವೇಲನು ಹೇಳಿದನು” ಅಂದನು. ಸೌಲನು ತನ್ನ ಚಿಕ್ಕಪ್ಪನಿಗೆ ಎಲ್ಲವನ್ನೂ ತಿಳಿಸಲಿಲ್ಲ. ರಾಜ್ಯದ ಬಗ್ಗೆ ಸಮುವೇಲನು ಹೇಳಿದ ಮಾತುಗಳನ್ನು ಸೌಲನು ತನ್ನ ಚಿಕ್ಕಪ್ಪನಿಗೆ ತಿಳಿಸಲಿಲ್ಲ.
ಸೌಲನು ರಾಜನೆಂದು ಸಮುವೇಲನ ಪ್ರಕಟನೆ
17 ಸಮುವೇಲನು ಇಸ್ರೇಲರನ್ನು ಮಿಚ್ಪೆಗೆ ಕರೆಸಿ, ಯೆಹೋವನ ಸನ್ನಿಧಿಯಲ್ಲಿ ಸಭೆಸೇರಿಸಿದನು. 18 ಸಮುವೇಲನು ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದೆನು. ನಾನು ಈಜಿಪ್ಟಿನವರ ಆಳ್ವಿಕೆಯಿಂದ ಮತ್ತು ನಿಮಗೆ ಹಾನಿಮಾಡಲು ಪ್ರಯತ್ನಿಸಿದ ಇತರ ರಾಜ್ಯಗಳಿಂದ ರಕ್ಷಿಸಿದೆನು’ ಎನ್ನುತ್ತಾನೆ. 19 ಆದರೆ ಇಂದು ನೀವು ನಿಮ್ಮ ದೇವರನ್ನು ತಿರಸ್ಕರಿಸಿರುವಿರಿ. ನಿಮ್ಮ ದೇವರು ನಿಮ್ಮನ್ನು ಕಷ್ಟಗಳಿಂದ ಮತ್ತು ಸಮಸ್ಯೆಗಳಿಂದ ರಕ್ಷಿಸುತ್ತಾನೆ. ಆದರೆ ನೀವು, ‘ಇಲ್ಲ, ನಮ್ಮನ್ನಾಳಲು ನಮಗೊಬ್ಬ ರಾಜನು ಬೇಕು’ ಎಂದು ಕೇಳಿದಿರಿ. ಈಗ ಬನ್ನಿ, ನೀವು, ನಿಮ್ಮ ಕುಲಗಳ ಮತ್ತು ಗೋತ್ರಗಳ ಸಮೇತವಾಗಿ ಯೆಹೋವನ ಸಮ್ಮುಖದಲ್ಲಿ ನಿಲ್ಲಿರಿ” ಎಂದು ಹೇಳಿದನು.
20 ಸಮುವೇಲನು ಇಸ್ರೇಲಿನ ಎಲ್ಲಾ ಕುಲದವರನ್ನು ಹತ್ತಿರಕ್ಕೆ ಕರೆದನು. ನಂತರ ಸಮುವೇಲನು ಹೊಸ ರಾಜನನ್ನು ಆರಿಸಲು ಚೀಟು ಹಾಕತೊಡಗಿದನು. ಮೊದಲನೆಯದಾಗಿ, ಬೆನ್ಯಾಮೀನ್ ಕುಲವು ಆರಿಸಲ್ಪಟ್ಟಿತು. 21 ಬೆನ್ಯಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಆರಿಸಿಕೊಳ್ಳುವುದಕ್ಕಾಗಿ ಮತ್ತೆ ಚೀಟು ಹಾಕಲಾಯಿತು. ಅದರಲ್ಲಿ ಮಟ್ರಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುವೇಲನು ಮಟ್ರಿಯ ಕುಟುಂಬದ ಪ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳುವುದಕ್ಕಾಗಿ ಚೀಟು ಹಾಕಿದನು. ಅದರಲ್ಲಿ ಕೀಷನ ಮಗನಾದ ಸೌಲನು ಆರಿಸಲ್ಪಟ್ಟನು.
ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ. 22 ಆಗ ಅವರು ಯೆಹೋವನನ್ನು, “ಸೌಲನು ಇಲ್ಲಿಗೆ ಬರುವನೋ?” ಎಂದು ಕೇಳಿದರು.
ಯೆಹೋವನು, “ಸೌಲನು ಸರಕುಗಳ ಹಿಂದೆ ಅಡಗಿಕೊಂಡಿದ್ದಾನೆ” ಎಂದು ಹೇಳಿದನು.
23 ಜನರು ಓಡಿಹೋಗಿ, ಸರಕುಗಳ ಹಿಂದೆ ಅಡಗಿಕೊಂಡಿದ್ದ ಸೌಲನನ್ನು ಹಿಡಿದುಕೊಂಡು ಬಂದರು. ಸೌಲನು ಜನರ ಮಧ್ಯದಲ್ಲಿ ನಿಂತುಕೊಂಡನು. ಸೌಲನು ಇತರ ಜನರಿಗಿಂತ ಎತ್ತರವಾಗಿದ್ದನು.
24 ಸಮುವೇಲನು ಜನರೆಲ್ಲರಿಗೆ, “ಯೆಹೋವನು ಆರಿಸಿಕೊಂಡಿರುವ ಮನುಷ್ಯನನ್ನು ನೋಡಿದಿರಾ! ಸರ್ವಜನರಲ್ಲಿಯೂ ಸೌಲನಂತಹ ಮನುಷ್ಯನು ಇನ್ನೊಬ್ಬನಿಲ್ಲ!” ಎಂದು ಹೇಳಿದನು.
ಆಗ ಜನರೆಲ್ಲ, “ರಾಜನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.
25 ಸಮುವೇಲನು ಜನರಿಗೆ ರಾಜನೀತಿಯ ನಿಯಮಗಳನ್ನು ವಿವರಿಸಿದನು. ಅವನು ಒಂದು ಪುಸ್ತಕದಲ್ಲಿ ಆ ನಿಯಮಗಳನ್ನು ಬರೆದನು. ಅವನು ಯೆಹೋವನ ಸನ್ನಿಧಿಯಲ್ಲಿ ಆ ಪುಸ್ತಕವನ್ನಿಟ್ಟನು. ಬಳಿಕ ಸಮುವೇಲನು ಜನರನ್ನು ಮನೆಗಳಿಗೆ ಹಿಂದಿರುಗಲು ಹೇಳಿದನು.
26 ಸೌಲನು ಸಹ ಗಿಬೆಯದ ತನ್ನ ಮನೆಗೆ ಹೋದನು. ಕೆಲವು ಶೂರರು ದೈವಪ್ರೇರಣೆಯಿಂದ ಸೌಲನನ್ನು ಹಿಂಬಾಲಿಸಿದರು. 27 ಆದರೆ ಕೆಲವು ಕಿರುಕುಳಕಾರರು, “ಈ ಮನುಷ್ಯನು ಹೇಗೆ ತಾನೆ ನಮ್ಮನ್ನು ರಕ್ಷಿಸುವನು?” ಎಂದು ಹೇಳಿದರು. ಅವರು ಸೌಲನ ಬಗ್ಗೆ ಕೆಟ್ಟಮಾತುಗಳನ್ನು ಆಡಿದರು; ಅವನನ್ನು ತಿರಸ್ಕರಿಸಿ, ಕಾಣಿಕೆಗಳನ್ನು ತಂದುಕೊಡಲಿಲ್ಲ. ಆದರೆ ಸೌಲನು ಏನೂ ಮಾತನಾಡಲಿಲ್ಲ.
ಅಮ್ಮೋನಿಯರ ರಾಜನಾದ ನಾಹಾಷ
ಅಮ್ಮೋನಿಯರ ರಾಜನಾದ ನಾಹಾಷನು, ಗಾದ್ ಮತ್ತು ರೂಬೆನ್ ಕುಲದವರಿಗೆ ಕಿರುಕುಳಕೊಡುತ್ತಿದ್ದನು. ನಾಹಾಷನು ಪ್ರತಿ ಮನುಷ್ಯನ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ನಾಹಾಷನು ಅವರಿಗೆ ಸಹಾಯಮಾಡಲು ಯಾರಿಗೂ ಅವಕಾಶಕೊಡುತ್ತಿರಲಿಲ್ಲ. ಅಮ್ಮೋನಿಯರ ರಾಜನಾದ ನಾಹಾಷನು ಜೋರ್ಡನ್ ನದಿಯ ಪೂರ್ವ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲ ಇಸ್ರೇಲರ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ಆದ್ದರಿಂದ ಅಮ್ಮೋನಿಯರಿಂದ ಏಳು ಸಾವಿರ ಮಂದಿ ಇಸ್ರೇಲರು ಯಾಬೇಷ್ ಗಿಲ್ಯಾದಿಗೆ ಓಡಿಹೋದರು.
ಪವಿತ್ರಾತ್ಮನಿಗೆ ಅಧೀನವಾದ ಜೀವಿತ
8 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. 2 ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. 3 ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. 4 ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.
5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. 6 ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. 7 ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. 8 ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.
9 ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.
12 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ನಾವು ನಮ್ಮ ಪಾಪಾಧೀನಸ್ವಭಾವದ ಆಳ್ವಿಕೆಗೆ ಒಳಗಾಗಿರಬಾರದು. ನಮ್ಮ ಪಾಪಸ್ವಭಾವದ ಬಯಕೆಗನುಸಾರವಾಗಿ ನಾವು ಜೀವಿಸಕೂಡದು. 13 ನಿಮ್ಮ ಪಾಪಸ್ವಭಾವವು ಬಯಸುವ ಕೆಟ್ಟಕಾರ್ಯಗಳನ್ನು ಮಾಡುವುದಕ್ಕಾಗಿ ನೀವು ನಿಮ್ಮ ಜೀವಿತವನ್ನು ಉಪಯೋಗಿಸಿದರೆ, ನೀವು ಆತ್ಮಿಕವಾಗಿ ಸಾಯುವಿರಿ. ಆದರೆ ನೀವು ನಿಮ್ಮ ದೇಹದ ಮೂಲಕವಾಗಿ ಮಾಡುವ ಕೆಟ್ಟಕಾರ್ಯಗಳನ್ನು ಪವಿತ್ರಾತ್ಮನ ಸಹಾಯದಿಂದ ನಿಲ್ಲಿಸಿದರೆ ಹೊಸ ಜೀವಿತವನ್ನು ಹೊಂದಿಕೊಳ್ಳುವಿರಿ.
14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ಭವಿಷ್ಯತ್ತಿನಲ್ಲಿ ನಮಗೆ ಮಹಿಮೆ ದೊರೆಯುವುದು
18 ಈಗ ನಾವು ಕಷ್ಟಸಂಕಟಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ ನಮಗೆ ಮುಂದೆ ಕೊಡಲ್ಪಡುವ ಮಹಿಮೆಗೆ ಈ ಕಷ್ಟಸಂಕಟಗಳನ್ನು ಹೋಲಿಸಿದರೆ ಇವು ಗಣನೆಗೆ ಬರುವುದಿಲ್ಲ. 19 ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ. 20 ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಹೀಗಾದದ್ದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ. ಆದರೂ ಅದಕ್ಕೆ ನಿರೀಕ್ಷೆಯಿತ್ತು. ಅದೇನೆಂದರೆ: 21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.
26 ನಾವು ಬಲಹೀನರಾಗಿರುವುದರಿಂದ ನಮ್ಮ ಬಲಹೀನತೆಯಲ್ಲಿ ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ. ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದು. ಆದರೆ ಪವಿತ್ರಾತ್ಮನು ತಾನೇ ನಮಗೋಸ್ಕರ ದೇವರಲ್ಲಿ ವಿವರಿಸಲಾಗದ ಅಂತರ್ಭಾವದಿಂದ ಬೇಡಿಕೊಳ್ಳುತ್ತಾನೆ. 27 ಅಂತರಂಗವನ್ನು ನೋಡಬಲ್ಲ ದೇವರಿಗೆ ಪವಿತ್ರಾತ್ಮನ ಮನಸ್ಸಿನಲ್ಲಿರುವುದೆಲ್ಲಾ ಗೊತ್ತಿದೆ, ಏಕೆಂದರೆ ದೇವರ ಚಿತ್ತಕ್ಕನುಸಾರವಾಗಿಯೇ ಪವಿತ್ರಾತ್ಮನು ದೇವಜನರಿಗೋಸ್ಕರ ದೇವರಲ್ಲಿ ವಿಜ್ಞಾಪಿಸುತ್ತಾನೆ.
28 ದೇವರು ತನ್ನನ್ನು ಪ್ರೀತಿಸುವವರ ಒಳ್ಳೆಯದಕ್ಕಾಗಿ ಪ್ರತಿಯೊಂದು ಕಾರ್ಯವನ್ನೂ ಅನುಕೂಲ ಮಾಡುತ್ತಾನೆಂದು ನಮಗೆ ಗೊತ್ತಿದೆ. ಆ ಜನರನ್ನು ದೇವರೇ ಆರಿಸಿಕೊಂಡನು, ಏಕೆಂದರೆ ಅದು ಆತನ ಯೋಜನೆಯಾಗಿತ್ತು. 29 ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ. 30 ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂಬ ತನ್ನ ಯೋಜನೆಗನುಸಾರವಾಗಿ ದೇವರು ಅವರನ್ನು ಕರೆದು, ನೀತಿವಂತರನ್ನಾಗಿ ಮಾಡಿ, ಅವರಿಗೆ ತನ್ನ ಮಹಿಮೆಯನ್ನು ಕೊಟ್ಟನು.
ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ
31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)
37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.
ಫಿಲಿಷ್ಟಿಯರ ಬಗ್ಗೆ ಸಂದೇಶ
47 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಫಿಲಿಷ್ಟಿಯರ ಬಗ್ಗೆ ಬಂದಿತು. ಫರೋಹನು ಗಾಜಾ ಪಟ್ಟಣದ ಮೇಲೆ ಧಾಳಿ ಮಾಡುವ ಮುಂಚೆ ಈ ಸಂದೇಶ ಬಂದಿತು.
2 ಯೆಹೋವನು ಹೀಗೆನ್ನುತ್ತಾನೆ:
“ನೋಡಿರಿ, ಉತ್ತರದಲ್ಲಿ ಶತ್ರು ಸೈನಿಕರು ಒಟ್ಟುಗೂಡುತ್ತಿದ್ದಾರೆ.
ದಡಮೀರಿ ಭೋರ್ಗರೆಯುವ ನದಿಯಂತೆ ಅವರು ಬರುವರು.
ಅವರು ಪ್ರವಾಹದಂತೆ ಇಡೀ ದೇಶವನ್ನು ವ್ಯಾಪಿಸುವರು.
ಅವರು ಪಟ್ಟಣಗಳನ್ನೂ ಅಲ್ಲಿ ವಾಸಿಸುವ ಜನರನ್ನೂ ಮುತ್ತುವರು.
ಆ ದೇಶಗಳಲ್ಲಿ ವಾಸಮಾಡುವ ಎಲ್ಲರೂ
ಸಹಾಯಕ್ಕಾಗಿ ಗೋಳಿಡುವರು.
3 ಅವರು ವೇಗವಾಗಿ ಓಡುವ
ಕುದುರೆಗಳ ಶಬ್ಧವನ್ನು ಕೇಳುವರು.
ಅವರು ರಭಸವಾಗಿ ಚಲಿಸುವ ರಥಗಳ ಶಬ್ಧವನ್ನು ಕೇಳುವರು.
ಅವರು ಚಕ್ರಗಳ ಗಡಗಡ ಶಬ್ಧವನ್ನು ಕೇಳುವರು.
ತಂದೆಗಳು ತಮ್ಮತಮ್ಮ ಮಕ್ಕಳಿಗೆ ಸುರಕ್ಷಣೆಯನ್ನು
ಕೊಡಲಾಗದಷ್ಟು ದುಬರ್ಲರಾಗಿರುವರು.
4 ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ.
ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ
ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ.
ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು.
ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು.
5 ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು.
ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು.
ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ,
ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ?
6 “ಅಯ್ಯೋ, ಯೆಹೋವನ ಖಡ್ಗವೇ, ನೀನಿನ್ನೂ ಹೋಗಲಿಲ್ಲವೇ?
ಎಷ್ಟು ಹೊತ್ತು ನೀನು ಹೋರಾಡುತ್ತಿರುವೆ?
ನಿನ್ನ ಒರೆಯಲ್ಲಿ ಹೋಗು!
ಸುಮ್ಮನಿರು, ಶಾಂತವಾಗಿರು!
7 ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ?
ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ.
ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ
ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
ರಚನೆಗಾರ: ದಾವೀದ.
24 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ.
ಲೋಕವೂ ಅದರ ನಿವಾಸಿಗಳೂ ಆತನವೇ.
2 ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.
3 ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
4 ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ[a] ಮೋಸ ಪ್ರಮಾಣ ಮಾಡದವರೂ
ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
5 ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
6 ಆತನನ್ನು ಅನುಸರಿಸುವವರು ಇಂಥವರೇ.
ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.
7 ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
8 ಮಹಿಮಾಸ್ವರೂಪನಾದ ಈ ರಾಜನು ಯಾರು?
ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
ಯೆಹೋವನೇ ಆತನು.
9 ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
ಸೇನಾಧೀಶ್ವರನಾದ ಯೆಹೋವನೇ ಆ ರಾಜನು.
ಮಹಿಮಾಸ್ವರೂಪನಾದ ರಾಜನು ಆತನೇ.
Kannada Holy Bible: Easy-to-Read Version. All rights reserved. © 1997 Bible League International