Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 23

ಇಸ್ರೇಲರ ದೇವಾರಾಧನೆಗೆ ಯೋಗ್ಯರಾದವರು

23 “ಜನನಾಂಗದ ಬೀಜವನ್ನು ಹೊಡಿಸಿಕೊಂಡವನಾಗಲಿ ಜನನಾಂಗದ ಒಂದು ಭಾಗವನ್ನು ಕತ್ತರಿಸಿಕೊಂಡವನಾಗಲಿ ಇಸ್ರೇಲ್ ಜನರೊಂದಿಗೆ ದೇವಾರಾಧನೆ ಮಾಡಬಾರದು. ಒಬ್ಬನ ತಂದೆತಾಯಿಗಳು ಕಾನೂನು ಬದ್ಧವಾಗಿ ಮದುವೆಯಾಗಿಲ್ಲದಿದ್ದರೆ, ಅವನು ದೇವಾರಾಧನೆಯಲ್ಲಿ ಇಸ್ರೇಲರೊಡನೆ ಸೇರಕೂಡದು. ಅವನ ಸಂತತಿಯವರು ಹತ್ತನೆಯ ತಲೆಮಾರಿನ ತನಕ ಇಸ್ರೇಲ್ ಸಮೂಹದೊಂದಿಗೆ ಆರಾಧನೆ ಮಾಡಬಾರದು.

“ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಇಸ್ರೇಲರೊಂದಿಗೆ ಸೇರಿ ದೇವಾರಾಧನೆ ಮಾಡಕೂಡದು. ಅವರ ಸಂತತಿಯ ಹತ್ತನೆಯ ತಲೆಮಾರಿನವರೆಗೂ ಆರಾಧನೆ ಮಾಡಬಾರದು. ಯಾಕೆಂದರೆ ಇಸ್ರೇಲರು ಈಜಿಪ್ಟಿನಿಂದ ಹೊರಟುಬಂದು ಪ್ರಯಾಣದಲ್ಲಿದ್ದಾಗ ಅವರಿಗೆ ರೊಟ್ಟಿಯನ್ನಾಗಲಿ ನೀರನ್ನಾಗಲಿ ಕೊಡಲು ಅವರು ನಿರಾಕರಿಸಿದ್ದರು. ಅವರು ಮೆಸಪೊಟೋಮಿಯದಿಂದ ಬಿಳಾಮನನ್ನು ಕರೆಸಿ ಇಸ್ರೇಲರನ್ನು ಶಪಿಸುವಂತೆ ಬಲವಂತಪಡಿಸಿದರು. ಆದರೆ ಯೆಹೋವನು ನಿಮ್ಮನ್ನು ಪ್ರೀತಿಸುತ್ತಿದ್ದುದರಿಂದ ಆ ಶಾಪವನ್ನು ನಿಮಗೆ ಆಶೀರ್ವಾದವಾಗಿ ಪರಿವರ್ತಿಸಿದನು. ಅಮ್ಮೋನಿಯರೊಂದಿಗಾಗಲಿ ಮೋವಾಬ್ಯರೊಂದಿಗಾಗಲಿ ನೀವು ಸಂಧಾನ ಮಾಡಿಕೊಳ್ಳಲೇಬಾರದು; ನಿಮ್ಮ ಜೀವಮಾನವೆಲ್ಲಾ ಅವರೊಂದಿಗೆ ಸ್ನೇಹತ್ವದಲ್ಲಿರಬಾರದು.

“ಎದೋಮ್ಯರನ್ನು ನೀವು ದ್ವೇಷಿಸಬಾರದು, ಅವರು ನಿಮ್ಮ ಸಂಬಂಧಿಕರಾಗಿದ್ದಾರೆ. ಈಜಿಪ್ಟಿನವರನ್ನು ನೀವು ದ್ವೇಷಿಸಬಾರದು, ಅವರ ದೇಶದಲ್ಲಿ ನೀವು ಪರದೇಶಿಗಳಾಗಿದ್ದಿರಲ್ಲಾ. ಎದೋಮ್ಯರ ಮತ್ತು ಈಜಿಪ್ಟಿನವರ ಮೂರನೆ ತಲೆಮಾರಿನವರು ಇಸ್ರೇಲರೊಂದಿಗೆ ದೇವಾರಾಧನೆ ಮಾಡಬಹುದು.

ಪಾಳೆಯವನ್ನು ಶುದ್ಧವಾಗಿಡಬೇಕು

“ನಿಮ್ಮ ಸೈನ್ಯವು ವೈರಿಗಳೊಂದಿಗೆ ಯುದ್ಧಮಾಡಲು ಹೋದಾಗ ನಿಮ್ಮನ್ನು ಅಶುದ್ಧಪಡಿಸುವ ಪ್ರತಿಯೊಂದರಿಂದಲೂ ನೀವು ದೂರವಾಗಿರಿ. 10 ಒಬ್ಬನಿಗೆ ರಾತ್ರಿ ಕಾಲದಲ್ಲಿ ವೀರ್ಯಸ್ಖಲನವಾದರೆ ಅವನು ಪಾಳೆಯದಿಂದ ಹೊರಗೆ ಹೋಗಿ ಪ್ರತ್ಯೇಕವಾಗಿರಬೇಕು. 11 ಸಾಯಂಕಾಲವಾದಾಗ ಅವನು ಸ್ನಾನಮಾಡಿ ಸೂರ್ಯ ಮುಳುಗಿದ ಬಳಿಕ ಪಾಳೆಯದೊಳಕ್ಕೆ ಬರಬಹುದು.

12 “ಪಾಳೆಯದ ಹೊರಗೆ ಬಹಿರ್ದೇಶಕ್ಕೆ ಹೋಗಲು ಒಂದು ಸ್ಥಳವನ್ನು ನೇಮಿಸಬೇಕು. 13 ನಿಮ್ಮ ಆಯುಧಗಳೊಂದಿಗೆ ನೀವು ಒಂದು ಕೋಲನ್ನು ಇಟ್ಟುಕೊಳ್ಳಬೇಕು. ಈ ಕೋಲಿನಿಂದ ಮಣ್ಣು ಅಗೆದು ನೆಲದಲ್ಲಿ ಚಿಕ್ಕ ಗುಂಡಿ ತೋಡಲೂ ಮತ್ತು ಹೊಟ್ಟೆ ಖಾಲಿ ಮಾಡಿದ ಬಳಿಕ ಆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲೂ ಸಹಾಯವಾಗುವುದು. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸಂರಕ್ಷಿಸಲೂ ವೈರಿಗಳನ್ನು ಸೋಲಿಸುವಂತೆ ಸಹಾಯ ಮಾಡಲೂ ನಿಮ್ಮೊಂದಿಗೆ ಪಾಳೆಯದಲ್ಲಿರುವುದರಿಂದ ನಿಮ್ಮ ಪಾಳೆಯವು ಪವಿತ್ರವಾಗಿರಬೇಕು. ಇಲ್ಲದಿದ್ದಲ್ಲಿ ನಿಮ್ಮ ಪಾಳೆಯದಲ್ಲಿರುವ ಹೊಲಸನ್ನು ನೋಡಿ ಆತನು ಹಿಂದಿರುಗಿ ಹೋಗುವನು.

ಇತರ ವಿಧಿನಿಯಮಗಳು

15 “ಒಬ್ಬ ಗುಲಾಮನು ತನ್ನ ಧಣಿಯ ಬಳಿಯಿಂದ ನಿಮ್ಮ ಬಳಿಗೆ ಓಡಿ ಬಂದರೆ ನೀವು ಅವನ ಧಣಿಗೆ ಅವನನ್ನು ಒಪ್ಪಿಸಬಾರದು. 16 ಅವನು ನಿಮ್ಮ ಬಳಿಯಲ್ಲಿ ಇರಲು ಇಷ್ಟಪಟ್ಟರೆ ಅಥವಾ ಬೇರೆ ಊರಿಗೆ ಹೋಗಲು ಇಷ್ಟಪಟ್ಟರೆ ನೀವು ಅವನಿಗೆ ತೊಂದರೆಕೊಡಬಾರದು.

17 “ಇಸ್ರೇಲರ ಗಂಡಸಾಗಲಿ ಹೆಂಗಸಾಗಲಿ ದೇವಸ್ಥಾನದ ವೇಶ್ಯೆಯಾಗಬಾರದು. 18 ಸೂಳೆತನದಿಂದ ಗಳಿಸಿದ ಹಣವನ್ನು ನಿಮ್ಮ ದೇವರಾದ ಯೆಹೋವನ ವಿಶೇಷ ವಾಸಸ್ಥಾನಕ್ಕೆ ತೆಗೆದುಕೊಂಡು ಬರಬಾರದು. ಒಬ್ಬನು ತಾನು ಹೊತ್ತುಕೊಂಡ ಹರಕೆಯನ್ನು ಆ ಹಣದಿಂದ ಪೂರೈಸಕೂಡದು. ಯಾಕೆಂದರೆ ಲೈಂಗಿಕ ಪಾಪದಲ್ಲಿ ತಮ್ಮ ದೇಹಗಳನ್ನು ಮಾರುವವರನ್ನು ನಿಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ; ಲೈಂಗಿಕ ಪಾಪಗಳ ಆದಾಯದಿಂದ ಬಂದ ಹಣದಿಂದ ಖರೀದಿ ಮಾಡಿದ ಕಾಣಿಕೆಗಳನ್ನು ಆತನು ದ್ವೇಷಿಸುತ್ತಾನೆ.

19 “ನೀವು ಇನ್ನೊಬ್ಬ ಇಸ್ರೇಲಿಗೆ ಸಾಲಕೊಟ್ಟರೆ ಅದಕ್ಕೆ ಬಡ್ಡಿ ವಸೂಲು ಮಾಡಬಾರದು. 20 ಪರದೇಶಸ್ಥರಿಗೆ ನೀವು ಬಡ್ಡಿಗೆ ಸಾಲ ಕೊಡಬಹುದು. ಆದರೆ ಸ್ವದೇಶದವನಾದ ಇಸ್ರೇಲಿನವನಿಗೆ ಬಡ್ಡಿಗೆ ಸಾಲ ಕೊಡಬಾರದು. ನೀವು ಹೀಗೆ ಮಾಡಿದ್ದಲ್ಲಿ, ನೀವು ಹೋಗಿ ನೆಲೆಸುವ ದೇಶದಲ್ಲಿ ನೀವು ಮಾಡುವ ಪ್ರತಿಯೊಂದರಲ್ಲೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು.

21 “ನೀವು ನಿಮ್ಮ ದೇವರಾದ ಯೆಹೋವನಿಗೆ ಹರಕೆ ಹೊತ್ತರೆ ಅದನ್ನು ಸಲ್ಲಿಸಲು ನಿಧಾನ ಮಾಡಬೇಡಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮಿಂದ ಕೇಳುವವನಾಗಿದ್ದಾನೆ. ಹರಕೆಹೊತ್ತು ಸಲ್ಲಿಸದಿದ್ದರೆ ನೀವು ಪಾಪಮಾಡುವವರಾಗಿದ್ದೀರಿ. 22 ನೀವು ಹರಕೆ ಮಾಡಿಕೊಳ್ಳದಿದ್ದರೆ ಪಾಪಮಾಡುವುದಿಲ್ಲ. 23 ಆದರೆ ನೀವು ಮಾಡಿದ ಹರಕೆಯನ್ನು ಪೂರೈಸಬೇಕು. ನೀವು ಹರಕೆ ಮಾಡುವಂತೆ ದೇವರು ನಿಮ್ಮನ್ನು ಬಲವಂತ ಮಾಡಲಿಲ್ಲವಲ್ಲಾ. ಆದ್ದರಿಂದ ನೀವು ವಾಗ್ದಾನ ಮಾಡಿದ್ದನ್ನು ಪೂರೈಸಬೇಕು.

24 “ಒಬ್ಬನ ತೋಟದೊಳಗಿಂದ ನೀವು ಹಾದುಹೋಗುತ್ತಿರುವಾಗ ನಿಮಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತು ತಿನ್ನಿ. ಆದರೆ ನೀವು ಮಕ್ಕರಿಯಲ್ಲಿ ತುಂಬಿಸಿಕೊಂಡು ಹೋಗಬಾರದು. 25 ಒಬ್ಬನ ಧಾನ್ಯದ ಹೊಲದಲ್ಲಿ ನೀವು ಹಾದುಹೋಗುತ್ತಿರುವಾಗ ನಿಮ್ಮ ಕೈಯಿಂದ ಹೊಸೆದು ತಿನ್ನುವಷ್ಟು ಧಾನ್ಯವನ್ನು ನೀವು ತಿನ್ನಬಹುದು; ಆದರೆ ನೀವು ಕತ್ತಿಯಿಂದ ಧಾನ್ಯವನ್ನು ಕೊಯಿದು ನಿಮ್ಮೊಂದಿಗೆ ಒಯ್ಯಬೇಡಿ.

ಕೀರ್ತನೆಗಳು 112-113

112 ಯೆಹೋವನಿಗೆ ಸ್ತೋತ್ರವಾಗಲಿ!
    ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
    ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
    ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
ಅವನ ಕುಟುಂಬದವರು ಐಶ್ವರ್ಯವಂತರಾಗುವರು.
    ಅವನ ನೀತಿಯು ಶಾಶ್ವತವಾಗಿರುವುದು.
ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
    ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
    ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
ಅವನೆಂದಿಗೂ ಬೀಳುವುದಿಲ್ಲ.
    ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
    ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
ಅವನ ಮನಸ್ಸು ದೃಢವಾಗಿರುವುದರಿಂದ
    ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
ಅವನು ಬಡವರಿಗೆ ಉದಾರವಾಗಿ ಕೊಡುವನು.
    ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
    ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
    ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
    ಅವರ ದುರಾಶೆಯು ಈಡೇರದು.

113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
ಪೂರ್ವದಿಂದಿಡಿದು ಪಶ್ಚಿಮದವರೆಗೂ
    ಯೆಹೋವನ ಹೆಸರು ಸ್ತುತಿಸಲ್ಪಡಲಿ.
ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
    ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
    ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
ಆತನು ಆಕಾಶವನ್ನೂ
    ಭೂಮಿಯನ್ನೂ ಬಾಗಿ ನೋಡುವನು.
ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
    ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
ಆತನು ಅವರನ್ನು ಪ್ರಮುಖರನ್ನಾಗಿಯೂ
    ನಾಯಕರುಗಳನ್ನಾಗಿಯೂ ಮಾಡುವನು.
ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
    ಸಂತೋಷಪಡಿಸುವನು.

ಯೆಹೋವನಿಗೆ ಸ್ತೋತ್ರವಾಗಲಿ!

ಯೆಶಾಯ 50

ಜನರು ಪಾಪ ಮಾಡಿದ್ದರಿಂದ ಇಸ್ರೇಲು ಶಿಕ್ಷಿಸಲ್ಪಟ್ಟಿತು

50 ಯೆಹೋವನು ಹೇಳುವುದೇನೆಂದರೆ:
“ಇಸ್ರೇಲ್ ಜನರೇ, ನಾನು ನಿಮ್ಮ ತಾಯಿಯಾದ ಜೆರುಸಲೇಮಿಗೆ ವಿವಾಹವಿಚ್ಛೇದನ ಕೊಟ್ಟಿರುವುದಾಗಿ ಹೇಳುತ್ತೀರಿ.
    ಆದರೆ ನಾನು ಆಕೆಗೆ ವಿವಾಹವಿಚ್ಛೇದನ ಕೊಟ್ಟಿರುವುದಕ್ಕೆ ದಾಖಲೆ ಪತ್ರವೆಲ್ಲಿದೆ?
ನನ್ನ ಮಕ್ಕಳೇ, ನಿಮ್ಮಲ್ಲಿ ಯಾರಿಗಾದರೂ ನಾನು ಸಾಲ ತೀರಿಸಬೇಕಿತ್ತೇ?
    ಆ ಸಾಲವನ್ನು ತೀರಿಸಲು ನಾನು ನಿಮ್ಮನ್ನು ಮಾರಿದ್ದೆನೋ,
ಇಲ್ಲ. ನಾನು ನಿಮ್ಮನ್ನು ಮಾರಿಬಿಟ್ಟಿದ್ದು ನೀವು ಮಾಡಿದ ದುಷ್ಟತನಕ್ಕಾಗಿಯೇ.
    ನಿಮ್ಮ ತಾಯಿಯಾದ ಜೆರುಸಲೇಮನ್ನು ಕಳುಹಿಸಿಬಿಟ್ಟದ್ದು ನಿಮ್ಮ ಅಪರಾಧಗಳಿಗಾಗಿಯೇ.
ನಾನು ಮನೆಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ.
    ನಾನು ಎಷ್ಟು ಕರೆದರೂ ಯಾರೂ ಉತ್ತರ ಕೊಡಲಿಲ್ಲ.
ನಿಮ್ಮನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲವೆಂದು ನೀವು ನೆನಸುತ್ತೀರಾ?
    ನಿಮ್ಮ ಎಲ್ಲಾ ಕಷ್ಟಗಳಿಂದ ನಿಮ್ಮನ್ನು ಪಾರುಮಾಡಲು ನನಗೆ ಸಾಮರ್ಥ್ಯವಿದೆ.
ಇಗೋ, ನಾನು ಸಮುದ್ರಕ್ಕೆ ಒಣಗಿಹೋಗು ಎಂದು ಹೇಳಿದರೆ ಹಾಗೆಯೇ ಆಗುವದು.
    ಮೀನುಗಳು ನೀರಿಲ್ಲದೆ ಸತ್ತು ನಾರುವವು.
ಆಕಾಶವನ್ನು ನಾನು ಕತ್ತಲೆ ಮಾಡುವೆನು.
    ಅದನ್ನು ಕತ್ತಲೆಯಿಂದ ಮುಚ್ಚಿಬಿಡುವೆನು.
    ಅದು ಶೋಕವಸ್ತ್ರದಂತೆ ಕಪ್ಪಾಗಿ ಇರುವದು.”

ದೇವರ ಸೇವಕನು ದೇವರ ಮೇಲೆ ಅವಲಂಬಿಸಿರುವನು

ನನ್ನ ಒಡೆಯನಾದ ಯೆಹೋವನು ನನಗೆ ಬೋಧಿಸುವ ಸಾಮರ್ಥ್ಯವನ್ನು ಅನುಗ್ರಹಿಸಿದ್ದಾನೆ. ಈಗ ನಾನು ದುಃಖದಲ್ಲಿರುವ ಈ ಜನರಿಗೆ ಬೋಧಿಸುತ್ತಿದ್ದೇನೆ. ಪ್ರತೀ ಮುಂಜಾನೆ ವಿದ್ಯಾರ್ಥಿಯೋ ಎಂಬಂತೆ ಆತನು ನನ್ನನ್ನು ಎಬ್ಬಿಸಿ ನನಗೆ ಬೋಧಿಸುತ್ತಾನೆ. ನನ್ನ ಒಡೆಯನಾದ ಯೆಹೋವನು ನನಗೆ ಕಲಿಯಲು ಸಹಾಯ ಮಾಡುತ್ತಾನೆ. ನಾನು ಆತನಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ. ಆತನನ್ನು ಹಿಂಬಾಲಿಸುವದನ್ನು ನಿಲ್ಲಿಸುವದಿಲ್ಲ. ನನ್ನ ಬೆನ್ನಿಗೆ ಹೊಡೆಯಲೂ ನನ್ನ ಗಡ್ಡವನ್ನು ಕೀಳಲೂ ಅವರಿಗೆ ನನ್ನನ್ನು ಒಪ್ಪಿಸಿಕೊಡುತ್ತೇನೆ. ಅವರು ನನ್ನನ್ನು ಬೈದು ನನ್ನ ಮುಖಕ್ಕೆ ಉಗುಳಿದರೂ ನಾನು ನನ್ನ ಮುಖವನ್ನು ಅಡಗಿಸುವದಿಲ್ಲ. ನನ್ನ ಒಡೆಯನಾದ ಯೆಹೋವನು ನನಗೆ ಸಹಾಯ ಮಾಡುವನು. ಆದ್ದರಿಂದ ಅವರ ಶಾಪಗಳು ನನಗೆ ಯಾವ ಹಾನಿಯನ್ನು ಮಾಡುವದಿಲ್ಲ. ನಾನು ಬಲವಾಗಿರುವೆನು. ನಾನು ನಿರಾಶನಾಗುವದಿಲ್ಲವೆಂದು ನನಗೆ ಗೊತ್ತಿದೆ.

ಯೆಹೋವನು ನನ್ನೊಂದಿಗಿದ್ದಾನೆ. ನಾನು ತಪ್ಪಿತಸ್ಥನಲ್ಲವೆಂದು ಆತನು ತೋರಿಸುವನು. ಆದ್ದರಿಂದ ಯಾರೂ ನನ್ನನ್ನು ಅಪರಾಧಿ ಎಂದು ಹೇಳಲಾಗುವದಿಲ್ಲ. ಯಾರಾದರೂ ನನ್ನನ್ನು ತಪ್ಪಿತಸ್ಥನೆಂದು ದೃಢಪಡಿಸಬೇಕೆಂದಿದ್ದರೆ ಅವರು ಮೊದಲು ನನ್ನ ಬಳಿಗೆ ಬರಲಿ, ನಮಗೆ ವಿಚಾರಣೆಯಾಗಲಿ! ಆದರೆ ನನ್ನ ಒಡೆಯನು ಸಹಾಯ ಮಾಡುತ್ತಾನೆ. ಯಾರೂ ನನ್ನ ಮೇಲೆ ದೋಷಾರೋಪಣೆ ಹೊರಿಸಲಾಗದು. ಈ ಜನರೆಲ್ಲರೂ ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವರು, ನುಸಿಯು ಅವುಗಳನ್ನು ತಿಂದುಬಿಡುವವು.

10 ಯೆಹೋವನನ್ನು ಗೌರವಿಸುವ ಜನರು ಆತನ ಸೇವಕನ ಮಾತನ್ನು ಕೇಳುವರು. ಆ ಸೇವಕನು ಮುಂದೆ ಸಂಭವಿಸುವುದರ ಬಗ್ಗೆ ಚಿಂತೆ ಇಲ್ಲದೆ ಸಂಪೂರ್ಣವಾಗಿ ದೇವರ ಮೇಲೆ ನಂಬಿಕೆ ಇಡುವನು. ಅವನು ಪರಿಪೂರ್ಣವಾಗಿ ಯೆಹೋವನ ಹೆಸರಿನಲ್ಲಿ ನಂಬಿಕೆ ಇಟ್ಟು ತನ್ನ ದೇವರ ಮೇಲೆ ಅವಲಂಬಿಸಿಕೊಳ್ಳುವನು.

11 “ಆದರೆ ನೀವು ನಿಮ್ಮ ದಾರಿಯಲ್ಲಿಯೇ ಜೀವಿಸಬೇಕೆಂದಿದ್ದೀರಿ, ನೀವು ನಿಮ್ಮ ಬೆಂಕಿಗಳನ್ನೂ ದೀವಟಿಗೆಗಳನ್ನೂ ಹಚ್ಚುತ್ತೀರಿ, ನಿಮಗೆ ಇಷ್ಟಬಂದ ರೀತಿಯಲ್ಲಿ ಜೀವಿಸುತ್ತೀರಿ. ಆದ್ದರಿಂದ ನೀವು ಶಿಕ್ಷಿಸಲ್ಪಡುವಿರಿ. ನಿಮ್ಮ ಬೆಂಕಿಯಲ್ಲಿಯೂ ದೀವಟಿಗೆಗಳಲ್ಲಿಯೂ ನೀವೇ ಬಿದ್ದು ಸುಟ್ಟುಹೋಗುವಿರಿ. ಇದನ್ನು ನಾನೇ ನೆರವೇರಿಸುವೆನು.”

ಪ್ರಕಟನೆ 20

ಒಂದುಸಾವಿರ ವರ್ಷಗಳು

20 ಆಗ ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕೈಯನ್ನು ಹೊಂದಿದ್ದನು ಮತ್ತು ಒಂದು ದೊಡ್ಡ ಸರಪಣಿಯನ್ನೂ ತನ್ನ ಕೈಯಲ್ಲಿ ಹಿಡಿದಿದ್ದನು. ಆ ದೇವದೂತನು ಪುರಾತನ ಘಟಸರ್ಪವನ್ನು ಹಿಡಿದನು. ಆ ಘಟಸರ್ಪವೇ ಸೈತಾನ. ದೇವದೂತನು ಅವನನ್ನು ಸರಪಣಿಗಳಿಂದ ಕಟ್ಟಿ ಒಂದುಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. ಆ ದೇವದೂತನು ಘಟಸರ್ಪವನ್ನು ತಳವಿಲ್ಲದ ಕೂಪಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿ ಬೀಗಹಾಕಿದನು, ಆ ಘಟಸರ್ಪವು ಒಂದುಸಾವಿರ ವರ್ಷಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡದಿರಲೆಂದು ಆ ದೇವದೂತನು ಹೀಗೆ ಮಾಡಿದನು. ಒಂದುಸಾವಿರ ವರ್ಷಗಳ ತರುವಾಯ ಆ ಘಟಸರ್ಪಕ್ಕೆ ಸ್ವಲ್ಪಕಾಲ ಬಿಡುಗಡೆ ಮಾಡಲಾಗುವುದು.

ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು. (ಸತ್ತುಹೋಗಿದ್ದ ಇತರ ಜನರು ಒಂದುಸಾವಿರ ವರ್ಷಗಳು ಮುಗಿಯುವ ತನಕ ಜೀವಂತರಾಗಲೇ ಇಲ್ಲ.)

ಇದೇ ಪ್ರಥಮ ಪುನರುತ್ಥಾನ. ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಪವಿತ್ರರೂ ಧನ್ಯರೂ ಆಗಿದ್ದಾರೆ. ಈ ಜನರ ಮೇಲೆ ಎರಡನೆ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಕ್ರಿಸ್ತನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ಸಾವಿರ ವರ್ಷ ಆಳುತ್ತಾರೆ.

ಸೈತಾನನಿಗೆ ಸೋಲು

ಒಂದುಸಾವಿರ ವರ್ಷಗಳು ಮುಗಿದ ನಂತರ, ಸೈತಾನನನ್ನು ಅವನ ಸೆರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.

ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು. 10 ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.

ಲೋಕದ ಜನರಿಗಾಗುವ ತೀರ್ಪು

11 ಬಳಿಕ ನಾನು ಒಂದು ದೊಡ್ಡ ಬಿಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತಿದ್ದಾತನನ್ನೂ ನೋಡಿದೆನು. ಭೂಮಿ ಮತ್ತು ಆಕಾಶಗಳು ಆತನ ಬಳಿಯಿಂದ ಓಡಿಹೋಗಿ ಅದೃಶ್ಯವಾದವು. 12 ಸತ್ತುಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧ್ಯರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿದ್ದವು. ಸತ್ತುಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾರ್ಯಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಇವುಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ.

13 ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತನ್ನಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾರ್ಯಗಳಿಗನುಸಾರವಾಗಿ ತೀರ್ಪು ನೀಡಲಾಯಿತು. 14 ಆಮೇಲೆ ಮೃತ್ಯುವನ್ನೂ ಪಾತಾಳವನ್ನೂ ಬೆಂಕಿಯ ಕೆರೆಗೆ ಎಸೆಯಲಾಯಿತು. ಈ ಬೆಂಕಿಯ ಕೆರೆಯು ಎರಡನೆಯ ಮರಣ. 15 ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರು ಬರೆಯಲ್ಪಟ್ಟಿಲ್ಲವೋ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ಎಸೆಯಲಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International