M’Cheyne Bible Reading Plan
ಸೂರ್ಯನು ನಿಶ್ಚಲನಾಗಿ ನಿಂತ ದಿನ
10 ಈ ಸಮಯದಲ್ಲಿ ಅದೋನೀಚೆದೆಕನು ಜೆರುಸಲೇಮಿನ ಅರಸನಾಗಿದ್ದನು. ಯೆಹೋಶುವನು ಆಯಿ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮತ್ತು ಅದನ್ನು ಸಂಪೂರ್ಣವಾಗಿ ನಾಶಮಾಡಿದ ಸಂಗತಿಯನ್ನು ಅವನು ಕೇಳಿದ್ದನು. ಜೆರಿಕೊ ಪಟ್ಟಣಕ್ಕೂ ಅದರ ರಾಜನಿಗೂ ಯೆಹೋಶುವನು ಹಾಗೆಯೇ ಮಾಡಿದ್ದನೆಂಬುದನ್ನೂ ಗಿಬ್ಯೋನಿನ ಜನರು ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದಾರೆಂಬುದನ್ನೂ ಅವನು ಕೇಳಿದ್ದನು. ಅವರು ಜೆರುಸಲೇಮಿಗೆ ಅತೀಸಮೀಪದಲ್ಲಿ ವಾಸವಾಗಿದ್ದರು. 2 ಆದ್ದರಿಂದ ಅದೋನೀಚೆದೆಕನು ಮತ್ತು ಅವನ ಜನರು ಬಹಳ ಹೆದರಿಕೊಂಡರು. ಗಿಬ್ಯೋನ್ “ಆಯಿ”ಯಂತೆ ಸಣ್ಣ ಊರಾಗಿರಲಿಲ್ಲ. ಗಿಬ್ಯೋನ್ ಬಹಳ ದೊಡ್ಡ ನಗರವಾಗಿತ್ತು. ಅದು ರಾಜಧಾನಿಯಷ್ಟು ದೊಡ್ಡ ಪಟ್ಟಣವಾಗಿತ್ತು. ಆ ಪಟ್ಟಣದ ಜನರೆಲ್ಲರೂ ಒಳ್ಳೆಯ ಯೋಧರಾಗಿದ್ದರು. ಆದ್ದರಿಂದ ಆ ಅರಸನು ಭಯಗೊಂಡಿದ್ದನು. 3 ಜೆರುಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನೊಂದಿಗೆ ಮಾತನಾಡಿದನು. ಅವನು ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ ಮತ್ತು ಎಗ್ಲೋನಿನ ಅರಸನಾದ ದೆಬೀರ್ ಇವರೊಂದಿಗೂ ಮಾತನಾಡಿದನು. ಜೆರುಸಲೇಮಿನ ಅರಸನು ಅವರಿಗೆ, 4 “ನನ್ನೊಂದಿಗೆ ಬಂದು ಗಿಬ್ಯೋನಿನ ಮೇಲೆ ಧಾಳಿಮಾಡಲು ಸಹಾಯಮಾಡಿರಿ. ಗಿಬ್ಯೋನ್ ಯೆಹೋಶುವನೊಂದಿಗೂ ಇಸ್ರೇಲರೊಂದಿಗೂ ಶಾಂತಿಒಪ್ಪಂದ ಮಾಡಿಕೊಂಡಿದೆ” ಎಂದು ಬೇಡಿಕೊಂಡನು.
5 ಆಗ ಆ ಐದು ಮಂದಿ ಅಮೋರಿಯರ ಅರಸರು ಸೈನ್ಯವನ್ನು ಸೇರಿಸಿದರು. (ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ ಮತ್ತು ಎಗ್ಲೋನಿನ ಅರಸ; ಇವರೇ ಆ ಐದು ಮಂದಿ ಅರಸರು.) ಆ ಸೈನ್ಯಗಳು ಗಿಬ್ಯೋನಿಗೆ ಹೋಗಿ ಪಟ್ಟಣವನ್ನು ಸುತ್ತುವರಿದು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದವು.
6 ಗಿಲ್ಗಾಲಿನ ಪಾಳೆಯದಲ್ಲಿದ್ದ ಯೆಹೋಶುವನಿಗೆ ಗಿಬ್ಯೋನ್ ನಗರದ ಜನರು ಒಂದು ಸಂದೇಶವನ್ನು ಕಳಿಸಿದರು. ಆ ಸಂದೇಶ ಹೀಗಿತ್ತು: “ನಾವು ನಿಮ್ಮ ಸೇವಕರಾಗಿದ್ದೇವೆ, ನಮ್ಮನ್ನು ನಿಸ್ಸಹಾಯಕರಾಗಿ ಬಿಡಬೇಡಿರಿ. ಬಂದು ನಮಗೆ ಸಹಾಯ ಮಾಡಿರಿ; ತ್ವರೆಮಾಡಿರಿ; ನಮ್ಮನ್ನು ಉಳಿಸಿರಿ. ಬೆಟ್ಟಪ್ರದೇಶದ ಅಮೋರಿಯರ ಅರಸರೆಲ್ಲಾ ತಮ್ಮ ಸೈನ್ಯವನ್ನು ಒಟ್ಟುಗೂಡಿಸಿ ನಮ್ಮ ವಿರುದ್ಧ ಯುದ್ಧಮಾಡುತ್ತಿದ್ದಾರೆ.”
7 ಆದ್ದರಿಂದ ಯೆಹೋಶುವನು ತನ್ನ ಎಲ್ಲ ಸೈನ್ಯದೊಂದಿಗೆ ಗಿಲ್ಗಾಲಿನಿಂದ ಹೊರಟನು. ಯೆಹೋಶುವನೊಂದಿಗೆ ಅತ್ಯುತ್ತಮವಾದ ಯೋಧರಿದ್ದರು. 8 ಯೆಹೋವನು ಯೆಹೋಶುವನಿಗೆ, “ಆ ಸೈನ್ಯಗಳಿಗೆ ಹೆದರಬೇಡ, ನೀನು ಅವರನ್ನು ಸೋಲಿಸುವಂತೆ ಮಾಡುತ್ತೇನೆ. ಆ ಸೈನ್ಯದ ಯಾರೊಬ್ಬರೂ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದನು.
9 ಯೆಹೋಶುವನು ಮತ್ತು ಅವನ ಸೈನ್ಯದವರು ಇಡೀರಾತ್ರಿ ಗಿಬ್ಯೋನಿನ ಕಡೆಗೆ ಪ್ರಯಾಣ ಮಾಡಿದರು. ಯೆಹೋಶುವನು ಬರುತ್ತಿದ್ದಾನೆಂಬುದು ವೈರಿಗಳಿಗೆ ಗೊತ್ತಿರಲಿಲ್ಲ. ಯೆಹೋಶುವನು ಅವರ ಮೇಲೆ ಧಾಳಿ ಮಾಡಿದಾಗ ಅವರಿಗೆ ಅತ್ಯಾಶ್ಚರ್ಯವಾಯಿತು.
10 ಇಸ್ರೇಲರು ಧಾಳಿಮಾಡಿದಾಗ ಯೆಹೋವನು ಆ ಶತ್ರು ಸೈನ್ಯವನ್ನು ಗಾಬರಿಗೊಳಿಸಿದನು. ಆದ್ದರಿಂದ ಇಸ್ರೇಲಿನ ಸೈನಿಕರು ಅವರನ್ನು ಸೋಲಿಸಿ ಮಹಾವಿಜಯವನ್ನು ಸಾಧಿಸಿದರು. ಇಸ್ರೇಲರು ಶತ್ರುಗಳನ್ನು ಗಿಬ್ಯೋನಿನಿಂದ ಬೇತ್‌ಹೋರೋನಿಗೆ ಹೋಗುವ ದಾರಿಯವರೆಗೂ ಬೆನ್ನಟ್ಟಿದರು. ಇಸ್ರೇಲರು ಅಜೇಕ ಮತ್ತು ಮಕ್ಕೇದದವರೆಗೆ ಅವರನ್ನು ಕೊಂದರು. 11 ಬೇತ್‌ಹೋರೋನ್ ಇಳಿಜಾರಿನಿಂದ ಅಜೇಕದವರೆಗೆ ಅವರನ್ನು ಕೊಂದರು. ಅವರು ಶತ್ರುಗಳನ್ನು ಬೆನ್ನಟ್ಟುತ್ತಿದ್ದಾಗ ಯೆಹೋವನು ಆಕಾಶದಿಂದ ಆಲಿಕಲ್ಲು ಮಳೆ ಸುರಿಯುವಂತೆ ಮಾಡಿದನು. ಬಹಳಷ್ಟು ಮಂದಿ ಶತ್ರುಗಳು ಈ ದೊಡ್ಡ ಆಲಿಕಲ್ಲುಗಳಿಂದಲೇ ಮೃತಪಟ್ಟರು. ಇಸ್ರೇಲರು ತಮ್ಮ ಖಡ್ಗಗಳಿಂದ ಕೊಂದ ಜನರಿಗಿಂತ ಹೆಚ್ಚು ಜನರು ಈ ಆಲಿಕಲ್ಲಿನ ಮಳೆಯಿಂದ ಸತ್ತರು.
12 ಆ ದಿನ ಯೆಹೋವನ ಸಹಾಯದಿಂದ ಇಸ್ರೇಲರು ಅಮೋರಿಯರನ್ನು ಸೋಲಿಸಿದರು. ಅಂದು ಯೆಹೋಶುವನು ಎಲ್ಲ ಜನರ ಎದುರಿಗೆ ನಿಂತುಕೊಂಡು ಯೆಹೋವನಿಗೆ ಹೀಗೆ ಮೊರೆಯಿಟ್ಟನು:
“ಸೂರ್ಯನೇ, ಗಿಬ್ಯೋನಿನ ಆಕಾಶದಲ್ಲಿ ನಿಂತಿರು, ಚಲಿಸಬೇಡ.
ಚಂದ್ರನೇ, ಅಯ್ಯಾಲೋನ್ ಕಣಿವೆಯ ಆಕಾಶದಲ್ಲಿ ನಿಂತಿರು, ಚಲಿಸಬೇಡ.”
13 ಆದ್ದರಿಂದ ಅವರು ಶತ್ರುಗಳನ್ನು ಸೋಲಿಸುವವರೆಗೆ ಸೂರ್ಯನೂ ಚಲಿಸಲಿಲ್ಲ, ಚಂದ್ರನೂ ಚಲಿಸಲಿಲ್ಲ. ಈ ಕಥೆಯು ಯಾಷಾರ್ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಸೂರ್ಯನು ಆಕಾಶದ ಮಧ್ಯದಲ್ಲಿ ನಿಂತನು. ಅವನು ಇಡೀ ದಿನ ಚಲಿಸಲಿಲ್ಲ. 14 ಅದಕ್ಕಿಂತ ಮೊದಲೆಂದೂ ಹೀಗಾಗಿರಲಿಲ್ಲ; ಆಮೇಲೆಯೂ ಆಗಲಿಲ್ಲ. ಯೆಹೋವನು ಒಬ್ಬ ಮಾನವನ ಆಜ್ಞೆಯನ್ನು ಪಾಲಿಸಿದ ದಿನ ಅದಾಗಿತ್ತು. ಇಸ್ರೇಲರಿಗೋಸ್ಕರ ಯೆಹೋವನು ನಿಜವಾಗಿಯೂ ಯುದ್ಧಮಾಡುತ್ತಿದ್ದನು.
15 ಇದಾದ ಮೇಲೆ ಯೆಹೋಶುವನು ಮತ್ತು ಅವನ ಸೈನಿಕರು ಗಿಲ್ಗಾಲಿನ ತಮ್ಮ ಪಾಳೆಯಕ್ಕೆ ಹಿಂದಿರುಗಿ ಹೋದರು. 16 ಯುದ್ಧ ನಡೆದಾಗ ಆ ಐದು ಮಂದಿ ಅರಸರು ಓಡಿಹೋದರು. ಅವರು ಮಕ್ಕೇದದ ಸಮೀಪದಲ್ಲಿದ್ದ ಗುಹೆಯಲ್ಲಿ ಅಡಗಿಕೊಂಡರು. 17 ಆ ಐದುಮಂದಿ ಅರಸರು ಆ ಗುಹೆಯಲ್ಲಿ ಅಡಗಿಕೊಂಡಿದ್ದನ್ನು ಯಾರೋ ನೋಡಿ ಯೆಹೋಶುವನಿಗೆ ತಿಳಿಸಿದರು. 18 ಯೆಹೋಶುವನು ತನ್ನ ಜನರಿಗೆ, “ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿರಿ. ಗುಹೆಯನ್ನು ಕಾಯುವುದಕ್ಕೆ ಕೆಲವು ಜನರು ಇಲ್ಲಿರಲಿ. 19 ಆದರೆ ನೀವು ಅಲ್ಲಿ ನಿಂತುಕೊಳ್ಳಬೇಡಿರಿ; ಶತ್ರುಗಳನ್ನು ಬೆನ್ನಟ್ಟಿ ಅವರ ಮೇಲೆ ಧಾಳಿಮಾಡಿ. ತಮ್ಮ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಲು ಅವರಿಗೆ ಅವಕಾಶಕೊಡಬೇಡಿ. ನಿಮ್ಮ ದೇವರಾದ ಯೆಹೋವನು ನಿಮಗೆ ಅವರ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆ” ಎಂದು ಆಜ್ಞಾಪಿಸಿದನು.
20 ಯೆಹೋಶುವನು ಮತ್ತು ಇಸ್ರೇಲಿನ ಜನರು ವೈರಿಗಳನ್ನು ಕೊಂದರು. ಆದರೆ ಕೆಲವು ಶತ್ರುಗಳು ಎತ್ತರವಾದ ಗೋಡೆಗಳುಳ್ಳ ತಮ್ಮ ಪಟ್ಟಣಗಳಿಗೆ ಹೋಗಿ ಅಡಗಿಕೊಳ್ಳಲು ಸಾಧ್ಯವಾಯಿತು. ಆ ಜನರು ಕೊಲ್ಲಲ್ಪಡಲಿಲ್ಲ. 21 ಯುದ್ಧದ ತರುವಾಯ ಯೆಹೋಶುವನ ಜನರು ಅವನ ಹತ್ತಿರ ಮಕ್ಕೇದಕ್ಕೆ ಬಂದರು. ಆ ದೇಶದಲ್ಲಿ ಇಸ್ರೇಲರ ವಿರುದ್ಧ ಮಾತಾಡಲು ಯಾರಿಗೂ ಧೈರ್ಯವಿರಲಿಲ್ಲ.
22 ಅನಂತರ ಯೆಹೋಶುವನು ಜನರಿಗೆ, “ಗುಹೆಯ ದ್ವಾರಕ್ಕೆ ಅಡ್ಡಲಾಗಿಟ್ಟ ಕಲ್ಲುಬಂಡೆಗಳನ್ನು ಸರಿಸಿ ಆ ಐದು ಮಂದಿ ಅರಸರನ್ನು ನನ್ನ ಹತ್ತಿರ ತನ್ನಿರಿ” ಎಂದು ಆಜ್ಞಾಪಿಸಿದನು. 23 ಯೆಹೋಶುವನ ಜನರು ಆ ಐದು ಮಂದಿ ಅರಸರನ್ನು ಗುಹೆಯ ಹೊರಗಡೆ ತಂದರು. ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ, ಎಗ್ಲೋನಿನ ಅರಸ ಇವರೇ ಆ ಐದು ಮಂದಿ. 24 ಅವರು ಆ ಐದು ಮಂದಿ ಅರಸರನ್ನು ಯೆಹೋಶುವನಲ್ಲಿಗೆ ತಂದರು. ಯೆಹೋಶುವನು ಇಸ್ರೇಲರನ್ನೆಲ್ಲ ಆ ಸ್ಥಳಕ್ಕೆ ಕರೆಸಿ ತನ್ನ ಸೈನ್ಯದ ಅಧಿಕಾರಿಗಳಿಗೆ “ಇಲ್ಲಿಗೆ ಬನ್ನಿ, ನಿಮ್ಮ ಪಾದಗಳನ್ನು ಈ ಅರಸರ ಕುತ್ತಿಗೆಗಳ ಮೇಲೆ ಇಡಿ” ಎಂದು ಹೇಳಿದನು. ಯೆಹೋಶುವನ ಸೈನ್ಯಾಧಿಕಾರಿಗಳು ಹತ್ತಿರಕ್ಕೆ ಬಂದು ತಮ್ಮ ಪಾದಗಳನ್ನು ಆ ಅರಸರ ಕುತ್ತಿಗೆಗಳ ಮೇಲೆ ಇಟ್ಟರು.
25 ಆಗ ಯೆಹೋಶುವನು ತನ್ನ ಜನರಿಗೆ, “ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ, ಅಂಜಬೇಡಿರಿ, ಇನ್ನು ಮುಂದೆ ನಮ್ಮ ಜೊತೆ ಹೋರಾಡುವ ಎಲ್ಲ ಶತ್ರುಗಳಿಗೆ ಯೆಹೋವನು ಏನು ಮಾಡುತ್ತಾನೆಂಬುದನ್ನು ನಿಮಗೆ ತೋರಿಸುತ್ತೇನೆ” ಎಂದು ಹೇಳಿದನು.
26 ಆಮೇಲೆ ಯೆಹೋಶುವನು ಆ ಐದು ಮಂದಿ ಅರಸರನ್ನು ಕೊಂದುಹಾಕಿದನು. ಅವರ ದೇಹಗಳನ್ನು ಐದು ಮರಗಳಿಗೆ ಸಾಯಂಕಾಲದವರೆಗೂ ನೇತುಹಾಕಿದನು. 27 ಸೂರ್ಯಾಸ್ತಮಾನದ ಹೊತ್ತಿಗೆ ಯೆಹೋಶುವನು ಆ ದೇಹಗಳನ್ನು ಮರದಿಂದ ಕೆಳಗಿಳಿಸಲು ಹೇಳಿದನು. ಆಮೇಲೆ ಅವರು ಎಲ್ಲಿ ಅಡಗಿಕೊಂಡಿದ್ದರೋ ಅದೇ ಗುಹೆಯಲ್ಲಿ ಆ ಶವಗಳನ್ನು ಬಿಸಾಡಿದರು. ಆ ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿದರು. ಆ ದೇಹಗಳು ಇಂದಿಗೂ ಆ ಗುಹೆಯಲ್ಲಿವೆ.
28 ಆ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿಕೊಂಡು ಆ ಪಟ್ಟಣದ ಅರಸನನ್ನು ಮತ್ತು ಜನರನ್ನು ಸಂಹರಿಸಿದನು. ಒಬ್ಬರೂ ಜೀವಂತವಾಗಿ ಉಳಿಯಲಿಲ್ಲ. ಯೆಹೋಶುವನು ಜೆರಿಕೊವಿನ ಅರಸನಿಗೆ ಮಾಡಿದಂತೆಯೇ ಮಕ್ಕೇದದ ಅರಸನಿಗೂ ಮಾಡಿದನು.
ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡದ್ದು
29 ಆಗ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಮಕ್ಕೇದದಿಂದ ಪ್ರಯಾಣ ಮಾಡಿ ಲಿಬ್ನಕ್ಕೆ ಹೋಗಿ ಆ ಪಟ್ಟಣದ ಮೇಲೆ ಧಾಳಿಮಾಡಿದರು. 30 ಇಸ್ರೇಲರು ಆ ಪಟ್ಟಣವನ್ನು ಮತ್ತು ಅದರ ಅರಸನನ್ನು ಸ್ವಾಧೀನಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಆ ಪಟ್ಟಣದ ಪ್ರತಿಯೊಬ್ಬ ವ್ಯಕ್ತಿಯನ್ನು ಇಸ್ರೇಲರು ಕೊಂದುಹಾಕಿದರು. ಒಬ್ಬರನ್ನೂ ಜೀವಸಹಿತ ಬಿಡಲಿಲ್ಲ. ಅವರು ಜೆರಿಕೊ ನಗರದ ಅರಸನಿಗೆ ಮಾಡಿದಂತೆಯೇ ಆ ಅರಸನಿಗೂ ಮಾಡಿದರು.
31 ಆಮೇಲೆ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಲಿಬ್ನವನ್ನು ಬಿಟ್ಟು ಲಾಕೀಷಿಗೆ ಹೋದರು. ಯೆಹೋಶುವನು ಮತ್ತು ಅವನ ಜನರು ಲಾಕೀಷಿಗೆ ಮುತ್ತಿಗೆಹಾಕಿ ಅದರ ಮೇಲೆ ಧಾಳಿಮಾಡಿದರು. 32 ಇಸ್ರೇಲರ ಜನರು ಲಾಕೀಷ್ ಪಟ್ಟಣವನ್ನು ವಶಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಅವರು ಎರಡನೆಯ ದಿನ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಹಾಕಿದರು. ಅವರು ಲಿಬ್ನ ಪಟ್ಟಣಕ್ಕೆ ಮಾಡಿದಂತೆ ಇದಕ್ಕೂ ಮಾಡಿದರು. 33 ಇದೇ ಸಮಯದಲ್ಲಿ ಗೆಜೆರಿನ ಅರಸನಾದ ಹೋರಾಮನು ಲಾಕೀಷಿನವರ ಸಹಾಯಕ್ಕೆ ಬಂದನು. ಯೆಹೋಶುವನು ಅವನನ್ನು ಮತ್ತು ಅವನ ಸೈನ್ಯವನ್ನು ಸೋಲಿಸಿದನು. ಅಲ್ಲಿ ಯಾರನ್ನೂ ಜೀವಸಹಿತ ಬಿಡಲಿಲ್ಲ.
34 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ಲಾಕೀಷಿನಿಂದ ಎಗ್ಲೋನಿಗೆ ಪ್ರಯಾಣ ಮಾಡಿದರು. ಅವರು ಎಗ್ಲೋನ್ ಪಟ್ಟಣಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಧಾಳಿಮಾಡಿದರು. 35 ಆ ದಿವಸ ಅವರು ಆ ನಗರವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿದ್ದ ಎಲ್ಲ ಜನರನ್ನು ಕೊಂದುಹಾಕಿದರು. ಅವರು ಲಾಕೀಷಿನಲ್ಲಿ ಮಾಡಿದಂತೆ ಇಲ್ಲಿಯೂ ಮಾಡಿದರು.
36 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ಎಗ್ಲೋನಿನಿಂದ ಹೆಬ್ರೋನಿಗೆ ಪ್ರಯಾಣ ಮಾಡಿ ಹೆಬ್ರೋನಿನ ಮೇಲೆ ಧಾಳಿಮಾಡಿದರು. 37 ಅವರು ಹೆಬ್ರೋನ್ ಪಟ್ಟಣವನ್ನೂ ಅದರ ರಾಜನನ್ನೂ ಮತ್ತು ಅದರ ಸಮೀಪದಲ್ಲಿದ್ದ ಎಲ್ಲ ಸಣ್ಣಪುಟ್ಟ ಊರುಗಳನ್ನೂ ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದ ಎಲ್ಲರನ್ನೂ ಕೊಂದರು. ಅಲ್ಲಿ ಯಾರೊಬ್ಬರೂ ಜೀವಂತವಾಗಿ ಉಳಿಯಲಿಲ್ಲ. ಅವರು ಎಗ್ಲೋನಿನಲ್ಲಿ ಮಾಡಿದಂತೆಯೇ ಇಲ್ಲಿಯೂ ಮಾಡಿದರು. ಅವರು ಪಟ್ಟಣವನ್ನು ನಾಶಮಾಡಿದರು ಮತ್ತು ಅಲ್ಲಿದ್ದ ಎಲ್ಲ ಜನರನ್ನು ಕೊಂದರು.
38 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ದೆಬೀರಿಗೆ ಹೋಗಿ ಆ ಪಟ್ಟಣದ ಮೇಲೆ ಧಾಳಿಮಾಡಿದರು. 39 ಅವರು ಆ ಪಟ್ಟಣವನ್ನೂ ಅದರ ಅರಸನನ್ನೂ ದೆಬೀರಿನ ಸಮೀಪದ ಎಲ್ಲ ಸಣ್ಣಪುಟ್ಟ ಊರುಗಳನ್ನೂ ಸ್ವಾಧೀನಪಡಿಸಿಕೊಂಡರು. ಅವರು ಆ ಪಟ್ಟಣದಲ್ಲಿದ್ದ ಎಲ್ಲರನ್ನು ಕೊಂದರು. ಅಲ್ಲಿ ಯಾರೊಬ್ಬರೂ ಸಜೀವವಾಗಿ ಉಳಿಯಲಿಲ್ಲ. ಇಸ್ರೇಲರು ಹೆಬ್ರೋನ್ ಮತ್ತು ಅದರ ಅರಸನಿಗೆ ಮಾಡಿದಂತೆಯೇ ದೆಬೀರ್ ಮತ್ತು ಅದರ ಅರಸನಿಗೆ ಮಾಡಿದರು. ಲಿಬ್ನ ಮತ್ತು ಅದರ ಅರಸನಿಗೂ ಹೀಗೆಯೇ ಮಾಡಲಾಗಿತ್ತು.
40 ಹೀಗೆ ಯೆಹೋಶುವನು ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಪೂರ್ವದ ಇಳಕಲಿನ ಪ್ರದೇಶ, ಈ ಎಲ್ಲ ಪ್ರದೇಶಗಳ ಅರಸರನ್ನು ಸೋಲಿಸಿದನು. ಇಸ್ರೇಲಿನ ದೇವರಾದ ಯೆಹೋವನು ಎಲ್ಲಾ ಜನರನ್ನು ಕೊಲ್ಲು ಎಂದು ಯೆಹೋಶುವನಿಗೆ ಹೇಳಿದ್ದನು. ಅದಕ್ಕಾಗಿ ಯೆಹೋಶುವನು ಆ ಸ್ಥಳಗಳಲ್ಲಿ ಯಾರೊಬ್ಬರನ್ನೂ ಸಜೀವವಾಗಿ ಉಳಿಸಲಿಲ್ಲ.
41 ಯೆಹೋಶುವನು ಕಾದೇಶ್‌ಬರ್ನೇಯದಿಂದ ಗಾಜಾದವರೆಗಿನ ಎಲ್ಲ ಪಟ್ಟಣಗಳನ್ನು ಗೆದ್ದುಕೊಂಡನು. ಅವನು ಈಜಿಪ್ಟಿನ ಗೋಷೆನ್ ಪ್ರಾಂತದಿಂದ ಗಿಬ್ಯೋನಿನವರೆಗೆ ಇದ್ದ ಎಲ್ಲ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡನು. 42 ಯೆಹೋಶುವನು ಆ ಎಲ್ಲ ಪಟ್ಟಣಗಳನ್ನು ಮತ್ತು ಅವುಗಳ ಅರಸರನ್ನು ಒಂದೇ ದಂಡೆಯಾತ್ರೆಯಲ್ಲಿ ಸ್ವಾಧೀನಪಡಿಸಿಕೊಂಡನು. ಇಸ್ರೇಲಿನ ದೇವರಾದ ಯೆಹೋವನು ಇಸ್ರೇಲಿನವರಿಗಾಗಿ ಯುದ್ಧ ಮಾಡುತ್ತಿದ್ದುದರಿಂದ ಯೆಹೋಶುವನಿಗೆ ಇದು ಸಾಧ್ಯವಾಯಿತು. 43 ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ಜನರೆಲ್ಲರು ಗಿಲ್ಗಾಲಿನಲ್ಲಿದ್ದ ತಮ್ಮ ಪಾಳೆಯಕ್ಕೆ ಹಿಂತಿರುಗಿದರು.
ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.
142 ನಾನು ಯೆಹೋವನಿಗೆ ಮೊರೆಯಿಡುವೆನು;
ಯೆಹೋವನನ್ನು ಕೂಗಿಕೊಳ್ಳುವೆನು.
2 ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
ಆತನಿಗೆ ಅರಿಕೆಮಾಡಿಕೊಳ್ಳುವೆನು.
3 ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.
4 ನಾನು ಸುತ್ತಮುತ್ತ ನೋಡಿದರೂ
ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
5 ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಆಶ್ರಯಸ್ಥಾನವೂ ನೀನೇ,
ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
7 ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
ನೀತಿವಂತರು ನನ್ನೊಂದಿಗೆ ಕೊಂಡಾಡುವರು.
ಸ್ತುತಿಗೀತೆ. ರಚನೆಗಾರ: ದಾವೀದ.
143 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ನನ್ನ ಬಿನ್ನಹಕ್ಕೆ ಕಿವಿಗೊಡು.
ನಿನ್ನ ನೀತಿಗೂ ನಂಬಿಗಸ್ತಿಕೆಗೂ ತಕ್ಕಂತೆ ನನ್ನ ಪ್ರಾರ್ಥನೆಗೆ ಉತ್ತರ ಕೊಡು.
2 ನಿನ್ನ ಸೇವಕನಾದ ನನಗೆ ತೀರ್ಪುಮಾಡಬೇಡ.
ನನ್ನ ಇಡೀ ಜೀವಮಾನದಲ್ಲಿ ನಿರಪರಾಧಿಯೆಂಬ ತೀರ್ಪನ್ನು ಹೊಂದಲು ನನಗೆ ಸಾಧ್ಯವೇ ಇಲ್ಲ.
3 ಆದರೆ ನನ್ನ ಶತ್ರುಗಳು ನನ್ನನ್ನು ಬೆನ್ನಟ್ಟುತ್ತಿದ್ದಾರೆ.
ಅವರು ನನ್ನ ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾರೆ.
ಬಹುಕಾಲದ ಹಿಂದೆ ಸತ್ತವರನ್ನು ಕಾರ್ಗತ್ತಲೆಯ ಸಮಾಧಿಗೆ ನೂಕುವಂತೆ
ಅವರು ನನ್ನನ್ನು ನೂಕುತ್ತಿದ್ದಾರೆ.
4 ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಧೈರ್ಯವು ಕಳೆದುಹೋಗುತ್ತಿದೆ.
5 ಆದರೆ ಬಹುಕಾಲದ ಹಿಂದೆ ನಡೆದವುಗಳನ್ನು ಜ್ಞಾಪಿಸಿಕೊಳ್ಳುವೆನು.
ನೀನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ಆಲೋಚಿಸುವೆನು.
6 ನನ್ನ ಕೈಗಳನ್ನು ಮೇಲೆತ್ತಿ ನಿನಗೆ ಪ್ರಾರ್ಥಿಸುವೆನು.
ಒಣಭೂಮಿಯು ಮಳೆಗಾಗಿ ಕಾಯುವಂತೆ ನಾನು ನಿನ್ನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು.
ನನ್ನ ಆತ್ಮವು ಕುಂದಿಹೋಗುತ್ತಿದೆ.
ನೀನು ನನಗೆ ವಿಮುಖನಾಗಬೇಡ.
ಸತ್ತು ಸಮಾಧಿಯಲ್ಲಿರುವವರಂತೆ ನನ್ನನ್ನು ಸಾವಿಗೀಡು ಮಾಡಬೇಡ.
8 ಮುಂಜಾನೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನಾನು ಮಾಡಬೇಕಾದವುಗಳನ್ನು ನನಗೆ ತೋರಿಸು.
ನಾನು ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿದ್ದೇನೆ!
9 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಶತ್ರುಗಳಿಂದ ನನ್ನನ್ನು ರಕ್ಷಿಸು.
10 ನಿನ್ನ ಇಚ್ಛೆಗನುಸಾರವಾಗಿ ನಾನು ಮಾಡಬೇಕಾದುದನ್ನು ನನಗೆ ತೋರಿಸಿಕೊಡು.
ನೀನೇ ನನ್ನ ದೇವರು.
ನನಗೆ ಒಳ್ಳೆಯವನಾಗಿದ್ದು ಸುರಕ್ಷಿತವಾದ ದಾರಿಯಲ್ಲಿ ನಡೆಸು.
11 ಯೆಹೋವನೇ, ನನ್ನನ್ನು ಉಜ್ಜೀವಿಸಮಾಡು.
ಆಗ ಜನರು ನಿನ್ನ ಹೆಸರನ್ನು ಕೊಂಡಾಡುವರು.
ನೀನು ನಿಜವಾಗಿಯೂ ಒಳ್ಳೆಯವನೆಂಬುದನ್ನು ನನಗೆ ತೋರಿಸಿಕೊಡು.
ನನ್ನನ್ನು ಶತ್ರುಗಳಿಂದ ರಕ್ಷಿಸು.
12 ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನನ್ನನ್ನು ಕೊಲ್ಲಬೇಕೆಂದಿರುವ ಶತ್ರುಗಳನ್ನು ಸೋಲಿಸು.
ನಾನು ನಿನ್ನ ಸೇವಕನಾಗಿರುವೆ.
4 ಇದು ಯೆಹೋವನ ಸಂದೇಶ:
“ಇಸ್ರೇಲೇ, ನೀನು ಹಿಂತಿರುಗಿ ಬರಲು ಇಚ್ಛಿಸಿದರೆ
ನನ್ನಲ್ಲಿಗೆ ಹಿಂತಿರುಗಿ ಬಾ.
ನಿನ್ನ ವಿಗ್ರಹಗಳನ್ನು ಎಸೆದುಬಿಡು.
ನನ್ನಿಂದ ದೂರಸರಿದು ಅಲೆದಾಡಬೇಡ.
2 ನೀನು ಹೀಗೆ ಮಾಡಿದರೆ
ನನ್ನ ಹೆಸರಿನ ಮೇಲೆ ಪ್ರಮಾಣ ಮಾಡಲು ಶಕ್ತಳಾಗುವೆ.
‘ಹಾದು, ಯೆಹೋವನಾಣೆ’ ಎಂದು ಹೇಳಶಕ್ತಳಾಗುವೆ.
ನೀನು ಆ ಪದಗಳನ್ನು ಸತ್ಯವಾಗಿಯೂ ಪ್ರಾಮಾಣಿಕವಾಗಿಯೂ ಸರಿಯಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ.
ನೀನು ಹೀಗೆ ಮಾಡಿದರೆ,
ಎಲ್ಲಾ ಜನಾಂಗಗಳು ಯೆಹೋವನ ಆಶೀರ್ವಾದವನ್ನು ಪಡೆಯುತ್ತವೆ.
ಆತನ ಕಾರ್ಯಗಳಿಗಾಗಿ
ಆತನಿಗೆ ಸ್ತೋತ್ರ ಮಾಡುತ್ತವೆ.”
3 ಯೆಹೂದ ಜನಾಂಗದ ಜನರಿಗೂ ಜೆರುಸಲೇಮ್ ನಗರದ ಜನರಿಗೂ ಯೆಹೋವನು ಹೀಗೆ ಹೇಳುತ್ತಾನೆ:
“ನಿಮ್ಮ ಹೊಲಗಳಲ್ಲಿ ನೇಗಿಲು ಹೊಡೆದಿಲ್ಲ,
ಆ ಹೊಲಗಳನ್ನು ನೇಗಿಲು ಹೊಡೆದು ಸ್ವಚ್ಛಮಾಡಿರಿ.
ಮುಳ್ಳುಗಳಲ್ಲಿ ಬೀಜಗಳನ್ನು ಬಿತ್ತಬೇಡಿರಿ.
4 ಯೆಹೋವನ ಮನುಷ್ಯರಾಗಿರಿ,
ನಿಮ್ಮ ಹೃದಯ ಪರಿವರ್ತನೆ[a] ಮಾಡಿಕೊಳ್ಳಿರಿ.
ಯೆಹೂದದ ಜನಗಳೇ, ಜೆರುಸಲೇಮಿನ ಜನರೇ, ನೀವು ಬದಲಾಗದಿದ್ದರೆ
ನನಗೆ ವಿಪರೀತ ಕೋಪ ಬರುವುದು.
ನನ್ನ ಕೋಪವು ಬೆಂಕಿಯ ಜ್ವಾಲೆಯಂತೆ ಭರದಿಂದ ಹಬ್ಬುವದು.
ನನ್ನ ಕೋಪವು ನಿಮ್ಮನ್ನು ಸುಟ್ಟು ಬೂದಿ ಮಾಡುವುದು.
ಯಾರಿಂದಲೂ ಆ ಬೆಕಿಯನ್ನು ಆರಿಸುವುದು ಸಾಧ್ಯವಾಗುವದಿಲ್ಲ.
ಇದೆಲ್ಲ ಏಕೆ ನಡೆಯುವುದು? ನೀವು ಮಾಡಿದ ದುಷ್ಕೃತ್ಯಗಳಿಂದಲೇ.”
ಉತ್ತರ ದಿಕ್ಕಿನಿಂದ ವಿಪತ್ತು
5 “ಈ ಸಂದೇಶವನ್ನು ಯೆಹೂದ ಜನರಲ್ಲಿ ಸಾರಿರಿ:
ಜೆರುಸಲೇಮ್ ನಗರದ ಪ್ರತಿಯೊಬ್ಬನಿಗೂ
ದೇಶದಲ್ಲೆಲ್ಲಾ ತುತ್ತೂರಿಗಳನ್ನು ಊದಿರಿ ಎಂದು ಹೇಳಿರಿ.
ದೊಡ್ಡ ಧ್ವನಿಯಲ್ಲಿ
‘ಒಂದು ಕಡೆ ಸೇರೋಣ ಬನ್ನಿ,
ರಕ್ಷಣೆಗಾಗಿ ಭದ್ರವಾದ ನಗರಗಳಿಗೆ ಓಡಿಹೋಗೋಣ ಬನ್ನಿ’ ಎಂದು ಕೂಗಿ ಹೇಳಿರಿ.
6 ಚೀಯೋನಿನ ಕಡೆಗೆ ಧ್ವಜವನ್ನು ಎತ್ತಿ ಸಂಕೇತ ಕೊಡಿ.
ನಿಲ್ಲಬೇಡಿ. ನಿಮ್ಮ ಜೀವ ರಕ್ಷಣೆಗಾಗಿ ಓಡಿರಿ.
ನಾನು ಉತ್ತರದಿಂದ ವಿಪತ್ತನ್ನು ತರುತ್ತಿರುವುದರಿಂದ ನೀವು ಹೀಗೆ ಮಾಡಬೇಕು.
ನಾನು ಭಯಂಕರವಾದ ವಿನಾಶವನ್ನು ಬರಮಾಡಲಿದ್ದೇನೆ.”
7 ತನ್ನ ಗುಹೆಯಿಂದ ಒಂದು “ಸಿಂಹವು” ಹೊರಬಂದಿದೆ.
ಜನಾಂಗಗಳ ವಿನಾಶಕವಾದ ಸಿಂಹವು ಹೆಜ್ಜೆ ಹಾಕುತ್ತಿದೆ.
ಅದು ನಿಮ್ಮ ಪ್ರದೇಶವನ್ನು ನಾಶಮಾಡಲು ತನ್ನ ಗುಹೆಯನ್ನು ಬಿಟ್ಟು ಹೊರಟಿದೆ.
ನಿಮ್ಮ ಪಟ್ಟಣಗಳೆಲ್ಲ ನಾಶಹೊಂದುವವು.
ಅಲ್ಲಿ ವಾಸಿಸಲು ಜನರೇ ಇಲ್ಲದಂತಾಗುವುದು.
8 ಆದ್ದರಿಂದ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ದೊಡ್ಡ ಧ್ವನಿಯಿಂದ ಗೋಳಾಡಿರಿ.
ಏಕೆಂದರೆ ಯೆಹೋವನು ನಮ್ಮ ಮೇಲೆ ತುಂಬ ಕೋಪಗೊಂಡಿದ್ದಾನೆ.
9 ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ
ರಾಜನು ಮತ್ತು ನಾಯಕರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
ಯಾಜಕರು ಭಯಪಡುವರು;
ಪ್ರವಾದಿಗಳು ಬೆರಗಾಗುವರು.”
10 ಆಗ ಯೆರೆಮೀಯನೆಂಬ ನಾನು, “ನನ್ನ ಒಡೆಯನಾದ ಯೆಹೋವನೇ, ನೀನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮೋಸ ಮಾಡಿದೆ, ‘ನೀವು ಶಾಂತಿಯಿಂದ ಇರುವಿರಿ’ ಎಂದು ನೀನು ಅವರಿಗೆ ಹೇಳಿದೆ. ಆದರೆ ಈಗ ಅವರ ಕತ್ತಿನ ಮೇಲೆ ಖಡ್ಗ ಇದೆ” ಅಂದೆನು.
11 ಆ ಸಮಯದಲ್ಲಿ ಯೆಹೂದ ಮತ್ತು ಜೆರುಸಲೇಮಿನ ಜನರಿಗೆ
ಒಂದು ಸಂದೇಶವನ್ನು ಕೊಡಲಾಗುವುದು.
“ಬೋಳುಬೆಟ್ಟಗಳಿಂದ ಒಂದು ಬಿಸಿಗಾಳಿಯು ಬೀಸುವುದು.
ಅದು ಮರಳುಗಾಡಿನಿಂದ ಬೀಸುವುದು.
ಇದು ರೈತನು ತೂರಿ ಹೊಟ್ಟಿನಿಂದ ಕಾಳನ್ನು ಬೇರ್ಪಡಿಸಲು
ಬೇಕಾಗುವ ಸೌಮ್ಯವಾದ ಗಾಳಿಯಂತಲ್ಲ.
12 ಇದು ಅದಕ್ಕಿಂತಲೂ ಬಹು ಬಿರುಸಾಗಿ ಬೀಸುತ್ತದೆ.
ಅದು ನನ್ನಿಂದ ಬರುತ್ತದೆ.
ಈಗ ಯೆಹೂದದ ಜನರಿಗೆ ನ್ಯಾಯವಾದ ದಂಡನೆಗಳನ್ನು ವಿಧಿಸುವೆನು.”
13 ಇಗೋ, ಆ ಶತ್ರುವು ಮೇಘಮಾಲೆಯಂತೆ ಬರುತ್ತಿದ್ದಾನೆ.
ಅವನ ರಥಗಳು ಬಿರುಗಾಳಿಯಂತೆ ಕಾಣುತ್ತಿವೆ.
ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಓಡುತ್ತಿವೆ.
ಇದು ನಮಗೆ ತುಂಬ ಅಪಾಯಕಾರಿಯಾಗಿದೆ;
ನಾವು ಹಾಳಾಗಿಹೋದೆವು.
14 ಜೆರುಸಲೇಮಿನ ಜನರೇ, ನಿಮ್ಮ ಹೃದಯದ ಕೆಟ್ಟತನವನ್ನು ತೊಳೆದುಕೊಳ್ಳಿರಿ.
ರಕ್ಷಣೆಹೊಂದಲು ನಿಮ್ಮ ಹೃದಯಗಳನ್ನು ಪವಿತ್ರಗೊಳಿಸಿರಿ.
ದುರಾಲೋಚನೆಗಳನ್ನು ಮುಂದುವರಿಸಬೇಡಿರಿ.
15 ಕೇಳಿರಿ, ದಾನ್ ಪ್ರದೇಶದಿಂದ
ದೂತನ ಸ್ವರವು ಕೇಳಿಬರುತ್ತಿದೆ.
ಎಫ್ರಾಯೀಮ್ ಬೆಟ್ಟಪ್ರದೇಶದಿಂದ
ಒಬ್ಬನು ಕೆಟ್ಟ ಸಮಾಚಾರವನ್ನು ತರುತ್ತಿದ್ದಾನೆ.
16 “ಇದನ್ನು ಈ ಜನಾಂಗಕ್ಕೆ ತಿಳಿಸಿರಿ.
ಜೆರುಸಲೇಮಿನ ಜನರಲ್ಲಿ ಈ ಸಮಾಚಾರವನ್ನು ಹರಡಿರಿ.
ಬಹುದೂರದೇಶದಿಂದ ಶತ್ರುಗಳು ಬರುತ್ತಿದ್ದಾರೆ.
ಆ ಶತ್ರುಗಳು ಯೆಹೂದದ ನಗರಗಳ ವಿರುದ್ಧ
ಯುದ್ಧದ ಘೋಷಣೆಗಳನ್ನು ಕೂಗುತ್ತಿದ್ದಾರೆ.
17 ಹೊಲವನ್ನು ಕಾಯುವ ಜನರಂತೆ
ವೈರಿಗಳು ಜೆರುಸಲೇಮನ್ನು ಮುತ್ತಿಕೊಂಡಿದ್ದಾರೆ.
ಯೆಹೂದವೇ, ನೀನು ನನಗೆ ತಿರುಗಿಬಿದ್ದೆ,
ಅದಕ್ಕಾಗಿ ನಿನ್ನ ಮೇಲೆ ಶತ್ರುಗಳು ಬೀಳುತ್ತಿದ್ದಾರೆ”
ಎಂದು ಯೆಹೋವನು ಹೇಳುವನು.
18 “ನಿನ್ನ ನಡತೆಯೂ ನಿನ್ನ ಕೃತ್ಯಗಳೂ
ನಿನಗೆ ಈ ಕಷ್ಟವನ್ನು ತಂದವು.
ನಿನ್ನ ದುಷ್ಟತನವೇ ನಿನ್ನ ಜೀವನವನ್ನು ಇಷ್ಟು ಕಷ್ಟಕರವನ್ನಾಗಿ ಮಾಡಿದೆ.
ನಿನ್ನ ದುಷ್ಟತನವೇ ನಿನ್ನ ಮನಸ್ಸಿಗೆ
ಆಳವಾದ ನೋವನ್ನು ಉಂಟುಮಾಡಿದೆ.”
ಯೆರೆಮೀಯನ ಗೋಳಾಟ
19 ಅಯ್ಯೋ, ನನ್ನ ದುಃಖ ಮತ್ತು ಚಿಂತೆ ನನ್ನ ಹೊಟ್ಟೆಯಲ್ಲಿ ಸಂಕಟವನ್ನು ಉಂಟುಮಾಡುತ್ತಿವೆ.
ನೋವಿನಿಂದ ನಾನು ಬಾಗಿಹೋಗಿದ್ದೇನೆ.
ನಾನು ತುಂಬ ಹೆದರಿಕೊಂಡಿದ್ದೇನೆ.
ನನ್ನ ಹೃದಯವು ಒಳಗೆ ತಳಮಳಗೊಳ್ಳುತ್ತಿದೆ.
ನಾನು ಬಾಯಿ ಮುಚ್ಚಿಕೊಂಡಿರಲಾರೆ.
ಏಕೆಂದರೆ, ನಾನು ತುತ್ತೂರಿಯ ಶಬ್ದವನ್ನು ಕೇಳಿದ್ದೇನೆ.
ಆ ತುತ್ತೂರಿಯು ಸೈನ್ಯವನ್ನು ಯುದ್ಧಕ್ಕೆ ಕರೆಯುತ್ತಿದೆ.
20 ವಿನಾಶನದ ಮೇಲೆ ವಿನಾಶವು ಬಂದು
ಇಡೀ ದೇಶವೇ ಹಾಳಾಗಿದೆ.
ಫಕ್ಕನೆ ನನ್ನ ಗುಡಾರಗಳು ಹಾಳಾದವು.
ನನ್ನ ಪರದೆಗಳು ಹರಿದುಹೋದವು.
21 ಯೆಹೋವನೇ, ಎಷ್ಟು ಹೊತ್ತಿನವರೆಗೆ ನಾನು ಯುದ್ಧ ಧ್ವಜಗಳನ್ನು ನೋಡಬೇಕು?
ಎಷ್ಟು ಹೊತ್ತಿನವರೆಗೆ ನಾನು ಯುದ್ಧದ ತುತ್ತೂರಿಗಳ ಶಬ್ಧವನ್ನು ಕೇಳಬೇಕು?
22 ದೇವರು, “ನನ್ನ ಜನರು ಮೂರ್ಖರಾಗಿದ್ದಾರೆ.
ಅವರು ನನ್ನನ್ನು ಅರಿಯದವರಾಗಿದ್ದಾರೆ.
ಅವರು ಮೂಢ ಮಕ್ಕಳಾಗಿದ್ದಾರೆ.
ಅವರು ಅವಿವೇಕಿಗಳಾಗಿದ್ದಾರೆ.
ಅವರು ದುಷ್ಕೃತ್ಯದಲ್ಲಿ ನಿಪುಣರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡಲರಿಯದವರಾಗಿದ್ದಾರೆ” ಎಂದನು.
ವಿಪತ್ತಿನ ಆಗಮನ
23 ನಾನು ಭೂಮಿಯ ಕಡೆಗೆ ನೋಡಿದೆ,
ಭೂಮಿಯು ಬರಿದಾಗಿತ್ತು.
ಭೂಮಿಯ ಮೇಲೇನೂ ಇರಲಿಲ್ಲ.
ನಾನು ಆಕಾಶದ ಕಡೆಗೆ ನೋಡಿದೆ,
ಅದರ ಬೆಳಕು ಹೋಗಿಬಿಟ್ಟಿತ್ತು.
24 ನಾನು ಪರ್ವತಗಳ ಕಡೆಗೆ ನೋಡಿದೆ,
ಅವುಗಳು ನಡುಗುತ್ತಿದ್ದವು.
ಎಲ್ಲಾ ಬೆಟ್ಟಗಳು ಅದರುತ್ತಿದ್ದವು.
25 ನಾನು ನೋಡಿದರೂ ಅಲ್ಲಿ ಜನರಿರಲಿಲ್ಲ.
ಆಕಾಶದ ಎಲ್ಲಾ ಪಕ್ಷಿಗಳು ಹಾರಿಹೋಗಿದ್ದವು.
26 ನಾನು ನೋಡಿದಾಗ ಫಲವತ್ತಾದ ಭೂಮಿಯು ಮರಳುಗಾಡಾಗಿತ್ತು.
ಆ ಪ್ರದೇಶದ ಎಲ್ಲಾ ನಗರಗಳು ಹಾಳಾಗಿ ಹೋಗಿದ್ದವು.
ಯೆಹೋವನು ತನ್ನ ಭಯಂಕರವಾದ ಕೋಪದಿಂದ ಇದನ್ನು ಮಾಡಿದನು.
27 ಯೆಹೋವನು ಹೀಗೆ ಹೇಳುತ್ತಾನೆ:
“ಇಡೀ ದೇಶವು ಹಾಳಾಗುವುದು.
ಆದರೆ ನಾನು ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ.
28 ಈ ಪ್ರದೇಶದ ಜನರು ಸತ್ತವರಿಗಾಗಿ ಅಳುವರು.
ಆಕಾಶವು ಕಪ್ಪಾಗುವುದು.
ನಾನು ಹೇಳಿದ್ದೇನೆ, ಅದು ಬದಲಾಗುವುದಿಲ್ಲ.
ನಾನು ಒಂದು ನಿರ್ಣಯ ತೆಗೆದುಕೊಂಡಿದ್ದೇನೆ, ನಾನು ನನ್ನ ಮನಸ್ಸನ್ನು ಬದಲಾಯಿಸುವದಿಲ್ಲ.”
29 ಯೆಹೂದದ ಜನರು ಕುದುರೆಗಳ, ಸವಾರರ,
ಬಿಲ್ಲುಗಾರರ ಶಬ್ಧಗಳನ್ನು ಕೇಳಿ ಓಡಿಹೋಗುವರು.
ಕೆಲವು ಜನರು ಗುಹೆಯಲ್ಲಿ ಅಡಗಿಕೊಳ್ಳುವರು.
ಕೆಲವರು ಪೊದೆಗಳಲ್ಲಿ ಅವಿತುಕೊಳ್ಳುವರು.
ಕೆಲವರು ಬೆಟ್ಟಗಳನ್ನು ಹತ್ತಿಹೋಗುವರು.
ಯೆಹೂದದ ಎಲ್ಲಾ ನಗರಗಳು ಬರಿದಾಗುವವು.
ಅಲ್ಲಿ ಒಬ್ಬರೂ ಇರುವದಿಲ್ಲ.
30 ಹಾಳಾಗಿಹೋದ ಯೆಹೂದವೇ,
ನೀನು ಮಾಡುತ್ತಿರುವುದೇನು?
ಅತ್ಯುತ್ತಮವಾದ ಕೆಂಪುಬಣ್ಣದ ಪೋಷಾಕನ್ನು ನೀನು ಧರಿಸಿಕೊಳ್ಳುತ್ತಿರುವುದೇಕೆ?
ಸುವರ್ಣಾಭರಣಗಳಿಂದ ನಿನ್ನನ್ನು ಏಕೆ ಅಲಂಕರಿಸಿಕೊಳ್ಳುತ್ತಿರುವೆ?
ಕಣ್ಣಿಗೆ ಕಾಡಿಗೆಯನ್ನು ಏಕೆ ಹಚ್ಚುತ್ತಿರುವೆ?
ನೀನು ಅಲಂಕಾರ ಮಾಡಿಕೊಳ್ಳುವದೆಲ್ಲ ವ್ಯರ್ಥ.
ನಿನ್ನ ಪ್ರಿಯತಮರು ನಿನ್ನನ್ನು ತಿರಸ್ಕರಿಸುತ್ತಾರೆ.
ಅವರು ನಿನ್ನನ್ನು ಕೊಲೆಮಾಡುವ ಪ್ರಯತ್ನದಲ್ಲಿದ್ದಾರೆ.
31 ಮೊದಲನೆ ಹೆರಿಗೆಯ ಸಮಯದಲ್ಲಿ
ವೇದನೆಪಡುವ ಹೆಂಗಸಿನ ಸ್ವರದಂತಿರುವ ಒಂದು ಧ್ವನಿಯನ್ನು ನಾನು ಕೇಳಿದೆ,
ಇದು ಚೀಯೋನ್ ನಗರಿಯ ಮಗಳ ಕೂಗಾಟ.
ಅವಳು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಪ್ರಾರ್ಥಿಸುತ್ತಾ,
“ಅಯ್ಯೋ, ನಾನು ಮೂರ್ಛೆ, ಹೋಗುವುದರಲ್ಲಿದ್ದೇನೆ,
ನನ್ನ ಸುತ್ತಲೆಲ್ಲ ಕೊಲೆಗಡುಕರಿದ್ದಾರೆ” ಎಂದು ಹೇಳುತ್ತಿದ್ದಾಳೆ.
ಅತ್ಯುತ್ತಮ ಸ್ಥಾನ ಯಾರಿಗೆ?
(ಮಾರ್ಕ 9:33-37; ಲೂಕ 9:46-48)
18 ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕರಾಜ್ಯದಲ್ಲಿ ಯಾರಿಗೆ ಅತ್ಯುತ್ತಮ ಸ್ಥಾನ ದೊರೆಯುತ್ತದೆ” ಎಂದು ಕೇಳಿದರು.
2 ಯೇಸು ಚಿಕ್ಕ ಮಗುವನ್ನು ತನ್ನ ಹತ್ತಿರಕ್ಕೆ ಕರೆದು ತನ್ನ ಶಿಷ್ಯರ ಮುಂದೆ ಆ ಮಗುವನ್ನು ನಿಲ್ಲಿಸಿ ಹೀಗೆಂದನು: 3 “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಬದಲಾವಣೆ ಹೊಂದಿಕೊಂಡು ನಿಮ್ಮ ಹೃದಯದಲ್ಲಿ ಚಿಕ್ಕ ಮಕ್ಕಳಂತೆ ಆಗಬೇಕು. ಇಲ್ಲವಾದರೆ, ನೀವು ಪರಲೋಕರಾಜ್ಯಕ್ಕೆ ಸೇರುವುದೇ ಇಲ್ಲ. 4 ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನೇ ಪರಲೋಕರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾನೆ.
5 “ಯಾವನಾದರೂ ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು.
ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ
(ಮಾರ್ಕ 9:42-48; ಲೂಕ 17:1-2)
6 “ದೀನತೆಯಿಂದ ನನ್ನನ್ನು ಹಿಂಬಾಲಿಸುವವರಲ್ಲಿ ಯಾರನ್ನಾದರೂ ಪಾಪಕ್ಕೆ ನಡೆಸುವವನಿಗೆ ಬಹಳ ಕೇಡಾಗುವುದು. ಅವನು ತನ್ನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಆಳವಾದ ಸಮುದ್ರದಲ್ಲಿ ಮುಳುಗುವುದೇ ಉತ್ತಮ. 7 ಜನರನ್ನು ಪಾಪಕ್ಕೆ ನಡೆಸುವ ಸಂಗತಿಗಳ ನಿಮಿತ್ತ ನಾನು ಈ ಲೋಕದ ವಿಷಯದಲ್ಲಿ ದುಃಖಪಡುತ್ತೇನೆ. ಅವು ಯಾವಾಗಲೂ ಇರುತ್ತವೆ. ಆದರೆ ಅವುಗಳಿಗೆ ಕಾರಣವಾಗುವ ವ್ಯಕ್ತಿಗೆ ಬಹಳ ಕೇಡಾಗುವುದು.
8 “ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಎಸೆದುಬಿಡು. ಕೈಯನ್ನಾಗಲಿ ಕಾಲನ್ನಾಗಲಿ ಕಳೆದುಕೊಂಡು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ. ಎರಡು ಕೈ ಮತ್ತು ಎರಡು ಕಾಲುಳ್ಳವನಾಗಿದ್ದು ಶಾಶ್ವತವಾದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅದು ಎಷ್ಟೋ ಉತ್ತಮ. 9 ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ನಡೆಸಿದರೆ, ಅದನ್ನು ಕಿತ್ತು ಎಸೆದುಬಿಡು. ಎರಡು ಕಣ್ಣುಳ್ಳವನಾಗಿದ್ದು ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ.
ತಪ್ಪಿಸಿಕೊಂಡ ಕುರಿಯ ಸಾಮ್ಯ
(ಲೂಕ 15:3-7)
10 “ಎಚ್ಚರವಾಗಿರಿ! ಈ ಚಿಕ್ಕ ಮಕ್ಕಳಿಗೆ ಬೆಲೆಯೇ ಇಲ್ಲವೆಂದು ನೆನೆಸಬೇಡಿ. ಇವರಿಗಾಗಿ ಪರಲೋಕದಲ್ಲಿ ದೂತರನ್ನು ನೇಮಿಸಲಾಗಿದೆ. ಆ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಸಮ್ಮುಖದಲ್ಲಿ ಇರುತ್ತಾರೆ. 11 [a]
12 “ಒಬ್ಬ ಮನುಷ್ಯನಿಗೆ ನೂರು ಕುರಿಗಳಿದ್ದು ಅದರಲ್ಲಿ ಒಂದು ಕುರಿಯು ತಪ್ಪಿಸಿಕೊಂಡರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಬೆಟ್ಟದ ಮೇಲೆಯೇ ಬಿಟ್ಟು ತಪ್ಪಿಸಿಕೊಂಡ ಕುರಿಯನ್ನು ಹುಡುಕಲು ಹೋಗುತ್ತಾನಲ್ಲವೇ? 13 ತಪ್ಪಿಸಿಕೊಂಡ ಕುರಿಯು ಸಿಕ್ಕಿದರೆ, ತಪ್ಪಿಸಕೊಳ್ಳದಿದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಅವನು ಬಹಳ ಸಂತೋಷಪಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 14 ಅದೇ ರೀತಿ ಈ ಚಿಕ್ಕ ಮಕ್ಕಳಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳಬಾರದೆಂಬುದೇ ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಾಗಿದೆ.
ನಿಮಗೆ ತಪ್ಪುಮಾಡಿದಾಗ ಮಾಡತಕ್ಕದ್ದೇನು?
(ಲೂಕ 17:3)
15 “ನಿನ್ನ ಸಹೋದರನಾಗಲಿ ಸಹೋದರಿಯಾಗಲಿ ನಿನಗೆ ಯಾವುದಾದರೂ ತಪ್ಪು ಮಾಡಿದರೆ, ನೀನು ಹೋಗಿ ಅವನೊಬ್ಬನೇ ಇರುವಾಗ ಅವನ ತಪ್ಪನ್ನು ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ, ಮತ್ತೆ ನಿನ್ನ ಸಹೋದರನಾಗಿರಲು ನೀನೇ ಅವನಿಗೆ ಸಹಾಯ ಮಾಡಿದಂತಾಗುವುದು. 16 ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.[b] 17 ಅವನು ಅವರ ಮಾತನ್ನೂ ಕೇಳದಿದ್ದರೆ, ಸಭೆಗೆ ತಿಳಿಸು. ಅವನು ಸಭೆಯ ಮಾತನ್ನೂ ಕೇಳದಿದ್ದರೆ ಅವನನ್ನು ದೇವರಲ್ಲಿ ನಂಬಿಕೆ ಇಡದ ಮನುಷ್ಯನಂತಾಗಲಿ ಸುಂಕವಸೂಲಿಗಾರನಂತಾಗಲಿ ಪರಿಗಣಿಸಿರಿ.
18 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಲೋಕದಲ್ಲಿ ನೀಡುವ ನಿಷಿದ್ಧಾಜ್ಞೆಯು ದೇವರೇ ನೀಡಿದ ನಿಷಿದ್ಧಾಜ್ಞೆಯಾಗಿರುತ್ತದೆ. ನೀವು ಭೂಲೋಕದಲ್ಲಿ ನೀಡುವ ಅನುಮತಿಯು ದೇವರೇ ನೀಡಿದ ಅನುಮತಿಯಾಗಿರುತ್ತದೆ. 19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ. 20 ಇದು ಸತ್ಯ. ಏಕೆಂದರೆ ಎಲ್ಲಿ ಇಬ್ಬರಾಗಲಿ ಮೂವರಾಗಲಿ ನನ್ನಲ್ಲಿ ನಂಬಿಕೆಯನ್ನಿಟ್ಟು ಒಟ್ಟಾಗಿ ಸೇರಿಬಂದಿರುತ್ತಾರೋ ಅವರ ಮಧ್ಯದಲ್ಲಿ ನಾನಿರುತ್ತೇನೆ.”
ಕ್ಷಮಾಪಣೆಯನ್ನು ಕುರಿತ ಸಾಮ್ಯ
21 ಆಗ ಪೇತ್ರನು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ಸಹೋದರನು ನನಗೆ ಯಾವುದಾದರೂ ತಪ್ಪು ಮಾಡುತ್ತಲೇ ಇದ್ದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ನಾನು ಅವನನ್ನು ಏಳು ಸಲ ಕ್ಷಮಿಸಬೇಕೋ?” ಎಂದು ಕೇಳಿದನು.
22 ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.
23 “ಪರಲೋಕರಾಜ್ಯವು ತನ್ನ ಸೇವಕರು ತನಗೆ ಕೊಡಬೇಕಿದ್ದ ಸಾಲದ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. 24 ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು. 25 ಆ ಸೇವಕನು ತನ್ನ ಯಜಮಾನನಾದ ರಾಜನಿಗೆ ಹಣವನ್ನು ಕೊಡಲು ಸಮರ್ಥನಾಗಿರಲಿಲ್ಲ. ಆದ್ದರಿಂದ ಆ ಸೇವಕನನ್ನು ಮತ್ತು ಅವನಲ್ಲಿದ್ದ ಪ್ರತಿಯೊಂದನ್ನೂ ಅವನ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಮಾರಿ, ಬಂದ ಹಣವನ್ನೆಲ್ಲಾ ಕೊಡಬೇಕಾದ ಸಾಲಕ್ಕೆ ವಜಾ ಮಾಡಬೇಕೆಂದು ರಾಜನು ಆಜ್ಞಾಪಿಸಿದನು.
26 “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು. 27 ರಾಜನು ತನ್ನ ಸೇವಕನ ವಿಷಯದಲ್ಲಿ ದುಃಖಪಟ್ಟು ಅವನು ಕೊಡಬೇಕಾದ ಸಾಲವನ್ನು ಮನ್ನಿಸಿ ಅವನನ್ನು ಬಿಡುಗಡೆ ಮಾಡಿದನು.
28 “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.
29 “ಆ ಸೇವಕನು ಅವನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆಯಿಂದಿರು. ನಾನು ನಿನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ’ ಎಂದು ಬೇಡಿಕೊಂಡನು.
30 “ಆದರೆ ಮೊದಲನೇ ಸೇವಕನು ತಾಳಿಕೊಳ್ಳಲಿಲ್ಲ. ತನಗೆ ಸಾಲ ಕೊಡಬೇಕಾಗಿದ್ದ ಸೇವಕನ ವಿಷಯದಲ್ಲಿ ನ್ಯಾಯಾಧಿಪತಿಗೆ ದೂರುಕೊಟ್ಟು ಅವನನ್ನು ಸೆರೆಮನೆಗೆ ಹಾಕಿಸಿದನು. ಆ ಸೇವಕನು ಸಾಲ ತೀರಿಸುವವರೆಗೂ ಸೆರೆಮನೆಯಲ್ಲಿ ಇರಬೇಕಾಯಿತು. 31 ಇದನ್ನು ಕಂಡ ಇತರ ಸೇವಕರೆಲ್ಲರೂ ಬಹಳವಾಗಿ ದುಃಖಪಟ್ಟು ನಡೆದ ಸಂಗತಿಯನ್ನೆಲ್ಲಾ ಯಜಮಾನನಿಗೆ ತಿಳಿಸಿದರು.”
32 “ಆಗ ಯಜಮಾನನು ತನ್ನ ಸೇವಕನನ್ನು ಒಳಗೆ ಕರೆದು, ‘ನೀನು ದುಷ್ಟ ಸೇವಕನು. ನೀನು ನನಗೆ ಹೆಚ್ಚು ಹಣ ಕೊಡಬೇಕಾಗಿತ್ತು. ಆದರೆ ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲ ನಾನು ಮನ್ನಿಸಿಬಿಟ್ಟೆ. 33 ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ 34 ಬಹುಕೋಪಗೊಂಡು ಅವನನ್ನು ಶಿಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸಿದನು. ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಸೆರೆಮನೆಯಲ್ಲಿ ಇರಬೇಕಾಯಿತು.
35 “ಪರಲೋಕದ ನನ್ನ ತಂದೆಯು ನಿಮಗೆ ಮಾಡುವಂತೆಯೇ ಈ ರಾಜನು ಮಾಡಿದನು. ನೀವು ನಿಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ನಿಜವಾಗಿಯೂ ಕ್ಷಮಿಸಬೇಕು. ಇಲ್ಲದಿದ್ದರೆ ಪರಲೋಕದ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International