M’Cheyne Bible Reading Plan
ಯೆಹೋಶುವನಿಂದ ಜನರಿಗೆ ಪ್ರೇರಣೆ
23 ಯೆಹೋವನು ಇಸ್ರೇಲರ ಶತ್ರುಗಳನ್ನು ಸದೆಬಡೆದು ಅವರಿಗೆ ವಿಶ್ರಾಂತಿಯನ್ನು ಕೊಟ್ಟನು. ಯೆಹೋವನು ಇಸ್ರೇಲನ್ನು ಸುರಕ್ಷಿತಗೊಳಿಸಿದನು. ಅನೇಕ ವರ್ಷಗಳು ಕಳೆದವು. ಯೆಹೋಶುವನು ಬಹಳ ಮುದುಕನಾದನು. 2 ಆಗ ಯೆಹೋಶುವನು ಎಲ್ಲಾ ಹಿರಿಯನಾಯಕರನ್ನು, ಕುಟುಂಬದ ಮುಖ್ಯಸ್ಥರನ್ನು, ನ್ಯಾಯಾಧೀಶರನ್ನು ಮತ್ತು ಇಸ್ರೇಲರ ಅಧಿಕಾರಿಗಳನ್ನು ಸಭೆ ಸೇರಿಸಿದನು. ಯೆಹೋಶುವನು ಅವರಿಗೆ, “ನಾನು ಬಹಳ ಮುದುಕನಾಗಿದ್ದೇನೆ. 3 ಯೆಹೋವನು ನಮ್ಮ ಶತ್ರುಗಳಿಗೆ ಏನು ಮಾಡಿದನೆಂಬುದು ನೀವು ನೋಡಿದ್ದೀರಿ. ನಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ದೇವರಾದ ಯೆಹೋವನು ನಮಗಾಗಿ ಯುದ್ಧಮಾಡಿದನು. 4 ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಮತ್ತು ಜೋರ್ಡನ್ ನದಿಯ ಮಧ್ಯದ ಪ್ರದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳಬಹುದೆಂದು ನಾನು ನಿಮಗೆ ತಿಳಿಸಿದ್ದನ್ನು ಸ್ಮರಿಸಿಕೊಳ್ಳಿ. ನಾನು ಆ ಪ್ರದೇಶವನ್ನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ್ದೆ. ಆದರೆ ಇಲ್ಲಿಯವರೆಗೂ ಅದು ನಿಮ್ಮ ಅಧೀನಕ್ಕೆ ಬಂದಿಲ್ಲ. 5 ಆದರೆ ನಿಮ್ಮ ದೇವರಾದ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತದಿಂದ ಹೊರಡಿಸುತ್ತಾನೆ. ಆ ಪ್ರದೇಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ದೇವರಾದ ಯೆಹೋವನು ನಿಮಗಾಗಿ ಇದನ್ನು ಮಾಡುವುದಾಗಿ ವಾಗ್ದಾನ ಮಾಡಿದ್ದಾನೆ.
6 “ಯೆಹೋವನ ಆಜ್ಞೆಗಳನ್ನೆಲ್ಲಾ ಜಾಗರೂಕತೆಯಿಂದ ಕೈಕೊಂಡು ನಡೆಯಿರಿ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಎಲ್ಲವನ್ನು ಪಾಲಿಸಿರಿ. ಆ ಧರ್ಮಶಾಸ್ತ್ರಕ್ಕೆ ವಿಮುಖರಾಗಬೇಡಿ. 7 ಇಸ್ರೇಲರಲ್ಲದ ಕೆಲವು ಜನರು ನಮ್ಮೊಂದಿಗೆ ವಾಸಮಾಡಿಕೊಂಡಿದ್ದಾರೆ. ಅವರು ತಮ್ಮ ದೇವರುಗಳನ್ನೇ ಪೂಜಿಸುತ್ತಾರೆ. ಅವರೊಂದಿಗೆ ಸ್ನೇಹ ಮಾಡಬೇಡಿ. ಅವರ ದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ಮಾಡಬೇಡಿ. ಆ ದೇವರುಗಳ ಹೆಸರುಗಳ ಮೂಲಕ ಬೇಡಿಕೊಳ್ಳಬೇಡಿ. ಅವುಗಳ ಮೇಲೆ ಪ್ರಮಾಣ ಮಾಡಬೇಡಿ. ಅವುಗಳಿಗೆ ಅಡ್ಡಬಿದ್ದು ಪೂಜಿಸಬೇಡಿ. 8 ನಿಮ್ಮ ದೇವರಾದ ಯೆಹೋವನನ್ನೇ ಅನುಸರಿಸಿಕೊಂಡಿರಿ. ಈವರೆಗೆ ನೀವು ಹೇಗಿದ್ದಿರೋ ಅದೇ ರೀತಿಯಲ್ಲಿ ಮುಂದೆಯೂ ಇರಿ.
9 “ದೊಡ್ಡದಾದ ಮತ್ತು ಪ್ರಬಲವಾದ ಜನಾಂಗಗಳನ್ನು ಸೋಲಿಸಲು ಯೆಹೋವನು ನಿಮಗೆ ನೆರವಾದನು. ಆತನು ಅವರನ್ನು ತನ್ನ ಬಲವುಳ್ಳ ಹಸ್ತದಿಂದ ಹೊರಗಟ್ಟಿದನು. ನಿಮ್ಮನ್ನು ಸೋಲಿಸಲು ಯಾವ ಜನಾಂಗಕ್ಕೂ ಸಾಧ್ಯವಿಲ್ಲ. 10 ಯೆಹೋವನ ಸಹಾಯದಿಂದ ನಿಮ್ಮಲ್ಲಿ ಒಬ್ಬ ಇಸ್ರೇಲಿಯು ಒಂದು ಸಾವಿರ ಮಂದಿ ಶತ್ರುಗಳನ್ನು ಸೋಲಿಸುವಂತಾಯಿತು; ಏಕೆಂದರೆ ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುವುದಾಗಿ ಪ್ರಮಾಣ ಮಾಡಿದ್ದಾನೆ. 11 ಆದ್ದರಿಂದ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸುವುದರಲ್ಲಿ ಬಹು ಎಚ್ಚರಿಕೆಯಿಂದಿರಿ.
12 “ಯೆಹೋವನನ್ನೇ ಅನುಸರಿಸಿರಿ. ಇಸ್ರೇಲಿಗೆ ಸೇರಿಲ್ಲದ ಅನ್ಯರೊಂದಿಗೆ ಸ್ನೇಹ ಮಾಡಬೇಡಿ. ಅವರ ಜನರನ್ನು ಮದುವೆಯಾಗಬೇಡಿ. ನೀವು ಅವರೊಂದಿಗೆ ಸ್ನೇಹ ಮಾಡಿದರೆ, 13 ನಿಮ್ಮ ದೇವರಾದ ಯೆಹೋವನು ಶತ್ರುಗಳನ್ನು ಸೋಲಿಸಲು ನಿಮಗೆ ಸಹಾಯ ಮಾಡುವುದಿಲ್ಲ, ಅವರು ನಿಮಗೆ ಉರುಲಿನಂತಾಗುತ್ತಾರೆ. ಹೊಗೆ ಮತ್ತು ಧೂಳು ನಿಮ್ಮ ಕಣ್ಣಿಗೆ ನೋವನ್ನುಂಟು ಮಾಡುವಂತೆ ಅವರು ನಿಮಗೆ ನೋವನ್ನುಂಟು ಮಾಡುತ್ತಾರೆ; ಈ ಒಳ್ಳೆಯ ದೇಶದಿಂದ ನಿಮ್ಮನ್ನು ಬಲಾತ್ಕಾರದಿಂದ ಹೊರಗಟ್ಟಲಾಗುವುದು. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆ. ಆದರೆ ಯೆಹೋವನ ಆಜ್ಞೆಯನ್ನು ಪಾಲಿಸದಿದ್ದಲ್ಲಿ ನೀವು ಇದನ್ನು ಕಳೆದುಕೊಳ್ಳಬೇಕಾಗುತ್ತದೆ.
14 “ನಾನು ಇಹಲೋಕ ಯಾತ್ರೆಯನ್ನು ಮುಗಿಸುವ ಕಾಲಬಂದಂತಿದೆ. ಯೆಹೋವನು ನಿಮಗಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿದ್ದು ನಿಮಗೆ ಗೊತ್ತಿದೆ; ಅದನ್ನು ನೀವು ಮನಃಪೂರ್ವಕವಾಗಿ ನಂಬುತ್ತೀರಿ. ಆತನು ತನ್ನ ಯಾವ ವಾಗ್ದಾನವನ್ನೂ ನೆರವೇರಿಸದೆ ಬಿಟ್ಟಿಲ್ಲ. ಯೆಹೋವನು ನಮಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದ್ದಾನೆ. 15 ನಿಮ್ಮ ದೇವರಾದ ಯೆಹೋವನು ಮಾಡಿದ ಪ್ರತಿಯೊಂದು ಒಳ್ಳೆಯ ವಾಗ್ದಾನವು ನೆರವೇರಿದೆ. ಅದೇ ರೀತಿಯಲ್ಲಿ ಯೆಹೋವನು ತನ್ನ ಉಳಿದ ವಾಗ್ದಾನವನ್ನು ನೆರವೇರಿಸುವನು. ನೀವು ತಪ್ಪುಗಳನ್ನು ಮಾಡಿದರೆ ನಿಮಗೆ ಕೆಟ್ಟದ್ದಾಗುವುದೆಂದೂ ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಗಟ್ಟುವದಾಗಿಯೂ ಆತನು ಹೇಳಿದ್ದಾನೆ. 16 ನಿಮ್ಮ ದೇವರಾದ ಯೆಹೋವನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಪಾಲಿಸದೆ ಬೇರೆ ದೇವರುಗಳ ಸೇವೆಮಾಡಿದರೆ ಈ ದೇಶವನ್ನು ಕಳೆದುಕೊಳ್ಳುವಿರಿ. ನೀವು ಅನ್ಯದೇವರುಗಳನ್ನು ಪೂಜಿಸಬಾರದು. ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹು ಕೋಪಗೊಂಡು ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಡಿಸುವನು,” ಅಂದನು.
ಪೇತ್ರನಿಂದ ಗುಣಹೊಂದಿದ ಕುಂಟ
3 ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. 2 ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. 3 ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.
4 ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. 5 ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. 6 ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,
7 ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. 8 ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.
ಜನರಿಗೆ ಪೇತ್ರನ ವಿವರಣೆ
11 ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.
12 ಆಗ ಪೇತ್ರನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ಇದನ್ನು ಕಂಡು ನೀವು ಯಾಕೆ ಆಶ್ಚರ್ಯಗೊಂಡಿರುವಿರಿ? ಈ ಮನುಷ್ಯನನ್ನು ನಡೆಯುವಂತೆ ಮಾಡಿದ್ದು ನಮ್ಮ ಶಕ್ತಿಯೆಂದು ನೀವು ನಮ್ಮನ್ನು ನೋಡುತ್ತಿರುವಿರಾ? ನಾವು ಒಳ್ಳೆಯವರಾಗಿರುವುದರಿಂದ ಈ ಕಾರ್ಯವಾಯಿತೆಂದು ಭಾವಿಸಿಕೊಂಡಿದ್ದೀರಾ? 13 ಈ ಕಾರ್ಯವನ್ನು ಮಾಡಿದ್ದು ನಾವಲ್ಲ! ದೇವರು! ಆತನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ[a] ದೇವರು. ಆತನೇ ನಮ್ಮ ಪಿತೃಗಳೆಲ್ಲರ ದೇವರು. ಆತನು ತನ್ನ ವಿಶೇಷ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ಆದರೆ ನೀವು ಯೇಸುವನ್ನು ಕೊಲ್ಲಲು ಒಪ್ಪಿಸಿಕೊಟ್ಟಿರಿ. ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ನಿರ್ಧರಿಸಿದನು. ಆದರೆ ನೀವು ಪಿಲಾತನಿಗೆ, ನಮಗೆ ಯೇಸು ಬೇಕಿಲ್ಲವೆಂದು ಹೇಳಿದಿರಿ. 14 ಯೇಸು ಪರಿಶುದ್ಧನಾಗಿದ್ದನು ಮತ್ತು ಒಳ್ಳೆಯವನಾಗಿದ್ದನು. ಆದರೆ ನೀವು ಆತನನ್ನು ತಿರಸ್ಕರಿಸಿದಿರಿ. ಆತನ ಬದಲಾಗಿ ಕೊಲೆಗಾರನನ್ನು[b] ಬಿಡುಗಡೆ ಮಾಡಬೇಕೆಂದು ಪಿಲಾತನನ್ನು ಬೇಡಿಕೊಂಡಿರಿ. 15 ಹೀಗೆ ನೀವು ಜೀವದಾಯಕನನ್ನೇ ಕೊಂದುಹಾಕಿದಿರಿ! ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಇದಕ್ಕೆ ನಾವೇ ಸಾಕ್ಷಿಗಳು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ.
16 “ನಿಮ್ಮ ಕಣ್ಣೆದುರಿಗಿರುವ ಇವನ ಪರಿಚಯ ನಿಮ್ಮೆಲ್ಲರಿಗೂ ಇದೆ. ಇವನು ಗುಣವಾದದ್ದಕ್ಕೆ ಇವನು ಯೇಸುವಿನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ. ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನನ್ನು ನಿಮ್ಮೆಲ್ಲರ ಮುಂದೆ ಗುಣಪಡಿಸಿತು.
17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. 20 ಪ್ರಭುವು ನಿಮಗೆ ಆತ್ಮಿಕ ವಿಶ್ರಾಂತಿಯನ್ನು ಕೊಡುವನು. ಆತನು ಕ್ರಿಸ್ತನನ್ನಾಗಿ ಆರಿಸಿಕೊಂಡ ಯೇಸುವನ್ನು ನಿಮಗೆ ಕೊಡುವನು.
21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು. 22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು. 23 ಆತನಿಗೆ ವಿಧೇಯನಾಗದವನು ದೇವಜನರಿಂದ ಬೇರ್ಪಟ್ಟು ಮರಣ ಹೊಂದುವನು.’(A)
24 “ಸಮುವೇಲನು ಮತ್ತು ಅವನ ನಂತರದ ಪ್ರವಾದಿಗಳು ಇಂದಿನ ಈ ಕಾಲದ ಬಗ್ಗೆ ಮಾತಾಡಿದರು. 25 ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’(B) ಎಂದು ಹೇಳಿದನು. 26 ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”
ದೇವರಲ್ಲಿ ಯೆರೆಮೀಯನ ದೂರು
12 ಯೆಹೋವನೇ, ನಾನು ನಿನ್ನ ಜೊತೆ ವಾದ ಮಾಡಿದರೆ,
ನೀನು ಯಾವಾಗಲೂ ನ್ಯಾಯಪರನೆಂಬುದು ರುಜುವಾತಾಗುತ್ತದೆ.
ಆದರೂ ನ್ಯಾಯಪೂರ್ಣವಲ್ಲದ ಕೆಲವು ವಿಷಯಗಳ ಬಗ್ಗೆ ನಾನು ನಿನ್ನನ್ನು ಕೇಳಬಯಸುತ್ತೇನೆ.
ದುಷ್ಟರು ಏಕೆ ಅಭಿವೃದ್ಧಿ ಹೊಂದುತ್ತಾರೆ?
ನಿನ್ನ ವಿಶ್ವಾಸಕ್ಕೆ ಪಾತ್ರರಾಗದವರು ನೆಮ್ಮದಿಯ ಜೀವನ ನಡೆಸಲು ಹೇಗೆ ಸಾಧ್ಯ?
2 ನೀನು ಆ ದುಷ್ಟರನ್ನು ಇಲ್ಲಿ ಇಟ್ಟಿರುವೆ. ಅವರು ಆಳವಾಗಿ ಬೇರುಬಿಟ್ಟ ಸಸಿಗಳಂತಿದ್ದಾರೆ,
ಅವು ಬೆಳೆಯುತ್ತವೆ, ಹಣ್ಣು ಬಿಡುತ್ತವೆ.
ನೀನು ಅವರಿಗೆ ತುಂಬ ಹತ್ತಿರದವನು ಮತ್ತು ಪ್ರೀತಿಪಾತ್ರನು ಎಂದು ಅವರು ಬಾಯಿಂದ ಹೇಳುತ್ತಾರೆ.
ಆದರೆ ಹೃದಯದಲ್ಲಿ ಅವರು ನಿನ್ನಿದ ತುಂಬಾ ದೂರದಲ್ಲಿದ್ದಾರೆ.
3 ಆದರೆ ಯೆಹೋವನೇ, ನಿನಗೆ ನನ್ನ ಹೃದಯದ ಬಗ್ಗೆ ತಿಳಿದಿದೆ,
ನೀನು ನನ್ನನ್ನು ನೋಡಿ ನನ್ನ ಮನಸ್ಸನ್ನು ಪರೀಕ್ಷಿಸುವೆ.
ವಧೆಗೆ ಎಳೆದುಕೊಂಡು ಹೋಗುವ ಕುರಿಗಳಂತೆ ಆ ಕೆಡುಕರನ್ನು ಎಳೆದುಹಾಕು.
ಅವರನ್ನು ವಧೆಯ ದಿನಕ್ಕೆಂದು ಆರಿಸು.
4 ಎಷ್ಟು ಕಾಲದವರೆಗೆ ಭೂಮಿಯು ಒಣಗಿರಬೇಕು?
ಎಷ್ಟು ಕಾಲದವರೆಗೆ ಹುಲ್ಲು ಒಣಗಿ ನಿರ್ಜೀವವಾಗಿರಬೇಕು?
ದೇಶದಲ್ಲಿ ಪಶುಪಕ್ಷಿಗಳು ಸತ್ತುಹೋಗಿವೆ.
ಇದು ದುಷ್ಟರ ತಪ್ಪಾದರೂ
ಆ ದುಷ್ಟರು,
“ನಮಗೆ ಏನಾಗುವದೆಂದು ನೋಡಲು
ಯೆರೆಮೀಯನು ಬಹಳ ದಿವಸ ಬದುಕಿರಲಾರ” ಎಂದು ಹೇಳುತ್ತಿದ್ದಾರೆ.
ಯೆರೆಮೀಯನಿಗೆ ದೇವರ ಉತ್ತರ
5 “ಯೆರೆಮೀಯನೇ, ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿರುವುದಾದರೆ,
ಕುದುರೆಗಳೊಂದಿಗೆ ಓಡಿ ಹೇಗೆ ಗೆಲ್ಲುವೆ?
ಸುರಕ್ಷಿತವಾದ ದೇಶದಲ್ಲಿ ನೀನು ದಣಿದುಕೊಂಡರೆ
ಜೋರ್ಡನ್ ನದಿ ದಡದ ಭಯಾನಕ ಮುಳ್ಳುಕಂಟಿಯ ಪ್ರದೇಶಕ್ಕೆ ಬಂದಾಗ ಏನು ಮಾಡುವೆ?
6 ಈ ಜನರು ನಿನ್ನ ಸ್ವಂತ ಸಹೋದರರಾಗಿದ್ದಾರೆ.
ನಿನ್ನ ಸ್ವಂತ ಕುಟುಂಬದ ಜನರೇ ನಿನ್ನ ವಿರುದ್ಧ ಕೂಗಾಡುತ್ತಾ ಸಂಚು ಮಾಡುತ್ತಿದ್ದಾರೆ.
ಅವರು ನಿನ್ನೊಡನೆ ಸ್ನೇಹಿತರಂತೆ
ಮಾತನಾಡಿದರೂ ಅವರನ್ನು ನಂಬಬೇಡ.”
ಯೆಹೋವನು ತನ್ನ ಜನರನ್ನೂ ಯೆಹೂದವನ್ನೂ ನಿರಾಕರಿಸುವನು
7 “ನಾನು (ಯೆಹೋವನು) ನನ್ನ ಮನೆಯನ್ನು ತ್ಯಜಿಸಿದ್ದೇನೆ.
ನಾನು ನನ್ನ ಆಸ್ತಿಯನ್ನು ಬಿಟ್ಟುಬಿಟ್ಟಿದ್ದೇನೆ.
ನಾನು ನನ್ನ ಪ್ರಿಯತಮೆಯನ್ನು (ಯೆಹೂದ) ಅವಳ ಶತ್ರುಗಳಿಗೆ ಕೊಟ್ಟಿದ್ದೇನೆ.
8 ನನ್ನ ‘ಸ್ವಾಸ್ತ್ಯವಾದ ಜನರು’ ನನಗೊಂದು ಅರಣ್ಯದ ಸಿಂಹದಂತಾಗಿದ್ದಾರೆ.
ಅವರು ನನ್ನನ್ನು ಕಂಡು ಗರ್ಜಿಸುತ್ತಾರೆ.
ಆದ್ದರಿಂದಲೇ ನಾನು ಅವರಿಗೆ ವಿಮುಖನಾದೆನು.
9 ನನ್ನ ‘ಸ್ವಾಸ್ತ್ಯವಾದ ಜನರು’ ಹದ್ದುಗಳಿಂದ
ಸುತ್ತುವರಿಯಲ್ಪಟ್ಟು ಸಾಯುತ್ತಿರುವ ಪ್ರಾಣಿಯಂತಾಗಿದ್ದಾರೆ.
ಆ ಪಕ್ಷಿಗಳು ಅವರ ಸುತ್ತಲೂ ಹಾರಾಡುತ್ತವೆ.
ಕಾಡುಪ್ರಾಣಿಗಳೇ, ಬನ್ನಿ, ಬನ್ನಿ,
ಬಂದು ನಿಮ್ಮ ಆಹಾರವನ್ನು ತೆಗೆದುಕೊಳ್ಳಿ.
10 ಅನೇಕ ಕುರುಬರು ದ್ರಾಕ್ಷಿತೋಟವನ್ನು ಹಾಳುಮಾಡಿದ್ದಾರೆ.
ಆ ಕುರುಬರು ನನ್ನ ತೋಟದ ಸಸಿಗಳನ್ನು ತುಳಿದುಬಿಟ್ಟಿದ್ದಾರೆ:
ನನ್ನ ಸುಂದರವಾದ ತೋಟವನ್ನು ಮರಳುಗಾಡನ್ನಾಗಿ ಮಾಡಿದ್ದಾರೆ.
11 ಹೌದು, ಮರಳುಭೂಮಿಯನ್ನಾಗಿ ಮಾಡಿದ್ದಾರೆ.
ಅದು ಒಣಗಿಹೋಗಿ ನಿಸ್ಸತ್ವವಾಗಿದೆ.
ಅಲ್ಲಿ ಯಾರೂ ವಾಸಿಸುವದಿಲ್ಲ. ಇಡೀ ದೇಶವೇ ಬರಿದಾದ ಮರಳುಗಾಡಾಗಿದೆ.
ಆ ತೋಟವನ್ನು ನೋಡಿಕೊಳ್ಳುವದಕ್ಕೆ ಯಾರೂ ಉಳಿದಿಲ್ಲ.
12 ಅನೇಕ ಸೈನಿಕರು ಆ ಬೋಳುಬೆಟ್ಟಗಳನ್ನು ತುಳಿದುಕೊಂಡು ಹೋದರು.
ಆ ಸೈನ್ಯಗಳಿಂದ ಯೆಹೋವನು ಆ ದೇಶವನ್ನು ದಂಡಿಸಿದನು.
ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನ್ನು ದಂಡಿಸಲಾಯಿತು.
ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.
13 ಜನರು ಗೋಧಿಯನ್ನು ಬಿತ್ತುವರು;
ಆದರೆ ಅವರು ಕೇವಲ ಮುಳ್ಳಿನ ರಾಶಿಯನ್ನು ಕೊಯ್ಯುವರು.
ಅವರು ತುಂಬ ದಣಿಯುವವರೆಗೆ ಕಷ್ಟಪಟ್ಟು ಕೆಲಸ ಮಾಡುವರು.
ಆದರೆ ಆ ಎಲ್ಲಾ ಕೆಲಸದ ಪ್ರತಿಫಲವಾಗಿ ಅವರಿಗೆ ಏನೂ ಸಿಗುವದಿಲ್ಲ.
ಅವರು ತಮ್ಮ ಬೆಳೆಗಳಿಂದ ನಾಚಿಕೆಪಟ್ಟುಕೊಳ್ಳುವರು.
ಯೆಹೋವನ ರೋಷವು ಹಾಗೆಲ್ಲ ಮಾಡುವುದು.”
ಇಸ್ರೇಲಿನ ನೆರೆಯವರಿಗೆ ಯೆಹೋವನ ವಾಗ್ದಾನ
14 ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಬುದನ್ನು ನಿಮಗೆ ಹೇಳುವೆನು. ಆ ಜನರು ತುಂಬ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನ್ನು ಅವರು ಹಾಳು ಮಾಡಿದರು. ನಾನು ಆ ಜನರನ್ನು ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನ್ನೂ ಎಸೆಯುವೆನು. 15 ಬಳಿಕ ನಾನು ಅವರಿಗಾಗಿ ಪರಿತಪಿಸುವೆನು. ನಾನು ಪ್ರತಿಯೊಂದು ಕುಟುಂಬವನ್ನು ಅದರ ಸ್ವಾಸ್ತ್ಯಕ್ಕೂ ಅದರ ದೇಶಕ್ಕೂ ಕರೆತರುವೆನು. 16 ಆ ಜನರು ತಮ್ಮ ಪಾಠಗಳನ್ನು ಸರಿಯಾಗಿ ಕಲಿತುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ಮೊದಲು, ಆ ಜನರು ಬಾಳನ ಹೆಸರೆತ್ತಿ ಪ್ರಮಾಣ ಮಾಡುವುದನ್ನು ನನ್ನ ಜನರಿಗೆ ಕಲಿಸಿಕೊಟ್ಟರು. ಈಗ ಆ ಜನರು ಅದೇ ರೀತಿಯಲ್ಲಿ ತಮ್ಮ ಪಾಠವನ್ನು ಕಲಿತುಕೊಳ್ಳಬೇಕೆಂಬುದು ನನ್ನ ಇಚ್ಛೆ. ಅವರು, ‘ಯೆಹೋವನ ಜೀವದಾಣೆ’ ಎಂದು ಹೇಳಿದರೆ ಅವರನ್ನು ಅಭಿವೃದ್ಧಿಪಡಿಸಿ ಅವರನ್ನು ನಮ್ಮ ಜನರ ಮಧ್ಯದಲ್ಲಿ ನೆಲೆಗೊಳಿಸುವೆನು. 17 ಯಾವ ಜನಾಂಗವಾದರೂ ನನ್ನ ಸಂದೇಶವನ್ನು ಕೇಳದೆಹೋದರೆ ಅದನ್ನು ಸಂಪೂರ್ಣವಾಗಿ ನಾಶಮಾಡುವೆನು. ಒಣಗಿ ಸತ್ತುಹೋದ ಸಸಿಯಂತೆ ಅದನ್ನು ಕಿತ್ತು ಎಸೆದುಬಿಡುವೆನು.” ಇದು ಯೆಹೋವನಿಂದ ಬಂದ ಸಂದೇಶ.
ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಆಲೋಚನೆ
(ಮಾರ್ಕ 14:1-2; ಲೂಕ 22:1-2; ಯೋಹಾನ 11:45-53)
26 ಯೇಸು ಈ ಸಂಗತಿಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ, ತನ್ನ ಶಿಷ್ಯರಿಗೆ, 2 “ನಾಳಿದ್ದು ಪಸ್ಕಹಬ್ಬವೆಂಬುದು ನಿಮಗೆ ತಿಳಿದಿದೆ. ಅಂದು ಮನುಷ್ಯಕುಮಾರನನ್ನು ಶಿಲುಬೆಗೇರಿಸಲು ವೈರಿಗಳಿಗೆ ಒಪ್ಪಿಸುವರು” ಎಂದನು.
3 ಇತ್ತ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಪ್ರಧಾನಯಾಜಕನ ಭವನದಲ್ಲಿ ಸಭೆ ಸೇರಿದರು. ಪ್ರಧಾನಯಾಜಕನ ಹೆಸರು ಕಾಯಫ. 4 ಆ ಸಭೆಯಲ್ಲಿ ಅವರು ಯೇಸುವನ್ನು ಉಪಾಯದಿಂದ ಬಂಧಿಸಿ ಕೊಲ್ಲಲು ಸಮಾಲೋಚಿಸಿದರು. 5 ಆದರೆ ಸಭಿಕರು, “ನಾವು ಪಸ್ಕಹಬ್ಬದ ಕಾಲದಲ್ಲಿ ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ ಜನರು ಕೋಪಗೊಂಡು ದಂಗೆ ಏಳಬಹುದು” ಎಂದು ಹೇಳಿದರು.
ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ
(ಮಾರ್ಕ 14:9; ಯೋಹಾನ 12:1-8)
6 ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು. 7 ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.
8 ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ? 9 ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.
10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು. 11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು. 13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.
ಯೇಸುವಿನ ಶತ್ರು ಯೂದ
(ಮಾರ್ಕ 14:10-11; ಲೂಕ 22:3-6)
14 ನಂತರ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಮಹಾಯಾಜಕರ ಬಳಿಗೆ ಹೋಗಿ, 15 “ಯೇಸುವನ್ನು ನಿಮಗೆ ಹಿಡಿದುಕೊಟ್ಟರೆ ನೀವು ನನಗೆ ಎಷ್ಟು ಹಣ ಕೊಡುವಿರಿ?” ಎಂದು ಕೇಳಿದನು. ಮಹಾಯಾಜಕರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು. 16 ಅಂದಿನಿಂದ ಯೇಸುವನ್ನು ಹಿಡಿದುಕೊಡಲು ಯೂದನು ಸಮಯ ಕಾಯುತ್ತಿದ್ದನು.
ಪಸ್ಕಹಬ್ಬದ ಆಚರಣೆಗೆ ಸಿದ್ಧತೆ
(ಮಾರ್ಕ 14:21-22; ಲೂಕ 22:7-14,21-23; ಯೋಹಾನ 13:21-30)
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಂದು ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವು ನಿನಗಾಗಿ ಪಸ್ಕಹಬ್ಬದ ಊಟವನ್ನು ಎಲ್ಲಿ ಸಿದ್ಧಪಡಿಸಬೇಕು?” ಎಂದು ಕೇಳಿದರು.
18 ಅದಕ್ಕೆ ಯೇಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೇಟಿಮಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಪಿಸಿತು. ನಾನು ಪಸ್ಕಹಬ್ಬದ ಊಟವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಯರೊಂದಿಗೆ ಮಾಡುತ್ತೇನೆ ಎಂದು ಉಪದೇಶಕನು ಹೇಳುತ್ತಾನೆ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಕೊಟ್ಟನು. 19 ಯೇಸು ಹೇಳಿದಂತೆಯೇ ಶಿಷ್ಯರು ಮಾಡಿ ಪಸ್ಕಹಬ್ಬದ ಊಟವನ್ನು ಏರ್ಪಡಿಸಿದರು.
20 ಸಾಯಂಕಾಲದಲ್ಲಿ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತಿದ್ದನು. 21 ಅವರೆಲ್ಲರೂ ಊಟ ಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿರುವ ಹನ್ನೆರಡು ಮಂದಿಯಲ್ಲಿ ಒಬ್ಬನು ನನ್ನನ್ನು ವೈರಿಗಳಿಗೆ ಒಪ್ಪಿಸುತ್ತಾನೆ” ಎಂದು ಹೇಳಿದನು.
22 ಶಿಷ್ಯರು ಇದನ್ನು ಕೇಳಿ ಬಹಳ ದುಃಖಪಟ್ಟರು. ಪ್ರತಿಯೊಬ್ಬ ಶಿಷ್ಯನು ಯೇಸುವಿಗೆ, “ಪ್ರಭುವೇ, ನಿಜವಾಗಿಯೂ ನಾನಲ್ಲ!” ಎಂದು ಹೇಳಿದರು.
23 ಯೇಸು, “ಬಟ್ಟಲಲ್ಲಿ ನನ್ನ ಸಂಗಡ ತನ್ನ ಕೈಗಳನ್ನು ಅದ್ದುವವನೇ ನನಗೆ ವಿರೋಧವಾಗಿದ್ದಾನೆ. 24 ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಒಪ್ಪಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಹೇಳಿದನು.
25 ಆಗ, ಯೇಸುವನ್ನು ಆತನ ಶತ್ರುಗಳಿಗೆ ಒಪ್ಪಿಸಿಕೊಡಲಿದ್ದ ಯೂದನು, “ಗುರುವೇ, ನಿನಗೆ ವಿರೋಧವಾಗಿರುವವನು ನಾನಲ್ಲ ತಾನೇ?” ಎಂದನು.
ಅದಕ್ಕೆ ಯೇಸು, “ಹೌದು, ಅವನು ನೀನೇ?” ಎಂದು ಉತ್ತರಿಸಿದನು.
ಪ್ರಭುವಿನ ಭೋಜನ
(ಮಾರ್ಕ 14:22-26; ಲೂಕ 22:15-20; 1 ಕೊರಿಂಥ. 11:23-25)
26 ಅವರು ಊಟಮಾಡುತ್ತಿದ್ದಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಯರಿಗೆ ಕೊಟ್ಟನು.
27 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರಸಲ್ಲಿಸಿ, “ನೀವೆಲ್ಲರೂ ಇದನ್ನು ಕುಡಿಯಿರಿ. 28 ಇದು ಹೊಸ ಒಡಂಬಡಿಕೆಯನ್ನು ಸ್ಥಾಪಿಸುವ ನನ್ನ ರಕ್ತ. ಇದು ಅನೇಕ ಜನರ ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ. 29 ನಾನು ನನ್ನ ತಂದೆಯ ರಾಜ್ಯದಲ್ಲಿ ಮತ್ತೆ ಒಟ್ಟಾಗಿ ಸೇರಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ತನಕ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ ಜನರಿಗೆ ಕುಡಿಯಲು ಕೊಟ್ಟನು.
30 ಆಗ ಶಿಷ್ಯರೆಲ್ಲರೂ ಪಸ್ಕಹಬ್ಬದ ಹಾಡನ್ನು ಹಾಡಿದರು. ಬಳಿಕ ಅವರು ಆಲಿವ್ ಗುಡ್ಡಕ್ಕೆ ಹೋದರು.
ಶಿಷ್ಯರ ವಿಶ್ವಾಸದ್ರೋಹದ ಮುನ್ಸೂಚನೆ
(ಮಾರ್ಕ 14:27-31; ಲೂಕ 22:31-34; ಯೋಹಾನ 13:36-38)
31 ಆಗ ಯೇಸು ತನ್ನ ಶಿಷ್ಯರಿಗೆ, “ಇಂದು ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವಿರಿ.
‘ನಾನು ಕುರುಬನನ್ನು ಕೊಲ್ಲುವೆನು,
ಆಗ ಕುರಿಗಳೆಲ್ಲಾ ಚದರಿಹೋಗುತ್ತವೆ’(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. 32 ಆದರೆ ನಾನು ಸತ್ತಮೇಲೆ ಜೀವಂತನಾಗಿ ಎದ್ದುಬರುವೆನು. ನಂತರ ನಾನು ಗಲಿಲಾಯಕ್ಕೆ ಹೋಗುವೆನು. ನೀವು ಅಲ್ಲಿಗೆ ಹೋಗುವುದಕ್ಕಿಂತ ಮುಂಚೆಯೇ ನಾನು ಅಲ್ಲಿರುವೆನು” ಎಂದು ಹೇಳಿದನು.
33 ಪೇತ್ರನು, “ಉಳಿದ ಶಿಷ್ಯರೆಲ್ಲರೂ ನಿನ್ನ ದೆಸೆಯಿಂದ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರೆ ನಾನು ಮಾತ್ರ ಹಾಗೆ ಮಾಡುವುದಿಲ್ಲ” ಎಂದು ಉತ್ತರಕೊಟ್ಟನು.
34 ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಇಂದು ರಾತ್ರಿ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನ ವಿಷಯದಲ್ಲಿ ಆತನು ನನಗೆ ಗೊತ್ತೇ ಇಲ್ಲ ಎಂಬುದಾಗಿ ಮೂರು ಸಲ ಹೇಳುವೆ” ಅಂದನು.
35 ಆದರೆ ಪೇತ್ರನು, “ನಾನು ನಿನ್ನೊಂದಿಗೆ ಸತ್ತರೂ ಸರಿ, ನಿನ್ನನ್ನು ನಿರಾಕರಿಸುವುದಿಲ್ಲ” ಅಂದನು. ಉಳಿದ ಶಿಷ್ಯರು ಸಹ ಅದೇ ರೀತಿ ಹೇಳಿದರು.
ಯೇಸುವಿನ ಸಂಕಟದ ಪ್ರಾರ್ಥನೆ
(ಮಾರ್ಕ 14:32-42; ಲೂಕ 22:39-46)
36 ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ನಾನು ಅಲ್ಲಿಗೆ ಹೋಗಿ, ಪ್ರಾರ್ಥಿಸಿ ಬರುವ ತನಕ ಇಲ್ಲಿಯೇ ಇರಿ” ಎಂದು ಹೇಳಿದನು. 37 ಯೇಸುವು ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಆಗ ಯೇಸು ಬಹಳ ದುಃಖದಿಂದ ಮನಗುಂದಿದವನಾಗಿ 38 ಅವರಿಗೆ, “ನನ್ನ ಆತ್ಮವು ದುಃಖದಿಂದ ತುಂಬಿಹೋಗಿದೆ. ನನ್ನ ಹೃದಯವು ದುಃಖದಿಂದ ಒಡೆದುಹೋಗುವಂತಿದೆ. ನೀವು ನನ್ನೊಂದಿಗೆ ಎಚ್ಚರವಾಗಿದ್ದು ಇಲ್ಲೇ ಇರಿ” ಎಂದು ಹೇಳಿದನು.
39 ಬಳಿಕ ಯೇಸು ಅವರಿಂದ ಸ್ವಲ್ಪದೂರ ಹೋಗಿ ನೆಲದ ಮೇಲೆ ಬೋರಲಬಿದ್ದು, “ನನ್ನ ತಂದೆಯೇ, ಸಾಧ್ಯವಿದ್ದರೆ, ಸಂಕಟದ ಈ ಪಾತ್ರೆಯನ್ನು ನನಗೆ ಕೊಡಬೇಡ. ಆದರೆ ನನ್ನ ಇಷ್ಟದಂತಲ್ಲ, ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದನು. ಅವರು ನಿದ್ರಿಸುತ್ತಿರುವುದನ್ನು ಕಂಡು ಆತನು ಪೇತ್ರನಿಗೆ, “ನೀವು ನನ್ನೊಂದಿಗೆ ಒಂದು ಗಂಟೆಯ ಕಾಲ ಎಚ್ಚರವಾಗಿರಲು ಸಾಧ್ಯವಿಲ್ಲವೇ? 41 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಮನಸ್ಸೇನೋ ಸಿದ್ಧವಾಗಿದೆ ಆದರೆ ದೇಹಕ್ಕೆ ಬಲಸಾಲದು” ಎಂದು ಹೇಳಿದನು.
42 ಯೇಸು ಎರಡನೆಯ ಸಾರಿ ಸ್ಪಲ್ಪದೂರ ಹೋಗಿ ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಂಕಟದ ಈ ಪಾತ್ರೆಯನ್ನು ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದರೆ ಮತ್ತು ನಾನು ಅದನ್ನು ನೆರವೇರಿಸಲೇಬೇಕಿದ್ದರೆ, ನಿನ್ನ ಇಷ್ಟದಂತೆಯೇ ಆಗಲಿ” ಎಂದನು.
43 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ಮತ್ತೆ ನಿದ್ರೆ ಮಾಡುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. 44 ಆದ್ದರಿಂದ ಯೇಸು ಮತ್ತೊಮ್ಮೆ ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ಮೂರನೆಯ ಸಾರಿ ಅದೇ ರೀತಿ ಪ್ರಾರ್ಥಿಸಿದನು.
45 ಬಳಿಕ ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ, “ನೀವು ಇನ್ನೂ ನಿದ್ರೆ ಮಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಷ್ಠರಾದ ಜನರಿಗೆ ಮನುಷ್ಯಕುಮಾರನನ್ನು ಒಪ್ಪಿಸುವ ಕಾಲ ಸಮೀಪಿಸಿದೆ. 46 ನಾವು ಹೋಗಬೇಕು. ಎದ್ದೇಳಿ! ನನ್ನನ್ನು ವೈರಿಗಳಿಗೆ ಒಪ್ಪಿಸುವ ಮನುಷ್ಯನು ಇಲ್ಲಿಯೇ ಬರುತ್ತಿದ್ದಾನೆ” ಎಂದು ಹೇಳಿದನು.
ಯೇಸುವಿನ ಬಂಧನ
(ಮಾರ್ಕ 14:43-50; ಲೂಕ 22:47-53; ಯೋಹಾನ 18:3-12)
47 ಯೇಸು ಮಾತಾಡುತ್ತಿರವಷ್ಟರಲ್ಲೇ ಯೂದನು ಅಲ್ಲಿಗೆ ಬಂದನು. ಯೂದನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಮಹಾಯಾಜಕರು ಮತ್ತು ಹಿರಿಯ ನಾಯಕರು ಕಳುಹಿಸಿದ್ದ ಅನೇಕ ಜನರು ಅವನೊಂದಿಗಿದ್ದರು. ಅವರು ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡಿದ್ದರು. 48 ಯೇಸು ಯಾರೆಂಬುದನ್ನು ತಿಳಿದುಕೊಳ್ಳಲು ಯೂದನು ಅವರಿಗೆ ಒಂದು ಗುರುತು ಹೇಳಿಕೊಟ್ಟಿದ್ದನು. 49 ಅಂತೆಯೇ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ, ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
50 ಆಗ ಯೇಸು, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ?” ಎಂದನು.
ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು. 51 ಆಗ ಯೇಸುವಿನ ಶಿಷ್ಯರಲ್ಲೊಬ್ಬನು ತನ್ನ ಖಡ್ಗವನ್ನು ಹೊರಕ್ಕೆ ಸೆಳೆದು ಮಹಾಯಾಜಕನ ಸೇವಕನಿಗೆ ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.
52 ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಕತ್ತಿಯನ್ನು ಬಳಸುವ ಜನರು ಕತ್ತಿಯಿಂದಲೇ ಸಾಯುತ್ತಾರೆ. 53 ನಾನು ನನ್ನ ತಂದೆಯನ್ನು ಕೇಳಿದ್ದರೆ, ಆತನು ನನಗೆ ದೇವದೂತರ ಹನ್ನೆರಡು ಸೇನಾದಳಗಳನ್ನು ನೀಡುತ್ತಿದ್ದನೆಂಬುದು ನಿನಗೆ ಗೊತ್ತೇ ಇದೆ. 54 ಆದರೆ ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದು ಈ ರೀತಿಯಲ್ಲೇ ಆಗಬೇಕಾಗಿದೆ” ಎಂದು ಹೇಳಿದನು.
55 ನಂತರ ಯೇಸು ಆ ಜನರಿಗೆ, “ನೀವು ಅಪರಾಧಿಯನ್ನು ಬಂಧಿಸುವವರಂತೆ ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದಿದ್ದೀರಿ. ನಾನು ಪ್ರತಿದಿನವೂ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಅಲ್ಲಿ ಬಂಧಿಸಲೇ ಇಲ್ಲ. 56 ಆದರೆ ಪ್ರವಾದಿಗಳು ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
ಯೆಹೂದ್ಯ ನಾಯಕರ ಎದುರಿನಲ್ಲಿ ಯೇಸು
(ಮಾರ್ಕ 14:53-65; ಲೂಕ 22:54-55,63-71; ಯೋಹಾನ 18:13-14,19-24)
57 ಬಳಿಕ ಯೇಸುವನ್ನು ಬಂಧಿಸಿದ್ದವರು ಆತನನ್ನು ಪ್ರಧಾನ ಯಾಜಕನಾದ ಕಾಯಫನ ಮನೆಗೆ ಕರೆದೊಯ್ದರು. ಅಲ್ಲಿ ಧರ್ಮೋಪದೇಶಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಒಟ್ಟಿಗೆ ಸೇರಿದ್ದರು. 58 ಯೇಸುವಿಗೆ ಏನಾಗುತ್ತದೋ ಎಂಬುದನ್ನು ನೋಡಲು ಪೇತ್ರನು ಆತನನ್ನು ದೂರದಿಂದ ಹಿಂಬಾಲಿಸುತ್ತಾ ಪ್ರಧಾನಯಾಜಕನ ಭವನದ ಅಂಗಳದೊಳಗೆ ಬಂದು ಕಾವಲುಗಾರರೊಂದಿಗೆ ಕುಳಿತುಕೊಂಡನು.
59 ಮಹಾಯಾಜಕರು ಮತ್ತು ಯೆಹೂದ್ಯರ ಸಮಿತಿಯವರು ಯೇಸುವಿಗೆ ಮರಣದಂಡನೆ ವಿಧಿಸಲು ಅಗತ್ಯವಾದ ಸುಳ್ಳುಸಾಕ್ಷಿಗಳನ್ನು ಹುಡುಕಿದರು. 60 ಅನೇಕರು ಬಂದು, ಯೇಸುವಿನ ವಿಷಯವಾಗಿ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಯೇಸುವನ್ನು ಕೊಲ್ಲಲು ಬಲವಾದ ಕಾರಣವೊಂದೂ ಸಮಿತಿಗೆ ಸಿಗಲಿಲ್ಲ. ಆಗ ಇಬ್ಬರು ಬಂದು, 61 “ಈ ಮನುಷ್ಯನು, ‘ನಾನು ದೇವರ ಆಲಯವನ್ನು ಕೆಡವಿ ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ’ ಎಂದು ಹೇಳಿದನು” ಎಂಬುದಾಗಿ ತಿಳಿಸಿದರು.
62 ಪ್ರಧಾನಯಾಜಕನು ಎದ್ದುನಿಂತು ಯೇಸುವಿಗೆ, “ಈ ಜನರು ನಿನ್ನ ಮೇಲೆ ಹೊರಿಸಿರುವ ಆಪಾದನೆಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯಾ? ಇವರು ಹೇಳುತ್ತಿರುವುದೆಲ್ಲಾ ನಿಜವೇ?” ಎಂದು ಕೇಳಿದನು. 63 ಆದರೆ ಯೇಸು ಮೌನವಾಗಿದ್ದನು.
ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.
64 ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು. ಆದರೆ ನಿನಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೋಡಗಳ ಮೇಲೆ ಕುಳಿತು ಬರುವುದನ್ನೂ ನೀವು ಕಾಣುವಿರಿ” ಎಂದು ಹೇಳಿದನು.
65 ಪ್ರಧಾನಯಾಜಕನು ಇದನ್ನು ಕೇಳಿ ಬಹಳ ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವೂ ಇಲ್ಲ. ಇವನು ಮಾಡಿದ ದೇವದೂಷಣೆಯನ್ನು ನೀವೇ ಕೇಳಿದಿರಿ. 66 ನಿಮ್ಮ ತೀರ್ಮಾನವೇನು?” ಎಂದು ಕೇಳಿದನು.
ಯೆಹೂದ್ಯರು, “ಇವನು ಅಪರಾಧಿ. ಇವನು ಸಾಯಲೇಬೇಕು” ಎಂದು ಉತ್ತರಕೊಟ್ಟರು.
67 ನಂತರ ಜನರು ಅಲ್ಲಿಯೇ ಯೇಸುವಿನ ಮುಖದ ಮೇಲೆ ಉಗುಳಿದರು. ಮುಷ್ಠಿಯಿಂದ ಆತನನ್ನು ಗುದ್ದಿದರು. ಆತನ ಕೆನ್ನೆಗೆ ಹೊಡೆದರು. 68 ಅವರು, “ಕ್ರಿಸ್ತನೇ, ನಮಗೆ ಪ್ರವಾದನೆ ಹೇಳು! ನಿನಗೆ ಹೊಡೆದವರು ಯಾರು?” ಎಂದು ಅಪಹಾಸ್ಯ ಮಾಡಿದರು.
ಪೇತ್ರನ ವಿಶ್ವಾಸದ್ರೋಹ
(ಮಾರ್ಕ 14:66-72; ಲೂಕ 22:56-62; ಯೋಹಾನ 18:15-18,25-27)
69 ಇತ್ತ ಪೇತ್ರನು ಅಂಗಳದಲ್ಲಿ ಕುಳಿತಿದ್ದನು. ಸೇವಕಿಯೊಬ್ಬಳು ಪೇತ್ರನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೇಸುವಿನೊಂದಿಗಿದ್ದವನು” ಎಂದು ಹೇಳಿದಳು.
70 ಆದರೆ ಪೇತ್ರನು, ಅಲ್ಲಿದ್ದ ಜನರೆಲ್ಲರ ಎದುರಿನಲ್ಲಿ ಆಕೆಗೆ, “ನೀನು ಏನು ಹೇಳುತ್ತಿರುವೆಯೋ ನನಗೆ ಗೊತ್ತೇ ಇಲ್ಲ” ಎಂದು ನಿರಾಕರಿಸಿದನು.
71 ಬಳಿಕ ಪೇತ್ರನು ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿಗೆ ಬಂದಾಗ ಮತ್ತೊಬ್ಬ ಸೇವಕಿಯು ಅವನನ್ನು ನೋಡಿ ಅಲ್ಲಿದ್ದ ಜನರಿಗೆ, “ಈ ಮನುಷ್ಯನು ನಜರೇತಿನ ಯೇಸುವಿನೊಂದಿಗಿದ್ದನು” ಎಂದು ಹೇಳಿದಳು.
72 ಆಗ ಪೇತ್ರನು, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಯೇಸುವೆಂಬ ಮನುಷ್ಯನು ತಿಳಿದೇ ಇಲ್ಲ!” ಎಂದು ನಿರಾಕರಿಸಿದನು.
73 ಸ್ವಲ್ಪ ಸಮಯದ ತರುವಾಯ, ಅಲ್ಲಿ ನಿಂತಿದ್ದ ಕೆಲವು ಜನರು ಪೇತ್ರನ ಸಮೀಪಕ್ಕೆ ಹೋಗಿ, “ಯೇಸುವನ್ನು ಹಿಂಬಾಲಿಸಿಕೊಂಡು ಬಂದ ಜನರಲ್ಲಿ ನೀನೂ ಒಬ್ಬನಾಗಿರುವೆ ಎಂಬುದನ್ನು ನೀನು ಮಾತಾಡುವ ರೀತಿಯೇ ತೋರಿಸುತ್ತದೆ” ಎಂದು ಹೇಳಿದರು.
74 ಆಗ ಪೇತ್ರನು ಶಪಿಸಿಕೊಳ್ಳತೊಡಗಿ, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಯೇಸುವೆಂಬ ಮನುಷ್ಯನು ನನಗೆ ತಿಳಿದೇ ಇಲ್ಲ!” ಎಂದು ಹೇಳಿದನು. ಆ ಕೂಡಲೇ ಕೋಳಿ ಕೂಗಿತು. 75 “ಆತನು ಯಾರೋ ನನಗೆ ಗೊತ್ತೇ ಇಲ್ಲ ಎಂಬುದಾಗಿ ಕೋಳಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಲ ಹೇಳುವೆ” ಎಂದು ತನಗೆ ಯೇಸು ಹೇಳಿದ್ದ ಮಾತನ್ನು ಪೇತ್ರನು ನೆನಪು ಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
Kannada Holy Bible: Easy-to-Read Version. All rights reserved. © 1997 Bible League International