M’Cheyne Bible Reading Plan
ಗಿಬ್ಯೋನ್ಯರು ಯೆಹೋಶುವನಿಗೆ ಮಾಡಿದ ಮೋಸ
9 ಜೋರ್ಡನ್ ನದಿಯ ಪಶ್ಚಿಮದ ಎಲ್ಲ ಅರಸರು ಈ ವಿಷಯಗಳ ಬಗ್ಗೆ ಕೇಳಿದರು. ಇವರು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ರಾಜರಾಗಿದ್ದರು. ಅವರು ಬೆಟ್ಟಪ್ರದೇಶಗಳಲ್ಲಿ ಮತ್ತು ಸಮತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಅವರು ಭೂಮಧ್ಯಸಾಗರದ ತೀರ ಪ್ರದೇಶದಲ್ಲಿ, ಲೆಬನೋನಿನವರೆಗೆ ಸಹ ವಾಸವಾಗಿದ್ದರು. 2 ಈ ಎಲ್ಲ ಅರಸರು ಒಂದು ಕಡೆ ಸೇರಿದರು. ಅವರು ಯೆಹೋಶುವನ ಮತ್ತು ಇಸ್ರೇಲರ ವಿರುದ್ಧ ಯುದ್ಧ ಮಾಡುವ ಯೋಜನೆಗಳನ್ನು ಹಾಕಿಕೊಂಡರು.
3 ಯೆಹೋಶುವನು “ಜೆರಿಕೊ” ಮತ್ತು “ಆಯಿ” ನಗರಗಳನ್ನು ಸ್ವಾಧೀನಪಡಿಸಿಕೊಂಡ ಬಗೆಯನ್ನು ಗಿಬ್ಯೋನ್ ನಗರದ ಜನರು ಕೇಳಿದ್ದರು. 4 ಇಸ್ರೇಲರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಉಪಾಯಮಾಡಿದರು. ಅವರು ಹರುಕು-ಮುರುಕಾದ ಹಳೆಯ ದ್ರಾಕ್ಷಾರಸದ ಬುದ್ದಲಿಗಳನ್ನು ತಮ್ಮ ಕತ್ತೆಗಳ ಬೆನ್ನ ಮೇಲೆ ಹೇರಿಸಿದರು; ತಾವು ಬಹುದೂರ ಪ್ರಯಾಣ ಮಾಡಿ ಬಂದಿರುವುದಾಗಿ ತೋರಿಸಲು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿಚೀಲಗಳನ್ನು ಹಾಕಿದರು. 5 ಅವರು ಹಳೆಯ ಪಾದರಕ್ಷೆಗಳನ್ನು ಮೆಟ್ಟಿಕೊಂಡರು; ಹಳೆಯ ಬಟ್ಟೆಗಳನ್ನು ಧರಿಸಿಕೊಂಡರು; ಒಣಗಿದ ಮತ್ತು ಕೆಟ್ಟುಹೋದ ರೊಟ್ಟಿಗಳನ್ನು ಕಟ್ಟಿಕೊಂಡರು. ಹೀಗೆ ಅವರು ಬಹುದೂರ ಪ್ರಯಾಣಮಾಡಿ ಬಂದವರಂತೆ ತೋರಿಸಿಕೊಂಡರು. 6 ಅವರು ಇಸ್ರೇಲರ ಪಾಳೆಯಕ್ಕೆ ಹೋದರು. ಈ ಪಾಳೆಯವು ಗಿಲ್ಗಾಲಿನ ಹತ್ತಿರ ಇತ್ತು.
ಅವರು ಯೆಹೋಶುವನ ಬಳಿಗೆ ಹೋಗಿ ಅವನಿಗೆ, “ನಾವು ಬಹುದೂರ ದೇಶದಿಂದ ಪ್ರಯಾಣ ಮಾಡಿ ಬಂದಿದ್ದೇವೆ. ನಾವು ನಿಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಇಚ್ಛಿಸುತ್ತೇವೆ” ಎಂದು ಹೇಳಿದರು.
7 ಹಿವ್ವಿಯರಾದ ಅವರಿಗೆ ಇಸ್ರೇಲಿನ ಜನರು, “ಒಂದುವೇಳೆ ನೀವು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರಬಹುದು. ಒಂದುವೇಳೆ ನೀವು ನಮ್ಮ ಹತ್ತಿರದಲ್ಲಿಯೇ ವಾಸಮಾಡುತ್ತಿರಬಹುದು; ನೀವು ಎಲ್ಲಿಯವರು ಎಂಬುದು ನಮಗೆ ಗೊತ್ತಾಗುವವರೆಗೆ ನಾವು ನಿಮ್ಮ ಸಂಗಡ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರಕೊಟ್ಟರು.
8 ಹಿವ್ವಿಯರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದು ಹೇಳಿದರು.
ಆದರೆ ಯೆಹೋಶುವನು, “ನೀವು ಯಾರು? ಎಲ್ಲಿಂದ ಬಂದಿರುವಿರಿ?” ಎಂದು ಪ್ರಶ್ನಿಸಿದನು.
9 ಅದಕ್ಕೆ ಅವರು, “ನಿನ್ನ ಸೇವಕರಾದ ನಾವು ಬಹುದೂರ ದೇಶದಿಂದ ಬಂದಿದ್ದೇವೆ. ನಾವು ಬಂದದ್ದಕ್ಕೆ ಕಾರಣವೇನೆಂದರೆ ನಾವು ನಿಮ್ಮ ದೇವರಾದ ಯೆಹೋವನ ಅದ್ಭುತಶಕ್ತಿಯ ಬಗ್ಗೆ ಕೇಳಿದೆವು. ಆತನು ಮಾಡಿದ ಅದ್ಭುತಕಾರ್ಯಗಳ ಬಗ್ಗೆ ಕೇಳಿದೆವು. ಆತನು ಈಜಿಪ್ಟಿನಲ್ಲಿ ಮಾಡಿದ ಪ್ರತಿಯೊಂದು ಅದ್ಭುತದ ಬಗ್ಗೆ ಕೇಳಿದೆವು. 10 ಆತನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಇಬ್ಬರು ಅರಸರನ್ನು ಸೋಲಿಸಿದ್ದನ್ನು ನಾವು ಕೇಳಿದೆವು. ಹೆಷ್ಬೋನಿನ ಅರಸನಾದ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಇವರೇ ಆ ಅರಸರು. 11 ಆದ್ದರಿಂದ ನಮ್ಮ ಹಿರಿಯರು ಮತ್ತು ನಮ್ಮ ಜನರು ನಮಗೆ, ‘ನಿಮ್ಮ ಪ್ರಯಾಣಕ್ಕೆ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ ಇಸ್ರೇಲರನ್ನು ಭೇಟಿಮಾಡಿ, ನಾವು ನಿಮ್ಮ ಸೇವಕರು. ನಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಿರಿ ಎಂದು ಅವರಿಗೆ ತಿಳಿಸಿ’ ಎಂಬುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದಾರೆ.
12 “ನಮ್ಮ ರೊಟ್ಟಿಯನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಬಿಸಿಯಾಗಿತ್ತು ಮತ್ತು ಮೃದುವಾಗಿತ್ತು. ಆದರೆ ಈಗ ಅವುಗಳನ್ನು ನೋಡಿರಿ, ಒಣಗಿಹೋಗಿವೆ. 13 ನಮ್ಮ ದ್ರಾಕ್ಷಾರಸದ ಬುದ್ದಲಿಗಳನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಅವು ಹೊಸದಾಗಿದ್ದವು ಮತ್ತು ದ್ರಾಕ್ಷಾರಸದಿಂದ ತುಂಬಿದ್ದವು. ಆದರೆ ಈಗ ಹಳೆಯದಾಗಿ ಹರಿದುಹೋಗಿವೆ. ನಮ್ಮ ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ನೋಡಿರಿ, ಈಗ ಅವು ದೂರ ಪ್ರಯಾಣದಿಂದ ಹಾಳಾಗಿಹೋಗಿವೆ” ಎಂದು ಹೇಳಿದರು.
14 ಅವರು ಹೇಳುತ್ತಿರುವುದು ನಿಜವೇ ಎಂದು ತಿಳಿದುಕೊಳ್ಳಲು ಇಸ್ರೇಲರು ಅವರ ರೊಟ್ಟಿಯನ್ನು ತಿಂದು ನೋಡಿದರು; ಆದರೆ ತಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಲಿಲ್ಲ. 15 ಯೆಹೋಶುವನು ಅವರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಒಪ್ಪಿಕೊಂಡನು. ಅವರು ಜೀವಸಹಿತ ಇರಲು ಅವಕಾಶ ಮಾಡಿಕೊಟ್ಟನು. ಯೆಹೋಶುವನ ಈ ಒಪ್ಪಂದಕ್ಕೆ ಇಸ್ರೇಲಿನ ಜನನಾಯಕರು ಒಪ್ಪಿಕೊಂಡರು.
16 ಮೂರು ದಿನಗಳ ತರುವಾಯ ಆ ಜನರು ತಮ್ಮ ಪಾಳೆಯದ ಸಮೀಪ ವಾಸಿಸುವವರು ಎಂಬುದು ಇಸ್ರೇಲರಿಗೆ ತಿಳಿದುಬಂತು. 17 ಆದ್ದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು. 18 ಆದರೆ ಇಸ್ರೇಲರ ಸೈನ್ಯವು ಆ ಪಟ್ಟಣದ ಜನರೊಂದಿಗೆ ಯುದ್ಧಮಾಡಲಿಲ್ಲ. ಅವರು ಆ ಜನರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಅವರು ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು.
ಒಪ್ಪಂದವನ್ನು ಮಾಡಿಕೊಂಡ ಜನನಾಯಕರ ಬಗ್ಗೆ ಜನರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು. 19 ಆದರೆ ಜನನಾಯಕರು, “ನಾವು ಮಾತುಕೊಟ್ಟಿದ್ದೇವೆ; ಇಸ್ರೇಲಿನ ದೇವರಾದ ಯೆಹೋವನ ಮುಂದೆ ಪ್ರಮಾಣ ಮಾಡಿದ್ದೇವೆ; ಈಗ ನಾವು ಅವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ. 20 ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ. 21 ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ.
22 ಯೆಹೋಶುವನು ಗಿಬ್ಯೋನಿನ ಜನರನ್ನು ಕರೆದು, “ನೀವು ನಮಗೆ ಸುಳ್ಳು ಹೇಳಿದ್ದೇಕೆ? ನಿಮ್ಮ ನಾಡು ನಮ್ಮ ಪಾಳೆಯದ ಹತ್ತಿರವೇ ಇತ್ತು. ಆದರೆ ನೀವು ನಿಮ್ಮನ್ನು ದೂರದೇಶದವರು ಎಂದು ಹೇಳಿಕೊಂಡಿರಿ. 23 ಈಗ ನೀವು ಶಾಪಕ್ಕೆ ಗುರಿಯಾಗಿದ್ದೀರಿ. ದೇವರ ಮಂದಿರಕ್ಕಾಗಿ ಸೌಧೆಯನ್ನು ಕಡಿಯುವುದೂ ನೀರನ್ನು ಹೊರುವುದೂ ನಿಮಗೆಂದಿಗೂ ತಪ್ಪಿದ್ದಿಲ್ಲ” ಎಂದು ಹೇಳಿದನು.
24 ಗಿಬ್ಯೋನ್ಯರು, “ನೀವು ನಮ್ಮನ್ನು ಕೊಲ್ಲಬಹುದೆಂಬ ಭಯದಿಂದ ನಾವು ನಿಮಗೆ ಸುಳ್ಳು ಹೇಳಿದೆವು; ದೇವರು ತನ್ನ ಸೇವಕನಾದ ಮೋಶೆಗೆ ಈ ಎಲ್ಲ ಭೂಪ್ರದೇಶವನ್ನು ನಿಮಗೆ ಕೊಡಬೇಕೆಂದು ಆಜ್ಞಾಪಿಸಿರುವುದನ್ನೂ ಈ ಪ್ರದೇಶದ ಎಲ್ಲ ಜನರನ್ನು ಕೊಂದುಬಿಡಬೇಕೆಂದು ನಿಮಗೆ ಹೇಳಿರುವನೆಂದೂ ನಾವು ಕೇಳಿದ್ದೆವು. ಆದ್ದರಿಂದ ನಾವು ನಿಮಗೆ ಸುಳ್ಳು ಹೇಳಿದೆವು. 25 ನಾವು ಈಗ ನಿಮ್ಮ ಸೇವಕರು. ನಿಮಗೆ ಸರಿ ಎನಿಸಿದ್ದನ್ನು ನೀವು ಮಾಡಬಹುದು” ಎಂದು ಉತ್ತರಿಸಿದರು.
26 ಹೀಗೆ ಗಿಬ್ಯೋನಿನ ಜನರು ಗುಲಾಮರಾದರು. ಆದರೆ ಯೆಹೋಶುವನು ಅವರನ್ನು ಜೀವಂತವಾಗಿ ಉಳಿಸಿದನು. ಇಸ್ರೇಲರು ಅವರನ್ನು ಕೊಲ್ಲದಂತೆ ನೋಡಿಕೊಂಡರು. 27 ಯೆಹೋಶುವನು ಗಿಬ್ಯೋನಿನ ಜನರನ್ನು ಇಸ್ರೇಲರ ಸೇವಕರನ್ನಾಗಿ ಮಾಡಿಕೊಂಡನು. ತನ್ನ ನಿವಾಸಕ್ಕಾಗಿ ಯೆಹೋವನು ಆರಿಸಿಕೊಳ್ಳುವ ಸ್ಥಳಗಳಲ್ಲಿ ಅವರು ಇಸ್ರೇಲರಿಗಾಗಿಯೂ ಯೆಹೋವನ ಯಜ್ಞವೇದಿಕೆಗಾಗಿಯೂ ಮರವನ್ನು ಕಡಿಯುತ್ತಿದ್ದರು ಮತ್ತು ನೀರನ್ನು ಹೊರುತ್ತಿದ್ದರು. ಆ ಜನರು ಇಂದಿಗೂ ಗುಲಾಮರಾಗಿಯೇ ಇದ್ದಾರೆ.
ಸ್ತುತಿಗೀತೆ. ರಚನೆಗಾರ: ದಾವೀದ.
140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
ಕ್ರೂರಿಗಳಿಂದ ನನ್ನನ್ನು ಕಾಪಾಡು.
2 ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
3 ಅವರ ನಾಲಿಗೆಗಳು ಸರ್ಪಗಳಂತಿವೆ.
ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.
4 ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
ಕ್ರೂರಿಗಳಿಂದ ನನ್ನನ್ನು ಕಾಪಾಡು.
ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
5 ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.
6 ಯೆಹೋವನೇ, ನನ್ನ ದೇವರು ನೀನೇ.
ನನ್ನ ಪ್ರಾರ್ಥನೆಗೆ ಕಿವಿಗೊಡು.
7 ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
8 ಯೆಹೋವನೇ, ಆ ದುಷ್ಟರ ದುರಾಶೆಯೂ
ದುರಾಲೋಚನೆಯೂ ನೆರವೇರಲು ಬಿಡಬೇಡ.
9 ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
ಬೆಂಕಿಯೊಳಗೆ ಎಸೆದುಬಿಡು;
ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.
ಸ್ತುತಿಗೀತೆ. ರಚನೆಗಾರ: ದಾವೀದ.
141 ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ.
ನನ್ನ ಪ್ರಾರ್ಥನೆಗೆ ಕಿವಿಗೊಡು.
ಬೇಗನೆ ಬಂದು ನನಗೆ ಸಹಾಯಮಾಡು!
2 ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ
ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ.
3 ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ
ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು.
4 ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ.
ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು.
ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ.
5 ನೀತಿವಂತನು ನನ್ನನ್ನು ಸರಿಪಡಿಸಿದರೆ
ಅದು ನನಗೇ ಒಳ್ಳೆಯದು.
ನಿನ್ನ ಭಕ್ತರು ನನ್ನನ್ನು ಗದರಿಸಿದರೆ
ಅದು ನನಗೇ ಒಳ್ಳೆಯದು.
ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
6 ಅವರ ಅಧಿಪತಿಗಳು ದೊಬ್ಬಲ್ಪಡಲಿ.
ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.
7 ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ
ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ.
8 ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು.
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ.
9 ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ.
ಅವರ ಬೋನುಗಳಿಂದ ನನ್ನನ್ನು ತಪ್ಪಿಸು.
10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ.
ಆಗ ನಾನು ತಪ್ಪಿಸಿಕೊಳ್ಳುವೆನು.
3 ಯೆಹೋವನು ಹೀಗೆ ನುಡಿದನು: “ಒಬ್ಬನು ತನ್ನ ಹೆಂಡತಿಯೊಂದಿಗೆ ವಿವಾಹವಿಚ್ಛೇದನ ಮಾಡಿಕೊಂಡ ಮೇಲೆ ಅವಳು ಮತ್ತೊಬ್ಬನನ್ನು ಮದುವೆಯಾದರೆ
ಆ ಮೊದಲನೆಯ ಗಂಡನು ಪುನಃ ಅವಳಲ್ಲಿಗೆ ಬರಲು ಸಾಧ್ಯವೇ? ಇಲ್ಲ.
ಆ ಮನುಷ್ಯನು ಪುನಃ ಆ ಸ್ತ್ರೀಯಲ್ಲಿಗೆ ಹೋದರೆ ಆ ದೇಶವು ಪರಿಪೂರ್ಣವಾಗಿ ಅಪವಿತ್ರವಾಗುತ್ತದೆ.
ಯೆಹೂದವೇ, ನೀನು ಬಹು ಜನರೊಂದಿಗೆ ಕಾಮದಾಟವಾಡಿದ ವೇಶ್ಯಾ ಸ್ತ್ರೀಯಂತೆ ವರ್ತಿಸಿದೆ.
ಈಗ ನೀನು ಪುನಃ ನನ್ನಲ್ಲಿಗೆ ಬರಲು ಇಚ್ಛಿಸುವಿಯಾ?”
ಇದು ಯೆಹೋವನ ನುಡಿ.
2 “ಯೆಹೂದವೇ, ತಲೆಯೆತ್ತಿ ಬೋಳುಗುಡ್ಡಗಳ ಕಡೆಗೆ ನೋಡು.
ನೀನು ಕಾಮಕೇಳಿ ಆಡದ ಸ್ಥಳ ಯಾವುದಾದರೂ ಇದೆಯೇ?
ಅರಬೀಯನಂತೆ ನೀನು ಮಾರ್ಗದ ಮಗ್ಗುಲಲ್ಲಿ
ಪ್ರಿಯತಮರಿಗಾಗಿ ಎದುರುನೋಡುತ್ತಾ ಕುಳಿತಿರುವೆ.
ನೀನು ಭೂಮಿಯನ್ನು ಅಪವಿತ್ರಗೊಳಿಸಿದೆ;
ಹೇಗೆಂದರೆ, ನೀನು ಅನೇಕ ಕೆಟ್ಟಕೆಲಸಗಳನ್ನು ಮಾಡಿದೆ.
ನನಗೆ ವಿಶ್ವಾಸದ್ರೋಹ ಮಾಡಿದೆ.
3 ನೀನು ಪಾಪ ಮಾಡಿದ್ದರಿಂದ ಮಳೆ ಬರಲಿಲ್ಲ;
ಹಿಂಗಾರು ಮಳೆಯೂ ಆಗಲಿಲ್ಲ.
ನಿನ್ನ ಮುಖದ ಮೇಲೆ ಇನ್ನೂ ವೇಶ್ಯೆಯ ಕಳೆಯೇ ಇದೆ.
ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ನಾಚಿಕೆಯೂ ಆಗುವುದಿಲ್ಲ.
4 ಆದರೆ ಈಗ ನೀನು, ‘ನನ್ನ ತಂದೆಯೇ,
ನಾನು ಚಿಕ್ಕ ಮಗು ಆದಾಗಿನಿಂದ ನೀನು ನನ್ನ ಪ್ರೀತಿಯ ಸ್ನೇಹಿತನಾಗಿದ್ದೆ’
ಎಂದು ಕೂಗುತ್ತಲಿರುವೆ.
5 ಇದಲ್ಲದೆ, ಯೆಹೂದವೇ,
‘ದೇವರು ಯಾವಾಗಲೂ ನನ್ನ ಮೇಲೆ ಕೋಪಿಷ್ಟನಾಗಿರುವುದಿಲ್ಲ.
ದೇವರ ಕೋಪವು ಶಾಶ್ವತವಾಗಿರುವುದಿಲ್ಲ’ ಎಂದು ನೀನು ಹೇಳಿದೆಯಲ್ಲಾ.
“ಯೆಹೂದ, ನೀನು ಹಾಗೆ ಹೇಳಿದರೂ, ನಿನ್ನಿಂದಾದಷ್ಟು ಕೆಡುಕನ್ನು ಮಾಡುತ್ತಿರುವೆ.”
ಇಬ್ಬರು ಕೆಟ್ಟ ಸಹೋದರಿಯರು: ಇಸ್ರೇಲ್ ಮತ್ತು ಯೆಹೂದ
6 ಯೆಹೂದ ಪ್ರದೇಶವನ್ನು ಯೋಷೀಯನು ಆಳುತ್ತಿದ್ದಾಗ ಯೆಹೋವನು ನನ್ನೊಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್[a] ಎಂಬಾಕೆಯು ಮಾಡಿದ ದುಷ್ಕೃತ್ಯಗಳನ್ನು ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಬೆಟ್ಟದ ಮೇಲೆಯೂ ಸೊಂಪಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು. 7 ‘ಈ ದುಷ್ಕೃತ್ಯಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆಯೂ ಇಸ್ರೇಲ್ ನನ್ನಲ್ಲಿಗೆ ಬರಬಹುದು’ ಎಂದು ನಾನು ಭಾವಿಸಿದ್ದೆ. ಆದರೆ ಅವಳು ನನ್ನಲ್ಲಿಗೆ ಬರಲಿಲ್ಲ. ಇಸ್ರೇಲಿನ ವಂಚಕಿ ಸಹೋದರಿಯಾದ ಯೆಹೂದ ಎಂಬಾಕೆಯು ಮಾಡಿದ್ದನ್ನು ನೋಡಿದಳು. 8 ಇಸ್ರೇಲ್ ಎಂಬಾಕೆಯು ನನಗೆ ವಿಶ್ವಾಸದ್ರೋಹ ಮಾಡಿದ್ದಳು. ನಾನು ಏಕೆ ಹೊರಗೆ ಹಾಕಿದೆ ಎಂಬುದು ಅವಳಿಗೆ ಗೊತ್ತಿತ್ತು. ಅವಳ ಜಾರತನ ಎಂಬ ಪಾಪದ ಬಗ್ಗೆ ನನಗೆ ತಿಳಿದಿದೆ ಎಂದು ಇಸ್ರೇಲಳಿಗೆ ಗೊತ್ತಾಗಿತ್ತು. ಆದರೆ ಅದರಿಂದ ಅವಳ ವಂಚಕಳಾದ ಸೋದರಿಗೆ ಭಯವಾಗಲಿಲ್ಲ. ಯೆಹೂದ ಭಯಪಡಲಿಲ್ಲ. ಆಕೆಯು ಸಹ ವೇಶ್ಯೆಯರಂತೆ ವರ್ತಿಸಿದಳು. 9 ತನ್ನ ನಡತೆಯ ಬಗ್ಗೆ ಆಕೆ ಯೋಚಿಸಲಿಲ್ಲ. ಅವಳು ತನ್ನ ದೇಶವನ್ನು ‘ಅಶುದ್ಧ’ಗೊಳಿಸಿದಳು. ಕಲ್ಲಿನ ಮತ್ತು ಮರದ ವಿಗ್ರಹಗಳನ್ನು ಪೂಜಿಸಿ ಜಾರತನ ಎಂಬ ಪಾಪವನ್ನು ಮಾಡಿದಳು. 10 ಇಸ್ರೇಲಿಗೆ ಇಷ್ಟೆಲ್ಲಾ ದಂಡನೆ ಆದರೂ ಅವಳ ಸೋದರಿಯಾದ ಯೆಹೂದ ತುಂಬುಹೃದಯದಿಂದ ನನ್ನಲ್ಲಿಗೆ ಬರಲಿಲ್ಲ. ಅವಳು ನನ್ನಲ್ಲಿಗೆ ತಿರುಗಿ ಬರುವ ನಟನೆಯನ್ನು ಮಾತ್ರ ಮಾಡಿದಳು. ಇದು ಯೆಹೋವನಾದ ನನ್ನ ನುಡಿ” ಎಂದು ಹೇಳಿದನು.
11 ಯೆಹೋವನು ನನಗೆ, “ಇಸ್ರೇಲ್ ಎಂಬಾಕೆಯು ನನಗೆ ನಂಬಿಗಸ್ತಳಾಗಿ ನಡೆದುಕೊಳ್ಳಲಿಲ್ಲ. ಆದರೆ ಅವಳು ಯೆಹೂದ ಎಂಬಾಕೆಗಿಂತ ಒಳ್ಳೆಯವಳಾಗಿ ಕಂಡು ಬಂದಳು. 12 ಯೆರೆಮೀಯನೇ, ಹೋಗು. ಈ ಸಂದೇಶವನ್ನು ಉತ್ತರದಿಕ್ಕಿನಲ್ಲಿ ಸಾರು. ಯೆಹೋವನು ಹೀಗೆ ಹೇಳುತ್ತಾನೆ:
“‘ವಿಶ್ವಾಸದ್ರೋಹಿಗಳಾದ ಇಸ್ರೇಲಿನ ಜನರೇ, ಹಿಂತಿರುಗಿ ಬನ್ನಿ.’
‘ನಾನು ಕೋಪಮುಖದಿಂದ ನಿಮ್ಮನ್ನು ನೋಡುವುದನ್ನು ನಿಲ್ಲಿಸುವೆನು.
ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.’
ಇದು ಯೆಹೋವನ ನುಡಿ.
13 ‘ನೀವು ನಿಮ್ಮ ಪಾಪವನ್ನು ಅರಿತುಕೊಂಡರೆ ಸಾಕು.
ನೀವು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧ ತಿರುಗಿದಿರಿ,
ಅದೇ ನಿಮ್ಮ ಪಾಪ.
ನೀವು ಬೇರೆ ರಾಷ್ಟ್ರದವರ ವಿಗ್ರಹಗಳನ್ನು ಆರಾಧಿಸಿದಿರಿ.
ನೀವು ಪ್ರತಿಯೊಂದು ಹಸಿರು ಮರದ ಕೆಳಗೆ ವಿಗ್ರಹಗಳನ್ನು ಆರಾಧಿಸಿದಿರಿ.
ನೀವು ನನ್ನ ಆಜ್ಞೆಯನ್ನು ಪರಿಪಾಲಿಸಲಿಲ್ಲ’”
ಇದು ಯೆಹೋವನ ನುಡಿಯಾಗಿತ್ತು.
14 “ವಿಶ್ವಾಸದ್ರೋಹಿಗಳಾದ ಜನರೇ, ನನ್ನಲ್ಲಿಗೆ ಹಿಂತಿರುಗಿ ಬನ್ನಿ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಂದು ಕುಲದಿಂದ ಇಬ್ಬರನ್ನು ಆರಿಸಿ ಚೀಯೋನಿಗೆ ಕರೆದು ತರುವೆನು. 15 ನಿಮಗೆ ಹೊಸ ಪಾಲಕರನ್ನು ನೇಮಿಸುವೆನು. ಆ ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಬುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. 16 ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಬೆಳೆಯುವದು” ಇದು ಯೆಹೋವನ ನುಡಿ.
“ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆ ಇದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವ’ ಎಂದು ಹೇಳುವುದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ಅವರು ಅದನ್ನು ಜ್ಞಾಪಿಸುವುದೂ ಇಲ್ಲ. ಅದರ ಅಭಾವವನ್ನು ಮನಸ್ಸಿಗೆ ತಂದುಕೊಳ್ಳುವುದೂ ಇಲ್ಲ. ಅವರು ಇನ್ನೊಂದು ‘ಪವಿತ್ರ ಪೆಟ್ಟಿಗೆ’ಯನ್ನು ಸಿದ್ಧಪಡಿಸುವದಿಲ್ಲ. 17 ಆ ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಬಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನ್ನು ಅನುಸರಿಸುವುದಿಲ್ಲ. 18 ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನ್ನು ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಬರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಬರುವರು.”
19 ಯೆಹೋವನಾದ ನಾನು ಹೀಗೆಂದುಕೊಂಡೆ:
“ನಾನು ಸಂತೋಷದಿಂದ ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುವೆನು.
ಬೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನ್ನು
ನಿಮಗೆ ಕೊಡುವುದಕ್ಕೆ ನಾನು ಸಂತೋಷಪಡುವೆನು.
ನೀವು ನನ್ನನ್ನು ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ.
ನೀವು ಯಾವಾಗಲೂ ನನ್ನ ಹಿಂಬಾಲಕರಾಗಿರುವಿರೆಂದು ಭಾವಿಸಿದ್ದೆ.
20 ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ.
ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21 ಬೋಳುಪರ್ವತದ ಮೇಲೆ ಅಳುವ ಧ್ವನಿಯನ್ನು ನೀವು ಕೇಳಬಹುದು.
ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಅವರು ತುಂಬಾ ಕೆಟ್ಟುಹೋಗಿ
ತಮ್ಮ ದೇವರಾದ ಯೆಹೋವನನ್ನು ಮರೆತರು.
22 ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ,
ನನ್ನಲ್ಲಿಗೆ ಹಿಂತಿರುಗಿ ಬನ್ನಿ.
ನನಗೆ ವಿಶ್ವಾಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು,
ಹಿಂತಿರುಗಿ ಬನ್ನಿ” ಎಂದು ಹೇಳುತ್ತಾನೆ.
“ಅದಕ್ಕೆ ಜನರು, ‘ಆಗಲಿ ನಿನ್ನಲ್ಲಿಗೆ ಬರುತ್ತೇವೆ.
ನೀನೇ ನಮ್ಮ ದೇವರಾದ ಯೆಹೋವನು.
23 ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು.
ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು.
ಇಸ್ರೇಲಿನ ರಕ್ಷಣೆ ಖಚಿತವಾಗಿಯೂ
ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24 ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನ್ನು
ನೈವೇದ್ಯದಲ್ಲಿ ಸುಳ್ಳುದೇವರಾದ ಬಾಳನು ತಿಂದುಬಿಟ್ಟನು.
ನಮ್ಮ ಬಾಲ್ಯದಿಂದಲೂ ಹೀಗಾಗುತಾ ಬಂದಿದೆ.
ಭಯಂಕರವಾದ ಆ ಸುಳ್ಳು ದೇವರು
ನಮ್ಮ ಪೂರ್ವಿಕರ ದನಕುರಿಗಳನ್ನೂ
ಅವರ ಗಂಡುಹೆಣ್ಣುಮಕ್ಕಳನ್ನೂ ಬಲಿ ತೆಗೆದುಕೊಳ್ಳುತ್ತಿರುವನು.
25 ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ.
ನಮ್ಮ ನಾಚಿಕೆಯು ಕಂಬಳಿಯು ಹೊದಿಸಿದಂತೆ ನಮ್ಮನ್ನು ಮುಚ್ಚಿಬಿಡಲಿ.
ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ.
ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ.
ನಮ್ಮ ಬಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ’” ಎಂದು ಮೊರೆಯಿಟ್ಟರು.
ಯೇಸುವಿನ ರೂಪಾಂತರ
(ಮಾರ್ಕ 9:2-13; ಲೂಕ 9:28-36)
17 ಆರು ದಿನಗಳ ತರುವಾಯ, ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ಸಹೋದರನಾದ ಯೋಹಾನನನ್ನು ಕರೆದುಕೊಂಡು ಯೇಸು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು. ಅವರಲ್ಲದೆ ಬೇರೆ ಯಾರೂ ಅಲ್ಲಿರಲಿಲ್ಲ. 2 ಈ ಶಿಷ್ಯರ ಕಣ್ಣೆದುರಿನಲ್ಲಿಯೇ ಆತನು ರೂಪಾಂತರ ಹೊಂದಿದನು. ಆತನ ಮುಖವು ಸೂರ್ಯನಂತೆ ಪ್ರಕಾಶಮಾನವಾಯಿತು. ಆತನ ಉಡುಪುಗಳು ಬೆಳಕಿನಂತೆ ಬೆಳ್ಳಗಾದವು. 3 ಅಲ್ಲದೆ ಆತನೊಂದಿಗೆ ಇಬ್ಬರು ಪುರುಷರು ಮಾತಾಡುತ್ತಾ ನಿಂತಿದ್ದರು. ಅವರೇ ಮೋಶೆ ಮತ್ತು ಎಲೀಯ.
4 ಪೇತ್ರನು ಯೇಸುವಿಗೆ, “ಪ್ರಭುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನೀನು ಇಷ್ಟಪಟ್ಟರೆ ಇಲ್ಲಿ ಮೂರು ಡೇರೆಗಳನ್ನು ಹಾಕುವೆವು. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದನು.
5 ಪೇತ್ರನು ಮಾತಾಡುತ್ತಿರುವಾಗಲೇ ಪ್ರಕಾಶಮಾನವಾದ ಒಂದು ಮೋಡವು ಅವರ ಮೇಲೆ ಕವಿಯಿತು ಮತ್ತು ಆ ಮೋಡದೊಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ನಾನು ಈತನನ್ನು ಬಹಳ ಮೆಚ್ಚಿಕೊಂಡಿದ್ದೇನೆ. ಈತನಿಗೆ ವಿಧೇಯರಾಗಿರಿ!” ಎಂದು ಹೇಳಿತು.
6 ಯೇಸುವಿನ ಸಂಗಡವಿದ್ದ ಶಿಷ್ಯರಿಗೂ ಈ ಧ್ವನಿ ಕೇಳಿಸಿತು. ಅವರು ಬಹಳ ಭಯದಿಂದ ಬೋರಲಬಿದ್ದರು. 7 ಆಗ ಆತನು ಶಿಷ್ಯರ ಬಳಿಗೆ ಬಂದು ಅವರನ್ನು ಮುಟ್ಟಿ, “ಏಳಿ, ಹೆದರಬೇಡಿ” ಎಂದನು. 8 ಅವರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.
9 ಬೆಟ್ಟದಿಂದ ಇಳಿದು ಬರುತ್ತಿರುವಾಗ ಯೇಸು ತನ್ನ ಶಿಷ್ಯರಿಗೆ, “ನೀವು ಬೆಟ್ಟದ ಮೇಲೆ ಕಂಡ ದರ್ಶನವನ್ನು ಈಗ ಯಾರಿಗೂ ಹೇಳದೆ ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬಂದ ಮೇಲೆ ತಿಳಿಸಿರಿ” ಎಂದು ಆಜ್ಞಾಪಿಸಿದನು.
10 ಶಿಷ್ಯರು ಯೇಸುವಿಗೆ, “ಕ್ರಿಸ್ತನು ಬರುವುದಕ್ಕಿಂತ ಮುಂಚೆ ಎಲೀಯನು ಬರಬೇಕಾಗಿದೆ ಎಂದು ಧರ್ಮೋಪದೇಶಕರು ಹೇಳುವುದೇಕೆ?” ಎಂದು ಕೇಳಿದರು.
11 ಅದಕ್ಕೆ ಯೇಸು, “ಎಲೀಯನು ಬರುತ್ತಾನೆಂದು ಅವರು ಹೇಳುವುದು ಸರಿ. ನಿಜವಾಗಿಯೂ ಎಲೀಯನು ಬಂದು ಎಲ್ಲಾ ವಿಷಯಗಳನ್ನು ಸರಿಪಡಿಸುವನು. 12 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಎಲೀಯನು ಈಗಾಗಲೇ ಬಂದಿದ್ದಾನೆ. ಆದರೆ ಆತನು ಯಾರೆಂಬುದು ಜನರಿಗೆ ತಿಳಿಯಲಿಲ್ಲ. ಜನರು ತಮಗಿಷ್ಟಬಂದಂತೆ ಅವನನ್ನು ಹಿಂಸಿಸಿದರು. ಅದೇ ರೀತಿ ಅವರು ಮನುಷ್ಯಕುಮಾರನನ್ನು ಹಿಂಸೆಪಡಿಸುವರು” ಎಂದು ಉತ್ತರಕೊಟ್ಟನು. 13 ಯೇಸು ಹೇಳುತ್ತಿರುವುದು ಸ್ನಾನಿಕನಾದ ಯೋಹಾನನನ್ನೇ ಕುರಿತು ಎಂದು ಶಿಷ್ಯರು ಗ್ರಹಿಸಿಕೊಂಡರು.
ಯೇಸುವಿನಿಂದ ಕಾಯಿಲೆಯ ಬಾಲಕನಿಗೆ ಸ್ವಸ್ಥತೆ
(ಮಾರ್ಕ 9:14-29; ಲೂಕ 9:37-43)
14 ಯೇಸು ಮತ್ತು ಆತನ ಶಿಷ್ಯರು ಜನರ ಬಳಿಗೆ ಹಿಂತಿರುಗಿ ಹೋದರು. ಒಬ್ಬನು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, 15 “ಪ್ರಭುವೇ, ನನ್ನ ಮಗನಿಗೆ ದಯೆತೋರು. ಅವನು ಮೂರ್ಛಾರೋಗದಿಂದ ಬಹಳ ಬಾಧೆಪಡುತ್ತಿದ್ದಾನೆ. ಅವನು ಆಗಾಗ್ಗೆ ಬೆಂಕಿಯಲ್ಲಿ ಇಲ್ಲವೇ ನೀರಿನಲ್ಲಿ ಬೀಳುತ್ತಾನೆ. 16 ನಾನು ನನ್ನ ಮಗನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಆದರೆ ಅವನನ್ನು ಗುಣಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
17 ಯೇಸು, “ಅಯ್ಯೋ, ವಿಶ್ವಾಸವಿಲ್ಲದ ವಕ್ರಸಂತತಿಯೇ, ಇನ್ನೆಷ್ಟು ಕಾಲ ನಾನು ನಿಮ್ಮೊಂದಿಗಿರಬೇಕು? ಇನ್ನೆಷ್ಟು ಕಾಲ ನಾನು ನಿಮ್ಮನ್ನು ಸಹಿಸಿಕೊಳ್ಳಲಿ? ಆ ಬಾಲಕನನ್ನು ಇಲ್ಲಿಗೆ ಕರೆತನ್ನಿ” ಎಂದು ಉತ್ತರಕೊಟ್ಟನು. 18 ಯೇಸು ಬಾಲಕನಲ್ಲಿದ್ದ ದೆವ್ವಕ್ಕೆ ಬಲವಾಗಿ ಗದರಿಸಲು ದೆವ್ವವು ಅವನನ್ನು ಬಿಟ್ಟುಹೋಯಿತು. ಅವನಿಗೆ ಆ ಕ್ಷಣದಲ್ಲೇ ಗುಣವಾಯಿತು.
19 ಆಗ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಅವನನ್ನು ದೆವ್ವದಿಂದ ಬಿಡಿಸಲು ನಾವು ಪ್ರಯತ್ನಿಸಿದರೂ ನಮಗೇಕೆ ಸಾಧ್ಯವಾಗಲಿಲ್ಲ?” ಎಂದರು.
20 ಅದಕ್ಕೆ ಯೇಸು, “ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ನಂಬಿಕೆಯು ಸಾಸಿವೆ ಕಾಳಿನಷ್ಟಿದ್ದರೂ, ಈ ಪರ್ವತಕ್ಕೆ ‘ಇಲ್ಲಿಂದ ಅಲ್ಲಿಗೆ ಹೋಗು’ ಎಂದು ನೀವು ಹೇಳಿದರೂ ಅದು ಹೋಗುತ್ತದೆ. ನಿಮಗೆ ಅಸಾಧ್ಯವಾಗದ ಕಾರ್ಯಗಳೇ ಇರದು” ಎಂದನು. 21 [a]
ತನ್ನ ಮರಣವನ್ನು ಕುರಿತು ಯೇಸುವಿನ ಎರಡನೆ ಪ್ರಕಟನೆ
(ಮಾರ್ಕ 9:30-32; ಲೂಕ 9:43-45)
22 ಒಮ್ಮೆ ಶಿಷ್ಯರು ಗಲಿಲಾಯದಲ್ಲಿ ಒಟ್ಟಿಗೆ ಸೇರಿದ್ದರು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. 23 ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಮರಣದಿಂದ ಮೇಲೆದ್ದು ಬರುವನು” ಎಂದು ಹೇಳಿದನು.
ತೆರಿಗೆಯ ಕುರಿತು ಯೇಸುವಿನ ಉಪದೇಶ
24 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ದೇವಾಲಯಕ್ಕೆ ಯೆಹೂದ್ಯರಿಂದ ವಾರ್ಷಿಕ ತೆರಿಗೆ ವಸೂಲಿ ಮಾಡುವ ಕೆಲವರು ಪೇತ್ರನ ಬಳಿಗೆ ಬಂದು, “ನಿಮ್ಮ ಬೋಧಕನು ದೇವಾಲಯದ ವಾರ್ಷಿಕ ತೆರಿಗೆಯನ್ನು ಸಲ್ಲಿಸುವುದಿಲ್ಲವೋ?” ಎಂದು ಕೇಳಿದರು.
25 ಅದಕ್ಕೆ ಪೇತ್ರನು, “ಹೌದು, ಸಲ್ಲಿಸುತ್ತಾನೆ” ಎಂದು ಉತ್ತರಕೊಟ್ಟನು.
ಬಳಿಕ ಪೇತ್ರನು ಯೇಸುವಿದ್ದ ಮನೆಯೊಳಕ್ಕೆ ಹೋದನು. ಅವನು ಈ ವಿಷಯವನ್ನು ಹೇಳುವುದಕ್ಕಿಂತ ಮೊದಲೇ ಯೇಸು ಅವನಿಗೆ, “ಭೂಲೋಕದ ರಾಜರುಗಳು ಜನರಿಂದ ಅನೇಕ ಬಗೆಯ ತೆರಿಗೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ತೆರಿಗೆ ಕೊಡುವ ಜನರು ಯಾರು? ರಾಜನ ಮಕ್ಕಳೇ ಅಥವಾ ಬೇರೆ ಜನರೇ? ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು.
26 ಪೇತ್ರನು, “ಬೇರೆ ಜನರು ತೆರಿಗೆಗಳನ್ನು ಸಲ್ಲಿಸುತ್ತಾರೆ” ಎಂದು ಉತ್ತರಕೊಟ್ಟನು.
ಯೇಸು ಪೇತ್ರನಿಗೆ, “ಹಾಗಾದರೆ ರಾಜನ ಮಕ್ಕಳು ತೆರಿಗೆ ಕೊಡಬೇಕಿಲ್ಲ. 27 ಆದರೆ ತೆರಿಗೆ ವಸೂಲಿಗಾರರನ್ನು ನಾವೇಕೆ ಕೋಪಗೊಳಿಸಬೇಕು? ನೀನು ತೆರಿಗೆಯನ್ನು ಕೊಡು. ಸರೋವರಕ್ಕೆ ಹೋಗಿ ಮೀನನ್ನು ಹಿಡಿ. ನಿನಗೆ ಸಿಕ್ಕಿದ ಮೊದಲನೇ ಮೀನಿನ ಬಾಯನ್ನು ತೆರೆ, ಅದರ ಬಾಯೊಳಗೆ ವಾರ್ಷಿಕ ತೆರಿಗೆಗೆ ಬೇಕಾದ ಒಂದು ನಾಣ್ಯವನ್ನು ಕಾಣುವೆ. ಅದನ್ನು ತೆಗೆದುಕೊಂಡು ಬಂದು, ತೆರಿಗೆ ವಸೂಲಿ ಮಾಡುವವರಿಗೆ ಕೊಡು. ಅದರಿಂದ ನನ್ನ ಮತ್ತು ನಿನ್ನ ತೆರಿಗೆಯನ್ನು ಕೊಟ್ಟಂತಾಗುವುದು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International