Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 18

ದಾನ್ಯರು ಲಯಿಷ್ ನಗರವನ್ನು ಸ್ವಾಧೀನಪಡಿಸಿಕೊಂಡರು

18 ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಆ ಸಮಯದಲ್ಲಿ ದಾನ್ ಕುಲದವರು ಇನ್ನೂ ತಮ್ಮ ವಾಸಕ್ಕಾಗಿ ಒಂದು ಸ್ಥಳವನ್ನು ಹುಡುಕುತ್ತಿದ್ದರು. ಇನ್ನೂ ಅವರಿಗೆ ತಮ್ಮದೇ ಆದ ಒಂದು ಪ್ರದೇಶವೂ ಇರಲಿಲ್ಲ. ಇಸ್ರೇಲಿನ ಬೇರೆ ಕುಲಗಳಿಗೆ ತಮ್ಮದೇ ಆದ ಪ್ರದೇಶ ಇತ್ತು. ಆದರೆ ದಾನ್ ಕುಲದವರು ಮಾತ್ರ ಇನ್ನೂ ತಮ್ಮ ಪ್ರದೇಶವನ್ನು ಹೊಂದಿಕೊಂಡಿರಲಿಲ್ಲ.

ದಾನ್ ಕುಲದವರು ತಮಗೆ ಭೂಮಿಯನ್ನು ಹುಡುಕುವುದಕ್ಕಾಗಿ ಐದು ಮಂದಿ ಸೈನಿಕರನ್ನು ಕಳುಹಿಸಿದರು. ಅವರು ತಮ್ಮ ವಾಸಕ್ಕಾಗಿ ಒಳ್ಳೆಯ ಸ್ಥಳವನ್ನು ಹುಡುಕಲು ಹೋದರು. ಆ ಐದು ಮಂದಿ ಚೊರ್ಗಾ ಮತ್ತು ಎಷ್ಟಾವೋಲ್ ನಗರದವರಾಗಿದ್ದರು. ಅವರು ದಾನ್ ಕುಲದವರ ಮನೆತನಕ್ಕೆ ಸೇರಿದವರಾದ ಕಾರಣ “ಭೂಮಿಯನ್ನು ಹುಡುಕಲು” ಅವರನ್ನು ಕಳುಹಿಸಲಾಗಿತ್ತು.

ಆ ಐದು ಜನರು ಎಫ್ರಾಯೀಮ್ ಬೆಟ್ಟದ ಸೀಮೆಗೆ ಬಂದು ಮೀಕನ ಮನೆಯಲ್ಲಿ ಇಳಿದುಕೊಂಡರು. ಆ ಐದು ಜನರು ಮೀಕನ ಮನೆಯ ಸಮೀಪಕ್ಕೆ ಬಂದಾಗ ತರುಣನಾಗಿದ್ದ ಲೇವಿಯ ಧ್ವನಿಯನ್ನು ಕೇಳಿ ಗುರುತಿಸಿದರು. ಆದ್ದರಿಂದ ಅವರು ಮೀಕನ ಮನೆಯಲ್ಲಿ ಇಳಿದುಕೊಂಡು ಆ ತರುಣನಿಗೆ, “ನಿನ್ನನ್ನು ಇಲ್ಲಿಗೆ ಯಾರು ಕರೆದುತಂದರು? ನೀನು ಇಲ್ಲಿ ಏನು ಮಾಡುತ್ತಿರುವೆ? ಇಲ್ಲಿ ನಿನ್ನ ಉದ್ಯೋಗವೇನು?” ಎಂದು ಕೇಳಿದರು.

ಮೀಕನು ತನಗಾಗಿ ಮಾಡಿದ ಎಲ್ಲಾ ವ್ಯವಸ್ಥೆಯನ್ನು ಅವರಿಗೆ ವಿವರಿಸಿ, “ನಾನು ಮೀಕನ ಯಾಜಕನಾಗಿ ಕೆಲಸ ಮಾಡುತ್ತಿದ್ದೇನೆ. ಅವನು ನನಗೆ ಸಂಬಳ ಕೊಡುತ್ತಾನೆ” ಎಂದು ಹೇಳಿದನು.

ಅವರು ಅವನಿಗೆ, “ವಾಸಕ್ಕಾಗಿ ಭೂಮಿಯನ್ನು ಹುಡುಕಲು ಕೈಕೊಂಡ ನಮ್ಮ ಪ್ರಯಾಣ ಸಫಲವಾಗುವುದೋ ಇಲ್ಲವೋ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ದೇವರಲ್ಲಿ ಈ ವಿಷಯ ಕೇಳು” ಎಂದು ಕೇಳಿಕೊಂಡರು.

ಆ ಯಾಜಕನು, “ಸಮಾಧಾನದಿಂದ ಹೋಗಿರಿ; ಯೆಹೋವನು ನಿಮಗೆ ಮಾರ್ಗದರ್ಶನ ಮಾಡುತ್ತಾನೆ” ಎಂದು ಉತ್ತರಿಸಿದನು.

ಆ ಐದು ಜನರು ಹೊರಟರು. ಅವರು ಲಯಿಷ್ ನಗರಕ್ಕೆ ಬಂದರು. ಅಲ್ಲಿಯ ಜನರು ಸುರಕ್ಷಿತವಾಗಿರುವುದನ್ನು ಅವರು ನೋಡಿದರು. ಚೀದೋನ್ಯರು ಅವರನ್ನು ಆಳುತ್ತಿದ್ದರು. ಎಲ್ಲವೂ ಶಾಂತವಾಗಿತ್ತು; ಸಮಾಧಾನಕರವಾಗಿತ್ತು; ಸುಖಕರವಾಗಿತ್ತು. ಸಮೀಪದಲ್ಲಿ ಅವರನ್ನು ಪೀಡಿಸುವ ಶತ್ರುಗಳು ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹಳ ದೂರ ಇದ್ದರು. ಅವರು ಆರಾಮಿನ ಜನರೊಡನೆ ಯಾವ ಒಪ್ಪಂದವನ್ನೂ ಇಟ್ಟುಕೊಂಡಿರಲಿಲ್ಲ.

ಆ ಐದು ಜನರು ಚೊರ್ಗಾ, ಎಷ್ಟಾವೋಲ್ ನಗರಗಳಿಗೆ ಹಿಂತಿರುಗಿಹೋದರು. ಅವರ ಬಂಧುಗಳು, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದು ಕೇಳಿದರು.

ಈ ಐದು ಜನ, “ನಾವು ಒಂದು ಪ್ರದೇಶವನ್ನು ಹುಡುಕಿದ್ದೇವೆ. ಅದು ಬಹಳ ಚೆನ್ನಾಗಿದೆ. ತಡಮಾಡುವುದು ಬೇಡ. ಬೇಗ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳೋಣ. 10 ನೀವು ಆ ಸ್ಥಳಕ್ಕೆ ಬಂದಮೇಲೆ ಅಲ್ಲಿ ಸಾಕಷ್ಟು ಭೂಮಿ ಇದೆ ಎಂಬುದನ್ನು ಅರಿತುಕೊಳ್ಳುತ್ತೀರಿ. ಅಲ್ಲಿ ಎಲ್ಲವೂ ಸಮೃದ್ಧಿಕರವಾಗಿದೆ. ಅಲ್ಲಿಯ ಜನರಿಗೆ ಶತ್ರುಗಳು ಧಾಳಿ ಮಾಡಬಹುದೆಂಬ ಭಯವೇ ಇಲ್ಲ. ಖಂಡಿತವಾಗಿಯೂ ದೇವರು ಆ ಭೂಮಿಯನ್ನು ನಮಗೆ ಕೊಟ್ಟಿದ್ದಾನೆ” ಎಂದು ಉತ್ತರಿಸಿದರು.

11 ದಾನ್ ಕುಲದವರ ಆರುನೂರು ಜನರು ಚೊರ್ಗಾ ಮತ್ತು ಎಷ್ಟಾವೋಲ್ ನಗರಗಳಿಂದ ಹೊರಟರು. ಅವರು ಯುದ್ಧ ಸನ್ನದ್ಧರಾಗಿದ್ದರು. 12 ಲಯಿಷ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಅವರು ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ನಿಂತುಕೊಂಡರು. ಅವರು ಅಲ್ಲಿ ಒಂದು ಪಾಳೆಯ ಮಾಡಿಕೊಂಡರು. ಆದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ “ದಾನ್ಯರ ಪಾಳೆಯ”ವೆಂಬ ಹೆಸರಿದೆ. 13 ಅಲ್ಲಿಂದ ಆ ಆರುನೂರು ಮಂದಿ ಎಫ್ರಾಯೀಮಿನ ಬೆಟ್ಟಪ್ರದೇಶಕ್ಕೆ ಪ್ರಯಾಣಮಾಡಿ ಮೀಕನ ಮನೆಗೆ ಬಂದರು.

14 ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದ ಐದು ಜನರು ತಮ್ಮ ಬಂಧುಗಳಿಗೆ, “ಇಲ್ಲಿಯ ಒಂದು ಮನೆಯಲ್ಲಿ ಏಫೋದ್ ಇದೆ; ಮನೆದೇವರುಗಳೂ ಇವೆ. ಕೆತ್ತಿ ಮಾಡಿರುವ ಒಂದು ವಿಗ್ರಹವೂ ಇದೆ. ಈಗ ನೀವು ಹೋಗಿ ಅವುಗಳನ್ನು ತೆಗೆದುಕೊಂಡು ಬನ್ನಿರಿ” ಎಂದು ಹೇಳಿದರು. 15 ಅವರು ಯೌವನಸ್ಥನಾದ ಲೇವಿಯು ಇದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು. ತರುಣನ ಯೋಗಕ್ಷೇಮವನ್ನು ಕೇಳಿದರು. 16 ದಾನ್ಯರ ಆರುನೂರು ಜನರು ಪುರದ್ವಾರದಲ್ಲಿ ನಿಂತಿದ್ದರು. ಅವರು ಆಯುಧಗಳನ್ನು ಹಿಡಿದುಕೊಂಡು ಯುದ್ಧ ಸನ್ನದ್ಧರಾಗಿದ್ದರು. 17-18 ಆ ಐದು ಜನ ಗೂಢಚಾರರು ಮನೆಯೊಳಗೆ ಪ್ರವೇಶ ಮಾಡಿದರು. ಯಾಜಕನು ಹೊರಗೆ ಬಾಗಿಲ ಬಳಿಯಲ್ಲಿ ಯುದ್ಧ ಸನ್ನದ್ಧರಾದ ಆರುನೂರು ಜನರ ಸಂಗಡ ನಿಂತಿದ್ದನು. ಆಗ ಆ ಐದು ಮಂದಿ ಮನೆಯೊಳಗೆ ಹೋಗಿ ಕೆತ್ತನೆಯ ವಿಗ್ರಹವನ್ನೂ ಏಫೋದನ್ನೂ ಬೆಳ್ಳಿವಿಗ್ರಹಗಳನ್ನೂ ಗೃಹದೇವತೆಗಳ ವಿಗ್ರಹಗಳನ್ನೂ ತೆಗೆದುಕೊಂಡರು. ಅವರನ್ನು ಕಂಡ ತರುಣ ಲೇವಿಯು, “ನೀವು ಏನು ಮಾಡುತ್ತಿದ್ದೀರಿ?” ಎಂದು ಕೇಳಿದನು.

19 ಆ ಐದು ಜನರು, “ಸುಮ್ಮನಿರು, ಶಬ್ದ ಮಾಡಬೇಡ. ನಮ್ಮ ಸಂಗಡ ಬಾ. ನಮಗೆ ತಂದೆಯೂ ಯಾಜಕನೂ ಆಗಿರು. ನೀನು ಕೇವಲ ಒಬ್ಬ ಮನುಷ್ಯನ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರೇಲರ ಒಂದು ಕುಲದ ಯಾಜಕನಾಗಿರುವುದು ಒಳ್ಳೆಯದೋ ಎಂಬುದನ್ನು ನೀನೇ ವಿಚಾರಮಾಡು” ಎಂದು ಉತ್ತರಿಸಿದರು.

20 ಇದರಿಂದ ಲೇವಿಯನಿಗೆ ಸಂತೋಷವಾಯಿತು. ಅವನು ಏಫೋದನ್ನೂ ಗೃಹದೇವತೆಗಳನ್ನೂ ಕೆತ್ತನೆಯ ಕೆಲಸದ ವಿಗ್ರಹವನ್ನೂ ತೆಗೆದುಕೊಂಡು ದಾನ್ಯರ ಜೊತೆಗೆ ಹೋದನು.

21 ಆಗ ದಾನ್ಯರ ಆರುನೂರು ಜನರು ಲೇವಿಯ ಯಾಜಕನೊಂದಿಗೆ ಮೀಕನ ಮನೆಯನ್ನು ಬಿಟ್ಟುಹೊರಟರು. ಅವರು ತಮ್ಮ ಹೆಂಡತಿಮಕ್ಕಳನ್ನೂ ತಮ್ಮ ದನಕರುಗಳನ್ನೂ ಎಲ್ಲಾ ವಸ್ತುಗಳನ್ನೂ ಮುಂದೆ ಕಳುಹಿಸಿದರು.

22 ಆ ಸ್ಥಳದಿಂದ ದಾನ್ಯರು ಬಹುದೂರ ಹೋದರು. ಮೀಕನೂ ಅವನ ನೆರೆಹೊರೆಯವರೆಲ್ಲರೂ ಒಂದೆಡೆ ಸೇರಿದರು. 23 ಅವರು ದಾನ್ಯರನ್ನು ಬೆನ್ನಟ್ಟಿಕೊಂಡು ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂತಿರುಗಿ ನೋಡಿ ಮೀಕನಿಗೆ, “ನಿನಗೇನಾಗಿದೆ? ಏಕೆ ಕೂಗಿಕೊಳ್ಳುತ್ತಿರುವೆ?” ಎಂದು ಕೇಳಿದರು.

24 ಮೀಕನು, “ದಾನ್ಯರಾದ ನೀವು ನನ್ನ ವಿಗ್ರಹಗಳನ್ನು ತೆಗೆದುಕೊಂಡಿದ್ದೀರಿ. ಆ ವಿಗ್ರಹಗಳನ್ನು ನಾನು ನನಗೋಸ್ಕರ ಮಾಡಿಸಿದ್ದೆ. ನೀವು ನನ್ನ ಯಾಜಕನನ್ನು ಸಹ ತೆಗೆದುಕೊಂಡಿದ್ದೀರಿ. ನನ್ನ ಹತ್ತಿರ ಈಗ ಏನು ಉಳಿದಿದೆ? ಹೀಗೆಲ್ಲ ಮಾಡಿ ನೀವು ನನಗೆ, ‘ನಿನಗೇನಾಗಿದೆ?’ ಎಂದು ಕೇಳಬಹುದೇ?” ಎಂದು ಉತ್ತರಕೊಟ್ಟನು.

25 ಅದಕ್ಕೆ ದಾನ್ಯರು, “ನೀನು ನಮ್ಮ ಜೊತೆ ವಾದವಿವಾದ ಮಾಡದಿರುವುದೇ ಒಳ್ಳೆಯದು. ನಮ್ಮಲ್ಲಿ ಬಹಳ ಸಿಟ್ಟಿನ ಕೆಲವರಿದ್ದಾರೆ. ನೀನು ಹೀಗೆ ಕೂಗಾಡಿದರೆ ಅವರು ನಿಮ್ಮ ಮೇಲೆ ಧಾಳಿ ಮಾಡಬಹುದು. ಆಗ ನೀನು ಮತ್ತು ನಿನ್ನ ಕುಟುಂಬದವರು ಸತ್ತು ಹೋಗುವಿರಿ” ಎಂದು ಪ್ರತ್ಯುತ್ತರ ಕೊಟ್ಟರು.

26 ಆಮೇಲೆ ದಾನ್ಯರು ಮತ್ತೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅವರು ತುಂಬ ಬಲಿಷ್ಠರೆಂದೂ ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲವೆಂದೂ ಮೀಕನು ತಿಳಿದುಕೊಂಡು ಮನೆಗೆ ಹಿಂದಿರುಗಿದನು.

27 ಮೀಕನು ಮಾಡಿಸಿದ ವಿಗ್ರಹಗಳನ್ನು ದಾನ್ಯರು ತೆಗೆದುಕೊಂಡರು. ಅವರು ಮೀಕನ ಜೊತೆಗಿದ್ದ ಯಾಜಕನನ್ನು ಸಹ ತೆಗೆದುಕೊಂಡು ಹೋದರು. ಅವರು ಲಯಿಷಿಗೆ ಬಂದು ಅಲ್ಲಿನ ಜನರ ಮೇಲೆ ಧಾಳಿಮಾಡಿದರು. ಆ ಜನರು ಶಾಂತಿಯಿಂದ ಇದ್ದರು. ಅವರು ಧಾಳಿಯನ್ನು ನಿರೀಕ್ಷಿಸಿರಲಿಲ್ಲ. ದಾನ್ಯರು ತಮ್ಮ ಖಡ್ಗಗಳಿಂದ ಆ ಜನರನ್ನು ಕೊಂದುಹಾಕಿದರು. ಆಮೇಲೆ ಆ ನಗರವನ್ನು ಸುಟ್ಟುಬಿಟ್ಟರು. 28 ಲಯಿಷಿನಲ್ಲಿ ವಾಸಮಾಡುತ್ತಿದ್ದ ಜನರನ್ನು ರಕ್ಷಿಸುವವರು ಯಾರೂ ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹುದೂರದಲ್ಲಿದ್ದ ಕಾರಣ ಅವರೂ ಬರುವಂತಿರಲಿಲ್ಲ. ಲಯಿಷಿನವರು ಆರಾಮಿನ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಅವರೂ ಸಹಾಯಕ್ಕೆ ಬರಲಿಲ್ಲ. ಬೇತ್‌ರೆಹೋಬಿನ ಕಣಿವೆಯಲ್ಲಿದ್ದ ಈ ನಗರವನ್ನು ದಾನ್ಯರು ಹೊಸದಾಗಿ ಕಟ್ಟಿದರು. ಆ ನಗರವು ಅವರ ವಾಸಸ್ಥಾನವಾಯಿತು. 29 ದಾನ್ಯರು ಆ ನಗರಕ್ಕೆ ಒಂದು ಹೊಸ ಹೆಸರನ್ನು ಕೊಟ್ಟರು. ಹಿಂದೆ ಅದರ ಹೆಸರು ಲಯಿಷ್ ಎಂದಿತ್ತು. ಆದರೆ ಅವರು ಅದಕ್ಕೆ ದಾನ್ ಎಂದು ಹೆಸರಿಟ್ಟರು. ಅವರು ತಮ್ಮ ಪೂರ್ವಿಕನಾದ ದಾನನ ಸ್ಮರಣಾರ್ಥವಾಗಿ ಆ ಹೆಸರನ್ನಿಟ್ಟರು. ದಾನನು ಇಸ್ರೇಲನ ಮಕ್ಕಳಲ್ಲಿ ಒಬ್ಬನು.

30 ದಾನ್ಯರು ದಾನ್ ನಗರದಲ್ಲಿ ಆ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಅವರು ಗೇರ್ಷೋಮನ ಮಗನಾದ ಯೆಹೋನಾತಾನನನ್ನು ತಮ್ಮ ಯಾಜಕನನ್ನಾಗಿ ಮಾಡಿಕೊಂಡರು. ಗೇರ್ಷೋಮನು ಮೋಶೆಯ[a] ಮಗನಾಗಿದ್ದನು. ಇಸ್ರೇಲರನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗುವವರೆಗೆ ಯೆಹೋನಾತಾನನು ಮತ್ತು ಅವನ ಮಕ್ಕಳು ದಾನ್ಯರ ಯಾಜಕರಾಗಿದ್ದರು. 31 ಮೀಕನು ಮಾಡಿದ್ದ ಆ ವಿಗ್ರಹಗಳನ್ನು ದಾನ್ಯರು ಪೂಜಿಸಿದರು. ಶೀಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ಅವರು ಆ ವಿಗ್ರಹಗಳನ್ನು ಪೂಜಿಸಿದರು.

ಅಪೊಸ್ತಲರ ಕಾರ್ಯಗಳು 22

ಪೌಲನ ಜನರೊಂದಿಗೆ ಮಾತಾಡಿದ್ದು

22 ಪೌಲನು, “ನನ್ನ ಸಹೋದರರೇ, ನನ್ನ ತಂದೆಗಳೇ, ನನ್ನ ಪ್ರತಿವಾದವನ್ನು ಕೇಳಿರಿ!” ಎಂದನು.

ಪೌಲನು ಯೆಹೂದ್ಯರ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿ ಯೆಹೂದ್ಯರು ಮತ್ತಷ್ಟು ನಿಶಬ್ಧರಾದರು.

ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ. ಯೇಸುವಿನ ಮಾರ್ಗವನ್ನು ಯಾರು ಹಿಂಬಾಲಿಸುತ್ತಾರೋ ಅವರನ್ನು ನಾನು ಹಿಂಸಿಸಿದೆನು. ನನ್ನ ದೆಸೆಯಿಂದ ಅವರಲ್ಲಿ ಕೆಲವರು ಕೊಲ್ಲಲ್ಪಟ್ಟರು. ನಾನು ಪುರುಷರನ್ನು ಮತ್ತು ಸ್ತ್ರೀಯರನ್ನು ಬಂಧಿಸಿ ಸೆರೆಮನೆಗೆ ಹಾಕಿದೆನು.

“ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ಈ ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ.

ಪೌಲನ ತನ್ನ ಮನಪರಿವರ್ತನೆಯ ಸಾಕ್ಷಿಯ ಕುರಿತು ಹೇಳಿಕೆ

“ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು. ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು.

“ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ಆ ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು. ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು.

10 “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು. 11 ಪ್ರಕಾಶಮಾನವಾದ ಆ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಆ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು.

12 “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು. 13 ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಆ ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು.

14 “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು. 15 ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ. 16 ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು.

17 “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. 18 ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಈ ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು.

19 “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ. 20 ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು.

21 “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.”

22 ಪೌಲನು ಈ ಕೊನೆಯ ಸಂಗತಿಯನ್ನು ಅಂದರೆ ಯೆಹೂದ್ಯರಲ್ಲದವರ ಬಳಿಗೆ ಹೋಗುವುದರ ಬಗ್ಗೆ ಹೇಳಿದಾಗ ಅವರು ಅವನ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿ, “ಅವನನ್ನು ಕೊಲ್ಲಿರಿ! ಅವನನ್ನು ಪ್ರಪಂಚದಿಂದ ತೊಲಗಿಸಿರಿ! ಇಂಥ ಮನುಷ್ಯನಿಗೆ ಜೀವಿಸಲು ಅವಕಾಶವನ್ನೇ ಕೊಡಕೂಡದು!” ಎಂದು ಕೂಗಿದರು. 23 ಅವರು ಬೊಬ್ಬೆಹಾಕಿದರು; ತಮ್ಮ ಮೇಲಂಗಿಗಳನ್ನು ಬಿಚ್ಚಿ ಬೀಸಿದರು; ಧೂಳನ್ನು ಮೇಲಕ್ಕೆ ತೂರಿದರು. 24 ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ಈ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು. 25 ಸೈನಿಕರು ಹೊಡೆಯುವುದಕ್ಕಾಗಿ ಪೌಲನನ್ನು ಕಟ್ಟುತ್ತಿರಲು ಅಲ್ಲಿದ್ದ ರೋಮ್ ಅಧಿಕಾರಿಗೆ ಪೌಲನು, “ಅಪರಾಧಿಯೆಂದು ತೀರ್ಪಾಗಿಲ್ಲದ ರೋಮ್ ಪ್ರಜೆಯೊಬ್ಬನನ್ನು ಹೊಡೆಯಲು ನಿಮಗೆ ಹಕ್ಕಿದೆಯೋ?” ಎಂದು ಕೇಳಿದನು.

26 ಆ ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಈ ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು.

27 ಸೇನಾಧಿಪತಿಯು ಪೌಲನ ಬಳಿಗೆ ಬಂದು, “ಹೇಳು, ನೀನು ನಿಜವಾಗಿಯೂ ರೋಮಿನ ಪ್ರಜೆಯೋ?” ಎಂದು ಕೇಳಿದನು.

ಪೌಲನು, “ಹೌದು” ಎಂದು ಉತ್ತರಕೊಟ್ಟನು.

28 ಸೇನಾಧಿಪತಿಯು, “ನಾನು ರೋಮಿನ ಪ್ರಜೆಯಾಗಲು ಬಹಳ ಹಣಕೊಟ್ಟಿರುವೆ” ಎಂದು ಹೇಳಿದನು.

ಅದಕ್ಕೆ ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪ್ರಜೆ” ಎಂದನು.

29 ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಆ ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು.

ಪೌಲನು ಯೆಹೂದ್ಯನಾಯಕರೊಂದಿಗೆ ಮಾತಾಡುವನು

30 ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು.

ಯೆರೆಮೀಯ 32

ಯೆರೆಮೀಯನು ಹೊಲವನ್ನು ಕೊಂಡದ್ದು

32 ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ[a] ಯೆರೆಮೀಯನಿಗೆ ಯೆಹೋವನಿಂದ ಬಂದ ಸಂದೇಶವಿದು. ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೇ ವರ್ಷವಾಗಿತ್ತು. ಆ ಸಮಯದಲ್ಲಿ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮನ್ನು ಮುತ್ತಿತ್ತು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. ಈ ಕಾರಾಗೃಹವು ಯೆಹೂದದ ರಾಜನ ಅರಮನೆಗೆ ಸೇರಿತ್ತು. ಯೆಹೂದದ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಆ ಕಾರಾಗೃಹದಲ್ಲಿಟ್ಟಿದ್ದನು. ಯೆರೆಮೀಯನು ಪ್ರವಾದಿಸಿದ ವಿಷಯಗಳನ್ನು ಚಿದ್ಕೀಯನು ಮೆಚ್ಚಿಕೊಂಡಿರಲಿಲ್ಲ. ಯೆರೆಮೀಯನು ಹೇಳಿದ್ದೇನೆಂದರೆ: “ಯೆಹೋವನು ಹೀಗೆನ್ನುತ್ತಾನೆ: ‘ನಾನು ತಕ್ಷಣವೇ ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ನೆಬೂಕದ್ನೆಚ್ಚರನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರ. ಖಂಡಿತವಾಗಿಯೂ ಅವನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು. ಚಿದ್ಕೀಯನು ಮುಖಾಮುಖಿಯಾಗಿ ಬಾಬಿಲೋನಿನ ರಾಜನೊಂದಿಗೆ ಮಾತನಾಡುವನು. ಚಿದ್ಕೀಯನು ತನ್ನ ಕಣ್ಣುಗಳಿಂದ ಅವನನ್ನು ನೋಡುವನು. ಬಾಬಿಲೋನಿನ ರಾಜನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು. ನಾನು ಅವನನ್ನು ದಂಡಿಸುವವರೆಗೆ ಚಿದ್ಕೀಯನು ಅಲ್ಲಿರುವನು. ನೀವು ಕಸ್ದೀಯರೊಡನೆ ಯುದ್ಧ ಮಾಡಿದರೂ ನಿಮಗೆ ಜಯವಾಗದು.’” ಇದು ಯೆಹೋವನ ನುಡಿ.

ಸೆರೆಯಲ್ಲಿದ್ದಾಗ ಯೆರೆಮೀಯನು ಹೇಳಿದನು, “ನನಗೆ ಯೆಹೋವನಿಂದ ಒಂದು ಸಂದೇಶ ಬಂದಿದೆ. ಅದು ಹೀಗಿದೆ: ಯೆರೆಮೀಯನೇ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ಶೀಘ್ರದಲ್ಲಿ ನಿನ್ನ ಬಳಿಗೆ ಬಂದು, ‘ಯೆರೆಮೀಯನೇ, ಅನಾತೋತ್ ಪಟ್ಟಣದ ಬಳಿಯಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ನೀನು ನನ್ನ ಅತಿ ಸಮೀಪದ ಬಂಧುವಾದುದರಿಂದ ಅದನ್ನು ಕೊಂಡುಕೊ. ಆ ಹೊಲವನ್ನು ಕೊಂಡುಕೊಳ್ಳಲು ನಿನಗೆ ಅಧಿಕಾರವಿದೆ ಮತ್ತು ಅದು ನಿನ್ನ ಹೊಣೆಗಾರಿಕೆಯೂ ಹೌದು’ ಎಂದು ಹೇಳುವನು.

“ಆಮೇಲೆ ಯೆಹೋವನು ಹೇಳಿದಂತೆಯೇ ಆಯಿತು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕಾರಾಗೃಹದ ಅಂಗಳದಲ್ಲಿದ್ದ ನನ್ನ ಬಳಿಗೆ ಬಂದು ಹೀಗೆ ಹೇಳಿದನು: ‘ಯೆರೆಮೀಯನೇ, ಬೆನ್ಯಾಮೀನ್ ಸೀಮೆಯ ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ಆ ಹೊಲವನ್ನು ನಿನಗಾಗಿ ಕೊಂಡುಕೊ. ಅದರ ಒಡೆಯನಾಗುವದಕ್ಕೆ ನಿನಗೆ ಹಕ್ಕಿದೆ.’”

ಇದು ಯೆಹೋವನ ಸಂದೇಶವೆಂದು ನನಗೆ ತಿಳಿಯಿತು. ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿರುವ ಹೊಲವನ್ನು ಕೊಂಡು ಅದರ ಕ್ರಯವಾಗಿ ಹದಿನೇಳು ಶೆಕೆಲ್‌[b] ಬೆಳ್ಳಿಯನ್ನು ತೂಕಹಾಕಿದೆನು. 10 ನಾನು ಕ್ರಯಪತ್ರಕ್ಕೆ ಸಹಿ ಹಾಕಿದೆನು. ಕ್ರಯಪತ್ರದ ಒಂದು ಪ್ರತಿಗೆ ರುಜು ಮಾಡಿಸಿದೆನು. ಇದಕ್ಕೆ ಸಾಕ್ಷಿಯಾಗಿ ಕೆಲಜನರನ್ನು ಕರೆಸಿದೆನು. ನಾನು ಬೆಳ್ಳಿಯನ್ನು ತಕ್ಕಡಿಯಲ್ಲಿ ತೂಕಹಾಕಿ ಕೊಟ್ಟೆನು. 11 ಆಮೇಲೆ ಕ್ರಯಪತ್ರದ ರುಜು ಮಾಡಿದ ಒಂದು ಪ್ರತಿಯನ್ನು ಮತ್ತು ರುಜು ಮಾಡದ ಒಂದು ಪ್ರತಿಯನ್ನು ತೆಗೆದುಕೊಂಡೆನು. 12 ನಾನು ಅವುಗಳನ್ನು ಬಾರೂಕನ ಕೈಗೆ ಕೊಟ್ಟೆನು. ಬಾರೂಕನು ನೇರೀಯನ ಮಗನಾಗಿದ್ದನು. ನೇರೀಯನು ಮಹ್ಸೇಮನ ಮಗನಾಗಿದ್ದನು. ಮೊಹರು ಮಾಡಿದ ಕ್ರಯಪತ್ರದಲ್ಲಿ ನಾನು ಹೊಲವನ್ನು ಕ್ರಯಕ್ಕೆ ಕೊಂಡ ಎಲ್ಲಾ ಷರತ್ತುಗಳಿದ್ದವು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಮತ್ತು ಉಳಿದ ಸಾಕ್ಷಿಗಳು ಅಲ್ಲಿದ್ದಾಗಲೇ ನಾನು ಈ ಕ್ರಯಪತ್ರವನ್ನು ಬಾರೂಕನ ಕೈಗೆ ಕೊಟ್ಟೆನು. ಆ ಸಾಕ್ಷಿಗಳು ಸಹ ಈ ಕ್ರಯಪತ್ರಕ್ಕೆ ಸಹಿಹಾಕಿದ್ದರು. ಆ ಅಂಗಳದಲ್ಲಿ ಕುಳಿತ ಹಲವಾರು ಜನ ಯೆಹೂದ್ಯರು ನಾನು ಬಾರೂಕನ ಕೈಗೆ ಆ ಕ್ರಯಪತ್ರ ಕೊಡುವದನ್ನು ನೋಡಿದರು.

13 ಎಲ್ಲಾ ಜನರು ನೋಡುತ್ತಿದ್ದಂತೆಯೆ ನಾನು ಬಾರೂಕನಿಗೆ, 14 “ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ‘ಕ್ರಯಪತ್ರದ ಎರಡೂ ಪ್ರತಿಗಳನ್ನು ಅಂದರೆ ರುಜುಮಾಡಿದ ಮತ್ತು ರುಜುಮಾಡದ ಪ್ರತಿಗಳನ್ನು ತೆಗೆದುಕೊಂಡು ಅವುಗಳು ಬಹುಕಾಲ ಉಳಿಯುವಂತೆ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಮುಚ್ಚಿಡು.’ 15 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು, ‘ಮುಂದಿನಕಾಲದಲ್ಲಿ ಇಸ್ರೇಲ್ ದೇಶದಲ್ಲಿ ನನ್ನ ಜನರು ಪುನಃ ಮನೆಗಳನ್ನು, ಹೊಲಗಳನ್ನು, ದ್ರಾಕ್ಷಿತೋಟಗಳನ್ನು ಕೊಂಡುಕೊಳ್ಳುವರು’ ಎಂದು ಅನ್ನುತ್ತಾನೆ.”

16 ನೇರೀಯನ ಮಗನಾದ ಬಾರೂಕನಿಗೆ ಕ್ರಯಪತ್ರವನ್ನು ಕೊಟ್ಟ ಮೇಲೆ ನಾನು ಯೆಹೋವನಿಗೆ ಪ್ರಾರ್ಥಿಸಿ ಹೀಗೆಂದೆನು:

17 “ದೇವರಾದ ಯೆಹೋವನೇ, ನೀನು ಭೂಮ್ಯಾಕಾಶಗಳನ್ನು ಸೃಷ್ಟಿಸಿದೆ. ಅವುಗಳನ್ನು ನೀನು ನಿನ್ನ ಅಪಾರವಾದ ಶಕ್ತಿಯಿಂದ ಸೃಷ್ಟಿಸಿದೆ. ನಿನಗೆ ಅಸಾಧ್ಯವಾದುದು ಯಾವುದೂ ಇಲ್ಲ. 18 ಯೆಹೋವನೇ, ನೀನು ಸಾವಿರಾರು ಜನರಿಗೆ ನಂಬಿಗಸ್ತನಾಗಿಯೂ ಕರುಣಾಮಯಿಯಾಗಿಯೂ ಇರುವೆ. ಆದರೆ ತಂದೆಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಶಿಕ್ಷೆಯನ್ನು ವಿಧಿಸುವಾತನೂ ನೀನೇ. ಮಹತ್ವವುಳ್ಳವನೇ, ಪರಾಕ್ರಮಿಯಾದ ದೇವರೇ, ಸರ್ವಶಕ್ತನಾದ ಯೆಹೋವನು ಎಂಬುದೇ ನಿನ್ನ ನಾಮಧೇಯ. 19 ನೀನು ಮಹತ್ತರವಾದ ಯೋಜನೆಗಳನ್ನು ಹಾಕಿ ಮಹತ್ಕಾರ್ಯಗಳನ್ನು ಮಾಡುವೆ. ಜನರು ಮಾಡುವ ಎಲ್ಲವನ್ನೂ ನೀನು ನೋಡುವೆ. ಒಳ್ಳೆಯದನ್ನು ಮಾಡುವವರಿಗೆ ನೀನು ಪ್ರತಿಫಲಗಳನ್ನು ಕೊಡುವೆ. ಕೆಟ್ಟದ್ದನ್ನು ಮಾಡುವವರನ್ನು ನೀನು ದಂಡಿಸುವೆ. ಅವರು ಯಾವುದಕ್ಕೆ ಅರ್ಹರೊ ಅದನ್ನು ಕೊಡುವೆ. 20 ಯೆಹೋವನೇ, ನೀನು ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದೆ. ಇಂದಿನವರೆಗೂ ನೀನು ಅದ್ಭುತಕಾರ್ಯಗಳನ್ನು ಮಾಡಿದೆ. ಇಸ್ರೇಲಿನಲ್ಲಿಯೂ ನೀನು ಅವುಗಳನ್ನು ಮಾಡಿದೆ. ಜನರು ಇರುವಲ್ಲೆಲ್ಲ ನೀನು ಅವುಗಳನ್ನು ಮಾಡಿದೆ. ಇವುಗಳಿಂದ ನೀನು ಸುಪ್ರಸಿದ್ಧನಾಗಿರುವೆ. 21 ಯೆಹೋವನೇ, ನೀನು ಅದ್ಭುತಕಾರ್ಯಗಳನ್ನು ಮಾಡಿ ನಿನ್ನ ಜನರನ್ನು ಈಜಿಪ್ಟಿನಿಂದ ಇಸ್ರೇಲಿಗೆ ಕರೆದುತಂದೆ. ಇದನ್ನು ಬಲವಾದ ಕೈಗಳಿಂದಲೇ ಮಾಡಿದೆ. ನಿನ್ನ ಸಾಮರ್ಥ್ಯ ಆಶ್ಚರ್ಯಕರವಾದದು.

22 “ಯೆಹೋವನೇ, ನೀನು ಈ ಭೂಮಿಯನ್ನು ಇಸ್ರೇಲರಿಗೆ ಕೊಟ್ಟೆ. ನೀನು ಬಹಳ ಕಾಲದ ಹಿಂದೆಯೇ ಈ ಭೂಮಿಯನ್ನು ಅವರ ಪೂರ್ವಿಕರಿಗೆ ಕೊಡುವದಾಗಿ ಮಾತು ಕೊಟ್ಟಿದ್ದೆ. ಇದು ಬಹಳ ಒಳ್ಳೆಯ ಭೂಮಿ. ಇದು ಅನೇಕ ಒಳ್ಳೆ ವಸ್ತುಗಳನ್ನು ಹೊಂದಿರುವ ಒಳ್ಳೆಯ ಭೂಮಿ.[c] 23 ಇಸ್ರೇಲಿನ ಜನರು ಈ ಪ್ರದೇಶಕ್ಕೆ ಬಂದು ಅದನ್ನು ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ; ನಿನ್ನ ಉಪದೇಶಗಳನ್ನು ಅನುಸರಿಸಲಿಲ್ಲ; ನಿನ್ನ ಆಜ್ಞೆಯಂತೆ ಮಾಡಲಿಲ್ಲ. ಆದ್ದರಿಂದ ನೀನು ಇಸ್ರೇಲರಿಗೆ ಇಂಥಾ ದುರ್ಗತಿ ಬರುವಂತೆ ಮಾಡಿದೆ.

24 “ಈಗ ವೈರಿಗಳು ನಗರವನ್ನು ಮುತ್ತಿದ್ದಾರೆ. ಜೆರುಸಲೇಮಿನ ಗೋಡೆಯನ್ನು ಹತ್ತಿ ಅದನ್ನು ಸ್ವಾಧೀನಪಡಿಸಿಕೊಳ್ಳುವದಕ್ಕಾಗಿ ಅವರು ಇಳಿಜಾರುಗೋಡೆಗಳನ್ನು ಕಟ್ಟುತ್ತಿದ್ದಾರೆ. ಬಾಬಿಲೋನಿನ ಸೈನಿಕರು ತಮ್ಮ ಖಡ್ಗ, ಕ್ಷಾಮ ಮತ್ತು ಭಯಂಕರವ್ಯಾಧಿ ಇವುಗಳ ಸಹಾಯದಿಂದ ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವರು. ಬಾಬಿಲೋನಿನ ಸೈನಿಕರು ಈಗ ನಗರದ ಮೇಲೆ ಧಾಳಿ ಮಾಡುತ್ತಿದ್ದಾರೆ. ಯೆಹೋವನೇ, ಹೀಗಾಗುವದೆಂದು ನೀನು ಹೇಳಿದ್ದೆ, ಈಗ ನೀನು ಹೇಳಿದಂತೆಯೇ ಆಗುತ್ತಿದೆ.

25 “ನನ್ನ ಒಡೆಯನಾದ ಯೆಹೋವನೇ, ಆ ದುರ್ಬಟನೆಗಳೆಲ್ಲಾ ಸಂಭವಿಸುತ್ತಿವೆ. ಆದರೆ ಈಗ ನೀನು ‘ಯೆರೆಮೀಯನೇ, ಬೆಳ್ಳಿಯನ್ನು ಕೊಟ್ಟು ಹೊಲವನ್ನು ಕೊಂಡುಕೋ ಮತ್ತು ಈ ಖರೀದಿಗೆ ಸಾಕ್ಷಿಯಾಗಿ ಕೆಲವು ಜನರನ್ನು ಆರಿಸಿಕೋ’ ಎಂದು ಹೇಳುತ್ತಿರುವಿಯಲ್ಲ. ಬಾಬಿಲೋನಿನ ಸೈನ್ಯವು ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿ ನಿಂತಿರುವಾಗ ನೀನು ಇದನ್ನು ಹೇಳುತ್ತಿರುವಿಯಲ್ಲ, ಏಕೆ? ಏಕೆ ನಾನು ಹಣವನ್ನು ಹೀಗೆ ವ್ಯರ್ಥವಾಗಿ ಕಳೆದುಕೊಳ್ಳಬೇಕು?”

26 ಆಗ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: 27 “ಯೆರೆಮೀಯನೇ, ನಾನೇ ಯೆಹೋವನು, ನಾನು ಈ ಭೂಮಂಡಲದ ಪ್ರತಿಯೊಬ್ಬನ ದೇವರು. ಯೆರೆಮೀಯನೆ, ನನಗೆ ಯಾವುದೂ ಅಸಾಧ್ಯವಲ್ಲವೆಂಬುದನ್ನು ನೀನು ಬಲ್ಲೆ.” 28 ಯೆಹೋವನು ಹೀಗೆಂದನು: “ಜೆರುಸಲೇಮ್ ನಗರವನ್ನು ನಾನು ಕೂಡಲೇ ಬಾಬಿಲೋನಿನ ಸೈನ್ಯಕ್ಕೂ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೂ ಒಪ್ಪಿಸುವೆನು. ಸೈನ್ಯವು ಈ ನಗರವನ್ನು ವಶಪಡಿಸಿಕೊಳ್ಳುವುದು. 29 ಬಾಬಿಲೋನಿನ ಸೈನ್ಯವು ಈಗಾಗಲೇ ಜೆರುಸಲೇಮ್ ನಗರದ ಮೇಲೆ ಧಾಳಿ ಮಾಡುತ್ತಿದೆ. ಸೈನಿಕರು ಬೇಗನೆ ನಗರವನ್ನು ಪ್ರವೇಶಿಸಿ ಅದಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುವರು. ಜೆರುಸಲೇಮಿನ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರಾದ ಬಾಳನಿಗೆ ನೈವೇದ್ಯವನ್ನು ಅರ್ಪಿಸಿ ನಾನು ಕೋಪಿಸಿಕೊಳ್ಳುವಂತೆ ಮಾಡಿದ ಕೆಲವು ಮನೆಗಳು ಈ ನಗರದಲ್ಲಿವೆ. ಅದಲ್ಲದೆ ಕೆಲವು ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸಿರುವರು. ಬಾಬಿಲೋನಿನ ಸೈನ್ಯವು ಆ ಮನೆಗಳನ್ನು ಸುಟ್ಟುಹಾಕುವುದು. 30 ನಾನು ಇಸ್ರೇಲಿನ ಜನರನ್ನು ಮತ್ತು ಯೆಹೂದದ ಜನರನ್ನು ಗಮನಿಸಿದ್ದೇನೆ. ಅವರು ಮಾಡುವದೆಲ್ಲ ಕೆಟ್ಟದ್ದೆ. ಅವರು ಚಿಕ್ಕಂದಿನಿಂದ ಕೆಟ್ಟದ್ದನ್ನೇ ಮಾಡಿದ್ದಾರೆ. ಇಸ್ರೇಲಿನ ಜನರು ತಮ್ಮ ಕೈಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸಿ ನನಗೆ ಬಹುಕೋಪ ಬರುವಂತೆ ಮಾಡಿದರು.” ಇದು ಯೆಹೋವನ ನುಡಿ. 31 “ಜೆರುಸಲೇಮ್ ನಗರವು ನಿರ್ಮಾಣಗೊಂಡಂದಿನಿಂದ ಇಂದಿನವರೆಗೂ ಈ ನಗರದ ಜನರು ನನಗೆ ಕೋಪ ಬರುವಂತೆ ಮಾಡಿದ್ದಾರೆ. ಈ ನಗರವು ನನಗೆ ಅತಿಕೋಪ ಬರುವಂತೆ ಮಾಡಿದೆ. ಆದ್ದರಿಂದ ಕಣ್ಣಿಗೆ ಕಾಣದಂತೆ ಅದನ್ನು ಅಳಿಸಿಬಿಡುವೆನು. 32 ಇಸ್ರೇಲಿನ ಮತ್ತು ಯೆಹೂದದ ಜನರು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಜೆರುಸಲೇಮ್ ನಗರವನ್ನು ನಾಶಮಾಡುತ್ತೇನೆ. ಜನರು, ರಾಜರು, ಮುಂದಾಳುಗಳು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು ಇವರೆಲ್ಲರೂ ನನಗೆ ಕೋಪ ಬರುವಂತೆ ಮಾಡಿದ್ದಾರೆ.

33 “ಆ ಜನರು ಸಹಾಯಕೋರಿ ನನ್ನಲ್ಲಿಗೆ ಬರಬೇಕಾಗಿತ್ತು. ಆದರೆ ಅವರು ನನಗೆ ವಿಮುಖರಾದರು. ನಾನು ಮತ್ತೆಮತ್ತೆ ಅವರಿಗೆ ಬುದ್ಧಿಕಲಿಸುವ ಪ್ರಯತ್ನ ಮಾಡಿದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ನಾನು ಅವರನ್ನು ತಿದ್ದುವ ಪ್ರಯತ್ನ ಮಾಡಿದೆ, ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. 34 ಆ ಜನರು ತಮಗಾಗಿ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಗೊಂಡ ಆಲಯದಲ್ಲಿ ಆ ವಿಗ್ರಹಗಳನ್ನಿಟ್ಟು ನನ್ನ ಆಲಯವನ್ನು ‘ಹೊಲಸು’ ಮಾಡಿದ್ದಾರೆ.

35 “ಬೆನ್‌ಹಿನ್ನೊಮ್ ಕಣಿವೆಯಲ್ಲಿ ಅವರು ಸುಳ್ಳುದೇವರಾದ ಬಾಳನಿಗಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿದ್ದಾರೆ. ತಮ್ಮ ಮಕ್ಕಳನ್ನು ಆಹುತಿಕೊಡುವದಕ್ಕಾಗಿ ಈ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಇಂಥಾ ಭಯಂಕರವಾದ ಕೆಲಸವನ್ನು ಮಾಡಲು ನಾನು ಅವರಿಗೆ ಆಜ್ಞಾಪಿಸಿಲ್ಲ. ಯೆಹೂದದ ಜನರು ಇಂಥಾ ಭಯಂಕರವಾದ ಕಾರ್ಯವನ್ನು ಮಾಡುವರೆಂದು ನಾನೆಂದೂ ಊಹಿಸಿರಲಿಲ್ಲ.

36 “‘ಬಾಬಿಲೋನಿನ ರಾಜನು ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಅವನು ಖಡ್ಗ, ಕ್ಷಾಮ, ಭಯಂಕರವಾದ ವ್ಯಾಧಿಗಳನ್ನು ಬಳಸಿಕೊಳ್ಳುವನು’ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: 37 ‘ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ತಮ್ಮ ಪ್ರದೇಶವನ್ನು ಬಿಟ್ಟುಹೋಗಲು ನಾನು ಒತ್ತಾಯಿಸಿದ್ದೇನೆ. ನಾನು ಅವರ ಮೇಲೆ ತುಂಬ ಕೋಪಗೊಂಡಿದ್ದೆ. ಆದರೆ ನಾನು ಅವರನ್ನು ಈ ಸ್ಥಳಕ್ಕೆ ಹಿಂದಿರುಗಿಸುವೆನು. ನಾನು ಒತ್ತಾಯಿಸಿ ಅವರನ್ನು ಅಟ್ಟಿದ ಸ್ಥಳಗಳಿಂದ ಅವರನ್ನು ಒಟ್ಟುಗೂಡಿಸುವೆನು. ಅವರನ್ನು ಪುನಃ ಈ ಸ್ಥಳಕ್ಕೆ ಕರೆತರುವೆನು. ಅವರು ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಇರುವಂತೆ ಮಾಡುವೆನು. 38 ಇಸ್ರೇಲರು ಮತ್ತು ಯೆಹೂದ್ಯರು ನನ್ನ ಭಕ್ತರಾಗಿರುವರು, ನಾನು ಅವರ ದೇವರಾಗಿರುವೆನು. 39 ಒಂದೇ ಜನಾಂಗವಾಗುವ ಬಯಕೆಯನ್ನು ನಾನು ಅವರಲ್ಲಿ ಉಂಟುಮಾಡುವೆನು. ಅವರು ತಮ್ಮ ಜೀವಮಾನವೆಲ್ಲಾ ನನ್ನನ್ನು ಆರಾಧಿಸಬೇಕೆಂಬ ಬಯಕೆಯನ್ನು ಹೊಂದಿರುವರು. ಹೌದು, ಅವರ ಬಯಕೆಯೂ ಅವರ ಮಕ್ಕಳ ಬಯಕೆಯೂ ಇದೇ ಆಗಿರುವುದು.

40 “‘ನಾನು ಇಸ್ರೇಲರ ಮತ್ತು ಯೆಹೂದ್ಯರ ಸಂಗಡ ಶಾಶ್ವತವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಗನುಸಾರವಾಗಿ ನಾನು ಅವರಿಗೆ ವಿಮುಖನಾಗುವುದೇ ಇಲ್ಲ. ನಾನು ಯಾವಾಗಲೂ ಅವರಿಗೆ ಒಳ್ಳೆಯವನಾಗಿರುತ್ತೇನೆ. ನನ್ನನ್ನು ಗೌರವಿಸಬೇಕೆಂಬ ಇಚ್ಛೆಯನ್ನು ಅವರಲ್ಲಿ ಬರಮಾಡುತ್ತೇನೆ. ಆಗ ಅವರೆಂದಿಗೂ ನನಗೆ ವಿಮುಖರಾಗುವದಿಲ್ಲ. 41 ಅವರು ನನ್ನನ್ನು ಸಂತೋಷಪಡಿಸುವರು. ಅವರಿಗೆ ಒಳ್ಳೆಯದನ್ನು ಮಾಡುವದರಲ್ಲಿ ನಾನು ಸಂತೋಷಪಡುವೆನು. ನಾನು ಖಂಡಿತವಾಗಿ ಅವರನ್ನು ಈ ದೇಶದಲ್ಲಿ ನೆಟ್ಟು ಬೆಳೆಯುವಂತೆ ಮಾಡುತ್ತೇನೆ. ಇದನ್ನು ನಾನು ಮನಃಪೂರ್ವಕವಾಗಿ ಮಾಡುತ್ತೇನೆ.’”

42 ಯೆಹೋವನು ಹೀಗೆನ್ನುತ್ತಾನೆ: “ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ನಾನು ಈ ಮಹಾವಿಪತ್ತನ್ನು ತಂದಿದ್ದೇನೆ. ಅದರಂತೆಯೇ ನಾನು ಅವರಿಗೆ ಒಳಿತನ್ನು ತರುವೆನು. ನಾನು ಅವರಿಗೆ ಒಳ್ಳೆಯದನ್ನು ಮಾಡುವದಾಗಿ ಮಾತುಕೊಡುತ್ತೇನೆ. 43 ನೀವು ‘ಈ ಪ್ರದೇಶವು ಒಂದು ಬರಿದಾದ ಮರುಭೂಮಿ. ಇಲ್ಲಿ ಜನರಾಗಲಿ ಪ್ರಾಣಿಗಳಾಗಲಿ ಇಲ್ಲ. ಬಾಬಿಲೋನಿನ ಸೈನ್ಯವು ಈ ದೇಶವನ್ನು ಸೋಲಿಸಿದೆ’ ಎಂದು ಹೇಳುತ್ತಿರುವಿರಿ. ಆದರೆ ಮುಂದಿನಕಾಲದಲ್ಲಿ ಜನರು ಪುನಃ ಈ ಪ್ರದೇಶದಲ್ಲಿ ಹೊಲಗಳನ್ನು ಕೊಂಡುಕೊಳ್ಳುವರು. 44 ಜನರು ಹಣ ಕೊಟ್ಟು ಭೂಮಿಯನ್ನು ಕೊಂಡುಕೊಳ್ಳುವರು. ಅವರು ಕರಾರುಪತ್ರಗಳಿಗೆ ಸಹಿಹಾಕುವರು. ಜನರು ಕ್ರಯಪತ್ರಗಳಿಗೆ ಸಹಿ ಹಾಕುವದನ್ನು ಬೇರೆಯವರು ನೋಡುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಲ್ಲಿ ಜನರು ಪುನಃ ಹೊಲಗಳನ್ನು ಕೊಂಡುಕೊಳ್ಳುವರು. ಜೆರುಸಲೇಮಿನ ಸುತ್ತಲಿನ ಪ್ರದೇಶದಲ್ಲಿ ಅವರು ಹೊಲಗಳನ್ನು ಕೊಂಡುಕೊಳ್ಳುವರು. ಅವರು ಯೆಹೂದ ಪ್ರದೇಶದ ಊರುಗಳಲ್ಲಿಯೂ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶದಲ್ಲಿಯೂ ದಕ್ಷಿಣದ ಮರಳುಗಾಡಿನಲ್ಲಿಯೂ ಹೊಲಗಳನ್ನು ಕೊಂಡುಕೊಳ್ಳುವರು. ನಾನು ನಿಮ್ಮ ಜನರನ್ನು ನಿಮ್ಮ ಪ್ರದೇಶಕ್ಕೆ ಪುನಃ ಕರೆದುಕೊಂಡು ಬರುವದರಿಂದ ಹೀಗಾಗುವುದು.” ಇದು ಯೆಹೋವನ ನುಡಿ.

ಕೀರ್ತನೆಗಳು 1-2

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

ಅನ್ಯಜನಾಂಗಗಳು ಕೋಪಗೊಂಡಿರುವುದೇಕೆ?
    ಅವರು ಮೂರ್ಖತನದ ಸಂಚುಗಳನ್ನು ಮಾಡುತ್ತಿರುವುದೇಕೆ?
ಅವುಗಳ ರಾಜರುಗಳೂ ನಾಯಕರುಗಳೂ
    ಯೆಹೋವನಿಗೂ ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರೋಧವಾಗಿ ಕೂಡಿಬಂದಿದ್ದಾರೆ.
“ದೇವರಿಗೂ ಆತನು ಅಭಿಷೇಕಿಸಿದ ರಾಜನಿಗೂ ವಿರೋಧವಾಗಿ ದಂಗೆ ಎದ್ದು
    ಸ್ವತಂತ್ರರಾಗೋಣ” ಎಂದು ಅವರು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಒಡೆಯನೂ ಪರಲೋಕದ ರಾಜನೂ ಅವರನ್ನು ನೋಡಿ ನಗುವನು;
    ಆತನು ಅವರನ್ನು ಪರಿಹಾಸ್ಯಮಾಡುವನು.
5-6 “ಇವನನ್ನು ರಾಜನನ್ನಾಗಿ ಅಭಿಷೇಕಿಸಿದವನು ನಾನೇ.
    ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ಆಳುವವನು ಇವನೇ”
ಎಂದು ಅವರಿಗೆ ಕೋಪದಿಂದ ಉತ್ತರಿಸುವನು.
    ಆಗ ಅವರೆಲ್ಲರೂ ಭಯಗೊಳ್ಳುವರು.

ಯೆಹೋವನ ಒಡಂಬಡಿಕೆಯ ಕುರಿತು ಹೇಳುತ್ತಿರುವೆ.
    ಆತನು ನನಗೆ, “ಈ ಹೊತ್ತು ನಾನು ನಿನಗೆ ತಂದೆಯಾದೆ! ನೀನೇ ನನ್ನ ಮಗನು.
ನೀನು ಕೇಳಿಕೊಂಡರೆ ಅನ್ಯಜನಾಂಗಗಳನ್ನು ನಿನಗೆ ಅಧೀನಪಡಿಸುವೆನು.
    ಭೂಮಿಯ ಮೇಲಿರುವ ಜನರೆಲ್ಲರೂ ನಿನ್ನವರಾಗುವರು!
ಕಬ್ಬಿಣದ ಗದೆಯು ಮಣ್ಣಿನ ಮಡಿಕೆಯನ್ನು ನುಚ್ಚುನೂರುಮಾಡುವಂತೆ
    ನೀನು ಅನ್ಯಜನಾಂಗಗಳನ್ನು ನಾಶಪಡಿಸುವೆ” ಎಂದು ಹೇಳಿದನು.

10 ಆದ್ದರಿಂದ ರಾಜರುಗಳೇ, ವಿವೇಕಿಗಳಾಗಿರಿ.
    ಅಧಿಪತಿಗಳೇ, ಬುದ್ದಿಮಾತುಗಳಿಗೆ ಕಿವಿಗೊಡಿರಿ.
11 ಯೆಹೋವನಿಗೆ ಭಯಭಕ್ತಿಯಿಂದ ವಿಧೇಯರಾಗಿರಿ,
    ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ನಂಬಿಗಸ್ತರಾಗಿರಿ,
    ಇಲ್ಲವಾದರೆ ಆತನ ಕೋಪವು ಬೇಗನೆ ತೋರಿಬಂದು
ನಿಮ್ಮನ್ನು ನಾಶಪಡಿಸುವುದು.
    ಯೆಹೋವನನ್ನು ಆಶ್ರಯಿಸಿಕೊಂಡಿರುವವರು ಭಾಗ್ಯವಂತರೇ ಸರಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International