M’Cheyne Bible Reading Plan
ಬೋಕೀಮಿನಲ್ಲಿ ಯೆಹೋವನ ದೂತನು
2 ಯೆಹೋವನ ದೂತನು ಗಿಲ್ಗಾಲ್ ನಗರದಿಂದ ಬೋಕೀಮ್ ನಗರದವರೆಗೆ ಹೋದನು. ಆ ದೂತನು ಇಸ್ರೇಲರಿಗೆ ಯೆಹೋವನ ಒಂದು ಸಂದೇಶವನ್ನು ತಿಳಿಸಿದನು. ಆ ಸಂದೇಶವು ಹೀಗೆದೆ: “ನಾನು ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ಹೊರಗೆತಂದೆ. ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರದೇಶಕ್ಕೆ ನಿಮ್ಮನ್ನು ಕರೆದುಕೊಂಡು ಬಂದೆನು. ‘ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದಿಗೂ ಮುರಿಯುವುದಿಲ್ಲ. 2 ಆದರೆ ಅದಕ್ಕೆ ಪ್ರತಿಯಾಗಿ ನೀವು ಈ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನಗಳೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬಾರದು. ಅವರ ಯಜ್ಞವೇದಿಕೆಗಳನ್ನು ನಾಶಮಾಡಬೇಕು’ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನೀವು ನನಗೆ ವಿಧೇಯರಾಗಲಿಲ್ಲ.
3 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ‘ಈ ಪ್ರದೇಶವನ್ನು ಬಿಟ್ಟುಹೋಗುವಂತೆ ನಾನು ಈ ಜನರನ್ನು ಬಲವಂತ ಮಾಡುವುದಿಲ್ಲ. ಈ ಜನರು ನಿಮಗೊಂದು ಸಮಸ್ಯೆಯಾಗುತ್ತಾರೆ. ಅವರು ನಿಮಗೊಂದು ಉರುಲಾಗುತ್ತಾರೆ. ಅವರ ಸುಳ್ಳುದೇವರುಗಳು ನಿಮಗೆ ಬಲೆಯಂತೆ ಉರುಲಾಗುತ್ತವೆ.’”
4 ದೂತನು ಜನರಿಗೆ ಯೆಹೋವನ ಈ ಸಂದೇಶವನ್ನು ಕೊಟ್ಟ ಮೇಲೆ ಜನರು ಗಟ್ಟಿಯಾಗಿ ಅತ್ತರು. 5 ಆದ್ದರಿಂದ ಇಸ್ರೇಲರು ತಾವು ಗೋಳಾಡಿದ ಸ್ಥಳಕ್ಕೆ ಬೋಕೀಮ್ ಎಂದು ಕರೆದರು. ಬೋಕೀಮಿನಲ್ಲಿ ಇಸ್ರೇಲರು ಯೆಹೋವನಿಗೋಸ್ಕರ ಯಜ್ಞ ಮಾಡಿದರು.
ಅವಿಧೇಯತೆ ಮತ್ತು ಸೋಲು
6 ಯೆಹೋಶುವನು ಜನರನ್ನು ತಮ್ಮ ಮನೆಗಳಿಗೆ ಹೋಗಲು ಹೇಳಿದನು. ಪ್ರತಿಯೊಂದು ಕುಲದವರು ವಾಸಮಾಡಲು ತಮ್ಮತಮ್ಮ ಪ್ರದೇಶಕ್ಕೆ ಹೋದರು. 7 ಯೆಹೋಶುವನು ಜೀವಂತವಿರುವವರೆಗೆ ಇಸ್ರೇಲರು ಯೆಹೋವನನ್ನು ಸೇವಿಸಿದರು. ಯೆಹೋಶುವನ ಮರಣಾನಂತರ ಬದುಕಿದ್ದ ಹಿರಿಯರ ಜೀವಮಾನದಲ್ಲಿಯೂ ಇಸ್ರೇಲರು ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ಈ ಹಿರಿಯರು ಇಸ್ರೇಲರಿಗಾಗಿ ಯೆಹೋವನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನೋಡಿದ್ದರು. 8 ನೂನನ ಮಗನಾದ ಮತ್ತು ಯೆಹೋವನ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಬದುಕಿ ಮರಣ ಹೊಂದಿದನು. 9 ಇಸ್ರೇಲರು ಯೆಹೋಶುವನನ್ನು ಅವನ ಸ್ವಾಸ್ತ್ಯ ಭೂಮಿಯಲ್ಲಿ ಸಮಾಧಿ ಮಾಡಿದರು. ಅದು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿ ತಿಮ್ನತ್ ಹೆರೆಸಿನಲ್ಲಿತ್ತು.
10 ಈ ಪೀಳಿಗೆಯವರೆಲ್ಲರು ಸತ್ತುಹೋದ ಮೇಲೆ ಮುಂದಿನ ಪೀಳಿಗೆಯು ಬೆಳೆಯಿತು. ಈ ಹೊಸ ಪೀಳಿಗೆಗೆ ಯೆಹೋವನ ಬಗ್ಗೆ ಮತ್ತು ಯೆಹೋವನು ಇಸ್ರೇಲಿನ ಜನರಿಗಾಗಿ ಮಾಡಿದ ಮಹತ್ಕಾರ್ಯಗಳ ಬಗ್ಗೆ ಏನೂ ಗೊತ್ತಿರಲಿಲ್ಲ. 11 ಇಸ್ರೇಲಿನ ಜನರು ದುಷ್ಕೃತ್ಯಗಳನ್ನು ಮಾಡಿದರು ಮತ್ತು ಸುಳ್ಳುದೇವರಾದ ಬಾಳನ ಸೇವೆ ಮಾಡಿದರು. ಯೆಹೋವನು ಇಸ್ರೇಲರ ಈ ದುಷ್ಕೃತ್ಯಗಳನ್ನು ನೋಡಿದನು. 12 ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಿದ್ದನು. ಅವರ ಪೂರ್ವಿಕರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಇಸ್ರೇಲರು ಯೆಹೋವನನ್ನು ಅನುಸರಿಸದೆ ತಮ್ಮ ಸುತ್ತಮುತ್ತಲಿನ ಜನರ ಸುಳ್ಳುದೇವರುಗಳನ್ನು ಪೂಜಿಸಲು ಆರಂಭಿಸಿದರು. ಆದ್ದರಿಂದ ಯೆಹೋವನಿಗೆ ಕೋಪ ಬಂತು. 13 ಇಸ್ರೇಲರು ಯೆಹೋವನನ್ನು ಅನುಸರಿಸದೆ ಬಾಳ್ ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ಪೂಜಿಸತೊಡಗಿದರು.
14 ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಶತ್ರುಗಳು ಇಸ್ರೇಲರ ಮೇಲೆ ಧಾಳಿಮಾಡಿ ಅವರ ಸ್ವತ್ತನ್ನು ತೆಗೆದುಕೊಳ್ಳುವಂತೆ ಯೆಹೋವನು ಮಾಡಿದನು. ಸುತ್ತಮುತ್ತಲಿದ್ದ ಅವರ ಶತ್ರುಗಳು ಅವರನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರು ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗಲಿಲ್ಲ. 15 ಇಸ್ರೇಲರು ಯುದ್ಧಕ್ಕೆ ಹೋದಾಗಲೆಲ್ಲಾ ಸೋಲನ್ನನುಭವಿಸಿದರು; ಏಕೆಂದರೆ ಯೆಹೋವನು ಅವರ ಸಂಗಡವಿರಲಿಲ್ಲ. ಸುತ್ತಮುತ್ತಲಿನ ಜನರ ದೇವತೆಗಳನ್ನು ಪೂಜಿಸಿದರೆ ಸೋಲಾಗುವುದೆಂದು ಈಗಾಗಲೇ ಯೆಹೋವನು ಇಸ್ರೇಲರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದನು. ಇಸ್ರೇಲರು ಹೆಚ್ಚಿನ ಕಷ್ಟನಷ್ಟಗಳನ್ನು ಅನುಭವಿಸಿದರು.
16 ಆಗ ಯೆಹೋವನು ನ್ಯಾಯಾಧೀಶರೆಂಬ ಕೆಲವು ನಾಯಕರನ್ನು ಆರಿಸಿದನು. ಈ ನಾಯಕರು ಇಸ್ರೇಲರನ್ನು ಅವರ ವೈರಿಗಳಿಂದ ಕಾಪಾಡಿದರು. 17 ಆದರೆ ಇಸ್ರೇಲರು ನ್ಯಾಯಾಧೀಶರ ಮಾತನ್ನು ಕೇಳಲಿಲ್ಲ. ಅವರು ಯೆಹೋವನಿಗೆ ನಂಬಿಗಸ್ತರಾಗಿರದೆ ಬೇರೆಬೇರೆ ದೇವರುಗಳನ್ನು ಅನುಸರಿಸಿದರು. ಹಿಂದೆ ಇಸ್ರೇಲರ ಪೂರ್ವಿಕರು ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಆದರೆ ಈಗ ಇಸ್ರೇಲರು ಬದಲಾಗಿ ಯೆಹೋವನ ಆಜ್ಞಾಪಾಲನೆಯನ್ನು ನಿಲ್ಲಿಸಿಬಿಟ್ಟರು.
18 ಅನೇಕ ಸಲ ಶತ್ರುಗಳು ಇಸ್ರೇಲರಿಗೆ ತುಂಬ ಕಷ್ಟಗಳನ್ನು ಉಂಟು ಮಾಡುತ್ತಿದ್ದರು. ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಿದ್ದರು; ಪ್ರತಿಸಲವೂ ಯೆಹೋವನು ಅವರ ಗೋಳಾಟವನ್ನು ಕೇಳಿ ಮರುಕಪಡುತ್ತಿದ್ದನು. ಪ್ರತಿಸಲವೂ ಅವರನ್ನು ಶತ್ರುಗಳಿಂದ ರಕ್ಷಿಸಲು ಒಬ್ಬ ನ್ಯಾಯಾಧೀಶನನ್ನು ಕಳುಹಿಸಿ ಕೊಡುತ್ತಿದ್ದನು. ಯೆಹೋವನು ಆ ನ್ಯಾಯಾಧೀಶರ ಜೊತೆಯಲ್ಲಿಯೇ ಇರುತ್ತಿದ್ದನು. ಹೀಗಾಗಿ ಪ್ರತಿಸಲವೂ ಇಸ್ರೇಲರನ್ನು ಅವರ ಶತ್ರುಗಳಿಂದ ರಕ್ಷಿಸಲಾಯಿತು. 19 ಆದರೆ ಪ್ರತಿಯೊಬ್ಬ ನ್ಯಾಯಾಧೀಶನು ಮರಣಹೊಂದಿದಾಗ ಇಸ್ರೇಲರು ಪುನಃ ಪಾಪ ಮಾಡುತ್ತಿದ್ದರು ಮತ್ತು ತಮ್ಮ ಪೂರ್ವಿಕರಿಗಿಂತಲೂ ಭ್ರಷ್ಠರಾಗಿ ಸುಳ್ಳುದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬೀಳಲಾರಂಭಿಸುತ್ತಿದ್ದರು. ಇಸ್ರೇಲರು ತುಂಬ ಮೊಂಡರಾಗಿದ್ದು ತಮ್ಮ ದುರ್ನಡತೆಗಳನ್ನು ಬಿಡಲು ಸಿದ್ಧರಾಗಿರಲಿಲ್ಲ.
20 ಹೀಗಾಗಿ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, “ಈ ಜನಾಂಗದವರು ಅವರ ಪೂರ್ವಿಕರ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದಿದ್ದಾರೆ. ಇವರು ನನ್ನ ಮಾತನ್ನು ಕೇಳಲಿಲ್ಲ. 21 ಆದ್ದರಿಂದ ಇನ್ನುಮುಂದೆ ನಾನು ಬೇರೆ ಜನಾಂಗಗಳನ್ನು ಸೋಲಿಸಿ ಇಸ್ರೇಲರ ಮಾರ್ಗವನ್ನು ಸರಾಗಮಾಡುವುದಿಲ್ಲ. ಯೆಹೋಶುವನು ಮರಣ ಹೊಂದಿದಾಗ ಆ ಜನಾಂಗದವರು ಇನ್ನೂ ಈ ಪ್ರದೇಶದಲ್ಲಿದ್ದರು. ಈ ಪ್ರದೇಶದಲ್ಲಿ ವಾಸಿಸಲು ಆ ಜನಾಂಗಗಳಿಗೆ ಇನ್ನು ಮೇಲೆಯೂ ಆಸ್ಪದಕೊಡುತ್ತೇನೆ. 22 ಇಸ್ರೇಲರು ತಮ್ಮ ಪೂರ್ವಿಕರಂತೆ ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಾರೆಯೇ ಎಂಬುದನ್ನು ನಾನು ಆ ಜನಾಂಗಗಳ ಮೂಲಕ ಪರೀಕ್ಷಿಸಿ ನೋಡುತ್ತೇನೆ” ಎಂದನು. 23 ಯೆಹೋವನು ಆ ಜನಾಂಗಗಳನ್ನು ಆ ಪ್ರದೇಶದಲ್ಲಿ ಇರುವುದಕ್ಕೆ ಬಿಟ್ಟನು. ಆ ಜನಾಂಗಗಳು ಈ ದೇಶವನ್ನು ಬಿಟ್ಟು ಹೋಗುವಂತೆ ಯೆಹೋವನು ಒತ್ತಾಯಪಡಿಸಲಿಲ್ಲ. ಅವರನ್ನು ಸೋಲಿಸಲು ಯೆಹೋಶುವನ ಸೈನ್ಯಕ್ಕೆ ಸಹಾಯ ಮಾಡಲಿಲ್ಲ.
ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ
6 ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.
2 ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. 3 ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. 4 ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
5 ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[a] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) 6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
7 ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8 ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9 ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[b] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
15 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಯೆಹೂದದ ಜನರಿಗಾಗಿ ಪ್ರಾರ್ಥಿಸಿ, ಬೇಡಿಕೊಳ್ಳಲು ಮೋಶೆಯೂ ಸಮುವೇಲನೂ ಇದ್ದಿದ್ದರೂ ನಾನು ಈ ಜನರ ಬಗ್ಗೆ ಮರುಕಪಡುತ್ತಿರಲಿಲ್ಲ. ಯೆಹೂದದ ಜನರನ್ನು ನನ್ನಿಂದ ದೂರ ಕಳುಹಿಸು. ಅವರಿಗೆ ಹೋಗಲು ಹೇಳು. 2 ‘ನಾವು ಎಲ್ಲಿಗೆ ಹೋಗಬೇಕು’ ಎಂದು ಅವರು ಕೇಳಬಹುದು. ಯೆಹೋವನು ಹೀಗೆ ಹೇಳಿದ್ದಾನೆ ಎಂದು ನೀನು ಅವರಿಗೆ ಹೇಳು.
“‘ಕೆಲವು ಜನರು ಮರಣಹೊಂದಬೇಕೆಂದು ನಾನು ಗೊತ್ತುಮಾಡಿದ್ದೇನೆ.
ಅವರು ಮರಣಹೊಂದುತ್ತಾರೆ.
ಕೆಲವು ಜನರು ಖಡ್ಗಗಳಿಂದ ಕೊಲ್ಲಲ್ಪಡಬೇಕೆಂದು ನಾನು ಗೊತ್ತುಮಾಡಿದ್ದೇನೆ.
ಅವರು ಖಡ್ಗಗಳಿಗೆ ಬಲಿಯಾಗುತ್ತಾರೆ.
ಕೆಲವು ಜನರು ಹೊಟ್ಟೆಗೆ ಅನ್ನವಿಲ್ಲದೆ ಸಾಯಬೇಕು ಎಂದು ನಾನು ಗೊತ್ತುಮಾಡಿದ್ದೇನೆ.
ಅವರು ಹಸಿವಿನಿಂದ ಸಾಯುತ್ತಾರೆ.
ಕೆಲವು ಜನರನ್ನು ಶತ್ರುಗಳು ಸೆರೆಹಿಡಿದು ಪರದೇಶಕ್ಕೆ ತೆಗೆದುಕೊಂಡು ಹೋಗಲಿ ಎಂದು ಗೊತ್ತುಮಾಡಿದ್ದೇನೆ.
ಅವರು ಪರದೇಶದಲ್ಲಿ ಸೆರೆಯಾಳುಗಳಾಗಿ ಇರುವರು.
3 ನಾನು ಅವರ ವಿರುದ್ಧ ನಾಲ್ಕು ರೀತಿಯ ವಿನಾಶಕರನ್ನು ಕಳುಹಿಸುತ್ತೇನೆ.’
ಇದು ಯೆಹೋವನ ನುಡಿ.
‘ಅವರನ್ನು ಕೊಲೆಮಾಡಲು ಖಡ್ಗಧಾರಿಗಳಾದ ಶತ್ರುಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ಎಳೆದುಕೊಂಡು ಹೋಗುವುದಕ್ಕಾಗಿ ನಾಯಿಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ತಿನ್ನಲು ಮತ್ತು ನಾಶಮಾಡಲು
ಗಾಳಿಯಲ್ಲಿ ಹಾರಾಡುವ ಪಕ್ಷಿಗಳನ್ನೂ ಕಾಡುಪ್ರಾಣಿಗಳನ್ನೂ ಕಳುಹಿಸುತ್ತೇನೆ.
4 ಯೆಹೂದದ ಜನರನ್ನು ಭೂಲೋಕದ ಎಲ್ಲಾ ಜನರಿಗೆ
ಒಂದು ಭಯಾನಕವಾದ ಉದಾಹರಣೆಯಾಗುವಂತೆ ಮಾಡುತ್ತೇನೆ.
ಮನಸ್ಸೆಯು ಜೆರುಸಲೇಮಿನಲ್ಲಿ ಮಾಡಿದ ಪಾಪಕೃತ್ಯಗಳ ಫಲವಾಗಿ
ನಾನು ಯೆಹೂದದಲ್ಲಿ ಹೀಗೆ ಮಾಡುತ್ತೇನೆ.
ಮನಸ್ಸೆಯು ರಾಜನಾದ ಹಿಜ್ಕೀಯನ ಮಗನಾಗಿದ್ದನು.
ಮನಸ್ಸೆಯು ಯೆಹೂದದ ರಾಜನಾಗಿದ್ದನು.’
5 “ಜೆರುಸಲೇಮ್ ನಗರವೇ, ನಿನಗಾಗಿ ಯಾರೂ ವ್ಯಥೆಪಡುವದಿಲ್ಲ.
ನಿನಗಾಗಿ ದುಃಖಪಡುವುದಿಲ್ಲ ಮತ್ತು ಆಳುವುದಿಲ್ಲ.
ಯಾರೂ ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಬಿಟ್ಟು ನಿನ್ನ ಯೋಗಕ್ಷೇಮವನ್ನು ವಿಚಾರಿಸಲು ಬರುವುದಿಲ್ಲ.
6 ಜೆರುಸಲೇಮೇ, ನೀನು ನನ್ನನ್ನು ತ್ಯಜಿಸಿದೆ”
ಇದು ಯೆಹೋವನ ನುಡಿ.
“ಮತ್ತೆಮತ್ತೆ ನೀನು ನನ್ನನ್ನು ತ್ಯಜಿಸಿದೆ.
ಆದ್ದರಿಂದ ನಾನು ನಿನ್ನನ್ನು ದಂಡಿಸುತ್ತೇನೆ ಮತ್ತು ನಾಶಮಾಡುತ್ತೇನೆ.
ನಿನಗೆ ಸಲ್ಲಬೇಕಾದ ಶಿಕ್ಷೆಯನ್ನು ಪುನಃ ತಡೆಹಿಡಿದು ನಾನು ದಣಿದಿದ್ದೇನೆ.
7 ಯೆಹೂದದ ಜನರನ್ನು ನಾನು ಕವೆಗೋಲಿನಿಂದ ವಿಂಗಡಿಸಿದ
ದೇಶದ ಎಲ್ಲಾ ನಗರಗಳ ದ್ವಾರದಲ್ಲಿ ಚದರಿಸುತ್ತೇನೆ.
ನನ್ನ ಜನರು ಬದಲಾಗಲಿಲ್ಲ.
ನಾನು ಅವರನ್ನು ನಾಶಮಾಡುತ್ತೇನೆ.
ನಾನು ಅವರ ಮಕ್ಕಳನ್ನು ಕಸಿದುಕೊಳ್ಳುತ್ತೇನೆ.
8 ಅನೇಕ ಹೆಂಗಸರು ತಮ್ಮ ಗಂಡಂದಿರನ್ನು ಕಳೆದುಕೊಳ್ಳುವರು.
ಸಮುದ್ರದಡದಲ್ಲಿದ್ದ ಮರಳು ಕಣಗಳಿಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗುವುದು.
ಮಧ್ಯಾಹ್ನದಲ್ಲಿಯೇ ನಾನು ಬಾತುಕನನ್ನು ತರುವೆನು.
ಆ ಘಾತುಕನು ಯೆಹೂದದ ತಾಯಂದಿರ ಮೇಲೆರಗುವನು.
ನಾನು ಯೆಹೂದದ ಜನರಿಗೆ ನೋವನ್ನು ಮತ್ತು ಭಯವನ್ನು ತರುವೆನು;
ಅತೀ ಶೀಘ್ರದಲ್ಲಿಯೇ ಹೀಗಾಗುವಂತೆ ಮಾಡುವೆನು.
9 ಶತ್ರುಗಳು ಖಡ್ಗಧಾರಿಗಳಾಗಿ ಬಂದು ಜನರ ಮೇಲೆರಗಿ ಕೊಲೆಮಾಡುವರು.
ಯೆಹೂದದಲ್ಲಿ ಜೀವಂತ ಉಳಿದವರನ್ನು ಅವರು ವಧಿಸುವರು.
ಒಬ್ಬ ಸ್ತ್ರೀಗೆ ಏಳು ಜನ ಮಕ್ಕಳಿದ್ದರೂ ಅವರೆಲ್ಲ ಸತ್ತುಹೋಗುವರು.
ಅವಳು ಅತ್ತೂಅತ್ತೂ ಬಳಲಿ ಉಸಿರಾಡದಂತಾಗುವಳು.
ಅವಳು ಕಳವಳಪಡುವಳು ಮತ್ತು ಗಾಬರಿಗೊಳ್ಳುವಳು.
ಪ್ರಕಾಶಮಯವಾದ ದಿನವು ದುಃಖದ ನಿಮಿತ್ತ ಅವಳಿಗೆ ಕತ್ತಲಾಗುವುದು.”
ಯೆರೆಮೀಯನು ಪುನಃ ದೇವರಲ್ಲಿ ದೂರುತ್ತಾನೆ
10 ನನ್ನ ತಾಯೀ, ನೀನು ಜನ್ಮಕೊಟ್ಟಿದ್ದಕ್ಕಾಗಿ
ನನಗೆ ದುಃಖವಾಗುತ್ತದೆ.
ಯೆರೆಮೀಯನಾದ ನಾನು ಇಡೀ ದೇಶದ ಜನರ ವಿರುದ್ಧವಾಗಿ
ವಾದಿಸುತ್ತಾ ನಿಂದಿಸುತ್ತಾ ಇರುವೆ.
ನಾನು ಯಾರಿಗೂ ಸಾಲವನ್ನು ಕೊಟ್ಟಿಲ್ಲ; ಸಾಲವನ್ನು ತೆಗೆದುಕೊಂಡಿಲ್ಲ.
ಆದರೆ ಪ್ರತಿಯೊಬ್ಬರು ನನ್ನನ್ನು ಶಪಿಸುತ್ತಾರೆ.
11 ದೇವರೇ, ನಿಜವಾಗಿಯೂ ನಾನು ನಿನ್ನ ಸೇವೆಯನ್ನು ಚೆನ್ನಾಗಿ ಮಾಡಿದ್ದೇನೆ.
ಕಷ್ಟದ ಕಾಲದಲ್ಲಿ ನನ್ನ ವೈರಿಗಳ ಬಗ್ಗೆ ನಾನು ನಿನ್ನಲ್ಲಿ ಪ್ರಾರ್ಥಿಸಿದ್ದೇನೆ.[a]
ಯೆರೆಮೀಯನಿಗೆ ದೇವರ ಉತ್ತರ
12 “ಯೆರೆಮೀಯನೇ, ಕಬ್ಬಿಣದ ತುಂಡನ್ನು ಪುಡಿ ಮಾಡಲು
ಯಾರಿಗೂ ಸಾಧ್ಯವಿಲ್ಲವೆಂಬುದು ನಿನಗೆ ಗೊತ್ತು.
ಉತ್ತರದಿಂದ[b] ಬರುವವನು ಕಬ್ಬಿಣದಂತಿದ್ದಾನೆ.
13 ಯೆಹೂದದ ಜನರಲ್ಲಿ ಅನೇಕ ಭಂಡಾರಗಳಿವೆ.
ಆ ಭಂಡಾರಗಳನ್ನು ನಾನು ಬೇರೆಯವರಿಗೆ ಒಪ್ಪಿಸುತ್ತೇನೆ.
ಬೇರೆಯವರು ಆ ಭಂಡಾರಗಳನ್ನು ಹಣ ಕೊಟ್ಟು ತೆಗೆದುಕೊಳ್ಳಬೇಕಾಗಿಲ್ಲ.
ನಾನು ಅವರಿಗೆ ಅವುಗಳನ್ನು ಉಚಿತವಾಗಿ ಕೊಟ್ಟುಬಿಡುತ್ತೇನೆ.
ಏಕೆಂದರೆ ಯೆಹೂದವು ಅನೇಕ ಪಾಪಗಳನ್ನು ಮಾಡಿದೆ.
ದೇಶದ ಪ್ರತಿಯೊಂದು ಭಾಗದಲ್ಲಿಯೂ ಯೆಹೂದ ಪಾಪಮಾಡಿದೆ.
14 ಯೆಹೂದದ ಜನರೇ, ನಾನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವೆನು.
ಅವರು ನೀವೆಂದೂ ತಿಳಿಯದ ಪ್ರದೇಶದಿಂದ ಬಂದು ನಿಮ್ಮನ್ನು ಅಲ್ಲಿಗೆ ಸಾಗಿಸುವರು.
ನನಗೆ ಅತಿಕೋಪ ಬಂದಿದೆ.
ನನ್ನ ಕೋಪವು ಜ್ವಾಲೆಯಂತಿದೆ.
ಆ ಜ್ವಾಲೆಯಿಂದ ನೀವು ಸುಟ್ಟುಹೋಗುವಿರಿ.”
15 ಯೆಹೋವನೇ, ನನ್ನ ವಿಷಯ ನಿನಗೆ ಗೊತ್ತು.
ನನ್ನನ್ನು ಜ್ಞಾಪಕದಲ್ಲಿಟ್ಟುಕೊಂಡು ರಕ್ಷಿಸು.
ಜನರು ನನ್ನನ್ನು ತೊಂದರೆಗೀಡು ಮಾಡುತ್ತಿದ್ದಾರೆ.
ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು.
ನೀನು ಅವರೊಂದಿಗೆ ಬಹಳ ತಾಳ್ಮೆಯಿಂದ ವರ್ತಿಸುತ್ತಿರುವೆ.
ಅವರೊಂದಿಗೆ ತಾಳ್ಮೆಯಿಂದ ಇದ್ದು ನನ್ನನ್ನು ಹಾಳುಮಾಡಬೇಡ.
ನನ್ನ ಬಗ್ಗೆ ವಿಚಾರ ಮಾಡು.
ಯೆಹೋವನೇ, ನಿನಗಾಗಿ ನಾನು ಎಷ್ಟು ಕಷ್ಟಪಡುತ್ತಿದ್ದೇನೆ ಎಂಬುದನ್ನು ಯೋಚಿಸು.
16 ನಿನ್ನ ಸಂದೇಶ ನನಗೆ ಬಂದಿತು.
ನಾನು ನಿನ್ನ ಮಾತುಗಳನ್ನು ಆಹಾರವನ್ನಾಗಿ ಮಾಡಿಕೊಂಡೆ.
ನಿನ್ನ ಸಂದೇಶದಿಂದ ನನಗೆ ತುಂಬಾ ಸಂತೋಷವಾಯಿತು.
ನಿನ್ನನ್ನು ಹೆಸರಿಡಿದು ಕರೆಯುವುದರಿಂದ ನನಗೆ ಹೆಚ್ಚಿನ ಸಂತೋಷವಾಗಿತ್ತು.
ನಿನ್ನ ಹೆಸರು ಸರ್ವಶಕ್ತನಾದ ಯೆಹೋವನು.
17 ತಮಾಷೆ ಮಾಡಿಕೊಂಡು ನಗುತ್ತಲಿದ್ದ
ಗುಂಪಿನಲ್ಲಿ ನಾನೆಂದೂ ಸೇರಲಿಲ್ಲ.
ನನ್ನ ಮೇಲೆ ಆದ ನಿನ್ನ ಪ್ರಭಾವದಿಂದ ನಾನೊಬ್ಬನೇ ಕುಳಿತುಕೊಂಡಿರುತ್ತಿದ್ದೆ.
ನನ್ನ ಸುತ್ತಮುತ್ತಲಿನ ದುಷ್ಟತನದ ಮೇಲೆ ನನ್ನಲ್ಲಿ ರೋಷವನ್ನು ತುಂಬಿದೆ.
18 ಹೀಗಿದ್ದರೂ ನನಗೇಕೆ ವ್ಯಥೆ ಉಂಟಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ನನ್ನ ಗಾಯ ಏಕೆ ಗುಣವಾಗುತ್ತಿಲ್ಲ? ಏಕೆ ವಾಸಿಯಾಗುತ್ತಿಲ್ಲ ಎಂಬುದು ನನಗೆ ತಿಳಿಯದು.
ಯೆಹೋವನೇ, ನಿನ್ನಲ್ಲಿ ಬದಲಾವಣೆಯಾಗಿದೆ ಎಂದು ನನಗೆ ಅನಿಸುತ್ತಿದೆ.
ನೀನು ಪ್ರವಾಹ ನಿಂತುಹೋದ ನೀರಿನ ಬುಗ್ಗೆಯಂತಿರುವೆ.
19 ಆಗ ಯೆಹೋವನು ಹೇಳಿದನು: “ಯೆರೆಮೀಯನೇ, ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನಾನು ನಿನ್ನನ್ನು ದಂಡಿಸುವುದಿಲ್ಲ.
ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನೀನು ನನ್ನ ಸೇವೆ ಮಾಡಬಹುದು.
ಹುರುಳಿಲ್ಲದ ಮಾತುಗಳನ್ನು ಬಿಟ್ಟು ಮುಖ್ಯವಾದ ವಿಷಯಗಳನ್ನು ಕುರಿತು ಮಾತನಾಡುವದಾದರೆ
ನೀನು ನನ್ನ ಪರವಾಗಿ ಮಾತನಾಡಬಹುದು.
ಯೆರೆಮೀಯನೇ, ಯೆಹೂದದ ಜನರು
ಬದಲಾವಣೆ ಹೊಂದಿ ನಿನ್ನಲ್ಲಿಗೆ ಬರಬೇಕು.
ಆದರೆ ನೀನು ಬದಲಾವಣೆ ಹೊಂದಿ ಅವರಂತೆ ಆಗಬಾರದು.
20 ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುತ್ತೇನೆ.
ನೀನು ತಾಮ್ರದ ಗೋಡೆಯಂತೆ ಗಟ್ಟಿಯಾಗಿರುವೆ
ಎಂದು ಆ ಜನರು ತಿಳಿದುಕೊಳ್ಳುವರು.
ಯೆಹೂದದ ಜನರು ನಿನ್ನ ವಿರುದ್ಧ ಹೋರಾಡುವರು.
ಆದರೆ ಅವರು ನಿನ್ನನ್ನು ಸೋಲಿಸಲಾರರು.
ಏಕೆಂದರೆ ನಾನೇ ನಿನ್ನ ಜೊತೆಯಲ್ಲಿ ಇದ್ದೇನೆ.
ನಾನು ನಿನಗೆ ಸಹಾಯಮಾಡುತ್ತೇನೆ ಮತ್ತು ನಾನು ನಿನ್ನನ್ನು ರಕ್ಷಿಸುತ್ತೇನೆ.”
ಇದು ಯೆಹೋವನಿಂದ ಬಂದ ನುಡಿ.
21 “ನಾನು ನಿನ್ನನ್ನು ಆ ದುಷ್ಟ ಜನರಿಂದ ರಕ್ಷಿಸುತ್ತೇನೆ.
ಆ ಜನರು ನಿನ್ನನ್ನು ಬೆದರಿಸುತ್ತಾರೆ.
ಆದರೆ ನಾನು ನಿನ್ನನ್ನು ಆ ಜನರಿಂದ ರಕ್ಷಿಸುತ್ತೇನೆ.”
ಯೇಸುವಿನ ಆಗಮನ
(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)
1 ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. 2 ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.
“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)
3 “‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)
4 ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. 5 ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.
6 ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.
7 ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. 8 ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.
ಯೇಸುವಿಗೆ ದೀಕ್ಷಾಸ್ನಾನ
(ಮತ್ತಾಯ 3:13-17; ಲೂಕ 3:21-22)
9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.
ಯೇಸುವಿಗಾದ ಪರಿಶೋಧನೆ
(ಮತ್ತಾಯ 4:1-11; ಲೂಕ 4:1-13)
12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.
ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ
(ಮತ್ತಾಯ 4:12-17; ಲೂಕ 4:14-15)
14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.
ಯೇಸುವಿನ ಪ್ರಥಮ ಶಿಷ್ಯರು
(ಮತ್ತಾಯ 4:18-22; ಲೂಕ 5:1-11)
16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.
19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ
(ಲೂಕ 4:31-37)
21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು. 23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು, 24 “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.
25 ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು. 26 ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.
27 ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 28 ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.
ಅನೇಕರಿಗೆ ಸ್ವಸ್ಥತೆ
(ಮತ್ತಾಯ 8:14-17; ಲೂಕ 4:38-41)
29 ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು. 30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು. 31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.
32 ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು. 33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು. 34 ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.
ಸುವಾರ್ತೆ ಸಾರಲು ಯೇಸುವಿನ ಸಿದ್ಧತೆ
(ಲೂಕ 4:42-44)
35 ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು. 36 ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು. 37 ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.
38 ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು. 39 ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.
ಕುಷ್ಠರೋಗಿಗೆ ಸ್ವಸ್ಥತೆ
(ಮತ್ತಾಯ 8:1-4; ಲೂಕ 5:12-16)
40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.
41 ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು. 42 ಆ ಕೂಡಲೇ ಅವನಿಗೆ ಗುಣವಾಯಿತು.
43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.[a] 45 ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International