M’Cheyne Bible Reading Plan
ಅಮ್ಮೋನಿಯರ ಅರಸನಲ್ಲಿಗೆ ಯೆಫ್ತಾಹನು ದೂತರನ್ನು ಕಳುಹಿಸಿದನು
12 ಯೆಫ್ತಾಹನು ಅಮ್ಮೋನಿಯರ ಅರಸನಿಗೆ ತನ್ನ ದೂತರ ಮೂಲಕ, “ಅಮ್ಮೋನಿಯರ ಮತ್ತು ಇಸ್ರೇಲರ ಮಧ್ಯೆ ಯಾವ ಸಮಸ್ಯೆ ಇದೆ? ನೀವು ನಮ್ಮ ದೇಶದಲ್ಲಿ ಯುದ್ಧಮಾಡಲು ಏಕೆ ಬಂದಿರುವಿರಿ?” ಎಂಬ ಸಂದೇಶವನ್ನು ಕಳುಹಿಸಿದನು.
13 ಅಮ್ಮೋನಿಯರ ಅರಸನು ಯೆಫ್ತಾಹನ ದೂತರಿಗೆ, “ಇಸ್ರೇಲರು ಈಜಿಪ್ಟಿನಿಂದ ಬಂದಾಗ ನಮ್ಮ ಪ್ರದೇಶವನ್ನು ತೆಗೆದುಕೊಂಡರು; ಆದ್ದರಿಂದ ಈಗ ನಾವು ಇಸ್ರೇಲರೊಂದಿಗೆ ಯುದ್ಧ ಮಾಡುತ್ತಿದ್ದೇವೆ. ಅವರು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೂ ಜೋರ್ಡನ್ ನದಿಯವರೆಗಿನ ಭೂಮಿಯನ್ನೂ ತೆಗೆದುಕೊಂಡಿದ್ದಾರೆ. ಈಗ ನಮ್ಮ ಭೂಮಿಯನ್ನು ನಮಗೆ ಶಾಂತಿಯಿಂದ ಹಿಂದಿರುಗಿಸಬೇಕು” ಎಂದನು.
14 ಯೆಫ್ತಾಹನ ದೂತರು ಈ ಸಂದೇಶವನ್ನು ಯೆಫ್ತಾಹನಿಗೆ ಮುಟ್ಟಿಸಿದರು. ಆಗ ಯೆಫ್ತಾಹನು ಮತ್ತೊಮ್ಮೆ ಅಮ್ಮೋನಿಯರ ಅರಸನಲ್ಲಿಗೆ ದೂತರನ್ನು ಕಳುಹಿಸಿದನು. 15 ಅವರು ಈ ಸಂದೇಶವನ್ನು ತೆಗೆದುಕೊಂಡು ಹೋದರು:
“ಯೆಫ್ತಾಹನು ಹೇಳುವುದೇನೆಂದರೆ: ಇಸ್ರೇಲರು ಮೋವಾಬ್ಯರ ಪ್ರದೇಶವನ್ನಾಗಲಿ ಅಮ್ಮೋನಿಯರ ಪ್ರದೇಶವನ್ನಾಗಲಿ ತೆಗೆದುಕೊಳ್ಳಲಿಲ್ಲ. 16 ಇಸ್ರೇಲರು ಈಜಿಪ್ಟನ್ನು ಬಿಟ್ಟುಬಂದ ಮೇಲೆ ಅರಣ್ಯ ಮಾರ್ಗವಾಗಿ ಕೆಂಪುಸಮುದ್ರಕ್ಕೆ ಹೋದರು. ತರುವಾಯ ಅವರು ಕಾದೇಶಿಗೆ ಹೋದರು. 17 ಅವರು ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ಪ್ರದೇಶವನ್ನು ದಾಟಿಹೋಗುವುದಕ್ಕೆ ದಯವಿಟ್ಟು ಅನುಮತಿಕೊಡು’ ಎಂದು ಕೇಳಿಕೊಂಡರು. ಆದರೆ ಎದೋಮಿನ ಅರಸನು ಅವರಿಗೆ ತಮ್ಮ ದೇಶವನ್ನು ದಾಟಿಹೋಗಲು ಅನುಮತಿಕೊಡಲಿಲ್ಲ. ತರುವಾಯ ಅವರು ಮೋವಾಬ್ಯರ ಅರಸನ ಬಳಿಗೆ ಅದೇ ಸಂದೇಶವನ್ನು ಕಳುಹಿಸಿದರು. ಆದರೆ ಮೋವಾಬ್ಯರ ಅರಸನು ಸಹ ಅವರಿಗೆ ಅವರ ದೇಶವನ್ನು ದಾಟಿಹೋಗಲು ಅನುಮತಿ ಕೊಡಲಿಲ್ಲ. ಆದ್ದರಿಂದ ಇಸ್ರೇಲರು ಕಾದೇಶಿನಲ್ಲಿ ನೆಲೆನಿಂತರು.
18 “ತರುವಾಯ ಇಸ್ರೇಲರು ಮರುಭೂಮಿಯಲ್ಲಿ ಪ್ರಯಾಣ ಮಾಡಿ ಎದೋಮ್ ಮತ್ತು ಮೋವಾಬ್ ದೇಶಗಳ ಮೇರೆಗಳನ್ನು ಸುತ್ತಿ ಬಂದರು. ಇಸ್ರೇಲರು ಮೋವಾಬ್ ದೇಶದ ಪೂರ್ವದಿಕ್ಕಿಗೆ ಪ್ರಯಾಣಮಾಡಿ ಅರ್ನೋನ್ ನದಿಯ ಆಚೆಯ ದಡದಲ್ಲಿ ಇಳಿದುಕೊಂಡರು. ಅವರು ಮೋವಾಬ್ ದೇಶದ ಮೇರೆಯನ್ನು ದಾಟಲಿಲ್ಲ. (ಅರ್ನೋನ್ ನದಿಯು ಮೋವಾಬ್ ದೇಶದ ಮೇರೆಯಾಗಿತ್ತು.)
19 “ತರುವಾಯ ಇಸ್ರೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿದರು. ಹೆಷ್ಬೋನ್ ಅಮೋರಿಯರ ದೇಶದ ರಾಜಧಾನಿಯಾಗಿತ್ತು. ಆ ದೂತರು ಸೀಹೋನನಿಗೆ, ‘ಇಸ್ರೇಲರು ನಿಮ್ಮ ಪ್ರದೇಶದಿಂದ ದಾಟಿಹೋಗುವುದಕ್ಕೆ ಅನುಮತಿಯನ್ನು ಕೊಡು, ನಾವು ನಮ್ಮ ದೇಶಕ್ಕೆ ಹೋಗ ಬಯಸುತ್ತೇವೆ’ ಎಂದು ಕೇಳಿದರು. 20 ಆದರೆ ಅಮೋರಿಯರ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ಪ್ರದೇಶದ ಸೀಮೆಯನ್ನು ದಾಟಲು ಬಿಡಲಿಲ್ಲ. ಸೀಹೋನನು ತನ್ನ ಜನರನ್ನೆಲ್ಲಾ ಸೇರಿಸಿ ಯಹಚದಲ್ಲಿ ಪಾಳೆಯಮಾಡಿಕೊಂಡನು. ಅಮೋರಿಯರು ಇಸ್ರೇಲರೊಂದಿಗೆ ಯುದ್ಧಮಾಡಿದರು. 21 ಆದರೆ ಇಸ್ರೇಲರ ದೇವರಾದ ಯೆಹೋವನು ಇಸ್ರೇಲರಿಗೆ ಸೀಹೋನ ಮತ್ತು ಅವನ ಜನರನ್ನು ಸೋಲಿಸಲು ಸಹಾಯ ಮಾಡಿದನು. ಆದ್ದರಿಂದ ಅಮೋರಿಯರ ಪ್ರದೇಶವು ಇಸ್ರೇಲರ ಸ್ವತ್ತಾಯಿತು. 22 ಇಸ್ರೇಲರು ಅಮೋರಿಯರ ಎಲ್ಲ ಪ್ರದೇಶವನ್ನು ತೆಗೆದುಕೊಂಡರು. ಆ ಪ್ರದೇಶವು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೂ ಅರಣ್ಯದಿಂದ ಜೋರ್ಡನ್ ನದಿಯವರೆಗೂ ಹಬ್ಬಿಕೊಂಡಿದೆ.
23 “ಇಸ್ರೇಲರ ದೇವರಾದ ಯೆಹೋವನು ಅಮೋರಿಯರನ್ನು ಅವರ ದೇಶದಿಂದ ಬಲವಂತವಾಗಿ ಹೊರಗಟ್ಟಿ ಆ ಪ್ರದೇಶವನ್ನು ಇಸ್ರೇಲರಿಗೆ ಕೊಟ್ಟನು. ಈಗ ಇಸ್ರೇಲರು ಈ ಪ್ರದೇಶವನ್ನು ಬಿಡುವಂತೆ ನೀನು ಮಾಡಬಹುದೆಂದು ತಿಳಿದುಕೊಂಡಿರುವಿಯಾ? 24 ನಿಮ್ಮ ದೇವರಾದ ಕೆಮೋಷನು ನಿಮಗೆ ಕೊಟ್ಟ ಪ್ರದೇಶದಲ್ಲಿ ನೀವು ಖಂಡಿತವಾಗಿ ವಾಸಮಾಡಬಹುದು. ಹಾಗೆಯೇ ಯೆಹೋವನಾದ ನಮ್ಮ ದೇವರು ನಮಗೆ ಕೊಟ್ಟ ಪ್ರದೇಶದಲ್ಲಿ ನಾವೂ ವಾಸಮಾಡುವೆವು. 25 ಚಿಪ್ಪೋರನ ಮಗನಾದ ಬಾಲಾಕನಿಗಿಂತ ನೀನು ಹೆಚ್ಚಿನವನೋ? ಅವನು ಮೋವಾಬ್ ದೇಶದ ರಾಜನಾಗಿದ್ದನು. ಅವನು ಇಸ್ರೇಲರ ಸಂಗಡ ಎಂದಾದರೂ ವಿವಾದ ಮಾಡಿದನೋ? ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೋ? 26 ಇಸ್ರೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್ ನಗರ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳಲ್ಲಿಯೂ ಅರೋಯೇರ್ ನಗರ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳಲ್ಲಿಯೂ ಅರ್ನೋನ್ ನದಿತೀರದ ಎಲ್ಲ ನಗರಗಳಲ್ಲಿಯೂ ಮುನ್ನೂರು ವರ್ಷಗಳಿಂದ ವಾಸಮಾಡುತ್ತಲಿದ್ದಾರೆ. ಈ ನಗರಗಳನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳಲು ನೀವು ಇಷ್ಟು ವರ್ಷ ಏಕೆ ಪ್ರಯತ್ನ ಮಾಡಲಿಲ್ಲ? 27 ಇಸ್ರೇಲರು ನಿಮ್ಮ ವಿರುದ್ಧ ಯಾವ ಪಾಪವನ್ನೂ ಮಾಡಿಲ್ಲ. ಆದರೆ ನೀನು ಇಸ್ರೇಲರ ವಿರುದ್ಧ ಬಹಳ ಕೆಟ್ಟದ್ದನ್ನು ಮಾಡುತ್ತಿರುವೆ. ನ್ಯಾಯವು ಇಸ್ರೇಲರ ಪರವಾಗಿದೆಯೋ ಅಥವಾ ಅಮ್ಮೋನಿಯರ ಪರವಾಗಿದೆಯೋ ಎಂಬುದನ್ನು ನಿಜವಾದ ನ್ಯಾಯಾಧೀಶನಾದ ಯೆಹೋವನೇ ತೀರ್ಮಾನಿಸಬೇಕು.”
28 ಆದರೆ ಯೆಫ್ತಾಹನ ಸಂದೇಶವನ್ನು ಅಮ್ಮೋನಿಯರ ಅರಸನು ಕಿವಿಗೆ ಹಾಕಿಕೊಳ್ಳಲಿಲ್ಲ.
ಯೆಫ್ತಾಹನ ಹರಕೆ
29 ಆಗ ಯೆಹೋವನ ಆತ್ಮವು ಯೆಫ್ತಾಹನ ಮೇಲೆ ಬಂತು. ಯೆಫ್ತಾಹನು ಗಿಲ್ಯಾದನ ಮತ್ತು ಮನಸ್ಸೆಯ ಪ್ರದೇಶಗಳಲ್ಲಿ ಸಂಚರಿಸಿದನು. ಅವನು ಗಿಲ್ಯಾದಿನ ಮಿಚ್ಛೆಗೆ ಬಂದನು. ಗಿಲ್ಯಾದಿನ ಮಿಚ್ಛೆಯ ನಗರದಿಂದ ಅವನು ಅಮ್ಮೋನಿಯರ ಪ್ರದೇಶಕ್ಕೆ ಹೋದನು.
30 ಯೆಫ್ತಾಹನು ಯೆಹೋವನಿಗೆ, “ನಾನು ಅಮ್ಮೋನಿಯರನ್ನು ಸೋಲಿಸುವಂತೆ ನೀನು ಮಾಡಿದರೆ 31 ನಾನು ಜಯಶಾಲಿಯಾಗಿ ಬರುವಾಗ ನನ್ನ ಮನೆಯಿಂದ ಹೊರ ಬರುವ ಮೊದಲನೆಯ ಜೀವಿಯನ್ನು ನಿನಗೆ ಕೊಡುತ್ತೇನೆ. ನಾನು ಅದನ್ನು ಯೆಹೋವನ ಸರ್ವಾಂಗಹೋಮಕ್ಕೆ ಆಹುತಿಯಾಗಿ ಕೊಡುವೆನು” ಎಂದು ಹರಕೆ ಮಾಡಿಕೊಂಡನು.
32 ಆಮೇಲೆ ಯೆಫ್ತಾಹನು ಅಮ್ಮೋನಿಯರ ದೇಶಕ್ಕೆ ಹೋಗಿ ಯುದ್ಧಮಾಡಿದನು. ಅವರನ್ನು ಸೋಲಿಸಲು ಯೆಹೋವನು ಯೆಫ್ತಾಹನಿಗೆ ಸಹಾಯ ಮಾಡಿದನು. 33 ಅವನು ಅವರನ್ನು ಸೋಲಿಸಿ ಅರೋಯೇರ್ ನಗರದಿಂದ ಮಿನ್ನೀತ್ ನಗರದವರೆಗೆ ಇಪ್ಪತ್ತು ನಗರಗಳನ್ನು ಗೆದ್ದುಕೊಂಡನು. ಆಮೇಲೆ ಅವನು ಅಮ್ಮೋನಿಯರ ಸಂಗಡ ಯುದ್ಧಮಾಡಿ ಅಬೇಲ್‌ಕೆರಾಮೀಮ್ ನಗರವನ್ನು ಗೆದ್ದುಕೊಂಡನು. ಇಸ್ರೇಲರು ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯರಿಗೆ ಇದೊಂದು ದೊಡ್ಡ ಸೋಲಾಯಿತು.
34 ಯೆಫ್ತಾಹನು ಮಿಚ್ಛೆಗೆ ಹಿಂದಿರುಗಿದನು. ಯೆಫ್ತಾಹನು ತನ್ನ ಮನೆಗೆ ಹೋಗುತ್ತಿರಲು ಅವನನ್ನು ಎದುರುಗೊಳ್ಳಲು ಅವನ ಮಗಳು ಮನೆಯಿಂದ ಹೊರಗೆ ಬಂದಳು. ಅವಳು ದಮ್ಮಡಿ ಬಡಿಯುತ್ತ ನಾಟ್ಯವಾಡುತ್ತಿದ್ದಳು. ಅವಳು ಅವನ ಒಬ್ಬಳೇ ಮಗಳಾಗಿದ್ದಳು. ಯೆಫ್ತಾಹನಿಗೆ ಬೇರೆ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇರಲಿಲ್ಲ. ಯೆಫ್ತಾಹನು ಅವಳನ್ನು ತುಂಬ ಪ್ರೀತಿಸುತ್ತಿದ್ದನು. 35 ತನ್ನ ಮನೆಯಿಂದ ಹೊರ ಬರುವ ಜೀವಿಗಳಲ್ಲಿ ತನ್ನ ಮಗಳೇ ಮೊದಲನೆಯವಳಾದುದನ್ನು ಕಂಡು ಯೆಫ್ತಾಹನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. “ಅಯ್ಯೋ! ನನ್ನ ಮಗಳೇ, ನೀನು ನನ್ನನ್ನು ಹಾಳುಮಾಡಿದೆ. ನೀನು ನನಗೆ ಮಹಾಸಂಕಟವನ್ನು ಉಂಟುಮಾಡಿದೆ. ನಾನು ಯೆಹೋವನಿಗೆ ಒಂದು ಹರಕೆ ಹೊತ್ತಿದ್ದೇನೆ; ನಾನು ಅದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಗೋಳಾಡಿದನು.
36 ಆಗ ಯೆಫ್ತಾಹನ ಮಗಳು ಅವನಿಗೆ, “ನನ್ನ ತಂದೆಯೇ, ನೀನು ಯೆಹೋವನಿಗೆ ಹರಕೆ ಹೊತ್ತಿರುವೆ. ನಿನ್ನ ಹರಕೆಯನ್ನು ಪೂರ್ಣಗೊಳಿಸು. ಏನು ಮಾಡುವೆನೆಂದು ಹೇಳಿದ್ದಿಯೋ ಅದನ್ನು ಮಾಡು. ನಿನ್ನ ಶತ್ರುಗಳಾದ ಅಮ್ಮೋನಿಯರನ್ನು ಸೋಲಿಸಲು ಯೆಹೋವನು ನಿನಗೆ ಸಹಾಯ ಮಾಡಿದ್ದಾನೆ” ಎಂದಳು.
37 ಯೆಫ್ತಾಹನ ಮಗಳು ತನ್ನ ತಂದೆಗೆ, “ನನಗೋಸ್ಕರ ಒಂದು ಕೆಲಸವನ್ನು ಮಾಡು. ಎರಡು ತಿಂಗಳುಗಳವರೆಗೆ ನನ್ನನ್ನು ಒಬ್ಬಂಟಿಗಳಾಗಿ ಇರಲು ಬಿಡು. ನಾನು ಬೆಟ್ಟಪ್ರದೇಶಕ್ಕೆ ಹೋಗುತ್ತೇನೆ. ನಾನು ಮದುವೆ ಮಾಡಿಕೊಳ್ಳುವುದಿಲ್ಲ ಮತ್ತು ಮಕ್ಕಳನ್ನು ಹೆರುವದಿಲ್ಲ. ನಾನು ಮತ್ತು ನನ್ನ ಗೆಳತಿಯರು ಹೋಗಿ ಒಟ್ಟಾಗಿ ಅಳುತ್ತೇವೆ” ಎಂದಳು.
38 ಯೆಫ್ತಾಹನು, “ಹೋಗು, ಹಾಗೆಯೇ ಮಾಡು” ಎಂದನು. ಯೆಫ್ತಾಹನು ಅವಳನ್ನು ಎರಡು ತಿಂಗಳುಗಳವರೆಗೆ ಕಳುಹಿಸಿಕೊಟ್ಟನು. ಯೆಫ್ತಾಹನ ಮಗಳು ಮತ್ತು ಆಕೆಯ ಗೆಳತಿಯರು ಬೆಟ್ಟಪ್ರದೇಶದಲ್ಲಿ ವಾಸಮಾಡಿದರು. ಅವಳು ಮದುವೆಯಾಗುವುದಿಲ್ಲ ಮತ್ತು ಮಕ್ಕಳನ್ನು ಹಡೆಯುವುದಿಲ್ಲ ಎಂಬ ಕಾರಣದಿಂದ ಅವರೆಲ್ಲರೂ ಗೋಳಾಡಿದರು.
39 ಎರಡು ತಿಂಗಳು ಗತಿಸಿದ ಮೇಲೆ ಯೆಫ್ತಾಹನ ಮಗಳು ತನ್ನ ತಂದೆಯಲ್ಲಿಗೆ ಬಂದಳು. ಯೆಫ್ತಾಹನು ದೇವರಿಗೆ ಹರಕೆ ಹೊತ್ತಂತೆ ಮಾಡಿದನು. ಯೆಫ್ತಾಹನ ಮಗಳು ಎಂದೂ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದಲಿಲ್ಲ. 40 ಪ್ರತಿವರ್ಷ ಇಸ್ರೇಲಿನ ಹೆಂಗಸರು ಗಿಲ್ಯಾದಿನ ಯೆಫ್ತಾಹನ ಮಗಳನ್ನು ಸ್ಮರಿಸುತ್ತಾರೆ. ಇಸ್ರೇಲಿನ ಹೆಂಗಸರು ಯೆಫ್ತಾಹನ ಮಗಳಿಗಾಗಿ ಪ್ರತಿವರ್ಷ ನಾಲ್ಕು ದಿನ ಅಳುತ್ತಾರೆ. ಇದು ಇಸ್ರೇಲಿನಲ್ಲಿ ಒಂದು ಪದ್ಧತಿಯಾಗಿದೆ.
ಜೆರುಸಲೇಮಿನಲ್ಲಿ ಸಮ್ಮೇಳನ
15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. 2 ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.
3 ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. 4 ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. 5 ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.
6 ಬಳಿಕ, ಅಪೊಸ್ತಲರು ಮತ್ತು ಹಿರಿಯರು ಈ ಸಮಸ್ಯೆಯನ್ನು ಪರಿಶೀಲಿಸಲು ಸೇರಿಬಂದರು. 7 ದೀರ್ಘಚರ್ಚೆಯಾಯಿತು. ಬಳಿಕ ಪೇತ್ರ ಎದ್ದುನಿಂತು ಅವರಿಗೆ, “ನನ್ನ ಸಹೋದರರೇ, ನಿಮಗೇ ತಿಳಿದಿರುವಂತೆ, ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಬೋಧಿಸುವುದಕ್ಕಾಗಿ ನಿಮ್ಮ ಮಧ್ಯದೊಳಗಿಂದ ದೇವರು ನನ್ನನ್ನು ಬಹುದಿನಗಳ ಹಿಂದೆ ಆರಿಸಿಕೊಂಡನು. ಅವರು ನನ್ನಿಂದ ಸುವಾರ್ತೆಯನ್ನು ಕೇಳಿ ನಂಬಿಕೊಂಡರು. 8 ಎಲ್ಲಾ ಜನರ ಆಲೋಚನೆಗಳನ್ನು ಬಲ್ಲ ದೇವರು ಯೆಹೂದ್ಯರಲ್ಲದ ಜನರನ್ನೂ ಸ್ವೀಕರಿಸಿಕೊಂಡನು. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮನನ್ನು ಕೊಟ್ಟು ಇದನ್ನು ರುಜುವಾತುಪಡಿಸಿದ್ದಾನೆ. 9 ದೇವರ ದೃಷ್ಟಿಯಲ್ಲಿ ಅವರಿಗೂ ನಮಗೂ ಯಾವ ವ್ಯತ್ಯಾಸವಿಲ್ಲ. ಅವರು ನಂಬಿಕೊಂಡಾಗ, ದೇವರು ಅವರ ಹೃದಯಗಳನ್ನು ಶುದ್ಧೀಕರಿಸಿದನು. 10 ಹೀಗಿರಲಾಗಿ, ಯೆಹೂದ್ಯರಲ್ಲದ ಸಹೋದರರ ಹೆಗಲ ಮೇಲೆ ಭಾರವಾದ ಹೊರೆಯನ್ನು[a] ಯಾಕೆ ಹೊರಿಸುತ್ತೀರಿ? ನೀವು ದೇವರನ್ನು ಸಿಟ್ಟಿಗೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ? ನಮಗಾಗಲಿ ನಮ್ಮ ಪಿತೃಗಳಿಗಾಗಲಿ ಈ ಹೊರೆಯನ್ನು ಹೊರವಷ್ಟು ಶಕ್ತಿ ಇರಲಿಲ್ಲ! 11 ಆದ್ದರಿಂದ ನಾವಾಗಲಿ ಇವರಾಗಲಿ ರಕ್ಷಣೆ ಹೊಂದುವುದು ಪ್ರಭುವಾದ ಯೇಸುವಿನ ಕೃಪೆಯಿಂದಲೇ ಎಂದು ನಾವು ನಂಬುತ್ತೇವೆ!” ಎಂದನು.
12 ಆಗ ಇಡೀ ಸಭೆಯು ಮೌನವಾಯಿತು. ಅವರು ಪೌಲ ಬಾರ್ನಬರಿಗೆ ಕಿವಿಗೊಟ್ಟರು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ದೇವರು ತಮ್ಮ ಮೂಲಕವಾಗಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳ ಮತ್ತು ಸೂಚಕಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಹೇಳಿದರು. 13 ಬಳಿಕ ಯಾಕೋಬನು, “ನನ್ನ ಸಹೋದರರೇ, ನನಗೆ ಕಿವಿಗೊಡಿರಿ. 14 ಯೆಹೂದ್ಯರಲ್ಲದ ಜನರಿಗೆ ದೇವರು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆಂದು ಸೀಮೋನನು ನಮಗೆ ತಿಳಿಸಿದ್ದಾನೆ. ಮೊಟ್ಟಮೊದಲ ಬಾರಿಗೆ, ದೇವರು ಯೆಹೂದ್ಯರಲ್ಲದ ಜನರನ್ನು ಸ್ವೀಕರಿಸಿಕೊಂಡನು. ಅವರನ್ನು ತನ್ನ ಜನರನ್ನಾಗಿ ಮಾಡಿಕೊಂಡನು. 15 ಪ್ರವಾದಿಗಳ ಮಾತುಗಳು ಸಹ ಇದಕ್ಕೆ ಸಾಮರಸ್ಯವಾಗಿವೆ:
16 ‘ಇದಾದನಂತರ ನಾನು ಹಿಂತಿರುಗುವೆನು.
ನಾನು ದಾವೀದನ ಮನೆಯನ್ನು ಮತ್ತೆ ಕಟ್ಟುವೆನು.
ಅದು ಬಿದ್ದುಹೋಗಿದೆ.
ಆದರೆ ಕೆಡವಲ್ಪಟ್ಟ ಅವನ ಮನೆಯ ಚೂರುಗಳನ್ನು ನಾನು ಮತ್ತೆ ಒಂದುಗೂಡಿಸುವೆನು.
ನಾನು ಅವನ ಮನೆಯನ್ನು ಹೊಸದು ಮಾಡುವೆನು.
17 ಬಳಿಕ ಇತರ ಜನರೆಲ್ಲರೂ ಪ್ರಭುವಿಗಾಗಿ ಹುಡುಕುವರು.
ಯೆಹೂದ್ಯರಲ್ಲದ ಜನರೆಲ್ಲರೂ ಸಹ ನನ್ನ ಜನರೇ ಆಗಿದ್ದಾರೆ.
ಪ್ರಭುವೇ ಇದನ್ನು ಹೇಳಿದ್ದಾನೆ.
ಈ ಕಾರ್ಯಗಳನ್ನೆಲ್ಲ ಮಾಡುವವನು ಆತನೇ.’(A)
18 ‘ಆದಿಯಿಂದಲೂ ಈ ಕಾರ್ಯಗಳನ್ನು ತಿಳಿಯಪಡಿಸಲಾಗಿದೆ.’[b]
19 “ಆದ್ದರಿಂದ, ದೇವರ ಕಡೆಗೆ ತಿರುಗಿಕೊಂಡ ಯೆಹೂದ್ಯರಲ್ಲದ ಸಹೋದರರಿಗೆ ನಾವು ತೊಂದರೆ ಕೊಡಬಾರದು. 20 ಅದಕ್ಕೆ ಬದಲಾಗಿ ನಾವು ಅವರಿಗೆ ಒಂದು ಪತ್ರವನ್ನು ಬರೆದು ಈ ವಿಷಯಗಳನ್ನು ತಿಳಿಸೋಣ:
ವಿಗ್ರಹಗಳಿಗೆ ಅರ್ಪಿಸಿದ ಆಹಾರವನ್ನು ತಿನ್ನಬೇಡಿರಿ. (ಈ ಆಹಾರ ಅಶುದ್ಧವಾದದ್ದು.)
ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ. ರಕ್ತವನ್ನು ತಿನ್ನಬೇಡಿ.
ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.
21 ಅವರು ಇವುಗಳನ್ನು ಮಾಡಕೂಡದು. ಏಕೆಂದರೆ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವಂಥ ಜನರು ಪ್ರತಿಯೊಂದು ಪಟ್ಟಣದಲ್ಲಿ ಇನ್ನೂ ಇದ್ದಾರೆ. ಅನೇಕ ವರ್ಷಗಳಿಂದ ಪ್ರತಿ ಸಬ್ಬತ್ ದಿನದಲ್ಲಿ ಮೋಶೆಯ ಮಾತುಗಳನ್ನು ಓದಲಾಗುತ್ತಿದೆ” ಎಂದು ಹೇಳಿದನು.
ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಪತ್ರ
22 ಅಪೊಸ್ತಲರು, ಹಿರಿಯರು ಮತ್ತು ಇಡೀ ಸಭೆಯವರು ಪೌಲ ಬಾರ್ನಬರೊಂದಿಗೆ ಕೆಲವು ಜನರನ್ನು ಅಂತಿಯೋಕ್ಯಕ್ಕೆ ಕಳುಹಿಸಬಯಸಿದರು. ತಮ್ಮವರೇ ಆದ ಕೆಲವರನ್ನು ಆರಿಸಿಕೊಳ್ಳಲು ಸಭೆಯು ನಿರ್ಧರಿಸಿತು. ಅವರು ಯೂದನನ್ನು (ಬಾರ್ಸಬನೆಂದೂ ಕರೆಯುತ್ತಿದ್ದರು) ಮತ್ತು ಸೀಲನನ್ನು ಆರಿಸಿಕೊಂಡರು. ಇವರು ಜೆರುಸಲೇಮಿನ ಸಭೆಯವರಲ್ಲಿ ಪ್ರಮುಖರಾಗಿದ್ದರು. 23 ಸಭೆಯು ಇವರ ಕೈಯಲ್ಲಿ ಪತ್ರವನ್ನು ಕಳುಹಿಸಿಕೊಟ್ಟಿತು. ಆ ಪತ್ರದಲ್ಲಿ ಹೀಗೆ ಬರೆದಿತ್ತು:
ಅಂತಿಯೋಕ್ಯ ಪಟ್ಟಣದಲ್ಲಿಯೂ ಸಿರಿಯ ಮತ್ತು ಸಿಲಿಸಿಯ ನಾಡುಗಳಲ್ಲಿಯೂ ಇರುವ ಯೆಹೂದ್ಯರಲ್ಲದ ಸಹೋದರರಿಗೆಲ್ಲಾ, ನಿಮ್ಮ ಸಹೋದರರಾದ ಅಪೊಸ್ತಲರೂ ಹಿರಿಯರೂ ಬರೆಯುವುದೇನೆಂದರೆ:
ಪ್ರಿಯ ಸಹೋದರರೇ,
24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ! 25 ಆದ್ದರಿಂದ ನಾವೆಲ್ಲರೂ ಕೆಲವರನ್ನು ಸರ್ವಾನುಮತದಿಂದ ಆರಿಸಿ ನಿಮ್ಮ ಬಳಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಿಯ ಸಹೋದರರಾದ ಬಾರ್ನಬ ಮತ್ತು ಪೌಲರೊಂದಿಗೆ ಅವರು ಬರುತ್ತಿದ್ದಾರೆ. 26 ಬಾರ್ನಬನು ಮತ್ತು ಪೌಲನು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಸೇವೆಗಾಗಿ ತಮ್ಮ ಜೀವಿತಗಳನ್ನೇ ಕೊಟ್ಟಿದ್ದಾರೆ. 27 ಆದ್ದರಿಂದ ನಾವು ಯೂದನನ್ನು ಮತ್ತು ಸೀಲನನ್ನು ಅವರೊಂದಿಗೆ ಕಳುಹಿಸಿದ್ದೇವೆ. ಕೆಳಕಂಡ ಸಂಗತಿಗಳನ್ನೆಲ್ಲ ಅವರು ನಿಮಗೆ ತಿಳಿಸುವರು. 28 ನಿಮಗೆ ಇನ್ನೂ ಹೆಚ್ಚಿನ ಭಾರಗಳು ಇರಕೂಡದೆಂಬುದು ಪವಿತ್ರಾತ್ಮನ ನಿರ್ಧಾರ. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನೀವು ಈ ನಿಯಮಗಳನ್ನು ಮಾತ್ರ ಅನುಸರಿಸಬೇಕಾಗಿದೆ:
29 ವಿಗ್ರಹಗಳಿಗೆ ಅರ್ಪಿಸಿರುವ ಆಹಾರವನ್ನು ತಿನ್ನಬೇಡಿ.
ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.
ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ.
ನೀವು ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದಾಗುವುದು. ನಿಮಗೆ ಶುಭವಾಗಲಿ!
30 ಆದ್ದರಿಂದ ಪೌಲ ಬಾರ್ನಬರು ಮತ್ತು ಯೂದ ಸೀಲರು ಜೆರುಸಲೇಮಿನಿಂದ ಹೊರಟರು. ಅವರು ಅಂತಿಯೋಕ್ಯಕ್ಕೆ ಹೋಗಿ, ಅಲ್ಲಿ ವಿಶ್ವಾಸಿಗಳ ಸಭೆಸೇರಿಸಿ ಅವರಿಗೆ ಪತ್ರವನ್ನು ಕೊಟ್ಟರು. 31 ವಿಶ್ವಾಸಿಗಳು ಅದನ್ನು ಓದಿ ಬಹು ಸಂತೋಷಪಟ್ಟರು. ಆ ಪತ್ರವು ಅವರನ್ನು ಸಂತೈಸಿತು. 32 ಯೂದ ಸೀಲರು ಸಹ ಪ್ರವಾದಿಗಳಾಗಿದ್ದರು. ಅವರು ಅನೇಕ ಸಂಗತಿಗಳನ್ನು ಸಹೋದರರಿಗೆ ತಿಳಿಸಿ ಅವರನ್ನು ಬಲಪಡಿಸಿದರು. 33 ಯೂದ ಸೀಲರು ಸ್ವಲ್ಪಕಾಲ ಅಲ್ಲಿದ್ದು ಸಹೋದರರಿಂದ ಸಮಾಧಾನವೆಂಬ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅವರು ತಮ್ಮನ್ನು ಕಳುಹಿಸಿಕೊಟ್ಟಿದ್ದ ಜೆರುಸಲೇಮಿನ ಸಹೋದರರ ಬಳಿಗೆ ಹಿಂತಿರುಗಿದರು. 34 [c]
35 ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿ ತಂಗಿದ್ದು ಇತರ ಅನೇಕರೊಂದಿಗೆ ಸೇರಿಕೊಂಡು ಸುವಾರ್ತೆಯನ್ನು ಸಾರಿದರು ಮತ್ತು ಪ್ರಭುವಿನ ಸಂದೇಶವನ್ನು ಜನರಿಗೆ ಬೋಧಿಸಿದರು.
ಪೌಲ ಬಾರ್ನಬರು ಬೇರ್ಪಡುವರು
36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಅನೇಕ ಪಟ್ಟಣಗಳಲ್ಲಿ ಪ್ರಭುವಿನ ಸಂದೇಶವನ್ನು ತಿಳಿಸಿದೆವು. ಆ ಪಟ್ಟಣಗಳಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ” ಎಂದು ಹೇಳಿದನು.
37 ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಬಾರ್ನಬನ ಇಷ್ಟವಾಗಿತ್ತು. 38 ಆದರೆ ಅವರ ಮೊದಲನೆ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಪಾಂಫೀಲಿಯದ ಬಳಿ ಬಿಟ್ಟುಹೋದನು. ಅವನು ಅವರೊಂದಿಗೆ ಸೇವೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ಅವನನ್ನು ಕರೆದುಕೊಂಡು ಹೋಗುವುದು ಒಳ್ಳೆಯ ಆಲೋಚನೆಯಲ್ಲವೆಂದು ಪೌಲನು ಯೋಚಿಸಿದನು. 39 ಇದರ ಬಗ್ಗೆ ಪೌಲ ಮತ್ತು ಬಾರ್ನಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಅವರಿಬ್ಬರೂ ಬೇರ್ಪಟ್ಟು ಬೇರೆ ಮಾರ್ಗಗಳಲ್ಲಿ ಹೋದರು. ಬಾರ್ನಬನು ಮಾರ್ಕನೊಂದಿಗೆ ಸೈಪ್ರಸ್‌ಗೆ ನೌಕಾಯಾನ ಮಾಡಿದನು.
40 ಪೌಲನು ತನ್ನೊಂದಿಗೆ ಸೀಲನನ್ನು ಕರೆದುಕೊಂಡು ಹೋದನು. ಅಂತಿಯೋಕ್ಯದ ಸಹೋದರರು ಪೌಲನನ್ನು ಪ್ರಭುವಿನ ಆಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು. 41 ಪೌಲ ಸೀಲರು ಸಿರಿಯಾ ಮತ್ತು ಸಿಲಿಸಿಯ ನಾಡುಗಳಲ್ಲಿ ಹಾದು ಹೋಗುತ್ತಾ ಅಲ್ಲಿದ್ದ ಸಭೆಗಳಿಗೆ ಬಲವಾಗಿ ಬೆಳೆಯಲು ನೆರವು ನೀಡಿದರು.
ಒಳ್ಳೆಯ ಮತ್ತು ಕೆಟ್ಟ ಅಂಜೂರದ ಹಣ್ಣುಗಳು
24 ಯೆಹೋವನು ನನಗೆ ಈ ವಸ್ತುಗಳನ್ನು ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಬುಟ್ಟಿಗಳನ್ನು ಜೋಡಿಸಿಟ್ಟಿದ್ದು ನನಗೆ ಕಂಡುಬಂತು. (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಕೊನ್ಯನನ್ನು ಸೆರೆಹಿಡಿದ ಮೇಲೆ ನಾನು ಈ ದರ್ಶನವನ್ನು ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನ್ನು ಮತ್ತು ಅವನ ಪ್ರಮುಖ ಅಧಿಕಾರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ಬಡಗಿಗಳನ್ನು ಮತ್ತು ಕಮ್ಮಾರರನ್ನು ತೆಗೆದುಕೊಂಡು ಹೋಗಿದ್ದನು.) 2 ಒಂದು ಬುಟ್ಟಿಯಲ್ಲಿ ಬಹಳ ಉತ್ತಮವಾದ ಅಂಜೂರಗಳಿದ್ದವು. ಆ ಅಂಜೂರಗಳು ಸುಗ್ಗಿಯಲ್ಲಿ ಬೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನ್ನೊಂದು ಬುಟ್ಟಿಯಲ್ಲಿ ತಿನ್ನಲಾಗದಷ್ಟು ಕೊಳೆತ ಅಂಜೂರಗಳಿದ್ದವು.
3 ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು.
“ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಬಹಳ ಚೆನ್ನಾಗಿವೆ. ಕೊಳೆತ ಅಂಜೂರಗಳು ತಿನ್ನಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.
4 ಆಗ ನನಗೆ ಯೆಹೋವನಿಂದ ಸಂದೇಶ ಬಂದಿತು. 5 ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನ್ನು ಬಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು. 6 ನಾನು ಅವರನ್ನು ರಕ್ಷಿಸುವೆನು. ನಾನು ಅವರನ್ನು ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನ್ನು ಬೀಳಿಸುವದಿಲ್ಲ. ನಾನು ಅವರನ್ನು ಅಭಿವೃದ್ಧಿಪಡಿಸುತ್ತೇನೆ. ನಾನು ಅವರನ್ನು ಕೀಳುವದಿಲ್ಲ. ಅವರನ್ನು ನೆಟ್ಟು ಬೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು. 7 ಅವರಲ್ಲಿ ನನ್ನನ್ನು ಅರಿತುಕೊಳ್ಳುವ ಬಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಬುದನ್ನು ಅವರು ತಿಳಿದುಕೊಳ್ಳುವರು. ಅವರು ನನ್ನ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಬಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗುತ್ತಾರೆ.
8 “ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನ್ನಲು ಬಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಧಿಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು. 9 ನಾನು ಆ ಜನರನ್ನು ದಂಡಿಸುವೆನು. ಆ ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನ್ನು ಉಂಟು ಮಾಡುವುದು. ಜನರು ಯೆಹೂದದ ಜನರನ್ನು ಗೇಲಿಮಾಡುವರು. ನಾನು ಅವರನ್ನು ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಬಗ್ಗೆ ಪರಿಹಾಸ್ಯದ ಮಾತುಗಳನ್ನು ಆಡುವರು; ಅವರನ್ನು ಶಪಿಸುವರು. 10 ನಾನು ಖಡ್ಗ, ಕ್ಷಾಮ, ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”
ವಿವಾಹವಿಚ್ಛೇದನದ ಬಗ್ಗೆ ಯೇಸುವಿನ ಉಪದೇಶ
(ಮತ್ತಾಯ 19:1-12)
10 ನಂತರ ಯೇಸು ಆ ಸ್ಥಳವನ್ನು ಬಿಟ್ಟು ಜುದೇಯ ಪ್ರಾಂತ್ಯಕ್ಕೆ ಹಾಗೂ ಜೋರ್ಡನ್ ನದಿಯ ಆಚೆದಡಕ್ಕೆ ಹೋದನು. ಅನೇಕ ಜನರು ಮತ್ತೆ ಆತನ ಬಳಿಗೆ ಬಂದರು. ಯೇಸು ಎಂದಿನಂತೆ ಆ ಜನರಿಗೆ ಉಪದೇಶಿಸಿದನು.
2 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ಪರೀಕ್ಷಿಸಲು, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.
3 ಯೇಸು, “ಮೋಶೆ ನಿಮಗೆ ಏನು ಆಜ್ಞಾಪಿಸಿದ್ದಾನೆ?” ಎಂದು ಉತ್ತರಿಸಿದನು.
4 ಫರಿಸಾಯರು, “ಒಬ್ಬನು ತನ್ನ ಹೆಂಡತಿಗೆ ವಿಚ್ಛೇದನ ಪತ್ರ ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದಾನೆ” ಎಂದರು.[a]
5 ಯೇಸು, “ನಿಮ್ಮ ಮೊಂಡುತನದ ನಿಮಿತ್ತ ಮೋಶೆಯು ನಿಮಗೆ ಆ ಆಜ್ಞೆಯನ್ನು ಕೊಟ್ಟನು. 6 ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’(A) 7 ‘ಆದಕಾರಣ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. 8 ಮತ್ತು ಅವರಿಬ್ಬರು ಒಂದೇ ಶರೀರವಾಗುವರು.’(B) ಆದ್ದರಿಂದ ಅವರು ಇಬ್ಬರಲ್ಲ, ಒಬ್ಬರೇ. 9 ಹೀಗಿರಲು ದೇವರು ಸೇರಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
10 ಶಿಷ್ಯರು ಮತ್ತು ಯೇಸು ಒಂದು ಮನೆಯಲ್ಲಿದ್ದಾಗ, ವಿವಾಹವಿಚ್ಛೇದನ ಪ್ರಶ್ನೆಯ ಬಗ್ಗೆ ಶಿಷ್ಯರು ಯೇಸುವನ್ನು ಮತ್ತೆ ಕೇಳಿದರು. 11 ಅದಕ್ಕೆ ಯೇಸು, “ತನ್ನ ಹೆಂಡತಿಯನ್ನು ಬಿಟ್ಟು, ಬೇರೆ ಸ್ತ್ರೀಯನ್ನು ಮದುವೆಯಾಗುವವನು ತನ್ನ ಹೆಂಡತಿಗೆ ದ್ರೋಹಮಾಡಿ ವ್ಯಭಿಚಾರಿಯಾಗಿದ್ದಾನೆ. 12 ತನ್ನ ಗಂಡನಿಗೆ ವಿಚ್ಛೇದನಪತ್ರ ಕೊಟ್ಟು ಬೇರೆ ಪುರುಷನನ್ನು ಮದುವೆಯಾಗುವ ಸ್ತ್ರೀಯೂ ವ್ಯಭಿಚಾರಿಣಿಯಾಗಿದ್ದಾಳೆ” ಎಂದು ಉತ್ತರಿಸಿದನು.
ಚಿಕ್ಕ ಮಕ್ಕಳಿಗೆ ಯೇಸುವಿನ ಆಶೀರ್ವಾದ
(ಮತ್ತಾಯ 19:13-15; ಲೂಕ 18:15-17)
13 ಜನರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಆಶೀರ್ವದಿಸಲೆಂದು ಅವರನ್ನು ಯೇಸುವಿನ ಬಳಿಗೆ ತಂದರು. ಆದರೆ ಮಕ್ಕಳನ್ನು ಯೇಸುವಿನ ಬಳಿಗೆ ತರಕೂಡದೆಂದು ಶಿಷ್ಯರು ಜನರನ್ನು ಗದರಿಸಿದರು. 14 ಇದನ್ನು ಕಂಡ ಯೇಸು ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರನ್ನು ತಡೆಯಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರದೇ. 15 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ದೇವರ ರಾಜ್ಯವನ್ನು ಮಕ್ಕಳ ಮನೋಭಾವದಿಂದ ಸ್ವೀಕರಿಸದಿದ್ದರೆ ನೀವು ಅದರೊಳಗೆ ಸೇರುವುದೇ ಇಲ್ಲ” ಎಂದು ಹೇಳಿದನು. 16 ನಂತರ ಯೇಸು ಮಕ್ಕಳನ್ನು ತನ್ನ ಕೈಗಳಿಂದ ಅಪ್ಪಿಕೊಂಡು ಅವರ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸಿದನು.
ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ
(ಮತ್ತಾಯ 19:16-30; ಲೂಕ 18:18-30)
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.
24 ಯೇಸುವಿನ ಈ ಮಾತನ್ನು ಕೇಳಿ ಶಿಷ್ಯರು ಬೆರಗಾದರು. ಆದರೆ ಯೇಸು ಮತ್ತೆ, “ನನ್ನ ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ! 25 ಶ್ರೀಮಂತರು ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.
27 ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.
28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.
29 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನಗಾಗಿ ಮತ್ತು ಸುವಾರ್ತೆಗಾಗಿ ತನ್ನ ಮನೆಯನ್ನಾಗಲಿ ಸಹೋದರರನ್ನಾಗಲಿ ಸಹೋದರಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ 30 ನೂರರಷ್ಟು ಹೆಚ್ಚಾಗಿ ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಅವನು ಅನೇಕ ಮನೆಗಳನ್ನು, ಸಹೋದರರನ್ನು, ಸಹೋದರಿಯರನ್ನು, ತಾಯಂದಿರನ್ನು, ಮಕ್ಕಳನ್ನು ಮತ್ತು ಭೂಮಿಯನ್ನು ಹಿಂಸೆಗಳೊಂದಿಗೆ ಪಡೆದುಕೊಳ್ಳುವನು. ಅಲ್ಲದೆ ಬರಲಿರುವ ಲೋಕದಲ್ಲಿ ಅವನು ನಿತ್ಯಜೀವವನ್ನೂ ಹೊಂದಿಕೊಳ್ಳುವನು. 31 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.
ತನ್ನ ಮರಣದ ಕುರಿತು ಯೇಸುವಿನ ಮೂರನೆ ಪ್ರಕಟನೆ
(ಮತ್ತಾಯ 20:17-19; ಲೂಕ 18:31-34)
32 ಯೇಸು ಮತ್ತು ಆತನ ಜೊತೆಯಲ್ಲಿದ್ದ ಜನರು ಜೆರುಸಲೇಮಿಗೆ ಹೋಗುತ್ತಿರಲು ಯೇಸು ಅವರೆಲ್ಲರಿಗಿಂತ ಮುಂದೆ ಹೋಗುತ್ತಿದ್ದನು. ಅದನ್ನು ನೋಡಿ ಯೇಸುವಿನ ಶಿಷ್ಯರು ಬೆರಗಾದರು. ಅವರನ್ನು ಹಿಂಬಾಲಿಸಿ ಬರುತ್ತಿದ್ದ ಜನರು ಭಯಗೊಂಡರು. ಯೇಸು ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು, ಜೆರುಸಲೇಮಿನಲ್ಲಿ ತನಗೆ ಸಂಭವಿಸಲಿರುವುದನ್ನು ಅವರಿಗೆ ಹೇಳುತ್ತಾ, 33 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೂ ಧರ್ಮೋಪದೇಶಕರಿಗೂ ಒಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆ ವಿಧಿಸಿ ಯೆಹೂದ್ಯರಲ್ಲದ ಜನರಿಗೆ ಒಪ್ಪಿಸುತ್ತಾರೆ. 34 ಆ ಜನರು ಆತನನ್ನು ನೋಡಿ ಅಪಹಾಸ್ಯ ಮಾಡುತ್ತಾರೆ, ಆತನ ಮೇಲೆ ಉಗುಳುತ್ತಾರೆ, ಆತನನ್ನು ಬಾರುಕೋಲಿನಿಂದ ಹೊಡೆಯುತ್ತಾರೆ ಮತ್ತು ಕೊಲ್ಲುತ್ತಾರೆ. ಆದರೆ ಆತನು ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುತ್ತಾನೆ” ಎಂದು ತಿಳಿಸಿದನು.
ಯಾಕೋಬ ಮತ್ತು ಯೋಹಾನರ ವಿಶೇಷ ಕೋರಿಕೆ
(ಮತ್ತಾಯ 20:20-28)
35 ನಂತರ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮ ಒಂದು ಕೋರಿಕೆಯನ್ನು ನೀನು ನಡೆಸಿಕೊಡಬೇಕು” ಎಂದರು.
36 ಯೇಸು, “ನಿಮ್ಮ ಯಾವ ಕೋರಿಕೆಯನ್ನು ನಡೆಸಿಕೊಡಬೇಕು?” ಎಂದು ಕೇಳಿದನು.
37 ಅವರು, “ನೀನು ನಿನ್ನ ರಾಜ್ಯದಲ್ಲಿ ವೈಭವದಿಂದಿರುವಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ಅನುಗ್ರಹಿಸು” ಎಂದು ಉತ್ತರಿಸಿದರು.
38 ಯೇಸು, “ನೀವು ಏನು ಕೇಳುತ್ತಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲ. ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ಕುಡಿಯಲು ನಿಮಗೆ ಸಾಧ್ಯವೇ? ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವು ಹೊಂದಲು ಸಾಧ್ಯವೇ?” ಎಂದನು.
39 ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ. 40 ಆದರೆ ನನ್ನ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಆರಿಸುವವನು ನಾನಲ್ಲ. ಆ ಸ್ಥಳಗಳನ್ನು ಯಾರಿಗಾಗಿ ಸಿದ್ಧಪಡಿಸಲಾಗಿದೆಯೋ ಅವರಿಗಾಗಿಯೇ ಅವುಗಳನ್ನು ಕಾದಿರಿಸಲಾಗಿದೆ” ಎಂದನು.
41 ಉಳಿದ ಹತ್ತು ಜನ ಶಿಷ್ಯರು ಇದನ್ನು ಕೇಳಿ ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು. 42 ಯೇಸು ಎಲ್ಲಾ ಶಿಷ್ಯರನ್ನು ಒಟ್ಟಾಗಿ ಕರೆದು, “ಯೆಹೂದ್ಯರಲ್ಲದವರು ಅಧಿಪತಿಗಳನ್ನು ಹೊಂದಿದ್ದಾರೆ. ಆ ಅಧಿಪತಿಗಳು ಜನರ ಮೇಲೆ ತಮಗಿರುವ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆಂಬುದು ನಿಮಗೆ ತಿಳಿದಿದೆ. ಅವರ ಪ್ರಮುಖ ನಾಯಕರುಗಳು ಜನರ ಮೇಲೆ ತಮಗಿರುವ ಅಧಿಕಾರವನ್ನೆಲ್ಲಾ ಉಪಯೋಗಿಸಲು ಇಷ್ಟಪಡುತ್ತಾರೆ. 43 ಆದರೆ ನೀವು ಅವರಂತಾಗಬಾರದು. 44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು. 45 ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
ಕುರುಡನಿಗೆ ದೃಷ್ಟಿದಾನ
(ಮತ್ತಾಯ 20:29-34; ಲೂಕ 18:35-43)
46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು. 47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.
48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.
49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು.
ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.
51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು.
ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.
52 ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.
Kannada Holy Bible: Easy-to-Read Version. All rights reserved. © 1997 Bible League International