Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 20

ಯುದ್ಧ ಕ್ರಮಗಳು

20 “ನೀವು ನಿಮಗಿಂತ ಬಲಿಷ್ಠರಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಗಿಂತಲೂ ಹೆಚ್ಚಾದ ಸೈನ್ಯಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ತಂದವನು ಆತನೇ.

“ನೀವು ಯುದ್ಧಕ್ಕೆ ಹೊರಟುನಿಂತಾಗ ಯಾಜಕನು ಸೈನಿಕರ ಬಳಿಗೆ ಹೋಗಿ ಹೀಗೆ ಹೇಳಬೇಕು: ‘ಇಸ್ರೇಲ್ ಜನರೇ, ನನ್ನ ಮಾತನ್ನು ಆಲಿಸಿರಿ. ಈ ದಿವಸ ನಿಮ್ಮ ವೈರಿಗಳೊಂದಿಗೆ ಕಾದಾಡಲು ಹೋಗುತ್ತಿದ್ದೀರಿ. ನೀವು ಅಧೈರ್ಯಗೊಳ್ಳಬೇಡಿರಿ. ಗಲಿಬಿಲಿಗೆ ಸಿಕ್ಕಿಕೊಳ್ಳಬೇಡಿ; ವೈರಿಗಳಿಗೆ ಭಯಪಡಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ಹೋಗುವನು. ವೈರಿಗಳೊಂದಿಗೆ ಯುದ್ಧಮಾಡಲು ಆತನು ನಿಮಗೆ ಸಹಾಯ ಮಾಡುವನು ಮತ್ತು ನಿಮಗೆ ಜಯವನ್ನು ಕೊಡುವನು.’

“ಆ ಲೇವಿಯ ಅಧಿಕಾರಿಗಳು ಸೈನಿಕರಿಗೆ, ‘ನಿಮ್ಮಲ್ಲಿ ಯಾರಾದರೂ ಹೊಸಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿರದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನೆಗೆ ಸೇರಿಕೊಳ್ಳಬಹುದು. ನಿಮ್ಮಲ್ಲಿ ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಫಲವನ್ನು ಕೂಡಿಸಿಲ್ಲದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನು ರಣರಂಗದಲ್ಲಿ ಮಡಿದರೆ ಅವನ ದ್ರಾಕ್ಷಿತೋಟದ ಫಲಗಳು ಬೇರೊಬ್ಬನ ಪಾಲಾಗುವುದು. ನಿಮ್ಮಲ್ಲಿ ಯಾರಾದರೂ ಮದುವೆಯಾಗಲು ಹೆಣ್ಣನ್ನು ನಿಶ್ಚಯಿಸಿದ್ದರೆ ಅವನು ತನ್ನ ಮನೆಗೆ ಹಿಂತಿರುಗಿಹೋಗಲಿ; ಯಾಕೆಂದರೆ ಅವನು ರಣರಂಗದಲ್ಲಿ ಮಡಿದರೆ ಅವನಿಗೆ ನಿಶ್ಚಯವಾದ ಹೆಣ್ಣನ್ನು ಇನ್ನೊಬ್ಬನು ಮದುವೆ ಮಾಡಿಕೊಳ್ಳಬಹುದು’ ಎಂದು ಹೇಳುವರು.

“ಆ ಲೇವಿಯ ಅಧಿಕಾರಿಗಳು ಹೇಳಬೇಕಾದದ್ದೇನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನಿಂದಾಗಿ ಇತರ ಸೈನಿಕರೂ ತಮ್ಮ ಧೈರ್ಯವನ್ನು ಕಳೆದುಕೊಳ್ಳಬಹುದು.’ ಲೇವಿಯ ಅಧಿಕಾರಿಗಳು ಸೈನಿಕರೊಂದಿಗೆ ಮಾತಾಡುವುದನ್ನು ನಿಲ್ಲಿಸಿದ ಬಳಿಕ ಅವರು ತಮಗೆ ಸೈನ್ಯಾಧಿಕಾರಿಗಳನ್ನು ನೇಮಿಸಬೇಕು.

10 “ನೀವು ಒಂದು ಪಟ್ಟಣವನ್ನು ಆಕ್ರಮಿಸಲು ಹೋದಾಗ, ಅಲ್ಲಿಯ ಜನರಿಗೆ ‘ಶಾಂತಿಸಂಧಾನಕ್ಕೆ’ ಕರೆಯನ್ನು ಕೊಡಬೇಕು. 11 ಅವರು ನಿಮ್ಮ ಸಂಧಾನವನ್ನು ಸ್ವೀಕರಿಸಿ ನಿಮಗೆ ತಮ್ಮ ಬಾಗಿಲುಗಳನ್ನು ತೆರೆದುಕೊಟ್ಟರೆ ಆ ಪಟ್ಟಣದಲ್ಲಿರುವವರೆಲ್ಲರೂ ನಿಮಗೆ ಗುಲಾಮರಾಗುವರು. ಅವರು ನಿಮ್ಮ ಕೆಲಸಗಳನ್ನು ಮಾಡಲೇಬೇಕು. 12 ಆದರೆ ಆ ಪಟ್ಟಣದವರು ನಿಮ್ಮೊಂದಿಗೆ ಶಾಂತಿಸಂಧಾನ ಮಾಡಲು ಒಪ್ಪದಿದ್ದರೆ ಮತ್ತು ನಿಮ್ಮೊಂದಿಗೆ ಕಾದಾಡಲು ಬಂದರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು. 13 ನಿಮ್ಮ ದೇವರಾದ ಯೆಹೋವನು ಆ ಪಟ್ಟಣವನ್ನು ಸ್ವಾಧೀನ ಮಾಡಲು ಸಹಾಯಮಾಡಿದಾಗ ನೀವು ಆ ಪಟ್ಟಣದೊಳಗಿದ್ದ ಗಂಡಸರನ್ನೆಲ್ಲಾ ಕೊಂದುಬಿಡಬೇಕು. 14 ಹೆಂಗಸರನ್ನು, ಮಕ್ಕಳನ್ನು, ದನಕುರಿಗಳನ್ನು ಮತ್ತು ಪಟ್ಟಣದೊಳಗಿದ್ದವುಗಳನ್ನೆಲ್ಲಾ ನಿಮ್ಮ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ಅವುಗಳನ್ನು ನಿಮಗೆ ಕೊಟ್ಟಿದ್ದಾನೆ. 15 ನಿಮ್ಮಿಂದ ಬಹುದೂರವಿರುವ ಪಟ್ಟಣಗಳಿಗೆ ಅಂದರೆ ನೀವು ವಾಸಿಸಲಿರುವ ದೇಶದಿಂದ ದೂರವಿರುವ ಪಟ್ಟಣಗಳಿಗೆ ನೀವು ಆ ರೀತಿಯಾಗಿ ಮಾಡಬೇಕು.

16 “ಆದರೆ ನಿಮಗೆ ವಾಗ್ದಾನ ಮಾಡಿದ ದೇಶದ ಪಟ್ಟಣಗಳನ್ನು ಸ್ವಾಧೀನ ಮಾಡುವಾಗ ನೀವು ಪಟ್ಟಣದಲ್ಲಿರುವವರೆಲ್ಲರನ್ನು ಕೊಲ್ಲಬೇಕು. 17 ನೀವು ಹಿತ್ತಿಯರನ್ನು, ಅಮೋರಿಯರನ್ನು, ಕಾನಾನ್ಯರನ್ನು, ಪೆರಿಜ್ಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ಸಂಪೂರ್ಣವಾಗಿ ಹತ್ಯೆ ಮಾಡಬೇಕು. ಇದು ನಿಮ್ಮ ದೇವರಾದ ಯೆಹೋವನ ಅಪ್ಪಣೆ. 18 ಯಾಕೆಂದರೆ ಆಗ ಅವರು ನಿಮ್ಮ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ; ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಮಾಡುವ ಭಯಂಕರ ಕೃತ್ಯಗಳನ್ನು ಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ.

19 “ನೀವು ಒಂದು ಪಟ್ಟಣವನ್ನು ಬಹುಕಾಲದಿಂದ ಮುತ್ತಿಗೆ ಹಾಕಿದರೆ ಸುತ್ತಮುತ್ತಲಿರುವ ಮರಗಳನ್ನು ಕಡಿದುಹಾಕಬಾರದು. ಅವುಗಳ ಫಲಗಳನ್ನು ತಿನ್ನಬಹುದು; ಆದರೆ ಕಡಿಯಬಾರದು. ಅವು ನಿಮ್ಮ ವೈರಿಗಳಲ್ಲವಲ್ಲಾ? ಅವು ನಿಮ್ಮೊಂದಿಗೆ ಯುದ್ಧ ಮಾಡುವುದಿಲ್ಲವಲ್ಲಾ? 20 ಹಣ್ಣುಗಳನ್ನು ಕೊಡದ ಮರಗಳನ್ನು ಕಡಿಯಬಹುದು. ಆ ಮರಗಳಿಂದ ಆಯುಧಗಳನ್ನು ತಯಾರಿಸಿ[a] ಆ ಪಟ್ಟಣದ ಜನರೊಂದಿಗೆ ಯುದ್ಧ ಮಾಡಬಹುದು. ಆ ಪಟ್ಟಣವು ನಿಮ್ಮ ಕೈವಶವಾಗುವ ತನಕ ನೀವು ಅದನ್ನು ಉಪಯೋಗಿಸಬಹುದು.

ಕೀರ್ತನೆಗಳು 107

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
    ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
ಅವರು ಹಸಿವೆಯಿಂದಲೂ
    ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
    ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನು ಬಾಯರಿದವರನ್ನು ನೀರಿನಿಂದಲೂ
    ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.

10 ದೇವಜನರಲ್ಲಿ ಕೆಲವರು ಸೆರೆಯಾಳುಗಳಾಗಿದ್ದರು;
    ಕಾರ್ಗತ್ತಲೆಯ ಸೆರೆಮನೆಗಳಲ್ಲಿ ಬಂಧಿತರಾಗಿದ್ದರು.
11 ಯಾಕೆಂದರೆ ಅವರು ಯೆಹೋವನ ಆಜ್ಞೆಗಳಿಗೆ ವಿರೋಧವಾಗಿ ದಂಗೆ ಎದ್ದರು.
    ಮಹೋನ್ನತನಾದ ದೇವರ ಉಪದೇಶವನ್ನು ತಿರಸ್ಕರಿಸಿದರು.
12 ಅವರ ಕಾರ್ಯಗಳ ನಿಮಿತ್ತವೇ
    ದೇವರು ಅವರ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿದನು.
ಅವರು ಎಡವಿಬಿದ್ದರು,
    ಅವರಿಗೆ ಸಹಾಯಮಾಡಲು ಯಾರೂ ಇರಲಲ್ಲ.
13 ಅವರು ಆಪತ್ತಿನಲ್ಲಿದ್ದಾಗ ಯೆಹೋವನಿಗೆ ಮೊರೆಯಿಟ್ಟರು.
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
14 ಆತನು ಅವರನ್ನು ಕಾರ್ಗತ್ತಲೆಯ ಸೆರೆಮನೆಗಳಿಂದ ಹೊರತಂದನು;
    ಕಟ್ಟಿದ ಹಗ್ಗಗಳನ್ನು ಕಿತ್ತುಹಾಕಿದನು.
15 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
16 ನಮ್ಮ ಶತ್ರುಗಳನ್ನು ಸೋಲಿಸಲು ದೇವರು ನಮಗೆ ಸಹಾಯಮಾಡುವನು.
    ಅವರ ತಾಮ್ರದ ಬಾಗಿಲುಗಳನ್ನು ಆತನು ಮುರಿದುಹಾಕಬಲ್ಲನು.
    ಅವರ ಬಾಗಿಲುಗಳ ಮೇಲಿರುವ ಕಬ್ಬಿಣದ ಸರಳುಗಳನ್ನು ಆತನು ನುಚ್ಚುನೂರು ಮಾಡಬಲ್ಲನು.

17 ಕೆಲವರು ತಮ್ಮ ಪಾಪಗಳಿಂದಲೂ
    ದೋಷಗಳಿಂದಲೂ ಮೂಢರಾದರು.
18 ಆ ಜನರು ಊಟವನ್ನು ನಿರಾಕರಿಸಿದ್ದರಿಂದ
    ಮರಣಾವಸ್ಥೆಗೆ ಬಂದರು.
19 ಅವರು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟರು.
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
20 ಆತನು ಆಜ್ಞಾಪಿಸಲು ಜನರು ಗುಣಹೊಂದಿದರು.
    ಸಮಾಧಿಯಿಂದ ತಪ್ಪಿಸಿಕೊಂಡರು.
21 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
22 ಯೆಹೋವನ ಕಾರ್ಯಗಳಿಗೆ ಕೃತಜ್ಞತಾ ಯಜ್ಞಗಳನ್ನು ಅರ್ಪಿಸಿರಿ.
    ಆತನ ಕಾರ್ಯಗಳ ಬಗ್ಗೆ ಹರ್ಷದಿಂದ ತಿಳಿಸಿರಿ.

23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
    ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
    ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
    ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
    ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27     ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
    ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
    ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
    ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
    ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.

33 ಆತನು ನದಿಗಳನ್ನು ಮರಳುಗಾಡನ್ನಾಗಿ ಮಾರ್ಪಡಿಸಿದನು;
    ಹರಿಯುವ ಒರತೆಗಳನ್ನು ತಡೆದು ನಿಲ್ಲಿಸಿದನು.
34 ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು,
    ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.
35 ಆತನು ಮರಳುಗಾಡನ್ನು ಸರೋವರಗಳುಳ್ಳ ನಾಡನ್ನಾಗಿ ಪರಿವರ್ತಿಸಿದನು;
    ಒಣನೆಲದಿಂದ ನೀರಿನ ಒರತೆಗಳನ್ನು ಹರಿಯಮಾಡಿದನು.
36 ಆತನು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದನು.
    ಅವರು ಅಲ್ಲಿ ನೆಲೆಸಿ ಪಟ್ಟಣವನ್ನು ಕಟ್ಟಿದರು.
37 ಅವರು ಹೊಲಗಳಲ್ಲಿ ಬೀಜ ಬಿತ್ತಿ
    ತೋಟಗಳಲ್ಲಿ ದ್ರಾಕ್ಷಾಲತೆಗಳನ್ನು ನೆಟ್ಟು ಒಳ್ಳೆಯ ಸುಗ್ಗಿಗಳನ್ನು ಪಡೆದರು.
38 ಆತನ ಆಶೀರ್ವಾದದಿಂದ ಅವರ ಕುಟುಂಬಗಳು ವೃದ್ಧಿಯಾದವು.
    ಅವರ ಪಶುಗಳು ಅಸಂಖ್ಯಾತಗೊಂಡವು.
39 ವಿಪತ್ತುಗಳಿಂದಲೂ ತೊಂದರೆಗಳಿಂದಲೂ
    ಅವರ ಕುಟುಂಬಗಳು ಚಿಕ್ಕದಾಗಿದ್ದವು; ಬಲಹೀನವಾಗಿದ್ದವು.
40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು;
    ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.
41 ಬಳಿಕ ಆತನು ದೀನರನ್ನು ಅವರ ಸಂಕಟದಿಂದ ಬಿಡಿಸಿದನು.
    ಈಗ ಅವರ ಕುಟುಂಬಗಳು ಕುರಿಮಂದೆಗಳಂತೆ ದೊಡ್ಡದಾದವು.
42 ಒಳ್ಳೆಯವರು ಇದನ್ನು ಕಂಡು ಸಂತೋಷಪಡುವರು.
    ದುಷ್ಟರು ಇದನ್ನು ಕಂಡು ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
    ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.

ಯೆಶಾಯ 47

ಬಾಬಿಲೋನಿಗೆ ದೇವರ ಸಂದೇಶ

47 “ಕನ್ನಿಕೆಯೇ, ಬಾಬಿಲೋನಿನ ಕುಮಾರಿಯೇ
    ಕೆಳಕ್ಕಿಳಿದು ಧೂಳಿನ ಮೇಲೆ ಕುಳಿತಿಕೊ.
ಕಸ್ದೀಯರ ಕುಮಾರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೊ!
    ಈಗ ನೀನು ಯಜಮಾನಿಯಲ್ಲ.
ನೀನು ಕೋಮಲವಾದ ತರುಣಿ ಎಂದು ಜನರು ನಿನ್ನ ಬಗ್ಗೆ ಹೇಳುವದಿಲ್ಲ.
ಈಗ ನೀನು ದಾಸಿಯಾಗಿ ಕೆಲಸ ಮಾಡಬೇಕು.
    ನಿನ್ನ ಮನೋಹರವಾದ ಉಡುಪನ್ನು ತೆಗೆದುಹಾಕು.
ಬೀಸುವ ಕಲ್ಲನ್ನು ತೆಗೆದುಕೊಂಡು
    ಧಾನ್ಯವನ್ನು ಬೀಸು.
ಜನರು ನಿನ್ನ ತೊಡೆಗಳನ್ನು ನೋಡುವ ತನಕ
    ನಿನ್ನ ಉಡುಪನ್ನು ಎತ್ತಿ ಹೊಳೆಯನ್ನು ದಾಟು.
    ನಿನ್ನ ದೇಶವನ್ನು ಬಿಟ್ಟುಹೋಗು.
ಪುರುಷರು ನಿನ್ನ ಶರೀರವನ್ನು ನೋಡಿ
    ನಿನ್ನೊಂದಿಗೆ ಸಂಭೋಗಿಸುವರು.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನೀನು ಶಿಕ್ಷಿಸಲ್ಪಡುವೆ.
    ಯಾರೂ ನಿನಗೆ ಸಹಾಯಮಾಡಲು ಬರುವದಿಲ್ಲ.

“‘ದೇವರು ನಮ್ಮನ್ನು ರಕ್ಷಿಸುವನು.
    ಆತನ ಹೆಸರು ಸರ್ವಶಕ್ತನಾದ ಯೆಹೋವನು; ಇಸ್ರೇಲರ ಪರಿಶುದ್ಧನೆಂಬುದೇ ಆತನ ಹೆಸರು’
ಎಂದು ನನ್ನ ಜನರು ಹೇಳುವರು.”

“ಆದ್ದರಿಂದ ಬಾಬಿಲೋನೇ, ಅಲ್ಲಿ ಸುಮ್ಮನೆ ಕುಳಿತಿರು.
ಕಸ್ದೀಯರ ಕುಮಾರಿಯೇ ಕತ್ತಲೆಯೊಳಗೆ ಹೋಗಿ ಇರು,
    ಯಾಕೆಂದರೆ ನೀನು ‘ಜನಾಂಗಗಳ ರಾಣಿ’ ಎಂದು ಇನ್ನು ಮುಂದೆ ಕರೆಯಲ್ಪಡುವದಿಲ್ಲ.

“ನನ್ನ ಜನರ ಮೇಲೆ ನಾನು ಸಿಟ್ಟಿಗೆದ್ದಿದ್ದೆನು.
    ಅವರು ನನಗೆ ಸೇರಿದವರಾಗಿದ್ದಾರೆ.
    ಆದರೆ ನಾನು ಅವರ ಮೇಲೆ ಸಿಟ್ಟಾದೆನು.
ಆದ್ದರಿಂದ ನಾನು ಅವರನ್ನು ತಳ್ಳಿಬಿಟ್ಟೆನು.
    ಅವರನ್ನು ನಿನಗೆ ಕೊಟ್ಟೆನು;
ನೀನು ಅವರನ್ನು ಶಿಕ್ಷಿಸಿದೆ.
    ಅವರ ಮೇಲೆ ಕರುಣೆ ತೋರಿಸಲಿಲ್ಲ.
ವೃದ್ಧರೂ ಕಷ್ಟದ ಕೆಲಸ ಮಾಡುವಂತೆ ಮಾಡಿದೆ.
‘ನಾನು ನಿತ್ಯಕಾಲಕ್ಕೂ ವಾಸಿಸುತ್ತೇನೆ.
    ನಾನು ಯಾವಾಗಲೂ ರಾಣಿಯಾಗಿಯೇ ಇರುವೆನು’ ಎಂದು ನೀನು ಹೇಳುವೆ.
ಅವರಿಗೆ ನೀನು ಮಾಡಿದ ದುಷ್ಟಕ್ರಿಯೆಗಳನ್ನು ನೀನು ಗಮನಿಸಲೇ ಇಲ್ಲ.
    ಅದರ ಪರಿಣಾಮವನ್ನು ನೀನು ಆಲೋಚಿಸಲೇ ಇಲ್ಲ.
ಆದ್ದರಿಂದ ‘ಕೋಮಲ ಸ್ತ್ರೀಯೇ,’ ನನ್ನ ಮಾತನ್ನು ಕೇಳು.
ಸುರಕ್ಷಿತಳಾಗಿರುವೆ ಎಂದು ನೆನಸಿಕೊಂಡು ಹೀಗೆ ನಿನ್ನೊಳಗೆ,
    ‘ನಾನೇ ಮಹಾವ್ಯಕ್ತಿ. ನನ್ನಂಥ ಮಹಾವ್ಯಕ್ತಿ ಯಾರೂ ಇಲ್ಲ.
    ನಾನೆಂದಿಗೂ ವಿಧವೆಯಾಗುವದಿಲ್ಲ. ಯಾವಾಗಲೂ ನನಗೆ ಮಕ್ಕಳಿರುವರು’ ಎಂದುಕೊಳ್ಳುವೆ.
ಒಂದೇ ದಿನದೊಳಗೆ, ಒಂದೇ ಕ್ಷಣದಲ್ಲಿ ನಿನಗೆ ಎರಡು ಸಂಗತಿಗಳು ಸಂಭವಿಸುತ್ತವೆ.
    ನೀನು ನಿನ್ನ ಮಕ್ಕಳನ್ನು ಕಳೆದುಕೊಳ್ಳುವೆ, ಆ ಬಳಿಕ ನೀನು ನಿನ್ನ ಗಂಡನನ್ನು ಕಳಕೊಳ್ಳುವೆ.
    ಹೌದು, ಈ ವಿಷಯಗಳು ನಿನಗೆ ಖಂಡಿತವಾಗಿ ಸಂಭವಿಸುವವು. ನಿನ್ನಲ್ಲಿರುವ ಎಲ್ಲಾ ಮಾಟಮಂತ್ರಗಳು ನಿನ್ನನ್ನು ಕಾಪಾಡಲಾರವು.
10 ನೀನು ದುಷ್ಕೃತ್ಯಗಳನ್ನು ಮಾಡುತ್ತಿರುವೆ, ಆದರೂ ನೀನು ಸುರಕ್ಷಿತಳಾಗಿದ್ದೇನೆ ಎಂದುಕೊಂಡಿರುವೆ.
    ‘ನಾನು ಮಾಡಿದ ದುಷ್ಕೃತ್ಯಗಳನ್ನು ಯಾರೂ ನೋಡುವದಿಲ್ಲ’ ಎಂದು ನೀನು ಭಾವಿಸಿಕೊಂಡಿರುವೆ.
    ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ಕಾಪಾಡುತ್ತವೆ ಎಂದು ತಿಳಿದುಕೊಂಡಿರುವೆ.
‘ನಾನೇ ಮಹಾವ್ಯಕ್ತಿ, ನನ್ನಂಥ ಮಹಾವ್ಯಕ್ತಿ ಬೇರೆ ಯಾರೂ ಇಲ್ಲ’ ಎಂದು ನೀನು ಅಂದುಕೊಳ್ಳುವೆ.

11 “ಆದರೆ ವಿಪತ್ತು ನಿನಗೆ ಪ್ರಾಪ್ತವಾಗುವದು.
    ಅವು ಯಾವಾಗ ಸಂಭವಿಸುತ್ತದೋ ನಿನಗೆ ತಿಳಿಯದು.
    ಆದರೆ ವಿಪತ್ತು ಸಂಭವಿಸುವದು.
    ನೀನು ಏನೇ ಮಾಡಿದರೂ ಆ ವಿಪತ್ತನ್ನು ತಡೆಯಲಾಗದು.
12 ಮಾಟಮಂತ್ರಗಳನ್ನು ಕಲಿತುಕೊಳ್ಳುವುದರಲ್ಲೇ
    ನಿನ್ನ ಜೀವಮಾನವನ್ನು ಕಳೆದಿರುವೆ.
ಸರಿ, ತಂತ್ರಮಂತ್ರಗಳನ್ನು ಮಾಡಲು ಪ್ರಾರಂಭಿಸು.
    ಒಂದುವೇಳೆ ಅವು ನಿನಗೆ ಸಹಾಯ ಮಾಡಬಹುದು.
    ಒಂದುವೇಳೆ ಕೆಲವರನ್ನು ನೀನು ಭಯಪಡಿಸಬಹುದು.
13 ನಿನಗೆ ಅನೇಕಾನೇಕ ಸಲಹೆಗಾರರಿದ್ದಾರೆ.
    ಅವರು ನಿನಗೆ ಕೊಡುವ ಸಲಹೆಗಳಿಂದ ನೀನು ಬೇಸರಗೊಂಡಿರುವಿಯಾ?
ಹಾಗಾದರೆ ನಿನ್ನಲ್ಲಿರುವ ಖಗೋಳಶಾಸ್ತ್ರಜ್ಞರನ್ನು ಕರೆಯಿಸು.
    ತಿಂಗಳು ಯಾವಾಗ ಪ್ರಾರಂಭವಾಗುತ್ತದೆಯೆಂದು ಅವರು ಹೇಳಬಲ್ಲರು.
    ನಿನ್ನ ಸಂಕಟಗಳು ಯಾವಾಗ ಪ್ರಾಪ್ತವಾಗುತ್ತವೆಯೆಂದು ಅವರು ನಿನಗೆ ತಿಳಿಸಬಲ್ಲರು.
14 ಆದರೆ ಆ ಮನುಷ್ಯರಿಗೆ ತಮ್ಮನ್ನೇ ರಕ್ಷಿಸಲು ಅಸಾಧ್ಯವಾಗುವದು.
    ಅವರು ಹುಲ್ಲಿನಂತೆ ಸುಟ್ಟುಹೋಗುವರು.
    ರೊಟ್ಟಿಸುಡಲು ಕೆಂಡಗಳು ಕಾಣಿಸದಂತೆಯೂ ಚಳಿ ಕಾಯಿಸಿಕೊಳ್ಳಲು ಬೆಂಕಿ ಇರದಂತೆಯೂ ಅವರು ಕ್ಷಣಕಾಲದಲ್ಲಿ ಸುಟ್ಟುಹೋಗುವರು.
15 ನೀನು ಕಷ್ಟಪಟ್ಟು ಗಳಿಸಿದ ಸಂಪತ್ತಿಗೆಲ್ಲಾ ಹಾಗೆಯೇ ಆಗುವದು.
    ನಿನ್ನ ಜೀವಮಾನ ಕಾಲವೆಲ್ಲಾ ವ್ಯವಹಾರ ನಡಿಸಿದ್ದ ಜನರೆಲ್ಲಾ ನಿನ್ನನ್ನು ತೊರೆದುಬಿಡುವರು.
ಪ್ರತಿಯೊಬ್ಬನು ತನ್ನ ಸ್ವಂತದಾರಿ ಹಿಡಿಯುವನು.
    ಆಗ ನಿನ್ನನ್ನು ರಕ್ಷಿಸಲು ಯಾರೂ ಇರುವದಿಲ್ಲ.”

ಪ್ರಕಟನೆ 17

ಮೃಗದ ಮೇಲಿದ್ದ ಸ್ತ್ರೀ

17 ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿದನು. ಏಳು ಪಾತ್ರೆಗಳನ್ನು ಹೊಂದಿದ್ದವರಲ್ಲಿ ಇವನೂ ಒಬ್ಬನಾಗಿದ್ದನು. ಆ ದೇವದೂತನು, “ಬಾ, ಪ್ರಸಿದ್ಧಳಾದ ವೇಶ್ಯಾಸ್ತ್ರೀಗೆ ನೀಡುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಬಹಳ ನೀರುಗಳ ಮೇಲೆ ಕುಳಿತುಕೊಂಡಿರುವವಳು ಅವಳೇ. ಲೋಕದ ರಾಜರುಗಳು ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು. ಲೋಕದ ಜನರು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ಹೇಳಿದನು.

ಬಳಿಕ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರಳುಗಾಡಿಗೆ ಹೋದನು. ಅಲ್ಲಿ ಒಬ್ಬ ಸ್ತ್ರೀಯು ಕೆಂಪು ಮೃಗದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ಬರೆದಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರ ವರ್ಣದ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದಳು. ಅವಳು ತಾನು ತೊಟ್ಟಿದ್ದ ಚಿನ್ನ, ರತ್ನ, ಮುತ್ತು, ಮುಂತಾದವುಗಳಿಂದ ಪ್ರಕಾಶಿಸುತ್ತಿದ್ದಳು. ಅವಳು ತನ್ನ ಕೈಯಲ್ಲಿ ಚಿನ್ನದ ಬಟ್ಟಲನ್ನು ಹಿಡಿದಿದ್ದಳು. ಆ ಬಟ್ಟಲು ಅಸಹ್ಯವಾದವುಗಳಿಂದ ಮತ್ತು ಅವಳ ಲೈಂಗಿಕ ಪಾಪಗಳ ಅಶುದ್ಧತೆಯಿಂದ ತುಂಬಿಹೋಗಿತ್ತು. ಅವಳ ಹಣೆಯ ಮೇಲೆ ಒಂದು ಬರಹವನ್ನು ಬರೆದಿತ್ತು. ಆ ಬರಹಕ್ಕೆ ಗೂಢಾರ್ಥವಿತ್ತು. ಅಲ್ಲಿ ಬರೆದಿದ್ದುದು ಹೀಗಿತ್ತು:

ಬಾಬಿಲೋನ್ ಎಂಬ ಮಹಾನಗರಿಯು

ಭೂಮಿಯಲ್ಲಿರುವ ಕೆಟ್ಟಕಾರ್ಯಗಳಿಗೆ

ಮತ್ತು ಜಾರಸ್ತ್ರೀಯರಿಗೆ ತಾಯಿ.

ಆ ಸ್ತ್ರೀಯು ಕುಡಿದು ಮತ್ತಳಾಗಿರುವುದನ್ನು ನಾನು ನೋಡಿದೆನು. ಅವಳು ದೇವರ ಪರಿಶುದ್ಧ ಜನರ ರಕ್ತವನ್ನು ಕುಡಿದು ಮತ್ತಳಾಗಿದ್ದಳು. ಯೇಸುವಿನಲ್ಲಿ ತಮಗಿರುವ ನಂಬಿಕೆಯ ಕುರಿತಾಗಿ ತಿಳಿಸಿದ ಜನರ ರಕ್ತವನ್ನು ಅವಳು ಕುಡಿದು ಮತ್ತಳಾಗಿದ್ದಳು.

ಆ ಸ್ತ್ರೀಯನ್ನು ನಾನು ನೋಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆಗ ದೇವದೂತನು ನನಗೆ, “ನೀನೇಕೆ ಆಶ್ಚರ್ಯಗೊಂಡೆ? ಈ ಸ್ತ್ರೀಯ ಗೂಢಾರ್ಥವನ್ನು ಮತ್ತು ಈಕೆ ಸವಾರಿ ಮಾಡುತ್ತಿರುವ ಏಳು ತಲೆಗಳನ್ನು ಮತ್ತು ಹತ್ತು ಕೊಂಬುಗಳನ್ನು ಹೊಂದಿರುವ ಮೃಗದ ಗೂಢಾರ್ಥವನ್ನು ನಾನು ನಿನಗೆ ಹೇಳುತ್ತೇನೆ. ನೀನು ನೋಡಿದ ಆ ಮೃಗವು ಒಂದು ಕಾಲದಲ್ಲಿ ಜೀವಿಸಿತ್ತು. ಆದರೆ ಈಗ ಆ ಮೃಗವು ಜೀವಂತವಾಗಿಲ್ಲ. ಆದರೆ ಆ ಮೃಗವು ತಳವಿಲ್ಲದ ಕೂಪದಿಂದ ಜೀವಂತವಾಗಿ ಮೇಲೆದ್ದುಬಂದು ನಾಶವಾಗು ವುದು. ಲೋಕದಲ್ಲಿ ಜೀವಿಸುತ್ತಿರುವ ಜನರು ಆ ಮೃಗವನ್ನು ನೋಡಿ, ಅದು ಒಂದು ಕಾಲದಲ್ಲಿ ಜೀವಂತವಾಗಿತ್ತು, ಈಗ ಇಲ್ಲ, ಆದರೆ ಮತ್ತೆ ಬರುವುದು ಎಂಬುದನ್ನು ತಿಳಿದು ಅವರು ಆಶ್ಚರ್ಯಪಡುವರು. ಲೋಕವು ಸೃಷ್ಟಿಯಾದಂದಿನಿಂದ ಜೀವಬಾಧ್ಯರ ಪುಸ್ತಕದಲ್ಲಿ ಈ ಜನರ ಹೆಸರುಗಳನ್ನು ಬರೆದೇ ಇಲ್ಲ.

“ಇದನ್ನು ಅರ್ಥಮಾಡಿಕೊಳ್ಳಲು ನಿನಗೆ ಬುದ್ಧಿ ಬೇಕು. ಆ ಮೃಗದ ಏಳು ತಲೆಗಳೇ ಆ ಸ್ತ್ರೀಯು ಕುಳಿತುಕೊಳ್ಳುವ ಏಳು ಬೆಟ್ಟಗಳಾಗಿವೆ. ಅವು ಏಳು ಮಂದಿ ರಾಜರುಗಳೂ ಆಗಿವೆ. 10 ಐದು ಮಂದಿ ರಾಜರುಗಳು ಈಗಾಗಲೇ ಸತ್ತಿದ್ದಾರೆ. ಒಬ್ಬ ರಾಜನು ಮಾತ್ರ ಈಗ ಜೀವಿಸಿದ್ದಾನೆ. ಕೊನೆಯ ರಾಜನು ಬರುತ್ತಾನೆ. ಅವನು ಬಂದು ಸ್ವಲ್ಪಕಾಲ ಮಾತ್ರ ಇರುತ್ತಾನೆ. 11 ಒಂದುಕಾಲದಲ್ಲಿ ಜೀವಿಸಿದ್ದು, ಆದರೆ ಈಗ ಜೀವಿಸಿಲ್ಲದ ಈ ಮೃಗವು ಎಂಟನೆಯ ರಾಜ. ಈ ಎಂಟನೆಯ ರಾಜನೂ ಮೊದಲ ಏಳು ರಾಜರುಗಳ ಗುಂಪಿಗೆ ಸೇರಿದವನು. ಅವನೂ ನಾಶವಾಗುತ್ತಾನೆ.

12 “ನೀನು ನೋಡಿದ ಹತ್ತು ಕೊಂಬುಗಳೇ ಹತ್ತು ರಾಜರುಗಳಾಗಿವೆ. ಈ ಹತ್ತು ರಾಜರುಗಳು ಇನ್ನೂ ತಮ್ಮ ರಾಜ್ಯವನ್ನು ಪಡೆದಿಲ್ಲ. ಆದರೆ ಅವರು ಆಳುವ ಅಧಿಕಾರವನ್ನು ಮೃಗದ ಸಂಗಡ ಒಂದು ಗಂಟೆ ಪಡೆಯುತ್ತಾರೆ. 13 ಈ ಹತ್ತು ರಾಜರುಗಳೆಲ್ಲರೂ ಒಂದೇ ಉದ್ದೇಶವುಳ್ಳವರಾಗಿದ್ದಾರೆ. ಅವರು ತಮ್ಮ ಶಕ್ತಿಯನ್ನು ಮತ್ತು ಅಧಿಕಾರವನ್ನು ಮೃಗಕ್ಕೆ ಕೊಡುತ್ತಾರೆ. 14 ಅವರು ಕುರಿಮರಿಯಾದಾತನ ವಿರುದ್ಧ ಯುದ್ಧಗಳನ್ನು ಮಾಡುತ್ತಾರೆ. ಆದರೆ ಕುರಿಮರಿಯಾದಾತನು ಪ್ರಭುಗಳ ಪ್ರಭುವಾದ್ದರಿಂದ ಮತ್ತು ರಾಜಾಧಿರಾಜನಾದ್ದರಿಂದ ಅವರನ್ನು ಸೋಲಿಸುತ್ತಾನೆ. ಆತನೊಂದಿಗೆ, ತಾನು ಕರೆದಿರುವ ಜನರು, ಆಯ್ಕೆಮಾಡಿಕೊಂಡಿರುವ ಜನರು ಮತ್ತು ತನ್ನ ನಂಬಿಗಸ್ತ ಹಿಂಬಾಲಕರು ಇದ್ದರು” ಎಂದನು.

15 ನಂತರ ದೇವದೂತನು ನನಗೆ ಹೀಗೆ ಹೇಳಿದನು: “ಆ ವೇಶ್ಯೆಯು ಕುಳಿತುಕೊಳ್ಳುವ ನೀರುಗಳನ್ನು ನೀನು ನೋಡಿದೆ. ಈ ನೀರುಗಳು ಈ ಲೋಕದ ಅನೇಕ ಜನರನ್ನೂ ವಿವಿಧ ಜನಾಂಗಗಳನ್ನೂ ಪ್ರಜೆಗಳನ್ನೂ ಭಾಷೆಗಳನ್ನೂ ಸೂಚಿಸು ತ್ತವೆ. 16 ನೀನು ನೋಡಿದ ಆ ಮೃಗ ಮತ್ತು ಅದರ ಹತ್ತು ಕೊಂಬುಗಳು (ರಾಜರುಗಳು) ಆ ವೇಶ್ಯೆಯನ್ನು ದ್ವೇಷಿಸುತ್ತವೆ. ಅವಳಲ್ಲಿರುವುದನ್ನೆಲ್ಲ ಅವರು ಕಿತ್ತುಕೊಂಡು, ಅವಳನ್ನು ನಗ್ನಾವಸ್ಥೆಯಲ್ಲಿ ಬಿಡುತ್ತಾರೆ. ಅವರು ಅವಳ ದೇಹವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. 17 ತನ್ನ ಕಾರ್ಯವನ್ನು ಮಾಡಬೇಕೆಂಬ ಬಯಕೆಯನ್ನು ದೇವರು ಆ ಹತ್ತು ರಾಜರುಗಳಲ್ಲಿ ಉಂಟುಮಾಡಿದ್ದರಿಂದ ಅವರು ಆಳಲು ತಮಗಿದ್ದ ಅಧಿಕಾರವನ್ನು ಮೃಗಕ್ಕೆ ಕೊಡಲು ಸಮ್ಮತಿಸಿದರು. ದೇವರು ಹೇಳಿದ್ದೆಲ್ಲ ಸಂಪೂರ್ಣವಾಗಿ ನೆರವೇರುವ ತನಕ ಅವರು ಆಳುತ್ತಾರೆ. 18 ನೀನು ನೋಡಿದ ಸ್ತ್ರೀಯು ಲೋಕದ ರಾಜರುಗಳನ್ನು ಆಳುವ ಮಹಾನಗರಿಯಾಗಿದ್ದಾಳೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International