Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 8

ಎಫ್ರಾಯೀಮ್ಯರು ಗಿದ್ಯೋನನ ಮೇಲೆ ಕೋಪಗೊಂಡಿದ್ದರು. ಎಫ್ರಾಯೀಮ್ಯರು ಗಿದ್ಯೋನನನ್ನು ಕಂಡಾಗ, “ನೀನು ನಮ್ಮ ಸಂಗಡ ಹೀಗೇಕೆ ವರ್ತಿಸಿದೆ? ನೀನು ಮಿದ್ಯಾನ್ಯರೊಂದಿಗೆ ಯುದ್ಧಮಾಡಲು ಹೋದಾಗ ನಮ್ಮನ್ನು ಏಕೆ ಕರೆಯಲಿಲ್ಲ?” ಎಂದು ಗಿದ್ಯೋನನನ್ನು ಕೇಳಿದರು.

ಗಿದ್ಯೋನನು ಎಫ್ರಾಯೀಮ್ಯರಿಗೆ, “ನೀವು ಮಾಡಿದಷ್ಟು ದೊಡ್ಡ ಕೆಲಸವನ್ನು ನಾನು ಮಾಡಿಲ್ಲ. ನನ್ನ ಅಬೀಯೆಜೆರನ ಕುಟುಂಬದವರಿಗಿಂತ ಎಫ್ರಾಯೀಮ್ಯರಾದ ನಿಮ್ಮ ಸುಗ್ಗಿಯೇ ಬಹಳ ಚೆನ್ನಾಗಿ ಆಗಿದೆಯಲ್ಲವೇ? ಸುಗ್ಗಿಯ ಕಾಲದಲ್ಲಿ ನಮ್ಮ ಕುಟುಂಬದವರು ಕೂಡಿಸುವ ದ್ರಾಕ್ಷಿಗಿಂತ ಹೆಚ್ಚು ದ್ರಾಕ್ಷಿಯನ್ನು ನೀವು ಹೊಲದಲ್ಲಿಯೇ ಬಿಟ್ಟುಬಿಡುತ್ತೀರಿ! ಇದು ನಿಜವಲ್ಲವೇ? ಅದೇ ರೀತಿ ಈಗಲೂ ಕೂಡ ನಿಮ್ಮದೇ ದೊಡ್ಡ ರಾಶಿ. ಮಿದ್ಯಾನ್ಯರ ನಾಯಕರಾದ ಓರೇಬನನ್ನು ಮತ್ತು ಜೇಬನನ್ನು ಸೆರೆಹಿಡಿಯುವಂತೆ ದೇವರು ನಿಮಗೆ ಸಹಾಯ ಮಾಡಿದನು. ನೀವು ಮಾಡಿದ ಕೆಲಸಕ್ಕೆ ನನ್ನ ಜಯವನ್ನು ಹೋಲಿಸಲು ಹೇಗೆ ಸಾಧ್ಯ?” ಎಂದು ಹೇಳಿದನು. ಗಿದ್ಯೋನನ ಉತ್ತರವನ್ನು ಕೇಳಿದ ಮೇಲೆ ಎಫ್ರಾಯೀಮ್ಯರ ಕೋಪ ಕಡಿಮೆಯಾಯಿತು.

ಗಿದ್ಯೋನನು ಮಿದ್ಯಾನ್ಯರ ಇಬ್ಬರು ಅರಸರನ್ನು ಸೆರೆಹಿಡಿದನು

ಗಿದ್ಯೋನ ಮತ್ತು ಅವನ ಮುನ್ನೂರು ಜನರು ಜೋರ್ಡನ್ ನದಿಯನ್ನು ದಾಟಿ ಆಚೆದಡಕ್ಕೆ ಹೋದರು. ಅವರು ಬಹಳ ದಣಿದಿದ್ದರು ಮತ್ತು ಹಸಿದಿದ್ದರು.[a] ಗಿದ್ಯೋನನು ಸುಖೋತ್ ನಗರದ ಜನರಿಗೆ, “ನನ್ನ ಸೈನಿಕರಿಗೆ ತಿನ್ನಲು ಏನಾದರೂ ಕೊಡಿ; ಅವರು ಬಹಳ ದಣಿದು ಹೋಗಿದ್ದಾರೆ. ನಾವು ಮಿದ್ಯಾನ್ಯರ ಅರಸನಾದ ಜೆಬಹನನ್ನೂ ಚಲ್ಮುನ್ನನನ್ನೂ ಬೆನ್ನಟ್ಟಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದನು.

ಆದರೆ ಸುಖೋತ್ ನಗರದ ನಾಯಕರು ಗಿದ್ಯೋನನಿಗೆ, “ನಾವು ನಿಮ್ಮ ಸೈನಿಕರಿಗೆ ಆಹಾರವನ್ನು ಏಕೆ ಕೊಡಬೇಕು? ನೀವು ಜೆಬಹನನ್ನು ಮತ್ತು ಚಲ್ಮುನ್ನನನ್ನು ಇನ್ನೂ ಬಂಧಿಸಲೇ ಇಲ್ಲ” ಎಂದು ಹೇಳಿದರು.

ಅದಕ್ಕೆ ಗಿದ್ಯೋನನು, “ನೀವು ನಮಗೆ ಆಹಾರವನ್ನು ಕೊಡುವುದಿಲ್ಲವಾದರೆ ಜೆಬಹನನ್ನು ಮತ್ತು ಚಲ್ಮುನ್ನನನ್ನು ಬಂಧಿಸಲು ಯೆಹೋವನೇ ನಮಗೆ ಸಹಾಯ ಮಾಡುತ್ತಾನೆ. ಆಮೇಲೆ ನಾನು ಇಲ್ಲಿಗೆ ಬಂದು ನಿಮ್ಮನ್ನು ಮರುಳುಗಾಡಿನ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡಿಸುತ್ತೇನೆ” ಎಂದು ಉತ್ತರಿಸಿದನು.

ಗಿದ್ಯೋನನು ಸುಖೋತ್ ಎಂಬ ನಗರವನ್ನು ಬಿಟ್ಟು ಪೆನೂವೇಲ್ ಎಂಬ ನಗರಕ್ಕೆ ಬಂದನು; ಆಹಾರಕ್ಕಾಗಿ ಸುಖೋತ್ ಜನರನ್ನು ಕೇಳಿದಂತೆ ಪೆನೂವೇಲಿನ ಜನರನ್ನೂ ಕೇಳಿದನು. ಆದರೆ ಪೆನೂವೇಲಿನ ಜನರು ಸಹ ಸುಖೋತಿನ ಜನರಂತೆಯೇ ಉತ್ತರಿಸಿದರು. ಪೆನೂವೇಲಿನ ಜನರಿಗೆ ಗಿದ್ಯೋನನು, “ನಾನು ಜಯ ಸಂಪಾದಿಸಿದ ಮೇಲೆ ಇಲ್ಲಿಗೆ ಬಂದು ಈ ಬುರುಜನ್ನು ಕೆಡವಿಬಿಡುತ್ತೇನೆ” ಅಂದನು.

10 ಜೆಬಹ ಮತ್ತು ಚಲ್ಮುನ್ನ ಮತ್ತು ಅವರ ಸೈನಿಕರು ಕರ್ಕೋರ ಎಂಬ ನಗರದಲ್ಲಿದ್ದರು. ಅವರ ಸೈನ್ಯದಲ್ಲಿ ಹದಿನೈದು ಸಾವಿರ ಸೈನಿಕರಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಉಳಿದವರು ಇಷ್ಟೇ ಜನ. ಆ ಸೈನ್ಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು ಈಗಾಗಲೇ ಯುದ್ಧದಲ್ಲಿ ಸತ್ತಿದ್ದರು. 11 ಗಿದ್ಯೋನ ಮತ್ತು ಅವನ ಸೈನಿಕರು ಕಾಡುಗೊಲ್ಲರ ಪ್ರದೇಶದ ಮಾರ್ಗವನ್ನು ಬಳಸಿದರು. ಆ ಮಾರ್ಗವು ನೋಬಹ, ಯೊಗ್ಬೆಹಾ ನಗರಗಳ ಪೂರ್ವಕ್ಕೆ ಇದೆ. ಗಿದ್ಯೋನನು ಕರ್ಕೋರ ನಗರಕ್ಕೆ ಬಂದು ಶತ್ರುಗಳ ಮೇಲೆ ಧಾಳಿ ಮಾಡಿದನು. ಶತ್ರುಸೈನ್ಯವು ಈ ಧಾಳಿಯನ್ನು ನಿರೀಕ್ಷಿಸಿರಲಿಲ್ಲ. 12 ಮಿದ್ಯಾನ್ಯರ ಅರಸರಾದ ಜೆಬಹನೂ ಚಲ್ಮುನ್ನನೂ ಓಡಿಹೋದರು. ಆದರೆ ಗಿದ್ಯೋನನು ಬೆನ್ನಟ್ಟಿ ಆ ಅರಸರನ್ನು ಹಿಡಿದುಕೊಂಡನು. ಗಿದ್ಯೋನ ಮತ್ತು ಅವನ ಸೈನಿಕರು ಶತ್ರುಸೈನ್ಯವನ್ನು ಸೋಲಿಸಿದರು.

13 ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹಿಂದಿರುಗಿದನು. ಗಿದ್ಯೋನ ಮತ್ತು ಅವನ ಸೈನಿಕರು ಹೆರೆಸ್ ಎಂಬ ಒಂದು ಬೆಟ್ಟದ ಕಣಿವೆಯ ಮಾರ್ಗವಾಗಿ ಹಿಂದಿರುಗಿದರು. 14 ಗಿದ್ಯೋನನು ಸುಖೋತ್ ನಗರದ ಒಬ್ಬ ತರುಣನನ್ನು ಹಿಡಿದುಕೊಂಡನು. ಗಿದ್ಯೋನನು ಆ ತರುಣನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು. ಆ ತರುಣನು ಗಿದ್ಯೋನನಿಗಾಗಿ ಕೆಲವು ಹೆಸರುಗಳನ್ನು ಬರೆದನು. ಆ ತರುಣನು ಸುಖೋತ್ ನಗರದ ನಾಯಕರ ಮತ್ತು ಹಿರಿಯರ ಹೆಸರುಗಳನ್ನು ಬರೆದನು. ಅವನು ಎಪ್ಪತ್ತೇಳು ಜನರ ಹೆಸರುಗಳನ್ನು ಕೊಟ್ಟನು.

15 ಗಿದ್ಯೋನನು ಸುಖೋತ್ ನಗರಕ್ಕೆ ಬಂದು ಆ ನಗರದ ಜನರಿಗೆ, “ನೋಡಿರಿ, ಜೆಬಹ ಮತ್ತು ಚಲ್ಮುನ್ನ ಇಲ್ಲಿದ್ದಾರೆ. ‘ಜೆಬಹ ಮತ್ತು ಚಲ್ಮುನ್ನರನ್ನು ನೀವು ಇನ್ನೂ ಸೆರೆಹಿಡಿದಿಲ್ಲ. ನಿಮ್ಮ ದಣಿದ ಸೈನಿಕರಿಗೆ ಆಹಾರವನ್ನು ನಾವೇಕೆ ಕೊಡಬೇಕು?’ ಎಂದು ನನ್ನನ್ನು ತಮಾಷೆ ಮಾಡಿದಿರಿ” ಎಂದನು. 16 ಗಿದ್ಯೋನನು ಸುಖೋತ್ ನಗರದ ಹಿರಿಯರಿಗೆ ಮರುಭೂಮಿಯ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡೆಸಿ ಶಿಕ್ಷಿಸಿದನು. 17 ಗಿದ್ಯೋನನು ಪೆನೂವೇಲಿನ ಬುರುಜನ್ನೂ ಸಹ ಕೆಡವಿ ಆ ಪಟ್ಟಣದ ಜನರನ್ನು ಕೊಂದುಹಾಕಿದನು.

18 ಆಮೇಲೆ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನರನ್ನು, “ನೀವು ತಾಬೋರ್ ಪರ್ವತದಲ್ಲಿ ಕೆಲವು ಜನರನ್ನು ಕೊಂದಿರುವಿರಿ. ಅವರು ಹೇಗಿದ್ದರು?” ಎಂದು ಕೇಳಿದನು.

ಅವರು “ನಿನ್ನ ಹಾಗೆಯೇ ಇದ್ದರು. ಅವರಲ್ಲಿ ಪ್ರತಿಯೊಬ್ಬನೂ ಒಬ್ಬ ರಾಜಕುಮಾರನಂತೆ ಕಂಡನು” ಎಂದು ಉತ್ತರಕೊಟ್ಟರು.

19 ಗಿದ್ಯೋನನು, “ಆ ಜನರು ನನ್ನ ಸಹೋದರರಾಗಿದ್ದರು. ಅವರು ನನ್ನ ತಾಯಿಯ ಮಕ್ಕಳು! ಯೆಹೋವನ ಮೇಲೆ ಆಣೆಮಾಡಿ ಹೇಳುತ್ತೇನೆ, ನೀವು ಅವರನ್ನು ಕೊಲ್ಲದೆ ಇದಿದ್ದರೆ ನಾನು ಈಗ ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿದನು.

20 ಗಿದ್ಯೋನನು ಎತೆರನ ಕಡೆಗೆ ತಿರುಗಿದನು. ಎತೆರನು ಗಿದ್ಯೋನನ ಹಿರಿಯ ಮಗ. ಗಿದ್ಯೋನನು ಅವನಿಗೆ, “ಈ ಅರಸರನ್ನು ಕೊಲ್ಲು” ಎಂದು ಹೇಳಿದನು. ಆದರೆ ಎತೆರನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟನು. ಅವನು ತನ್ನ ಕತ್ತಿಯನ್ನು ಹೊರ ತೆಗೆಯಲಿಲ್ಲ.

21 ಆಗ ಜೆಬಹ ಮತ್ತು ಚಲ್ಮುನ್ನರು ಗಿದ್ಯೋನನಿಗೆ, “ನೀನೇ ನಮ್ಮನ್ನು ಕೊಲ್ಲು. ನೀನು ಈ ಕೆಲಸವನ್ನು ಮಾಡುವುದಕ್ಕೆ ಯೋಗ್ಯವಯಸ್ಸಿನವನೂ ಗಟ್ಟಿಗನೂ ಆಗಿರುವೆ” ಎಂದರು. ಗಿದ್ಯೋನನು ಎದ್ದು ಜೆಬಹ ಮತ್ತು ಚಲ್ಮುನ್ನರನ್ನು ಕೊಂದುಹಾಕಿದನು. ಆಮೇಲೆ ಗಿದ್ಯೋನನು ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.

ಗಿದ್ಯೋನನು ಒಂದು ಏಫೋದನ್ನು ಮಾಡಿಸಿದನು

22 ಇಸ್ರೇಲಿಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರಿಂದ ರಕ್ಷಿಸಿರುವೆ. ಅದಕ್ಕಾಗಿ ಈಗ ನಮ್ಮ ಮೇಲೆ ಆಳ್ವಿಕೆ ಮಾಡು. ನೀನೂ ನಿನ್ನ ಮಗನೂ ನಿನ್ನ ಮೊಮ್ಮಗನೂ ನಮ್ಮನ್ನು ಆಳಬೇಕೆಂಬುದು ನಮ್ಮ ಆಶೆ” ಎಂದು ಹೇಳಿದರು.

23 ಗಿದ್ಯೋನನು ಇಸ್ರೇಲರಿಗೆ, “ಯೆಹೋವನು ನಿಮ್ಮನ್ನು ಆಳುತ್ತಾನೆ. ನಾನು ನಿಮ್ಮನ್ನು ಆಳುವುದಿಲ್ಲ; ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ” ಎಂದು ಹೇಳಿದನು.

24 ಇಸ್ರೇಲರು ಸೋಲಿಸಿದ ಜನರಲ್ಲಿ ಕೆಲವರು ಇಷ್ಮಾಯೇಲ್ಯರಾಗಿದ್ದರು. ಇಷ್ಮಾಯೇಲ್ಯರು ಕಿವಿಗಳಲ್ಲಿ ಚಿನ್ನದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು. ಆದ್ದರಿಂದ ಗಿದ್ಯೋನನು ಇಸ್ರೇಲರಿಗೆ, “ನೀವು ನನಗಾಗಿ ಈ ಒಂದು ಕೆಲಸವನ್ನು ಮಾಡಬೇಕೆಂದು ನನ್ನ ಕೋರಿಕೆ. ನೀವು ಯುದ್ಧದಲ್ಲಿ ಕೊಳ್ಳೆಹೊಡೆದ ವಸ್ತುಗಳಿಂದ ಪ್ರತಿಯೊಬ್ಬನು ಒಂದು ಬಂಗಾರದ ಮುರುವನ್ನು ನನಗೆ ಕೊಡಬೇಕು” ಎಂದು ಕೇಳಿದನು.

25 ಇಸ್ರೇಲರು, “ನೀನು ಕೇಳಿದ್ದನ್ನು ಸಂತೋಷದಿಂದ ಕೊಡುತ್ತೇವೆ” ಎಂದು ಹೇಳಿ ನೆಲದ ಮೇಲೆ ಒಂದು ಮೇಲಂಗಿಯನ್ನು ಹಾಸಿದರು. ಪ್ರತಿಯೊಬ್ಬನು ಒಂದೊಂದು ಮುರುವನ್ನು ಆ ಅಂಗಿಯ ಮೇಲೆ ಎಸೆದನು. 26 ಆ ಮುರುವುಗಳನ್ನು ಒಟ್ಟುಗೂಡಿಸಿ ತೂಕ ಹಾಕಿದಾಗ ಅವುಗಳ ತೂಕ ನಲವತ್ತಮೂರು ಪೌಂಡಿನಷ್ಟಿತ್ತು. ಗಿದ್ಯೋನನಿಗೆ ಇಸ್ರೇಲರು ಕೊಟ್ಟ ಬೇರೆ ಕಾಣಿಕೆಗಳು ಇದರಲ್ಲಿ ಸೇರಿಲ್ಲ. ಅವರು ಅರ್ಧಚಂದ್ರಾಕಾರದ ಮತ್ತು ಕಣ್ಣೀರಿನಾಕಾರದ ಆಭರಣಗಳನ್ನು ಸಹ ಕೊಟ್ಟಿದ್ದರು. ಅವರು ಅವನಿಗೆ ನೇರಳೆ ಬಣ್ಣದ ನಿಲುವಂಗಿಗಳನ್ನು ಕೊಟ್ಟಿದ್ದರು. ಈ ವಸ್ತ್ರಗಳನ್ನು ಮಿದ್ಯಾನ್ಯರ ಅರಸರು ಧರಿಸುತ್ತಿದ್ದರು. ಅವರು ಮಿದ್ಯಾನ್ಯರ ಒಂಟೆಗಳ ಸರಗಳನ್ನು ಸಹ ಕೊಟ್ಟರು.

27 ಗಿದ್ಯೋನನು ಈ ಚಿನ್ನವನ್ನು ಒಂದು ಏಫೋದ್ ಮಾಡುವುದಕ್ಕೆ ಬಳಸಿದನು. ಆ ಏಫೋದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಇಸ್ರೇಲರು ಈ ಏಫೋದನ್ನು ಆರಾಧಿಸಿದರು. ಹೀಗಾಗಿ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಗಿದ್ಯೋನನನ್ನು ಮತ್ತು ಅವನ ಕುಟುಂಬದವರನ್ನು ಪಾಪಮಾರ್ಗಕ್ಕೆ ಎಳೆಯಲು ಏಫೋದ್ ಒಂದು ಉರುಲಾಗಿ ಪರಿಣಮಿಸಿತು.

ಗಿದ್ಯೋನನ ಮರಣ

28 ಮಿದ್ಯಾನ್ಯರು ಇಸ್ರೇಲರ ಅಧೀನದಲ್ಲಿರಬೇಕಾಯಿತು. ಮಿದ್ಯಾನ್ಯರು ಯಾವ ಹೆಚ್ಚಿನ ತೊಂದರೆಗಳನ್ನು ಕೊಡಲಿಲ್ಲ. ಗಿದ್ಯೋನನು ಬದುಕಿರುವವರೆಗೆ ನಲವತ್ತು ವರ್ಷ ಆ ದೇಶದಲ್ಲಿ ಶಾಂತಿ ನೆಲೆಸಿತ್ತು.

29 ಯೋವಾಷನ ಮಗ ಯೆರುಬ್ಬಾಳನು (ಗಿದ್ಯೋನನು) ತನ್ನ ಮನೆಯಲ್ಲಿ ವಾಸವಾಗಿದ್ದನು. 30 ಗಿದ್ಯೋನನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವನಿಗೆ ಅನೇಕ ಹೆಂಡತಿಯರಿದ್ದರು. 31 ಗಿದ್ಯೋನನಿಗೆ ಒಬ್ಬ ಉಪಪತ್ನಿಯೂ ಇದ್ದಳು. ಅವಳು ಶೆಕೆಮಿನಲ್ಲಿರುತ್ತಿದ್ದಳು. ಅವಳಲ್ಲಿ ಅವನಿಗೆ ಒಬ್ಬ ಮಗನು ಹುಟ್ಟಿದನು. ಗಿದ್ಯೋನನು ಅವನಿಗೆ ಅಬೀಮೆಲೆಕ ಎಂದು ಹೆಸರಿಟ್ಟನು.

32 ಯೋವಾಷನ ಮಗನಾದ ಗಿದ್ಯೋನನು ದಿನ ತುಂಬಿದ ಮುದುಕನಾಗಿ ಮರಣಹೊಂದಿದನು. ಗಿದ್ಯೋನನ ಶವವನ್ನು ಅವನ ತಂದೆಯಾದ ಯೋವಾಷನಿಗೆ ಸೇರಿದ್ದ ಒಂದು ಸಮಾಧಿಯಲ್ಲಿ ಹೂಳಿಟ್ಟರು. ಆ ಸಮಾಧಿಯು ಅಬೀಯೆಜೆರ್ ಕುಟುಂಬದವರ ಒಫ್ರದಲ್ಲಿತ್ತು. 33 ಗಿದ್ಯೋನನು ಸತ್ತಮೇಲೆ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರು ಬಾಳನನ್ನು ಪೂಜಿಸಿದರು. ಬಾಳ್‌ಬೇರಿತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು. 34 ಯೆಹೋವನು ಅವರನ್ನು ಅವರ ಸುತ್ತಮುತ್ತಲಿನ ಎಲ್ಲ ಶತ್ರುಗಳಿಂದ ರಕ್ಷಿಸಿದ್ದರೂ ಇಸ್ರೇಲರು ತಮ್ಮ ದೇವರಾದ ಯೆಹೋವನನ್ನು ಜ್ಞಾಪಿಸಿಕೊಳ್ಳಲಿಲ್ಲ. 35 ಯೆರುಬ್ಬಾಳನು ಅನೇಕ ಸತ್ಕಾರ್ಯಗಳನ್ನು ಮಾಡಿದರೂ ಸಹ ಇಸ್ರೇಲರು ಅವನ ಕುಟುಂಬದವರಿಗೆ ಕೃತಜ್ಞತೆಯುಳ್ಳವರಾಗಿರಲಿಲ್ಲ.

ಅಪೊಸ್ತಲರ ಕಾರ್ಯಗಳು 12

ಹೆರೋದ ಅಗ್ರಿಪ್ಪನಿಂದ ಸಭೆಗೆ ಹಿಂಸೆ

12 ಆ ಕಾಲದಲ್ಲಿ ರಾಜ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸಿಸತೊಡಗಿ, ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಯಾಕೋಬನು ಯೋಹಾನನ ಅಣ್ಣ. ಯೆಹೂದ್ಯರು ಇದನ್ನು ಮೆಚ್ಚಿಕೊಂಡರೆಂಬುದು ಹೆರೋದನಿಗೆ ತಿಳಿಯಿತು. ಆದ್ದರಿಂದ ಅವನು ಪೇತ್ರನನ್ನು ಬಂಧಿಸಿ (ಇದು ನಡೆದದ್ದು ಯೆಹೂದ್ಯರ ಪಸ್ಕಹಬ್ಬದ ಕಾಲದಲ್ಲಿ) ಸೆರೆಮನೆಗೆ ಹಾಕಿಸಿದನು. ಹದಿನಾರು ಮಂದಿ ಸಿಪಾಯಿಗಳು ಪೇತ್ರನನ್ನು ಕಾಯುತ್ತಿದ್ದರು. ಪಸ್ಕಹಬ್ಬದ ಕಾಲ ಮುಗಿದೊಡನೆ ಪೇತ್ರನನ್ನು ಜನರ ಮುಂದೆ ನಿಲ್ಲಿಸಬೇಕೆಂದಿದ್ದನು. ಹೀಗೆ ಪೇತ್ರನು ಸೆರೆಮನೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ಎಡಬಿಡದೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಪೇತ್ರನಿಗೆ ಸೆರೆಮನೆಯಿಂದ ಬಿಡುಗಡೆ

ಪೇತ್ರನು ಇಬ್ಬರು ಸೈನಿಕರ ಮಧ್ಯೆ ನಿದ್ರೆಮಾಡುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಅನೇಕ ಸೈನಿಕರು ಸೆರೆಮನೆಯ ಬಾಗಿಲನ್ನು ಕಾಯುತ್ತಿದ್ದರು. ಆಗ ರಾತ್ರಿಯಾಗಿತ್ತು. ಮರುದಿನ ಪೇತ್ರನನ್ನು ಜನರ ಮುಂದೆ ತರಬೇಕೆಂದು ಹೆರೋದನು ಯೋಚಿಸಿಕೊಂಡಿದ್ದನು. ಇದ್ದಕ್ಕಿದ್ದಂತೆ, ಪ್ರಭುವಿನ ದೂತನೊಬ್ಬನು ಅಲ್ಲಿ ನಿಂತುಕೊಂಡನು. ಬೆಳಕು ಕೋಣೆಯಲ್ಲಿ ಪ್ರಕಾಶಿಸಿತು. ದೇವದೂತನು ಪೇತ್ರನ ಪಕ್ಕೆಯನ್ನು ಮುಟ್ಟಿ ಅವನನ್ನು ಎಬ್ಬಿಸಿ, “ಬೇಗನೆ ಎದ್ದೇಳು!” ಎಂದನು. ಆ ಕೂಡಲೆ ಸರಪಣಿಗಳು ಪೇತ್ರನ ಕೈಗಳಿಂದ ಕಳಚಿಬಿದ್ದವು. ದೇವದೂತನು ಪೇತ್ರನಿಗೆ, “ಬಟ್ಟೆ ಧರಿಸಿಕೊ, ಪಾದರಕ್ಷೆಗಳನ್ನು ಮೆಟ್ಟಿಕೊ” ಎಂದು ಹೇಳಿದನು. ಅಂತೆಯೇ ಪೇತ್ರನು ಮಾಡಿದನು. ಬಳಿಕ ದೇವದೂತನು, “ನಿನ್ನ ಮೇಲಂಗಿಯನ್ನು ಧರಿಸಿಕೊಂಡು ನನ್ನನ್ನು ಹಿಂಬಾಲಿಸು” ಎಂದನು.

ದೇವದೂತನು ಹೊರಗೆ ಹೋದನು. ಪೇತ್ರನು ಅವನನ್ನು ಹಿಂಬಾಲಿಸಿದನು. ದೇವದೂತನು ನಿಜವಾಗಿಯೂ ಹೀಗೆ ಮಾಡುತ್ತಿದ್ದಾನೆಂಬುದು ಪೇತ್ರನಿಗೆ ತಿಳಿದಿರಲಿಲ್ಲ. ತಾನು ಕನಸು ಕಾಣುತ್ತಿರಬಹುದೆಂದು ಅವನು ಯೋಚಿಸಿಕೊಂಡನು. 10 ಪೇತ್ರನು ಮತ್ತು ದೇವದೂತನು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿಹೋದರು. ಬಳಿಕ ಅವರು ತಮ್ಮನ್ನು ಪಟ್ಟಣದತ್ತ ನಡೆಸುವ ಕಬ್ಬಿಣದ ಬಾಗಿಲಿಗೆ ಬಂದರು. ಆ ಬಾಗಿಲು ಅವರಿಗಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಂಡಿತು. ಪೇತ್ರ ಮತ್ತು ಆ ದೇವದೂತನು ಬಾಗಿಲ ಮೂಲಕ ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು. ಆಗ ಇದ್ದಕ್ಕಿದ್ದಂತೆ ಆ ದೇವದೂತನು ಅವನನ್ನು ಬಿಟ್ಟುಹೋದನು.

11 ನಡೆದ ಸಂಗತಿಯನ್ನು ಆಗ ಅರಿತುಕೊಂಡ ಪೇತ್ರನು, “ಪ್ರಭುವು ನನ್ನ ಬಳಿಗೆ ತನ್ನ ದೇವದೂತನನ್ನು ನಿಜವಾಗಿಯೂ ಕಳುಹಿಸಿದನೆಂದು ಈಗ ನನಗೆ ತಿಳಿಯಿತು. ಆತನು ನನ್ನನ್ನು ಹೆರೋದನ ಕೈಯಿಂದ ಪಾರುಮಾಡಿದನು. ನನಗೆ ಕೇಡು ಸಂಭವಿಸುತ್ತದೆಯೆಂದು ಯೆಹೂದ್ಯರು ಯೋಚಿಸಿಕೊಂಡಿದ್ದರು. ಆದರೆ ಪ್ರಭುವು ನನ್ನನ್ನು ಆ ಕೇಡಿನಿಂದ ರಕ್ಷಿಸಿದನು” ಎಂದುಕೊಂಡನು.

12 ಬಳಿಕ ಪೇತ್ರನು ಮರಿಯಳ ಮನೆಗೆ ಹೋದನು. ಆಕೆಯು ಯೋಹಾನನ ತಾಯಿ. (ಯೋಹಾನನನ್ನು ಮಾರ್ಕನೆಂದು ಕರೆಯುತ್ತಿದ್ದರು.) ಅನೇಕ ಜನರು ಅಲ್ಲಿ ಸೇರಿದ್ದರು. ಅವರೆಲ್ಲರೂ ಪ್ರಾರ್ಥಿಸುತ್ತಿದ್ದರು. 13 ಪೇತ್ರನು ಹೊರ ಬಾಗಲನ್ನು ತಟ್ಟಿದನು. ಯಾರೆಂದು ವಿಚಾರಿಸುವುದಕ್ಕಾಗಿ ರೋದೆ ಎಂಬ ಸೇವಕಿ ಬಂದಳು. 14 ರೋದೆಯು ಪೇತ್ರನ ಧ್ವನಿಯನ್ನು ಗುರುತಿಸಿದಳು. ಆಕೆಗೆ ತುಂಬಾ ಸಂತೋಷವಾಯಿತು. ಬಾಗಿಲು ತೆರೆಯುವುದನ್ನು ಆಕೆ ಮರೆತು, ನೆರೆದು ಬಂದಿದ್ದ ಜನರ ಬಳಿಗೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿ ನಿಂತಿದ್ದಾನೆ!” ಎಂದು ಹೇಳಿದಳು. 15 ಆ ವಿಶ್ವಾಸಿಗಳು ಆಕೆಗೆ, “ನಿನಗೆ ಹುಚ್ಚು ಹಿಡಿದಿದೆ!” ಎಂದರು. ಆದರೆ ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿಹೇಳಿದಳು. ಆದ್ದರಿಂದ ಅವರು, “ಅವನು ಪೇತ್ರನ ದೂತನಿರಬೇಕು” ಎಂದು ಹೇಳಿದರು.

16 ಆದರೆ ಪೇತ್ರನು ಬಾಗಿಲನ್ನು ತಟ್ಟುತ್ತಲೇ ಇದ್ದನು. ಆ ವಿಶ್ವಾಸಿಗಳು ಬಾಗಿಲನ್ನು ತೆರೆದಾಗ ಅವರು ಪೇತ್ರನನ್ನು ಕಂಡು ವಿಸ್ಮಿತರಾದರು. 17 ಪೇತ್ರನು ಅವರಿಗೆ ಸುಮ್ಮನಿರಬೇಕೆಂದು ಸನ್ನೆ ಮಾಡಿದನು. ಪ್ರಭುವು ತನ್ನನ್ನು ಸೆರೆಮನೆಯಿಂದ ಬಿಡಿಸಿದ ರೀತಿಯನ್ನು ಅವನು ಅವರಿಗೆ ವಿವರಿಸಿ, “ಯಾಕೋಬನಿಗೂ ಮತ್ತು ಸಹೋದರರಿಗೂ ಈ ಸಂಗತಿಯನ್ನು ತಿಳಿಸಿರಿ” ಎಂದು ಹೇಳಿದನು. ಬಳಿಕ ಪೇತ್ರನು ಬೇರೊಂದು ಸ್ಥಳಕ್ಕೆ ಅಲ್ಲಿಂದ ಹೊರಟುಹೋದನು.

18 ಮರುದಿನ, ಪೇತ್ರನು ಏನಾದನೆಂದು ಸೈನಿಕರ ನಡುವೆ ದೊಡ್ಡ ಗೊಂದಲವೇ ಎದ್ದಿತು. 19 ಹೆರೋದನು ಎಲ್ಲೆಲ್ಲಿ ಹುಡುಕಿದರೂ ಪೇತ್ರನನ್ನು ಕಂಡುಹಿಡಿಯಲಾಗಲಿಲ್ಲ. ಆದ್ದರಿಂದ ಹೆರೋದನು ಕಾವಲುಗಾರರನ್ನು ವಿಚಾರಿಸಿ ಅವರಿಗೇ ಮರಣದಂಡನೆ ವಿಧಿಸಿದನು.

ಹೆರೋದ ಅಗ್ರಿಪ್ಪನ ಮರಣ

ತರುವಾಯ ಹೆರೋದನು ಜುದೇಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಬಂದು ಅಲ್ಲೇ ಸ್ವಲ್ಪಕಾಲ ನೆಲೆಸಿದ್ದನು. 20 ಟೈರ್ ಮತ್ತು ಸಿದೋನ್ ಪಟ್ಟಣಗಳ ಜನರ ಮೇಲೆ ಹೆರೋದನು ಬಹು ಕೋಪಗೊಂಡಿದ್ದನು. ಆ ಜನರೆಲ್ಲರೂ ಹೆರೋದನನ್ನು ಭೇಟಿಯಾಗಲು ಒಟ್ಟಾಗಿ ಹೋದರು. ಅವರು ಬ್ಲಾಸ್ತನನ್ನು ತಮ್ಮ ಕಡೆಗೆ ಒಲಿಸಿಕೊಂಡರು. ಬ್ಲಾಸ್ತನು ರಾಜನ ವೈಯಕ್ತಿಕ ಸೇವಕನಾಗಿದ್ದನು. ಆ ಜನರು ತಮ್ಮೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಹೆರೋದನನ್ನು ಕೇಳಿಕೊಂಡರು. ಯಾಕೆಂದರೆ ಅವರ ನಾಡಿಗೆ ಹೆರೋದನ ನಾಡಿನಿಂದ ಆಹಾರವನ್ನು ತರಿಸಿಕೊಳ್ಳಬೇಕಾಗಿತ್ತು.

21 ಅವರನ್ನು ಸಂಧಿಸುವುದಕ್ಕಾಗಿ ಹೆರೋದನು ದಿನವೊಂದನ್ನು ಗೊತ್ತುಮಾಡಿದನು. ಅಂದು ಹೆರೋದನು ಸುಂದರವಾದ ರಾಜವಸ್ತ್ರವನ್ನು ಧರಿಸಿಕೊಂಡಿದ್ದನು. ಅವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಜನರಿಗೆ ಭಾಷಣ ಮಾಡಿದನು. 22 ಆ ಜನರು, “ಈ ಧ್ವನಿಯು ಮನುಷ್ಯನದಲ್ಲ, ದೇವರದೇ!” ಎಂದು ಕೂಗಿದರು. 23 ಹೆರೋದನು ಈ ಹೊಗಳಿಕೆಯನ್ನು ತಾನೇ ಸ್ವೀಕರಿಸಿಕೊಂಡನು. ದೇವರನ್ನು ಮಹಿಮೆಪಡಿಸಲಿಲ್ಲ. ಆದ್ದರಿಂದ ಆ ಕ್ಷಣವೇ, ಪ್ರಭುವಿನ ದೂತನೊಬ್ಬನು ಅವನಿಗೆ ಕಾಯಿಲೆಯನ್ನು ಬರಮಾಡಿದನು. ಅವನ ದೇಹದ ಒಳಭಾಗವನ್ನು ಹುಳಗಳು ತಿಂದುಹಾಕಿದ್ದರಿಂದ ಅವನು ಸತ್ತುಹೋದನು.

24 ದೇವರ ಸಂದೇಶವು ಹಬ್ಬುತ್ತಿತ್ತು ಮತ್ತು ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದ ವಿಶ್ವಾಸಿಗಳ ಸಮುದಾಯವು ದೊಡ್ಡದಾಗತೊಡಗಿತು.

25 ಬಾರ್ನಬ ಮತ್ತು ಸೌಲರು ಜೆರುಸಲೇಮಿನಲ್ಲಿ ತಮ್ಮ ಕಾರ್ಯವನ್ನು ಮುಗಿಸಿದ ಮೇಲೆ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಮಾರ್ಕನೆಂಬ ಯೋಹಾನನು ಅವರೊಂದಿಗಿದ್ದನು.

ಯೆರೆಮೀಯ 21

ದೇವರು ರಾಜನಾದ ಚಿದ್ಕೀಯನ ಪ್ರಾರ್ಥನೆಯನ್ನು ತಿರಸ್ಕರಿಸಿದನು

21 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನಾದ ಯಾಜಕ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿದಾಗ ಈ ಸಂದೇಶ ಬಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನ್ನು ತಂದಿದ್ದರು. ಪಷ್ಹೂರ ಮತ್ತು ಚೆಫನ್ಯರು ಹೀಗೆಂದರು: “ನಮಗೋಸ್ಕರ ಯೆಹೋವನನ್ನು ಪ್ರಾರ್ಥಿಸಿ ಮುಂದೆ ಸಂಭವಿಸುವುದನ್ನು ವಿಚಾರಿಸು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿರುವನು; ಆದ್ದರಿಂದ ಮುಂದೆ ಸಂಭವಿಸುವುದನ್ನು ನಾವು ತಿಳಿಯ ಬಯಸುತ್ತೇವೆ. ಮೊದಲಿನಂತೆ ಯೆಹೋವನು ನಮಗೋಸ್ಕರ ಅದ್ಭುತಗಳನ್ನೂ ಮಾಡಬಹುದು. ನೆಬೂಕದ್ನೆಚ್ಚರನು ನಮ್ಮ ಮೇಲೆ ಧಾಳಿ ಮಾಡುವುದನ್ನು ನಿಲ್ಲಿಸಿ ಹೊರಟುಹೋಗುವಂತೆ ಆತನು ಮಾಡಬಹುದು.”

ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ನಿಮ್ಮ ಕೈಯಲ್ಲಿ ಯುದ್ಧದ ಆಯುಧಗಳಿವೆ. ಆ ಆಯುಧಗಳನ್ನು ನೀವು ನಿಮ್ಮ ರಕ್ಷಣೆಗಾಗಿಯೂ ಬಾಬಿಲೋನಿನ ರಾಜನ ವಿರುದ್ಧವಾಗಿಯೂ ಮತ್ತು ಬಾಬಿಲೋನಿನ ಜನರ ವಿರುದ್ಧವಾಗಿಯೂ ಬಳಸುತ್ತಿದ್ದೀರಿ. ಆದರೆ ನಾನು ಆ ಆಯುಧಗಳನ್ನು ವಿಫಲಗೊಳಿಸುತ್ತೇನೆ.

“‘ಬಾಬಿಲೋನಿನ ಸೈನ್ಯವು ನಗರದ ಸುತ್ತಲಿನ ಪೌಳಿಗೋಡೆಯ ಬಳಿಯಿದೆ. ತಕ್ಷಣವೇ ನಾನು ಆ ಸೈನ್ಯವನ್ನು ಜೆರುಸಲೇಮಿನ ಒಳಗಡೆ ತರುತ್ತೇನೆ. ಯೆಹೂದಿಗಳಾದ ನಿಮ್ಮ ವಿರುದ್ಧ ನಾನೇ ಕಾದಾಡುತ್ತೇನೆ. ನಾನು ನನ್ನ ಬಲಿಷ್ಠವಾದ ಕೈಗಳಿಂದ ನಿಮ್ಮ ವಿರುದ್ಧ ಹೋರಾಡುತ್ತೇನೆ. ನಿಮ್ಮ ಮೇಲೆ ನನಗೆ ಬಹಳ ಕೋಪ ಬಂದಿದೆ; ಅದಕ್ಕಾಗಿ ನನ್ನ ಬಲಿಷ್ಠವಾದ ತೋಳಿನಿಂದ ನಾನು ನಿಮ್ಮ ಸಂಗಡ ಯುದ್ಧ ಮಾಡುತ್ತೇನೆ. ನಾನು ನಿಮ್ಮ ವಿರುದ್ಧ ಬಹಳ ರಭಸದಿಂದ ಯುದ್ಧಮಾಡಿ ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ತೋರಿಸುತ್ತೇನೆ. ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾನು ಕೊಂದುಬಿಡುತ್ತೇನೆ. ನಾನು ಜನರನ್ನು ಮತ್ತು ಪ್ರಾಣಿಗಳನ್ನು ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.’” ಇದು ಯೆಹೋವನ ನುಡಿ. “‘ಇದಾದ ಮೇಲೆ ನಾನು ಯೆಹೂದದ ರಾಜನಾದ ಚಿದ್ಕೀಯನನ್ನು ಮತ್ತು ಅಧಿಪತಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುತ್ತೇನೆ. ಜೆರುಸಲೇಮಿನ ಕೆಲವು ಜನರು ಭಯಂಕರವಾದ ರೋಗದಿಂದ ಸಾಯುವುದಿಲ್ಲ; ಕೆಲವು ಜನರು ಖಡ್ಗಗಳಿಗೆ ಆಹುತಿಯಾಗುವದಿಲ್ಲ; ಕೆಲವರು ಹಸಿವಿನಿಂದ ಸಾಯುವುದಿಲ್ಲ. ಅಂಥವರನ್ನು ನಾನು ನೆಬೂಕದ್ನೆಚ್ಚರನಿಗೆ ಕೊಡುತ್ತೇನೆ. ಯೆಹೂದದ ವೈರಿಯು ಗೆಲ್ಲುವಂತೆ ನಾನು ಮಾಡುತ್ತೇನೆ. ನೆಬೂಕದ್ನೆಚ್ಚರನ ಸೈನಿಕರು ಯೆಹೂದ್ಯರನ್ನು ಕೊಲ್ಲಬಯಸುತ್ತಾರೆ. ಆದ್ದರಿಂದ ಯೆಹೂದ ಮತ್ತು ಜೆರುಸಲೇಮಿನ ಜನರು ಖಡ್ಗಗಳಿಗೆ ಬಲಿಯಾಗುವರು. ನೆಬೂಕದ್ನೆಚ್ಚರನು ಸ್ವಲ್ಪವೂ ದಯೆ ತೋರುವದಿಲ್ಲ. ಆ ಜನರ ಸಲುವಾಗಿ ಅವನು ಮರುಗುವದಿಲ್ಲ.’

“ಜೆರುಸಲೇಮಿನ ಜನರಿಗೆ ಇದನ್ನು ಸಹ ಹೇಳಿರಿ. ಯೆಹೋವನು ಹೀಗೆನ್ನುತ್ತಾನೆ, ‘ನಾನು ನಿಮಗೆ ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ ಎಂಬುದನ್ನು ತಿಳಿದುಕೊಳ್ಳಿರಿ. ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಬಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಬದುಕುವನು. ಆ ಸೈನಿಕರು ನಗರವನ್ನು ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನ್ನು ತರುವಂತಿಲ್ಲ. ಆದರೆ ನಗರವನ್ನು ಬಿಟ್ಟು ಹೊರಗೆ ಹೋದವರು ಬದುಕುವರು. 10 ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’” ಇದು ಯೆಹೋವನಿಂದ ಬಂದ ಸಂದೇಶ. “‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’”

11 “ಯೆಹೂದದ ರಾಜಮನೆತನದವರಿಗೆ ಈ ವಿಷಯಗಳನ್ನು ತಿಳಿಸಿರಿ:
    ‘ಯೆಹೋವನ ಸಂದೇಶವನ್ನು ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ:
ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕು.
    ಅಪರಾಧಿಗಳಿಂದ ಕಷ್ಟಕ್ಕೊಳಗಾದವರನ್ನು ರಕ್ಷಿಸಬೇಕು.
ನೀವು ಹಾಗೆ ಮಾಡದಿದ್ದರೆ
    ನನಗೆ ಬಹಳ ಕೋಪ ಬರುತ್ತದೆ.
ನನ್ನ ಕೋಪವು ಯಾರಿಂದಲೂ ನಂದಿಸಲಾಗದ ಬೆಂಕಿಯಂತಿದೆ.
    ನೀವು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಹೀಗಾಗುತ್ತದೆ.’

13 “ಜೆರುಸಲೇಮ್ ನಗರವೇ, ನಾನು ನಿನ್ನ ವಿರುದ್ಧವಾಗಿದ್ದೇನೆ.
    ನೀನು ಬೆಟ್ಟದ ಮೇಲೆ ಕುಳಿತಿರುವೆ,
    ನೀನು ರಾಣಿಯಂತೆ ಈ ಕಣಿವೆಯ ಮೇಲೆ ಕುಳಿತಿರುವೆ.
‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು,
    ನಮ್ಮ ಭದ್ರವಾದ ನಗರವನ್ನು ಯಾರೂ ಪ್ರವೇಶ ಮಾಡಲಾರರು’
    ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ.”
ಆದರೆ ಯೆಹೋವನ ಸಂದೇಶವನ್ನು ಕೇಳಿರಿ.

14 “ನೀವು ತಕ್ಕ ಶಿಕ್ಷೆಯನ್ನು ಅನುಭವಿಸುವಿರಿ.
ನಾನು ನಿಮ್ಮ ಅರಣ್ಯಗಳಲ್ಲಿ ಬೆಂಕಿಯನ್ನು ಹೊತ್ತಿಸುತ್ತೇನೆ.
    ಆ ಬೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಸುಟ್ಟುಹಾಕುತ್ತದೆ.”

ಮಾರ್ಕ 7

ದೇವರ ಧರ್ಮಶಾಸ್ತ್ರ ಮತ್ತು ಜನರ ಸ್ವನಿಯಮ

(ಮತ್ತಾಯ 15:1-20)

ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ[a] ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು.

ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು.

ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ:

‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ,
    ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ.
ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ.
    ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’(A)

ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು.

ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ! 10 ‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’(B) ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’(C) ಎಂತಲೂ ಮೋಶೆಯು ಹೇಳಿದ್ದಾನೆ. 11 ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ, 12 ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ. 13 ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು.

14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 16 [b]

17 ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. 18 ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. 19 ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.)

20 ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ

(ಮತ್ತಾಯ 15:21-28)

24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.

27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.

28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.

29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.

30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.

ಕಿವುಡನಿಗೆ ಸ್ವಸ್ಥತೆ

31 ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ[c] ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. 32 ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು.

33 ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. 34 ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) 35 ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು.

36 ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. 37 ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International