M’Cheyne Bible Reading Plan
ಕಳಂಕ, ದೋಷವಿಲ್ಲದ ಪ್ರಾಣಿಗಳನ್ನೇ ಬಲಿಕೊಡಿರಿ
17 “ನಿಮ್ಮ ದೇವರಾದ ಯೆಹೋವನಿಗೆ ನೀವು ಪಶುಗಳನ್ನಾಗಲಿ ಆಡುಕುರಿಮರಿಗಳನ್ನಾಗಲಿ ಸಮರ್ಪಿಸುವಾಗ ಅವು ಕಳಂಕವಿಲ್ಲದೆ ಪೂರ್ಣಾಂಗವಾಗಿರಬೇಕು; ದೋಷಪೂರಿತ ಯಜ್ಞವನ್ನು ಆತನು ದ್ವೇಷಿಸುತ್ತಾನೆ.
ವಿಗ್ರಹಾರಾಧನೆ ಮಾಡಿದರೆ ದೊರಕುವ ಶಿಕ್ಷೆ
2 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಒಂದು ಪಟ್ಟಣದಲ್ಲಿ ನೀವು ಕೆಟ್ಟ ಸುದ್ದಿಯೊಂದನ್ನು ಅಂದರೆ ಒಬ್ಬ ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ದೇವರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿದು ಆತನಿಗೆ ವಿರುದ್ಧವಾಗಿ ಪಾಪಮಾಡಿ 3 ಅವರು ಬೇರೆ ದೇವರುಗಳನ್ನಾಗಲಿ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ ಪೂಜಿಸುತ್ತಾರೆ ಎಂಬ ಸುದ್ದಿಯನ್ನು ನೀವು ಕೇಳಿದರೂ ಕೇಳಬಹುದು, ಅದು ದೇವರ ಕಟ್ಟಳೆಗೆ ವಿರುದ್ಧವಾದದ್ದು. 4 ಇಂಥಾ ಕೆಟ್ಟ ಸುದ್ದಿಯನ್ನು ನೀವು ಕೇಳಿದರೆ ಮೊಟ್ಟಮೊದಲಾಗಿ ಅದು ಸತ್ಯವೋ ಸುಳ್ಳೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಅಂಥ ಭಯಂಕರ ಸಂಗತಿಯು ಇಸ್ರೇಲಿನಲ್ಲಿ ಸಂಭವಿಸಿದ್ದು ನಿಜವಾಗಿದ್ದಲ್ಲಿ, 5 ಆ ಪಾಪಮಾಡಿದವನಿಗೆ ಶಿಕ್ಷೆಯನ್ನು ವಿಧಿಸಬೇಕು. ಪಟ್ಟಣದ ಹೆಬ್ಬಾಗಿಲ ಹೊರಗಿರುವ ಬಯಲಿಗೆ ಆ ತಪ್ಪು ಮಾಡಿದ ಸ್ತ್ರೀಯನ್ನೂ, ಪುರುಷನನ್ನೂ ತೆಗೆದುಕೊಂಡು ಹೋಗಿ ಅಲ್ಲಿ ಅವರನ್ನು ಕಲ್ಲೆಸೆದು ಸಾಯಿಸಬೇಕು. 6 ಅವರು ವಿಗ್ರಹಾರಾಧನೆ ಮಾಡಿದ್ದಕ್ಕೆ ಒಂದೇ ಸಾಕ್ಷಿ ಇರುವುದಾದರೆ ಅವರಿಗೆ ಮರಣಶಿಕ್ಷೆಯಾಗಬಾರದು. ಆದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳು ಅವರು ವಿಗ್ರಹಾರಾಧನೆ ಮಾಡಿದ್ದು ಸತ್ಯವೆಂದು ಹೇಳಿದರೆ ಮಾತ್ರ ಅವರನ್ನು ಸಾಯಿಸಬೇಕು. 7 ಸತ್ಯವೆಂದು ಹೇಳಿದ ಸಾಕ್ಷಿಗಳು ಮೊದಲು ಅವರ ಮೇಲೆ ಕಲ್ಲೆಸೆಯಬೇಕು. ಅನಂತರ ಬೇರೆಯವರು ಕಲ್ಲೆಸೆದು ಅವರನ್ನು ಸಾಯಿಸಬೇಕು. ಈ ರೀತಿಯಾಗಿ ನಿಮ್ಮ ಮಧ್ಯೆ ಇದ್ದ ದುಷ್ಕೃತ್ಯವನ್ನು ತೆಗೆದುಹಾಕಬೇಕು.
ನ್ಯಾಯಸ್ಥಾನದಲ್ಲಿ ಬಗೆಹರಿಸಲಾಗದ ವಿಷಯಗಳು
8 “ನಿಮ್ಮ ನ್ಯಾಯಸ್ಥಾನದಲ್ಲಿ ನ್ಯಾಯತೀರಿಸಲಾಗದ ಕಷ್ಟದ ಸಮಸ್ಯೆಗಳು ಬರುವವು. ಅವು ಕೊಲೆ ಅಥವಾ ಇಬ್ಬರ ಮಧ್ಯೆ ವಿವಾದವಿರಬಹುದು; ಅಥವಾ ಜಗಳಮಾಡಿ ಗಾಯಗೊಂಡಿರುವ ಪ್ರಕರಣವಾಗಿರಬಹುದು. ನಿಮ್ಮ ಪಟ್ಟಣಗಳ ನ್ಯಾಯಸ್ಥಾನದಲ್ಲಿ ಈ ಪ್ರಕರಣಗಳ ವಿಚಾರಣೆ ನಡಿಸುವಾಗ ಸರಿಯಾದ ಇತ್ಯರ್ಥಮಾಡಿ ತೀರ್ಪುಮಾಡಲು ಕಷ್ಟವಾದಲ್ಲಿ ನೀವು ದೇವರು ಆರಿಸುವ ಸ್ಥಳಕ್ಕೆ ಹೋಗಬೇಕು. 9 ಲೇವಿಕುಲದ ಯಾಜಕರ ಬಳಿಗೂ ಅಲ್ಲಿ ಆ ಸಮಯದಲ್ಲಿರುವ ನ್ಯಾಯಾಧೀಶನ ಬಳಿಗೂ ಹೋಗಿ ಅವರಿಗೆ ವಿಷಯವನ್ನು ತಿಳಿಸಬೇಕು. ಅವರು ನಿಮ್ಮ ಮುಂದಿರುವ ಬಗೆಹರಿಯಲಾಗದ ಪ್ರಕರಣವನ್ನು ಆಲೈಸಿ, ವಿಚಾರಿಸಿ, 10 ಯೆಹೋವನ ವಿಶೇಷವಾದ ಸ್ಥಳದಲ್ಲಿ ತಮ್ಮ ತೀರ್ಪನ್ನು ಕೊಡುವರು. ಅವರು ಏನು ಹೇಳುತ್ತಾರೋ ಅದಕ್ಕೆ ಸಂಪೂರ್ಣವಾಗಿ ಒಪ್ಪಿಗೆ ನೀಡಬೇಕು. ನೀವು ಏನು ಮಾಡಬೇಕೆಂದು ಅವರು ಹೇಳುತ್ತಾರೋ ಅದನ್ನು ನೀವು ಮಾಡಲೇಬೇಕು. 11 ಅವರು ಹೇಳಿದ ಹಾಗೆ ಎಲ್ಲವನ್ನು ಅಕ್ಷರಶಃ ಪರಿಪಾಲಿಸಬೇಕು. ಅವರ ತೀರ್ಪನ್ನು ಬದಲಾಯಿಸಬಾರದು.
12 “ನಿಮ್ಮ ದೇವರಾದ ಯೆಹೋವನ ಸೇವೆಮಾಡುತ್ತಿರುವ ಯಾಜಕನಾಗಲಿ ನ್ಯಾಯಾಧೀಶನಾಗಲಿ ಹೇಳಿದ ತೀರ್ಪನ್ನು ಉಲ್ಲಂಘಿಸಿದವನಿಗೆ ಮರಣದಂಡನೆ ಆಗಬೇಕು. ನೀವು ಆ ದುಷ್ಟನನ್ನು ಇಸ್ರೇಲಿನಿಂದ ನಿರ್ಮೂಲ ಮಾಡಬೇಕು. 13 ಈ ದಂಡನೆಯ ಬಗ್ಗೆ ಜನರು ಕೇಳಿ ಭಯಪಟ್ಟು ಅಂಥ ಕೆಟ್ಟ ಕೃತ್ಯಗಳನ್ನು ಮಾಡದಿರುವರು.
ಅರಸನನ್ನು ಆರಿಸುವ ರೀತಿ
14 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಪ್ರವೇಶಿಸುವಿರಿ. ಆ ಸ್ಥಳಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ನೆಲೆಸುವಿರಿ. ಆಗ ನೀವು ‘ನಮ್ಮ ಸುತ್ತಲಿನ ದೇಶದಲ್ಲಿರುವಂತೆಯೇ ನಮಗೂ ಒಬ್ಬ ರಾಜನು ಬೇಕು’ ಎಂದು ಹೇಳುವಿರಿ. 15 ಅಂಥ ಸಮಯದಲ್ಲಿ ಯೆಹೋವನು ಆರಿಸಿಕೊಂಡವನನ್ನೇ ನೀವು ರಾಜನನ್ನಾಗಿ ಆರಿಸಿಕೊಳ್ಳಬೇಕು; ಅವನು ನಿಮ್ಮ ಸ್ವಂತ ಜನರಲ್ಲಿ ಒಬ್ಬನಾಗಿರಬೇಕು; ಪರದೇಶಸ್ಥನನ್ನು ನೀವು ನಿಮ್ಮ ರಾಜನನ್ನಾಗಿ ಆರಿಸಬಾರದು. 16 ಅರಸನು ತನ್ನ ಉಪಯೋಗಕ್ಕಾಗಿ ಹೆಚ್ಚೆಚ್ಚಾಗಿ ಕುದುರೆಗಳನ್ನು ಖರೀದಿಸಬಾರದು; ಜನರನ್ನು ಈಜಿಪ್ಟಿಗೆ ಕಳುಹಿಸಿ ಅಲ್ಲಿಂದ ಹೆಚ್ಚುಹೆಚ್ಚು ಕುದುರೆಗಳನ್ನು ತರಿಸಬಾರದು; ಯಾಕೆಂದರೆ, ‘ನೀವು ಆ ಮಾರ್ಗದಲ್ಲಿ ಹಿಂದಕ್ಕೆ ಹೋಗಲೇಬಾರದು’ ಎಂದು ಯೆಹೋವನು ಹೇಳಿದ್ದಾನೆ. 17 ಅರಸನಿಗೆ ಮಿತಿಮೀರಿ ಪತ್ನಿಯರು ಇರಬಾರದು. ಯಾಕೆಂದರೆ ಅವರು ಅರಸನನ್ನು ಯೆಹೋವನ ಮಾರ್ಗದಲ್ಲಿ ನಡೆಯದಂತೆ ಮಾಡಿ ಬೇರೆ ಕಡೆಗೆ ತಿರುಗಿಸುವರು. ರಾಜನು ಬೆಳ್ಳಿಬಂಗಾರಗಳನ್ನು ಶೇಖರಿಸಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಳ್ಳಬಾರದು.
18 “ರಾಜನು ರಾಜ್ಯವಾಳಲು ಆರಂಭಿಸುವಾಗ, ಯಾಜಕರ ಮತ್ತು ಲೇವಿಯರ ಪುಸ್ತಕಗಳಿಂದ ಧರ್ಮಶಾಸ್ತ್ರವನ್ನು ತನಗಾಗಿ ಪುಸ್ತಕ ರೂಪದಲ್ಲಿ ಬರೆಸಿಟ್ಟುಕೊಳ್ಳಬೇಕು. 19 ಅವನು ಆ ಪುಸ್ತಕವನ್ನು ತನ್ನೊಂದಿಗಿಟ್ಟುಕೊಂಡು ಅದನ್ನು ತನ್ನ ಜೀವಮಾನ ಪೂರ್ತಿ ಪದೇಪದೇ ಓದುತ್ತಿರಬೇಕು. ಯಾಕೆಂದರೆ ಧರ್ಮಶಾಸ್ತ್ರವು ಆಜ್ಞಾಪಿಸುವ ಪ್ರತಿಯೊಂದಕ್ಕೂ ಸಂಪೂರ್ಣವಾಗಿ ವಿಧೇಯನಾಗಲು ಅವನು ಕಲಿತುಕೊಳ್ಳಬೇಕು. 20 ಆಗ ಅರಸನು ತನ್ನ ಪ್ರಜೆಗಳಿಗಿಂತ ತಾನು ಉತ್ತಮನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ಧರ್ಮಶಾಸ್ತ್ರಕ್ಕೆ ವಿಮುಖನಾಗದೆ ಅದನ್ನು ಚಾಚೂತಪ್ಪದೆ ಅನುಸರಿಸುವನು. ಆಗ ರಾಜನೂ ಅವನ ಸಂತತಿಯವರೂ ಇಸ್ರೇಲ್ ರಾಜ್ಯವನ್ನು ಬಹುಕಾಲ ಆಳುವರು.
104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
2 ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
3 ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
4 ಗಾಳಿಯನ್ನು ನಿನ್ನ ದೂತರನ್ನಾಗಿಯೂ
ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
5 ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
ಅದೆಂದಿಗೂ ನಾಶವಾಗದು.
6 ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
7 ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
ನೀನು ಬರ್ಜಿಸಲು ನೀರು ಓಡಿಹೋಯಿತು.
8 ಜಲರಾಶಿಗಳು ಬೆಟ್ಟಗಳಿಂದ ಇಳಿದು
ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
9 ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.
10 ನೀನು ನೀರನ್ನು ಬುಗ್ಗೆಗಳಿಂದ ತೊರೆಗಳಿಗೆ ಹರಿಯಮಾಡುವೆ.
ಬೆಟ್ಟದ ತೊರೆಗಳ ಮೂಲಕ ನೀರು ಹರಿದುಹೋಗುವುದು.
11 ತೊರೆಗಳು ಎಲ್ಲಾ ಕಾಡುಪ್ರಾಣಿಗಳಿಗೆ ನೀರನ್ನು ಕೊಡುತ್ತವೆ.
ಕಾಡುಕತ್ತೆಗಳು ಸಹ ನೀರಿಗಾಗಿ ಅಲ್ಲಿಗೆ ಬರುತ್ತವೆ.
12 ಕಾಡುಪಕ್ಷಿಗಳು ಬಂದು ನೀರಿನ ಹಳ್ಳಗಳ ಬಳಿಯಲ್ಲಿ ವಾಸಿಸುತ್ತವೆ.
ಸಮೀಪದ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.
13 ಆತನು ಬೆಟ್ಟಗಳ ಮೇಲೆ ಮಳೆಯನ್ನು ಸುರಿಸುವನು.
ಆತನ ಸೃಷ್ಟಿಗಳು ಭೂಮಿಗೆ ಅಗತ್ಯವಾದ ಪ್ರತಿಯೊಂದನ್ನೂ ಒದಗಿಸುತ್ತವೆ.
14 ನೀನು ಪಶುಗಳಿಗೋಸ್ಕರ ಹುಲ್ಲನ್ನು ಬೆಳೆಯ ಮಾಡುವೆ.
ನಾವು ದುಡಿದು ಬೆಳೆಸುವುದಕ್ಕಾಗಿ ಸಸಿಗಳನ್ನು ಕೊಟ್ಟಿರುವೆ.
ಅವು ಬೆಳೆದು ನಮಗೆ ಆಹಾರವನ್ನು ಒದಗಿಸುತ್ತವೆ.
15 ನಮ್ಮನ್ನು ಸಂತೋಷಪಡಿಸುವ ದ್ರಾಕ್ಷಾರಸವನ್ನೂ
ನಮ್ಮ ಚರ್ಮವನ್ನು ಮೃದುಗೊಳಿಸುವ[b] ಎಣ್ಣೆಯನ್ನೂ
ನಮ್ಮನ್ನು ಬಲಗೊಳಿಸುವ ಆಹಾರವನ್ನೂ ನಮಗೆ ದೇವರು ಕೊಡುತ್ತಾನೆ.
16 ಲೆಬನೋನಿನ ದೇವದಾರು ವೃಕ್ಷಗಳು ಯೆಹೋವನವೇ,
ಅವುಗಳನ್ನು ನೆಟ್ಟಾತನು ಯೆಹೋವನೇ.
ಆತನೇ ಅವುಗಳಿಗೆ ಬೇಕಾದ ನೀರನ್ನು ಒದಗಿಸುವನು.
17 ಪಕ್ಷಿಗಳು ಗೂಡುಗಳನ್ನು ಆ ಮರಗಳಲ್ಲಿ ಕಟ್ಟಿಕೊಳ್ಳುತ್ತವೆ.
ದೊಡ್ಡ ಕೊಕ್ಕರೆಗಳು ತುರಾಯಿ ಮರಗಳಲ್ಲಿ ಜೀವಿಸುತ್ತವೆ.
18 ಎತ್ತರವಾದ ಬೆಟ್ಟಗಳು ಕಾಡುಕುರಿಗಳಿಗೆ ವಾಸಸ್ಥಳವಾಗಿವೆ.
ದೊಡ್ಡ ಬಂಡೆಗಳು ಬೆಟ್ಟದ ಮೊಲಗಳಿಗೆ ಆಶ್ರಯಸ್ಥಾನಗಳಾಗಿವೆ.
19 ವಿಶೇಷಕಾಲಗಳ ಸೂಚನೆಗಾಗಿ ನೀನು ನಮಗೆ ಚಂದ್ರನನ್ನು ಕೊಟ್ಟಿರುವೆ.
ಸೂರ್ಯನಿಗೆ ತಾನು ಮುಳುಗತಕ್ಕ ಸಮಯವು ಯಾವಾಗಲೂ ತಿಳಿದಿದೆ.
20 ನೀನು ಕತ್ತಲೆಯನ್ನು ರಾತ್ರಿಯನ್ನಾಗಿ ಮಾಡಿದೆ.
ಕಾಡುಪ್ರಾಣಿಗಳು ರಾತ್ರಿಯಲ್ಲಿ ಹೊರಬಂದು ಸುತ್ತಮುತ್ತ ಓಡಾಡುತ್ತವೆ.
21 ಸಿಂಹಗಳು ಬೇಟೆಯಾಡುವಾಗ ಆಹಾರಕ್ಕಾಗಿ
ದೇವರನ್ನು ಕೇಳಿಕೊಳ್ಳುತ್ತಿವೆಯೊ ಎಂಬಂತೆ ಬರ್ಜಿಸುತ್ತವೆ.
22 ಸೂರ್ಯನು ಮೇಲೇರುವಾಗ,
ಪ್ರಾಣಿಗಳು ತಮ್ಮ ಗುಹೆಗಳಿಗೆ ಹೋಗಿ ವಿಶ್ರಮಿಸಿಕೊಳ್ಳುತ್ತವೆ.
23 ಬಳಿಕ ಜನರು ಕೆಲಸಕಾರ್ಯಗಳಿಗಾಗಿ ಹೊರಟು
ಸಾಯಂಕಾಲದವರೆಗೂ ದುಡಿಯುವರು.
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
ಹಡಗು ಸಮುದ್ರದ ಮೇಲೆ ಸಂಚರಿಸುವುದು.
27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.
31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
ಅವು ಜ್ವಾಲಾಮುಖಿಗಳಾಗುತ್ತವೆ.
33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!
ಯೆಹೋವನನ್ನು ಕೊಂಡಾಡು!
ಯೆಹೋವನೇ ದೇವರು
44 “ಯಾಕೋಬೇ, ನೀನೇ ನನ್ನ ಸೇವಕ. ನನ್ನ ಮಾತುಗಳನ್ನು ಕೇಳು. ಇಸ್ರೇಲೇ, ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ. ನಾನು ಹೇಳುವುದನ್ನು ಕೇಳು. 2 ಯೆಹೋವನಾದ ನಾನೇ ನಿನ್ನನ್ನು ನಿರ್ಮಿಸಿದಾತನು. ನೀನು ತಾಯಿಯ ಗರ್ಭದಲ್ಲಿರುವಾಗಲೇ ನಾನು ನಿನಗೆ ಸಹಾಯ ಮಾಡಿದೆನು. ಯಾಕೋಬೇ, ನನ್ನ ಸೇವಕನೇ, ಹೆದರದಿರು. ಯೆಶುರೂನೇ (ಇಸ್ರೇಲೇ), ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ.
3 “ಬಾಯಾರಿದ ಜನರಿ ಗೆ ನಾನು ನೀರು ಹೊಯ್ಯುವೆನು. ಬಂಜ ರು ಭೂಮಿಯಲ್ಲಿ ನಾನು ಹೊಳೆ ಹರಿಯುವಂತೆ ಮಾಡುವೆನು. ನಿನ್ನ ಸಂತಾನದ ಮೇಲೆ ನಾನು ನನ್ನ ಆತ್ಮವನ್ನು ಸುರಿಸುವೆನು; ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು ಸುರಿಸುವೆನು. ಅದು ಹರಿಯುವ ಬುಗ್ಗೆಯ ನೀರಿನಂತಿರುವುದು. 4 ಅವರು ಈ ಲೋಕದ ಜನರೊಂದಿಗೆ ಬೆಳೆಯುವರು. ಅವರು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದಂತಿರುವರು.
5 “ಒಬ್ಬನು: ‘ನಾನು ಯೆಹೋವನಿಗೆ ಸೇರಿದವನು’ ಎಂದು ಹೇಳುತ್ತಾನೆ. ಇನ್ನೊಬ್ಬನು ಯಾಕೋಬನ ಹೆಸರನ್ನು ಬಳಸುವನು. ಮತ್ತೊಬ್ಬನು, ‘ನಾನು ಯೆಹೋವನವನು’ ಎಂದು ಸಹಿ ಹಾಕುವನು. ಮತ್ತೊಬ್ಬನು, ನಾನು ‘ಇಸ್ರೇಲನು’ ಎಂಬ ಹೆಸರನ್ನು ಬಳಸಿಕೊಳ್ಳುವನು.”
6 ಯೆಹೋವನು ಇಸ್ರೇಲರ ಅರಸನಾಗಿದ್ದಾನೆ. ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ರಕ್ಷಿಸುತ್ತಾನೆ. ಆತನು ಹೇಳುವುದೇನೆಂದರೆ: “ನಾನೊಬ್ಬನೇ ದೇವರು. ನನ್ನ ಹೊರತು ಬೇರೆ ದೇವರುಗಳಿಲ್ಲ. ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. 7 ನನ್ನಂತಹ ಬೇರೆ ದೇವರುಗಳಿಲ್ಲ. ಬೇರೆ ದೇವರುಗಳು ಇದ್ದರೆ ಅವು ಈಗ ಮಾತನಾಡಲಿ. ಆ ದೇವರುಗಳು ಬಂದು ತಾವು ನನ್ನಂತಿರುವುದಾಗಿ ರುಜುವಾತು ಮಾಡಲಿ. ಎಂದೆಂದಿಗೂ ಇರುವ ಈ ಜನರನ್ನು ನಾನು ಸೃಷ್ಟಿಸಿದಂದಿನಿಂದ ಏನಾಯಿತೆಂಬುದನ್ನು ನನಗೆ ತಿಳಿಸಬೇಕು. ಆ ದೇವರು ಮುಂದೆ ಸಂಭವಿಸಲಿಕ್ಕಿರುವ ವಿಷಯಗಳನ್ನು ತಿಳಿಸಬೇಕು.
8 “ನೀವು ಭಯಪಡಬೇಡಿ, ಚಿಂತಿಸಬೇಡಿ. ನಾನು ಭವಿಷ್ಯದ ಸಂಭವಗಳನ್ನು ಯಾವಾಗಲೂ ನಿಮಗೆ ತಿಳಿಸುತ್ತಾ ಬಂದಿದ್ದೇನೆ. ನೀವೇ ನನ್ನ ಸಾಕ್ಷಿಗಳು. ನನ್ನ ಹೊರತು ಬೇರೆ ದೇವರುಗಳಿಲ್ಲ. ನನ್ನ ಹೊರತು ಬೇರೆ ಯಾವ ‘ಬಂಡೆ’ಯೂ ಇಲ್ಲ. ನಾನೊಬ್ಬನೇ!”
ಸುಳ್ಳುದೇವರುಗಳು ಪ್ರಯೋಜನಕ್ಕೆ ಬಾರದವುಗಳು
9 ಜನರು ವಿಗ್ರಹಗಳನ್ನು ಮಾಡಿಕೊಳ್ಳುವರು. ಆದರೆ ಅವು ನಿಷ್ಪ್ರಯೋಜಕವಾದ ವಸ್ತುಗಳಾಗಿವೆ. ಜನರು ಆ ವಿಗ್ರಹಗಳನ್ನು ಪ್ರೀತಿಸುತ್ತಾರೆ. ಆದರೆ ಅವುಗಳು ಯಾವ ಪ್ರಯೋಜನಕ್ಕೂ ಬಾರವು. ಆ ಜನರು ಆ ವಿಗ್ರಹದ ಸಾಕ್ಷಿಗಳಾಗಿದ್ದಾರೆ. ಆದರೆ ಅವುಗಳಿಗೆ ದೃಷ್ಟಿ ಇಲ್ಲ. ಅವುಗಳಿಗೆ ಏನೂ ಗೊತ್ತಿಲ್ಲ. ತಮ್ಮ ಕಾರ್ಯಗಳು ನಾಚಿಕೆಗೆಟ್ಟವುಗಳೆಂಬ ತಿಳುವಳಿಕೆಯೂ ಅವರಲ್ಲಿಲ್ಲ.
10 ಈ ಸುಳ್ಳುದೇವರುಗಳನ್ನು ಮಾಡಿದವರ್ಯಾರು? ಇಂಥ ಉಪಯೋಗವಿಲ್ಲದ ವಿಗ್ರಹಗಳನ್ನು ಮಾಡಿದವರ್ಯಾರು? 11 ಕುಶಲಕರ್ಮಿಗಳು ಆ ದೇವರುಗಳನ್ನು ಮಾಡಿದರು. ಆ ಕುಶಲಕರ್ಮಿಗಳೆಲ್ಲಾ ಜನರೇ, ಅವರು ದೇವರುಗಳಲ್ಲ. ಆ ದೇವರುಗಳೆಲ್ಲಾ ಒಟ್ಟಾಗಿ ಸೇರಿ ತಮ್ಮೊಳಗೆ ಮಾತಾಡಿಕೊಂಡರೆ ಆಗ ಅವುಗಳಿಗೆ ನಾಚಿಕೆಯೂ ಭಯವೂ ಉಂಟಾಗುವದು.
12 ಒಬ್ಬನು ಕುಲಿಮೆಯ ಬೆಂಕಿಯ ಮೇಲೆ ಕಬ್ಬಿಣವನ್ನು ಕಾಯಿಸುತ್ತಾನೆ. ಅವನು ತನ್ನ ಸುತ್ತಿಗೆಯಿಂದ ಆ ಲೋಹವನ್ನು ವಿಗ್ರಹವನ್ನಾಗಿ ಮಾಡುತ್ತಾನೆ. ಅವನು ಅದನ್ನು ತನ್ನ ತೋಳ್ಬಲದಿಂದ ಮಾಡುತ್ತಾನೆ. ಆದರೆ ಅವನು ಹಸಿದಾಗ ಅವನ ಶಕ್ತಿಯು ಕಡಿಮೆಯಾಗುತ್ತದೆ. ಆ ಮನುಷ್ಯನು ನೀರನ್ನು ಕುಡಿಯದಿದ್ದರೆ ಅವನು ಬಲಹೀನನಾಗುವನು.
13 ಇನ್ನೊಬ್ಬ ಕುಶಲಕರ್ಮಿಯು ತನ್ನ ನೂಲಿನಿಂದಲೂ ಅಡಿಕೋಲುಗಳಿಂದಲೂ ಮರದ ಮೇಲೆ ಗುರುತು ಮಾಡುವನು. ತಾನು ಎಲ್ಲಿ ಮರವನ್ನು ತುಂಡುಮಾಡಬೇಕೆಂದು ಇದರಿಂದ ಗೊತ್ತುಪಡಿಸಿಕೊಳ್ಳುತ್ತಾನೆ. ಅವನು ತನ್ನ ಉಳಿಗಳಿಂದ ಒಂದು ವಿಗ್ರಹವನ್ನು ಮನುಷ್ಯಾಕಾರದಲ್ಲಿ ಕೆತ್ತುತ್ತಾನೆ. ಈ ವಿಗ್ರಹವು ಬೇರೆ ಏನೂ ಮಾಡದೆ ಮನೆಯೊಳಗೆ ಇಟ್ಟ ಸ್ಥಳದಲ್ಲಿಯೇ ಇರುವದು.
14 ಅವನು ತನ್ನ ಕೆಲಸಕ್ಕಾಗಿ ದೇವದಾರು ಮರಗಳನ್ನು, ತುರಾಯಿ ಮರಗಳನ್ನು, ಓಕ್ ಮರಗಳನ್ನು ಕಡಿಯುತ್ತಾನೆ. (ಅವನು ಆ ಮರಗಳನ್ನು ಬೆಳೆಯಿಸಲಿಲ್ಲ. ಅವು ತಾವಾಗಿಯೇ ಅಡವಿಯಲ್ಲಿ ಬೆಳೆದವು. ಅವನು ಮರದ ಸಸಿಯನ್ನು ನೆಟ್ಟರೆ ಮಳೆಯು ಆ ಸಸಿಯನ್ನು ಮರವನ್ನಾಗಿ ಬೆಳೆಯಿಸುವುದು.)
15 ಅವನು ಮರವನ್ನು ಕಡಿದು, ತನ್ನನ್ನು ಬೆಚ್ಚಗೆ ಮಾಡಲು ಅಗ್ಗಿಷ್ಟಿಕೆಗಾಗಿ ಉಪಯೋಗಿಸುತ್ತಾನೆ; ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಆಹಾರವನ್ನು ಬೇಯಿಸುತ್ತಾನೆ; ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾನೆ. ರೊಟ್ಟಿಯನ್ನು ಸುಡುತ್ತಾನೆ; ಉಳಿದ ಮರದ ತುಂಡಿನಿಂದ ಒಂದು ವಿಗ್ರಹವನ್ನು ಕೆತ್ತುತ್ತಾನೆ. ಆ ವಿಗ್ರಹಕ್ಕೆ ದೇವರೆಂದು ಹೇಳುತ್ತಾನೆ; ಆ ದೇವರು ಮನುಷ್ಯನು ತಯಾರಿಸಿದ ವಿಗ್ರಹ. ಆದರೆ ಅವನು ಆ ವಿಗ್ರಹದ ಮುಂದೆ ಅಡ್ಡಬೀಳುವನು. 16 ಮರದ ಅರ್ಧಭಾಗವನ್ನು ಬೆಂಕಿಯಲ್ಲಿ ಉರಿಸುವನು; ಆ ಬೆಂಕಿಯಲ್ಲಿ ಮಾಂಸವನ್ನು ಬೇಯಿಸಿ ಹೊಟ್ಟೆತುಂಬಾ ತಿನ್ನುವನು; ಆ ಮರದ ಸೌದೆಯನ್ನು ಸುಟ್ಟು ಚಳಿಕಾಯಿಸಿಕೊಳ್ಳುವನು. ಆಗ ಅವನು, “ಈಗ ನನಗೆ ಬೆಚ್ಚಗಾಯಿತು. ಬೆಂಕಿಯ ಪ್ರಕಾಶದಲ್ಲಿ ನಾನು ನೋಡಬಲ್ಲೆನು!” ಎಂದು ಹೇಳುವನು. 17 ಅದರಲ್ಲಿ ಸ್ವಲ್ಪ ಮರದ ತುಂಡು ಉಳಿದಿರುತ್ತದೆ. ಅದನ್ನು ನೋಡಿ ಆ ಮನುಷ್ಯನು ಅದರಿಂದ ವಿಗ್ರಹವನ್ನು ತಯಾರಿಸುವನು. ಅದನ್ನು ದೇವರೆಂದು ಕರೆಯುವನು. ಅದರ ಮುಂದೆ ಅಡ್ಡಬಿದ್ದು ಆರಾಧಿಸುವನು. ಅದರ ಮುಂದೆ ಪ್ರಾರ್ಥಿಸಿ, “ನೀನೇ ನನ್ನ ದೇವರು, ನನ್ನನ್ನು ರಕ್ಷಿಸು” ಎಂದು ಹೇಳುತ್ತಾನೆ.
18 ಅವರಿಗೆ ತಾವು ಮಾಡುವುದು ಗೊತ್ತಿಲ್ಲ. ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಕಾಣಲಾರದಂತೆ ಅವರ ಕಣ್ಣುಗಳು ಮುಚ್ಚಲ್ಪಟ್ಟಿವೆಯೋ ಎಂಬಂತಿವೆ. ಅವರ ಹೃದಯಗಳು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. 19 “ನಾನು ಆ ಮರದ ತುಂಡುಗಳನ್ನು ಬೆಂಕಿಯಲ್ಲಿ ಉರಿಸಿ ಚಳಿಕಾಯಿಸಿಕೊಂಡೆನು; ಅದರ ಕೆಂಡದಲ್ಲಿ ರೊಟ್ಟಿ ಸುಟ್ಟೆನು; ಮಾಂಸ ಬೇಯಿಸಿದೆನು; ಆ ಮಾಂಸವನ್ನು ತಿಂದೆನು; ಉಳಿದ ಮರದ ತುಂಡಿನಿಂದ ಅಸಹ್ಯವಾದ ಈ ವಿಗ್ರಹವನ್ನು ಮಾಡಿದೆನು; ನಾನು ಮರದ ತುಂಡನ್ನು ಪೂಜಿಸುತ್ತೇನೆ” ಎಂದು ಅವರೆಂದೂ ಯೋಚಿಸುವದಿಲ್ಲ.
20 ಆ ಮನುಷ್ಯನಿಗೆ ತಾನು ಮಾಡುತ್ತಿರುವುದೇ ತಿಳಿಯದು. ಅವನು ಗಲಿಬಿಲಿಗೊಂಡಿದ್ದಾನೆ. ಅವನ ಹೃದಯವು ಅವನನ್ನು ತಪ್ಪುದಾರಿಯಲ್ಲಿ ನಡಿಸುತ್ತದೆ. ಅವನು ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ತಾನು ಮಾಡುತ್ತಿರುವುದು ತಪ್ಪೆಂದು ಅವನು ಕಾಣಲಾರನು. “ನನ್ನ ಕೈಯಲ್ಲಿರುವ ಈ ವಿಗ್ರಹವು ಸುಳ್ಳು ದೇವರಾಗಿದೆ” ಎಂದು ಅವನು ಹೇಳುವದಿಲ್ಲ.
ನಿಜದೇವರಾದ ಯೆಹೋವನು ಇಸ್ರೇಲರ ಸಹಾಯಕನು
21 “ಯಾಕೋಬೇ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊ!
ಇಸ್ರೇಲೇ, ನೀನು ನನ್ನ ಸೇವಕನೆಂಬುದನ್ನು ನೆನಪಿನಲ್ಲಿಟ್ಟುಕೊ!
ನಾನೇ ನಿನ್ನನ್ನು ನಿರ್ಮಿಸಿದೆನು; ನೀನೇ ನನ್ನ ಸೇವಕನು.
ಆದ್ದರಿಂದ ಇಸ್ರೇಲೇ, ನನ್ನನ್ನು ಮರೆತುಬಿಡಬೇಡ.
22 ನಿನ್ನ ಪಾಪಗಳು ದೊಡ್ಡ ಮೋಡದಂತಿವೆ.
ಆದರೆ ನಾನು ಅವುಗಳನ್ನು ಅಳಿಸಿಬಿಟ್ಟಿದ್ದೇನೆ.
ನಿನ್ನ ಪಾಪಗಳನ್ನು ಗಾಳಿಯಲ್ಲಿ ಹಾರಿಹೋದ
ಮೋಡದಂತೆ ಹಾರಿಸಿಬಿಟ್ಟಿದ್ದೇನೆ.
ನಾನು ನಿನ್ನನ್ನು ರಕ್ಷಿಸಿದೆನು.
ಆದ್ದರಿಂದ ನನ್ನ ಬಳಿಗೆ ಹಿಂತಿರುಗಿ ಬಾ.”
23 ಯೆಹೋವನು ಮಹಾ ಕಾರ್ಯಗಳನ್ನು ಮಾಡಿದ್ದರಿಂದ ಆಕಾಶವು ಹರ್ಷಿಸುತ್ತದೆ.
ಭೂಮಿಯೂ ಭೂಮಿಯ ಅಧೋಭಾಗವೂ ಸಂತೋಷಿಸುತ್ತದೆ.
ಪರ್ವತಗಳು ಕೃತಜ್ಞತಾಸ್ತುತಿಗಳನ್ನು ಮಾಡುತ್ತವೆ.
ಅರಣ್ಯದಲ್ಲಿರುವ ಎಲ್ಲಾ ಮರಗಳು ಹರ್ಷಿಸುತ್ತವೆ.
ಯಾಕೆಂದರೆ ಯೆಹೋವನು ಯಾಕೋಬನನ್ನು ರಕ್ಷಿಸಿದನು,
ಇಸ್ರೇಲಿಗೆ ಆತನು ಅದ್ಭುತಕಾರ್ಯವನ್ನು ಮಾಡಿದ್ದಾನೆ.
24 ಯೆಹೋವನು ನಿನ್ನನ್ನು ರೂಪಿಸಿದನು.
ನೀನು ನಿನ್ನ ತಾಯಿಯ ಗರ್ಭದಲ್ಲಿರುವಾಗಲೇ ಆತನು ನಿನ್ನನ್ನು ರೂಪಿಸಿದನು.
ಆತನು ಹೇಳುವುದೇನೆಂದರೆ, “ಯೆಹೋವನಾದ ನಾನು ಸಮಸ್ತವನ್ನೂ ಸೃಷ್ಟಿಸಿದೆನು.
ಆಕಾಶಮಂಡಲವನ್ನು ಅದರ ಸ್ಥಳದಲ್ಲಿ ಇಟ್ಟೆನು;
ಭೂಮಿಯನ್ನು ನನ್ನ ಮುಂದೆ ಹರಡಿದೆನು.”
25 ಸುಳ್ಳುಪ್ರವಾದಿಗಳು ಸುಳ್ಳನ್ನೇ ಹೇಳುತ್ತಾರೆ. ಅವರು ಹೇಳಿದ್ದೆಲ್ಲವೂ ಸುಳ್ಳು ಎಂದು ಯೆಹೋವನು ತೋರಿಸಿಕೊಡುತ್ತಾನೆ. ಮಂತ್ರಗಾರರನ್ನು ದೇವರು ಮೂರ್ಖರನ್ನಾಗಿ ಮಾಡುತ್ತಾನೆ. ಆತನು ಜ್ಞಾನಿಗಳನ್ನು ಗಲಿಬಿಲಿಗೊಳಿಸುತ್ತಾನೆ. ಅವರು ತಮಗೆ ಎಲ್ಲವೂ ಗೊತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ದೇವರು ಅವರನ್ನು ಮೂಢರನ್ನಾಗಿ ಮಾಡುತ್ತಾನೆ. 26 ಯೆಹೋವನು ತನ್ನ ಸೇವಕರನ್ನು ಜನರಿಗೆ ಸಂದೇಶ ತಿಳಿಸುವದಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾನೆ. ಆತನ ಸಂದೇಶಗಳು ಸತ್ಯವಾದವುಗಳಾಗಿವೆ. ಜನರು ಮಾಡಬೇಕಾದ ಕಾರ್ಯಗಳ ಬಗ್ಗೆ ಯೆಹೋವನು ಸಂದೇಶಕರನ್ನು ಕಳುಹಿಸುತ್ತಾನೆ. ಅವರ ಸಲಹೆಯು ಒಳ್ಳೆಯದೆಂದು ಯೆಹೋವನು ತೋರಿಸಿಕೊಡುತ್ತಾನೆ.
ಯೆಹೂದದ ಪುನರ್ ನಿರ್ಮಾಣದಲ್ಲಿ ಸೈರಸನ ಪಾತ್ರ
ಯೆಹೋವನು ಜೆರುಸಲೇಮಿಗೆ, “ಜನರು ನಿನ್ನಲ್ಲಿ ಮತ್ತೆ ವಾಸಮಾಡುವರು” ಎಂತಲೂ
ಯೆಹೂದದ ನಗರಗಳಿಗೆ, “ನೀವು ತಿರುಗಿ ಕಟ್ಟಲ್ಪಡುವಿರಿ” ಎಂತಲೂ
ಕೆಡವಲ್ಪಟ್ಟ ನಗರಗಳಿಗೆ, “ನಾನು ತಿರುಗಿ ನಿಮ್ಮನ್ನು ನಗರಗಳನ್ನಾಗಿ ಮಾಡುತ್ತೇನೆ” ಎಂತಲೂ ಹೇಳುತ್ತಾನೆ.
27 ಆಳವಾದ ನೀರಿಗೆ, “ಒಣಗಿಹೋಗು,
ನಿನ್ನ ಬುಗ್ಗೆಗಳನ್ನು ನಾನು ಬತ್ತಿಸುವೆನು” ಎಂದು ಯೆಹೋವನು ಅನ್ನುತ್ತಾನೆ.
28 ಸೈರಸನಿಗೆ ಯೆಹೋವನು ಹೀಗೆನ್ನುತ್ತಾನೆ, “ನೀನೇ ನನ್ನ ಕುರುಬನು.
ನಾನು ಬಯಸುವ ಕಾರ್ಯಗಳನ್ನು ನೀನು ಮಾಡುವೆ.
ನೀನು ಜೆರುಸಲೇಮಿಗೆ, ‘ನೀನು ಕಟ್ಟಲ್ಪಡುವೆ’ ಎಂದೂ
ದೇವಾಲಯಕ್ಕೆ ‘ನಿನ್ನ ಅಸ್ತಿವಾರವು ಮತ್ತೆ ಹಾಕಲ್ಪಡುವದು’ ಎಂದೂ ಹೇಳುವೆ.”
ರಕ್ಷಣೆ ಹೊಂದಿದವರ ಉತ್ಸವ ಗೀತೆ
14 ನಂತರ ನಾನು ನೋಡಿದಾಗ, ನನ್ನ ಎದುರಿನಲ್ಲಿಯೇ ಕುರಿಮರಿಯಾದಾತನು ಇದ್ದನು. ಆತನು ಚೀಯೋನ್ ಪರ್ವತದ ಮೇಲೆ ನಿಂತಿದ್ದನು. ಆತನ ಜೊತೆಯಲ್ಲಿ 1,44,000 ಜನರಿದ್ದರು. ಅವರ ಹಣೆಗಳ ಮೇಲೆ ಆತನ ಹೆಸರನ್ನು ಮತ್ತು ಆತನ ತಂದೆಯ ಹೆಸರನ್ನು ಬರೆಯಲಾಗಿತ್ತು.
2 ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು. 3 ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ.
4 ಇವರು ಸ್ತ್ರೀ ಸಹವಾಸದಿಂದ ಮಲಿನರಾಗದೆ ಕನ್ನಿಕೆಯರಂತೆ ಉಳಿದಿದ್ದರು. ಕುರಿಮರಿಯಾದಾತನು ಹೋದಕಡೆಯಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಾರೆ. ಭೂಲೋಕದ ಜನರ ಮಧ್ಯದಿಂದ ಬಿಡುಗಡೆ ಹೊಂದಿದವರೇ 1,44,000 ಮಂದಿ. ದೇವರಿಗೂ ಕುರಿಮರಿಯಾದಾತನಿಗೂ ಅರ್ಪಿತರಾದವರಲ್ಲಿ ಇವರೇ ಮೊದಲಿಗರಾಗಿದ್ದರು. 5 ಈ ಜನರು ಸುಳ್ಳುಗಾರರಾಗಿರಲಿಲ್ಲ. ಇವರು ನಿರ್ದೋಷಿಗಳಾಗಿದ್ದರು.
ಮೂರು ಮಂದಿ ದೇವದೂತರು
6 ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು. 7 ಆ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ದೇವರಿಗೆ ಭಯಪಡಿರಿ. ಆತನನ್ನು ಸ್ತುತಿಸಿರಿ. ಜನರಿಗೆಲ್ಲ ದೇವರು ತೀರ್ಪು ನೀಡುವ ಸಮಯವು ಹತ್ತಿರ ಬಂದಿದೆ. ದೇವರನ್ನು ಆರಾಧಿಸಿರಿ. ಪರಲೋಕವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಸೃಷ್ಟಿಸಿದವನು ಆತನೇ” ಎಂದು ಹೇಳಿದನು.
8 ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.
9 ಮೂರನೆಯ ದೇವದೂತನು ಮೊದಲ ಇಬ್ಬರು ದೇವದೂತರನ್ನು ಹಿಂಬಾಲಿಸಿದನು. ಈ ಮೂರನೆಯ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದನು: “ಮೃಗವನ್ನೂ ಮೃಗದ ವಿಗ್ರಹವನ್ನೂ ಆರಾಧಿಸುವವನಿಗೆ ಮತ್ತು ಮೃಗದ ಗುರುತನ್ನು ಹಣೆಯ ಮೇಲಾಗಲಿ ಇಲ್ಲವೆ ತನ್ನ ಕೈಗಳ ಮೇಲಾಗಲಿ ಹಾಕಿಸಿಕೊಳ್ಳುವವನಿಗೆ ಕೇಡಾಗುವುದು. 10 ಅವನು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುತ್ತಾನೆ. ದೇವರ ಕೋಪವೆಂಬ ಬಟ್ಟಲಿನಲ್ಲಿ ಈ ದ್ರಾಕ್ಷಾರಸವನ್ನು ಅದರ ಪೂರ್ಣಶಕ್ತಿಯ ಸಮೇತವಾಗಿ ತಯಾರಿಸಲಾಗಿದೆ. ಅವನನ್ನು ಪರಿಶುದ್ಧ ದೇವದೂತರ ಮತ್ತು ಕುರಿಮರಿಯಾದಾತನ ಮುಂದೆ ಉರಿಯುವ ಗಂಧಕದಿಂದ ಯಾತನೆಪಡಿಸಲಾಗುವುದು. 11 ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.” 12 ಈ ಪರಿಸ್ಥಿತಿಯಲ್ಲಿ, ದೇವರ ಪರಿಶುದ್ಧ ಜನರು ತಾಳ್ಮೆಯಿಂದಿರಬೇಕು. ಅವರು ದೇವರ ಆಜ್ಞೆಗಳಿಗೆ ವಿಧೇಯರಾಗಿರಬೇಕು ಮತ್ತು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿರಬೇಕು.
13 ನಂತರ ನಾನು ಪರಲೋಕದಿಂದ ಒಂದು ಧ್ವನಿಯನ್ನು ಕೇಳಿದೆನು. ಆ ಧ್ವನಿಯು ಹೀಗೆ ಹೇಳಿತು: “ಇದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿದ್ದು ಸಾಯುವಂತಹ ಜನರು ಧನ್ಯರು.”
“ಹೌದು, ಇದು ನಿಜ. ಆ ಜನರು ತಮ್ಮ ಪ್ರಯಾಸದ ಕೆಲಸವನ್ನು ಮುಗಿಸಿದವರಾಗಿ ವಿಶ್ರಾಂತಿ ಪಡೆಯುತ್ತಾರೆ. ಅವರು ಮಾಡಿದುದೆಲ್ಲವೂ ಅವರೊಂದಿಗೇ ಇರುತ್ತದೆ” ಎಂದು ಪವಿತ್ರಾತ್ಮನು ಹೇಳುತ್ತಾನೆ.
ಭೂಲೋಕದ ಸುಗ್ಗೀಕಾಲ
14 ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ[a] ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು. 15 ಆಗ ಮತ್ತೊಬ್ಬ ದೇವದೂತನು ಆಲಯದಿಂದ ಹೊರಗೆ ಬಂದನು. ಈ ದೇವದೂತನು ಮೋಡದ ಮೇಲೆ ಕುಳಿತಿರುವಾತನಿಗೆ, “ನಿನ್ನ ಕುಡುಗೋಲನ್ನು ತೆಗೆದುಕೊಂಡು ಭೂಮಿಯ ಫಸಲನ್ನು ಒಟ್ಟುಗೂಡಿಸು. ಯಾಕೆಂದರೆ ಸುಗ್ಗಿಕಾಲವು ಬಂದಿದೆ. ಭೂಮಿಯ ಫಸಲು ಮಾಗಿದೆ” ಎಂದು ಹೇಳಿದನು. 16 ಆದ್ದರಿಂದ ಮೋಡದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
17 ನಂತರ ಮತ್ತೊಬ್ಬ ದೇವದೂತನು ಪರಲೋಕದ ಆಲಯದಿಂದ ಹೊರಗೆ ಬಂದನು. ಆ ದೇವದೂತನಲ್ಲಿಯೂ ಹರಿತವಾದ ಒಂದು ಕುಡುಗೋಲಿತ್ತು. 18 ನಂತರ ಮತ್ತೊಬ್ಬ ದೇವದೂತನು ಯಜ್ಞವೇದಿಕೆಯಿಂದ ಬಂದನು. ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಹರಿತವಾದ ಕುಡುಗೋಲಿದ್ದ ದೇವದೂತನನ್ನು ಕರೆದು, “ನಿನ್ನ ಹರಿತವಾದ ಕುಡುಗೋಲನ್ನು ತೆಗೆದುಕೊಂಡು, ಭೂಮಿಯ ದ್ರಾಕ್ಷಿತೋಟದಿಂದ ದ್ರಾಕ್ಷಿಗೊಂಚಲುಗಳನ್ನು ಒಟ್ಟುಗೂಡಿಸು. ಭೂಮಿಯ ದ್ರಾಕ್ಷಿಯೆಲ್ಲಾ ಮಾಗಿವೆ” ಎಂದು ಹೇಳಿದನು. 19 ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ, ದ್ರಾಕ್ಷಿಯನ್ನೆಲ್ಲಾ ಒಟ್ಟುಗೂಡಿಸಿ, ದೇವರ ಕೋಪವೆಂಬ ದ್ರಾಕ್ಷಿಯ ಆಲೆಗೆ ಎಸೆದನು. 20 ಆ ದ್ರಾಕ್ಷಿಯನ್ನು ನಗರದ ಹೊರಭಾಗದಲ್ಲಿದ್ದ ದ್ರಾಕ್ಷಿಯ ಆಲೆಯಲ್ಲಿ ಕಿವುಚಿ ಹಾಕಿದರು. ಆ ದ್ರಾಕ್ಷಿಯ ಆಲೆಯಿಂದ ರಕ್ತವು ಹೊರಕ್ಕೆ ಬಂದಿತು. ಅದು ಕುದುರೆಗಳ ತಲೆಗಳಷ್ಟು ಎತ್ತರಕ್ಕೆ ಏರಿ ಇನ್ನೂರು ಮೈಲಿಗಳಷ್ಟು ದೂರ ಹರಿಯಿತು.
Kannada Holy Bible: Easy-to-Read Version. All rights reserved. © 1997 Bible League International