Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 4

ಸಮುವೇಲನ ಸುದ್ದಿಯು ಇಸ್ರೇಲಿನಲ್ಲೆಲ್ಲಾ ಹರಡಿತು. ಏಲಿಯು ಬಹು ವೃದ್ಧನಾದನು. ಅವನ ಮಕ್ಕಳು ಯೆಹೋವನ ಸನ್ನಿಧಿಯಲ್ಲಿ ಕೆಟ್ಟಕಾರ್ಯಗಳನ್ನು ನಡೆಸುತ್ತಲೇ ಇದ್ದರು.

ಇಸ್ರೇಲರನ್ನು ಫಿಲಿಷ್ಟಿಯರು ಸೋಲಿಸುವರು

ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಲು ಒಟ್ಟುಗೂಡಿದರು. ಇಸ್ರೇಲರು ಫಿಲಿಷ್ಟಿಯರಿಗೆ ವಿರುದ್ಧವಾಗಿ ಹೊರಟು ಎಬೆನೆಜೆರಿನಲ್ಲಿ ಪಾಳೆಯ ಮಾಡಿಕೊಂಡರು; ಫಿಲಿಷ್ಟಿಯರು ಅಫೇಕಿನಲ್ಲಿ ಪಾಳೆಯ ಮಾಡಿಕೊಂಡರು. ಫಿಲಿಷ್ಟಿಯರು ಇಸ್ರೇಲರ ಮೇಲೆ ಆಕ್ರಮಣಮಾಡಲು ಸಿದ್ಧರಾದರು. ಹೋರಾಟ ಆರಂಭವಾಯಿತು.

ಫಿಲಿಷ್ಟಿಯರು ಇಸ್ರೇಲರನ್ನು ಸೋಲಿಸಿ ಇಸ್ರೇಲಿನ ಸೈನ್ಯದಲ್ಲಿ ನಾಲ್ಕು ಸಾವಿರ ಸೈನಿಕರನ್ನು ಸಂಹರಿಸಿದರು. ಇಸ್ರೇಲರ ಸೈನಿಕರು ಪಾಳೆಯಕ್ಕೆ ಹಿಂದಿರುಗಿದರು. ಇಸ್ರೇಲರ ಹಿರಿಯರು, “ಫಿಲಿಷ್ಟಿಯರು ನಮ್ಮನ್ನು ಸೋಲಿಸಲು ಯೆಹೋವನು ಅವಕಾಶ ನೀಡಿದ್ದೇಕೆ? ಶೀಲೋವಿನಿಂದ ಯೆಹೋವನ ಪವಿತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ತರಿಸೋಣ. ಈ ರೀತಿ ದೇವರು ನಮ್ಮೊಂದಿಗೆ ಯುದ್ಧರಂಗಕ್ಕೆ ಬರಲಿ. ಆತನು ನಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಹೇಳಿದರು.

ಆ ಕಾರಣಕ್ಕಾಗಿ ಶೀಲೋವಿಗೆ ಜನರನ್ನು ಕಳುಹಿಸಿದರು. ಸರ್ವಶಕ್ತನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಜನರು ತಂದರು. ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಅವುಗಳು ಯೆಹೋವನು ಕುಳಿತುಕೊಳ್ಳುವ ಸಿಂಹಾಸನದಂತಿದ್ದವು; ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಪೆಟ್ಟಿಗೆಯ ಜೊತೆಯಲ್ಲಿ ಬಂದರು.

ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಪಾಳೆಯಕ್ಕೆ ಬಂದಾಗ ಇಸ್ರೇಲರೆಲ್ಲರು ಆರ್ಭಟಿಸಿದರು. ಅವರ ಆರ್ಭಟವು ನೆಲವನ್ನು ನಡುಗಿಸಿತು. ಇಸ್ರೇಲರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿಸಿತು. “ಇಬ್ರಿಯರ ಪಾಳೆಯದಲ್ಲಿ ಆಗುತ್ತಿರುವ ಆರ್ಭಟಕ್ಕೆ ಕಾರಣವೇನು?” ಎಂದು ಅವರು ಕೇಳಿದರು.

ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಸ್ರೇಲರ ಪಾಳೆಯಕ್ಕೆ ತಂದಿರುವುದೇ ಅವರ ಆರ್ಭಟಕ್ಕೆ ಕಾರಣವೆಂದು ಫಿಲಿಷ್ಟಿಯರಿಗೆ ತಿಳಿದು ಬಂದಿತು. ಫಿಲಿಷ್ಟಿಯರು ಭಯಗೊಂಡು, “ದೇವರುಗಳೇ ಅವರ ಪಾಳೆಯಕ್ಕೆ ಬಂದಿದ್ದಾರೆ! ನಾವು ತೊಂದರೆಯಲ್ಲಿದ್ದೇವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ! ಅಯ್ಯೋ, ಮಹಾಶಕ್ತಿಶಾಲಿಗಳಾದ ಈ ದೇವರುಗಳಿಂದ ನಮ್ಮನ್ನು ರಕ್ಷಿಸುವವರು ಯಾರು! ಈಜಿಪ್ಟಿನವರಿಗೆ ಕಾಯಿಲೆಗಳನ್ನು ಬರಮಾಡಿದ ದೇವರುಗಳು ಇವರೇ ಅಲ್ಲವೇ. ಫಿಲಿಷ್ಟಿಯರೇ, ಧೈರ್ಯದಿಂದಿರಿ! ಶೂರರಂತೆ ಹೋರಾಡಿ! ಇಬ್ರಿಯರು ಪುರಾತನ ಕಾಲದಲ್ಲಿ ನಮಗೆ ಗುಲಾಮರಾಗಿದ್ದರು. ಆದಕಾರಣ ಶೂರರಂತೆ ಹೋರಾಡಿರಿ, ಇಲ್ಲವಾದರೆ ನೀವು ಅವರಿಗೆ ಗುಲಾಮರಾಗುವಿರಿ!” ಎಂದು ಹೇಳಿದರು.

10 ಫಿಲಿಷ್ಟಿಯರು ಶೌರ್ಯದಿಂದ ಹೋರಾಡಿ ಇಸ್ರೇಲರನ್ನು ಸೋಲಿಸಿದರು. ಇಸ್ರೇಲರ ಪ್ರತಿಯೊಬ್ಬ ಸೈನಿಕನೂ ತನ್ನ ಪಾಳೆಯಕ್ಕೆ ಓಡಿಹೋದನು. ಇಸ್ರೇಲರಿಗೆ ಭೀಕರ ಸೋಲಾಯಿತು. ಮೂವತ್ತು ಸಾವಿರ ಇಸ್ರೇಲರು ಹತರಾದರು. 11 ದೇವರ ಪವಿತ್ರ ಪೆಟ್ಟಿಗೆಯು ಫಿಲಿಷ್ಟಿಯರ ವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರನ್ನು ಅವರು ಕೊಂದರು.

12 ಆ ದಿನದಂದು ಬೆನ್ಯಾಮೀನ್ ಕುಲದ ಒಬ್ಬನು ದುಃಖದಿಂದ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಧೂಳನ್ನು ಹಾಕಿಕೊಂಡು, ರಣರಂಗದಿಂದ ತಪ್ಪಿಸಿಕೊಂಡು ಓಡಿಹೋದನು. 13 ಅವನು ಶೀಲೋವನ್ನು ತಲುಪಿದಾಗ ಏಲಿಯು ಪೀಠದ ಮೇಲೆ ಕುಳಿತಿದ್ದನು. ದೇವರ ಪವಿತ್ರ ಪೆಟ್ಟಿಗೆಗೆ ಏನಾಯಿತೋ ಎಂದು ಚಿಂತಿಸುತ್ತಾ ಏಲಿಯು ನಗರದ್ವಾರದಲ್ಲಿ ಕುರ್ಚಿಯ ಮೇಲೆ ಕಾಯುತ್ತಾ ಕುಳಿತಿದ್ದನು. ಆಗ ಬೆನ್ಯಾಮೀನ್ಯನು ಶೀಲೋವನ್ನು ಪ್ರವೇಶಿಸಿ ಅಲ್ಲಿನ ಕೆಟ್ಟ ಸುದ್ದಿಯನ್ನು ಹೇಳಿದನು. ನಗರದ ಜನರೆಲ್ಲರು ಜೋರಾಗಿ ಗೋಳಾಡಿದರು. 14-15 ಏಲಿಯು ತೊಂಭತ್ತೆಂಟು ವರ್ಷದ ವೃದ್ಧನಾಗಿದ್ದನು; ಅವನಿಗೆ ಕಣ್ಣು ಕಾಣುತ್ತಿರಲಿಲ್ಲ. ಅವನು ಅಳುವಿನ ಧ್ವನಿಯನ್ನು ಕೇಳಿ, “ಏಕಿಷ್ಟು ಗದ್ದಲ?” ಎಂದು ಕೇಳಿದನು.

16 ಆ ಬೆನ್ಯಾಮೀನ್ಯನು ಏಲಿಯ ಬಳಿಗೆ ಹೋಗಿ, “ನಾನು ಈ ದಿನವೇ ರಣರಂಗದಿಂದ ಓಡಿಬಂದೆನು” ಎಂದು ಹೇಳಿದನು.

ಏಲಿಯು, “ನನ್ನ ಮಗನೇ ಏನಾಯಿತು?” ಎಂದು ಕೇಳಿದನು.

17 ಆ ಬೆನ್ಯಾಮೀನ್ಯನು, “ಇಸ್ರೇಲರು ಫಿಲಿಷ್ಟಿಯರಿಂದ ಸೋತು, ಹಿಮ್ಮೆಟ್ಟಿದರು. ಇಸ್ರೇಲರ ಪಡೆಯು ಅನೇಕ ಸೈನಿಕರನ್ನು ಕಳೆದುಕೊಂಡಿತು. ನಿನ್ನ ಮಕ್ಕಳಿಬ್ಬರೂ ಸತ್ತರು. ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು” ಎಂದು ಹೇಳಿದನು.

18 ಯೆಹೋವನ ಪವಿತ್ರ ಪೆಟ್ಟಿಗೆಯ ವಿಚಾರವನ್ನು ಬೆನ್ಯಾಮೀನ್ಯನು ತಿಳಿಸಿದಾಗ, ಏಲಿಯು ಕುರ್ಚಿಯಿಂದ ಹಿಂದಕ್ಕೆ ಬಾಗಿಲಿನ ಸಮೀಪದಲ್ಲಿ ಬಿದ್ದನು; ಅವನ ಕುತ್ತಿಗೆಯು ಮುರಿದು ಬಿತ್ತು. ಏಲಿಯು ಮುದುಕನೂ ಬೊಜ್ಜುಳ್ಳವನೂ ಆಗಿದ್ದುದರಿಂದ ಸತ್ತನು. ಅವನು ಇಸ್ರೇಲರನ್ನು ನಲವತ್ತು ವರ್ಷ ನಡೆಸಿದನು.

ವೈಭವವು ಇಲ್ಲವಾಯಿತು

19 ಏಲಿಯ ಸೊಸೆ ಅಂದರೆ ಫೀನೆಹಾಸನ ಹೆಂಡತಿಯು ಗರ್ಭಿಣಿಯಾಗಿದ್ದಳು. ಹೆರಿಗೆಯ ಸಮಯ ಸಮೀಪಿಸಿತ್ತು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುಗಳ ವಶವಾದದ್ದನ್ನೂ ತನ್ನ ಮಾವನಾದ ಏಲಿಯು ಸತ್ತದ್ದನ್ನೂ ಗಂಡನಾದ ಫೀನೆಹಾಸನು ಸತ್ತ ಸುದ್ದಿಯನ್ನೂ ಅವಳು ಕೇಳಿದಳು. ಈ ಸುದ್ದಿಯನ್ನು ಕೇಳಿದ ತಕ್ಷಣ ಪ್ರಸವವೇದನೆಯಾಗಿ ಮಗುವನ್ನು ಹೆತ್ತಳು. 20 ಅವಳಿಗೆ ಸಹಾಯ ಮಾಡುತ್ತಿದ್ದ ಸ್ತ್ರೀಯರು, “ಚಿಂತಿಸಬೇಡ. ನೀನು ಗಂಡುಮಗುವಿಗೆ ಜನ್ಮ ನೀಡಿರುವೆ” ಎಂದು ಹೇಳಿದರು.

ಆದರೆ ಏಲಿಯ ಸೊಸೆಯು ಅವರ ಮಾತಿಗೆ ಉತ್ತರಿಸಲೂ ಇಲ್ಲ, ಲಕ್ಷ್ಯ ಕೊಡಲೂ ಇಲ್ಲ. 21 ಏಲಿಯ ಸೊಸೆಯು, “ಇಸ್ರೇಲರ ವೈಭವವು ಇಲ್ಲವಾಯಿತು” ಎಂದು ಹೇಳಿದಳು. ಅವಳು ತನ್ನ ಮಗುವಿಗೆ ಈಕಾಬೋದ್ ಎಂಬ ಹೆಸರಿಟ್ಟು ಮೃತಳಾದಳು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುವಶವಾದದ್ದರಿಂದ ಮಾವನು ಮತ್ತು ಗಂಡನು ಸತ್ತದ್ದರಿಂದ, ಆಕೆ ತನ್ನ ಮಗನಿಗೆ ಈಕಾಬೋದ್ ಎಂದು ಹೆಸರಿಟ್ಟಳು. 22 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಫಿಲಿಷ್ಟಿಯರು ತೆಗೆದುಕೊಂಡು ಹೋದದ್ದರಿಂದ ಆಕೆಯು, “ಇಸ್ರೇಲರ ವೈಭವ ಇಲ್ಲವಾಯಿತು” ಎಂದು ಹೇಳಿದಳು.

ರೋಮ್ನಗರದವರಿಗೆ 4

ಅಬ್ರಹಾಮನ ಉದಾಹರಣೆ

ಹಾಗಾದರೆ, ನಮ್ಮ ಪಿತೃವಾದ ಅಬ್ರಹಾಮನ ಬಗ್ಗೆ ನಾವು ಏನು ಹೇಳೋಣ? ಅವನು ನಂಬಿಕೆಯ ಬಗ್ಗೆ ಏನು ಕಲಿತುಕೊಂಡನು? ಅವನು ತನ್ನ ಕ್ರಿಯೆಗಳಿಂದ ನೀತಿವಂತನಾಗಿದ್ದರೆ ಹೊಗಳಿಕೊಳ್ಳಲು ಅವನಿಗೆ ಕಾರಣವಿರುತ್ತಿತ್ತು. ಆದರೆ ಅಬ್ರಹಾಮನು ದೇವರ ಮುಂದೆ ಹೊಗಳಿಕೊಳ್ಳಲು ಆಗಲಿಲ್ಲ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಇದು ಅಬ್ರಹಾಮನನ್ನು ನೀತಿವಂತನನ್ನಾಗಿ ಮಾಡಿತು”(A) ಎಂದು ಪವಿತ್ರ ಗ್ರಂಥವು ಹೇಳುತ್ತದೆ.

ದುಡಿದವನಿಗೆ ದೊರೆಯುವ ಸಂಬಳ ಉಡುಗೊರೆಯಲ್ಲ, ಅದು ಅವನಿಗೆ ಸಲ್ಲತಕ್ಕದ್ದೇ ಆಗಿದೆ. ಆದರೆ ಒಬ್ಬನು ತಾನು ಮಾಡುವ ಯಾವುದೇ ಕಾರ್ಯದ ಮೂಲಕವಾಗಲಿ ತನ್ನನ್ನು ನೀತಿವಂತನನ್ನಾಗಿ ಮಾಡಿಕೊಳ್ಳಲಾರನು. ಆದ್ದರಿಂದ ಆ ವ್ಯಕ್ತಿ ದೇವರಲ್ಲಿ ನಂಬಿಕೆ ಇಡಲೇಬೇಕು. ಆಗ ದೇವರು ಆ ವ್ಯಕ್ತಿಯ ನಂಬಿಕೆಯನ್ನು ಸ್ವೀಕರಿಸಿಕೊಂಡು ಅವನನ್ನು ನೀತಿವಂತನನ್ನಾಗಿ ಮಾಡುವನು. ದೇವರು ದುಷ್ಟರನ್ನು ಸಹ ನೀತಿವಂತರನ್ನಾಗಿ ಮಾಡುವನು. ದೇವರು ಒಬ್ಬನ ಒಳ್ಳೆಯ ಕಾರ್ಯಗಳನ್ನು ಲಕ್ಷಿಸದೆ ಅವನನ್ನು ನೀತಿವಂತನೆಂದು ಒಪ್ಪಿಕೊಂಡರೆ ಅವನು ನಿಜವಾಗಿಯೂ ಭಾಗ್ಯವಂತನೆಂದು ದಾವೀದನು ಸಹ ಹೇಳಿದ್ದಾನೆ:

“ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ
    ಯಾರ ಅಪರಾಧಗಳು ಮುಚ್ಚಲ್ಪಟ್ಟಿವೆಯೋ
    ಅವರು ನಿಜವಾಗಿಯೂ ಭಾಗ್ಯವಂತರು!
ಪ್ರಭುವು ಯಾವನ ಪಾಪವನ್ನು ಪರಿಗಣಿಸುವುದಿಲ್ಲವೋ
    ಅವನು ನಿಜವಾಗಿಯೂ ಭಾಗ್ಯವಂತನು!”(B)

ಈ ಭಾಗ್ಯವಿರುವುದು ಸುನ್ನತಿ[a] ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಈ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ಆ ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು. 10 ಆದರೆ ಇದು ಯಾವಾಗ ಆಯಿತು? ದೇವರು ಅಬ್ರಹಾಮನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೋ ಅಥವಾ ಸುನ್ನತಿಯಾದಮೇಲೋ? ದೇವರು ಅವನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೇ. 11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು. 12 ಅಲ್ಲದೆ ಸುನ್ನತಿ ಮಾಡಿಸಿಕೊಂಡಿರುವ ಜನರಿಗೂ ಸಹ ಅಬ್ರಹಾಮನು ತಂದೆಯಾಗಿದ್ದಾನೆ. ಆದರೆ ಅವನನ್ನು ಅವರ ತಂದೆಯನ್ನಾಗಿ ಮಾಡುವಂಥದ್ದು ಅವರ ಸುನ್ನತಿಯಲ್ಲ. ನಮ್ಮ ತಂದೆಯಾದ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವ ಮೊದಲು ಹೊಂದಿದ್ದ ನಂಬಿಕೆಗನುಸಾರವಾಗಿ ಅವರು ಜೀವಿಸಿದರೆ ಮಾತ್ರ ಅವನು ಅವರ ತಂದೆಯಾಗಿದ್ದಾನೆ.

ವಾಗ್ದಾನವನ್ನು ಹೊಂದಿಕೊಳ್ಳಲು ನಂಬಿಕೆಯೇ ಮಾರ್ಗ

13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ಆ ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ಆ ವಾಗ್ದಾನವನ್ನು ಹೊಂದಿಕೊಂಡನು. 14 ದೇವರು ವಾಗ್ದಾನ ಮಾಡಿದವುಗಳನ್ನು ಜನರು ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಹೊಂದಿಕೊಳ್ಳಬಲ್ಲವರಾಗಿದ್ದರೆ, ನಂಬಿಕೆಯು ನಿಷ್ಪ್ರಯೋಜಕವಾಗಿದೆ. ಅಲ್ಲದೆ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವೂ ನಿಷ್ಪ್ರಯೋಜಕವಾಗಿದೆ. 15 ಏಕೆಂದರೆ ಧರ್ಮಶಾಸ್ತ್ರಕ್ಕೆ ವಿಧೇಯರಾಗದೆ ಹೋದಾಗ, ಧರ್ಮಶಾಸ್ತ್ರವು ದೇವರ ಕೋಪವನ್ನು ಮಾತ್ರ ತರುತ್ತದೆ. ಆದರೆ ಧರ್ಮಶಾಸ್ತ್ರವು ಇಲ್ಲದಿದ್ದರೆ ಅವಿಧೇಯರಾಗುವುದಕ್ಕೆ ಏನೂ ಇರುವುದಿಲ್ಲ.

16 ಆದಕಾರಣ ಜನರು ನಂಬಿಕೆಯ ಮೂಲಕವಾಗಿ ದೇವರ ವಾಗ್ದಾನವನ್ನು ಹೊಂದಿಕೊಳ್ಳುವರು. ವಾಗ್ದಾನವು ಉಚಿತ ಕೊಡುಗೆಯಾಗಬೇಕೆಂತಲೇ ಹೀಗಾಯಿತು. ವಾಗ್ದಾನವು ಉಚಿತ ಕೊಡುಗೆಯಾಗಿದ್ದರೆ, ಅಬ್ರಹಾಮನ ಜನರೆಲ್ಲರೂ ಆ ವಾಗ್ದಾನವನ್ನು ಹೊಂದಿಕೊಳ್ಳುವರು. ಈ ವಾಗ್ದಾನವನ್ನು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿ ಜೀವಿಸುವ ಜನರಿಗೆ ಮಾತ್ರವಲ್ಲ, ಅಬ್ರಹಾಮನಂತೆ ನಂಬಿಕೆಯಲ್ಲಿ ಜೀವಿಸುವ ಎಲ್ಲರಿಗೂ ಕೊಡಲಾಗಿದೆ. ಅಬ್ರಹಾಮನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ. 17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ”(C) ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಇದು ದೇವರ ಸನ್ನಿಧಿಯಲ್ಲಿ ಸತ್ಯವಾಗಿದೆ. ಸತ್ತವರಿಗೆ ಜೀವವನ್ನು ಕೊಡುವವನೂ ಇನ್ನೂ ಸಂಭವಿಸಿಲ್ಲದ ಕಾರ್ಯಗಳನ್ನು ಮಾಡುವವನೂ ಆಗಿರುವ ದೇವರನ್ನು ಅಬ್ರಹಾಮನು ನಂಬಿದನು.

18 ಅಬ್ರಹಾಮನಿಗೆ ಮಕ್ಕಳಾಗುವ ಆಸ್ಪದವೇ ಇರಲಿಲ್ಲ. ಆದರೂ ಅವನು ದೇವರನ್ನು ನಂಬಿ ತನ್ನ ನಿರೀಕ್ಷೆಯಲ್ಲಿಯೇ ಮುಂದುವರೆದನು. ಆದಕಾರಣವೇ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. ದೇವರು ಅವನಿಗೆ, “ನೀನು ಅನೇಕ ಜನಾಂಗಗಳನ್ನು ಪಡೆಯುವೆ”(D) ಎಂದು ಹೇಳಿದ್ದಂತೆಯೇ ಇದಾಯಿತು. 19 ಅಬ್ರಹಾಮನು ಸುಮಾರು ನೂರು ವರ್ಷದವನಾಗಿದ್ದರಿಂದ ಅವನ ದೇಹವು ದುರ್ಬಲವಾಗಿತ್ತು. ಆದಕಾರಣ ಅವನು ಮಕ್ಕಳನ್ನು ಪಡೆಯುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಸಾರಳಿಗೂ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಅಬ್ರಹಾಮನು ಇದರ ಬಗ್ಗೆ ಆಲೋಚಿಸಿದನು. ಆದರೂ ದೇವರ ಮೇಲೆ ಅವನಿಗಿದ್ದ ನಂಬಿಕೆಯು ಬಲಹೀನವಾಗಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಸಂಶಯಪಡಲಿಲ್ಲ ಮತ್ತು ತನ್ನ ನಂಬಿಕೆಯನ್ನು ಕೊನೆಗೊಳಿಸಲಿಲ್ಲ. ಅವನು ತನ್ನ ನಂಬಿಕೆಯಲ್ಲಿ ಬಲವಾಗಿ ಬೆಳೆದನು ಮತ್ತು ದೇವರಿಗೆ ಸ್ತೋತ್ರ ಸಲ್ಲಿಸಿದನು. 21 ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು. 22 ಆದ್ದರಿಂದ, “ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಅದು ಅವನನ್ನು ನೀತಿವಂತನನ್ನಾಗಿ ಮಾಡಿತು.” 23 ಆ ಮಾತುಗಳು ಬರೆಯಲ್ಪಟ್ಟಿರುವುದು ಅಬ್ರಹಾಮನಿಗೆ ಮಾತ್ರವಲ್ಲ. 24 ನಮಗಾಗಿಯೂ ಬರೆಯಲ್ಪಟ್ಟಿವೆ. ನಾವು ನಂಬುವುದರಿಂದ ದೇವರು ನಮ್ಮನ್ನು ಸಹ ಸ್ವೀಕರಿಸಿಕೊಳ್ಳುವನು. ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನಲ್ಲಿ (ದೇವರಲ್ಲಿ) ನಾವು ನಂಬಿಕೆ ಇಡುತ್ತೇವೆ. 25 ನಮ್ಮ ಪಾಪಗಳ ದೆಸೆಯಿಂದ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು. ನಮ್ಮನ್ನು ನೀತಿವಂತರನ್ನಾಗಿ ಮಾಡುವುದಕ್ಕಾಗಿ ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಲಾಯಿತು.

ಯೆರೆಮೀಯ 42

42 ಅವರು ಗೇರುಥ್ ಕಿಮ್ಹಾಮಿನಲ್ಲಿಇಳಿದುಕೊಂಡಿದ್ದಾಗ ಯೋಹಾನಾನನೂ ಹೋಷಾಯನ ಮಗನಾದ ಯೆಜನ್ಯನೂ ಪ್ರವಾದಿಯಾದ ಯೆರೆಮೀಯನಲ್ಲಿಗೆ ಹೋದರು. ಯೋಹಾನಾನ ಮತ್ತು ಯೆಜನ್ಯನ ಸಂಗಡ ಎಲ್ಲಾ ಅಧಿಕಾರಿಗಳೂ ಅಪ್ರಮುಖರಿಂದ ಅತಿ ಪ್ರಮುಖವರೆಗಿನ ಎಲ್ಲಾ ಜನರೂ ಹೋದರು. ಅವರೆಲ್ಲರೂ ಅವನಿಗೆ, “ಯೆರೆಮೀಯನೇ, ನಮ್ಮ ಬೇಡಿಕೆಯನ್ನು ದಯವಿಟ್ಟು ಕೇಳು. ಯೆಹೂದ ಕುಲದಲ್ಲಿ ಅಳಿದುಳಿದ ಎಲ್ಲಾ ಜನರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು. ಯೆರೆಮೀಯನೇ, ನಮ್ಮಲ್ಲಿ ಈಗ ಬಹಳ ಜನ ಉಳಿದಿಲ್ಲವೆಂಬುದು ನಿನಗೆ ಗೊತ್ತಿದೆ. ಒಂದು ಕಾಲದಲ್ಲಿ ನಾವು ಬಹಳ ಜನರಿದ್ದೆವು. ಯೆರೆಮೀಯನೇ, ನಾವು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದನ್ನು ಹೇಳಬೇಕೆಂದು ನಿನ್ನ ದೇವರನ್ನು ಪ್ರಾರ್ಥಿಸು” ಎಂದರು.

ಆಗ ಪ್ರವಾದಿಯಾದ ಯೆರೆಮೀಯನು, “ನಾನು ಏನು ಮಾಡಬೇಕೆಂದು ನೀವು ಬಯಸುವಿರೆಂಬುದು ನನಗೆ ಗೊತ್ತು. ನೀವು ಹೇಳಿದಂತೆಯೇ, ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು. ಯೆಹೋವನು ಹೇಳಿದ್ದನ್ನೆಲ್ಲವನ್ನು ನಾನು ನಿಮಗೆ ಹೇಳುತ್ತೇನೆ. ನಾನು ನಿಮ್ಮಿಂದ ಏನನ್ನೂ ಮುಚ್ಚಿಡುವದಿಲ್ಲ” ಎಂದನು.

ಆಗ ಅವರು, “ನಿನ್ನ ದೇವರಾದ ಯೆಹೋವನು ಹೇಳಿದ ಎಲ್ಲವನ್ನು ನಾವು ಮಾಡದಿದ್ದಲ್ಲಿ ಯೆಹೋವನು ಸ್ವತಃ ನಮ್ಮ ವಿರುದ್ಧ ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಲ್ಲಲಿ. ನಾವು ಏನು ಮಾಡಬೇಕೆಂಬುದನ್ನು ತಿಳಿಸಲು ನಿನ್ನ ದೇವರಾದ ಯೆಹೋವನು ನಿನ್ನನ್ನು ಕಳುಹಿಸುತ್ತಾನೆಂದು ನಾವು ಬಲ್ಲೆವು. ಯೆಹೋವನ ಸಂದೇಶವು ನಮಗೆ ಇಷ್ಟವಾಗಲಿ ಅಥವಾ ಇಷ್ಟವಾಗದಿರಲಿ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ. ಯೆಹೋವನ ಸಂದೇಶಕ್ಕಾಗಿ ನಾವು ನಿನ್ನನ್ನು ಆತನಲ್ಲಿಗೆ ಕಳುಹಿಸುತ್ತಿದ್ದೇವೆ. ಆತನು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ಆಗ ನಮಗೆ ಒಳ್ಳೆಯದಾಗುತ್ತದೆ. ಹೌದು, ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ ನಾವು ನಡೆದುಕೊಳ್ಳುತ್ತೇವೆ” ಎಂದು ಹೇಳಿದರು.

ಹತ್ತು ದಿನಗಳ ನಂತರ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಆಗ ಯೆರೆಮೀಯನು ಕಾರೇಹನ ಮಗನಾದ ಯೋಹಾನಾನನನ್ನೂ ಅವನ ಜೊತೆಗಿದ್ದ ಸೇನಾಧಿಪತಿಗಳನ್ನೂ ಕರೆದನು. ಪ್ರಮುಖರು, ಅಪ್ರಮುಖರು ಎನ್ನದೆ ಒಟ್ಟಾಗಿ ಬರಲು ಎಲ್ಲಾ ಜನರನ್ನು ಯೆರೆಮೀಯನು ಕರೆದನು. ಯೆರೆಮೀಯನು ಅವರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ. ನೀವು ನನ್ನನ್ನು ಆತನಲ್ಲಿಗೆ ಕಳುಹಿಸಿದಿರಿ. ನೀವು ಕೇಳೆಂದು ನನಗೆ ಹೇಳಿದ್ದನ್ನು ನಾನು ಯೆಹೋವನಿಗೆ ಕೇಳಿದೆ. ಯೆಹೋವನು ಹೀಗೆ ಹೇಳುತ್ತಾನೆ. 10 ‘ನೀವು ಯೆಹೂದದಲ್ಲಿ ವಾಸಮಾಡಿದರೆ ನಾನು ನಿಮ್ಮನ್ನು ನಾಶಮಾಡದೆ ಬಲಶಾಲಿಗಳನ್ನಾಗಿ ಮಾಡುತ್ತೇನೆ. ನಾನು ನಿಮ್ಮನ್ನು ನೆಡುತ್ತೇನೆ, ನಿಮ್ಮನ್ನು ಕೀಳುವುದಿಲ್ಲ. ನಾನು ನಿಮಗೆ ಬರಮಾಡಿದ ಭಯಂಕರವಾದ ಕೇಡಿಗಾಗಿ ದುಃಖಿತನಾಗಿದ್ದೇನೆ. 11 ಈಗ ನೀವು ಬಾಬಿಲೋನಿನ ರಾಜನಿಗೆ ಹೆದರಿದ್ದೀರಿ. ಆದರೆ ಅವನಿಗೆ ಅಂಜಬೇಡಿರಿ.’ ಇದು ಯೆಹೋವನ ನುಡಿ. ‘ಏಕೆಂದರೆ ನಾನು ನಿಮ್ಮೊಂದಿಗಿದ್ದೇನೆ. ನಾನೇ ನಿಮ್ಮನ್ನು ರಕ್ಷಿಸುವೆನು. ನಾನು ನಿಮ್ಮನ್ನು ಕಷ್ಟದಿಂದ ಪಾರು ಮಾಡುವೆನು. ಅವನ ಕೈಗೆ ನೀವು ಸಿಗುವುದಿಲ್ಲ. 12 ನಾನು ನಿಮಗೆ ದಯೆತೋರುತ್ತೇನೆ. ಬಾಬಿಲೋನಿನ ರಾಜನು ಸಹ ನಿಮಗೆ ದಯೆತೋರುವನು. ಅವನು ನಿಮ್ಮನ್ನು ನಿಮ್ಮ ದೇಶಕ್ಕೆ ಮರಳಿ ತರುವನು.’ 13 ಆದರೆ ‘ನಾವು ಯೆಹೂದದಲ್ಲಿ ವಾಸಿಸುವದಿಲ್ಲ’ವೆಂದು ನೀವು ಹೇಳಬಹುದು. ನೀವು ಹಾಗೆ ಹೇಳಿದರೆ ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮೀರಿದಂತಾಗುತ್ತದೆ. 14 ‘ಇಲ್ಲ, ನಾವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡುವೆವು. ಅಲ್ಲಿ ನಮಗೆ ಯುದ್ಧದ ಭಯವಿಲ್ಲ. ಯುದ್ಧದ ತುತ್ತೂರಿಗಳ ಶಬ್ಧವು ಕೇಳುವುದಿಲ್ಲ; ಅಲ್ಲಿ ನಮಗೆ ಹಸಿವೆ ಇರುವುದಿಲ್ಲ’ ಎಂದು ನೀವು ಹೇಳಬಹುದು. 15 ಯೆಹೂದದ ಶ್ರೇಷ್ಠ ಜನಗಳೇ, ನೀವು ಒಂದುವೇಳೆ ಹಾಗೆ ಹೇಳುವುದಾದರೆ ಯೆಹೋವನ ಸಂದೇಶವನ್ನು ಕೇಳಿರಿ: ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ‘ನೀವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡಬೇಕೆಂದು ತೀರ್ಮಾನಿಸಿದ್ದರೆ ಪರಿಸ್ಥಿತಿ ಹೀಗಾಗುವುದು: 16 ನೀವು ಯುದ್ಧದ ಖಡ್ಗಕ್ಕೆ ಹೆದರುವಿರಿ. ಆದರೆ ಅದು ನಿಮ್ಮನ್ನು ಅಲ್ಲಿ ಸೋಲಿಸುವುದು. ನಿಮಗೆ ಹಸಿವಿನ ಬಗ್ಗೆ ಯೋಚನೆಯಿದೆ. ಆದರೆ ಈಜಿಪ್ಟಿನಲ್ಲಿ ನೀವು ಹಸಿವಿನಿಂದ ಬಳಲುವಿರಿ. ನೀವು ಅಲ್ಲಿ ಸತ್ತುಹೋಗುವಿರಿ. 17 ಈಜಿಪ್ಟಿಗೆ ಹೋಗಿ ಅಲ್ಲಿ ನೆಲೆಸಬೇಕೆಂದು ನಿಶ್ಚಯಿಸಿದವರೆಲ್ಲರೂ ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಈಜಿಪ್ಟಿಗೆ ಹೋದವರಲ್ಲಿ ಒಬ್ಬನೂ ಬದುಕಿರಲಾರ. ನಾನು ಅವರಿಗೆ ಉಂಟುಮಾಡುವ ಪೀಡೆಯಿಂದ ಒಬ್ಬನೂ ತಪ್ಪಿಸಿಕೊಳ್ಳಲಾರ.’

18 “ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನು ಹೀಗೆಂದನು: ‘ನಾನು ಜೆರುಸಲೇಮಿನ ಮೇಲೆ ನನ್ನ ಕೋಪವನ್ನು ತೋರಿಸಿದೆ. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ನಾನು ದಂಡಿಸಿದೆ. ಅದೇ ರೀತಿ, ಈಜಿಪ್ಟಿಗೆ ಹೋಗುವವರೆಲ್ಲರ ಮೇಲೂ ನಾನು ನನ್ನ ಕೋಪವನ್ನು ತೋರಿಸುವೆನು. ಬೇರೆಯವರಿಗೆ ಕೆಟ್ಟದಾಗಲಿ ಎಂದು ಹೇಳಬೇಕಾದಾಗ ಜನರು ನಿಮ್ಮಂತೆ ಆಗಲಿ ಎಂದು ನಿಮ್ಮ ಉದಾಹರಣೆಯನ್ನು ಕೊಡುವರು. ನೀವು ಒಂದು ಶಾಪದ ಶಬ್ದವಾಗುವಿರಿ. ಜನರು ನಿಮ್ಮಿಂದ ನಾಚಿಕೆಪಟ್ಟುಕೊಳ್ಳುವರು. ಜನರು ನಿಮ್ಮನ್ನು ಅಪಮಾನ ಮಾಡುವರು. ಯೆಹೂದವನ್ನು ಪುನಃ ನೀವು ಎಂದೂ ನೋಡುವದಿಲ್ಲ.’

19 “ಯೆಹೂದ್ಯರಲ್ಲಿ ಅಳಿದುಳಿದವರೇ, ಯೆಹೋವನು ನಿಮಗೆ, ‘ಈಜಿಪ್ಟಿಗೆ ಹೋಗಬೇಡಿರಿ.’ ಎಂದು ಹೇಳಿದ್ದಾನೆ, ನಾನು ಈಗಲೇ ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. 20 ನೀವು ನಿಮಗೆ ಮರಣವನ್ನು ಬರಮಾಡುವ ತಪ್ಪನ್ನು ಮಾಡುತ್ತಿದ್ದೀರಿ. ನೀವು ನನ್ನನ್ನು ನಿಮ್ಮ ದೇವರಾದ ಯೆಹೋವನಲ್ಲಿಗೆ ಕಳುಹಿಸಿದಿರಿ. ‘ನಮಗಾಗಿ ಯೆಹೋವನಾದ ನಮ್ಮ ದೇವರನ್ನು ಪ್ರಾರ್ಥಿಸು. ದೇವರು ಮಾಡಬೇಕೆಂದು ಹೇಳಿದ್ದೆಲ್ಲವನ್ನು ನಮಗೆ ಹೇಳು, ನಾವು ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ’ ಎಂದು ನೀವು ಹೇಳಿದ್ದಿರಿ. 21 ಇಂದು, ನಾನು ನಿಮಗೆ ಯೆಹೋವನ ಸಂದೇಶವನ್ನು ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. ನನ್ನ ಮೂಲಕ ಆತನು ನಿಮಗೆ ಹೇಳಿದ ಯಾವ ಮಾತನ್ನೂ ನೀವು ಕೇಳಲಿಲ್ಲ. 22 ಈಗ ನೀವು ಇದನ್ನು ನಿಶ್ಚಿತವಾಗಿ ತಿಳಿದುಕೊಳ್ಳಿ. ನೀವು ಈಜಿಪ್ಟಿನಲ್ಲಿ ವಾಸಮಾಡಲು ಹೋಗಬೇಕೆನ್ನುವಿರಿ. ಆದರೆ ಈಜಿಪ್ಟಿನಲ್ಲಿ ನೀವು ಖಡ್ಗದಿಂದಾದರೂ ಸಾಯುವಿರಿ, ಹಸಿವಿನಿಂದಾದರೂ ಸಾಯುವಿರಿ, ಅಥವಾ ಭಯಂಕರವಾದ ವ್ಯಾಧಿಯಿಂದಾದರೂ ಸಾಯುವಿರಿ.”

ಕೀರ್ತನೆಗಳು 18

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
    ಪರ್ವತಗಳ ಬುನಾದಿಗಳು ಕಂಪಿಸಿದವು.
ಆತನ ಮೂಗಿನಿಂದ ಹೊಗೆಯು ಬಂದಿತು;
    ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
    ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
10 ಕೆರೂಬಿಗಳ ಮೇಲೆ ಆಸೀನನಾಗಿ
    ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
11 ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
    ಆತನು ಮರೆಯಾದನು.
12 ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
    ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
13 ಯೆಹೋವನು ಆಕಾಶದಲ್ಲಿ ಗುಡುಗಿದನು;
    ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
14 ಆತನು ಬಾಣಗಳನ್ನು[b] ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
    ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.

15 ಯೆಹೋವನೇ, ನೀನು ಆಜ್ಞಾಪಿಸಿದಾಗ
    ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
    ಭೂಮಿಯ ಅಸ್ತಿವಾರಗಳೂ ಕಾಣಿಸಿದವು.

16 ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
    ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
17 ನನ್ನನ್ನು ದ್ವೇಷಿಸುವ ವೈರಿಗಳು
    ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
18 ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
    ಯೆಹೋವನು ನನಗೆ ಸಹಾಯಕನಾಗಿ ಬಂದನು.
19 ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
    ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.
20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
    ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
    ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
    ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
    ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
    ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.

25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
    ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
    ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
    ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
    ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
    ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
    ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.

30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
    ಯೆಹೋವನ ಮಾತುಗಳು ಸತ್ಯವಾಗಿವೆ.
    ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
31 ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ.
    ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
32 ಆತನೇ, ನನಗೆ ಬಲವನ್ನು ಕೊಡುವನು;
    ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.
33 ಆತನು ನನ್ನ ಪಾದಗಳನ್ನು ಜಿಂಕೆಯಂತೆ[c] ವೇಗಗೊಳಿಸುವನು.
    ಆತನು ನನ್ನನ್ನು ಸ್ಥಿರಗೊಳಿಸುವನು; ಎತ್ತರವಾದ ಸ್ಥಳಗಳಲ್ಲಿ ಬೀಳದಂತೆ ದೃಢಪಡಿಸುವನು.
34 ಆತನು ನನ್ನನ್ನು ಯುದ್ಧಕ್ಕೆ ತರಬೇತಿಗೊಳಿಸುವನು.
    ಆದ್ದರಿಂದ ನನ್ನ ತೋಳುಗಳು ದೊಡ್ಡ ಬಿಲ್ಲಿನಿಂದ ಬಾಣವನ್ನು ಎಸೆಯಬಲ್ಲವು.
    ಆದ್ದರಿಂದ ನಾನು ಬಲವಾದ ಬಿಲ್ಲಿನ ತಂತಿಯನ್ನು ಎಸೆಯಬಲ್ಲೆ.

35 ದೇವರೇ, ನಿನ್ನ ವಿಜಯದ ಗುರಾಣಿಯನ್ನು ನೀನು ನನಗೆ ಕೊಟ್ಟಿರುವೆ.
    ನಿನ್ನ ಬಲಗೈ ನನಗೆ ಆಧಾರ ನೀಡುತ್ತದೆ.
    ನೀನು ನನ್ನನ್ನು ಪದೇಪದೇ ಬಲಗೊಳಿಸಿರುವೆ.
36 ದೇವರೇ, ನಾನು ಮುಗ್ಗರಿಸದೆ ನಡೆಯಲು
    ನನ್ನ ಕಾಲುಗಳನ್ನೂ ಹರಡುಗಳನ್ನೂ ಬಲಗೊಳಿಸು.

37 ಆಗ ನಾನು ಶತ್ರುಗಳನ್ನು ಬೆನ್ನಟ್ಟಿ ಹಿಡಿಯಲು ಶಕ್ತನಾಗುವೆ.
    ಅವರನ್ನು ನಾಶಮಾಡುವ ತನಕ ನಾನು ಹಿಂತಿರುಗಿ ಬರುವುದಿಲ್ಲ.
38 ನಾನು ನನ್ನ ಶತ್ರುಗಳನ್ನು ಸೋಲಿಸಿ ಅವರನ್ನು ಏಳಲಾರದಂತೆ ಮಾಡುವೆನು;
    ನನ್ನ ಶತ್ರುಗಳು ನನ್ನ ಪಾದಗಳ ಕೆಳಗೇ ಇರುವರು.
39 ದೇವರೇ, ಯುದ್ಧದಲ್ಲಿ ನೀನು ನನ್ನನ್ನು ಬಲಿಷ್ಠನನ್ನಾಗಿ ಮಾಡಿದೆ;
    ಎಲ್ಲಾ ಶತ್ರುಗಳು ನನ್ನ ಎದುರಿನಲ್ಲಿ ಬೀಳುವಂತೆ ಮಾಡಿದೆ.
40 ನನ್ನ ಶತ್ರುಗಳಿಗೆ ಕತ್ತಿನ ಮೇಲೆ ಹೊಡೆದು ಕೆಳಗುರುಳಿಸಲು
    ನೀನು ನನಗೆ ಅವಕಾಶನೀಡಿದೆ.
41 ನನ್ನ ಶತ್ರುಗಳು ಸಹಾಯಕ್ಕಾಗಿ ಕೂಗಿಕೊಂಡರು.
    ಆದರೆ ಅವರನ್ನು ರಕ್ಷಿಸಲು ಯಾರೂ ಇರಲಿಲ್ಲ.
ಅವರು ಯೆಹೋವನನ್ನೂ ಕೂಗಿಕೊಂಡರು;
    ಆದರೆ ಆತನೂ ಅವರಿಗೆ ಉತ್ತರಿಸಲಿಲ್ಲ.
42 ನಾನು ನನ್ನ ಶತ್ರುಗಳನ್ನು ಹೊಡೆದು ತುಂಡುತುಂಡು ಮಾಡುವೆನು; ಜಜ್ಜಿ ಪುಡಿಪುಡಿ ಮಾಡುವೆನು;
    ಗಾಳಿ ಬಡಿದುಕೊಂಡು ಹೋಗುವ ಧೂಳಿನಂತೆ ಅವರಾಗುವರು.

43 ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
    ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
    ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
44 ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
    ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
45 ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
    ತಮ್ಮ ಕೋಟೆಗಳಿಂದ ಬರುವರು.

46 ಯೆಹೋವನು ಜೀವಸ್ವರೂಪನಾಗಿದ್ದಾನೆ.
    ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
    ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
47 ದೇವರು ನನ್ನ ವೈರಿಗಳನ್ನು ದಂಡಿಸಿ
    ಅವರನ್ನು ನನಗೆ ಅಧೀನಪಡಿಸಿದ್ದಾನೆ.
48     ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ.

ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
    ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
49 ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
    ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.

50 ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
    ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
    ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International