M’Cheyne Bible Reading Plan
ಕೊಲೆಯಾದ ವ್ಯಕ್ತಿಯ ದೇಹ ಪತ್ತೆಯಾದರೆ
21 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಒಬ್ಬ ವ್ಯಕ್ತಿ ಕೊಲೆಯಾಗಿ ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಮತ್ತು ಅವನನ್ನು ಕೊಲೆ ಮಾಡಿದ್ದು ಯಾರು ಎಂದು ನಿಮಗೆ ಗೊತ್ತಿಲ್ಲದಿದ್ದರೆ, 2 ಆಗ ಆ ಪಟ್ಟಣದ ನಾಯಕರು ಮತ್ತು ನ್ಯಾಯಾಧೀಶರು ಬಂದು ಪಟ್ಟಣಕ್ಕೂ ಆ ಶವದ ಸ್ಥಳಕ್ಕೂ ಎಷ್ಟು ದೂರವಿದೆ ಎಂದು ಅಳೆಯಬೇಕು. 3 ಯಾವ ಪಟ್ಟಣವು ಕೊಲೆಯಾದ ವ್ಯಕ್ತಿಯ ಶವಕ್ಕೆ ಹತ್ತಿರವಾಗಿದೆಯೋ ಆ ಪಟ್ಟಣದ ನಾಯಕರು ಮತ್ತು ನ್ಯಾಯಾಧೀಶರು ತಮ್ಮ ಹಟ್ಟಿಯಿಂದ ಎಂದೂ ಕರು ಈಯದ, ಕೆಲಸಕ್ಕೆ ಉಪಯೋಗಿಸದ ಒಂದು ಹಸುವನ್ನು ತೆಗೆದುಕೊಂಡು 4 ಹರಿಯುವ ನೀರಿರುವ ತಗ್ಗಿಗೆ ಅಟ್ಟಿಕೊಂಡು ಹೋಗಬೇಕು. ಆ ತಗ್ಗು ಉಳಿಮೆ ಮಾಡಿದ ಜಾಗವಾಗಿರಬಾರದು ಮತ್ತು ಆ ಸ್ಥಳದಲ್ಲಿ ಯಾವ ಸಸಿಯೂ ನೆಟ್ಟಿರಬಾರದು. ಅಲ್ಲಿ ಊರ ಹಿರಿಯರು ಆ ಹಸುವಿನ ಕುತ್ತಿಗೆ ಮುರಿಯಬೇಕು. 5 ಊರಿನಲ್ಲಿದ್ದ ಲೇವಿಯರೂ ಅಲ್ಲಿಗೆ ಹೋಗಬೇಕು. ಯೆಹೋವನು ಅವರ ಜನರನ್ನು ಆತನ ಹೆಸರಿನಲ್ಲಿ ಆಶೀರ್ವದಿಸುವುದಕ್ಕಾಗಿಯೂ ತನ್ನ ಸೇವೆ ಮಾಡುವುದಕ್ಕಾಗಿಯೂ ಆರಿಸಿದ್ದಾನೆ. ಎಲ್ಲಾ ವಾಗ್ವಾದಗಳನ್ನು ಯಾಜಕನೇ ಇತ್ಯರ್ಥಮಾಡುವನು. 6 ಕೊಲೆಯಾದವನ ದೇಹದ ಸಮೀಪವಿರುವ ಪಟ್ಟಣದ ಹಿರಿಯರು ಕುತ್ತಿಗೆ ಮುರಿಯಲ್ಪಟ್ಟ ಹಸುವಿನ ಮೇಲೆ ತಮ್ಮತಮ್ಮ ಕೈಗಳನ್ನು ತೊಳೆಯಬೇಕು. 7 ಆ ಹಿರಿಯರು ಹೀಗೆನ್ನಬೇಕು: ‘ನಾವು ಈ ವ್ಯಕ್ತಿಯನ್ನು ಹತ್ಯೆ ಮಾಡಲಿಲ್ಲ ಮತ್ತು ಅವನು ಕೊಲೆ ಮಾಡಲ್ಪಟ್ಟದ್ದನ್ನು ನಾವು ನೋಡಿಲ್ಲ. 8 ಯೆಹೋವನೇ, ನೀನು ಇಸ್ರೇಲನ್ನು ರಕ್ಷಿಸಿರುವೆ, ನಾವು ನಿನ್ನ ಜನಗಳಾಗಿದ್ದೇವೆ. ಈಗ ನೀನು ನಮ್ಮನ್ನು ಶುದ್ಧೀಕರಿಸು; ನಿರ್ದೋಷಿಯ ಕೊಲೆಗೆ ನಮ್ಮನ್ನು ಕಾರಣರನ್ನಾಗಿ ಮಾಡಬೇಡ!’ 9 ಹೀಗೆ ನೀವು ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ನಿಮ್ಮ ಸಮೂಹದಿಂದ ದೋಷವನ್ನು ತೆಗೆದುಹಾಕುವಿರಿ.
ಯುದ್ಧದಲ್ಲಿ ಸೆರೆಹಿಡಿಯಲ್ಪಟ್ಟ ಸ್ತ್ರೀಯರು
10 “ನೀವು ನಿಮ್ಮ ಶತ್ರುಗಳೊಂದಿಗೆ ಯುದ್ಧಮಾಡಿ ದೇವರ ಸಹಾಯದಿಂದ ಅವರನ್ನು ಸೋಲಿಸುವಿರಿ. ನೀವು ನಿಮ್ಮ ಶತ್ರುಗಳನ್ನು ಸೆರೆಹಿಡಿದು ಕೊಂಡೊಯ್ಯುವಿರಿ. 11 ಸೆರೆಹಿಡಿಯಲ್ಪಟ್ಟವರಲ್ಲಿ ಸುಂದರಿಯಾದ ಸ್ತ್ರೀಯನ್ನು ನೋಡಿ ಆಕೆಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳ ಬಯಸಿದರೆ 12 ಆಕೆಯನ್ನು ನಿನ್ನ ಮನೆಯೊಳಗೆ ಕರೆದುಕೊಂಡು ಬರಬೇಕು. ಆಕೆಯು ತಲೆಯನ್ನು ಬೋಳಿಸಿಕೊಂಡು ಉಗುರನ್ನು ಕತ್ತರಿಸಿಕೊಳ್ಳಬೇಕು. 13 ಆಕೆಯು ತನ್ನ ಸೆರೆವಾಸದ ಬಟ್ಟೆಯನ್ನು ತೆಗೆದಿಟ್ಟು ಒಂದು ತಿಂಗಳು ಪೂರ್ತಿ ತನ್ನ ತಂದೆತಾಯಿಗಳಿಗಾಗಿ ಶೋಕಿಸಬೇಕು. ಅನಂತರ ನೀನು ಆಕೆಯ ಬಳಿಗೆ ಹೋಗಿ ಆಕೆಯನ್ನು ವರಿಸಿ ಗಂಡನಾಗಬಹುದು. ಆಕೆಯು ನಿನ್ನ ಹೆಂಡತಿಯಾಗುವಳು. 14 ಆಕೆಯನ್ನು ನೀನು ಮೆಚ್ಚದಿದ್ದರೆ ವಿವಾಹವಿಚ್ಛೇದನೆ ಮಾಡಿ ಆಕೆಯನ್ನು ಸ್ವತಂತ್ರಳಾಗುವಂತೆ ಬಿಟ್ಟುಬಿಡಬಹುದು. ಆದರೆ ನೀನು ಆಕೆಯನ್ನು ಮಾರಬಾರದು. ಆಕೆಯನ್ನು ಗುಲಾಮಳಂತೆ ನೋಡಬಾರದು. ಯಾಕೆಂದರೆ ನೀನು ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದಿಯಲ್ಲಾ.
ಹಿರಿಯ ಮಗನು
15 “ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರಿದ್ದರೆ ಅವರಲ್ಲಿ ಒಬ್ಬಾಕೆಯನ್ನು ಅವನು ಹೆಚ್ಚಾಗಿ ಪ್ರೀತಿಸಿದರೂ ಪ್ರೀತಿಸಬಹುದು. ಆ ಇಬ್ಬರು ಅವನಿಗೆ ಮಕ್ಕಳನ್ನು ಹೆರುವರು. ಹಿರಿಮಗನು ತಾನು ಪ್ರೀತಿಸದ ಹೆಂಡತಿಯಲ್ಲಿ ಹುಟ್ಟಿದರೆ, 16 ಆ ಪುರುಷನು ತನ್ನ ಆಸ್ತಿಯನ್ನು ತನ್ನ ಮಕ್ಕಳಿಗೆ ಪಾಲುಮಾಡಿ ಕೊಡುವಾಗ ಚೊಚ್ಚಲಮಗನಿಗೆ ಸಿಗಬೇಕಾದ ಆಸ್ತಿಯನ್ನು ತಾನು ಪ್ರೀತಿಸುವ ಹೆಂಡತಿಯ ಮಗನಿಗೆ ಕೊಡಬಾರದು. 17 ತಾನು ಪ್ರೀತಿಸದೆ ಇರುವ ಹೆಂಡತಿಯ ಚೊಚ್ಚಲಮಗನನ್ನು ಅವನು ಸ್ವೀಕರಿಸಬೇಕು. ಆ ಚೊಚ್ಚಲಮಗನಿಗೆ ಬೇರೆ ಮಕ್ಕಳಿಗಿಂತ ಎರಡು ಪಾಲು ಆಸ್ತಿಯನ್ನು ಕೊಡಬೇಕು. ಯಾಕೆಂದರೆ ಅವನು ನಿಮ್ಮ ಚೊಚ್ಚಲ ಮಗನು. ಚೊಚ್ಚಲ ಮಗನ ಹಕ್ಕು ಅವನಿಗೆ ಸೇರಿದ್ದು.
ವಿಧೇಯರಾಗದ ಮಕ್ಕಳ ಬಗ್ಗೆ
18 “ಒಬ್ಬ ಮನುಷ್ಯನಿಗೆ ಹಠಮಾರಿಯಾದ ಅವಿಧೇಯ ಮಗನಿರಬಹುದು. ಈ ಮಗನು ತಂದೆಯ ಮಾತನ್ನಾಗಲಿ ತಾಯಿಯ ಮಾತನ್ನಾಗಲಿ ಕೇಳದವನಾಗಿದ್ದರೆ ಅವನಿಗೆ ಅವರು ಶಿಕ್ಷೆ ಕೊಟ್ಟರೂ ಅವನು ಅವರಿಗೆ ವಿಧೇಯನಾಗದಿದ್ದರೆ, ಅವರ ಮಾತುಗಳನ್ನು ಕೇಳದಿದ್ದರೆ, 19 ಆಗ ಅವನ ತಂದೆತಾಯಿಗಳು ಆ ಮಗನನ್ನು ಪಟ್ಟಣದ ಹಿರಿಯರು ಸೇರಿಬರುವ ಸ್ಥಳಕ್ಕೆ ಕರೆದುಕೊಂಡು ಹೋಗಿ 20 ಪಟ್ಟಣದ ಹಿರಿಯರಿಗೆ ಹೀಗೆ ಹೇಳಬೇಕು: ‘ನಮ್ಮ ಮಗನು ಹಠಮಾರಿಯೂ ಅವಿಧೇಯನೂ ಆಗಿರುತ್ತಾನೆ. ನಾವು ಹೇಳಿದ ಮಾತುಗಳೊಂದನ್ನೂ ಅವನು ಕೇಳುವುದಿಲ್ಲ. ಅವನು ಬಹಳವಾಗಿ ತಿಂದು ಕುಡಿಯುತ್ತಾನೆ.’ 21 ಆಗ ಆ ಪಟ್ಟಣದ ಜನರು ಸೇರಿ ಆ ಮಗನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನಿಮ್ಮಲ್ಲಿರುವ ದುಷ್ಟತನವನ್ನು ತೆಗೆದುಹಾಕಬೇಕು. ಎಲ್ಲಾ ಇಸ್ರೇಲರು ಇದನ್ನು ಕೇಳಿ ಭಯಗ್ರಸ್ತರಾಗುವರು.
ಅಪರಾಧಿಗಳನ್ನು ಕೊಂದು ನೇತು ಹಾಕುವ ಬಗ್ಗೆ
22 “ಒಬ್ಬ ಮನುಷ್ಯನು ಮರಣಶಿಕ್ಷೆಗೆ ಯೋಗ್ಯವಾದ ಅಪರಾಧವನ್ನು ಮಾಡಿದ್ದಿರಬಹುದು. ಅವನಿಗೆ ಮರಣಶಿಕ್ಷೆ ಕೊಟ್ಟ ನಂತರ ಅವನ ದೇಹವನ್ನು ಒಂದು ಮರಕ್ಕೆ ತೂಗುಹಾಕಿದರೆ 23 ಇಡೀ ರಾತ್ರಿ ಆ ಮರದಲ್ಲಿ ಅವನ ಶರೀರ ನೇತಾಡುವಂತೆ ಮಾಡಬಾರದು. ಅದೇ ದಿವಸದಲ್ಲಿ ಅವನ ಶವವು ಹೂಳಲ್ಪಡಬೇಕು. ಯಾಕೆಂದರೆ ಮರದಲ್ಲಿ ತೂಗುಹಾಕಲ್ಪಟ್ಟ ಮನುಷ್ಯನು ದೇವರಿಂದ ಶಪಿಸಲ್ಪಟ್ಟವನು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ನೀವು ಹೊಲಸು ಮಾಡಬೇಡಿರಿ.
ದಾವೀದನ ಕೀರ್ತನೆ.
108 ದೇವರೇ, ನನ್ನ ಹೃದಯವು ಸ್ಥಿರವಾಗಿದೆ;
ನಾನು ಹೃದಯಪೂರ್ವಕವಾಗಿ ವಾದ್ಯ ನುಡಿಸುತ್ತಾ ಹಾಡುವೆನು.
2 ಹಾರ್ಪ್‌ವಾದ್ಯಗಳೇ, ಲೈರ್‌ವಾದ್ಯಗಳೇ,
ನಾವು ಸೂರ್ಯನನ್ನು ಎಚ್ಚರಗೊಳಿಸೋಣ!
3 ಯೆಹೋವನೇ, ಜನಾಂಗಗಳಲ್ಲಿಯೂ
ವಿದೇಶಿಯರಲ್ಲಿಯೂ ನಿನ್ನನ್ನು ಕೊಂಡಾಡುವೆನು.
4 ಯಾಕೆಂದರೆ ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ;
ನಿನ್ನ ನಂಬಿಗಸ್ತಿಕೆಯು ಮೋಡಗಳಿಗಿಂತಲೂ ಎತ್ತರವಾಗಿದೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನಿನ್ನ ಸ್ನೇಹಿತರಾದ ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟು ನಮ್ಮನ್ನು ರಕ್ಷಿಸು.
ನಿನ್ನ ಬಲಗೈಯಿಂದ ನಮ್ಮನ್ನು ಕಾಪಾಡು.
7 ದೇವರು ತನ್ನ ಆಲಯದೊಳಗಿಂದ ಹೀಗೆಂದನು:
“ನಾನು ಯುದ್ಧದಲ್ಲಿ ಗೆದ್ದು ಜಯಘೋಷ ಮಾಡುವೆನು;
ಶೆಕೆಮ್ ಪ್ರದೇಶವನ್ನೂ ಸುಕ್ಕೋತ್ ಬಯಲನ್ನೂ ನನ್ನ ಜನರಿಗೆ ಕೊಡುವೆನು.
8 ಗಿಲ್ಯಾದ್ ಪ್ರಾಂತವೂ ಮನಸ್ಸೆ ಪ್ರಾಂತವೂ ನನ್ನದಾಗಿರುತ್ತವೆ.
ಎಫ್ರಾಯೀಮ್ ನನ್ನ ಶಿರಸ್ತ್ರಾಣವಾಗಿರುತ್ತದೆ.
ಯೆಹೂದವು ನನ್ನ ರಾಜದಂಡವಾಗಿರುತ್ತದೆ.
9 ಮೋವಾಬ್ ನನ್ನ ಪಾದತೊಳೆಯುವ ಬೋಗುಣಿಯಂತಿರುತ್ತದೆ.
ಎದೋಮ್ ನನ್ನ ಪಾದರಕ್ಷೆಗಳನ್ನು ಹೊತ್ತುಕೊಂಡು ಹೋಗುವ ಗುಲಾಮನಾಗಿರುತ್ತದೆ.
ಫಿಲಿಷ್ಟಿಯರನ್ನು ಸೋಲಿಸಿದ ಮೇಲೆ ನಾನು ಜಯಘೋಷ ಮಾಡುವೆನು.”
10 ವೈರಿಗಳ ಆಶ್ರಯದುರ್ಗಕ್ಕೆ ನನ್ನನ್ನು ನಡೆಸುವವರು ಯಾರು?
ಎದೋಮನ್ನು ಸೋಲಿಸಲು ನನಗೆ ಸಹಾಯ ಮಾಡುವವರು ಯಾರು?
11 ದೇವರೇ, ನೀನು ನಮ್ಮನ್ನು ತ್ಯಜಿಸಿ,
ನಮ್ಮ ಸೈನ್ಯದೊಡನೆ ಹೋಗದಿರುವುದು ನಿಜವೇ?
12 ನಮ್ಮ ಶತ್ರುವನ್ನು ಸೋಲಿಸಲು ದಯವಿಟ್ಟು ನಮಗೆ ಸಹಾಯಮಾಡು.
ಜನರು ನಮಗೆ ಸಹಾಯಮಾಡಲಾರರು!
13 ದೇವರು ಮಾತ್ರ ನಮ್ಮನ್ನು ಬಲಪಡಿಸಬಲ್ಲನು.
ಆತನು ಮಾತ್ರ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು.
ಸ್ತುತಿಗೀತೆ. ರಚನೆಗಾರ: ದಾವೀದ.
109 ನಾನು ಸ್ತುತಿಸುವ ದೇವರೇ,
ನನ್ನ ಪ್ರಾರ್ಥನೆಗೆ ಕಿವಿಗೊಡದಿರಬೇಡ.
2 ದುಷ್ಟರು ನನ್ನ ವಿಷಯವಾಗಿ ಸುಳ್ಳಾಡುತ್ತಿದ್ದಾರೆ.
ಅವರು ಅಸತ್ಯವಾದವುಗಳನ್ನು ಹೇಳುತ್ತಿದ್ದಾರೆ.
3 ಅವರು ನನ್ನನ್ನು ದ್ವೇಷಿಸುತ್ತಾರೆ;
ನಿಷ್ಕಾರಣವಾಗಿ ನನಗೆ ಎದುರಾಗಿದ್ದಾರೆ.
4 ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು.
ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.
5 ನಾನು ಉಪಕಾರವನ್ನು ಮಾಡಿದ್ದರೂ
ಅವರು ನನಗೆ ಅಪಕಾರವನ್ನು ಮಾಡುತ್ತಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ
ಅವರು ನನ್ನನ್ನು ದ್ವೇಷಿಸುವರು.
6 ನನ್ನ ವೈರಿಯನ್ನು ಅವನ ದುಷ್ಕೃತ್ಯಗಳಿಗೆ ತಕ್ಕಂತೆ ದಂಡಿಸು.
ಅವನ ಮೇಲೆ ತಪ್ಪು ಹೊರಿಸಲು ದೂಷಕನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
7 ನ್ಯಾಯವಿಚಾರಣೆಯಲ್ಲಿ ನ್ಯಾಯಾಧೀಶನು ಅವನನ್ನು ಅಪರಾಧಿಯೆಂದು ನಿರ್ಣಯಿಸಲಿ.
ನನ್ನ ಶತ್ರುವಿನ ಪ್ರತಿವಾದವು ಅವನಿಗೆ ಮತ್ತಷ್ಟು ಕೇಡು ಮಾಡಲಿ.
8 ನನ್ನ ಶತ್ರುವು ಬೇಗನೆ ಸಾಯಲಿ.
ಅವನ ಉದ್ಯೋಗವು ಮತ್ತೊಬ್ಬನಿಗೆ ದೊರೆಯಲಿ.
9 ಅವನ ಮಕ್ಕಳನ್ನು ಅನಾಥರನ್ನಾಗಿಯೂ ಅವನ ಹೆಂಡತಿಯನ್ನು ವಿಧವೆಯನ್ನಾಗಿಯೂ ಮಾಡು.
10 ಅವನ ಮಕ್ಕಳು ತಮ್ಮ ಮನೆಯನ್ನು ಕಳೆದುಕೊಂಡು
ತಿರುಕರಂತೆ ಅಲೆಯುತ್ತಾ ಭಿಕ್ಷುಕರಾಗಲಿ.
11 ಅವನಿಗೆ ಸಾಲಕೊಟ್ಟವರು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ.
ಅವನು ದುಡಿದು ಸಂಪಾದಿಸಿದ್ದೆಲ್ಲವನ್ನು ಪರರು ಸುಲಿದುಕೊಳ್ಳಲಿ.
12 ಅವನಿಗೆ ಯಾರೂ ಕೃಪೆತೋರದಿರಲಿ;
ಅವನ ಮಕ್ಕಳಿಗೂ ಯಾರೂ ಕರುಣೆತೋರದಿರಲಿ.
13 ಅವನನ್ನು ಸಂಪೂರ್ಣವಾಗಿ ನಾಶಮಾಡು.
ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.
14 ಯೆಹೋವನು ನನ್ನ ಶತ್ರುವಿನ ತಂದೆಯ ಪಾಪವನ್ನು ಮರೆಯದಿರಲಿ;
ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
15 ಆ ಪಾಪಗಳನ್ನು ಯೆಹೋವನು ಯಾವಾಗಲೂ ಜ್ಞಾಪಕಮಾಡಿಕೊಳ್ಳಲಿ;
ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಯೆಹೋವನು ಮಾಡಲಿ.
16 ಯಾಕೆಂದರೆ, ಆ ದುಷ್ಟನು ಯಾವ ಒಳ್ಳೆಯದನ್ನೂ ಮಾಡಲಿಲ್ಲ;
ಯಾರನ್ನೂ ಪ್ರೀತಿಸಲಿಲ್ಲ.
ಅವನು ಬಡಜನರಿಗೂ ಮತ್ತು ಅಸಹಾಯಕರಿಗೂ ಜೀವನವನ್ನು ಕಷ್ಟಕರವನ್ನಾಗಿ ಮಾಡಿದನು.
17 ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು.
ಆದ್ದರಿಂದ ಆ ಶಾಪಗಳು ಅವನಿಗೇ ಸಂಭವಿಸಲಿ.
ಅವನು ಜನರನ್ನು ಆಶೀರ್ವದಿಸಲೇ ಇಲ್ಲ.
ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
18 ಅವನು ಉಡುಪುಗಳನ್ನು ಧರಿಸುವಂತೆ
ಶಪಿಸುವುದೇ ಅವನ ದಿನನಿತ್ಯ ಜೀವಿತದ ಕೆಲಸವಾಗಿತ್ತು.
19 ಆದ್ದರಿಂದ ಅವನು ಧರಿಸಿಕೊಳ್ಳುವ ನಿಲುವಂಗಿಯಂತೆ
ಶಾಪಗಳು ಅವನನ್ನು ಆವರಿಸಿಕೊಳ್ಳಲಿ;
ನಡುಪಟ್ಟಿಯಂತೆ ಯಾವಾಗಲೂ ಸುತ್ತಿಕೊಳ್ಳಲಿ.
20 ನನ್ನ ಶತ್ರುವಿಗೂ ನನ್ನನ್ನು ಕೊಲ್ಲಬೇಕೆಂದಿರುವವರಿಗೂ
ಯೆಹೋವನು ಅವುಗಳನ್ನು ಮಾಡಲಿ.
21 ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.
ಯೆಹೋವನು ಪ್ರಪಂಚವನ್ನು ಆಳುತ್ತಾನೆ
48 ಯೆಹೋವನು ಹೇಳುವುದೇನೆಂದರೆ, “ಯಾಕೋಬನ ಮನೆತನದವರೇ, ನನ್ನ ಮಾತುಗಳನ್ನು ಕೇಳಿರಿ.
ಜನರು ನಿಮ್ಮನ್ನು ಇಸ್ರೇಲ್ ಎಂದು ಕರೆಯುತ್ತಾರೆ.
ನೀವು ಯೆಹೂದದ ಕುಟುಂಬದವರು.
ನೀವು ಯೆಹೋವನ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಳ್ಳುವಿರಿ. ನೀವು ಯೆಹೋವನ ನಾಮವನ್ನು ಸ್ತುತಿಸುವಿರಿ, ಆದರೆ ನೀವು ಇವುಗಳನ್ನು ಮಾಡುವಾಗ
ನಂಬಿಗಸ್ತರಾಗಿರುವದಿಲ್ಲ; ಯಥಾರ್ಥರಾಗಿರುವುದಿಲ್ಲ.
2 “ಹೌದು, ಅವರು ಪರಿಶುದ್ಧ ಪಟ್ಟಣದ ನಿವಾಸಿಗಳಾಗಿದ್ದಾರೆ.
ಅವರು ಇಸ್ರೇಲಿನ ದೇವರನ್ನು ಅವಲಂಬಿಸಿಕೊಂಡಿದ್ದಾರೆ.
ಸರ್ವಶಕ್ತನಾದ ಯೆಹೋವನು ಎಂಬುದೇ ಆತನ ಹೆಸರು.
3 “ಸಂಭವಿಸಲಿಕ್ಕಿರುವ ಸಂಗತಿಗಳ ಬಗ್ಗೆ
ಬಹುಕಾಲದ ಹಿಂದೆಯೇ ನಿಮಗೆ ತಿಳಿಸಿದ್ದೆನು.
ಫಕ್ಕನೇ ಅವು ನೆರವೇರುವಂತೆ ಮಾಡಿದೆನು.
4 ನೀವು ಹಠಮಾರಿಗಳಾಗಿದ್ದು ನಾನು ಹೇಳಿದ್ದನ್ನು ನಂಬದೆ ಹೋದದ್ದರಿಂದ ನಾನು ಹಾಗೆ ಮಾಡಿದೆನು.
ನೀವು ಕಬ್ಬಿಣದಂತೆ ಬಗ್ಗದ ಹಠಮಾರಿಗಳಾಗಿದ್ದೀರಿ.
ಹಿತ್ತಾಳೆಯಂತೆ ಗಟ್ಟಿಯಾಗಿದ್ದೀರಿ.
5 ಸಂಭವಿಸಲಿರುವ ಸಂಗತಿಗಳನ್ನು ಬಹುಕಾಲದ ಮೊದಲೇ ನಿಮಗೆ ತಿಳಿಸಿದ್ದೆನು.
ಅವು ಸಂಭವಿಸುವದಕ್ಕಿಂತ ಎಷ್ಟೋ ಕಾಲದ ಮೊದಲೇ ತಿಳಿಸಿದೆನು.
ನೀವು, ‘ಇವುಗಳನ್ನು ಮಾಡಿದ್ದು ನಮ್ಮ ವಿಗ್ರಹಗಳೇ,
ನಮ್ಮ ಮರ ಮತ್ತು ಲೋಹದ ದೇವರುಗಳೇ ಅವುಗಳನ್ನು ಮಾಡಿದ್ದು ಎಂದು ನೀವು ಹೇಳದಂತೆ ಮಾಡಿದೆನು.’”
ಇಸ್ರೇಲರನ್ನು ಶುದ್ಧೀಕರಿಸಲು ದೇವರು ಅವರನ್ನು ಶಿಕ್ಷಿಸುತ್ತಾನೆ
6 “ನಡೆದದ್ದನ್ನು ನೀವು ಕಣ್ಣಾರೆ ನೋಡಿದಿರಿ; ಕಿವಿಯಾರೆ ಕೇಳಿದಿರಿ.
ಆದ್ದರಿಂದ ನೀವು ಇತರರಿಗೆ ಸುದ್ದಿಯನ್ನು ತಿಳಿಸಬೇಕು.
ನೀವು ಈವರೆಗೆ ತಿಳಿಯದಿರುವ
ಗುಪ್ತವಿಷಯಗಳನ್ನು ಈಗ ನಿಮಗೆ ತಿಳಿಸುವೆನು.
7 ಇವು ಬಹಳ ಕಾಲದ ಹಿಂದೆ ನಡೆದ ವಿಷಯಗಳಲ್ಲ.
ಇವು ಈಗ ಸಂಭವಿಸುವ ವಿಷಯಗಳು.
ಈ ದಿವಸಕ್ಕೆ ಮೊದಲು ನೀವು ಇದನ್ನು ಕೇಳಲಿಲ್ಲ.
ಆದ್ದರಿಂದ ‘ನಮಗೆ ಇದೆಲ್ಲಾ ಗೊತ್ತಿದೆ’ ಎಂದು ನೀವು ಹೇಳಲಾಗದು.
8 ಆದರೆ ನಾನು ಇವುಗಳನ್ನು ತಿಳಿಸಿದ ಮೇಲೂ ನೀವು ನನ್ನ ಮಾತನ್ನು ಕೇಳದೆಹೋದಿರಿ.
ನೀವು ನನ್ನಿಂದ ಏನೂ ಕಲಿಯಲಿಲ್ಲ.
ನಾನು ಏನು ಹೇಳಿದರೂ ನೀವು ಕೇಳಲಿಲ್ಲ.
ಪ್ರಾರಂಭದಿಂದಲೇ ನೀವು ನನಗೆ ವಿರುದ್ಧವಾಗುವಿರಿ ಎಂದು ನಾನು ತಿಳಿದಿದ್ದೆನು.
ನೀವು ಹುಟ್ಟಿದಾಗಿನಿಂದಲೇ ನನಗೆ ವಿರುದ್ಧವಾಗಿ ದಂಗೆ ಎದ್ದಿರುವಿರಿ.
9 “ಆದರೆ ನಾನು ತಾಳ್ಮೆಯಿಂದಿರುವೆನು.
ನಾನು ಇದನ್ನು ನನ್ನ ಹೆಸರಿನ ನಿಮಿತ್ತ ಮಾಡುವೆನು.
ನಾನು ನಿಮ್ಮ ಮೇಲೆ ಕೋಪಗೊಂಡು ನಾನು ನಾಶಮಾಡದೆ ಇದ್ದುದಕ್ಕಾಗಿ ಜನರು ನನ್ನನ್ನು ಸ್ತುತಿಸುವರು.
ನನ್ನ ತಾಳ್ಮೆಗಾಗಿ ನೀವು ನನ್ನನ್ನು ಕೊಂಡಾಡುವಿರಿ.
10 “ಇಗೋ, ನಾನು ನಿಮ್ಮನ್ನು ಶುದ್ಧೀಕರಿಸುತ್ತೇನೆ.
ಜನರು ಬೆಳ್ಳಿಯನ್ನು ಬೆಂಕಿಯಿಂದ ಶುದ್ಧೀಕರಿಸುತ್ತಾರೆ.
ಆದರೆ ನಾನು ನಿಮ್ಮನ್ನು ಸಂಕಟಗಳಿಂದ ಶುದ್ಧೀಕರಿಸುವೆನು.
11 ನಾನು ಇದನ್ನು ನನಗಾಗಿ ಮಾಡುವೆನು.
ನಾನು ನಿಮ್ಮನ್ನು ಪ್ರಾಮುಖ್ಯವಾದ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ.
ನನ್ನ ಮಹಿಮೆಯನ್ನು ಮತ್ತು ನನಗೆ ಸಲ್ಲತಕ್ಕ ಸ್ತುತಿಯನ್ನು ತೆಗೆದುಕೊಳ್ಳಲು ನಾನು ಸುಳ್ಳುದೇವರುಗಳಿಗೆ ಅವಕಾಶ ಕೊಡುವುದಿಲ್ಲ.
12 “ಯಾಕೋಬೇ, ನನಗೆ ಕಿವಿಗೊಡು.
ಇಸ್ರೇಲೇ, ನೀವು ನನ್ನ ಜನರಾಗುವದಕ್ಕಾಗಿ ನಿಮ್ಮನ್ನು ನಾನು ಕರೆದೆನು.
ಆದ್ದರಿಂದ ನನ್ನ ಮಾತುಗಳನ್ನು ಕೇಳಿರಿ.
ನಾನೇ ಆದಿಯೂ
ಅಂತ್ಯವೂ ಆಗಿದ್ದೇನೆ.
13 ಭೂಮಿಯನ್ನು ನನ್ನ ಕೈಗಳಿಂದಲೇ ನಿರ್ಮಿಸಿದೆನು.
ನನ್ನ ಬಲಗೈ ಆಕಾಶವನ್ನು ಉಂಟುಮಾಡಿತು.
ನಾನು ಅವುಗಳನ್ನು ಕರೆದಾಗ
ಅವು ನನ್ನ ಬಳಿಗೆ ಬರುವವು.
14 “ನೀವೆಲ್ಲರೂ ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿರಿ.
ಸುಳ್ಳುದೇವರುಗಳಲ್ಲಿ ಯಾರಾದರೂ ಈ ವಿಷಯಗಳು ಸಂಭವಿಸುತ್ತವೆಯೆಂದು ಹೇಳಿರುವರೇ? ಇಲ್ಲ!”
ಯೆಹೋವನು ಆರಿಸಿದ ಮನುಷ್ಯನು ಬಾಬಿಲೋನಿಗೂ
ಕಸ್ದೀಯರಿಗೂ ತನ್ನ ಇಷ್ಟಬಂದ ಹಾಗೆ ಮಾಡುವನು.
15 “ನಾನು ಅವನನ್ನು ಕರೆಯುವುದಾಗಿ ಹೇಳಿದ್ದೇನೆ.
ನಾನು ಅವನನ್ನು ಕರೆದುತರುವೆನು;
ಅವನಿಗೆ ಜಯವನ್ನು ಅನುಗ್ರಹಿಸುವೆನು.
16 ನನ್ನ ಬಳಿಗೆ ಬಂದು ನನ್ನ ಮಾತು ಕೇಳಿರಿ!
ಬಾಬಿಲೋನ್ ಒಂದು ದೇಶವಾಗಿ ಪರಿಣಮಿಸುವಾಗ ನಾನು ಅಲ್ಲಿದ್ದೆನು.
ಆದಿಯಿಂದಲೇ ನಾನು ಸ್ವಷ್ಟವಾಗಿ ಹೇಳಿದ್ದೇನೆ.
ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೇನೆ.”
ಯೆಶಾಯನು ಹೇಳಿದ್ದೇನೆಂದರೆ: “ಈಗ ನನ್ನ ಒಡೆಯನಾದ ಯೆಹೋವನೂ ಆತನ ಆತ್ಮನೂ ಈ ವಿಷಯಗಳನ್ನು ತಿಳಿಸಲು ನನ್ನನ್ನು ಕಳುಹಿಸಿದ್ದಾನೆ. 17 ರಕ್ಷಕನೂ ಇಸ್ರೇಲರ ಪರಿಶುದ್ಧನೂ ಆಗಿರುವ ಯೆಹೋವನು ಹೇಳುವುದೇನೆಂದರೆ,
“ನಾನೇ ನಿಮ್ಮ ದೇವರಾದ ಯೆಹೋವನು.
ಯಾವದು ಒಳ್ಳೆಯದೋ, ಪ್ರಯೋಜನಕರವೋ ಅದನ್ನು ಮಾಡಲು ನಿಮಗೆ ಕಲಿಸುತ್ತೇನೆ.
ನೀವು ಹೋಗಲೇಬೇಕಾದ ದಾರಿಯಲ್ಲಿ ನಿಮ್ಮನ್ನು ನಡಿಸುವೆನು.
18 ನೀವು ನನಗೆ ವಿಧೇಯರಾಗಿದ್ದರೆ,
ತುಂಬಿಹರಿಯುವ ಹೊಳೆಯಂತೆ
ಸಮಾಧಾನವು ನಿಮಗೆ ದೊರಕುತ್ತಿತ್ತು.
ಸಮುದ್ರದ ತೆರೆಯಂತೆ ಮೇಲಿಂದ ಮೇಲೆ
ನಿಮಗೆ ಒಳ್ಳೆಯವುಗಳು ಬರುತ್ತಿದ್ದವು.
19 ನೀವು ನನಗೆ ವಿಧೇಯರಾಗಿದ್ದರೆ,
ನಿಮ್ಮ ಸಂತಾನವು ಅಭಿವೃದ್ಧಿಯಾಗುತ್ತಿತ್ತು.
ಅವರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿರುತ್ತಿದ್ದರು.
ನೀವು ನನಗೆ ವಿಧೇಯರಾಗಿದ್ದರೆ, ನೀವು ನಾಶವಾಗಿರುತ್ತಿರಲಿಲ್ಲ
ಮತ್ತು ನನ್ನೆದುರಿನಿಂದ ನಿಮ್ಮ ಹೆಸರು ತೆಗೆದುಹಾಕಲ್ಪಡುತ್ತಿರಲಿಲ್ಲ.”
20 ನನ್ನ ಜನರೇ, ಬಾಬಿಲೋನನ್ನು ತೊರೆಯಿರಿ.
ನನ್ನ ಜನರೇ, ಕಸ್ದೀಯರಿಂದ ಓಡಿಹೋಗಿರಿ.
ಈ ವರ್ತಮಾನವನ್ನು ಜನರಿಗೆ ಹರ್ಷಿಸುತ್ತಾ ತಿಳಿಸಿರಿ.
ಲೋಕದ ಕಟ್ಟಕಡೆಯ ಸ್ಥಳದಲ್ಲೂ ಈ ವರ್ತಮಾನವನ್ನು ಪ್ರಕಟಿಸಿರಿ.
“ಯಾಕೋಬನನ್ನು ಯೆಹೋವನು ರಕ್ಷಿಸಿದನೆಂದು” ಜನರಿಗೆಲ್ಲಾ ತಿಳಿಸಿರಿ.
21 ಯೆಹೋವನು ತನ್ನ ಜನರನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದನು.
ಜನರು ಬಾಯಾರಲಿಲ್ಲ;
ಯಾಕೆಂದರೆ ಆತನು ಬಂಡೆಯಿಂದ ನೀರು ಹರಿಯುಂತೆ ಮಾಡಿದನು.
ಆತನು ಬಂಡೆಯನ್ನು ಇಬ್ಭಾಗ ಮಾಡಿದಾಗ ನೀರು ಅದರೊಳಗಿಂದ ಹರಿಯಿತು.
22 ಆದರೆ ಯೆಹೋವನು ಹೇಳುವುದೇನೆಂದರೆ,
“ದುಷ್ಟರಿಗೆ ಸಮಾಧಾನವೇ ಸಿಗದು.”
ಬಾಬಿಲೋನ್ ನಾಶವಾಯಿತು
18 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು. 2 ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು:
“ಅವಳು ನಾಶವಾದಳು!
ಬಾಬಿಲೋನೆಂಬ ಮಹಾನಗರಿಯು ನಾಶವಾದಳು!
ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು,
ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು,
ಅಶುದ್ಧವಾದ ಮತ್ತು ಅಸಹ್ಯವಾದ
ಸಕಲ ಹಕ್ಕಿಗಳಿಗೆ ಆಶ್ರಯವಾದಳು.”
3 ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು.
ಭೂಲೋಕದ ರಾಜರುಗಳೆಲ್ಲ ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು.
ಭೂಲೋಕದ ವರ್ತಕರು ಅವಳ ಅತಿಯಾದ ಸುಖದಿಂದ ಶ್ರೀಮಂತರಾದರು.
4 ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು:
“ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ.
ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ;
ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.
5 ಆ ನಗರಿಯ ಪಾಪಗಳು ಪರಲೋಕವನ್ನು ಮುಟ್ಟುವಂತೆ ಬೆಳೆದುನಿಂತಿವೆ.
ಅವಳು ಮಾಡಿದ ಕೆಟ್ಟಕಾರ್ಯಗಳನ್ನು ದೇವರು ಮರೆತಿಲ್ಲ.
6 ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ.
ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ.
ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ
ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.
7 ಅವಳು ತನ್ನನ್ನು ಘನಪಡಿಸಿಕೊಂಡು ವೈಭವದಿಂದ ಜೀವಿಸಿದಳು.
ಆದ್ದರಿಂದ ಅದಕ್ಕೆ ತಕ್ಕಂತೆ ಸಂಕಟವನ್ನೂ ದುಃಖವನ್ನೂ ಅವಳಿಗೆ ಬರಮಾಡಿರಿ.
‘ನಾನು ನನ್ನ ಸಿಂಹಾಸನದ ಮೇಲೆ ಕುಳಿತಿರುವ ರಾಣಿ.
ನಾನು ವಿಧವೆಯಲ್ಲ,
ನಾನು ಎಂದೆಂದಿಗೂ ದುಃಖಿಸುವುದಿಲ್ಲ’ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ.
8 ಆದ್ದರಿಂದ ಅವಳಿಗೆ ಮರಣ, ಗೋಳಾಟ,
ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ.
ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು
ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.”
9 ಅವಳೊಂದಿಗೆ ಲೈಂಗಿಕ ಪಾಪಮಾಡಿ ಅವಳ ಸಂಪತ್ತಿನಲ್ಲಿ ಪಾಲುಗಾರರಾದ ಲೋಕದ ರಾಜರುಗಳು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾರೆ. ಅವಳು ಸಾಯುತ್ತಿರುವುದನ್ನು ಕಂಡು ರಾಜರುಗಳು ಗೋಳಾಡುವರು ಮತ್ತು ದುಃಖಿಸುವರು. 10 ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು:
‘ಅಯ್ಯೋ, ಅಯ್ಯೋ, ಮಹಾನಗರಿಯೇ,
ಬಲಿಷ್ಠವಾದ ಬಾಬಿಲೋನ್ ಪಟ್ಟಣವೇ,
ಒಂದೇ ಗಳಿಗೆಯಲ್ಲಿ ನಿನಗೆ ದಂಡನೆ ಆಯಿತಲ್ಲಾ!’
11 “ಭೂಲೋಕದ ವರ್ತಕರು ಬಾಬಿಲೋನಿನ ವಿಷಯದಲ್ಲಿ ಗೋಳಾಡುವರು ಮತ್ತು ದುಃಖಿಸುವರು. ಅವರು ಮಾರುವ ವಸ್ತುಗಳನ್ನು ಕೊಂಡುಕೊಳ್ಳಲು ಯಾರೂ ಇಲ್ಲದಿರುವುದರಿಂದ ಅವರು ದುಃಖಿಸುವರು. 12 ಅವರು ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರ ವರ್ಣದ ವಸ್ತ್ರ, ರೇಷ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ದಂತದಿಂದ ಮಾಡಿದ ನಾನಾ ಬಗೆಯ ವಸ್ತುಗಳು, ಬಹು ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ ಇವುಗಳನ್ನು ಮಾರುತ್ತಾರೆ. 13 ಆ ವರ್ತಕರು ದಾಲ್ಚಿನ್ನಿ, ಸಾಂಬಾರ ಪದಾರ್ಥಗಳು, ಧೂಪ, ಪರಿಮಳತೈಲ, ಸಾಂಬ್ರಾಣಿ, ದ್ರಾಕ್ಷಾರಸ ಮತ್ತು ಆಲಿವ್‌ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು, ಕುರಿ, ಕುದುರೆಗಳು, ರಥಗಳು, ಗುಲಾಮರು ಮತ್ತು ಮಾನವ ಪ್ರಾಣಗಳನ್ನು ಮಾರುತ್ತಾರೆ. ವರ್ತಕರು ಅಳುತ್ತಾ ಹೀಗೆ ಹೇಳುವರು:
14 ‘ಬಾಬಿಲೋನೇ, ನೀನು ಅಪೇಕ್ಷಿಸಿದ ಉತ್ತಮ ವಸ್ತುಗಳೆಲ್ಲವೂ ನಿನ್ನಿಂದ ಹೋಗಿಬಿಟ್ಟವು.
ನಿನ್ನಲ್ಲಿದ್ದ ಶ್ರೀಮಂತಿಕೆಯ ಮತ್ತು ಅಲಂಕಾರಿಕ ವಸ್ತುಗಳೆಲ್ಲ ಅದೃಶ್ಯವಾಗಿಬಿಟ್ಟವು.
ಅವುಗಳನ್ನು ಮತ್ತೆ ನೀನೆಂದಿಗೂ ಪಡೆಯುವುದಿಲ್ಲ.’
15 “ಆ ವರ್ತಕರು ಅವಳ ಯಾತನೆಯನ್ನು ಕಂಡು ಭಯದಿಂದ ಅವಳಿಂದ ಬಹುದೂರದಲ್ಲಿ ನಿಂತುಕೊಳ್ಳುವರು. ಆ ವಸ್ತುಗಳನ್ನು ಅವಳಿಗೆ ಮಾರಿ ಶ್ರೀಮಂತರಾದ ವರ್ತಕರು ಇವರೇ. 16 ಅವರು ದುಃಖದಿಂದ ಗೋಳಾಡುತ್ತಾ ಹೀಗೆನ್ನುವರು:
‘ಅಯ್ಯೋ, ಅಯ್ಯೋ, ಮಹಾನಗರಿಯೇ!
ಅವಳು ನಯವಾದ ನಾರುಮಡಿಯನ್ನು,
ಧೂಮ್ರವರ್ಣದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು.
ಅವಳು ಚಿನ್ನ, ರತ್ನ, ಮುತ್ತುಗಳಿಂದ ಶೋಭಿಸುತ್ತಿದ್ದಳು!
17 ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’
“ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು 18 ಬಾಬಿಲೋನಿನ ದಹನದಿಂದೇರುತ್ತಿದ್ದ ಹೊಗೆಯನ್ನು ನೋಡಿ ಅವರು ಗಟ್ಟಿಯಾದ ಧ್ವನಿಯಲ್ಲಿ, ‘ಈ ಮಹಾನಗರಿಯಂತಹ ನಗರವು ಇರಲೇ ಇಲ್ಲ!’ ಎಂದು ಹೇಳಿದರು. 19 ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು:
‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು!
ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು!
ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!
20 ಪರಲೋಕವೇ, ಇದರಿಂದ ನೀನೂ ಸಂತೋಷಪಡು!
ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ!
ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”
21 ನಂತರ ಬಲಿಷ್ಠನಾದ ದೇವದೂತನೊಬ್ಬನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಸುವ ಕಲ್ಲಿನಂತಿತ್ತು. ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ಎಸೆದು ಹೀಗೆ ಹೇಳಿದನು:
“ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಕೆಳಕ್ಕೆ ಎಸೆಯಲ್ಪಡುವುದು.
ಆ ನಗರಿಯು ಮತ್ತೆಂದಿಗೂ ಕಾಣಿಸುವುದಿಲ್ಲ.
22 ಹಾರ್ಪ್ ಮುಂತಾದ ವಾದ್ಯಗಳನ್ನು ನುಡಿಸುವ ಜನರ ಸಂಗೀತವು, ಕೊಳಲು ಮತ್ತು ತುತೂರಿಗಳನ್ನು ನುಡಿಸುವ ಜನರ ಸಂಗೀತವು
ನಿನ್ನಲ್ಲಿ ಇನ್ನೆಂದಿಗೂ ಕೇಳಿಬರುವುದಿಲ್ಲ.
ಕುಶಲಕರ್ಮಿಗಳಾರೂ ನಿನ್ನಲ್ಲಿ ಸಿಕ್ಕುವುದಿಲ್ಲ.
ಬೀಸುವ ಕಲ್ಲಿನ ಶಬ್ದವು ಇನ್ನೆಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ.
23 ದೀಪದ ಬೆಳಕು ಇನ್ನೆಂದಿಗೂ
ನಿನ್ನಲ್ಲಿ ಪ್ರಕಾಶಿಸುವುದಿಲ್ಲ.
ವಧೂವರರ ಧ್ವನಿಯು ಇನ್ನೆಂದಿಗೂ
ನಿನ್ನಲ್ಲಿ ಕೇಳಿಬರುವುದಿಲ್ಲ.
ನಿನ್ನ ವರ್ತಕರು ಪ್ರಪಂಚದ ಮಹಾಪುರುಷರಾಗಿದ್ದರು.
ನಿನ್ನ ಮಾಟದಿಂದ ಎಲ್ಲಾ ಜನಾಂಗಗಳೂ ಮರುಳಾದರು.
24 ಅವಳು ಪ್ರವಾದಿಗಳ, ದೇವರ ಪರಿಶುದ್ಧಜನರ
ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವನ್ನು ಸುರಿಸಿ ಅಪರಾಧಿಯಾದಳು.”
Kannada Holy Bible: Easy-to-Read Version. All rights reserved. © 1997 Bible League International