M’Cheyne Bible Reading Plan
ಇಸ್ರೇಲರಿಗೂ ಮತ್ತು ಬೆನ್ಯಾಮೀನ್ಯರಿಗೂ ಯುದ್ಧ
20 ಇಸ್ರೇಲಿನ ಜನರೆಲ್ಲರೂ ಒಟ್ಟುಗೂಡಿದರು. ಮಿಚ್ಛೆ ನಗರದಲ್ಲಿ ಯೆಹೋವನ ಎದುರಿಗೆ ನಿಲ್ಲುವುದಕ್ಕಾಗಿ ಅವರು ಒಂದು ಕಡೆ ಸೇರಿದ್ದರು. ಇಸ್ರೇಲಿನ ಎಲ್ಲ ಕಡೆಯಿಂದಲೂ ಜನರು ಬಂದರು. ಗಿಲ್ಯಾದಿನಲ್ಲಿದ್ದ ಇಸ್ರೇಲರು ಸಹ ಅಲ್ಲಿ ಬಂದಿದ್ದರು. 2 ಇಸ್ರೇಲಿನ ಎಲ್ಲ ಕುಲಾಧಿಪತಿಗಳು ಅಲ್ಲಿದ್ದರು. ಅವರು ದೈವಭಕ್ತರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಯುದ್ಧ ಸನ್ನದ್ಧರಾದ ನಾಲ್ಕು ಲಕ್ಷ ಜನರು ಅಲ್ಲಿದ್ದರು. 3 ಮಿಚ್ಛೆಯಲ್ಲಿ ಎಲ್ಲಾ ಇಸ್ರೇಲರು ಒಟ್ಟುಗೂಡುತ್ತಿದ್ದಾರೆ ಎಂಬ ಸಮಾಚಾರ ಬೆನ್ಯಾಮೀನ್ಯರಿಗೆ ತಿಳಿಯಿತು. ಇಸ್ರೇಲರು, “ಈ ಭಯಾನಕ ಕೃತ್ಯ ಹೇಗೆ ನಡೆಯಿತು. ಎಂಬುದನ್ನು ನಮಗೆ ಹೇಳು” ಎಂದು ಕೇಳಿದರು.
4 ಆಗ, ಕೊಲೆಗೀಡಾದ ಆ ಸ್ತ್ರೀಯ ಗಂಡನಾದ ಲೇವಿಯನು ನಡೆದ ಕಥೆಯನ್ನು ಹೇಳಿದನು. ಅವನು, “ನಾನೂ ನನ್ನ ಉಪಪತ್ನಿಯೂ ಬೆನ್ಯಾಮೀನ್ಯರ ಪ್ರದೇಶವಾದ ಗಿಬೆಯ ನಗರಕ್ಕೆ ಬಂದೆವು. ಅಲ್ಲಿ ಆ ರಾತ್ರಿ ಇಳಿದುಕೊಂಡೆವು. 5 ಆದರೆ ರಾತ್ರಿ ಸಮಯದಲ್ಲಿ ಗಿಬೆಯ ನಗರದ ಮುಖಂಡರು ಬಂದು ನಾವು ಇಳಿದುಕೊಂಡ ಮನೆಗೆ ಮುತ್ತಿಗೆ ಹಾಕಿದರು. ಅವರು ನನ್ನನ್ನು ಕೊಲ್ಲಬೇಕೆಂದಿದ್ದರು. ಅವರು ನನ್ನ ಉಪಪತ್ನಿಯ ಮೇಲೆ ಬಲಾತ್ಕಾರ ಮಾಡಿದರು; ಆಗ ಅವಳು ಸತ್ತುಹೋದಳು. 6 ಬಳಿಕ ನಾನು ನನ್ನ ಉಪಪತ್ನಿಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಇಸ್ರೇಲರ ಪ್ರತಿಯೊಂದು ಕುಲಕ್ಕೂ ಒಂದು ತುಂಡನ್ನು ಕಳುಹಿಸಿದೆ. ಹೀಗೆ ನಾವು ಪಡೆದುಕೊಂಡ ಪ್ರದೇಶಗಳಿಗೆ ಹನ್ನೆರಡು ತುಂಡುಗಳನ್ನು ಕಳುಹಿಸಿದೆ. ಇಸ್ರೇಲಿನಲ್ಲಿ ಬೆನ್ಯಾಮೀನ್ಯರು ಇಂಥ ಭಯಾನಕ ಕೃತ್ಯವನ್ನು ಮಾಡಿದ್ದಕ್ಕಾಗಿ ನಾನು ಇದನ್ನು ಮಾಡಿದೆ. 7 ಈಗ ಇಸ್ರೇಲಿನ ಜನರಾದ ನೀವೆಲ್ಲರು ಮಾತನಾಡಿರಿ. ನಾವು ಏನು ಮಾಡಬೇಕೆಂಬುದರ ಬಗ್ಗೆ ನಿಮ್ಮ ನಿರ್ಧಾರವನ್ನು ತಿಳಿಸಿರಿ” ಎಂದು ಕೇಳಿದನು.
8 ಆಗ ಎಲ್ಲಾ ಜನರು ಏಕಕಾಲದಲ್ಲಿ ಎದ್ದುನಿಂತರು. ಅವರೆಲ್ಲರು ಒಟ್ಟಾಗಿ, “ನಮ್ಮಲ್ಲಿ ಯಾರೂ ನಮ್ಮ ಸ್ಥಳಗಳಿಗೆ ಹಿಂದಿರುಗಿ ಹೋಗುವುದಿಲ್ಲ. ನಮ್ಮಲ್ಲಿ ಒಬ್ಬನಾದರೂ ತನ್ನ ಮನೆಗೆ ಹಿಂದಿರುಗಿ ಹೋಗುವುದಿಲ್ಲ. 9 ಈಗ ಗಿಬೆಯ ನಗರದ ಬಗ್ಗೆ ನಾವು ಚೀಟು ಹಾಕೋಣ. ಆ ಜನರಿಗೆ ಏನು ಮಾಡಬೇಕೆಂಬುದನ್ನು ದೇವರೇ ನಮಗೆ ತೋರಿಸಿಕೊಡಲಿ. 10 ನಾವು ಇಸ್ರೇಲಿನ ಎಲ್ಲ ಕುಲಗಳಲ್ಲಿ ಪ್ರತಿ ನೂರು ಮಂದಿಗೆ ಹತ್ತು ಮಂದಿಯನ್ನು ಆರಿಸಿಕೊಳ್ಳೋಣ. ಪ್ರತಿ ಸಾವಿರ ಮಂದಿಗೆ ನೂರು ಮಂದಿಯನ್ನು ಆರಿಸಿಕೊಳ್ಳೋಣ. ಪ್ರತಿ ಹತ್ತು ಸಾವಿರ ಮಂದಿಗೆ ಒಂದು ಸಾವಿರ ಮಂದಿಯನ್ನು ಆರಿಸಿಕೊಳ್ಳೋಣ. ಹೀಗೆ, ನಾವು ಆರಿಸಿಕೊಂಡ ಜನರು ಸೈನ್ಯಕ್ಕೆ ಆಹಾರ ಸರಬರಾಜು ಮಾಡಲಿ. ಆಮೇಲೆ ಬೆನ್ಯಾಮೀನ್ಯರ ಪ್ರದೇಶದಲ್ಲಿರುವ ಗಿಬೆಯಕ್ಕೆ ಸೈನ್ಯ ಕಳುಹಿಸೋಣ. ಇಸ್ರೇಲರಿಗೆ ಹೀಗೆ ನಿಂದೆಗೆ ಗುರಿಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ದೊರಕಲಿ” ಎಂದು ಹೇಳಿದರು.
11 ಇಸ್ರೇಲಿನ ಎಲ್ಲಾ ಜನರು ಗಿಬೆಯದಲ್ಲಿ ಸೇರಿದರು. ಅವರು ಏನು ಮಾಡಬೇಕೆಂಬುದನ್ನು ಒಮ್ಮತದಿಂದ ನಿರ್ಧರಿಸಿದರು. 12 ಇಸ್ರೇಲ್ ಕುಲದವರು ಬೆನ್ಯಾಮೀನ್ ಕುಲದವರಿಗೆ ಒಂದು ಸಂದೇಶವನ್ನು ದೂತನ ಮೂಲಕ ಕಳುಹಿಸಿದರು. ಆ ಸಂದೇಶ ಹೀಗಿತ್ತು: “ನಿಮ್ಮವರಾದ ಕೆಲವು ಜನರು ಮಾಡಿದ ಈ ದುಷ್ಕೃತ್ಯದ ಬಗ್ಗೆ ಏನು ಹೇಳುತ್ತೀರಿ. 13 ಆ ನೀಚರನ್ನು ಗಿಬೆಯದಿಂದ ನಮ್ಮಲ್ಲಿಗೆ ಕಳುಹಿಸಿಕೊಡಿ; ಅವರನ್ನು ನಮಗೆ ಒಪ್ಪಿಸಿರಿ. ನಾವು ಅವರನ್ನು ಕೊಲ್ಲಬೇಕು; ಇಸ್ರೇಲರ ಮಧ್ಯದಲ್ಲಿರುವ ಈ ಪಾಪಿಗಳನ್ನು ನಿರ್ಮೂಲ ಮಾಡಬೇಕು.”
ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳಾದ ಇಸ್ರೇಲರ ಸಂದೇಶವನ್ನು ಕೇಳಲಿಲ್ಲ. 14 ಬೆನ್ಯಾಮೀನ್ಯರು ತಮ್ಮ ನಗರಗಳನ್ನು ಬಿಟ್ಟು ಇಸ್ರೇಲಿನ ಬೇರೆ ಕುಲಗಳ ಜನರೊಂದಿಗೆ ಯುದ್ಧಮಾಡಲು ಗಿಬೆಯ ನಗರಕ್ಕೆ ಹೋದರು. 15 ಬೆನ್ಯಾಮೀನ್ ಕುಲದವರು ಇಪ್ಪತ್ತಾರು ಸಾವಿರ ಸೈನಿಕರನ್ನು ಒಟ್ಟುಗೂಡಿಸಿದರು. ಆ ಸೈನಿಕರೆಲ್ಲರು ಯುದ್ಧದ ತರಬೇತಿಯನ್ನು ಪಡೆದವರಾಗಿದ್ದರು. ಗಿಬೆಯ ನಗರದಲ್ಲಿಯೂ ಏಳುನೂರು ಜನರು ತರಬೇತಿ ಪಡೆದ ಸೈನಿಕರಾಗಿದ್ದರು. 16 ಇದಲ್ಲದೆ ಎಡಚರಾಗಿದ್ದ ಏಳುನೂರು ಮಂದಿ ಸೈನಿಕರು ಸಹ ಅಲ್ಲಿದ್ದರು. ಅವರು ಸಹ ತರಬೇತಿ ಪಡೆದವರಾಗಿದ್ದರು. ಅವರಲ್ಲಿ ಪ್ರತಿಯೊಬ್ಬನೂ ಕೂದಲೆಳೆಯಷ್ಟೂ ಗುರಿತಪ್ಪದೆ ಕವಣೆಯನ್ನು ಹೊಡೆಯುವದರಲ್ಲಿ ನಿಪುಣನಾಗಿದ್ದನು.
17 ಬೆನ್ಯಾಮೀನ್ಯರನ್ನು ಬಿಟ್ಟು ಉಳಿದೆಲ್ಲ ಇಸ್ರೇಲ್ ಕುಲಗಳವರು ಸೇರಿದ್ದರು. ಅವರಲ್ಲಿ ನಾಲ್ಕು ಲಕ್ಷ ಸೈನಿಕರಿದ್ದರು. ಈ ನಾಲ್ಕು ಲಕ್ಷ ಜನರ ಹತ್ತಿರ ಕತ್ತಿಗಳಿದ್ದವು. ಅವರಲ್ಲಿ ಪ್ರತಿಯೊಬ್ಬನು ತರಬೇತಿ ಪಡೆದ ಸೈನಿಕನಾಗಿದ್ದನು. 18 ಇಸ್ರೇಲಿನ ಜನರು ಬೇತೇಲಿಗೆ ಹೋದರು. ಬೇತೇಲಿನಲ್ಲಿ ಅವರು “ಯಾವ ಕುಲದವರು ಮೊದಲು ಬೆನ್ಯಾಮೀನ್ಯರ ಮೇಲೆ ಧಾಳಿಮಾಡಬೇಕು” ಎಂದು ಯೆಹೋವನನ್ನು ಕೇಳಿದರು.
ಅದಕ್ಕೆ ಯೆಹೋವನು, “ಯೆಹೂದ ಕುಲದವರು ಮೊದಲು ಹೋಗಬೇಕು” ಎಂದು ಉತ್ತರಿಸಿದನು.
19 ಮರುದಿನ ಬೆಳಿಗ್ಗೆ ಇಸ್ರೇಲರು ಎದ್ದು ಗಿಬೆಯ ನಗರದ ಹತ್ತಿರ ಪಾಳೆಯ ಮಾಡಿಕೊಂಡರು. 20 ಇಸ್ರೇಲರ ಸೈನ್ಯವು ಬೆನ್ಯಾಮೀನ್ಯರ ಸೈನ್ಯದೊಂದಿಗೆ ಯುದ್ಧಮಾಡಲು ಹೋಯಿತು. ಗಿಬೆಯದಲ್ಲಿ ಇಸ್ರೇಲರ ಸೈನ್ಯವು ಬೆನ್ಯಾಮೀನ್ಯರ ಸೈನ್ಯದೊಂದಿಗೆ ಯುದ್ಧಮಾಡಲು ಸಿದ್ಧವಾಯಿತು. 21 ಆಗ ಬೆನ್ಯಾಮೀನ್ಯರ ಸೈನ್ಯವು ಗಿಬೆಯ ನಗರದಿಂದ ಹೊರಗೆ ಬಂದಿತು. ಆ ದಿನದ ಯುದ್ಧದಲ್ಲಿ ಬೆನ್ಯಾಮೀನ್ಯರ ಸೈನ್ಯವು ಇಸ್ರೇಲ್ ಸೈನ್ಯದ ಇಪ್ಪತ್ತೆರಡು ಸಾವಿರ ಜನರನ್ನು ಕೊಂದುಹಾಕಿತು.
22-23 ಇಸ್ರೇಲರು ಯೆಹೋವನ ಬಳಿಗೆ ಹೋಗಿ ಸಾಯಂಕಾಲದವರೆಗೂ ಮೊರೆಯಿಟ್ಟರು. “ನಾವು ಮತ್ತೆ ಬೆನ್ಯಾಮೀನ್ಯರೊಡನೆ ಯುದ್ಧ ಮಾಡಲು ಹೋಗಬೇಕೇ? ಅವರು ನಮ್ಮ ಬಂಧುಗಳು” ಎಂದು ಅವರು ಯೆಹೋವನನ್ನು ಕೇಳಿದರು.
ಅದಕ್ಕೆ ಯೆಹೋವನು, “ಹೋಗಿರಿ, ಅವರ ವಿರುದ್ಧ ಯುದ್ಧ ಮಾಡಿರಿ” ಎಂದು ಉತ್ತರಿಸಿದನು. ಇಸ್ರೇಲರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿದರು. ಮೊದಲನೇ ದಿನದಂತೆ ಅವರು ಮತ್ತೊಮ್ಮೆ ಯುದ್ಧಕ್ಕೆ ಹೋದರು.
24 ಆಗ ಇಸ್ರೇಲರ ಸೈನ್ಯವು ಬೆನ್ಯಾಮೀನ್ಯರ ಸೈನ್ಯದ ಹತ್ತಿರಕ್ಕೆ ಬಂದಿತು. ಇದು ಯುದ್ಧದ ಎರಡನೆಯ ದಿನವಾಗಿತ್ತು. 25 ಎರಡನೆಯ ದಿನವೂ ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಸೈನ್ಯದ ಮೇಲೆ ಧಾಳಿಮಾಡಲು ಗಿಬೆಯ ಪಟ್ಟಣದಿಂದ ಹೊರಗೆ ಬಂತು. ಈ ಸಲ ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಹದಿನೆಂಟು ಸಾವಿರ ಜನರನ್ನು ಕೊಂದುಹಾಕಿತು. ಇಸ್ರೇಲ್ ಸೈನ್ಯದ ಆ ಜನರೆಲ್ಲಾ ತರಬೇತಿ ಪಡೆದ ಸೈನಿಕರಾಗಿದ್ದರು.
26 ಆಗ ಇಸ್ರೇಲಿನ ಜನರೆಲ್ಲರು ಬೇತೇಲಿಗೆ ಹೋದರು. ಅಲ್ಲಿ ಅವರು ಕುಳಿತುಕೊಂಡು ಯೆಹೋವನಿಗೆ ಮೊರೆಯಿಟ್ಟರು. ಅವರು ಸಾಯಂಕಾಲದವರೆಗೆ ಏನೂ ತಿನ್ನಲಿಲ್ಲ. ಇದಲ್ಲದೆ ಅವರು ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. 27 ಇಸ್ರೇಲರು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಿದರು. (ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಬೇತೇಲಿನಲ್ಲಿತ್ತು. 28 ಫೀನೆಹಾಸನು ಅಲ್ಲಿ ದೇವರ ಸೇವೆ ಮಾಡುವ ಯಾಜಕನಾಗಿದ್ದನು. ಫೀನೆಹಾಸನು ಎಲ್ಲಾಜಾರನ ಮಗನಾಗಿದ್ದನು. ಎಲ್ಲಾಜಾರನು ಆರೋನನ ಮಗನಾಗಿದ್ದನು.) ಇಸ್ರೇಲರು, “ಬೆನ್ಯಾಮೀನ್ಯರು ನಮ್ಮ ಬಂಧುಗಳು. ನಾವು ಅವರ ವಿರುದ್ಧ ಯುದ್ಧ ಮಾಡುವುದಕ್ಕೆ ಮತ್ತೆ ಹೋಗಬೇಕೇ? ಅಥವಾ ನಾವು ಯುದ್ಧ ಮಾಡುವುದನ್ನು ನಿಲ್ಲಿಸಿ ಬಿಡಬೇಕೇ?” ಎಂದು ಯೆಹೋವನನ್ನು ಕೇಳಿದರು.
“ಹೋಗಿರಿ, ನಾಳೆ ಅವರನ್ನು ಸೋಲಿಸಲು ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು ಯೆಹೋವನು ಉತ್ತರಕೊಟ್ಟನು.
29 ಆಗ ಇಸ್ರೇಲಿನ ಸೈನಿಕರು ಕೆಲವರನ್ನು ಗಿಬೆಯದ ಸುತ್ತಲೂ ಅಡಗಿಸಿಟ್ಟರು. 30 ಇಸ್ರೇಲಿನ ಸೈನಿಕರು ಮೂರನೆಯ ದಿನ ಗಿಬೆಯ ನಗರದವರ ವಿರುದ್ಧ ಯುದ್ಧಮಾಡಲು ಹೋದರು. ಅವರು ಮುಂಚಿನಂತೆ ಯುದ್ಧಕ್ಕೆ ಸಿದ್ಧರಾದರು. 31 ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಲು ಗಿಬೆಯ ನಗರದಿಂದ ಹೊರಗೆ ಬಂದಿತು. ಇಸ್ರೇಲಿನ ಸೈನಿಕರು ಹಿಮ್ಮೆಟ್ಟಿದರು; ಬೆನ್ಯಾಮೀನ್ಯರು ಅವರನ್ನು ಬೆನ್ನಟ್ಟಿದರು. ಈ ರೀತಿ ಬೆನ್ಯಾಮೀನ್ಯರ ಸೈನ್ಯವು ನಗರವನ್ನು ಬಿಟ್ಟು ಬಹಳ ದೂರಹೋಗುವಂತೆ ಮಾಡಿದರು.
ಬೆನ್ಯಾಮೀನ್ಯರ ಸೈನಿಕರು ಮುಂಚಿನಂತೆ ಕೆಲವು ಜನ ಇಸ್ರೇಲಿ ಸೈನಿಕರನ್ನು ಕೊಲ್ಲಲು ಆರಂಭಿಸಿದರು. ಅವರು ಸುಮಾರು ಮೂವತ್ತು ಜನ ಇಸ್ರೇಲರನ್ನು ಕೊಂದರು. ಅವರಲ್ಲಿ ಕೆಲವರನ್ನು ಹೊಲಗಳಲ್ಲಿ ಕೊಂದರು. ಒಂದು ದಾರಿ ಬೇತೇಲ್ ನಗರಕ್ಕೆ ಹೋಗುತ್ತಿತ್ತು. ಇನ್ನೊಂದು ದಾರಿ ಗಿಬೆಯಕ್ಕೆ ಹೋಗುತ್ತಿತ್ತು. 32 ಬೆನ್ಯಾಮೀನ್ಯರು, “ಮುಂಚಿನಂತೆ ನಾವು ಗೆಲ್ಲುತ್ತಿದ್ದೇವೆ” ಎಂದು ಭಾವಿಸಿದ್ದರು.
ಇಸ್ರೇಲಿನ ಜನರು ಓಡಿಹೋಗುತ್ತಿದ್ದರು. ಆದರೆ ಇದೊಂದು ತಂತ್ರವಾಗಿತ್ತು. ಅವರು ಬೆನ್ಯಾಮೀನ್ಯರನ್ನು ನಗರದಿಂದ ಬಹುದೂರ ಕರೆದುಕೊಂಡು ಹೋಗಬೇಕೆಂದಿದ್ದರು. 33 ಆದ್ದರಿಂದ ಎಲ್ಲರೂ ಓಡಿಹೋದರು. ಅವರು ಬಾಳ್‌ತಾಮರ್ ಎಂಬ ಸ್ಥಳದಲ್ಲಿ ನಿಂತರು. ಇಸ್ರೇಲಿನ ಕೆಲವು ಜನರು ಗಿಬೆಯದ ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಅವರು ತಾವು ಅಡಗಿದ್ದ ಸ್ಥಳಗಳಿಂದ ಓಡಿಹೋಗಿ ಗಿಬೆಯದ ಮೇಲೆ ಧಾಳಿಮಾಡಿದರು. 34 ಇಸ್ರೇಲಿನ ಹತ್ತು ಸಾವಿರ ಸೈನಿಕರು ಅಂದರೆ ತರಬೇತಿ ಪಡೆದ ಸೈನಿಕರು ಗಿಬೆಯ ನಗರದ ಮೇಲೆ ಧಾಳಿಮಾಡಿದರು. ಘೋರವಾದ ಯುದ್ಧ ನಡೆಯಿತು. ಆದರೆ ಇಂಥ ಭೀಕರ ಪರಿಸ್ಥಿತಿ ಉಂಟಾಗಬಹುದೆಂಬುದು ಬೆನ್ಯಾಮೀನ್ಯರಿಗೆ ತಿಳಿದಿರಲಿಲ್ಲ.
35 ಯೆಹೋವನು ಇಸ್ರೇಲಿನ ಸೈನ್ಯದಿಂದ ಬೆನ್ಯಾಮೀನ್ಯರ ಸೈನ್ಯವನ್ನು ಸೋಲಿಸಿದನು. ಆ ದಿನ ಇಸ್ರೇಲಿ ಸೈನಿಕರು ಬೆನ್ಯಾಮೀನ್ಯರ ಇಪ್ಪತೈದು ಸಾವಿರದ ನೂರು ಸೈನಿಕರನ್ನು ಕೊಂದುಹಾಕಿದರು. ಆ ಸೈನಿಕರೆಲ್ಲಾ ಯುದ್ಧದ ತರಬೇತಿ ಪಡೆದವರಾಗಿದ್ದರು. 36 ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು.
ಇಸ್ರೇಲರ ಸೈನಿಕರು ಹಿಮ್ಮೆಟ್ಟಿದ್ದರು. ಗಿಬೆಯದ ಹತ್ತಿರ ಅಡಗಿಕೊಂಡಿದ್ದ ತಮ್ಮ ಜನರು ಹಠಾತ್ ಧಾಳಿಮಾಡುವರೆಂದು ನಂಬಿ ಅವರು ಹಿಮ್ಮೆಟ್ಟಿದ್ದರು. 37 ಆಗ ಅಡಗಿಕೊಂಡಿದ್ದ ಜನರು ಗಿಬೆಯದ ನಗರಕ್ಕೆ ನುಗ್ಗಿದರು. ಅವರು ನಗರದ ಎಲ್ಲ ಕಡೆಗೂ ಹರಡಿ ಎಲ್ಲರನ್ನು ತಮ್ಮ ಕತ್ತಿಗಳಿಂದ ಕೊಂದುಹಾಕಿದರು. 38 ಇಸ್ರೇಲರು ಅಡಗಿಕೊಂಡಿದ್ದ ಜನರಿಗೆ ಒಂದು ಸಂಕೇತ ಕೊಡಬೇಕೆಂದು ತಿಳಿಸಿದ್ದರು. ಅಡಗಿಕೊಂಡಿದ್ದವರು ಬೆಂಕಿಹಚ್ಚಿ ಆಕಾಶಕ್ಕೆ ಹೊಗೆ ಏರುವಂತೆ ಮಾಡುವುದೇ ಆ ಸಂಕೇತ.
39-41 ಬೆನ್ಯಾಮೀನ್ಯರ ಸೈನಿಕರು ಸುಮಾರು ಮೂವತ್ತು ಜನ ಇಸ್ರೇಲಿ ಸೈನಿಕರನ್ನು ಕೊಂದುಹಾಕಿದ್ದರು. ಆದ್ದರಿಂದ ಬೆನ್ಯಾಮೀನ್ಯರು, “ನಾವು ಮುಂಚಿನಂತೆ ಗೆಲ್ಲುತ್ತಿದ್ದೇವೆ” ಎಂದು ಭಾವಿಸಿದ್ದರು. ಆಗ ನಗರದಿಂದ ಹೊಗೆಯು ಸ್ತಂಭದೋಪಾದಿಯಲ್ಲಿ ಮೇಲೇರುತ್ತಿತ್ತು. ಬೆನ್ಯಾಮೀನ್ಯರು ಹಿಂತಿರುಗಿ ನೋಡಿದಾಗ ಅವರಿಗೆ ಹೊಗೆ ಕಾಣಿಸಿತು. ಇಡೀ ನಗರವು ಉರಿಯುತ್ತಿತ್ತು. ಆಗ ಇಸ್ರೇಲರ ಸೈನಿಕರು ಓಡಿಹೋಗುವುದನ್ನು ನಿಲ್ಲಿಸಿ ಯುದ್ಧ ಮಾಡುವುದಕ್ಕೆ ಪ್ರಾರಂಭಿಸಿದರು. ಬೆನ್ಯಾಮೀನ್ಯರು ಅಂಜಿದರು. ಎಂಥ ಭಯಾನಕ ಪರಿಸ್ಥಿತಿ ಉಂಟಾಗಿದೆ ಎಂಬುದು ಈಗ ಅವರಿಗೆ ಗೊತ್ತಾಯಿತು.
42 ಬೆನ್ಯಾಮೀನ್ಯರ ಸೈನಿಕರು ಇಸ್ರೇಲ್ ಸೈನಿಕರಿಂದ ತಪ್ಪಿಸಿಕೊಂಡು ಓಡತೊಡಗಿದರು. ಅವರು ಮರುಭೂಮಿಯ ಕಡೆಗೆ ಓಡಿದರು. ಆದರೆ ಯುದ್ಧದಿಂದ ತಪ್ಪಿಸಿಕೊಳ್ಳುವುದು ಅವರಿಂದ ಆಗಲಿಲ್ಲ. ನಗರಗಳಿಂದ ಇಸ್ರೇಲರು ಹೊರಬಂದು ಅವರನ್ನು ಕೊಂದರು. 43 ಇಸ್ರೇಲರು ಬೆನ್ಯಾಮೀನ್ಯರನ್ನು ಮುತ್ತಿ ಅವರನ್ನು ಅಟ್ಟಿಕೊಂಡು ಹೋದರು. ಅವರನ್ನು ವಿಶ್ರಾಂತಿ ಪಡೆಯಲು ಬಿಡಲಿಲ್ಲ. ಅವರನ್ನು ಗಿಬೆಯದ ಪೂರ್ವಪ್ರದೇಶದಲ್ಲಿ ಸೋಲಿಸಿದರು. 44 ಬೆನ್ಯಾಮೀನ್ಯರ ಹದಿನೆಂಟು ಸಾವಿರ ಮಂದಿ ಶೂರ ಸೈನಿಕರು ಕೊಲೆಗೀಡಾದರು.
45 ಬೆನ್ಯಾಮೀನ್ಯರ ಸೈನಿಕರು ಹಿಂತಿರುಗಿ ಮರುಭೂಮಿಯ ಕಡೆಗೆ ಓಡಿದರು. ಅವರು ರಿಮ್ಮೋನ್ ಗಿರಿಯ ಕಡೆಗೆ ಓಡಿಹೋದರು. ಆದರೆ ಇಸ್ರೇಲಿ ಸೈನಿಕರು ದಾರಿಯ ಉದ್ದಕ್ಕೂ ಐದು ಸಾವಿರ ಬೆನ್ಯಾಮೀನ್ ಸೈನಿಕರನ್ನು ಕೊಂದುಹಾಕಿದರು. ಅವರು ಬೆನ್ಯಾಮೀನ್ಯರನ್ನು ಬೆನ್ನಟ್ಟುತ್ತಲೇ ಇದ್ದರು. ಅವರನ್ನು ಗಿದೋಮಿನವರೆಗೆ ಬೆನ್ನಟ್ಟಿಕೊಂಡು ಹೋದರು. ಅಲ್ಲಿ ಇಸ್ರೇಲ್ ಸೈನಿಕರು ಇನ್ನೂ ಎರಡು ಸಾವಿರ ಜನ ಬೆನ್ಯಾಮೀನ್ಯರನ್ನು ಕೊಂದುಹಾಕಿದರು.
46 ಆ ದಿನ ಬೆನ್ಯಾಮೀನ್ಯರ ಇಪ್ಪತ್ತೈದು ಸಾವಿರ ಜನ ಸೈನಿಕರು ಕೊಲ್ಲಲ್ಪಟ್ಟರು. ಅವರೆಲ್ಲರೂ ಕೈಯಲ್ಲಿ ಖಡ್ಗ ಹಿಡಿದು ಬಹಳ ಶೂರತನದಿಂದ ಯುದ್ಧ ಮಾಡಿದರು. 47 ಆದರೆ ಬೆನ್ಯಾಮೀನ್ಯರ ಆರುನೂರು ಜನರು ತಪ್ಪಿಸಿಕೊಂಡು ಮರುಭೂಮಿಗೆ ಓಡಿಹೋದರು. ಅವರು ರಿಮ್ಮೋನ್ ಗಿರಿ ಎಂಬ ಸ್ಥಳಕ್ಕೆ ಓಡಿಹೋದರು. ಅಲ್ಲಿ ಅವರು ನಾಲ್ಕು ತಿಂಗಳುಗಳವರೆಗೆ ಇದ್ದರು. 48 ಇಸ್ರೇಲರು ಬೆನ್ಯಾಮೀನ್ಯರ ಪ್ರದೇಶಕ್ಕೆ ಹಿಂತಿರುಗಿ ಹೋದರು. ಅವರು ಹೋದ ಪ್ರತಿಯೊಂದು ನಗರದಲ್ಲಿ ಅವರ ಎಲ್ಲ ಪಶುಗಳನ್ನು ಸಹ ಕೊಂದರು. ತಮ್ಮ ಕಣ್ಣಿಗೆ ಬಿದ್ದ ಎಲ್ಲವನ್ನೂ ಅವರು ನಾಶಮಾಡಿದರು. ಅವರು ಹೋದ ಪ್ರತಿಯೊಂದು ನಗರವನ್ನು ಸುಟ್ಟುಹಾಕಿದರು.
ಪೌಲನ ಮೇಲೆ ಯೆಹೂದ್ಯರ ದೋಷಾರೋಪಣೆ
24 ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು. 2 ಪೌಲನನ್ನು ಸಭೆಗೆ ಕರೆಸಲಾಯಿತು. ಆಗ ತೆರ್ತುಲ್ಲನು ತನ್ನ ಆಪಾದನೆಗಳನ್ನು ಹೊರಿಸಲಾರಂಭಿಸಿದನು:
“ಮಹಾರಾಜಶ್ರೀಗಳಾದ ಫೇಲಿಕ್ಸನೇ, ನಿನ್ನ ದೆಸೆಯಿಂದಾಗಿ ನಮ್ಮ ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಿನ್ನ ವಿವೇಕದ ಸಹಾಯದಿಂದ ನಮ್ಮ ದೇಶದ ಅನೇಕ ದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡಲಾಗಿದೆ. 3 ನಾವು ಇವುಗಳನ್ನು ಬಹು ಕೃತಜ್ಞತೆಯಿಂದ ಎಲ್ಲಾ ಸ್ಥಳಗಳಲ್ಲಿ ಯಾವಾಗಲೂ ಒಪ್ಪಿಕೊಳ್ಳುತ್ತೇವೆ. 4 ಆದರೆ ನಾನು ನಿನ್ನ ಸಮಯವನ್ನು ಇನ್ನೂ ಹೆಚ್ಚಿಗೆ ತೆಗೆದುಕೊಳ್ಳಬಯಸದೆ, ಕೆಲವೇ ಮಾತುಗಳಲ್ಲಿ ಹೇಳುವೆ. ದಯವಿಟ್ಟು ತಾಳ್ಮೆಯಿಂದಿರು. 5 ಈ ಮನುಷ್ಯನು (ಪೌಲನು) ಗಲಭೆ ಮಾಡುತ್ತಿದ್ದಾನೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಇವನು ಗಲಭೆಯನ್ನು ಎಬ್ಬಿಸುತ್ತಾನೆ. ಇವನು ‘ನಜರೇನ’ ಪಂಗಡದ ನಾಯಕನಾಗಿದ್ದಾನೆ. 6 ಅಲ್ಲದೆ, ಇವನು ದೇವಾಲಯವನ್ನು ಅಶುದ್ಧಗೊಳಿಸಲು ಪ್ರಯತ್ನಿಸಿದನು, ಆದರೆ ನಾವು ಇವನನ್ನು ತಡೆದೆವು. 7 [a] 8 ಸ್ವತಃ ನೀನೇ ಇವನಿಗೆ ಕೆಲವು ಪ್ರಶ್ನೆಗಳನ್ನು ಕೇಳು. ಆಗ ಈ ಸಂಗತಿಗಳೆಲ್ಲಾ ಸತ್ಯವಾಗಿವೆಯೋ ಇಲ್ಲವೋ ಎಂದು ನಿರ್ಣಯಿಸಲು ನಿನಗೆ ಸಾಧ್ಯವಾಗುವುದು.” 9 ಉಳಿದ ಯೆಹೂದ್ಯರು, “ಈ ಸಂಗತಿಗಳು ನಿಜವಾಗಿಯೂ ಸತ್ಯವಾದುವುಗಳು!” ಎಂದರು.
ಫೇಲಿಕ್ಸನ ಎದುರು ಪೌಲನ ಪ್ರತಿಪಾದನೆ
10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು. 11 ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ. 12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ. 13 ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.
14 “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ. 15 ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ. 16 ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.
17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು. 18 ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ. 19 ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು. 20 ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು. 21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”
22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.
ಫೇಲಿಕ್ಸ ಮತ್ತು ಅವನ ಪತ್ನಿಯ ಮುಂದೆ ಪೌಲನು
24 ಕೆಲವು ದಿನಗಳಾದ ಮೇಲೆ ಫೇಲಿಕ್ಸನು ತನ್ನ ಹೆಂಡತಿಯಾದ ದ್ರೂಸಿಲ್ಲಳೊಂದಿಗೆ ಬಂದನು. ಆಕೆ ಯೆಹೂದ್ಯಳು. ಫೇಲಿಕ್ಸನು ಪೌಲನನ್ನು ಕರೆಯಿಸಿದನು. ಕ್ರಿಸ್ತನಾದ ಯೇಸುವಿನಲ್ಲಿ ನಂಬಿಕೆ ಇಡುವುದರ ಬಗ್ಗೆ ಪೌಲನು ಹೇಳಿದ್ದನ್ನು ಅವನು ಆಲಿಸಿದನು. 25 ಆದರೆ ನೀತಿಯಬಾಳ್ವೆ, ಇಂದ್ರಿಯನಿಗ್ರಹ ಮತ್ತು ಮುಂದೆ ಬರಲಿರುವ ನ್ಯಾಯತೀರ್ಪುಗಳ ಬಗ್ಗೆ ಪೌಲನು ಮಾತಾಡಿದಾಗ ಅವನು ಭಯಗೊಂಡು, “ಈಗ ನೀನು ಹೋಗು! ನನಗೆ ಹೆಚ್ಚು ಸಮಯವಿರುವಾಗ ನಿನ್ನನ್ನು ಕರೆಯಿಸುತ್ತೇನೆ” ಎಂದು ಹೇಳಿದನು. 26 ಆದರೆ ಪೌಲನು ಲಂಚ ಕೊಡಬಹುದೆಂದು ಅವನು ನಿರೀಕ್ಷಿಸಿಕೊಂಡಿದ್ದರಿಂದ ಅವನು ಅನೇಕ ಸಲ ಪೌಲನನ್ನು ಕರೆಯಿಸಿ ಅವನೊಂದಿಗೆ ಮಾತಾಡಿದನು.
27 ಆದರೆ ಎರಡು ವರ್ಷಗಳ ನಂತರ ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ರಾಜ್ಯಪಾಲನಾದನು. ಆದರೆ ಫೇಲಿಕ್ಸನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.
ಯೆಹೂದದ ರಾಜನಾದ ಚಿದ್ಕೀಯನಿಗೆ ಒಂದು ಎಚ್ಚರಿಕೆ
34 ಯೆಹೋವನಿಂದ ಯೆರಮೀಯನಿಗೆ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಊರುಗಳ ವಿರುದ್ಧ ಯುದ್ಧ ಮಾಡುತ್ತಿದ್ದಾಗ ಈ ಸಂದೇಶ ಬಂದಿತು. ಆಗ ನೆಬೂಕದ್ನೆಚ್ಚರನ ಸಂಗಡ ಅವನ ಸಮಸ್ತ ಸೈನ್ಯವು ಮತ್ತು ಅವನ ಸಾಮ್ರಾಜ್ಯದಲ್ಲಿದ್ದ ಎಲ್ಲಾ ರಾಜ್ಯಗಳ ಮತ್ತು ಜನರ ಸೈನ್ಯವು ಇತ್ತು.
2 ಆ ಸಂದೇಶ ಹೀಗಿತ್ತು: “ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: ಯೆರೆಮೀಯನೇ, ಯೆಹೂದದ ರಾಜನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಈ ಸಂದೇಶವನ್ನು ತಿಳಿಸು. ‘ಚಿದ್ಕೀಯನೇ, ಯೆಹೋವನು ಹೀಗೆ ಹೇಳುತ್ತಾನೆ: ಅತಿ ಶೀಬ್ರದಲ್ಲಿ ನಾನು ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ; ಅವನು ಅದನ್ನು ಸುಟ್ಟುಬಿಡುತ್ತಾನೆ. 3 ಚಿದ್ಕೀಯನೇ, ನೀನು ಬಾಬಿಲೋನಿನ ರಾಜನಿಂದ ತಪ್ಪಿಸಿಕೊಳ್ಳಲಾರೆ. ನಿಶ್ಚಿತವಾಗಿ ನಿನ್ನನ್ನು ಹಿಡಿದು ಅವನಿಗೆ ಒಪ್ಪಿಸಲಾಗುವುದು. ಬಾಬಿಲೋನಿನ ರಾಜನನ್ನು ನೀನು ಪ್ರತ್ಯಕ್ಷವಾಗಿ ನೋಡುವೆ. ಅವನು ನಿನ್ನೊಂದಿಗೆ ಮುಖಾಮುಖಿಯಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಹೋಗುವೆ. 4 ಯೆಹೂದದ ರಾಜನಾದ ಚಿದ್ಕೀಯನೇ, ಯೆಹೋವನ ವಾಗ್ದಾನವನ್ನು ಕೇಳು. ಯೆಹೋವನು ನಿನ್ನ ಬಗ್ಗೆ ಹೀಗೆ ಹೇಳುತ್ತಾನೆ. ನಿನ್ನನ್ನು ಖಡ್ಗದಿಂದ ಕೊಲ್ಲಲಾಗುವುದಿಲ್ಲ. 5 ನೀನು ಸಮಾಧಾನದಿಂದ ಸಾಯುವೆ. ನೀನು ರಾಜನಾಗುವ ಮುನ್ನ ಆಳಿದ ನಿನ್ನ ಪೂರ್ವಿಕರಿಗೆ ಗೌರವ ತೋರುವದಕ್ಕಾಗಿ ಜನರು ಶವಸಂಸ್ಕಾರದ ಧೂಪವನ್ನು ಹಾಕಿದ್ದರು. ಹಾಗೆಯೇ ನಿನ್ನನ್ನು ಗೌರವಿಸಲು ಜನರು ಶವಸಂಸ್ಕಾರದ ಧೂಪವನ್ನು ಹಾಕುವರು. ಅವರು ನಿನಗೋಸ್ಕರ ಅಳುವರು. ಅವರು ದುಃಖದಿಂದ, “ಅಯ್ಯೋ, ಯೆಹೋವನೇ” ಎಂದು ಗೋಳಾಡುವರು. ಸ್ವತಃ ನಾನೇ ನಿನಗೆ ಈ ವಾಗ್ದಾನವನ್ನು ಮಾಡುತ್ತಿದ್ದೇನೆ.’” ಇದು ಯೆಹೋವನ ನುಡಿ.
6 ಆದ್ದರಿಂದ ಯೆರೆಮೀಯನು ಜೆರುಸಲೇಮಿನಲ್ಲಿದ್ದ ಚಿದ್ಕೀಯನಿಗೆ ಯೆಹೋವನ ಸಂದೇಶವನ್ನು ಕೊಟ್ಟನು. 7 ಆಗ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುತ್ತಿತ್ತು. ಬಾಬಿಲೋನಿನ ಸೈನ್ಯವು ತಾನು ಇನ್ನೂ ಸ್ವಾಧೀನಪಡಿಸಿಕೊಳ್ಳದ ಯೆಹೂದದ ನಗರಗಳ ವಿರುದ್ಧ ಕೂಡ ಹೋರಾಡುತ್ತಿತ್ತು. ಆ ಪಟ್ಟಣಗಳೆಂದರೆ ಲಾಕೀಷ್ ಮತ್ತು ಅಜೇಕ. ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ನಗರಗಳೆಂದರೆ ಇವೆರಡೇ.
ಜನರು ಒಡಂಬಡಿಕೆಯನ್ನು ಮುರಿದರು
8 ರಾಜನಾದ ಚಿದ್ಕೀಯನು ಜೆರುಸಲೇಮಿನ ಎಲ್ಲಾ ಜನರೊಂದಿಗೆ ಇಬ್ರಿಯದ ಗುಲಾಮರೆಲ್ಲರನ್ನೂ ಬಿಡುಗಡೆ ಮಾಡುವದಾಗಿ ಮಾತುಕೊಟ್ಟಿದ್ದನು. ಚಿದ್ಕೀಯನು ಹೀಗೆ ಮಾತುಕೊಟ್ಟ ತರುವಾಯ ಯೆಹೋವನಿಂದ ಯೆರೆಮೀಯನಿಗೆ ಒಂದು ಸಂದೇಶ ಬಂದಿತು. 9 ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ದಾಸದಾಸಿಯರನ್ನು ಬಿಡುಗಡೆ ಮಾಡಬೇಕಾಗಿತ್ತು. ಯೆಹೂದದ ಕುಲದ ಯಾರನ್ನೂ ಗುಲಾಮರನ್ನಾಗಿ ಇಟ್ಟುಕೊಳ್ಳುವಂತಿರಲಿಲ್ಲ. 10 ಆದ್ದರಿಂದ ಯೆಹೂದದ ಸಮಸ್ತ ಮುಖಂಡರು ಮತ್ತು ಎಲ್ಲಾ ಜನರು ತಮ್ಮ ದಾಸದಾಸಿಯರನ್ನು ಬಿಡುಗಡೆ ಮಾಡುವುದಾಗಿಯೂ ಅವರಿಂದ ಮುಂದೆ ಕೆಲಸ ಮಾಡಿಸುವದಿಲ್ಲ ಎಂಬುದಾಗಿಯೂ ಒಪ್ಪಿಕೊಂಡರು. ಆದ್ದರಿಂದ ಎಲ್ಲಾ ಗುಲಾಮರನ್ನು ಬಿಡುಗಡೆ ಮಾಡಲಾಯಿತು. 11 ಬಳಿಕ ಗುಲಾಮರನ್ನು ಇಟ್ಟುಕೊಂಡಿದ್ದ ಜನರು ತಮ್ಮ ಮನಸ್ಸನ್ನು ಬದಲಾಯಿಸಿ ತಾವು ಬಿಡುಗಡೆ ಮಾಡಿದ ಜನರನ್ನು ಪುನಃ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.
12 ಆಗ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: 13 ಯೆರೆಮೀಯನೇ, ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: “ನಾನು ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮ ಪೂರ್ವಿಕರನ್ನು ಅಲ್ಲಿಂದ ಹೊರತಂದೆನು. ನಾನು ಹಾಗೆ ಮಾಡಿದಾಗ ಅವರ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆ. 14 ನಾನು ನಿಮ್ಮ ಪೂರ್ವಿಕರಿಗೆ ‘ಪ್ರತಿ ಏಳು ವರ್ಷದ ಕೊನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಬೇಕು. ತನ್ನನ್ನು ನಿಮಗೆ ಮಾರಿಕೊಂಡ ಇಬ್ರಿಯ ಸಹೋದರ ನಿಮ್ಮಲ್ಲಿದ್ದರೆ ಅವನು ಆರು ವರ್ಷ ಸೇವೆಮಾಡಿದ ನಂತರ ಅವನನ್ನು ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ; ನನ್ನ ಕಡೆಗೆ ಗಮನ ಕೊಡಲಿಲ್ಲ. 15 ಸ್ವಲ್ಪಕಾಲದ ಹಿಂದೆ ನೀವು ನೀತಿಯುತವಾದದ್ದನ್ನು ಮಾಡಬೇಕೆಂದು ನಿಮ್ಮ ಮನಸ್ಸನ್ನು ಬದಲಾಯಿಸಿದಿರಿ. ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮಲ್ಲಿದ್ದ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಿದಿರಿ. ನೀವು ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಂದು ಒಡಂಬಡಿಕೆಯನ್ನು ಸಹ ಮಾಡಿಕೊಂಡಿರಿ. 16 ಆದರೆ ಈಗ ನೀವು ಮನಸ್ಸನ್ನು ಬದಲಾಯಿಸಿದ್ದೀರಿ. ನೀವು ನನ್ನ ಹೆಸರಿಗೆ ಗೌರವ ಕೊಡುವದಿಲ್ಲವೆಂಬುದನ್ನು ತೋರಿಸಿದ್ದೀರಿ. ನೀವು ಇದನ್ನು ಹೇಗೆ ಮಾಡಿದಿರಿ? ನಿಮ್ಮಲ್ಲಿ ಪ್ರತಿಯೊಬ್ಬರು ನೀವು ಬಿಡುಗಡೆ ಮಾಡಿದ ದಾಸದಾಸಿಯರನ್ನು ಹಿಂದಕ್ಕೆ ತೆಗೆದುಕೊಂಡಿರುವಿರಿ. ಅವರು ಪುನಃ ಗುಲಾಮರಾಗುವಂತೆ ಒತ್ತಾಯಿಸಿರುವಿರಿ.
17 “ಅದಕ್ಕಾಗಿ ಯೆಹೋವನು ಹೀಗೆನ್ನುತ್ತಾನೆ: ‘ನೀವು ನನ್ನ ಆಜ್ಞಾಪಾಲನೆಯನ್ನು ಮಾಡಿಲ್ಲ. ನೀವು ನಿಮ್ಮ ಸಹೋದರರಾದ ಇಬ್ರಿಯರಿಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ನೀವು ಒಡಂಬಡಿಕೆಗನುಸಾರವಾಗಿ ನಡೆದುಕೊಂಡಿಲ್ಲ. ಅದಕ್ಕಾಗಿ ನಾನು “ಸ್ವಾತಂತ್ರ್ಯವನ್ನು ಕೊಡುತ್ತೇನೆ.” ಇದು ಯೆಹೋವನ ನುಡಿ. ಖಡ್ಗ, ಭಯಂಕರವಾದ ವ್ಯಾಧಿ ಮತ್ತು ಹಸಿವು ಇವುಗಳಿಗೆ ನಿಮ್ಮನ್ನು ಕೊಲ್ಲುವ “ಸ್ವಾತಂತ್ರ್ಯವನ್ನು” ನಾನು ಕೊಡುತ್ತೇನೆ. ಈ ವಿಷಯ ಕೇಳಿ ಭೂಲೋಕದ ಸಮಸ್ತ ರಾಜ್ಯಗಳು ಭಯಪಡುವಂತೆ ಮಾಡುತ್ತೇನೆ. 18 ನನ್ನ ಒಡಂಬಡಿಕೆಯನ್ನು ಮುರಿದ ಮತ್ತು ನನ್ನ ಸಮ್ಮುಖದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಜನರನ್ನು ನಾನು ತ್ಯಜಿಸುವೆನು. ಇವರು ನನ್ನ ಮುಂದೆ ಒಂದು ಕರುವನ್ನು ಎರಡು ತುಂಡುಗಳಾಗಿ ಕತ್ತರಿಸಿ ಇಟ್ಟು ಆ ಎರಡು ತುಂಡುಗಳ ಮಧ್ಯದಿಂದ ಹಾದುಹೋದರು. 19 ಯೆಹೂದದ ಮತ್ತು ಜೆರುಸಲೇಮಿನ ನಾಯಕರು, ಪ್ರಮುಖ ಅಧಿಕಾರಿಗಳು, ಯಾಜಕರು ಮತ್ತು ದೇಶದ ಸಕಲ ಜನರು ಇವರೆಲ್ಲ ನನ್ನ ಮುಂದೆ ಒಡಂಬಡಿಕೆಯನ್ನು ಮಾಡಿದಾಗ ಕರುವಿನ ಶರೀರದ ಎರಡು ತುಂಡುಗಳ ಮಧ್ಯದಿಂದ ಹಾದುಹೋದರು. 20 ಆದ್ದರಿಂದ ನಾನು ಆ ಜನರನ್ನು ಅವರ ವೈರಿಗಳಿಗೆ ಮತ್ತು ಅವರನ್ನು ಕೊಲ್ಲಲು ಇಚ್ಛಿಸುವ ಪ್ರತಿಯೊಬ್ಬರಿಗೆ ಕೊಡುತ್ತೇನೆ. ಆ ಜನರ ದೇಹಗಳು ಗಾಳಿಯಲ್ಲಿ ಹಾರಾಡುವ ಪಕ್ಷಿಗಳಿಗೂ ಭೂಮಿಯ ಮೇಲಿನ ಕಾಡುಪ್ರಾಣಿಗಳಿಗೂ ಆಹಾರವಾಗುವವು. 21 ಯೆಹೂದದ ರಾಜನಾದ ಚಿದ್ಕೀಯನನ್ನೂ ಅವನ ನಾಯಕರುಗಳನ್ನೂ ನಾನು ಅವರ ಶತ್ರುಗಳಿಗೂ ಅವರನ್ನು ಕೊಲ್ಲಬಯಸುವ ಜನರಿಗೂ ಕೊಡುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋಗಿದ್ದರೂ ನಾನು ಚಿದ್ಕೀಯ ಮತ್ತು ಅವನ ಜನರನ್ನು ಬಾಬಿಲೋನಿನ ಸೈನಿಕರ ಕೈಗೆ ಒಪ್ಪಿಸುತ್ತೇನೆ. 22 ಬಾಬಿಲೋನಿನ ಸೈನ್ಯವು ಜೆರುಸಲೇಮಿಗೆ ಬರಬೇಕೆಂದು ನಾನು ಆಜ್ಞಾಪಿಸುತ್ತೇನೆ.’ ಇದು ಯೆಹೋವನ ನುಡಿ. ‘ಆ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುವುದು. ಅವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ಅದಕ್ಕೆ ಬೆಂಕಿಯಿಟ್ಟು ಸುಟ್ಟುಬಿಡುವರು. ನಾನು ಯೆಹೂದ ಪ್ರದೇಶದ ನಗರಗಳನ್ನು ನಾಶಮಾಡುವೆನು. ಆ ನಗರಗಳು ಬರಿದಾದ ಮರುಭೂಮಿಗಳಾಗುವವು. ಅಲ್ಲಿ ಯಾರೂ ವಾಸಮಾಡಲಾರರು.’”
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
9 ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.
ರಚನೆಗಾರ: ದಾವೀದ.
6 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
ರೋಷದಿಂದ ನನ್ನನ್ನು ದಂಡಿಸಬೇಡ.
2 ಯೆಹೋವನೇ, ನನ್ನನ್ನು ಕನಿಕರಿಸು!
ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
3 ನನ್ನ ಇಡೀ ದೇಹ ನಡುಗುತ್ತಿದೆ.
ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
4 ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
5 ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
ಆದ್ದರಿಂದ ನನ್ನನ್ನು ಗುಣಪಡಿಸು.
6 ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
7 ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.
8 ದುಷ್ಟರೇ, ತೊಲಗಿಹೋಗಿರಿ.
ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
9 ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.
10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.
Kannada Holy Bible: Easy-to-Read Version. All rights reserved. © 1997 Bible League International