Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ರೂತಳು 2

ರೂತಳಿಗೆ ಬೋವಜನ ಭೇಟಿ

ಬೆತ್ಲೆಹೇಮಿನಲ್ಲಿ ಬೋವಜನೆಂಬ ಒಬ್ಬ ಐಶ್ವರ್ಯವಂತನಿದ್ದನು. ಬೋವಜನು ಎಲೀಮೆಲೆಕನ ಕುಟುಂಬದವನಾಗಿದ್ದು ನೊವೊಮಿಯ ಸಮೀಪದ ಸಂಬಂಧಿಯಾಗಿದ್ದನು.

ಒಂದು ದಿನ ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಗಳಿಗೆ ಹೋಗುತ್ತೇನೆ. ಯಾರಾದರೂ ದಯೆತೋರಿ ತಮ್ಮ ಹೊಲದಲ್ಲಿ ಹಕ್ಕಲನ್ನು ಆರಿಸಲು ಅನುಮತಿ ಕೊಡಬಹುದು” ಎಂದಳು.

ನೊವೊಮಿಯು, “ಆಗಲಿ ಮಗಳೇ, ಹಾಗೆಯೇ ಮಾಡು” ಅಂದಳು.

ರೂತಳು ಹೊಲಗಳಿಗೆ ಹೋದಳು. ಅವಳು ಅಲ್ಲಿ ಫಸಲು ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾಯುತ್ತಾ ಎಲೀಮೆಲೆಕನ ಗೋತ್ರದವನಾದ ಬೋವಜನ ಹೊಲಕ್ಕೆ ಬಂದಳು.

ತರುವಾಯ ಬೋವಜನು ಬೆತ್ಲೆಹೇಮಿನಿಂದ ಹೊಲಕ್ಕೆ ಬಂದನು. ಅವನು ಕೆಲಸಗಾರರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಹರಸಿದನು.

ಆ ಕೆಲಸಗಾರರು, “ಯೆಹೋವನು ನಿನಗೆ ಕೃಪೆ ತೋರಲಿ” ಎಂದು ಉತ್ತರಿಸಿದರು.

ಆಗ ಬೋವಜನು ಕೊಯ್ಯುವವರ ಮೇಲ್ವಿಚಾರಕನಾಗಿದ್ದ ತನ್ನ ಸೇವಕನನ್ನು, “ಆ ಸ್ತ್ರೀ ಯಾರು?” ಎಂದು ಕೇಳಿದನು.

ಆ ಸೇವಕನು, “ಅವಳು ಮೋವಾಬ್ ಬೆಟ್ಟಪ್ರದೇಶದಿಂದ ನೊವೊಮಿಯ ಸಂಗಡ ಬಂದ ಮೋವಾಬ್ಯರ ಸ್ತ್ರೀ. ಅವಳು ಇಂದು ಬೆಳಗಿನ ಜಾವದಲ್ಲಿ ಬಂದು, ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾರಿಸಿಕೊಳ್ಳಬಹುದೇ? ಎಂದು ನನ್ನನ್ನು ಕೇಳಿದಳು. ಆಗಿನಿಂದ ಅವಳು ಆ ಕೆಲಸವನ್ನು ಮಾಡುತ್ತಿದ್ದಾಳೆ. ಆಕೆ ಸ್ವಲ್ಪ ಹೊತ್ತು ಮಾತ್ರ ಆ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡಳು” ಎಂದು ಉತ್ತರಕೊಟ್ಟನು.

ಆಗ ಬೋವಜನು ರೂತಳಿಗೆ, “ಮಗಳೇ, ನೀನು ನನ್ನ ಹೊಲದಲ್ಲಿಯೇ ಧಾನ್ಯವನ್ನು ಶೇಖರಿಸು. ನೀನು ಬೇರೆಯವರ ಹೊಲಕ್ಕೆ ಹೋಗುವ ಅವಶ್ಯಕತೆಯಿಲ್ಲ. ನನ್ನ ಹೆಣ್ಣಾಳುಗಳ ಹಿಂದೆಯೇ ನೀನು ಹೋಗುತ್ತಿರು. ಅವರು ಯಾವ ಹೊಲಕ್ಕೆ ಹೋಗುತ್ತಾರೆಂಬುದನ್ನು ತಿಳಿದುಕೊಂಡು ಅವರನ್ನು ಹಿಂಬಾಲಿಸು; ನಿನಗೆ ತೊಂದರೆ ಕೊಡಕೂಡದೆಂದು ನನ್ನ ಸೇವಕರಿಗೆ ಆಜ್ಞಾಪಿಸಿದ್ದೇನೆ. ನಿನಗೆ ಬಾಯಾರಿಕೆಯಾದರೆ ನೀರಿನ ಕೊಡಗಳ ಬಳಿಗೆ ಹೋಗಿ ನನ್ನ ಆಳುಗಳು ಸೇದುವ ನೀರನ್ನೇ ಕುಡಿ” ಎಂದು ಹೇಳಿದನು.

10 ಆಗ ರೂತಳು ತಲೆಬಾಗಿ ವಂದಿಸಿದಳು. ಅವಳು ಬೋವಜನಿಗೆ, “ನನಗೆ ಆಶ್ಚರ್ಯವಾಗುತ್ತದೆ. ನಾನೊಬ್ಬ ಪರದೇಶಿಯಾಗಿದ್ದರೂ ನೀನು ನನ್ನನ್ನು ಗಮನಿಸಿ ಕೃಪೆ ತೋರಿದೆ” ಎಂದಳು.

11 ಬೋವಜನು ಅವಳಿಗೆ, “ನೀನು ನಿನ್ನ ಅತ್ತೆಯಾದ ನೊವೊಮಿಗೆ ಮಾಡಿದ ಎಲ್ಲ ಸಹಾಯದ ಬಗ್ಗೆ ನನಗೆ ಗೊತ್ತಿದೆ. ನಿನ್ನ ಗಂಡನು ಸತ್ತ ಮೇಲೆಯೂ ನೀನು ಅವಳಿಗೆ ಸಹಾಯ ಮಾಡಿದೆ ಎಂಬುದು ನನಗೆ ಗೊತ್ತಿದೆ. ನೀನು ನಿನ್ನ ತಂದೆತಾಯಿಗಳನ್ನೂ ನಿನ್ನ ದೇಶವನ್ನೂ ಬಿಟ್ಟು ಈ ದೇಶಕ್ಕೆ ಬಂದಿರುವಿ ಎಂಬುದು ನನಗೆ ಗೊತ್ತು. ನಿನಗೆ ಈ ದೇಶದಲ್ಲಿ ಯಾರ ಪರಿಚಯವೂ ಇರಲಿಲ್ಲ; ಆದರೂ ನೀನು ನೊವೊಮಿಯ ಜೊತೆ ಇಲ್ಲಿಗೆ ಬಂದಿರುವಿ. 12 ನೀನು ಮಾಡಿದ ಎಲ್ಲ ಸತ್ಕಾರ್ಯಕ್ಕೆ ಯೆಹೋವನು ನಿನಗೆ ಸಂಪೂರ್ಣ ಪ್ರತಿಫಲ ಕೊಡುವನು; ಯಾಕೆಂದರೆ ನೀನು ಯಾವಾತನ ಆಶ್ರಯವನ್ನು[a] ಕೋರಿ ಬಂದಿರುವಿಯೋ ಆತನು ನಿನ್ನನ್ನು ರಕ್ಷಿಸುತ್ತಾನೆ” ಎಂದು ಸಮಾಧಾನ ಪಡಿಸಿದನು.

13 ಆಗ ರೂತಳು, “ನನ್ನ ಸ್ವಾಮೀ, ನೀವು ನನಗೆ ತುಂಬ ದಯೆ ತೋರಿದಿರಿ. ನಾನು ಕೇವಲ ಒಬ್ಬ ದಾಸಿ. ನಾನು ನಿಮ್ಮ ಒಬ್ಬ ದಾಸಿಯ ಸಮಾನಳಲ್ಲದಿದ್ದರೂ ನೀವು ಒಳ್ಳೆಯ ಮಾತುಗಳಿಂದ ನನಗೆ ಕನಿಕರ ತೋರಿದಿರಿ” ಎಂದು ತನ್ನ ಕೃತಜ್ಞತೆಯನ್ನು ಸೂಚಿಸಿದಳು.

14 ಊಟದ ಸಮಯದಲ್ಲಿ ಬೋವಜನು ರೂತಳಿಗೆ, “ಇಲ್ಲಿ ಬಾ, ರೊಟ್ಟಿಯನ್ನು ತೆಗೆದುಕೊಂಡು ಹುಳಿರಸದಲ್ಲಿ ಅದ್ದಿಕೊಂಡು ತಿನ್ನು” ಎಂದು ಹೇಳಿದನು.

ರೂತಳು ಕೆಲಸಗಾರರ ಜೊತೆ ಕುಳಿತುಕೊಂಡಳು. ಬೋವಜನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ರೂತಳು ಹೊಟ್ಟೆತುಂಬ ಊಟ ಮಾಡಿದ ಮೇಲೂ ಸ್ವಲ್ಪ ಆಹಾರ ಉಳಿಯಿತು. 15 ಆಗ ರೂತಳು ಎದ್ದು ಪುನಃ ಕೆಲಸಕ್ಕೆ ಹೋದಳು.

ಆಗ ಬೋವಜನು ತನ್ನ ಸೇವಕರಿಗೆ, “ರೂತಳು ಕಣದಲ್ಲಿರುವ ಸಿವುಡುಗಳ ಸುತ್ತಲೂ ಹಕ್ಕಲು ಆರಿಸಿಕೊಳ್ಳಲಿ; ಅವಳನ್ನು ತಡೆಯಬೇಡಿ. 16 ಅವಳಿಗಾಗಿ ಕಟ್ಟುಗಳಿಂದ ಕೆಲವು ತುಂಬು ತೆನೆಗಳನ್ನೇ ಬಿಟ್ಟು ಅವಳ ಕೆಲಸ ಸುಲಭಗೊಳಿಸಿರಿ. ಆ ಧಾನ್ಯವನ್ನು ತೆಗೆದುಕೊಂಡರೆ ಅವಳನ್ನು ಗದರಿಸಬೇಡಿ” ಎಂದು ಆಜ್ಞಾಪಿಸಿದನು.

ನೊವೊಮಿಗೆ ಬೋವಜನ ವಿಷಯ ತಿಳಿಯಿತು

17 ರೂತಳು ಸಾಯಂಕಾಲದವರೆಗೆ ಹೊಲದಲ್ಲಿ ಕೆಲಸ ಮಾಡಿದಳು. ಸಾಯಂಕಾಲ ತೆನೆಗಳನ್ನು ಬಡಿದು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿದಳು. ಸುಮಾರು ಮೂವತ್ತು ಸೇರು[b] ಜವೆಗೋಧಿ ಸಿಕ್ಕಿತ್ತು. 18 ರೂತಳು ತನ್ನ ಅತ್ತೆಗೆ ತೋರಿಸುವುದಕ್ಕಾಗಿ ಆ ಧಾನ್ಯವನ್ನು ಪಟ್ಟಣಕ್ಕೆ ತೆಗೆದುಕೊಂಡು ಹೋದಳು. ಇದಲ್ಲದೆ ತಾನು ಮಧ್ಯಾಹ್ನ ಊಟ ಮಾಡುವಾಗ ತೆಗೆದಿಟ್ಟ ಆಹಾರವನ್ನು ಸಹ ಅವಳಿಗೆ ಕೊಟ್ಟಳು.

19 ಅವಳ ಅತ್ತೆಯು ಅವಳಿಗೆ, “ಈ ಧಾನ್ಯವನ್ನೆಲ್ಲಾ ನೀನು ಎಲ್ಲಿಂದ ಶೇಖರಿಸಿದೆ? ನೀನು ಎಲ್ಲಿ ಕೆಲಸ ಮಾಡಿದೆ? ನಿನಗೆ ಸಹಾಯ ಮಾಡಿದ ಮನುಷ್ಯನಿಗೆ ಶುಭವಾಗಲಿ” ಎಂದಳು.

ಅದಕ್ಕೆ ರೂತಳು, “ನಾನು ಇಂದು ಯಾರ ಹತ್ತಿರ ಕೆಲಸ ಮಾಡಿದೆನೋ ಆ ಮನುಷ್ಯನ ಹೆಸರು ಬೋವಜ” ಎಂದು ಹೇಳಿದಳು.

20 ನೊವೊಮಿಯು ತನ್ನ ಸೊಸೆಗೆ, “ಯೆಹೋವನು ಅವನಿಗೆ ಕೃಪೆತೋರಲಿ. ಯೆಹೋವನು ಸತ್ತುಹೋದವರಿಗೂ ಬದುಕಿರುವವರಿಗೂ ದಯೆತೋರಿಸುತ್ತಾನೆ” ಎಂದು ಹೇಳಿದಳು.

ಆಮೇಲೆ ನೊವೊಮಿಯು ತನ್ನ ಸೊಸೆಗೆ, “ಬೋವಜನು ನಮ್ಮ ಸಂಬಂಧಿಗಳಲ್ಲೊಬ್ಬನಲ್ಲದೆ ನಮ್ಮ ಸಮೀಪದ ಬಂಧುವೂ ನಮ್ಮ ಸಂರಕ್ಷಕನೂ ಆಗಿದ್ದಾನೆ” ಎಂದು ತಿಳಿಸಿದಳು.

21 ಅದಕ್ಕೆ ರೂತಳು, “ಸುಗ್ಗಿಕಾಲ ಮುಗಿಯುವವರೆಗೂ ತನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಹೋಗಬೇಕೆಂದು ಬೋವಜನು ನನಗೆ ಹೇಳಿದ್ದಾನೆ” ಎಂದು ಹೇಳಿದಳು.

22 ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ, “ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿ ಹೋಗುವುದೇ ಒಳ್ಳೆಯದು. ನೀನು ಬೇರೆ ಹೊಲಕ್ಕೆ ಹೋದರೆ ನಿನಗೆ ತೊಂದರೆಯಾಗಬಹುದು” ಎಂದಳು. 23 ರೂತಳು ಬೋವಜನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಗೋಧಿಯ ಮತ್ತು ಜವೆಗೋಧಿಯ ಸುಗ್ಗಿಕಾಲ ಮುಗಿಯುವವರೆಗೂ ಹಕ್ಕಲಾಯುತ್ತಿದ್ದಳು. ರೂತಳು ತನ್ನ ಅತ್ತೆಯಾದ ನೊವೊಮಿಯ ಸಂಗಡ ಮನೆಯಲ್ಲಿದ್ದಳು.

ಅಪೊಸ್ತಲರ ಕಾರ್ಯಗಳು 27

ರೋಮಿಗೆ ಪೌಲನ ನೌಕಾಯಾನ

27 ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾಯಿತು. ಪೌಲನಿಗೂ ಇತರ ಕೆಲವು ಕೈದಿಗಳಿಗೂ ಜೂಲಿಯಸ್ ಎಂಬ ಸೇನಾಧಿಕಾರಿಯು ಕಾವಲಾಗಿದ್ದನು. ಜೂಲಿಯಸನು ಚಕ್ರವರ್ತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದನು. ನಾವು ಹಡಗನ್ನು ಹತ್ತಿ ಅಲ್ಲಿಂದ ಹೊರಟೆವು. ಆ ಹಡಗು ಅದ್ರಮಿತ್ತಿ ಪಟ್ಟಣದಿಂದ ಬಂದಿತ್ತು ಮತ್ತು ಏಷ್ಯಾದ ಬೇರೆಬೇರೆ ಸ್ಥಳಗಳಿಗೆ ಹೋಗಲು ಸಿದ್ಧವಾಗಿತ್ತು. ಅರಿಸ್ತಾರ್ಕನು ನಮ್ಮೊಂದಿಗೆ ಬಂದನು. ಅವನು ಮಕೆದೋನಿಯಕ್ಕೆ ಸೇರಿದ ಥೆಸಲೋನಿಕ ಪಟ್ಟಣದವನು.

ಮರುದಿನ ನಾವು ಸಿದೋನ್ ಪಟ್ಟಣಕ್ಕೆ ಬಂದೆವು. ಜೂಲಿಯಸನು ಪೌಲನ ಬಗ್ಗೆ ಕನಿಕರವುಳ್ಳವನಾಗಿದ್ದನು. ಸ್ನೇಹಿತರ ಬಳಿಗೆ ಹೋಗಿ ಅವರನ್ನು ಭೇಟಿಯಾಗಲು ಅವನು ಪೌಲನಿಗೆ ಸ್ವತಂತ್ರವನ್ನು ಕೊಟ್ಟನು. ಸ್ನೇಹಿತರು ಪೌಲನ ಅಗತ್ಯತೆಗಳನ್ನು ಪೂರೈಸಿದನು. ನಾವು ಸಿದೋನ್ ಪಟ್ಟಣದಿಂದ ಹೊರಟೆವು. ಎದುರುಗಾಳಿ ಬೀಸುತ್ತಿದ್ದ ಕಾರಣ ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಸಿಲಿಸಿಯಾಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ನಾವು ದಾಟಿದೆವು. ಬಳಿಕ ನಾವು ಲುಸಿಯ ಪ್ರಾಂತ್ಯದಲ್ಲಿರುವ “ಮುರ” ಎಂಬ ಊರಿಗೆ ಬಂದೆವು. ಅಲೆಕ್ಸಾಂಡ್ರಿಯಾದಿಂದ ಬಂದ ಹಡಗೊಂದು “ಮುರ”ದಲ್ಲಿ ಇದ್ದುದ್ದನ್ನು ಸೇನಾಧಿಕಾರಿಯು ಕಂಡನು. ಈ ಹಡಗು ಇಟಲಿಗೆ ಹೋಗಲಿತ್ತು. ಆದ್ದರಿಂದ ಅವನು ನಮ್ಮನ್ನು ಆ ಹಡಗಿಗೆ ಹತ್ತಿಸಿದನು.

ನಾವು ಅನೇಕ ದಿನಗಳವರೆಗೆ ನಿಧಾನವಾಗಿ ನೌಕಾಯಾನ ಮಾಡಿದೆವು. ಎದುರುಗಾಳಿ ಬೀಸುತ್ತಿದ್ದುದರಿಂದ ನಾವು ಸ್ನೀಡ ಪಟ್ಟಣವನ್ನು ತಲುಪುವುದೇ ಕಷ್ಟವಾಯಿತು. ಆ ಮಾರ್ಗದಲ್ಲಿ ಇನ್ನೂ ಮುಂದೆ ಪ್ರಯಾಣ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಸಾಲ್ಮೊನೆಯ ಸಮೀಪದಲ್ಲಿದ್ದ ಕ್ರೇಟ್ ದ್ವೀಪದ ದಕ್ಷಿಣದ ಭಾಗದಲ್ಲಿ ನೌಕಾಯಾನ ಮಾಡಿದೆವು. ನಾವು ಪ್ರಯಾಸದಿಂದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. ಬಳಿಕ ನಾವು “ಸುರಕ್ಷಿತ ರೇವು” ಎಂಬ ಸ್ಥಳಕ್ಕೆ ಬಂದೆವು. ಲಸಾಯ ಪಟ್ಟಣವು ಅದರ ಸಮೀಪದಲ್ಲಿತ್ತು.

ಆದರೆ ನಾವು ಬಹಳ ಸಮಯವನ್ನು ಕಳೆದುಕೊಂಡಿದ್ದೆವು. ಈಗ ನೌಕಾಯಾನ ಮಾಡುವುದು ಅಪಾಯಕರವಾಗಿತ್ತು. ಯಾಕೆಂದರೆ ಯೆಹೂದ್ಯರ ಉಪವಾಸ ದಿನ[a] ಆಗಲೇ ಕಳೆದಿತ್ತು. 10 ಆದ್ದರಿಂದ ಪೌಲನು ಅವರಿಗೆ, “ಜನರೇ, ಈ ಪ್ರಯಾಣದಲ್ಲಿ ನಮಗೆ ಬಹಳ ತೊಂದರೆಯಿದೆ ಎಂದು ನನಗೆ ತೋರುತ್ತದೆ. ಹಡಗು ಮತ್ತು ಹಡಗಿನಲ್ಲಿರುವ ವಸ್ತುಗಳು ನಾಶವಾಗುತ್ತವೆ. ನಮ್ಮ ಪ್ರಾಣಗಳು ಸಹ ನಷ್ಟವಾಗಬಹುದು!” ಎಂದು ಎಚ್ಚರಿಸಿದನು. 11 ಆದರೆ ನೌಕೆಯ ನಾಯಕನು ಮತ್ತು ನೌಕೆಯ ಯಜಮಾನನು ಪೌಲನ ಮಾತನ್ನು ಒಪ್ಪಿಕೊಳ್ಳಲಿಲ್ಲ. ಆದುದರಿಂದ ಸೇನಾಧಿಕಾರಿಯು ಪೌಲನ ಮಾತಿಗೆ ಗಮನ ಕೊಡದೆ, ನೌಕೆಯ ನಾಯಕನು ಮತ್ತು ಯಜಮಾನನು ಹೇಳಿದ ಮಾತುಗಳನ್ನು ನಂಬಿದನು. 12 ಆ ರೇವು (ಸುರಕ್ಷಿತ ರೇವು) ಚಳಿಗಾಲದಲ್ಲಿ ಹಡಗು ನಿಲ್ಲುವುದಕ್ಕೆ ಒಳ್ಳೆಯ ಸ್ಥಳವಾಗಿರಲಿಲ್ಲ. ಆದ್ದರಿಂದ ಹಡಗು ಅಲ್ಲಿಂದ ಹೊರಡಲೇಬೇಕೆಂದು ಹೆಚ್ಚುಮಂದಿ ನಿರ್ಧರಿಸಿದರು. ನಾವು ಫೆನಿಕ್ಸ್‌ಗೆ ತಲುಪಬಹುದೆಂದು ಅವರ ನಿರೀಕ್ಷೆಯಾಗಿತ್ತು. ಚಳಿಗಾಲದಲ್ಲಿ ಹಡಗು ಅಲ್ಲಿ ತಂಗಬಹುದಾಗಿತ್ತು. ಫೆನಿಕ್ಸ್ ಕ್ರೇಟ್ ದ್ವೀಪದ ಒಂದು ಪಟ್ಟಣ. ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದ್ದ ಬಂದರನ್ನು ಅದು ಹೊಂದಿತ್ತು.

ಬಿರುಗಾಳಿ

13 ಬಳಿಕ ಒಳ್ಳೆಯ ಗಾಳಿಯು ದಕ್ಷಿಣದ ಕಡೆಯಿಂದ ಬೀಸತೊಡಗಿತು. ಹಡಗಿನಲ್ಲಿದ್ದ ಜನರು, “ನಮಗೆ ಬೇಕಾಗಿದ್ದು ಈ ಗಾಳಿಯೇ, ಈಗ ಅದು ನಮಗೆ ದೊರಕಿತು!” ಎಂದು ಭಾವಿಸಿಕೊಂಡರು. ಆದ್ದರಿಂದ ಅವರು ಹಡಗಿನ ಲಂಗರನ್ನು[b] ಮೇಲಕ್ಕೆ ಎಳೆದರು. ನಾವು ಕ್ರೇಟ್ ದ್ವೀಪದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. 14 ಆದರೆ “ಈಶಾನ್ಯ ಮಾರುತ”[c] ಎಂಬ ಬಿರುಗಾಳಿಯು ದ್ವೀಪದಲ್ಲಿ ಬೀಸತೊಡಗಿ 15 ಹಡಗನ್ನು ಬಡಿದುಕೊಂಡು ಹೋಯಿತು. ಹಡಗು ಅದಕ್ಕೆ ಎದುರಾಗಿ ಚಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಗಾಳಿಯು ಬೀಸುವ ಕಡೆಗೆ ಹೋಗತೊಡಗಿದೆವು.

16 ನಾವು “ಕಾವ್ದ” ಎಂಬ ಚಿಕ್ಕ ದ್ವೀಪದ ಮರೆಯಲ್ಲಿ ಹಾದುಹೋದೆವು. ಆಗ ನಾವು ಹಡಗಿನಲ್ಲಿದ್ದ ಚಿಕ್ಕ ದೋಣಿಯನ್ನು ಒಳಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೂ ಆ ಕೆಲಸ ಬಹಳ ಪ್ರಯಾಸಕರವಾಗಿತ್ತು. 17 ಬಳಿಕ ಹಡಗು ಒಡೆದುಹೋಗದಂತೆ ಹಡಗಿನ ಸುತ್ತಲೂ ಹಗ್ಗಗಳನ್ನು ಬಿಗಿದರು. ಅನಂತರ “ಸರ್ತಿಸ್” ಎಂಬ ಕಳ್ಳುಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೊ ಎಂದು ಅವರಿಗೆ ಭಯವಾಯಿತು. ಆದ್ದರಿಂದ ಅವರು ಹಾಯಿಯನ್ನು[d] ಇಳಿಸಿ ಹಡಗನ್ನು ಬಡಿದುಕೊಂಡು ಹೋಗಲು ಗಾಳಿಗೆ ಅವಕಾಶ ಮಾಡಿಕೊಟ್ಟರು.

18 ಮರುದಿನ, ಬಿರುಗಾಳಿ ರಭಸವಾಗಿ ಬೀಸುತ್ತಿದ್ದುದರಿಂದ ಜನರು ಹಡಗಿನಲ್ಲಿದ್ದ ಕೆಲವು ಸಾಮಾನುಗಳನ್ನು ಎಸೆದುಬಿಟ್ಟರು. 19 ಒಂದು ದಿನವಾದ ನಂತರ ಹಡಗಿನ ಉಪಕರಣಗಳನ್ನು ತಮ್ಮ ಕೈಯಾರೆ ಎಸೆದು ಬಿಟ್ಟರು. 20 ಅನೇಕ ದಿನಗಳವರೆಗೆ ನಾವು ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಬಿರುಗಾಳಿಯು ಭೀಕರವಾಗಿತ್ತು. ನಾವು ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆ ಕಳೆದುಹೋಯಿತು. ನಾವು ಸಾಯುತ್ತೇವೆ ಎಂದು ಭಾವಿಸಿಕೊಂಡೆವು.

21 ಆ ಜನರು ಬಹಳ ದಿನಗಳವರೆಗೆ ಊಟಮಾಡಲಿಲ್ಲ. ಆಗ ಒಂದು ದಿನ ಪೌಲನು ಎದ್ದುನಿಂತುಕೊಂಡು ಅವರಿಗೆ, “ಜನರೇ, ಕ್ರೇಟ್ ದ್ವೀಪದಿಂದ ಹೊರಡಬೇಡಿರಿ ಎಂದು ನಾನು ನಿಮಗೆ ಹೇಳಿದೆ. ನೀವು ನನ್ನ ಮಾತನ್ನು ಕೇಳಬೇಕಿತ್ತು. ಆಗ ನಿಮಗೆ ಇಷ್ಟು ಕಷ್ಟವಾಗಲಿ ನಷ್ಟವಾಗಲಿ ಆಗುತ್ತಿರಲಿಲ್ಲ. 22 ಈಗಲಾದರೋ ನೀವು ಸಂತೋಷದಿಂದ ಇರಬೇಕೆಂದು ನಾನು ನಿಮಗೆ ಹೇಳುತ್ತಿದ್ದೇನೆ. ನಿಮ್ಮಲ್ಲಿ ಒಬ್ಬರೂ ಸಾಯುವುದಿಲ್ಲ! ಆದರೆ ಹಡಗು ನಾಶವಾಗುವುದು. 23 ಕಳೆದ ರಾತ್ರಿ ದೇವರ ಬಳಿಯಿಂದ ದೂತನೊಬ್ಬನು ನನ್ನ ಬಳಿಗೆ ಬಂದಿದ್ದನು. ಆ ದೇವರನ್ನೇ ನಾನು ಆರಾಧಿಸುವುದು. ನಾನು ಆತನವನು. 24 ದೇವರ ದೂತನು, ‘ಪೌಲನೇ, ಭಯಪಡಬೇಡ! ನೀನು ಸೀಸರನ ಮುಂದೆ ನಿಂತುಕೊಳ್ಳಬೇಕು. ನಿನ್ನೊಂದಿಗೆ ನೌಕಾಯಾನ ಮಾಡತ್ತಿರುವ ಎಲ್ಲಾ ಜನರ ಪ್ರಾಣಗಳನ್ನು ಉಳಿಸುವುದಾಗಿ ದೇವರು ನಿನಗೆ ವಾಗ್ದಾನವನ್ನು ಮಾಡಿದ್ದಾನೆ’ ಎಂದು ಹೇಳಿದನು. 25 ಆದ್ದರಿಂದ ಜನರೇ, ಸಂತೋಷದಿಂದಿರಿ! ನಾನು ದೇವರಲ್ಲಿ ಭರವಸೆಯಿಟ್ಟಿದ್ದೇನೆ. ಆತನ ದೂತನು ಹೇಳಿದಂತೆ ಪ್ರತಿಯೊಂದೂ ನೆರವೇರುವುದು. 26 ಆದರೆ ನಾವು ಒಂದು ದ್ವೀಪದ ದಡವನ್ನು ತಲುಪಬೇಕಾಗಿದೆ” ಎಂದು ಹೇಳಿದನು.

27 ಹದಿನಾಲ್ಕನೆಯ ರಾತ್ರಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡುತ್ತಾ ಪ್ರಯಾಣವನ್ನು ಮುಂದುವರಿಸಿದೆವು. ನಾವು ಭೂಮಿಗೆ ಸಮೀಪವಾಗಿದ್ದೇವೆಂದು ನಾವಿಕರು ಆಲೋಚಿಸಿಕೊಂಡರು. 28 ಅವರು ಅಳತೆ ಗುಂಡನ್ನು ಹಗ್ಗದ ತುದಿಗೆ ಕಟ್ಟಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ನೀರು ನೂರಿಪ್ಪತ್ತು ಅಡಿ ಆಳವಾಗಿತ್ತು. ಅವರು ಇನ್ನೂ ಸ್ವಲ್ಪದೂರ ಹೋಗಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ಅಲ್ಲಿ ನೀರಿನ ಆಳ ತೊಂಭತ್ತು ಅಡಿಯಿತ್ತು. 29 ಹಡಗು ಬಂಡೆಗೆ ಅಪ್ಪಳಿಸಬಹುದೆಂದು ನಾವಿಕರು ಭಯಪಟ್ಟರು. ಆದ್ದರಿಂದ ಅವರು ನಾಲ್ಕು ಲಂಗರುಗಳನ್ನು ನೀರಿನೊಳಗೆ ಇಳಿಯಬಿಟ್ಟರು. ಬಳಿಕ ಅವರು ಬೆಳಗಾಗಲೆಂದು ಪ್ರಾರ್ಥಿಸಿದರು. 30 ನಾವಿಕರಲ್ಲಿ ಕೆಲವರು ಹಡಗನ್ನು ಬಿಟ್ಟುಹೋಗಬೇಕೆಂದಿದ್ದರು. ಅವರು ದೋಣಿಯನ್ನು ನೀರಿಗೆ ಇಳಿಸಿ, ಹಡಗಿನ ಮುಂಭಾಗದಲ್ಲಿ ಇನ್ನೂ ಕೆಲವು ಲಂಗರುಗಳನ್ನು ಇಳಿಸುವವರಂತೆ ನಟಿಸಿದರು. 31 ಆದರೆ ಪೌಲನು ಸೇನಾಧಿಕಾರಿಗೆ ಮತ್ತು ಇತರ ಸೈನಿಕರಿಗೆ, “ಈ ನಾವಿಕರು ಹಡಗಿನಲ್ಲಿ ಇರದಿದ್ದರೆ ನಿಮ್ಮ ಪ್ರಾಣಗಳು ಉಳಿಯಲು ಸಾಧ್ಯವಿಲ್ಲ” ಎಂದು ಹೇಳಿದನು. 32 ಆದ್ದರಿಂದ ಸೈನಿಕರು ಹಗ್ಗಗಳನ್ನು ಕತ್ತರಿಸಿ ದೋಣಿಯನ್ನು ನೀರುಪಾಲು ಮಾಡಿದರು.

33 ಇನ್ನೂ ಬೆಳಕಾಗುತ್ತಿರುವಾಗಲೇ ಏನಾದರೂ ತಿನ್ನುವಂತೆ ಪೌಲನು ಅವರನ್ನು ಒತ್ತಾಯಿಸುತ್ತಾ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಊಟವನ್ನೇ ಮಾಡಿಲ್ಲ. 34 ಈಗ ನೀವು ಸ್ವಲ್ಪವಾದರೂ ತಿನ್ನುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಜೀವಂತವಾಗಿ ಉಳಿಯಬೇಕಾದರೆ ನಿಮಗೆ ಊಟ ಅವಶ್ಯಕವಾಗಿದೆ. ನಿಮ್ಮಲ್ಲಿರುವ ಯಾರೂ ನಿಮ್ಮ ತಲೆಕೂದಲುಗಳಲ್ಲಿ ಒಂದನ್ನಾದರೂ ಕಳೆದುಕೊಳ್ಳುವುದಿಲ್ಲ” ಎಂದು ಹೇಳಿದನು. 35 ಹೀಗೆ ಹೇಳಿದ ಬಳಿಕ, ಪೌಲನು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಅವನು ಒಂದು ತುಂಡನ್ನು ಮುರಿದು ತಿನ್ನತೊಡಗಿದನು. 36-37 ಆಗ ಜನರೆಲ್ಲರೂ ಪ್ರೋತ್ಸಾಹಗೊಂಡು ತಿನ್ನತೊಡಗಿದರು. ಆ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದರು. 38 ನಾವು ತೃಪ್ತಿಯಾಗುವಷ್ಟು ತಿಂದೆವು. ಬಳಿಕ ದವಸವನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದೆವು.

ನೌಕೆಯ ನಾಶ

39 ಬೆಳಗಾದಾಗ ನಾವಿಕರು ಭೂಮಿಯನ್ನು ಕಂಡರು. ಆದರೆ ಅದು ಯಾವ ಭೂಮಿಯೆಂದು ಗೊತ್ತಿರಲಿಲ್ಲ. ಅವರು ಕಂಡದ್ದು ಉಸುಬಿನ ದಡವುಳ್ಳ ಒಂದು ಕೊಲ್ಲಿ. ಸಾಧ್ಯವಾದರೆ ಹಡಗನ್ನು ಆ ಕೊಲ್ಲಿಗೆ ನಡೆಸಬೇಕೆಂದು ನಾವಿಕರು ಬಯಸಿದರು. 40 ಆದ್ದರಿಂದ ಅವರು ಚುಕ್ಕಾಣಿಗಳನ್ನು[e] ಬಿಗಿಯಾಗಿ ಹಿಡಿದುಕೊಂಡಿದ್ದ ಹಗ್ಗಗಳನ್ನು ಕತ್ತರಿಸಿಹಾಕಿದರು. ಬಳಿಕ ಮುಂಭಾಗದ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ನಡೆಸತೊಡಗಿದರು. 41 ಆದರೆ ಹಡಗು ಉಸುಬಿನ ದಿಬ್ಬಕ್ಕೆ ಅಪ್ಪಳಿಸಿತು. ಹಡಗಿನ ಮುಂಭಾಗವು ಅದರಲ್ಲಿ ಸಿಕ್ಕಿಕೊಂಡಿತು. ಹಡಗು ಚಲಿಸಲಾಗಲಿಲ್ಲ. ಬಳಿಕ ದೊಡ್ಡ ಅಲೆಗಳು ಹಡಗಿನ ಹಿಂಭಾಗಕ್ಕೆ ಬಡಿದು ಚೂರುಚೂರು ಮಾಡಲಾರಂಭಿಸಿದವು.

42 ಕೈದಿಗಳಲ್ಲಿ ಯಾರೂ ಈಜಿಕೊಂಡು ಹೋಗಿ ತಪ್ಪಿಸಿಕೊಳ್ಳಬಾರದೆಂದು ಸೈನಿಕರು ಕೈದಿಗಳನ್ನು ಕೊಲ್ಲಲು ನಿರ್ಧರಿಸಿದರು. 43 ಆದರೆ ಸೇನಾಧಿಕಾರಿಯಾದ ಜೂಲಿಯಸನು ಪೌಲನನ್ನು ಉಳಿಸಲಪೇಕ್ಷಿಸಿ ಕೈದಿಗಳನ್ನು ಕೊಲ್ಲಲು ಸೈನಿಕರಿಗೆ ಅಪ್ಪಣೆ ಕೊಡಲಿಲ್ಲ. ಈಜು ಬಲ್ಲವರೆಲ್ಲರು ನೀರಿಗೆ ಧುಮುಕಿ ಈಜಿಕೊಂಡು ದಡಕ್ಕೆ ಹೋಗಬೇಕೆಂದು ಜೂಲಿಯಸನು ಹೇಳಿದನು. 44 ಉಳಿದ ಜನರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ಹೋಗಬೇಕೆಂದು ತಿಳಿಸಿದನು. ಹೀಗೆ ಜನರೆಲ್ಲರೂ ದಡವನ್ನು ಸೇರಿದರು. ಅವರಲ್ಲಿ ಒಬ್ಬರೂ ಸಾಯಲಿಲ್ಲ.

ಯೆರೆಮೀಯ 37

ಯೆರೆಮೀಯನನ್ನು ಕಾರಾಗೃಹದಲ್ಲಿಡಲಾಯಿತು

37 ನೆಬೂಕದ್ನೆಚ್ಚರನು ಬಾಬಿಲೋನಿನ ರಾಜನಾಗಿದ್ದನು. ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನಾದ ಕೊನ್ಯನ ಸ್ಥಾನದಲ್ಲಿ ಚಿದ್ಕೀಯನನ್ನು ಯೆಹೂದದ ರಾಜನನ್ನಾಗಿ ನೇಮಿಸಿದ್ದನು. ಚಿದ್ಕೀಯನು ರಾಜನಾದ ಯೋಷೀಯನ ಮಗನಾಗಿದ್ದನು. ಆದರೆ ಯೆಹೋವನು ಯೆರೆಮೀಯನಿಗೆ ಪ್ರವಾದನೆ ಮಾಡಲು ಹೇಳಿದ ಸಂದೇಶಗಳ ಕಡೆಗೆ ಗಮನ ಕೊಡಲಿಲ್ಲ. ಚಿದ್ಕೀಯನ ಸೇವಕರು ಮತ್ತು ಯೆಹೂದದ ಜನರು ಯೆಹೋವನ ಸಂದೇಶಗಳಿಗೆ ಯಾವ ಗಮನವನ್ನೂ ಕೊಡಲಿಲ್ಲ.

ರಾಜನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನು ಮತ್ತು ಮಾಸೇಯನ ಮಗನಾದ ಯಾಜಕ ಚೆಫನನನ್ನು ಒಂದು ಸಂದೇಶದೊಂದಿಗೆ ಯೆರೆಮೀಯನಲ್ಲಿಗೆ ಕಳುಹಿಸಿದನು. ಯೆರೆಮೀಯನಿಗೆ ಅವರು ತಂದ ಸಂದೇಶ ಹೀಗಿತ್ತು: “ಯೆರೆಮೀಯನೇ, ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು.”

(ಆ ಕಾಲದಲ್ಲಿ ಯೆರೆಮೀಯನನ್ನು ಇನ್ನೂ ಕಾರಾಗೃಹದಲ್ಲಿಟ್ಟಿರಲಿಲ್ಲ. ಅವನು ತನ್ನ ಮನಬಂದ ಕಡೆ ಹೋಗಲು ಸ್ವತಂತ್ರನಾಗಿದ್ದನು. ಅದಲ್ಲದೆ ಆಗ ಫರೋಹನ ಸೈನ್ಯವು ಈಜಿಪ್ಟಿನಿಂದ ಯೆಹೂದದ ಕಡೆಗೆ ಹೊರಟಿತ್ತು. ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಬಾಬಿಲೋನ್ ಸೈನ್ಯವು ಜೆರುಸಲೇಮ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಆಗ ಈಜಿಪ್ಟಿನ ಸೈನ್ಯವು ತಮ್ಮ ಕಡೆ ಬರುತ್ತಿದೆ ಎಂಬ ಸಮಾಚಾರವು ಬಂದಿತು. ಅದನ್ನು ಕೇಳಿ ಬಾಬಿಲೋನಿನ ಸೈನ್ಯವು ಈಜಿಪ್ಟಿನ ಸೈನ್ಯವನ್ನೆದುರಿಸಲು ಜೆರುಸಲೇಮನ್ನು ಬಿಟ್ಟುಹೋಗಿತ್ತು.)

ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು: “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಯೆಹೂಕಲನೇ ಮತ್ತು ಚೆಫನ್ಯನೇ, ಯೆಹೂದದ ರಾಜನಾದ ಚಿದ್ಕೀಯನು ನನಗೆ ಪ್ರಶ್ನೆಗಳನ್ನು ಕೇಳುವದಕ್ಕಾಗಿ ನಿಮ್ಮನ್ನು ನನ್ನಲ್ಲಿಗೆ ಕಳಿಸಿದ್ದಾನೆಂಬುದು ನನಗೆ ಗೊತ್ತು. ರಾಜನಾದ ಚಿದ್ಕೀಯನಿಗೆ ಹೀಗೆ ಹೇಳಿರಿ. ಬಾಬಿಲೋನಿನ ಸೈನ್ಯದ ವಿರುದ್ಧ ನಿಮಗೆ ಸಹಾಯ ಮಾಡಲು ಇಲ್ಲಿಗೆ ಬರುವದಕ್ಕಾಗಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಆದರೆ ಫರೋಹನ ಸೈನ್ಯವು ಈಜಿಪ್ಟಿಗೆ ಹಿಂದಿರುಗುವುದು. ಬಳಿಕ ಬಾಬಿಲೋನಿನ ಸೈನ್ಯವು ಇಲ್ಲಿಗೆ ಬರುವುದು. ಅವರು ಜೆರುಸಲೇಮಿನ ಮೇಲೆ ಧಾಳಿ ಮಾಡುವರು. ಆಗ ಬಾಬಿಲೋನಿನ ಆ ಸೈನ್ಯವು ಜೆರುಸಲೇಮನ್ನು ವಶಪಡಿಸಿಕೊಂಡು ಅದನ್ನು ಸುಟ್ಟುಹಾಕುವುದು.’ ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮ್ ನಿವಾಸಿಗಳೇ “ಬಾಬಿಲೋನ್ ಸೈನಿಕರು ಖಂಡಿತವಾಗಿಯೂ ನಮ್ಮನ್ನು ಬಿಟ್ಟುಹೋಗುವರು” ಎಂದು ನಿಮಗೆ ನೀವೇ ಹೇಳಿಕೊಂಡು ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಬಿಟ್ಟುಹೋಗುವದಿಲ್ಲ. 10 ಜೆರುಸಲೇಮಿನ ಜನರೇ, ನಿಮ್ಮ ಮೇಲೆ ಧಾಳಿ ಮಾಡುವ ಬಾಬಿಲೋನಿನ ಎಲ್ಲಾ ಸೈನಿಕರನ್ನು ನೀವು ಸೋಲಿಸಿದರೂ ಅವರ ಗುಡಾರದಲ್ಲಿ ಕೆಲವು ಜನ ಗಾಯಗೊಂಡವರು ಉಳಿದಿರುತ್ತಾರೆ. ಆ ಗಾಯಾಳುಗಳೇ ತಮ್ಮ ಗುಡಾರದಿಂದ ಹೊರಬಂದು ಜೆರುಸಲೇಮನ್ನು ಸುಟ್ಟುಹಾಕುವರು.’”

11 ಈಜಿಪ್ಟ್ ದೇಶದ ಫರೋಹನ ಸೈನ್ಯದೊಂದಿಗೆ ಕಾದಾಡಲು ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋದ ಮೇಲೆ 12 ಯೆರೆಮೀಯನು ಜೆರುಸಲೇಮಿನಿಂದ ಬೆನ್ಯಾಮೀನ್ ಪ್ರದೇಶಕ್ಕೆ ಹೋಗ ಬಯಸಿದನು. ತನ್ನ ಮನೆತನಕ್ಕೆ ಸೇರಿದ ಆಸ್ತಿಯ ವಿಭಜನೆಗಾಗಿ ಅವನು ಹೋಗುತ್ತಿದ್ದನು. 13 ಆದರೆ ಯೆರೆಮೀಯನು ಜೆರುಸಲೇಮಿನ ಬೆನ್ಯಾಮೀನ್ ಹೆಬ್ಬಾಗಿಲಿನ ಹತ್ತಿರ ಹೋದಾಗ ಪಹರೆದಾರರ ಮುಖ್ಯಸ್ಥನು ಅವನನ್ನು ಹಿಡಿದುಕೊಂಡನು. ಆ ಮುಖ್ಯಸ್ಥನ ಹೆಸರು ಇರೀಯ. ಇರೀಯನು ಶೆಲೆಮ್ಯನ ಮಗನು; ಶೆಲೆಮ್ಯನು ಹನನ್ಯನ ಮಗನು. ಮುಖ್ಯಸ್ಥನಾದ ಇರೀಯನು ಯೆರೆಮೀಯನನ್ನು ಹಿಡಿದುಕೊಂಡು, “ಯೆರೆಮೀಯನೇ, ನೀನು ಬಾಬಿಲೋನಿನ ಕಡೆ ಸೇರಿಕೊಳ್ಳುವದಕ್ಕಾಗಿ ನಮ್ಮನ್ನು ಬಿಟ್ಟುಹೋಗುತ್ತಿರುವೆ” ಎಂದನು.

14 “ಅದು ನಿಜವಲ್ಲ, ಬಾಬಿಲೋನಿನವರ ಕಡೆ ಸೇರಿಕೊಳ್ಳಲು ನಾನು ಬಿಟ್ಟುಹೋಗುತ್ತಿಲ್ಲ” ಎಂದು ಯೆರೆಮೀಯನು ಇರೀಯನಿಗೆ ಹೇಳಿದನು. ಆದರೆ ಇರೀಯನು ಯೆರೆಮೀಯನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇರೀಯನು ಯೆರೆಮೀಯನನ್ನು ಬಂಧಿಸಿ ಜೆರುಸಲೇಮಿನ ರಾಜಾಧಿಕಾರಿಗಳ ಬಳಿಗೆ ಕರೆದೊಯ್ದನು. 15 ಆ ಅಧಿಕಾರಿಗಳು ಯೆರೆಮೀಯನ ಮೇಲೆ ತುಂಬಾ ಕೋಪಗೊಂಡರು. ಯೆರೆಮೀಯನನ್ನು ಹೊಡೆಯಬೇಕೆಂದು ಅವರು ಆಜ್ಞೆಯಿತ್ತರು. ಆಮೇಲೆ ಅವರು ಯೆರೆಮೀಯನನ್ನು ಸೆರೆಮನೆಯಲ್ಲಿಟ್ಟರು. ಆ ಸೆರೆಮನೆಯು ಯೆಹೋನಾಥಾನನೆಂಬುವನ ಮನೆಯಲ್ಲಿತ್ತು. ಯೆಹೋನಾಥಾನನು ಯೆಹೂದದ ರಾಜನ ಲಿಫಿಗಾರನಾಗಿದ್ದನು. ಯೆಹೋನಾಥಾನನ ಮನೆಯನ್ನು ಸೆರೆಮನೆಯನ್ನಾಗಿ ಮಾಡಲಾಗಿತ್ತು. 16 ಅವರು ಯೆರೆಮೀಯನನ್ನು ಯೆಹೋನಾಥಾನನ ನೆಲಮನೆಯ ಒಂದು ಕೋಣೆಯಲ್ಲಿಟ್ಟರು. ಆ ಕೋಣೆಯು ನೆಲಮನೆಯ ಕೆಳಭಾಗದಲ್ಲಿತ್ತು. ಯೆರೆಮೀಯನು ಅಲ್ಲಿ ಬಹಳ ದಿವಸಗಳವರೆಗೆ ಇದ್ದನು.

17 ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ತನ್ನ ಅರಮನೆಗೆ ಕರೆತರಿಸಿದನು. ಚಿದ್ಕೀಯನು ಯೆರೆಮೀಯನೊಂದಿಗೆ ರಹಸ್ಯವಾಗಿ ಮಾತನಾಡಿ, “ಯೆಹೋವನಿಂದ ಏನಾದರೂ ಸಂದೇಶವಿದೆಯೊ?” ಎಂದು ಕೇಳಿದನು.

“ಹೌದು, ಯೆಹೋವನಿಂದ ಒಂದು ಸಂದೇಶವಿದೆ. ಚಿದ್ಕೀಯನೇ, ನಿನ್ನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು” ಎಂದು ಯೆರೆಮೀಯನು ಉತ್ತರಿಸಿದನು. 18 ಆಮೇಲೆ ಯೆರೆಮೀಯನು ರಾಜನಾದ ಚಿದ್ಕೀಯನನ್ನು ಹೀಗೆ ಕೇಳಿದನು, “ನಾನು ಏನು ತಪ್ಪು ಮಾಡಿದ್ದೇನೆ? ನಾನು ನಿನ್ನ ವಿರುದ್ಧ ಅಥವಾ ನಿನ್ನ ಅಧಿಕಾರಿಗಳ ವಿರುದ್ಧ ಅಥವಾ ಜೆರುಸಲೇಮಿನ ಜನರ ವಿರುದ್ಧ ಯಾವ ಅಪರಾಧವನ್ನು ಮಾಡಿದ್ದೇನೆ? ನೀನು ನನ್ನನ್ನು ಸೆರೆಮನೆಯಲ್ಲಿ ಏಕೆ ಹಾಕಿರುವೆ? 19 ರಾಜನಾದ ಚಿದ್ಕೀಯನೇ, ನಿನ್ನ ಪ್ರವಾದಿಗಳು ಈಗ ಎಲ್ಲಿದ್ದಾರೆ? ಆ ಪ್ರವಾದಿಗಳು ನಿನಗೆ ಸುಳ್ಳುಪ್ರವಾದನೆಯನ್ನು ಮಾಡಿದರು. ‘ಬಾಬಿಲೋನಿನ ರಾಜನು ನಿನ್ನ ಮೇಲಾಗಲಿ ಅಥವಾ ಈ ಯೆಹೂದ ಪ್ರದೇಶದ ಮೇಲಾಗಲಿ ಧಾಳಿ ಮಾಡುವದಿಲ್ಲ’ ಎಂದು ಅವರು ಹೇಳಿದ್ದರು. 20 ಆದರೆ ಯೆಹೂದದ ರಾಜನಾದ ಚಿದ್ಕೀಯನೇ, ದಯವಿಟ್ಟು ನಾನು ಹೇಳುವದನ್ನು ಕೇಳು. ನನ್ನ ಕೋರಿಕೆಯನ್ನು ದಯವಿಟ್ಟು ಕೇಳು. ನನ್ನನ್ನು ಲಿಪಿಕಾರನಾದ ಯೆಹೋನಾಥಾನನ ಮನೆಗೆ ತಿರುಗಿ ಕಳುಹಿಸಬೇಡ. ಇದೇ ನನ್ನ ಬೇಡಿಕೆ. ನೀನು ನನ್ನನ್ನು ಮತ್ತೆ ಅಲ್ಲಿಗೆ ಕಳುಹಿಸಿದರೆ ನಾನು ಅಲ್ಲಿ ಸತ್ತುಹೋಗುತ್ತೇನೆ” ಎಂದನು.

21 ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಡಬೇಕೆಂದು ಮತ್ತು ಅವನಿಗೆ ಪೇಟೆಯಿಂದ ರೊಟ್ಟಿಯನ್ನು ತಂದುಕೊಡಬೇಕೆಂದು ಆಜ್ಞೆ ಮಾಡಿದನು. ನಗರದಲ್ಲಿ ರೊಟ್ಟಿ ಇರುವವರೆಗೆ ಯೆರೆಮೀಯನಿಗೆ ರೊಟ್ಟಿಯನ್ನು ಕೊಡಲಾಯಿತು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂಧಿಯಾಗಿದ್ದನು.

ಕೀರ್ತನೆಗಳು 10

10 ಯೆಹೋವನೇ, ನೀನು ಬಹುದೂರವಾಗಿರುವುದೇಕೆ?
    ಕಷ್ಟಕಾಲದಲ್ಲಿ ನೀನು ಮರೆಯಾಗಿರುವುದೇಕೆ?
ದುಷ್ಟರು ಗರ್ವಿಷ್ಠರಾಗಿ ಬಡವರನ್ನು ಹಿಂದಟ್ಟಿ ಹೋಗುತ್ತಿದ್ದರೆ,
    ಆ ದುಷ್ಟರ ಕುಯುಕ್ತಿಯಲ್ಲಿ ಅವರು ಸಿಕ್ಕಿಬೀಳುವರು.
ಕೆಡುಕರು ತಮ್ಮ ಇಷ್ಟವಾದ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳುವರು.
    ದುರಾಶೆಯುಳ್ಳ ಅವರು ದೇವರನ್ನು ಶಪಿಸುತ್ತಾ ಆತನ ಮೇಲೆ ತಮಗಿರುವ ದ್ವೇಷವನ್ನು ತೋರ್ಪಡಿಸಿಕೊಳ್ಳುವರು.
ಆ ದುಷ್ಟರು ಗರ್ವದಿಂದ ದೇವರನ್ನು ತೊರೆದುಬಿಡುವರು;
    ದುಷ್ಟಾಲೋಚನೆಗಳನ್ನು ಮಾಡುತ್ತಾ ದೇವರಿಲ್ಲದಂತೆ ವರ್ತಿಸುವರು.
ಅವರು ಕುಯುಕ್ತಿಗಳನ್ನೇ ಮಾಡುತ್ತಾ ದೇವರ ಕಟ್ಟಳೆಗಳನ್ನೂ ಬುದ್ಧಿಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.[a]
    ದೇವರ ವೈರಿಗಳು ಆತನ ಉಪದೇಶಗಳನ್ನು ಕಡೆಗಣಿಸುವರು.
ಅವರು, “ನಮ್ಮನ್ನು ಯಾವುದೂ ಕದಲಿಸದು;
    ನಮಗೆ ಕೇಡಾಗದಿರುವುದರಿಂದ ಸಂತೋಷವಾಗಿರೋಣ” ಎಂದುಕೊಂಡಿದ್ದಾರೆ.
ಅವರು ಯಾವಾಗಲೂ ಶಪಿಸುತ್ತಾರೆ;
    ಕೆಟ್ಟ ಮಾತುಗಳನ್ನು ಆಡುತ್ತಾರೆ, ಕುಯುಕ್ತಿಗಳನ್ನು ಮಾಡುತ್ತಾರೆ.
ಅವರು ನಿರಪರಾಧಿಗಳನ್ನು ಹಿಡಿದು ಕೊಲ್ಲಲು
    ಗುಪ್ತವಾದ ಸ್ಥಳಗಳಲ್ಲಿ ಅಡಗಿಕೊಂಡಿರುವರು; ಅಸಹಾಯಕರಿಗಾಗಿ ಎದುರುನೋಡುವರು.
ಅವರು ಬೇಟೆಯಾಡುವ ಸಿಂಹಗಳಂತಿದ್ದಾರೆ.
    ಅವರು ನಿಸ್ಸಹಾಯಕರ ಮೇಲೆ ಆಕ್ರಮಣ ಮಾಡಿ ತಮ್ಮ ಬಲೆಗಳಲ್ಲಿ ಎಳೆದುಕೊಂಡು ಹೋಗುವರು.
10 ಆ ದುಷ್ಟರು ಕುಗ್ಗಿಹೋದವರನ್ನು
    ಮತ್ತೆಮತ್ತೆ ಜಜ್ಜಿಹಾಕುವರು.
11 ಆದ್ದರಿಂದ ಆ ನಿಸ್ಸಹಾಯಕರು, “ದೇವರು ನಮ್ಮನ್ನು ಮರೆತುಬಿಟ್ಟಿದ್ದ್ದಾನೆ!
    ನಮಗೆ ಶಾಶ್ವತವಾಗಿ ವಿಮುಖನಾಗಿದ್ದಾನೆ!
    ನಮಗೆ ಸಂಭವಿಸುತ್ತಿರುವುದನ್ನು ಆತನು ನೋಡುವುದಿಲ್ಲ!” ಎಂದು ಯೋಚಿಸತೊಡಗುವರು.

12 ಯೆಹೋವನೇ, ಎದ್ದೇಳು, ಕಾರ್ಯನಿರತನಾಗು!
    ದೇವರೇ, ಆ ದುಷ್ಟರನ್ನು ದಂಡಿಸು!
    ನಿಸ್ಸಹಾಯಕರನ್ನು ಮರೆತುಬಿಡಬೇಡ!

13 ದುಷ್ಟರು ದೇವರಿಗೆ ವಿರೋಧವಾಗಿ ಎದ್ದಿರುವುದೇಕೆ?
    ಆತನು ತಮ್ಮನ್ನು ದಂಡಿಸುವುದಿಲ್ಲವೆಂದು ಅವರು ಆಲೋಚಿಸಿಕೊಂಡಿರುವುದೇಕೆ?
14 ಯೆಹೋವನೇ, ಆ ದುಷ್ಟರ ಕ್ರೂರವಾದ ಕಾರ್ಯಗಳನ್ನೂ ದುಷ್ಕೃತ್ಯಗಳನ್ನೂ ನೀನು ಖಂಡಿತವಾಗಿ ನೋಡುವೆ.
    ಅವುಗಳನ್ನು ನೋಡಿ ಕಾರ್ಯನಿರತನಾಗು.
ಅನೇಕ ತೊಂದರೆಗಳಲ್ಲಿ ಸಿಕ್ಕಿಕೊಂಡಿರುವವರು ಸಹಾಯಕ್ಕಾಗಿ ನಿನ್ನ ಬಳಿಗೆ ಬರುವರು.
    ಅನಾಥರಿಗೆ ಸಹಾಯ ಮಾಡುವವನು ನೀನೇ.
    ಆದ್ದರಿಂದ ಅವರಿಗೆ ಸಹಾಯಮಾಡು!

15 ಕೆಡುಕರನ್ನು ನಾಶಮಾಡು.
    ನಿನ್ನ ದೇಶದಿಂದ ಅವರನ್ನು ನಿರ್ಮೂಲಮಾಡು!
16 ಯೆಹೋವನು ಸದಾಕಾಲವೂ ರಾಜನಾಗಿರುವನು.
    ಆತನು ತನ್ನ ದೇಶದಿಂದ ಕೆಡುಕರನ್ನು ತೆಗೆದುಹಾಕುವನು.
17 ಯೆಹೋವನೇ, ಕುಗ್ಗಿಹೋದವರ ಕೋರಿಕೆಯನ್ನು ನೀನು ಕೇಳುವೆ.
    ಅವರ ಮೊರೆಗೆ ಕಿವಿಗೊಟ್ಟು ಅವರನ್ನು ಪ್ರೋತ್ಸಾಹಿಸುವೆ.
18 ಯೆಹೋವನೇ, ಅನಾಥರನ್ನೂ ಕುಗ್ಗಿಸಲ್ಪಟ್ಟವರನ್ನೂ ಸಂರಕ್ಷಿಸು.
    ಆಗ ಕೇವಲ ಮನುಷ್ಯರಿಂದ ಅವರಿಗೆ ಭಯವಾಗದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International