Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 27:1-28:19

ಜನರಿಗಾಗಿ ಕಲ್ಲಿನಿಂದ ಮಾಡಿದ ಸ್ಮಾರಕ ಕಲ್ಲುಗಳು

27 ಮೋಶೆ ಮತ್ತು ಸಮೂಹದ ಹಿರಿಯರು ಜನರೊಂದಿಗೆ ಮಾತನಾಡಿದರು. ಮೋಶೆಯು ಹೇಳಿದ್ದೇನೆಂದರೆ: “ನಾನು ಆಜ್ಞಾಪಿಸಿದ ಎಲ್ಲಾ ವಿಧಿಗಳನ್ನು ಅನುಸರಿಸಿರಿ. ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಪ್ರವೇಶಿಸುವಿರಿ. ಆ ದಿವಸ ದೊಡ್ಡ ದೊಡ್ಡ ಕಲ್ಲುಗಳನ್ನು ರಾಶಿ ಹಾಕಿ ಅದನ್ನು ಗಾರೆ ಮಾಡಿರಿ. ಅದರ ಮೇಲೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಬರೆಯಿರಿ. ನೀವು ನದಿಯನ್ನು ದಾಟಿದಾಗ ಈ ಕಾರ್ಯವನ್ನು ಮಾಡಬೇಕು. ಅನಂತರ, ಆತನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಸಮೃದ್ಧಿಯಾದ ದೇಶದೊಳಕ್ಕೆ ಹೋಗಿರಿ.

“ನೀವು ಆ ದೇಶದೊಳಗೆ ಪ್ರವೇಶ ಮಾಡಿದ ನಂತರ ನಾನು ಹೇಳಿದ್ದೆಲ್ಲವನ್ನು ನೀವು ಪರಿಪಾಲಿಸಬೇಕು. ಏಬಾಲ್ ಬೆಟ್ಟದ ಮೇಲೆ ಸ್ಮಾರಕ ಸ್ತಂಭವನ್ನು ನಿಲ್ಲಿಸಬೇಕು. ಅದಕ್ಕೆ ಗಾರೆ ಮಾಡಿ. ಮೇಲೆ ಅಲ್ಲಿಯೇ ಕಲ್ಲಿನಿಂದ ಒಂದು ಯಜ್ಞವೇದಿಕೆಯನ್ನು ಕಟ್ಟಿರಿ. ಆ ಕಲ್ಲುಗಳನ್ನು ಕೆತ್ತಲು ಕಬ್ಬಿಣದ ಸಾಧನಗಳನ್ನು ಉಪಯೋಗಿಸಬಾರದು. ಕಡಿದ ಕಲ್ಲುಗಳಿಂದ ಯಜ್ಞವೇದಿಕೆಯನ್ನು ಕಟ್ಟಬಾರದು. ಆ ಯಜ್ಞವೇದಿಕೆಯ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಿರಿ. ನೀವು ಅಲ್ಲಿ ಯಜ್ಞವನ್ನರ್ಪಿಸಿ ಸಮಾಧಾನಯಜ್ಞದ ಭೋಜನವನ್ನು ಮಾಡಬೇಕು. ಅಲ್ಲಿ ದೇವರ ಸನ್ನಿಧಾನದಲ್ಲಿ ಊಟ ಮಾಡಿ ಸಂತೋಷಪಡಿರಿ. ನೀವು ಆ ಕಲ್ಲುಗಳ ಮೇಲೆ ಈ ಉಪದೇಶಗಳನ್ನೆಲ್ಲ ಸ್ಪಷ್ಟವಾಗಿ ಓದಲು ಸುಲಭವಾದ ರೀತಿಯಲ್ಲಿ ಬರೆಯಬೇಕು.”

ಮೋಶೆಯೂ ಯಾಜಕರೂ ಇಸ್ರೇಲ್ ಸಮೂಹದವರೊಂದಿಗೆ ಮಾತನಾಡಿದರು. ಆಗ ಮೋಶೆಯು, “ಇಸ್ರೇಲರೇ, ಮೌನವಾಗಿ ನನ್ನ ಮಾತುಗಳನ್ನು ಕೇಳಿರಿ. ಈ ದಿನ ನೀವು ದೇವರಾದ ಯೆಹೋವನ ಸ್ವಕೀಯ ಪ್ರಜೆಯಾಗಿರುತ್ತೀರಿ. 10 ಆದ್ದರಿಂದ ಆತನು ಹೇಳಿದ್ದೆಲ್ಲವನ್ನೂ ಮಾಡಿರಿ. ನಾನು ಈ ಹೊತ್ತು ನಿಮಗೆ ಹೇಳುವಂಥ ಆತನ ಅಪ್ಪಣೆಗಳಿಗೂ ವಿಧಿನಿಯಮಗಳಿಗೂ ವಿಧೇಯರಾಗಿರಿ” ಎಂದು ಹೇಳಿದನು.

ನೀತಿ ಕ್ರಮಗಳಲ್ಲಿರುವ ಶಾಪಕ್ಕೆ ಜನರ ಸಮ್ಮತ

11 ಅದೇ ದಿವಸ ಮೋಶೆಯು ಜನರಿಗೆ ಹೇಳಿದ್ದೇನೆಂದರೆ: 12 “ಜೋರ್ಡನ್ ನದಿ ದಾಟಿದ ನಂತರ, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನನ ಕುಲದವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತು ದೇವರ ಆಶೀರ್ವಾದವನ್ನು ಓದಬೇಕು. 13 ಅದೇ ಪ್ರಕಾರ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್ ಮತ್ತು ನಫ್ತಾಲಿ ಕುಲದವರು ಏಬಾಲ್ ಬೆಟ್ಟದ ಮೇಲೆ ನಿಂತು ದೇವರ ಶಾಪವಚನವನ್ನು ಓದಬೇಕು.

14 “ಲೇವಿಯರು ಗಟ್ಟಿಯಾದ ಸ್ವರದಲ್ಲಿ ಇಸ್ರೇಲರೆಲ್ಲರಿಗೆ ಹೀಗೆ ಹೇಳಬೇಕು:

15 “‘ಸುಳ್ಳುದೇವರನ್ನು ಮಾಡಿ ಗುಪ್ತ ಸ್ಥಳದಲ್ಲಿಡುವವನು ಶಾಪಗ್ರಸ್ತನಾಗಲಿ; ಆ ದೇವರುಗಳು ಮನುಷ್ಯನ ಕೈಕೆಲಸವೇ; ಕಲ್ಲು, ಮರ, ಹಿತ್ತಾಳೆಗಳಿಂದ ಮಾಡಿದವುಗಳೇ. ಯೆಹೋವನು ಅವುಗಳನ್ನು ದ್ವೇಷಿಸುತ್ತಾನೆ.’

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

16 “ಲೇವಿಯರು, ‘ತಂದೆತಾಯಿಗಳನ್ನು ಸನ್ಮಾನಿಸದವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

17 “ಲೇವಿಯರು, ‘ನೆರೆಯವನ ಗಡಿಕಲ್ಲಿನ ಸ್ಥಳ ಬದಲಾಯಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು ‘ಆಮೆನ್’ ಎಂದು ಹೇಳಬೇಕು.

18 “ಲೇವಿಯರು, ‘ಕುರುಡರಿಗೆ ತಪ್ಪುದಾರಿ ತೋರಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು. “ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

19 “ಲೇವಿಯರು, ‘ಪರದೇಶಸ್ಥರಿಗೆ, ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯವಾದ ತೀರ್ಪನ್ನು ಕೊಡದವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

20 “ಲೇವಿಯರು, ‘ತಂದೆಯ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡವನು ಶಾಪಗ್ರಸ್ತನಾಗಲಿ. ಅವನು ತನ್ನ ತಂದೆಗೆ ಅವಮಾನ ಮಾಡಿದನು’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

21 “ಲೇವಿಯರು, ‘ಯಾವನಾದರೂ ಪ್ರಾಣಿಯೊಂದಿಗೆ ಸಂಭೋಗಿಸಿದರೆ ಅವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

22 “ಲೇವಿಯರು, ‘ತನ್ನ ತಂಗಿಯನ್ನಾಗಲಿ ಅಥವಾ ಮಲತಾಯಿಯನ್ನಾಗಲಿ ಕೂಡುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

23 “ಲೇವಿಯರು, ‘ತನ್ನ ಅತ್ತೆಯೊಡನೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

24 “ಲೇವಿಯರು, ‘ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದವನು ಹಿಡಿಯಲ್ಪಡದಿದ್ದರೂ ಸಹ ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

25 “ಲೇವಿಯರು, ‘ನಿರಪರಾಧಿಯನ್ನು ಕೊಲ್ಲಲು ಹಣ ತೆಗೆದುಕೊಳ್ಳುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

26 “ಲೇವಿಯರು, ‘ಧರ್ಮಶಾಸ್ತ್ರವನ್ನು ಪ್ರೋತ್ಸಾಹಿಸುವದಕ್ಕೂ ಅವುಗಳನ್ನು ಅನುಸರಿಸುವದಕ್ಕೂ ನಿರಾಕರಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.”

ಕಟ್ಟಳೆಗಳನ್ನು ಅನುಸರಿಸಿದವರ ಆಶೀರ್ವಾದ

28 “ನಾನು ಹೇಳಿದಂಥ ಎಲ್ಲಾ ಧರ್ಮಶಾಸ್ತ್ರವನ್ನು ಅನುಸರಿಸಿ ಅದಕ್ಕೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ಪ್ರಪಂಚದ ಎಲ್ಲಾ ದೇಶಗಳಿಗಿಂತ ನಿಮ್ಮ ದೇಶವನ್ನು ಅತೀ ಉನ್ನತಸ್ಥಾನದಲ್ಲಿರುವ ದೇಶವನ್ನಾಗಿ ಮಾಡುವನು. ನೀವು ದೇವರಿಗೆ ವಿಧೇಯರಾದರೆ ಈ ಎಲ್ಲಾ ಆಶೀರ್ವಾದಗಳು ನಿಮ್ಮದಾಗುವವು.

“ಯೆಹೋವನು ನಿಮ್ಮನ್ನು ಹೊಲಗಳಲ್ಲಿಯೂ
    ಪಟ್ಟಣಗಳಲ್ಲಿಯೂ ಆಶೀರ್ವದಿಸುವನು.
ಯೆಹೋವನು ನಿಮ್ಮನ್ನು ಆಶೀರ್ವದಿಸಿ
    ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು.
ನಿಮ್ಮ ಹೊಲಗಳನ್ನು ಆಶೀರ್ವದಿಸಿ
    ಒಳ್ಳೆಯ ಬೆಳೆಯನ್ನು ಅನುಗ್ರಹಿಸುವನು.
ನಿಮ್ಮ ಪಶುಪ್ರಾಣಿಗಳನ್ನು ಆಶೀರ್ವದಿಸಿ
    ಅವು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು.
    ಆತನು ನಿಮ್ಮ ಎಲ್ಲಾ ದನಕರು, ಕುರಿಮರಿಗಳನ್ನು ಆಶೀರ್ವದಿಸುವನು.
ಯೆಹೋವನು ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಶೀರ್ವದಿಸಿ
    ಅವು ಯಾವಾಗಲೂ ಆಹಾರಪದಾರ್ಥಗಳಿಂದ ತುಂಬಿರುವಂತೆ ಮಾಡುವನು.
ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ
    ಸಫಲ ಹೊಂದುವಂತೆ ಆಶೀರ್ವದಿಸುವನು.

“ವೈರಿಗಳು ನಿಮ್ಮೆದುರಾಗಿ ಯುದ್ಧಮಾಡಲು ಬಂದಾಗ ನಿಮಗೆ ಆತನು ಸಹಾಯ ಮಾಡುವನು. ವೈರಿಗಳು ಒಂದು ದಿಕ್ಕಿನಿಂದ ಬಂದರೆ ಏಳು ದಾರಿಯಲ್ಲಿ ಪಲಾಯನ ಮಾಡುವರು.

“ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮ್ಮ ಕಣಜಗಳನ್ನು ಆಶೀರ್ವದಿಸುವನು. ನೀವು ಮಾಡುವ ಕಾರ್ಯಗಳನ್ನೆಲ್ಲಾ ಆಶೀರ್ವದಿಸುವನು. ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ನಿಮ್ಮನ್ನು ಆಶೀರ್ವದಿಸುವನು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ತನ್ನ ವಾಗ್ದಾನಕ್ಕನುಸಾರವಾಗಿ ವಿಶೇಷವಾದ ಸ್ವಕೀಯ ಪ್ರಜೆಗಳನ್ನಾಗಿ ಮಾಡುವನು. 10 ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು.

11 “ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯ ವಸ್ತುಗಳನ್ನು ಕೊಡುವನು; ನಿಮಗೆ ಹೆಚ್ಚು ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಪಶುಗಳು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶದಲ್ಲಿ ನಿಮ್ಮ ಹೊಲವು ಒಳ್ಳೆಯ ಬೆಳೆಗಳನ್ನು ಫಲಿಸುತ್ತದೆ. 12 ಯೆಹೋವನು ತನ್ನ ಆಶೀರ್ವಾದಗಳೆಂಬ ಭಂಡಾರವನ್ನೇ ನಿಮಗೆ ತೆರೆಯುವನು. ಕಾಲಕ್ಕೆ ತಕ್ಕಹಾಗೆ ಮಳೆ ಸುರಿಯುವಂತೆ ಮಾಡುವನು; ನಿಮ್ಮ ಕಾರ್ಯವನ್ನೆಲ್ಲಾ ಸಫಲ ಮಾಡುವನು. ಇತರ ದೇಶಗಳಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದು; ಬೇರೆಯವರಿಂದ ಸಾಲ ತೆಗೆದುಕೊಳ್ಳುವ ಅವಶ್ಯಕತೆ ನಿಮಗೆ ಬಾರದು. 13 ಯೆಹೋವನು ನಿಮ್ಮನ್ನು ತಲೆಯನ್ನಾಗಿ ಮಾಡಲು ಬಯಸುತ್ತಾನೆಯೇ ಹೊರತು ಬಾಲವನ್ನಾಗಿಯಲ್ಲ. ನೀವು ಮೇಲಿನ ಅಂತಸ್ತಿನಲ್ಲಿರುವಿರಿ, ಕೆಳಗಿನದರಲ್ಲಿ ಅಲ್ಲ. ನೀವು ಯೆಹೋವನ ಆಜ್ಞೆಯನ್ನು ಪಾಲಿಸಿದಾಗ ನಿಮಗೆ ಹೀಗೆ ಆಗುವುದು. 14 ನಾನು ಈ ಹೊತ್ತು ಬೋಧಿಸುವ ಯಾವುದನ್ನೂ ನೀವು ಉಲ್ಲಂಘಿಸಬಾರದು. ಇತರ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಪೂಜಿಸಬಾರದು.

ಕಟ್ಟಳೆಗಳನ್ನು ಅನುಸರಿಸದಿದ್ದಲ್ಲಿ ಶಾಪ

15 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಆಜ್ಞೆ, ಕಟ್ಟಳೆಗಳಿಗೆ ನೀವು ವಿಧೇಯರಾಗದಿದ್ದರೆ ಈ ಕೆಟ್ಟ ಸಂಗತಿಗಳು ನಿಮಗೆ ತಟ್ಟುವವು:

16 “ನಿಮ್ಮ ಹೊಲದಲ್ಲಿಯೂ ನೀವು ವಾಸಿಸುವ ಪಟ್ಟಣದಲ್ಲಿಯೂ
    ಯೆಹೋವನು ನಿಮ್ಮನ್ನು ಶಪಿಸುವನು.
17 ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ
    ಆಹಾರವಿಲ್ಲದಂತೆ ಬರಿದಾಗಿ ಮಾಡುವನು.
18 ನಿಮಗೆ ಹೆಚ್ಚು ಮಕ್ಕಳಿಲ್ಲದಂತೆ ಮಾಡುವನು.
ನಿಮ್ಮ ಹೊಲಗಳನ್ನು ಶಪಿಸಿ
    ನಿಮಗೆ ಹೆಚ್ಚು ಬೆಳೆಯಾಗದಂತೆ ಮಾಡುವನು.
ನಿಮ್ಮ ಪಶುಪ್ರಾಣಿಗಳನ್ನು ಶಪಿಸಿ
    ಅವುಗಳು ಮರಿಗಳನ್ನು ಈಯದಂತೆ ಮಾಡುವನು.
    ಆತನು ನಿಮ್ಮ ಎಲ್ಲಾ ಮರಿಗಳನ್ನೂ ಕರುಗಳನ್ನೂ ಶಪಿಸುವನು.
19 ನೀವು ಎಲ್ಲಾ ಸಮಯಗಳಲ್ಲಿ ಮಾಡುವ ಎಲ್ಲಾ ಕೆಲಸಕಾರ್ಯಗಳನ್ನು
    ನಿಮ್ಮ ದೇವರಾದ ಯೆಹೋವನು ಶಪಿಸುವನು.

ಕೀರ್ತನೆಗಳು 119:1-24

119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
    ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
    ವಿಧೇಯರಾಗುವವರು ಧನ್ಯರು.
ಅವರು ಕೆಟ್ಟದ್ದನ್ನು ಮಾಡದೆ
    ಆತನಿಗೆ ವಿಧೇಯರಾಗಿರುವರು.
ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
    ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
ನಿನ್ನ ಕಟ್ಟಳೆಗಳಿಗೆ
    ನಾನು ಯಾವಾಗಲೂ ವಿಧೇಯನಾಗಿದ್ದರೆ,
ನಿನ್ನ ಆಜ್ಞೆಗಳನ್ನು ಕಲಿಯುವಾಗ
    ನನಗೆ ನಾಚಿಕೆಯಾಗದು.
ನಾನು ನಿನ್ನ ನ್ಯಾಯವನ್ನೂ
    ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
    ದಯವಿಟ್ಟು ನನ್ನನ್ನು ಕೈಬಿಡಬೇಡ!
ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
    ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
    ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
    ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
    ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
    ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
    ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
    ನಿನ್ನ ಮಾತುಗಳನ್ನು ಮರೆಯುವುದಿಲ್ಲ.

17 ನಿನ್ನ ಸೇವಕನಾದ ನನಗೆ ದಯೆತೋರು.
    ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
18 ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ;
    ನೀನು ಮಾಡಿದ ಅದ್ಭುತಕಾರ್ಯಗಳ ಕುರಿತು ಓದುವೆ.
19 ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ.
    ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು
    ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ.
21 ನೀನು ಗರ್ವಿಷ್ಠರನ್ನು ಖಂಡಿಸುವೆ.
    ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ.
22 ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ.
    ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ.
23 ನಾಯಕರುಗಳು ಸಹ ನನ್ನನ್ನು ದೂಷಿಸಿದರು.
    ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ.
24 ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ.
    ಅದು ನನಗೆ ಬುದ್ಧಿಮಾತನ್ನು ಹೇಳಿಕೊಡುವುದು.

ಯೆಶಾಯ 54

ದೇವರು ತನ್ನ ಜನರನ್ನು ಸ್ವದೇಶಕ್ಕೆ ಬರಮಾಡುವನು

54 ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ.
    ಆದ್ದರಿಂದ ನೀನು ಬಹಳವಾಗಿ ಸಂತೋಷಿಸು.

ಯೆಹೋವನು ಹೇಳುವುದೇನೆಂದರೆ,
    “ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.”

“ನಿನ್ನ ಡೇರೆಗಳನ್ನು ವಿಸ್ತರಿಸು.
    ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು.
    ನಿನ್ನ ಮನೆಯನ್ನು ಅಭಿವೃದ್ಧಿಪಡಿಸು.
ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು.
    ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ.
ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು.
    ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು.
ಹೆದರಬೇಡ, ನೀನು ನಿರಾಶಳಾಗುವದಿಲ್ಲ.
ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ.
    ನೀನು ಬೇಸರಗೊಳ್ಳುವದಿಲ್ಲ.
ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು.
    ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ.
ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ
    ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ.
ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು.
    ಆತನ ಹೆಸರು ಸರ್ವಶಕ್ತನಾದ ಯೆಹೋವನು.
ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ.
    ಆತನನ್ನು ‘ಇಡೀ ಭೂಲೋಕದ ದೇವರು’ ಎಂದು ಕರೆಯುವರು.

“ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ.
    ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ.
ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು.
    ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ.
ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.”
ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ.
    ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು.
ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು.
    ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.”
ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು.

ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ.
    ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು.
ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.”

10 ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ
    ಬೆಟ್ಟಗಳು ಧೂಳಾದರೂ
ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು.
ನಾನು ನಿನ್ನೊಂದಿಗೆ ನಿತ್ಯಕಾಲದ
    ಸಮಾಧಾನದಲ್ಲಿ ಇರುವೆನು.”
ಯೆಹೋವನು ನಿನಗೆ ಕರುಣೆಯನ್ನು ತೋರುವನು.
    ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ.

11 “ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ
    ಯಾರೂ ನಿನ್ನನ್ನು ಸಂತೈಸಲಿಲ್ಲ.
ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು.
    ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು.
ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು.
12 ಗೋಡೆಯ ಮೇಲಿರುವ ಕಲ್ಲುಗಳೆಲ್ಲಾ ಕೆಂಪು ಕಲ್ಲುಗಳೇ.
    ಹೊಳೆಯುವ ವಜ್ರಗಳಿಂದ ನಾನು ಹೊರಬಾಗಲನ್ನು ತಯಾರಿಸುವೆನು.
    ನಿನ್ನ ಸುತ್ತಲೂ ನಾನು ಅಮೂಲ್ಯವಾದ ಕಲ್ಲುಗಳಿಂದ ಗೋಡೆಯನ್ನು ಕಟ್ಟುವೆನು.
13 ನಿನ್ನ ಮಕ್ಕಳು ದೇವರನ್ನು ಅನುಸರಿಸುವರು.
    ಆತನು ಅವರಿಗೆ ಬೋಧಿಸುವನು.
    ನಿನ್ನ ಮಕ್ಕಳಿಗೆ ನಿಜವಾದ ಶಾಂತಿ ಇರುವದು.
14 ನೀನು ಒಳ್ಳೆಯತನದಿಂದ ಕಟ್ಟಲ್ಪಡುವೆ.
    ಆದ್ದರಿಂದ ಎಲ್ಲಾ ದುಷ್ಟತ್ವಗಳಿಂದ ನೀನು ಸುರಕ್ಷಿತಳಾಗಿರುವೆ.
ನೀನು ಯಾವುದಕ್ಕೂ ಹೆದರುವ ಅವಶ್ಯವಿಲ್ಲ.
    ಯಾವುದೂ ನಿನಗೆ ಹಾನಿಮಾಡದು.
15 ನಿನಗೆ ವಿರುದ್ಧವಾಗಿ ನನ್ನ ಯಾವ ಸೈನ್ಯವೂ ಯುದ್ಧಮಾಡದು.
    ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಆ ಶತ್ರುವನ್ನು ನೀನು ಗೆಲ್ಲುವೆ.

16 “ಇಗೋ, ನಾನು ಕಮ್ಮಾರನನ್ನು ಮಾಡಿದೆನು. ಅವನು ಬೆಂಕಿಯನ್ನು ಊದಿ ಬಿಸಿಯನ್ನು ಹೆಚ್ಚಿಸುವನು. ಆಮೇಲೆ ಕೆಂಪಾಗಿ ಕಾದ ಕಬ್ಬಿಣವನ್ನು ಹೊರತೆಗೆದು ತನಗಿಷ್ಟವಾದ ಉಪಕರಣವನ್ನು ತಯಾರಿಸುವನು. ಅದೇ ರೀತಿಯಲ್ಲಿ ನಾಶಮಾಡುವ ‘ನಾಶಕನನ್ನು’ ನಾನು ನಿರ್ಮಿಸಿದೆನು.

17 “ನಿನಗೆ ವಿರುದ್ಧವಾಗಿ ಯುದ್ಧಮಾಡಲು ಜನರು ಆಯುಧಗಳನ್ನು ತಯಾರಿಸುವರು. ಆದರೆ ಆ ಆಯುಧಗಳು ನಿನ್ನನ್ನು ಸೋಲಿಸಲಾರವು. ಅವರು ನಿನಗೆ ವಿರುದ್ಧವಾಗಿ ಮಾತಾಡಿದರೂ ಆ ಮಾತುಗಳು ನಿನ್ನನ್ನು ತಪ್ಪಿತಸ್ಥಳೆಂದು ತೋರಿಸಲಾರವು.

“ಯೆಹೋವನ ಸೇವಕರಿಗೆ ದೊರೆಯುವುದೇನು? ಅವರಿಗೆ ಆತನಿಂದಲೇ ಸುಫಲಗಳು ದೊರೆಯುತ್ತವೆ” ಎಂದು ಯೆಹೋವನು ಅನ್ನುತ್ತಾನೆ.

ಮತ್ತಾಯ 2

ಯೇಸುವನ್ನು ಸಂಧಿಸಲು ಜ್ಞಾನಿಗಳ ಆಗಮನ

ಹೆರೋದನು ರಾಜನಾಗಿದ್ದ ಕಾಲದಲ್ಲಿ ಯೇಸು ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟಿದನು. ಯೇಸು ಹುಟ್ಟಿದ ಮೇಲೆ, ಪೂರ್ವದೇಶದ ಕೆಲವು ಜ್ಞಾನಿಗಳು ಜೆರುಸಲೇಮಿಗೆ ಬಂದರು. ಆ ಜ್ಞಾನಿಗಳು ಜನರಿಗೆ, “ಯೆಹೂದ್ಯರ ರಾಜನು ಹುಟ್ಟಿದ್ದಾನಲ್ಲವೇ? ಆತನೆಲ್ಲಿ? ಆತನು ಹುಟ್ಟಿದನೆಂದು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಆತನನ್ನು ಆರಾಧಿಸಲು ಬಂದೆವು” ಅಂದರು.

ಯೆಹೂದ್ಯರ ಈ ಹೊಸ ರಾಜನ ವಿಷಯ ತಿಳಿದಾಗ ಹೆರೋದನು ಮತ್ತು ಜೆರುಸಲೇಮಿನ ಜನರೆಲ್ಲರೂ ಗಲಿಬಿಲಿಗೊಂಡರು. ಕೂಡಲೇ, ಹೆರೋದನು ಎಲ್ಲಾ ಮಹಾಯಾಜಕರನ್ನೂ ಧರ್ಮೋಪದೇಶಕರನ್ನೂ ಸಭೆ ಸೇರಿಸಿ, “ಕ್ರಿಸ್ತನು ಹುಟ್ಟಬೇಕಾಗಿದ್ದ ಸ್ಥಳ ಯಾವುದು?” ಎಂದು ಕೇಳಿದನು. ಅವರು, “ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟುವನು. ಏಕೆಂದರೆ ಪ್ರವಾದಿಯು ಪವಿತ್ರ ಗ್ರಂಥದಲ್ಲಿ ಹೀಗೆಂದು ಬರೆದಿದ್ದಾನೆ:

‘ಯೆಹೂದ ಪ್ರಾಂತ್ಯದಲ್ಲಿರುವ ಬೆತ್ಲೆಹೇಮೇ,
    ಯೆಹೂದವನ್ನು ಆಳುವವರಲ್ಲಿ ನೀನು ಪ್ರಾಮುಖ್ಯವಾಗಿರುವೆ.
ಹೌದು, ಅಧಿಪತಿಯೊಬ್ಬನು ನಿನ್ನೊಳಗಿಂದ ಬರುವನು.
    ನನ್ನ ಜನರಾದ ಇಸ್ರೇಲರನ್ನು ಆತನೇ ಮುನ್ನಡೆಸುವನು’” ಎಂದು ಉತ್ತರಕೊಟ್ಟರು.’(A)

ಆಗ ಹೆರೋದನು ಪೂರ್ವ ದೇಶದ ಜ್ಞಾನಿಗಳನ್ನು ರಹಸ್ಯವಾಗಿ ಕರೆಯಿಸಿ, ಅವರು ಆ ನಕ್ಷತ್ರವನ್ನು ಕಂಡ ಸರಿಯಾದ ಸಮಯವನ್ನು ಅವರಿಂದ ತಿಳಿದುಕೊಂಡನು. ಹೆರೋದನು ಆ ಜ್ಞಾನಿಗಳಿಗೆ, “ನೀವು ಹೋಗಿ ಚೆನ್ನಾಗಿ ವಿಚಾರಣೆ ಮಾಡಿ ಆ ಮಗು ಎಲ್ಲಿದೆ ಎಂಬುದನ್ನು ತಿಳಿದುಕೊಂಡು ನಂತರ ಬಂದು ನನಗೆ ತಿಳಿಸಿರಿ. ಆಗ ನಾನೂ ಹೋಗಿ ಆತನನ್ನು ಆರಾಧಿಸುವೆನು” ಎಂದು ಹೇಳಿ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಟ್ಟನು.

ಆ ಜ್ಞಾನಿಗಳು ಅರಸನ ಮಾತನ್ನು ಕೇಳಿ ಅಲ್ಲಿಂದ ಹೊರಟಾಗ, ಪೂರ್ವ ದಿಕ್ಕಿನಲ್ಲಿ ಉದಯಿಸಿದ ನಕ್ಷತ್ರವನ್ನು ಮತ್ತೆ ಕಂಡರು. ಅವರು ಆ ನಕ್ಷತ್ರವನ್ನೇ ಹಿಂಬಾಲಿಸಿದರು. ಆ ನಕ್ಷತ್ರ ಅವರ ಮುಂದೆ ಚಲಿಸುತ್ತಾ ಹೋಗಿ ಮಗುವಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 10 ಅವರು ಆ ನಕ್ಷತ್ರವನ್ನು ನೋಡಿ ಅತ್ಯಂತ ಸಂತೋಷಪಟ್ಟರು.

11 ಅವರು ಆ ಮನೆಗೆ ಬಂದಾಗ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ ತಾವು ಮಗುವಿಗಾಗಿ ತಂದಿದ್ದ ಕಾಣಿಕೆಗಳನ್ನು ತೆರೆದು ಚಿನ್ನ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ನೀಡಿದರು. 12 ಆದರೆ ದೇವರು ಜ್ಞಾನಿಗಳಿಗೆ ಕನಸಿನಲ್ಲಿ, “ನೀವು ಹೆರೋದನ ಬಳಿಗೆ ಹಿಂತಿರುಗಿ ಹೋಗಕೂಡದು” ಎಂದು ಎಚ್ಚರಿಸಿದನು. ಆದ್ದರಿಂದ ಅವರು ಬೇರೊಂದು ಮಾರ್ಗದ ಮೂಲಕ ತಮ್ಮ ದೇಶಕ್ಕೆ ಹೊರಟುಹೋದರು.

ಯೇಸುವಿನೊಡನೆ ಈಜಿಪ್ಟಿಗೆ ಪಲಾಯನ

13 ಜ್ಞಾನಿಗಳು ಹೊರಟುಹೋದ ನಂತರ ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ಹೆರೋದನು ಮಗುವನ್ನು ಹುಡುಕಲು ಪ್ರಾರಂಭಿಸುವನು. ಅವನು ಮಗುವನ್ನು ಕೊಲ್ಲಬೇಕೆಂದಿದ್ದಾನೆ. ‘ಅಪಾಯವಿಲ್ಲ’ ಎಂದು ನಾನು ನಿನಗೆ ಹೇಳುವ ತನಕ ನೀನು ಈಜಿಪ್ಟಿನಲ್ಲೇ ಇರು” ಎಂದು ಹೇಳಿದನು.

14 ಕೂಡಲೇ, ಯೋಸೇಫನು ಎದ್ದು ಮಗು ಮತ್ತು ಅದರ ತಾಯಿಯೊಂದಿಗೆ ಈಜಿಪ್ಟಿಗೆ ರಾತ್ರಿ ಸಮಯದಲ್ಲಿ ಹೊರಟುಹೋದನು. 15 ಹೆರೋದನು ಸಾಯುವ ತನಕ ಯೋಸೇಫನು ಈಜಿಪ್ಟಿನಲ್ಲೇ ಇದ್ದನು. “ನಾನು ನನ್ನ ಮಗನನ್ನು ಈಜಿಪ್ಟಿನೊಳಗಿಂದ ಕರೆದೆ”(B) ಎಂದು ಪ್ರವಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೆರವೇರಿತು.

ಬೆತ್ಲೆಹೇಮಿನಲ್ಲಿ ಗಂಡುಮಕ್ಕಳ ಸಂಹಾರ

16 ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು. 17 ಹೀಗೆ ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಈ ಮಾತು ನೆರವೇರಿತು:

18 “ರಾಮದಲ್ಲಿ ಬೊಬ್ಬೆಯು ಕೇಳಿಸಿತು.
    ಅದು ಬಹು ಗೋಳಾಟದ ಮತ್ತು ದುಃಖದ ಬೊಬ್ಬೆಯಾಗಿತ್ತು.
ರಾಹೇಲಳು ತನ್ನ ಮಕ್ಕಳಿಗಾಗಿ ಅಳುವಳು;
    ಅವರು ಸತ್ತುಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲಳು.”(C)

ಯೋಸೇಫ ಮರಿಯಳ ಮರುಪ್ರಯಾಣ

19 ಹೆರೋದನು ಸತ್ತನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಯೋಸೇಫನು ಈಜಿಪ್ಟಿನಲ್ಲಿ ಇರುವಾಗಲೇ ಇದು ಸಂಭವಿಸಿತು. 20 ದೇವದೂತನು ಅವನಿಗೆ, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋಗು. ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದವರು ಸತ್ತುಹೋದರು” ಎಂದು ಹೇಳಿದನು.

21 ಆದ್ದರಿಂದ ಯೋಸೇಫನು ಮಗುವನ್ನು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋದನು. 22 ಆದರೆ ಹೆರೋದನು ಸತ್ತನಂತರ ಅವನ ಮಗನಾದ ಅರ್ಖೆಲಾಯನು ಜುದೇಯದ ರಾಜನಾಗಿದ್ದಾನೆ ಎಂಬುದನ್ನು ಕೇಳಿ ಅಲ್ಲಿಗೆ ಹೋಗಲು ಭಯಪಟ್ಟನು. ಕನಸಿನಲ್ಲಿ ತನಗೆ ಕೊಟ್ಟ ಎಚ್ಚರಿಕೆಯಂತೆ ಅವನು ಆ ಸ್ಥಳವನ್ನು ಬಿಟ್ಟು ಗಲಿಲಾಯ ಪ್ರದೇಶಕ್ಕೆ ಹೋಗಿ, 23 ನಜರೇತ್ ಎಂಬ ಊರಲ್ಲಿ ವಾಸಿಸಿದನು. “ಕ್ರಿಸ್ತನನ್ನು ‘ನಜರೇತಿನವನು’ ಎಂದು ಕರೆಯುತ್ತಾರೆ” ಎಂದು ದೇವರು ಪ್ರವಾದಿಗಳ ಮೂಲಕ ಹೇಳಿದ್ದು ಹೀಗೆ ನೆರವೇರಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International