M’Cheyne Bible Reading Plan
ಒಬ್ಬ ಲೇವಿ ಮತ್ತು ಅವನ ದಾಸಿ
19 ಆಗಿನ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿ ಒಬ್ಬ ಲೇವಿಯು ವಾಸಮಾಡುತ್ತಿದ್ದನು. ಆ ಮನುಷ್ಯನಿಗೆ ಒಬ್ಬ ಉಪಪತ್ನಿ ಇದ್ದಳು. ಅವಳು ಯೆಹೂದದ ಬೆತ್ಲೆಹೇಮಿನವಳಾಗಿದ್ದಳು. 2 ಒಮ್ಮೆ ಅವಳಿಗೂ ಆ ಲೇವಿಗೂ ಜಗಳವಾಯಿತು. ಅವಳು ಅವನನ್ನು ಬಿಟ್ಟು ಯೆಹೂದದ ಬೆತ್ಲೆಹೇಮಿನಲ್ಲಿದ್ದ ತನ್ನ ತಂದೆಯ ಮನೆಗೆ ಹೋದಳು. ಅವಳು ಅಲ್ಲಿ ನಾಲ್ಕು ತಿಂಗಳು ಇದ್ದುಬಿಟ್ಟಳು. 3 ಆಗ ಆಕೆಯ ಗಂಡನು ಅವಳ ಬಳಿಗೆ ಹೋದನು; ಅವಳೊಂದಿಗೆ ಪ್ರೀತಿಯಿಂದ ಮಾತನಾಡಿ ಅವಳನ್ನು ಕರೆದುಕೊಂಡು ಬರಬೇಕೆಂಬುದು ಅವನ ಆಲೋಚನೆಯಾಗಿತ್ತು. ಆದ್ದರಿಂದ ಅವನು ತನ್ನ ಸೇವಕನೊಡನೆ ಎರಡು ಕತ್ತೆಗಳನ್ನೂ ತೆಗೆದುಕೊಂಡು ಹೋದನು. ಆ ಲೇವಿಯನು ಆಕೆಯ ತಂದೆಯ ಮನೆಗೆ ಬಂದನು. ಅವಳ ತಂದೆಯು ಆ ಲೇವಿಯನನ್ನು ನೋಡಿ ಅವನನ್ನು ಸ್ವಾಗತಿಸಲು ಮನೆಯ ಹೊರಗೆ ಬಂದನು. ಅವಳ ತಂದೆಗೆ ಬಹಳ ಸಂತೋಷವಾಯಿತು. 4 ಅವಳ ತಂದೆಯು ಆ ಲೇವಿಯನನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ, ಅಲ್ಲೇ ಇರುವಂತೆ ಕೇಳಿಕೊಂಡನು. ಆದ್ದರಿಂದ ಆ ಲೇವಿಯು ಅಲ್ಲಿ ಮೂರು ದಿನ ಇದ್ದನು. ಅವನು ಅನ್ನಪಾನಮಾಡಿ ಮಾವನ ಮನೆಯಲ್ಲಿ ಮಲಗುತ್ತಿದ್ದನು.
5 ನಾಲ್ಕನೆಯ ದಿನ ಅವರು ಬೆಳಗಿನ ಜಾವ ಬೇಗ ಎದ್ದರು. ಆ ಲೇವಿಯು ಹೊರಡುವದಕ್ಕೆ ಸಿದ್ಧನಾಗುತ್ತಿದ್ದನು. ಆದರೆ ಮಾವನು ತನ್ನ ಅಳಿಯನಿಗೆ, “ಸ್ವಲ್ಪ ಊಟಮಾಡು; ಆಮೇಲೆ ಹೋಗುವಿಯಂತೆ” ಎಂದನು. 6 ಆದ್ದರಿಂದ ಆ ಲೇವಿಯು ಮತ್ತು ಅವನ ಮಾವನು ಒಟ್ಟಿಗೆ ಅನ್ನಪಾನಗಳನ್ನು ತೆಗೆದುಕೊಂಡರು. ಬಳಿಕ ಆ ಸ್ತ್ರೀಯ ತಂದೆಯು, “ದಯವಿಟ್ಟು ಈ ರಾತ್ರಿ ಇದ್ದುಬಿಡು. ವಿಶ್ರಮಿಸಿಕೋ, ಸಂತೋಷಪಡು” ಎಂದನು. 7 ಆದರೂ ಆ ಲೇವಿಯು ಹೊರಡುವುದಕ್ಕೆ ಎದ್ದನು. ಆದರೆ ಅವನ ಮಾವನು ಆ ರಾತ್ರಿಯೂ ಅಲ್ಲಿಯೇ ಇರುವಂತೆ ಒತ್ತಾಯ ಮಾಡಿದನು. 8 ಐದನೆಯ ದಿನ ಆ ಲೇವಿಯು ಬೆಳಗಿನ ಜಾವ ಬೇಗ ಎದ್ದು ಹೊರಡಲು ಸಿದ್ಧನಾಗಿದ್ದನು. ಆದರೆ ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಮೊದಲು ಊಟಮಾಡು; ವಿಶ್ರಾಂತಿ ತೆಗೆದುಕೋ. ಈ ರಾತ್ರಿ ಇಲ್ಲಿಯೇ ಇರು” ಎಂದು ಕೇಳಿಕೊಂಡನು. ಅವರಿಬ್ಬರು ಮತ್ತೆ ಊಟ ಮಾಡಿದರು.
9 ಆಮೇಲೆ ಆ ಲೇವಿಯೂ ಅವನ ಉಪಪತ್ನಿಯೂ ಅವನ ಆಳೂ ಹೊರಡಲು ಎದ್ದರು. ಆದರೆ ಆ ಸ್ತ್ರೀಯ ತಂದೆಯು, “ಈಗ ಕತ್ತಲಾಗುತ್ತಾ ಬಂತು, ಹೊತ್ತು ಮುಳುಗುವುದರಲ್ಲಿದೆ. ಈ ರಾತ್ರಿ ಇಲ್ಲಿಯೇ ಸಂತೋಷದಿಂದ ಕಾಲ ಕಳೆಯಿರಿ. ನಾಳೆ ಬೆಳಿಗ್ಗೆ ನೀವು ಬೇಗನೆ ಎದ್ದು ಪ್ರಯಾಣಮಾಡಬಹುದು” ಎಂದನು.
10 ಆದರೆ ಆ ಲೇವಿಯು ಇನ್ನೊಂದು ರಾತ್ರಿ ಅಲ್ಲಿ ಇರಲು ಇಷ್ಟಪಡಲಿಲ್ಲ. ಅವನು ತನ್ನ ಎರಡು ಕತ್ತೆಗಳನ್ನು ತೆಗೆದುಕೊಂಡು ಮತ್ತು ತನ್ನ ಉಪಪತ್ನಿಯನ್ನು ಕರೆದುಕೊಂಡು ಹೊರಟನು. ಅವನು ಜೆರುಸಲೇಮ್ ಎಂದು ಕರೆಯಲ್ಪಡುವ ಯೆಬೂಸ್ ನಗರದವರೆಗೆ ಪ್ರಯಾಣ ಮಾಡಿದನು. 11 ಹೊತ್ತು ಮುಳುಗುವುದರಲ್ಲಿತ್ತು. ಅವರು ಯೆಬೂಸ್ ನಗರದ ಹತ್ತಿರ ಬಂದಿದ್ದರು. ಆಗ ಅವನ ಸೇವಕನು ತನ್ನ ಒಡೆಯನಾದ ಆ ಲೇವಿಯನಿಗೆ, “ಈ ಯೆಬೂಸಿಯರ ನಗರದಲ್ಲಿ ಇದ್ದು ಬಿಡೋಣ, ಈ ರಾತ್ರಿ ಇಲ್ಲಿಯೇ ಕಳೆಯೋಣ” ಎಂದನು.
12 ಆದರೆ ಆ ಲೇವಿಯು, “ಬೇಡ, ನಾವು ಪರಿಚಯವಿಲ್ಲದವರ ನಗರದಲ್ಲಿ ಇರುವುದು ಬೇಡ. ಆ ಜನರು ಇಸ್ರೇಲರಲ್ಲ. ನಾವು ಗಿಬೆಯ ನಗರಕ್ಕೆ ಹೋಗೋಣ” ಎಂದನು. 13 ಆ ಲೇವಿಯು ಮತ್ತೆ ತನ್ನ ಸೇವಕನಿಗೆ, “ಬಾ ಹೋಗೋಣ, ಗಿಬೆಯದಲ್ಲಾಗಲಿ ಅಥವಾ ರಾಮದಲ್ಲಾಗಲಿ ಈ ರಾತ್ರಿ ಇಳಿದುಕೊಳ್ಳುವ ಪ್ರಯತ್ನ ಮಾಡೋಣ” ಎಂದು ಹೇಳಿದನು.
14 ಆ ಲೇವಿಯು ಮತ್ತು ಅವನ ಸಂಗಡ ಇದ್ದ ಜನರು ಪ್ರಯಾಣ ಮುಂದುವರಿಸಿದರು. ಅವರು ಗಿಬೆಯ ನಗರವನ್ನು ಪ್ರವೇಶ ಮಾಡಿದ ಸಮಯದಲ್ಲಿ ಸೂರ್ಯನು ಮುಳುಗುತ್ತಿದ್ದನು. ಗಿಬೆಯ ನಗರವು ಬೆನ್ಯಾಮೀನ್ಯರ ಪ್ರದೇಶದಲ್ಲಿದೆ. 15 ಅವರು ಗಿಬೆಯದಲ್ಲಿ ತಮ್ಮ ಪ್ರಯಾಣವನ್ನು ನಿಲ್ಲಿಸಿದರು. ಅಂದು ರಾತ್ರಿ ಆ ನಗರದಲ್ಲಿ ಇರುವುದಕ್ಕೆ ನಿರ್ಧಾರ ಮಾಡಿದರು. ಅವರು ನಗರದ ಬೀದಿಯ ಮುಖ್ಯಸ್ಥಳಕ್ಕೆ ಬಂದು ಅಲ್ಲಿ ಕುಳಿತುಕೊಂಡರು. ಯಾರೂ ಅವರನ್ನು ಆ ರಾತ್ರಿ ತಮ್ಮ ಮನೆಯಲ್ಲಿ ಇರಲು ಕರೆಯಲಿಲ್ಲ.
16 ಆ ಸಾಯಂಕಾಲ ಒಬ್ಬ ವೃದ್ಧನು ಹೊಲದಿಂದ ಮನೆಗೆ ಬರುತ್ತಿದ್ದನು. ಅವನು ಎಫ್ರಾಯೀಮ್ ಬೆಟ್ಟಪ್ರದೇಶದವನಾಗಿದ್ದು, ಈಗ ಗಿಬೆಯ ನಗರದಲ್ಲಿ ವಾಸಮಾಡುತ್ತಿದ್ದನು. (ಗಿಬೆಯದ ನಿವಾಸಿಗಳು ಬೆನ್ಯಾಮೀನ್ಯರಾಗಿದ್ದರು.) 17 ಆ ವೃದ್ಧನು ಬೀದಿಯ ಮುಖ್ಯಸ್ಥಳದಲ್ಲಿ ಪ್ರಯಾಣಿಕನನ್ನು (ಲೇವಿಯನ್ನು) ನೋಡಿದನು. ಆ ವೃದ್ಧನು, “ನೀನು ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದಿರುವೆ?” ಎಂದು ಅವನನ್ನು ಕೇಳಿದನು.
18 ಅದಕ್ಕೆ ಲೇವಿಯು, “ನಾವು ಯೆಹೂದದ ಬೆತ್ಲೆಹೇಮಿನಿಂದ ಹೊರಟಿದ್ದೇವೆ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ಮನೆಗೆ ಹೋಗುತ್ತಿದ್ದೇವೆ. ಆದರೆ ಈ ರಾತ್ರಿ ಇಲ್ಲಿ ತಂಗಲು ಯಾರೂ ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಲಿಲ್ಲ. ನಾನು ಯೆಹೂದದ ಬೆತ್ಲೆಹೇಮಿಗೆ ಹೋಗಿದ್ದೆ. ಈಗ ನಾನು ನಮ್ಮ ಮನೆಗೆ ಹೋಗುತ್ತಿದ್ದೇನೆ. 19 ನಮ್ಮ ಕತ್ತೆಗಳಿಗೆ ಮೇವು ಮತ್ತು ಹುಲ್ಲು ಇವೆ. ನನಗೂ ಈ ಸ್ತ್ರೀಗೂ ನನ್ನ ಸೇವಕನಿಗೂ ರೊಟ್ಟಿ ಮತ್ತು ದ್ರಾಕ್ಷಾರಸ ಇವೆ. ನಮಗೆ ಏನೂ ಬೇಕಾಗಿಲ್ಲ” ಎಂದು ಉತ್ತರಕೊಟ್ಟನು.
20 ಅದಕ್ಕೆ ಆ ವೃದ್ಧನು, “ನೀನು ನನ್ನ ಮನೆಗೆ ಬಂದು ಈ ರಾತ್ರಿ ಇಳಿದುಕೋ. ನಿನಗೆ ಬೇಕಾದುದನ್ನು ನಾನು ಕೊಡುವೆ. ನೀನು ಬೀದಿಯಲ್ಲಿ ಮಾತ್ರ ಇರಬೇಡ” ಎಂದು ಹೇಳಿದನು; 21 ಬಳಿಕ ಆ ವೃದ್ಧನು ಆ ಲೇವಿಯನನ್ನು ಮತ್ತು ಅವನ ಸಂಗಡ ಇದ್ದ ಜನರನ್ನು ತನ್ನ ಮನೆಗೆ ಕರೆದುಕೊಂಡು ಹೋದನು; ಅವರ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡರು. ಆಮೇಲೆ ಅವರು ಅನ್ನಪಾನಗಳನ್ನು ತೆಗೆದುಕೊಂಡರು.
22 ಲೇವಿಯು ಮತ್ತು ಅವನ ಸಂಗಡಿಗರು ಸಂತೋಷದಿಂದ ಅಲ್ಲಿದ್ದಾಗ ಆ ನಗರದ ಕೆಲವು ಜನರು ಆ ಮನೆಗೆ ಮುತ್ತಿಗೆ ಹಾಕಿದರು. ಅವರು ಮಹಾ ನೀಚಜನರಾಗಿದ್ದರು. ಅವರು ಬಾಗಿಲು ತಟ್ಟತೊಡಗಿದರು. ಆ ಮನೆಯ ಯಜಮಾನನಾದ ವೃದ್ಧನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ. ನಾವು ಅವನೊಂದಿಗೆ ಸಂಭೋಗ ಮಾಡಬೇಕು”ಎಂದು ಕೂಗಾಡಿದರು.
23 ಆ ವೃದ್ಧನು ಮನೆಯಿಂದ ಹೊರಗೆ ಬಂದು ಆ ನೀಚರ ಜೊತೆ ಮಾತನಾಡಿ, “ಬೇಡ, ನನ್ನ ಮಿತ್ರರೇ, ಅಂಥ ಪಾಪದ ಕೆಲಸವನ್ನು ಮಾಡಬೇಡಿ. ಆ ಮನುಷ್ಯ ನನ್ನ ಅತಿಥಿಯಾಗಿದ್ದಾನೆ. ಈ ಭಯಂಕರ ಪಾಪವನ್ನು ಮಾಡಬೇಡಿ. 24 ಇಲ್ಲಿ ನೋಡಿರಿ, ನನ್ನ ಮಗಳಿದ್ದಾಳೆ. ಅವಳು ಯಾರೊಂದಿಗೂ ಈವರೆಗೆ ಸಂಭೋಗ ಮಾಡಿಲ್ಲ. ನಾನು ಅವಳನ್ನೂ ಅವನ ಉಪಪತ್ನಿಯನ್ನೂ ಹೊರಗೆ ಕರೆದುಕೊಂಡು ಬರುತ್ತೇನೆ. ನಿಮ್ಮ ಮನಸ್ಸಿಗೆ ಬಂದಂತೆ ಅವರನ್ನು ಬಳಸಿಕೊಳ್ಳಿ. ನೀವು ಅವರನ್ನು ಹಿಂಸಿಸಿದರೂ ಆ ಮನುಷ್ಯನ ವಿರೋಧವಾಗಿ ಅಂಥ ಭಯಂಕರ ಪಾಪವನ್ನು ಮಾಡಬೇಡಿ” ಎಂದು ಅವರನ್ನು ಬೇಡಿಕೊಂಡನು.
25 ಆದರೆ ಆ ನೀಚರು ಆ ವೃದ್ಧನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಗ ಆ ಲೇವಿಯು ತನ್ನ ಉಪಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿ ಆ ನೀಚರಿಗೆ ಒಪ್ಪಿಸಿದನು. ಆ ನೀಚರು ಅವಳನ್ನು ಪೀಡಿಸಿ ಇಡೀ ರಾತ್ರಿ ಅವಳನ್ನು ಸಂಭೋಗಿಸಿದರು. ಬೆಳಗಿನ ಜಾವ ಅವಳನ್ನು ಹೋಗಲು ಬಿಟ್ಟರು. 26 ಬೆಳಗಿನ ಜಾವ ಅವಳು ತನ್ನ ಒಡೆಯನಿದ್ದ ಮನೆಗೆ ಬಂದಳು. ಅವಳು ಮನೆಯ ಮುಖ್ಯದ್ವಾರದಲ್ಲಿ ಬಿದ್ದುಬಿಟ್ಟಳು. ಬೆಳಗಾಗುವವರೆಗೂ ಅವಳು ಅಲ್ಲಿಯೇ ಬಿದ್ದಿದ್ದಳು.
27 ಆ ಲೇವಿಯನು ಮರುದಿನ ಬೆಳಿಗ್ಗೆ ಬೇಗ ಎದ್ದನು. ಅವನು ತನ್ನ ಮನೆಗೆ ಹೋಗಬೇಕೆಂದಿದ್ದನು. ಆದ್ದರಿಂದ ಹೊರಗೆ ಹೋಗಲು ಬಾಗಿಲು ತೆರೆದನು. ಬಾಗಿಲ ಮುಂದೆ ಹೊಸ್ತಿಲದ ಮೇಲೆ ಕೈಚಾಚಿ ಬಿದ್ದಿದ್ದ ತನ್ನ ಉಪಪತ್ನಿಯನ್ನು ಕಂಡನು. 28 ಆಗ ಲೇವಿಯು ಅವಳಿಗೆ, “ಏಳು, ಹೋಗೋಣ” ಎಂದು ಎಬ್ಬಿಸಿದನು. ಆದರೆ ಅವಳು ಉತ್ತರಕೊಡಲಿಲ್ಲ. ಅವಳು ಸತ್ತುಹೋಗಿದ್ದಳು.
ಆ ಲೇವಿಯು, ಅವಳನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ತನ್ನ ಮನೆಗೆ ಹೋದನು. 29 ಅವನು ಮನೆಗೆ ಬಂದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹನ್ನೆರಡು ಹೋಳಾಗಿ ಕತ್ತರಿಸಿದನು. ಆಮೇಲೆ ಅವನು ಆ ಸ್ತ್ರೀಯ ದೇಹದ ಹನ್ನೆರಡು ಹೋಳುಗಳನ್ನು ಇಸ್ರೇಲರು ವಾಸಮಾಡುವ ಎಲ್ಲ ಪ್ರದೇಶಗಳಿಗೆ ಕಳುಹಿಸಿಕೊಟ್ಟನು. 30 ಇದನ್ನು ನೋಡಿದ ಪ್ರತಿಯೊಬ್ಬರು, “ಈ ಮುಂಚೆ ಇಸ್ರೇಲಿನಲ್ಲಿ ಇಂಥದ್ದು ಆಗಿಲ್ಲ. ನಾವು ಈಜಿಪ್ಟಿನಿಂದ ಹೊರಬಂದಾಗಿನಿಂದ ಇಂಥದನ್ನು ನೋಡಿಲ್ಲ. ಇದಕ್ಕೆ ತಕ್ಕಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ” ಎಂದು ಅಂದುಕೊಂಡರು.
23 ಪೌಲನು ಯೆಹೂದ್ಯರ ನ್ಯಾಯಸಭೆಯನ್ನು ದೃಷ್ಟಿಸಿ ನೋಡಿ, “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಎಂದು ಹೇಳಿದನು. 2 ಪ್ರಧಾನಯಾಜಕನಾದ ಅನನೀಯನು ಅಲ್ಲಿದ್ದನು. ಪೌಲನು ಹೇಳಿದ್ದನ್ನು ಕೇಳಿದ ಅನನೀಯನು ಪೌಲನ ಪಕ್ಕದಲ್ಲಿ ನಿಂತಿದ್ದವರಿಗೆ ಪೌಲನ ಬಾಯಿಯ ಮೇಲೆ ಹೊಡೆಯಲು ಹೇಳಿದನು. 3 ಪೌಲನು ಅನನೀಯನಿಗೆ, “ದೇವರು ನಿನ್ನನ್ನು ಸಹ ಹೊಡೆಯುವನು! ಸುಣ್ಣ ಬಳಿದ ಗೋಡೆ ನೀನು! ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿ ನ್ಯಾಯತೀರ್ಪು ಮಾಡಲು ಅಲ್ಲಿ ಕುಳಿತುಕೊಂಡು ನನಗೆ ಹೊಡೆಯಲು ಅವರಿಗೆ ಹೇಳುತ್ತಿರುವೆಯಾ! ಮೋಶೆಯ ಧರ್ಮಶಾಸ್ತ್ರಕ್ಕೆ ಅದು ವಿರುದ್ಧವಾದದ್ದು” ಎಂದು ಹೇಳಿದನು.
4 ಪೌಲನ ಸಮೀಪದಲ್ಲಿ ನಿಂತಿದ್ದ ಜನರು ಅವನಿಗೆ, “ದೇವರ ಪ್ರಧಾನಯಾಜಕನಿಗೆ ನೀನು ಈ ರೀತಿ ಮಾತಾಡಕೂಡದು! ನೀನು ಅವನಿಗೆ ಅವಮಾನ ಮಾಡುತ್ತಿರುವೆ!” ಎಂದು ಹೇಳಿದರು.
5 ಪೌಲನು, “ಸಹೋದರರೇ, ಈ ಮನುಷ್ಯನು ಪ್ರಧಾನಯಾಜಕನೆಂದು ನನಗೆ ಗೊತ್ತಿರಲ್ಲಿಲ್ಲ. ‘ನಿಮ್ಮ ಜನನಾಯಕರ ಬಗ್ಗೆ ಕೆಟ್ಟಮಾತುಗಳುನ್ನು ಆಡಬಾರದು’(A) ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ” ಎಂದು ಹೇಳಿದನು.
6 ಸಭೆಯಲ್ಲಿದ್ದ ಜನರಲ್ಲಿ ಕೆಲವರು ಸದ್ದುಕಾಯರಾಗಿದ್ದರು; ಮತ್ತೆ ಕೆಲವರು ಫರಿಸಾಯರಾಗಿದ್ದರು. ಆದ್ದರಿಂದ ಪೌಲನು, “ನನ್ನ ಸಹೋದರರೇ, ನಾನು ಫರಿಸಾಯನು! ನನ್ನ ತಂದೆಯೂ ಫರಿಸಾಯನಾಗಿದ್ದನು! ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!” ಎಂದು ಕೂಗಿ ಹೇಳಿದನು.
7 ಪೌಲನು ಹೀಗೆ ಹೇಳಿದಾಗ, ಫರಿಸಾಯರಿಗೂ ಸದ್ದುಕಾಯರಿಗೂ ದೊಡ್ಡ ವಾಗ್ವಾದವಾಯಿತು. ಸಭೆಯಲ್ಲಿ ಭೇದ ಉಂಟಾಯಿತು. 8 (ಸತ್ತವರಿಗೆ ಪುನರುತ್ಥಾನವಿಲ್ಲ; ದೇವದೂತರುಗಳಾಗಲಿ ಆತ್ಮಗಳಾಗಲಿ ಇಲ್ಲವೇ ಇಲ್ಲ ಎಂಬುದು ಸದ್ದುಕಾಯರ ನಂಬಿಕೆ. ಫರಿಸಾಯರ ನಂಬಿಕೆ ಇದಕ್ಕೆ ತದ್ವಿರುದ್ಧವಾಗಿದೆ.) 9 ಈ ಯೆಹೂದ್ಯರೆಲ್ಲರೂ ಹೆಚ್ಚುಹೆಚ್ಚು ಗಟ್ಟಿಯಾಗಿ ಆರ್ಭಟಿಸಿತೊಡಗಿದರು. ಫರಿಸಾಯರ ಗುಂಪಿಗೆ ಸೇರಿದ್ದ ಕೆಲವು ಮಂದಿ ಧರ್ಮೋಪದೇಶಕರು ಎದ್ದುನಿಂತುಕೊಂಡು, “ಈ ಮನುಷ್ಯನಲ್ಲಿ ನಮಗೇನೂ ತಪ್ಪು ಕಂಡುಬರುತ್ತಿಲ್ಲ! ದಮಸ್ಕಕ್ಕೆ ಹೋಗುವ ದಾರಿಯಲ್ಲಿ ದೇವದೂತನಾಗಲಿ ಆತ್ಮವಾಗಲಿ ಅವನೊಂದಿಗೆ ಮಾತಾಡಿದ್ದಿರಬೇಕು!” ಎಂದು ವಾದಿಸಿದರು.
10 ಈ ವಾಗ್ವಾದವು ಜಗಳವಾಯಿತು. ಯೆಹೂದ್ಯರು ಪೌಲನನ್ನು ತುಂಡುತುಂಡು ಮಾಡುವರೆಂಬ ಭಯದಿಂದ ಸೇನಾಧಿಪತಿಯು ಸಿಪಾಯಿಗಳಿಗೆ, “ಕೆಳಗೆ ಇಳಿದುಹೋಗಿ ಪೌಲನನ್ನು ಯೆಹೂದ್ಯರ ಬಳಿಯಿಂದ ಕೊಂಡೊಯ್ದು ಸೈನ್ಯದ ಕೋಟೆಯೊಳಗೆ ಇರಿಸಿರಿ” ಎಂದು ಆಜ್ಞಾಪಿಸಿದನು.
11 ಮರುದಿನ ರಾತ್ರಿ ಪ್ರಭು ಯೇಸುವು ಬಂದು ಪೌಲನ ಬಳಿ ನಿಂತುಕೊಂಡು, “ಧೈರ್ಯದಿಂದಿರು! ನೀನು ನನ್ನ ಬಗ್ಗೆ ಜೆರುಸಲೇಮಿನ ಜನರಿಗೆ ತಿಳಿಸಿರುವೆ. ನೀನು ರೋಮಿಗೂ ಹೋಗಿ ಅಲ್ಲಿರುವ ಜನರಿಗೆ ನನ್ನ ಬಗ್ಗೆ ತಿಳಿಸಬೇಕು!” ಎಂದು ಹೇಳಿದನು.
ಪೌಲನನ್ನು ಕೊಲ್ಲಲು ಕೆಲವು ಯೆಹೂದ್ಯರ ಸಂಚು
12 ಮರುದಿನ ಮುಂಜಾನೆ ಯೆಹೂದ್ಯರಲ್ಲಿ ಕೆಲವರು, ತಾವು ಪೌಲನನ್ನು ಕೊಲ್ಲದ ಹೊರತು ಏನನ್ನೂ ತಿನ್ನುವುದಿಲ್ಲ ಮತ್ತು ಏನನ್ನೂ ಕುಡಿಯುವುದಿಲ್ಲ ಎಂಬುದಾಗಿ ಹರಕೆ ಮಾಡಿಕೊಂಡರು. 13 ಹೀಗೆ ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಹರಕೆ ಮಾಡಿಕೊಂಡಿದ್ದರು. 14 ಈ ಯೆಹೂದ್ಯರು ಮಹಾಯಾಜಕರ ಮತ್ತು ಯೆಹೂದ್ಯರ ಹಿರಿಯ ನಾಯಕರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂಬ ಕಠಿಣವಾದ ಹರಕೆ ಮಾಡಿಕೊಂಡಿದ್ದೇವೆ! 15 ಆದ್ದರಿಂದ ಈಗ ನೀವು ಮಾಡಬೇಕಾದದ್ದೇನೆಂದರೆ, ಸೇನಾಧಿಪತಿಗೂ ಎಲ್ಲಾ ಯೆಹೂದ್ಯ ನಾಯಕರಿಗೂ ಒಂದು ಸಂದೇಶವನ್ನು ಕಳುಹಿಸಿಕೊಡಿರಿ. ಪೌಲನಿಗೆ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಿರುವುದರಿಂದ ಪೌಲನನ್ನು ನಮ್ಮ ಬಳಿಗೆ ಕರೆದುಕೊಂಡು ಬರಬೇಕೆಂದು ಸೇನಾಧಿಪತಿಗೆ ತಿಳಿಸಿರಿ. ಪೌಲನು ಇಲ್ಲಿಗೆ ಬರುತ್ತಿರುವಾಗಲೇ ನಾವು ಮಾರ್ಗದಲ್ಲಿ ಕಾದುಕೊಂಡಿದ್ದು ಅವನನ್ನು ಕೊಲ್ಲುತ್ತೇವೆ” ಎಂದು ಹೇಳಿದರು.
16 ಆದರೆ ಈ ಯೋಜನೆಯ ಬಗ್ಗೆ ಪೌಲನ ಸೋದರಳಿಯನಿಗೆ ತಿಳಿಯಿತು. ಅವನು ಸೈನ್ಯದ ಕೋಟೆಯೊಳಗೆ ಹೋಗಿ ಈ ಯೋಜನೆಯ ಬಗ್ಗೆ ಪೌಲನಿಗೆ ತಿಳಿಸಿದನು. 17 ಆಗ ಪೌಲನು ಸೇನಾಧಿಕಾರಿಗಳಲ್ಲಿ ಒಬ್ಬನನ್ನು ಕರೆದು, “ಈ ಯೌವನಸ್ಥನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋಗು. ಇವನು ಒಂದು ಸಂದೇಶವನ್ನು ಅವನಿಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. 18 ಆದ್ದರಿಂದ ಸೇನಾಧಿಕಾರಿಯು ಪೌಲನ ಸೋದರಳಿಯನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋದನು. ಆ ಅಧಿಕಾರಿಯು ಸೇನಾಧಿಪತಿಗೆ, “ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗಬೇಕೆಂದು ಸೆರೆವಾಸದಲ್ಲಿರುವ ಪೌಲನು ನನ್ನನ್ನು ಕೇಳಿಕೊಂಡನು ಇವನು ನಿನಗೊಂದು ಸಂದೇಶವನ್ನು ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು.
19 ಸೇನಾಧಿಪತಿಯು ಆ ಯೌವನಸ್ಥನನ್ನು ಕೈಹಿಡಿದು ಏಕಾಂತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, “ನೀನು ಏನು ತಿಳಿಸಬೇಕೆಂದಿರುವೆ?” ಎಂದು ಕೇಳಿದನು.
20 ಆ ಯೌವನಸ್ಥನು, “ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಪೌಲನಿಗೆ ಕೇಳಬೇಕೆಂಬ ನೆವವನ್ನು ಹೇಳಿ ನಾಳೆಯ ಆಲೋಚನಾಸಭೆಗೆ ಪೌಲನನ್ನು ಕರೆದುಕೊಂಡುಬರಬೇಕೆಂದು ಯೆಹೂದ್ಯರು ನಿನ್ನನ್ನು ಕೇಳಿಕೊಳ್ಳಲು ನಿರ್ಧರಿಸಿದ್ದಾರೆ. 21 ಆದರೆ ಅವರನ್ನು ನಂಬಬೇಡ! ಪೌಲನನ್ನು ಕೊಲ್ಲುವುದಕ್ಕಾಗಿ ನಲವತ್ತಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಅಡಗಿಕೊಂಡು ಕಾಯುತ್ತಿದ್ದಾರೆ. ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂದು ಅವರೆಲ್ಲರೂ ಹರಕೆ ಮಾಡಿಕೊಂಡಿದ್ದಾರೆ! ಈಗ ಅವರು ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದನು.
22 ಸೇನಾಧಿಪತಿಯು ಯೌವನಸ್ಥನಿಗೆ, “ಅವರ ಯೋಜನೆಯ ಬಗ್ಗೆ ನೀನು ನನಗೆ ಹೇಳಿರುವುದಾಗಿ ಯಾರಿಗೂ ತಿಳಿಸಬೇಡ” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟನು.
ಪೌಲನನ್ನು ಸೆಜರೇಯಕ್ಕೆ ಕಳುಹಿಸಲಾಯಿತು
23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು. 24 ಪೌಲನ ಪ್ರಯಾಣಕ್ಕಾಗಿ ಕೆಲವು ಕುದುರೆಗಳನ್ನು ತೆಗೆದುಕೊ. ರಾಜ್ಯಪಾಲನಾದ ಫೇಲಿಕ್ಸನ ಬಳಿಗೆ ಅವನನ್ನು ಸುರಕ್ಷಿತವಾಗಿ ಕೊಂಡೊಯ್ಯಲೇಬೇಕು” ಎಂದು ಹೇಳಿದನು. 25 ಸೇನಾಧಿಪತಿಯು ಒಂದು ಪತ್ರವನ್ನೂ ಬರೆದನು. ಅದರಲ್ಲಿ ಹೀಗೆ ತಿಳಿಸಲಾಗಿತ್ತು:
26 ಕ್ಲಾಡಿಯ ಲೂಸಿಯನಿಂದ ಮಹಾರಾಜಶ್ರೀಗಳಾದ ರಾಜ್ಯಪಾಲ ಫೇಲಿಕ್ಸನಿಗೆ,
ವಂದನೆಗಳು.
27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲುವುದರಲ್ಲಿದ್ದರು. ಆದರೆ ಇವನು ರೋಮ್‌ನ ಪ್ರಜೆಯೆಂಬುದು ನನಗೆ ತಿಳಿಯಿತು. ಆದ್ದರಿಂದ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಕಾಪಾಡಿದೆನು. 28 ಅವರು ಇವನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆ ಕಾರಣವನ್ನು ತಿಳಿದುಕೊಳ್ಳಲು ನಾನು ನ್ಯಾಯಸಭೆಯ ಮುಂದೆ ನಿಲ್ಲಿಸಿದೆ. 29 ಅಲ್ಲಿ ನನಗೆ ತಿಳಿದುಬಂದದ್ದೇನೆಂದರೆ, ಪೌಲನು ದುಷ್ಕೃತ್ಯಗಳನ್ನು ಮಾಡಿದ್ದಾನೆಂದು ಯೆಹೂದ್ಯರು ಹೇಳಿದರೂ ಅವರ ಆಪಾದನೆಗಳು ಅವರ ಸ್ವಂತ ಯೆಹೂದ್ಯ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟದ್ದಾಗಿದ್ದವು. ಅಲ್ಲದೆ ಇವನನ್ನು ಸೆರೆಮನೆಗಾಗಲಿ ಮರಣದಂಡನೆಗಾಗಲಿ ಗುರಿಪಡಿಸಬಹುದಾದ ಯಾವ ಅಪರಾಧವೂ ಇರಲಿಲ್ಲ. 30 ಆದರೆ ಯೆಹೂದ್ಯರಲ್ಲಿ ಕೆಲವರು ಪೌಲನನ್ನು ಕೊಲ್ಲಲು ಯೋಜನೆ ಮಾಡುತ್ತಿರುವುದು ನನಗೆ ತಿಳಿಯಿತು. ಆದ್ದರಿಂದ ನಾನು ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ. ಅಲ್ಲದೆ ಅವನ ಮೇಲಿರುವ ದೂರುಗಳನ್ನು ನಿನಗೆ ತಿಳಿಸಬೇಕೆಂದು ನಾನು ಆಪಾದಕರಿಗೂ ಸಹ ತಿಳಿಸಿದ್ದೇನೆ.
31 ಸೇನಾಧಿಪತಿಯ ಆಜ್ಞೆಗನುಸಾರವಾಗಿ ಸೈನಿಕರು ಕಾರ್ಯವೆಸಗಿದರು. ಆ ರಾತ್ರಿ ಸೈನಿಕರು ಪೌಲನನ್ನು ಅಂತಿಪತ್ರಿಯ ಎಂಬ ಪಟ್ಟಣಕ್ಕೆ ಕರೆದುಕೊಂಡು ಹೋದರು. 32 ಮರುದಿನ ಅಶ್ವದಳದವರು ಪೌಲನೊಂದಿಗೆ ಸೆಜರೇಯ ಪಟ್ಟಣಕ್ಕೆ ಹೋದರು. ಆದರೆ ಉಳಿದ ಸೈನಿಕರು ಮತ್ತು ಭರ್ಜಿದಾರರು ಜೆರುಸಲೇಮಿನ ಸೈನ್ಯದ ಕೋಟೆಗೆ ಹಿಂತಿರುಗಿದರು. 33 ಅಶ್ವದಳದವರು ಸೆಜರೇಯ ಪಟ್ಟಣವನ್ನು ಪ್ರವೇಶಿಸಿ, ರಾಜ್ಯಪಾಲನಾದ ಫೇಲಿಕ್ಸನಿಗೆ ಪತ್ರವನ್ನು ಕೊಟ್ಟರು. ಬಳಿಕ ಅವರು ಪೌಲನನ್ನು ಅವನಿಗೆ ಒಪ್ಪಿಸಿದರು.
34 ರಾಜ್ಯಪಾಲನು ಪತ್ರವನ್ನು ಓದಿದನು. ಬಳಿಕ ಅವನು ಪೌಲನಿಗೆ, “ನೀನು ಯಾವ ದೇಶದವನು?” ಎಂದು ಕೇಳಿದಾಗ, ಸಿಲಿಸಿಯದವನೆಂಬುದು ತಿಳಿಯಿತು. 35 ರಾಜ್ಯಪಾಲನು, “ನಿನಗೆ ವಿರೋಧವಾಗಿರುವ ಯೆಹೂದ್ಯರು ಇಲ್ಲಿಗೆ ಬಂದಾಗ, ನಾನು ನಿನ್ನ ವಿಚಾರಣೆ ಮಾಡುತ್ತೇನೆ” ಎಂದು ಹೇಳಿದನು. ಬಳಿಕ ರಾಜ್ಯಪಾಲನು ಪೌಲನನ್ನು ಅರಮನೆಯೊಳಗೆ ಇರಿಸಬೇಕೆಂದು ಆಜ್ಞಾಪಿಸಿದನು. (ಈ ಕಟ್ಟಡವನ್ನು ಹೆರೋದನು ಕಟ್ಟಿಸಿದ್ದನು.)
ದೇವರ ವಾಗ್ದಾನ
33 ಎರಡನೇ ಬಾರಿ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಯೆರೆಮೀಯನು ಇನ್ನೂ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. 2 “ಯೆಹೋವನು ಭೂಮಿಯನ್ನು ಸೃಷ್ಟಿಸಿದನು. ಆತನೇ ಅದನ್ನು ಸುರಕ್ಷಿತವಾಗಿಡುವನು. ಯೆಹೋವನು ಹೀಗೆನ್ನುತ್ತಾನೆ: 3 ‘ಯೆಹೂದವೇ, ನನಗೆ ಪ್ರಾರ್ಥಿಸು. ಆಗ ನಾನು ನಿನಗೆ ಉತ್ತರಿಸುವೆನು. ನಾನು ನಿನಗೆ ಬಹು ಮುಖ್ಯವಾದ ರಹಸ್ಯಗಳನ್ನು ತಿಳಿಸುತ್ತೇನೆ. ಈ ಸಂಗತಿಗಳನ್ನು ನೀನು ಹಿಂದೆಂದೂ ಕೇಳಲಿಲ್ಲ. 4 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಜೆರುಸಲೇಮಿನಲ್ಲಿನ ಮನೆಗಳ ಬಗ್ಗೆಯೂ ಮತ್ತು ಯೆಹೂದದ ರಾಜರ ಅರಮನೆಗಳ ಬಗ್ಗೆಯೂ ಯೆಹೋವನು ಹೀಗೆ ಹೇಳುತ್ತಾನೆ. ವೈರಿಗಳು ಆ ಮನೆಗಳನ್ನು ಕೆಡವಿಬಿಡುತ್ತಾರೆ. ವೈರಿಗಳು ನಗರದ ಕೋಟೆಗೋಡೆಗಳ ತುದಿಯವರೆಗೂ ಇಳಿಜಾರಾದ ಗೋಡೆಗಳನ್ನು ಕಟ್ಟುತ್ತಾರೆ. ವೈರಿಗಳು ಖಡ್ಗ ಹಿಡಿದು ಈ ನಗರದ ಜನರೊಂದಿಗೆ ಕಾದಾಡುವರು.
5 “‘ಜೆರುಸಲೇಮಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ನಾನು ಅವರ ಮೇಲೆ ಕೋಪಗೊಂಡಿದ್ದೇನೆ; ಅವರಿಗೆ ವಿರುದ್ಧವಾಗಿದ್ದೇನೆ. ನಾನು ಅಲ್ಲಿ ಬಹಳ ಜನರನ್ನು ಕೊಂದುಹಾಕುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡಲು ಬರುವುದು. ಜೆರುಸಲೇಮಿನ ಮನೆಗಳಲ್ಲಿ ಅನೇಕಾನೇಕ ಮೃತದೇಹಗಳು ಕಣ್ಣಿಗೆ ಬೀಳುವವು.
6 “‘ಅನಂತರ ನಾನು ಆ ನಗರದ ಜನರನ್ನು ಕ್ಷಮಿಸುವೆನು. ಆ ಜನರು ಶಾಂತಿಯನ್ನೂ ಸುರಕ್ಷಣೆಯನ್ನೂ ಪಡೆಯುವಂತೆ ಮಾಡುವೆನು. 7 ಯೆಹೂದ ಮತ್ತು ಇಸ್ರೇಲುಗಳಿಗೆ ಮತ್ತೊಮ್ಮೆ ಒಳ್ಳೆಯದಾಗುವಂತೆ ಮಾಡುವೆನು. ಅವರನ್ನು ನಾನು ಮೊದಲಿನಂತೆ ಶಕ್ತಿಶಾಲಿಗಳನ್ನಾಗಿ ಮಾಡುವೆನು. 8 ಅವರು ನನ್ನ ವಿರುದ್ಧ ಪಾಪಗಳನ್ನು ಮಾಡಿದರೂ ಅವರ ಪಾಪಗಳನ್ನು ತೊಳೆದುಬಿಡುವೆನು. ಅವರು ನನ್ನ ವಿರುದ್ಧ ಕಾದಾಡಿದರೂ ಅವರನ್ನು ಕ್ಷಮಿಸುವೆನು. 9 ಆಗ ಜೆರುಸಲೇಮ್ ಒಂದು ಅದ್ಭುತವಾದ ಸ್ಥಳವಾಗುವುದು; ಜನರು ಸಂತೋಷದಿಂದಿರುವರು. ಅಲ್ಲಿ ನಡೆದ ಒಳ್ಳೆಯ ಸಂಗತಿಗಳ ಬಗ್ಗೆ ಕೇಳಿದಾಗ ಬೇರೆ ಜನಾಂಗಗಳ ಜನರು ಅದನ್ನು ಹೊಗಳುವರು; ವಿಸ್ಮಯಪಡುವರು. ನಾನು ಜೆರುಸಲೇಮಿಗೆ ಮಾಡುತ್ತಿರುವ ಒಳಿತಿನ ವಿಷಯವು ಅವರ ಕಿವಿಗೆ ಬೀಳುವುದು.’
10 “‘ನಮ್ಮ ದೇಶವು ಒಂದು ಬರಿದಾದ ಮರುಭೂಮಿಯಾಗಿದೆ. ಅಲ್ಲಿ ಜನರಾಗಲಿ ಪ್ರಾಣಿಗಳಾಗಲಿ ವಾಸಿಸುವದಿಲ್ಲ’ ಎಂದು ನೀವು ಹೇಳುತ್ತಿರುವಿರಿ. ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಊರುಗಳಲ್ಲಿ ಈಗ ಮೌನವಿದೆ. ಆದರೆ ಬೇಗನೆ ಅಲ್ಲಿ ಧ್ವನಿಕೇಳಿಸುವುದು. 11 ಅಲ್ಲಿ ಹರ್ಷದ ಮತ್ತು ಸಂತೋಷದ ಧ್ವನಿ ಕೇಳಿಬರುವುದು. ಅಲ್ಲಿ ವಧುವರರ ಸಂತೋಷದ ಧ್ವನಿ ಕೇಳಿಸುವುದು. ಜನರು ಯೆಹೋವನ ಆಲಯಕ್ಕೆ ತಮ್ಮ ಕಾಣಿಕೆಗಳನ್ನು ಅರ್ಪಿಸಲು ಬರುವ ಧ್ವನಿಯು ಕೇಳಿಸುವುದು. ಅವರು ‘ಸರ್ವಶಕ್ತನಾದ ಯೆಹೋವನನ್ನು ಸ್ತುತಿಸಿರಿ. ಆತನು ಒಳ್ಳೆಯವನು. ಆತನ ಕರುಣೆಯು ಶಾಶ್ವತವಾಗಿರುವುದು’ ಎಂದು ಹೇಳುವರು. ನಾನು ಯೆಹೂದಕ್ಕೆ ಪುನಃ ಸುಸ್ಥಿತಿಯನ್ನು ತರುವುದರಿಂದ ಜನರು ಹೀಗೆ ಹೇಳುವರು. ಅದು ಮೊದಲಿನಂತೆ ಆಗುವುದು.” ಯೆಹೋವನು ಈ ವಿಷಯಗಳನ್ನು ಹೇಳಿದನು.
12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಈ ಸ್ಥಳವು ಈಗ ಬರಿದಾಗಿದೆ. ಈಗ ಇಲ್ಲಿ ಜನರಾಗಲಿ ಪಶುಗಳಾಗಲಿ ವಾಸಿಸುವದಿಲ್ಲ. ಆದರೆ ಯೆಹೂದದ ಎಲ್ಲಾ ಊರುಗಳಲ್ಲಿ ಜನರು ವಾಸಿಸುವರು; ಕುರುಬರು ವಾಸಿಸುವರು. ಕುರಿಮಂದೆಗಳಿಗಾಗಿ ಹುಲ್ಲುಗಾವಲುಗಳಿರುವವು. 13 ಕುರಿಗಳು ತಮ್ಮ ಮುಂದೆ ನಡೆದುಕೊಂಡು ಹೋಗುವಾಗ ಕುರುಬರು ಅವುಗಳನ್ನು ಎಣಿಸುವರು. ಇಡೀ ದೇಶದಲ್ಲೆಲ್ಲ ಅಂದರೆ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶಗಳಲ್ಲಿಯೂ ನೆಗೆವ್ ಪ್ರದೇಶದಲ್ಲಿಯೂ ಯೆಹೂದದ ಎಲ್ಲಾ ಊರುಗಳಲ್ಲಿಯೂ ತಮ್ಮ ಕುರಿಗಳನ್ನು ಎಣಿಸುತ್ತಿರುವರು.”
ಉತ್ತಮ ಕೊಂಬೆ
14 ಇದು ಯೆಹೋವನ ನುಡಿ: “ನಾನು ಇಸ್ರೇಲಿನ ಮತ್ತು ಯೆಹೂದದ ಜನರಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದೆ. ನನ್ನ ವಾಗ್ದಾನವು ನೆರವೇರುವ ಸಮಯ ಬರುತ್ತಿದೆ. 15 ಆಗ ನಾನು ದಾವೀದನ ವಂಶದಿಂದ ಒಳ್ಳೆಯದಾದ ‘ಮೊಳಕೆಯೊಂದನ್ನು’ ಚಿಗುರಿಸುವೆನು. ಆ ಮೊಳಕೆಯು ದೇಶಕ್ಕೆ ಒಳ್ಳೆಯದನ್ನೂ ನೀತಿಯುತವಾದುದನ್ನೂ ಮಾಡುವುದು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಜೆರುಸಲೇಮಿನಲ್ಲಿ ಜನರು ಸುರಕ್ಷಿತರಾಗಿರುವರು. ಆ ‘ಮೊಳಕೆಯ’ ಹೆಸರು ‘ಯೆಹೋವನು ಒಳ್ಳೆಯವನು.’”[a]
17 ಯೆಹೋವನು ಹೀಗೆನ್ನುತ್ತಾನೆ: “ಯಾವಾಗಲೂ ದಾವೀದನ ವಂಶದವನೊಬ್ಬನು ಸಿಂಹಾಸನಾರೂಢನಾಗಿದ್ದುಕೊಂಡು ಇಸ್ರೇಲರನ್ನು ಆಳುವನು. 18 ಯಾವಾಗಲೂ ಲೇವಿವಂಶದವರೇ ಯಾಜಕರಾಗಿರುವರು. ಆ ಯಾಜಕರು ಸದಾಕಾಲ ನನ್ನ ಎದುರಿನಲ್ಲಿ ನಿಂತುಕೊಂಡು ಸರ್ವಾಂಗಹೋಮ, ಧಾನ್ಯಸಮರ್ಪಣೆ ಮತ್ತು ಯಜ್ಞಗಳನ್ನು ಮಾಡುವರು.”
19 ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು. 20 ಯೆಹೋವನು ಹೀಗೆ ಹೇಳಿದನು: “ಹಗಲು ಮತ್ತು ರಾತ್ರಿಗಳ ಜೊತೆ ನಾನೊಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವುಗಳು ಶಾಶ್ವತವಾಗಿ ಮುಂದುವರಿಯಲು ನಾನು ಒಪ್ಪಿಕೊಂಡಿದ್ದೇನೆ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಬಹುದಾದರೆ 21 ನೀವು ದಾವೀದನ ಮತ್ತು ಲೇವಿಯರ ಜೊತೆ ನಾನು ಮಾಡಿಕೊಂಡ ಒಡಂಬಡಿಕೆಯನ್ನೂ ಬದಲಾಯಿಸಬಹುದು. ಆಗ ದಾವೀದನ ವಂಶದವರು ರಾಜರಾಗಲಾರರು ಮತ್ತು ಲೇವಿಯರ ವಂಶದವರು ಯಾಜಕರಾಗಲಾರರು. 22 ಆದರೆ ನಾನು ನನ್ನ ಸೇವಕನಾದ ದಾವೀದನಿಗೂ ಲೇವಿಯರಿಗೂ ಅಸಂಖ್ಯಾತ ಸಂತಾನವನ್ನು ಕೊಡುತ್ತೇನೆ. ಅವರು ಆಕಾಶದ ನಕ್ಷತ್ರಗಳಂತೆಯೂ ಸಮುದ್ರದ ತೀರದ ಮರಳಿನಂತೆಯೂ ಅಸಂಖ್ಯಾತರಾಗುವರು.”
23 ಯೆರೆಮೀಯನು ಯೆಹೋವನಿಂದ ಈ ಸಂದೇಶವನ್ನು ಪಡೆದನು: 24 “ಯೆರೆಮೀಯನೇ, ಜನರು ಏನು ಹೇಳಿದರೆಂಬುದನ್ನು ಕೇಳಲಿಲ್ಲವೇ? ‘ಯೆಹೋವನು ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಎರಡು ಕುಟುಂಬಗಳನ್ನು ಆರಿಸಿಕೊಂಡನು; ಆದರೆ ಈಗ ಅವರನ್ನು ತಿರಸ್ಕರಿಸಿದ್ದಾನೆ.’ ಎಂದು ಅವರು ಹೇಳುತ್ತಿದ್ದಾರೆ. ಅನ್ಯಜನರು ನನ್ನ ಜನರನ್ನು ಎಷ್ಟು ದ್ವೇಷಿಸುತ್ತಾರೆಂದರೆ, ಅವರು ಒಂದು ಜನಾಂಗವಾಗಿ ಮುಂದುವರಿಯುವುದು ಅವರಿಗೆ ಇಷ್ಟವೇ ಇಲ್ಲ.”
25 ಯೆಹೋವನು ಹೀಗೆನ್ನುತ್ತಾನೆ: “ಹಗಲಿರುಳುಗಳ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆ ಸ್ಥಿರವಾಗಿಲ್ಲದಿದ್ದರೆ ಮತ್ತು ಭೂಮ್ಯಾಕಾಶಗಳಿಗೆ ನಾನು ಕಟ್ಟಳೆಗಳನ್ನೇ ವಿಧಿಸಿಲ್ಲದಿದ್ದರೆ 26 ಅವರನ್ನು ತ್ಯಜಿಸಬಹುದೇನೋ! ಯಾಕೋಬನ ಸಂತಾನದವರನ್ನು ತ್ಯಜಿಸಿ ದಾವೀದನ ವಂಶದವರು ಅಬ್ರಹಾಮ, ಇಸಾಕ ಮತ್ತು ಯಾಕೋಬರ ಸಂತತಿಯವರನ್ನು ಆಳದಂತೆ ಮಾಡಬಹುದೇನೋ! ಆದರೆ ದಾವೀದನು ನನ್ನ ಸೇವಕ. ನಾನು ಅವರಿಗೆ ಕರುಣೆ ತೋರೇ ತೋರುವೆನು; ಅವರಿಗೆ ಒಳ್ಳೆಯದಾಗುವಂತೆ ಮಾಡೇ ಮಾಡುವೆನು.”
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
3 ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ.
ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ.
2 ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ.
3 ಆದರೆ ಯೆಹೋವನೇ, ನೀನೇ ನನ್ನ ಗುರಾಣಿ.
ನೀನೇ ನನ್ನ ಗೌರವಕ್ಕೆ ಆಧಾರ.
ನನ್ನನ್ನು ಜಯವೀರನನ್ನಾಗಿ ಮಾಡು.
4 ನಾನು ಯೆಹೋವನಿಗೆ ಪ್ರಾರ್ಥಿಸಲು,
ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು.
5 ಯೆಹೋವನು ನನ್ನನ್ನು ಕಾಪಾಡುವುದರಿಂದ
ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು.
6 ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ
ನನಗೆ ಭಯವಿಲ್ಲ.
7 ಯೆಹೋವನೇ, ಎದ್ದೇಳು!
ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು!
ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ
ಅವರ ಹಲ್ಲುಗಳು ಉದುರಿಹೋಗುತ್ತವೆ.
8 ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು.
ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.
ರಚನೆಗಾರ: ದಾವೀದ.
4 ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು!
ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು!
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ
ಸುರಕ್ಷಿತ ಸ್ಥಳದಲ್ಲಿ ಸೇರಿಸು.
2 ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ?
ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?
3 ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ.
ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.
4 ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ.
ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
5 ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ;
ಯೆಹೋವನಲ್ಲಿಯೇ ಭರವಸೆಯಿಡಿರಿ!
6 “ನಮಗೆ ಒಳ್ಳೆಯದನ್ನು ಯಾರು ತೋರಿಸುವರು?
ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
7 ಧಾನ್ಯಯವೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
8 ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು.
ಯಾಕೆಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.
Kannada Holy Bible: Easy-to-Read Version. All rights reserved. © 1997 Bible League International