Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 9

ಅಬೀಮೆಲೆಕನು ಅರಸನಾದನು

ಅಬೀಮೆಲೆಕನು ಯೆರುಬ್ಬಾಳನ (ಗಿದ್ಯೋನನ) ಮಗನು. ಅಬೀಮೆಲೆಕನು ಶೆಕೆಮಿನಲ್ಲಿದ್ದ ತನ್ನ ಸೋದರ ಮಾವಂದಿರಲ್ಲಿಗೆ ಹೋದನು. ಅವನು ತನ್ನ ಸೋದರ ಮಾವಂದಿರಿಗೂ ತನ್ನ ತಾಯಿಯ ಕುಟುಂಬದವರೆಲ್ಲರಿಗೂ ಮತ್ತು ಶೆಕೆಮಿನ ಹಿರಿಯರಿಗೆ, “‘ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳುವುದು ಒಳ್ಳೆಯದೋ ಅಥವಾ ನಾನೊಬ್ಬನೇ ನಿಮ್ಮನ್ನು ಆಳುವುದು ಒಳ್ಳೆಯದೋ’ ಎಂಬ ಪ್ರಶ್ನೆಯನ್ನು ಕೇಳಿದ್ದಲ್ಲದೆ ನಾನು ನಿಮ್ಮ ರಕ್ತಸಂಬಂಧಿ ಎಂಬುದನ್ನು ನೆನಪಿಡಿ” ಎಂದು ಹೇಳಿದನು.

ಅಬೀಮೆಲೆಕನ ಸೋದರ ಮಾವಂದಿರು ಶೆಕೆಮಿನ ಹಿರಿಯರ ಜೊತೆ ಮಾತನಾಡಿ ಅವರಿಗೆ ಆ ಪ್ರಶ್ನೆಯನ್ನು ಕೇಳಿದರು. ಶೆಕೆಮಿನ ಹಿರಿಯರು ಅಬೀಮೆಲೆಕನ ಪಕ್ಷವಹಿಸಲು ನಿರ್ಧರಿಸಿದರು. ಆ ಹಿರಿಯರು, “ಎಷ್ಟೇ ಆದರೂ ಅವನು ನಮ್ಮ ಸಹೋದರ” ಎಂದರು. ಶೆಕೆಮಿನ ಹಿರಿಯರು ಅಬೀಮೆಲೆಕನಿಗೆ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ಕೊಟ್ಟರು. ಆ ಬೆಳ್ಳಿಯು ಬಾಳ್‌ಬೆರೀತನ ಗುಡಿಗೆ ಸೇರಿತ್ತು. ಕೆಲವು ಗಂಡಸರನ್ನು ಕೂಲಿಗೆ ತೆಗೆದುಕೊಳ್ಳಲು ಅವನು ಈ ಬೆಳ್ಳಿಯನ್ನು ಬಳಸಿಕೊಂಡನು. ಈ ಗಂಡಸರು ಅಯೋಗ್ಯರೂ ದುಷ್ಟರೂ ಆಗಿದ್ದರು. ಅವರು ಅಬೀಮೆಲೆಕನ ಹಿಂಬಾಲಕರಾಗಿದ್ದರು.

ಅಬೀಮೆಲೆಕನು ಒಫ್ರದಲ್ಲಿದ್ದ ತನ್ನ ತಂದೆಯ ಮನೆಗೆ ಹೋದನು. ಅಬೀಮೆಲೆಕನು ತನ್ನ ಸಹೋದರರ ಕೊಲೆ ಮಾಡಿದನು. ಅಬೀಮೆಲೆಕನು ತನ್ನ ತಂದೆಯಾದ ಯೆರುಬ್ಬಾಳನ ಎಪ್ಪತ್ತು ಮಕ್ಕಳನ್ನು ಕೊಂದನು. ಅವನು ಅವರೆಲ್ಲರನ್ನು ಏಕಕಾಲದಲ್ಲಿ ಕೊಂದನು. ಆದರೆ ಯೆರುಬ್ಬಾಳನ ಕಿರಿಯ ಮಗನು ಅಡಗಿಕೊಂಡಿದ್ದು ತಪ್ಪಿಸಿಕೊಂಡನು. ಆ ಕಿರಿಯ ಮಗನ ಹೆಸರು ಯೋತಾಮ.

ತರುವಾಯ ಶೆಕೆಮಿನ ಎಲ್ಲ ಹಿರಿಯರೂ ಮಿಲ್ಲೋ ಕೋಟೆಯವರೂ ಒಂದೆಡೆ ಬಂದರು. ಅವರೆಲ್ಲರೂ ಶೆಕೆಮಿನಲ್ಲಿದ್ದ ಜ್ಞಾಪಕಸ್ತಂಭದ ಬಳಿ ಇರುವ ದೊಡ್ಡ ಮರದ ಕೆಳಗೆ ಸೇರಿ ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿದರು.

ಯೋತಾಮನ ಕಥೆ

ಶೆಕೆಮಿನ ಹಿರಿಯರು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ ಸಮಾಚಾರವನ್ನು ಯೋತಾಮನು ಕೇಳಿದನು. ಕೂಡಲೇ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ಯೋತಾಮನು ಜನರಿಗೆ ಈ ಕಥೆಯನ್ನು ಕೂಗಿಕೂಗಿ ಹೇಳಿದನು:

“ಶೆಕೆಮಿನ ಹಿರಿಯರೇ, ನನ್ನ ಮಾತನ್ನು ಕೇಳಿರಿ; ಆಗ ಯೆಹೋವನು ನಿಮ್ಮ ಮಾತನ್ನು ಕೇಳುವನು.

“ಒಮ್ಮೆ ಮರಗಳು ತಮ್ಮನ್ನು ಆಳುವುದಕ್ಕೆ ಒಬ್ಬ ಅರಸನನ್ನು ಆರಿಸಬೇಕೆಂದು ನಿರ್ಧರಿಸಿದವು. ಆ ಮರಗಳು ಆಲಿವ್ ಮರಕ್ಕೆ, ‘ನೀನು ನಮ್ಮ ಅರಸನಾಗಿ ಆಳು’ ಎಂದು ಕೇಳಿಕೊಂಡವು.

“ಆದರೆ ಆಲಿವ್ ಮರವು, ‘ಜನರು ಮತ್ತು ದೇವತೆಗಳು ನನ್ನ ಎಣ್ಣೆಗಾಗಿ ನನ್ನನ್ನು ತುಂಬ ಹೊಗಳುತ್ತಾರೆ; ಬೇರೆ ಮರಗಳ ಮೇಲೆ ಆಳುವುದಕ್ಕಾಗಿ ನಾನು ಎಣ್ಣೆ ಮಾಡುವುದನ್ನು ಬಿಡಬೇಕೇ?’ ಎಂದು ಕೇಳಿತು.

10 “ಆಗ ಆ ಮರಗಳು ಅಂಜೂರದ ಮರದ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.

11 “ಆದರೆ ಅಂಜೂರದ ಮರವು, ‘ನಾನು ಕೇವಲ ಬೇರೆ ಮರಗಳ ಮೇಲೆ ಆಳ್ವಿಕೆ ಮಾಡುವುದಕ್ಕಾಗಿ ಉತ್ತಮವಾದ ಮತ್ತು ರುಚಿಕರವಾದ ಹಣ್ಣುಗಳು ಫಲಿಸುವುದನ್ನು ನಿಲ್ಲಿಸಬೇಕೇ?’ ಎಂದು ಕೇಳಿತು.

12 “ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು’ ಎಂದವು.

13 “ಆದರೆ ದ್ರಾಕ್ಷಾಲತೆಯು, ‘ನನ್ನ ರಸವು ಎಲ್ಲ ಜನರಿಗೂ ಮತ್ತು ರಾಜರುಗಳಿಗೂ ಸಂತೋಷವನ್ನು ಉಂಟುಮಾಡುತ್ತದೆ. ಕೇವಲ ಬೇರೆ ಮರಗಳ ಮೇಲೆ ಅಧಿಕಾರ ನಡೆಸುವುದಕ್ಕಾಗಿ ನಾನು ನನ್ನ ರಸ ಕೊಡುವುದನ್ನು ನಿಲ್ಲಿಸಬೇಕೇ?’ ಎಂದು ಕೇಳಿತು.

14 “ಕೊನೆಗೆ ಎಲ್ಲ ಮರಗಳು ಮುಳ್ಳುಪೊದೆಗೆ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.

15 “ಆ ಮುಳ್ಳುಪೊದೆಯು, ‘ನೀವು ನಿಜವಾಗಿಯೂ ನನ್ನನ್ನು ನಿಮ್ಮ ಅರಸನನ್ನಾಗಿ ಮಾಡಬೇಕೆಂದು ಇಚ್ಛೆಪಟ್ಟರೆ, ನೀವು ಬಂದು ನನ್ನ ನೆರಳಿನಲ್ಲಿ ಆಶ್ರಯಪಡೆಯಿರಿ; ನೀವು ಹೀಗೆ ಮಾಡಲು ಒಪ್ಪದಿದ್ದರೆ ನನ್ನಿಂದ ಬೆಂಕಿ ಹೊರಡಲಿ. ಆ ಬೆಂಕಿಯು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡಲಿ’ ಎಂದಿತು.

16 “ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡುವಾಗ ಪ್ರಾಮಾಣಿಕರಾಗಿದ್ದರೆ, ಅವನ ಸಂಗಡ ಸಂತೋಷದಿಂದಿರಿ. ನೀವು ಯೆರುಬ್ಬಾಳ ಮತ್ತು ಅವನ ಕುಟುಂಬದವರೊಡನೆ ನ್ಯಾಯದಿಂದ ನಡೆದುಕೊಂಡಿದ್ದರೆ ಒಳ್ಳೆಯದೇ ಸರಿ. ನೀವು ಯೆರುಬ್ಬಾಳನಿಗೋಸ್ಕರ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದರೆ ಒಳ್ಳೆಯದು. 17 ಆದರೆ ನಿಮಗೆ ನಮ್ಮ ತಂದೆಯು ಏನು ಮಾಡಿದನೆಂಬುದನ್ನು ಯೋಚಿಸಿರಿ. ನಮ್ಮ ತಂದೆಯು ನಿಮಗೋಸ್ಕರ ಯುದ್ಧ ಮಾಡಿದನು. ಅವನು ಮಿದ್ಯಾನ್ಯರಿಂದ ನಿಮ್ಮನ್ನು ರಕ್ಷಿಸಲು ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿದನು. 18 ಆದರೆ ನೀವು ಈಗ ನಮ್ಮ ತಂದೆಯ ಕುಟುಂಬದವರನ್ನು ವಿರೋಧಿಸುತ್ತಿದ್ದೀರಿ. ನೀವು ನಮ್ಮ ತಂದೆಯ ಎಪ್ಪತ್ತು ಮಕ್ಕಳನ್ನು ಏಕಕಾಲದಲ್ಲಿ ಕೊಲೆಮಾಡಿದ್ದೀರಿ. ನೀವು ಅಬೀಮೆಲೆಕನನ್ನು ಶೆಕೆಮಿನ ಅರಸನನ್ನಾಗಿ ಮಾಡಿದ್ದೀರಿ. ಅವನು ನಿಮ್ಮ ರಕ್ತ ಸಂಬಂಧಿ ಎಂಬ ಕಾರಣದಿಂದ ಅವನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ಅವನು ಕೇವಲ ನಮ್ಮ ತಂದೆಯ ದಾಸಿ ಪುತ್ರ. 19 ನೀವು ಇಂದು ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ ಧರ್ಮವೂ ಆಗಿದ್ದರೆ ನೀವು ಅಬೀಮೆಲೆಕನನ್ನು ನಿಮ್ಮ ಅರಸನೆಂದು ಒಪ್ಪಿ ಸಂತೋಷದಿಂದ ಇದ್ದುಬಿಡಿ. ಅವನೂ ನಿಮ್ಮ ಜೊತೆ ಸಂತೋಷದಿಂದ ಇರಲಿ. 20 ಆದರೆ ನೀವು ಮಾಡಿದ್ದು ಸರಿಯಾಗಿರದ ಪಕ್ಷದಲ್ಲಿ ಶೆಕೆಮಿನ ಹಿರಿಯರಾದ ನಿಮ್ಮನ್ನೂ ಮಿಲ್ಲೋ ಕೋಟೆಯವರನ್ನೂ ಅಬೀಮೆಲೆಕನು ನಾಶಮಾಡಲಿ. ಅಬೀಮೆಲೆಕನು ಕೂಡ ನಾಶಹೊಂದಲಿ” ಎಂದನು.

21 ಇದನ್ನೆಲ್ಲಾ ಹೇಳಿ ಯೋತಾಮನು ಬೇರ ಎಂಬ ನಗರಕ್ಕೆ ಓಡಿಹೋದನು. ಯೋತಾಮನು ತನ್ನ ಸಹೋದರನಾದ ಅಬೀಮೆಲೆಕನಿಗೆ ಹೆದರಿ ಅದೇ ನಗರದಲ್ಲಿ ಉಳಿದುಕೊಂಡನು.

ಶೆಕೆಮಿನ ಜನರ ವಿರುದ್ಧ ಅಬೀಮೆಲೆಕನ ಯುದ್ಧ

22 ಅಬೀಮೆಲೆಕನು ಇಸ್ರೇಲರನ್ನು ಮೂರು ವರ್ಷ ಆಳಿದನು. 23-24 ಅಬೀಮೆಲೆಕನು ಯೆರುಬ್ಬಾಳನ ಎಪ್ಪತ್ತು ಮಕ್ಕಳನ್ನು ಕೊಂದಿದ್ದನು. ಅವರು ಅವನ ಸ್ವಂತ ಸಹೋದರರಾಗಿದ್ದರು. ಶೆಕೆಮಿನ ಹಿರಿಯರು ಈ ದುಷ್ಕೃತ್ಯದಲ್ಲಿ ಅವನಿಗೆ ಬೆಂಬಲ ಕೊಟ್ಟಿದ್ದರು. ಆದ್ದರಿಂದ ಯೆಹೋವನು ಅಬೀಮೆಲೆಕನ ಮತ್ತು ಶೆಕೆಮಿನ ಹಿರಿಯರ ಮಧ್ಯೆ ಮನಸ್ತಾಪ ಹುಟ್ಟುವಂತೆ ಮಾಡಿದನು. ಶೆಕೆಮಿನ ಹಿರಿಯರು ಅಬೀಮೆಲೆಕನಿಗೆ ಕಷ್ಟ ಕೊಡಲು ಯೋಚಿಸುತ್ತಿದ್ದರು. 25 ಶೆಕೆಮಿನ ಹಿರಿಯರಿಗೆ ಅಬೀಮೆಲೆಕನ ಮೇಲಿದ್ದ ಅಭಿಮಾನ ಇಲ್ಲವಾಯಿತು. ಅವರು ಅಲ್ಲಿ ಸಂಚರಿಸುವ ಜನರ ಮೇಲೆ ಧಾಳಿ ಮಾಡಿ ಲೂಟಿಮಾಡಲು ಬೆಟ್ಟಗಳ ಮೇಲೆ ಜನರನ್ನು ಇಟ್ಟರು. ಅಬೀಮೆಲೆಕನಿಗೆ ಈ ಧಾಳಿಗಳ ವಿಷಯ ತಿಳಿದುಬಂತು.

26 ಎಬೆದನ ಮಗನಾದ ಗಾಳನೆಂಬವನು ತನ್ನ ಸಹೋದರರ ಸಮೇತ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಗಾಳನನ್ನು ನಂಬಿ ಅವನನ್ನು ಅನುಸರಿಸಲು ನಿರ್ಧರಿಸಿದರು.

27 ಶೆಕೆಮಿನ ಜನರು ದ್ರಾಕ್ಷಿಯನ್ನು ಕೊಯಿದುಕೊಂಡು ಬರಲು ತಮ್ಮ ಹೊಲಗಳಿಗೆ ಹೋದರು. ಆ ದ್ರಾಕ್ಷಿಯನ್ನು ಹಿಂಡಿ ದ್ರಾಕ್ಷಾರಸ ಮಾಡಿದರು. ಆಮೇಲೆ ತಮ್ಮ ದೇವರ ಮಂದಿರದಲ್ಲಿ ಒಂದು ಉತ್ಸವನ್ನು ಮಾಡಿದರು. ಆ ಜನರು ತಿಂದು ಕುಡಿದು, ಅಬೀಮೆಲೆಕನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದರು.

28 ಆಗ ಎಬೆದನ ಮಗನಾದ ಗಾಳನು, “ನಾವು ಶೆಕೆಮಿನ ಜನರು. ನಾವು ಅಬೀಮೆಲೆಕನ ಆಜ್ಞೆಗಳನ್ನು ಏಕೆ ಪಾಲಿಸಬೇಕು? ಅವನು ತನ್ನನ್ನು ಯಾರೆಂದು ತಿಳಿದುಕೊಂಡಿದ್ದಾನೆ? ಅಬೀಮೆಲೆಕನು ಯೆರುಬ್ಬಾಳನ ಮಕ್ಕಳಲ್ಲಿ ಒಬ್ಬನು. ಅದು ಸರಿಯಲ್ಲವೇ? ಅಬೀಮೆಲೆಕನು ಜೆಬುಲನನ್ನು ತನ್ನ ಪುರಾಧಿಕಾರಿಯನ್ನಾಗಿ ನೇಮಿಸಿರುವುದೂ ನಿಜವಲ್ಲವೇ? ನಾವು ಅಬೀಮೆಲೆಕನ ಆಜ್ಞೆ ಪಾಲಿಸುವುದು ಬೇಡ. ನಾವು ನಮ್ಮ ಜನರಾದ ಹಮೋರನ ಸಂತತಿಯವರ ಆಜ್ಞೆಯನ್ನೇ ಪಾಲಿಸೋಣ. (ಹಮೋರನು ಶೆಕೆಮನ ತಂದೆ.) 29 ನೀವು ನನಗೆ ಈ ಜನರ ಅಧಿಕಾರಿಯನ್ನಾಗಿ ಮಾಡಿದರೆ, ನಾನು ಅಬೀಮೆಲೆಕನನ್ನು ನಾಶಮಾಡುತ್ತೇನೆ. ನಾನು ಅವನಿಗೆ, ‘ನಿನ್ನ ಸೈನ್ಯವನ್ನು ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಬಾ’ ಎಂದು ಕರೆಯುತ್ತೇನೆ” ಎಂದನು.

30 ಜೆಬುಲನು ಶೆಕೆಮ್ ನಗರದ ಪುರಾಧಿಕಾರಿಯಾಗಿದ್ದನು. ಎಬೆದನ ಮಗನಾದ ಗಾಳನ ಮಾತುಗಳನ್ನು ಜೆಬುಲನು ಕೇಳಿ ಬಹಳ ಕೋಪಗೊಂಡನು. 31 ಜೆಬುಲನು ಅರೂಮ ನಗರದಲ್ಲಿದ್ದ[a] ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿದನು. ಅವನು ಕಳುಹಿಸಿದ ಸಂದೇಶ ಹೀಗಿದೆ:

“ಎಬೆದನ ಮಗನಾದ ಗಾಳನು ಮತ್ತು ಅವನ ಸಹೋದರರು ಶೆಕೆಮ್ ನಗರಕ್ಕೆ ಬಂದಿದ್ದಾರೆ. ಅವರು ನಿನಗೆ ತೊಂದರೆಯನ್ನು ಉಂಟುಮಾಡುತ್ತಿದ್ದಾರೆ. ಗಾಳನು ಇಡೀ ನಗರವನ್ನು ನಿನ್ನ ವಿರುದ್ಧ ಎತ್ತಿಕಟ್ಟುತ್ತಿದ್ದಾನೆ. 32 ಅದಕ್ಕಾಗಿ ನೀನು ಮತ್ತು ನಿನ್ನ ಜನರು ಈ ರಾತ್ರಿ ಬಂದು ನಗರದ ಹೊರಗಡೆ ಹೊಲಗಳಲ್ಲಿ ಅಡಗಿಕೊಂಡಿರಬೇಕು. 33 ಬೆಳಗಾಗಿ ಸೂರ್ಯನು ಮೇಲೇರಿದ ತರುವಾಯ ನಗರದ ಮೇಲೆ ಧಾಳಿಮಾಡಬೇಕು. ಗಾಳ ಮತ್ತು ಅವನ ಜನರು ನಿನ್ನ ಸಂಗಡ ಯುದ್ಧ ಮಾಡುವುದಕ್ಕೆ ನಗರದಿಂದ ಹೊರಗೆ ಬರುತ್ತಾರೆ. ಅವರು ಹೊರಗೆ ಬಂದಾಗ ನಿನಗೆ ತೋರಿದಂತೆ ಅವರಿಗೆ ಮಾಡು.”

34 ಅಬೀಮೆಲೆಕ ಮತ್ತು ಅವನ ಸೈನಿಕರು ರಾತ್ರಿಯಲ್ಲಿ ಎದ್ದು ನಗರಕ್ಕೆ ಹೋದರು. ಆ ಸೈನಿಕರು ತಮ್ಮನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಶೆಕೆಮ್ ನಗರದ ಹತ್ತಿರ ಅಡಗಿಕೊಂಡರು. 35 ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಶೆಕೆಮ್ ನಗರದ ಪ್ರವೇಶದ್ವಾರದಲ್ಲಿ ನಿಂತಿದ್ದನು. ಗಾಳನು ಅಲ್ಲಿ ನಿಂತಿದ್ದಾಗ ಅಬೀಮೆಲೆಕ ಮತ್ತು ಅವನ ಸೈನಿಕರು ತಾವು ಅಡಗಿದ್ದ ಸ್ಥಳಗಳನ್ನು ಬಿಟ್ಟು ಹೊರಗೆ ಬಂದರು.

36 ಗಾಳನು ಸೈನಿಕರನ್ನು ನೋಡಿದನು. ಗಾಳನು ಜೆಬುಲನಿಗೆ, “ಅಲ್ಲಿ ನೋಡು, ಬೆಟ್ಟ ಇಳಿದು ಜನರು ಬರುತ್ತಿದ್ದಾರೆ” ಎಂದನು.

ಆದರೆ ಜೆಬುಲನು, “ನೀನು ಕೇವಲ ಬೆಟ್ಟದ ನೆರಳನ್ನು ನೋಡುತ್ತಿರುವೆ; ನೆರಳು ಜನರಂತೆ ಕಾಣಿಸುತ್ತಿದೆ” ಎಂದನು.

37 ಆದರೆ ಪುನಃ ಗಾಳನು, “ಅಲ್ಲಿ ನೋಡು! ಕೆಲವು ಜನರು ಭೂಮಿಯ ಮಧ್ಯದಿಂದ ಬರುತ್ತಿದ್ದಾರೆ. ಅಲ್ಲಿ ಆ ಮಾಟಗಾರರ ಮರದ ಹತ್ತಿರ ಒಂದು ತಲೆಯನ್ನು ನೋಡಿದೆ” ಎಂದನು. 38 ಆಗ ಜೆಬುಲನು ಗಾಳನಿಗೆ, “ನೀನು ಈಗೇಕೆ ಬಡಾಯಿ ಕೊಚ್ಚುತ್ತಾ ಇಲ್ಲ? ‘ಅಬೀಮೆಲೆಕನು ಯಾರು? ನಾವು ಅವನ ಆಜ್ಞೆಯನ್ನು ಏಕೆ ಪಾಲಿಸಬೇಕು?’ ಎಂದು ನೀನು ಕೇಳಿದೆ. ನೀನು ಈ ಜನರನ್ನು ತಮಾಷೆಮಾಡಿದೆ. ಈಗ ಹೊರಗೆ ಹೋಗಿ ಅವರೊಂದಿಗೆ ಯುದ್ಧಮಾಡು” ಅಂದನು.

39 ಅಬೀಮೆಲೆಕನೊಂದಿಗೆ ಯುದ್ಧಮಾಡಲು ಗಾಳನು ಶೆಕೆಮಿನ ಹಿರಿಯರನ್ನು ನಗರದ ಹೊರಗಡೆ ಕರೆದುಕೊಂಡು ಹೋದನು. 40 ಅಬೀಮೆಲೆಕನು ಮತ್ತು ಅವನ ಜನರು ಗಾಳ ಮತ್ತು ಅವನ ಜನರನ್ನು ಬೆನ್ನಟ್ಟಿದರು. ಗಾಳನ ಜನರು ಹಿಂದಿರುಗಿ ಶೆಕೆಮ್ ನಗರದ ದ್ವಾರದ ಕಡೆಗೆ ಓಡಿದರು. ದ್ವಾರಕ್ಕೆ ಮುಟ್ಟುವ ಮೊದಲೇ ಗಾಳನ ಹಲವಾರು ಜನ ಹತರಾದರು.

41 ಅನಂತರ ಅಬೀಮೆಲೆಕನು ಅರೂಮ ನಗರಕ್ಕೆ ಹಿಂದಿರುಗಿದನು. ಜೆಬುಲನು ಗಾಳನನ್ನು ಮತ್ತು ಅವನ ಸಹೋದರರನ್ನು ಶೆಕೆಮ್ ನಗರದಿಂದ ಓಡಿಸಿಬಿಟ್ಟನು.

42 ಮರುದಿನ ಶೆಕೆಮಿನ ಜನರು ಹೊಲಗಳಲ್ಲಿ ಕೆಲಸ ಮಾಡಲು ಹೋದರು. ಅಬೀಮೆಲೆಕನಿಗೆ ಅದು ಗೊತ್ತಾಯಿತು. 43 ಅಬೀಮೆಲೆಕನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಅವನು ಶೆಕೆಮಿನ ಜನರ ಮೇಲೆ ಹಠಾತ್ತನೆ ಧಾಳಿ ಮಾಡಬಯಸಿದ್ದನು. ಆದ್ದರಿಂದ ಅವನು ತನ್ನ ಜನರನ್ನು ಹೊಲಗಳಲ್ಲಿ ಅಡಗಿಸಿಟ್ಟನು. ನಗರದಿಂದ ಜನರು ಹೊರಗೆ ಬರುವುದನ್ನು ನೋಡಿದ ತಕ್ಷಣ ಅವನು ನೆಗೆದೆದ್ದು ಅವರ ಮೇಲೆ ಧಾಳಿಮಾಡಿದನು. 44 ಅಬೀಮೆಲೆಕ ಮತ್ತು ಅವನ ಗುಂಪಿನವರು ಓಡಿಕೊಂಡು ಶೆಕೆಮ್ ನಗರದ ಬಾಗಿಲಿನ ಹತ್ತಿರ ಒಂದು ಸ್ಥಳಕ್ಕೆ ಬಂದರು. ಉಳಿದ ಎರಡು ಗುಂಪಿನವರು ಹೊಲಗಳಲ್ಲಿದ್ದ ಜನರ ಕಡೆಗೆ ಓಡಿಹೋಗಿ ಅವರನ್ನು ಕೊಂದುಹಾಕಿದರು. 45 ಆ ಇಡೀ ದಿವಸ ಅಬೀಮೆಲೆಕ ಮತ್ತು ಅವನ ಜನರು ಶೆಕೆಮಿನ ಜನರೊಂದಿಗೆ ಯುದ್ಧ ಮಾಡಿದರು. ಅಬೀಮೆಲೆಕ ಮತ್ತು ಅವನ ಜನರು ಶೆಕೆಮ್ ನಗರವನ್ನು ಸ್ವಾಧೀನಪಡಿಸಿಕೊಂಡರು; ಆ ನಗರದ ಜನರನ್ನು ಕೊಂದುಹಾಕಿದರು. ಅಬೀಮೆಲೆಕನು ಊರನ್ನು ಕೆಡವಿ ಹಾಕಿ ಉಪ್ಪನ್ನು ಚೆಲ್ಲಿದನು.

46 ಶೆಕೆಮಿನ ಬುರುಜಿನ ಮೇಲೆ ಕೆಲವು ಜನರು ವಾಸಮಾಡುತ್ತಿದ್ದರು. ಶೆಕೆಮಿನಲ್ಲಿ ನಡೆದ ಘಟನೆಯ ಬಗ್ಗೆ ಕೇಳಿ ಅವರು ಏಲ್‌ಬೆರೀತ್ ದೇವರಗುಡಿಯ ಅತಿ ಸುರಕ್ಷಿತವಾದ ಕೋಣೆಯಲ್ಲಿ ಒಟ್ಟುಗೂಡಿದರು.

47 ಶೆಕೆಮ್ ಬುರುಜಿನ ಎಲ್ಲ ಹಿರಿಯರು ಒಟ್ಟಿಗೆ ಸೇರಿದ್ದಾರೆ ಎಂಬ ಸಂಗತಿಯನ್ನು ಅಬೀಮೆಲೆಕನು ಕೇಳಿದನು. 48 ಆದ್ದರಿಂದ ಅಬೀಮೆಲೆಕ ಮತ್ತು ಅವನ ಜನರು ಚಲ್ಮೋನ್ ಬೆಟ್ಟವನ್ನು ಹತ್ತಿಹೋದರು. ಅಬೀಮೆಲೆಕನು ಒಂದು ಕೊಡಲಿಯನ್ನು ತೆಗೆದುಕೊಂಡು ಕೆಲವು ಕೊಂಬೆಗಳನ್ನು ಕಡಿದನು. ಅವನು ಆ ಕೊಂಬೆಗಳನ್ನು ಹೊತ್ತುಕೊಂಡು ಹೊರಟನು. ಅಬೀಮೆಲೆಕನು ತನ್ನ ಸಂಗಡಿಗರಿಗೆ, “ನಾನು ಮಾಡಿದಂತೆಯೇ ನೀವು ಬೇಗನೆ ಮಾಡಿರಿ” ಎಂದನು. 49 ಆದ್ದರಿಂದ ಅವರೆಲ್ಲರೂ ಕೊಂಬೆಗಳನ್ನು ಕಡಿದುಕೊಂಡು ಅವನನ್ನು ಹಿಂಬಾಲಿಸಿದರು. ಅವರು ಏಲ್‌ಬೆರೀತ್ ದೇವರಗುಡಿಯ ಅತೀ ಸುರಕ್ಷಿತವಾದ ಕೋಣೆಯ ಸುತ್ತಲೂ ಆ ಕೊಂಬೆಗಳನ್ನು ಇಟ್ಟರು. ತರುವಾಯ ಆ ಕೊಂಬೆಗಳಿಗೆ ಬೆಂಕಿ ಹಚ್ಚಿ ಆ ಕೋಣೆಯಲ್ಲಿದ್ದ ಎಲ್ಲರನ್ನು ಸುಟ್ಟುಬಿಟ್ಟರು. ಶೆಕೆಮಿನ ಬುರುಜಿನಲ್ಲಿದ್ದ ಒಂದು ಸಾವಿರ ಗಂಡಸರು ಮತ್ತು ಹೆಂಗಸರು ಸತ್ತುಹೋದರು.

ಅಬೀಮೆಲೆಕನ ಮರಣ

50 ಅನಂತರ ಅಬೀಮೆಲೆಕನು ಮತ್ತು ಅವನ ಜನರು ತೇಬೇಚ ನಗರಕ್ಕೆ ಹೋಗಿ ಅದನ್ನು ಸ್ವಾಧೀನಪಡಿಸಿಕೊಂಡರು. 51 ಆದರೆ ಆ ನಗರದ ಒಳಭಾಗದಲ್ಲಿ ಒಂದು ಭದ್ರವಾದ ಗೋಪುರವಿತ್ತು. ಆ ನಗರದ ಎಲ್ಲ ಹಿರಿಯರು ಮತ್ತು ಉಳಿದ ಗಂಡಸರು ಮತ್ತು ಹೆಂಗಸರು ಅಲ್ಲಿಗೆ ಓಡಿಹೋದರು. ಅವರು ಗೋಪುರದೊಳಗೆ ಹೋಗಿ ಒಳಗಿನಿಂದ ಬೀಗ ಹಾಕಿಕೊಂಡರು; ಬಳಿಕ ಗೋಪುರದ ಮಾಳಿಗೆಯ ಮೇಲೆ ಹತ್ತಿದರು. 52 ಅಬೀಮೆಲೆಕನು ಮತ್ತು ಅವನ ಜನರು ಅದರ ಮೇಲೆ ಧಾಳಿಮಾಡಲು ಗೋಪುರದ ಬಳಿ ಬಂದರು. ಅಬೀಮೆಲೆಕನು ಆ ಗೋಪುರದ ಬಾಗಿಲಿನವರೆಗೆ ಹೋದನು. ಅವನು ಆ ಗೋಪುರವನ್ನು ಸುಡಬೇಕೆಂದಿದ್ದನು. 53 ಆದರೆ ಅಬೀಮೆಲೆಕನು ಆ ಗೋಪುರದ ಬಾಗಿಲಿನ ಹತ್ತಿರ ನಿಂತಿದ್ದಾಗ ಮಾಳಿಗೆಯ ಮೇಲಿದ್ದ ಒಬ್ಬ ಸ್ತ್ರೀಯು ಅವನ ತಲೆಯ ಮೇಲೆ ಒಂದು ಬೀಸುವ ಕಲ್ಲನ್ನು ಹಾಕಿದಳು. ಆ ಬೀಸುವ ಕಲ್ಲು ಅಬೀಮೆಲೆಕನ ತಲೆಬುರುಡೆಯನ್ನು ಒಡೆಯಿತು. 54 ಕೂಡಲೆ ಅಬೀಮೆಲೆಕನು ತನ್ನ ಆಯುಧವಾಹಕನಿಗೆ, “ನಿನ್ನ ಖಡ್ಗವನ್ನು ಹೊರತೆಗೆದು ನನ್ನನ್ನು ಕೊಂದುಬಿಡು. ‘ಒಬ್ಬ ಹೆಂಗಸು ಅಬೀಮೆಲೆಕನನ್ನು ಕೊಂದಳು’ ಎಂದು ಜನರು ಹೇಳಬಾರದು. ಅದಕ್ಕಾಗಿ ನೀನು ನನ್ನನ್ನು ಕೊಲ್ಲಬೇಕೆಂದು ನನ್ನ ಇಚ್ಛೆ” ಎಂದನು. ಆದ್ದರಿಂದ ಆ ಸೇವಕನು ಅಬೀಮೆಲೆಕನನ್ನು ತನ್ನ ಕತ್ತಿಯಿಂದ ಇರಿದನು; ಅಬೀಮೆಲೆಕನು ಸತ್ತನು. 55 ಅಬೀಮೆಲೆಕನು ಸತ್ತಿದ್ದನ್ನು ಇಸ್ರೇಲರು ನೋಡಿದರು. ಆದ್ದರಿಂದ ಅವರೆಲ್ಲರೂ ತಮ್ಮತಮ್ಮ ಸ್ಥಳಗಳಿಗೆ ಹಿಂದಿರುಗಿದರು.

56 ಅಬೀಮೆಲೆಕನು ತನ್ನ ತಂದೆಗೆ ವಿರೋಧವಾಗಿ ಮಾಡಿದ್ದ ಎಲ್ಲ ದುಷ್ಕೃತ್ಯಗಳಿಗಾಗಿ ಅಂದರೆ ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದು ಹಾಕಿದ್ದರಿಂದ ದೇವರು ಅವನನ್ನು ಹೀಗೆ ದಂಡಿಸಿದನು. 57 ದೇವರು ಶೆಕೆಮ್ ನಗರದ ಜನರನ್ನೂ ಸಹ ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದಂಡಿಸಿದನು. ಹೀಗೆ ಯೆರುಬ್ಬಾಳನ (ಗಿದ್ಯೋನ) ಕಿರಿಯ ಮಗನಾದ ಯೋತಾಮನು ನುಡಿದಂತೆಯೇ ಆಯಿತು.

ಅಪೊಸ್ತಲರ ಕಾರ್ಯಗಳು 13

ಬಾರ್ನಬ ಮತ್ತು ಸೌಲರಿಗೆ ವಹಿಸಲಾದ ವಿಶೇಷಕಾರ್ಯ

13 ಅಂತಿಯೋಕ್ಯದ ಸಭೆಯಲ್ಲಿ ಕೆಲವು ಪ್ರವಾದಿಗಳು ಮತ್ತು ಉಪದೇಶಕರಿದ್ದರು. ಅವರು ಯಾರೆಂದರೆ: ಬಾರ್ನಬ, ಸಿಮೆಯೋನ್ (ಇವನನ್ನು ನೀಗರ್ ಎಂತಲೂ ಕರೆಯುತ್ತಿದ್ದರು.) ಲೂಸಿಯಸ್ (ಸಿರೇನ್ ಪಟ್ಟಣದವನು) ಮೆನಹೇನ (ಹೆರೋದ ರಾಜನೊಂದಿಗೆ ಬೆಳೆದವನು) ಮತ್ತು ಸೌಲ. ಇವರೆಲ್ಲರು ಪ್ರಭುವಿನ ಸೇವೆ ಮಾಡುತ್ತಿದ್ದರು ಮತ್ತು ಉಪವಾಸ ಮಾಡುತ್ತಿದ್ದರು. ಪವಿತ್ರಾತ್ಮನು ಅವರಿಗೆ, “ನಾನು ವಿಶೇಷವಾದ ಕಾರ್ಯಕ್ಕಾಗಿ ಬಾರ್ನಬ ಮತ್ತು ಸೌಲರನ್ನು ಆರಿಸಿಕೊಂಡಿದ್ದೇನೆ. ಆ ಕಾರ್ಯಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ” ಎಂದು ಹೇಳಿದನು.

ಆದ್ದರಿಂದ ಸಭೆಯವರು ಉಪವಾಸವಿದ್ದು ಪ್ರಾರ್ಥನೆ ಮಾಡಿದರು. ಅವರು ಬಾರ್ನಬ ಮತ್ತು ಸೌಲರ ಮೇಲೆ ಹಸ್ತಾರ್ಪಣೆ ಮಾಡಿ ಅವರನ್ನು ಕಳುಹಿಸಿಕೊಟ್ಟರು.

ಸೈಪ್ರಸ್‌ನಲ್ಲಿ ಬಾರ್ನಬ ಮತ್ತು ಸೌಲರು

ಬಾರ್ನಬ ಮತ್ತು ಸೌಲರನ್ನು ಪವಿತ್ರಾತ್ಮನೇ ಕಳುಹಿಸಿಕೊಟ್ಟನು. ಅವರು ಸೆಲೂಸಿಯಾ ಪಟ್ಟಣಕ್ಕೆ ಹೋದರು. ಬಳಿಕ ಅವರು ಸೆಲೂಸಿಯಾದಿಂದ ಸೈಪ್ರಸ್ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿದರು. ಬಾರ್ನಬ ಮತ್ತು ಸೌಲರು ಸಲಾಮಿಸ್ ಪಟ್ಟಣಕ್ಕೆ ಬಂದಾಗ ಯೆಹೂದ್ಯರ ಸಭಾಮಂದಿರದಲ್ಲಿ ದೇವರ ಸಂದೇಶವನ್ನು ಸಾರಿದರು. (ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯ ಮಾಡುವುದಕ್ಕಾಗಿ ಅವರೊಂದಿಗಿದ್ದನು.)

ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು “ಬಾರ್ ಯೇಸು.” ಅವನೊಬ್ಬ ಸುಳ್ಳುಪ್ರವಾದಿ. ಸೆರ್ಗ್ಯಪೌಲನೆಂಬ ರಾಜ್ಯಪಾಲನ ಹತ್ತಿರದಲ್ಲೇ ಅವನು ಯಾವಾಗಲೂ ಇರುತ್ತಿದ್ದನು. ಸೆರ್ಗ್ಯಪೌಲನು ಜ್ಞಾನವಂತನಾಗಿದ್ದನು. ಅವನು ದೇವರ ವಾಕ್ಯವನ್ನು ಕೇಳಲು ಬಾರ್ನಬ ಮತ್ತು ಸೌಲರನ್ನು ಆಮಂತ್ರಿಸಿದನು. ಆದರೆ ಮಂತ್ರವಾದಿಯಾದ ಎಲಿಮನು ಬಾರ್ನಬ ಮತ್ತು ಸೌಲರಿಗೆ ವಿರೋಧವಾಗಿದ್ದನು. (ಬಾರ್ ಯೇಸುವನ್ನು ಗ್ರೀಕ್ ಭಾಷೆಯಲ್ಲಿ ಎಲಿಮ ಎಂದು ಕರೆಯುತ್ತಿದ್ದರು.) ರಾಜ್ಯಪಾಲನು ಯೇಸುವಿನಲ್ಲಿ ನಂಬಿಕೆ ಇಡದ ಹಾಗೆ ಮಾಡಲು ಎಲಿಮನು ಪ್ರಯತ್ನಿಸಿದನು. ಆದರೆ ಪೌಲನು (ಸೌಲನ ಮತ್ತೊಂದು ಹೆಸರು ಪೌಲ.) ಪವಿತ್ರಾತ್ಮಭರಿತನಾದನು. ಪೌಲನು ಎಲಿಮನನ್ನು ದಿಟ್ಟಿಸಿ ನೋಡಿ, 10 ಅವನಿಗೆ, “ನೀನು ಸೈತಾನನ ಮಗ! ಪ್ರತಿಯೊಂದು ಒಳ್ಳೆಯದಕ್ಕೂ ನೀನು ಶತ್ರು! ನೀನು ದುಷ್ಟತಂತ್ರಗಳಿಂದಲೂ ಸುಳ್ಳುಗಳಿಂದಲೂ ತುಂಬಿದವನಾಗಿರುವೆ. ಪ್ರಭುವಿನ ಸತ್ಯಗಳನ್ನು ಸುಳ್ಳುಗಳನ್ನಾಗಿ ಪರಿವರ್ತಿಸಲು ನೀನು ಯಾವಾಗಲೂ ಪ್ರಯತ್ನಿಸುತ್ತಿರುವೆ! 11 ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು.

ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು. 12 ಇದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ನಂಬಿಕೊಂಡನು. ಪ್ರಭುವಿನ ವಿಷಯವಾದ ಉಪದೇಶವನ್ನು ಕೇಳಿ ವಿಸ್ಮಿತನಾದನು.

ಪೌಲ ಬಾರ್ನಬರು ಸೈಪ್ರಸ್‌ನಿಂದ ತೆರಳುವರು

13 ಪೌಲ ಮತ್ತು ಅವನ ಸಂಗಡಿಗರು ಪಾಫೋಸಿನಿಂದ ನೌಕಾಯಾನ ಮಾಡಿದರು. ಪಾಂಫೀಲಿಯ ಪ್ರಾಂತ್ಯದಲ್ಲಿದ್ದ ಪೆರ್ಗ ಎಂಬ ಪಟ್ಟಣಕ್ಕೆ ಅವರು ಬಂದರು. ಆದರೆ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಬಿಟ್ಟು ಜೆರುಸಲೇಮಿಗೆ ಹಿಂತಿರುಗಿದನು. 14 ಅವರು ತಮ್ಮ ಪ್ರಯಾಣವನ್ನು ಪೆರ್ಗದಿಂದ ಮುಂದುವರಿಸಿ, ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಹೋದರು.

ಅವರು ಅಂತಿಯೋಕ್ಯಕ್ಕೆ ಸಬ್ಬತ್ ದಿನದಂದು ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು. 15 ಮೋಶೆಯ ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳ ಗ್ರಂಥಗಳನ್ನು ಓದಲಾಯಿತು. ಬಳಿಕ ಸಭಾಮಂದಿರದ ನಾಯಕರು ಪೌಲ ಬಾರ್ನಬರಿಗೆ, “ಸಹೋದರರೇ, ಇಲ್ಲಿರುವ ಜನರಿಗೆ ಸಹಾಯವಾಗುವಂತೆ ಏನನ್ನಾದರೂ ನೀವು ಹೇಳಬೇಕೆಂದಿದ್ದರೆ, ದಯವಿಟ್ಟು ಹೇಳಿ!” ಎಂಬ ಸಂದೇಶವನ್ನು ಕಳುಹಿಸಿದರು.

16 ಪೌಲನು ಎದ್ದುನಿಂತುಕೊಂಡು ತನ್ನ ಮಾತುಗಳನ್ನು ಕೇಳಬೇಕೆಂದು ಜನರಿಗೆ ಕೈಸನ್ನೆ ಮಾಡಿ ಹೀಗೆಂದನು: “ನನ್ನ ಯೆಹೂದ್ಯ ಸಹೋದರರೇ, ನಿಜ ದೇವರನ್ನು ಆರಾಧಿಸುವ ಇತರ ಜನರೇ, ದಯವಿಟ್ಟು ನನಗೆ ಕಿವಿಗೊಡಿರಿ! 17 ಇಸ್ರೇಲರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡನು. ಈಜಿಪ್ಟಿನಲ್ಲಿ ಪ್ರವಾಸಿಗರಾಗಿ ವಾಸಿಸುತ್ತಿದ್ದ ತನ್ನ ಜನರಿಗೆ ದೇವರು ಸಹಾಯಮಾಡಿ ಅಭಿವೃದ್ಧಿಪಡಿಸಿದನು. ದೇವರು ತನ್ನ ಮಹಾಶಕ್ತಿಯಿಂದ ಅವರನ್ನು ಆ ದೇಶದೊಳಗಿಂದ ಬರಮಾಡಿದನು. 18 ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಅವರನ್ನು ಸಹಿಸಿಕೊಂಡನು. 19 ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ತನ್ನ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟನು. 20 ಇವೆಲ್ಲಾ ಸುಮಾರು ನಾನೂರ ಐವತ್ತು ವರ್ಷಗಳ ಅವಧಿಯಲ್ಲಿ ನಡೆದವು.

“ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದವರೆಗೆ ದೇವರು ನಮ್ಮ ಜನರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು. 21 ಬಳಿಕ ಜನರು ತಮಗೆ ರಾಜನು ಬೇಕೆಂದು ಕೇಳಿಕೊಂಡರು. ದೇವರು ಅವರಿಗೆ ಕೀಷನ ಮಗನಾದ ಸೌಲನನ್ನು ಕೊಟ್ಟನು. ಸೌಲನು ಬೆನ್ಯಾಮಿನ್ ಕುಲದವನು. ಅವನು ನಲವತ್ತು ವರ್ಷಗಳ ಕಾಲ ರಾಜನಾಗಿದ್ದನು. 22 ದೇವರು ಸೌಲನನ್ನು ತೆಗೆದುಹಾಕಿದ ಮೇಲೆ ದಾವೀದನನ್ನು ಅವರ ರಾಜನನ್ನಾಗಿ ಮಾಡಿದನು. ‘ಇಷಯನ ಮಗನಾದ ದಾವೀದನು ನನಗೆ ಮೆಚ್ಚಿಗೆಯಾದವನು. ಅವನು ನನ್ನ ಅಪೇಕ್ಷೆಗೆ ತಕ್ಕಂತೆ ಕಾರ್ಯಗಳನ್ನು ಮಾಡುತ್ತಾನೆ’ ಎಂದು ದೇವರು ದಾವೀದನ ಬಗ್ಗೆ ಹೇಳಿದ್ದಾನೆ.

23 “ದೇವರು ತನ್ನ ವಾಗ್ದಾನಕ್ಕನುಸಾರವಾಗಿ ದಾವೀದನ ಸಂತಾನದವರಲ್ಲಿ ಒಬ್ಬನನ್ನು ಇಸ್ರೇಲರ ರಕ್ಷಕನನ್ನಾಗಿ ಕಳುಹಿಸಿ ಕೊಟ್ಟಿದ್ದಾನೆ. ಆತನೇ ಯೇಸು. 24 ಯೇಸು ಬರುವುದಕ್ಕಿಂತ ಮೊದಲು (ಸ್ನಾನಿಕ) ಯೋಹಾನನು ಯೆಹೂದ್ಯ ಜನರಿಗೆಲ್ಲಾ ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ಬೋಧಿಸಿದನು. 25 ‘ನಾನು ಯಾರೆಂದು ನೀವು ಯೋಚಿಸುತ್ತೀರಿ? ನಾನು ಕ್ರಿಸ್ತನಲ್ಲ. ಆತನು ನನ್ನ ತರುವಾಯ ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ’ ಎಂದು ಯೋಹಾನನು ತನ್ನ ಕಾರ್ಯವನ್ನು ಮಾಡಿ ಪೂರೈಸುತ್ತಿದ್ದಾಗ ಹೇಳಿಕೊಂಡಿದ್ದಾನೆ.

26 “ನನ್ನ ಸಹೋದರರೇ, ಅಬ್ರಹಾಮನ ಕುಟುಂಬದ ಪುತ್ರರೇ, ನಿಜದೇವರನ್ನು ಆರಾಧಿಸುತ್ತಿರುವ ಯೆಹೂದ್ಯರಲ್ಲದವರೇ, ಕೇಳಿರಿ! ಈ ರಕ್ಷಣೆಯ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಹೂದ್ಯರು ಮತ್ತು ಯೆಹೂದ್ಯನಾಯಕರು ಯೇಸುವೇ ರಕ್ಷಕನೆಂಬುದನ್ನು ಅರ್ಥಮಾಡಿಕೊಳ್ಳಲಿಲ್ಲ. ಪ್ರವಾದಿಗಳು ಯೇಸುವಿನ ಬಗ್ಗೆ ಬರೆದಿದ್ದ ಮಾತುಗಳನ್ನು ಪ್ರತಿ ಸಬ್ಬತ್‌ದಿನದಂದು ಓದಲಾಗುತ್ತಿತ್ತು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಯೆಹೂದ್ಯರು ಯೇಸುವನ್ನು ಅಪರಾಧಿಯೆಂದು ತೀರ್ಪುಮಾಡಿದರು. ಹೀಗೆ ಮಾಡುವುದರ ಮೂಲಕವಾಗಿ ಅವರು ಪ್ರವಾದಿಗಳ ನುಡಿಗಳನ್ನು ನೆರವೇರಿಸಿದರು! 28 ಯೇಸು ಸಾಯಲೇಬೇಕೆಂಬುದಕ್ಕೆ ಸರಿಯಾದ ಕಾರಣವನ್ನು ಅವರು ಕಂಡುಹಿಡಿಯಲಾಗದಿದ್ದರೂ ಯೇಸುವನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.

29 “ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಯೇಸುವಿಗೆ ಸಂಭವಿಸಬೇಕಾಗಿದ್ದ ಕೆಟ್ಟವುಗಳನ್ನೆಲ್ಲ ಯೆಹೂದ್ಯರು ಆತನಿಗೆ ಮಾಡಿದರು. ಬಳಿಕ ಅವರು ಯೇಸುವನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು. 30 ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ಇದಾದ ಮೇಲೆ ಗಲಿಲಾಯದಿಂದ ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದವರು, ಅನೇಕ ದಿನಗಳವರೆಗೆ ಆತನನ್ನು ನೋಡಿದರು. ಈಗ ಅವರೇ ಜನರಿಗೆ ಸಾಕ್ಷಿಗಳಾಗಿದ್ದಾರೆ.

32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:

‘ನೀನೇ ನನ್ನ ಮಗನು.
    ಇಂದೇ ನಾನು ನಿನ್ನನ್ನು ಪಡೆದೆನು.’(A)

34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:

‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
    ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)

35 ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ:

‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’(C)

36 “ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37 ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38-39 ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

41 ‘ಅಪಹಾಸ್ಯ ಮಾಡುವವರೇ,
    ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ.
ನೀವು ನಂಬಲೊಲ್ಲದ ಒಂದು ಕಾರ್ಯವನ್ನು
    ನಾನು ಮಾಡುವೆನು.
ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ
    ನೀವು ನಂಬುವುದಿಲ್ಲ!’”(D)

42 ಪೌಲ ಮತ್ತು ಬಾರ್ನಬ ಸಭಾಮಂದಿರದಿಂದ ಹೋಗುವಾಗ, ಈ ಸಂಗತಿಗಳ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಸುವುದಕ್ಕಾಗಿ ಮುಂದಿನ ಸಬ್ಬತ್‌ದಿನದಂದು ಮತ್ತೆ ಬರಬೇಕೆಂದು ಜನರು ಅವರನ್ನು ಕೇಳಿಕೊಂಡರು. 43 ಸಭೆಯು ಮುಗಿದ ಮೇಲೆ ಅನೇಕ ಯೆಹೂದ್ಯರು ಪೌಲ ಬಾರ್ನಬರನ್ನು ಆ ಸ್ಥಳದಿಂದ ಹಿಂಬಾಲಿಸಿದರು. ಯೆಹೂದ್ಯರ ಧರ್ಮಕ್ಕೆ ಸೇರಿಕೊಂಡಿದ್ದ ಅನೇಕ ಅನ್ಯಮತೀಯರೂ ಆ ಯೆಹೂದ್ಯರೊಂದಿಗಿದ್ದರು. ಮತಾಂತರಗೊಂಡಿದ್ದ ಇವರು ಸಹ ನಿಜದೇವರನ್ನು ಆರಾಧಿಸುತ್ತಿದ್ದರು. ಪೌಲ ಬಾರ್ನಬರು ಅವರೊಂದಿಗೆ ಮಾತಾಡಿ, ದೇವರ ಕೃಪೆಯಲ್ಲೇ ಭರವಸವಿಟ್ಟು ಮುಂದುವರಿಯಬೇಕೆಂದು ಪ್ರೋತ್ಸಾಹಪಡಿಸಿದರು.

44 ಮುಂದಿನ ಸಬ್ಬತ್‌ದಿನದಂದು, ಪ್ರಭುವಿನ ವಾಕ್ಯವನ್ನು ಕೇಳುವುದಕ್ಕಾಗಿ ಬಹುಮಟ್ಟಿಗೆ ನಗರದ ಜನರೆಲ್ಲರೂ ನೆರೆದುಬಂದರು. 45 ಇದನ್ನು ಕಂಡ ಯೆಹೂದ್ಯರಿಗೆ ಬಹಳ ಅಸೂಯೆಯಾಯಿತು. ಅವರು ಪೌಲನ ಮಾತುಗಳನ್ನು ಕಟುವಾಗಿ ದೂಷಿಸಿ ಅವುಗಳಿಗೆ ವಿರೋಧವಾಗಿ ವಾದಿಸಿದರು. 46 ಆದರೆ ಪೌಲ ಬಾರ್ನಬರು ಬಹು ಧೈರ್ಯದಿಂದ ಮಾತಾಡಿ, “ನಾವು ದೇವರ ಸಂದೇಶವನ್ನು ಯೆಹೂದ್ಯರಾದ ನಿಮಗೆ ಮೊದಲು ಹೇಳಬೇಕು. ಆದರೆ ನೀವು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ಎಣಿಸಿಕೊಂಡು ತಿರಸ್ಕರಿಸುತ್ತಿದ್ದೀರಿ. ಆದ್ದರಿಂದ ನಾವು ಅನ್ಯಧರ್ಮದವರ ಬಳಿಗೆ ಹೋಗುತ್ತೇವೆ! 47 ಏಕೆಂದರೆ ಪ್ರಭುವು ನಮಗೆ ಕೊಟ್ಟ ಆಜ್ಞೆ ಇಂತಿದೆ:

‘ಲೋಕದ ಕಟ್ಟಕಡೆಯಲ್ಲಿರುವ ಜನರೆಲ್ಲರಿಗೂ ನೀನು ರಕ್ಷಕನಾಗಿರಬೇಕೆಂದು
    ನಾನು ನಿನ್ನನ್ನು ಇತರ ಜನಾಂಗಗಳಿಗೆ ಬೆಳಕನ್ನಾಗಿ ಮಾಡಿದ್ದೇನೆ.’(E)

48 ಪೌಲನ ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲದ ಜನರು ಬಹು ಸಂತೋಷಪಟ್ಟು ಪ್ರಭುವಿನ ಸಂದೇಶಕ್ಕಾಗಿ ಸ್ತುತಿಸಿದರು. ನಿತ್ಯಜೀವವನ್ನು ಹೊಂದಿಕೊಳ್ಳಲು ಆಯ್ಕೆಯಾಗಿದ್ದವರೆಲ್ಲರೂ ನಂಬಿಕೊಂಡರು.

49 ಪ್ರಭುವಿನ ಸಂದೇಶವನ್ನು ಆ ನಾಡಿನಲ್ಲೆಲ್ಲಾ ಸಾರಲಾಯಿತು. 50 ಆದರೆ ಯೆಹೂದ್ಯರು ಕೆಲವು ಧಾರ್ಮಿಕ ಸ್ತ್ರೀಯರನ್ನೂ ನಗರದ ನಾಯಕರನ್ನೂ ಪ್ರಚೋಧಿಸಿ, ಪೌಲ ಬಾರ್ನಬರ ಮೇಲೆ ಅವರು ಕೋಪಗೊಳ್ಳುವಂತೆಯೂ ಅವರಿಗೆ ವಿರೋಧಿಗಳಾಗುವಂತೆಯೂ ಮಾಡಿ ಪೌಲ ಬಾರ್ನಬರನ್ನು ಪಟ್ಟಣದಿಂದ ಹೊರಗಟ್ಟಿಸಿದರು. 51 ಆದ್ದರಿಂದ ಪೌಲ ಬಾರ್ನಬರು ಅವರ ವಿರೋಧವಾಗಿ ತಮ್ಮ ಕಾಲಿನ ಧೂಳನ್ನು ಝಾಡಿಸಿ,[a] ಇಕೋನಿಯಾ ಪಟ್ಟಣಕ್ಕೆ ಹೋದರು. 52 ಆದರೆ ಯೇಸುವಿನ ಶಿಷ್ಯರು ಸಂತೋಷವಾಗಿದ್ದರು ಮತ್ತು ಪವಿತ್ರಾತ್ಮಭರಿತರಾಗಿದ್ದರು.

ಯೆರೆಮೀಯ 22

ದುಷ್ಟರಾಜರ ವಿರುದ್ಧ ನ್ಯಾಯನಿರ್ಣಯ

22 ಯೆಹೋವನು ಹೇಳಿದನು: “ಯೆರೆಮೀಯನೇ, ರಾಜನ ಅರಮನೆಗೆ ಹೋಗು. ಯೆಹೂದದ ರಾಜನ ಬಳಿಗೆ ಹೋಗಿ ಅಲ್ಲಿ ಈ ಸಂದೇಶವನ್ನು ಸಾರು. ‘ಯೆಹೂದದ ರಾಜನೇ, ಯೆಹೋವನಿಂದ ಬಂದ ಸಂದೇಶವನ್ನು ಕೇಳು. ನೀನು ದಾವೀದನ ಸಿಂಹಾಸನಾರೂಢನಾಗಿ ರಾಜ್ಯಭಾರ ಮಾಡುವೆ, ಅದಕ್ಕಾಗಿ ಕೇಳು. ರಾಜನೇ, ನೀನು ಮತ್ತು ನಿನ್ನ ಅಧಿಕಾರಿಗಳು ಚೆನ್ನಾಗಿ ಕೇಳಬೇಕು. ಜೆರುಸಲೇಮಿನ ದ್ವಾರಗಳ ಮೂಲಕ ಬರುವ ನಿನ್ನ ಜನರೆಲ್ಲರೂ ಯೆಹೋವನ ಸಂದೇಶವನ್ನು ಕೇಳಬೇಕು. ಯೆಹೋವನು ಅನ್ನುತ್ತಾನೆ, ನಿಮ್ಮ ಆಚರಣೆ ನೀತಿಬದ್ಧವಾಗಿಯೂ ನ್ಯಾಯಬದ್ಧವಾಗಿಯೂ ಇರಲಿ. ಸುಲಿಗೆಗೀಡಾದವರನ್ನು ದೋಚಿಕೊಂಡವನಿಂದ ರಕ್ಷಿಸಿರಿ. ಅನಾಥರನ್ನು ಮತ್ತು ವಿಧವೆಯರನ್ನು ಹಿಂಸಿಸಬೇಡಿ; ನಿರಪರಾಧಿಗಳನ್ನು ಕೊಲ್ಲಬೇಡಿ. ನೀವು ಈ ಆಜ್ಞೆಗಳನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಈ ದ್ವಾರಗಳಿಂದ ಜೆರುಸಲೇಮ್ ನಗರವನ್ನು ಪ್ರವೇಶಿಸುವುದು ಮುಂದುವರೆಯುತ್ತದೆ. ಆ ರಾಜರು ತಮ್ಮ ಅಧಿಕಾರಿಗಳೊಂದಿಗೆ ಈ ದ್ವಾರಗಳಿಂದ ಬರುತ್ತಾರೆ. ಆ ಅರಸರು, ಅವರ ಅಧಿಕಾರಿಗಳು, ಅವರ ಜನರು, ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಕುಳಿತುಕೊಂಡು ಬರುವರು. ನೀವು ಈ ಆಜ್ಞೆಗಳನ್ನು ಪಾಲಿಸದಿದ್ದರೆ ರಾಜನ ಅರಮನೆಯನ್ನು ನಾಶಮಾಡಲಾಗುವುದು. ಅದು ಕಲ್ಲುಬಂಡೆಗಳ ರಾಶಿಯಾಗುವದೆಂದು ಯೆಹೋವನಾದ ನಾನು ಆಣೆಯಿಟ್ಟುಕೊಂಡು ಹೇಳುತ್ತೇನೆ’” ಎಂದು ಯೆಹೋವನು ನುಡಿದನು.

ಯೆಹೂದದ ರಾಜನು ವಾಸಮಾಡುವ ಅರಮನೆಯ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ:

“ಈ ಅರಮನೆಯು ಗಿಲ್ಯಾದಿನ ಅರಣ್ಯದಂತೆ,
    ಲೆಬನೋನಿನ ಪರ್ವತದಂತೆ ಎತ್ತರವಾಗಿದೆ.
ಆದರೆ ನಾನು ಅದನ್ನು ನಿಜವಾಗಿ ಮರುಭೂಮಿಯಂತೆ ಮಾಡುತ್ತೇನೆ.
    ಈ ಅರಮನೆಯು ಹಾಳುಬಿದ್ದ ನಗರದಂತಾಗುವುದು.
ಅರಮನೆಯನ್ನು ಹಾಳುಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
    ಪ್ರತಿಯೊಬ್ಬನ ಹತ್ತಿರ ಆ ಮನೆಯನ್ನು ಹಾಳುಮಾಡಲು ಬೇಕಾಗುವ ಸಾಧನಗಳಿರುವವು.
ಆ ಜನರು ನಿನ್ನ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನ್ನು ಕಡಿದುಹಾಕುತ್ತಾರೆ.
    ಅವರು ಆ ತೊಲೆಗಳನ್ನು ಬೆಂಕಿಯಲ್ಲಿ ಎಸೆಯುತ್ತಾರೆ.

“ಅನೇಕ ಜನಾಂಗಗಳ ಜನರು ಈ ನಗರದಿಂದ ಹಾದುಹೋಗುವರು. ಅವರು, ‘ಜೆರುಸಲೇಮ್ ಒಂದು ಮಹಾನಗರವಾಗಿತ್ತು. ಯೆಹೋವನು ಜೆರುಸಲೇಮಿಗೆ ಇಂಥ ಭಯಂಕರ ಸ್ಥಿತಿಯನ್ನು ಏಕೆ ತಂದನು?’ ಎಂದು ಒಬ್ಬರನ್ನೊಬ್ಬರು ಕೇಳುವರು. ಆ ಪ್ರಶ್ನೆಗೆ ಈ ಉತ್ತರ: ‘ಯೆಹೂದದ ಜನರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಅನುಸರಣೆಯನ್ನು ಬಿಟ್ಟುಬಿಟ್ಟರು. ಅವರು ಬೇರೆ ದೇವರುಗಳ ಸೇವೆಯನ್ನು ಮಾಡಿ ಪೂಜಿಸಿದರು.’”

ರಾಜನಾದ ಯೋಹಾಜನ ಬಗ್ಗೆ ನ್ಯಾಯನಿರ್ಣಯ

10 ಸತ್ತ ರಾಜನ ಬಗ್ಗೆ ಅಳಬೇಡಿ.
    ಅವನಿಗೋಸ್ಕರ ಅಳಬೇಡಿ.
ಆದರೆ ಇಲ್ಲಿಂದ ಹೋಗುತ್ತಿರುವ
    ರಾಜನ ಬಗ್ಗೆ ಗಟ್ಟಿಯಾಗಿ ರೋಧಿಸಿರಿ.
ಅವನು ಮತ್ತೆ ಇಲ್ಲಿಗೆ ಬರುವದಿಲ್ಲ. ಆದ್ದರಿಂದ ಅವನಿಗೋಸ್ಕರ ರೋಧಿಸಿರಿ.
    ಯೋಹಾಜನು ತನ್ನ ಜನ್ಮಭೂಮಿಯನ್ನು ಮತ್ತೆಂದಿಗೂ ನೋಡುವುದಿಲ್ಲ.

11 ಯೋಷೀಯನ ಮಗನಾದ ಯೋಹಾಜನ (ಶಲ್ಲೂಮನ) ಬಗ್ಗೆ ಯೆಹೋವನು ಹೀಗೆಂದನು: (ಶಲ್ಲೂಮನು ತನ್ನ ತಂದೆಯಾದ ಯೋಷೀಯನ ಮರಣಾನಂತರ ರಾಜನಾದನು.) “ಯೋಹಾಜನು ಜೆರುಸಲೇಮಿನಿಂದ ಹೊರಟುಹೋದನು. ಅವನು ಮತ್ತೆಂದಿಗೂ ಜೆರುಸಲೇಮಿಗೆ ಹಿಂದಿರುಗುವುದಿಲ್ಲ. 12 ಈಜಿಪ್ಟಿನವರು ಅವನನ್ನು ತೆಗೆದುಕೊಂಡು ಹೋದ ಸ್ಥಳದಲ್ಲಿಯೇ ಸತ್ತುಹೋಗುವನು. ಅವನು ಮತ್ತೊಮ್ಮೆ ಈ ಪ್ರದೇಶವನ್ನು ನೋಡಲಾರನು.”

ರಾಜನಾದ ಯೆಹೋಯಾಕೀಮನ ಬಗ್ಗೆ ನ್ಯಾಯನಿರ್ಣಯ

13 “ರಾಜನಾದ ಯೆಹೋಯಾಕೀಮನಿಗೆ ದುರ್ಗತಿ ಉಂಟಾಗುವುದು.
    ಅವನು ತನ್ನ ಅರಮನೆಯನ್ನು ಕಟ್ಟಿಸುವದಕ್ಕೋಸ್ಕರ ದುರ್ನೀತಿಯನ್ನು ಅವಲಂಭಿಸಿದ್ದಾನೆ.
    ಮಹಡಿಯ ಮೇಲೆ ಕೋಣೆಗಳನ್ನು ಕಟ್ಟಿಸುವದಕ್ಕಾಗಿ ಅವನು ತನ್ನ ಜನರನ್ನು ವಂಚಿಸುತ್ತಿದ್ದಾನೆ.
    ಅವನು ತನ್ನ ಜನರಿಂದ ಬಿಟ್ಟಿಕೆಲಸವನ್ನು ಮಾಡಿಸುತ್ತಿದ್ದಾನೆ.
    ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ಕೂಲಿಯನ್ನೇ ಕೊಡುವದಿಲ್ಲ.

14 “ಯೆಹೋಯಾಕೀಮನು,
    ‘ನಾನೇ ಒಂದು ದೊಡ್ಡ ಅರಮನೆಯನ್ನು ಕಟ್ಟಿಸುತ್ತೇನೆ.
    ನಾನು ಮಹಡಿಯ ಮೇಲೆ ದೊಡ್ಡದೊಡ್ಡ ಕೋಣೆಗಳನ್ನು ಕಟ್ಟಿಸುತ್ತೇನೆ’ ಎಂದು ಹೇಳುತ್ತಾನೆ.
ಅವನು ದೊಡ್ಡದೊಡ್ಡ ಕಿಟಕಿಗಳುಳ್ಳ ಮನೆಯನ್ನು ಕಟ್ಟಿಸುತ್ತಾನೆ.
    ದೇವದಾರಿನ ಹಲಗೆಗಳನ್ನು ಹೊದಿಸುತ್ತಾನೆ.
    ಅದಕ್ಕೆ ಕೆಂಪು ಬಣ್ಣವನ್ನು ಬಳಿಯುತ್ತಾನೆ.

15 “ಯೆಹೋಯಾಕೀಮನೇ, ನಿನ್ನ ಮನೆಯಲ್ಲಿ ದೇವದಾರಿನ ಮರವನ್ನು
    ಬಹಳವಾಗಿ ಇಟ್ಟುಕೊಳ್ಳುವದರಿಂದ ನೀನು ದೊಡ್ಡ ರಾಜನಾಗುವದಿಲ್ಲ.
ನಿನ್ನ ತಂದೆಯಾದ ಯೋಷೀಯನು ಅನ್ನಪಾನೀಯಗಳಿಂದ ತೃಪ್ತಿಪಟ್ಟುಕೊಳ್ಳುತ್ತಿದ್ದನು.
    ಅವನು ನೀತಿ ಮತ್ತು ನ್ಯಾಯ ಸಮ್ಮತವಾದದ್ದನ್ನು ಮಾಡುತ್ತಿದ್ದನು.
    ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
16 ಯೋಷೀಯನು ದೀನದರಿದ್ರರಿಗೆ ಸಹಾಯ ಮಾಡುತ್ತಿದ್ದನು.
    ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
ಯೆಹೋಯಾಕೀಮನೇ, ‘ದೇವರನ್ನು ಅರಿತುಕೊಳ್ಳುವುದು ಎಂದರೇನು?’
ನ್ಯಾಯ ಮತ್ತು ನೀತಿಯಿಂದ ನಡೆದುಕೊಳ್ಳುವುದು,
    ನನ್ನನ್ನು ಅರಿತುಕೊಳ್ಳಲು ಬೇಕಾದದ್ದು ಅದೇ.
ಇದು ಯೆಹೋವನಿಂದ ಬಂದ ಸಂದೇಶ:

17 “ಯೆಹೋಯಾಕೀಮನೇ, ನಿನಗೆ ಲಾಭದಾಯಕವಾದದ್ದು ಮಾತ್ರ ನಿನ್ನ ಕಣ್ಣಿಗೆ ಕಾಣುತ್ತದೆ.
    ನೀನು ಯಾವಾಗಲೂ ನಿನಗೆ ಹೆಚ್ಚು ಲಾಭ ಬರುವದನ್ನು ನೋಡುವೆ.
ನೀನು ನಿರಪರಾಧಿಗಳನ್ನು ಕೊಲ್ಲಲು ಸಿದ್ಧನಾಗಿರುವೆ.
    ನೀನು ಬೇರೆಯವರ ವಸ್ತುಗಳನ್ನು ಅಪಹರಿಸಲು ಸಿದ್ಧನಾಗಿರುವೆ.”

18 ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು,
    “ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ.
ಅವರು ಒಬ್ಬರಿಗೊಬ್ಬರು,
    ‘ನನ್ನ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ,
    ನನ್ನ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ.
ಅವರು ಅವನ ಬಗ್ಗೆ
    ‘ಒಡೆಯನೇ, ನನ್ನ ರಾಜನೇ,
    ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳುವದಿಲ್ಲ.
19 ಜೆರುಸಲೇಮಿನ ಜನರು ಯೆಹೋಯಾಕೀಮನನ್ನು ಒಂದು ಕತ್ತೆಯನ್ನು ಹೂಳಿದಂತೆ ಹೂಳಿಬಿಡುತ್ತಾರೆ.
    ಅವರು ಅವನ ಶವವನ್ನು ದೂರ ಎಳೆದುಕೊಂಡು ಹೋಗುತ್ತಾರೆ.
    ಅವನ ಶವವನ್ನು ಜೆರುಸಲೇಮಿನ ದ್ವಾರಗಳ ಹೊರಗೆ ಎಸೆದುಬಿಡುತ್ತಾರೆ.

20 “ಯೆಹೂದವೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೊ,
    ನಿನ್ನ ಧ್ವನಿಯು ಬಾಷಾನ್ ಪರ್ವತಗಳಲ್ಲಿ ಕೇಳಿಸಲಿ.
ಅಬಾರೀಮಿನಲ್ಲಿ ಅರಚಿಕೊ;
    ಏಕೆಂದರೆ ನಿನ್ನ ‘ಪ್ರಿಯತಮರೆಲ್ಲರನ್ನೂ’ ನಾಶಮಾಡಲಾಗುವುದು.

21 “ಯೆಹೂದವೇ, ನೀನು ಸುರಕ್ಷಿತಳಾಗಿರುವೆ ಎಂದು ನೀನು ಭಾವಿಸಿಕೊಂಡಿರುವೆ.
    ಆದರೆ ನಾನು ನಿನಗೆ ಎಚ್ಚರಿಕೆಯನ್ನು ಕೊಟ್ಟೆ.
ಹೌದು, ನಾನೇ ಎಚ್ಚರಿಕೆಯನ್ನು ಕೊಟ್ಟೆ,
    ಆದರೆ ನೀನು ಅದನ್ನು ಕಿವಿಗೆ ಹಾಕಿಕೊಳ್ಳಲು ಒಪ್ಪಲಿಲ್ಲ.
ನಿನ್ನ ಬಾಲ್ಯದಿಂದಲೂ ನೀನು ಹೀಗೆಯೇ ಮಾಡಿದೆ.
ಯೆಹೂದವೇ, ನಿನ್ನ ಬಾಲ್ಯದಿಂದಲೂ
    ನೀನು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.
22 ಯೆಹೂದವೇ, ನನ್ನ ದಂಡನೆಯು ಒಂದು ಬಿರುಗಾಳಿಯಂತೆ ಬರುವುದು.
    ಅದು ನಿನ್ನ ಎಲ್ಲಾ ಕುರುಬರನ್ನು (ನಾಯಕರನ್ನು) ಹಾರಿಸಿಕೊಂಡು ಹೋಗುವುದು.
ಯಾವುದಾದರೂ ಬೇರೆ ಜನಾಂಗ ನಿನಗೆ ಸಹಾಯಮಾಡಬಹುದೆಂದು ನೀನು ಭಾವಿಸಿಕೊಂಡಿರುವೆ.
ಆದರೆ ಆ ಜನಾಂಗಗಳನ್ನೂ ಸೋಲಿಸಲಾಗುವುದು.
    ಆಗ ನಿನಗೆ ನಿಜವಾಗಿಯೂ ಆಶಾಭಂಗವಾಗುವುದು.
    ನೀನು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವೆ.

23 “ರಾಜನೇ, ಬೆಟ್ಟದ ಮೇಲೆ ದೇವದಾರು ಮರದಿಂದ ಮಾಡಿದ ನಿನ್ನ ಮನೆಯಲ್ಲಿ ನೀನು ವಾಸಿಸುವೆ.
    ಆ ಮನೆಯು ಲೆಬನೋನಿನ ಮರದ ತೋಪಿನಂತಿದೆ.
ನೀನು ಎತ್ತರವಾದ ಪರ್ವತ ಪ್ರದೇಶದಲ್ಲಿದ್ದ
    ನಿನ್ನ ವಿಶಾಲವಾದ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದುಕೊಂಡಿರುವೆ.
ಆದರೆ ನಿನಗೆ ದಂಡನೆಯಾದಾಗ ನೀನು ನರಳುವೆ.
    ಪ್ರಸವವೇದನೆಯಂಥ ನೋವನ್ನು ನೀನು ಅನುಭವಿಸುವೆ.”

ರಾಜನಾದ ಯೆಹೋಯಾಚೀನನ ಬಗ್ಗೆ ನ್ಯಾಯನಿರ್ಣಯ

24 ಯೆಹೋವನು ಹೀಗೆನ್ನುತ್ತಾನೆ: “ಯೆಹೋಯಾಕೀಮನ ಮಗನೂ ಯೆಹೂದದ ರಾಜನೂ ಆಗಿರುವ ಯೆಹೋಯಾಚೀನನೇ, ನನ್ನ ಜೀವದಾಣೆಯಾಗಿಯೂ ನಿನಗೆ ಹೀಗೆ ಮಾಡುವೆನು. ನೀನು ನನ್ನ ಬಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುವೆನು. 25 ಯೆಹೋಯಾಚೀನನೇ, ನಾನು ನಿನಗೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು. ನೀನು ಹೆದರಿಕೊಂಡಿರುವುದು ಆ ಜನರಿಗೇ. ಆ ಜನರು ನಿನ್ನನ್ನು ಕೊಲ್ಲಬಯಸುತ್ತಾರೆ. 26 ನಾನು ನಿನ್ನನ್ನೂ ನಿನ್ನ ತಾಯಿಯನ್ನೂ ನಿಮ್ಮಿಬ್ಬರ ಜನ್ಮಸ್ಥಳವಲ್ಲದ ಬೇರೆ ದೇಶದಲ್ಲಿ ಎಸೆದುಬಿಡುತ್ತೇನೆ. ನೀನು ಮತ್ತು ನಿನ್ನ ತಾಯಿ ಆ ದೇಶದಲ್ಲಿ ಸತ್ತುಹೋಗುವಿರಿ. 27 ಯೆಹೋಯಾಚೀನನೇ, ನೀನು ನಿನ್ನ ದೇಶಕ್ಕೆ ಹಿಂದಿರುಗಬೇಕೆಂದು ಅಪೇಕ್ಷಿಸಿದರೂ ನಿನಗೆ ಬರಲು ಸಾಧ್ಯವಾಗದು.”

28 ಯೆಹೋಯಾಚೀನನು ಎಸೆಯಲ್ಪಟ್ಟ ಒಡೆದ ಮಡಕೆಯಂತಿದ್ದಾನೆ.
    ಅವನು ಯಾರಿಗೂ ಬೇಡವಾಗದ ಮಡಕೆಯಂತಿದ್ದಾನೆ.
ಯೆಹೋಯಾಚೀನನು ಮತ್ತು ಅವನ ಮಕ್ಕಳು ಏಕೆ ಹೊರಗೆ ಎಸೆಯಲ್ಪಡುವರು?
    ಅವರು ಪರದೇಶಕ್ಕೆ ಏಕೆ ಒಯ್ಯಲ್ಪಡುವರು?
29 ದೇಶವೇ, ದೇಶವೇ, ಯೆಹೂದದ ದೇಶವೇ,
    ಯೆಹೋವನ ಸಂದೇಶವನ್ನು ಕೇಳು.
30 ಯೆಹೋವನು ಹೇಳುವುದೇನೆಂದರೆ: “ಯೆಹೋಯಾಚೀನನು ಮಕ್ಕಳಿಲ್ಲದವನೆಂದು ನೊಂದಾಯಿಸಿರಿ.
    ಯೆಹೋಯಾಚೀನನು ತನ್ನ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ.
    ಅವನ ಮಕ್ಕಳಲ್ಲಿ ಯಾರೂ ದಾವೀದನ ಸಿಂಹಾಸನವನ್ನೇರುವದಿಲ್ಲ.
ಅವನ ಮಕ್ಕಳಲ್ಲಿ ಯಾರೂ ಯೆಹೂದದಲ್ಲಿ ರಾಜ್ಯಭಾರ ಮಾಡುವುದಿಲ್ಲ.”

ಮಾರ್ಕ 8

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 15:32-39)

ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು.

ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು.

ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು.

ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು.

ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು.

ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10 ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.

ಯೇಸುವನ್ನು ಪರೀಕ್ಷಿಸಲು ಫರಿಸಾಯರ ಪ್ರಯತ್ನ

(ಮತ್ತಾಯ 16:1-4; ಲೂಕ 11:16,29)

11 ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನನ್ನು ಪರೀಕ್ಷಿಸಲು ಪ್ರಶ್ನೆಗಳನ್ನು ಕೇಳಿದರು. ಅವರು ಯೇಸುವಿಗೆ, “ನೀನು ದೇವರಿಂದ ಬಂದವನೆಂದು ತೋರಿಸಲು ಒಂದು ಸೂಚಕಕಾರ್ಯವನ್ನು ಮಾಡು” ಎಂದರು. 12 ಆಗ ಯೇಸು ನಿಟ್ಟುಸಿರುಬಿಟ್ಟು ಅವರಿಗೆ, “ನೀವು ಸೂಚಕಕಾರ್ಯವನ್ನು ನೋಡಬಯಸುವುದೇಕೆ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮಗೆ ಯಾವ ಸೂಚಕಕಾರ್ಯವನ್ನೂ ತೋರಿಸಲಾಗುವುದಿಲ್ಲ” ಎಂದು ಹೇಳಿದನು. 13 ನಂತರ ಯೇಸು ಫರಿಸಾಯರ ಬಳಿಯಿಂದ ಹೊರಟು ದೋಣಿಯಲ್ಲಿ ಸರೋವರದ ಆಚೆಯ ದಡಕ್ಕೆ ಹೋದನು.

ಯೆಹೂದ್ಯ ನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ

(ಮತ್ತಾಯ 16:5-12)

14 ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದಾಗ ಅವರ ಬಳಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಅವರು ಮರೆತು ಹೆಚ್ಚು ರೊಟ್ಟಿಗಳನ್ನು ತಂದಿರಲಿಲ್ಲ. 15 ಯೇಸು ಅವರಿಗೆ, “ಜಾಗರೂಕರಾಗಿರಿ! ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ಬಗ್ಗೆ ಎಚ್ಚರವಹಿಸಿರಿ” ಎಂದು ಎಚ್ಚರಿಸಿದನು.

16 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.

17 ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ? 18 ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ. 19 ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು.

ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.

20 “ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು.

ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.

21 ಆಗ ಯೇಸು ಅವರಿಗೆ, “ನಾನು ಮಾಡಿದ ಈ ಕಾರ್ಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ, ಆದರೆ ನೀವಿನ್ನೂ ಅರ್ಥಮಾಡಿಕೊಳ್ಳುವುದಿಲ್ಲವೇ?” ಎಂದು ಕೇಳಿದನು.

ಬೆತ್ಸಾಯಿದದಲ್ಲಿ ಕುರುಡನಿಗೆ ದೃಷ್ಟಿದಾನ

22 ಯೇಸು ಮತ್ತು ಆತನ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವು ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23 ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು.

24 ಆ ಕುರುಡನು ತಲೆಯೆತ್ತಿ ನೋಡಿ, “ಹೌದು, ನನಗೆ ಜನರು ಕಾಣುತ್ತಾರೆ. ಅವರು ಮರಗಳಂತೆ ಕಂಡರೂ ನಡೆದಾಡುತ್ತಿದ್ದಾರೆ” ಎಂದು ಹೇಳಿದನು.

25 ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು.

ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ

(ಮತ್ತಾಯ 16:13-20; ಲೂಕ 9:18-21)

27 ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಸಮೀಪದಲ್ಲಿರುವ ಊರುಗಳಿಗೆ ಹೋದರು. ಅವರು ಪ್ರಯಾಣ ಮಾಡುತ್ತಿರುವಾಗ, ಯೇಸು ತನ್ನ ಶಿಷ್ಯರನ್ನು, “ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.

28 ಅದಕ್ಕೆ ಶಿಷ್ಯರು, “ಕೆಲವರು ನಿನ್ನನ್ನು, ‘ಸ್ನಾನಿಕ ಯೋಹಾನ’ ಎಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ ಎಂದು ಹೇಳುತ್ತಾರೆ. ಇನ್ನು ಕೆಲವು ಜನರು ನಿನ್ನನ್ನು, ‘ಪ್ರವಾದಿಗಳಲ್ಲಿ ಒಬ್ಬನು’ ಎನ್ನುತ್ತಾರೆ” ಎಂದು ಉತ್ತರಿಸಿದರು.

29 ಆಗ ಯೇಸು ಅವರಿಗೆ, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.

ಕೂಡಲೇ ಪೇತ್ರನು, “ನೀನು ಬರಬೇಕಾದ ಕ್ರಿಸ್ತನು” ಎಂದು ಉತ್ತರಿಸಿದನು.

30 ಯೇಸು ತನ್ನ ಶಿಷ್ಯರಿಗೆ, “ನಾನು ಯಾರೆಂಬುದನ್ನು ಯಾರಿಗೂ ಹೇಳಬೇಡಿ” ಎಂದು ಹೇಳಿದನು.

ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು

(ಮತ್ತಾಯ 16:21-28; ಲೂಕ 9:22-27)

31 ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು. 32 ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ.

ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು. 33 ಆದರೆ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ” ಎಂದು ಗದರಿಸಿದನು.

34 ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು. 35 ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ. 36 ಒಬ್ಬನು ಪ್ರಪಂಚವನ್ನೆಲ್ಲಾ ಸಂಪಾದಿಸಿಕೊಂಡು ತನ್ನ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಪ್ರಯೋಜನವೇನು? 37 ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? 38 ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International