M’Cheyne Bible Reading Plan
ಶೀಲೋವಿನಲ್ಲಿ ಆರಾಧನೆ
1 ಎಲ್ಕಾನ ಎಂಬ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ರಾಮಾತಯಿಮ್ ಎಂಬ ಊರಿನವನು. ಅವನು ಚೋಫೀಮ್ ಕುಟುಂಬದವನೂ ಯೆರೋಹಾಮನ ಮಗನೂ ಆಗಿದ್ದನು. ಯೆರೋಹಾಮನು ಎಲೀಹುವಿನ ಮಗ. ಎಲೀಹುವನು ತೋಹುವನ ಮಗ. ತೋಹುವನು ಚೂಫನ ಮಗ. ಇವರೆಲ್ಲ ಎಫ್ರಾಯೀಮ್ ಕುಲದವರು.
2 ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಹನ್ನಳು ಎಂಬುದು ಒಬ್ಬಳ ಹೆಸರಾದರೆ, ಇನ್ನೊಬ್ಬಳು ಪೆನಿನ್ನಳು. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
3 ಎಲ್ಕಾನನು ಪ್ರತಿ ವರ್ಷವೂ ತನ್ನ ಪಟ್ಟಣವಾದ ರಾಮಾತಯಿಮ್ ಬಿಟ್ಟು ಶೀಲೋವಿಗೆ ಹೋಗುತ್ತಿದ್ದನು. ಅವನು ಶೀಲೋವಿನಲ್ಲಿ ಸರ್ವಶಕ್ತನಾದ ಯೆಹೋವನನ್ನು ಆರಾಧಿಸಿ ಆತನಿಗೆ ಯಜ್ಞವನ್ನು ಅರ್ಪಿಸುತ್ತಿದ್ದನು. ಹೊಫ್ನಿ ಮತ್ತು ಫೀನೆಹಾಸರೆಂಬ ಯಾಜಕರು ಯೆಹೋವನ ಸೇವೆಮಾಡುವ ಸ್ಥಳವೇ ಶೀಲೋವ. ಹೊಫ್ನಿ ಮತ್ತು ಫೀನೆಹಾಸರು ಏಲಿಯನ ಮಕ್ಕಳು. 4 ಎಲ್ಕಾನನು ಪ್ರತಿಸಲ ಯಜ್ಞವನ್ನು ಅರ್ಪಿಸುವಾಗ, ಪೆನಿನ್ನಳಿಗೆ ಯಜ್ಞದ ಒಂದು ಭಾಗವನ್ನೂ ಅವಳ ಮಕ್ಕಳಿಗೆ ಒಂದು ಭಾಗವನ್ನೂ ಕೊಡುತ್ತಿದ್ದನು. 5 ಎಲ್ಕಾನನು ಹನ್ನಳಿಗೆ ಯಾವಾಗಲೂ ಎರಡು ಭಾಗವನ್ನು ಕೊಡುತ್ತಿದ್ದನು. ಯೆಹೋವನು ಹನ್ನಳಿಗೆ ಮಕ್ಕಳನ್ನು ಕೊಡದೇ ಇದ್ದರೂ, ಎಲ್ಕಾನನು ಎರಡು ಭಾಗವನ್ನು ಕೊಡುತ್ತಿದ್ದನು. ಎಲ್ಕಾನನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಹೀಗೆ ಮಾಡುತ್ತಿದ್ದನು.
ಪೆನಿನ್ನಳು ಹನ್ನಳನ್ನು ನೋಯಿಸುವಳು
6 ಪೆನಿನ್ನಳು ಯಾವಾಗಲೂ ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಹನ್ನಳು ಬಂಜೆಯಾಗಿದ್ದುದೇ ಅದಕ್ಕೆ ಕಾರಣ. 7 ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವರ ಕುಟುಂಬವು ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಒಂದು ದಿನ ಎಲ್ಕಾನನು ಯಜ್ಞವನ್ನು ಅರ್ಪಿಸುವಾಗ, ಹನ್ನಳು ನೊಂದುಕೊಂಡು ಅಳಲಾರಂಭಿಸಿದಳು. ಹನ್ನಳು ಊಟಮಾಡಲೇ ಇಲ್ಲ. 8 ಅವಳ ಗಂಡನಾದ ಎಲ್ಕಾನನು ಅವಳನ್ನು ಕುರಿತು, “ಹನ್ನಾ, ಯಾಕೆ ಅಳುತ್ತಿರುವೆ? ಯಾಕೆ ಊಟಮಾಡುತ್ತಿಲ್ಲ? ಯಾಕೆ ವ್ಯಸನದಿಂದಿರುವೆ? ನಿನಗೆ ನಾನಿಲ್ಲವೇ? ನಾನು ನಿನ್ನ ಗಂಡ. ನಾನು ನಿನಗೆ ಹತ್ತು ಗಂಡುಮಕ್ಕಳಿಗಿಂತಲೂ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿದನು.
ಹನ್ನಳ ಪ್ರಾರ್ಥನೆ
9 ಹನ್ನಳು ಅನ್ನಪಾನಗಳನ್ನು ತೆಗೆದುಕೊಂಡು ಸದ್ದಿಲ್ಲದೆ ಮೇಲೆದ್ದು ಯೆಹೋವನಿಗೆ ಪ್ರಾರ್ಥಿಸಲು ಹೋದಳು. ಯೆಹೋವನ ಪವಿತ್ರ ಆಲಯದ ದ್ವಾರದ ಹತ್ತಿರ ಯಾಜಕನಾದ ಏಲಿಯು ಕುಳಿತಿದ್ದನು. 10 ಹನ್ನಳು ಬಹು ದುಃಖಿತಳಾಗಿದ್ದುದರಿಂದ ಕಣ್ಣೀರು ಸುರಿಯುತ್ತಿತ್ತು. ಅವಳು ಯೆಹೋವನಿಗೆ ಪ್ರಾರ್ಥಿಸುತ್ತಿದ್ದಳು. 11 ಅವಳು ದೇವರಲ್ಲಿ ಒಂದು ವಿಶೇಷ ವಾಗ್ದಾನವನ್ನು ಮಾಡಿದಳು. ಅವಳು, “ಯೆಹೋವನೇ, ಸರ್ವಶಕ್ತನೇ,[a] ನಾನು ಎಷ್ಟು ದುಃಖಿತಳೆಂಬುದನ್ನು ನೋಡು, ನನ್ನನ್ನು ಜ್ಞಾಪಿಸಿಕೊ! ನನ್ನನ್ನು ಮರೆಯದಿರು. ನೀನು ನನಗೊಬ್ಬ ಮಗನನ್ನು ಕರುಣಿಸಿದರೆ, ಅವನು ಜೀವದಿಂದಿರುವ ತನಕ ನಿನ್ನವನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಇತರೆ ಮದ್ಯವನ್ನಾಗಲಿ ಸೇವಿಸುವುದಿಲ್ಲ. ಅವನ ತಲೆಕೂದಲನ್ನು ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ”[b] ಎಂದು ಹೇಳಿದಳು
12 ಹನ್ನಳು ಬಹಳ ಹೊತ್ತಿನವರೆಗೆ ಯೆಹೋವನಿಗೆ ಪ್ರಾರ್ಥನೆ ಮಾಡಿದಳು. ಅವಳು ಪ್ರಾರ್ಥನೆ ಮಾಡುತ್ತಿದ್ದಾಗ ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು. 13 ಹನ್ನಳು ತನ್ನ ಹೃದಯದಲ್ಲಿಯೇ ಪ್ರಾರ್ಥಿಸುತ್ತಿದ್ದಳು. ಅವಳ ತುಟಿಗಳು ಚಲಿಸಿದರೂ ಮಾತುಗಳು ಕೇಳಿಸಲಿಲ್ಲ. ಅವಳು ಮದ್ಯಪಾನ ಮಾಡಿರುತ್ತಾಳೆಂದು 14 ಏಲಿಯು ನೆನಸಿ, “ನೀನು ಹೆಚ್ಚು ಕುಡಿದಿರುವೆ. ಅಮಲನ್ನು ಇಳಿಸಿಕೊ” ಎಂದು ಹನ್ನಳಿಗೆ ಹೇಳಿದನು.
15 ಹನ್ನಳು “ಸ್ವಾಮೀ, ನಾನು ಯಾವುದೇ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದಿಲ್ಲ. ನಾನು ಬಹುದುಃಖಿತಳು. ನಾನು ಯೆಹೋವನಲ್ಲಿ ನನ್ನ ಎಲ್ಲ ತೊಂದರೆಗಳನ್ನು ನಿವೇದಿಸಿಕೊಳ್ಳುತ್ತಿದ್ದೆನು. 16 ನನ್ನನ್ನು ಅಯೋಗ್ಯ ಹೆಂಗಸೆಂದು ನೆನಸಬೇಡಿ. ನಾನು ಬಹು ದುಃಖಿತಳಾಗಿರುವುದರಿಂದ ಮತ್ತು ಹೆಚ್ಚು ನೊಂದಿರುವುದರಿಂದ ದೀರ್ಘಕಾಲ ಪ್ರಾರ್ಥನೆ ಮಾಡಿದೆ” ಎಂದು ಉತ್ತರಿಸಿದಳು.
17 ಏಲಿಯು, “ಸಮಾಧಾನದಿಂದ ಹೋಗು. ಇಸ್ರೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ” ಎಂದು ಉತ್ತರಿಸಿದನು.
18 ಹನ್ನಳು, “ನನ್ನ ಮೇಲೆ ನಿಮ್ಮ ದಯೆಯಿರಲಿ” ಎಂದು ಹೇಳಿದಳು. ಆಗ ಅವಳು ತನ್ನ ಮಾರ್ಗದಲ್ಲಿಯೇ ಹಿಂದಿರುಗಿ. ಸ್ವಲ್ಪ ಊಟ ಮಾಡಿದಳು. ಅಂದಿನಿಂದ ಅವಳು ದುಃಖಿತಳಾಗಲಿಲ್ಲ.
19 ಎಲ್ಕಾನನ ಕುಟುಂಬದವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ, ರಾಮಾತಯಿಮಿನಲ್ಲಿದ್ದ ತಮ್ಮ ಮನೆಗೆ ಹಿಂದಿರುಗಿದರು.
ಸಮುವೇಲನ ಜನನ
ಎಲ್ಕಾನನು ಹನ್ನಳನ್ನು ಕೂಡಿದನು. ಯೆಹೋವನು ಹನ್ನಳನ್ನು ಜ್ಞಾಪಿಸಿಕೊಂಡನು. 20 ಹನ್ನಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಹನ್ನಳು ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. ಅವಳು, “ಅವನ ಹೆಸರು ಸಮುವೇಲ, ಏಕೆಂದರೆ ನಾನು ಅವನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದ್ದೆ” ಎಂದಳು.
21 ಎಲ್ಕಾನನು ಯಜ್ಞವನ್ನು ಅರ್ಪಿಸಲು ಮತ್ತು ಯೆಹೋವನಿಗೆ ಮಾಡಿದ ಹರಕೆಯನ್ನು ಸಲ್ಲಿಸಲು ಆ ವರ್ಷವೂ ಶೀಲೋವಿಗೆ ತನ್ನ ಕುಟುಂಬ ಸಮೇತವಾಗಿ ಹೋದನು. 22 ಆದರೆ ಹನ್ನಳು ಹೋಗಲಿಲ್ಲ. ಅವಳು ಎಲ್ಕಾನನಿಗೆ, “ಮಗುವು ಗಟ್ಟಿಯಾದ ಊಟಮಾಡುವ ತನಕ ನಾನು ಬರುವುದಿಲ್ಲ. ಅವನು ದೊಡ್ಡವನಾದ ಮೇಲೆ ನಾನೇ ಶೀಲೋವಿಗೆ ಕರೆದೊಯ್ದು ಯೆಹೋವನಿಗೆ ಒಪ್ಪಿಸುತ್ತೇನೆ. ಅವನು ನಾಜೀರನಾಗುತ್ತಾನೆ. ಅವನು ಯಾವಾಗಲೂ ಶೀಲೋವಿನಲ್ಲಿಯೇ ಇರುತ್ತಾನೆ” ಎಂದು ಹೇಳಿದಳು.
23 ಹನ್ನಳ ಗಂಡನಾದ ಎಲ್ಕಾನನು ಅವಳಿಗೆ, “ನಿನಗೆ ಸರಿತೋರಿದಂತೆ ಮಾಡು. ಮಗುವು ಗಟ್ಟಿಯಾದ ಊಟ ಮಾಡುವಷ್ಟು ವಯಸ್ಸಾಗುವ ತನಕ ಮನೆಯಲ್ಲಿಯೇ ಇರು. ನೀನು ಹೇಳಿದ್ದನ್ನು ಯೆಹೋವನು ನೆರವೇರಿಸಲಿ” ಎಂದು ಹೇಳಿದನು. ಆದ್ದರಿಂದ ಹನ್ನಳು ತನ್ನ ಮಗುವು ಗಟ್ಟಿಯಾದ ಆಹಾರವನ್ನು ತಿನ್ನಲು ಆರಂಭಿಸುವ ತನಕ ಆರೈಕೆಮಾಡಿ ಬೆಳೆಸಲು ಮನೆಯಲ್ಲಿಯೇ ಇದ್ದಳು.
ಸಮುವೇಲನನ್ನು ಯೆಹೋವನಿಗೆ ಒಪ್ಪಿಸಿದ್ದು
24 ಮಗುವು ಗಟ್ಟಿಯಾದ ಊಟ ಮಾಡುವಂತಾದಾಗ ಹನ್ನಳು ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವನನ್ನು ಕರೆದುಕೊಂಡು ಹೋದಳು. ಹನ್ನಳು ಮೂರು ವರ್ಷದ ಒಂದು ಹೋರಿಯನ್ನೂ ಮೂವತ್ತು ಸೇರು ಹಿಟ್ಟನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋದಳು.
25 ಅವರೆಲ್ಲಾ ಯೆಹೋವನ ಸನ್ನಿಧಿಗೆ ಹೋದರು. ಎಲ್ಕಾನನು ಎಂದಿನಂತೆ ಹೋರಿಯನ್ನು ಯಜ್ಞವಾಗಿ ಅರ್ಪಿಸಿದನು. ಆಮೇಲೆ ಹನ್ನಳು ಏಲಿಯನ ಬಳಿಗೆ ಮಗನನ್ನು ಕರೆದೊಯ್ದಳು. 26 ಹನ್ನಳು, “ಸ್ವಾಮೀ, ನನ್ನನ್ನು ಕ್ಷಮಿಸಿ. ನಿಮ್ಮ ಬಳಿ ನಿಂತಿರುವ ನಾನೇ ಅಂದು ಯೆಹೋವನಿಗೆ ಪ್ರಾರ್ಥನೆ ಮಾಡಿದವಳು. ನಾನು ಹೇಳುತ್ತಿರುವುದು ನಿಜವೆಂದು ಪ್ರಮಾಣ ಮಾಡುತ್ತೇನೆ. 27 ನಾನು ಈ ಮಗುವಿಗಾಗಿ ಪ್ರಾರ್ಥನೆ ಮಾಡಿದೆ. ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರಿಸಿದನು. ಯೆಹೋವನು ಅನುಗ್ರಹಿಸಿದ ಮಗನೇ ಇವನು. 28 ಈಗ ನಾನು ಈ ಮಗನನ್ನು ಯೆಹೋವನಿಗೆ ಒಪ್ಪಿಸುತ್ತೇನೆ. ಇವನು ಜೀವದಿಂದಿರುವ ತನಕ ಯೆಹೋವನಿಗೆ ಪ್ರತಿಷ್ಠಿತನಾಗಿರುತ್ತಾನೆ” ಎಂದು ಏಲಿಗೆ ಹೇಳಿದಳು.
ಬಳಿಕ ಹನ್ನಳು ಆ ಬಾಲಕನನ್ನು ಅಲ್ಲಿಯೇ ಬಿಟ್ಟು ಯೆಹೋವನನ್ನು ಆರಾಧಿಸಿದಳು.
1 ಕ್ರಿಸ್ತ ಯೇಸುವಿನ ಸೇವಕನಾದ ಪೌಲನು ಬರೆಯುವ ಪತ್ರ.
ದೇವರು ನನ್ನನ್ನು ಅಪೊಸ್ತಲನಾಗುವುದಕ್ಕೆ[a] ಕರೆದನು. ದೇವರ ಸುವಾರ್ತೆಯನ್ನು ಎಲ್ಲಾ ಜನರಿಗೆ ತಿಳಿಸುವುದಕ್ಕಾಗಿ ನಾನು ಆರಿಸಲ್ಪಟ್ಟೆನು. 2 ದೇವರು ತನ್ನ ಜನರಿಗೆ ಈ ಸುವಾರ್ತೆಯನ್ನು ಕೊಡುವುದಾಗಿ ಬಹುಕಾಲದ ಹಿಂದೆಯೇ ತನ್ನ ಪ್ರವಾದಿಗಳ ಮೂಲಕ ಪವಿತ್ರ ಗ್ರಂಥದಲ್ಲಿ ವಾಗ್ದಾನ ಮಾಡಿದ್ದನು. 3-4 ದೇವರ ಮಗನೂ ನಮ್ಮ ಪ್ರಭುವೂ ಆಗಿರುವ ಯೇಸು ಕ್ರಿಸ್ತನ ವಿಷಯವೇ ಆ ಸುವಾರ್ತೆ. ಮನುಷ್ಯತ್ವದ ಮಟ್ಟಿಗೆ ಆತನು ದಾವೀದನ[b] ಕುಟುಂಬದಲ್ಲಿ ಹುಟ್ಟಿದನು. ಆದರೆ ಯೇಸು ಪರಿಶುದ್ಧ ಆತ್ಮನ ಮೂಲಕ ಮಹಾಶಕ್ತಿಯೊಡನೆ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದು ತಾನೇ ದೇವರ ಮಗನೆಂಬುದನ್ನು ತೋರಿಸಿಕೊಟ್ಟನು.
5 ದೇವರು ಕ್ರಿಸ್ತನ ಮೂಲಕವಾಗಿ ನನಗೆ ಅಪೊಸ್ತಲನೆಂಬ ವಿಶೇಷ ಕೆಲಸವನ್ನು ಕೊಟ್ಟನು. ದೇವರಲ್ಲಿ ನಂಬಿಕೆಯಿಡುವಂತೆಯೂ ದೇವರಿಗೆ ವಿಧೇಯರಾಗುವಂತೆಯೂ ಎಲ್ಲಾ ಜನಾಂಗಗಳ ಜನರನ್ನು ನಡೆಸಬೇಕೆಂದು ದೇವರು ನನಗೆ ಈ ಕೆಲಸವನ್ನು ಕೊಟ್ಟನು. ನಾನು ಈ ಕೆಲಸವನ್ನು ಕ್ರಿಸ್ತನಿಗಾಗಿ ಮಾಡುತ್ತೇನೆ. 6 ರೋಮಿನಲ್ಲಿರುವ ನೀವು ಸಹ ಯೇಸು ಕ್ರಿಸ್ತನವರಾಗುವುದಕ್ಕಾಗಿ ಕರೆಯಲ್ಪಟ್ಟಿದ್ದೀರಿ.
7 ರೋಮಿನಲ್ಲಿರುವವರೂ ದೇವರ ಪವಿತ್ರ ಜನರಾಗಿರುವುದಕ್ಕಾಗಿ ದೇವರಿಂದಲೇ ಕರೆಯಲ್ಪಟ್ಟವರೂ ಆಗಿರುವ ನಿಮ್ಮೆಲ್ಲರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರಿಗೆ ಪ್ರಿಯರಾದ ಜನರಾಗಿದ್ದೀರಿ.
ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
ಕೃತಜ್ಞತಾ ಪ್ರಾರ್ಥನೆ
8 ಮೊದಲನೆಯದಾಗಿ, ನಾನು ನಿಮ್ಮೆಲ್ಲರ ವಿಷಯದಲ್ಲಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಏಕೆಂದರೆ ನಿಮ್ಮ ನಂಬಿಕೆಯು ಲೋಕದಲೆಲ್ಲಾ ಪ್ರಖ್ಯಾತವಾಗಿದೆ. 9-10 ನಾನು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಖಂಡಿತವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಇದು ಸತ್ಯವೆಂದು ದೇವರಿಗೆ ಗೊತ್ತಿದೆ. ದೇವರ ಮಗನ ವಿಷಯವಾದ ಸುವಾರ್ತೆಯನ್ನು ಜನರಿಗೆ ಸಾರುವುದರ ಮೂಲಕ ನಾನು ದೇವರನ್ನು ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ದೇವರ ಚಿತ್ತದಿಂದ, ನಿಮ್ಮ ಬಳಿಗೆ ಬರಲು ಅವಕಾಶವಾಗಬೇಕೆಂದು ಪ್ರಾರ್ಥಿಸುತ್ತೇನೆ. 11 ನಾನು ನಿಮ್ಮನ್ನು ನೋಡಲು, ನಿಮ್ಮನ್ನು ಬಲಗೊಳಿಸಲು, ನಿಮಗೆ ಆತ್ಮಿಕ ಉಡುಗೊರೆಯನ್ನು ಕೊಡಲು ಅತ್ಯಾಸಕ್ತಿ ಉಳ್ಳವನಾಗಿದ್ದೇನೆ. 12 ಅಂದರೆ ನಾವು ಹೊಂದಿರುವ ನಂಬಿಕೆಯಿಂದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮ ನಂಬಿಕೆ ನನಗೆ ಸಹಾಯ ಮಾಡುತ್ತದೆ ಮತ್ತು ನನ್ನ ನಂಬಿಕೆ ನಿಮಗೆ ಸಹಾಯ ಮಾಡುತ್ತದೆ.
13 ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬರಲು ಅನೇಕ ಸಲ ಯೋಜನೆ ಮಾಡಿದೆನೆಂಬುದು ನಿಮಗೆ ತಿಳಿದಿರಲಿ. ಆದರೆ ನಿಮ್ಮ ಬಳಿಗೆ ಬರಲು ನನಗೆ ಸಾಧ್ಯವಾಗಲಿಲ್ಲ. ನಾನು ನಿಮ್ಮ ಬಳಿಗೆ ಬಂದು ನೀವು ಆತ್ಮಿಕವಾಗಿ ಬೆಳೆಯಲು ನಿಮಗೆ ಸಹಾಯ ಮಾಡಬೇಕೆಂದಿದ್ದೆನು. ನಾನು ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡಿದಂತೆಯೇ ನಿಮಗೂ ಸಹಾಯ ಮಾಡಬೇಕೆಂದಿರುವೆ.
14 ನಾನು ಎಲ್ಲಾ ಜನರ ಅಂದರೆ ಗ್ರೀಕರ ಮತ್ತು ಗ್ರೀಕರಲ್ಲದವರ, ಹಾಗೂ ಜ್ಞಾನಿಗಳ ಮತ್ತು ಮೂಢರ ಸೇವೆ ಮಾಡಲೇಬೇಕು. 15 ಆದಕಾರಣ ರೋಮಿನಲ್ಲಿರುವ ನಿಮಗೆ ಸುವಾರ್ತೆಯನ್ನು ತಿಳಿಸಲು ಬಹಳವಾಗಿ ಆಶಿಸುತ್ತೇನೆ.
16 ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ. 17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”(A)
ಎಲ್ಲಾ ಜನರು ತಪ್ಪು ಮಾಡಿದ್ದಾರೆ
18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ. 19 ದೇವರು ತನ್ನ ಕೋಪವನ್ನು ತೋರಿಸುತ್ತಾನೆ, ಏಕೆಂದರೆ ದೇವರ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ಅವರಿಗೆ ಸ್ಪಷ್ಟಪಡಿಸಲಾಗಿದೆ. ಹೌದು, ತನ್ನ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ದೇವರು ಜನರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.
20 ಜನರು ದೇವರ ನಿತ್ಯಶಕ್ತಿಯನ್ನಾಗಲಿ ಆತನ ದೈವತ್ವಗಳನ್ನಾಗಲಿ ಕಾಣಲಾರರು. ಆದರೆ ಲೋಕದ ಆರಂಭದಿಂದಲೂ ಆ ಸಂಗತಿಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ದೇವರು ಮಾಡಿದ ಸೃಷ್ಟಿಗಳಲ್ಲಿ ಆ ಸಂಗತಿಗಳು ಸ್ಪಷ್ಟವಾಗಿವೆ. ಆದ್ದರಿಂದ ಜನರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ನೆವ ಹೇಳಲು ಸಾಧ್ಯವಿಲ್ಲ.
21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. 22 ಜನರು ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಂಡು ಮೂರ್ಖರಾದರು. 23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.
24 ಪಾಪಗಳಿಂದ ತುಂಬಿಹೋಗಿದ್ದ ಅವರು ದುಷ್ಕೃತ್ಯಗಳನ್ನೇ ಮಾಡಬಯಸಿದರು. ಆದ್ದರಿಂದ ಪಾಪಮಾರ್ಗದಲ್ಲೇ ಹೋಗಲೆಂದು ದೇವರು ಅವರನ್ನು ಬಿಟ್ಟುಬಿಟ್ಟನು. ಅದರಿಂದಾಗಿ ಅವರು ತಮ್ಮತಮ್ಮಲ್ಲೇ ತಮ್ಮ ದೇಹಗಳಿಂದ ಲೈಂಗಿಕ ಪಾಪಗಳನ್ನು ಮಾಡಿದರು. 25 ಅವರು ದೇವರ ಸತ್ಯವನ್ನು ತೊರೆದು ಸುಳ್ಳನ್ನು ಹಿಡಿದುಕೊಂಡರು; ಸೃಷ್ಟಿಸಲ್ಪಟ್ಟ ವಸ್ತುಗಳನ್ನು ಆರಾಧಿಸಿದರು; ಅವುಗಳ ಸೇವೆ ಮಾಡಿದರು. ಆದರೆ ಆ ವಸ್ತುಗಳನ್ನು ಸೃಷ್ಟಿಸಿದ ದೇವರನ್ನು ಅವರು ಆರಾಧಿಸಲಿಲ್ಲ; ಆತನ ಸೇವೆ ಮಾಡಲಿಲ್ಲ. ದೇವರಿಗೇ ನಿರಂತರ ಸ್ತುತಿಸ್ತೋತ್ರ ಸಲ್ಲಬೇಕು. ಆಮೆನ್.
26 ಅವರು ಆ ರೀತಿ ವರ್ತಿಸಿದ್ದರಿಂದಲೇ, ದೇವರು ಅವರನ್ನು ನಾಚಿಕೆಕರವಾದ ಕಾಮಾಭಿಲಾಷೆಗೆ ಬಿಟ್ಟುಕೊಟ್ಟನು. ಅವರ ಸ್ತ್ರೀಯರು ಪುರಷರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ, ಸಲಿಂಗಕಾಮಿಗಳಾದರು. 27 ಅದೇರೀತಿಯಲ್ಲಿ, ಪುರುಷರು ಸ್ತ್ರೀಯರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ ಉದ್ರೇಕಗೊಂಡ ಸಲಿಂಗಕಾಮಿಗಳಾದರು. ಅವರು ತಮ್ಮ ದುರ್ನಡತೆಗೆ ತಕ್ಕ ದಂಡನೆಯನ್ನು ತಮ್ಮ ದೇಹಗಳಿಗೆ ಬರಮಾಡಿಕೊಂಡರು.
28 ದೇವರ ನಿಜ ಜ್ಞಾನವನ್ನು ಹೊಂದಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ದೇವರು ಅವರನ್ನು ಅವರ ಅಯೋಗ್ಯ ಭಾವಕ್ಕೆ ಒಪ್ಪಿಸಿಕೊಟ್ಟನು. ಆದ್ದರಿಂದ ಅವರು ತಾವು ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. 29 ಅವರಲ್ಲಿ ಪ್ರತಿಯೊಂದು ಬಗೆಯ ಪಾಪ, ದುಷ್ಟತನ, ಸ್ವಾರ್ಥ, ದ್ವೇಷ, ಹೊಟ್ಟೆಕಿಚ್ಚು, ಕೊಲೆ, ಹೊಡೆದಾಟ, ಸುಳ್ಳುನುಡಿ ಮತ್ತು ಕೆಟ್ಟ ಆಲೋಚನೆ ಇವುಗಳೆಲ್ಲಾ ತುಂಬಿಕೊಂಡಿವೆ. ಅವರು ಹರಟೆ ಹೊಡೆಯುತ್ತಾರೆ; 30 ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಾರೆ; ದೇವರನ್ನು ದ್ವೇಷಿಸುತ್ತಾರೆ. ಅವರು ಸೊಕ್ಕಿನವರೂ ಅಹಂಕಾರಿಗಳೂ ಮತ್ತು ತಮ್ಮ ಬಗ್ಗೆ ಬಡಾಯಿಕೊಚ್ಚಿಕೊಳ್ಳುವವರೂ ಆಗಿದ್ದಾರೆ. ಅವರು ಕೇಡಿನ ಮಾರ್ಗಗಳನ್ನು ಹುಡುಕುವವರೂ ತಂದೆತಾಯಿಗಳಿಗೆ ಅವಿಧೇಯರೂ ಮೂರ್ಖರೂ ಆಗಿದ್ದಾರೆ. 31 ಅವರು ತಾವು ಕೊಟ್ಟ ಮಾತನ್ನು ನೆರವೇರಿಸದವರೂ ಬೇರೆಯವರಿಗೆ ಮಮತೆಯನ್ನಾಗಲಿ ಕರುಣೆಯನ್ನಾಗಲಿ ತೋರದವರೂ ಆಗಿದ್ದಾರೆ. 32 ಇಂಥವರಿಗೆ ಮರಣದಂಡನೆ ಆಗಬೇಕೆಂದು ದೇವರ ಧರ್ಮಶಾಸ್ತ್ರ ಹೇಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಆದರೂ ಅವರು ಇಂಥ ಕಾರ್ಯಗಳನ್ನು ಮಾಡುತ್ತಾರೆ ಮತ್ತು ಇಂಥ ಕಾರ್ಯಗಳನ್ನು ಮಾಡುವ ಜನರಿಗೆ ಪ್ರೋತ್ಸಾಹ ನೀಡುತ್ತಾರೆ.
ಜೆರುಸಲೇಮಿನ ಪತನ
39 ಜೆರುಸಲೇಮನ್ನು ಹೀಗೆ ವಶಪಡಿಸಿಕೊಳ್ಳಲಾಯಿತು: ಚಿದ್ಕೀಯನು ಯೆಹೂದದ ರಾಜನಾಗಿ ಆಳುತ್ತಿದ್ದ ಒಂಭತ್ತನೇ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಇಡೀ ಸೈನ್ಯದೊಂದಿಗೆ ಜೆರುಸಲೇಮಿನ ಮೇಲೆ ಧಾಳಿ ಮಾಡಿದನು. ಅದನ್ನು ವಶಪಡಿಸಿಕೊಳ್ಳುವದಕ್ಕಾಗಿ ಅವನು ಆ ನಗರವನ್ನು ಮುತ್ತಿದನು. 2 ಚಿದ್ಕೀಯನ ಆಳ್ವಿಕೆಯ ಹನ್ನೊಂದನೆ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೇ ದಿನದಂದು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆಯಲಾಯಿತು. 3 ಆಗ ಬಾಬಿಲೋನಿನ ಎಲ್ಲಾ ರಾಜ್ಯಾಧಿಕಾರಿಗಳು ಜೆರುಸಲೇಮ್ ನಗರವನ್ನು ಪ್ರವೇಶಿಸಿದರು. ಅವರು ಒಳಗೆ ಬಂದು ಮಧ್ಯ ದ್ವಾರದಲ್ಲಿ ಕುಳಿತುಕೊಂಡರು. ಅವರು ಯಾರೆಂದರೆ: ಸಮ್ಗರ್ ನೆಬೋದದ ಅಧಿಪತಿಯಾದ ನೇರ್ಗಲ್ ಸರೆಚರ್; ಇನ್ನೊಬ್ಬ ದೊಡ್ಡ ಅಧಿಕಾರಿಯಾದ ಸೆರ್ಸೆಕೀಮ್ ಮತ್ತು ಬೇರೆಬೇರೆ ದೊಡ್ಡ ಅಧಿಕಾರಿಗಳು ಕೂಡ ಅಲ್ಲಿದ್ದರು.
4 ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಆ ಅಧಿಕಾರಿಗಳನ್ನು ನೋಡಿದನು. ಅವನು ಮತ್ತು ಅವನ ಜೊತೆಗಿದ್ದ ಸೈನಿಕರು ಓಡಿಹೋದರು. ಅವರು ರಾತ್ರಿಯಲ್ಲಿ ಜೆರುಸಲೇಮ್ ನಗರವನ್ನು ಬಿಟ್ಟು ರಾಜನ ಉದ್ಯಾನದ ಮಾರ್ಗವಾಗಿ ಹೊರಗೆ ಹೋದರು. ಅವರು ಎರಡು ಗೋಡೆಗಳ ಮಧ್ಯದಲ್ಲಿದ್ದ ಬಾಗಿಲಿನಿಂದ ಹೊರಗೆ ಬಂದು ಮರುಭೂಮಿಯ ಕಡೆಗೆ ಹೊರಟರು. 5 ಆದರೆ ಬಾಬಿಲೋನಿನ ಸೈನಿಕರು ಚಿದ್ಕೀಯ ಮತ್ತು ಅವನ ಸೈನಿಕರನ್ನು ಬೆನ್ನಟ್ಟಿದರು. ಕಸ್ದೀಯರ ಸೈನಿಕರು ಜೆರಿಕೊವಿನ ಬಯಲಿನಲ್ಲಿ ಚಿದ್ಕೀಯನನ್ನು ಬಂಧಿಸಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಲ್ಲಿಗೆ ತೆಗೆದುಕೊಂಡು ಹೋದರು. ಆಗ ನೆಬೂಕದ್ನೆಚ್ಚರನು ಹಮಾತ್ ಸೀಮೆಯ “ರಿಬ್ಲ”ದಲ್ಲಿದ್ದನು. ಆ ಸ್ಥಳದಲ್ಲಿಯೇ ನೆಬೂಕದ್ನೆಚ್ಚರನು ಚಿದ್ಕೀಯನ ಬಗ್ಗೆ ತನ್ನ ನಿರ್ಣಯವನ್ನು ಪ್ರಕಟಿಸಿದನು. 6 ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣೆದುರಿನಲ್ಲಿಯೇ ಅವನ ಗಂಡುಮಕ್ಕಳನ್ನು ಕೊಲ್ಲಿಸಿದನು. ಚಿದ್ಕೀಯನು ನೋಡುತ್ತಿದ್ದಂತೆಯೇ ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ರಾಜಾಧಿಕಾರಿಗಳನ್ನು ಕೊಲ್ಲಿಸಿದನು. 7 ಅನಂತರ ನೆಬೂಕದ್ನೆಚ್ಚರನು ಚಿದ್ಕೀಯನ ಕಣ್ಣುಗಳನ್ನು ಕೀಳಿಸಿದನು. ಕಂಚಿನ ಸರಪಳಿಗಳಿಂದ ಬಿಗಿಸಿ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು.
8 ಬಾಬಿಲೋನಿನ ಸೈನಿಕರು ಅರಮನೆಗೂ ಮತ್ತು ಜೆರುಸಲೇಮಿನ ಉಳಿದ ನಿವಾಸಿಗಳ ಮನೆಗಳಿಗೂ ಬೆಂಕಿಯಿಟ್ಟರು. ಜೆರುಸಲೇಮಿನ ಗೋಡೆಗಳನ್ನು ಕೆಡವಿದರು. 9 ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನೆಂಬವನು ಜೆರುಸಲೇಮಿನಲ್ಲಿ ಉಳಿದ ಜನರನ್ನು ಹಿಡಿದು ಬಂಧಿಗಳನ್ನಾಗಿ ಮಾಡಿದ್ದನು. ಅವರನ್ನು ಅವನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಈ ಮೊದಲೆ ಅವನಿಗೆ ಶರಣಾಗತರಾದವರನ್ನೂ ಸಹ ನೆಬೂಜರದಾನನು ಬಂಧಿಗಳನ್ನಾಗಿ ಮಾಡಿದನು. ಅವನು ಜೆರುಸಲೇಮಿನ ಉಳಿದವರೆಲ್ಲರನ್ನು ಬಂಧಿಗಳನ್ನಾಗಿ ಮಾಡಿ ಬಾಬಿಲೋನಿಗೆ ತೆಗೆದುಕೊಂಡು ಹೋದನು. 10 ಆದರೆ ಬಾಬಿಲೋನ್ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಯೆಹೂದದ ಕೆಲ ಬಡಜನರನ್ನು ಅಲ್ಲಿಯೇ ಬಿಟ್ಟನು. ಆ ಜನಗಳಿಗೆ ಯಾವ ಆಸ್ತಿಪಾಸ್ತಿ ಇದ್ದಿರಲಿಲ್ಲ. ಆದ್ದರಿಂದ ಅಂದು ನೆಬೂಜರದಾನನು ಯೆಹೂದದ ಆ ಬಡಜನರಿಗೆ ದ್ರಾಕ್ಷಿತೋಟಗಳನ್ನು ಮತ್ತು ಹೊಲಗಳನ್ನು ಕೊಟ್ಟನು.
11 ನೆಬೂಕದ್ನೆಚ್ಚರನು ನೆಬೂಜರದಾನನಿಗೆ ಯೆರೆಮೀಯನ ಬಗ್ಗೆ ಕೆಲವು ಆಜ್ಞೆಗಳನ್ನು ಕೊಟ್ಟನು. ನೆಬೂಜರದಾನನು ನೆಬೂಕದ್ನೆಚ್ಚರನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಆ ಆಜ್ಞೆ ಹೀಗಿತ್ತು: 12 “ಯೆರೆಮೀಯನನ್ನು ಪತ್ತೆಹಚ್ಚಿ ಅವನ ಕ್ಷೇಮದ ಬಗ್ಗೆ ಎಚ್ಚರಿಕೆವಹಿಸಿರಿ, ಅವನಿಗೆ ನೋವಾಗದಂತೆ ನೋಡಿಕೊಳ್ಳಿ. ಅವನು ಕೇಳಿದ್ದನ್ನೆಲ್ಲ ಕೊಡಿ.”
13 ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನ್, ಬಾಬಿಲೋನಿನ ಸೈನ್ಯದ ಒಬ್ಬ ಮುಖ್ಯ ಅಧಿಕಾರಿಯಾದ ನೆಬೂಷಜ್ಜಾನ್, ದೊಡ್ಡ ಅಧಿಕಾರಿಯಾದ ನೇರ್ಗಲ್ ಸರೆಚರ್ ಮತ್ತು ಬಾಬಿಲೋನಿನ ಇನ್ನುಳಿದ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಹುಡುಕಲು ಜನರನ್ನು ಕಳುಹಿಸಿದರು. 14 ಅವರು ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಹೊರಗೆ ಕರೆದು ತಂದರು. ಬಾಬಿಲೋನಿನ ಆ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಗೆದಲ್ಯನ ವಶಕ್ಕೆ ಕೊಟ್ಟರು. ಗೆದಲ್ಯನು ಅಹೀಕಾಮನ ಮಗ ಮತ್ತು ಅಹೀಕಾಮನು ಶಾಫಾನನ ಮಗನಾಗಿದ್ದನು. ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಗೆದಲ್ಯನಿಗೆ ಆಜ್ಞಾಪಿಸಲಾಯಿತು. ಅದರಂತೆ ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಲಾಯಿತು; ಅವನು ತನ್ನ ಜನರೊಂದಿಗೆ ವಾಸಿಸತೊಡಗಿದನು.
ಎಬೆದ್ಮೆಲೆಕನಿಗೆ ಯೆಹೋವನಿಂದ ಒಂದು ಸಂದೇಶ
15 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂದಿಯಾಗಿದ್ದಾಗ ಯೆಹೋವನಿಂದ ಅವನಿಗೊಂದು ಸಂದೇಶ ಬಂದಿತು. ಆ ಸಂದೇಶ ಹೀಗಿತ್ತು: 16 “ಯೆರೆಮೀಯನೇ, ಹೋಗಿ ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ ಈ ಸಂದೇಶವನ್ನು ಕೊಡು: ‘ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ಜೆರುಸಲೇಮ್ ನಗರದ ಬಗ್ಗೆ ನಾನು ಕೊಟ್ಟ ಸಂದೇಶಗಳು ಬೇಗ ಕಾರ್ಯರೂಪಕ್ಕೆ ಬರುತ್ತವೆ. ನನ್ನ ಸಂದೇಶ ಕಾರ್ಯರೂಪಕ್ಕೆ ಬರುವುದು ಕೇಡುಗಳ ಮೂಲಕವೇ ಹೊರತು ಒಳ್ಳೆಯದರ ಮೂಲಕವಲ್ಲ. ಎಲ್ಲವೂ ನನ್ನ ಸಂದೇಶದಂತೆ ನಡೆಯುವುದನ್ನು ನೀನು ಕಣ್ಣಾರೆ ನೋಡುವೆ. 17 ಆದರೆ ಅಂದು ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುತ್ತೇನೆ.’ ಇದು ಯೆಹೋವನ ನುಡಿ. ‘ನೀನು ಊಹಿಸಿ ಭಯಪಟ್ಟಂತೆ ನಿನ್ನನ್ನು ಆ ಜನರ ಕೈಗೆ ಒಪ್ಪಿಸುವದಿಲ್ಲ. 18 ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುವೆನು. ನೀನು ಖಡ್ಗಕ್ಕೆ ಆಹುತಿಯಾಗುವದಿಲ್ಲ. ನೀನು ತಪ್ಪಿಸಿಕೊಂಡು ಬದುಕುವೆ. ನೀನು ನನ್ನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣ’” ಇದು ಯೆಹೋವನ ನುಡಿ.
ರಚನೆಗಾರ: ದಾವೀದ.
13 ಯೆಹೋವನೇ, ನನ್ನನ್ನು ಇನ್ನೆಷ್ಟುಕಾಲ ಮರೆತಿರುವೆ?
ನನ್ನನ್ನು ಶಾಶ್ವತವಾಗಿ ಮರೆತುಬಿಡುವೆಯಾ?
ಇನ್ನೆಷ್ಟುಕಾಲ ನನಗೆ ಮರೆಯಾಗಿರುವೆ?
2 ನಾನು ದುಃಖಕ್ರಾಂತನಾಗಿ ಇನ್ನೆಷ್ಟುಕಾಲ ಆಲೋಚಿಸುತ್ತಿರಬೇಕು?
ನನ್ನ ವೈರಿಗಳು ಇನ್ನೆಷ್ಟುಕಾಲ ನನ್ನ ಮೇಲೆ ಜಯಗಳಿಸಬೇಕು?
3 ನನ್ನ ದೇವರಾದ ಯೆಹೋವನೇ, ನನ್ನ ಮೇಲೆ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು.
ಇಲ್ಲವಾದರೆ, ನಾನು ಸಾಯಲೇಬೇಕಾಗುವುದು!
4 ಆಗ ವೈರಿಯು, “ನಾನು ಅವನನ್ನು ಸೋಲಿಸಿದೆ!” ಎಂದು ಹೇಳುತ್ತಾ
ನನ್ನ ಬೀಳುವಿಕೆಯನ್ನು ಕಂಡು ಸಂತೋಷಪಡುವನು.
5 ನಾನಂತೂ ನಿನ್ನ ಶಾಶ್ವತವಾದ ಪ್ರೀತಿಯಲ್ಲಿ ಭರವಸೆಯಿಟ್ಟಿದ್ದೇನೆ.
ನಿನ್ನ ರಕ್ಷಣೆಯ ನಿಮಿತ್ತ ನನ್ನ ಹೃದಯವು ಹರ್ಷಿಸುವುದು.
6 ಯೆಹೋವನು ಮಹೋಪಕಾರಗಳನ್ನು ಮಾಡಿರುವುದರಿಂದ
ಆತನಿಗೆ ಹರ್ಷಗೀತೆಗಳನ್ನು ಹಾಡುವೆನು.
ರಚನೆಗಾರ: ದಾವೀದ.
14 ಮೂಢರು ತಮ್ಮ ಹೃದಯದಲ್ಲಿ, “ದೇವರಿಲ್ಲ” ಎಂದುಕೊಳ್ಳುವರು.
ಮೂಢರು ಭಯಂಕರವಾದ ಅಸಹ್ಯಕೃತ್ಯಗಳನ್ನು ಮಾಡುವರು.
ಅವರಲ್ಲಿ ಒಳ್ಳೆಯದನ್ನು ಮಾಡುವವರು ಇಲ್ಲವೇ ಇಲ್ಲ.
2 ದೇವರಿಗಾಗಿ ಹುಡುಕುವ ಬುದ್ಧಿವಂತರು ಮನುಷ್ಯರಲ್ಲಿ ಇದ್ದಾರೋ
ಎಂದು ಯೆಹೋವನು ಪರಲೋಕದಿಂದ ಮನುಷ್ಯರನ್ನು ನೋಡುವನು.
3 ಆದರೆ ಪ್ರತಿಯೊಬ್ಬನೂ ದೇವರಿಗೆ ವಿಮುಖನಾಗಿದ್ದಾನೆ.
ಎಲ್ಲರೂ ಕೆಟ್ಟುಹೋಗಿದ್ದಾರೆ.
ಒಳ್ಳೆಯದನ್ನು ಮಾಡುವವನು ಇಲ್ಲ;
ಒಬ್ಬನಾದರೂ ಇಲ್ಲ.
4 ದುಷ್ಟರು ಅರ್ಥಮಾಡಿಕೊಳ್ಳುವುದಿಲ್ಲವೇ?
ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ.
ಅವರು ಯೆಹೋವನನ್ನು ಆರಾಧಿಸುವುದೂ ಇಲ್ಲ.
5-6 ಬಡವರ ಬುದ್ಧಿಮಾತನ್ನು ಆ ದುಷ್ಟರು ಕೇಳುವುದಿಲ್ಲ.
ಯಾಕೆಂದರೆ ಬಡವರು ಆಶ್ರಯಿಸಿಕೊಂಡಿರುವುದು ಯೆಹೋವನನ್ನೇ.
ಆದರೆ ದೇವರು ನೀತಿವಂತರೊಂದಿಗಿದ್ದಾನೆ.
ಆದ್ದರಿಂದ ದುಷ್ಟರು ಭಯಭ್ರಾಂತರಾಗುವರು.
7 ಚೀಯೋನ್ ಪರ್ವತದ ಮೇಲಿರುವಾತನು ಇಸ್ರೇಲನ್ನು ರಕ್ಷಿಸುವನೇ?
ಯೆಹೋವನ ಪ್ರಜೆಗಳು ಸೆರೆ ಒಯ್ಯಲ್ಪಟ್ಟು ಸೆರೆವಾಸದಲ್ಲಿದ್ದಾರೆ.
ಯೆಹೋವನಾದರೋ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವನು;
ಆಗ ಯಾಕೋಬ್ಯರು ಉಲ್ಲಾಸಗೊಳ್ಳುವರು; ಇಸ್ರೇಲರು ಹರ್ಷಿಸುವರು.
Kannada Holy Bible: Easy-to-Read Version. All rights reserved. © 1997 Bible League International