M’Cheyne Bible Reading Plan
ಇತರ ಕಟ್ಟಳೆಗಳು
22 “ನಿಮ್ಮ ನೆರೆಯವನ ಕಟ್ಟಿರುವ ದನವಾಗಲಿ ಕುರಿಯಾಗಲಿ ಹಗ್ಗ ಬಿಚ್ಚಿಕೊಂಡಿರುವುದನ್ನು ನೀವು ಕಂಡರೆ ಅದನ್ನು ನಿರ್ಲಕ್ಷಿಸದೆ, ಕೂಡಲೇ ಅದನ್ನು ಅದರ ಧಣಿಯ ಬಳಿಗೆ ಅಟ್ಟಿಕೊಂಡು ಹೋಗಬೇಕು. 2 ಆ ಪಶುವಿನ ಧಣಿ ಯಾರೆಂದು ನಿಮಗೆ ಗೊತ್ತಾಗದಿದ್ದರೆ ಅಥವಾ ಅವನು ನಿಮಗೆ ತುಂಬಾ ದೂರದಲ್ಲಿದ್ದರೆ ಅದರ ಧಣಿಯು ಅದನ್ನು ಹುಡುಕಿಕೊಂಡು ಬರುವ ತನಕ ನೀವು ಪಶುವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವನು ಬಂದಾಗ ಅದನ್ನು ಹಿಂದಿರುಗಿಸಬೇಕು. 3 ನಿಮ್ಮ ನೆರೆಯವನ ಕತ್ತೆಯ ವಿಷಯದಲ್ಲಿಯೂ ಬಟ್ಟೆಯ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ.
4 “ನಿಮ್ಮ ನೆರೆಯವನ ಕತ್ತೆಯಾಗಲಿ ಹಸುವಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೋಡಿದರೂ ನೋಡದಂತೆ ಹೋಗದೆ ಅದಕ್ಕೆ ಏಳಲು ಸಹಾಯ ಮಾಡಬೇಕು.
5 “ಹೆಂಗಸು ಗಂಡಸರ ಬಟ್ಟೆ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟೆ ಧರಿಸಬಾರದು. ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯ.
6 “ನೀವು ದಾರಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲಾಗಲಿ ಮರದಲ್ಲಿಯಾಗಲಿ ಗೂಡು ಕಟ್ಟಿಕೊಂಡು ಅದರೊಳಗೆ ತಾಯಿ ಪಕ್ಷಿಯು ತನ್ನ ಮೊಟ್ಟೆಗಳೊಂದಿಗೆ ಇಲ್ಲವೆ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿಪಕ್ಷಿಯನ್ನು ಹಿಡಿದು ಕೊಂಡೊಯ್ಯಬಾರದು. 7 ನೀವು ತಾಯಿಪಕ್ಷಿಯನ್ನು ಬಿಟ್ಟು ಮರಿಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ನಿಯಮಗಳನ್ನು ನೀವು ಪಾಲಿಸಿದರೆ ನೀವು ಬಹುಕಾಲ ಬದುಕುವಿರಿ ಮತ್ತು ನಿಮಗೆ ಶುಭವಾಗುವುದು.
8 “ನೀವು ಮನೆ ಕಟ್ಟುವಾಗ ಅದರ ಮೇಲ್ಛಾವಣಿಯ ಸುತ್ತಲೂ ಅರ್ಧ ಗೋಡೆಯನ್ನು ಕಟ್ಟಬೇಕು. ಹೀಗೆ ಮಾಡದೆಹೋದರೆ ಯಾರಾದರೂ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಸತ್ತಲ್ಲಿ ಅವನ ಸಾವಿಗೆ ನೀವು ಕಾರಣರಾಗುವಿರಿ.
9 “ನೀವು ಧಾನ್ಯವನ್ನು ಮತ್ತು ದ್ರಾಕ್ಷಾಲತೆಗಳನ್ನು ಒಂದೇ ಹೊಲದಲ್ಲಿ ಬೆಳೆಸಬಾರದು. ಯಾಕೆಂದರೆ ಅವೆರಡೂ ಚೆನ್ನಾಗಿ ಬೆಳೆಯದೆ ಫಲ ಕೊಡದೆ ಹೋಗುವುದು.
10 “ಕತ್ತೆಯನ್ನೂ ಹಸುವನ್ನೂ ಒಟ್ಟಿಗೆ ನೊಗಕ್ಕೆ ಕಟ್ಟಿ ನೆಲವನ್ನು ಉಳಬಾರದು.
11 “ನಾರುಮಡಿಯನ್ನೂ ಉಣ್ಣೆಯನ್ನೂ ಮಿಶ್ರವಾಗಿ ನೇಯ್ದ ಬಟ್ಟೆಯನ್ನು ತೊಡಬಾರದು.
12 “ನೂಲಿನಿಂದ ಮಾಡಿದ ಗೊಂಡೆಗಳನ್ನು ನಿಮ್ಮ ನಿಲುವಂಗಿಗಳ ನಾಲ್ಕು ಮೂಲೆಗಳಿಗೆ ಕಟ್ಟಬೇಕು.
ಮದುವೆಗೆ ಸಂಬಂಧಿಸಿದ ಕಟ್ಟಳೆಗಳು
13 “ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೆಯಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದು ಆಮೇಲೆ ಆಕೆಯನ್ನು ಇಷ್ಟಪಡದೆ, 14 ‘ನಾನು ಈಕೆಯನ್ನು ಮದುವೆಯಾದಾಗ ಈಕೆಯು ಕನ್ಯೆಯಲ್ಲವೆಂದು ನನಗೆ ತಿಳಿದುಬಂತು’ ಎಂದು ಜನರಿಗೆ ಸುಳ್ಳು ಹೇಳಿ ಆಕೆಯ ಮೇಲೆ ಸುಳ್ಳು ಅಪರಾಧ ಹೊರಿಸಿದರೆ, 15 ಹುಡುಗಿಯ ತಂದೆತಾಯಿಗಳು ಊರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳೆಂದು ರುಜುವಾತುಪಡಿಸಬೇಕು. 16 ಹುಡುಗಿಯ ತಂದೆಯು ಹಿರಿಯರಿಗೆ, ‘ನನ್ನ ಮಗಳನ್ನು ಇವನಿಗೆ ಹೆಂಡತಿಯನ್ನಾಗಿ ಕೊಟ್ಟೆನು. ಆದರೆ ಈಗ ಅವನು ಆಕೆಯನ್ನು ದ್ವೇಷಿಸಿ ಬೇಡವೆನ್ನುತ್ತಾನೆ. 17 ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ. “ಆಕೆಯಲ್ಲಿ ಕನ್ನಿಕೆಯ ಗುರುತು ಇರಲಿಲ್ಲ” ಎಂದು ಹೇಳುತ್ತಿದ್ದಾನೆ, ಆದರೆ ನನ್ನ ಮಗಳು ಮದುವೆಗಿಂತ ಮುಂಚೆ ಪುರುಷ ಸಂಪರ್ಕ ಮಾಡಲಿಲ್ಲವೆಂಬುದಕ್ಕೆ ಇದೇ ಗುರುತು’ ಎಂದು ಹೇಳಿ ರಕ್ತದ ಕಲೆಗಳಿರುವ ಬಟ್ಟೆಯನ್ನು ತೋರಿಸಬೇಕು. 18 ಆಗ ಊರಿನ ಹಿರಿಯರು ಆ ಮನುಷ್ಯನಿಗೆ ಶಿಕ್ಷೆ ವಿಧಿಸಬೇಕು. 19 ಹಿರಿಯರು ಅವನಿಂದ ನಲವತ್ತು ತೊಲೆ ಬೆಳ್ಳಿಯನ್ನು ಹುಡುಗಿಯ ತಂದೆಗೆ ಕೊಡಿಸಬೇಕು. ಯಾಕೆಂದರೆ ಒಬ್ಬ ಇಸ್ರೇಲಿನ ಹುಡುಗಿಗೆ ಅವನು ಅವಮಾನಪಡಿಸಿದ ಕಾರಣ ಆ ಹುಡುಗಿಯು ಅವನ ಹೆಂಡತಿಯಾಗಿಯೇ ಬಾಳಬೇಕು. ಅವನು ಆಕೆಯನ್ನು ಎಂದಿಗೂ ವಿವಾಹವಿಚ್ಛೇದನೆ ಮಾಡಬಾರದು.
20 “ಆದರೆ ಹುಡುಗಿಯ ಗಂಡನು ಆಕೆಯ ಬಗ್ಗೆ ಹೇಳಿದ್ದು ಸತ್ಯವಾಗಿದ್ದರೆ, ಹುಡುಗಿಯ ತಂದೆತಾಯಂದಿರ ಬಳಿ ಆಕೆಯು ಪುರುಷ ಸಂಪರ್ಕವಿಲ್ಲದವಳಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲದಿದ್ದಲ್ಲಿ 21 ಊರಹಿರಿಯರು ಆ ಹುಡುಗಿಯನ್ನು ಆಕೆಯ ತಂದೆಯ ಮನೆಬಾಗಿಲಿಗೆ ತರಬೇಕು. ಅಲ್ಲಿ ಊರಜನರು ಆಕೆಯನ್ನು ಕಲ್ಲೆಸೆದು ಸಾಯಿಸಬೇಕು. ಯಾಕೆಂದರೆ ಆಕೆಯು ಇಸ್ರೇಲಿನಲ್ಲಿ ನಾಚಿಕೆಕರವಾದ ಕೃತ್ಯವನ್ನು ನಡೆಸಿದ್ದಾಳೆ; ತನ್ನ ತಂದೆಯ ಮನೆಯಲ್ಲಿದ್ದುಕೊಂಡು ವೇಶ್ಯಾವೃತ್ತಿ ನಡಿಸಿದ್ದಾಳೆ. ಅಂಥಾ ಪಾಪವನ್ನು ನೀವು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
ಲೈಂಗಿಕ ಪಾಪಕೃತ್ಯಗಳು
22 “ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನ ಹೆಂಡತಿಯ ಜೊತೆಗೆ ಲೈಂಗಿಕ ಸಂಬಂಧವನ್ನಿಟ್ಟಿದ್ದರೆ ಅವರಿಬ್ಬರನ್ನೂ ಸಾಯಿಸಬೇಕು. ಆ ಕೆಡುಕನ್ನು ನೀವು ಇಸ್ರೇಲಿನಿಂದ ತೆಗೆದುಹಾಕಬೇಕು.
23 “ಒಬ್ಬನು ಇನ್ನೊಬ್ಬನಿಗೆ ನಿಶ್ಚಿತಾರ್ಥವಾದ ಕನ್ನಿಕೆಯೊಬ್ಬಳನ್ನು ಸಂಧಿಸಿ ಅವಳನ್ನು ಕೂಡಿದರೆ, 24 ನಗರದ ಬಾಗಿಲಿನ ಬಳಿಯಿರುವ ಸಾರ್ವಜನಿಕ ಸ್ಥಳಕ್ಕೆ ನೀವು ಅವರಿಬ್ಬರನ್ನು ಕರೆದುಕೊಂಡು ಬಂದು ಅವರಿಬ್ಬರನ್ನೂ ಕಲ್ಲೆಸೆದು ಕೊಲ್ಲಬೇಕು. ನೀವು ಆ ಪುರುಷನನ್ನು ಕೊಲ್ಲಬೇಕು. ಏಕೆಂದರೆ ಅವನು ಮತ್ತೊಬ್ಬನ ಹೆಂಡತಿಯನ್ನು ಲೈಂಗಿಕವಾಗಿ ಹಿಂಸಿಸಿದನು. ನೀವು ಆ ಸ್ತ್ರೀಯನ್ನು ಕೊಲ್ಲಬೇಕು; ಯಾಕೆಂದರೆ ಆಕೆಯು ನಗರದಲ್ಲಿದ್ದರೂ ಸಹಾಯಕ್ಕಾಗಿ ಕೂಗಿಕೊಳ್ಳಲಿಲ್ಲ. ಆ ಕೆಡುಕನ್ನು ನೀವು ನಿಮ್ಮ ಜನರಿಂದ ತೆಗೆದುಹಾಕಬೇಕು.
25 “ಆದರೆ ಒಬ್ಬನು ಮತ್ತೊಬ್ಬನಿಗೆ ನಿಶ್ಚಿತಾರ್ಥವಾಗಿರುವ ಕನ್ನಿಕೆಯೊಬ್ಬಳನ್ನು ಹೊಲದಲ್ಲಿ ಕಂಡು ಆಕೆಯನ್ನು ಬಲಾತ್ಕಾರವಾಗಿ ಕೂಡಿದರೆ, ಅವನನ್ನು ಮಾತ್ರ ಕೊಲ್ಲಬೇಕು. 26 ಆ ಹುಡುಗಿಗೆ ನೀವು ಏನನ್ನೂ ಮಾಡಬಾರದು. ಆಕೆ ಶಿಕ್ಷೆಗೆ ಅರ್ಹಳಾಗುವಂಥ ಕಾರ್ಯವೇನೂ ಮಾಡಲಿಲ್ಲ. ಒಬ್ಬನು ತನ್ನ ಸ್ನೇಹಿತನ ಮೇಲೆ ಆಕ್ರಮಣ ಮಾಡಿ ಕೊಂದಂತೆಯಷ್ಟೇ. 27 ಆ ಮನುಷ್ಯನು ನಿಶ್ಚಿತಾರ್ಥವಾದ ಹುಡುಗಿಯನ್ನು ಹೊಲದಲ್ಲಿ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಬಿದ್ದನು. ಆಕೆಯು ಸಹಾಯಕ್ಕಾಗಿ ಕೂಗಿಕೊಂಡಾಗ ಸಹಾಯ ಮಾಡಲು ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಆಕೆಯು ಶಿಕ್ಷಿಸಲ್ಪಡಬಾರದು.
28 “ಒಬ್ಬನು ನಿಶ್ಚಿತಾರ್ಥವಾಗಿಲ್ಲದ ಒಬ್ಬ ಕನ್ನಿಕೆಯನ್ನು ಕಂಡು ಆಕೆಯನ್ನು ಬಲಾತ್ಕಾರದಿಂದ ಕೂಡುವುದನ್ನು ಬೇರೆಯವರು ಕಂಡರೆ 29 ಅವನು ಹುಡುಗಿಯ ತಂದೆಗೆ ಇಪ್ಪತ್ತು ತೊಲೆ ಬೆಳ್ಳಿಯನ್ನು ಕೊಟ್ಟು ಆಕೆಯನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. ಅವನು ಆಕೆಯನ್ನು ಮದುವೆಗಿಂತ ಮುಂಚೆ ಕೂಡಿದ್ದರಿಂದ ಅವನು ಆಕೆಯನ್ನು ಎಂದಿಗೂ ಬಿಟ್ಟುಬಿಡಬಾರದು.
30 “ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಕೂಡಿ ತಂದೆಗೆ ಅವಮಾನ ಮಾಡಬಾರದು.”
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
5 ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
6 ಆತನು ಜನಾಂಗಗಳಿಗೆ ತೀರ್ಪು ಮಾಡುವನು.
ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.
7 ರಾಜನು ಮಾರ್ಗದಲ್ಲಿ
ತೊರೆಯ ನೀರನ್ನು ಕುಡಿದು ಬಲ ಹೊಂದುವನು.
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
ದೇವರು ತನ್ನ ವಿಶೇಷ ಸೇವಕನನ್ನು ಕರೆಯುತ್ತಾನೆ
49 ದೂರದೇಶದಲ್ಲಿರುವ ಜನರೇ, ನನ್ನ ಮಾತುಗಳಿಗೆ ಕಿವಿಗೊಡಿರಿ;
ಭೂಮಿಯ ಮೇಲೆ ವಾಸಿಸುವ ಜನರೇ, ನನ್ನ ಮಾತುಗಳನ್ನು ಕೇಳಿರಿ.
ನಾನು ಹುಟ್ಟುವ ಮೊದಲೇ ಯೆಹೋವನು ನನ್ನನ್ನು ತನ್ನ ಸೇವೆಗಾಗಿ ಕರೆದನು.
ನಾನು ತಾಯಿಯ ಗರ್ಭದಲ್ಲಿರುವಾಗಲೇ ಯೆಹೋವನು ನನ್ನ ಹೆಸರೆತ್ತಿ ಕರೆದನು.
2 ತನ್ನ ಪರವಾಗಿ ಮಾತನಾಡಲು ಯೆಹೋವನು ನನ್ನನ್ನು ಉಪಯೋಗಿಸುತ್ತಾನೆ.
ಹದವಾದ ಕತ್ತಿಯಂತೆ ನನ್ನನ್ನು ಉಪಯೋಗಿಸುತ್ತಾನೆ.
ಅದೇ ಸಮಯದಲ್ಲಿ ನನ್ನನ್ನು ತನ್ನ ಕೈಯೊಳಗೆ ಸುರಕ್ಷಿತವಾಗಿ ಇರಿಸುತ್ತಾನೆ.
ಯೆಹೋವನು ನನ್ನನ್ನು ಬಾಣದಂತೆ ಉಪಯೋಗಿಸುತ್ತಾನೆ,
ಅದೇ ಸಮಯದಲ್ಲಿ ಬತ್ತಳಿಕೆಯಲ್ಲಿ ನನ್ನನ್ನು ಅಡಗಿಸಿಡುತ್ತಾನೆ.
3 ಯೆಹೋವನು ಹೀಗೆಂದನು: “ಇಸ್ರೇಲೇ, ನೀನೇ ನನ್ನ ಸೇವಕನು.
ನಾನು ನಿನಗೆ ಆಶ್ಚರ್ಯವಾದ ಕಾರ್ಯಗಳನ್ನು ಮಾಡುವೆನು.”
4 ಆಗ ನಾನು “ನಾನು ಕಷ್ಟಪಟ್ಟು ಮಾಡಿದ ಕಾರ್ಯಗಳೆಲ್ಲವೂ ನಿಷ್ಪ್ರಯೋಜನವಾದವು.
ನಾನು ನನ್ನನ್ನೇ ಸವೆಯಿಸಿದೆನು.
ಆದರೆ ಪ್ರಯೋಜನವಾದದ್ದನ್ನು ನಾನು ಮಾಡಲಿಲ್ಲ.
ನಾನು ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಏನೂ ಮಾಡಲಾಗಲಿಲ್ಲ.
ಆದ್ದರಿಂದ ನನಗೆ ಮಾಡಬೇಕಾದುದನ್ನು ಯೆಹೋವನೇ ತೀರ್ಮಾನಿಸಲಿ.
ನನಗೆ ದೊರಕಬೇಕಾದ ಬಹುಮಾನವನ್ನು ದೇವರೇ ತೀರ್ಮಾನಿಸಲಿ” ಎಂದು ಹೇಳಿದೆನು.
5 ನಾನು ಯೆಹೋವನ ಸೇವಕನಾಗಿರಬೇಕೆಂದು
ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು.
ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು
ಆತನು ನನ್ನನ್ನು ರೂಪಿಸಿದನು.
ಯೆಹೋವನು ನನ್ನನ್ನು ಸನ್ಮಾನಿಸುವನು.
ನಾನು ಆತನಿಂದ ಬಲವನ್ನು ಹೊಂದುವೆನು.
6 ಯೆಹೋವನು ನನಗೆ ಹೇಳಿದ್ದೇನೆಂದರೆ:
“ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ
ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ.
ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು.
ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು.
ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”
7 ಇಸ್ರೇಲಿನ ಪರಿಶುದ್ಧನೂ ವಿಮೋಚಕನೂ ಆದ ಯೆಹೋವನು ಇಸ್ರೇಲನ್ನು ಬಿಡಿಸುವನು.
ಆತನು ಹೇಳುವುದೇನೆಂದರೆ, “ನನ್ನ ಸೇವಕನು ದೀನನಾಗಿದ್ದಾನೆ. ಆತನು ಅರಸರನ್ನು ಸೇವಿಸುವನು.
ಆದರೆ ಜನರು ಆತನನ್ನು ದ್ವೇಷಿಸುವರು.
ಆದರೆ ರಾಜರುಗಳು ಅವನನ್ನು ನೋಡಿ ಎದ್ದುನಿಂತು ಗೌರವಿಸುವರು.
ಶ್ರೇಷ್ಠ ನಾಯಕರು ಆತನ ಮುಂದೆ ಅಡ್ಡಬೀಳುವರು.”
ಇದು ಇಸ್ರೇಲರ ಪರಿಶುದ್ಧನಾದ ಯೆಹೋವನ ಚಿತ್ತಕ್ಕನುಸಾರವಾಗಿದೆ. ಆತನು ಭರವಸೆಗೆ ಯೋಗ್ಯನಾಗಿದ್ದಾನೆ. ಆತನೇ ನಿನ್ನನ್ನು ಆರಿಸಿಕೊಂಡನು.
ರಕ್ಷಣೆಯ ದಿನ
8 ಯೆಹೋವನು ಹೇಳುವುದೇನೆಂದರೆ,
“ನನ್ನ ದಯೆಯನ್ನು ತೋರಿಸಲು ಒಂದು ವಿಶೇಷ ಸಮಯವಿದೆ.
ಆಗ ನಾನು ನಿನ್ನ ಪ್ರಾರ್ಥನೆಗೆ ಉತ್ತರ ಕೊಡುವೆನು.
ನಿನ್ನನ್ನು ರಕ್ಷಿಸಲು ಒಂದು ವಿಶೇಷ ಸಮಯವಿದೆ.
ಆಗ ನಾನು ನಿನಗೆ ಸಹಾಯ ಮಾಡುವೆನು,
ನಿನ್ನನ್ನು ಕಾಪಾಡುವೆನು.
ಜನರೊಂದಿಗೆ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ ಎಂಬುದಕ್ಕೆ ನೀನೇ ಸಾಕ್ಷಿಯಾಗಿರುವೆ.
ದೇಶವು ಈಗ ನಾಶವಾಗಿದೆ,
ಆದರೆ ಈ ಭೂಮಿಯು ಯಾರದಾಗಿತ್ತೋ ಅವರಿಗೆ ನೀನದನ್ನು ಹಿಂದಕ್ಕೆ ಕೊಡುವೆ.
9 ಸೆರೆಮನೆಯಲ್ಲಿರುವವರಿಗೆ ನೀವು,
‘ಸೆರೆಮನೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಅಂಧಕಾರದಲ್ಲಿರುವವರಿಗೆ,
‘ಕತ್ತಲೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಪ್ರಯಾಣದಲ್ಲಿರುವವರು ತಿನ್ನುತ್ತಾ ಹೋಗುವರು.
ಬೋಳುಬೆಟ್ಟಗಳಲ್ಲೂ ನಿಮಗೆ ಆಹಾರ ದೊರೆಯುವದು.
10 ಜನರಿಗೆ ಹಸಿವೆಯಾಗದು, ಬಾಯಾರಿಕೆಯಾಗದು.
ಸೂರ್ಯನ ಉರಿ ಬಿಸಿಲಾಗಲಿ ಗಾಳಿಯಾಗಲಿ ಅವರಿಗೆ ಹಾನಿಮಾಡದು.
ಯಾಕೆಂದರೆ ದೇವರು ತಾನೇ ಅವರನ್ನು ಸಂತೈಸುವನು,
ಅವರನ್ನು ಬುಗ್ಗೆಗಳ ಬಳಿಗೆ ನಡಿಸುವನು.
11 ನಾನು ನನ್ನ ಜನರಿಗೊಂದು ಮಾರ್ಗ ಸಿದ್ಧಮಾಡುವೆನು.
ಬೆಟ್ಟವು ನೆಲದ ಮಟ್ಟಕ್ಕೆ ಇಳಿಯುವುದು;
ತಗ್ಗು ಏರಿಸಲ್ಪಡುವದು.
12 “ಇಗೋ, ದೂರದೇಶಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
ಉತ್ತರ, ಪಶ್ಚಿಮ ದಿಕ್ಕುಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
ಈಜಿಪ್ಟಿನ ಅಸ್ವಾನಿನಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.”
13 ಭೂಮ್ಯಾಕಾಶಗಳೇ, ಸಂತೋಷಪಡಿರಿ!
ಪರ್ವತಗಳೇ, ಹರ್ಷಧ್ವನಿ ಮಾಡಿರಿ!
ಯಾಕೆಂದರೆ ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ.
ಆತನು ಬಡವರಿಗೆ ಕರುಣೆ ತೋರಿಸುತ್ತಾನೆ.
14 ಆದರೆ ಈಗ ಚೀಯೋನ್ ಹೇಳುವುದೇನೆಂದರೆ, “ಯೆಹೋವನು ನನ್ನನ್ನು ಬಿಟ್ಟುಹೋಗಿದ್ದಾನೆ.
ನನ್ನ ಒಡೆಯನು ನನ್ನನ್ನು ತೊರೆದಿದ್ದಾನೆ.”
15 ಆದರೆ ನಾನು ಹೇಳುವುದೇನೆಂದರೆ,
“ಒಬ್ಬ ತಾಯಿಯು ತನ್ನ ಮಗುವನ್ನು ಮರೆತಾಳೇ?
ತಾನು ಹೆತ್ತ ಶಿಶುವನ್ನು ತಾಯಿಯು ಮರೆತುಬಿಡುವಳೇ? ಇಲ್ಲ.
ಒಂದುವೇಳೆ ತಾಯಿ ತನ್ನ ಮಕ್ಕಳನ್ನು ಮರೆತಾಳು,
ಆದರೆ ಯೆಹೋವನಾದ ನಾನು ನಿಮ್ಮನ್ನು ಮರೆಯುವದಿಲ್ಲ.
16 ನೋಡಿ, ನಿಮ್ಮ ಹೆಸರುಗಳನ್ನು ನಾನು ನನ್ನ ಅಂಗೈಗಳಲ್ಲಿ ಕೆತ್ತಿರುತ್ತೇನೆ.
ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ.
17 ನಿನ್ನ ಮಕ್ಕಳು ನಿನ್ನ ಬಳಿಗೆ ಹಿಂದಿರುಗಿ ಬರುವರು.
ಜನರು ನಿಮ್ಮನ್ನು ಸೋಲಿಸಿದರೂ ಅವರು ನಿಮ್ಮನ್ನು ನಿಮ್ಮಷ್ಟಕ್ಕೆ ಬಿಡುವರು.”
18 ಮೇಲಕ್ಕೆ ನೋಡು! ನಿನ್ನ ಸುತ್ತಲೂ ನೋಡು!
ನಿನ್ನ ಮಕ್ಕಳೆಲ್ಲಾ ಒಟ್ಟಾಗಿ ಸೇರಿ ನಿನ್ನ ಬಳಿಗೆ ಬರುತ್ತಿದ್ದಾರೆ.
ಯೆಹೋವನು ಹೇಳುವುದೇನೆಂದರೆ,
“ನನ್ನ ಜೀವದಾಣೆ,
ನಿನ್ನ ಮಕ್ಕಳು ನೀನು ಕೊರಳಲ್ಲಿ ಧರಿಸುವ ಹಾರದಂತಿರುವರು.
ಮದುಮಗಳು ಧರಿಸುವ ಕಂಠಹಾರದಂತೆ ನಿನ್ನ ಮಕ್ಕಳಿರುವರು.
19 “ಈಗ ನೀನು ಸೋತವಳೂ ನಾಶವಾದವಳೂ ಆಗಿರುವಿ.
ನಿನ್ನ ಭೂಮಿಯು ನಿಷ್ಪ್ರಯೋಜಕವಾಗಿದೆ.
ಆದರೆ ಸ್ವಲ್ಪ ಸಮಯದ ನಂತರ ನಿನ್ನ ದೇಶವು ಜನರಿಂದ ತುಂಬುವದು.
ನಿನ್ನನ್ನು ನಾಶಮಾಡಿದವರು ಬಹುದೂರ ಹೋಗುವರು.
20 ಕಳೆದುಹೋದ ನಿನ್ನ ಮಕ್ಕಳಿಗಾಗಿ ನೀನು ವ್ಯಸನವಾಗಿದ್ದಿ.
ಆದರೆ ಆ ಮಕ್ಕಳು, ‘ಈ ದೇಶವು ನಮಗೆ ಸಾಲುವದಿಲ್ಲ.
ಇದಕ್ಕಿಂತ ದೊಡ್ಡ ದೇಶ ನಮಗೆ ಕೊಡು’ ಎಂದು ಕೇಳುವರು.
21 ಆಗ ನೀನು ನಿನ್ನ ಮನಸ್ಸಿನೊಳಗೆ, ‘ಈ ಮಕ್ಕಳನ್ನೆಲ್ಲಾ ನನಗೆ ಯಾರು ಕೊಟ್ಟರು?
ಇದು ಸಂತಸದ ಸಂಗತಿ! ನಾನು ಒಬ್ಬಂಟಿಗಳಾಗಿ ದುಃಖಿಸುತ್ತಿದ್ದೆನು.
ನಾನು ಸೋಲಲ್ಪಟ್ಟವಳಾಗಿ ನನ್ನ ಜನರಿಂದ ದೂರವಿದ್ದೆನು.
ಹೀಗಿರುವಾಗ ಈ ಮಕ್ಕಳನ್ನೆಲ್ಲಾ ಯಾರು ಕೊಟ್ಟರು?
ನಾನು ಒಬ್ಬಂಟಿಗಳಾಗಿ ಇದ್ದೆನಲ್ಲಾ!
ಇಷ್ಟೆಲ್ಲಾ ಮಕ್ಕಳನ್ನು ನನಗೆ ಕೊಟ್ಟವರು ಯಾರು?’” ಎಂದು ಅಂದುಕೊಳ್ಳುವಿ.
22 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ,
“ನಾನು ಜನಾಂಗಗಳಿಗೆ ಕೈಬೀಸಿ ಸನ್ನೆ ಮಾಡುವೆನು.
ಎಲ್ಲಾ ಜನರು ನೋಡುವಂತೆ ನಾನು ನನ್ನ ಧ್ವಜವನ್ನು ಎತ್ತುವೆನು.
ಆಗ ಅವರು ನಿನ್ನ ಮಕ್ಕಳನ್ನು ನಿನಗೆ ತಂದೊಪ್ಪಿಸುವರು.
ಅವರು ನಿನ್ನ ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ತರುವರು.
ತಮ್ಮ ಕೈಗಳಲ್ಲಿ ಅವರನ್ನು ಎತ್ತಿಕೊಂಡು ಬರುವರು.
23 ನಿನ್ನ ಮಕ್ಕಳಿಗೆ ಅರಸರು ಉಪಾಧ್ಯಾಯರಾಗಿರುವರು.
ರಾಜಪುತ್ರಿಯರು ನಿನ್ನ ಮಕ್ಕಳನ್ನು ನೋಡಿಕೊಳ್ಳುವರು.
ಆ ಅರಸರೂ ರಾಜಪುತ್ರಿಯರೂ ನಿನಗೆ ಅಡ್ಡಬೀಳುವರು.
ನಿನ್ನ ಕಾಲಿನ ಧೂಳಿಗೆ ಮುತ್ತು ಕೊಡುವರು.
ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವಿ.
ನನ್ನ ಮೇಲೆ ಭರವಸವಿಡುವವನು ಆಶಾಭಂಗಪಡನು ಎಂದು ಆಗ ನೀನು ತಿಳಿದುಕೊಳ್ಳುವಿ.”
24 ಯುದ್ಧವೀರನು ಯುದ್ಧದಲ್ಲಿ ಕೊಳ್ಳೆಹೊಡೆದದ್ದನ್ನು
ನೀನು ಅವನಿಂದ ಕಿತ್ತುಕೊಳ್ಳಲಾರೆ.
ಬಲಿಷ್ಠ ಸೈನಿಕನು ಯುದ್ಧ ಕೈದಿಯನ್ನು ಕಾವಲು ಕಾಯುವಾಗ
ಆ ಕೈದಿಯು ತಪ್ಪಿಸಿಕೊಳ್ಳಲಾರನು.
25 ಆದರೆ ಯೆಹೋವನು ಹೇಳುವುದೇನೆಂದರೆ,
“ಕೈದಿಗಳು ತಪ್ಪಿಸಿಕೊಳ್ಳುವರು.
ಬಲಿಷ್ಠ ಸೈನಿಕನಿಂದ ಯಾರೋ ಒಬ್ಬನು ಕೈದಿಯನ್ನು ಬಿಡಿಸಿಕೊಳ್ಳುವನು. ಇದು ಹೇಗೆ ಸಾಧ್ಯ?
ಹೇಗೆಂದರೆ, ನಾನೇ ನಿನ್ನ ಬದಲಾಗಿ ಯುದ್ಧ ಮಾಡುವೆನು;
ನಿನ್ನ ಮಕ್ಕಳನ್ನು ರಕ್ಷಿಸುವೆನು.
26 ನಿನ್ನನ್ನು ಹಿಂಸಿಸುವವರು
ತಮ್ಮ ದೇಹದ ಮಾಂಸವನ್ನೇ ತಿನ್ನುವಂತೆ ಮಾಡುವೆನು;
ದ್ರಾಕ್ಷಾರಸವನ್ನು ಕುಡಿಯುವಂತೆ ತಮ್ಮ ಸ್ವಂತ ರಕ್ತವನ್ನೇ ಕುಡಿಸಿ ಅಮಲೇರಿಸುವೆನು;
ಆಗ ಯೆಹೋವನೇ ನಿನ್ನನ್ನು ರಕ್ಷಿಸಿದನೆಂದು ಜನರೆಲ್ಲರೂ ತಿಳಿದುಕೊಳ್ಳುವರು.
ಯಾಕೋಬ್ಯರ ಸರ್ವಶಕ್ತನಾದ ದೇವರು ನಿಮ್ಮನ್ನು ರಕ್ಷಿಸಿದನೆಂದು ಎಲ್ಲರೂ ತಿಳಿಯುವರು.”
ಪರಲೋಕದಲ್ಲಿ ದೇವರಿಗೆ ಸ್ತೋತ್ರ
19 ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2 ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”
3 ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:
“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”
4 ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,
“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.
5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,
“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.
6 ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ!
ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
ಆತನು ಸರ್ವಶಕ್ತನಾಗಿದ್ದಾನೆ.
7 ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”
(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)
9 ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.
10 ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.
ಬಿಳಿ ಕುದುರೆಯ ಮೇಲಿನ ಸವಾರನು
11 ನಂತರ ಪರಲೋಕವು ತೆರೆದಿರುವುದನ್ನು ನಾನು ನೋಡಿದೆನು. ನನ್ನ ಎದುರಿನಲ್ಲಿ ಒಂದು ಬಿಳಿ ಕುದುರೆಯಿತ್ತು. ಕುದುರೆಯ ಮೇಲೆ ಕುಳಿತಿದ್ದ ಸವಾರನ ಹೆಸರು ನಂಬಿಗಸ್ತ ಮತ್ತು ಸತ್ಯವಂತ. ಆತನು ತನ್ನ ತೀರ್ಪುಗಳಲ್ಲಿಯೂ ಯುದ್ಧಗಳಲ್ಲಿಯೂ ನ್ಯಾಯವಂತನಾಗಿದ್ದನು. 12 ಆತನ ಕಣ್ಣುಗಳು ಉರಿಯುವ ಕೆಂಡಗಳಂತಿದ್ದವು. ಆತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಆತನ ಮೇಲೆ ಒಂದು ಹೆಸರನ್ನು ಬರೆಯಲಾಗಿತ್ತು, ಆದರೆ ಆ ಹೆಸರಿನ ಅರ್ಥ ಆತನೊಬ್ಬನಿಗೆ ಮಾತ್ರ ತಿಳಿದಿತ್ತೇ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. 13 ಆತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಆತನ ಹೆಸರು ದೇವರವಾಕ್ಯ. 14 ಪರಲೋಕದ ಸೈನ್ಯಗಳು ಬಿಳಿ ಕುದುರೆಗಳ ಮೇಲೆ ಆತನನ್ನು ಹಿಂಬಾಲಿಸುತ್ತಿದ್ದವು. ಅವರು ಬಿಳುಪಾಗಿಯೂ ಶುಭ್ರವಾಗಿಯೂ ಇದ್ದ ನಯವಾದ ನಾರಮಡಿಯನ್ನು ಧರಿಸಿದ್ದರು. 15 ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹರಿತವಾದ ಕತ್ತಿಯೊಂದು ಹೊರಗೆ ಬರುತ್ತಿತ್ತು. ಆತನು ಜನಾಂಗಗಳನ್ನು ಸೋಲಿಸಲು ಈ ಕತ್ತಿಯನ್ನು ಬಳಸುತ್ತಾನೆ. ಆತನು ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುತ್ತಾನೆ. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಿಯನ್ನು ಕಿವುಚಿ ಹಾಕುತ್ತಾನೆ. 16 ಆತನ ನಿಲುವಂಗಿಯ ಮೇಲೆಯೂ ಆತನ ಕಾಲಿನ ಮೇಲೆಯೂ,
ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು
ಎಂಬ ಹೆಸರನ್ನು ಬರೆಯಲಾಗಿತ್ತು.
17 ನಂತರ ಒಬ್ಬ ದೇವದೂತನು ಸೂರ್ಯನ ಮೇಲೆ ನಿಂತಿರುವುದನ್ನು ನಾನು ನೋಡಿದೆನು. ಆ ದೇವದೂತನು ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳಿಗೆಲ್ಲ ಹೀಗೆ ಹೇಳುತ್ತಿದ್ದನು: “ದೇವರ ಮಹಾಭೋಜನಕ್ಕೆ ಒಟ್ಟುಗೂಡಿ ಬನ್ನಿರಿ. 18 ನೀವು ರಾಜರುಗಳ ಮತ್ತು ಸಹಸ್ರಾಧಿಪತಿಗಳ ಮತ್ತು ಸುಪ್ರಸಿದ್ಧ ಜನರ ದೇಹಗಳನ್ನು ತಿನ್ನಲು ಒಟ್ಟಾಗಿ ಬನ್ನಿರಿ. ಕುದುರೆಗಳ, ಕುದುರೆ ಸವಾರರ, ಸ್ವತಂತ್ರರಾದವರ, ಗುಲಾಮರ, ಚಿಕ್ಕವರ ಮತ್ತು ದೊಡ್ಡವರ ದೇಹಗಳನ್ನು ತಿನ್ನಲು ಬನ್ನಿರಿ.”
19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತಿದ್ದವನ ಮೇಲೆ ಮತ್ತು ಅವನ ಸೈನ್ಯದ ಮೇಲೆ ಯುದ್ಧ ಮಾಡುವುದಕ್ಕಾಗಿ ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದ್ದರು. 20 ಆದರೆ ಆ ಮೃಗವನ್ನೂ ಸುಳ್ಳುಪ್ರವಾದಿಯನ್ನೂ ಸೆರೆಹಿಡಿಯಲಾಯಿತು. ಈ ಸುಳ್ಳುಪ್ರವಾದಿಯೇ ಮೃಗಕ್ಕಾಗಿ ಅದ್ಭುತಗಳನ್ನು ಮಾಡಿದವನು. ಈ ಸುಳ್ಳುಪ್ರವಾದಿಯು ಮೃಗದ ಗುರುತು ಹಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಭುತಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನೂ ಮೃಗವನ್ನೂ, ಬೆಂಕಿ ಮತ್ತು ಗಂಧಕಗಳಿಂದ ಉರಿಯುವ ಕೆರೆಯಲ್ಲಿ ಜೀವಂತವಾಗಿ ಎಸೆಯಲಾಯಿತು. 21 ಅವರ ಸೈನ್ಯಗಳನ್ನು ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಹೊರಬಂದ ಕತ್ತಿಯಿಂದ ಕೊಲ್ಲಲಾಯಿತು. ಈ ದೇಹಗಳನ್ನು ಪಕ್ಷಿಗಳೆಲ್ಲ ಹೊಟ್ಟೆ ತುಂಬುವವರೆಗೆ ತಿಂದವು.
Kannada Holy Bible: Easy-to-Read Version. All rights reserved. © 1997 Bible League International