M’Cheyne Bible Reading Plan
ಸಮುವೇಲನಿಗೆ ದೇವರ ಕರೆ
3 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ಯೆಹೋವನು ಜನರೊಂದಿಗೆ ಪದೇಪದೇ ಮಾತಾಡುತ್ತಿರಲಿಲ್ಲ; ದರ್ಶನಗಳ ಸಂಖ್ಯೆಯೂ ಕಡಿಮೆಯಾಗಿತ್ತು.
2 ಏಲಿಯ ಕಣ್ಣುಗಳು ಮಂಜಾಗಿ ಕುರುಡನೆನ್ನುವಷ್ಟು ಕಾಣುತ್ತಿರಲಿಲ್ಲ. ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. 3 ಸಮುವೇಲನು ಯೆಹೋವನ ಪವಿತ್ರ ಆಲಯದಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ಯೆಹೋವನ ಪವಿತ್ರ ಪೆಟ್ಟಿಗೆಯು ಅಲ್ಲಿಯೇ ಇತ್ತು. ಯೆಹೋವನ ದೀಪವು ಇನ್ನೂ ಬೆಳಗುತ್ತಿತ್ತು. 4 ಯೆಹೋವನು ಸಮುವೇಲನನ್ನು ಕರೆದನು. ಸಮುವೇಲನು, “ಇಗೋ, ಇಲ್ಲಿದ್ದೇನೆ” ಎಂದನು. 5 ಏಲಿಯು ಕರೆದಿರಬಹುದೆಂದು ಸಮುವೇಲನು ನೆನೆಸಿದನು. ಆದ್ದರಿಂದ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಆದರೆ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ” ಅಂದನು.
ಸಮುವೇಲನು ಹೋಗಿ ಮಲಗಿಕೊಂಡನು. 6 ನಂತರ ಯೆಹೋವನು, “ಸಮುವೇಲನೇ” ಎಂದು ಮತ್ತೆ ಕರೆದನು. ಸಮುವೇಲನು ಮತ್ತೆ ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಎಂದು ಹೇಳಿದನು.
ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು.
7 ಆ ವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಯೆಹೋವನು ಅವನೊಂದಿಗೆ ನೇರವಾಗಿ ಮಾತಾಡಿರಲಿಲ್ಲ.[a]
8 ಯೆಹೋವನು ಸಮುವೇಲನನ್ನು ಮೂರನೆಯ ಸಲ ಕರೆದನು. ಸಮುವೇಲನು ಮತ್ತೆ ಮೇಲೆದ್ದು ಏಲಿಯನ ಬಳಿಗೆ ಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಬಾಲಕನನ್ನು ಕರೆಯುತ್ತಿರುವವನು ಯೆಹೋವನೆಂಬುದು ಏಲಿಗೆ ಆಗ ಅರ್ಥವಾಯಿತು. 9 ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೋ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು.
ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು. 10 ಯೆಹೋವನು ಅಲ್ಲಿ ಪ್ರತ್ಯಕ್ಷನಾಗಿ ನಿಂತು ಮೊದಲು ಕರೆದಂತೆಯೇ “ಸಮುವೇಲನೇ, ಸಮುವೇಲನೇ” ಎಂದು ಕರೆದನು.
ಸಮುವೇಲನು, “ಅಪ್ಪಣೆಯಾಗಲಿ, ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.
11 ಯೆಹೋವನು ಸಮುವೇಲನಿಗೆ, “ನಾನು ಇಸ್ರೇಲಿನಲ್ಲಿ ಒಂದು ಕಾರ್ಯವನ್ನು ಶೀಘ್ರದಲ್ಲೇ ಮಾಡುವೆನು. ಈ ಕಾರ್ಯದ ಬಗ್ಗೆ ಕೇಳಿದ ಜನರು ಗಾಬರಿಗೊಳ್ಳುವರು. 12 ನಾನು ಇದನ್ನು ಏಲಿ ಮತ್ತು ಅವನ ಕುಟುಂಬದ ವಿರುದ್ಧ ಸಂಪೂರ್ಣವಾಗಿ ಮಾಡುತ್ತೇನೆ. 13 ಏಲಿಯ ಕುಟುಂಬವನ್ನು ನಿತ್ಯದಂಡನೆಗೆ ಗುರಿಪಡಿಸುತ್ತೇನೆಂದು ನಾನು ಏಲಿಗೆ ಹೇಳಿರುವೆನು. ಏಲಿಯ ಮಕ್ಕಳು ನನಗೆ ವಿರೋಧವಾಗಿ ಮಾತಾಡಿದ್ದರಿಂದ ಮತ್ತು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನಾನು ಇದನ್ನು ಮಾಡುತ್ತೇನೆ. ಅಲ್ಲದೆ ಅವರನ್ನು ಹತೋಟಿಯಲ್ಲಿಡಲು ಏಲಿಗೆ ಸಾಧ್ಯವಾಗಲಿಲ್ಲ. 14 ಆದಕಾರಣವೇ, ಏಲಿಯ ಕುಟುಂಬವು ಅರ್ಪಿಸುವ ಯಜ್ಞವಾಗಲಿ ಧಾನ್ಯನೈವೇದ್ಯವಾಗಲಿ ಅವರ ಪಾಪಗಳಿಗೆ ಪ್ರಾಯಶ್ಚಿತ್ತವಾಗುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
15 ಸಮುವೇಲನು ನಿದ್ರಿಸಿದನು. ಅವನು ಮುಂಜಾನೆ ಮೇಲೆದ್ದು ಯೆಹೋವನ ಆಲಯದ ಬಾಗಿಲುಗಳನ್ನು ತೆರೆದನು. ಸಮುವೇಲನು ತಾನು ಕಂಡ ದರ್ಶನದ ಬಗ್ಗೆ ಏಲಿಗೆ ತಿಳಿಸಲು ಭಯಪಟ್ಟನು.
16 ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು.
ಸಮುವೇಲನು, “ಇಗೋ, ಇದ್ದೇನೆ” ಅಂದನು.
17 ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.
18 ಸಮುವೇಲನು ಏನನ್ನೂ ಮುಚ್ಚಿಡದೆ, ಎಲ್ಲವನ್ನೂ ಏಲಿಗೆ ತಿಳಿಸಿದನು.
ಏಲಿಯು, “ಆತನು ಯೆಹೋವ. ಆತನು ತನಗೆ ಸರಿಕಾಣುವದನ್ನೇ ಮಾಡಲಿ” ಎಂದು ಹೇಳಿದನು.
19 ಯೆಹೋವನು ಸಮುವೇಲನ ಸಂಗಡವಿದ್ದನು; ಸಮುವೇಲನು ಬೆಳೆದು ದೊಡ್ಡವನಾದನು; ಸಮುವೇಲನ ಯಾವ ಸಂದೇಶವೂ ಸುಳ್ಳಾಗದಂತೆ ಯೆಹೋವನು ನೋಡಿಕೊಂಡನು. 20 ಸಮುವೇಲನು ಯೆಹೋವನ ನಿಜಪ್ರವಾದಿಯೆಂಬುದು ದಾನಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರೇಲರಿಗೂ ಆಗ ತಿಳಿದು ಬಂದಿತು. 21 ಯೆಹೋವನು ಶೀಲೋವಿನಲ್ಲಿ ಸಮುವೇಲನಿಗೆ ದರ್ಶನ ಕೊಡುವುದನ್ನು ಮುಂದುವರಿಸಿದನು. ಯೆಹೋವನು ಸಮುವೇಲನಿಗೆ ತನ್ನ ವಾಕ್ಯದ ಮೂಲಕ ತನ್ನನ್ನು ಪ್ರಕಟಿಸಿಕೊಂಡನು.
3 ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ? 2 ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು. 3 ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ? 4 ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ:
“ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು.
ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.”(A)
5 ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) 6 ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.
7 “ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು. 8 “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.
ಎಲ್ಲಾ ಜನರು ಅಪರಾಧಿಗಳಾಗಿದ್ದಾರೆ
9 ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ. 10 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:
“ಪಾಪವಿಲ್ಲದ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!
11 ಅರ್ಥಮಾಡಿಕೊಳ್ಳುವ ಒಬ್ಬನೂ ಇಲ್ಲ.
ದೇವರೊಂದಿಗಿರಲು ನಿಜವಾಗಿ ಬಯಸುವ ಒಬ್ಬನೂ ಇಲ್ಲ.
12 ಎಲ್ಲಾ ಜನರು ದಾರಿ ತಪ್ಪಿದ್ದಾರೆ.
ಎಲ್ಲಾ ಜನರು ಅಯೋಗ್ಯರಾಗಿದ್ದಾರೆ.
ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!”(B)
13 “ಜನರ ಬಾಯಿಗಳು ತೆರೆದ ಸಮಾಧಿಗಳಂತಿವೆ.
ಅವರು ಸುಳ್ಳು ಹೇಳಲು ತಮ್ಮ ನಾಲಿಗೆಗಳನ್ನು ಬಳಸುತ್ತಾರೆ.”(C)
“ಅವರು ಹೇಳುವ ಸಂಗತಿಗಳು ವಿಷಪೂರಿತವಾದ ಹಾವುಗಳಂತಿವೆ.”(D)
14 “ಅವರ ಬಾಯಿಗಳಲ್ಲಿ ಶಾಪವೂ ಕಠೋರತೆಯೂ ತುಂಬಿವೆ.”(E)
15 “ಹಿಂಸಿಸಲು ಮತ್ತು ಕೊಲ್ಲಲು ಜನರು ಯಾವಾಗಲೂ ಸಿದ್ಧರಾಗಿದ್ದಾರೆ.
16 ಅವರು ಹೋದಲ್ಲೆಲ್ಲಾ ನಾಶನವನ್ನೂ ಸಂಕಟವನ್ನೂ ಬರಮಾಡುತ್ತಾರೆ.
17 ಜನರು ಶಾಂತಿಯ ಮಾರ್ಗವನ್ನು ತಿಳಿದಿಲ್ಲ.”(F)
18 “ಅವರಿಗೆ ದೇವರಲ್ಲಿ ಭಯವಾಗಲಿ ಗೌರವವಾಗಲಿ ಇಲ್ಲ.”(G)
19 ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ. 20 ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಯಾರಿಗೂ ಸಾಧ್ಯವಿಲ್ಲ. ಧರ್ಮಶಾಸ್ತ್ರವು ನಮ್ಮ ಪಾಪವನ್ನು ಮಾತ್ರ ತೋರ್ಪಡಿಸುತ್ತದೆ.
ದೇವರು ಜನರನ್ನು ನೀತಿವಂತರನ್ನಾಗಿ ಮಾಡುವ ಬಗೆ
21 ಆದರೆ ಈಗ ದೇವರು ಧರ್ಮಶಾಸ್ತ್ರದ ನೆರವಿಲ್ಲದೆಯೇ ಜನರನ್ನು ನೀತಿವಂತರನ್ನಾಗಿ ಮಾಡುವ ಮಾರ್ಗವನ್ನು ತೋರಿಸಿದ್ದಾನೆ. ಧರ್ಮಶಾಸ್ತ್ರ ಮತ್ತು ಪ್ರವಾದಿಗಳು ಈ ಹೊಸ ಮಾರ್ಗದ ಬಗ್ಗೆ ನಮಗೆ ಹೇಳಿದ್ದಾರೆ. 22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ. 23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ. 24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ. 25 ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು. 26 ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.
27 ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ. 28 ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ. 29 ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ. 30 ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. 31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.
41 ಏಳನೇ ತಿಂಗಳಿನಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನಲ್ಲಿಗೆ ಬಂದನು. ಇಷ್ಮಾಯೇಲನು ತನ್ನ ಹತ್ತು ಮಂದಿಯೊಂದಿಗೆ ಬಂದನು. ಆ ಜನರು ಮಿಚ್ಫ ಪಟ್ಟಣಕ್ಕೆ ಬಂದರು. ಇಷ್ಮಾಯೇಲನು ರಾಜವಂಶೀಯನಾಗಿದ್ದನು. ಅವನು ಯೆಹೂದದ ರಾಜನ ಒಬ್ಬ ಅಧಿಕಾರಿಯಾಗಿದ್ದನು. ಇಷ್ಮಾಯೇಲ್ ಮತ್ತು ಅವನ ಜನರು ಗೆದಲ್ಯನೊಂದಿಗೆ ಊಟಮಾಡಿದರು. 2 ಅವರು ಒಟ್ಟಿಗೆ ಊಟ ಮಾಡುತ್ತಿದ್ದಾಗ, ಇಷ್ಮಾಯೇಲ್ ಮತ್ತು ಅವನ ಹತ್ತು ಜನರು ಎದ್ದು ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಕೊಂದರು. ಗೆದಲ್ಯನನ್ನು ಬಾಬಿಲೋನಿನ ರಾಜನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. 3 ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಫದಲ್ಲಿದ್ದ ಎಲ್ಲಾ ಯೆಹೂದ್ಯರನ್ನು ಸಹ ಕೊಂದನು. ಇಷ್ಮಾಯೇಲನು ಗೆದಲ್ಯನ ಸಂಗಡ ಇದ್ದ ಎಲ್ಲಾ ಬಾಬಿಲೋನಿನ ಸೈನಿಕರನ್ನು ಸಹ ಕೊಂದುಹಾಕಿದನು.
4-5 ಗೆದಲ್ಯನ ಕೊಲೆಯ ಎರಡನೆಯ ದಿನ ಯೆಹೋವನ ಆಲಯಕ್ಕೆ ನೈವೇದ್ಯವನ್ನು ಮತ್ತು ಧೂಪವನ್ನು ತೆಗೆದುಕೊಂಡು ಎಂಭತ್ತು ಜನ ಯೆಹೂದ್ಯರು ಮಿಚ್ಫಕ್ಕೆ ಬಂದರು. ಆ ಎಂಭತ್ತು ಜನ ತಮ್ಮ ಗಡ್ಡ ಬೋಳಿಸಿಕೊಂಡಿದ್ದರು ಮತ್ತು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗಾಯಮಾಡಿಕೊಂಡಿದ್ದರು. ಅವರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದಿದ್ದರು. ಗೆದಲ್ಯನ ಕೊಲೆ ಮಾಡಲಾಗಿದೆ ಎಂಬುದು ಇವರಲ್ಲಿ ಯಾರಿಗೂ ತಿಳಿದಿರಲಿಲ್ಲ. 6 ಇಷ್ಮಾಯೇಲನು ಈ ಎಂಭತ್ತು ಜನರನ್ನು ಕಾಣುವದಕ್ಕಾಗಿ ಮಿಚ್ಫ ಪಟ್ಟಣದ ಹೊರಗಡೆ ಹೋದನು. ಅವರನ್ನು ಕಾಣುವದಕ್ಕೆ ಹೋಗುವಾಗ ಅವನು ಅಳುತ್ತಿದ್ದನು. ಇಷ್ಮಾಯೇಲನು ಆ ಎಂಭತ್ತು ಜನರನ್ನು ಎದುರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನನ್ನು ಭೇಟಿ ಮಾಡುವದಕ್ಕೆ ನನ್ನೊಂದಿಗೆ ಬನ್ನಿ” ಎಂದು ಕರೆದನು. 7 ಆ ಎಂಭತ್ತು ಜನರು ಮಿಚ್ಫಪಟ್ಟಣಕ್ಕೆ ಹೋದರು. ಆಗ ಇಷ್ಮಾಯೇಲ ಮತ್ತು ಅವನ ಸಂಗಡಿಗರು ಅವರಲ್ಲಿ ಎಪ್ಪತ್ತು ಮಂದಿಯನ್ನು ಕೊಂದರು. ಇಷ್ಮಾಯೇಲ ಮತ್ತು ಅವನ ಸಂಗಡಿಗರು ಆ ಎಪ್ಪತ್ತು ಮಂದಿ ದೇಹಗಳನ್ನು ಒಂದು ಆಳವಾದ ಬಾವಿಯಲ್ಲಿ ಎಸೆದರು. 8 ಆದರೆ ಉಳಿದ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡ, ನಮ್ಮಲ್ಲಿ ಗೋಧಿ, ಜವೆಗೋಧಿ, ಎಣ್ಣೆ ಮತ್ತು ಜೇನುತುಪ್ಪ ಇವೆ. ನಾವು ಆ ವಸ್ತುಗಳನ್ನು ಒಂದು ಹೊಲದಲ್ಲಿ ಬಚ್ಚಿಟ್ಟಿದ್ದೇವೆ” ಎಂದು ಹೇಳಿದರು. ಆದ್ದರಿಂದ ಇಷ್ಮಾಯೇಲನು ಆ ಹತ್ತು ಮಂದಿಯನ್ನು ಬಿಟ್ಟುಬಿಟ್ಟನು. ಅವನು ಬೇರೆಯವರೊಂದಿಗೆ ಅವರನ್ನು ಕೊಲ್ಲಲಿಲ್ಲ. 9 ಇಷ್ಮಾಯೇಲನು ಶವಗಳನ್ನು ಆ ಬಾವಿಯೊಳಗೆ ಹಾಕಿದನು. ಆ ಬಾವಿಯು ಬಹಳ ದೊಡ್ಡದಾಗಿತ್ತು. ಅದನ್ನು ಯೆಹೂದದ ರಾಜನಾದ ಆಸನು ತೋಡಿಸಿದ್ದನು. ಯುದ್ಧದ ಸಮಯದಲ್ಲಿ ನಗರದಲ್ಲಿ ನೀರು ಸಾಕಷ್ಟು ಇರಬೇಕೆಂಬ ಉದ್ದೇಶದಿಂದ ರಾಜನಾದ ಆಸನು ಈ ಬಾವಿಯನ್ನು ತೋಡಿಸಿದ್ದನು. ರಾಜನಾದ ಆಸನು ತನ್ನ ನಗರವನ್ನು ಇಸ್ರೇಲಿನ ರಾಜನಾದ ಬಾಷನಿಂದ ರಕ್ಷಿಸುವುದಕ್ಕಾಗಿ ಇದನ್ನು ಕಟ್ಟಿಸಿದ್ದನು.
10 ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.
11 ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ಇಷ್ಮಾಯೇಲನು ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಕೇಳಿದರು. 12 ಆದ್ದರಿಂದ ಯೋಹಾನಾನನು ಮತ್ತು ಅವನೊಂದಿಗಿದ್ದ ಸಕಲ ಸೇನಾಪತಿಗಳು ತಮ್ಮ ಜನರನ್ನು ಕರೆದುಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ವಿರುದ್ಧ ಹೋರಾಡಲು ಹೊರಟರು. ಅವರು ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಇಷ್ಮಾಯೇಲನನ್ನು ಹಿಡಿದರು. 13 ಇಷ್ಮಾಯೇಲನು ಸೆರೆಹಿಡಿದ ಸೆರೆಯಾಳುಗಳು ಯೋಹಾನಾನನನ್ನು ಮತ್ತು ಸೇನಾಪತಿಗಳನ್ನು ನೋಡಿದರು. ಈ ಸೆರೆಯಾಳುಗಳಿಗೆ ಬಹಳ ಸಂತೋಷವಾಯಿತು. 14 ಆಗ, ಇಷ್ಮಾಯೇಲನು ಮಿಚ್ಫದಲ್ಲಿ ಸೆರೆಹಿಡಿದುಕೊಂಡು ಹೋಗಿದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನ ಕಡೆಗೆ ಓಡಿದರು. 15 ನೆತನ್ಯನ ಮಗನಾದ ಇಷ್ಮಾಯೇಲನು ಮತ್ತು ಅವನ ಎಂಟು ಜನ ಸಂಗಡಿಗರು ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರ ಮೊರೆಹೊಕ್ಕರು.
16 ಇಷ್ಮಾಯೇಲನು ಗೆದಲ್ಯನನ್ನು ಕೊಂದು ಮಿಚ್ಫದಲ್ಲಿ ಸೆರೆಹಿಡಿದ ಬಂದಿಗಳನ್ನು ಕಾರೇಹನ ಮಗನಾದ ಯೋಹಾನಾನನು ಮತ್ತು ಅವನ ಸೇನಾಪತಿಗಳು ರಕ್ಷಿಸಿದರು. ಆಗ ಉಳಿದುಕೊಂಡವರಲ್ಲಿ ಸೈನಿಕರು, ಹೆಂಗಸರು, ಮಕ್ಕಳು ಮತ್ತು ಅಧಿಕಾರಿಗಳು ಸೇರಿದ್ದರು. ಯೋಹಾನಾನನು ಗಿಬ್ಯೋನಿನಿಂದ ಅವರನ್ನು ಹಿಂದಕ್ಕೆ ಕರೆತಂದನು.
ಈಜಿಪ್ಟಿಗೆ ವಲಸೆ
17-18 ಯೋಹಾನಾನನೂ ಉಳಿದ ಸೇನಾಧಿಪತಿಗಳೂ ಕಸ್ದೀಯರಿಗೆ ಹೆದರಿದರು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. ಆದರೆ ಇಷ್ಮಾಯೇಲನು ಗೆದಲ್ಯನನ್ನು ಕೊಲೆ ಮಾಡಿದನು. ಇದರಿಂದ ಕಸ್ದೀಯರಿಗೆ ಕೋಪ ಬರಬಹುದೆಂದು ಯೋಹಾನಾನನು ಭಯಪಟ್ಟನು. ಆದ್ದರಿಂದ ಈಜಿಪ್ಟಿಗೆ ಓಡಿಹೋಗಬೇಕೆಂದು ಅವರು ನಿರ್ಧರಿಸಿದರು. ಈಜಿಪ್ಟಿಗೆ ಹೋಗುವ ದಾರಿಯಲ್ಲಿ ಅವರು ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಗೇರುಥ್ ಕಿಮ್ಹಾಮು ಬೆತ್ಲೆಹೇಮ್ ಪಟ್ಟಣದ ಸಮೀಪದಲ್ಲಿದೆ.
ಪ್ರಾರ್ಥನೆ. ರಚನೆಗಾರ: ದಾವೀದ.
17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
2 ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
3 ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
4 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
5 ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
6 ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
ಆದ್ದರಿಂದ ಈಗಲೂ ನನಗೆ ಕಿವಿಗೊಡು.
7 ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
8 ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
9 ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.
10 ಆ ದುಷ್ಟರು ಗರ್ವಿಷ್ಠರಾಗಿದ್ದಾರೆ.
ಅವರು ಜಂಬಕೊಚ್ಚಿಕೊಳ್ಳುತ್ತಾರೆ.
11 ಅವರು ನನ್ನನ್ನು ಬೆನ್ನಟ್ಟಿ ಬಂದು ಸುತ್ತುಗಟ್ಟಿದ್ದಾರೆ;
ಆಕ್ರಮಣಮಾಡಲು ಸಿದ್ಧರಾಗಿದ್ದಾರೆ.[a]
12 ಅವರು ಬೇಟೆಗಾಗಿ ಕಾಯುತ್ತಿರುವ ಸಿಂಹಗಳಂತಿದ್ದಾರೆ;
ಅಡಗಿಕೊಂಡು ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಂತಿದ್ದಾರೆ.
13 ಯೆಹೋವನೇ, ಎದ್ದೇಳು,[b] ವೈರಿಗಳ ಬಳಿಗೆ ಹೋಗು.
ಅವರನ್ನು ಶರಣಾಗತರನ್ನಾಗಿ ಮಾಡು.
ನಿನ್ನ ಖಡ್ಗವನ್ನು ಪ್ರಯೋಗಿಸಿ ದುಷ್ಟರಿಂದ ನನ್ನನ್ನು ರಕ್ಷಿಸು.
14 ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ
ನನ್ನನ್ನು ತಪ್ಪಿಸಿ ಕಾಪಾಡು.
ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ.
ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು.
ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು.
15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.
Kannada Holy Bible: Easy-to-Read Version. All rights reserved. © 1997 Bible League International