M’Cheyne Bible Reading Plan
ಹನ್ನಳ ಸ್ತೋತ್ರ
2 ಹನ್ನಳು ಇಂತೆಂದಳು:
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[a]
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
3 ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
4 ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
5 ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
6 ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
7 ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
8 ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
9 ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
11 ಎಲ್ಕಾನ ಮತ್ತು ಅವನ ಕುಟುಂಬದವರು ರಾಮಾತಯಿಮಿನಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು. ಬಾಲಕನು ಶೀಲೋವಿನಲ್ಲಿಯೇ ಉಳಿದುಕೊಂಡನು ಮತ್ತು ಯಾಜಕನಾದ ಏಲಿಯ ಮಾರ್ಗದರ್ಶನದಲ್ಲಿ ಯೆಹೋವನ ಸೇವೆಮಾಡಿದನು.
ಏಲಿಯ ದುಷ್ಟ ಮಕ್ಕಳು
12 ಏಲಿಯ ಮಕ್ಕಳು ದುಷ್ಟರಾಗಿದ್ದರು. ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ. 13 ಯಾಜಕರು ಜನರೊಡನೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಅವರು ಲಕ್ಷಿಸುತ್ತಿರಲಿಲ್ಲ. ಯಾಜಕರು ಜನರಿಗಾಗಿ ಮಾಡಬೇಕಾದ ಕಾರ್ಯವೆಂದರೆ: ಒಬ್ಬ ವ್ಯಕ್ತಿಯು ಪ್ರತಿಸಲ ಯಜ್ಞವನ್ನರ್ಪಿಸಲು ಬಂದಾಗ ಯಾಜಕರು ಯಜ್ಞಮಾಂಸವನ್ನು ಒಂದು ಮಡಕೆಯಲ್ಲಿ ಬೇಯಿಸಬೇಕು. ಯಾಜಕರ ಸೇವಕನು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರಬೇಕು. 14 ಯಾಜಕರ ಸೇವಕನು ತ್ರಿಶೂಲವನ್ನು ಕೊಪ್ಪರಿಗೆಯಲ್ಲಾಗಲಿ ತಪ್ಪಲೆಯಲ್ಲಾಗಲಿ ಗಡಿಗೆಯಲ್ಲಾಗಲಿ ಭಾಂಡದಲ್ಲಾಗಲಿ ಚುಚ್ಚಿ ಹೊರ ತೆಗೆದಾಗ, ಅದರೊಂದಿಗೆ ಬರುವ ಮಾಂಸವನ್ನು ಮಾತ್ರ ಯಾಜಕನು ಸ್ವೀಕರಿಸಬೇಕು. ಶೀಲೋವಿಗೆ ಯಜ್ಞವನ್ನರ್ಪಿಸಲು ಬರುವ ಎಲ್ಲ ಇಸ್ರೇಲರೊಂದಿಗೆ ಇದೇ ರೀತಿ ಮಾಡಬೇಕಿತ್ತು. 15 ಆದರೆ ಏಲಿಯ ಮಕ್ಕಳು ಈ ರೀತಿ ಮಾಡುತ್ತಿರಲಿಲ್ಲ. ಯಜ್ಞವೇದಿಕೆಯ ಮೇಲೆ ಕೊಬ್ಬನ್ನು ಹೋಮ ಮಾಡುವುದಕ್ಕಿಂತ[b] ಮೊದಲೇ ಅವರ ಸೇವಕರು ಯಜ್ಞಗಳನ್ನು ಅರ್ಪಿಸುವ ಜನರ ಬಳಿಗೆ ಹೋಗುತ್ತಿದ್ದರು. ಯಾಜಕನ ಸೇವಕನು, “ಯಾಜಕನಿಗೆ ಕರಿದು ಕೊಡಲು ಸ್ವಲ್ಪ ಮಾಂಸವನ್ನು ಕೊಡಿ. ಬೇಯಿಸಿದ ಮಾಂಸವನ್ನು ಯಾಜಕನು ನಿಮ್ಮಿಂದ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಿದ್ದನು.
16 ಯಜ್ಞವನ್ನರ್ಪಿಸುವವನು, “ಕೊಬ್ಬನ್ನು ಮೊದಲು ಹೋಮ ಮಾಡೋಣ. ಅನಂತರ ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ” ಎಂದು ಹೇಳಿದರೆ, ಯಾಜಕರ ಸೇವಕನು, “ಇಲ್ಲ, ಯಾಜಕನಿಗಾಗಿ ಕರಿಯಲು ಮಾಂಸವನ್ನು ಈಗಲೇ ಕೊಡು. ನೀನು ಕೊಡುವುದಿಲ್ಲವಾದರೆ, ನಾನೇ ತೆಗೆದುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದನು.
17 ಯೆಹೋವನಿಗೆ ಅರ್ಪಿಸುವ ಯಜ್ಞವನ್ನು ಹೊಫ್ನಿ ಮತ್ತು ಫೀನೆಹಾಸರು ತುಚ್ಛೀಕರಿಸುತ್ತಿದ್ದರು. ಇದು ಯೆಹೋವನಿಗೆ ವಿರೋಧವಾದ ಮಹಾ ಪಾಪವಾಗಿತ್ತು.
18 ಆದರೆ ಬಾಲಕನಾದ ಸಮುವೇಲನು ಏಫೋದ್ ಎಂಬ ನಾರುಬಟ್ಟೆಯನ್ನು ಧರಿಸಿ ಯೆಹೋವನ ಸೇವೆ ಮಾಡುತ್ತಿದ್ದನು. 19 ಸಮುವೇಲನ ತಾಯಿಯು ಪ್ರತಿವರ್ಷವೂ ಒಂದು ಚಿಕ್ಕ ಮೇಲಂಗಿಯನ್ನು ಅವನಿಗಾಗಿ ತಯಾರಿಸಿ, ಗಂಡನೊಡನೆ ವಾರ್ಷಿಕ ಯಜ್ಞವನ್ನು ಅರ್ಪಿಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.
20 ಏಲಿಯು ಎಲ್ಕಾನನನ್ನು ಮತ್ತು ಅವನ ಹೆಂಡತಿಯಾದ ಹನ್ನಳನ್ನು ಆಶೀರ್ವದಿಸಿ, “ಹನ್ನಳು ಯೆಹೋವನನ್ನು ಪ್ರಾರ್ಥಿಸಿ ಪಡೆದ ಮಗನನ್ನು ಆತನಿಗೆ ಒಪ್ಪಿಸಿದ್ದರಿಂದ ಯೆಹೋವನು ಅವಳಿಗೆ ಬೇರೆ ಮಕ್ಕಳನ್ನು ಅನುಗ್ರಹಿಸಲಿ” ಎಂದು ಹೇಳಿದನು.
ಆಮೇಲೆ ಎಲ್ಕಾನ ಮತ್ತು ಹನ್ನ ಮನೆಗೆ ಹೋದರು. 21 ಯೆಹೋವನು ಹನ್ನಳಿಗೆ ದಯೆತೋರಿದನು. ಅವಳಿಗೆ ಮೂರು ಮಂದಿ ಗಂಡುಮಕ್ಕಳೂ ಇಬ್ಬರು ಹೆಣ್ಣುಮಕ್ಕಳೂ ಆದರು. ಬಾಲಕನಾದ ಸಮುವೇಲನು ಯೆಹೋವನ ಸನ್ನಿಧಿಯಲ್ಲಿ ದೊಡ್ಡವನಾದನು.
ಏಲಿಯು ತನ್ನ ದುಷ್ಟಮಕ್ಕಳನ್ನು ಹತೋಟಿಯಲ್ಲಿಡಲಿಲ್ಲ
22 ಏಲಿಯು ಬಹಳ ವೃದ್ಧನಾದನು. ತನ್ನ ಗಂಡುಮಕ್ಕಳು ಶೀಲೋವಿನಲ್ಲಿ ಇಸ್ರೇಲರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಮತ್ತು ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿರುವ ಸ್ತ್ರೀಯರೊಡನೆ ಕೂಡುತ್ತಿರುವುದನ್ನು ಅವನು ಕೇಳುತ್ತಿದ್ದನು.
23 ಏಲಿಯು ತನ್ನ ಗಂಡುಮಕ್ಕಳಿಗೆ, “ಇಲ್ಲಿಯ ಜನರು ನೀವು ಮಾಡುವ ದುಷ್ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. ನೀವು ಇಂತಹ ದುಷ್ಕೃತ್ಯಗಳನ್ನು ಏಕೆ ಮಾಡುತ್ತೀರಿ? 24 ಮಕ್ಕಳೇ, ಇಂತಹ ದುಷ್ಕೃತ್ಯಗಳನ್ನು ಮಾಡಬೇಡಿ. ಯೆಹೋವನ ಜನರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಮಾತಾಡುತ್ತಿದ್ದಾರೆ. 25 ಒಬ್ಬ ಮನುಷ್ಯನು ಬೇರೊಬ್ಬನ ವಿರುದ್ಧ ಅಪರಾಧ ಮಾಡಿದರೆ, ಯೆಹೋವನು ಅವನಿಗೆ ಸಹಾಯ ಮಾಡಬಹುದು, ಆದರೆ ಒಬ್ಬ ಮನುಷ್ಯನು ಯೆಹೋವನ ವಿರುದ್ಧವೇ ಅಪರಾಧ ಮಾಡಿದರೆ, ಆಗ ಅವನಿಗೆ ಸಹಾಯ ಮಾಡುವವರು ಯಾರು?” ಎಂದು ಬುದ್ಧಿಮಾತು ಹೇಳಿದನು.
ಆದರೆ ಏಲಿಯ ಮಾತನ್ನು ಅವನ ಮಕ್ಕಳು ಕೇಳಲಿಲ್ಲ. ಆದ್ದರಿಂದ ಯೆಹೋವನು ಏಲಿಯ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದನು.
26 ಬಾಲಕನಾದ ಸಮುವೇಲನು ದೊಡ್ಡವನಾಗುತ್ತಲೇ ಇದ್ದನು. ಅವನು ದೇವರಿಗೆ ಮತ್ತು ಜನರಿಗೆ ಪ್ರಿಯನಾದನು.
ಏಲಿಯ ಕುಟುಂಬದ ಬಗ್ಗೆ ಭೀಕರ ಪ್ರವಾದನೆ
27 ದೇವಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು, “ಯೆಹೋವನು ಈ ಸಂಗತಿಗಳನ್ನು ತಿಳಿಸಿದನು: ‘ನಿನ್ನ ಪೂರ್ವಿಕರು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದರು. ಆಗ ನಾನು ನಿನ್ನ ಪೂರ್ವಿಕರಿಗೆ ದರ್ಶನ ನೀಡಿದೆ. 28 ಇಸ್ರೇಲಿನ ಎಲ್ಲಾ ಕುಲಗಳಲ್ಲಿ ನಿನ್ನ ಕುಟುಂಬದವರನ್ನು ನನ್ನ ಯಾಜಕರನ್ನಾಗಿ ಆರಿಸಿಕೊಂಡೆನು. ಏಫೋದನ್ನು ಧರಿಸಿಕೊಳ್ಳುವುದಕ್ಕೂ ಯಜ್ಞವನ್ನು ಅರ್ಪಿಸುವುದಕ್ಕೂ ಧೂಪಹಾಕುವುದಕ್ಕೂ ನಾನು ಅವರನ್ನು ಆರಿಸಿಕೊಂಡೆನು. ಇಸ್ರೇಲರು ನನಗೆ ಅರ್ಪಿಸುವ ಯಜ್ಞಗಳಲ್ಲಿ ಮಾಂಸವನ್ನು ಪಡೆಯುವ ಅವಕಾಶವನ್ನೂ ನಾನು ನಿಮ್ಮ ಕುಲದವರಿಗೆ ನೀಡಿದೆನು. 29 ಹೀಗಿರುವಾಗ ಆ ಯಜ್ಞಗಳನ್ನು ಮತ್ತು ಕಾಣಿಕೆಗಳನ್ನು ನೀವು ಗೌರವಿಸದಿರುವುದೇಕೇ? ನಿನ್ನ ಮಕ್ಕಳನ್ನು ನನಗಿಂತ ಹೆಚ್ಚು ಗೌರವಿಸುತ್ತಿರುವೆ. ಇಸ್ರೇಲರು ನನಗಾಗಿ ತರುವ ಯಜ್ಞಮಾಂಸದ ಉತ್ತಮ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಂಡಿರುವಿರಿ.’
30 “ನಿಮ್ಮ ತಂದೆಯ ಕುಟುಂಬವು ಸರ್ವಕಾಲವೂ ಆತನ ಸೇವೆ ಮಾಡುವುದೆಂದು ಇಸ್ರೇಲಿನ ದೇವರಾದ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಈಗ ಯೆಹೋವನು ಹೀಗೆನ್ನುತ್ತಾನೆ: ‘ಅದೆಂದಿಗೂ ಸಾಧ್ಯವಿಲ್ಲ. ನನ್ನನ್ನು ಸನ್ಮಾನಿಸುವವರನ್ನು ನಾನೂ ಸನ್ಮಾನಿಸುತ್ತೇನೆ. ಆದರೆ ನನ್ನನ್ನು ತಿರಸ್ಕರಿಸುವವರನ್ನು ನಾನೂ ತಿರಸ್ಕರಿಸುತ್ತೇನೆ. 31 ನಿನ್ನ ಸಂತತಿಯವರನ್ನೆಲ್ಲಾ ನಾಶಮಾಡುವ ಕಾಲವು ಬರುತ್ತಿದೆ. ನಿನ್ನ ಮನೆಯಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 32 ಇಸ್ರೇಲಿಗೆ ಶುಭಗಳಾದರೂ ನಿನ್ನ ಮನೆಯಲ್ಲಿ ಅಶುಭಗಳಿರುವುದನ್ನು ನೀನು ನೋಡುವೆ. ನಿನ್ನ ಕುಟುಂಬದಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 33 ನನ್ನ ಯಜ್ಞವೇದಿಕೆಯ ಬಳಿಯಲ್ಲಿ ಯಾಜಕಸೇವೆ ಮಾಡುವುದಕ್ಕಾಗಿ ನಾನು ಒಬ್ಬನನ್ನು ಉಳಿಸಿಕೊಳ್ಳುವೆನು. ಅವನು ಬಹುಮುಪ್ಪಿನವರೆಗೂ ಬದುಕುವನು. ಅವನ ಕಣ್ಣುಗಳು ಕಾಣದೆ ಹೋಗುವವರೆಗೂ ಬಲಹೀನನಾಗುವವರೆಗೂ ಅವನು ಬದುಕುವನು. ಉಳಿದ ನಿನ್ನ ಸಂತತಿಯವರೆಲ್ಲಾ ಖಡ್ಗದಿಂದ ಸಾಯುವರು. 34 ಈ ಸಂಗತಿಗಳು ನಿಜವಾಗುತ್ತವೆಯೆಂದು ತೋರಿಸಲು ನಾನು ನಿನಗೊಂದು ಗುರುತನ್ನು ಕೊಡುವೆನು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಒಂದೇ ದಿನದಲ್ಲಿ ಸಾಯುವರು. ಅದೇ ಆ ಗುರುತು. 35 ನಾನು ನನಗೋಸ್ಕರ ನಂಬಿಗಸ್ತನಾದ ಯಾಜಕನೊಬ್ಬನನ್ನು ಆರಿಸಿಕೊಳ್ಳುತ್ತೇನೆ. ಈ ಯಾಜಕನು ನಾನು ಹೇಳುವುದನ್ನು ಕೇಳುವನು ಮತ್ತು ನನಗೆ ಇಷ್ಟವಾದುದನ್ನು ಮಾಡುವನು. ಈ ಯಾಜಕನ ಕುಟುಂಬವನ್ನು ನಾನು ಬಲಗೊಳಿಸುವೆನು. ನಾನು ಆರಿಸಿಕೊಂಡಿರುವ ರಾಜನ ಬಳಿಯಲ್ಲಿ ಅವನು ಸದಾಕಾಲ ಸೇವೆಮಾಡುವನು. 36 ಆಗ ನಿನ್ನ ಕುಟುಂಬದವರಲ್ಲಿ ಉಳಿದವರೆಲ್ಲ ಬಂದು ಈ ಯಾಜಕನಿಗೆ ಅಡ್ಡಬೀಳುವರು. ಈ ಜನರೆಲ್ಲ ಅವನಲ್ಲಿ ಬಿಡಿಕಾಸನ್ನೂ ರೊಟ್ಟಿಯ ಚೂರನ್ನೂ ಬೇಡುವರು. ಅವರೆಲ್ಲ, “ನಮಗೆ ದೇವಸ್ಥಾನದಲ್ಲಿ ಯಾಜಕನ ಹುದ್ದೆಯನ್ನು ಕೊಡು, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂದು ಬೇಡಿಕೊಳ್ಳುವರು”’” ಎಂದನು.
ಯೆಹೂದ್ಯರು ಸಹ ಪಾಪಿಗಳು
2 “ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. 2 ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. 3 ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. 4 ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.
5 ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು.[a] 6 ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. 7 ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. 8 ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. 9 ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.
12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. 13 ಧರ್ಮಶಾಸ್ತ್ರವನ್ನು ಕೇಳಿದ ಮಾತ್ರಕ್ಕೆ ಜನರು ನೀತಿವಂತರಾಗುವುದಿಲ್ಲ. ಧರ್ಮಶಾಸ್ತ್ರ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗುವ ಜನರನ್ನು ಧರ್ಮಶಾಸ್ತ್ರವು ನೀತಿವಂತರನ್ನಾಗಿ ಮಾಡುತ್ತದೆ.
14 ಯೆಹೂದ್ಯರಲ್ಲದವರು ಧರ್ಮಶಾಸ್ತ್ರವನ್ನು ಹೊಂದಿಲ್ಲ. ಆದರೆ ಅವರು ಧರ್ಮಶಾಸ್ತ್ರವನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇಯಾದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
16 ಮನುಷ್ಯರ ಅಂತರಂಗದಲ್ಲಿರುವ ರಹಸ್ಯ ಸಂಗತಿಗಳಿಗೆ ದೇವರು ತೀರ್ಪುಮಾಡುವ ದಿನದಂದು ಇವುಗಳೆಲ್ಲಾ ನೆರವೇರುವವು. ದೇವರು ಯೇಸು ಕ್ರಿಸ್ತನ ಮೂಲಕ ಜನರಿಗೆ ತೀರ್ಪು ಮಾಡುತ್ತಾನೆ ಎಂಬುದಾಗಿ ಸುವಾರ್ತೆಯು ತಿಳಿಸುತ್ತದೆ. ನಾನು ಜನರಿಗೆ ತಿಳಿಸುವುದು ಆ ಸುವಾರ್ತೆಯನ್ನೇ.
ಯೆಹೂದ್ಯರು ಮತ್ತು ಧರ್ಮಶಾಸ್ತ್ರ
17 “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರದಲ್ಲಿ ನಂಬಿಕೆಯಿಟ್ಟು ದೇವರಿಗೆ ಸಮೀಪವಾಗಿರುವುದಾಗಿ ನೀನು ಹೆಮ್ಮೆಪಡುವೆ. 18 ದೇವರ ಚಿತ್ತಕ್ಕನುಸಾರವಾದ ಕಾರ್ಯಗಳನ್ನು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ನೀನು ಹೇಳಿಕೊಳ್ಳುವೆ. 19 ಸರಿಯಾದ ಮಾರ್ಗವನ್ನು ತಿಳಿದಿಲ್ಲದ ಜನರಿಗೆ ಮಾರ್ಗದರ್ಶಕನಾಗಿಯೂ ಕತ್ತಲೆಯಲ್ಲಿರುವ ಜನರಿಗೆ ಬೆಳಕಾಗಿಯೂ ಇರುವುದಾಗಿ ನಿನ್ನ ಕುರಿತು ಭಾವಿಸಿಕೊಂಡಿರುವೆ. 20 ಮೂಢರಿಗೆ ಶಿಕ್ಷಕನೆಂತಲೂ ಕಲಿಯಬೇಕಾದವರಿಗೆ ಉಪಾಧ್ಯಾಯನೆಂತಲೂ ನೀನು ನಿನ್ನ ಬಗ್ಗೆ ಆಲೋಚಿಸಿಕೊಂಡಿರುವೆ. ನಿನ್ನಲ್ಲಿ ಧರ್ಮಶಾಸ್ತ್ರವಿದೆ, ಆದ್ದರಿಂದ ಪ್ರತಿಯೊಂದನ್ನೂ ತಿಳಿದುಕೊಂಡಿರುವುದಾಗಿಯೂ ಎಲ್ಲಾ ಸತ್ಯವನ್ನು ಹೊಂದಿಕೊಂಡಿರುವುದಾಗಿಯೂ ನೀನು ಭಾವಿಸಿಕೊಂಡಿರುವೆ. 21 ನೀನು ಬೇರೆಯವರಿಗೆ ಉಪದೇಶಿಸುವೆ. ಹೀಗಿರಲು ನೀನು ನಿನಗೇ ಉಪದೇಶ ಮಾಡಿಕೊಳ್ಳಬಾರದೇಕೆ? ಕದಿಯಬಾರದೆಂದು ನೀನು ಜನರಿಗೆ ಹೇಳುವೆ, ಆದರೆ ನೀನೇ ಕದಿಯುವೆ. 22 ಜನರು ವ್ಯಭಿಚಾರವೆಂಬ ಪಾಪವನ್ನು ಮಾಡಕೂಡದೆಂದು ನೀನು ಹೇಳುವೆ, ಆದರೆ ನೀನೇ ಆ ಪಾಪಮಾಡಿ ಅಪರಾಧಿಯಾಗಿರುವೆ. ನೀನು ವಿಗ್ರಹಗಳನ್ನು ದ್ವೇಷಿಸುವೆ, ಆದರೆ ನೀನೇ ಅವುಗಳನ್ನು ಗುಡಿಗಳಿಂದ ಕದಿಯುವೆ. 23 ನೀನು ದೇವರ ಧರ್ಮಶಾಸ್ತ್ರದ ಬಗ್ಗೆ ಹೆಮ್ಮೆಪಡುವೆ. ಆದರೆ ಆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೇವರಿಗೆ ಅವಮಾನ ಮಾಡುವೆ. 24 “ಯೆಹೂದ್ಯರಾದ ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದ ಜನರು ದೇವರ ಹೆಸರಿಗೆ ವಿರೋಧವಾಗಿ ಮಾತಾಡುತ್ತಾರೆ”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು. 26 ಯೆಹೂದ್ಯರಲ್ಲದ ಜನರಿಗೆ ಸುನ್ನತಿಯಾಗಿಲ್ಲ, ಆದರೆ ಧರ್ಮಶಾಸ್ತ್ರವು ಹೇಳುವುದನ್ನು ಅವರು ಮಾಡುವುದಾದರೆ, ಅವರು ಸುನ್ನತಿಯನ್ನು ಹೊಂದಿದಂಥವರಾದರು. 27 ಯೆಹೂದ್ಯರಾದ ನಿಮಗೆ ಲಿಖಿತ ಧರ್ಮಶಾಸ್ತ್ರವಿದೆ ಮತ್ತು ಸುನ್ನತಿಯಾಗಿದೆ. ಆದರೆ ನೀವು ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತೀರಿ. ಹೀಗಿರಲು, ದೇಹದಲ್ಲಿ ಸುನ್ನತಿಯನ್ನು ಹೊಂದಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಜನರು ನಿಮ್ಮನ್ನು ಅಪರಾಧಿಗಳೆಂದು ತೋರ್ಪಡಿಸುತ್ತಾರೆ.
28 ಕೇವಲ ಬಾಹ್ಯ ದೇಹದಲ್ಲಿ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಕೇವಲ ದೇಹದ ಹೊರಭಾಗದ ಸುನ್ನತಿಯು ನಿಜವಾದ ಸುನ್ನತಿಯಲ್ಲ. 29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ.
ಯೆರೆಮೀಯನ ಬಿಡುಗಡೆ
40 ರಾಮನಗರದ ಹತ್ತಿರ ಅವನ ಬಿಡುಗಡೆಯಾದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನ ವಿಶೇಷ ರಕ್ಷಕ ದಳದ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ರಾಮದಲ್ಲಿ ನೋಡಿದನು. ಯೆರೆಮೀಯನನ್ನು ಸಂಕೋಲೆಗಳಿಂದ ಬಿಗಿಯಲಾಗಿತ್ತು. ಅವನು ಜೆರುಸಲೇಮ್ ಮತ್ತು ಯೆಹೂದದ ಎಲ್ಲಾ ಸೆರೆಯಾಳುಗಳ ಜೊತೆಗಿದ್ದನು. ಆ ಸೆರೆಯಾಳುಗಳನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. 2 ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಕಂಡಾಗ ಅವನನ್ನು ಮಾತನಾಡಿಸಿ ಹೀಗೆಂದನು: “ಯೆರೆಮೀಯನೇ, ನಿಮ್ಮ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥಾ ದುಸ್ಥಿತಿ ಬರುವದೆಂದು ಸಾರಿದ್ದನು. 3 ಏನೇನು ಮಾಡುವೆನೆಂದು ಯೆಹೋವನು ಹೇಳಿದ್ದನೋ ಅದೆಲ್ಲವನ್ನು ಹೇಳಿದ್ದಂತೆಯೇ ಮಾಡಿದ್ದಾನೆ. ಯೆಹೂದದ ಜನರಾದ ನೀವುಗಳು ಯೆಹೋವನ ವಿರುದ್ಧ ಪಾಪ ಮಾಡಿದ್ದರಿಂದ ಈ ಕೇಡು ಸಂಭವಿಸಿತು. ನೀವು ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. 4 ಯೆರೆಮೀಯನೇ, ನಾನು ಈಗ ನಿನ್ನನ್ನು ಬಿಡುಗಡೆ ಮಾಡುವೆನು. ನಾನು ನಿನ್ನ ಕೈಗಳಿಂದ ಸಂಕೋಲೆಗಳನ್ನು ಬಿಚ್ಚುವೆನು. ನೀನು ಇಷ್ಟಪಟ್ಟರೆ ನನ್ನ ಸಂಗಡ ಬಾಬಿಲೋನಿಗೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ನನ್ನ ಸಂಗಡ ಬರುವ ಇಷ್ಟವಿಲ್ಲದಿದ್ದರೆ ಬರಬೇಡ. ಇಡೀ ದೇಶದಲ್ಲಿ ನಿನಗೆ ಎಲ್ಲಿ ಇಷ್ಟವೋ ಅಲ್ಲಿಗೆ ಹೋಗು. 5 ಅಥವಾ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನಲ್ಲಿಗೆ ಹಿಂತಿರುಗಿಹೋಗು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯಾಗಿ ನೇಮಿಸಿದ್ದಾನೆ. ಗೆದಲ್ಯನಲ್ಲಿಗೆ ಹೋಗಿ ಜನರೊಂದಿಗೆ ವಾಸಿಸು; ಅಥವಾ ನಿನ್ನ ಮನಸ್ಸು ಬಂದಲ್ಲಿಗೆ ಹೋಗು.”
ತರುವಾಯ ನೆಬೂಜರದಾನನು ಯೆರೆಮೀಯನಿಗೆ ಊಟವನ್ನೂ ಕಾಣಿಕೆಯನ್ನೂ ಕೊಟ್ಟು ಕಳುಹಿಸಿದನು. 6 ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಫಕ್ಕೆ ಹೋದನು. ಯೆರೆಮೀಯನು ಗೆದಲ್ಯನ ಸಂಗಡ ದೇಶದಲ್ಲಿ ಉಳಿದ ಜನರ ಮಧ್ಯೆ ವಾಸಮಾಡಿದನು.
ಗೆದಲ್ಯನ ಸಂಕ್ಷಿಪ್ತ ಆಳ್ವಿಕೆ
7 ಜೆರುಸಲೇಮ್ ನಗರವನ್ನು ನಾಶಮಾಡಿದಾಗ ಯೆಹೂದದ ಕೆಲವು ಜನ ಸೈನ್ಯಾಧಿಕಾರಿಗಳು ಮತ್ತು ಅವನ ಸೈನಿಕರು ಇನ್ನೂ ಕಾಡುಮೇಡುಗಳಲ್ಲಿದ್ದರು. ಬಾಬಿಲೋನಿನ ರಾಜನು ಅಹೀಕಾಮನ ಮಗನಾದ ಗೆದಲ್ಯನನ್ನು ಅಳಿದುಳಿದ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದಾನೆಂಬ ಸಮಾಚಾರ ಕಿವಿಗೆ ಬಿತ್ತು. ಇಲ್ಲಿ ಅಳಿದುಳಿದವರು ಬಹಳ ಬಡವರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು. ಅವರನ್ನು ಬಂಧಿಗಳನ್ನಾಗಿ ಮಾಡಿಕೊಂಡು ಬಾಬಿಲೋನಿಗೆ ತೆಗೆದುಕೊಂಡು ಹೋಗಿರಲಿಲ್ಲ. 8 ಆ ಸೈನಿಕರು ಮಿಚ್ಫದಲ್ಲಿ ವಾಸವಾಗಿದ್ದ ಗೆದಲ್ಯನಲ್ಲಿಗೆ ಬಂದರು. ಆ ಸೈನಿಕರು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಮತ್ತು ಅವನ ಸೋದರ ಯೋನಾಥಾನ, ತನ್ಹಮೆತನ ಮಗನಾದ ಸೆರಾಯ, ನೆಟೋಫದವನಾದ ಏಫಯನ ಮಕ್ಕಳು, ಮಾಕಾ ಊರಿನ ಯೆಜನ್ಯ ಮತ್ತು ಅವರ ಸಂಗಡ ಇದ್ದ ಜನರು.
9 ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು, ಆ ಸೈನಿಕರು ಮತ್ತು ಅವರ ಜನರು ಈಗ ಅಲ್ಲಿ ಹೆಚ್ಚು ಸುರಕ್ಷಿತರೆಂದು ನಂಬಿಕೆಹುಟ್ಟುವ ಹಾಗೆ ಆಣೆಮಾಡಿ ಹೇಳಿದನು. ಗೆದಲ್ಯನು ಹೀಗೆ ಹೇಳಿದನು. “ಸೈನಿಕರೇ, ಬಾಬಿಲೋನಿನ ಜನರ ಸೇವೆಮಾಡಲು ಭಯಪಡಬೇಡಿ. ಈ ಪ್ರದೇಶದಲ್ಲಿ ನೆಲೆಸಿ ಬಾಬಿಲೋನಿನ ರಾಜನ ಸೇವೆಮಾಡಿರಿ. ನೀವು ಹೀಗೆ ಮಾಡಿದರೆ ನಿಮಗೆಲ್ಲ ಒಳ್ಳೆಯದಾಗುವುದು. 10 ನಾನು ಸ್ವತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”
11 ಬಾಬಿಲೋನಿನ ರಾಜನು ಕೆಲವು ಜನ ಯೆಹೂದಿಯರನ್ನು ಆ ಪ್ರದೇಶದಲ್ಲಿ ಬಿಟ್ಟುಹೋಗಿದ್ದಾನೆ ಮತ್ತು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಅವರ ಅಧಿಪತಿಯನ್ನಾಗಿ ನೇಮಿಸಿದ್ದಾನೆ ಎಂಬ ಸಮಾಚಾರವನ್ನು ಮೋವಾಬ್, ಎದೋಮ್, ಅಮ್ಮೋನ್ ಮೊದಲಾದ ದೇಶಗಳಲ್ಲಿ ಚದುರಿಹೋಗಿದ್ದ ಯೆಹೂದಿಯರು ಕೇಳಿದರು. 12 ಯೆಹೂದದ ಆ ಜನರು ಈ ಸಮಾಚಾರವನ್ನು ಕೇಳಿದ ಕೂಡಲೆ ತಾವು ಚದುರಿಹೋಗಿದ್ದ ಎಲ್ಲಾ ದೇಶಗಳಿಂದ ಯೆಹೂದ ಪ್ರದೇಶಕ್ಕೆ ಹಿಂತಿರುಗಿ ಮಿಚ್ಫದಲ್ಲಿ ಗೆದಲ್ಯನ ಬಳಿಗೆ ಬಂದರು. ಅವರು ದ್ರಾಕ್ಷಾರಸವನ್ನು ಮತ್ತು ಹಣ್ಣುಗಳನ್ನು ಸಮೃದ್ಧಿಯಾಗಿ ಸಂಗ್ರಹಿಸಿದರು.
13 ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕಾಡುಮೇಡುಗಳಲ್ಲಿದ್ದ ಯೆಹೂದದ ಸೈನ್ಯಾಧಿಕಾರಿಗಳೂ ಗೆದಲ್ಯನ ಬಳಿಗೆ ಬಂದರು. ಗೆದಲ್ಯನು ಮಿಚ್ಫ ಪಟ್ಟಣದಲ್ಲಿದ್ದನು. 14 ಯೋಹಾನಾನ ಮತ್ತು ಅವನ ಸಂಗಡ ಇದ್ದ ಅಧಿಕಾರಿಗಳು ಹೀಗೆಂದರು: “ಅಮ್ಮೋನ್ಯರ ರಾಜನಾದ ಬಾಲೀಸನು ನಿನ್ನನ್ನು ಕೊಲ್ಲಬಯಸುತ್ತಾನೆ. ಅವನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆ ಎಂಬುದು ನಿನಗೆ ಗೊತ್ತಿದೆಯೇ?” ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.
15 ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಫದಲ್ಲಿ ಗೆದಲ್ಯನೊಂದಿಗೆ ರಹಸ್ಯವಾಗಿ ಮಾತನಾಡಿದನು. ಯೋಹಾನಾನನು ಗೆದಲ್ಯನಿಗೆ ಹೀಗೆ ಹೇಳಿದನು: “ನಾನು ಹೋಗಿ ನೆತನ್ಯನ ಮಗನಾದ ಇಷ್ಮಾಯೇಲನ ಕೊಲೆ ಮಾಡುವೆನು. ಯಾರಿಗೂ ಆ ವಿಷಯ ತಿಳಿಯುವುದಿಲ್ಲ. ನಾವು ಇಷ್ಮಾಯೇಲನಿಗೆ ನಿನ್ನನ್ನು ಕೊಲ್ಲುವ ಅವಕಾಶ ಕೊಡಬಾರದು. ಅದರಿಂದ ನಿನ್ನ ಆಶ್ರಯದಲ್ಲಿ ಬಂದು ನೆಲೆಸಿದ ಎಲ್ಲಾ ಯೆಹೂದ್ಯರು ಮತ್ತೆ ಬೇರೆಬೇರೆ ದೇಶಗಳಲ್ಲಿ ಚದುರಿ ಹೋಗಬೇಕಾಗುತ್ತದೆ. ಆಗ ಅಳಿದುಳಿದ ಕೆಲವೇ ಜನ ಯೆಹೂದಿಗಳು ಸಹ ಇಲ್ಲವಾಗುತ್ತಾರೆ.”
16 ಆಗ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಇಷ್ಮಾಯೇಲನನ್ನು ಕೊಲ್ಲಬೇಡ. ನೀನು ಇಷ್ಮಾಯೇಲನ ಬಗ್ಗೆ ಹೇಳಿದ ಸಂಗತಿಗಳು ನಿಜವಲ್ಲ” ಎಂದನು.
ರಚನೆಗಾರ: ದಾವೀದ.
15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
2 ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
3 ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
4 ಅವನು ದೇವದೂಷಕರನ್ನು ತಿರಸ್ಕರಿಸುವವನೂ
ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
5 ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]
ರಚನೆಗಾರ: ದಾವೀದ.
16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
2 ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
3 ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.
4 ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
5 ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
6 ನನ್ನ ಪಾಲು[b] ರಮಣೀಯವಾಗಿದೆ.
ನನ್ನ ಸ್ವಾಸ್ತ್ಯವು[c] ಬಹು ಸುಂದರವಾಗಿದೆ.
7 ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.
8 ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
9 ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.
Kannada Holy Bible: Easy-to-Read Version. All rights reserved. © 1997 Bible League International