M’Cheyne Bible Reading Plan
ಯಾಜಕರ ಮತ್ತು ಲೇವಿಯರ ಜೀವನಾಧಾರ
18 “ಇಸ್ರೇಲ್ ದೇಶದೊಳಗೆ ಲೇವಿಕುಲದವರಿಗೆ ಸ್ವಾಸ್ತ್ಯವು ಇರುವುದಿಲ್ಲ. ಅವರು ಯಾಜಕರಾಗಿ ಸೇವೆ ಸಲ್ಲಿಸುವರು. ದೇವರಿಗೆ ಸಮರ್ಪಿಸಿದ ಕಾಣಿಕೆಗಳಲ್ಲಿ ಬೆಂಕಿಯಲ್ಲಿ ಬೇಯಿಸಿದ ಯಜ್ಞಶೇಷವೇ ಅವರ ಆಹಾರ. 2 ಬೇರೆ ಕುಲದವರಂತೆ ಅವರಿಗೆ ಭೂಮಿ ದೊರೆಯುವುದಿಲ್ಲ. ದೇವರು ಹೇಳಿದ ಪ್ರಕಾರ ಅವರ ಪಾಲು ಯೆಹೋವನೇ.
3 “ನೀವು ಯಜ್ಞಕ್ಕಾಗಿ ಒಂದು ದನವನ್ನಾಗಲಿ ಕುರಿಯನ್ನಾಗಲಿ ಕೊಯ್ದಾಗ ಯಾಜಕರಿಗೆ ಭುಜವನ್ನು, ಎರಡು ದವಡೆಗಳನ್ನು ಮತ್ತು ಉದರ ಭಾಗವನ್ನು ಕೊಡಬೇಕು. 4 ನಿಮ್ಮ ಯಾಜಕರಿಗೆ ನಿಮ್ಮ ಬೆಳೆಯ ಪ್ರಥಮ ಫಲವನ್ನು ಕೊಡಬೇಕು. ನಿಮ್ಮ ಧಾನ್ಯಗಳ ಪ್ರಥಮ ಫಲವನ್ನು, ದ್ರಾಕ್ಷಾರಸದಲ್ಲಿ, ಎಣ್ಣೆಯಲ್ಲಿ ಮತ್ತು ನಿಮ್ಮ ಉಣ್ಣೆಯಲ್ಲಿ ಪ್ರಥಮ ಫಲವನ್ನು ಕೊಡಬೇಕು. 5 ಯಾಕೆಂದರೆ ನಿಮ್ಮ ದೇವರಾದ ಯೆಹೋವನು ಇಸ್ರೇಲ್ ಕುಲದವರಿಂದ ಲೇವಿಕುಲದವರನ್ನು ನಿರಂತರವಾಗಿ ಆತನ ಸೇವೆಮಾಡುವುದಕ್ಕೆ ಆರಿಸಿಕೊಂಡಿರುತ್ತಾನೆ.
6 “ಪ್ರತಿಯೊಬ್ಬ ಲೇವಿಯನಿಗೂ ದೇವಾಲಯದಲ್ಲಿ ಸೇವೆಮಾಡಲು ಒಂದು ನಿರ್ಧಿಷ್ಟ ಸಮಯವನ್ನು ಗೊತ್ತುಪಡಿಸಲಾಗಿದೆ. ಆದರೆ ಬೇರೆ ಸಮಯದಲ್ಲಿಯೂ ಸಹ ಅವನು ಅಲ್ಲಿ ಸೇವೆಮಾಡಲು ಇಷ್ಟಪಟ್ಟರೆ, ಅವನು ತನಗೆ ಇಷ್ಟಬಂದ ಸಮಯದಲ್ಲಿ ಸೇವೆ ಮಾಡಬಹುದು. ಇಸ್ರೇಲಿನ ಯಾವದೇ ಭಾಗದಲ್ಲಿರುವ ಯಾವುದೇ ಊರಿನಲ್ಲಿರುವ ಲೇವಿಯನು ತನ್ನ ಸ್ವಂತ ಸ್ಥಳವನ್ನು ಬಿಟ್ಟು ಯೆಹೋವನ ವಿಶೇಷ ಸ್ಥಳಕ್ಕೆ ಬರಬಹುದು. ಅವನು ತನಗೆ ಇಷ್ಟಬಂದ ಯಾವುದೇ ಸಮಯದಲ್ಲಿ ಬೇಕಾದರೂ ಹೀಗೆ ಮಾಡಬಹುದು. 7 ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುತ್ತಿರುವ ತನ್ನ ಎಲ್ಲಾ ಸಹೋದರರಾದ ಲೇವಿಯರಂತೆ ಈ ಲೇವಿಯನು ಸಹ ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ಸೇವೆಮಾಡಬಹುದು. 8 ಆ ಲೇವಿಯನು ಇತರ ಲೇವಿಯರೊಂದಿಗೆ ಸಮಾನ ಪಾಲನ್ನು ಹೊಂದುವನು. ಇದಲ್ಲದೆ ಅವನ ಕುಟುಂಬದವರು ಯಥಾಪ್ರಕಾರ ತಮಗೆ ಬರತಕ್ಕ ಪಾಲನ್ನೂ ಹೊಂದುವರು.
ಇತರ ಜನಾಂಗಗಳವರಂತೆ ಇಸ್ರೇಲರು ಜೀವಿಸಬಾರದು
9 “ನೀವು ನಿಮ್ಮ ವಾಗ್ದತ್ತ ದೇಶಕ್ಕೆ ಬಂದಾಗ ಸುತ್ತಮುತ್ತಲಿನ ಜನರು ನಡೆಯುವ ರೀತಿಯಲ್ಲಿ ನೀವು ನಡೆಯಬಾರದು. ಅವರ ಅಸಹ್ಯವಾದ ಪದ್ದತಿಗಳನ್ನು ಅನುಸರಿಸಬಾರದು. 10 ನಿಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ನಿಮ್ಮ ಯಜ್ಞವೇದಿಕೆಯ ಬೆಂಕಿಯ ಮೇಲೆ ಬಲಿಯನ್ನಾಗಿ ಅರ್ಪಿಸಬೇಡಿ. ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದಕ್ಕಾಗಿ ಕಣಿಹೇಳುವವರ ಬಳಿಗಾಗಲಿ, ಮಂತ್ರಗಾರರ ಬಳಿಗಾಗಲಿ ಬೇತಾಳಿಕರ ಬಳಿಗಾಗಲಿ, ಮಾಟಗಾರರ ಬಳಿಗಾಗಲಿ ಹೋಗಬೇಡಿ. 11 ಬೇರೆಯವರ ಮೇಲೆ ಮಂತ್ರ ಮಾಡಲು ಯಾರಿಗೂ ಅವಕಾಶ ಕೊಡಬೇಡಿ. ಬೇತಾಳಿಕರಾಗುವುದಕ್ಕಾಗಲಿ, ಮಾಟಗಾರರಾಗುವುದಕ್ಕಾಗಲಿ ನಿಮ್ಮಲ್ಲಿ ಯಾರಿಗೂ ಅವಕಾಶ ಕೊಡಬೇಡಿ. ಸತ್ತುಹೋದವನೊಡನೆ ನಿಮ್ಮಲ್ಲಿ ಯಾರೂ ಮಾತಾಡಕೂಡದು. 12 ಇಂಥ ಕಾರ್ಯಗಳನ್ನು ಮಾಡುವ ಜನರನ್ನು ದೇವರು ದ್ವೇಷಿಸುತ್ತಾನೆ. ಆದ್ದರಿಂದಲೇ ಆ ಜನಾಂಗಗಳವರನ್ನು ನಿಮಗೋಸ್ಕರವಾಗಿ ಈ ದೇಶದಿಂದ ಹೊರಡಿಸುವನು. 13 ನಿಮ್ಮ ದೇವರಾದ ಯೆಹೋವನಿಗೆ ನೀವು ನಂಬಿಗಸ್ತರಾಗಿರಬೇಕು.
ಯೆಹೋವನ ಮಾತುಗಳನ್ನು ತಿಳಿಸುವ ಪ್ರವಾದಿ
14 “ನಿಮ್ಮ ದೇಶದೊಳಗಿಂದ ಇತರ ಜನಾಂಗದವರನ್ನು ನಾಶಮಾಡಬೇಕು. ಆ ಜನರು ಮಾಟಮಂತ್ರಗಳ ಮೂಲಕ ಮತ್ತು ಕಣಿ ಹೇಳುವವರಿಂದ ತಮ್ಮ ಭವಿಷ್ಯವನ್ನು ವಿಚಾರಿಸುವರು. ಆದರೆ ನಿಮ್ಮ ದೇವರಾದ ಯೆಹೋವನು ಅಂಥಾ ಕೆಲಸವನ್ನು ಮಾಡಲು ನಿಮ್ಮನ್ನು ಬಿಡುವುದಿಲ್ಲ. 15 ನಿಮ್ಮ ದೇವರು ನಿಮ್ಮ ಬಳಿಗೆ ಪ್ರವಾದಿಯನ್ನು ಕಳುಹಿಸುವನು. ಆ ಪ್ರವಾದಿಯು ನಿಮ್ಮ ಕುಲದವರಲ್ಲಿ ಒಬ್ಬನಾಗಿರುವನು. ಅವನು ನನ್ನ ಹಾಗೆ ಇರುವನು ಮತ್ತು ನೀವು ಅವನ ಮಾತುಗಳನ್ನು ಕೇಳಬೇಕು. 16 ನೀವು ಕೇಳಿದ ಪ್ರಕಾರ ದೇವರು ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವನು. ನೀವು ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಒಟ್ಟಾಗಿ ಸೇರಿದಾಗ ದೇವರ ಸ್ವರಕ್ಕೆ ಭಯಪಟ್ಟಿರಿ; ಪರ್ವತದಲ್ಲಿದ್ದ ಬೆಂಕಿಯನ್ನು ನೋಡಿಯೂ ತತ್ತರಿಸಿದಿರಿ. ಆಗ ನೀವು, ‘ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರುಗಿ ಕೇಳದ ಹಾಗೆ ಮಾಡು. ನಾವು ತಿರುಗಿ ಆ ಮಹಾ ಬೆಂಕಿಯ ಜ್ವಾಲೆಯನ್ನು ನೋಡದ ಹಾಗೆ ಮಾಡು; ಇಲ್ಲವಾದರೆ ನಾವು ಸಾಯುತ್ತೇವೆ!’ ಎಂದು ನನ್ನನ್ನು ಕೇಳಿಕೊಂಡಿರಿ.
17 “ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅವರು ಕೇಳುವ ವಿಷಯವು ಒಳ್ಳೆಯದೇ. 18 ನಾನು ಅವರಿಗಾಗಿ ನಿನ್ನ ತರಹದ ಒಬ್ಬ ಪ್ರವಾದಿಯನ್ನು ಕಳುಹಿಸುವೆನು. ಅವನು ಅವರ ಜನರಲ್ಲಿ ಒಬ್ಬನಾಗಿರುವನು. ಅವನು ಜನರಿಗೆ ತಿಳಿಸಬೇಕಾದ ವಿಷಯವನ್ನು ನಾನೇ ಅವನಿಗೆ ತಿಳಿಸುವೆನು. ನಾನು ಆಜ್ಞಾಪಿಸುವುದೆಲ್ಲವನ್ನು ಅವನು ಜನರಿಗೆ ತಿಳಿಸುವನು. 19 ಈ ಪ್ರವಾದಿಯು ನನ್ನ ಪ್ರತಿನಿಧಿಯಾಗಿ ಮಾತನಾಡುವನು. ಅವನು ಮಾತಾಡುವಾಗ ಯಾವನಾದರೂ ನನ್ನ ಆಜ್ಞೆಗಳನ್ನು ಕೇಳದೆಹೋದರೆ ನಾನು ಅವನನ್ನು ಶಿಕ್ಷಿಸುವೆನು.’
ಸುಳ್ಳು ಪ್ರವಾದಿಗಳನ್ನು ಕಂಡುಹಿಡಿಯುವ ಬಗ್ಗೆ
20 “ಒಬ್ಬ ಪ್ರವಾದಿಯು ನಾನು ಹೇಳದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತಿಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟು ಮಾತ್ರವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನೂ ನೀವು ಸಾಯಿಸಬೇಕು. 21 ‘ಆ ಪ್ರವಾದಿಯು ಹೇಳಿದ್ದು ದೇವರ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ?’ ಎಂದು ನೀವು ಅಂದುಕೊಳ್ಳಬಹುದು. 22 ಒಬ್ಬ ಪ್ರವಾದಿಯು ತಾನು ಯೆಹೋವನಿಂದ ಕಳುಹಿಸಲ್ಪಟ್ಟವನು ಎಂದು ಹೇಳಿಕೊಂಡರೆ ಮತ್ತು ಅವನು ಹೇಳಿದ ಮಾತುಗಳು ನೆರವೇರದೆ ಹೋದರೆ ಆಗ ಆ ವಿಷಯಗಳನ್ನು ಯೆಹೋವನು ಹೇಳಲಿಲ್ಲವೆಂದು ನಿಮಗೆ ಗೊತ್ತಾಗುವುದು. ಆ ಪ್ರವಾದಿಯು ತನ್ನದೆ ಆದ ಆಲೋಚನೆಯನ್ನು ನಿಮಗೆ ಹೇಳುತ್ತಿದ್ದಾನೆಂದು ನಿಮಗೆ ತಿಳಿಯುವುದು. ನೀವು ಅವನಿಗೆ ಭಯಪಡಬೇಡಿರಿ.
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
7 ಯೆಹೋವನೇ ನಮ್ಮ ದೇವರು.
ಆತನು ಇಡೀ ಪ್ರಪಂಚವನ್ನು ಆಳುವನು.[a]
8 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
9 ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
12 ಅಬ್ರಹಾಮನ ಕುಟುಂಬವು ಚಿಕ್ಕದಾಗಿದ್ದಾಗ
ಅವರು ಪ್ರಯಾಣಿಕರಂತೆ ಕಾನಾನಿನಲ್ಲಿ ವಾಸವಾಗಿದ್ದಾಗ,
ಆತನು ಅವರಿಗೆ ಈ ವಾಗ್ದಾನವನ್ನು ಮಾಡಿದನು.
13 ಅವರು ದೇಶದಿಂದ ದೇಶಕ್ಕೂ
ರಾಜ್ಯದಿಂದ ರಾಜ್ಯಕ್ಕೂ ಪ್ರಯಾಣ ಮಾಡಿದರು.
14 ಆದರೆ ಅವರಿಗೆ ಯಾರಿಂದಲೂ ಅನ್ಯಾಯವಾಗದಂತೆ ನೋಡಿಕೊಂಡನು.
ಅವರನ್ನು ನೋಯಿಸಕೂಡದೆಂದು ಆತನು ರಾಜರುಗಳಿಗೆ ಎಚ್ಚರಿಕೆ ನೀಡಿದನು.
15 “ನಾನು ಆರಿಸಿಕೊಂಡಿರುವ ಜನರಿಗೆ ಕೇಡುಮಾಡಬೇಡಿ.
ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡಬೇಡಿ” ಎಂದು ಆತನು ಹೇಳಿದನು.
16 ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು.
ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
17 ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು.
ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು;
ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
19 ಅವನ ಪ್ರವಾದನೆಯು ನೆರವೇರುವ ತನಕ ಅವನು ಗುಲಾಮನಾಗಿದ್ದನು.
ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
20 ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು.
ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
21 ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು.
ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
22 ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು;
ಹಿರಿಯರಿಗೆ ಉಪದೇಶಿಸಿದನು.
23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.
27 ಹಾಮನ ದೇಶದಲ್ಲಿ ದೇವರು ಅನೇಕ ಮಹತ್ಕಾರ್ಯಗಳನ್ನು
ಮೋಶೆ ಆರೋನರ ಮೂಲಕವಾಗಿ ಮಾಡಿದನು.
28 ದೇವರು ಕಾರ್ಗತ್ತಲೆಯನ್ನು ಕಳುಹಿಸಿದನು;
ಆದರೂ ಈಜಿಪ್ಟಿನವರು ಆತನಿಗೆ ಕಿವಿಗೊಡಲಿಲ್ಲ.
29 ಆದ್ದರಿಂದ ಆತನು ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದನು,
ಆಗ ಅವರ ಮೀನುಗಳೆಲ್ಲಾ ಸತ್ತುಹೋದವು.
30 ಬಳಿಕ ಈಜಿಪ್ಟಿನವರ ದೇಶವು ಕಪ್ಪೆಗಳಿಂದ ತುಂಬಿಹೋಯಿತು.
ರಾಜನು ಮಲಗುವ ಕೋಣೆಯಲ್ಲಿಯೂ ಕಪ್ಪೆಗಳಿದ್ದವು.
31 ಆತನು ಆಜ್ಞಾಪಿಸಲು
ವಿಷದ ಹುಳಗಳೂ ಹೇನುಗಳೂ ಬಂದವು.
ಅವು ಎಲ್ಲೆಲ್ಲಿಯೂ ಹರಡಿಕೊಂಡವು.
32 ಆತನು ಮಳೆಯನ್ನು ಕಲ್ಮಳೆಯನ್ನಾಗಿ ಪರಿವರ್ತಿಸಿದನು.
ಅವರ ದೇಶದಲ್ಲಿ ಸಿಡಿಲುಗಳು ಹೊಡೆದವು.
33 ದೇವರು ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡಿದನು.
ಅವರ ದೇಶದ ಪ್ರತಿಯೊಂದು ಮರವನ್ನೂ ಆತನು ನಾಶಮಾಡಿದನು.
34 ಆತನು ಆಜ್ಞಾಪಿಸಲು ಮಿಡತೆಗಳೂ
ಜಿಟ್ಟೆಹುಳಗಳೂ ಅಸಂಖ್ಯಾತವಾಗಿ ಬಂದವು.
35 ಮಿಡತೆಗಳೂ ಜಿಟ್ಟೆಹುಳಗಳೂ ದೇಶದಲ್ಲಿದ್ದ ಸಸಿಗಳನ್ನೆಲ್ಲಾ ತಿಂದುಬಿಟ್ಟವು.
ಭೂಮಿಯ ಮೇಲಿದ್ದ ಬೆಳೆಗಳನ್ನೆಲ್ಲಾ ಅವು ತಿಂದುಬಿಟ್ಟವು.
36 ಬಳಿಕ ದೇವರು ಈಜಿಪ್ಟ್ ದೇಶದ
ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಕೊಂದುಹಾಕಿದನು.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
ಅರಣ್ಯದಲ್ಲಿ ನದಿಯು ಹರಿಯತೊಡಗಿತು!
42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
ಇಸ್ರೇಲಿಗೆ ಸ್ವಾತಂತ್ರ್ಯ ಕೊಡಲು ಯೆಹೋವನಿಂದ ಸೈರಸನ ಆಯ್ಕೆ
45 ತಾನು ಆರಿಸಿರುವ ಅರಸನಾದ ಸೈರಸನಿಗೆ ಯೆಹೋವನು ಹೇಳುವುದೇನೆಂದರೆ:
“ನಾನು ಸೈರಸನ ಬಲಗೈಯನ್ನು ಹಿಡಿಯುವೆನು.
ಅರಸರುಗಳಿಂದ ಅವರ ಅಧಿಕಾರವನ್ನು ತೆಗೆದುಬಿಡುವಂತೆ ಅವನಿಗೆ ಸಹಾಯ ಮಾಡುವೆನು.
ನಗರದ್ವಾರಗಳು ಅವನ ಮುನ್ನುಗ್ಗುವಿಕೆಯನ್ನು ನಿಲ್ಲಿಸದು.
ನಗರದ್ವಾರವನ್ನು ತೆರೆದು ಸೈರಸನು ಒಳಗೆ ಪ್ರವೇಶಿಸುವಂತೆ ಮಾಡುವೆನು.”
2 ಸೈರಸನೇ, ನಿನ್ನ ಸೈನ್ಯವು ಮುನ್ನುಗ್ಗುವದು.
ನಾನು ನಿನ್ನ ಮುಂದೆ ಹೋಗಿ ಪರ್ವತಗಳನ್ನು ನೆಲಸಮ ಮಾಡುವೆನು.
ಹಿತ್ತಾಳೆಯ ನಗರ ದ್ವಾರಗಳನ್ನು ಪುಡಿಪುಡಿ ಮಾಡುವೆನು.
ದ್ವಾರಗಳ ಕಬ್ಬಿಣದ ಅಗುಳಿಗಳನ್ನು ತುಂಡು ಮಾಡಿ ಬಿಡುವೆನು.
3 ಕತ್ತಲೆಯಲ್ಲಿ ಕೂಡಿಸಿಟ್ಟಿದ್ದ ಐಶ್ವರ್ಯವನ್ನೂ
ಗುಪ್ತವಾಗಿಟ್ಟಿದ್ದ ನಿಕ್ಷೇಪವನ್ನೂ ನಾನು ನಿನಗೆ ಕೊಡುವೆನು.
ನಾನೇ ಯೆಹೋವನೆಂದು ನೀನು ತಿಳಿಯುವಂತೆ ಇದನ್ನು ಮಾಡುವೆನು.
ನಾನೇ ಇಸ್ರೇಲರ ದೇವರಾದ ಯೆಹೋವನು. ನಿನ್ನನ್ನು ಹೆಸರೆತ್ತಿ ಕರೆಯುತ್ತಿದ್ದೇನೆ.
4 ನಾನು ನನ್ನ ಸೇವಕನಾದ ಯಾಕೋಬನಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ.
ನಾನು ಆರಿಸಿಕೊಂಡ ಜನಾಂಗವಾದ ಇಸ್ರೇಲಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ.
ಸೈರಸನೇ, ನಾನು ನಿನ್ನ ಹೆಸರೆತ್ತಿ ಕರೆದಿದ್ದೇನೆ.
ನೀನು ನನ್ನನ್ನು ತಿಳಿಯದವನಾಗಿದ್ದರೂ ನಾನು ನಿನಗೆ ಬಿರುದನ್ನು ಅನುಗ್ರಹಿಸಿದ್ದೇನೆ.
5 ಯೆಹೋವನೆಂಬ ನಾನೊಬ್ಬನೇ ದೇವರು.
ನನ್ನ ಹೊರತು ಬೇರೆ ದೇವರುಗಳಿಲ್ಲ.
ನೀನು ಬಟ್ಟೆಗಳನ್ನು ಧರಿಸಿಕೊಳ್ಳುವಂತೆ ಮಾಡಿದವನು ನಾನೇ.
ಆದರೂ ನೀನು ನನ್ನನ್ನು ತಿಳಿದಿಲ್ಲ.
6 ನಾನೊಬ್ಬನೇ ದೇವರೆಂದು ಎಲ್ಲರೂ ತಿಳಿದುಕೊಳ್ಳಲಿ ಎಂದು ನಾನು ಇದನ್ನೆಲ್ಲಾ ಮಾಡುತ್ತಿದ್ದೇನೆ.
ಪೂರ್ವದಿಂದ ಪಶ್ಚಿಮದ ತನಕ ಜನರೆಲ್ಲರೂ ನಾನೇ ದೇವರೆಂದೂ
ನನ್ನ ಹೊರತು ಬೇರೆ ದೇವರಿಲ್ಲವೆಂದೂ ತಿಳಿದುಕೊಳ್ಳುವರು.
7 ಬೆಳಕನ್ನೂ ಕತ್ತಲೆಯನ್ನೂ ಉಂಟುಮಾಡಿದವನು ನಾನೇ.
ಸಮಾಧಾನವನ್ನು ತರುವವನೂ ತೊಂದರೆಗಳನ್ನು ಬರಮಾಡುವವನೂ ನಾನೇ.
ಯೆಹೋವನಾದ ನಾನೇ ಇವೆಲ್ಲವನ್ನು ಮಾಡುವೆನು.
8 “ಆಕಾಶದಲ್ಲಿರುವ ಮೋಡಗಳು ಒಳ್ಳೆಯತನವನ್ನು
ಭೂಮಿಯ ಮೇಲೆ ಮಳೆಯಂತೆ ಸುರಿಸಲಿ.
ಭೂಮಿಯು ತೆರೆಯಲ್ಪಡಲಿ;
ರಕ್ಷಣೆಯು ಬೆಳೆಯಲಿ.
ಒಳ್ಳೆತನವು ಅದರೊಂದಿಗೆ ಬೆಳೆಯಲಿ.
ಯೆಹೋವನೆಂಬ ನಾನೇ ಅವನನ್ನು ನಿರ್ಮಿಸಿದೆನು.”
ದೇವರು ತನ್ನ ಸೃಷ್ಟಿಯನ್ನು ನಿಯಂತ್ರಿಸುವನು
9 “ಈ ಜನರನ್ನು ನೋಡು. ತಮ್ಮನ್ನು ಸೃಷ್ಟಿದಾತನೊಂದಿಗೆ ವಾದಿಸುತ್ತಿದ್ದಾರೆ. ನನ್ನೊಂದಿಗೆ ವಾದಿಸುವದನ್ನು ನೋಡಿರಿ! ಅವರು ಒಡೆಯಲ್ಪಟ್ಟ ಮಣ್ಣಿನ ಮಡಿಕೆಯ ತುಂಡುಗಳಂತಿದ್ದಾರೆ. ಒಬ್ಬನು ಮೃದುವಾದ ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡುತ್ತಾನೆ. ಆ ಮಡಿಕೆಯು ಕುಂಬಾರನಿಗೆ, ‘ನೀನು ಮಾಡುತ್ತಿರುವುದೇನು?’ ಎಂದು ಪ್ರಶ್ನಿಸುವದಿಲ್ಲ. ತಯಾರಿಸಲ್ಪಟ್ಟ ವಸ್ತುಗಳಿಗೆ ತಯಾರಿಸಿದವನನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಜನರು ಈ ಜೇಡಿಮಣ್ಣಿನಂತೆ ಇದ್ದಾರೆ. 10 ತಂದೆಯು ಮಕ್ಕಳನ್ನು ಹುಟ್ಟಿಸುತ್ತಾನೆ. ಮಕ್ಕಳು ತಂದೆಯನ್ನು, ‘ನನಗೆ ಜೀವ ಯಾಕೆ ಕೊಟ್ಟೆ?’ ಎಂದು ಕೇಳಲಾಗುವುದಿಲ್ಲ. ಮಕ್ಕಳು ತಮ್ಮ ತಾಯಿಗೆ, ‘ನನ್ನನ್ನು ಯಾಕೆ ಹೆತ್ತದ್ದು ಎಂದು ಕೇಳಲಾಗುವುದಿಲ್ಲ.’”
11 ದೇವರಾದ ಯೆಹೋವನು ಇಸ್ರೇಲರ ಪರಿಶುದ್ಧನಾಗಿದ್ದಾನೆ. ಆತನು ಇಸ್ರೇಲನ್ನು ಸೃಷ್ಟಿಸಿದನು. ಯೆಹೋವನು ಹೇಳುವುದೇನೆಂದರೆ,
“ನಾನು ಕೈಯಾರೆ ಮಾಡಿದ ಮಕ್ಕಳ ಬಗ್ಗೆ ನೀನು ಪ್ರಶ್ನಿಸುವಿಯಾ?
ನಾನು ಏನು ಮಾಡಬೇಕೆಂದು ನೀನು ನನಗೆ ಆಜ್ಞಾಪಿಸುವಿಯೋ?
12 ಭೂಮಿಯನ್ನು ನಿರ್ಮಿಸಿದವನೂ
ಅದರಲ್ಲಿ ವಾಸಿಸುವ ಎಲ್ಲಾ ಜನರನ್ನು ಉಂಟುಮಾಡಿದವನೂ ನಾನೇ.
ನನ್ನ ಸ್ವಹಸ್ತದಿಂದ ಆಕಾಶಮಂಡಲವನ್ನು ನಿರ್ಮಿಸಿದ್ದೇನೆ.
ಆಕಾಶದಲ್ಲಿರುವ ಎಲ್ಲಾ ನಕ್ಷತ್ರಪುಂಜಗಳನ್ನು ನನ್ನ ಹತೋಟಿಯಲ್ಲಿಟ್ಟಿದ್ದೇನೆ.
13 ನಾನು ಸೈರಸನಿಗೆ ಸುಕಾರ್ಯಗಳನ್ನು ಮಾಡಲು ಶಕ್ತಿಯನ್ನು ಕೊಟ್ಟಿದ್ದೇನೆ.
ಅವನ ಕೆಲಸಗಳನ್ನೆಲ್ಲಾ ಸುಲಭಗೊಳಿಸುತ್ತೇನೆ.
ಸೈರಸನು ನನ್ನ ಪಟ್ಟಣವನ್ನು ಮತ್ತೆ ಕಟ್ಟುವನು;
ನನ್ನ ಜನರಿಗೆ ಸ್ವಾತಂತ್ರ್ಯವನ್ನು ಕೊಡುವನು. ನನ್ನ ಜನರನ್ನು ಸೈರಸನು ನನಗೆ ಮಾರಿಬಿಡುವದಿಲ್ಲ.
ಈ ಕಾರ್ಯಗಳನ್ನೆಲ್ಲ ಮಾಡುವದಕ್ಕೆ ನಾನು ಅವನಿಗೆ ಹಣ ಕೊಡುವ ಅವಶ್ಯವಿಲ್ಲ.
ಜನರು ಸ್ವತಂತ್ರರಾಗುವರು. ಇದಕ್ಕಾಗಿ ನನಗೇನೂ ಖರ್ಚು ಇಲ್ಲ.”
ಇದು ಸರ್ವಶಕ್ತನಾದ ಯೆಹೋವನ ನುಡಿ.
14 ಯೆಹೋವನು ಹೇಳುವುದೇನೆಂದರೆ, “ಈಜಿಪ್ಟ್ ಮತ್ತು ಇಥಿಯೋಪ್ಯ ಐಶ್ವರ್ಯವುಳ್ಳ ರಾಜ್ಯಗಳಾಗಿವೆ.
ಇಸ್ರೇಲೇ, ನೀನು ಆ ಐಶ್ವರ್ಯವನ್ನು ಪಡೆದುಕೊಳ್ಳುವೆ.
ಸೆಬಾದ ಉನ್ನತ ಜನರು ನಿನ್ನವರಾಗುವರು.
ಅವರು ತಮ್ಮ ಕುತ್ತಿಗೆಗಳಲ್ಲಿ ಸಂಕೋಲೆಗಳಿಂದ ಬಂಧಿತರಾಗಿ ನಿಮ್ಮ ಹಿಂದೆ ನಡೆಯುವರು.
ಅವರು ನಿಮ್ಮ ಮುಂದೆ ಅಡ್ಡಬಿದ್ದು,
‘ಇಸ್ರೇಲೇ, ದೇವರು ನಿಜವಾಗಿ ನಿಮ್ಮೊಂದಿಗಿದ್ದಾನೆ.
ಬೇರೆ ದೇವರುಗಳೇ ಇಲ್ಲ’”
ಎಂದು ನಿಮ್ಮಲ್ಲಿ ಪ್ರಾರ್ಥಿಸುವರು.
15 ದೇವರೇ, ಜನರು ನಿನ್ನನ್ನು ಕಾಣಲಾರರು.
ನೀನೇ ಇಸ್ರೇಲರ ವಿಮೋಚಕನು.
16 ಎಷ್ಟೋ ಜನರು ಸುಳ್ಳುದೇವರುಗಳನ್ನು ರೂಪಿಸಿಕೊಂಡು ನಿರಾಶರಾಗುವರು.
ಅವರೆಲ್ಲರೂ ನಾಚಿಕೆಗೆ ಗುರಿಯಾಗುವರು.
17 ಆದರೆ ಇಸ್ರೇಲು ಯೆಹೋವನಿಂದ ರಕ್ಷಿಸಲ್ಪಡುವದು.
ಆ ರಕ್ಷಣೆಯು ಶಾಶ್ವತವಾದದ್ದು.
ಇನ್ನೆಂದಿಗೂ ಇಸ್ರೇಲ್ ನಾಚಿಕೆಗೆ ಒಳಗಾಗುವದಿಲ್ಲ.
18 ಯೆಹೋವನು ದೇವರಾಗಿದ್ದಾನೆ.
ಆತನು ಭೂಮ್ಯಾಕಾಶಗಳನ್ನು ಉಂಟುಮಾಡಿದ್ದಾನೆ.
ಆತನು ಭೂಮಿಯನ್ನು ಅದರ ಸ್ಥಾನದಲ್ಲಿ ಇಟ್ಟಿದ್ದಾನೆ.
ಆತನು ಈ ಲೋಕವನ್ನು ಸೃಷ್ಟಿಸಿದ್ದು ಅದು ಶೂನ್ಯವಾಗಿರಲೆಂದಲ್ಲ.
ಅದು ಜನಭರಿತವಾಗಿರಲೆಂದೇ ಸೃಷ್ಟಿಸಿದನು.
“ನಾನೇ ಯೆಹೋವನು,
ನನ್ನ ಹೊರತು ಬೇರೆ ದೇವರುಗಳಿಲ್ಲ.
19 ನಾನು ಗುಪ್ತವಾಗಿ ಮಾತನಾಡದೆ ಬಹಿರಂಗವಾಗಿಯೇ ಮಾತನಾಡಿದ್ದೇನೆ.
ಈ ಭೂಮಿಯ ಕತ್ತಲೆಯ ಸ್ಥಳದಲ್ಲಿ ನನ್ನ ಮಾತುಗಳನ್ನು ಅಡಗಿಸಿಡಲಿಲ್ಲ.
ನನ್ನನ್ನು ಕಂಡುಹಿಡಿಯಲು ಗುಪ್ತಸ್ಥಳದಲ್ಲಿ ಹುಡುಕಿರಿ
ಎಂದು ನಾನು ಯಾಕೋಬನ ಜನರಿಗೆ ಹೇಳಲಿಲ್ಲ.
ನಾನೇ ಯೆಹೋವನು. ನಾನು ಸತ್ಯವನ್ನೇ ಆಡುವೆನು.
ಯೆಹೋವನೊಬ್ಬನೇ ದೇವರು
20 “ಬೇರೆ ದೇಶಗಳಿಂದ ಪಾರಾಗಿ ಬಂದ ಜನರೇ, ಒಟ್ಟಾಗಿ ಸೇರಿಕೊಂಡು ನನ್ನ ಮುಂದೆ ಬನ್ನಿರಿ. (ಈ ಜನರು ಮರದ ವಿಗ್ರಹಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮನ್ನು ರಕ್ಷಿಸಲಾರದ ವಿಗ್ರಹಕ್ಕೆ ಅವರು ಪ್ರಾರ್ಥಿಸುತ್ತಿದ್ದಾರೆ. ಅವರು ಮಾಡುವದು ಅವರಿಗೇ ತಿಳಿಯದು. 21 ನನ್ನ ಬಳಿಗೆ ಬರಲು ಅವರಿಗೆ ಹೇಳು. ತಾವು ವಿಗ್ರಹಗಳನ್ನು ಯಾಕೆ ನಂಬುತ್ತಾರೆಂದು ನನ್ನೊಂದಿಗೆ ವಾದಿಸಲಿ.)
“ಬಹಳ ಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ನಿಮಗೆ ತಿಳಿಸಿದವರು ಯಾರು? ಬಹಳ ಕಾಲದಿಂದ ಈ ವಿಷಯಗಳನ್ನು ನಿಮಗೆ ತಿಳಿಸುತ್ತಾ ಬಂದವರು ಯಾರು? ನಾನೇ. ಯೆಹೋವನಾದ ನಾನೇ ನಿಮಗೆಲ್ಲವನ್ನು ತಿಳಿಸಿದೆನು. ನಾನೊಬ್ಬನೇ ದೇವರು. ನನ್ನಂಥ ದೇವರು ಬೇರೆ ಇದ್ದಾರೆಯೇ? ಕರುಣೆಯುಳ್ಳ ದೇವರು ಬೇರೆಲ್ಲಾದರೂ ಇರುವನೇ? ತನ್ನ ಜನರನ್ನು ವಿಮೋಚಿಸುವಂಥ ಬೇರೆ ದೇವರು ಇರುವನೇ? ಇಲ್ಲ! ಬೇರೆ ದೇವರು ಇಲ್ಲ! 22 ದೂರದೇಶದಲ್ಲಿರುವ ಜನರೇ, ನೀವು ಸುಳ್ಳುದೇವರನ್ನು ಅವಲಂಬಿಸುವದನ್ನು ನಿಲ್ಲಿಸಿರಿ. ನನ್ನನ್ನು ಹಿಂಬಾಲಿಸಿ ರಕ್ಷಣೆ ಹೊಂದಿರಿ. ನಾನೇ ದೇವರು, ಬೇರೆ ದೇವರುಗಳೇ ಇಲ್ಲ. ನಾನೊಬ್ಬನೇ ದೇವರು.
23 “ನನ್ನ ಪರಾಕ್ರಮದಿಂದ ನಾನು ವಾಗ್ದಾನ ಮಾಡುತ್ತೇನೆ. ನನ್ನ ಆಜ್ಞೆಯು ನ್ಯಾಯವಾದದ್ದೂ ನೀತಿಯುಳ್ಳದ್ದೂ ಆಗಿದೆ. ಇಂಥದ್ದು ನಾನು ಆಜ್ಞಾಪಿಸಿದಂತೆಯೇ ಸಂಭವಿಸುವದು. ಎಲ್ಲಾ ಜನರು ನನ್ನ ಮುಂದೆ ಅಡ್ಡಬೀಳುವರೆಂದು ನಾನು ವಾಗ್ದಾನ ಮಾಡುತ್ತೇನೆ. ಪ್ರತಿಯೊಬ್ಬನೂ ನನ್ನನ್ನು ಹಿಂಬಾಲಿಸಲು ಪ್ರತಿಜ್ಞೆ ಮಾಡುವನು. 24 ಜನರು ಹೀಗೆನ್ನುವರು: ‘ಶಕ್ತಿಯೂ, ಒಳ್ಳೆಯತನವೂ ಯೆಹೋವನಿಂದಲೇ ಬರುವದು.’”
ಕೆಲವರು ಯೆಹೋವನ ಮೇಲೆ ಸಿಟ್ಟುಗೊಂಡಿದ್ದಾರೆ. ಆದರೆ ಆತನ ಸಾಕ್ಷಿಗಳು ಆತನು ಮಾಡಿದ ಕಾರ್ಯಗಳ ಕುರಿತು ಹೇಳುವರು. ಆಗ ಸಿಟ್ಟುಗೊಂಡವರು ನಾಚಿಕೆಗೆ ಒಳಗಾಗುವರು. 25 ಇಸ್ರೇಲರು ಧರ್ಮದಲ್ಲಿ ನಡೆಯುವಂತೆ ಯೆಹೋವನು ಮಾಡುವನು. ಜನರು ಯೆಹೋವನ ಬಗ್ಗೆ ಬಹಳವಾಗಿ ಹೆಚ್ಚಳಪಡುವರು.
ದೇವದೂತರಿಂದ ಕೊನೆಯ ಉಪದ್ರವಗಳು
15 ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.
2 ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು. 3 ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ,
ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ.
ಸರ್ವಜನಾಂಗಗಳ ರಾಜನೇ,
ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
4 ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ;
ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ.
ನೀನು ಮಾತ್ರ ಪರಿಶುದ್ಧನಾದವನು.
ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ
ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”
5 ಇದಾದ ನಂತರ ನಾನು ನೋಡಿದಾಗ ಪರಲೋಕದ ಆಲಯವು (ದೇವದರ್ಶನ ಗುಡಾರವು) ತೆರೆಯಿತು. 6 ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಆಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಪ್ರಕಾಶಮಾನವಾದ ನಾರುಮಡಿಯನ್ನು ಧರಿಸಿದ್ದರು. ಅವರು ಎದೆಯ ಸುತ್ತಲೂ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡಿದ್ದರು. 7 ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ನೀಡಿತು. ಈ ಪಾತ್ರೆಗಳು ಯುಗಯುಗಾಂತರಗಳಲ್ಲಿಯೂ ಜೀವಿಸುವ ದೇವರ ಕೋಪದಿಂದ ತುಂಬಿದ್ದವು. 8 ದೇವರ ವೈಭವ ಮತ್ತು ಶಕ್ತಿಯ ಹೊಗೆಯಿಂದ ಆಲಯವು ತುಂಬಿಹೋಯಿತು. ಏಳು ದೇವದೂತರ ಏಳು ಉಪದ್ರವಗಳು ಮುಗಿಯುವ ತನಕ ಆಲಯದಲ್ಲಿ ಪ್ರವೇಶಿಸಲು ಯಾರಿಗೂ ಸಾಧ್ಯವಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International