Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 21

ಬೆನ್ಯಾಮೀನ್ಯರಿಗೆ ಹೆಂಡಂದಿರನ್ನು ದೊರಕಿಸಿದ್ದು

21 ಮಿಚ್ಛೆಯಲ್ಲಿ ಇಸ್ರೇಲಿನ ಜನರು ಒಂದು ಪ್ರತಿಜ್ಞೆಯನ್ನು ಮಾಡಿದ್ದರು. “ನಮ್ಮಲ್ಲಿ ಯಾರೂ ನಮ್ಮ ಹೆಣ್ಣುಮಕ್ಕಳನ್ನು ಬೆನ್ಯಾಮೀನ್ಯರಿಗೆ ಮದುವೆ ಮಾಡಿಕೊಡುವುದಿಲ್ಲ” ಎಂಬುದೇ ಆ ಪ್ರತಿಜ್ಞೆ.

ಇಸ್ರೇಲರು ಬೇತೇಲ್ ನಗರಕ್ಕೆ ಹೋದರು. ಅಲ್ಲಿ ಅವರು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತುಕೊಂಡರು. ಅಲ್ಲಿ ಕುಳಿತುಕೊಂಡು ಅವರು ಗಟ್ಟಿಯಾಗಿ ಅತ್ತರು. ಅವರು ದೇವರಿಗೆ, “ಯೆಹೋವನೇ, ನೀನು ಇಸ್ರೇಲರ ದೇವರು. ನಮಗೆ ಇಂಥ ಭಯಾನಕ ಪರಿಸ್ಥಿತಿ ಏಕೆ ಉಂಟಾಯಿತು? ಇಸ್ರೇಲಿನ ಒಂದು ಕುಲವು ನಾಶವಾಯಿತಲ್ಲಾ?” ಎಂದು ಮೊರೆಯಿಟ್ಟರು.

ಮರುದಿನ ಬೆಳಿಗ್ಗೆ ಅವರು ಒಂದು ಯಜ್ಞವೇದಿಕೆಯನ್ನು ಕಟ್ಟಿದರು. ಅವರು ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. ಆಮೇಲೆ ಇಸ್ರೇಲರು, “ಯೆಹೋವನ ಮುಂದೆ ಸಭೆ ಸೇರಿದಾಗ ಅದಕ್ಕೆ ಬಾರದೆ ಇದ್ದಂಥ ಇಸ್ರೇಲರು ಯಾರಾದರೂ ಇದ್ದಾರೆಯೇ” ಎಂದು ವಿಚಾರಮಾಡಿದರು. ಮಿಚ್ಛೆ ನಗರದಲ್ಲಿ ಬೇರೆ ಕುಲಗಳ ಜೊತೆಗೆ ಯಾರು ಸೇರುವುದಿಲ್ಲವೋ ಅವರನ್ನು ಕೊಲೆ ಮಾಡುವುದಾಗಿ ಅವರು ಪ್ರತಿಜ್ಞೆ ಮಾಡಿದ್ದರು. ಅದಕ್ಕಾಗಿ ಅವರು ಅದರ ಬಗ್ಗೆ ವಿಚಾರಮಾಡಿದರು.

ಆಗ ಇಸ್ರೇಲರು ತಮ್ಮ ಬಂಧುಗಳಾದ ಬೆನ್ಯಾಮೀನ್ಯರ ಬಗ್ಗೆ ವ್ಯಥೆಪಟ್ಟರು. ಅವರು, “ಇಂದು ಇಸ್ರೇಲರಿಂದ ಒಂದು ಕುಲವು ಇಲ್ಲವಾಯಿತು. ನಮ್ಮ ಹೆಣ್ಣುಮಕ್ಕಳು ಬೆನ್ಯಾಮೀನ್ಯರನ್ನು ಮದುವೆಯಾಗಲು ಬಿಡುವುದಿಲ್ಲವೆಂದು ನಾವು ಯೆಹೋವನ ಎದುರಿಗೆ ಪ್ರತಿಜ್ಞೆ ಮಾಡಿದ್ದೇವೆ. ಇನ್ನು ಮುಂದೆ ಬೆನ್ಯಾಮೀನ್ಯರಿಗೆ ಹೆಂಡಂದಿರನ್ನು ದೊರಕಿಸುವುದು ಹೇಗೆ?” ಎಂದು ಅವರು ಯೋಚಿಸಿದರು.

ಆಗ ಇಸ್ರೇಲರು, “ಇಲ್ಲಿ ಮಿಚ್ಛೆಗೆ ಇಸ್ರೇಲರಲ್ಲಿ ಬರದಿರುವವರು ಯಾರಾದರೂ ಇರುವರೇ?” ಎಂದು ವಿಚಾರ ಮಾಡಿದರು. ಆಗ ಯಾಬೇಷ್ ಗಿಲ್ಯಾದ್ ನಗರದವರಲ್ಲಿ ಯಾರೂ ಬಂದಿಲ್ಲವೆಂದು ಗೊತ್ತಾಯಿತು. ಇಸ್ರೇಲರಲ್ಲಿ ಯಾರು ಅಲ್ಲಿದ್ದಾರೆ, ಯಾರು ಅಲ್ಲಿಲ್ಲ ಎಂಬುದನ್ನು ಲೆಕ್ಕಹಾಕಿ ನೋಡಿದರು. ಯಾಬೇಷ್ ಗಿಲ್ಯಾದಿನವರಲ್ಲಿ ಯಾರೂ ಬಂದಿಲ್ಲ ಎಂಬುದು ಖಚಿತವಾಯಿತು. 10 ಇಸ್ರೇಲರು ಯಾಬೇಷ್ ಗಿಲ್ಯಾದಿಗೆ ಹನ್ನೆರಡು ಸಾವಿರ ಸೈನಿಕರನ್ನು ಕಳುಹಿಸಿದರು. ಅವರು ಆ ಸೈನಿಕರಿಗೆ, “ಯಾಬೇಷ್ ಗಿಲ್ಯಾದಿಗೆ ಹೋಗಿರಿ; ಹೆಂಗಸರು ಮತ್ತು ಮಕ್ಕಳ ಸಮೇತ ಪ್ರತಿಯೊಬ್ಬರನ್ನೂ ನಿಮ್ಮ ಕತ್ತಿಯಿಂದ ಕೊಂದುಹಾಕಿರಿ. 11 ನೀವು ಇದನ್ನು ಮಾಡಲೇಬೇಕು. ನೀವು ಯಾಬೇಷ್ ಗಿಲ್ಯಾದಿನಲ್ಲಿರುವ ಪ್ರತಿಯೊಬ್ಬ ಮನುಷ್ಯನನ್ನು ಕೊಲ್ಲಬೇಕು. ಗಂಡಸಿನೊಂದಿಗೆ ಲೈಂಗಿಕಸಂಪರ್ಕ ಹೊಂದಿದ ಪ್ರತಿಯೊಬ್ಬ ಹೆಂಗಸನ್ನೂ ನೀವು ಕೊಂದುಹಾಕಬೇಕು. ಆದರೆ ಕನ್ಯೆಯರನ್ನು ನೀವು ಕೊಲ್ಲಬಾರದು” ಎಂದು ಹೇಳಿದರು. ಆ ಸೈನಿಕರು ಹಾಗೆಯೇ ಮಾಡಿದರು. 12 ಆ ಹನ್ನೆರಡು ಸಾವಿರ ಸೈನಿಕರು ಯಾಬೇಷ್ ಗಿಲ್ಯಾದಿನಲ್ಲಿ ಗಂಡಸಿನೊಂದಿಗೆ ಎಂದೂ ಲೈಂಗಿಕ ಸಂಪರ್ಕ ಹೊಂದದ ನಾನೂರು ಜನ ಯುವತಿಯರನ್ನು ಗುರುತಿಸಿದರು. ಆ ಯುವತಿಯರನ್ನು ಸೈನಿಕರು ಶೀಲೋವಿನಲ್ಲಿದ್ದ ಪಾಳೆಯಕ್ಕೆ ಕರೆತಂದರು. ಶೀಲೋವ್ ಕಾನಾನ್ ಪ್ರದೇಶದಲ್ಲಿದೆ.

13 ಇಸ್ರೇಲರು ಬೆನ್ಯಾಮೀನ್ಯರಿಗೆ ಒಂದು ಸಂದೇಶವನ್ನು ಕಳುಹಿಸಿದರು. ಅವರು ಬೆನ್ಯಾಮೀನ್ಯರೊಂದಿಗೆ ಶಾಂತಿಯ ಪ್ರಸ್ತಾಪವನ್ನು ಮಾಡಿದರು. ಬೆನ್ಯಾಮೀನ್ಯರು ರಿಮ್ಮೋನ್‌ಗಿರಿ ಎಂಬ ಸ್ಥಳದಲ್ಲಿದ್ದರು. 14 ಬೆನ್ಯಾಮೀನ್ಯರು ಇಸ್ರೇಲಿಗೆ ಹಿಂತಿರುಗಿ ಬಂದರು. ಇಸ್ರೇಲರು ಯಾಬೇಷ್ ಗಿಲ್ಯಾದಿನಿಂದ ಕೊಲ್ಲದೆ ತಂದಿದ್ದ ಸ್ತ್ರೀಯರನ್ನು ಅವರಿಗೆ ಕೊಟ್ಟರು. ಆದರೂ ಬೆನ್ಯಾಮೀನ್ಯರ ಎಲ್ಲಾ ಗಂಡಸರಿಗೆ ಸಾಕಾಗುವಷ್ಟು ಸ್ತ್ರೀಯರು ಇರಲಿಲ್ಲ.

15 ಇಸ್ರೇಲರು ಬೆನ್ಯಾಮೀನ್ಯರಿಗಾಗಿ ವ್ಯಥೆಪಟ್ಟರು. ಏಕೆಂದರೆ ಯೆಹೋವನು ಅವರನ್ನು ಇಸ್ರೇಲಿನ ಉಳಿದ ಕುಲದವರಿಂದ ಪ್ರತ್ಯೇಕಗೊಳಿಸಿದ್ದನು. 16 ಇಸ್ರೇಲರ ಹಿರಿಯರು, “ಬೆನ್ಯಾಮೀನ್ಯರ ಹೆಂಗಸರು ಕೊಲೆಗೀಡಾಗಿದ್ದಾರೆ. ಈಗ ಜೀವಂತವಿದ್ದ ಬೆನ್ಯಾಮೀನ್ ಗಂಡಸರಿಗೆ ಹೆಂಡಂದಿರನ್ನು ಎಲ್ಲಿಂದ ತರುವುದು? 17 ಜೀವಂತವಿರುವ ಬೆನ್ಯಾಮೀನ್ಯರು ತಮ್ಮ ವಂಶವನ್ನು ಮುಂದುವರಿಸುವುದಕ್ಕೆ ಮಕ್ಕಳನ್ನು ಪಡೆಯಬೇಕು. ಆಗ ಇಸ್ರೇಲರ ಒಂದು ಕುಲವು ಅಳಿಯದೆ ಉಳಿಯುವುದು. 18 ಆದರೆ ನಾವೂ ನಮ್ಮ ಹೆಣ್ಣುಮಕ್ಕಳೂ ಬೆನ್ಯಾಮೀನ್ಯರೊಂದಿಗೆ ಮದುವೆಯಾಗಲು ಒಪ್ಪುವಂತಿಲ್ಲ. ಏಕೆಂದರೆ ‘ಬೆನ್ಯಾಮೀನ್ಯರಿಗೆ ಯಾರಾದರೂ ಹೆಣ್ಣನ್ನು ಕೊಟ್ಟರೆ ಅವರು ಶಾಪಗ್ರಸ್ತರಾಗುತ್ತಾರೆ’ ಎಂದು ನಾವೇ ಆಣೆ ಇಟ್ಟಿದ್ದೇವೆ. 19 ನಮಗೊಂದು ವಿಚಾರಹೊಳೆದಿದೆ. ಇದು ಶೀಲೋವಿನಲ್ಲಿ ಯೆಹೋವನ ಉತ್ಸವ ನಡೆಯುವ ಕಾಲ. ಈ ಉತ್ಸವವನ್ನು ಅಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ.” (ಶೀಲೋವ್ ನಗರವು ಬೇತೇಲ್ ನಗರದ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ದಾರಿಯ ಪೂರ್ವಕ್ಕೂ ಲೆಬೋನಿನ ದಕ್ಷಿಣಕ್ಕೂ ಇದೆ.)

20 ಹಿರಿಯರು ಬೆನ್ಯಾಮೀನ್ಯರಿಗೆ ತಮ್ಮ ವಿಚಾರದ ಬಗ್ಗೆ ಹೇಳಿದರು. ಅವರು, “ನೀವು ಹೋಗಿ ದ್ರಾಕ್ಷೆಯ ತೋಟಗಳಲ್ಲಿ ಅಡಗಿಕೊಳ್ಳಿರಿ. 21 ಉತ್ಸವಕಾಲದಲ್ಲಿ ಶೀಲೋವಿನ ಯುವತಿಯರು ನಾಟ್ಯಕ್ಕೆ ಬರುವ ಸಮಯವನ್ನು ನಿರೀಕ್ಷಿಸುತ್ತಿರಿ. ಅವರು ಬಂದ ತಕ್ಷಣ ನೀವು ಅಡಗಿಕೊಂಡಿದ್ದ ಸ್ಥಳದಿಂದ ಹೊರಗೆ ಬನ್ನಿ; ನಿಮ್ಮಲ್ಲಿ ಪ್ರತಿಯೊಬ್ಬನು ಒಬ್ಬೊಬ್ಬ ಶೀಲೋವಿನ ಯುವತಿಯನ್ನು ತೆಗೆದುಕೊಳ್ಳಿರಿ. ಆ ಯುವತಿಯರನ್ನು ಬೆನ್ಯಾಮೀನ್ಯರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿರಿ. 22 ಆ ಯುವತಿಯರ ತಂದೆಗಳಾಗಲಿ ಸಹೋದರರಾಗಲಿ ನಮ್ಮಲ್ಲಿಗೆ ಬಂದು ದೂರು ಹೇಳುತ್ತಾರೆ. ಆಗ ನಾವು ಅವರಿಗೆ, ‘ಬೆನ್ಯಾಮೀನ್ಯರ ಗಂಡಸರಿಗೆ ದಯೆತೋರಿಸಿರಿ; ಅವರು ಆ ಸ್ತ್ರೀಯರನ್ನು ಮದುವೆಯಾಗಲಿ. ಅವರು ನಿಮ್ಮಿಂದ ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ಹೋಗಿರುವರೇ ಹೊರತು ಯುದ್ಧವೇನೂ ಮಾಡಿಲ್ಲ. ಅವರು ಕನ್ಯೆಯರನ್ನು ತೆಗೆದುಕೊಂಡು ಹೋದದ್ದರಿಂದ ನೀವು ದೇವರೆದುರಿಗೆ ಮಾಡಿದ ಪ್ರತಿಜ್ಞೆಯನ್ನು ಮುರಿದಂತಾಗುವುದಿಲ್ಲ. ನಿಮ್ಮ ಕನ್ಯೆಯರನ್ನು ಅವರಿಗೆ ಕೊಡುವುದಿಲ್ಲವೆಂದು ನೀವು ಪ್ರತಿಜ್ಞೆ ಮಾಡಿದ್ದೀರಿ. ನೀವು ಬೆನ್ಯಾಮೀನ್ಯರಿಗೆ ನಿಮ್ಮ ಕನ್ಯೆಯರನ್ನು ಕೊಟ್ಟಿಲ್ಲ. ಆದರೆ ಅವರು ನಿಮ್ಮ ಕನ್ಯೆಯರನ್ನು ತೆಗೆದುಕೊಂಡು ಹೋದರು. ಆದ್ದರಿಂದ ನೀವು ನಿಮ್ಮ ಪ್ರತಿಜ್ಞೆಯನ್ನು ಮುರಿಯಲಿಲ್ಲ’ ಎಂದು ಹೇಳುತ್ತೇವೆ” ಎಂದರು.

23 ಅದರಂತೆಯೇ ಬೆನ್ಯಾಮೀನ್ ಕುಲದ ಗಂಡಸರು, ನಾಟ್ಯವಾಡಲು ಬಂದಿದ್ದ ಯುವತಿಯರಲ್ಲಿ, ತಮ್ಮ ಸಂಖ್ಯೆಗೆ ಸರಿಯಾಗುವಷ್ಟು ಮಂದಿಯನ್ನು ತಮ್ಮ ಹೆಂಡತಿಯರನ್ನಾಗಿ ತೆಗೆದುಕೊಂಡು ತಮ್ಮ ಪ್ರದೇಶಕ್ಕೆ ಹಿಂತಿರುಗಿ ಹೋದರು. ಆ ಪ್ರದೇಶದಲ್ಲಿ ಬೆನ್ಯಾಮೀನ್ಯರು ಪುನಃ ನಗರಗಳನ್ನು ಕಟ್ಟಿ ವಾಸಮಾಡಿದರು. 24 ಅನಂತರ ಇಸ್ರೇಲರು ತಮ್ಮತಮ್ಮ ಕುಲಗೋತ್ರಗಳವರಿಗೆ ಸ್ವಾಸ್ತ್ಯವಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂತಿರುಗಿಹೋದರು.

25 ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬನೂ ತನಗೆ ಸರಿತೋರಿದಂತೆ ಮಾಡುತ್ತಿದ್ದನು.

ಅಪೊಸ್ತಲರ ಕಾರ್ಯಗಳು 25

ಸೀಸರನನ್ನು ಕಾಣಲು ಪೌಲನು ಮಾಡಿದ ಮನವಿ

25 ಫೆಸ್ತನು ರಾಜ್ಯಪಾಲನಾಗಿ ಮೂರು ದಿನಗಳಾದ ಮೇಲೆ ಸೆಜರೇಯದಿಂದ ಜೆರುಸಲೇಮಿಗೆ ಹೋದನು. ಮಹಾಯಾಜಕರು ಮತ್ತು ಪ್ರಮುಖ ಯೆಹೂದ್ಯ ನಾಯಕರು ಫೆಸ್ತನ ಎದುರಿನಲ್ಲಿ ಪೌಲನಿಗೆ ವಿರೋಧವಾಗಿ ದೋಷಾರೋಪಣೆಗಳನ್ನು ಹೇಳಿದರು. ಅಲ್ಲದೆ ಪೌಲನನ್ನು ಜೆರುಸಲೇಮಿಗೆ ಮರಳಿ ಕಳುಹಿಸಿಕೊಡಬೇಕೆಂದು ಅವರು ಫೆಸ್ತನನ್ನು ಕೇಳಿಕೊಂಡರು. ಅವರು ಪೌಲನನ್ನು ಮಾರ್ಗದಲ್ಲೇ ಕೊಲ್ಲಬೇಕೆಂಬ ಯೋಜನೆ ಮಾಡಿಕೊಂಡಿದ್ದರು. ಆದರೆ ಫೆಸ್ತನು, “ಇಲ್ಲ! ಪೌಲನನ್ನು ಸೆಜರೇಯದಲ್ಲೇ ಇರಿಸಲಾಗುವುದು. ನಾನೇ ಅಲ್ಲಿಗೆ ಬೇಗ ಹೋಗಲಿದ್ದೇನೆ. ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು.

ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು. ಪೌಲನು ನ್ಯಾಯಾಲಯದೊಳಗೆ ಬಂದನು. ಜೆರುಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತುಕೊಂಡು ಅವನ ಮೇಲೆ ಅನೇಕ ದೋಷಾರೋಪಗಳನ್ನು ಮಾಡಿದರು. ಆದರೆ ಅವುಗಳಲ್ಲಿ ಯಾವುದಕ್ಕೂ ಆಧಾರವಿರಲಿಲ್ಲ. ಪೌಲನು ಪ್ರತಿವಾದ ಮಾಡುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ ದೇವಾಲಯಕ್ಕೆ ವಿರುದ್ಧವಾಗಲಿ ಸೀಸರನಿಗೆ ವಿರುದ್ಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ” ಎಂದು ಹೇಳಿದನು.

ಆದರೆ ಫೆಸ್ತನು ಯೆಹೂದ್ಯರ ಮೆಚ್ಚಿಕೆ ಗಳಿಸಿಕೊಳ್ಳಬೇಕೆಂದಿದ್ದನು. ಆದ್ದರಿಂದ ಅವನು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಯಸುವೆಯಾ? ಈ ದೋಷಾರೋಪಣೆಗಳ ಕುರಿತು ನಾನು ಅಲ್ಲಿಯೇ ನಿನಗೆ ತೀರ್ಪು ಮಾಡಬೇಕೆಂದು ಅಪೇಕ್ಷಿಸುವಿಯಾ?” ಎಂದು ಕೇಳಿದನು.

10-11 ಪೌಲನು, “ಈಗ ನಾನು ಸೀಸರನ ನ್ಯಾಯಾಸ್ಥಾನದ ಮುಂದೆ ನಿಂತಿದ್ದೇನೆ. ನನಗೆ ತೀರ್ಪಾಗಬೇಕಾದದ್ದು ಇಲ್ಲಿಯೇ! ನಾನು ಯೆಹೂದ್ಯರಿಗೆ ಯಾವ ಅಪರಾಧವನ್ನೂ ಮಾಡಿಲ್ಲ. ಇದು ಸತ್ಯವೆಂದು ನಿನಗೆ ಗೊತ್ತಿದೆ. ನಾನು ಅಪರಾಧಿಯಾಗಿದ್ದು ಧರ್ಮಶಾಸ್ತ್ರವು ನನಗೆ ಮರಣದಂಡನೆ ವಿಧಿಸಿದರೆ, ನಾನು ಆ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವರ ದೋಷಾರೋಪಣೆಗಳು ಸತ್ಯವಾಗಿಲ್ಲದಿದ್ದರೆ, ನನ್ನನ್ನು ಇವರ ಕೈಗೆ ಒಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ!” ಎಂದನು.

12 ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು.

ಹೆರೋದ ಅಗ್ರಿಪ್ಪನ ಮುಂದೆ ಪೌಲನು

13 ಕೆಲವು ದಿನಗಳಾದ ಮೇಲೆ ರಾಜ ಅಗ್ರಿಪ್ಪನು ಮತ್ತು ಬೆರ್ನಿಕೆ ರಾಣಿ ಫೆಸ್ತನನ್ನು ವಂದಿಸಲು ಸೆಜರೇಯಕ್ಕೆ ಬಂದರು. 14 ಅವರು ಅಲ್ಲಿ ಅನೇಕ ದಿನಗಳವರೆಗೆ ಇದ್ದರು. ಫೆಸ್ತನು ಪೌಲನ ವ್ಯಾಜ್ಯದ ಬಗ್ಗೆ ರಾಜನಿಗೆ ಈ ರೀತಿ ತಿಳಿಸಿದನು: “ಫೇಲಿಕ್ಸನು ಸೆರೆಮನೆಯಲ್ಲೇ ಬಿಟ್ಟುಹೋದ ಒಬ್ಬ ವ್ಯಕ್ತಿ ಇದ್ದಾನೆ. 15 ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು. 16 ಆದರೆ ನಾನು, ‘ದೋಷಾರೋಪಣೆ ಹೊರಿಸಲ್ಪಟ್ಟಿರುವ ವ್ಯಕ್ತಿಯನ್ನು ತೀರ್ಪಿಗಾಗಿ ಬೇರೆಯವರಿಗೆ ಒಪ್ಪಿಸುವುದು ರೋಮ್‌ನವರ ಪದ್ಧತಿಯಲ್ಲ. ಮೊದಲನೆಯದಾಗಿ, ಅವನು ತನ್ನ ಮೇಲೆ ದೋಷಾರೋಪಣೆ ಮಾಡುತ್ತಿರವವರನ್ನು ಮುಖಾಮುಖಿಯಾಗಿ ಸಂಧಿಸಿ ಅವರ ದೋಷಾರೋಪಣೆಗಳಿಗೆ ವಿರೋಧವಾಗಿ ತನ್ನನ್ನು ಪ್ರತಿಪಾದಿಸಿಕೊಳ್ಳಲು ಅವಕಾಶ ಕೊಡಲೇಬೇಕು’ ಎಂದು ಹೇಳಿದೆನು.

17 “ಆದ್ದರಿಂದ ಅವರು ಇಲ್ಲಿಗೆ ಬಂದಾಗ, ನಾನು ತಡಮಾಡದೆ ಮರುದಿನವೇ ನ್ಯಾಯಾಸ್ಥಾನದಲ್ಲಿ ಕುಳಿತು ಆ ಮನುಷ್ಯನನ್ನು (ಪೌಲನನ್ನು) ಒಳಗೆ ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದೆನು. 18 ಯೆಹೂದ್ಯರು ನಿಂತುಕೊಂಡು ಅವನ ಮೇಲೆ ದೋಷಾರೋಪಣೆಗಳನ್ನು ಹೊರಿಸಿದರು. ಆದರೆ ನಾನು ಯೋಚಿಸಿದ ಪ್ರಕಾರ ಯೆಹೂದ್ಯರು ಅವನ ಮೇಲೆ ಯಾವ ಕೆಟ್ಟ ಅಪರಾಧವನ್ನಾಗಲಿ ಹೊರಿಸಲಿಲ್ಲ. 19 ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು. 20 ಈ ಸಂಗತಿಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ಪ್ರಶ್ನೆಗಳನ್ನು ಕೇಳಲಿಲ್ಲ. ಆದರೆ ನಾನು ಪೌಲನಿಗೆ, ‘ನೀನು ಜೆರುಸಲೇಮಿಗೆ ಹೋಗಿ ಅಲ್ಲೇ ನ್ಯಾಯತೀರ್ಪು ಹೊಂದಲು ಬಯಸುವೆಯಾ?’ ಎಂದು ಕೇಳಿದೆನು. 21 ಅದಕ್ಕೆ ಅವನು, ‘ಚಕ್ರವರ್ತಿಯೇ (ಸೀಸರನೇ) ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನ್ನನ್ನು ಸಂರಕ್ಷಿಸಬೇಕು’ ಎಂದು ಕೇಳಿಕೊಂಡನು. ಆದ್ದರಿಂದ ರೋಮಿನಲ್ಲಿರುವ ಚಕ್ರವರ್ತಿಯ ಬಳಿಗೆ ಕಳುಹಿಸುವ ತನಕ ಅವನನ್ನು ಕಾವಲಿನಲ್ಲಿರಿಸಬೇಕೆಂದು ಆಜ್ಞಾಪಿಸಿದೆನು.”

22 ಅಗ್ರಿಪ್ಪನು ಫೆಸ್ತನಿಗೆ, “ಈ ಮನುಷ್ಯನು ಹೇಳುವುದನ್ನು ಕೇಳುವುದಕ್ಕೆ ನನಗೂ ಇಷ್ಟವಿದೆ” ಎಂದು ಹೇಳಿದನು.

ಫೆಸ್ತನು, “ಅವನು ಹೇಳುವುದನ್ನು ನೀನು ನಾಳೆ ಕೇಳಬಹುದು!” ಎಂದು ಹೇಳಿದನು.

23 ಮರುದಿನ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ರಾಣಿ ವೈಭವದ ಬಟ್ಟೆಗಳನ್ನು ಧರಿಸಿಕೊಂಡು ಸೇನಾಧಿಕಾರಿಗಳೊಡನೆ ಹಾಗೂ ಸೆಜರೇಯದ ಪ್ರಮುಖರೊಡನೆ ನ್ಯಾಯಾಲಯದೊಳಗೆ ಬಂದರು. ಪೌಲನನ್ನು ಒಳಗೆ ಕರೆದುಕೊಂಡು ಬರಬೇಕೆಂದು ಫೆಸ್ತನು ಸೈನಿಕರಿಗೆ ಆಜ್ಞಾಪಿಸಿದನು.

24 ಫೆಸ್ತನು ಹೀಗೆಂದನು: “ರಾಜ ಅಗ್ರಿಪ್ಪನೇ, ನಮ್ಮೊಂದಿಗೆ ಇಲ್ಲಿ ನೆರೆದಿರುವ ಎಲ್ಲಾ ಜನರೇ, ನೀವು ನೋಡುತ್ತಿರುವ ಈ ಮನುಷ್ಯನ (ಪೌಲನ) ಮೇಲೆ ಇಲ್ಲಿರುವ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರು ನನಗೆ ದೂರುಗಳನ್ನು ಹೇಳಿ, ಇವನಿಗೆ ಮರಣದಂಡನೆ ಆಗಬೇಕೆಂದು ಆರ್ಭಟಿಸಿದರು. 25 ನಾನು ಇವನನ್ನು ವಿಚಾರಣೆ ಮಾಡಿದಾಗ ಇವನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಸೀಸರನಿಂದಲೇ ತನಗೆ ನ್ಯಾಯತೀರ್ಪಾಗಬೇಕೆಂದು ಇವನು ಕೇಳಿಕೊಂಡಿದ್ದಾನೆ. ಆದ್ದರಿಂದ ಇವನನ್ನು ರೋಮಿಗೆ ಕಳುಹಿಸಲು ನಾನು ತೀರ್ಮಾನಿಸಿದೆ. 26 ಆದರೆ ಇವನ ವಿಷಯದಲ್ಲಿ ಸೀಸರನಿಗೆ ಬರೆಯಲು ನಿರ್ದಿಷ್ಟವಾದ ಅಪರಾಧವೇನೂ ನನಗೆ ತೋರುತ್ತಿಲ್ಲ. ಆದ್ದರಿಂದ ನಾನು ಇವನನ್ನು ನಿಮ್ಮೆಲ್ಲರ ಮುಂದೆಯೂ ವಿಶೇಷವಾಗಿ ರಾಜನಾದ ಅಗ್ರಿಪ್ಪನ ಮುಂದೆಯೂ ತಂದಿದ್ದೇನೆ. ಆದ್ದರಿಂದ ನೀವು ಇವನನ್ನು ಪ್ರಶ್ನಿಸಿ ಇವನ ಬಗ್ಗೆ ಸೀಸರನಿಗೆ ಬರೆಯಲು ಏನಾದರೂ ವಿಷಯವುನ್ನು ಕೊಡಬಲ್ಲಿರೆಂದು ನಿರೀಕ್ಷಿಸುತ್ತೇನೆ. 27 ನಾನು ಯೋಚಿಸುವಂತೆ, ಒಬ್ಬ ಕೈದಿಯ ವಿರುದ್ಧವಿರುವ ದೋಷಾರೋಪಣೆಗಳನ್ನು ಸ್ಪಷ್ಟಪಡಿಸದೆ ಅವನನ್ನು ಸೀಸರನ ಬಳಿಗೆ ಕಳುಹಿಸುವುದು ಮೂರ್ಖತನವಾಗಿದೆ.”

ಯೆರೆಮೀಯ 35

ರೇಕಾಬ್ಯರ ಒಂದು ಒಳ್ಳೆಯ ದೃಷ್ಟಾಂತ

35 ಯೆಹೋಯಾಕೀಮನು ಯೆಹೂದವನ್ನು ಆಳುತ್ತಿದ್ದ ಕಾಲದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಯೆಹೋವನ ಸಂದೇಶ ಹೀಗಿತ್ತು: “ಯೆರೆಮೀಯನೇ, ರೇಕಾಬನ ಕುಟುಂಬದವರಲ್ಲಿಗೆ[a] ಹೋಗು. ಅವರನ್ನು ಯೆಹೋವನ ಆಲಯದ ಒಂದು ಪಕ್ಕದ ಕೋಣೆಗೆ ಕರೆದು, ಕುಡಿಯುವದಕ್ಕೆ ದ್ರಾಕ್ಷಾರಸವನ್ನು ಕೊಡು.”

ಆದ್ದರಿಂದ ನಾನು (ಯೆರೆಮೀಯನು) ಯಾಜನ್ಯನನ್ನು ಕರೆಯಲು ಹೋದೆನು. ಯಾಜನ್ಯನು ಯೆರೆಮೀಯನೆಂಬುವನ[b] ಮಗ. ಯೆರೆಮೀಯನು ಹಬಚ್ಚಿನ್ಯನ ಮಗ. ನಾನು ಯಾಜನ್ಯನ ಎಲ್ಲಾ ಸಹೋದರರನ್ನೂ ಮಕ್ಕಳನ್ನೂ ಕರೆತಂದೆನು. ನಾನು ರೇಕಾಬ್ಯರ ಇಡೀ ಮನೆತನವನ್ನು ಒಟ್ಟಿಗೆ ಸೇರಿಸಿದೆನು. ಅನಂತರ ನಾನು ರೇಕಾಬ ವಂಶದವರನ್ನು ಯೆಹೋವನ ಆಲಯದಲ್ಲಿ ಕರೆತಂದೆನು. ನಾವು ಹಾನಾನನ ಮಕ್ಕಳ ಕೋಣೆ ಎಂದು ಕರೆಯಲ್ಪಡುವ ಕೋಣೆಯೊಳಕ್ಕೆ ಹೋದೆವು. ಹಾನಾನನು ಇಗ್ದಲ್ಯನೆಂಬವನ ಮಗನು. ಹಾನಾನನು ದೇವರ ಮನುಷ್ಯ. ಈ ಕೋಣೆಯು ಯೆಹೂದದ ರಾಜಕುಮಾರರ ಕೋಣೆಯ ಪಕ್ಕದಲ್ಲಿತ್ತು. ಇದು ಶಲ್ಲೂಮನ ಮಗನಾದ ಮಾಸೇಯನ ಕೋಣೆಯ ಮೇಲ್ಗಡೆ ಇತ್ತು. ಮಾಸೇಯನು ಆಲಯದ ದ್ವಾರಪಾಲಕನಾಗಿದ್ದನು. ಆಮೇಲೆ ನಾನು ದ್ರಾಕ್ಷಾರಸ ತುಂಬಿದ ಕೆಲವು ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ರೇಕಾಬ್ಯ ಕುಟುಂಬದವರ ಮುಂದಿಟ್ಟು, “ಸ್ವಲ್ಪ ದ್ರಾಕ್ಷಾರಸವನ್ನು ಕುಡಿಯಿರಿ” ಎಂದೆನು.

ಆದರೆ ರೇಕಾಬ್ಯರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ. ಏಕೆಂದರೆ ನಮ್ಮ ಪೂರ್ವಿಕನಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವು ಮತ್ತು ನಿಮ್ಮ ಸಂತಾನದವರು ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬಾರದು. ನೀವೆಂದೂ ಮನೆಯನ್ನು ಕಟ್ಟಿಕೊಳ್ಳಬಾರದು, ಬೀಜಗಳನ್ನು ಬಿತ್ತಬಾರದು, ದ್ರಾಕ್ಷಿತೋಟಗಳನ್ನು ಬೆಳಸಬಾರದು. ನೀವು ಅವುಗಳಲ್ಲಿ ಒಂದನ್ನು ಕೂಡ ಎಂದಿಗೂ ಮಾಡಬಾರದು. ನೀವು ಕೇವಲ ಗುಡಾರಗಳಲ್ಲಿ ವಾಸಿಸಬೇಕು. ಆಗ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗುವ ದೇಶದಲ್ಲಿ ಬಹಳ ಕಾಲದವರೆಗೆ ಇರಬಲ್ಲಿರಿ’ ಎಂದು ಆಜ್ಞಾಪಿಸಿದ್ದಾನೆ. ಆದ್ದರಿಂದ ರೇಕಾಬ್ಯರಾದ ನಾವು ನಮ್ಮ ಪೂರ್ವಿಕನಾದ ಯೋನಾದಾಬನು ಕೊಟ್ಟ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿದ್ದೇವೆ. ನಾವು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಮ್ಮ ಹೆಂಡತಿಯರು ಮತ್ತು ಮಕ್ಕಳು ಸಹ ಎಂದೂ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ವಾಸಿಸುವದಕ್ಕೆ ನಾವೆಂದೂ ಮನೆಗಳನ್ನು ಕಟ್ಟುವದಿಲ್ಲ: ದ್ರಾಕ್ಷಿತೋಟಗಳನ್ನಾಗಲಿ ಹೊಲಗಳನ್ನಾಗಲಿ ಕೊಳ್ಳುವುದಿಲ್ಲ; ಬೀಜವನ್ನು ಬಿತ್ತುವದಿಲ್ಲ. 10 ನಾವು ಗುಡಾರದಲ್ಲಿ ವಾಸಮಾಡಿದ್ದೇವೆ; ನಮ್ಮ ಪೂರ್ವಿಕನಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲ ಆಸಕ್ತಿಯಿಂದ ಮಾಡಿದ್ದೇವೆ. 11 ಆದರೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದ ಮೇಲೆ ಧಾಳಿ ಮಾಡಿದಾಗ ನಾವು ಜೆರುಸಲೇಮ್ ನಗರದಲ್ಲಿ ಪ್ರವೇಶ ಮಾಡಿ ಹೀಗೆ ಮಾತನಾಡಿಕೊಂಡೆವು, ‘ಬನ್ನಿ, ನಾವು ಬಾಬಿಲೋನಿನ ಸೈನ್ಯದಿಂದ ಮತ್ತು ಅರಾಮ್ಯರ ಸೈನ್ಯದಿಂದ ತಪ್ಪಿಸಿಕೊಳ್ಳುವದಕ್ಕಾಗಿ ಜೆರುಸಲೇಮ್ ನಗರವನ್ನು ಪ್ರವೇಶಿಸೋಣ.’ ಹೀಗಾಗಿ ನಾವು ಜೆರುಸಲೇಮ್ ನಗರದಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.

12 ಆಗ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು: 13 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳಿದನು: ಯೆರೆಮೀಯನೇ, ಹೋಗಿ ಈ ಸಂದೇಶವನ್ನು ಯೆಹೂದದ ಮತ್ತು ಜೆರುಸಲೇಮಿನ ಜನರಿಗೆ ತಿಳಿಸು. ನೀವು ಇದರಿಂದ ಒಂದು ಪಾಠವನ್ನು ಕಲಿಯಬೇಕು ಮತ್ತು ನನ್ನ ಸಂದೇಶವನ್ನು ಅನುಸರಿಸಬೇಕು. 14 ‘ರೇಕಾಬನ ಮಗನಾದ ಯೋನಾದಾಬನು ತನ್ನ ಮಕ್ಕಳಿಗೆ ದ್ರಾಕ್ಷಾರಸವನ್ನು ಕುಡಿಯಬೇಡಿರೆಂದು ಹೇಳಿದನು. ಅವನ ಆಜ್ಞೆಯನ್ನು ಪಾಲಿಸಲಾಗಿದೆ. ಇಂದಿನವರೆಗೂ ಯೋನಾದಾಬನ ಸಂತಾನದವರು ತಮ್ಮ ಪೂರ್ವಿಕರ ಆಜ್ಞೆಯನ್ನು ಪಾಲಿಸಿದ್ದಾರೆ. ಅವರು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಾನೇ ನಿಮ್ಮ ದೇವರಾದ ಯೆಹೋವನು. ನಾನು ಯೆಹೂದದ ಜನರಾದ ನಿಮಗೆ ಮತ್ತೆಮತ್ತೆ ಸಂದೇಶಗಳನ್ನು ಕೊಟ್ಟಿದ್ದೇನೆ. ಆದರೆ ನೀವು ನನ್ನ ಆಜ್ಞೆಗಳನ್ನು ಪಾಲಿಸಲಿಲ್ಲ. 15 ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಇಸ್ರೇಲಿಗೆ ಮತ್ತು ಯೆಹೂದಕ್ಕೆ ಕಳುಹಿಸಿಕೊಟ್ಟೆ. ನಾನು ಅವರನ್ನು ನಿಮ್ಮಲ್ಲಿಗೆ ಪುನಃಪುನಃ ಕಳುಹಿಸಿಕೊಟ್ಟೆ. ಆ ಪ್ರವಾದಿಗಳು, “ಇಸ್ರೇಲಿನ ಮತ್ತು ಯೆಹೂದದ ಪ್ರತಿಯೊಬ್ಬರೂ ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಬೇಕು. ನೀವು ಒಳ್ಳೆಯವರಾಗಿರಬೇಕು. ಬೇರೆ ದೇವರುಗಳನ್ನು ಅನುಸರಿಸಬಾರದು. ಅವುಗಳನ್ನು ಪೂಜಿಸಬಾರದು. ಅವುಗಳ ಸೇವೆಮಾಡಬಾರದು ಎಂದು ಹೇಳಿದರು. ನನ್ನ ಆಜ್ಞೆಯನ್ನು ಪಾಲಿಸಿದರೆ ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಕೊಟ್ಟ ಪ್ರದೇಶದಲ್ಲಿ ನೀವು ವಾಸಿಸಬಹುದು” ಎಂದು ಹೇಳಿದ್ದೆ. ಆದರೆ ನೀವು ನನ್ನ ಸಂದೇಶದ ಕಡೆಗೆ ಗಮನ ಕೊಡಲಿಲ್ಲ. 16 ಯೋನಾದಾಬನ ಸಂತಾನದವರು ತಮ್ಮ ಪೂರ್ವಿಕರು ವಿಧಿಸಿದ ಆಜ್ಞೆಗಳನ್ನು ಪಾಲಿಸಿದರು. ಆದರೆ ಯೆಹೂದದ ಜನರು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.’

17 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು: ‘ಯೆಹೂದ ಮತ್ತು ಜೆರುಸಲೇಮಿಗೆ ಅನೇಕ ಕೇಡುಗಳು ಸಂಭವಿಸುವವೆಂದು ನಾನು ಹೇಳಿರುವೆನು. ಆ ಎಲ್ಲಾ ಕೇಡುಗಳು ಬೇಗನೆ ಸಂಭವಿಸುವಂತೆ ನಾನು ಮಾಡುವೆನು. ನಾನು ಆ ಜನರೊಂದಿಗೆ ಮಾತನಾಡಿದೆ, ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ನಾನು ಅವರನ್ನು ಕೂಗಿದೆ, ಆದರೆ ಅವರು ನನಗೆ ಓಗೊಡಲಿಲ್ಲ.’”

18 ಅನಂತರ ಯೆರೆಮೀಯನು ರೇಕಾಬ್ಯರಿಗೆ ಹೀಗೆ ಹೇಳಿದನು, “ಸರ್ವಶಕ್ತನಾದ ಯೆಹೋವನು, ಇಸ್ರೇಲಿನ ದೇವರು ಹೀಗೆ ಹೇಳುತ್ತಾನೆ. ‘ನೀವು ನಿಮ್ಮ ಪೂರ್ವಿಕನಾದ ಯೋನಾದಾಬನ ಆಜ್ಞೆಗಳನ್ನು ಪಾಲಿಸಿದ್ದೀರಿ. ನೀವು ಯೋನಾದಾಬನ ಎಲ್ಲಾ ಉಪದೇಶಗಳನ್ನು ಅನುಸರಿಸಿದ್ದೀರಿ. ನೀವು ಅವನು ವಿಧಿಸಿದಂತೆ ಎಲ್ಲವನ್ನು ಮಾಡಿದ್ದೀರಿ.’ 19 ಆದ್ದರಿಂದ ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನು ‘ರೇಕಾಬನ ಮಗನಾದ ಯೋನಾದಾಬನ ಸಂತಾನದವರು ಯಾವಾಗಲೂ ನನ್ನ ಸೇವೆಯಲ್ಲಿರುವರು’ ಎಂದು ನುಡಿದನು.”

ಕೀರ್ತನೆಗಳು 7-8

ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
    ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು;
    ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.

ನನ್ನ ದೇವರಾದ ಯೆಹೋವನೇ, ನಾನು ಯಾವುದೇ ಅಪರಾಧವನ್ನು ಮಾಡಿದ್ದರೆ,
ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ,
    ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ,
    ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ;
    ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.

ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು!
    ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು.
    ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ
    ನಿನ್ನ ಉನ್ನತಸ್ಥಾನದಲ್ಲಿ ಆಸೀನನಾಗು.
ಜನರಿಗೆ ನ್ಯಾಯತೀರಿಸು.
    ಯೆಹೋವನೇ, ನನಗೆ ನ್ಯಾಯತೀರಿಸು.
    ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
ಕೆಟ್ಟವರನ್ನು ದಂಡಿಸು,
    ಒಳ್ಳೆಯವರಿಗೆ ಸಹಾಯಮಾಡು.
ದೇವರೇ ನೀನು ಒಳ್ಳೆಯವನು;
    ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.

10 ನನ್ನ ಗುರಾಣಿಯು ದೇವರೇ.
    ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಾಧೀಶನಾಗಿದ್ದಾನೆ.
    ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.[a]

14 ಕೆಲವರು ದುಷ್ಕೃತ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು.
    ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡುಮಾಡಬೇಕೆಂದಿದ್ದಾರೆ;
    ಆದರೆ ತಾವೇ ಆ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು.
    ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು.
    ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.

17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು.
    ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು.

ರಚನೆಗಾರ: ದಾವೀದ.

ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
    ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.

ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
    ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.

ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
    ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
    ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
    ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?

ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
    ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
    ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
    ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
    ದೊರೆತನ ಮಾಡುವರು.
ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International