Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 19

ಆಶ್ರಯನಗರಗಳು

19 “ಬೇರೆ ಜನಾಂಗಗಳು ವಾಸಿಸುವ ದೇಶವನ್ನು ನಿಮ್ಮ ದೇವರು ನಿಮಗೆ ಕೊಡುತ್ತಿದ್ದಾನೆ. ಆ ಜನಾಂಗಗಳನ್ನು ಆತನು ನಾಶಮಾಡುತ್ತಾನೆ. ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀವು ವಾಸಿಸುವಿರಿ. ಅವರ ಮನೆಗಳನ್ನೂ ಪಟ್ಟಣಗಳನ್ನೂ ನೀವು ವಶಪಡಿಸಿಕೊಳ್ಳುವಿರಿ. ಅಂಥಾ ಸಮಯದಲ್ಲಿ 2-3 ನಿಮ್ಮ ದೇಶವನ್ನು ನೀವು ಮೂರು ವಿಭಾಗ ಮಾಡಬೇಕು. ಪ್ರತಿಯೊಂದು ವಿಭಾಗದಲ್ಲಿ ನೀವು ಒಂದು ನಗರವನ್ನು ಆರಿಸಬೇಕು. ಅದು ಎಲ್ಲಾ ಜನರಿಗೆ ಹೋಗಲು ಅನುಕೂಲವಾಗಿರಬೇಕು. ಅದಕ್ಕಾಗಿ ನೀವು ರಸ್ತೆಗಳನ್ನು ಮಾಡಬೇಕು. ಆಗ ಯಾವನಾದರೂ ಅಪ್ಪಿತಪ್ಪಿ ಇನ್ನೊಬ್ಬನನ್ನು ಕೊಂದರೆ ಅವನು ರಕ್ಷಣೆಗಾಗಿ ಆ ನಗರಗಳಿಗೆ ಓಡಿಹೋಗಬಹುದು.

“ಅಂಥಾ ಮನುಷ್ಯನಿಗೆ ಅನ್ವಯಿಸುವ ನಿಯಮಗಳು ಯಾವುವೆಂದರೆ: ಆ ಮನುಷ್ಯನು ಇನ್ನೊಬ್ಬನನ್ನು ಕೊಂದದ್ದು ಆಕಸ್ಮಿಕವಾಗಿರಬೇಕು; ಕೊಲ್ಲಲ್ಪಟ್ಟವನ ಮೇಲೆ ಅವನಿಗೆ ದ್ವೇಷವಿರಬಾರದು. ಇದೊಂದು ಉದಾಹರಣೆ: ಒಬ್ಬನು ಇನ್ನೊಬ್ಬ ವ್ಯಕ್ತಿಯೊಂದಿಗೆ ಅಡವಿಗೆ ಕಟ್ಟಿಗೆ ಕಡಿಯಲು ಹೋಗುತ್ತಾನೆ. ಒಂದು ಮರವನ್ನು ಕಡಿಯಲು ತನ್ನ ಕೊಡಲಿಯನ್ನು ಬೀಸುವಾಗ ಅವನ ಕೊಡಲಿಯು ಕಾವಿನಿಂದ ಕಳಚಿಕೊಂಡು ಪಕ್ಕದಲ್ಲಿ ನಿಂತಿದ್ದವನಿಗೆ ಬಡಿದು ಅವನ ಸಾವಿಗೆ ಕಾರಣವಾದರೆ, ಕೊಡಲಿಯನ್ನು ಬೀಸಿದವನು ಆ ಮೂರು ನಗರಗಳಲ್ಲಿ ಒಂದರಲ್ಲಿ ಆಶ್ರಯವನ್ನು ಪಡೆದುಕೊಂಡು ಸುರಕ್ಷಿತವಾಗಿರಬಹುದು. ಆದರೆ ಆ ನಗರವು ತುಂಬಾ ದೂರವಿದ್ದಲ್ಲಿ ಅವನು ಅಲ್ಲಿಗೆ ಸೇರುವ ಮೊದಲೇ ಸತ್ತವನ ಹತ್ತಿರದ ಸಂಬಂಧಿ ಅವನನ್ನು ಹಿಂಬಾಲಿಸಿ ಅವನ ಮೇಲೆ ಮುಯ್ಯಿತೀರಿಸಿಕೊಳ್ಳುವನು. ಅವನ ಮೇಲೆ ಕೋಪಗೊಂಡು ಅವನನ್ನು ಕೊಂದರೆ ನಿಷ್ಕಾರಣವಾಗಿ ಅವನು ಕೊಲ್ಲಲ್ಪಟ್ಟಂತಾಯಿತು. ಯಾಕೆಂದರೆ ಸತ್ತವನನ್ನು ಅವನು ದ್ವೇಷಿಸುತ್ತಿರಲಿಲ್ಲ. ಆದ್ದರಿಂದ ಆ ನಗರಗಳು ಎಲ್ಲರಿಗೂ ಸುಲಭವಾಗಿ ಸೇರುವಂಥವುಗಳಾಗಿರಬೇಕು; ಅಂಥವುಗಳನ್ನು ನೀವು ಆರಿಸಿಕೊಳ್ಳಬೇಕು.

“ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ನಿಮ್ಮ ದೇಶವನ್ನು ವಿಸ್ತಾರ ಮಾಡುವುದಾಗಿ ವಾಗ್ದಾನ ಮಾಡಿದನು. ಅವರಿಗೆ ಕೊಡುವುದಾಗಿ ವಾಗ್ದಾನಮಾಡಿದ ದೇಶವನ್ನೆಲ್ಲಾ ನಿಮಗೆ ಕೊಡುವನು. ಈ ಹೊತ್ತು ನಾನು ನಿಮಗೆ ಕೊಡುವ ಆಜ್ಞೆಗಳಿಗೆ ನೀವು ವಿಧೇಯರಾದರೆ ಮಾತ್ರ ನಿಮ್ಮ ದೇಶವನ್ನು ಆತನು ವಿಸ್ತರಿಸುವನು. ನೀವು ನಿಮ್ಮ ದೇವರಾದ ಯೆಹೋವನನ್ನು ಯಾವಾಗಲೂ ಪ್ರೀತಿಸಬೇಕು. ದೇವರು ನಿಮ್ಮ ದೇಶದ ಮೇರೆಯನ್ನು ವಿಸ್ತರಿಸಿದಾಗ ನೀವು ಇನ್ನೂ ಮೂರು ಆಶ್ರಯ ನಗರಗಳನ್ನು ಆರಿಸಿಕೊಳ್ಳಬೇಕು. 10 ಆಗ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಅಂಥ ನಿರಪರಾಧಿಗಳು ಕೊಲ್ಲಲ್ಪಡುವುದಿಲ್ಲ; ನೀವು ಯಾವ ಮರಣದ ವಿಷಯದಲ್ಲಿಯೂ ದೋಷಿಗಳಾಗಿರುವುದಿಲ್ಲ.

11 “ಆದರೆ ಒಬ್ಬನು ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸಿದರೆ, ಅವನನ್ನು ಉದ್ದೇಶಪೂರ್ವಕವಾಗಿ ಕೊಂದು ಆಶ್ರಯ ನಗರದೊಳಗೆ ಸುರಕ್ಷಿತನಾಗಿದ್ದಲ್ಲಿ 12 ಅವನ ಊರಿನ ಹಿರಿಯರು ಅವನನ್ನು ಆ ಆಶ್ರಯನಗರದೊಳಗಿಂದ ಹಿಡಿದುತಂದು ಕೊಲೆ ಮಾಡಲ್ಪಟ್ಟವನ ಸಮೀಪ ಬಂಧುವಿಗೆ ಒಪ್ಪಿಸಬೇಕು, ಕೊಲೆಗಾರನು ಸಾಯಲೇಬೇಕು. 13 ನೀವು ಅವನ ವಿಷಯದಲ್ಲಿ ದುಃಖಪಡಬಾರದು. ಯಾಕೆಂದರೆ ಅವನು ನಿರಪರಾಧಿಯನ್ನು ಕೊಂದ ಅಪರಾಧಿಯಾಗಿದ್ದಾನೆ. ಅವನು ಮಾಡಿದ ಪಾಪವನ್ನು ಇಸ್ರೇಲಿನಿಂದ ತೆಗೆದುಹಾಕಬೇಕು. ಆಗ ನಿಮಗೆ ಶುಭವಾಗುವುದು.

ಆಸ್ತಿಯ ಮೇರೆಗಳು

14 “ನಿಮ್ಮ ನೆರೆಯವನ ಭೂಮಿಯ ಗಡಿಕಲ್ಲುಗಳ ಸ್ಥಳವನ್ನು ನೀವು ಬದಲಾಯಿಸಬಾರದು. ಹಿಂದಿನ ಕಾಲದಲ್ಲಿ ಜನರು ತಮ್ಮ ಭೂಮಿಯ ಮೇರೆಯನ್ನು ಗುರುತಿಸಲು ನೆಟ್ಟಿರುತ್ತಾರೆ. ಆ ಗಡಿಕಲ್ಲುಗಳು ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಆ ಭೂಮಿಗೆ ಗುರುತಾಗಿದೆ.

ಸಾಕ್ಷಿಗಳು

15 “ಒಬ್ಬನು ಕಟ್ಟಳೆಗಳಿಗೆ ವಿರುದ್ಧವಾಗಿ ನಡೆದುಕೊಂಡು ಅಪಾದಿಸಲ್ಪಟ್ಟದ್ದಲ್ಲಿ ಒಬ್ಬನ ಸಾಕ್ಷಿಯಿಂದ ಅವನು ತಪ್ಪಿತಸ್ಥನೆಂದು ತೀರ್ಮಾನಿಸಬಾರದು. ಅವನು ತಪ್ಪಿತಸ್ಥನೆಂದು ತೋರಿಸಲು ಎರಡು ಅಥವಾ ಮೂರು ಸಾಕ್ಷಿಗಳಿರಬೇಕು.

16 “ಒಬ್ಬ ಸಾಕ್ಷಿದಾರನು ಇನ್ನೊಬ್ಬನು ತನಗೆ ಹಾನಿ ಮಾಡಿದ್ದಾನೆಂದು ಸುಳ್ಳುಹೇಳಿ ಅವನನ್ನು ಶಿಕ್ಷೆಗೆ ಒಳಪಡಿಸಲು ಪ್ರಯತ್ನಿಸಿದಾಗ, 17 ಆ ಪ್ರಕರಣಕ್ಕೆ ಸೇರಿದವರಿಬ್ಬರೂ ಯೆಹೋವನು ಆರಿಸಿದ ಸ್ಥಳಕ್ಕೆ ಹೋಗಿ ಅಲ್ಲಿ ಕಾರ್ಯತತ್ಪರರಾಗಿರುವ ಯಾಜಕರನ್ನು ಮತ್ತು ನ್ಯಾಯಾಧೀಶರನ್ನು ಕಾಣಬೇಕು. 18 ನ್ಯಾಯಾಧೀಶರು ಅವರನ್ನು ಪ್ರಶ್ನಿಸಿ ಸರಿಯಾಗಿ ವಿಚಾರಿಸಬೇಕು. ಸಾಕ್ಷಿಯವನು ಸುಳ್ಳು ಹೇಳಿದ್ದಾನೆಂಬುದನ್ನು ಅವರು ಕಂಡುಹಿಡಿದರೆ 19 ಆ ಸಾಕ್ಷಿಯವನಿಗೆ ಶಿಕ್ಷೆ ವಿಧಿಸಬೇಕು. ತನ್ನ ವಿರೋಧಿಗೆ ಯಾವ ಶಿಕ್ಷೆ ಬರಬೇಕೆಂಬುದಾಗಿ ಅವನು ಸುಳ್ಳಾಡಿದ್ದನೋ, ಅದೇ ಶಿಕ್ಷೆಯನ್ನು ಅವನಿಗೆ ವಿಧಿಸಬೇಕು. ಈ ರೀತಿಯಾಗಿ ಆ ದುಷ್ಟತನವನ್ನು ನಿಮ್ಮ ಕುಲಗಳಿಂದ ತೆಗೆದುಹಾಕಬೇಕು. 20 ಇದನ್ನು ಬೇರೆಯವರು ಕೇಳಿ ಭಯಪಟ್ಟು ಅಂಥಾ ದುಷ್ಕೃತ್ಯವನ್ನು ಅವರು ಮಾಡುವುದಿಲ್ಲ.

21 “ಅಪರಾಧ ಎಷ್ಟು ಭಯಂಕರವಾಗಿರುವುದೋ ಅಷ್ಟೇ ಭಯಂಕರ ಶಿಕ್ಷೆಯೂ ಇರಬೇಕು. ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇಸರಪಟ್ಟುಕೊಳ್ಳಬಾರದು. ಒಬ್ಬನು ಪ್ರಾಣಹತ್ಯೆ ಮಾಡಿದರೆ ಅವನ ಪ್ರಾಣವೂ ತೆಗೆಯಲ್ಪಡಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಎಂಬ ನೀತಿಯನ್ನು ಅನುಸರಿಸಬೇಕು.

ಕೀರ್ತನೆಗಳು 106

106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನ ಪ್ರೀತಿಯು ಶಾಶ್ವತವಾದದ್ದು!
ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
    ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
    ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.

ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
    ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
    ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
    ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.

ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
    ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
    ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
    ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.

ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
    ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
    ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
    ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
    ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!

12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
    ನಂಬಿ ಆತನನ್ನು ಸಂಕೀರ್ತಿಸಿದರು.
13 ಆದರೆ ಆತನ ಕಾರ್ಯಗಳನ್ನು ಅವರು ಬೇಗನೆ ಮರೆತುಬಿಟ್ಟರು;
    ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
14 ನಮ್ಮ ಪೂರ್ವಿಕರು ಮರಳುಗಾಡಿನಲ್ಲಿ
    ಆಶಾತುರರಾಗಿ ಆತನನ್ನು ಪರೀಕ್ಷಿಸಿದರು.
15 ಆತನು ಅವರ ಆಸೆಯನ್ನು ಪೂರೈಸಿದರೂ
    ಅವರಿಗೆ ಭಯಂಕರವಾದ ರೋಗವನ್ನು ಬರಮಾಡಿದನು.
16 ಅವರು ಮೋಶೆಯ ಮೇಲೆಯೂ
    ಯೆಹೋವನ ಪವಿತ್ರ ಯಾಜಕನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17 ಭೂಮಿಯು ಬಾಯ್ದೆರೆದು ಹೊಟ್ಟೆಕಿಚ್ಚುಪಟ್ಟ ದಾತಾನನನ್ನೂ
    ಅಬಿರಾಮನ ಪಂಗಡದವರನ್ನೂ ನುಂಗಿಬಿಟ್ಟಿತು.
18 ಬಳಿಕ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು;
    ಅಗ್ನಿಜ್ವಾಲೆಯು ಆ ದುಷ್ಟರನ್ನು ದಹಿಸಿಬಿಟ್ಟಿತು.
19 ಹೋರೇಬ್ ಬೆಟ್ಟದ ಬಳಿಯಲ್ಲಿ
    ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
20 ಹುಲ್ಲುತಿನ್ನುವ ಹೋರಿಯ ಮೂರ್ತಿಗಾಗಿ
    ಅವರು ಮಹಿಮಾಸ್ವರೂಪನಾದ ದೇವರನ್ನೇ ಬಿಟ್ಟುಕೊಟ್ಟರು!
21 ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು!
    ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
22 ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು.
    ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!

23 ಆತನು ಅವರನ್ನು ನಾಶಮಾಡಬೇಕೆಂದಿದ್ದನು.
    ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ
    ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.

24 ಬಳಿಕ ಅವರು ರಮಣೀಯವಾದ ಕಾನಾನ್ ದೇಶಕ್ಕೆ ಹೋಗಲು ಒಪ್ಪಲಿಲ್ಲ.
    ಅಲ್ಲಿಯ ನಿವಾಸಿಗಳನ್ನು ಸೋಲಿಸಲು ಆತನು ತಮಗೆ ಸಹಾಯ ಮಾಡುತ್ತಾನೆಂಬ ನಂಬಿಕೆ ಅವರಲ್ಲಿರಲಿಲ್ಲ.
25 ನಮ್ಮ ಪೂರ್ವಿಕರು ತಮ್ಮತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ
    ದೇವರ ಮಾತಿಗೆ ವಿಧೇಯರಾಗಲಿಲ್ಲ.
26 ಆದ್ದರಿಂದ ಅವರು ಅರಣ್ಯದಲ್ಲಿ ಸಾಯುವುದಾಗಿ
    ದೇವರು ಪ್ರಮಾಣ ಮಾಡಿದನು.
27 ಅವರ ಸಂತತಿಗಳವರು ಬೇರೆಯವರಿಂದ ಸೋಲಿಸಲ್ಪಡುವುದಾಗಿ ಆತನು ಪ್ರಮಾಣ ಮಾಡಿದನು.
    ನಮ್ಮ ಪೂರ್ವಿಕರನ್ನು ಜನಾಂಗಗಳ ಮಧ್ಯೆ ಚದರಿಸುವುದಾಗಿ ಆತನು ಪ್ರಮಾಣ ಮಾಡಿದನು.

28 ಬಳಿಕ ಬಾಳ್ ಪೆಗೋರಿನಲ್ಲಿ ದೇವಜನರು ಬಾಳನನ್ನು ಪೂಜಿಸಲು ಸೇರಿಕೊಂಡರು.
    ಜೀವವಿಲ್ಲದ ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ದೇವಜನರು ತಿಂದರು.[a]
29 ಯೆಹೋವನು ತನ್ನ ಜನರ ಮೇಲೆ ಬಹು ಕೋಪಗೊಂಡು ಅವರಿಗೆ ಭಯಂಕರವಾದ ಕಾಯಿಲೆಯನ್ನು ಬರಮಾಡಿದನು.
30 ಆದರೆ ಫೀನೆಹಾಸನು ಎದ್ದು ಅವರನ್ನು ದಂಡಿಸಲು
    ಆತನು (ಯೆಹೋವನು) ಆ ಕಾಯಿಲೆಯನ್ನು ನಿಲ್ಲಿಸಿದನು.
31 ಫೀನೆಹಾಸನ ಈ ಕಾರ್ಯವು
    ಅವನನ್ನು ತಲೆತಲೆಮಾರುಗಳವರೆಗೂ ನೀತಿವಂತನನ್ನಾಗಿ ಮಾಡಿತು.

32 ಮೆರೀಬಾದಲ್ಲಿ ಜನರು ಮತ್ತೆ ಆತನನ್ನು ರೇಗಿಸಿದರು.
    ಅವರ ದೆಸೆಯಿಂದ ಮೋಶೆಗೆ ಕೇಡಾಯಿತು.
33 ಅವರು ಆತನಿಗೆ (ದೇವಾರಾತ್ಮನಿಗೆ) ವಿರೋಧವಾಗಿ ನಿಂತರು.
    ಇದರಿಂದ ಬೇಸರಗೊಂಡಿದ್ದ ಮೋಶೆಯು ದುಡುಕಿ ಮಾತಾಡಿದನು.

34 ಕಾನಾನಿನಲ್ಲಿ ವಾಸವಾಗಿದ್ದ ಅನ್ಯ ಜನಾಂಗಗಳನ್ನು ನಾಶಮಾಡಲು ಯೆಹೋವನು ಅವರಿಗೆ ಹೇಳಿದನು.
    ಆದರೆ ಇಸ್ರೇಲರು ದೇವರಿಗೆ ವಿಧೇಯರಾಗಲಿಲ್ಲ.
35 ಅವರು ಬೇರೆಯವರೊಂದಿಗೆ ಸೇರಿಕೊಂಡು
    ಅವರ ದುರಾಚಾರಗಳನ್ನೇ ಮಾಡಿದರು.
36 ಅವರು ದೇವಜನರಿಗೆ ಉರುಲಿನಂತಾದರು.
    ಅವರ ದೇವರುಗಳನ್ನು ದೇವಜನರು ಪೂಜಿಸತೊಡಗಿದರು.
37 ದೇವಜನರು ತಮ್ಮ ಸ್ವಂತ ಮಕ್ಕಳನ್ನೂ
    ಆ ದೆವ್ವಗಳಿಗೆ ಬಲಿಕೊಟ್ಟರು.
38 ದೇವಜನರು ನಿರಪರಾಧಿಗಳಾದ ತಮ್ಮ ಮಕ್ಕಳ ರಕ್ತವನ್ನು
    ಆ ಸುಳ್ಳುದೇವರುಗಳಿಗೆ ಅರ್ಪಿಸಿದರು.
39 ತಮ್ಮ ಪಾಪಕೃತ್ಯಗಳಿಂದ ದೇವಜನರು ಮಲಿನಗೊಂಡರು.
    ಅವರು ದೇವರಿಗೆ ಅಪನಂಬಿಗಸ್ತರಾಗಿ ಅನ್ಯಜನರು ಮಾಡಿದವುಗಳನ್ನು ಮಾಡಿದರು.
40 ಆತನು ತನ್ನ ಜನರ ಮೇಲೆ ಕೋಪಗೊಂಡನು;
    ಅವರ ವಿಷಯದಲ್ಲಿ ಬೇಸರಗೊಂಡನು!
41 ಆತನು ತನ್ನ ಜನರನ್ನು ಅನ್ಯಜನಾಂಗಗಳಿಗೆ ಒಪ್ಪಿಸಿದನು;
    ಅವರ ಮೇಲೆ ದೊರೆತನ ಮಾಡುವಂತೆ ವೈರಿಗಳಿಗೆ ಅವರನ್ನು ಬಿಟ್ಟುಕೊಟ್ಟನು.
42 ಶತ್ರುಗಳು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು
    ಅವರ ಜೀವಿತವನ್ನು ಸಂಕಷ್ಟಕ್ಕೆ ಗುರಿಮಾಡಿದರು.
43 ಆತನು ತನ್ನ ಜನರನ್ನು ಅನೇಕ ಸಲ ರಕ್ಷಿಸಿದರೂ
    ಅವರು ಆತನಿಗೆ ವಿರೋಧವಾಗಿ ತಿರುಗಿ ತಮ್ಮ ಇಷ್ಟಾನುಸಾರವಾಗಿ ಮಾಡಿದರು.
    ಅವರು ಅನೇಕಾನೇಕ ಕೆಟ್ಟಕಾರ್ಯಗಳನ್ನು ಮಾಡಿದರು.
44 ಆದರೆ ಅವರು ಆಪತ್ತಿನಲ್ಲಿದ್ದಾಗಲೆಲ್ಲಾ ದೇವರಿಗೆ ಮೊರೆಯಿಟ್ಟರು;
    ಆತನು ಅವರ ಪ್ರಾರ್ಥನೆಗಳಿಗೆ ಸದುತ್ತರವನ್ನು ದಯಪಾಲಿಸಿದನು.
45 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಂಡನು.
    ತನ್ನ ಮಹಾಪ್ರೀತಿಯಿಂದ ಅವರನ್ನು ಸಂತೈಸಿದನು.
46 ಅನ್ಯ ಜನಾಂಗಗಳು ಆತನ ಜನರನ್ನು ಸೆರೆಯಾಳುಗಳನ್ನಾಗಿ ಎಳೆದೊಯ್ದರು.
    ಅನ್ಯಜನಾಂಗಗಳು ತನ್ನ ಜನರಿಗೆ ದಯೆತೋರುವಂತೆ ಆತನು ಮಾಡಿದನು.
47 ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
    ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
    ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48 ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
    ಎಂದು ಜನರೆಲ್ಲರೂ ಹೇಳಲಿ.

ಯೆಶಾಯ 46

ಸುಳ್ಳುದೇವರುಗಳು ನಿಷ್ಪ್ರಯೋಜಕವಾಗಿವೆ

46 ಬೇಲ್ ಮತ್ತು ನೆಬೋ ನನ್ನ ಮುಂದೆ ಅಡ್ಡಬೀಳುವವು. ಒಡೆಯನು ಹೀಗೆನ್ನುತ್ತಾನೆ, “ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳೇ. ಜನರು ಭಾರವಾದ ವಿಗ್ರಹಗಳನ್ನು ಪಶುಗಳ ಮೇಲೆ ಹೊರಿಸುವರು. ಅವು ಕೇವಲ ಹೊತ್ತುಕೊಂಡು ಹೋಗಬೇಕಾದ ಹೊರೆಗಳಾಗಿವೆ. ಆ ಸುಳ್ಳುದೇವರುಗಳು ಜನರನ್ನು ದಣಿಸುವುದೊಂದನ್ನು ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುವದಿಲ್ಲ. ಆ ಸುಳ್ಳುದೇವರುಗಳೆಲ್ಲಾ ಅಡ್ಡಬೀಳುವವು. ಅವುಗಳೆಲ್ಲಾ ಬಿದ್ದುಹೋಗುವವು; ತಪ್ಪಿಸಿಕೊಳ್ಳಲು ಅವುಗಳಿಗೆ ಸಾಧ್ಯವಿಲ್ಲ. ಅವುಗಳನ್ನು ಸೆರೆಹಿಡಿದು ಒಯ್ಯುವರು.

“ಯಾಕೋಬನ ವಂಶದವರೇ, ನನ್ನ ಮಾತನ್ನು ಕೇಳಿರಿ. ಇಸ್ರೇಲರಲ್ಲಿ ಉಳಿದಿರುವವರೇ, ನನ್ನ ಮಾತುಗಳನ್ನು ಕೇಳಿರಿ. ನಾನು ನಿಮ್ಮನ್ನು ಹೊರುತ್ತಿದ್ದೇನೆ. ನೀವು ತಾಯಿಯ ಗರ್ಭದಲ್ಲಿರುವಾಗಲೇ ನಾನು ನಿಮ್ಮನ್ನು ಹೊರುತ್ತಿದ್ದೇನೆ. ನೀವು ಹುಟ್ಟಿದಾಗ ನಾನು ನಿಮ್ಮನ್ನು ಹೊತ್ತುಕೊಂಡೆನು. ನೀವು ಮುದುಕರಾಗುವಾಗಲೂ ನಾನು ನಿಮ್ಮನ್ನು ಹೊತ್ತುಕೊಳ್ಳುವೆನು. ನಿಮ್ಮ ತಲೆಕೂದಲು ನರೆತಾಗಲೂ ನಾನು ನಿಮ್ಮನ್ನು ಹೊರುವೆನು; ಯಾಕೆಂದರೆ ನಾನು ನಿಮ್ಮನ್ನು ಸೃಷ್ಟಿಸಿದೆನು. ಆದ್ದರಿಂದ ನಾನು ನಿಮ್ಮನ್ನು ಹೊತ್ತುಕೊಳ್ಳುವೆನು, ನಿಮ್ಮನ್ನು ರಕ್ಷಿಸುವೆನು.”

“ನನ್ನನ್ನು ನೀವು ಬೇರೆಯವರಿಗೆ ಹೋಲಿಸುವಿರಾ? ಇಲ್ಲ. ಯಾರೂ ನನಗೆ ಸಮಾನರಲ್ಲ. ನನ್ನ ವಿಷಯವಾಗಿ ನೀವು ಸಂಪೂರ್ಣವಾಗಿ ಅರಿತುಕೊಳ್ಳುವುದಿಲ್ಲ. ನನ್ನಂತಿರಲು ಬೇರೆ ಯಾರಿಗಾದರೂ ಸಾಧ್ಯವೇ? ಕೆಲವರು ಬೆಳ್ಳಿಬಂಗಾರಗಳಲ್ಲಿ ಐಶ್ವರ್ಯವಂತರಾಗಿದ್ದಾರೆ. ಅವರ ಕೈಚೀಲಗಳಿಂದ ಬಂಗಾರವು ಉದುರುತ್ತವೆ, ಅವರು ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗುತ್ತಾರೆ; ಕುಶಲಕರ್ಮಿಗಳಿಗೆ ಹಣಕೊಟ್ಟು ಮರದಿಂದ ವಿಗ್ರಹವನ್ನು ಮಾಡಿಸಿಕೊಳ್ಳುತ್ತಾರೆ. ಆಮೇಲೆ ಅವರು ಆ ವಿಗ್ರಹಕ್ಕೆ ಅಡ್ಡಬಿದ್ದು ಪೂಜೆ ಮಾಡುತ್ತಾರೆ. ಅವರು ಆ ವಿಗ್ರಹವನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರುತ್ತಾರೆ. ಆ ಸುಳ್ಳುದೇವರುಗಳು ನಿಷ್ಪ್ರಯೋಜಕವಾಗಿವೆ. ಜನರೇ ಅವುಗಳನ್ನು ಹೊತ್ತುಕೊಳ್ಳಬೇಕು. ಜನರು ಅವುಗಳನ್ನು ನೆಲದ ಮೇಲೆ ಇಟ್ಟಾಗ ಅವು ಅಲ್ಲಾಡುವದಿಲ್ಲ. ತಮ್ಮ ಸ್ಥಳದಿಂದ ಆ ಸುಳ್ಳುದೇವರುಗಳು ಎದ್ದುಹೋಗುವದಿಲ್ಲ. ಜನರು ಅದರ ಮುಂದೆ ಕೂಗಿಕೊಂಡರೂ ಅವು ಕೇಳಿಸಿಕೊಳ್ಳುವದಿಲ್ಲ. ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳಷ್ಟೇ. ಅವು ಜನರನ್ನು ಅವರ ಕಷ್ಟಗಳಿಂದ ಬಿಡಿಸಲಾರವು.

“ನೀವು ಪಾಪಮಾಡಿದ್ದೀರಿ. ನೀವು ಈ ವಿಚಾರವಾಗಿ ಮತ್ತೆ ಆಲೋಚಿಸಬೇಕು. ಈ ವಿಚಾರವನ್ನು ನಿಮ್ಮ ನೆನಪಿಗೆ ತಂದುಕೊಂಡು ಬಲಶಾಲಿಗಳಾಗಿರಿ. ಬಹಳ ಸಮಯದ ಹಿಂದೆ ನಡೆದ ಸಂಗತಿಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ನಾನು ದೇವರೆಂಬುದನ್ನು ಜ್ಞಾಪಕ ಮಾಡಿಕೊಳ್ಳಿರಿ. ನನ್ನ ಹೊರತು ಬೇರೆ ದೇವರುಗಳಿಲ್ಲ. ಆ ಸುಳ್ಳುದೇವರುಗಳು ನನ್ನ ಹಾಗೆ ಇಲ್ಲ.

10 “ನಾನು ಅಂತ್ಯದಲ್ಲಿ ನಡೆಯಲಿರುವ ವಿಷಯಗಳನ್ನು ಪ್ರಾರಂಭದಲ್ಲಿಯೇ ತಿಳಿಸಿರುತ್ತೇನೆ. ಬಹುಕಾಲದ ಹಿಂದೆ ಇನ್ನೂ ಸಂಭವಿಸದ ಸಂಗತಿಗಳನ್ನು ತಿಳಿಸಿದ್ದೇನೆ. ನಾನು ಯೋಜಿಸುವ ಸಂಗತಿಗಳು ನೆರವೇರುವವು. ನಾನು ಮಾಡಲು ಬಯಸುವ ಕಾರ್ಯಗಳನ್ನು ನೆರವೇರಿಸುವೆನು. 11 ಪೂರ್ವದಿಕ್ಕಿನಿಂದ ಒಬ್ಬನನ್ನು ಕರೆಯುತ್ತೇನೆ. ಅವನು ಗಿಡುಗನಂತಿರುವನು. ಅವನು ಬಹು ದೂರದೇಶದಿಂದ ಬಂದು ನನ್ನ ಬಯಕೆಯನ್ನು ಈಡೇರಿಸುವನು. ನಾನು ಹೇಳಿದ ಸಂಗತಿಗಳನ್ನು ಮಾಡಿಮುಗಿಸುವೆನು. ನಾನು ಅವನನ್ನು ಸೃಷ್ಟಿಸಿದೆನು. ನಾನೇ ಅವನನ್ನು ಕರೆದುಕೊಂಡು ಬರುವೆನು.

12 “ನಿಮ್ಮಲ್ಲಿ ಕೆಲವರು ತಾವು ಬಲಿಷ್ಠರೆಂದು ತಿಳಿದುಕೊಂಡಿದ್ದಾರೆ; ಆದರೆ ನೀವು ಯಾವ ಒಳ್ಳೆಯ ಕಾರ್ಯಗಳನ್ನು ಮಾಡುವದಿಲ್ಲ. ನನ್ನ ಮಾತನ್ನು ಕೇಳಿರಿ. 13 ನಾನು ಒಳ್ಳೆಯ ಕಾರ್ಯಗಳನ್ನು ಮಾಡುವೆನು. ನನ್ನ ಜನರನ್ನು ಬೇಗನೆ ರಕ್ಷಿಸುವೆನು. ಚೀಯೋನಿಗೆ, ಅಂದರೆ ನನ್ನ ಅದ್ಭುತವಾದ ಇಸ್ರೇಲಿಗೆ ರಕ್ಷಣೆಯನ್ನು ತರುವೆನು.”

ಪ್ರಕಟನೆ 16

ದೇವರ ಕೋಪದಿಂದ ತುಂಬಿದ್ದ ಪಾತ್ರೆಗಳು

16 ನಂತರ ಆಲಯದಿಂದ ಒಂದು ಮಹಾಶಬ್ದವು ನನಗೆ ಕೇಳಿಸಿತು. ಆ ಶಬ್ದವು ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿ” ಎಂದು ಹೇಳಿತು.

ಮೊದಲನೆಯ ದೇವದೂತನು ಹೊರಟನು. ಅವನು ತನ್ನ ಪಾತ್ರೆಯಲ್ಲಿದ್ದುದನ್ನು ಭೂಮಿಯ ಮೇಲೆ ಸುರಿದನು. ಆಗ ಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಜನರೆಲ್ಲರಿಗೂ ಅಸಹ್ಯವಾದ ಹಾಗೂ ನೋವಿನಿಂದ ಕೂಡಿದ ಹುಣ್ಣುಗಳಾದವು.

ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರವು ಸತ್ತ ಮನುಷ್ಯನ ರಕ್ತದಂತಾಯಿತು. ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲ ಸತ್ತುಹೋದವು.

ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ನದಿಗಳು ಮತ್ತು ನೀರಿನ ಬುಗ್ಗೆಗಳೆಲ್ಲ ರಕ್ತವಾಗಿ ಪರಿಣಮಿಸಿದವು. ಆಗ ನೀರಿನ ಅಧಿಪತಿಯಾದ ದೂತನು ದೇವರಿಗೆ ಹೇಳಿದ್ದು ನನಗೆ ಕೇಳಿಸಿತು:

“ನೀನೇ ವರ್ತಮಾನ ಕಾಲದಲ್ಲಿರುವಾತನು.
ನೀನೊಬ್ಬನೇ ಪರಿಶುದ್ಧನು.
ನೀನು ನೀಡಿದ ಈ ತೀರ್ಪುಗಳಲ್ಲೆಲ್ಲಾ ನೀನು ನ್ಯಾಯವಂತನಾಗಿರುವೆ.
ಆ ಜನರು ನಿನ್ನ ಪರಿಶುದ್ಧ ಜನರ ಮತ್ತು ನಿನ್ನ ಪ್ರವಾದಿಗಳ ರಕ್ತವನ್ನು ಸುರಿಸಿದರು.
ಈಗ ನೀನು ಅವರಿಗೆ ಕುಡಿಯಲು ರಕ್ತವನ್ನೇ ನೀಡಿರುವೆ.
    ಅವರು ಇದಕ್ಕೆ ಪಾತ್ರರಾಗಿದ್ದಾರೆ.”

ಯಜ್ಞವೇದಿಕೆಯಿಂದ ಹೀಗೆ ಹೇಳುವುದನ್ನೂ ನಾನು ಕೇಳಿಸಿಕೊಂಡೆನು:

“ಹೌದು, ದೇವರಾದ ಪ್ರಭುವೇ, ಸರ್ವಶಕ್ತನೇ,
    ನಿನ್ನ ತೀರ್ಪುಗಳೆಲ್ಲಾ ಸತ್ಯವಾಗಿವೆ ಮತ್ತು ನ್ಯಾಯವಾಗಿವೆ.”

ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಜನರನ್ನು ಕಡುಬಿಸಿಲಿನಿಂದ ಕಂದಿಸುವ ಅಧಿಕಾರವನ್ನು ಸೂರ್ಯನಿಗೆ ಕೊಡಲಾಯಿತು. ಜನರು ಕುಡುಬಿಸಿಲಿನಿಂದ ಕಂದಿಹೋಗಿ ದೇವರ ಹೆಸರನ್ನು ಶಪಿಸಿದರು. ಈ ಉಪದ್ರವಗಳನ್ನು ದೇವರೊಬ್ಬನೇ ನಿಯಂತ್ರಿಸ ಬಲ್ಲವನಾಗಿದ್ದಾನೆ. ಆದರೆ ಜನರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಪರಿವರ್ತಿಸಿಕೊಳ್ಳಲಿಲ್ಲ. ದೇವರನ್ನು ಮಹಿಮೆಪಡಿಸಲು ಒಪ್ಪಿಕೊಳ್ಳಲಿಲ್ಲ.

10 ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಆ ಮೃಗದ ಸಿಂಹಾಸನದ ಮೇಲೆ ಸುರಿದನು. ಮೃಗದ ರಾಜ್ಯದಲ್ಲಿ ಅಂಧಕಾರವು ಕವಿಯಿತು. ಜನರು ನೋವಿನಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು. 11 ಜನರು ತಮಗಾದ ಹುಣ್ಣುಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಷಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಕಾರ್ಯಗಳನ್ನು ತೊರೆದುಬಿಟ್ಟು ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಳ್ಳಲು ಒಪ್ಪಲಿಲ್ಲ.

12 ಆರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಯೂಫ್ರಟಿಸ್ ಮಹಾನದಿಯ ಮೇಲೆ ಸುರಿಸಿದನು. ನದಿಯಲ್ಲಿದ್ದ ನೀರು ಬತ್ತಿಹೋಯಿತು. ಇದರಿಂದ ಪೂರ್ವದಲ್ಲಿದ್ದ ರಾಜರುಗಳು ಬರಲು ಮಾರ್ಗವು ಸಿದ್ಧವಾಯಿತು. 13 ಆಗ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳನ್ನು ನಾನು ನೋಡಿದೆನು. ಅವು ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಹೊರಗೆ ಬಂದವು. 14 ಈ ಅಶುದ್ಧಾತ್ಮಗಳು ಸೈತಾನನ ಆತ್ಮಗಳಾಗಿವೆ. ಅವುಗಳಿಗೆ ಮಹಾ ಅದ್ಭುತಗಳನ್ನು ಮಾಡಲು ಶಕ್ತಿಯಿದೆ. ಈ ಅಶುದ್ಧಾತ್ಮಗಳು ಸರ್ವಶಕ್ತನಾದ ದೇವರ ಮಹಾದಿನದಂದು ನಡೆಯುವ ಯುದ್ಧಕ್ಕೆ, ಲೋಕದಲ್ಲೆಲ್ಲಾ ಇರುವ ರಾಜರನ್ನು ಒಟ್ಟುಗೂಡಿಸಲು ಹೊರಗೆ ಹೋಗುತ್ತವೆ.

15 “ಕೇಳಿರಿ! ನಾನು ಕಳ್ಳನಂತೆ ಬರುತ್ತೇನೆ. ಎಚ್ಚರವಾಗಿದ್ದು ತನ್ನ ಬಟ್ಟೆಗಳನ್ನು ಕಾಪಾಡಿಕೊಳ್ಳುವವನು ಭಾಗ್ಯವಂತನಾಗಿದ್ದಾನೆ. ಆಗ ಅವನು ಬಟ್ಟೆಯಿಲ್ಲದೆ ಹೊರಗೆ ಹೋಗಿ ತನ್ನನ್ನು ನಾಚಿಕೆಗೆ ಗುರಿಪಡಿಸಿಕೊಳ್ಳುವ ಅಗತ್ಯತೆವಿರುವುದಿಲ್ಲ.”

16 ಬಳಿಕ ಅಶುದ್ಧಾತ್ಮಗಳು ರಾಜರುಗಳನ್ನು ಹೀಬ್ರೂ ಭಾಷೆಯಲ್ಲಿ ಹರ್ಮೆಗದೋನ್ ಎಂಬ ಹೆಸರುಳ್ಳ ಸ್ಥಳದಲ್ಲಿ ಒಟ್ಟಾಗಿ ಸೇರಿಸಿದವು.

17 ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಗಾಳಿಯಲ್ಲಿ ಸುರಿದನು. ಆಗ ಒಂದು ಮಹಾಧ್ವನಿಯು ಸಿಂಹಾಸನದಿಂದ ಆಲಯದ ಹೊರಕ್ಕೆ ಬಂದಿತು. ಆ ಧ್ವನಿಯು, “ಮುಗಿದುಹೋಯಿತು!” ಎಂದು ಹೇಳಿತು. 18 ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು ಮತ್ತು ಭೂಕಂಪವೂ ಆಯಿತು. ಜನರು ಭೂಮಿಯ ಮೇಲೆ ಇರಲು ಆರಂಭಿಸಿದಂದಿನಿಂದ ಅಂತಹ ಭೀಕರ ಭೂಕಂಪವು ಎಂದೂ ಸಂಭವಿಸಿರಲಿಲ್ಲ. 19 ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು. 20 ಸಕಲ ದ್ವೀಪಗಳೂ ಅದೃಶ್ಯವಾದವು ಮತ್ತು ಬೆಟ್ಟಗಳೇ ಇಲ್ಲವಾದವು. 21 ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲುಗಳು ಬಿದ್ದವು. ಆ ಆಲಿಕಲ್ಲುಗಳು ನೂರು ಪೌಂಡುಗಳಷ್ಟು ಭಾರವಾಗಿದ್ದವು. ಈ ಉಪದ್ರವದ ಕಾಟದಿಂದ ಜನರು ದೇವರನ್ನು ದೂಷಿಸಿದರು. ಈ ಉಪದ್ರವವು ಬಹಳ ಭೀಕರವಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International