Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 2

ಜೆರಿಕೊದಲ್ಲಿ ಗೂಢಚಾರರು

ನೂನನ ಮಗನಾದ ಯೆಹೋಶುವನು ಮತ್ತು ಎಲ್ಲಾ ಜನರು ಆಕಾಶಿಯಾದಲ್ಲಿ ಬಿಡಾರ ಮಾಡಿದ್ದರು. ಯೆಹೋಶುವನು ಇಬ್ಬರು ಗೂಢಚಾರರನ್ನು ಜೆರಿಕೊ ಪಟ್ಟಣದ ಬಗ್ಗೆ ತಿಳಿದುಕೊಳ್ಳಲು ಕಳುಹಿಸಿದನು. ಈ ಜನರನ್ನು ಯೆಹೋಶುವನು ಕಳುಹಿಸಿದ ಸಂಗತಿ ಬೇರೆ ಯಾರಿಗೂ ತಿಳಿದಿರಲಿಲ್ಲ.

“ಹೋಗಿ ಆ ಜೆರಿಕೊ ನಗರವನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷಿಸಿರಿ” ಎಂದು ಯೆಹೋಶುವನು ಆ ಗೂಢಚಾರರಿಗೆ ಹೇಳಿದ್ದನು.

ಅವರಿಬ್ಬರು ಜೆರಿಕೊ ನಗರಕ್ಕೆ ಹೋಗಿ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು. ಆ ಹೆಂಗಸಿನ ಹೆಸರು “ರಾಹಾಬ.”

ಆಗ ಯಾರೋ ಒಬ್ಬರು ಜೆರಿಕೊ ನಗರದ ರಾಜನಿಗೆ, “ನಿನ್ನೆ ರಾತ್ರಿ ಇಸ್ರೇಲರ ಕಡೆಯ ಕೆಲವರು ನಮ್ಮ ದೇಶದ ದೌರ್ಬಲ್ಯಗಳನ್ನು ಕಂಡುಹಿಡಿಯುವುದಕ್ಕಾಗಿ ಬಂದಿದ್ದಾರೆ” ಎಂದು ಹೇಳಿದರು.

ಆಗ ಜೆರಿಕೊ ನಗರದ ಅರಸನು ರಾಹಾಬಳಿಗೆ, “ನಿನ್ನ ಮನೆಗೆ ಬಂದು ಇಳಿದುಕೊಂಡ ಆ ಜನರನ್ನು ಬಚ್ಚಿಡಬೇಡ. ಅವರನ್ನು ಹೊರಗೆ ಕರೆದುಕೊಂಡು ಬಾ. ಅವರು ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಂದಿದ್ದಾರೆ” ಎಂದು ಹೇಳಿ ಕಳುಹಿಸಿದನು.

ರಾಹಾಬಳು ಈ ಇಬ್ಬರನ್ನು ಅಡಗಿಸಿಟ್ಟಿದ್ದಳು. ಆದರೆ ಆಕೆಯು ಕೇಳಬಂದವರಿಗೆ, “ಇಬ್ಬರು ಮನುಷ್ಯರು ಇಲ್ಲಿಗೆ ಬಂದಿದ್ದರು, ಆದರೆ ಅವರು ಎಲ್ಲಿಂದ ಬಂದಿದ್ದರೆಂಬುದು ನನಗೆ ಗೊತ್ತಿರಲಿಲ್ಲ. ಸಾಯಂಕಾಲ ನಗರದ ದ್ವಾರವನ್ನು ಮುಚ್ಚುವ ಸಮಯವಾದಾಗ ಅವರು ಹೊರಟುಹೋದರು. ಅವರು ಎಲ್ಲಿಗೆ ಹೋದರೆಂಬುದು ನನಗೆ ತಿಳಿಯದು. ಆದರೂ ನೀವು ಬೇಗ ಹೋದರೆ ಅವರನ್ನು ಹಿಡಿಯಬಹುದು” ಎಂದಳು. ಆದರೆ ಅವಳು ನಿಜವಾಗಿ ಆ ಗೂಢಚಾರರನ್ನು ಮಾಳಿಗೆಯ[a] ಮೇಲೆ ಕರೆದುಕೊಂಡು ಹೋಗಿ ಒಟ್ಟಿದ ಹುಲ್ಲಿನಲ್ಲಿ ಅವರನ್ನು ಅಡಗಿಸಿಟ್ಟಿದ್ದಳು.

ರಾಜಭಟರು ನಗರದ ಹೊರಗೆ ಹೋಗಿ ನಗರದ ದ್ವಾರಗಳನ್ನು ಮುಚ್ಚಿ ಇಸ್ರೇಲಿನಿಂದ ಬಂದ ಆ ಇಬ್ಬರನ್ನು ಹುಡುಕಿಕೊಂಡು ಹೋದರು. ಅವರು ಜೋರ್ಡನ್ ನದಿಯವರೆಗೆ ಹೋಗಿ ಜನರು ನದಿದಾಟುವ ಎಲ್ಲ ಸ್ಥಳಗಳಲ್ಲಿ ಹುಡುಕಿದರು.

ಆ ಇಬ್ಬರು ಗೂಢಚಾರರು ಆ ರಾತ್ರಿ ಅಲ್ಲಿಯೇ ಮಲಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾಹಾಬಳು ಮಾಳಿಗೆಯ ಮೇಲೆ ಹೋಗಿ ಅವರೊಂದಿಗೆ ಮಾತನಾಡಿ, “ಯೆಹೋವನು ಈ ದೇಶವನ್ನು ನಿಮ್ಮ ಜನರಿಗೆ ಕೊಟ್ಟಿದ್ದಾನೆಂದು ನಾನು ಬಲ್ಲೆ. ನಿಮ್ಮ ವಿಷಯ ಕೇಳಿ ನಮಗೆ ಭಯ ಉಂಟಾಗಿದೆ. ಈ ದೇಶದಲ್ಲಿರುವ ಎಲ್ಲಾ ಜನರು ನಿಮ್ಮಿಂದ ಭಯಭೀತರಾಗಿದ್ದಾರೆ. 10 ಯೆಹೋವನು ನಿಮಗೆ ಸಹಾಯ ಮಾಡಿದ ರೀತಿಯ ಬಗ್ಗೆ ನಾವು ಕೇಳಿ ಭಯಗೊಂಡಿದ್ದೇವೆ. ನೀವು ಈಜಿಪ್ಟಿನಿಂದ ಹೊರಬಂದ ಮೇಲೆ ಆತನು ಕೆಂಪುಸಮುದ್ರದ ನೀರನ್ನು ಬತ್ತಿಸಿದ್ದನ್ನು ನಾವು ಕೇಳಿದ್ದೇವೆ. ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿದ್ದ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನೀವು ಹೇಗೆ ನಾಶಮಾಡಿದಿರೆಂಬುದನ್ನೂ ಕೇಳಿದ್ದೇವೆ. 11 ಇವೆಲ್ಲವುಗಳ ಬಗ್ಗೆ ಕೇಳಿ ನಮಗೆ ಅತೀವ ಭಯವಾಗಿದೆ; ನಮ್ಮಲ್ಲಿ ಯಾರಿಗೂ ನಿಮ್ಮೊಂದಿಗೆ ಯುದ್ಧ ಮಾಡಲು ಧೈರ್ಯವಿಲ್ಲ. ಏಕೆಂದರೆ ನಿಮ್ಮ ದೇವರಾದ ಯೆಹೋವನು, ಭೂಪರಲೋಕಗಳನ್ನು ಆಳುವವನಾಗಿದ್ದಾನೆ. 12 ಈಗ ನೀವು ನನಗೊಂದು ಪ್ರಮಾಣ ಮಾಡಬೇಕು. ನಾನು ನಿಮಗೆ ದಯೆತೋರಿ ಸಹಾಯ ಮಾಡಿದೆ. ಆದ್ದರಿಂದ ನೀವು ಸಹ ನನ್ನ ಕುಟುಂಬದವರಿಗೆ ದಯೆತೋರುವಿರೆಂಬುದಕ್ಕೆ ಒಂದು ಗುರುತನ್ನು ಕೊಡಿರಿ. 13 ನನ್ನ ಕುಟುಂಬದವರನ್ನು ಅಂದರೆ ನನ್ನ ತಂದೆತಾಯಿಗಳನ್ನು, ಸಹೋದರ ಸಹೋದರಿಯರನ್ನು ಮತ್ತು ಅವರೆಲ್ಲರ ಕುಟುಂಬ ವರ್ಗದವರನ್ನು ಜೀವಂತವಾಗಿ ಉಳಿಸುವುದಾಗಿ ಪ್ರಮಾಣ ಮಾಡಿರಿ” ಎಂದು ಬೇಡಿಕೊಂಡಳು.

14 ಅದಕ್ಕೆ ಅವರು, “ನಮ್ಮ ಪ್ರಾಣವನ್ನಾದರೂ ಕೊಟ್ಟು ನಿಮ್ಮ ಪ್ರಾಣ ಉಳಿಸುತ್ತೇವೆ. ಆದರೆ ನೀವು ಇದನ್ನು ಯಾರಿಗೂ ಹೇಳಬೇಡಿ. ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ನಿಮಗೆ ದಯೆ ತೋರುತ್ತೇವೆ. ನೀನು ನಮ್ಮನ್ನು ನಂಬಬಹುದು” ಎಂದರು.

15 ರಾಹಾಬಳ ಮನೆಯನ್ನು ಊರಗೋಡೆಗೆ ಸೇರಿಸಿ ಕಟ್ಟಲಾಗಿತ್ತು, ಆದ್ದರಿಂದ ಅವರನ್ನು ಒಂದು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿದಳು. 16 ಆಕೆ ಅವರಿಗೆ, “ನೀವು ಪಶ್ಚಿಮದಿಕ್ಕಿನ ಕಡೆಗೆ ಹೋಗಿ ಬೆಟ್ಟಗಳಲ್ಲಿ ಅಡಗಿಕೊಳ್ಳಿರಿ; ಆಗ ರಾಜಭಟರು ನಿಮ್ಮನ್ನು ಕಂಡುಹಿಡಿಯಲಾರರು; ಅಲ್ಲಿ ಮೂರು ದಿನಗಳವರೆಗೆ ಅಡಗಿಕೊಂಡಿದ್ದು ರಾಜಭಟರು ಹಿಂದಿರುಗಿದ ಮೇಲೆ ನೀವು ನಿಮ್ಮ ಸ್ಥಳಕ್ಕೆ ಹೋಗಬಹುದು” ಎಂದು ಹೇಳಿದಳು.

17 ಅವರು ಅವಳಿಗೆ, “ನಾವು ನಿನಗೊಂದು ಪ್ರಮಾಣ ಮಾಡಿದ್ದೇವೆ; ಆದರೆ ನೀನು ಒಂದು ಕೆಲಸ ಮಾಡಬೇಕು. ಇಲ್ಲವಾದರೆ ನಾವು ನಮ್ಮ ಪ್ರಮಾಣಕ್ಕೆ ಹೊಣೆಗಾರರಾಗುವುದಿಲ್ಲ. 18 ನಮ್ಮನ್ನು ಇಳಿಸುವುದಕ್ಕಾಗಿ ನೀನು ಉಪಯೋಗಿಸಿದ ಈ ಕೆಂಪು ಹಗ್ಗವನ್ನು ನಾವು ಈ ದೇಶಕ್ಕೆ ಹಿಂತಿರುಗಿ ಬರುವಾಗ ನೀನು ಕಿಟಕಿಗೆ ಕಟ್ಟಿರಬೇಕು. ನಿನ್ನ ತಂದೆತಾಯಿಗಳು, ನಿನ್ನ ಸಹೋದರ ಸಹೋದರಿಯರು ಮತ್ತು ನಿನ್ನ ಕುಟುಂಬ ವರ್ಗದವರು ನಿನ್ನ ಸಂಗಡ ಈ ಮನೆಯಲ್ಲಿರಬೇಕು. 19 ಈ ಮನೆಯಲ್ಲಿರುವ ಪ್ರತಿಯೊಬ್ಬರನ್ನು ನಾವು ಕಾಪಾಡುತ್ತೇವೆ. ನಿನ್ನ ಮನೆಯಲ್ಲಿ ಯಾರಿಗಾದರೂ ಪೆಟ್ಟಾದರೆ ಅದಕ್ಕೆ ನಾವು ಹೊಣೆಗಾರರಾಗುವೆವು. ಆದರೆ ಯಾರಾದರೂ ನಿನ್ನ ಮನೆಯಿಂದ ಹೊರಗೆ ಹೋದಾಗ ಕೊಲ್ಲಲ್ಪಟ್ಟರೆ ಅದಕ್ಕೆ ನಾವು ಹೊಣೆಗಾರರಲ್ಲ; ಅದಕ್ಕೆ ಅವರೇ ಹೊಣೆಗಾರರು. 20 ನಾನು ನಿನಗೆ ಈ ಪ್ರಮಾಣವನ್ನು ಮಾಡಿದ್ದೇವೆ. ಆದರೆ ಇದನ್ನು ನೀನು ಯಾರಿಗೂ ಹೇಳಕೂಡದು; ಒಂದುವೇಳೆ ಹೇಳಿದರೆ, ನಾವು ಈ ಪ್ರಮಾಣದಿಂದ ಮುಕ್ತರಾಗುತ್ತೇವೆ” ಎಂದು ಹೇಳಿದರು.

21 ಅದಕ್ಕೆ ಅವಳು, “ಹಾಗೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಳು. ಆ ಜನರು ಅವಳ ಮನೆಯಿಂದ ಹೊರಟರು. ಆಗ ಆ ಹೆಂಗಸು ಆ ಕೆಂಪು ಹಗ್ಗವನ್ನು ಕಿಟಿಕಿಗೆ ಕಟ್ಟಿದಳು.

22 ಅವರು ಅವಳ ಮನೆಯಿಂದ ಹೋಗಿ ಬೆಟ್ಟಗಳಲ್ಲಿ ಅಡಗಿಕೊಂಡು ಮೂರು ದಿನಗಳವರೆಗೆ ಅಲ್ಲೇ ಇದ್ದರು. ರಾಜಭಟರು ದಾರಿಯಲ್ಲೆಲ್ಲಾ ಹುಡುಕಾಡಿ ಕಾಣದೆ ಮೂರು ದಿನಗಳ ತರುವಾಯ ಪಟ್ಟಣಕ್ಕೆ ಹಿಂದಿರುಗಿದರು. 23 ಆಗ ಇವರಿಬ್ಬರು ಬೆಟ್ಟದಿಂದಿಳಿದು ನದಿಯನ್ನು ದಾಟಿ ಯೆಹೋಶುವನ ಬಳಿಗೆ ಹೋಗಿ ತಾವು ತಿಳಿದುಕೊಂಡ ಎಲ್ಲವನ್ನು ತಿಳಿಸಿದರು. ಅವರು ಯೆಹೋಶುವನಿಗೆ, 24 “ಯೆಹೋವನು ನಿಜವಾಗಿಯೂ ಆ ದೇಶವನ್ನೆಲ್ಲಾ ನಮಗೆ ದಯಪಾಲಿಸಿದ್ದಾನೆ. ಆ ದೇಶದ ಎಲ್ಲ ಜನರು ನಮ್ಮಿಂದ ಭಯಗೊಂಡಿದ್ದಾರೆ” ಎಂದು ತಿಳಿಸಿದರು.

ಕೀರ್ತನೆಗಳು 123-125

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
    ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
    ಯೆಹೋವನು ತನ್ನ ಜನರ ಸುತ್ತಲೂ ಇರುವನು.
    ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
    ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.

ಯೆಹೋವನೇ, ನೀತಿವಂತರಿಗೂ
    ಯಥಾರ್ಥವಂತರಿಗೂ ಉಪಕಾರಮಾಡು.
ದುಷ್ಟರು ಕುತಂತ್ರಗಳನ್ನು ಮಾಡುವರು.
    ಯೆಹೋವನು ಅವರನ್ನು ದಂಡಿಸುವನು.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

ಯೆಶಾಯ 62

ನೀತಿಯುತವಾದ ಹೊಸ ಜೆರುಸಲೇಮ್

62 ಚೀಯೋನನ್ನು ನಾನು ಪ್ರೀತಿಸುತ್ತೇನೆ.
    ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ.
    ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು.
    ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು.
    ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು;
    ಯೆಹೋವನು ತಾನೇ ಆ ಹೆಸರನ್ನು ಕೊಡುವನು.
ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು.
    ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.
ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ
    ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ.
“ದೇವರ ಪ್ರಿಯ ಜನರು” ಎಂದು ನೀನು ಕರೆಯಲ್ಪಡುವಿ.
    ನಿನ್ನ ದೇಶವು “ದೇವರ ಮದಲಗಿತ್ತಿ” ಎಂದು ಕರೆಯಲ್ಪಡುವದು.
ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ;
    ನಿನ್ನ ದೇಶವು ಆತನಿಗೆ ಸೇರಿದೆ.
ಯೌವನಸ್ಥನು ಕನ್ನಿಕೆಯನ್ನು ಪ್ರೀತಿಸಿ ಮದುವೆಯಾಗುವನು; ತನ್ನ ಹೆಂಡತಿಯನ್ನಾಗಿ ಆಕೆಯನ್ನು ಸ್ವೀಕರಿಸುವನು.
    ಅದೇ ರೀತಿಯಲ್ಲಿ ದೇವರು ನಿನ್ನನ್ನು ವಿವಾಹವಾಗುತ್ತಾನೆ.
    ದೇಶವು ತುಂಬಿಹೋಗುವಷ್ಟು ಮಕ್ಕಳನ್ನು ಆತನು ಪಡೆದುಕೊಳ್ಳುತ್ತಾನೆ.
ಒಬ್ಬನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಡನೆ
    ಉಲ್ಲಾಸದಿಂದಿರುವಂತೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.

ಜೆರುಸಲೇಮೇ, ನಿನ್ನ ಗೋಡೆಯ ಮೇಲೆ ನಾನು ಕಾವಲುಗಾರರನ್ನು ಇಟ್ಟಿರುತ್ತೇನೆ.
    ಆ ಕಾವಲುಗಾರರು ಮೌನವಾಗಿರುವದಿಲ್ಲ.
    ಅವರು ಹಗಲಿರುಳು ಪ್ರಾರ್ಥಿಸುತ್ತಾ ಇರುವರು.

ಕಾವಲುಗಾರರೇ, ನೀವು ಯೆಹೋವನಿಗೆ ಪ್ರಾರ್ಥಿಸುತ್ತಾ ಇರಬೇಕು.
    ಆತನ ವಾಗ್ದಾನಗಳನ್ನು ನೀವು ಆತನ ನೆನಪಿಗೆ ತರಬೇಕು.
    ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ.
ಜೆರುಸಲೇಮ್ ನಗರವು ಜನರ ಹೊಗಳಿಕೆಗೆ ಪಾತ್ರವಾಗುವಂತೆ
    ಯೆಹೋವನು ಮಾಡುವ ತನಕ ನೀವು ಆತನಿಗೆ ಪ್ರಾರ್ಥಿಸುತ್ತಿರಬೇಕು.

ಯೆಹೋವನು ವಾಗ್ದಾನವನ್ನು ಮಾಡಿರುತ್ತಾನೆ. ಆತನ ಸ್ವಂತ ಹೆಸರೇ ಅದಕ್ಕೆ ಸಾಕ್ಷಿಯಾಗಿದೆ.
    ಆತನು ತನ್ನ ಸಾಮರ್ಥ್ಯದಿಂದ ವಾಗ್ದಾನವನ್ನು ನೆರವೇರಿಸುವನು.
ಯೆಹೋವನು ಹೇಳಿದ್ದೇನೆಂದರೆ, “ನಿನ್ನ ಆಹಾರವನ್ನು ನಾನು ನಿನ್ನ ವೈರಿಗಳಿಗೆ ಮತ್ತೆ ಕೊಡುವದಿಲ್ಲವೆಂದು ವಾಗ್ದಾನ ಮಾಡುತ್ತೇನೆ.
    ನೀನು ತಯಾರಿಸುವ ದ್ರಾಕ್ಷಾರಸವನ್ನು ಇನ್ನು ಮುಂದೆ ನಿನ್ನ ವೈರಿಗಳು ಸೇವಿಸುವದಿಲ್ಲವೆಂದು ನಾನು ವಾಗ್ದಾನ ಮಾಡುತ್ತೇನೆ.
ಒಬ್ಬನು ಆಹಾರವನ್ನು ಒಟ್ಟುಗೂಡಿಸಿ ತಾನೇ ತಿನ್ನುವನು. ಅವನು ದೇವರನ್ನು ಸ್ತುತಿಸುವನು.
    ದ್ರಾಕ್ಷಿಹಣ್ಣನ್ನು ಶೇಖರಿಸುವವನು ಅದರ ರಸವನ್ನು ಕುಡಿಯುವನು. ಇವೆಲ್ಲವೂ ನನ್ನ ಪರಿಶುದ್ಧ ದೇಶದಲ್ಲಿ ಆಗುವದು.”[a]

10 ದ್ವಾರಗಳೊಳಗಿಂದ ಬನ್ನಿರಿ.
    ಜನರು ಬರುವದಕ್ಕೆ ದಾರಿಯನ್ನು ಸರಿಮಾಡಿರಿ.
ರಸ್ತೆಯನ್ನು ಸಿದ್ಧಪಡಿಸಿರಿ.
    ಅದರ ಮೇಲಿರುವ ಕಲ್ಲುಗಳನ್ನು ತೆಗೆದುಬಿಡಿರಿ.
ಜನಾಂಗಗಳು ಕಾಣುವಂತೆ ಧ್ವಜವನ್ನು ಏರಿಸಿರಿ.

11 ಇಗೋ, ಯೆಹೋವನು ದೂರದೇಶಗಳವರಿಗೆ ಹೇಳುವುದೇನೆಂದರೆ,
“ಚೀಯೋನಿನ ಜನರಿಗೆ ತಿಳಿಸಿರಿ:
    ‘ನೋಡು, ನಿನ್ನ ರಕ್ಷಕನು ಬರುತ್ತಿದ್ದಾನೆ.
    ತನ್ನ ಕೈಯಲ್ಲಿ ನಿನಗೆ ಪ್ರತಿಫಲವನ್ನು ತೆಗೆದುಕೊಂಡು ಬರುತ್ತಿದ್ದಾನೆ.’”
12 ಆತನ ಜನರು “ಪವಿತ್ರಜನ”ರೆಂದೂ,
    “ಯೆಹೋವನಿಂದ ರಕ್ಷಿಸಲ್ಪಟ್ಟವ”ರೆಂದೂ ಕರೆಯಲ್ಪಡುವರು.
ಜೆರುಸಲೇಮ್, “ದೇವರಿಗೆ ಬೇಕಾದ ಪಟ್ಟಣ”ವೆಂದೂ,
    “ದೇವರಿರುವ ಪಟ್ಟಣ”ವೆಂದೂ ಕರೆಯಲ್ಪಡುವದು.

ಮತ್ತಾಯ 10

ಯೇಸು ಅಪೊಸ್ತಲರಿಗೆ ಕೊಟ್ಟ ಆದೇಶ

(ಮಾರ್ಕ 3:13-19; 6:7-13; ಲೂಕ 6:12-16; 9:1-6)

10 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ದುರಾತ್ಮಗಳನ್ನು ಬಿಡಿಸುವುದಕ್ಕೂ ಎಲ್ಲಾ ತರದ ವ್ಯಾಧಿ ಮತ್ತು ಕಾಯಿಲೆಗಳನ್ನು ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು. ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿವೆ:

ಸೀಮೋನ (ಪೇತ್ರನೆಂದು ಕರೆಯುತ್ತಾರೆ) ಮತ್ತು

ಇವನ ಸಹೋದರ ಅಂದ್ರೆಯ,

ಜೆಬೆದಾಯನ ಮಗನಾದ ಯಾಕೋಬ,

ಅವನ ಸಹೋದರ ಯೋಹಾನ,

ಫಿಲಿಪ್ಪ

ಮತ್ತು ಬಾರ್ತೊಲೊಮಾಯ,

ತೋಮ,

ಸುಂಕವಸೂಲಿಗಾರನಾಗಿದ್ದ ಮತ್ತಾಯ,

ಅಲ್ಛಾಯನ ಮಗನಾದ ಯಾಕೋಬ,

ತದ್ದಾಯ,

ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದ ಸಿಮೋನ

ಮತ್ತು ಯೇಸುವನ್ನು ಶತ್ರುಗಳಿಗೆ ಒಪ್ಪಿಸಿದ ಇಸ್ಕರಿಯೋತ ಯೂದ.

ಯೇಸು ಈ ಹನ್ನೆರಡು ಅಪೊಸ್ತಲರಿಗೆ ಕೆಲವು ಆಜ್ಞೆಗಳನ್ನು ನೀಡಿ ಪರಲೋಕರಾಜ್ಯವನ್ನು ಕುರಿತು ತಿಳಿಸುವುದಕ್ಕಾಗಿ ಅವರನ್ನು ಕಳುಹಿಸಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ಯೆಹೂದ್ಯರಲ್ಲದ ಜನರ ಬಳಿಗಾಗಲಿ ಸಮಾರ್ಯದವರು ವಾಸಿಸುವ ಯಾವ ಊರಿಗಾಗಲಿ ಹೋಗಬೇಡಿ. ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, ಪರಲೋಕರಾಜ್ಯವು ಬೇಗನೆ ಬರುತ್ತದೆ ಎಂದು ಬೋಧಿಸಿ. ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ. ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. 10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.

11 “ನೀವು ಯಾವುದೇ ಊರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವ್ಯಕ್ತಿಯನ್ನು ಗುರುತಿಸಿ, ನೀವು ಆ ಊರನ್ನು ಬಿಡುವ ತನಕ ಅವನ ಮನೆಯಲ್ಲೇ ತಂಗಿರಿ. 12 ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 13 ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿಬರಲಿ. 14 ಒಂದು ಮನೆಯವರು ಅಥವಾ ಒಂದು ಊರಿನವರು ನಿಮ್ಮನ್ನು ಸ್ವಾಗತಿಸದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳದಿದ್ದರೆ ನೀವು ಆ ಸ್ಥಳವನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯವಿಚಾರಣೆಯ ದಿನದಲ್ಲಿ ಈ ಊರಿನ ಗತಿಯು ಸೊದೋಮ್ ಮತ್ತು ಗೊಮೋರಗಳಿಗಿಂತ ಬಹಳ ಕೆಟ್ಟದ್ದಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಹಿಂಸೆಯ ಕುರಿತು ಯೇಸುವಿನ ಎಚ್ಚರಿಕೆ

(ಮಾರ್ಕ 13:9-13; ಲೂಕ 21:12-17)

16 “ಕೇಳಿರಿ! ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದ್ದರಿಂದ ನೀವು ಹಾವುಗಳಂತೆ ಸೂಕ್ಷ್ಮ ಬುದ್ದಿಯುಳ್ಳವರಾಗಿರಿ, ಪಾರಿವಾಳಗಳಂತೆ ಯಾವ ಹಾನಿಯನ್ನೂ ಮಾಡದಿರಿ. 17 ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮನ್ನು ಅವರು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವರು. ಅವರು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನಿಮ್ಮನ್ನು ಅಧಿಕಾರಿಗಳ ಸಮ್ಮುಖಕ್ಕೂ ಅರಸುಗಳ ಸಮ್ಮುಖಕ್ಕೂ ಕರೆದುಕೊಂಡು ಹೋಗುವರು. ನನ್ನ ನಿಮಿತ್ತ ಜನರು ನಿಮಗೆ ಹೀಗೆ ಮಾಡುವರು. ಆದರೆ ನೀವು ಆ ಅರಸುಗಳಿಗೂ ಅಧಿಕಾರಿಗಳಿಗೂ ಯಹೂದ್ಯರಲ್ಲದ ಜನರಿಗೂ ನನ್ನ ವಿಷಯವಾಗಿ ಹೇಳುವಿರಿ. 19 ನಿಮ್ಮನ್ನು ಬಂಧಿಸಿದಾಗ ನೀವು ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ಚಿಂತಿಸಬೇಡಿ. ನೀವು ಹೇಳಬೇಕಾದುವುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು. 20 ಮಾತಾಡುವವರು ನಿಜವಾಗಿಯೂ ನೀವಲ್ಲ. ನಿಮ್ಮ ತಂದೆಯ ಆತ್ಮನೇ ನಿಮ್ಮ ಮೂಲಕ ಮಾತನಾಡುತ್ತಾನೆ.

21 “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. ತಂದೆಯಂದಿರು ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. 22 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು. 23 ಒಂದು ಊರಿನಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಊರಿಗೆ ಹೋಗಿ. ಮನುಷ್ಯಕುಮಾರನು ಪುನಃ ಬರುವುದಕ್ಕಿಂತ ಮುಂಚೆ ನೀವು ಇಸ್ರೇಲರ ಊರುಗಳಿಗೆಲ್ಲಾ ಹೋಗುವುದನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

24 “ಶಿಷ್ಯನು ಗುರುವಿಗಿಂತ ಉತ್ತಮನಲ್ಲ. ಆಳು ತನ್ನ ದಣಿಗಿಂತ ಉತ್ತಮನಲ್ಲ. 25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?

ಭಯಪಡಬೇಕಾದದ್ದು ದೇವರಿಗೆ, ಮನುಷ್ಯರಿಗಲ್ಲ

(ಲೂಕ 12:2-7)

26 “ಆದಕಾರಣ ಆ ಜನರಿಗೆ ಹೆದರಬೇಡಿ. ಮರೆಯಾಗಿರುವ ಪ್ರತಿಯೊಂದೂ ಬಹಿರಂಗವಾಗುವುದು. ಗುಪ್ತವಾಗಿರುವ ಪ್ರತಿ ಸಂಗತಿಯು ಬಯಲಾಗುವುದು. 27 ನಾನು ಕತ್ತಲೆಯಲ್ಲಿ (ರಹಸ್ಯವಾಗಿ) ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದೇನೆ. ಆದರೆ ನೀವು ಈ ಸಂಗತಿಗಳನ್ನು ಬೆಳಕಿನಲ್ಲಿ ಹೇಳಬೇಕೆಂಬುದು ನನ್ನ ಇಷ್ಟ. ನಾನು ಈ ವಿಷಯಗಳನ್ನು ನಿಮಗೆ ಮೆಲ್ಲಗೆ ಹೇಳುತ್ತಿದ್ದೇನೆ. ಆದರೆ ನೀವು ಈ ವಿಷಯಗಳನ್ನು ಜನರಿಗೆಲ್ಲ ಗಟ್ಟಿಯಾಗಿ ಹೇಳಿರಿ.

28 “ಜನರಿಗೆ ಹೆದರಬೇಡಿ. ಅವರು ಶರೀರವನ್ನು ಮಾತ್ರ ಕೊಲ್ಲಬಹುದು. ಆತ್ಮವನ್ನು ಅವರು ಕೊಲ್ಲಲಾರರು. ಶರೀರವನ್ನೂ ಆತ್ಮವನ್ನೂ ನರಕಕ್ಕೆ ಹಾಕಬಲ್ಲ ದೇವರಿಗೆ ಭಯಪಡಿರಿ. 29 ಮಾರುಕಟ್ಟೆಯಲ್ಲಿ ಎರಡು ಗುಬ್ಬಚ್ಚಿಗಳನ್ನು ಒಂದು ನಾಣ್ಯಕ್ಕೆ[a] ಮಾರುತ್ತಾರೆ. ಆದರೆ ನಿಮ್ಮ ತಂದೆಯು ಅಪ್ಪಣೆ ಕೊಡದ ಹೊರತು ಅವುಗಳಲ್ಲಿ ಒಂದಾದರೂ ಸಾಯುವುದಿಲ್ಲ. 30 ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳು ಇವೆ ಎಂಬುದು ಸಹ ದೇವರಿಗೆ ತಿಳಿದಿದೆ. 31 ಆದಕಾರಣ ಹೆದರಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ನಿಮ್ಮ ನಂಬಿಕೆಯ ಕುರಿತು ಬಹಿರಂಗ ಸಾಕ್ಷಿ

(ಲೂಕ 12:8-9)

32 “ಒಬ್ಬನು ಬೇರೆಯವರ ಮುಂದೆ, ತಾನು ನನ್ನವನೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ನನ್ನವನೆಂದು ಹೇಳುತ್ತೇನೆ. 33 ಆದರೆ ಒಬ್ಬನು ಜನರ ಮುಂದೆ, ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನು ನನ್ನವನಲ್ಲವೆಂದು ಹೇಳುತ್ತೇನೆ.

ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು

(ಲೂಕ 12:51-53; 14:26-27)

34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:

‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)

37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.

ದೇವಜನರನ್ನು ಸ್ವಾಗತಿಸುವವನಿಗೆ ಆಶೀರ್ವಾದ

(ಮಾರ್ಕ 9:41)

40 “ನಿಮ್ಮನ್ನು ಅಂಗೀಕರಿಸುವವನು ನನ್ನನ್ನು ಸಹ ಅಂಗೀಕರಿಸುವನು. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನು (ದೇವರನ್ನು) ಸಹ ಅಂಗೀಕರಿಸುವನು. 41 ಪ್ರವಾದಿಯನ್ನು ಪ್ರವಾದಿಯೆಂದು ಸಂಧಿಸಿ ಸ್ವಾಗತಿಸುವವನು ಆ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಆ ಸತ್ಪುರುಷನಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. 42 ದೀನರಾದ ಇವರಿಗೆ ನನ್ನ ಹಿಂಬಾಲಕರೆಂಬ ನಿಮಿತ್ತ ಸಹಾಯ ಮಾಡುವವನು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುವನು. ನನ್ನ ಹಿಂಬಾಲಕರಿಗೆ ಕೇವಲ ಒಂದು ಬಟ್ಟಲು ತಣ್ಣೀರನ್ನು ಕೊಟ್ಟರೂ ಸಹ ಅದಕ್ಕೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International