M’Cheyne Bible Reading Plan
ಮೋವಾಬ್ಯರೊಂದಿಗೆ ಒಡಂಬಡಿಕೆ
29 ಇಸ್ರೇಲ್ ಜನಾಂಗದೊಂದಿಗೆ ಹೋರೇಬ್ ಬೆಟ್ಟದಲ್ಲಿ ಯೆಹೋವನು ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅಲ್ಲದೆ ಇಸ್ರೇಲರು ಮೋವಾಬ್ ಪ್ರಾಂತ್ಯದಲ್ಲಿದ್ದಾಗ ಯೆಹೋವನು ಮೋಶೆಗೆ ಅವರೊಡನೆ ಇನ್ನೊಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ಹೇಳಿದನು. ಅದು ಯಾವುದೆಂದರೆ:
2 ಮೋಶೆಯು ಇಸ್ರೇಲರ ಜನಸಮೂಹವನ್ನು ಕರೆದು, “ಈಜಿಪ್ಟ್ ದೇಶದಲ್ಲಿ ಯೆಹೋವನು ನಡಿಸಿದ ಕಾರ್ಯಗಳನ್ನೆಲ್ಲಾ ನೀವು ನೋಡಿದ್ದೀರಿ. ಆತನು ಫರೋಹನಿಗೂ ಅವನ ಪರಿವಾರದವರಿಗೂ ಮತ್ತು ಇಡೀ ಈಜಿಪ್ಟಿನವರಿಗೂ ಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ. 3 ಅವರಿಗೆ ಕೊಟ್ಟಂಥ ಭಯಂಕರ ಸಂಕಟಗಳನ್ನು ನೋಡಿದಿರಿ; ಆತನು ನಡಿಸಿದ ಅದ್ಭುತಕಾರ್ಯಗಳನ್ನು ನೋಡಿದಿರಿ. 4 ಆದರೆ ಇಂದಿನ ತನಕವೂ ನೀವು ಅದನ್ನು ಸಂಪೂರ್ಣವಾಗಿ ಅರಿಯಲಿಲ್ಲ. ನೀವು ಕಂಡವುಗಳನ್ನು ಮತ್ತು ಕೇಳಿದವುಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದಂತೆ ಯೆಹೋವನು ಮಾಡಿದನು. 5 ನಲವತ್ತು ವರ್ಷಗಳ ತನಕ ಯೆಹೋವನು ನಿಮ್ಮನ್ನು ಅಡವಿಯಲ್ಲಿ ನಡೆಸಿದನು. ಆದರೆ ನಿಮ್ಮ ಮೈಮೇಲಿದ್ದ ಬಟ್ಟೆಗಳು ಹರಿದುಹೋಗಲಿಲ್ಲ ಮತ್ತು ಕಾಲಿಗೆ ಹಾಕಿದ ಕೆರಗಳು ಸವೆಯಲಿಲ್ಲ. 6 ನಿಮ್ಮಲ್ಲಿ ಆಹಾರವಿರಲಿಲ್ಲ; ಕುಡಿಯಲು ದ್ರಾಕ್ಷಾರಸವಾಗಲಿ ಪಾನೀಯವಾಗಲಿ ಇರಲಿಲ್ಲ. ಆದರೆ ಯೆಹೋವನು ಮನ್ನವನ್ನು ಮತ್ತು ನೀರನ್ನು ಕೊಟ್ಟನು. ಆತನೇ ನಿಮ್ಮ ದೇವರಾದ ಯೆಹೋವನೆಂದು ನೀವು ಅರಿತುಕೊಳ್ಳುವ ಹಾಗೆ ಮಾಡಿದನು.
7 “ನಾವು ಈ ಸ್ಥಳಕ್ಕೆ ಬಂದಾಗ ಹೆಪ್ಬೋನಿನ ರಾಜ ಸೀಹೋನ ಮತ್ತು ಬಾಷಾನಿನ ರಾಜ ಓಗನು ನಮ್ಮೊಂದಿಗೆ ಯುದ್ಧ ಮಾಡಲು ಬಂದರು. ನಾವು ಅವರನ್ನು ಸೋಲಿಸಿದೆವು. 8 ನಾವು ಅವರ ದೇಶವನ್ನು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರಿಗೆ ಹಂಚಿದೆವು. 9 ನೀವು ದೇವರೊಡನೆ ಮಾಡಿದ ಒಪ್ಪಂದವನ್ನು ಪಾಲಿಸುತ್ತಾ ಬಂದರೆ ನೀವು ನಿಮ್ಮ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
10 “ಈ ದಿನ ನೀವೆಲ್ಲರೂ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ನಾಯಕರು, ಹಿರಿಯರು, ನಿಮ್ಮ ಜನರೆಲ್ಲಾ ಇಲ್ಲಿ ಇರುವಿರಿ. 11 ನಿಮ್ಮ ಹೆಂಡತಿಮಕ್ಕಳೂ, ನಿಮ್ಮೊಂದಿಗಿರುವ ಪರದೇಶಸ್ಥರೂ ನಿಮ್ಮ ಸೇವೆ ಮಾಡುವವರೂ ಇದ್ದಾರೆ. 12 ನೀವೆಲ್ಲಾ ನಿಮ್ಮ ದೇವರಾದ ಯೆಹೋವನೊಂದಿಗೆ ಒಡಂಬಡಿಕೆಯನ್ನು ಮಾಡುವುದಕ್ಕೋಸ್ಕರ ನಿಂತಿದ್ದೀರಿ. ದೇವರು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡುತ್ತಾನೆ. 13 ಈ ಒಡಂಬಡಿಕೆಯ ಮೂಲಕ ದೇವರು ನಿಮ್ಮನ್ನು ತನ್ನ ಸ್ವಕೀಯ ಜನರನ್ನಾಗಿ ಮಾಡುತ್ತಾನೆ. ಆತನು ನಿಮಗೆ ದೇವರಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೇಳಿದಂತೆ ನಿಮಗೂ ಹೇಳುತ್ತಾನೆ. 14 ಯೆಹೋವನು ವಾಗ್ದಾನಗಳನ್ನು ಒಳಗೊಂಡ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾತ್ರ ಮಾಡದೆ ಇಲ್ಲಿ ಕೂಡಿಬಂದಿರುವ ಎಲ್ಲರೊಂದಿಗೂ ಮಾಡುತ್ತಾನೆ. 15 ಇಂದು ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಇಲ್ಲಿ ನಿಂತಿರುವ ನಮ್ಮೆಲ್ಲರೊಂದಿಗೂ ಇಂದು ನಮ್ಮೊಂದಿಗಿಲ್ಲದ ನಮ್ಮ ಸಂತತಿಯವರಿಗೂ ಆತನು ಈ ಒಡಂಬಡಿಕೆಯನ್ನು ಮಾಡುತ್ತಿದ್ದಾನೆ. 16 ನಾನು ಈಜಿಪ್ಟಿನಲ್ಲಿ ಹೇಗೆ ಜೀವಿಸುತ್ತಿದ್ದೆವೆಂಬುದನ್ನೂ, ನಾವು ಇಲ್ಲಿಗೆ ಬರುವಾಗ ಹೇಗೆ ದೇಶಗಳನ್ನು ದಾಟಿಕೊಂಡು ಬಂದೆವೆಂಬುದನ್ನೂ ಸ್ಮರಿಸಿರಿ. 17 ನೀವು ಅವರ ಅಸಹ್ಯವಾದ ವಿಗ್ರಹಗಳನ್ನು ನೋಡಿದಿರಿ. ಅವುಗಳು ಮರ, ಕಲ್ಲು, ಬೆಳ್ಳಿಬಂಗಾರಗಳಿಂದ ಕೆತ್ತಲ್ಪಟ್ಟವುಗಳಾಗಿದ್ದವು. 18 ಇಲ್ಲಿರುವ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಯಾವ ಗೋತ್ರದವರಾಗಲಿ ನಿಮ್ಮ ದೇವರಾದ ಯೆಹೋವನನ್ನು ಬಿಟ್ಟುಹೋಗದಂತೆ ನೋಡಿಕೊಳ್ಳಿರಿ. ಯಾವನೂ ಹೋಗಿ ಬೇರೆ ಜನಾಂಗಗಳ ದೇವರುಗಳ ಸೇವೆಮಾಡಬಾರದು. ಅಂಥದ್ದನ್ನು ಮಾಡುವ ಜನರು ಕಹಿಯಾದ ಮತ್ತು ವಿಷಭರಿತವಾದ ಹಣ್ಣನ್ನು ಬಿಡುವ ಗಿಡದಂತಿದ್ದಾರೆ.
19 “ನಾನು ತಿಳಿಸಿದ ಶಾಪವನ್ನೆಲ್ಲಾ ಕೇಳಿಸಿಕೊಂಡು, ‘ನಾನು ನನ್ನ ಇಷ್ಟ ಬಂದಂತೆ ಮಾಡುತ್ತೇನೆ. ನನಗೆ ಯಾವ ಕೇಡೂ ಆಗುವುದಿಲ್ಲ’ ಎಂದು ಯಾವನಾದರೂ ಹೇಳಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡರೆ, ಅವನು ತನಗೆ ಮಾತ್ರವಲ್ಲ ಎಲ್ಲಾ ಒಳ್ಳೆಯ ಜನರಿಗೂ ಕೇಡಾಗುವಂತೆ ಮಾಡುತ್ತಾನೆ. 20-21 ಯೆಹೋವನು ಆ ಮನುಷ್ಯನನ್ನು ಕ್ಷಮಿಸುವುದಿಲ್ಲ. ಅವನ ಮೇಲೆ ಕೋಪಗೊಂಡು ಅವನನ್ನು ಶಿಕ್ಷಿಸುವನು. ಅವನನ್ನು ಇಸ್ರೇಲ್ ಕುಲಗಳಿಂದ ತೆಗೆದುಹಾಕುವನು. ಈ ಪುಸ್ತಕದಲ್ಲಿ ಬರೆದ ಎಲ್ಲಾ ಶಾಪಗಳಿಂದ ಬಾಧಿಸಿ ನಾಶಪಡಿಸುವನು. ಈ ಬೋಧನಾ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಗೆ ಅದು ಸೇರಿರುತ್ತದೆ.
22 “ಮುಂದಿನ ದಿವಸಗಳಲ್ಲಿ ನಿಮ್ಮ ಸಂತತಿಯವರೂ ದೂರದೇಶದ ಪರದೇಶಸ್ಥರೂ ನಿಮ್ಮ ದೇಶವು ಹೇಗೆ ಹಾಳಾಗಿ ಹೋಯಿತು ಎಂಬುದನ್ನು ನೋಡುವರು. ಯೆಹೋವನು ದೇಶಕ್ಕೆ ತಂದ ವ್ಯಾಧಿಗಳನ್ನು ಅವರು ನೋಡುವರು. 23 ನಿಮ್ಮ ದೇಶವೆಲ್ಲಾ ನಿಷ್ಪ್ರಯೋಜಕವಾಗಿರುವುದು. ಅದರ ಮೇಲೆ ಉಪ್ಪೂ ಗಂಧಕವೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೆಯಲಾರದು; ಕೂಳೆಯೂ ಬೆಳೆಯುವುದಿಲ್ಲ. ಸೊದೋಮ್, ಗೊಮೋರ, ಅದ್ಮಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯೆಹೋವನ ಕೋಪದ ನಿಮಿತ್ತ ನಾಶವಾದಂತೆ ನಿಮ್ಮ ದೇಶವೂ ನಾಶವಾಗುವುದು.
24 “ಇತರ ದೇಶಗಳವರು, ‘ದೇವರು ಈ ದೇಶವನ್ನು ಯಾಕೆ ನಾಶಮಾಡಿದನು? ಆತನು ಯಾಕೆ ಕೋಪಗೊಂಡನು?’ ಎಂದು ವಿಚಾರಿಸುವರು. 25 ಯಾಕೆಂದರೆ ‘ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಬಿಟ್ಟು ತೊಲಗಿದರು. ಅವರನ್ನು ಈಜಿಪ್ಟಿನಿಂದ ಹೊರತರುವಾಗ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಅನುಸರಿಸಲಿಲ್ಲ. 26 ಇಸ್ರೇಲ್ ಜನರು ಅನ್ಯದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು. ಅಂಥಾ ದೇವರುಗಳನ್ನು ಅವರು ಹಿಂದೆಂದೂ ಪೂಜಿಸಿರಲಿಲ್ಲ. ಯೆಹೋವನು ಅನ್ಯದೇವತೆಗಳನ್ನು ಪೂಜಿಸಬಾರದು ಎಂದು ಆಜ್ಞಾಪಿಸಿದ್ದರೂ ಅವರು ಅದನ್ನು ಉಲ್ಲಂಘಿಸಿದರು. 27 ಈ ಕಾರಣಕ್ಕಾಗಿಯೇ ದೇವರು ಅವರ ಮೇಲೆ ಸಿಟ್ಟುಗೊಂಡು ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನು ಅವರಿಗೆ ಬರಮಾಡಿದನು. 28 ದೇವರು ಅವರ ಮೇಲೆ ಬಹಳವಾಗಿ ಸಿಟ್ಟುಗೊಂಡದ್ದರಿಂದ ಅವರ ದೇಶದಿಂದ ಅವರನ್ನು ಕಿತ್ತು ಅವರು ಈಗ ವಾಸಿಸುವ ಮತ್ತೊಂದು ದೇಶದಲ್ಲಿ ಅವರನ್ನಿರಿಸಿದನು.’
29 “ಯೆಹೋವನು ಕೆಲವು ಸಂಗತಿಗಳನ್ನು ಗುಪ್ತವಾಗಿಟ್ಟಿದ್ದಾನೆ. ಅದು ಆತನಿಗೆ ಮಾತ್ರ ತಿಳಿದದೆ. ಆದರೆ ಪ್ರಕಟಿಸಲ್ಪಟ್ಟಿರುವ ಸಂಗತಿಗಳನ್ನು ನಾವು ಮತ್ತು ನಮ್ಮ ಸಂತತಿಗಳವರು ಮಾತ್ರ ತಿಳಿದಿದ್ದೇವೆ.[a] ಆ ಬೋಧನೆಗೆ ನಾವು ನಿತ್ಯಕಾಲಕ್ಕೂ ವಿಧೇಯರಾಗುವಂತೆ ಹೇಳಿದ್ದಾನೆ. ಆತನಿಗೆ ವಿಧೇಯರಾಗುವುದು ನಮ್ಮ ಕರ್ತವ್ಯ.
49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
57 ಯೆಹೋವನೇ, ನನ್ನ ಪಾಲು ನೀನೇ;
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದೇ ನನ್ನ ಕರ್ತವ್ಯವೆಂದು ನಿರ್ಧರಿಸಿರುವೆ.
58 ನಿನ್ನನ್ನೇ ಸಂಪೂರ್ಣವಾಗಿ ಆಶ್ರಯಿಸಿಕೊಂಡಿದ್ದೇನೆ.
ನಿನ್ನ ವಾಗ್ದಾನದಂತೆ ನನಗೆ ಕರುಣೆತೋರು.
59 ನನ್ನ ಜೀವಿತದ ಕುರಿತು ಎಚ್ಚರಿಕೆಯಿಂದ ಆಲೋಚಿಸಿ
ನಿನ್ನ ಕಟ್ಟಳೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ.
60 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ತಡಮಾಡದೆ ಬೇಗನೆ ಹಿಂತಿರುಗಿದೆನು.
61 ಗುಂಪಾಗಿ ಸೇರಿದ್ದ ದುಷ್ಟರು ನನ್ನನ್ನು ದೂಷಿಸಿದರೂ
ನಿನ್ನ ಉಪದೇಶಗಳನ್ನು ನಾನು ಮರೆಯಲಿಲ್ಲ.
62 ನಿನ್ನ ಒಳ್ಳೆಯ ನಿರ್ಧಾರಗಳಿಗಾಗಿ ಕೃತಜ್ಞತೆ ಸಲ್ಲಿಸಲು
ನಾನು ಮಧ್ಯರಾತ್ರಿಯಲ್ಲಿ ಎದ್ದೇಳುವೆನು.
63 ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸ್ನೇಹಿತನಾಗಿದ್ದೇನೆ.
ನಿನ್ನ ನಿಯಮಗಳಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೂ ನಾನು ಸ್ನೇಹಿತನಾಗಿದ್ದೇನೆ.
64 ನಿನ್ನ ಶಾಶ್ವತ ಪ್ರೀತಿಯು ಭೂಮಿಯನ್ನು ತುಂಬಿಕೊಂಡಿದೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.
ಎಲ್ಲಾ ಜನಾಂಗದವರು ಯೆಹೋವನನ್ನು ಅನುಸರಿಸುವರು
56 ಯೆಹೋವನು ಹೇಳುವುದೇನೆಂದರೆ: “ಎಲ್ಲರಿಗೂ ನ್ಯಾಯವಂತರಾಗಿರಿ; ಎಲ್ಲರಿಗೂ ಒಳ್ಳೆಯವರಾಗಿರಿ; ಯಾಕೆಂದರೆ ನನ್ನ ರಕ್ಷಣೆಯು ಬೇಗನೆ ಬರಲಿದೆ; ಇಡೀ ಲೋಕಕ್ಕೆಲ್ಲಾ ನನ್ನ ನೀತಿಯು ಬೇಗನೆ ವ್ಯಕ್ತವಾಗುವುದು. 2 ಸಬ್ಬತ್ತಿನ ವಿಷಯದಲ್ಲಿ ದೇವರ ಕಟ್ಟಳೆಗಳನ್ನು ಅನುಸರಿಸುವವರು ಆಶೀರ್ವಾದ ಹೊಂದುವರು. ದುಷ್ಕೃತ್ಯಗಳನ್ನು ಮಾಡದವನು ಸಂತೋಷದಿಂದಿರುವನು.”
3 ಯೆಹೂದ್ಯರಲ್ಲದ ಜನರು ಯೆಹೋವನ ಬಳಿಗೆ ಬರುವರು. ಅವರು, “ಯೆಹೋವನು ನಮ್ಮನ್ನು ತನ್ನ ಜನರೊಂದಿಗೆ ಸ್ವೀಕರಿಸುವದಿಲ್ಲ” ಎಂದು ಹೇಳಬಾರದು. ಕಂಚುಕಿಯು, “ನಾನು ಕೆಲಸಕ್ಕೆ ಬಾರದ ಒಣಗಿದ ಮರ.” ಎಂದು ಹೇಳಬಾರದು.
4-5 ಯಾಕೆಂದರೆ ಯೆಹೋವನು ಹೇಳುವುದೇನೆಂದರೆ: “ಈ ಕಂಚುಕಿಯರಲ್ಲಿ ಕೆಲವರು ಸಬ್ಬತ್ ನಿಯಮವನ್ನು ಅನುಸರಿಸುತ್ತಾರೆ. ಅವರು ನನ್ನ ಇಷ್ಟಪ್ರಕಾರ ನಡೆದುಕೊಳ್ಳುತ್ತಾರೆ; ಅವರು ನನ್ನ ಒಡಂಬಡಿಕೆಗೆ ಸರಿಯಾಗಿ ನಡೆಯುತ್ತಾರೆ. ಆದ್ದರಿಂದ ನಾನು ಅವರಿಗೋಸ್ಕರ ನನ್ನ ಮಂದಿರದಲ್ಲಿ ಸ್ಮಾರಕಸ್ತಂಭ ನೆಡುವೆನು. ನನ್ನ ಪಟ್ಟಣದಲ್ಲಿ ಅವರ ಹೆಸರುಗಳು ಜ್ಞಾಪಕ ಮಾಡಲ್ಪಡುವವು. ಹೌದು, ಆ ಕಂಚುಕಿಗಳಿಗೆ ನಾನು ಮಕ್ಕಳಿಗಿಂತ ಉತ್ತಮವಾದದ್ದನ್ನು ಕೊಡುವೆನು. ಅವರಿಗೆ ನಿತ್ಯಕಾಲಕ್ಕೂ ಇರುವ ಹೆಸರನ್ನು ಕೊಡುವೆನು. ನನ್ನ ಜನರಿಂದ ಅವರನ್ನು ಬೇರ್ಪಡಿಸುವುದಿಲ್ಲ.”
6 “ಅನ್ಯದೇಶದವರಲ್ಲಿ ಕೆಲವರು ಯೆಹೋವನನ್ನು ಅನುಸರಿಸುವರು. ಆತನನ್ನು ಸೇವಿಸಿ ಆತನ ನಾಮವನ್ನು ಪ್ರೀತಿಸುವರು. ಅವರು ಯೆಹೋವನ ಸೇವಕರಾಗುವುದಕ್ಕಾಗಿ ಆತನೊಂದಿಗೆ ಸೇರಿಕೊಳ್ಳುವರು. ಸಬ್ಬತ್‌ದಿವಸವನ್ನು ಆರಾಧನೆ ಮಾಡುವ ವಿಶೇಷ ದಿವಸವೆಂದು ನೆನಸಿ ಒಡಂಬಡಿಕೆಯನ್ನು ಪರಿಪಾಲಿಸುವರು. 7 ನಾನು ಅವರನ್ನು ನನ್ನ ಪವಿತ್ರಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಸಂತೋಷಪಡಿಸುವೆನು. ಅವರು ಅರ್ಪಿಸುವ ಸರ್ವಾಂಗಹೋಮಗಳನ್ನೂ ಯಜ್ಞಗಳನ್ನೂ ನಾನು ಮೆಚ್ಚಿಕೊಳ್ಳುವೆನು. ಯಾಕೆಂದರೆ ನನ್ನ ಆಲಯವು ಎಲ್ಲಾ ಜನಾಂಗದವರಿಗೆ ಪ್ರಾರ್ಥನಾಲಯವೆಂದು ಕರೆಯಲ್ಪಡುವುದು.” 8 ಇದು ನನ್ನ ಒಡೆಯನಾದ ಯೆಹೋವನ ಮಾತುಗಳು.
ಇಸ್ರೇಲ್ ಜನರು ತಮ್ಮ ದೇಶದಿಂದ ಹೊರಗೆ ಹಾಕಲ್ಪಟ್ಟರು. ಆದರೆ ಯೆಹೋವನು ಅವರನ್ನು ಮತ್ತೆ ಬರಮಾಡುತ್ತಾನೆ. ಆತನು, “ಈ ಜನರನ್ನು ನಾನು ಮತ್ತೆ ಒಟ್ಟುಗೂಡಿಸುತ್ತೇನೆ” ಎಂದು ಹೇಳುತ್ತಾನೆ.
9 ಕಾಡುಗಳಲ್ಲಿಯೂ ಹೊಲಗಳಲ್ಲಿಯೂ ಇರುವ ಪ್ರಾಣಿಗಳೇ, ಬಂದು ತಿನ್ನಿರಿ!
10 ಕಾವಲುಗಾರರೆಲ್ಲಾ ಕುರುಡರಾಗಿದ್ದಾರೆ.
ತಾವು ಮಾಡುತ್ತಿರುವುದು ಅವರಿಗೆ ತಿಳಿಯದು.
ಅವರು ಬೊಗಳದ ನಾಯಿಗಳಂತಿರುವರು.
ಅವುಗಳು ನೆಲದ ಮೇಲೆ ಬಿದ್ದುಕೊಂಡು ಮಲಗುವವು.
ಅವುಗಳಿಗೆ ಮಲಗುವುದೆಂದರೆ ತುಂಬಾ ಪ್ರೀತಿ.
11 ಅವರು ಹಸಿದ ನಾಯಿಗಳಂತಿದ್ದಾರೆ.
ಅವರು ಎಂದಿಗೂ ತೃಪ್ತಿ ಹೊಂದುವವರಲ್ಲ.
ಕುರುಬರಿಗೆ ತಾವು ಮಾಡುವುದೇ ತಿಳಿಯದು.
ಅವರು ತಮ್ಮ ಕುರಿಗಳ ಹಾಗೆ ದಾರಿತಪ್ಪಿದ್ದಾರೆ.
ಅವರೆಲ್ಲಾ ಅತ್ಯಾಶೆಯುಳ್ಳವರು;
ತಮ್ಮನ್ನು ತೃಪ್ತಿಪಡಿಸುವದೇ ಅವರ ಕೆಲಸ.
12 ಅವರು ಬಂದು,
“ನಾನು ಸ್ವಲ್ಪ ದ್ರಾಕ್ಷಾರಸ ಕುಡಿಯುತ್ತೇನೆ.
ಅಥವಾ ನಾನು ಸ್ವಲ್ಪ ಮದ್ಯವನ್ನು ಕುಡಿಯುತ್ತೇನೆ.
ನಾನು ನಾಳೆಯೂ ಹೀಗೆ ಮಾಡುವೆನು.
ನಾನು ಇನ್ನೂ ಹೆಚ್ಚಾಗಿ ಕುಡಿಯುವೆನು” ಎಂದು ಹೇಳುವರು.
ಯೇಸುವಿಗಾದ ಶೋಧನೆ
(ಮಾರ್ಕ 1:12-13; ಲೂಕ 4:1-13)
4 ಆಗ ದೇವರಾತ್ಮನು ಸೈತಾನನಿಂದ ಶೋಧಿಸಲ್ಪಡಲು ಯೇಸುವನ್ನು ಅಡವಿಗೆ ನಡೆಸಿದನು. 2 ಯೇಸು ನಲವತ್ತು ದಿನ ಹಗಲಿರುಳು ಏನನ್ನೂ ತಿನ್ನಲಿಲ್ಲ. ಬಳಿಕ ಆತನಿಗೆ ಬಹಳ ಹಸಿವಾಯಿತು. 3 ಆಗ ಆತನನ್ನು ಶೋಧಿಸಲು ಸೈತಾನನು ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞಾಪಿಸು” ಅಂದನು.
4 ಯೇಸು ಅವನಿಗೆ,
“‘ಮನುಷ್ಯನು ಬದುಕುವುದು ಕೇವಲ ರೊಟ್ಟಿಯಿಂದಲ್ಲ,
ಮನುಷ್ಯನ ಜೀವಿತವು ದೇವರು ಹೇಳುವ ಪ್ರತಿಯೊಂದು ಮಾತನ್ನು ಅವಲಂಬಿಸಿಕೊಂಡಿದೆ’(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂಬುದಾಗಿ ಉತ್ತರಕೊಟ್ಟನು.
5 ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣವಾದ ಜೆರುಸಲೇಮಿಗೆ ಕರೆದುಕೊಂಡು ಹೋಗಿ, ದೇವಾಲಯದ ಅತಿ ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, 6 “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ದುಮುಕು.
‘ದೇವರು ನಿನಗೋಸ್ಕರ ತನ್ನ ದೂತರಿಗೆ ಆಜ್ಞಾಪಿಸುವನು.
ನಿನ್ನ ಪಾದಗಳು ಬಂಡೆಗೆ ಅಪ್ಪಳಿಸದಂತೆ
ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’(B)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆಯಲ್ಲ” ಎಂದನು.
7 ಅದಕ್ಕೆ ಯೇಸು,
“‘ನಿನ್ನ ದೇವರಾದ ಪ್ರಭುವನ್ನು ನೀನು ಪರೀಕ್ಷಿಸಕೂಡದು’(C)
ಎಂಬುದಾಗಿಯೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
8 ಬಳಿಕ ಸೈತಾನನು ಯೇಸುವನ್ನು ಎತ್ತರವಾದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ವೈಭವವನ್ನು ತೋರಿಸಿ, 9 “ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ನಾನು ಅವೆಲ್ಲವನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
10 ಯೇಸು ಸೈತಾನನಿಗೆ, “ಇಲ್ಲಿಂದ ತೊಲಗು!
‘ನಿನ್ನ ದೇವರಾದ ಪ್ರಭುವನ್ನೇ ಆರಾಧಿಸಬೇಕು,
ಆತನೊಬ್ಬನನ್ನೇ ಸೇವಿಸಬೇಕು’(D)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದನು.
11 ಆದ್ದರಿಂದ ಸೈತಾನನು ಯೇಸುವನ್ನು ಬಿಟ್ಟುಹೋದನು. ಆಗ ಕೆಲವು ದೇವದೂತರು ಬಂದು ಆತನನ್ನು ಉಪಚರಿಸಿದರು.
ಗಲಿಲಾಯದಲ್ಲಿ ಯೇಸುವಿನ ಸುವಾರ್ತಾ ಸೇವೆಯ ಆರಂಭ
(ಮಾರ್ಕ 1:14-15; ಲೂಕ 4:14-15)
12 ಯೋಹಾನನನ್ನು ಸೆರೆಯಲ್ಲಿಟ್ಟಿದ್ದಾರೆಂಬುದು ಯೇಸುವಿಗೆ ತಿಳಿಯಿತು. ಆದ್ದರಿಂದ ಯೇಸು ಗಲಿಲಾಯಕ್ಕೆ ಹಿಂತಿರುಗಿ ಹೋದನು. 13 ಆತನು ನಜರೇತಿನಲ್ಲಿ ಇಳಿದುಕೊಳ್ಳದೆ ಹೊರಟುಹೋಗಿ ಗಲಿಲಾಯ ಸರೋವರಕ್ಕೆ ಹತ್ತಿರವಿದ್ದ ಕಪೆರ್ನೌಮ್ ಎಂಬ ಊರಲ್ಲಿ ವಾಸಿಸಿದನು. ಈ ಊರು ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ ಬಳಿಯಲ್ಲಿದೆ. 14 ಪ್ರವಾದಿಯಾದ ಯೆಶಾಯನು ನುಡಿದಿದ್ದ ಮಾತು ಹೀಗೆ ನೆರವೇರಿತು. ಅದೇನೆಂದರೆ:
15 “ಜೆಬುಲೋನ್ ಸೀಮೆಯ, ನಫ್ತಾಲಿ ಸೀಮೆಯ,
ಜೋರ್ಡನ್ನಿನ ಆಚೆ ಸೀಮೆಯ, ಸಮುದ್ರದ ಕಡೆಗಿರುವ ಸೀಮೆಯ,
ಯೆಹೂದ್ಯರಲ್ಲದ ಗಲಿಲಾಯ ಸೀಮೆಯ
16 ಜನರು ಕತ್ತಲಲ್ಲಿ ಜೀವಿಸುತ್ತಿದ್ದರು.
ಆಗ ಅವರಿಗೆ ದೊಡ್ಡ ಬೆಳಕೊಂದು ಕಾಣಿಸಿತು.
ಸಮಾಧಿಯಂತಿರುವ ಕಾರ್ಗತ್ತಲೆಯ ದೇಶದಲ್ಲಿ ವಾಸಿಸುವ ಆ ಜನರಿಗೆ ಬೆಳಕು ದೊರೆಯಿತು.”(E)
17 ಅಂದಿನಿಂದ ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಬೇಗನೆ ಬರಲಿದೆ. ಆದ್ದರಿಂದ ನೀವು ನಿಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಮಾರ್ಪಡಿಸಿಕೊಳ್ಳಿರಿ” ಎಂದು ಯೇಸು ಬೋಧಿಸಿದನು.
ಯೇಸುವಿನ ಪ್ರಥಮ ಶಿಷ್ಯರು
(ಮಾರ್ಕ 1:16-20; ಲೂಕ 5:1-11)
18 ಗಲಿಲಾಯ ಸರೋವರದ ತೀರದಲ್ಲಿ ಯೇಸು ತಿರುಗಾಡುತ್ತಾ ಇದ್ದನು. ಆತನು ಸೀಮೋನ (ಈತನನ್ನೇ ಪೇತ್ರ ಎಂದು ಕರೆಯಲಾಯಿತು.) ಮತ್ತು ಸೀಮೋನನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರನ್ನು ಕಂಡನು. ಬೆಸ್ತರಾಗಿದ್ದ ಇವರಿಬ್ಬರು ಅಂದು ಸರೋವರದ ತೀರದಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. 19 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ರೀತಿಯ ಬೆಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗೂಡಿಸುವುದು ಮೀನನ್ನಲ್ಲ, ಮನುಷ್ಯರನ್ನು” ಎಂದನು. 20 ಕೂಡಲೇ ಸೀಮೋನ ಮತ್ತು ಅಂದ್ರೆಯ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
21 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ನೋಡಿದನು. ಅವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿದ್ದರು. ಅವರು ಮೀನು ಹಿಡಿಯಲು ತಮ್ಮ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು. 22 ಆಗ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಯೇಸುವಿನ ಉಪದೇಶ ಮತ್ತು ರೋಗಿಗಳಿಗೆ ಸ್ವಸ್ಥತೆ
(ಲೂಕ 6:17-19)
23 ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಯೇಸು ಸಭಾಮಂದಿರಗಳಲ್ಲಿ ಬೋಧಿಸಿದನು ಮತ್ತು ಪರಲೋಕರಾಜ್ಯದ ವಿಷಯವಾದ ಶುಭವಾರ್ತೆಯನ್ನು ಉಪದೇಶಿಸಿದನು. ಯೇಸು ಎಲ್ಲಾ ಜನರ ಕಾಯಿಲೆಗಳನ್ನು ಮತ್ತು ರೋಗಗಳನ್ನು ವಾಸಿಮಾಡಿದನು. 24 ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು. 25 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಈ ಜನರು ಗಲಿಲಾಯದಿಂದಲೂ ದೆಕಪೊಲಿ ಎಂಬ ಹತ್ತು ಊರುಗಳಿಂದಲೂ ಜೆರುಸಲೇಮಿನಿಂದಲೂ ಜುದೇಯದಿಂದಲೂ ಮತ್ತು ಜೋರ್ಡನ್ ನದಿಯ ಆಚೆಕಡೆಯ ಪ್ರದೇಶದಿಂದಲೂ ಬಂದಿದ್ದರು.
Kannada Holy Bible: Easy-to-Read Version. All rights reserved. © 1997 Bible League International