Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 24

24 “ಒಬ್ಬಾಕೆಯನ್ನು ಒಬ್ಬನು ಮದುವೆಯಾದ ಬಳಿಕ, ಅವಳಲ್ಲಿ ನಾಚಿಕೆಕರವಾದದ್ದೇನಾದರೂ ಇದ್ದರೆ ಅವನು ವಿವಾಹವಿಚ್ಛೇದನಾ ಪತ್ರಗಳಿಗೆ ಸಹಿಹಾಕಿ ಅವಳ ಕೈಯಲ್ಲಿ ಕೊಡಬೇಕು. ಆಮೇಲೆ ಆಕೆಯನ್ನು ತನ್ನ ಮನೆಯಿಂದ ಹೊರಗೆ ಕಳುಹಿಸಬೇಕು. ಅವನ ಮನೆಯಿಂದ ಅವಳು ಹೊರಗೆ ಕಳುಹಿಸಲ್ಪಟ್ಟ ಮೇಲೆ ಆಕೆ ಬೇರೊಬ್ಬನನ್ನು ಮದುವೆಯಾಗಬಹುದು. 3-4 ಆಕೆಯ ಹೊಸ ಗಂಡನೂ ಆಕೆಯನ್ನು ಇಷ್ಟಪಡದೆ ಮನೆಯಿಂದ ಹೊರಗೆ ಕಳುಹಿಸಿದರೆ ಅಥವಾ ಎರಡನೆ ಗಂಡನು ಸತ್ತುಹೋದರೆ ಆಕೆಯ ಮೊದಲನೆಯ ಗಂಡನು ಆಕೆಯನ್ನು ಮತ್ತೆ ಮದುವೆಯಾಗಬಾರದು. ಅವನಿಗೆ ಆಕೆಯು ಅಶುದ್ಧಳಾದಳು. ಅವನು ಆಕೆಯನ್ನು ಮತ್ತೆ ಮದುವೆಯಾದಲ್ಲಿ ಅವನು ಯೆಹೋವನಿಗೆ ಅಸಹ್ಯವಾದದ್ದನ್ನು ಮಾಡುವವನಾಗಿದ್ದಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥ ಪಾಪಗಳನ್ನು ಮಾಡಬಾರದು.

“ಒಬ್ಬನು ಹೊಸದಾಗಿ ಮದುವೆಯಾಗಿದ್ದಲ್ಲಿ ಅವನನ್ನು ಸೈನ್ಯಕ್ಕೆ ಕಳುಹಿಸಬಾರದು; ವಿಶೇಷವಾದ ಜವಾಬ್ದಾರಿಯನ್ನು ಅವನಿಗೆ ಕೊಡಬಾರದು. ಒಂದು ವರ್ಷ ಅವನು ಮನೆಯಲ್ಲಿದ್ದುಕೊಂಡು ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕು.

“ಒಬ್ಬನು ನಿಮ್ಮಿಂದ ಏನಾದರೊಂದು ವಸ್ತುವನ್ನು ಎರವಲಾಗಿ ತೆಗೆದುಕೊಳ್ಳುವುದಾದರೆ ಅವನ ಬೀಸುವ ಕಲ್ಲಿನ ಒಂದು ಭಾಗವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಇಲ್ಲವಾದರೆ ಅವನ ಆಹಾರವನ್ನೇ ಅವನಿಂದ ಕಿತ್ತುಕೊಂಡ ಹಾಗಾಯಿತು.

“ಒಬ್ಬನು ಇನ್ನೊಬ್ಬ ಇಸ್ರೇಲನನ್ನು ಕದ್ದುಕೊಂಡು ಹೋಗಿ ಅವನನ್ನು ಗುಲಾಮನನ್ನಾಗಿ ಮಾರಬಾರದು. ಹಾಗೆ ಮಾಡಿದವನನ್ನು ಸಾಯಿಸಬೇಕು. ನಿಮ್ಮ ಕುಲದಿಂದ ಅಂಥಾ ಪಾಪವನ್ನು ತೆಗೆದುಹಾಕಬೇಕು.

“ನಿಮ್ಮಲ್ಲಿ ಯಾರಿಗಾದರೂ ಚರ್ಮರೋಗವಿದ್ದಲ್ಲಿ ಯಾಜಕನು ಹೇಳುವ ರೀತಿಯನ್ನು ಅನುಸರಿಸಬೇಕು. ನಾನು ಯಾಜಕರಿಗೆ ತಿಳಿಸಿದ ಮೇರೆಗೆ ನೀವು ಮಾಡಬೇಕು. ಈಜಿಪ್ಟಿನಿಂದ ಹೊರಟುಬಂದಾಗ ದಾರಿಯಲ್ಲಿ ದೇವರಾದ ಯೆಹೋವನು ಮಿರ್ಯಾಮಳಿಗೆ ಏನು ಮಾಡಿದನೆಂದು ಸ್ಮರಿಸಿರಿ.

10 “ನೀವು ಯಾರಿಗಾದರೂ ಸಾಲಕೊಟ್ಟರೆ ಅದಕ್ಕೆ ಒತ್ತೆಯಾಗಿ ವಸ್ತುವನ್ನು ತೆಗೆದುಕೊಳ್ಳಲು ಅವನ ಮನೆಯೊಳಗೆ ಹೋಗಬೇಡಿ. 11 ನೀವು ಹೊರಗೆ ನಿಂತುಕೊಳ್ಳಬೇಕು. ಸಾಲ ತೆಗೆದುಕೊಂಡ ವ್ಯಕ್ತಿಯು ತನ್ನ ಮನೆಯೊಳಗಿಂದ ಏನಾದರೂ ವಸ್ತುವನ್ನು ಒತ್ತೆಯಾಗಿ ನಿಮಗೆ ತಂದುಕೊಡುವನು. 12 ಅವನು ಬಡವನಾದರೆ ಅವನು ತನ್ನ ಕಂಬಳಿಯನ್ನೇ ತಂದುಕೊಡಬಹುದು. ಅದನ್ನು ರಾತ್ರಿ ಇಟ್ಟುಕೊಳ್ಳಬಾರದು. 13 ಪ್ರತೀ ಸಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಆಶೀರ್ವದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆ ಒಳ್ಳೆಯ ಕಾರ್ಯವನ್ನು ಗಣನೆಗೆ ತರುವನು.

14 “ಬಡವನಾಗಿರುವ ದಿನಕೂಲಿಯವನಿಗೆ ಮೋಸ ಮಾಡಬಾರದು. ಅವನು ಇಸ್ರೇಲನಾಗಿರಬಹುದು ಅಥವಾ ಪರದೇಶಸ್ಥನಾಗಿರಬಹುದು. 15 ಸೂರ್ಯ ಮುಳುಗುವುದರೊಳಗೆ ಅವನಿಗೆ ಸಲ್ಲಬೇಕಾದ ಕೂಲಿಯನ್ನು ಕೊಟ್ಟುಬಿಡು, ಅವನು ಬಡವನಾಗಿದ್ದಾನೆ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಬೇಕು. ನೀನು ಅವನ ಕೂಲಿ ಕೊಡದಿದ್ದಲ್ಲಿ ಅವನು ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.

16 “ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣ ಶಿಕ್ಷೆಯಾಗಬೇಕು.

17 “ಪರದೇಶಸ್ಥರನ್ನು ಮತ್ತು ಅನಾಥರನ್ನು ಯೋಗ್ಯವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವಿಧವೆಯರ ಬಟ್ಟೆಗಳನ್ನು ಒತ್ತೆಯಿಟ್ಟುಕೊಳ್ಳಕೂಡದು. 18 ನೀವು ಈಜಿಪ್ಟಿನಲ್ಲಿ ಬಡ ಗುಲಾಮರಾಗಿದ್ದುದನ್ನು ಸ್ಮರಿಸಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ನೀವು ಬಡವರಿಗೆ ದಯೆ ತೋರಿಸಬೇಕು.

19 “ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನೆಗೆ ತರುವಾಗ ಕೆಲವು ಸಿವುಡುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಊರಿನಲ್ಲಿರುವ ಅನಾಥರಿಗೂ ವಿಧವೆಯರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು. 20 ನೀವು ನಿಮ್ಮ ಎಣ್ಣೆಮರಗಳ ಕಾಯಿಗಳನ್ನು ಉದುರಿಸುವಾಗ ಮತ್ತೆ ಹೋಗಿ ಕೊಂಬೆಗಳಲ್ಲಿ ಕಾಯಿ ಹುಡುಕಬಾರದು. ಬಿಟ್ಟ ಕಾಯಿಗಳು ಪರದೇಶಸ್ಥರಿಗೂ ಊರಿನ ಅನಾಥ ಮತ್ತು ವಿಧವೆಯವರಿಗೂ ಆಗುವುದು. 21 ನಿಮ್ಮ ತೋಟದಿಂದ ಹಣ್ಣುಗಳನ್ನು ಕೂಡಿಸುವಾಗ ಉಳಿದ ಹಣ್ಣುಗಳನ್ನು ಶೇಖರಿಸಲು ಹಿಂತಿರುಗಬೇಡಿ; ಆ ಉಳಿದ ದ್ರಾಕ್ಷಿಹಣ್ಣುಗಳು ಊರಲ್ಲಿರುವ ಅನಾಥರಿಗೂ ವಿಧವೆಯರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ. 22 ನೀವು ಈಜಿಪ್ಟ್ ದೇಶದಲ್ಲಿ ಬಡ ಗುಲಾಮರಾಗಿದ್ದುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿಂದಲೇ ಬಡವರಿಗೆ ನೀವು ಹೀಗೆ ಮಾಡಬೇಕೆಂದು ನಿಮಗೆ ತಿಳಿಸುತ್ತಿದ್ದೇನೆ.

ಕೀರ್ತನೆಗಳು 114-115

114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
    ಯಾಕೋಬ್ಯರು ಪರದೇಶದಿಂದ ಹೊರಟರು.
ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
    ಇಸ್ರೇಲ್ ಆತನ ರಾಜ್ಯವಾಯಿತು.
ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
    ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
ಬೆಟ್ಟಗಳು ಟಗರುಗಳಂತೆಯೂ
    ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.

ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
    ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
    ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?

ಯಾಕೋಬನ ದೇವರೂ ಒಡೆಯನೂ ಆಗಿರುವ
    ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
    ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

ಯೆಶಾಯ 51

ಇಸ್ರೇಲ್ ಅಬ್ರಹಾಮನಂತೆ ಇರಬೇಕು

51 “ಒಳ್ಳೆಯವರಾಗಿ ಜೀವಿಸಲು ಬಹಳವಾಗಿ ಪ್ರಯತ್ನಿಸುತ್ತಿರುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೇ ದೃಷ್ಟಿಸಿ ನೋಡಿರಿ; ಆ ಬಂಡೆಯೊಳಗಿಂದಲೇ ನೀವು ತೆಗೆಯಲ್ಪಟ್ಟಿದ್ದೀರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮ ಮಾತೆಯಾದ ಸಾರಳನ್ನೂ ದೃಷ್ಟಿಸಿರಿ; ನಾನು ಕರೆದಾಗ ಅಬ್ರಹಾಮನು ಒಬ್ಬಂಟಿಗನಾಗಿದ್ದನು. ನಾನು ಅವನನ್ನು ಆಶೀರ್ವದಿಸಿ, ಅವನ ಸಂತಾನವನ್ನು ಅಭಿವೃದ್ಧಿಪಡಿಸಿ, ಅವನನ್ನು ಮಹಾಜನಾಂಗದ ಮೂಲಪುರುಷನನ್ನಾಗಿ ಮಾಡಿದೆನು.”

ಅದೇ ರೀತಿಯಲ್ಲಿ ಯೆಹೋವನು ಚೀಯೋನನ್ನು ಮತ್ತು ನಿರ್ಜನವಾದ ಅದರ ಸ್ಥಳಗಳನ್ನು ಆದರಿಸುವನು; ಅವರಿಗಾಗಿ ಮಹಾದೊಡ್ಡ ಕಾರ್ಯವನ್ನು ಮಾಡುವನು. ಯೆಹೋವನು ಮರುಭೂಮಿಯನ್ನು ಏದೆನ್ ಉದ್ಯಾನವನದಂತೆ ಮಾಡುವನು. ಆ ದೇಶವು ಬರಿದಾಗಿತ್ತು. ಆದರೆ ಅದು ಯೆಹೋವನ ಉದ್ಯಾನವನವಾಗುವದು. ಅದರೊಳಗಿರುವ ಜನರು ಸಂತೋಷಭರಿತರಾಗುವರು. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವರು. ಅವರು ಕೃತಜ್ಞತಾಸ್ತುತಿ ಮಾಡುವರು, ಜಯಗೀತೆಯನ್ನು ಹಾಡುವರು.

“ನನ್ನ ಜನರೇ, ನನ್ನ ಮಾತನ್ನು ಕೇಳಿರಿ.
    ನನ್ನ ಕಟ್ಟಳೆ ಮತ್ತು ನ್ಯಾಯ ಬೆಳಕಿನಂತಿದ್ದು ಹೇಗೆ ಜೀವಿಸಬೇಕೆಂಬುದನ್ನು ಜನರಿಗೆ ತೋರಿಸುತ್ತವೆ.
ನಾನು ನ್ಯಾಯವಂತನೆಂದು ನಿಮಗೆ ಬೇಗನೆ ತೋರಿಸುವೆನು. ನಿಮ್ಮನ್ನು ಬೇಗನೆ ರಕ್ಷಿಸುವೆನು.
    ನಾನು ನನ್ನ ಸಾಮರ್ಥ್ಯದಿಂದ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವೆನು.
ದೂರದೇಶದವರು ನನಗೋಸ್ಕರ ಕಾಯುತ್ತಿದ್ದಾರೆ.
    ಅವರು ತಮ್ಮ ರಕ್ಷಣೆಗಾಗಿ ನನ್ನ ಶಕ್ತಿಯನ್ನು ಎದುರುನೋಡುತ್ತಿದ್ದಾರೆ.
ಪರಲೋಕದ ಕಡೆಗೆ ದೃಷ್ಟಿಸಿರಿ.
    ನಿಮ್ಮ ಸುತ್ತಲೂ ಇರುವ ಭೂಮಿಯನ್ನು ನೋಡಿರಿ.
ಹೊಗೆಯ ಮೋಡದಂತೆ ಆಕಾಶವು ಇಲ್ಲದೆಹೋಗುವದು.
    ಭೂಮಿಯು ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವುದು.
ಭೂಮಿಯ ಮೇಲಿರುವ ಜನರು ಸಾಯುವರು.
    ಆದರೆ ನನ್ನ ರಕ್ಷಣೆಯು ನಿರಂತರವಾಗಿರುವದು.
    ನನ್ನ ಕರುಣೆಯು ಅಂತ್ಯವಾಗದು.
ಒಳ್ಳೆಯತನವನ್ನು ಅರ್ಥಮಾಡಿಕೊಂಡ ನೀವು ನನ್ನ ಮಾತುಗಳನ್ನು ಕೇಳಿರಿ.
    ನನ್ನ ಬೋಧನೆಯನ್ನು ಅನುಸರಿಸುವ ನೀವು ನನ್ನ ಮಾತಿಗೆ ಕಿವಿಗೊಡಿರಿ.
ದುಷ್ಟಜನರಿಗೆ ಭಯಪಡಬೇಡಿರಿ.
    ಅವರು ನಿಮಗೆ ಹೇಳುವ ಕೆಟ್ಟಮಾತುಗಳಿಗೆ ಭಯಪಡಬೇಡಿ.
ಯಾಕೆಂದರೆ ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು. ಅವರು ಉಣ್ಣೆಯಂತಿರುವರು,
    ನುಸಿಯು ಅದನ್ನು ತಿಂದುಬಿಡುವುದು.
ಆದರೆ ನನ್ನ ಒಳ್ಳೆಯತನವು ಶಾಶ್ವತವಾದದ್ದು.
    ನನ್ನ ರಕ್ಷಣೆಯು ಸದಾಕಾಲವಿರುವುದು.”

ದೇವರ ಶಕ್ತಿಯೇ ಜನರನ್ನು ರಕ್ಷಿಸುವದು

ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು,
    ಬಲವನ್ನು ಹೊಂದಿಕೊ!
ಪುರಾತನ ಕಾಲದಲ್ಲಿ ಮಾಡಿದಂತೆಯೇ
    ನಿನ್ನ ಶಕ್ತಿಯನ್ನು ತೋರು.
ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ.
    ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.
10 ನೀನು ಸಮುದ್ರವನ್ನು ಬತ್ತಿಸಿರುವೆ. ಮಹಾ ಆಳದ ಗುಂಡಿಗಳ ನೀರನ್ನು ನೀನು ಬತ್ತಿಸಿರುವೆ.
    ಅತ್ಯಂತ ಆಳವಾದ ಸಮುದ್ರದ ತಳವನ್ನು ನೀನು ರಸ್ತೆಯನ್ನಾಗಿ ಮಾಡಿರುವೆ.
    ನಿನ್ನ ಜನರು ಆ ರಸ್ತೆಯಲ್ಲಿ ಸಮುದ್ರವನ್ನು ದಾಟಿ ರಕ್ಷಿಸಲ್ಪಟ್ಟರು.
11 ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ.
    ಅವರು ಚೀಯೋನಿಗೆ ಸಂತೋಷದಿಂದ ಮರಳಿ ಬರುತ್ತಾರೆ.
ಅವರು ಬಹಳ ಸಂತೋಷಪಡುವರು.
    ಅವರ ಹರ್ಷವು ಅವರ ತಲೆಯ ಮೇಲೆ ಕಿರೀಟದಂತೆ ನಿತ್ಯಕಾಲಕ್ಕೂ ಇರುವುದು.
ಅವರು ಹರ್ಷದಿಂದ ಹಾಡುವರು.
    ಅವರ ದುಃಖವೆಲ್ಲಾ ಬಹುದೂರವಾಗುವುದು.

12 ಯೆಹೋವನು ಹೇಳುವುದೇನೆಂದರೆ, “ನಿನ್ನನ್ನು ಸಂತೈಸುವಾತನು ನಾನೇ.
    ಆದ್ದರಿಂದ ನೀನು ಜನರಿಗೆ ಯಾಕೆ ಹೆದರಬೇಕು.
    ಅವರು ಹುಟ್ಟಿ ಸಾಯುವ ನರರಾಗಿದ್ದಾರೆ.
    ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ.”

13 ಯೆಹೋವನು ನಿನ್ನನ್ನು ಸೃಷ್ಟಿಸಿದ್ದಾನೆ.
    ತನ್ನ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದವನು ಆತನೇ.
ಆತನು ತನ್ನ ಶಕ್ತಿಯಿಂದ
    ಭೂಮಿಯ ಮೇಲೆ ಆಕಾಶವನ್ನು ಹರಡಿದ್ದಾನೆ.
ಆದರೆ ನೀನು ಆತನನ್ನೂ ಆತನ ಶಕ್ತಿಯನ್ನೂ ಮರೆತುಬಿಟ್ಟೆ
    ಆದ್ದರಿಂದಲೇ ನಿನಗೆ ಕೇಡುಮಾಡುವ ದುಷ್ಟರಿಗೆ ನೀನು ಯಾವಾಗಲೂ ಹೆದರಿಕೊಂಡಿರುವೆ.
ಅವರು ನಿನ್ನನ್ನು ನಾಶಮಾಡಲು ಆಲೋಚಿಸಿದ್ದಾರೆ.
    ಈಗ ಅವರೆಲ್ಲಿದ್ದಾರೆ? ಅವರೆಲ್ಲಾ ಹೋಗಿಬಿಟ್ಟಿದ್ದಾರೆ.

14 ಸೆರೆಯಲ್ಲಿರುವವರು ಬೇಗನೆ ಬಿಡುಗಡೆ ಹೊಂದುವರು.
    ಅವರು ಸೆರೆಮನೆಯಲ್ಲಿ ಸತ್ತು ಕೊಳೆಯುವುದಿಲ್ಲ.
    ಅವರಿಗೆ ತಿನ್ನಲು ಬೇಕಾದಷ್ಟು ಊಟವಿರುವದು.

15 “ಯೆಹೋವನೆಂಬ ನಾನೇ ನಿಮ್ಮ ದೇವರು.
    ನಾನು ಸಾಗರವನ್ನು ಕದಡಿಸಿ ತೆರೆಗಳನ್ನು ಬರಮಾಡುತ್ತೇನೆ.”
(ಸರ್ವಶಕ್ತನು ಎಂಬುದೇ ನನ್ನ ಹೆಸರು.)

16 “ನನ್ನ ಸೇವಕನೇ, ನೀನು ಹೇಳತಕ್ಕ ಇಷ್ಟವಾದ ಮಾತುಗಳನ್ನು ನಿನ್ನ ಬಾಯಲ್ಲಿಡುತ್ತೇನೆ. ನಾನು ನನ್ನ ಕೈಗಳಿಂದ ನಿನ್ನನ್ನು ಮುಚ್ಚಿ ಕಾಪಾಡುವೆನು. ಹೊಸ ಭೂಮ್ಯಾಕಾಶಗಳನ್ನು ನಿರ್ಮಿಸಲು ನಾನು ನಿನ್ನನ್ನು ಉಪಯೋಗಿಸುತ್ತೇನೆ. ಚೀಯೋನಿಗೆ, ‘ನೀವು ನನ್ನ ಜನರು’ ಎಂದು ಹೇಳುವದಕ್ಕೆ ನಿನ್ನನ್ನು ಉಪಯೋಗಿಸುತ್ತೇನೆ.”

ದೇವರು ಇಸ್ರೇಲರನ್ನು ಶಿಕ್ಷಿಸಿದನು

17 ಜೆರುಸಲೇಮೇ, ಎಚ್ಚರಗೊಳ್ಳು; ಎದ್ದೇಳು;
ಯೆಹೋವನು ನಿನ್ನ ಮೇಲೆ ಬಹಳವಾಗಿ ಕೋಪಗೊಂಡು
    ನಿನ್ನನ್ನು ಶಿಕ್ಷಿಸಿದ್ದಾನೆ.
ಆ ಶಿಕ್ಷೆಯು ವಿಷತುಂಬಿದ ಪಾತ್ರೆಯಂತಿದೆ. ನೀನು ಅದನ್ನು ಕುಡಿಯಲೇಬೇಕಿತ್ತು.
    ಈಗ ನೀನು ಅದನ್ನು ಕುಡಿದಿರುವೆ.

18 ಜೆರುಸಲೇಮಿನಲ್ಲಿ ಅನೇಕ ಜನರಿದ್ದರೂ ಅವರಲ್ಲಿ ಯಾರೂ ಅವಳಿಗಾಗಿ ನಾಯಕರಾಗಲಿಲ್ಲ. ಆಕೆಯು ಅನೇಕ ಮಕ್ಕಳನ್ನು ಪಡೆದವಳಾಗಿದ್ದರೂ ಆಕೆಯನ್ನು ನಡೆಸಲು ಮಾರ್ಗದರ್ಶಕರು ಯಾರೂ ಆಗಲಿಲ್ಲ. 19 ಜೆರುಸಲೇಮಿಗೆ ತೊಂದರೆಗಳು ಎರಡು ಗುಂಪುಗಳಾಗಿ ಬಂದವು: ಲೂಟಿ ಮತ್ತು ಕೊರತೆ; ಕ್ಷಾಮ ಮತ್ತು ಖಡ್ಗ.

ನೀನು ಸಂಕಟ ಅನುಭವಿಸುವಾಗ ಯಾರೂ ನಿನಗೆ ಸಹಾಯ ಮಾಡಲಿಲ್ಲ. ಯಾರೂ ನಿನಗೆ ಕರುಣೆ ತೋರಿಸಲಿಲ್ಲ. 20 ನಿನ್ನ ಜನರು ಬಲಹೀನರಾದರು. ಅವರು ನೆಲದ ಮೇಲೆ ಬಿದ್ದು ಅಲ್ಲಿಯೇ ಮಲಗಿದರು. ಆ ಜನರು ರಸ್ತೆಯ ಮೂಲೆಮೂಲೆಗಳಲ್ಲಿ ಬಿದ್ದುಕೊಂಡಿರುತ್ತಾರೆ. ಅವರು ಬಲೆಯೊಳಗೆ ಸಿಕ್ಕಿಬಿದ್ದ ಜಿಂಕೆಯಂತಿರುವರು. ಯೆಹೋವನ ಕೋಪದಿಂದ ಇನ್ನೂ ಹೆಚ್ಚಿನ ಶಿಕ್ಷೆಯನ್ನು, ತಾಳಲಾರದಷ್ಟು ಶಿಕ್ಷೆಯನ್ನು ಅನುಭವಿಸಿದರು. ದೇವರು ಇನ್ನೂ ಹೆಚ್ಚಾಗಿ ಶಿಕ್ಷೆಕೊಡುವುದಾಗಿ ಹೇಳಿದಾಗ ಅವರು ಕಂಗಾಲಾದರು.

21 ಜೆರುಸಲೇಮೇ, ನನಗೆ ಕಿವಿಗೊಡು. ನೀನು ಅಮಲೇರಿದವಳಂತೆ ಶಕ್ತಿಹೀನಳಾಗಿರುವೆ. ನೀನು ಕುಡಿದು ಅಮಲೇರುವುದು ದ್ರಾಕ್ಷಾರಸದಿಂದಲ್ಲ, “ವಿಷದಿಂದಷ್ಟೇ.”

22 ನಿನ್ನ ದೇವರೂ ಒಡೆಯನೂ ಆಗಿರುವ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುವನು. ಅವನು ನಿನಗೆ ಹೇಳುವುದೇನೆಂದರೆ, “ಇಗೋ, ನಾನು ನಿನ್ನಿಂದ ವಿಷದ ಪಾತ್ರೆಯನ್ನು (ಶಿಕ್ಷೆ) ತೆಗೆದುಬಿಡುತ್ತೇನೆ. ಇನ್ನು ಮುಂದೆ ನನ್ನ ಸಿಟ್ಟಿನಿಂದ ನೀನು ಶಿಕ್ಷಿಸಲ್ಪಡುವದಿಲ್ಲ. 23 ಈಗ ನನ್ನ ಕೋಪದ ದೆಸೆಯಿಂದ ನಿನಗೆ ಹಾನಿ ಮಾಡಿದವರನ್ನು ಶಿಕ್ಷಿಸುವೆನು. ಅವರು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದರು. ‘ನಮ್ಮ ಮುಂದೆ ಸಾಷ್ಟಾಂಗಬೀಳು. ಆಗ ನಿನ್ನ ಮೇಲೆ ನಾವು ನಡೆಯುವೆವು’ ಎಂದು ಹೇಳಿದರು. ಅವರಿಗೆ ಅಡ್ಡಬೀಳಲು ನಿನ್ನನ್ನು ಬಲಾತ್ಕರಿಸಿದರು. ಆ ಬಳಿಕ ಅವರು ನೀನು ಮಣ್ಣಿನ ಧೂಳೋ ಎಂಬಂತೆ ನಿನ್ನ ಬೆನ್ನಿನ ಮೇಲೆ ನಡೆದಾಡಿದರು. ನೀನು ಅವರಿಗೆ ನಡೆಯಲು ಬೀದಿಯಾದಿ.”

ಪ್ರಕಟನೆ 21

ನೂತನ ಜೆರುಸಲೇಮ್

21 ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು[a] ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ. ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.

ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.

ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.

ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ. ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”

ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು. 10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.

11 ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ ವಜ್ರದಂತೆ ಪ್ರಕಾಶಿಸುತ್ತಿತ್ತು. ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. 12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲ್ಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲ್ಲುಗಳ ಮೇಲೆ ಕುರಿಮರಿಯಾದಾತನ ಹನ್ನರೆಡು ಮಂದಿ ಅಪೊಸ್ತಲರ ಹೆಸರುಗಳನ್ನು ಬರೆಯಲಾಗಿತ್ತು.

15 ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು. 16 ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ[b] ಎತ್ತರವಾಗಿತ್ತು. 17 ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು.[c] ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. 18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.

19 ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸಕಲ ವಿಧವಾದ ಬೆಲೆಬಾಳುವ ರತ್ನಗಳಿದ್ದವು. ಮೊದಲನೆ ಮೂಲೆಗಲ್ಲು ವಜ್ರ, ಎರಡನೆಯದು ವೈಢೂರ್ಯ, ಮೂರನೆಯದು ಪಚ್ಚೆ, 20 ನಾಲ್ಕನೆಯದು ಪದ್ಮರಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ ಮತ್ತು ಹನ್ನೆರಡನೆಯದು ನೀಲಸ್ಫಟಿಕ. 21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.

22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.

24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International