Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 10:1-11:11

ನ್ಯಾಯಾಧೀಶನಾದ ತೋಲ

10 ಅಬೀಮೆಲೆಕನು ಸತ್ತ ತರುವಾಯ ಇಸ್ರೇಲರನ್ನು ರಕ್ಷಿಸಲು ಯೆಹೋವನು ಮತ್ತೊಬ್ಬ ನ್ಯಾಯಾಧೀಶನನ್ನು ಕಳುಹಿಸಿದನು. ಅವನ ಹೆಸರು ತೋಲ. ತೋಲನು ಪೂವನ ಮಗನು. ಪೂವನು ದೋದೋ ಎಂಬವನ ಮಗನು. ತೋಲನು ಇಸ್ಸಾಕಾರ್ ಕುಲಕ್ಕೆ ಸೇರಿದವನೂ ಶಾಮೀರ ನಗರದ ವಾಸಿಯೂ ಆಗಿದ್ದನು. ಶಾಮೀರ ನಗರವು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿತ್ತು. ತೋಲನು ಇಪ್ಪತ್ತಮೂರು ವರ್ಷಗಳವರೆಗೆ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಆಮೇಲೆ ತೋಲನು ಮರಣಹೊಂದಿದನು. ಶಾಮೀರಿನಲ್ಲಿ ಅವನ ಸಮಾಧಿ ಮಾಡಲಾಯಿತು.

ನ್ಯಾಯಾಧೀಶನಾದ ಯಾಯೀರ

ತೋಲನ ಮರಣದ ತರುವಾಯ ಯೆಹೋವನು ಮತ್ತೊಬ್ಬ ನ್ಯಾಯಾಧೀಶನನ್ನು ಕಳುಹಿಸಿದನು. ಅವನ ಹೆಸರು ಯಾಯೀರ. ಯಾಯೀರನು ಗಿಲ್ಯಾದ್ ಪ್ರದೇಶದಲ್ಲಿ ವಾಸವಾಗಿದ್ದನು. ಯಾಯೀರನು ಇಪ್ಪತ್ತೆರಡು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಯಾಯೀರನಿಗೆ ಮೂವತ್ತು ಗಂಡುಮಕ್ಕಳಿದ್ದರು. ಅವರು ಮೂವತ್ತು ಕತ್ತೆಗಳ ಮೇಲೆ ಸವಾರಿ ಮಾಡುತ್ತಿದ್ದರು.[a] ಆ ಮೂವತ್ತು ಮಂದಿ ಗಂಡುಮಕ್ಕಳು ಗಿಲ್ಯಾದ್ ಪ್ರದೇಶದಲ್ಲಿ ಮೂವತ್ತು ಪಟ್ಟಣಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಅವುಗಳಿಗೆ ಇಂದಿನವರೆಗೂ ಯಾಯೀರನ ಪಟ್ಟಣಗಳೆಂದು ಹೆಸರಿದೆ. ಯಾಯೀರನು ಸತ್ತನು. ಅವನನ್ನು ಕಾಮೋನಿನಲ್ಲಿ ಹೂಳಿಟ್ಟರು.

ಇಸ್ರೇಲರ ವಿರುದ್ಧ ಅಮ್ಮೋನಿಯರ ಯುದ್ಧ

ಇಸ್ರೇಲರು ಮತ್ತೆ ದೇವರಿಗೆ ವಿರೋಧವಾಗಿ ದುಷ್ಕೃತ್ಯಗಳನ್ನು ಮಾಡಿದರು. ಅವರು ಸುಳ್ಳುದೇವರಾದ ಬಾಳನನ್ನೂ ಸುಳ್ಳುದೇವತೆಯಾದ ಅಷ್ಟೋರೆತಳನ್ನೂ ಪೂಜಿಸತೊಡಗಿದರು. ಅವರು ಅರಾಮ್ಯರ, ಚೀದೋನ್ಯರ, ಮೋವಾಬ್ಯರ, ಅಮ್ಮೋನಿಯರ ಮತ್ತು ಫಿಲಿಷ್ಟಿಯರ ದೇವರುಗಳನ್ನು ಸಹ ಪೂಜಿಸಿದರು. ಇಸ್ರೇಲರು ಯೆಹೋವನನ್ನು ಮರೆತುಬಿಟ್ಟು ಆತನ ಸೇವೆಯನ್ನು ನಿಲ್ಲಿಸಿಬಿಟ್ಟರು.

ಆದ್ದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಫಿಲಿಷ್ಟಿಯರು ಮತ್ತು ಅಮ್ಮೋನಿಯರು ಅವರನ್ನು ಸೋಲಿಸುವಂತೆ ಮಾಡಿದನು. ಅದೇ ವರ್ಷ ಅವರು ಜೋರ್ಡನ್ ನದಿಯ ಪೂರ್ವಕ್ಕಿರುವ ಗಿಲ್ಯಾದಿನಲ್ಲಿದ್ದ ಇಸ್ರೇಲರನ್ನು ನಾಶಮಾಡಿದರು. ಅದು ಮೊದಲು ಅಮೋರಿಯರ ಪ್ರದೇಶವಾಗಿತ್ತು. ಇಸ್ರೇಲರು ಹದಿನೆಂಟು ವರ್ಷಗಳವರೆಗೆ ಕಷ್ಟವನ್ನು ಅನುಭವಿಸಿದರು. ಅಮ್ಮೋನಿಯರು ಜೋರ್ಡನ್ ನದಿಯನ್ನು ದಾಟಿ ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಕುಲಗಳ ಜನರೊಡನೆ ಯುದ್ಧ ಮಾಡಿದರು. ಅಮ್ಮೋನಿಯರು, ಇಸ್ರೇಲರಿಗೆ ಅನೇಕ ಕಷ್ಟಗಳನ್ನು ಕೊಟ್ಟರು.

10 ಆಗ ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. ಅವರು, “ನಾವು ನಿನ್ನ ವಿರುದ್ಧವಾಗಿ ಪಾಪ ಮಾಡಿದ್ದೇವೆ. ನಾವು ನಮ್ಮ ದೇವರನ್ನು ಬಿಟ್ಟು ಸುಳ್ಳುದೇವರಾದ ಬಾಳನನ್ನು ಪೂಜಿಸಿದ್ದೇವೆ” ಎಂದು ಮರುಗಿದರು.

11 ಯೆಹೋವನು ಇಸ್ರೇಲರಿಗೆ, “ಈಜಿಪ್ಟಿನವರು, ಅಮೋರಿಯರು, ಅಮ್ಮೋನಿಯರು ಮತ್ತು ಫಿಲಿಷ್ಟಿಯರು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ. ನಾನು ನಿಮ್ಮನ್ನು ಅವರಿಂದ ರಕ್ಷಿಸಿದೆ. 12 ಚೀದೋನ್ಯರು, ಅಮಾಲೇಕ್ಯರು, ಮಿದ್ಯಾನ್ಯರು ನಿಮ್ಮನ್ನು ಪೀಡಿಸಿದಾಗ ನನಗೆ ಮೊರೆಯಿಟ್ಟಿರಿ. ಅವರಿಂದಲೂ ನಾನು ನಿಮ್ಮನ್ನು ರಕ್ಷಿಸಿದೆ. 13 ಆದರೆ ನೀವು ನನ್ನನ್ನು ತ್ಯಜಿಸಿದಿರಿ. ನೀವು ಬೇರೆ ದೇವರುಗಳನ್ನು ಪೂಜಿಸಿದಿರಿ. ಆದ್ದರಿಂದ ನಾನು ಮತ್ತೆ ನಿಮ್ಮನ್ನು ರಕ್ಷಿಸುವುದಿಲ್ಲ. 14 ನೀವು ಆ ದೇವರುಗಳನ್ನು ಪೂಜಿಸಲು ಇಷ್ಟಪಡುತ್ತೀರಿ. ಆದ್ದರಿಂದ ಹೋಗಿ ಅವರನ್ನೇ ಸಹಾಯಕ್ಕಾಗಿ ಮೊರೆಯಿಡಿ. ನೀವು ಕಷ್ಟದಲ್ಲಿರುವಾಗ ಆ ದೇವರುಗಳೇ ನಿಮ್ಮನ್ನು ರಕ್ಷಿಸಲಿ” ಎಂದು ಉತ್ತರಿಸಿದನು.

15 ಆದರೆ ಇಸ್ರೇಲರು ಯೆಹೋವನಿಗೆ, “ನಾವು ಪಾಪ ಮಾಡಿದ್ದೇವೆ. ನಿನಗೆ ಸರಿಯೆನಿಸಿದಂತೆ ಮಾಡು. ಆದರೆ ದಯವಿಟ್ಟು ಇಂದು ನಮ್ಮನ್ನು ರಕ್ಷಿಸು” ಎಂದು ಪ್ರಾರ್ಥಿಸಿದರು. 16 ಆಗ ಇಸ್ರೇಲರು ಅನ್ಯದೇವರುಗಳನ್ನು ತೊರೆದು ಯೆಹೋವನನ್ನು ಆರಾಧಿಸಲು ಆರಂಭಿಸಿದರು. ಅವರು ಕಷ್ಟಪಡುತ್ತಿರುವುದನ್ನು ನೋಡಿ ಯೆಹೋವನು ಮರುಕಪಟ್ಟನು.

ಯೆಫ್ತಾಹನನ್ನು ನಾಯಕನನ್ನಾಗಿ ಆರಿಸಲಾಯಿತು

17 ಅಮ್ಮೋನಿಯರು ಯುದ್ಧಕ್ಕೆಂದು ಒಂದೆಡೆ ಸೇರಿದರು. ಅವರು ಗಿಲ್ಯಾದ್‌ನಲ್ಲಿ ಪಾಳೆಯ ಮಾಡಿಕೊಂಡಿದ್ದರು. ಇಸ್ರೇಲರು ಒಂದೆಡೆ ಸೇರಿಕೊಂಡರು. ಅವರ ಪಾಳೆಯವು ಮಿಚ್ಛೆಯಲ್ಲಿ ಇತ್ತು. 18 ಗಿಲ್ಯಾದ್ ಕ್ಷೇತ್ರದಲ್ಲಿ ವಾಸಮಾಡುತ್ತಿದ್ದ ಜನನಾಯಕರು, “ಅಮ್ಮೋನಿಯರ ಮೇಲೆ ಧಾಳಿಮಾಡಲು ಯಾರು ನಮ್ಮ ಮುಂದಾಳಾಗುತ್ತಾರೋ ಆ ವ್ಯಕ್ತಿಯೇ ಗಿಲ್ಯಾದ್ ಕ್ಷೇತ್ರದಲ್ಲಿ ವಾಸಮಾಡುವ ಜನರೆಲ್ಲರಿಗೂ ನಾಯಕನಾಗುತ್ತಾನೆ” ಎಂದು ಸಾರಿದರು.

11 ಯೆಫ್ತಾಹನು ಗಿಲ್ಯಾದ್ ಕುಲದವನಾಗಿದ್ದನು. ಅವನು ಪರಾಕ್ರಮಶಾಲಿಯಾಗಿದ್ದನು. ಆದರೆ ಯೆಫ್ತಾಹನು ಒಬ್ಬ ವೇಶ್ಯೆಯ ಮಗನಾಗಿದ್ದನು. ಅವನ ತಂದೆಯ ಹೆಸರು ಗಿಲ್ಯಾದ್. ಗಿಲ್ಯಾದನ ಹೆಂಡತಿಗೆ ಅನೇಕ ಜನ ಮಕ್ಕಳಿದ್ದರು. ಆ ಮಕ್ಕಳು ದೊಡ್ಡವರಾದ ಮೇಲೆ ಯೆಫ್ತಾಹನನ್ನು ಇಷ್ಟಪಡಲಿಲ್ಲ. ಯೆಫ್ತಾಹನು ತನ್ನ ಹುಟ್ಟೂರನ್ನು ಬಿಡುವಂತೆ ಆ ಮಕ್ಕಳು ಒತ್ತಾಯಮಾಡಿದರು. ಅವರು ಅವನಿಗೆ, “ನೀನು ನಮ್ಮ ತಂದೆಯ ಆಸ್ತಿಯಲ್ಲಿ ಯಾವ ಭಾಗವನ್ನೂ ಪಡೆಯಲಾರೆ. ನೀನು ವೇಶ್ಯೆಯ ಮಗ” ಎಂದು ಹೇಳಿದರು. ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ ಟೋಬ್ ದೇಶದಲ್ಲಿ ವಾಸಮಾಡತೊಡಗಿದನು. ಟೋಬ್ ದೇಶದಲ್ಲಿ ಕೆಲವು ಪುಂಡರು ಯೆಫ್ತಾಹನ ಜೊತೆ ಸೇರಿಕೊಂಡರು.

ಸ್ವಲ್ಪಕಾಲದ ತರುವಾಯ ಅಮ್ಮೋನಿಯರು ಇಸ್ರೇಲರ ವಿರುದ್ಧ ಯುದ್ಧ ಪ್ರಾರಂಭಿಸಿದರು. ಅಮ್ಮೋನಿಯರು ಯುದ್ಧ ಪ್ರಾರಂಭಿಸಿದ ತರುವಾಯ ಗಿಲ್ಯಾದಿನ ನಾಯಕರು ಯೆಫ್ತಾಹನ ಹತ್ತಿರ ಹೋದರು. ಯೆಫ್ತಾಹನು ಟೋಬ್ ದೇಶವನ್ನು ಬಿಟ್ಟು ಗಿಲ್ಯಾದಿಗೆ ಬರಬೇಕೆಂಬುದು ಅವರ ಅಪೇಕ್ಷೆಯಾಗಿತ್ತು.

ಆ ಹಿರಿಯರು ಯೆಫ್ತಾಹನಿಗೆ, “ನಾವು ಅಮ್ಮೋನಿಯರೊಡನೆ ಮಾಡುವ ಯುದ್ಧದಲ್ಲಿ ನೀನೇ ನಮ್ಮ ನಾಯಕನಾಗು” ಎಂದು ಬೇಡಿಕೊಂಡರು.

ಆದರೆ ಗಿಲ್ಯಾದಿನ ಹಿರಿಯರಿಗೆ ಯೆಫ್ತಾಹನು, “ನನ್ನ ತಂದೆಯ ಮನೆಯನ್ನು ಬಿಡುವಂತೆ ನೀವು ನನಗೆ ಒತ್ತಾಯ ಮಾಡಿದಿರಿ; ನೀವು ನನ್ನನ್ನು ದ್ವೇಷಿಸುತ್ತೀರಿ. ಆದರೆ ಕಷ್ಟದಲ್ಲಿ ನೀವು ನನ್ನ ಬಳಿಗೆ ಬರುವುದೇಕೆ?” ಎಂದು ಕೇಳಿದನು.

ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ಕಷ್ಟ ಬಂದಿರುವುದರಿಂದಲೇ ನಿನ್ನಲ್ಲಿಗೆ ಬಂದಿದ್ದೇವೆ. ದಯವಿಟ್ಟು ನಮ್ಮೊಡನೆ ಬಾ; ಅಮ್ಮೋನಿಯರ ವಿರುದ್ಧ ಯುದ್ಧ ಮಾಡು. ಗಿಲ್ಯಾದಿನಲ್ಲಿ ವಾಸಮಾಡುತ್ತಿರುವ ಜನರೆಲ್ಲರಿಗೂ ನೀನು ನಾಯಕನಾಗುವೆ” ಅಂದರು.

ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ನಾನು ಗಿಲ್ಯಾದಿಗೆ ಹಿಂದಿರುಗಿ ಬಂದು ಅಮ್ಮೋನಿಯರ ವಿರುದ್ಧ ಯುದ್ಧಮಾಡಬೇಕೆಂದು ನೀವು ಅಪೇಕ್ಷಿಸುವುದೇನೋ ಒಳ್ಳೆಯದು. ಆದರೆ ಯೆಹೋವನ ಕೃಪೆಯಿಂದ ನಾನು ಗೆದ್ದರೆ ನಾನು ನಿಮಗೆ ಹೊಸ ನಾಯಕನಾಗುತ್ತೇನೆ” ಎಂದನು.

10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಹೇಳುತ್ತಿರುವ ಎಲ್ಲವನ್ನು ಯೆಹೋವನು ಕೇಳುತ್ತಿದ್ದಾನೆ. ನೀನು ಹೇಳಿದಂತೆಯೇ ಮಾಡುತ್ತೇವೆ ಎಂದು ನಾವು ಮಾತುಕೊಡುತ್ತೇವೆ” ಎಂದರು.

11 ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೊರಟುಹೋದನು. ಅವರು ಯೆಫ್ತಾಹನನ್ನು ತಮ್ಮ ನಾಯಕನನ್ನಾಗಿಯೂ ಸೇನಾಧಿಪತಿಯನ್ನಾಗಿಯೂ ಮಾಡಿದರು. ಯೆಫ್ತಾಹನು ಮಿಚ್ಛೆ ನಗರದಲ್ಲಿ ಯೆಹೋವನ ಸಮ್ಮುಖದಲ್ಲಿ ತನ್ನ ಎಲ್ಲಾ ಮಾತುಗಳನ್ನು ಮತ್ತೊಮ್ಮೆ ಹೇಳಿದನು.

ಅಪೊಸ್ತಲರ ಕಾರ್ಯಗಳು 14

ಇಕೋನಿಯಾದಲ್ಲಿ ಪೌಲ ಮತ್ತು ಬಾರ್ನಬ

14 ಪೌಲ ಬಾರ್ನಬರು ಇಕೋನಿಯಾ ಪಟ್ಟಣಕ್ಕೆ ಹೋದರು. (ಪ್ರತಿಯೊಂದು ಪಟ್ಟಣದಲ್ಲಿಯೂ ಅವರು ಮಾಡುತ್ತಿದ್ದಂತೆ) ಇಲ್ಲಿಯೂ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಜನರಿಗೆ ಬೋಧಿಸಿದರು. ಪೌಲ ಬಾರ್ನಬರ ಅಮೋಘ ಬೋಧನೆಯನ್ನು ಕೇಳಿ ಅನೇಕ ಯೆಹೂದ್ಯರು ಮತ್ತು ಗ್ರೀಕರು ನಂಬಿಕೊಂಡರು. ಆದರೆ ಯೆಹೂದ್ಯರಲ್ಲಿ ನಂಬದೆ ಹೋದ ಕೆಲವರು ಯೆಹೂದ್ಯರಲ್ಲದವರನ್ನು ಪ್ರಚೋಧಿಸಿ ಸಹೋದರರ ವಿರುದ್ಧ ಜನರನ್ನು ಎಬ್ಬಿಸಿದರು.

ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು. ಆದರೆ ಪಟ್ಟಣದ ಜನರಲ್ಲಿ ಕೆಲವರು ಯೆಹೂದ್ಯರ ಮಾತನ್ನೂ ಇನ್ನು ಕೆಲವರು ಪೌಲ ಬಾರ್ನಬರ ಮಾತನ್ನೂ ನಂಬಿಕೊಂಡದ್ದರಿಂದ ಅವರಲ್ಲಿಯೇ ಎರಡು ಪಂಗಡವಾಯಿತು.

ಯೆಹೂದ್ಯರಲ್ಲದವರಲ್ಲಿ ಮತ್ತು ಯೆಹೂದ್ಯರಲ್ಲಿ ಕೆಲವರು ತಮ್ಮ ನಾಯಕರೊಡನೆ ಸೇರಿಕೊಂಡು ಪೌಲ ಬಾರ್ನಬರನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ಇದನ್ನು ಅರಿತುಕೊಂಡ ಪೌಲ ಬಾರ್ನಬರು ಆ ಪಟ್ಟಣವನ್ನು ಬಿಟ್ಟು ಲುಕವೋನಿಯಾದ ಪಟ್ಟಣಗಳಾದ ಲುಸ್ತ್ರ ಮತ್ತು ದರ್ಬೆಗಳಿಗೂ ಹಾಗೂ ಆ ಪಟ್ಟಣಗಳ ಸುತ್ತಮುತ್ತಲಿದ್ದ ಪ್ರದೇಶಗಳಿಗೂ ಹೋದರು. ಅವರು ಅಲ್ಲಿಯೂ ಸುವಾರ್ತೆ ತಿಳಿಸಿದರು.

ಲುಸ್ತ್ರ ಮತ್ತು ದರ್ಬೆಗಳಲ್ಲಿ ಪೌಲನು

ಲುಸ್ತ್ರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಕಾಲುಗಳಲ್ಲಿ ಬಲವಿರಲಿಲ್ಲ. ಹುಟ್ಟುಕುಂಟನಾಗಿದ್ದ ಅವನು ಎಂದೂ ನಡೆದಿರಲಿಲ್ಲ. ಈ ಮನುಷ್ಯನು ತಾನು ಕುಳಿತಲ್ಲೇ ಪೌಲನ ಮಾತನ್ನು ಆಲಿಸುತ್ತಿದ್ದನು. ಪೌಲನು ಅವನನ್ನು ದೃಷ್ಟಿಸಿ ನೋಡಿದನು. ದೇವರು ಗುಣಪಡಿಸಬಲ್ಲನೆಂಬ ನಂಬಿಕೆ ಅವನಲ್ಲಿರುವುದನ್ನು ಪೌಲನು ಕಂಡು, 10 ಅವನಿಗೆ, “ಎದ್ದೇಳು, ಕಾಲೂರಿ ನಿಂತುಕೊ!” ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಆ ಮನುಷ್ಯನು ಜಿಗಿದುನಿಂತು ನಡೆಯಲಾರಂಭಿಸಿದನು.

11 ಪೌಲನು ಮಾಡಿದ ಈ ಕಾರ್ಯವನ್ನು ಕಂಡ ಜನರು ತಮ್ಮ ಸ್ವಂತ ಲುಕವೋನಿಯ ಭಾಷೆಯಲ್ಲಿ “ದೇವರುಗಳು ಮನುಷ್ಯರೂಪ ಧರಿಸಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಎಂದು ಆರ್ಭಟಿಸಿದರು. 12 ಜನರು ಬಾರ್ನಬನನ್ನು “ಜೆಯುಸ್”[a] ದೇವರೆಂದೂ ಮುಖ್ಯ ಬೋಧಕನಾಗಿದ್ದ ಪೌಲನನ್ನು “ಹೆರ್ಮೆ”[b] ದೇವರೆಂದೂ ಕರೆದರು. 13 ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.

14 ಇದನ್ನು ಕೇಳಿದ ಪೌಲ ಬಾರ್ನಬರು ತಮ್ಮ ಬಟ್ಟೆಗಳನ್ನು ಹರಿದುಕೊಂಡು[c] ಜನಸಮೂಹದೊಳಕ್ಕೆ ಓಡಿಹೋಗಿ ಹೀಗೆಂದು ಕೂಗಿ ಹೇಳಿದರು: 15 “ಜನರೇ, ನೀವು ಈ ಕಾರ್ಯಗಳನ್ನು ಮಾಡುತ್ತಿರುವುದೇಕೆ? ನಾವು ದೇವರುಗಳಲ್ಲ. ನಾವು ನಿಮ್ಮಂತೆ ಕೇವಲ ಮನುಷ್ಯರು. ನಿಮಗೆ ಸುವಾರ್ತೆಯನ್ನು ಹೇಳುವುದಕ್ಕಾಗಿ ನಾವು ಬಂದೆವು. ವ್ಯರ್ಥವಾದ ಈ ಕಾರ್ಯಗಳನ್ನು ನೀವು ಬಿಟ್ಟುಬಿಡಿರಿ; ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಅವುಗಳಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಮಾಡಿದಾತನು ಆತನೇ.

16 “ಹಿಂದಿನ ಕಾಲದಲ್ಲಿ ದೇವರು ಎಲ್ಲಾ ಜನಾಂಗಗಳನ್ನು ಅವುಗಳ ಇಷ್ಟಕ್ಕನುಸಾರವಾಗಿ ನಡೆಯಲು ಬಿಟ್ಟುಕೊಟ್ಟನು. 17 ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”

18 ಪೌಲ ಬಾರ್ನಬರು ಇಷ್ಟೆಲ್ಲಾ ಹೇಳಿದರೂ ಯಜ್ಞವರ್ಪಿಸಿ ಆರಾಧಿಸದಂತೆ ಜನರನ್ನು ತಡೆಯಲು ಬಹಳ ಪ್ರಯಾಸಪಡಬೇಕಾಯಿತು.

19 ಬಳಿಕ ಕೆಲವು ಯೆಹೂದ್ಯರು ಅಂತಿಯೋಕ್ಯದಿಂದ ಮತ್ತು ಇಕೋನಿಯದಿಂದ ಬಂದು ಪೌಲನಿಗೆ ವಿರೋಧವಾಗಿ ಜನರನ್ನು ಹುರಿದುಂಬಿಸಿ ಪೌಲನಿಗೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಹಾಕಿದರು. 20 ಆದರೆ, ಯೇಸುವಿನ ಶಿಷ್ಯರು ಅವನ ಸುತ್ತಲೂ ನೆರೆದು ಬಂದಾಗ ಅವನು ಎದ್ದು ಪಟ್ಟಣದೊಳಗೆ ಹೋದನು. ಮರುದಿನ ಅವನು ಮತ್ತು ಬಾರ್ನಬನು ದರ್ಬೆಪಟ್ಟಣಕ್ಕೆ ಹೋದರು.

ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ

21 ಪೌಲ ಬಾರ್ನಬರು ದರ್ಬೆ ಪಟ್ಟಣದಲ್ಲೂ ಸುವಾರ್ತೆಯನ್ನು ತಿಳಿಸಿದರು. ಅನೇಕ ಜನರು ಯೇಸುವಿನ ಶಿಷ್ಯರಾದರು. ಪೌಲಬಾರ್ನಬರು ಲುಸ್ತ್ರ, ಇಕೋನಿಯ ಮತ್ತು ಅಂತಿಯೋಕ್ಯ ಪಟ್ಟಣಗಳಿಗೆ ಹಿಂತಿರುಗಿ, 22 ಯೇಸುವಿನ ಶಿಷ್ಯರನ್ನು ಬಲಗೊಳಿಸಿ, ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಪ್ರೋತ್ಸಾಹಿಸಿದರು, “ನಾವು ದೇವರ ರಾಜ್ಯಕ್ಕೆ ಅನೇಕ ಕಷ್ಟಗಳ ಮೂಲಕ ಹೋಗಬೇಕಾಗಿದೆ” ಎಂದು ಬೋಧಿಸಿದರು. 23 ಪೌಲ ಬಾರ್ನಬರು ಪ್ರತಿಯೊಂದು ಸಭೆಗೂ ಹಿರಿಯರನ್ನು ಆಯ್ಕೆ ಮಾಡಿದರು. ಅವರು ಈ ಹಿರಿಯರಿಗೋಸ್ಕರ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರನ್ನು ಪ್ರಭುವಿನ ಕೈಗೆ ಒಪ್ಪಿಸಿಕೊಟ್ಟರು.

24 ಪೌಲ ಬಾರ್ನಬರು ಪಿಸಿದಿಯ ನಾಡಿನ ಮೂಲಕವಾಗಿ ಪಾಂಫೀಲಿಯ ನಾಡಿಗೆ ಬಂದರು. 25 ಅವರು ದೇವರ ಸಂದೇಶವನ್ನು ಪೆರ್ಗ ಪಟ್ಟಣದಲ್ಲಿ ಬೋಧಿಸಿ, ಅಲ್ಲಿಂದ ಅತ್ತಾಲಿಯ ಪಟ್ಟಣಕ್ಕೆ ಬಂದರು. 26 ಅಲ್ಲಿಂದ ಅವರು ಸಿರಿಯಾದ ಅಂತಿಯೋಕ್ಯಕ್ಕೆ ನೌಕಾಯಾನ ಮಾಡಿದರು. ಈವರೆಗೆ ಮಾಡಿಮುಗಿಸಿದ್ದ ಸೇವಾಕಾರ್ಯಕ್ಕಾಗಿ ದೇವರ ಕೈಗೆ ಒಪ್ಪಿಸಿ ಕಳುಹಿಸಿಕೊಟ್ಟಿದ್ದವರು ಈ ಪಟ್ಟಣದ ವಿಶ್ವಾಸಿಗಳೇ.

27 ಪೌಲ ಬಾರ್ನಬರು ಇಲ್ಲಿಗೆ ತಲುಪಿದಾಗ, ಸಭಿಕರನ್ನೆಲ್ಲ ಒಟ್ಟುಗೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸಿದರು. ಮತ್ತು “ಇತರ ಜನಾಂಗಗಳವರು ಸಹ ನಂಬಿಕೊಳ್ಳುವಂತೆ ದೇವರು ಬಾಗಿಲನ್ನು ತೆರೆದಿದ್ದಾನೆ!” ಎಂದು ವಿವರಿಸಿದರು. 28 ಅಲ್ಲಿ ಪೌಲಬಾರ್ನಬರು ಯೇಸುವಿನ ಶಿಷ್ಯರೊಂದಿಗೆ ಬಹುಕಾಲ ಇದ್ದರು.

ಯೆರೆಮೀಯ 23

23 ಯೆಹೋವನ ಸಂದೇಶವಿದು: “ಯೆಹೂದದ ಕುರುಬರಿಗೆ ಒಳ್ಳೆಯದಾಗುವದಿಲ್ಲ. ಈ ಕುರುಬರು ಕುರಿಗಳನ್ನು ಹಾಳುಮಾಡುತ್ತಿದ್ದಾರೆ. ಅವರು ನನ್ನ ಹುಲ್ಲುಗಾವಲಿನಿಂದ ಕುರಿಗಳು ಎಲ್ಲಾ ದಿಕ್ಕುಗಳಿಗೂ ಓಡಿಹೋಗುವಂತೆ ಮಾಡುತ್ತಿದ್ದಾರೆ.”

ಆ ಕುರುಬರು ನನ್ನ ಜನರಿಗೆ ಹೊಣೆಗಾರರಾಗಿದ್ದಾರೆ. ಇಸ್ರೇಲಿನ ದೇವರಾದ ಯೆಹೋವನು ಆ ಕುರುಬರಿಗೆ ಹೀಗೆ ಹೇಳುತ್ತಾನೆ, “ನನ್ನ ಕುರಿಗಳು ಎಲ್ಲಾ ದಿಕ್ಕುಗಳಿಗೂ ಚದರುವಂತೆ ನೀವು ಮಾಡಿರುವಿರಿ. ನೀವು ಅವುಗಳನ್ನು ಓಡಿಸಿಬಿಟ್ಟಿದ್ದೀರಿ. ನೀವು ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳಲಿಲ್ಲ. ಈಗ ನಾನು ನಿಮ್ಮನ್ನು ವಿಚಾರಿಸಿಕೊಳ್ಳುತ್ತೇನೆ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮ್ಮನ್ನು ದಂಡಿಸುತ್ತೇನೆ.” ಯೆಹೋವನು ಹೀಗೆ ಹೇಳಿದನು. “ನಾನು ನನ್ನ ಕುರಿಗಳನ್ನು ಬೇರೆ ದೇಶಗಳಿಗೆ ಕಳುಹಿಸಿದೆ. ಆದರೆ ಉಳಿದ ನನ್ನ ಕುರಿಗಳನ್ನು ಒಂದೆಡೆ ಸೇರಿಸುವೆನು. ಅವುಗಳನ್ನು ಅವುಗಳ ಹುಲ್ಲುಗಾವಲಿಗೆ ತರುವೆನು. ಅವುಗಳಿಗೆ ಅನೇಕ ಮಕ್ಕಳಾಗಿ ಅವುಗಳ ಸಂಖ್ಯೆ ಬೆಳೆಯುವುದು. ನನ್ನ ಕುರಿಗಳನ್ನು ನೋಡಿಕೊಳ್ಳುವದಕ್ಕೆ ನಾನು ಹೊಸ ಕುರುಬರನ್ನು ನೇಮಿಸುವೆನು. ಆ ಕುರುಬರು ನನ್ನ ಕುರಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವರು. ನನ್ನ ಕುರಿಗಳು ಬೆದರುವದಿಲ್ಲ, ಭಯಪಡುವದಿಲ್ಲ. ನನ್ನ ಒಂದು ಕುರಿಯೂ ಕಳೆದುಹೋಗುವದಿಲ್ಲ.” ಇದು ಯೆಹೋವನ ಸಂದೇಶ.

ಸದ್ಧರ್ಮದ ಸಸಿ

ಇದು ಯೆಹೋವನ ಸಂದೇಶ:
“ನಾನು ಒಳ್ಳೆಯ ‘ಸಸಿಯನ್ನು’ ಚಿಗುರಿಸುವ ಕಾಲ ಬಂದಿದೆ.
    ಅವನು ಬುದ್ಧಿವಂತಿಕೆಯಿಂದ ಆಳುವ ರಾಜನಾಗಿರುವನು.
ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಬದ್ಧವಾದದ್ದನ್ನು ಮಾಡುವನು.
ಸದ್ಧರ್ಮದ ‘ಸಸಿಯ’ ಸಮಯದಲ್ಲಿ ಯೆಹೂದದ ಜನರು ರಕ್ಷಿಸಲ್ಪಡುವರು
    ಮತ್ತು ಇಸ್ರೇಲ್ ಸುರಕ್ಷಿತವಾಗಿರುವುದು.
ಯೆಹೋವನೇ, ನಮ್ಮ ಸದ್ಧರ್ಮ
    ಎಂಬ ಹೆಸರು ಅವನಿಗಾಗುವುದು.”

ಇದು ಯೆಹೋವನಿಂದ ಬಂದ ಸಂದೇಶ: “ಜನರು ಇನ್ನು ಮೇಲೆ ದೇವರ ಆಣೆಯನ್ನು ಹಳೆಯ ರೀತಿಯಲ್ಲಿ ಹೇಳಲಾರದ ಕಾಲ ಬರುತ್ತಿದೆ. ‘ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದ ಯೆಹೋವನ ಆಣೆ’ ಎಂಬುದು ದೇವರ ಆಣೆಯ ಹಳೆಯ ರೀತಿಯಾಗಿತ್ತು. ಆದರೆ ಹೊಸ ಕಾಲ ಬರಲಿದೆ. ಆಗ, ‘ಇಸ್ರೇಲರನ್ನು ಉತ್ತರದ ನಾಡಿನಿಂದಲೂ ಅವರನ್ನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದಲೂ ಹೊರತಂದ ಯೆಹೋವನಾಣೆ’ ಎಂದು ಹೇಳುವರು. ಆಗ ಇಸ್ರೇಲರು ಸ್ವದೇಶದಲ್ಲಿ ನೆಲಸುವರು.”

ಸುಳ್ಳುಪ್ರವಾದಿಗಳ ಬಗ್ಗೆ ನ್ಯಾಯನಿರ್ಣಯ

ಪ್ರವಾದಿಗಳಿಗೊಂದು ಸಂದೇಶ.
ನಾನು ಬಹಳ ದುಃಖಿತನಾಗಿದ್ದೇನೆ. ನನ್ನ ಹೃದಯ ಒಡೆದುಹೋಗಿದೆ.
    ನನ್ನ ಎಲುಬುಗಳೆಲ್ಲಾ ನಡುಗುತ್ತಿವೆ.
ನಾನು ಅಮಲೇರಿದವನಂತಿದ್ದೇನೆ.
    ಯೆಹೋವನೂ ಆತನ ಪರಿಶುದ್ಧ ನುಡಿಗಳೂ ಇದಕ್ಕೆ ಕಾರಣ.
10 ಯೆಹೂದ ದೇಶವು ವ್ಯಭಿಚಾರಿಗಳಿಂದ ತುಂಬಿಹೋಗಿದೆ.
    ಅವರು ಅನೇಕ ರೀತಿಯಲ್ಲಿ ಅಪನಂಬಿಗಸ್ತರಾಗಿದ್ದಾರೆ.
ಯೆಹೋವನು ನಾಡನ್ನು ಶಪಿಸಿದ್ದರಿಂದ
    ಅದು ಬರಡು ಭೂಮಿಯಾಯಿತು.
ಹುಲ್ಲುಗಾವಲಿನ ಸಸಿಗಳು ಒಣಗಿ ಸತ್ತುಹೋಗುತ್ತಲಿವೆ.
    ಹೊಲಗಳು ಮರುಭೂಮಿಯಂತಾಗಿವೆ.
ಪ್ರವಾದಿಗಳು ಸೆರೆ ಒಯ್ಯಲ್ಪಟ್ಟಿದ್ದಾರೆ.
    ಆ ಪ್ರವಾದಿಗಳು ತಮ್ಮ ಪ್ರಭಾವವನ್ನೂ ಶಕ್ತಿಯನ್ನೂ ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ.
11 “ಪ್ರವಾದಿಗಳೂ ಯಾಜಕರೂ ದುಷ್ಟರಾಗಿದ್ದಾರೆ.
    ಅವರು ನನ್ನ ಪವಿತ್ರಾಲಯದಲ್ಲಿಯೇ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಇದು ಯೆಹೋವನಿಂದ ಬಂದ ಸಂದೇಶ.
12 ಆದ್ದರಿಂದ ನಾನು ಅವರಿಗೆ ನನ್ನ ಸಂದೇಶಗಳನ್ನು ಇನ್ನು ಮೇಲೆ ಕೊಡುವುದಿಲ್ಲ.
    ಆಗ ಅವರು ಕತ್ತಲಲ್ಲಿ ನಡೆಯಬೇಕಾಗುವುದು.
ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ.
    ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು.
ನಾನು ಅವರಿಗೆ ಕೇಡನ್ನು ಬರಮಾಡಿ
    ಅವರನ್ನು ದಂಡಿಸುವೆನು.”
ಇದು ಯೆಹೋವನಿಂದ ಬಂದ ಸಂದೇಶ.

13 “ಸಮಾರ್ಯದ ಪ್ರವಾದಿಗಳು ಕೆಟ್ಟದ್ದಾಗಿ ನಡೆದುಕೊಂಡದ್ದನ್ನು ನಾನು ನೋಡಿದ್ದೇನೆ.
ಅವರು ಬಾಳ್ ದೇವತೆಗೋಸ್ಕರ ಆವೇಶದಿಂದ ಪ್ರವಾದಿಸಿದ್ದನ್ನು ನಾನು ಕಂಡಿದ್ದೇನೆ.
    ಆ ಪ್ರವಾದಿಗಳು ಇಸ್ರೇಲಿನ ಜನರನ್ನು ಯೆಹೋವನಿಂದ ದೂರ ತೆಗೆದುಕೊಂಡು ಹೋಗಿದ್ದಾರೆ.
14 ಯೆಹೂದದ ಪ್ರವಾದಿಗಳು ಜೆರುಸಲೇಮಿನಲ್ಲಿ
    ಭಯಂಕರ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಈ ಪ್ರವಾದಿಗಳು ವ್ಯಭಿಚಾರ ಮಾಡುತ್ತಾರೆ.
    ಅವರು ಸುಳ್ಳುಗಳನ್ನು ಕೇಳಿ, ಆ ಸುಳ್ಳುಬೋಧನೆಗಳನ್ನು ಪಾಲಿಸುತ್ತಾರೆ.
ಅವರು ದುಷ್ಟರಿಗೆ ಅವರ ದುಷ್ಟತನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ.
    ಆದ್ದರಿಂದ ಜನರು ಪಾಪಮಾಡುವುದನ್ನು ನಿಲ್ಲಿಸಲಿಲ್ಲ.
ಅವರೆಲ್ಲರು ನನಗೆ ಸೊದೋಮ್ ನಗರದಂತೆ ಇದ್ದಾರೆ.
    ಜೆರುಸಲೇಮಿನ ಜನರು ಗೊಮೋರ ನಗರದಂತೆ ಇದ್ದಾರೆ.”
15 ಸರ್ವಶಕ್ತನಾದ ಯೆಹೋವನು ಪ್ರವಾದಿಗಳ ಬಗ್ಗೆ ಹೀಗೆನ್ನುತ್ತಾನೆ,
“ನಾನು ಆ ಪ್ರವಾದಿಗಳನ್ನು ದಂಡಿಸುವೆನು.
    ಆ ಶಿಕ್ಷೆಯು ವಿಷಪೂರಿತ ಆಹಾರದಂತೆಯೂ ನೀರಿನಂತೆಯೂ ಇರುವುದು.
ಪ್ರವಾದಿಗಳು ಒಂದು ಆಧ್ಯಾತ್ಮಿಕ ವ್ಯಾಧಿಯನ್ನು ಪ್ರಾರಂಭಿಸಿದರು.
    ಆ ವ್ಯಾಧಿಯು ಇಡೀ ದೇಶದಲ್ಲೆಲ್ಲ ಪ್ರಸರಿಸಿತು.
ಆದ್ದರಿಂದ ನಾನು ಆ ಪ್ರವಾದಿಗಳನ್ನು ಶಿಕ್ಷಿಸುತ್ತೇನೆ.
    ಆ ವ್ಯಾಧಿಯು ಆ ಪ್ರವಾದಿಗಳಿಂದ ಜೆರುಸಲೇಮಿಗೆ ಬಂದಿತು.”

16 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
    “ಆ ಪ್ರವಾದಿಗಳು ನಿಮಗೆ ಹೇಳುತ್ತಿರುವ ವಿಷಯಗಳ ಕಡೆಗೆ ಗಮನ ಕೊಡಬೇಡಿರಿ.
ಅವರು ನಿಮ್ಮನ್ನು ಮರುಳುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
    ಅವರು ದರ್ಶನಗಳ ಬಗ್ಗೆ ಹೇಳುತ್ತಾರೆ.
    ಅವರ ದರ್ಶನಗಳು ಅವರ ಮನಸ್ಸಿನಿಂದ ಬಂದವುಗಳೇ ಹೊರತು ನನ್ನಿಂದ ಬಂದವುಗಳಲ್ಲ.
17 ಕೆಲವು ಜನರು ಯೆಹೋವನ ನಿಜವಾದ ಸಂದೇಶಗಳನ್ನು ದ್ವೇಷಿಸುತ್ತಾರೆ.
    ಆದ್ದರಿಂದ ಆ ಪ್ರವಾದಿಗಳು ಆ ಜನರಿಗೆ ಬೇರೆಯದನ್ನೇ ಹೇಳುತ್ತಾರೆ.
ಅವರು ‘ನಿಮಗೆ ಶುಭವಾಗುವುದು’ ಎನ್ನುತ್ತಾರೆ.
    ಕೆಲವು ಜನರು ಬಹಳ ಮೊಂಡರಾಗಿದ್ದಾರೆ.
ಅವರು ತಮ್ಮ ಮನಸ್ಸಿಗೆ ಬಂದುದನ್ನೇ ಮಾಡುತ್ತಾರೆ.
    ಅವರಿಗೆ ಈ ಪ್ರವಾದಿಗಳು ‘ನಿಮಗೆ ಯಾವ ಕೇಡೂ ಸಂಭವಿಸುವದಿಲ್ಲ’ ಎಂದು ಹೇಳುತ್ತಾರೆ.
18 ಈ ಪ್ರವಾದಿಗಳಲ್ಲಿ ಒಬ್ಬನಾದರೂ ಪರಲೋಕದ ಸಭೆಯಲ್ಲಿ ನಿಂತಿಲ್ಲ.
    ಒಬ್ಬನಾದರೂ ಯೆಹೋವನ ಸಂದೇಶವನ್ನು ಕೇಳಿಲ್ಲ, ಅಥವಾ ನೋಡಿಲ್ಲ.
    ಒಬ್ಬನಾದರೂ ಆತನ ಸಂದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿಲ್ಲ.
19 ಈಗ ಯೆಹೋವನಿಂದ ದಂಡನೆಯು ಬಿರುಗಾಳಿಯಂತೆ ಬರುವುದು.
ಯೆಹೋವನ ಕೋಪವು ತೂಫಾನಿನಂತೆ
    ದುಷ್ಟರ ತಲೆಯ ಮೇಲೆ ಆರ್ಭಟಿಸಿ ಬೀಳುವುದು.
20 ಆತನು ಮಾಡಬೇಕೆಂದು ಯೋಜಿಸಿದ್ದನ್ನು ಮಾಡಿ ಮುಗಿಸುವವರೆಗೆ
    ಆತನ ಕೋಪವು ಕಡಿಮೆಯಾಗುವುದಿಲ್ಲ.
ಆ ದಿನವಾದ ಮೇಲೆ ನೀವು ಇದನ್ನು
    ಸರಿಯಾಗಿ ಅರ್ಥಮಾಡಿಕೊಳ್ಳುವಿರಿ.
21 ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ.
    ಆದರೂ ಅವರು ತಮ್ಮ ಸಂದೇಶವನ್ನು ಕೊಡಲು ಆತುರಪಟ್ಟರು.
ನಾನು ಅವರೊಂದಿಗೆ ಮಾತನಾಡಲಿಲ್ಲ
    ಆದರೂ ಅವರು ನನ್ನ ಹೆಸರು ಹೇಳಿ ಉಪದೇಶ ಮಾಡಿದರು.
22 ಅವರು ನನ್ನ ಪರಲೋಕದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದಲ್ಲಿ
    ಅವರು ನನ್ನ ಸಂದೇಶಗಳನ್ನು ಯೆಹೂದದ ಜನರಿಗೆ ಹೇಳಬಹುದಾಗಿತ್ತು.
ಅವರ ಕೆಟ್ಟತನವನ್ನೂ
    ದುಷ್ಟತನವನ್ನೂ ತಡೆಯಬಹುದಾಗಿತ್ತು.”

23 ಈ ಸಂದೇಶ ಯೆಹೋವನಿಂದ ಬಂದಿತು:
“ನಾನೇ ಯೆಹೋವನು. ನಾನು ಯಾವಾಗಲೂ ಸಮೀಪವಾಗಿದ್ದೇನೆ.
    ನಾನು ಬಹಳ ದೂರವಿಲ್ಲ.
24 ಒಬ್ಬನು ನನಗೆ ಕಾಣದಂತೆ ಗುಪ್ತವಾದ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ
ನಾನು ಅವನನ್ನು ಸರಾಗವಾಗಿ ನೋಡಬಲ್ಲೆನು.
    ನಾನು ಭೂಮ್ಯಾಕಾಶಗಳ ಎಲ್ಲಾ ಕಡೆಗಳಲ್ಲೂ ಇದ್ದೇನೆ.”

ಯೆಹೋವನೇ ಇವುಗಳನ್ನು ಹೇಳಿದ್ದಾನೆ. 25 “ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುವ ಪ್ರವಾದಿಗಳಿದ್ದಾರೆ. ಅವರು ‘ನಾನೊಂದು ಕನಸು ಕಂಡೆ, ನಾನೊಂದು ಕನಸು ಕಂಡೆ’ ಎಂದು ಹೇಳುತ್ತಾರೆ. 26 ಎಷ್ಟು ದಿನ ಹೀಗೆ ನಡೆಯುವುದು? ಆ ಪ್ರವಾದಿಗಳು ಸುಳ್ಳುಗಳನ್ನೇ ಯೋಚಿಸುತ್ತಾರೆ. ಆಮೇಲೆ ಆ ಸುಳ್ಳುಗಳನ್ನೇ ಜನರಿಗೆ ಬೋಧಿಸುತ್ತಾರೆ. 27 ಯೆಹೂದದ ಜನರು ನನ್ನ ಹೆಸರನ್ನು ಮರೆಯುವಂತೆ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು ಈ ಸುಳ್ಳು ಕನಸುಗಳ ಬಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತಂತೆಯೇ ನನ್ನ ಜನರು ಸಹ ನನ್ನನ್ನು ಮರೆಯಲೆಂದು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತು ಸುಳ್ಳುದೇವರಾದ ಬಾಳನನ್ನು ಪೂಜಿಸಿದರು. 28 ಹೊಟ್ಟು, ಗೋಧಿಯ ಕಾಳಲ್ಲ. ಅದೇ ರೀತಿ, ಆ ಪ್ರವಾದಿಗಳ ಕನಸುಗಳು ನನ್ನ ಸಂದೇಶಗಳಲ್ಲ. ಒಬ್ಬ ವ್ಯಕ್ತಿಗೆ ತನ್ನ ಕನಸಿನ ಬಗ್ಗೆ ಹೇಳಬೇಕೆನಿಸಿದರೆ, ಅವನು ಹೇಳಲಿ. ಆದರೆ ನನ್ನ ಸಂದೇಶವನ್ನು ಕೇಳಿದ ಮನುಷ್ಯನು ಆ ಸಂದೇಶವನ್ನು ಯಥಾರ್ಥವಾಗಿ ಹೇಳಲಿ. 29 ನನ್ನ ಸಂದೇಶವು ಬೆಂಕಿಯ ಜ್ವಾಲೆಯಂತಿದೆ. ಅದು ಕಲ್ಲುಬಂಡೆಯನ್ನು ಒಡೆದುಹಾಕುವ ಸುತ್ತಿಗೆಯಂತಿದೆ” ಇದು ಯೆಹೋವನ ನುಡಿ.

30 “ನಾನು ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಯೆಹೋವನ ನುಡಿ. “ಈ ಪ್ರವಾದಿಗಳು ನನ್ನ ಪದಗಳನ್ನು ಒಬ್ಬರಿಂದೊಬ್ಬರು ಕದಿಯುತ್ತಿದ್ದಾರೆ.[a] 31 ನಾನು ಸುಳ್ಳುಪ್ರವಾದಿಗಳನ್ನು ವಿರೋಧಿಸುತ್ತೇನೆ.” ಇದು ಯೆಹೋವನ ನುಡಿ. “ಅವರು ತಮ್ಮ ಮಾತುಗಳನ್ನು ಹೇಳಿ ಅದು ನನ್ನ ಸಂದೇಶವೆಂಬುವಂತೆ ನಟನೆ ಮಾಡುತ್ತಾರೆ. 32 ನಾನು ಕಾಲ್ಪನಿಕ ಕನಸುಗಳನ್ನು ಬೋಧಿಸುವ ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಬೋಧನೆಗಳಿಂದ ನನ್ನ ಜನರನ್ನು ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನ್ನು ಕಳುಹಿಸಿಲ್ಲ. ನನಗೋಸ್ಕರವಾಗಿ ಏನನ್ನಾದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸ್ವಲ್ಪವೂ ಸಹಾಯವನ್ನು ಮಾಡಲಾರರು” ಇದು ಯೆಹೋವನ ನುಡಿ.

ಯೆಹೋವನಿಂದ ದುಃಖಕರ ಸಂದೇಶ

33 “ಯೆಹೂದದ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ‘ಯೆರೆಮೀಯನೇ, ಯೆಹೋವನು ದಯಪಾಲಿಸಿರುವ ಪ್ರಕಟನೆಯೇನು?’ ಎಂದು ನಿನ್ನನ್ನು ಕೇಳಬಹುದು. ನೀನು ಅವರಿಗೆ, ‘ಯೆಹೋವನಿಗೆ ನೀವೇ ದೊಡ್ಡ ಭಾರ.[b] ನಾನು ಆ ಭಾರವನ್ನು ಕೆಳಗೆ ಎಸೆದುಬಿಡುತ್ತೇನೆ’” ಎಂದು ಉತ್ತರಿಸು. ಇದು ಯೆಹೋವನ ನುಡಿ.

34 “ಒಬ್ಬ ಪ್ರವಾದಿಯಾಗಲಿ ಯಾಜಕನಾಗಲಿ ಸಾಮಾನ್ಯ ಮನುಷ್ಯನಾಗಲಿ ‘ಇದು ಯೆಹೋವನ ಭಾರ’ ಎಂದು ಹೇಳಿದರೆ ಅವನು ಸುಳ್ಳು ಹೇಳಿದಂತೆಯೇ. ಆದ್ದರಿಂದ ನಾನು ಆ ವ್ಯಕ್ತಿಯನ್ನು ಮತ್ತು ಅವರ ಇಡೀ ಕುಟುಂಬವನ್ನು ದಂಡಿಸುತ್ತೇನೆ. 35 ನೀವು ಪರಸ್ಪರ ‘ಯೆಹೋವನ ಉತ್ತರವೇನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಮಾತನಾಡಬೇಕು. 36 ನೀವು ಪುನಃ ಎಂದಿಗೂ ‘ಯೆಹೋವನ ಭಾರ’ ಎಂಬ ಮಾತನ್ನು ಉಪಯೋಗಿಸಕೂಡದು. ಏಕೆಂದರೆ ಯೆಹೋವನ ಸಂದೇಶವು ಯಾರಿಗೂ ಭಾರವಾಗಬೇಕಾಗಿಲ್ಲ. ಆದರೆ ನೀವು ನಿಮ್ಮ ದೇವರ ಮಾತುಗಳನ್ನು ತಲೆಕೆಳಗೆ ಮಾಡಿದ್ದೀರಿ. ಆತನು ಸರ್ವಶಕ್ತನಾಗಿದ್ದಾನೆ ಮತ್ತು ಜೀವಸ್ವರೂಪನಾದ ದೇವರಾಗಿದ್ದಾನೆ.

37 “ನೀವು ದೇವರ ಸಂದೇಶವನ್ನು ತಿಳಿದುಕೊಳ್ಳ ಬಯಸಿದರೆ ಪ್ರವಾದಿಯನ್ನು ಕುರಿತು ‘ಯೆಹೋವನು ನಿನಗೆ ಏನೆಂದು ಉತ್ತರವನ್ನು ಕೊಟ್ಟನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಕೇಳಿರಿ. 38 ಆದರೆ ‘ಯೆಹೋವನ ಭಾರವೇನು?’ ಎಂದು ಕೇಳಬೇಡಿರಿ. ನೀವು ಆ ಪದಗಳನ್ನು ಬಳಸಿದರೆ ಯೆಹೋವನು ನಿಮಗೆ ಹೀಗೆ ಹೇಳುವನು: ‘ನೀವು ನನ್ನ ಸಂದೇಶವನ್ನು “ಯೆಹೋವನ ಭಾರವೆಂದು” ಹೇಳಬಾರದಾಗಿತ್ತು. ಆ ಪದಗಳನ್ನು ಬಳಸಬಾರದೆಂದು ನಾನು ನಿಮಗೆ ಹೇಳಿದ್ದೇನೆ. 39 ಆದರೆ ನೀವು ನನ್ನ ಸಂದೇಶವನ್ನು ಭಾರವಾದ ಹೊರೆ ಎಂದು ಹೇಳಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಒಂದು ಭಾರವಾದ ಹೊರೆಯಂತೆ ಎತ್ತಿ ನನ್ನಿಂದ ದೂರ ಎಸೆಯುತ್ತೇನೆ. ನಾನು ನಿಮ್ಮ ಪೂರ್ವಿಕರಿಗೆ ಜೆರುಸಲೇಮ್ ನಗರವನ್ನು ಕೊಟ್ಟೆ. ಆದರೆ ನಾನು ನಿಮ್ಮನ್ನೂ ಆ ನಗರವನ್ನೂ ನನ್ನಿಂದ ದೂರ ಎಸೆಯುವೆನು. 40 ನಿಮಗೆ ಶಾಶ್ವತವಾದ ಅಪಕೀರ್ತಿಯನ್ನು ತರುವೆನು. ನೀವು ಈ ಅವಮಾನವನ್ನು ಎಂದಿಗೂ ಮರೆಯಲಾರಿರಿ.’”

ಮಾರ್ಕ 9

ಆಮೇಲೆ ಯೇಸು ಜನರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ನಿಮ್ಮಲ್ಲಿ ಕೆಲವು ಜನರು ತಾವು ಸಾಯುವುದಕ್ಕೆ ಮುಂಚೆ ದೇವರ ರಾಜ್ಯವು ಅಧಿಕಾರದೊಡನೆ ಬರುವುದನ್ನು ನೋಡುತ್ತಾರೆ” ಎಂದು ಹೇಳಿದನು.

ಮೋಶೆ ಮತ್ತು ಎಲೀಯರೊಡನೆ ಯೇಸು

(ಮತ್ತಾಯ 17:1-13; ಲೂಕ 9:28-36)

ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು. ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ. ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು.

ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು. ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು.

ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು.

ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.

ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು.

10 ಆದ್ದರಿಂದ ಆ ಶಿಷ್ಯರು ಈ ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು. 11 ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು.

12 ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ? 13 ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು.

ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ

(ಮತ್ತಾಯ 17:14-20; ಲೂಕ 9:37-43)

14 ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು. 15 ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.

16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.

17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ. 18 ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.

19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.

20 ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.

21 ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು.

ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ. 22 ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.

23 ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

24 ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.

25 ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.

26 ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು. 27 ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.

28 ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.

29 ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ

(ಮತ್ತಾಯ 17:22-23; ಲೂಕ 9:43-45)

30 ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು. 31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು. 32 ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು.

ಯಾರು ಅತ್ಯಂತ ದೊಡ್ಡವರು?

(ಮತ್ತಾಯ 18:1-5; ಲೂಕ 9:46-48)

33 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು. 34 ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು.

35 ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು.

36 ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ, 37 “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು.

ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ

(ಲೂಕ 9:49-50)

38 ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.

39 ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. 40 ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ. 41 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.

ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ

(ಮತ್ತಾಯ 18:6-9; ಲೂಕ 17:1-2)

42 “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು. 43 ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ. 44 [a] 45 ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು. 46 [b] 47 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು. 48 ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.

49 “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.

50 “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ[c] ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International