Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 5-6

ದೇವರ ಪವಿತ್ರ ಪೆಟ್ಟಿಗೆಯಿಂದ ಫಿಲಿಷ್ಟಿಯರಿಗೆ ತೊಂದರೆ

ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ಎಬೆನೆಜೆರಿನಿಂದ ಅಷ್ಡೋದಿಗೆ ತೆಗೆದುಕೊಂಡು ಹೋದರು. ಅವರು ದೇವರ ಪವಿತ್ರ ಪೆಟ್ಟಿಗೆಯನ್ನು ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ದಾಗೋನಿನ ಪಕ್ಕದಲ್ಲಿಟ್ಟರು. ಅಷ್ಡೋದಿನ ಜನರು ಮಾರನೆಯ ದಿನ ಬೆಳಿಗ್ಗೆ ಎದ್ದಾಗ, ದಾಗೋನನ ವಿಗ್ರಹವು ಯೆಹೋವನ ಪೆಟ್ಟಿಗೆಯ ಮುಂದೆ ಬೋರಲಾಗಿ ಬಿದ್ದಿತ್ತು.

ಅಷ್ಡೋದಿನ ಜನರು ದಾಗೋನ್ ವಿಗ್ರಹವನ್ನು ಅದರ ಸ್ಥಳದಲ್ಲಿ ಮತ್ತೆ ನಿಲ್ಲಿಸಿದರು. ಆದರೆ ಮರುದಿನ ಬೆಳಿಗ್ಗೆ ಅಷ್ಡೋದಿನ ಜನರು ಎದ್ದಾಗ ದಾಗೋನ್ ವಿಗ್ರಹವು ನೆಲದ ಮೇಲೆ ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಬೋರಲಬಿದ್ದಿತ್ತು. ದಾಗೋನಿನ ತಲೆಯು ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ದೇಹವು ಏಕಶಿಲೆಯಾಗಿ ಬಿದ್ದಿತ್ತು. ಆದಕಾರಣವೇ ಇಂದಿಗೂ ಸಹ ಅಷ್ಡೋದಿನಲ್ಲಿ ದಾಗೋನನ ಗುಡಿಯನ್ನು ಪ್ರವೇಶಿಸುವ ಯಾಜಕರಾಗಲಿ ಇಲ್ಲವೆ ಇತರೆ ಜನರಾಗಲಿ ಹೊಸ್ತಿಲನ್ನು ತುಳಿಯುವುದಿಲ್ಲ.

ಅಷ್ಡೋದಿನ ಮತ್ತು ಅವರ ನೆರೆಹೊರೆಯ ಜನರ ಜೀವನವನ್ನು ಯೆಹೋವನು ಕಠಿಣಗೊಳಿಸಿದನು. ಯೆಹೋವನು ಅವರಿಗೆ ಹೆಚ್ಚು ತೊಂದರೆ ಕೊಟ್ಟನು. ಆತನು ಅವರಿಗೆ ಗಡ್ಡೆರೋಗವನ್ನು ಬರಮಾಡಿದನು. ಅಲ್ಲದೆ ಯೆಹೋವನು ಅವರ ಬಳಿಗೆ ಇಲಿಗಳನ್ನು ಕಳುಹಿಸಿದನು. ಆ ಇಲಿಗಳು ಅವರ ಹಡಗುಗಳಲ್ಲೆಲ್ಲಾ ಮತ್ತು ಭೂಮಿಯಲ್ಲೆಲ್ಲಾ ಹರಡಿಕೊಂಡವು. ನಗರದ ಜನರು ಬಹು ಭಯಗೊಂಡರು. ಇದನ್ನೆಲ್ಲಾ ಕಂಡ ಅಷ್ಡೋದಿನ ಜನರು, “ಇಸ್ರೇಲರ ದೇವರ ಈ ಪವಿತ್ರ ಪೆಟ್ಟಿಗೆಯು ಇಲ್ಲಿರಬಾರದು. ಇಸ್ರೇಲರ ದೇವರು ನಮ್ಮನ್ನೂ ನಮ್ಮ ದೇವರಾದ ದಾಗೋನನನ್ನೂ ಬಾಧಿಸುತ್ತಿದ್ದಾನೆ” ಎಂದು ಹೇಳಿದರು.

ಅಷ್ಡೋದಿನ ಜನರು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳನ್ನು ಒಟ್ಟಿಗೆ ಸೇರಿಸಿ “ಇಸ್ರೇಲರ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಾವು ಏನು ಮಾಡೋಣ?” ಎಂದು ಕೇಳಿದರು.

ಅಧಿಪತಿಗಳು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ‘ಗತ್’ ನಗರಕ್ಕೆ ಕಳುಹಿಸಿ” ಎಂದು ಹೇಳಿದರು. ಅಂತೆಯೇ, ಅವರು ಅದನ್ನು ಗತ್ ನಗರಕ್ಕೆ ಕಳುಹಿಸಿದರು.

ಆದರೆ ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು “ಗತ್”ಗೆ ಕಳುಹಿಸಿದ ನಂತರ ಯೆಹೋವನು “ಗತ್” ನಗರವನ್ನು ದಂಡಿಸಿದನು. ಅಲ್ಲಿಯ ಜನರು ಬಹಳ ಭಯಗೊಂಡರು. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರಿಗೂ ದೇವರು ತೊಂದರೆ ಮಾಡಿದನು. ಗತ್ ಜನರಿಗೂ ದೇವರು ಗಡ್ಡೆರೋಗವನ್ನು ಬರಮಾಡಿದನು. 10 ಆದ್ದರಿಂದ ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ಎಕ್ರೋನಿಗೆ ಕಳುಹಿಸಿದರು.

ದೇವರ ಪವಿತ್ರ ಪೆಟ್ಟಿಗೆಯು ಎಕ್ರೋನಿಗೆ ಬಂದಾಗ, ಅಲ್ಲಿನ ಜನರು, “ಇಸ್ರೇಲರ ದೇವರನ್ನು ನಮ್ಮ ನಗರವಾದ ಎಕ್ರೋನಿಗೆ ನೀವೇಕೆ ತರುತ್ತಿರುವಿರಿ? ನಮ್ಮನ್ನೂ ನಮ್ಮ ಜನರನ್ನೂ ನೀವು ಕೊಲ್ಲಬೇಕೆಂದಿರುವಿರಾ?” ಎಂದು ಆಕ್ಷೇಪಿಸಿದರು. 11 ಎಕ್ರೋನಿನ ಜನರು ಫಿಲಿಷ್ಟಿಯರ ಅಧಿಪತಿಗಳನ್ನೆಲ್ಲಾ ಒಟ್ಟಿಗೆ ಸೇರಿಸಿ, “ಇಸ್ರೇಲರ ದೇವರ ಪವಿತ್ರಪೆಟ್ಟಿಗೆಯು ನಮ್ಮನ್ನೂ ನಮ್ಮ ಜನರನ್ನೂ ಕೊಲ್ಲುವುದಕ್ಕೆ ಮೊದಲೇ ಅದನ್ನು ಅದರ ಸ್ವಸ್ಥಳಕ್ಕೆ ಕಳುಹಿಸಿ” ಎಂದು ಹೇಳಿದರು.

ಎಕ್ರೋನಿನ ಜನರು ಬಹಳ ಹೆದರಿಕೊಂಡಿದ್ದರು. ದೇವರು ಅಲ್ಲಿಯ ಜನರ ಜೀವನವನ್ನು ಬಹು ಕಠಿಣಗೊಳಿಸಿದ್ದನು. 12 ಬಹಳ ಜನರು ಸತ್ತರು; ಸಾಯದೆ ಉಳಿದ ಜನರಿಗೆ ಗಡ್ಡೆರೋಗವು ಬಂದಿತು. ಅವರ ಗೋಳಾಟವು ಆಕಾಶಮಂಡಲವನ್ನು ಮುಟ್ಟಿತ್ತು.

ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಅದರ ಸ್ವಂತ ಸ್ಥಳಕ್ಕೆ ಹಿಂತಿರುಗಿಸಿದ್ದು

ಫಿಲಿಷ್ಟಿಯರು ಪವಿತ್ರ ಪೆಟ್ಟಿಗೆಯನ್ನು ಏಳು ತಿಂಗಳ ಕಾಲ ತಮ್ಮ ಪ್ರದೇಶದಲ್ಲಿ ಇರಿಸಿಕೊಂಡಿದ್ದರು. ಫಿಲಿಷ್ಟಿಯರು ತಮ್ಮ ಅರ್ಚಕರನ್ನು ಮತ್ತು ಮಾಂತ್ರಿಕರನ್ನು ಕರೆದು, “ಯೆಹೋವನ ಪೆಟ್ಟಿಗೆಯನ್ನು ಏನು ಮಾಡೋಣ? ಇದನ್ನು ಮರಳಿ ಹಿಂದಕ್ಕೆ ಕಳುಹಿಸುವುದು ಹೇಗೆ?” ಎಂದು ಕೇಳಿದರು.

ಅರ್ಚಕರು ಮತ್ತು ಮಾಂತ್ರಿಕರು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ಕಳುಹಿಸುವುದಾದರೆ, ಬರಿದಾಗಿ ಕಳುಹಿಸಬೇಡಿ. ನೀವು ಕಾಣಿಕೆಗಳನ್ನು ಕಳುಹಿಸಲೇಬೇಕು. ಆಗ ಇಸ್ರೇಲರ ದೇವರು ನಿಮ್ಮ ಪಾಪಗಳನ್ನು ಪರಿಹರಿಸುತ್ತಾನೆ. ಆಗ ನೀವೆಲ್ಲಾ ಗುಣಹೊಂದುವಿರಿ; ಶುದ್ಧರಾಗುವಿರಿ. ದೇವರು ನಿಮ್ಮನ್ನು ದಂಡಿಸುವುದನ್ನು ನಿಲ್ಲಿಸಬೇಕಾದರೆ ನೀವು ಈ ಕಾರ್ಯಗಳನ್ನು ಮಾಡಬೇಕು. ಆಗ ದೇವರು ನಿಮ್ಮನ್ನು ಬಾಧಿಸುವುದಿಲ್ಲ” ಎಂದು ಉತ್ತರಿಸಿದರು.

ಫಿಲಿಷ್ಟಿಯರು, “ಇಸ್ರೇಲರ ದೇವರು ನಮ್ಮನ್ನು ಕ್ಷಮಿಸಬೇಕಾದರೆ ನಾವು ಯಾವ ಕಾಣಿಕೆಗಳನ್ನು ಕಳುಹಿಸಬೇಕು?” ಎಂದು ಕೇಳಿದರು.

ಅರ್ಚಕರು ಮತ್ತು ಮಾಂತ್ರಿಕರು, “ನಿಮ್ಮಲ್ಲಿ ಐದು ಮಂದಿ ಅಧಿಪತಿಗಳಿದ್ದೀರಿ. ಪ್ರತಿಯೊಂದು ನಗರಕ್ಕೆ ಒಬ್ಬ ಅಧಿಪತಿಯಿದ್ದಾನೆ. ನೀವು ಮತ್ತು ನಿಮ್ಮ ಅಧಿಪತಿಗಳೆಲ್ಲರೂ ಒಂದೇ ರೀತಿಯಲ್ಲಿ ತೊಂದರೆಗೊಳಗಾಗಿದ್ದೀರಿ. ಆದ್ದರಿಂದ ಚಿನ್ನದಲ್ಲಿ ಐದು ಗಡ್ಡೆಗಳನ್ನು ಹಾಗೂ ಐದು ಇಲಿಗಳನ್ನು ಮಾಡಿಸಬೇಕು. ಹೀಗೆ ನಿಮ್ಮ ದೇಶವನ್ನು ನಾಶಗೊಳಿಸುತ್ತಿರುವ ಗಡ್ಡೆಗಳ, ಇಲಿಗಳ ಮಾದರಿಗಳನ್ನು ಮಾಡಿಸಿರಿ. ಇಸ್ರೇಲರ ದೇವರಿಗೆ ಚಿನ್ನದ ಆ ಮಾದರಿಗಳನ್ನು ಕಾಣಿಕೆಯಾಗಿ ಸಲ್ಲಿಸಿರಿ. ಆಗ ಇಸ್ರೇಲರ ದೇವರು ನಿಮ್ಮನ್ನೂ ನಿಮ್ಮ ದೇವರುಗಳನ್ನೂ ನಿಮ್ಮ ದೇಶವನ್ನೂ ಶಿಕ್ಷಿಸುವುದನ್ನು ನಿಲ್ಲಿಸಬಹುದು. ಫರೋಹನಂತೆ ಮತ್ತು ಈಜಿಪ್ಟಿನವರಂತೆ ಮೊಂಡರಾಗಬೇಡಿ. ದೇವರು ಈಜಿಪ್ಟಿನವರನ್ನು ದಂಡಿಸಿದನು. ಆದ್ದರಿಂದ ಇಸ್ರೇಲರನ್ನು ಕಳುಹಿಸಿಕೊಡುವಂತೆ ಈಜಿಪ್ಟಿನವರನ್ನು ಬಲವಂತ ಮಾಡಲಾಯಿತು.

“ಈಗ ಒಂದು ಹೊಸ ಬಂಡಿಯನ್ನು ಮಾಡಿಸಿ ಮತ್ತು ಈಗ ತಾನೆ ಕರು ಹಾಕಿರುವ ಎರಡು ಹಸುಗಳನ್ನು ತೆಗೆದುಕೊಳ್ಳಿರಿ. ಈ ಹಸುಗಳು ಹೊಲಗಳಲ್ಲಿ ಹಿಂದೆಂದೂ ನೊಗ ಹೊತ್ತಿಲ್ಲದಂಥವುಗಳಾಗಿರಬೇಕು. ಈ ಹಸುಗಳನ್ನು ಬಂಡಿಗೆ ಹೂಡಿರಿ ಮತ್ತು ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ದೊಡ್ಡಿಯಲ್ಲಿ ಬಿಡಿರಿ. ಅವುಗಳು ತಮ್ಮ ತಾಯಂದಿರನ್ನು ಹಿಂಬಾಲಿಸಲು ಅವಕಾಶಕೊಡಕೂಡದು.[a] ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಡಿರಿ. ಚಿನ್ನದ ಮಾದರಿಗಳನ್ನು ಚೀಲದಲ್ಲಿಟ್ಟು ಪೆಟ್ಟಿಗೆಯ ಪಕ್ಕದಲ್ಲಿಡಿರಿ. ಈ ಚಿನ್ನದ ಮಾದರಿಗಳು ನೀವು ನಿಮ್ಮ ಪಾಪಕ್ಷಮೆಗಾಗಿ ದೇವರಿಗೆ ಕಳುಹಿಸುತ್ತಿರುವ ಕಾಣಿಕೆಗಳಾಗಿವೆ; ಬಂಡಿಯನ್ನು ಅದರ ದಾರಿಯಲ್ಲಿ ಕಳುಹಿಸಿರಿ. ಆದರೆ ಅದರ ಕಡೆ ಗಮನವಿರಲಿ. ಅದು ತಾನಾಗಿ ಇಸ್ರೇಲಿಗೆ ಸೇರಿದ ಬೇತ್‌ಷೆಮೆಷಿನ ಕಡೆಗೆ ಹೋದರೆ, ಆಗ ಆ ದೊಡ್ಡ ಕೇಡನ್ನು ನಮಗುಂಟು ಮಾಡಿದವನು ಯೆಹೋವನೇ ಸರಿ. ಆದರೆ ಹಸುಗಳು ಬೇತ್‌ಷೆಮೆಷಿಗೆ ಹೋಗದಿದ್ದರೆ, ನಮ್ಮನ್ನು ಶಿಕ್ಷಿಸಿದವನು ಯೆಹೋವನಲ್ಲವೆಂದು ನಮಗೆ ಗೊತ್ತಾಗುವುದು. ನಮಗುಂಟಾದ ಕಾಯಿಲೆಯು ತಾನಾಗಿಯೇ ಬಂದದ್ದೆಂದು ತಿಳಿಯುವುದು” ಎಂದು ಹೇಳಿದರು.

10 ಅರ್ಚಕರು ಮತ್ತು ಮಾಂತ್ರಿಕರು ಹೇಳಿದಂತೆಯೇ ಫಿಲಿಷ್ಟಿಯರು ಮಾಡಿದರು. ಫಿಲಿಷ್ಟಿಯರು ಆಗ ತಾನೇ ಕರುಹಾಕಿದ ಎರಡು ಹಸುಗಳನ್ನು ತಂದು, ಅವುಗಳನ್ನು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯ ದೊಡ್ಡಿಯಲ್ಲಿ ಬಿಟ್ಟರು. 11 ಆಮೇಲೆ ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಟ್ಟರು. ಅಲ್ಲದೆ ಚಿನ್ನದ ಗಡ್ಡೆಗಳನ್ನೂ ಇಲಿಗಳನ್ನೂ ಚೀಲದೊಳಗೆ ಹಾಕಿ ಬಂಡಿಯ ಮೇಲಿಟ್ಟರು. 12 ಹಸುಗಳು ಬೇತ್‌ಷೆಮೆಷಿಗೆ ನೇರವಾಗಿ ಹೋದವು. ಅವು ದಾರಿಯಲ್ಲಿಯೇ ಹೋದವು. ಅವು ದಾರಿಯುದ್ದಕ್ಕೂ ಕೂಗುತ್ತಾ ನಡೆದವು. ಅವು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯರ ಅಧಿಪತಿಗಳು ಬೇತ್‌ಷೆಮೆಷಿನ ಗಡಿಯವರೆಗೂ ಹಸುಗಳನ್ನು ಹಿಂಬಾಲಿಸಿಕೊಂಡು ಹೋದರು.

13 ಬೇತ್‌ಷೆಮೆಷಿನ ಕಣಿವೆಯಲ್ಲಿ ಅಲ್ಲಿನ ಜನರು ಗೋಧಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ನೋಡಿದಾಗ, ಪವಿತ್ರ ಪೆಟ್ಟಿಗೆಯು ಅವರಿಗೆ ಕಾಣಿಸಿತು. ಅವರಿಗೆ ಬಹಳ ಸಂತೋಷವಾಯಿತು. ಅವರು ಅದನ್ನು ಸ್ವೀಕರಿಸಲು ಓಡಿಹೋದರು. 14-15 ಬೇತ್‌ಷೆಮೆಷಿನ ಯೆಹೋಶುವನಿಗೆ ಸೇರಿದ ಹೊಲಕ್ಕೆ ಆ ಬಂಡಿಯು ಬಂದಿತು. ಆ ಹೊಲದ ಒಂದು ದೊಡ್ಡ ಕಲ್ಲಿನ ಬಳಿ ಆ ಬಂಡಿಯು ನಿಂತಿತು. ಬೇತ್‌ಷೆಮೆಷಿನ ಜನರು ಬಂಡಿಯ ಕಟ್ಟಿಗೆಗಳನ್ನು ಒಡೆದು ಆ ಹಸುಗಳನ್ನು ಯೆಹೋವನಿಗೆ ಆಹುತಿಯಾಗಿ ಅರ್ಪಿಸಿದರು.

ಕೆಲವು ಲೇವಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಅಲ್ಲದೆ ಅವರು ಚಿನ್ನದ ಮಾದರಿಗಳಿದ್ದ ಚೀಲವನ್ನು ಇಳಿಸಿದರು. ಲೇವಿಯರು ಯೆಹೋವನ ಪೆಟ್ಟಿಗೆಯನ್ನು ಮತ್ತು ಆ ಚೀಲವನ್ನು ದೊಡ್ಡಕಲ್ಲಿನ ಮೇಲಿಟ್ಟರು. ಅದೇ ದಿನ ಬೇತ್‌ಷೆಮೆಷಿನ ಜನರು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದರು.

16 ಬೇತ್‌ಷೆಮೆಷಿನ ಜನರು ಮಾಡಿದ್ದನ್ನೆಲ್ಲ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ನೋಡಿ ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.

17 ಈ ರೀತಿ ಫಿಲಿಷ್ಟಿಯರು ತಾವು ಯೆಹೋವನಿಗೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಚಿನ್ನದ ಗಡ್ಡೆಗಳನ್ನು ಕಾಣಿಕೆಗಳನ್ನಾಗಿ ಕಳುಹಿಸಿದರು. ಅವರು ಪ್ರತಿಯೊಂದು ಫಿಲಿಷ್ಟಿಯ ನಗರಕ್ಕೆ ಒಂದರಂತೆ ಚಿನ್ನದ ಗಡ್ಡೆಗಳನ್ನು ಕಳುಹಿಸಿದ್ದರು. ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ ಮತ್ತು ಎಕ್ರೋನ್‌ಗಳೇ ಆ ನಗರಗಳು. 18 ಫಿಲಿಷ್ಟಿಯರು ಚಿನ್ನದ ಇಲಿಗಳನ್ನೂ ಕಳುಹಿಸಿದ್ದರು. ಫಿಲಿಷ್ಟಿಯರ ಐದು ಅಧಿಪತಿಗಳಿಗೆ ಸೇರಿದ್ದ ಐದು ಪಟ್ಟಣಗಳ ಸಂಖ್ಯೆಗನುಸಾರವಾಗಿ ಈ ಇಲಿಗಳಿದ್ದವು. ಈ ಪಟ್ಟಣಗಳ ಸುತ್ತ ಗೋಡೆಗಳಿದ್ದು ಹಳ್ಳಿಗಳು ಈ ಪಟ್ಟಣಗಳನ್ನು ಸುತ್ತುವರಿದಿದ್ದವು. ಬೇತ್‌ಷೆಮೆಷಿನ ಜನರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಒಂದು ಕಲ್ಲಿನ ಮೇಲಿಟ್ಟರು. ಬೇತ್‌ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಆ ಕಲ್ಲು ಈಗಲೂ ಇದೆ.

19 ಆದರೆ ಯಾಜಕರಿಲ್ಲದ ಕಾರಣ ಬೇತ್‌ಷೆಮೆಷಿನ ಜನರು ಪವಿತ್ರ ಪೆಟ್ಟಿಗೆಯನ್ನು ಹಣಿಕಿ ನೋಡಿದ್ದರಿಂದ ಬೇತ್‌ಷೆಮೆಷಿನ ಎಪ್ಪತ್ತು ಜನರನ್ನು ಯೆಹೋವನು ಕೊಂದನು. ಯೆಹೋವನು ಕ್ರೂರವಾಗಿ ಶಿಕ್ಷಿಸಿದ್ದರಿಂದ ಬೇತ್‌ಷೆಮೆಷಿನ ಜನರು ಗೋಳಾಡಿ, 20 “ಈ ಪವಿತ್ರ ಪೆಟ್ಟಿಗೆಯನ್ನು ನೋಡಿಕೊಳ್ಳಬಲ್ಲ ಯಾಜಕನೆಲ್ಲಿದ್ದಾನೆ?[b] ಈ ಪೆಟ್ಟಿಗೆಯು ಇಲ್ಲಿಂದ ಎಲ್ಲಿಗೆ ಹೋಗಬೇಕಾಗಿದೆ?” ಎಂದು ಬೇತ್‌ಷೆಮೆಷಿನ ಜನರು ಪ್ರಶ್ನಿಸಿದರು.

21 ಕಿರ್ಯತ್ಯಾರೀಮಿನಲ್ಲಿ ಒಬ್ಬ ಯಾಜಕನಿದ್ದನು. ಬೇತ್‌ಷೆಮೆಷಿನ ಜನರು ಕಿರ್ಯತ್ಯಾರೀಮಿನವರ ಬಳಿಗೆ ಸಂದೇಶಕರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ತಂದಿರುವರು. ನೀವು ಬಂದು ಅದನ್ನು ನಿಮ್ಮ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ” ಎಂದು ತಿಳಿಸಿದರು.

ರೋಮ್ನಗರದವರಿಗೆ 5

ನೀತಿನಿರ್ಣಯ

ಹೀಗಿರಲಾಗಿ, ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ. ಆದಕಾರಣ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿದೆ. ಈಗ ನಾವು ಆನಂದಿಸುತ್ತಿರುವ ದೇವರ ಕೃಪಾಶ್ರಯಕ್ಕೆ ಕ್ರಿಸ್ತನೇ ನಮ್ಮನ್ನು ನಮ್ಮ ನಂಬಿಕೆಯ ಮೂಲಕ ತಂದಿದ್ದಾನೆ. ದೇವರ ಮಹಿಮೆಯನ್ನು ಹೊಂದುವೆವು ಎಂಬ ನಿರೀಕ್ಷೆಯು ನಮಗಿರುವುದರಿಂದ ನಾವು ಬಹು ಸಂತೋಷವಾಗಿದ್ದೇವೆ. ಅಲ್ಲದೆ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷವಾಗಿದ್ದೇವೆ. ಏಕೆಂದರೆ, ಈ ಕಷ್ಟಸಂಕಟಗಳು ನಮ್ಮಲ್ಲಿ ಹೆಚ್ಚು ತಾಳ್ಮೆಯನ್ನು ಉಂಟುಮಾಡುತ್ತವೆ. ನಾವು ಬಲಶಾಲಿಗಳಾಗಿದ್ದೇವೆ ಎಂಬುದಕ್ಕೆ ಈ ತಾಳ್ಮೆಯೇ ಆಧಾರ. ನಮಗೆ ನಿರೀಕ್ಷೆಯನ್ನು ಕೊಡುವಂಥದ್ದು ಈ ಆಧಾರವೇ. ನಮ್ಮ ಈ ನಿರೀಕ್ಷೆಯು ನಮ್ಮನ್ನು ಎಂದಿಗೂ ನಿರಾಶರನ್ನಾಗಿ ಮಾಡುವುದಿಲ್ಲ. ಅದು ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ದೇವರು ನಮಗೆ ಉಡುಗೊರೆಯಾಗಿ ಕೊಟ್ಟಿರುವ ಪವಿತ್ರಾತ್ಮನ ಮೂಲಕ ತನ್ನ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾನೆ.

ನಾವು ಬಲಹೀನರೂ ದೇವರಿಗೆ ವಿರೋಧವಾಗಿ ಜೀವಿಸುವವರೂ ಆಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ನಮಗೋಸ್ಕರ ಪ್ರಾಣಕೊಟ್ಟನು. ನೀತಿವಂತನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಒಬ್ಬನು ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಾಗಿರುವ ಒಬ್ಬನಿಗಾಗಿ ಪ್ರಾಣಕೊಡಲು ಒಬ್ಬನು ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ.

ನಾವು ಕ್ರಿಸ್ತನ ರಕ್ತದ ಮೂಲಕವಾಗಿ ನೀತಿವಂತರಾಗಿದ್ದೇವೆ. ಆದ್ದರಿಂದ ಆತನ ಮೂಲಕ ದೇವರ ಕೋಪದಿಂದ ಖಂಡಿತವಾಗಿ ತಪ್ಪಿಸಿಕೊಳ್ಳುತ್ತೇವೆ. 10 ಅಂದರೆ, ನಾವು ದೇವರ ಶತ್ರುಗಳಾಗಿದ್ದಾಗಲೇ, ದೇವರು ತನ್ನ ಮಗನ ಮರಣದ ಮೂಲಕವಾಗಿ ನಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೆ. ಈಗ ನಾವು ದೇವರ ಸ್ನೇಹಿತರಾಗಿರುವುದರಿಂದ ದೇವರು ತನ್ನ ಮಗನ ಪ್ರಾಣದ ಮೂಲಕ ನಮ್ಮನ್ನು ರಕ್ಷಿಸುವುದು ಮತ್ತಷ್ಟು ನಿಶ್ಚಯವಾಗಿದೆ. 11 ಇಷ್ಟು ಮಾತ್ರವಲ್ಲದೆ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಾವು ದೇವರಲ್ಲಿ ಹರ್ಷಿಸುತ್ತೇವೆ. ಈಗ ನಾವು ದೇವರ ಸ್ನೇಹಿತರಾಗಿರುವುದು ಯೇಸುವಿನಿಂದಲೇ.

ಆದಾಮ ಮತ್ತು ಕ್ರಿಸ್ತನು

12 ಒಬ್ಬ ಮನುಷ್ಯನು (ಆದಾಮ) ಮಾಡಿದ ಕೃತ್ಯದಿಂದ ಪಾಪವು ಲೋಕಕ್ಕೆ ಬಂದಿತು. ಆ ಪಾಪದೊಂದಿಗೆ ಮರಣವೂ ಬಂದಿತು. ಆದಕಾರಣವೇ ಎಲ್ಲಾ ಜನರು ಸಾಯಲೇಬೇಕು; ಏಕೆಂದರೆ ಎಲ್ಲಾ ಜನರು ಪಾಪ ಮಾಡಿದ್ದಾರೆ. 13 ಮೋಶೆಯ ಧರ್ಮಶಾಸ್ತ್ರಕ್ಕಿಂತ ಮೊದಲೇ ಪಾಪವು ಲೋಕದಲ್ಲಿತ್ತು. ಧರ್ಮಶಾಸ್ತ್ರವು ಇಲ್ಲದಿದ್ದರೆ, ದೇವರು ಜನರ ಪಾಪವನ್ನು ಪರಿಗಣಿಸುವುದಿಲ್ಲ. 14 ಆದರೆ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೆ ಎಲ್ಲಾ ಜನರು ಸಾಯಲೇಬೇಕಾಯಿತು. ಆದಾಮನು ಪಾಪ ಮಾಡಿದ್ದರಿಂದ ಸತ್ತನು. ದೇವರ ಆಜ್ಞೆಗೆ ಅವಿಧೇಯನಾದದ್ದೇ ಆ ಪಾಪ. ಆದರೆ ಆದಾಮನು ಮಾಡಿದ ಪಾಪಕ್ಕೆ ಸರಿಸಮಾನವಾದ ಪಾಪವನ್ನು ಮಾಡಿಲ್ಲದವರು ಸಹ ಸಾಯಬೇಕಾಯಿತು.

ಆದಾಮನು ಮುಂದಿನ ಕಾಲದಲ್ಲಿ ಬರಲಿದ್ದ ಒಬ್ಬಾತನಿಗೆ (ಕ್ರಿಸ್ತನಿಗೆ) ಮುನ್ಸೂಚನೆಯಾಗಿದ್ದನು. 15 ಆದರೆ ದೇವರ ಉಚಿತ ಕೊಡುಗೆಯು ಆದಾಮನ ಪಾಪದಂತಿಲ್ಲ. ಆ ಒಬ್ಬನು ಮಾಡಿದ ಪಾಪದ ದೆಸೆಯಿಂದಾಗಿ ಅನೇಕ ಜನರು ಸತ್ತರು. ಆದರೆ ಜನರು ದೇವರಿಂದ ಪಡೆದುಕೊಂಡ ಕೃಪೆಯು ಅದಕ್ಕಿಂತ ಬಹು ದೊಡ್ಡದಾಗಿದೆ. ಯೇಸು ಕ್ರಿಸ್ತನೆಂಬ ಒಬ್ಬ ಪುರುಷನ ಕೃಪೆಯ ಮೂಲಕ ದೇವರು ಉಚಿತವಾಗಿ ಕೊಡುವ “ಜೀವ”ವನ್ನು ಅನೇಕ ಜನರು ಹೊಂದಿಕೊಂಡರು. 16 ಆದಾಮನು ಒಮ್ಮೆ ಪಾಪಮಾಡಿದ ಮೇಲೆ ಅವನಿಗೆ ಅಪರಾಧಿ ಎಂದು ತೀರ್ಪು ನೀಡಲಾಯಿತು. ಆದರೆ ದೇವರ ಉಚಿತವಾದ ಕೊಡುಗೆ ಅದಕ್ಕೆ ತದ್ವಿರುದ್ಧವಾಗಿದೆ. ಅನೇಕ ಪಾಪಗಳ ದೆಸೆಯಿಂದ ದೇವರ ಉಚಿತವಾದ ಕೊಡುಗೆ ಬಂದಿತು. ಆ ಉಚಿತ ಕೊಡುಗೆ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಒಬ್ಬನು ಪಾಪ ಮಾಡಿದನು, ಆ ಒಬ್ಬನ ದೆಸೆಯಿಂದ ಮರಣವು ಎಲ್ಲಾ ಜನರ ಮೇಲೆ ಆಳ್ವಿಕೆ ನಡೆಸಿತು. ಆದರೆ ಈಗ ಕೆಲವು ಜನರು ದೇವರ ಪೂರ್ಣ ಕೃಪೆಯನ್ನು ಮತ್ತು ನೀತಿವಂತರನ್ನಾಗಿ ಮಾಡುವ ಆತನ ಉಚಿತವಾದ ಮಹಾ ಕೊಡುಗೆಯನ್ನು ಸ್ವೀಕರಿಸಿಕೊಳ್ಳುವರು. ನಿಶ್ಚಯವಾಗಿಯು ಅವರು ಯೇಸು ಕ್ರಿಸ್ತನೆಂಬ ಆ ಒಬ್ಬ ಪುರುಷನ ಮೂಲಕ, ನಿಜವಾದ ಜೀವವನ್ನು ಹೊಂದಿಕೊಳ್ಳುವರು ಮತ್ತು ಆಳುವರು.

18 ಹೀಗಿರಲಾಗಿ, ಆದಾಮನ ಒಂದು ಪಾಪವು ಎಲ್ಲಾ ಜನರಿಗೆ ಮರಣದಂಡನೆಯನ್ನು ತಂದಿತು. ಆದರೆ ಅದೇ ರೀತಿಯಲ್ಲಿ, ಕ್ರಿಸ್ತನು ಮಾಡಿದ ಒಂದೇ ಒಳ್ಳೆಯ ಕಾರ್ಯವು, ಎಲ್ಲಾ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. ಮತ್ತು ಆ ಜನರಿಗೆ ಅದು ನಿಜವಾದ ಜೀವವನ್ನು ತರುತ್ತದೆ. 19 ಒಬ್ಬನು ದೇವರಿಗೆ ಅವಿಧೇಯನಾದ್ದರಿಂದ ಎಲ್ಲಾ ಜನರು ಪಾಪಿಗಳಾದರು. ಆದರೆ ಅದೇ ರೀತಿಯಲ್ಲಿ, ಒಬ್ಬನು ದೇವರಿಗೆ ವಿಧೇಯನಾದ್ದರಿಂದ ಎಲ್ಲರೂ ನೀತಿವಂತರಾಗುವರು. 20 ಧರ್ಮಶಾಸ್ತ್ರ ಬಂದದ್ದರಿಂದ ಜನರಲ್ಲಿ ಹೆಚ್ಚು ಪಾಪಗಳು ಕಂಡುಬಂದವು. ಆದರೆ ಜನರು ಹೆಚ್ಚು ಪಾಪಗಳನ್ನು ಮಾಡಿದಾಗ, ದೇವರು ಅವರಿಗೆ ಹೆಚ್ಚು ಕೃಪೆಯನ್ನು ದಯಪಾಲಿಸಿದನು. 21 ಒಂದು ಕಾಲದಲ್ಲಿ ಪಾಪವು ಮರಣದ ಮೂಲಕ ನಮ್ಮ ಮೇಲೆ ಆಳ್ವಿಕೆ ನಡೆಸಿತು. ಆದರೆ ದೇವರು ಜನರನ್ನು ನೀತಿವಂತರನ್ನಾಗಿ ಮಾಡಬೇಕೆಂದು ತನ್ನ ಕೃಪೆಯನ್ನು ಹೆಚ್ಚಾಗಿ ಅನುಗ್ರಹಿಸಿದನು. ಈ ಕೃಪೆಯು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ನಿತ್ಯಜೀವವನ್ನು ತರುತ್ತದೆ.

ಯೆರೆಮೀಯ 43

43 ಯೆರೆಮೀಯನು ದೇವರಾದ ಯೆಹೋವನ ಸಂದೇಶವನ್ನು ಜನರಿಗೆ ಹೇಳಿ ಮುಗಿಸಿದನು. ಯೆಹೋವನು ತನ್ನ ಮೂಲಕ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲ ಯೆರೆಮೀಯನು ಅವರಿಗೆ ತಿಳಿಸಿದನು.

ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕೆಲವರು ದುರಹಂಕಾರಿಗಳಾಗಿದ್ದರು ಮತ್ತು ಹಟಮಾರಿಗಳಾಗಿದ್ದರು. ಈ ಜನರು ಯೆರೆಮೀಯನ ಮೇಲೆ ಕೋಪಗೊಂಡು, “ಯೆರೆಮೀಯನೇ, ನೀನು ಸುಳ್ಳು ಹೇಳುತ್ತಿರುವೆ. ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈಜಿಪ್ಟಿಗೆ ವಾಸಮಾಡಲು ಹೋಗಬಾರದು’ ಎಂದು ಹೇಳುವದಕ್ಕಾಗಿ ನಿನ್ನನ್ನು ಕಳುಹಿಸಿಲ್ಲ. ಯೆರೆಮೀಯನೇ, ನೀನು ನಮ್ಮ ವಿರುದ್ಧವಾಗಿರುವಂತೆ ನೇರೀಯನ ಮಗನಾದ ಬಾರೂಕನು ಪ್ರೋತ್ಸಾಹಿಸುತ್ತಿದ್ದಾನೆ ಎಂಬುದು ನಮ್ಮ ಆಲೋಚನೆ. ಅವನು ನಮ್ಮನ್ನು ಬಾಬಿಲೋನಿನ ಜನರ ಕೈಗೆ ಕೊಟ್ಟು ಅವರಿಂದ ಕೊಲ್ಲಿಸಬಯಸುತ್ತಾನೆ ಅಥವಾ ಅವರು ನಮ್ಮನ್ನು ಸೆರೆಹಿಡಿದು ಬಾಬಿಲೋನಿಗೆ ಕೊಂಡೊಯ್ಯುವಂತೆ ಮಾಡಬಯಸುತ್ತಾನೆಂದು ತೋರುತ್ತದೆ” ಎಂದು ಹೇಳಿದರು.

ಯೋಹಾನಾನನು, ಸೇನಾಧಿಪತಿಗಳು ಮತ್ತು ಎಲ್ಲಾ ಜನರು ಯೆಹೋವನ ಆಜ್ಞೆಯನ್ನು ಮೀರಿದರು. ಯೆಹೂದದಲ್ಲಿ ಇರಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು. ಆದರೆ ಯೆಹೋವನ ಆಜ್ಞೆಯನ್ನು ಉಲ್ಲಂಘಿಸಿ ಯೋಹಾನಾನನು ಮತ್ತು ಸೇನಾಧಿಪತಿಗಳು ಅಳಿದುಳಿದ ಜನರನ್ನು ಯೆಹೂದದಿಂದ ಈಜಿಪ್ಟಿಗೆ ಕರೆದುಕೊಂಡು ಹೋದರು. ಈ ಮುಂಚೆ ಶತ್ರುಗಳು ಆ ಜನರನ್ನು ಬೇರೆ ದೇಶಗಳಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಯೆಹೂದಕ್ಕೆ ತಿರುಗಿ ಬಂದಿದ್ದರು. ಈಗ ಯೋಹಾನಾನ ಮತ್ತು ಎಲ್ಲಾ ಸೈನ್ಯಾಧಿಕಾರಿಗಳು, ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದರು. ಆ ಜನಗಳಲ್ಲಿ ರಾಜನ ಹೆಣ್ಣುಮಕ್ಕಳಿದ್ದರು. (ನೆಬೂಜರದಾನನು ಗೆದಲ್ಯನನ್ನು ಆ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದನು. ನೆಬೂಜರದಾನನು ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು). ಯೋಹಾನಾನನು ಪ್ರವಾದಿಯಾದ ಯೆರೆಮೀಯನನ್ನು ಮತ್ತು ನೇರೀಯನ ಮಗನಾದ ಬಾರೂಕನನ್ನು ತೆಗೆದುಕೊಂಡು ಹೋದನು. ಆ ಜನರು ಯೆಹೋವನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆ ಎಲ್ಲಾ ಜನರು ಈಜಿಪ್ಟಿಗೆ ಹೋದರು. ಅವರು ತಹಪನೇಸ್ ಎಂಬ ಊರಿಗೆ ಸೇರಿದರು.

ತಹಪನೇಸ್ ಊರಿನಲ್ಲಿ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: “ಯೆರೆಮೀಯನೇ, ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಹೂಳಿ ಗಾರೆಯಿಂದ ಮುಚ್ಚಿಬಿಡು. ಯೆಹೂದದ ಜನರ ಎದುರಿನಲ್ಲಿಯೇ ಹೀಗೆ ಮಾಡು. 10 ನಿನ್ನನ್ನು ನೋಡುತ್ತಿದ್ದ ಆ ಯೆಹೂದ್ಯರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಇಲ್ಲಿಗೆ ಕರೆಸುತ್ತೇನೆ. ಅವನು ನನ್ನ ಸೇವಕನಾಗಿದ್ದಾನೆ. ನಾನು ಈ ಸ್ಥಳದಲ್ಲಿ ಹೂಳಿದ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಸ್ಥಾಪಿಸುತ್ತೇನೆ. ನೆಬೂಕದ್ನೆಚ್ಚರನು ಈ ಕಲ್ಲುಗಳ ಮೇಲೆ ತನ್ನ ಗುಡಾರವನ್ನು ಹಾಕುವನು. 11 ನೆಬೂಕದ್ನೆಚ್ಚರನು ಇಲ್ಲಿಗೆ ಬಂದು ಈಜಿಪ್ಟಿನ ಮೇಲೆ ಧಾಳಿ ಮಾಡುವನು. ಕೊಲ್ಲಬೇಕೆಂದು ಗೊತ್ತುಮಾಡಿದವರನ್ನು ಕೊಂದುಹಾಕುವನು; ಸೆರೆಹಿಡಿಯಬೇಕೆಂದು ಗೊತ್ತು ಮಾಡಿಕೊಂಡವರನ್ನು ಸೆರೆಹಿಡಿಯುವನು; ಖಡ್ಗದಿಂದ ಕೊಲೆಯಾಗಬೇಕೆಂದು ಗೊತ್ತುಪಡಿಸಿದವರ ಸಲುವಾಗಿ ಅವನು ಖಡ್ಗವನ್ನು ತರುವನು. 12 ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಬೂಕದ್ನೆಚ್ಚರನು ಬೆಂಕಿಯನ್ನು ಹೊತ್ತಿಸುವನು, ಅವನು ಆಲಯಗಳನ್ನು ಸುಟ್ಟು ಆ ವಿಗ್ರಹಗಳನ್ನು ತೆಗೆದುಕೊಂಡು ಹೋಗುವನು. ಕುರುಬನು ತನ್ನ ಬಟ್ಟೆಗಳಿಂದ ತಿಗಣೆ ಮತ್ತು ಹೇನುಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುವಂತೆ ನೆಬೂಕದ್ನೆಚ್ಚರನು ಈಜಿಪ್ಟನ್ನು ಬಿಟ್ಟು ಹೋಗುವನು. 13 ನೆಬೂಕದ್ನೆಚ್ಚರನು ಈಜಿಪ್ಟಿನ ಸೂರ್ಯ ದೇವಾಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ನಾಶಪಡಿಸುವನು. ಅವನು ಈಜಿಪ್ಟಿನ ಸುಳ್ಳುದೇವರುಗಳ ಆಲಯಗಳನ್ನು ಸುಟ್ಟುಹಾಕುವನು.’”

ಕೀರ್ತನೆಗಳು 19

ರಚನೆಗಾರ: ದಾವೀದ.

19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
    ಗಗನವು ಆತನ ಕೈಕೆಲಸವನ್ನು ತಿಳಿಸುವುದು.
ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
    ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
ಅವುಗಳ ಮಾತಾಗಲಿ
    ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
    ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.

ಆಕಾಶವು ಸೂರ್ಯನಿಗೆ ಮನೆಯಂತಿದೆ.
    ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
    ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
    ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
    ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International