Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 32

32 “ಆಕಾಶವೇ, ನಾನು ಹೇಳುವುದನ್ನು ಕೇಳು.
    ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಆಲಿಸು.
ನನ್ನ ಬೋಧನೆಯು ಮಳೆಯಂತೆ ಬರುವುದು.
    ನೆಲದ ಮೇಲೆ ಬೀಳುವ ಇಬ್ಬನಿಯಂತಿರುವುದು;
ಮೃದುವಾದ ಹುಲ್ಲಿನ ಮೇಲೆ ಬೀಳುವ ಹದವಾದ ಮಳೆಯಂತಿರುವುದು;
    ಹಸಿರು ಸಸಿಗಳ ಮೇಲೆ ಬೀಳುವ ಮಳೆಯ ಹನಿಯಂತಿರುವುದು.
ಯೆಹೋವನ ಹೆಸರಿನಲ್ಲಿ
    ಮಾತಾಡುವಂತೆ ಮಾಡಿದ ದೇವರಿಗೆ ಸ್ತೋತ್ರ!

“ಯೆಹೋವನ ಕಾರ್ಯವು ನಿಷ್ಕಳಂಕವಾದದ್ದು.
    ಯಾಕೆಂದರೆ ಆತನ ಮಾರ್ಗವೆಲ್ಲವೂ ಸರಿಯಾದದ್ದೇ.
ದೇವರು ಸತ್ಯವಂತನೂ ನಂಬಿಗಸ್ತನೂ ಆಗಿದ್ದಾನೆ.
    ಆತನು ಒಳ್ಳೆಯವನೂ ಪ್ರಾಮಾಣಿಕನೂ ಆಗಿದ್ದಾನೆ.
ನೀವು ದ್ರೋಹಿಗಳೇ, ನೀವು ಆತನ ಮಕ್ಕಳಲ್ಲ.
    ನಿಮ್ಮ ಪಾಪಗಳು ಆತನನ್ನು ಮಲಿನ ಮಾಡುವವು.
    ನೀವು ಡೊಂಕಾದ ಸುಳ್ಳುಗಾರರು.
ಹೀಗೆ ಆತನು ನಿಮಗೆ ಮಾಡಿದ ಒಳ್ಳೆಯದಕ್ಕೆ ಉಪಕಾರ ತೋರಿಸುವಿರಾ?
    ಇಲ್ಲ! ನೀವು ಬುದ್ಧಿಹೀನರಾಗಿದ್ದೀರಿ.
ಯೆಹೋವನು ನಿಮ್ಮ ತಂದೆಯಾಗಿದ್ದಾನೆ. ಆತನೇ ನಿಮ್ಮನ್ನು ನಿರ್ಮಿಸಿದಾತನು.
    ಆತನೇ ನಿಮ್ಮನ್ನು ಉಂಟುಮಾಡಿದಾತನು. ಆತನೇ ಆಧಾರ ನೀಡುವಾತನು.

“ಹಿಂದೆ ಏನಾಯಿತೆಂದು ಜ್ಞಾಪಕಕ್ಕೆ ತಂದುಕೊಳ್ಳಿರಿ.
    ಬಹಳ ವರ್ಷಗಳ ಹಿಂದೆ ನಡೆದದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ.
ನಿಮ್ಮ ತಂದೆಗಳನ್ನು ಕೇಳಿ, ಅವರು ಹೇಳುವರು.
    ನಿಮ್ಮ ಹಿರಿಯರನ್ನು ವಿಚಾರಿಸಿ, ಅವರು ಹೇಳುವರು.
ಪರಲೋಕದಲ್ಲಿರುವ ದೇವರು ಭೂಮಿಯ ಮೇಲಿದ್ದ ಜನರನ್ನು ಪ್ರತ್ಯೇಕಿಸಿದನು.
    ಪ್ರತಿಯೊಂದು ಜನಾಂಗಕ್ಕೆ ಅದರದೇ ಆದ ದೇಶವನ್ನು ಕೊಟ್ಟನು.
ಅದಕ್ಕೆ ಮೇರೆಯನ್ನು ಆತನು ಮಾಡಿಕೊಟ್ಟನು.
    ಇಸ್ರೇಲರಲ್ಲಿ ಎಷ್ಟು ಜನರು ಇದ್ದಾರೋ ಅಷ್ಟು ಜನಾಂಗಗಳಿವೆ.
ಯೆಹೋವನ ಪಾಲು ಆತನ ಜನರೇ.
    ಇಸ್ರೇಲನ ವಂಶಸ್ಥರು ದೇವಜನರಾಗಿದ್ದಾರೆ.

10 “ಮರುಭೂಮಿಯಲ್ಲಿ ಯೆಹೋವನು ಇಸ್ರೇಲನನ್ನು ಕಂಡನು.
    ಅದು ಬರಿದಾದ ಗಾಳಿ ಬೀಸುತ್ತಿದ್ದ ಸ್ಥಳವಾಗಿತ್ತು.
ಯೆಹೋವನು ಅದನ್ನು ಸುತ್ತುವರಿದು ಇಸ್ರೇಲನ್ನು ಸಂರಕ್ಷಿಸಿದನು;
    ತನ್ನ ಕಣ್ಣುಗುಡ್ಡೆಯಂತೆ ಅವರನ್ನು ಕಾಪಾಡಿದನು.
11 ಇಸ್ರೇಲರಿಗೆ ಯೆಹೋವನು ಹದ್ದಿನಂತಿರುವನು!
    ಹದ್ದು ತನ್ನ ಮರಿಗಳಿಗೆ ಹಾರಲು ಕಲಿಸಲು ಗೂಡಿನಿಂದ ಕೆಳಕ್ಕೆ ತಳ್ಳುವುದು.
ಮರಿಗಳು ಕೆಳಗೆ ಬೀಳದಂತೆ ಅವುಗಳ ಜೊತೆಯಲ್ಲಿ ಹಾರಾಡುವುದು.
    ಅವುಗಳು ಬೀಳುವಾಗ ತನ್ನ ರಕ್ಕೆಯನ್ನು ಚಾಚಿ ಬೀಳದಂತೆ ಮಾಡುವದು.
ನಂತರ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದು.
    ಯೆಹೋವನು ಅದರಂತೆಯೇ.
12 ಯೆಹೋವನೇ ಇಸ್ರೇಲನ್ನು ನಡೆಸಿದನು.
    ಅನ್ಯದೇವರು ಸಹಾಯ ಮಾಡಲಿಲ್ಲ.
13 ಬೆಟ್ಟಗುಡ್ಡಗಳ ಪ್ರಾಂತ್ಯವನ್ನು ವಶಪಡಿಸಲು ಇಸ್ರೇಲನ್ನು ನಡೆಸಿದನು.
    ಹೊಲದ ಬೆಳೆಯನ್ನು ಇಸ್ರೇಲ್ ಕೊಯಿಲು ಮಾಡಿದನು.
ಬಂಡೆಯಿಂದ ಜೇನನ್ನು ಯೆಹೋವನು ಇಸ್ರೇಲಿಗೆ ಕೊಟ್ಟನು.
    ಗಟ್ಟಿಯಾದ ಬಂಡೆಯಿಂದ ಎಣ್ಣೆಯು ಹೊರಡುವಂತೆ ಮಾಡಿದನು.
14 ಯೆಹೋವನು ಇಸ್ರೇಲಿಗೆ ಹಿಂಡಿನಿಂದ ಬೆಣ್ಣೆಯನ್ನೂ ಹಾಲನ್ನೂ ಕೊಟ್ಟನು.
    ಆತನು ಕೊಬ್ಬಿದ ಕುರಿಮರಿಗಳನ್ನೂ ಆಡುಗಳನ್ನೂ
ಬಾಷಾನಿನ ಅತ್ಯುತ್ತಮವಾದ ಟಗರುಗಳನ್ನೂ ಕೊಟ್ಟನು.
ಜೊತೆಗೆ ಉತ್ತಮವಾದ ಗೋಧಿಯನ್ನೂ ಕೊಟ್ಟನು.
    ಇಸ್ರೇಲಿನ ಜನರು ಕೆಂಪು ದ್ರಾಕ್ಷಿಯಿಂದ ಮಾಡಿದ ಉತ್ತಮ ದ್ರಾಕ್ಷಾರಸವನ್ನು ಕುಡಿದರು.

15 “ಆದರೆ ಯೆಶುರೂನು ಕೊಬ್ಬಿದನು; ಕೊಬ್ಬಿದ ಹೋರಿಯಂತೆ ಒದ್ದನು;
    ಅವನು ಚೆನ್ನಾಗಿ ತಿಂದು ಕೊಬ್ಬಿ ಊದಿಕೊಂಡನು;
ತನ್ನ ನಿರ್ಮಾಣಿಕನಾದ ಯೆಹೋವನನ್ನು ತೊರೆದನು;
    ತನ್ನನ್ನು ಸಂರಕ್ಷಿಸಿದ ಬಂಡೆಯಿಂದ ಓಡಿಹೋದನು;
16 ದೇವಜನರು ಇತರ ದೇವರುಗಳನ್ನು ಪೂಜಿಸಿ ಯೆಹೋವನನ್ನು ರೇಗಿಸಿದರು.
    ಅವರು ಅಸಹ್ಯ ವಿಗ್ರಹಗಳನ್ನು ಪೂಜಿಸಿ ಯೆಹೋವನನ್ನು ಸಿಟ್ಟಿಗೆಬ್ಬಿಸಿದರು.
17 ಅವರು ದೆವ್ವಗಳಿಗೆ ಯಜ್ಞವನ್ನರ್ಪಿಸಿದರು. ಅವುಗಳು ನಿಜ ದೇವರುಗಳಲ್ಲ.
    ಅವುಗಳು ಮಾಡಲ್ಪಟ್ಟ ದೇವರುಗಳೆಂದು ಅವರಿಗೆ ಗೊತ್ತಿರಲಿಲ್ಲ.
    ಅವುಗಳು ಕೈಯಿಂದ ಮಾಡಲ್ಪಟ್ಟ ದೇವರುಗಳು.
    ಅವರ ಪೂರ್ವಿಕರಿಗೆ ತಿಳಿಯದಂಥ ದೇವರುಗಳು.
18 ನೀವು ನಿಮ್ಮನ್ನು ನಿರ್ಮಿಸಿದ ಬಂಡೆಯಂತಿರುವ ದೇವರನ್ನು ತೊರೆದುಬಿಟ್ಟಿರಿ;
    ನಿಮಗೆ ಪ್ರಾಣವನ್ನು ಕೊಟ್ಟ ದೇವರನ್ನು ನೀವು ಮರೆತುಬಿಟ್ಟಿರಿ.

19 “ಯೆಹೋವನು ಇದನ್ನು ನೋಡಿ ಕೋಪಗೊಂಡನು.
    ಆತನ ಮಕ್ಕಳೇ ಆತನನ್ನು ಸಿಟ್ಟಿಗೆಬ್ಬಿಸಿದರು.
20 ಆಗ ಯೆಹೋವನು, ‘ನಾನು ಅವರಿಗೆ ವಿಮುಖನಾಗುವೆನು.
    ಆಗ ಅವರಿಗೇನು ಸಂಭವಿಸುವುದೋ ನೋಡೋಣ.
ಅವರು ಎದುರುಬೀಳುವ ಜನರಾಗಿದ್ದಾರೆ.
    ಅವರು ತಮ್ಮ ಪಾಠಗಳನ್ನು ಕಲಿಯದ ಮಕ್ಕಳಂತಿದ್ದಾರೆ.
21 ಅವರು ದೆವ್ವಗಳನ್ನು ದೇವರನ್ನಾಗಿ ಮಾಡಿ ನನ್ನಲ್ಲಿ ಅಸೂಯೆಯನ್ನು ಉಂಟುಮಾಡಿದರು.
ಆ ವಿಗ್ರಹಗಳು ನಿಜವಾದ ದೇವರುಗಳಲ್ಲ!
    ಅವರು ಪ್ರಯೋಜನವಿಲ್ಲದ ವಿಗ್ರಹಗಳನ್ನು ಮಾಡಿ ನನ್ನನ್ನು ಸಿಟ್ಟಿಗೆಬ್ಬಿಸಿದರು.
ಆದ್ದರಿಂದ ನಿಜವಾದ ಜನಾಂಗವಲ್ಲದವರಿಂದ ನಾನು ಅವರಲ್ಲಿ ಈರ್ಷೆಯನ್ನು ಉಂಟು ಮಾಡುವೆನು.
    ಮೂರ್ಖ ಜನಾಂಗದಿಂದ ಅವರನ್ನು ಸಿಟ್ಟಿಗೆಬ್ಬಿಸುವೆನು.
22 ನನ್ನ ಕೋಪವು ಬೆಂಕಿಯಂತೆ ದಹಿಸುವುದು;
    ಪಾತಾಳವನ್ನು ಸುಡುವುದು.
ಭೂಮಿಯನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಸುಡುವುದು.
    ಪರ್ವತಗಳ ಬುಡದ ಕೆಳಗೂ ದಹಿಸುವುದು.

23 “‘ನಾನು ಇಸ್ರೇಲಿಗೆ ಸಂಕಟವನ್ನು ಬರಮಾಡುವೆನು.
    ನನ್ನ ಬಾಣಗಳನ್ನೆಲ್ಲಾ ಅದಕ್ಕೆ ಬಿಡುವೆನು.
24 ಹಸಿವೆಯಿಂದ ಅವರು ಕ್ಷೀಣವಾಗುವರು;
    ಭಯಂಕರ ವ್ಯಾಧಿಯಿಂದ ಅವರು ನಾಶವಾಗುವರು.
ಕಾಡುಪ್ರಾಣಿಗಳನ್ನು ಅವರ ಮಧ್ಯೆ ಕಳುಹಿಸುವೆನು.
    ವಿಷಸರ್ಪಗಳೂ ಹಲ್ಲಿಗಳೂ ಅವರನ್ನು ಕಚ್ಚುವವು.
25 ರಸ್ತೆಗಳಲ್ಲಿ ಸಿಪಾಯಿಗಳು ಅವರನ್ನು ಕೊಲ್ಲುವರು.
    ಅವರ ಮನೆಗಳಲ್ಲಿ ಭಯಂಕರ ಸಂಗತಿಗಳು ನಡೆಯುವವು.
ಯುವಕಯುವತಿಯರನ್ನೂ ಸಿಪಾಯಿಗಳು ಕೊಲ್ಲುವರು,
    ಮುದುಕರನ್ನೂ ಎಳೆಗೂಸುಗಳನ್ನೂ ಸಂಹರಿಸುವರು.

26 “‘ನಾನು ಇಸ್ರೇಲರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಯೋಚಿಸಿದೆನು.
    ಲೋಕದಲ್ಲಿ ಅವರ ಹೆಸರು ಉಳಿಯದಂತೆ ಮಾಡುವೆನು ಎಂದು ನೆನಸಿದೆನು.
27 ಆದರೆ ಅವರ ವೈರಿಗಳು ಏನು ಹೇಳುತ್ತಾರೆಂಬುದು ನನಗೆ ಗೊತ್ತಿದೆ.
    ವೈರಿಯು ಅರ್ಥಮಾಡಿಕೊಳ್ಳುವುದಿಲ್ಲ,
ಅವರಿಗೆ ವಿಷಯವು ತಿಳಿಯದು. ಅವರು ಜಂಬದಿಂದ ಹೀಗೆ ಹೇಳುವರು,
    “ಯೆಹೋವನು ಇಸ್ರೇಲನ್ನು ನಾಶಮಾಡಲಿಲ್ಲ.
    ನಾವು ನಮ್ಮ ಬಲದಿಂದಲೇ ಅವರನ್ನು ಬಡಿದುಹಾಕಿದೆವು.”’

28 “ಇಸ್ರೇಲರು ಬುದ್ಧಿಹೀನರಾಗಿದ್ದಾರೆ;
    ಅವರಿಗೇನೂ ತಿಳಿಯುವುದಿಲ್ಲ.
29 ಅವರು ಬುದ್ಧಿವಂತರಾಗಿದ್ದಲ್ಲಿ
    ಅವರಿಗೆ ಏನು ಸಂಭವಿಸುವುದೆಂದು ಅವರು ತಿಳಿಯುತ್ತಿದ್ದರು.
30 ಒಬ್ಬನು ಸಾವಿರ ಮಂದಿಯನ್ನು ಓಡಿಸಬಲ್ಲನೇ?
    ಇಬ್ಬರು ಹತ್ತು ಸಾವಿರ ಮಂದಿಯನ್ನು ಓಡಿಸುವರೇ?
ಯೆಹೋವನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುವಾಗ ಹಾಗೆಯೇ ಆಗುವುದು,
    ಅವರ ಬಂಡೆಯಾದ ದೇವರು ಅವರನ್ನು ಗುಲಾಮರನ್ನಾಗಿ ಮಾರುವನು;
31 ನಮ್ಮ ವೈರಿಗಳ ಬಂಡೆಯು ನಮ್ಮ ಬಂಡೆಯಂತೆ ಬಲಶಾಲಿಯಲ್ಲ.
    ವೈರಿಗಳಿಗೂ ಇದು ಗೊತ್ತಿದೆ.
32 ಅವರ ಹೊಲಗಳೂ ದ್ರಾಕ್ಷಾಲತೆಗಳೂ
    ಸೊದೋಮ್ ಗೊಮೋರಗಳಂತೆ ನಾಶ ಮಾಡಲ್ಪಡುವವು.
33 ಅವರ ದ್ರಾಕ್ಷೆಯು ವಿಷದಂತೆಯೂ
    ಅವರ ದ್ರಾಕ್ಷಾರಸವು ಹಾವಿನ ವಿಷದಂತೆಯೂ ಕಹಿಯಾಗಿವೆ.

34 “ಯೆಹೋವನು ಹೀಗೆನ್ನುತ್ತಾನೆ: ‘ಆ ಶಿಕ್ಷೆಯನ್ನು ನಾನು ಜೋಪಾನವಾಗಿಟ್ಟಿದ್ದೇನೆ.
    ಅದನ್ನು ನಾನು ನನ್ನ ಉಗ್ರಾಣದಲ್ಲಿ ಸುರಕ್ಷಿತವಾಗಿರಿಸಿದ್ದೇನೆ.
35 ಅವರ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಶಿಕ್ಷಿಸುವೆನು.
    ಅವರು ಜಾರಿ ಕೆಟ್ಟಕಾರ್ಯಗಳನ್ನು ಮಾಡಿದಾಗ ನಾನು ಅವರನ್ನು ಶಿಕ್ಷಿಸುವೆನು.
ಅವರ ಮಹಾಸಂಕಟ ಕಾಲವು ಹತ್ತಿರವೇ ಇದೆ.
    ಅವರಿಗೋಸ್ಕರ ಸಿದ್ಧವಾಗಿರುವ ಶಿಕ್ಷೆಯು ಬೇಗನೆ ಬರುತ್ತದೆ.’

36 “ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು.
    ಅವರು ಆತನ ಸೇವಕರಾಗಿದ್ದಾರೆ.
    ಆತನು ಅವರಿಗೆ ಕರುಣೆ ತೋರುವನು.
ಅವರ ಬಲವು ಕುಂದುವಂತೆ ಮಾಡುವನು.
    ಗುಲಾಮರಾಗಿರಲಿ ಸ್ವತಂತ್ರರಾಗಿರಲಿ ಅವರನ್ನು ಆತನು ನಿಸ್ಸಹಾಯಕರನ್ನಾಗಿ ಮಾಡುವನು.
37 ಆಗ ಯೆಹೋವನು ಹೀಗೆನ್ನುವನು: ‘ನಿಮ್ಮ ಸುಳ್ಳುದೇವರುಗಳೆಲ್ಲಿ?
    ನಿಮ್ಮ ಸಂರಕ್ಷಣೆಗಾಗಿ ನೀವು ಆಶ್ರಯಿಸಿಕೊಂಡಿದ್ದ “ಬಂಡೆ” ಎಲ್ಲಿ?
38 ನಿಮ್ಮ ಯಜ್ಞಗಳ ಕೊಬ್ಬನ್ನು ಆ ಸುಳ್ಳುದೇವರುಗಳು ತಿಂದುಬಿಟ್ಟವು.
    ನೀವು ಅರ್ಪಿಸಿದ ದ್ರಾಕ್ಷಾರಸವನ್ನು ಕುಡಿದುಬಿಟ್ಟವು.
ಆ ದೇವರುಗಳೆದ್ದು ನಿಮಗೆ ಸಹಾಯಮಾಡಲಿ.
    ಅವುಗಳು ನಿಮ್ಮನ್ನು ಸಂರಕ್ಷಿಸಲಿ.

39 “‘ನಾನೇ ದೇವರು, ನನ್ನ ಹೊರತು ಬೇರೆ ದೇವರಿಲ್ಲ.
    ಜನರಿಗೆ ಮರಣವನ್ನೂ ಜೀವವನ್ನೂ ಕೊಡುವವನು ನಾನೇ.
ಅವರಿಗೆ ಗಾಯ ಮಾಡುವವನೂ ನಾನೇ,
    ಅದನ್ನು ಗುಣಮಾಡುವವನೂ ನಾನೇ.
ನನ್ನ ಶಕ್ತಿಯ ಹಿಡಿತದಿಂದ ಇನ್ನೊಬ್ಬನನ್ನು
    ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ.
40 ನನ್ನ ಕೈಗಳನ್ನು ಆಕಾಶದ ಕಡೆಗೆತ್ತಿ ವಚನ ಕೊಡುತ್ತೇನೆ.
    ನಾನು ನಿತ್ಯಕಾಲಕ್ಕೆ ಜೀವಿಸುವುದು ಎಷ್ಟು ಸತ್ಯವೋ ಅದೇರೀತಿ ಇವೆಲ್ಲವೂ ನೆರವೇರುವವು.
41 ಥಳಥಳಿಸುವ ನನ್ನ ಖಡ್ಗವನ್ನು ನಾನು ಹದಮಾಡುವೆನು.
    ನನ್ನ ವೈರಿಗಳನ್ನು ಶಿಕ್ಷಿಸಲು ನಾನದನ್ನು ಉಪಯೋಗಿಸುವೆನು.
ನಾನು ಅವರಿಗೆ ಯೋಗ್ಯವಾದ ದಂಡನೆಯನ್ನು ಕೊಡುವೆನು
    ಎಂದು ನಾನು ಆಣೆಯಿಟ್ಟು ಹೇಳುತ್ತೇನೆ.
42 ನನ್ನ ವೈರಿಗಳು ಕೊಲ್ಲಲ್ಪಡುವರು ಮತ್ತು ಸೆರೆಯಾಳುಗಳಾಗಿ ಒಯ್ಯಲ್ಪಡುವರು.
    ನನ್ನ ಬಾಣಗಳು ಅವರ ರಕ್ತದಿಂದ ಮುಚ್ಚಲ್ಪಟ್ಟಿವೆ.
    ನನ್ನ ಖಡ್ಗವು ಅವರ ಸೈನಿಕರ ತಲೆಯನ್ನು ಕತ್ತರಿಸುವುದು.’”

43 “ಭೂಲೋಕವೆಲ್ಲಾ ದೇವಜನರಿಗಾಗಿ ಸಂತೋಷಿಸುವದು;
    ಯಾಕೆಂದರೆ ಆತನು ಅವರನ್ನು ಸಾಯಿಸುವನು;
ತನ್ನ ಸೇವಕರನ್ನು ಸಂಹರಿಸುವವರನ್ನು ಶಿಕ್ಷಿಸುವನು; ತನ್ನ ವೈರಿಗಳಿಗೆ ತಕ್ಕ ದಂಡನೆ ಕೊಡುವನು.
    ತನ್ನ ದೇಶವನ್ನೂ ತನ್ನ ಜನರನ್ನೂ ಶುದ್ಧಿ ಮಾಡುವನು.”

ಮೋಶೆಯು ಜನರಿಗೆ ಹಾಡನ್ನು ಕಲಿಸಿದನು

44 ಮೋಶೆಯು ಈ ಹಾಡಿನ ಎಲ್ಲಾ ಪದಗಳನ್ನು ಇಸ್ರೇಲರು ಕೇಳುವಂತೆ ಹೇಳಿದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಂಗಡ ಇದ್ದನು. 45 ಮೋಶೆಯು ಜನರಿಗೆ ಬೋಧಿಸಿದ ಬಳಿಕ 46 ಹೀಗೆ ಹೇಳಿದನು: “ನಾನು ಈ ದಿನ ಹೇಳಿದ ಎಲ್ಲಾ ಆಜ್ಞೆಗಳನ್ನು ಅನುಸರಿಸಲು ಜಾಗರೂಕರಾಗಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ ತಿಳಿಸಿ; ಕಟ್ಟಳೆಗಳನ್ನು ಸಂಪೂರ್ಣವಾಗಿ ಕೈಗೊಳ್ಳುವಂತೆ ಅವರಿಗೆ ಬೋಧಿಸಿರಿ, ಕಲಿಸಿರಿ. 47 ಈ ಬೋಧನೆಗಳು ಮುಖ್ಯವಾದವುಗಳಲ್ಲವೆಂದು ತಿಳಿಯಬೇಡಿ. ಅವು ನಿಮ್ಮ ಜೀವವಾಗಿವೆ. ನೀವು ತೆಗೆದುಕೊಳ್ಳಲು ಸಿದ್ಧವಾಗಿರುವ ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ದೇಶದಲ್ಲಿ ಈ ಉಪದೇಶಗಳ ಮೂಲಕ ಬಹುಕಾಲ ಬದುಕುವಿರಿ.”

ನೆಬೋ ಪರ್ವತದ ಮೇಲೆ ಮೋಶೆ

48 ಅದೇ ದಿನದಲ್ಲಿ ಯೆಹೋವನು ಮೋಶೆಯೊಂದಿಗೆ ಮಾತನಾಡಿ, 49 “ಮೋವಾಬ್ ಪ್ರಾಂತ್ಯದಲ್ಲಿರುವ ಅಬಾರೀಮ್ ಬೆಟ್ಟದ ಸಾಲಿಗೆ ಹೋಗಿ ಅಲ್ಲಿ ನೆಬೋ ಬೆಟ್ಟವನ್ನೇರು. ಇದು ಜೆರಿಕೊ ಕೋಟೆಗೆ ಎದುರಾಗಿ ಇದೆ. ಅಲ್ಲಿಂದ ನಾನು ಇಸ್ರೇಲರಿಗೆ ಕೊಡುವ ಕಾನಾನ್ ದೇಶವನ್ನು ನೀನು ನೋಡುವಿ. 50 ನಿನ್ನ ಅಣ್ಣನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತುಹೋದಂತೆಯೇ ನೀನೂ ನೆಬೋ ಬೆಟ್ಟದ ಮೇಲೆ ಸಾಯುವೆ. 51 ಯಾಕೆಂದರೆ ನೀವಿಬ್ಬರೂ ನನಗೆ ವಿರುದ್ಧವಾಗಿ ಪಾಪಮಾಡಿದಿರಿ. ಚಿನ್ ಮರುಭೂಮಿಯಲ್ಲಿರುವ ಕಾದೇಶ್ ಬಳಿಯಲ್ಲಿದ್ದ ಮೆರೀಬಾ ಎಂಬ ಸ್ಥಳದ ನೀರಿನ ಬಳಿಯಲ್ಲಿ ನೀನು ಜನರ ಮುಂದೆ ನನ್ನನ್ನು ಅವಮಾನಪಡಿಸಿದೆ. ನೀನು ನನ್ನನ್ನು ಮಹಾಪವಿತ್ರನೆಂದು ಗೌರವಿಸಬೇಕಿತ್ತು, ಆದರೆ ನೀನು ಗೌರವಿಸಲಿಲ್ಲ. 52 ಆದ್ದರಿಂದ ನಾನು ಇಸ್ರೇಲರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡುವೆ, ಆದರೆ ಅದನ್ನು ಪ್ರವೇಶಿಸುವುದಿಲ್ಲ” ಎಂದು ಹೇಳಿದನು.

ಕೀರ್ತನೆಗಳು 119:121-144

121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
    ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
    ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
    ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
    ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
    ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
    ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
    ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.

129 ನಿನ್ನ ಕಟ್ಟಳೆಗಳು ಆಶ್ಚರ್ಯಕರವಾಗಿವೆ.
    ಪೂರ್ಣಹೃದಯದಿಂದ ಅವುಗಳನ್ನು ಅನುಸರಿಸುವೆನು.
130 ಜನರು ನಿನ್ನ ವಾಕ್ಯವನ್ನು ಅರ್ಥಮಾಡಿಕೊಂಡಾಗ ಅದು ಅವರಿಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿರುವುದು.
    ನಿನ್ನ ವಾಕ್ಯವು ಸಾಮಾನ್ಯರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
131 ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ನಿಜವಾಗಿಯೂ ಇಷ್ಟ.
    ನಾನು ಏದುಸಿರುಬಿಡುತ್ತಾ ಲವಲವಿಕೆಯಿಂದ ನಿನ್ನ ಆಜ್ಞೆಗಳಿಗಾಗಿ ಕಾಯುತ್ತಿದ್ದೇನೆ.
132 ನನ್ನನ್ನು ನೋಡಿ ಕರುಣಿಸು.
    ನಿನ್ನ ಹೆಸರನ್ನು ಪ್ರೀತಿಸುವವರಿಗೆ ಯೋಗ್ಯವಾದುವುಗಳನ್ನು ಮಾಡು.
133 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಮಾರ್ಗದರ್ಶನ ನೀಡು.
    ಯಾವ ಕೇಡೂ ನನಗೆ ಸಂಭವಿಸದಿರಲಿ.
134 ಕೆಡುಕರಿಂದ ನನ್ನನ್ನು ರಕ್ಷಿಸು.
    ಆಗ ನಾನು ನಿನ್ನ ನಿಯಮಗಳಿಗೆ ವಿಧೇಯನಾಗುವೆನು.
135 ನಿನ್ನ ಸೇವಕನ ಮೇಲೆ ಕರುಣೆಯಿರಲಿ,
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
136 ಜನರು ನಿನ್ನ ಉಪದೇಶಗಳಿಗೆ ವಿಧೇಯರಾಗದಿರುವುದರಿಂದ
    ನನ್ನ ಕಣ್ಣೀರು ಗೋಳಾಟದಿಂದ ನದಿಯಾಗಿ ಹರಿಯುತ್ತಿದೆ.

137 ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ.
    ನಿನ್ನ ತೀರ್ಪುಗಳು ನ್ಯಾಯವಾಗಿವೆ.
138 ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ.
    ಅವು ನಂಬಿಕೆಗೆ ಯೋಗ್ಯವಾಗಿವೆ.
139 ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ.
    ಯಾಕೆಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ.
140 ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ.
    ಅವು ನನಗೆ ಪ್ರಿಯವಾಗಿವೆ.
141 ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ.
    ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ಶಾಶ್ವತವಾದದ್ದು.
    ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ.
143 ಕಷ್ಟಸಂಕಟಗಳು ನನಗೆ ಬಂದಿದ್ದವು.
    ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ.
    ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು.

ಯೆಶಾಯ 59

ದುಷ್ಟರು ತಮ್ಮ ಜೀವಿತವನ್ನು ಬದಲಾಯಿಸಬೇಕು

59 ಇಗೋ, ನಿಮ್ಮನ್ನು ರಕ್ಷಿಸಲು ಯೆಹೋವನು ಶಕ್ತನಾಗಿದ್ದಾನೆ. ನೀವು ಸಹಾಯಕ್ಕಾಗಿ ಪ್ರಾರ್ಥಿಸುವಾಗ ಆತನು ನಿಮ್ಮನ್ನು ಆಲೈಸುವನು. ಆದರೆ ನಿಮ್ಮ ಪಾಪಗಳೇ ನಿಮ್ಮನ್ನು ದೇವರಿಂದ ದೂರ ಮಾಡಿರುತ್ತವೆ. ಯೆಹೋವನು ತನ್ನ ಮುಖವನ್ನು ಮರೆಮಾಡಿಕೊಳ್ಳುವಂತೆ ನೀವು ಪಾಪಗಳನ್ನು ಮಾಡಿದ್ದರಿಂದ, ಆತನು ನಿಮಗೆ ಕಿವಿಗೊಡುವುದಿಲ್ಲ. ನಿಮ್ಮ ಕೈಗಳು ಮಲಿನವಾಗಿವೆ; ಅವು ರಕ್ತಮಯವಾಗಿವೆ. ನಿಮ್ಮ ಬೆರಳುಗಳು ಅಪರಾಧಗಳಿಂದ ಅಶುದ್ಧವಾಗಿವೆ. ನಿಮ್ಮ ಬಾಯಿಗಳಿಂದ ನೀವು ಸುಳ್ಳಾಡುತ್ತೀರಿ. ನಿಮ್ಮ ನಾಲಿಗೆಯು ಕೆಟ್ಟ ಮಾತುಗಳನ್ನಾಡುತ್ತದೆ. ನೆರೆಯವನ ಬಗ್ಗೆ ಯಾರೂ ಸತ್ಯವನ್ನಾಡುವದಿಲ್ಲ. ಜನರು ನ್ಯಾಯಾಲಯಗಳಲ್ಲಿ ಪರಸ್ಪರ ವ್ಯಾಜ್ಯ ಮಾಡುವರು. ತಾವು ಗೆಲ್ಲಬೇಕೆಂಬ ಉದ್ದೇಶದಿಂದ ಸುಳ್ಳುಸಾಕ್ಷಿಯ ಮೇಲೆ ಅವಲಂಬಿಸುವರು. ಅವರು ಒಬ್ಬರ ಮೇಲೊಬ್ಬರು ಸುಳ್ಳು ಹೇಳುತ್ತಾರೆ; ಅವರು ಕೇಡಿನಿಂದ ತುಂಬಿದವರಾಗಿದ್ದು ಕೇಡನ್ನೇ ಹೆರುತ್ತಾರೆ. ವಿಷದ ಹಾವಿನ ಮೊಟ್ಟೆಯಿಂದ ವಿಷದ ಹಾವಿನ ಮರಿಗಳು ಹೊರಬರುವಂತೆ ಅವರ ದುಷ್ಟತನವು ಹೊರಬರುವದು. ಆ ಮೊಟ್ಟೆಯನ್ನು ನೀವು ತಿಂದರೆ ಸಾಯುವಿರಿ. ಆ ಮೊಟ್ಟೆಯನ್ನು ಒಡೆದರೆ ವಿಷದ ಹಾವು ಹೊರಬರುವದು.

ಜನರು ಹೇಳುವ ಸುಳ್ಳು, ಜೇಡರ ಬಲೆಯಂತಿರುವದು. ಜೇಡರ ಬಲೆಗಳ ನೂಲಿನಿಂದ ಬಟ್ಟೆ ನೇಯಲಾಗದು. ಆ ಬಲೆಯಿಂದ ನಿಮ್ಮ ಶರೀರವನ್ನು ಮುಚ್ಚಲಾಗುವದಿಲ್ಲ.

ಕೆಲವರು ತಮ್ಮ ಕೈಗಳಿಂದ ಇತರರಿಗೆ ಕೇಡುಮಾಡುವರು. ಅವರು ತಮ್ಮ ಕಾಲುಗಳಿಂದ ಓಡುತ್ತಾ ದುಷ್ಕೃತ್ಯಗಳನ್ನು ಮಾಡುವರು; ನಿರಪರಾಧಿಗಳನ್ನು ಕೊಲ್ಲಲು ಆತುರಪಡುವರು. ಅವರ ಆಲೋಚನೆಯು ಕೆಟ್ಟದ್ದೇ. ದೊಂಬಿ, ಲೂಟಿಗಳೇ ಅವರ ಜೀವನಶೈಲಿಯಾಗಿವೆ. ಅವರಿಗೆ ಸಮಾಧಾನದ ದಾರಿಯೇ ತಿಳಿಯದು. ಅವರ ಜೀವಿತದಲ್ಲಿ ಒಳ್ಳೆಯತನವೆಂಬುದು ಇಲ್ಲ. ಅವರ ಮಾರ್ಗವು ಕಪಟತನದಿಂದ ತುಂಬಿದೆ. ಅವರಂತೆ ಜೀವಿಸುವವರಿಗೆ ಶಾಂತಿಯೇ ಇರದು.

ಇಸ್ರೇಲರ ಪಾಪವೇ ಸಂಕಟಕ್ಕೆ ಕಾರಣ

ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ.
ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ
    ನಾವು ಬೆಳಕಿಗಾಗಿ ಕಾಯಬೇಕಾಗಿದೆ.
ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ
    ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ.
10 ನಾವು ಕಣ್ಣಿಲ್ಲದವರಂತಿದ್ದೇವೆ.
    ಕುರುಡರಂತೆ ಗೋಡೆಗೆ ತಾಕುತ್ತಿದ್ದೇವೆ.
ರಾತ್ರಿಯಲ್ಲಿ ಎಡವಿಬೀಳುವಂತೆ ಬೀಳುತ್ತಿದ್ದೇವೆ.
    ಹಗಲಿನಲ್ಲಿಯೂ ನಮಗೆ ಕಾಣದು.
    ಮಧ್ಯಾಹ್ನದ ಸಮಯದಲ್ಲೂ ಸತ್ತವರಂತೆ ಬೀಳುತ್ತೇವೆ.
11 ನಾವೆಲ್ಲಾ ಗುಣುಗುಟ್ಟುತ್ತೇವೆ.
    ನಾವು ಕರಡಿಗಳಂತೆ ಗುರುಗುಟ್ಟುತ್ತಿದ್ದೇವೆ, ಪಾರಿವಾಳಗಳಂತೆ ಮೂಲುಗುತ್ತಿದ್ದೇವೆ.
ಜನರು ಧರ್ಮವನ್ನು ಅನುಸರಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ.
    ಆದರೆ ಧರ್ಮವೇ ಇಲ್ಲ.
ನಾವು ರಕ್ಷಣೆಗಾಗಿ ಕಾಯುತ್ತಿದ್ದೇವೆ.
    ಆದರೆ ರಕ್ಷಣೆಯು ಬಹುದೂರವಿದೆ.
12 ಯಾಕೆಂದರೆ ನಾವು ಲೆಕ್ಕವಿಲ್ಲದಷ್ಟು ದ್ರೋಹಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿರುತ್ತೇವೆ.
    ನಾವು ಮಾಡಿದ್ದು ತಪ್ಪೆಂದು ನಮ್ಮ ಪಾಪಗಳೇ ತೋರಿಸುತ್ತವೆ.
ಹೌದು, ನಾವು ಈ ಕಾರ್ಯಗಳನ್ನು
    ಮಾಡಿ ದೋಷಿಗಳಾಗಿದ್ದೇವೆ.
13 ನಾವು ಪಾಪಮಾಡಿ
    ಯೆಹೋವನಿಂದ ದೂರ ಹೋಗಿದ್ದೇವೆ.
ಆತನಿಂದ ದೂರವಾಗಿ
    ಆತನನ್ನು ತೊರೆದುಬಿಟ್ಟಿದ್ದೇವೆ.
ನಾವು ದುಷ್ಟತನವನ್ನೂ
    ದೇವರಿಗೆ ವಿರುದ್ಧವಾದ ಕಾರ್ಯಗಳನ್ನೂ ಆಲೋಚಿಸಿದ್ದೇವೆ.
ನಮ್ಮ ಹೃದಯಗಳಲ್ಲಿ
    ದುಷ್ಟಯೋಜನೆಗಳನ್ನು ಹಾಕಿರುತ್ತೇವೆ.
14 ನ್ಯಾಯವು ನಮ್ಮಿಂದ ತೊಲಗಿಹೋಗಿದೆ.
ಸತ್ಯವು ಬೀದಿ ಪಾಲಾಗಿದೆ.
    ನೀತಿಯು ಪಟ್ಟಣದೊಳಕ್ಕೆ ಪ್ರವೇಶಿಸಲಾರದು.
15 ಸತ್ಯವು ಹೊರಟುಹೋಯಿತು.
    ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ.

ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು
    ಯೆಹೋವನು ಬೇಸರಗೊಂಡಿದ್ದಾನೆ.
16 ಜನರಿಗೆ ಸಹಾಯ ಮಾಡುವವರು ಇಲ್ಲದೆ ಇರುವುದನ್ನು ಕಂಡು
    ಯೆಹೋವನು ಆಶ್ಚರ್ಯಚಕಿತನಾಗಿದ್ದಾನೆ.
ಆದ್ದರಿಂದ ಯೆಹೋವನು ತನ್ನ ಸ್ವಂತ ಶಕ್ತಿಯನ್ನೂ
    ನೀತಿಯನ್ನೂ ಬಳಸಿ ಜನರನ್ನು ರಕ್ಷಿಸಿದನು.
17 ಯೆಹೋವನು ಯುದ್ಧ ಸನ್ನದ್ಧನಾದನು.
    ಆತನು ಒಳ್ಳೆಯತನವೆಂಬ ಕವಚ,
    ರಕ್ಷಣೆಯೆಂಬ ಶಿರಸ್ತ್ರಾಣ,
    ಶಿಕ್ಷೆಯೆಂಬ ಬಟ್ಟೆ ಮತ್ತು
    ಗಾಢವಾದ ಪ್ರೇಮವೆಂಬ ಮೇಲ್ಹೊದಿಕೆಯನ್ನು ಧರಿಸಿದ್ದಾನೆ.
18 ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ಅವರಿಗೆ ಸರಿಯಾದ ದಂಡನೆಯನ್ನು ಕೊಡುವನು.
    ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ದೂರದೇಶಗಳಲ್ಲಿರುವ ಜನರನ್ನೆಲ್ಲಾ ಸರಿಯಾಗಿ ದಂಡಿಸುವನು.
19 ಆಗ ಪಶ್ಚಿಮದಲ್ಲಿರುವ ಜನರು ಯೆಹೋವನ ನಾಮಕ್ಕೆ ಭಯಪಟ್ಟು ಗೌರವಿಸುವರು.
    ಪೂರ್ವದಲ್ಲಿದ್ದ ಜನರು ಆತನ ಮಹಿಮೆಯನ್ನು ಭಯಭಕ್ತಿಯಿಂದ ಕಾಣುವರು.
ಬಿರುಗಾಳಿಯಿಂದ ರಭಸವಾಗಿ ಹರಿದುಬರುವ ಹೊಳೆಯಂತೆ
    ಯೆಹೋವನು ಬೇಗನೆ ಬರುವನು.

20 ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು.
    ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು.

21 ಯೆಹೋವನು ಹೇಳುವುದೇನೆಂದರೆ: “ನಾನಂತೂ ಆ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುವೆನು. ನನ್ನ ವಾಗ್ದಾನದ ಮಾತುಗಳೂ ನಾನು ಇರಿಸಿದ ನನ್ನ ಆತ್ಮವೂ ನಿಮ್ಮಿಂದ ಎಂದಿಗೂ ತೊಲಗದು. ಅವು ನಿಮ್ಮ ಮೊಮ್ಮಕ್ಕಳ ತನಕವೂ ಇರುವವು. ಅವು ನಿನ್ನೊಂದಿಗೆ ಈಗಲೂ ಸದಾಕಾಲವೂ ಇರುವವು.

ಮತ್ತಾಯ 7

ತೀರ್ಪು ಮಾಡುವುದರ ಕುರಿತು ಯೇಸುವಿನ ಉಪದೇಶ

(ಲೂಕ 6:37-38,41-42)

“ಬೇರೆಯವರಿಗೆ ತೀರ್ಪು ನೀಡಬೇಡಿ. ಆಗ ದೇವರೂ ನಿಮಗೆ ತೀರ್ಪು ಮಾಡುವುದಿಲ್ಲ. ನೀವು ಬೇರೆಯವರಿಗೆ ತೀರ್ಪು ಮಾಡಿದರೆ, ಅದೇ ಪ್ರಕಾರ ನಿಮಗೂ ತೀರ್ಪಾಗುವುದು. ನೀವು ಬೇರೆಯವರನ್ನು ಕ್ಷಮಿಸಿದರೆ ನಿಮಗೂ ಕ್ಷಮೆ ದೊರೆಯುವುದು.

“ನಿನ್ನ ಸ್ವಂತ ಕಣ್ಣಿನಲ್ಲಿ ಇರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಏಕೆ ನೋಡುವೆ? ‘ನಿನ್ನ ಕಣ್ಣಿನಲ್ಲಿರುವ ಅಣುವನ್ನು ನಾನು ಹೊರಗೆ ತೆಗೆಯುವೆನು’ ಎಂದು ನಿನ್ನ ಸಹೋದರನಿಗೆ ಹೇಳುವುದೇಕೆ? ಮೊದಲು ನಿನ್ನ ಕಣ್ಣನ್ನು ನೋಡಿಕೊ! ನಿನ್ನ ಕಣ್ಣಿನಲ್ಲಿ ತೊಲೆ ಇನ್ನೂ ಇದೆ. ನೀನು ಕಪಟಿ! ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಹೊರಗೆ ತೆಗೆದುಬಿಡು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಹೊರತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣುವುದು.

“ಪರಿಶುದ್ಧವಾದ ವಸ್ತುಗಳನ್ನು ನಾಯಿಗಳಿಗೆ ಹಾಕಬೇಡಿ. ಅವು ಹಿಂದಕ್ಕೆ ತಿರುಗಿ ನಿಮ್ಮನ್ನು ಕಚ್ಚುತ್ತವೆ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಎಸೆಯಬೇಡಿ. ಅವು ಮುತ್ತುಗಳನ್ನು ತುಳಿದುಹಾಕುತ್ತವೆ.

ಪ್ರಾರ್ಥನೆಯ ಪ್ರತಿಫಲ

(ಲೂಕ 11:9-13)

“ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು. ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ.

“ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ? 10 ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ? 11 ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ.

ಬಹಳ ಮುಖ್ಯ ನಿಯಮ

12 “ನಿಮಗೆ ಬೇರೆಯವರು ಏನನ್ನು ಮಾಡಬೇಕೆಂದು ನೀವು ಆಶಿಸುತ್ತೀರೋ ಅಂಥವುಗಳನ್ನೇ ನೀವು ಅವರಿಗೆ ಮಾಡಿರಿ. ಇದು ಮೋಶೆಯ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶ.

ನಿತ್ಯಜೀವದ ದಾರಿ ಕಷ್ಟಕರ

(ಲೂಕ 13:24)

13 “ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ. 14 ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು.

ಜನರ ನಡತೆಯನ್ನು ಗಮನಿಸಿ

(ಲೂಕ 6:43-44; 13:25-27)

15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ. 16 ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ. 17 ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. 20 ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ.

21 “‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು. 22 ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು. 23 ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು.

ಬುದ್ಧಿವಂತ ಮತ್ತು ಬುದ್ಧಿಹೀನ

(ಲೂಕ 6:47-49)

24 “ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ. 25 ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಆ ಮನೆಗೆ ಬಡಿಯುತ್ತದೆ. ಆದರೆ ಆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ.

26 “ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಆ ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು. 27 ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.”

28 ಯೇಸು ಉಪದೇಶಿಸಿದ ಈ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು. 29 ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International