M’Cheyne Bible Reading Plan
ಕಾನಾನ್ಯರೊಂದಿಗೆ ಯೆಹೂದ್ಯರ ಯುದ್ಧ
1 ಯೆಹೋಶುವನು ಮರಣಹೊಂದಿದ ನಂತರ ಇಸ್ರೇಲರು ಯೆಹೋವನಿಗೆ, “ನಮ್ಮಲ್ಲಿ ಯಾವ ಕುಲದವರು ಮೊದಲು ಹೋಗಿ ಕಾನಾನ್ಯರ ವಿರುದ್ಧ ಯುದ್ಧಮಾಡಬೇಕು?” ಎಂದು ಕೇಳಿದರು.
2 ಯೆಹೋವನು ಇಸ್ರೇಲರಿಗೆ, “ಯೆಹೂದ ಕುಲದವರು ಹೋಗಲಿ. ಅವರು ಈ ದೇಶವನ್ನು ವಶಪಡಿಸಿಕೊಳ್ಳುವಂತೆ ನಾನು ಮಾಡುತ್ತೇನೆ” ಎಂದು ಹೇಳಿದನು.
3 ಯೆಹೂದ್ಯರು ತಮ್ಮ ಸಹೋದರರಾದ ಸಿಮೆಯೋನ್ಯರಿಂದ ಸಹಾಯವನ್ನು ಕೇಳಿದರು; ಯೆಹೂದ್ಯರು, “ಸಹೋದರರೇ, ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಲ್ಪಸ್ವಲ್ಪ ಭೂಮಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ. ನೀವು ಬಂದು ನಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ಸಹಾಯ ಮಾಡಿದರೆ, ನಿಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ” ಎಂದು ಹೇಳಿದರು. ಸಿಮೆಯೋನ್ಯರು ತಮ್ಮ ಸಹೋದರರಾದ ಯೆಹೂದ್ಯರಿಗೆ ಯುದ್ಧದಲ್ಲಿ ಸಹಾಯ ಮಾಡಲು ಒಪ್ಪಿಕೊಂಡರು.
4 ಯೆಹೋವನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಸೋಲಿಸುವುದರಲ್ಲಿ ಯೆಹೂದ್ಯರಿಗೆ ಸಹಾಯ ಮಾಡಿದನು. ಯೆಹೂದ್ಯರು ಬೆಜೆಕ್ ನಗರದಲ್ಲಿ ಹತ್ತು ಸಾವಿರ ಜನರನ್ನು ಕೊಂದುಹಾಕಿದರು. 5 ಯೆಹೂದ್ಯರು ಬೆಜೆಕ್ ನಗರದ ಅರಸನನ್ನು ಕಂಡುಹಿಡಿದು ಅವನೊಂದಿಗೆ ಯುದ್ಧಮಾಡಿ ಸೋಲಿಸಿದರು. ಯೆಹೂದ್ಯರು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಸೋಲಿಸಿದರು.
6 ಬೆಜೆಕ್‌ನ ಅರಸನು[a] ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದನು. ಆದರೆ ಯೆಹೂದ್ಯರು ಅವನನ್ನು ಬೆನ್ನಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು. 7 ಆಗ ಬೆಜೆಕ್‌ನ ಅರಸನು, “ನಾನು ಎಪ್ಪತ್ತು ಮಂದಿ ಅರಸರ ಕೈಕಾಲಿನ ಹೆಬ್ಬೆರಳುಗಳನ್ನು ಕತ್ತರಿಸಿ ಬಿಟ್ಟಿದ್ದೆ. ಆ ಅರಸರು ನನ್ನ ಮೇಜಿನ ಕೆಳಗೆ ಬೀಳುವ ಆಹಾರದ ಚೂರುಗಳನ್ನು ತಿನ್ನುವಂತೆ ಮಾಡಿದ್ದೆ. ನಾನು ಅವರಿಗೆ ಮಾಡಿದಂತೆಯೇ ದೇವರು ಈಗ ನನಗೆ ಮಾಡುತ್ತಿದ್ದಾನೆ” ಎಂದು ಹೇಳಿದನು. ಯೆಹೂದ್ಯರು ಬೆಜೆಕ್‌ನ ಅರಸನನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದರು; ಅವನು ಅಲ್ಲಿ ಸತ್ತುಹೋದನು.
8 ಯೆಹೂದ್ಯರು ಜೆರುಸಲೇಮಿನ ವಿರುದ್ಧ ಯುದ್ಧಮಾಡಿ ಅದನ್ನು ಗೆದ್ದುಕೊಂಡರು. ಯೆಹೂದ್ಯರು ಜೆರುಸಲೇಮಿನ ಜನರನ್ನು ಖಡ್ಗಗಳಿಂದ ಕೊಂದು ನಗರವನ್ನು ಸುಟ್ಟುಹಾಕಿದರು. 9 ತರುವಾಯ ಯೆಹೂದ್ಯರು ಉಳಿದಿರುವ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಆ ಕಾನಾನ್ಯರು ಬೆಟ್ಟಪ್ರದೇಶ, ನೆಗೆವ್ ಮತ್ತು ಪಶ್ಚಿಮದ ಇಳಕಲಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿದ್ದರು.
10 ತರುವಾಯ ಯೆಹೂದ್ಯರು ಕಿರ್ಯತರ್ಬವೆಂಬ ಹೆಬ್ರೋನ್ ನಗರದಲ್ಲಿದ್ದ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಯೆಹೂದ್ಯರು ಶೇಷೈ, ಅಹೀಮನ್ ಮತ್ತು ತಲ್ಮೈ ಎಂಬವರನ್ನು ಸೋಲಿಸಿಬಿಟ್ಟರು.
ಕಾಲೇಬ್ ಮತ್ತು ಅವನ ಮಗಳು
11 ಯೆಹೂದ್ಯರು ಆ ಸ್ಥಳವನ್ನು ಬಿಟ್ಟು ದೆಬೀರ ನಗರಕ್ಕೆ ವಿರುದ್ಧವಾಗಿ ಯುದ್ಧಮಾಡಲು ಹೋದರು. (ದೆಬೀರಕ್ಕೆ ಮುಂಚೆ ಕಿರ್ಯತ್‌ಸೇಫೆರ್ ಎಂಬ ಹೆಸರಿತ್ತು.) 12 ಯೆಹೂದ್ಯರು ಯುದ್ಧ ಆರಂಭಿಸುವ ಮುನ್ನ ಕಾಲೇಬನು ಜನರಿಗೆ, “ಕಿರ್ಯತ್‌ಸೇಫೆರನ್ನು ಗೆದ್ದುಕೊಳ್ಳಬೇಕೆಂದು ನನ್ನ ಇಚ್ಛೆ. ಆ ನಗರದ ಮೇಲೆ ಧಾಳಿಮಾಡಿ ಅದನ್ನು ಗೆದ್ದುಕೊಟ್ಟವನಿಗೆ ನಾನು ನನ್ನ ಮಗಳಾದ ಅಕ್ಷಾಳನ್ನು ಮದುವೆ ಮಾಡಿಕೊಡುತ್ತೇನೆ” ಎಂದು ಹೇಳಿದನು.
13 ಕಾಲೇಬನಿಗೆ ಕೆನಜನೆಂಬ ತಮ್ಮನಿದ್ದನು. ಕೆನಜನಿಗೆ ಒತ್ನೀಯೇಲನೆಂಬ ಮಗನಿದ್ದನು. ಒತ್ನೀಯೇಲನು ಕಿರ್ಯತ್‌ಸೇಫೆರನ್ನು ಗೆದ್ದುಕೊಂಡನು. ಅದಕ್ಕಾಗಿ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನ ಜೊತೆ ಮದುವೆ ಮಾಡಿಕೊಟ್ಟನು.
14 ಅಕ್ಷಾಳು ಒತ್ನೀಯೇಲನ ಜೊತೆ ವಾಸಿಸಲು ಹೋದಳು. ಒತ್ನೀಯೇಲನು ಅಕ್ಷಾಳಿಗೆ,[b] “ನಿನ್ನ ತಂದೆಯಿಂದ ಸ್ವಲ್ಪ ಭೂಮಿಯನ್ನು ಕೇಳು” ಎಂದು ಹೇಳಿದನು. ಅಕ್ಷಾಳು ತನ್ನ ತಂದೆಯ ಹತ್ತಿರ ಹೋದಳು. ಅವಳು ತನ್ನ ಕತ್ತೆಯ ಮೇಲಿಂದ ಇಳಿದಾಗ, “ನಿನಗೇನು ಬೇಕು?” ಎಂದು ಕಾಲೇಬನು ಕೇಳಿದನು.
15 ಅದಕ್ಕೆ ಅವಳು, “ನನಗೊಂದು ದಾನ ಕೊಡಬೇಕು.[c] ನೀನು ನನಗೆ ನೆಗೆವಿನಲ್ಲಿ ನೀರಿಲ್ಲದ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನನಗೆ ಸ್ವಲ್ಪ ನೀರಿನ ಬುಗ್ಗೆಗಳಿರುವ ಭೂಮಿಯನ್ನು ಕೊಡು” ಎಂದಳು. ಅವಳು ಕೇಳಿಕೊಂಡಂತೆಯೇ ಕಾಲೇಬನು ಅವಳಿಗೆ ಮೇಲಿನ ಮತ್ತು ಕೆಳಗಿನ ಬುಗ್ಗೆಗಳನ್ನು ಕೊಟ್ಟನು.
16 ಕೇನ್ಯರು (ಕೇನ್ಯರು ಮೋಶೆಯ ಮಾವನ ಗೋತ್ರದವರಾಗಿದ್ದರು.) ಖರ್ಜೂರ ನಗರವನ್ನು (ಜೆರಿಕೊವನ್ನು) ಬಿಟ್ಟು ಯೆಹೂದ್ಯರ ಸಂಗಡ ಹೋದರು. ಅವರು ನೆಗೆವಿನಲ್ಲಿ ಅರಾದ್ ನಗರದ ಹತ್ತಿರವಿದ್ದ ಯೆಹೂದ ಅರಣ್ಯಕ್ಕೆ ಬಂದು ಅಲ್ಲಿನ ಜನರ ಸಂಗಡ ವಾಸ ಮಾಡಿದರು.
17 ಕಾನಾನ್ಯರಾಗಿದ್ದ ಕೆಲವರು ಚೆಫತ್ ಎಂಬ ನಗರದಲ್ಲಿ ವಾಸ ಮಾಡಿಕೊಂಡಿದ್ದರು. ಯೆಹೂದ್ಯರು ಮತ್ತು ಸಿಮೆಯೋನ್ಯರು ಆ ಕಾನಾನ್ಯರ ಮೇಲೆ ಧಾಳಿಮಾಡಿ ಆ ನಗರವನ್ನು ಸಂಪೂರ್ಣವಾಗಿ ನಾಶಮಾಡಿದರು; ಅಲ್ಲದೆ ಆ ನಗರಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
18 ಯೆಹೂದ್ಯರು ಗಾಜಾ ನಗರವನ್ನೂ ಅದರ ಸುತ್ತಮುತ್ತಲಿನ ಎಲ್ಲಾ ಸಣ್ಣ ಪಟ್ಟಣಗಳನ್ನೂ ಸ್ವಾಧೀನಪಡಿಸಿಕೊಂಡರು. ಯೆಹೂದ್ಯರು ಅಷ್ಕೆಲೋನ್ ಮತ್ತು ಎಕ್ರೋನ್ ನಗರಗಳನ್ನೂ ಅವುಗಳ ಸುತ್ತಮುತ್ತಲಿನ ಎಲ್ಲಾ ಸಣ್ಣಪುಟ್ಟ ಪಟ್ಟಣಗಳನ್ನೂ ಸಹ ಸ್ವಾಧೀನಪಡಿಸಿಕೊಂಡರು.
19 ಯೆಹೂದ್ಯರು ಯುದ್ಧಮಾಡುವಾಗ ಯೆಹೋವನು ಅವರ ಸಂಗಡ ಇದ್ದುದರಿಂದ ಅವರು ಬೆಟ್ಟಪ್ರದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ಕಣಿವೆಯಲ್ಲಿ ವಾಸ ಮಾಡುತ್ತಿದ್ದ ಜನರಲ್ಲಿ ಕಬ್ಬಿಣದ ರಥಗಳಿದ್ದದರಿಂದ ಯೆಹೂದ್ಯರು ಅವರನ್ನು ಸೋಲಿಸಲಾಗಲಿಲ್ಲ.
20 ಹೆಬ್ರೋನಿಗೆ ಸಮೀಪದಲ್ಲಿರುವ ಭೂಮಿಯನ್ನು ಕಾಲೇಬನಿಗೆ ಕೊಡುವುದಾಗಿ ಮೋಶೆಯು ವಾಗ್ದಾನ ಮಾಡಿದ್ದನು. ಆದ್ದರಿಂದ ಆ ಭೂಮಿಯನ್ನು ಕಾಲೇಬನ ಕುಟುಂಬದವರಿಗೆ ಕೊಡಲಾಯಿತು. ಕಾಲೇಬನ ಜನರು ಅನಾಕನ ಮೂರು ಜನ ಮಕ್ಕಳನ್ನು[d] ಆ ಪ್ರದೇಶದಿಂದ ಬಲವಂತವಾಗಿ ಹೊರಗಟ್ಟಿದರು.
21 ಬೆನ್ಯಾಮೀನನ ಕುಲದವರಿಗೆ ಯೆಬೂಸಿಯರನ್ನು ಜೆರುಸಲೇಮಿನಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿನವರೆಗೂ ಅವರು ಬೆನ್ಯಾಮೀನರೊಡನೆ ಜೆರುಸಲೇಮಿನಲ್ಲಿಯೇ ವಾಸವಾಗಿದ್ದಾರೆ.
ಯೋಸೇಫನ ವಂಶದವರು ಬೇತೇಲನ್ನು ವಶಪಡಿಸಿಕೊಂಡರು
22-23 ಯೋಸೇಫನ ಕುಲದವರು ಲೂಜ್ ಎಂಬ ಬೇತೇಲ್ ನಗರದ ಮೇಲೆ ಧಾಳಿಮಾಡಲು ಹೋದರು. ಯೆಹೋವನು ಯೋಸೇಫನ ಕುಲದವರ ಸಂಗಡ ಇದ್ದನು. ಯೋಸೇಫನ ಕುಲದವರು ಬೇತೇಲ್ ನಗರಕ್ಕೆ ಕೆಲವು ಜನ ಗೂಢಚಾರರನ್ನು ಕಳುಹಿಸಿದರು. ಇವರು ಬೇತೇಲ್ ನಗರವನ್ನು ವಶಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದರು. 24 ಆ ಗೂಢಚಾರರು ಬೇತೇಲ್ ನಗರದಲ್ಲಿ ಸಂಚರಿಸುತ್ತಿದ್ದಾಗ ಒಬ್ಬನು ನಗರದಿಂದ ಹೊರಬರುವುದನ್ನು ನೋಡಿದರು. ಗೂಢಚಾರರು ಅವನಿಗೆ, “ನಮಗೆ ಈ ನಗರದೊಳಗೆ ಹೋಗಲು ಮಾಡಿರುವ ಗುಪ್ತಮಾರ್ಗವನ್ನು ತೋರಿಸು. ನಾವು ಈ ಪಟ್ಟಣದ ಮೇಲೆ ಧಾಳಿ ಮಾಡಬೇಕೆಂದಿದ್ದೇವೆ. ನೀನು ನಮಗೆ ಸಹಾಯ ಮಾಡಿದರೆ ನಿನಗೆ ದಯೆತೋರುವೆವು” ಎಂದರು.
25 ಅವನು ಗೂಢಚಾರರಿಗೆ ಗುಪ್ತಮಾರ್ಗವನ್ನು ತೋರಿಸಿದನು. ಯೋಸೇಫನ ಕುಲದವರು ಬೇತೇಲ್ ನಿವಾಸಿಗಳನ್ನು ತಮ್ಮ ಖಡ್ಗಗಳಿಂದ ಸಂಹರಿಸಿದರು. ಆದರೆ ಅವರು ತಮಗೆ ಸಹಾಯ ಮಾಡಿದ ಆ ಮನುಷ್ಯನನ್ನೂ ಅವನ ಕುಟುಂಬದವರನ್ನೂ ಕೊಲ್ಲದೆ ಕಳುಹಿಸಿಬಿಟ್ಟರು. 26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲೊಂದು ನಗರವನ್ನು ಕಟ್ಟಿದನು. ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಇಂದಿಗೂ ಆ ಪಟ್ಟಣದ ಹೆಸರು ಲೂಜ್ ಎಂದೇ ಇದೆ.
ಕಾನಾನ್ಯರ ವಿರುದ್ಧ ಯುದ್ಧ
27 ಬೇತ್‌ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ನಗರಗಳಲ್ಲಿ ಮತ್ತು ಅವುಗಳ ಸುತ್ತಮುತ್ತಲಿನ ಸಣ್ಣ ಪಟ್ಟಣಗಳಲ್ಲಿ ಕಾನಾನ್ಯರು ವಾಸವಾಗಿದ್ದರು. ಕಾನಾನ್ಯರನ್ನು ಈ ನಗರಗಳಿಂದ ಹೊರದೂಡುವುದು ಮನಸ್ಸೆ ಕುಲದವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ನೆಲೆನಿಂತರು. ಅವರು ತಮ್ಮ ಮನೆಗಳನ್ನು ಬಿಡಲು ಸಮ್ಮತಿಸಲಿಲ್ಲ. 28 ಅನಂತರ ಇಸ್ರೇಲರು ಪ್ರಬಲರಾಗಿ ಬಲವಂತದಿಂದ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಎಲ್ಲಾ ಕಾನಾನ್ಯರನ್ನೂ ಅವರ ಮನೆಗಳಿಂದ ಹೊರಗಟ್ಟಲು ಇಸ್ರೇಲರಿಗೆ ಸಾಧ್ಯವಾಗಲಿಲ್ಲ.
29 ಎಫ್ರಾಯೀಮ್ ಕುಲದವರಿಗೂ ಹೀಗೆಯೇ ಆಯಿತು. ಕಾನಾನ್ಯರು ಗೆಜೆರಿನಲ್ಲಿ ವಾಸಮಾಡಿಕೊಂಡಿದ್ದರು. ಎಫ್ರಾಯೀಮ್ ಜನರಿಂದ ಕಾನಾನ್ಯರೆಲ್ಲರೂ ತಮ್ಮ ಪ್ರದೇಶವನ್ನು ಬಿಟ್ಟುಹೋಗುವಂತೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ಗೆಜೆರಿನಲ್ಲಿ ಎಫ್ರಾಯೀಮ್ಯರೊಂದಿಗೆ ನೆಲೆಸಿದರು.
30 ಜೆಬುಲೂನ್ಯರ ಸಂಗಡವೂ ಹೀಗೆಯೇ ಆಯಿತು. ಕಿಟ್ರೋನ್ ಮತ್ತು ನಹಲೋಲ್ ನಗರಗಳಲ್ಲಿ ಕೆಲವು ಕಾನಾನ್ಯರು ವಾಸಮಾಡಿಕೊಂಡಿದ್ದರು. ಜೆಬುಲೂನ್ಯರು ಅವರನ್ನು ಆ ಪ್ರದೇಶದಿಂದ ಹೊರದೂಡಲಿಲ್ಲ. ಆ ಕಾನಾನ್ಯರು ಅಲ್ಲಿಯೇ ಉಳಿದುಕೊಂಡು ಜೆಬುಲೂನ್ಯರೊಂದಿಗೆ ವಾಸಮಾಡಿದರು. ಆದರೆ ಜೆಬುಲೂನ್ಯರು ಅವರನ್ನು ತಮ್ಮ ಗುಲಾಮರಂತೆ ಕೆಲಸಮಾಡಲು ಹಚ್ಚಿದರು.
31 ಆಶೇರ್ಯರು ಅಕ್ಕೋ, ಚೀದೋನ್, ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಎಂಬ ನಗರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಲಿಲ್ಲ. 32 ಆಶೇರ್ಯರು ತಮ್ಮ ಪ್ರದೇಶವನ್ನು ಬಿಡುವಂತೆ ಕಾನಾನ್ಯರನ್ನು ಒತ್ತಾಯಿಸಲಿಲ್ಲ. ಹೀಗಾಗಿ ಕಾನಾನ್ಯರು ಆಶೇರ್ಯರೊಡನೆ ಇರತೊಡಗಿದರು.
33 ನಫ್ತಾಲ್ಯರಿಗೂ ಹೀಗೆಯೇ ಆಯಿತು. ನಫ್ತಾಲ್ಯರು ಅಲ್ಲಿಯ ಜನರನ್ನು ಬೇತ್‌ಷೆಮೆಷ್, ಬೇತನಾತ್ ನಗರಗಳಿಂದ ಹೊರದೂಡಲಿಲ್ಲ. ಹೀಗಾಗಿ ನಫ್ತಾಲ್ಯರು ಆ ನಗರಗಳ ಜನರೊಡನೆ ವಾಸಮಾಡ ತೊಡಗಿದರು. ಆ ಕಾನಾನ್ಯರು ನಫ್ತಾಲ್ಯರ ಗುಲಾಮರಾಗಿ ಕೆಲಸ ಮಾಡಿಕೊಂಡಿದ್ದರು.
34 ಅಮೋರಿಯರು ದಾನ್ ಕುಲದವರನ್ನು ಬೆಟ್ಟಪ್ರದೇಶದಲ್ಲಿಯೇ ವಾಸಿಸುವಂತೆ ಮಾಡಿದರು. ಅಮೋರಿಯರು ಕಣಿವೆಗೆ ಬರಲು ಅವಕಾಶ ಕೊಡಲಿಲ್ಲವಾದ್ದರಿಂದ ದಾನ್ ಕುಲದವರು ಬೆಟ್ಟಪ್ರದೇಶದಲ್ಲಿಯೇ ಉಳಿಯಬೇಕಾಯಿತು. 35 ಅಮೋರಿಯರು ಹರ್‌ಹೆರೆಸ್ ಪರ್ವತ, ಅಯ್ಯಾಲೋನ್ ಮತ್ತು ಶಾಲ್ಬೀಮ್‌ಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿದರು. ತರುವಾಯ ಯೋಸೇಫ್ಯರು ಪ್ರಬಲರಾದರು. ಆಗ ಅವರು ಅಮೋರಿಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. 36 ಅಮೋರಿಯರ ಪ್ರದೇಶವು ಸ್ಕಾರ್ಪಿಯನ್ ಕಣಿವೆಯಿಂದ ಸೇಲಾದವರೆಗೆ ಮತ್ತು ಸೇಲಾದಿಂದ ಮುಂದೆ ಬೆಟ್ಟಪ್ರದೇಶಗಳವರೆಗೆ ಹಬ್ಬಿತ್ತು.
ಅನನೀಯ ಮತ್ತು ಸಫೈರ
5 ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು. 2 ಆದರೆ, ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅವನು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಅವನು ಸ್ವಲ್ಪ ಹಣವನ್ನು ತನಗೋಸ್ಕರ ರಹಸ್ಯವಾಗಿಟ್ಟುಕೊಂಡನು. ಅವನ ಹೆಂಡತಿಗೆ ಇದು ತಿಳಿದಿತ್ತು. ಆಕೆಯೂ ಅದಕ್ಕೆ ಒಪ್ಪಿಕೊಂಡಿದ್ದಳು.
3 ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ? 4 ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.
5-6 ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.
7 ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ. 8 ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು.
ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.
9 ಪೇತ್ರನು ಆಕೆಗೆ, “ನೀನು ಮತ್ತು ನಿನ್ನ ಗಂಡನು ಪ್ರಭುವಿನ ಆತ್ಮನನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದೇಕೆ? ಅಗೋ, ನಿನ್ನ ಗಂಡನನ್ನು ಹೂಳಿಟ್ಟ ಜನರು ಬಾಗಿಲ ಬಳಿಗೆ ಬಂದಿದ್ದಾರೆ! ಅವರು ನಿನ್ನನ್ನೂ ಅದೇರೀತಿ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. 10 ತಕ್ಷಣವೇ ಸಫೈರಳು ಅವನ ಪಾದಗಳ ಮುಂದೆ ಬಿದ್ದು ಸತ್ತುಹೋದಳು. ಆ ಯೌವನಸ್ಥರು ಒಳಗೆ ಬಂದು ನೋಡಿದಾಗ ಆಕೆ ಸತ್ತುಹೋಗಿದ್ದಳು. ಅವರು ಆಕೆಯನ್ನು ಹೊತ್ತುಕೊಂಡು ಹೋಗಿ, ಆಕೆಯ ಗಂಡನ ಪಕ್ಕದಲ್ಲಿ ಹೂಳಿಟ್ಟರು. 11 ಈ ಸಂಗತಿಗಳ ಬಗ್ಗೆ ಕೇಳಿದ ವಿಶ್ವಾಸಿಗಳೆಲ್ಲರೂ ಮತ್ತು ಜನರೆಲ್ಲರೂ ಭಯಗ್ರಸ್ತರಾದರು.
ದೇವರ ಸೂಚಕಕಾರ್ಯಗಳು
12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.
ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ
17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು. 18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ, 20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು. 21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.
ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು. 22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ, 23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು. 24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.
25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು. 26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.
27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ, 28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.
29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ! 30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ. 32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.
33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು. 34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು. 35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ! 36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ. 37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು. 38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು. 39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.
ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು. 40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು. 41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು. 42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.
ಕ್ಷಾಮ ಮತ್ತು ಸುಳ್ಳುಪ್ರವಾದಿಗಳು
14 ಇದು ಕ್ಷಾಮದ ಬಗ್ಗೆ ಯೆರೆಮೀಯನಿಗೆ ಯೆಹೋವನು ನುಡಿದ ಸಂದೇಶ:
2 “ಯೆಹೂದ ಜನಾಂಗವು ಸತ್ತುಹೋದವರಿಗಾಗಿ ಗೋಳಾಡುವುದು.
ಯೆಹೂದದ ನಗರಗಳಲ್ಲಿದ್ದ ಜನರು ದಿನೇದಿನೇ ನಿಬರ್ಲರಾಗುತ್ತಾರೆ.
ಆ ಜನರು ನೆಲದ ಮೇಲೆ ಬಿದ್ದು ಬಿಡುತ್ತಾರೆ.
ಜೆರುಸಲೇಮ್ ನಗರದಿಂದ ಜನರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ.
3 ಜನನಾಯಕರು ನೀರು ತರುವದಕ್ಕಾಗಿ ತಮ್ಮ ಸೇವಕರನ್ನು ಕಳುಹಿಸುತ್ತಾರೆ.
ಆ ಸೇವಕರು ನೀರಿರುವ ಸ್ಥಳಗಳಿಗೆ ಹೋಗುತ್ತಾರೆ.
ಆದರೆ ಅಲ್ಲಿ ಅವರಿಗೆ ನೀರು ಸಿಕ್ಕುವದಿಲ್ಲ.
ಸೇವಕರು ಕೇವಲ ಪಾತ್ರೆಗಳನ್ನು ತೆಗೆದುಕೊಂಡು ಹಿಂದಿರುಗಿ ಬರುತ್ತಾರೆ.
ಅವರು ನಾಚಿಕೆಪಟ್ಟುಕೊಳ್ಳುತ್ತಾರೆ ಮತ್ತು ಪೇಚಾಡುತ್ತಾರೆ.
ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
4 ಭೂಮಿಗೆ ಮಳೆ ಬೀಳುವದಿಲ್ಲ.
ಯಾರೂ ಬಿತ್ತನೆಗಾಗಿ ಭೂಮಿಯನ್ನು ಉಳುವದಿಲ್ಲ.
ರೈತರು ಎದೆಗುಂದುತ್ತಾರೆ.
ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
5 ಕಾಡಿನಲ್ಲಿ ಹುಲ್ಲು ಇಲ್ಲದ ಕಾರಣ
ಜಿಂಕೆಯು ತನ್ನ ಮರಿಯನ್ನು ಬಿಟ್ಟುಹೋಗುವದು.
6 ಕಾಡುಕತ್ತೆಗಳು ಬೋಳುಬೆಟ್ಟಗಳ ಮೇಲೆ ನಿಂತು
ನರಿಗಳಂತೆ[a] ಗಾಳಿಯನ್ನು ಮೂಸುತ್ತವೆ.
ಆದರೆ ಅವುಗಳಿಗೆ ಆಹಾರ ಕಾಣಿಸುವದಿಲ್ಲ.
ಏಕೆಂದರೆ ತಿನ್ನಬಹುದಾದ ಸಸಿಗಳು ಬೆಳೆದಿಲ್ಲ.”
7 “ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಬುದು ನಮಗೆ ತಿಳಿದಿದೆ.
ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು.
ನಾವು ನಿನ್ನನ್ನು ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ.
ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ.
8 ಯೆಹೋವನೇ, ನೀನು ಇಸ್ರೇಲರ ಆಶಾಕಿರಣ,
ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ.
ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ.
ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
9 ನೀನು ಸ್ತಬ್ಧನಾಗಿರುವೆ;
ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ.
ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ.
ನಾವು ನಿನ್ನ ಹೆಸರಿನವರಾಗಿದ್ದೇವೆ.
ಆದ್ದರಿಂದ ನಮ್ಮನ್ನು ಕೈಬಿಡಬೇಡ.”
10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.”
11 ಆಗ ಯೆಹೋವನು, “ಯೆರೆಮೀಯನೇ, ಯೆಹೂದದ ಜನರ ಒಳಿತಿಗಾಗಿ ಪ್ರಾರ್ಥಿಸಬೇಡ. 12 ಯೆಹೂದದ ಜನರು ಉಪವಾಸ ವ್ರತವನ್ನು ಕೈಕೊಳ್ಳಬಹುದು ಮತ್ತು ನನಗೆ ಪ್ರಾರ್ಥನೆ ಮಾಡಬಹುದು. ಆದರೆ ನಾನು ಅವರ ಪ್ರಾರ್ಥನೆಗಳನ್ನು ಕೇಳುವದಿಲ್ಲ. ಅವರು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ ಸಹ ನಾನು ಅವರನ್ನು ಸ್ವಿಕರಿಸುವದಿಲ್ಲ. ನಾನು ಯುದ್ಧದಿಂದ ಯೆಹೂದದ ಜನರನ್ನು ನಾಶಮಾಡುತ್ತೇನೆ. ನಾನು ಅವರ ಆಹಾರವನ್ನು ಕಿತ್ತುಕೊಳ್ಳುತ್ತೇನೆ; ಯೆಹೂದದ ಜನರು ಉಪವಾಸದಿಂದ ಸಾಯುವಂತೆ ಮಾಡುತ್ತೇನೆ. ನಾನು ಅವರನ್ನು ಭಯಂಕರವಾದ ವ್ಯಾಧಿಗಳಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
13 ಆಗ ನಾನು ಯೆಹೋವನಿಗೆ, “ನನ್ನ ಒಡೆಯನಾದ ಯೆಹೋವನೇ, ಪ್ರವಾದಿಗಳು ಜನರಿಗೆ ಬೇರೆಯದನ್ನೇ ಹೇಳಿದರು. ಅವರು ಯೆಹೂದದ ಜನರಿಗೆ, ‘ನೀವು ಶತ್ರುವಿನ ಖಡ್ಗಕ್ಕೆ ತುತ್ತಾಗುವದಿಲ್ಲ. ನೀವೆಂದಿಗೂ ಹಸಿವಿನಿಂದ ಬಳಲುವದಿಲ್ಲ, ಯೆಹೋವನು ಈ ದೇಶದಲ್ಲಿ ನಿಮಗೆ ನೆಮ್ಮದಿಯನ್ನು ದಯಪಾಲಿಸುವನು’ ಎಂದು ಹೇಳುತ್ತಿದ್ದರು” ಎಂದೆನು.
14 ಆಗ ಯೆಹೋವನು ನನಗೆ, “ಯೆರೆಮೀಯನೇ, ಆ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುತ್ತಾರೆ. ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನ್ನೂ ಕೊಟ್ಟಿಲ್ಲ, ಅವರೊಂದಿಗೆ ನಾನು ಮಾತನ್ನೂ ಆಡಿಲ್ಲ. ಆ ಪ್ರವಾದಿಗಳು ಸುಳ್ಳುದರ್ಶನಗಳನ್ನು ನಿಷ್ಪ್ರಯೋಜಕವಾದ ಮಾಟಮಂತ್ರಗಳನ್ನು ಸ್ವಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ. 15 ನನ್ನ ಹೆಸರಿನಲ್ಲಿ ಬೋಧನೆ ಮಾಡುತ್ತಿರುವ ಈ ಪ್ರವಾದಿಗಳ ಬಗ್ಗೆ ನಾನು ಹೇಳುವದು ಇಷ್ಟೇ. ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಆ ಪ್ರವಾದಿಗಳು ‘ಶತ್ರುಗಳು ಖಡ್ಗಧಾರಿಗಳಾಗಿ ಎಂದಿಗೂ ಈ ದೇಶದ ಮೇಲೆ ಧಾಳಿ ಮಾಡುವದಿಲ್ಲ. ಈ ದೇಶದಲ್ಲಿ ಎಂದೂ ಕ್ಷಾಮ ಕಾಣಿಸಿಕೊಳ್ಳುವದಿಲ್ಲ’ ಎಂದು ಹೇಳಿದ್ದಾರೆ. ಆದರೆ ಆ ಪ್ರವಾದಿಗಳು ಹಸಿವಿನ ತಾಪದಿಂದ ಸಾಯುತ್ತಾರೆ ಮತ್ತು ಶತ್ರುವಿನ ಖಡ್ಗ ಅವರನ್ನು ಕೊಲ್ಲುತ್ತದೆ. 16 ಯಾರಿಗೆ ಪ್ರವಾದಿಗಳು ಬೋಧನೆ ಮಾಡಿದ್ದರೋ ಅವರನ್ನು ಬೀದಿಗಳಲ್ಲಿ ಎಸೆಯಲಾಗುವದು. ಆ ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಆ ಜನರನ್ನೂ ಅವರ ಹೆಂಡತಿಯರನ್ನೂ ಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ.
17 “ಯೆರೆಮೀಯನೇ, ಯೆಹೂದದ ಜನರಿಗೆ
ಈ ಸಂದೇಶವನ್ನು ಹೇಳು:
‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು.
ನಾನು ನನ್ನ ಕನ್ಯೆಯಾದ ಮಗಳಿಗಾಗಿ[b] ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು.
ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ,
ಅವರಿಗೆ ಬಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ
ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನ್ನ ಕಣ್ಣಿಗೆ ಬೀಳುತ್ತಾರೆ.
ನಾನು ನಗರಗಳಿಗೆ ಹೋದರೆ ಕ್ಷಾಮದಿಂದ ಬಳಲುವ ಜನರು ನನ್ನ ಕಣ್ಣಿಗೆ ಬೀಳುತ್ತಾರೆ.
ಅವರಿಗೆ ತಿನ್ನಲು ಅನ್ನವಿಲ್ಲ.
ಯಾಜಕರನ್ನು ಮತ್ತು ಪ್ರವಾದಿಗಳನ್ನು
ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.’”
19 ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ?
ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ?
ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ.
ನೀನು ಹೀಗೇಕೆ ಮಾಡಿದೆ?
ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು,
ಆದರೆ ಒಳ್ಳೆಯದೇನೂ ಆಗಲಿಲ್ಲ.
ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು.
ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
20 ಯೆಹೋವನೇ, ನಾವು ಬಹಳ ಕೆಟ್ಟ ಜನರೆಂಬುದು ನಮಗೆ ಗೊತ್ತು.
ನಮ್ಮ ಪೂರ್ವಿಕರು ದುಷ್ಕೃತ್ಯಗಳನ್ನು ಮಾಡಿದರೆಂಬುದನ್ನು ನಾವು ಬಲ್ಲೆವು.
ಹೌದು, ನಾವು ನಿನ್ನ ವಿರುದ್ಧ ಪಾಪಮಾಡಿದೆವು.
21 ಯೆಹೋವನೇ, ನಿನ್ನ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನ್ನು ದೂರ ತಳ್ಳಬೇಡ.
ನಿನ್ನ ಮಹಿಮೆಯ ಸಿಂಹಾಸನದ ಗೌರವವನ್ನು ಕುಂದಿಸಬೇಡ.
ನೀನು ನಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿಕೊ.
ಆ ಒಡಂಬಡಿಕೆಯನ್ನು ಮುರಿಯಬೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ.
ಆಕಾಶಕ್ಕೆ ಮಳೆಯನ್ನು ಸುರಿಸುವ ಸಾಮರ್ಥ್ಯವಿಲ್ಲ.
ನೀನೊಬ್ಬನೇ ನಮ್ಮ ಆಶಾಕೇಂದ್ರ.
ನೀನೇ ಈ ಎಲ್ಲವುಗಳನ್ನು ಸೃಷ್ಟಿಸಿದವನು.
ಯೇಸುವಿನ ಪುನರುತ್ಥಾನ
(ಮಾರ್ಕ 16:1-8; ಲೂಕ 24:1-12; ಯೋಹಾನ 20:1-10)
28 ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.
2 ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು. 3 ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು. 4 ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.
5 ದೇವದೂತನು ಆ ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ. 6 ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ. 7 ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.
8 ಕೂಡಲೇ ಆ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು, 9 ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು. 10 ಯೇಸು ಆ ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.
ಯೆಹೂದ್ಯ ನಾಯಕರಿಗೆ ಬಂದ ವರದಿ
11 ಆ ಸ್ತ್ರೀಯರು ಶಿಷ್ಯರಿಗೆ ತಿಳಿಸಲು ಹೋದರು. ಇತ್ತ ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. 12 ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು. 13 ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ. 14 ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು. 15 ಸೈನಿಕರು ಹಣವನ್ನು ತೆಗೆದುಕೊಂಡು, ಅವರು ಹೇಳಿದಂತೆಯೇ ಮಾಡಿದರು. ಈ ಕಥೆಯು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿಕೊಂಡಿದೆ.
ಯೇಸು ತನ್ನ ಶಿಷ್ಯರಿಗೆ ಹೇಳಿದ ಕಡೆಯ ಮಾತುಗಳು
(ಮಾರ್ಕ 16:14-18; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)
16 ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೊರಟು ಯೇಸು ತಿಳಿಸಿದ್ದ ಬೆಟ್ಟಕ್ಕೆ ಬಂದರು. 17 ಶಿಷ್ಯರು ಬೆಟ್ಟದ ಮೇಲೆ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು. ಆದರೆ ಕೆಲವು ಶಿಷ್ಯರು ಆತನೇ ನಿಜವಾದ ಯೇಸು ಎಂಬುದನ್ನು ನಂಬಲಿಲ್ಲ. 18 ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ. 19 ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ. 20 ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International