M’Cheyne Bible Reading Plan
ಪಸ್ಕಹಬ್ಬ
16 “ಅಬೀಬ್ ತಿಂಗಳನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನನ್ನು ಗೌರವಿಸುವುದಕ್ಕಾಗಿ ಪಸ್ಕಹಬ್ಬವನ್ನು ಆಚರಿಸಬೇಕು. ಯಾಕೆಂದರೆ ಆ ತಿಂಗಳಲ್ಲೇ ನಿಮ್ಮ ದೇವರಾದ ಯೆಹೋವನು ರಾತ್ರಿಯಲ್ಲಿ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 2 ನಿಮ್ಮ ದೇವರು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಪ್ರತ್ಯೇಕ ಸ್ಥಳಕ್ಕೆ ನೀವು ಹೋಗಿ ಅಲ್ಲಿ ಪಸ್ಕದ ಯಜ್ಞಾರ್ಪಣೆ ಮಾಡಿ ನಿಮ್ಮ ಯೆಹೋವನನ್ನು ಮಹಿಮೆಪಡಿಸಬೇಕು. ಅಲ್ಲಿ ದನವನ್ನಾಗಲಿ ಆಡನ್ನಾಗಲಿ ಯಜ್ಞವಾಗಿ ಅರ್ಪಿಸಬೇಕು. 3 ಯಜ್ಞ ಪಶುವಿನೊಂದಿಗೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನ ತಿನ್ನಬೇಕು. ಈ ಸಮಯದಲ್ಲಿ ಹುಳಿ ಬೆರೆಸಿದ ರೊಟ್ಟಿಯನ್ನು ತಿನ್ನಲೇಬಾರದು. ಹುಳಿಯಿಲ್ಲದ ರೊಟ್ಟಿಗೆ ‘ಸಂಕಟದ ರೊಟ್ಟಿ’ ಎಂದು ಕರೆಯಬೇಕು. ಯಾಕೆಂದರೆ ನೀವು ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದಾಗ ಅನುಭವಿಸಿದ್ದ ಸಂಕಟವನ್ನು ಅದು ನೆನಪಿಗೆ ತರುತ್ತದೆ. ನೀವು ಅಲ್ಲಿಂದ ತುಂಬಾ ಅವಸರವಾಗಿ ಹೊರಬಂದಿರಿ! ಇದನ್ನು ನಿಮ್ಮ ಜೀವಮಾನ ಪರ್ಯಂತ ಜ್ಞಾಪಿಸಿಕೊಳ್ಳಬೇಕು. 4 ಏಳು ದಿನಗಳ ತನಕ ಇಡೀ ದೇಶದಲ್ಲಿ ಯಾರ ಮನೆಯಲ್ಲಿಯಾದರೂ ರೊಟ್ಟಿಗೆ ಬೆರೆಸುವ ಹುಳಿಯು ಇರಬಾರದು. ಮತ್ತು ಮೊದಲನೇ ದಿನದ ಸಾಯಂಕಾಲ ನೀವು ವಧಿಸುವ ಪ್ರಾಣಿಯ ಮಾಂಸವನ್ನು ಮುಂಜಾನೆಯೊಳಗೆ ತಿಂದು ಮುಗಿಸತಕ್ಕದ್ದು.
5 “ಪಸ್ಕದ ಪಶುವನ್ನು ದೇಶದ ಬೇರೆ ಯಾವ ಸ್ಥಳದಲ್ಲಿಯೂ ಕೊಯ್ಯಬಾರದು. 6 ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷವಾದ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿಯೇ ಸಾಯಂಕಾಲ ಸೂರ್ಯಾಸ್ತಮಾನ ಕಾಲದಲ್ಲಿ ಪಸ್ಕಹಬ್ಬದ ಪಶುವನ್ನು ಅರ್ಪಿಸಬೇಕು. ದೇವರು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಕಾಲವನ್ನು ಈ ಪವಿತ್ರ ದಿನವು ನಿಮಗೆ ನೆನಪು ಮಾಡುತ್ತದೆ. 7 ನಿಮ್ಮ ದೇವರಾದ ಯೆಹೋವನು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಪಸ್ಕದ ಪಶುವನ್ನು ಅಡಿಗೆ ಮಾಡಿ ತಿನ್ನಬೇಕು. ಆಮೇಲೆ ಮುಂಜಾನೆ ನೀವು ನಿಮ್ಮನಿಮ್ಮ ಮನೆಗಳಿಗೆ ಹೋಗಬಹುದು. 8 ಆರು ದಿನಗಳ ತನಕ ನೀವು ಹುಳಿ ಇಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿನದಲ್ಲಿ ನೀವು ಏನೂ ಕೆಲಸ ಮಾಡದೆ ಇರಬೇಕು. ಆ ದಿನ ಒಟ್ಟಾಗಿ ಸೇರಿ ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಬೇಕು.
ಪಂಚಾಶತ್ತಮ ಹಬ್ಬ
9 “ನಿಮ್ಮ ಹೊಲಗಳ ಬೆಳೆಯನ್ನು ಕೊಯ್ಯಲು ಪ್ರಾರಂಭಿಸಿದ ದಿನದಿಂದ ಏಳು ವಾರಗಳನ್ನು ಲೆಕ್ಕ ಮಾಡಿರಿ. 10 ಅಲ್ಲಿ ನಿಮ್ಮ ದೇವರಾದ ಯೆಹೋವನಿಗೆ ವಾರಗಳ ಹಬ್ಬವನ್ನು ಆಚರಿಸಿರಿ. ಅಲ್ಲಿ ನಿಮ್ಮ ವಿಶೇಷ ಕಾಣಿಕೆಗಳನ್ನು ತಂದು ಸಮರ್ಪಿಸಿರಿ. ನಿಮ್ಮ ದೇವರು ನಿಮ್ಮನ್ನು ಎಷ್ಟು ಆಶೀರ್ವದಿಸಿರುತ್ತಾನೆಂದು ಯೋಚಿಸಿ ಅದರ ಪ್ರಕಾರ ನಿಮ್ಮ ಕಾಣಿಕೆಗಳನ್ನು ಸಲ್ಲಿಸಿರಿ. 11 ಯೆಹೋವನು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವೂ ನಿಮ್ಮ ಜನರೂ ಒಟ್ಟಾಗಿ ಸೇರಿ ದೇವರ ಸನ್ನಿಧಾನದಲ್ಲಿ ಸಂತೋಷಪಡಿರಿ. ನಿಮ್ಮ ಹೆಂಡತಿಮಕ್ಕಳನ್ನು ಅಲ್ಲದೆ ನಿಮ್ಮ ಸೇವಕಸೇವಕಿಯರನ್ನು ನಿಮ್ಮ ಪಟ್ಟಣದಲ್ಲಿರುವ ಲೇವಿಯರನ್ನು ಮತ್ತು ವಿಧವೆಯರನ್ನು, ಅನಾಥರನ್ನು, ಪರದೇಶಿಗಳನ್ನು ಕರೆದುಕೊಂಡು ಸಂತೋಷಪಡಿರಿ. 12 ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ ಎಂದು ನೆನಪುಮಾಡಿಕೊಂಡು ಯೆಹೋವನ ವಿಧಿಗಳನ್ನು ತಪ್ಪದೇ ಅನುಸರಿಸಿರಿ.
ಪರ್ಣಶಾಲೆಗಳ ಹಬ್ಬ
13 “ಕಣಗಳ ಕೆಲಸ ಮತ್ತು ದ್ರಾಕ್ಷಿಯ ಆಲೆಗಳ ಕೆಲಸ ಮುಕ್ತಾಯವಾಗಿ ನಿಮ್ಮ ಮನೆಗಳಲ್ಲಿ ಅವುಗಳನ್ನು ಶೇಖರಿಸಿದ ಬಳಿಕ ಏಳು ದಿನಗಳ ನಂತರ ನೀವು ಪರ್ಣಶಾಲೆಗಳ ಹಬ್ಬವನ್ನು ಆಚರಿಸಬೇಕು. 14 ನಿಮ್ಮ ಹೆಂಡತಿಮಕ್ಕಳೊಂದಿಗೆ, ಸೇವಕಸೇವಕಿಯರೊಂದಿಗೆ ಮತ್ತು ನಿಮ್ಮ ಊರುಗಳಲ್ಲಿರುವ ಲೇವಿಯರೊಂದಿಗೆ, ಪರದೇಶಿಗಳೊಂದಿಗೆ, ಅನಾಥರೊಂದಿಗೆ ಮತ್ತು ವಿಧವೆಯರೊಂದಿಗೆ ಆನಂದದಿಂದ ಹಬ್ಬ ಮಾಡಿರಿ. 15 ನಿಮ್ಮ ಯೆಹೋವನು ಆರಿಸಿಕೊಂಡಿರುವ ವಿಶೇಷ ಸ್ಥಳದಲ್ಲಿ ಈ ಹಬ್ಬವನ್ನು ಏಳು ದಿನ ಆಚರಿಸಿರಿ. ನಿಮ್ಮ ದೇವರಾದ ಯೆಹೋವನನ್ನು ಘನಪಡಿಸುವುದಕ್ಕಾಗಿ ಸಂತೋಷದಿಂದ ಹಬ್ಬವನ್ನು ಆಚರಿಸಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ಸುಗ್ಗಿಯನ್ನು ಮತ್ತು ನಿಮ್ಮ ಎಲ್ಲಾ ಕೆಲಸಕಾರ್ಯಗಳನ್ನು ಆಶೀರ್ವದಿಸಿದನು. ಆದ್ದರಿಂದ ಸಂತೋಷಪಡಿರಿ!
16 “ನಿಮ್ಮ ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸಿಕೊಳ್ಳುವ ಆ ವಿಶೇಷ ಸ್ಥಳಕ್ಕೆ ನೀವೆಲ್ಲಾ ವರ್ಷದಲ್ಲಿ ಮೂರು ಬಾರಿ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ, ಪಂಚಾಶತ್ತಮ ಹಬ್ಬ ಮತ್ತು ಪರ್ಣಶಾಲೆಗಳ ಹಬ್ಬದಲ್ಲಿ ಸೇರಿಬರಬೇಕು. ಯೆಹೋವನ ಬಳಿಗೆ ಬರುವ ಪ್ರತಿಯೊಬ್ಬನು ಕಾಣಿಕೆಯೊಂದಿಗೆ ಬರಬೇಕು. 17 ಪ್ರತಿಯೊಬ್ಬನೂ ಯೆಹೋವನು ತನ್ನನ್ನು ಆಶೀರ್ವದಿಸಿದ ಮೇರೆಗೆ ಆತನಿಗೆ ಕಾಣಿಕೆಯನ್ನರ್ಪಿಸಬೇಕು.
ನ್ಯಾಯಾಧಿಪತಿಗಳೂ ಅಧಿಕಾರಿಗಳೂ
18 “ನಿಮ್ಮ ದೇವರು ನಿಮಗೆ ಕೊಡುವ ದೇಶದ ಎಲ್ಲಾ ಪಟ್ಟಣಗಳಲ್ಲಿ ನ್ಯಾಯಾಧೀಶರನ್ನೂ ಅಧಿಕಾರಿಗಳನ್ನೂ ಆರಿಸಿಕೊಳ್ಳಿರಿ. ಪ್ರತಿಯೊಂದು ಕುಲದವರು ಇದನ್ನು ಮಾಡಬೇಕು; ಆರಿಸಲ್ಪಟ್ಟವರು ನ್ಯಾಯವಂತರಾಗಿರಬೇಕು. 19 ನೀವು ಯಾವಾಗಲೂ ಪಕ್ಷಪಾತವಿಲ್ಲದವರಾಗಿರಬೇಕು. ಜನರಿಂದ ಲಂಚ ತೆಗೆದುಕೊಂಡು ಅನ್ಯಾಯವಾದ ತೀರ್ಮಾನ ಕೊಡಬಾರದು. ಹಣವು ಜ್ಞಾನಿಗಳನ್ನು ಕುರುಡುಮಾಡಿ ಅವರ ಬುದ್ಧಿಯನ್ನು ಮಂದ ಮಾಡುವುದು. 20 ನೀವು ಒಳ್ಳೆಯವರೂ ನ್ಯಾಯವಂತರೂ ಆಗಿದ್ದರೆ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ವಾಸಿಸುವಿರಿ ಮತ್ತು ಅದನ್ನು ನಿಮ್ಮ ವಶದಲ್ಲಿಟ್ಟುಕೊಳ್ಳುವಿರಿ.
ದೇವರು ವಿಗ್ರಹಗಳನ್ನು ದ್ವೇಷಿಸುವನು
21 “ನೀವು ನಿಮ್ಮ ದೇವರಾದ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ಕಟ್ಟುವಾಗ ಅದರ ಪಕ್ಕದಲ್ಲಿ ಅಶೇರ್ ದೇವತೆಗೆ ಗೌರವವನ್ನು ತರುವಂಥ ಯಾವ ಮರದ ಕಂಬಗಳನ್ನು ನೆಡಬಾರದು; 22 ಸುಳ್ಳುದೇವರುಗಳ ಪೂಜೆಗಾಗಿ ವಿಶೇಷವಾದ ಕಲ್ಲುಗಳನ್ನು ನೆಡಬಾರದು; ನಿಮ್ಮ ದೇವರಾದ ಯೆಹೋವನು ಅವುಗಳನ್ನು ದ್ವೇಷಿಸುತ್ತಾನೆ.
ರಚನೆಗಾರ: ದಾವೀದ.
103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
2 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
3 ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
4 ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
5 ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
6 ಯೆಹೋವನು ನೀತಿವಂತನಾಗಿದ್ದಾನೆ.
ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
7 ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
8 ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಆತನು ಯಾವಾಗಲೂ ಟೀಕಿಸುವವನಲ್ಲ.
ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.
14 ಆತನು ನಮ್ಮನ್ನು ಸಂಪೂರ್ಣವಾಗಿ ಬಲ್ಲನು.
ನಾವು ಮಣ್ಣಿನಿಂದ ನಿರ್ಮಾಣಗೊಂಡದ್ದೂ ಆತನಿಗೆ ತಿಳಿದಿದೆ.
15 ನಮ್ಮ ಜೀವಮಾನಗಳು ಕೊಂಚವೆಂಬುದು ಆತನಿಗೆ ಗೊತ್ತಿದೆ.
ನಮ್ಮ ಜೀವಮಾನಗಳು ಹುಲ್ಲಿನಂತಿವೆ ಎಂಬುದೂ ಆತನಿಗೆ ತಿಳಿದಿದೆ.
16 ನಾವು ಅಡವಿಯ ಚಿಕ್ಕ ಹೂವಿನಂತಿದ್ದೇವೆ ಎಂಬುದು ಆತನಿಗೆ ಗೊತ್ತಿದೆ.
ನಮ್ಮ ಹೂವು ಬೇಗನೆ ಬೆಳೆದರೂ ಬಿಸಿಗಾಳಿ ಬೀಸಿದಾಗ ಒಣಗಿಹೋಗುವುದು.
ಬಳಿಕ, ಅದು ಬೆಳೆದ ಸ್ಥಳವನ್ನೂ ಗುರುತಿಸಲಾಗದು.
17 ಆದರೆ ಯೆಹೋವನು ತನ್ನ ಭಕ್ತರನ್ನು ಪ್ರೀತಿಸುತ್ತಲೇ ಬಂದನು.
ಇನ್ನು ಮುಂದೆಯೂ ಪ್ರೀತಿಸುತ್ತಲೇ ಇರುವನು.
ಆತನು ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಒಳ್ಳೆಯವನಾಗಿರುವನು.
18 ಆತನ ಒಡಂಬಡಿಕೆಗೆ ವಿಧೇಯರಾಗುವ ಜನರಿಗೆ ಆತನು ಒಳ್ಳೆಯವನಾಗಿದ್ದಾನೆ.
ಆತನ ಆಜ್ಞೆಗಳಿಗೆ ವಿಧೇಯರಾಗುವ ಜನರಿಗೆ ಆತನು ಒಳ್ಳೆಯವನಾಗಿದ್ದಾನೆ.
19 ಯೆಹೋವನ ಸಿಂಹಾಸನವು ಪರಲೋಕದಲ್ಲಿದೆ.
ಆತನು ಸಮಸ್ತವನ್ನು ಆಳುವನು.
20 ದೇವದೂತರೇ, ಆತನ ಮಾತಿಗೆ ಕಿವಿಗೊಡುವವರೇ,
ಆತನ ಆಜ್ಞೆಗಳಿಗೆ ವಿಧೇಯರಾಗುವ ಬಲಿಷ್ಠ ಸೈನಿಕರೇ, ಯೆಹೋವನನ್ನು ಕೊಂಡಾಡಿರಿ.
21 ಆತನ ಸೈನ್ಯಗಳೇ,[a] ಚಿತ್ತವನ್ನು ನೇರವೇರಿಸುವ ಸೇವಕರೇ,
ಯೆಹೋವನನ್ನು ಕೊಂಡಾಡಿರಿ.
22 ಸರ್ವಸ್ಥಳಗಲ್ಲಿರುವ ಸಮಸ್ತವನ್ನು ಸೃಷ್ಟಿಸಿದಾತನು ಯೆಹೋವನೇ ಸರ್ವಸ್ಥಳಗಳಲ್ಲಿರುವ ಸಮಸ್ತಕ್ಕೂ ದೇವರೇ ಅಧಿಪತಿ.
ಅವುಗಳೆಲ್ಲಾ ಆತನನ್ನು ಕೊಂಡಾಡಲಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ದೇವರು ಯಾವಾಗಲೂ ತನ್ನ ಜನರೊಂದಿಗಿರುವನು
43 ಯಾಕೋಬೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಇಸ್ರೇಲೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಈಗ ಆತನು ಹೇಳುವುದೇನೆಂದರೆ: “ಭಯಪಡಬೇಡ. ನಾನೇ ನಿನ್ನನ್ನು ರಕ್ಷಿಸಿದ್ದೇನೆ. ನಾನು ನಿನಗೆ ಹೆಸರಿಟ್ಟೆನು. ನೀನು ನನ್ನವನೇ. 2 ನಿನ್ನ ಕಷ್ಟಕಾಲದಲ್ಲಿ ನಾನು ನಿನ್ನೊಂದಿಗಿರುವೆನು. ನೀನು ಜಲರಾಶಿಯನ್ನು ಹಾದುಹೋಗುವಾಗ ನಾನೇ ನಿನ್ನೊಂದಿಗಿರುವೆ. ನೀನು ನದಿಗಳನ್ನು ದಾಟುವಾಗ ಅಪಾಯಕ್ಕೆ ಗುರಿಯಾಗದಿರುವೆ. ಬೆಂಕಿಯೊಳಗಿಂದ ನಡೆಯುವಾಗ ನಿನಗೆ ಹಾನಿಯಾಗದು. 3 ಯಾಕೆಂದರೆ ಯೆಹೋವನಾದ ನಾನೇ ನಿನ್ನ ದೇವರು. ಇಸ್ರೇಲಿನ ಪರಿಶುದ್ಧನಾದ ನಾನೇ ನಿನ್ನ ರಕ್ಷಕನು. ಈಜಿಪ್ಟನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲು ನಿನಗೆ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟೆನು. 4 ನೀನು ನನಗೆ ಅಮೂಲ್ಯನಾದುದರಿಂದ ನಾನು ನಿನ್ನನ್ನು ಗೌರವಿಸಿ ಪ್ರೀತಿಸುವೆನು. ನೀನು ವಾಸಿಸುವಂತೆ ನಾನು ನಿನಗೆ ಎಲ್ಲಾ ಜನರನ್ನು ಮತ್ತು ಜನಾಂಗಗಳನ್ನು ಕೊಡುವೆನು.
5 “ಆದ್ದರಿಂದ ಭಯಪಡಬೇಡ, ನಾನೇ ನಿನ್ನೊಂದಿಗಿದ್ದೇನೆ. ನಾನು ನಿನ್ನ ಮಕ್ಕಳನ್ನು ಒಟ್ಟುಗೂಡಿಸಿ ನಿನ್ನ ಬಳಿಗೆ ಕರೆತರುವೆನು. ನಾನು ಪೂರ್ವಪಶ್ಚಿಮ ದಿಕ್ಕುಗಳಿಂದ ಅವರನ್ನು ಒಟ್ಟುಗೂಡಿಸುವೆನು. 6 ನಾನು ಉತ್ತರಕ್ಕೆ ‘ನನ್ನ ಜನರನ್ನು ಬಿಟ್ಟುಕೊಡು’ ಎಂದು ಹೇಳುವೆನು. ದಕ್ಷಿಣಕ್ಕೆ, ‘ನನ್ನ ಜನರನ್ನು ಸೆರೆಮನೆಯಲ್ಲಿರಿಸಬೇಡ’ ಎಂದು ಹೇಳುವೆನು. ಬಹುದೂರ ದೇಶಗಳಿಂದ ನನ್ನ ಮಕ್ಕಳನ್ನು ನನ್ನ ಬಳಿಗೆ ಕರೆದುಕೊಂಡು ಬಾ. 7 ನನ್ನ ಹೆಸರನ್ನು ಹೊಂದಿರುವ ನನ್ನ ಜನರನ್ನೆಲ್ಲಾ ನನ್ನ ಬಳಿಗೆ ಕರೆದುಕೊಂಡು ಬಾ. ನನಗಾಗಿಯೇ ನಿರ್ಮಿಸಿದ ನನ್ನ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವರನ್ನು ನಿರ್ಮಿಸಿದಾತನು ನಾನೇ, ಅವರು ನನ್ನವರೇ!
8 “ಕಣ್ಣಿದ್ದೂ ಕುರುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಕಿವಿಯಿದ್ದೂ ಕಿವುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. 9 ಎಲ್ಲಾ ಜನಾಂಗದವರೂ ಎಲ್ಲಾ ಜನರೂ ಒಟ್ಟುಗೂಡಬೇಕು. ಅವರ ಸುಳ್ಳುದೇವರಲ್ಲಿ ಒಬ್ಬನು ಆದಿಯಲ್ಲಿ ಸಂಭವಿಸಿದ್ದನ್ನು ಹೇಳುವದಾಗಿದ್ದರೆ ತನ್ನ ಸಾಕ್ಷಿಗಳನ್ನು ಕರೆದು ತರಲಿ. ಆ ಸಾಕ್ಷಿಗಳು ಸತ್ಯವನ್ನಾಡಲಿ. ಆಗ ಅವರು ಸತ್ಯವಂತರೋ ಇಲ್ಲವೋ ಎಂದು ಗೊತ್ತಾಗುವದು.”
10 ಯೆಹೋವನು ಹೇಳುವುದೇನೆಂದರೆ: “ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನು ಆರಿಸಿಕೊಂಡ ಸೇವಕನು ನೀನೇ. ಜನರು ನನ್ನನ್ನು ನಂಬುವಂತೆ ನಾನು ನಿಮ್ಮನ್ನು ಆರಿಸಿಕೊಂಡೆನು. ನಾನು ನಿಜ ದೇವರು ಎಂದು ನೀವು ತಿಳಿಯಬೇಕೆಂದು ನಿಮ್ಮನ್ನು ಆರಿಸಿಕೊಂಡೆನು. ನಾನೇ ನಿಜವಾದ ದೇವರು. ನನಗಿಂತ ಮೊದಲು ಯಾರೂ ಇರಲಿಲ್ಲ, ಇನ್ನು ಮುಂದೆಯೂ ನನ್ನ ಹೊರತು ಯಾವ ದೇವರೂ ಇರುವದಿಲ್ಲ. 11 ನಾನೇ, ನಾನೇ ಯೆಹೋವನು! ನನ್ನ ಹೊರತು ಬೇರೆ ರಕ್ಷಕನಿಲ್ಲ! 12 ನಾನೇ ನಿಮ್ಮೊಂದಿಗೆ ಮಾತನಾಡಿದೆನು. ನಾನೇ ನಿಮ್ಮನ್ನು ರಕ್ಷಿಸಿದೆನು. ನಾನು ಆ ವಿಷಯಗಳನ್ನು ನಿಮಗೆ ತಿಳಿಸಿದೆನು. ನಿಮ್ಮೊಂದಿಗೆ ಇದ್ದಾತನು ಅಪರಿಚಿತನಾಗಿರಲಿಲ್ಲ. ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನೇ ನಿಮ್ಮ ದೇವರು.” (ಯೆಹೋವನು ತಾನೇ ಈ ವಿಷಯಗಳನ್ನು ಹೇಳಿದ್ದಾನೆ.) 13 “ನಾನು ಯಾವಾಗಲೂ ದೇವರಾಗಿದ್ದೇನೆ. ನನ್ನ ಕಾರ್ಯವನ್ನು ತಡೆಯಲು ಯಾರಿಗೆ ಸಾಧ್ಯ? ನನ್ನ ಬಲವಾದ ಹಸ್ತದಿಂದ ಯಾರು ಬಿಡಿಸಬಲ್ಲರು?”
14 ಇಸ್ರೇಲರ ಪರಿಶುದ್ಧನೇ, ನಿಮ್ಮನ್ನು ರಕ್ಷಿಸುವಾತನು. ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೋಸ್ಕರ ಬಾಬಿಲೋನಿಗೆ ಸೈನ್ಯವನ್ನು ಕಳುಹಿಸುವೆನು. ಎಷ್ಟೋ ಮಂದಿ ಸೆರೆಹಿಡಿಯಲ್ಪಡುವರು. ಕಲ್ದೀಯ ಜನರು ಅವರ ಹಡಗುಗಳಿಂದಲೇ ಒಯ್ಯಲ್ಪಡುವರು. (ಅವರು ಆ ಹಡಗುಗಳ ಬಗ್ಗೆ ಬಹು ಹೆಮ್ಮೆಯಿಂದಿದ್ದಾರೆ.) 15 ನಾನೇ ನಿಮ್ಮ ಪರಿಶುದ್ಧನಾದ ಯೆಹೋವನು. ನಾನು ಇಸ್ರೇಲನ್ನು ಸೃಷ್ಟಿಸಿದೆನು; ನಾನೇ ನಿಮ್ಮ ಅರಸನು.”
ದೇವರು ತನ್ನ ಜನರಾದ ಇಸ್ರೇಲನ್ನು ಮತ್ತೆ ರಕ್ಷಿಸುವನು
16 ಯೆಹೋವನು ಸಮುದ್ರದ ಮೂಲಕ ಮಾರ್ಗವನ್ನು ನಿರ್ಮಿಸುವನು. ಅಲ್ಲೋಲಕಲ್ಲೋಲವಾಗಿರುವ ನೀರಿನ ಮೂಲಕ ತನ್ನ ಜನರಿಗೆ ಮಾರ್ಗವನ್ನು ಮಾಡುವನು. ಯೆಹೋವನು ಹೇಳುವುದೇನೆಂದರೆ, 17 “ನನ್ನ ವಿರುದ್ಧವಾಗಿ ಯುದ್ಧಮಾಡುವ ಅಶ್ವದಳ, ರಥಬಲ ಮತ್ತು ಭೂದಳವು ಸೋತುಹೋಗುವವು. ಮತ್ತೆ ಅವರು ಏಳುವದೇ ಇಲ್ಲ. ಅವರೆಲ್ಲರೂ ನಾಶವಾಗುವರು. ಮೇಣದ ಬತ್ತಿಯ ಬೆಂಕಿಯು ಆರಿಸಲ್ಪಡುವಂತೆಯೇ ಅವರು ನಂದಿಸಲ್ಪಡುವರು. 18 ಆದ್ದರಿಂದ ಆದಿಯಲ್ಲಿ ನಡೆದ ಸಂಗತಿಗಳನ್ನು ಜ್ಞಾಪಕಮಾಡಿಕೊಳ್ಳಬೇಡ. ಬಹಳ ಕಾಲದ ಹಿಂದೆ ನಡೆದ ಸಂಗತಿಗಳನ್ನು ನೆನೆಸಬೇಡ. 19 ಯಾಕೆಂದರೆ, ನಾನು ಹೊಸ ಕಾರ್ಯಗಳನ್ನು ಮಾಡುವೆನು. ನೀವು ಹೊಸ ಸಸಿಯ ರೀತಿಯಲ್ಲಿ ಬೆಳೆಯುವಿರಿ. ಇದು ಸತ್ಯವೆಂದು ನಿಮಗೆ ಗೊತ್ತಿದೆ. ನಾನು ಮರುಭೂಮಿಯಲ್ಲಿ ಖಂಡಿತವಾಗಿಯೂ ರಸ್ತೆಯನ್ನು ಮಾಡುತ್ತೇನೆ; ಒಣನೆಲದಲ್ಲಿ ನದಿ ಹರಿಯುವಂತೆ ಮಾಡುತ್ತೇನೆ. 20 ವನ್ಯಜೀವಿಗಳೂ ನನಗೆ ಕೃತಜ್ಞತೆಯಿಂದ ಇರುತ್ತವೆ. ದೊಡ್ಡ ಗಾತ್ರದ ಪ್ರಾಣಿಗಳೂ ಪಕ್ಷಿಗಳೂ ನನ್ನನ್ನು ಗೌರವಿಸುವವು. ನಾನು ಮರುಭೂಮಿಯಲ್ಲಿ ನೀರನ್ನು ಬರಮಾಡುವಾಗ ಅವು ನನ್ನನ್ನು ಗೌರವಿಸುವವು. ನಾನು ಆರಿಸಿಕೊಂಡ ನನ್ನ ಜನರಿಗೆ ನೀರನ್ನು ಕೊಡುವುದಕ್ಕಾಗಿ ನಾನು ಇದನ್ನು ಮಾಡುವೆನು. 21 ನಾನು ನಿರ್ಮಿಸಿದ ಈ ಜನರು ನನಗೆ ಸ್ತೋತ್ರಗಾನ ಹಾಡುವರು.
22 “ಯಾಕೋಬೇ, ನೀನು ನನಗೆ ಪ್ರಾರ್ಥಿಸಲಿಲ್ಲ. ಇಸ್ರೇಲೇ, ನೀನು ನನ್ನ ವಿಷಯದಲ್ಲಿ ಆಯಾಸಗೊಂಡಿದ್ದೀ. 23 ನಿನ್ನ ಕುರಿಗಳನ್ನು ನನ್ನ ಬಳಿಗೆ ಯಜ್ಞಮಾಡುವದಕ್ಕಾಗಿ ತರಲಿಲ್ಲ. ನೀನು ನನ್ನನ್ನು ಸನ್ಮಾನಿಸಲಿಲ್ಲ. ನೀನು ನನಗೆ ಬಲಿಯರ್ಪಣೆ ಮಾಡಲಿಲ್ಲ. ನೀನು ಬಲಿಯರ್ಪಣೆ ಮಾಡಬೇಕೆಂದು ನಾನು ನಿನ್ನನ್ನು ಬಲವಂತಪಡಿಸಲಿಲ್ಲ. ನೀನು ಆಯಾಸಗೊಳ್ಳುವ ತನಕ ಧೂಪಹಾಕಬೇಕೆಂದು ನಾನು ನಿನ್ನನ್ನು ಒತ್ತಾಯಪಡಿಸಲಿಲ್ಲ. 24 ನೀನು ನನ್ನ ಗೌರವಾರ್ಥವಾಗಿ ಕಾಣಿಕೆಗಳನ್ನು ಮತ್ತು ಧೂಪವನ್ನು ಖರೀದಿ ಮಾಡಲು ನಿನ್ನ ಹಣವನ್ನು ಖರ್ಚು ಮಾಡಲಿಲ್ಲ. ಆದರೆ ನೀನು ನನ್ನನ್ನು ನಿನ್ನ ಗುಲಾಮನಾಗುವಂತೆ ಬಲವಂತಪಡಿಸಿದೆ. ನೀನು ನಿನ್ನ ಪಾಪಗಳಿಂದ ನನಗೆ ಭಾರವನ್ನುಂಟುಮಾಡಿರುವೆ ಮತ್ತು ನಿನ್ನ ಅಪರಾಧಗಳಿಂದ ನನ್ನನ್ನು ಕುಗ್ಗಿಸಿರುವೆ.
25 “ನಿಮ್ಮ ಪಾಪಗಳನ್ನೆಲ್ಲಾ ಅಳಿಸಿ ಹಾಕುವಾತನು ನಾನೇ. ನಾನು ಇದನ್ನು ನನಗೋಸ್ಕರವಾಗಿ ಮಾಡುತ್ತೇನೆ. ನಾನು ನಿಮ್ಮ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ. 26 ಆದರೆ ನೀನು ನನ್ನನ್ನು ಜ್ಞಾಪಿಸಿಕೊಳ್ಳಬೇಕು. ನಾವು ಒಟ್ಟಾಗಿ ಸೇರಿ ಯಾವದು ಸರಿ ಎಂದು ನಿರ್ಧರಿಸಬೇಕು. ನೀನು ಮಾಡಿದ್ದು ಸರಿಯಾಗಿದ್ದರೆ ರುಜುವಾತು ಮಾಡಬೇಕು. 27 ನಿನ್ನ ಮೊದಲನೆ ತಂದೆಯು ಪಾಪದಲ್ಲಿ ಬಿದ್ದನು. ನಿನ್ನ ವಕೀಲರು[a] ನನಗೆ ವಿರುದ್ಧವಾಗಿ ಕಾರ್ಯ ಮಾಡಿದರು. 28 ಪರಿಶುದ್ಧವಾಗಿ ಆಳುವ ನಿನ್ನವರನ್ನು ನಾನು ಅಪರಿಶುದ್ಧ ಮಾಡುವೆನು. ಯಾಕೋಬನನ್ನು ಸಂಪೂರ್ಣವಾಗಿ ನಾಶಮಾಡುವೆನು. ಇಸ್ರೇಲಿಗೆ ಕೆಟ್ಟ ವಿಷಯಗಳು ಸಂಭವಿಸುವವು.”
ಎರಡು ಪ್ರಾಣಿಗಳು
13 ನಂತರ ಸಮುದ್ರದಿಂದ ಒಂದು ಮೃಗವು ಹೊರಗೆ ಬರುತ್ತಿರುವುದನ್ನು ನಾನು ನೋಡಿದೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದವು. ಅದರ ಪ್ರತಿಯೊಂದು ಕೊಂಬಿನ ಮೇಲೆ ಒಂದೊಂದು ಕಿರೀಟವಿತ್ತು. ಪ್ರತಿಯೊಂದು ತಲೆಯ ಮೇಲೂ ದೇವದೂಷಣೆ ನಾಮಗಳನ್ನು ಬರೆಯಲಾಗಿತ್ತು. 2 ಈ ಮೃಗವು ನೋಡಲು ಚಿರತೆ ಯಂತಿತ್ತು. ಅದರ ಪಾದಗಳು ಕರಡಿಯ ಪಾದಗಳಂತಿದ್ದವು. ಅದರ ಬಾಯಿಯು ಸಿಂಹದ ಬಾಯಿಯಂತಿತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನು, ತನ್ನ ಸಿಂಹಾಸನವನ್ನು ಮತ್ತು ಅಧಿಕವಾದ ಅಧಿಕಾರವನ್ನು ನೀಡಿತು.
3 ಮೃಗದ ತಲೆಗಳಲ್ಲಿ ಒಂದು ತಲೆಯು ಗಾಯಗೊಂಡು ಸತ್ತಂತೆ ಕಾಣುತ್ತಿತ್ತು. ಆದರೆ ಮರಣಕರವಾದ ಈ ಗಾಯವನ್ನು ವಾಸಿಮಾಡಲಾಯಿತು. ಈ ಲೋಕದಲ್ಲಿದ್ದ ಜನರೆಲ್ಲರೂ ಆಶ್ಚರ್ಯಗೊಂಡು ಆ ಮೃಗವನ್ನು ಹಿಂಬಾಲಿಸಿದರು. 4 ಆ ಘಟಸರ್ಪವು ತನ್ನ ಶಕ್ತಿಯನ್ನೆಲ್ಲಾ ಆ ಮೃಗಕ್ಕೆ ನೀಡಿದ್ದರಿಂದ ಜನರೆಲ್ಲರೂ ಆ ಸರ್ಪವನ್ನೂ ಆ ಮೃಗವನ್ನೂ ಆರಾಧಿಸಿ, “ಮೃಗಕ್ಕಿಂತಲೂ ಅಧಿಕ ಬಲಶಾಲಿಗಳು ಯಾರಿದ್ದಾರೆ? ಅದರ ವಿರುದ್ಧ ಯಾರು ಹೋರಾಡಬಲ್ಲರು?” ಎಂದು ಹೇಳುತ್ತಿದ್ದರು.
5 ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡಲು ಅವಕಾಶ ನೀಡಲಾಯಿತು. ಆ ಮೃಗಕ್ಕೆ ಅದರ ಶಕ್ತಿಯನ್ನು ನಲವತ್ತೆರಡು ತಿಂಗಳ ಕಾಲ ಬಳಸಲು ಅವಕಾಶ ನೀಡಲಾಯಿತು. 6 ಆ ಮೃಗವು ದೇವರಿಗೆ ಅಪಮಾನ ಮಾಡಲು ತನ್ನ ಬಾಯನ್ನು ತೆರೆಯಿತು. ಅಲ್ಲದೆ ದೇವರ ಹೆಸರಿನ ವಿರುದ್ಧವಾಗಿಯೂ ದೇವರು ವಾಸಿಸುವ ಸ್ಥಳದ ವಿರುದ್ಧವಾಗಿಯೂ ಪರಲೋಕದಲ್ಲಿ ಜೀವಿಸುವ ಜನರೆಲ್ಲರ ವಿರುದ್ಧವಾಗಿಯೂ ದೂಷಣೆ ಮಾಡಿತು. 7 ದೇವರ ಪರಿಶುದ್ಧ ಜನರ ವಿರುದ್ಧ ಯುದ್ಧಮಾಡಿ, ಅವರನ್ನು ಸೋಲಿಸುವ ಶಕ್ತಿಯನ್ನು ಮೃಗಕ್ಕೆ ನೀಡಲಾಯಿತು. ಸಕಲ ಕುಲ, ಪ್ರಜೆ, ಭಾಷೆ ಮತ್ತು ಜನಾಂಗಗಳ ಮೇಲಿನ ಅಧಿಕಾರವನ್ನು ಆ ಮೃಗಕ್ಕೆ ಕೊಡಲಾಯಿತು. 8 ಲೋಕದಲ್ಲಿ ವಾಸಿಸುವ ಜನರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ. ಲೋಕವು ಆರಂಭಗೊಂಡಂದಿನಿಂದಲೂ ಕೊಲ್ಲಲ್ಪಟ್ಟ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿಲ್ಲವೋ ಅವರೇ ಈ ಜನರು.
9 ಇವುಗಳನ್ನು ಕೇಳುವವನು ಗಮನವಿಟ್ಟು ಆಲಿಸಲಿ:
10 ಸೆರೆ ಒಯ್ಯುವವನು
ಸೆರೆ ಒಯ್ಯಲ್ಪಡುವನು.
ಕತ್ತಿಯಿಂದ ಕೊಲ್ಲುವವನು
ಕತ್ತಿಯಿಂದಲೇ ಕೊಲ್ಲಲ್ಪಡುವನು.
ಆದ್ದರಿಂದ ದೇವರ ಪರಿಶುದ್ಧ ಜನರು ತಾಳ್ಮೆಯನ್ನೂ ನಂಬಿಕೆಯನ್ನೂ ಹೊಂದಿರಬೇಕು.
11 ನಂತರ ಭೂಮಿಯಿಂದ ಹೊರಗೆ ಬರುತ್ತಿರುವ ಮತ್ತೊಂದು ಮೃಗವನ್ನು ನಾನು ನೋಡಿದೆನು. ಅದಕ್ಕೆ ಟಗರಿನಂತೆ ಎರಡು ಕೊಂಬುಗಳಿದ್ದವು. ಆದರೆ ಅದು ಘಟಸರ್ಪದಂತೆ ಮಾತಾಡುತ್ತಿತ್ತು. 12 ಈ ಮೃಗವು ಮೊದಲಿನ ಮೃಗದ ಅಧಿಕಾರವನ್ನೇ ಬಳಸುತ್ತದೆ. ಭೂಮಿಯ ಮೇಲೆ ವಾಸಿಸುವ ಜನರೆಲ್ಲರೂ ಮೊದಲಿನ ಮೃಗವನ್ನು ಆರಾಧಿಸುವಂತೆ ಮಾಡಲು ಅದು ತನ್ನ ಶಕ್ತಿಯನ್ನೆಲ್ಲಾ ಬಳಸುತ್ತದೆ. ಮರಣಕರವಾದ ಗಾಯದಿಂದ ಗುಣಮುಖವಾದದ್ದೇ ಮೊದಲನೆಯ ಮೃಗ. 13 ಈ ಎರಡನೆಯ ಮೃಗವು ಮಹಾ ಅದ್ಭುತಗಳನ್ನು ಮಾಡುತ್ತದೆ. ಅದು ಜನರ ಕಣ್ಣೆದುರಿನಲ್ಲಿಯೇ ಬೆಂಕಿಯನ್ನು ಆಕಾಶದಿಂದ ಭೂಮಿಗೆ ಸುರಿಸುತ್ತದೆ.
14 ಈ ಎರಡನೆಯ ಮೃಗವು ಅದ್ಭುತಗಳನ್ನು ಮಾಡಲು ತನಗೆ ನೀಡಿರುವ ಶಕ್ತಿಯಿಂದ ಭೂಮಿಯ ಮೇಲೆ ವಾಸಿಸುವ ಜನರನ್ನು ಮರುಳು ಗೊಳಿಸುತ್ತದೆ. ಮೊದಲನೆಯ ಮೃಗದ ಸೇವೆಯನ್ನು ಮಾಡಲು ಅದು ಈ ಅದ್ಭುತಗಳನ್ನು ಮಾಡುತ್ತದೆ. ಕತ್ತಿಯಿಂದ ಗಾಯಗೊಂಡಿದ್ದೂ ಸಾಯದೆ ಬದುಕಿದ ಮೊದಲನೆಯ ಮೃಗಕ್ಕೆ ಗೌರವ ತೋರಲು ವಿಗ್ರಹವನ್ನು ನಿರ್ಮಿಸುವಂತೆ ಅದು ಜನರಿಗೆ ಆಜ್ಞಾಪಿಸಿತು. 15 ಮೊದಲನೆಯ ಮೃಗದ ವಿಗ್ರಹಕ್ಕೆ ಜೀವ ಬರುವಂತೆ ಮಾಡುವ ಶಕ್ತಿಯನ್ನು ಎರಡನೆಯ ಮೃಗಕ್ಕೆ ಕೊಡಲಾಯಿತು. ಆಗ ಆ ವಿಗ್ರಹಕ್ಕೆ ಮಾತಾಡುವ ಶಕ್ತಿ ಬಂದಿತು. ಅದು ತನ್ನನ್ನು ಪೂಜಿಸದವರನ್ನೆಲ್ಲಾ ಕೊಲ್ಲುವುದಾಗಿ ಆಜ್ಞೆ ಹೊರಡಿಸಿತು. 16 ಎರಡನೆಯ ಮೃಗವು ಸಹ ಎಲ್ಲರನ್ನು ಅಂದರೆ ಚಿಕ್ಕವರನ್ನು, ದೊಡ್ಡವರನ್ನು, ಶ್ರೀಮಂತರನ್ನು, ಬಡವರನ್ನು, ಗುಲಾಮರನ್ನು ಮತ್ತು ಸ್ವತಂತ್ರರನ್ನು, ತಮ್ಮ ಬಲಗೈಯ ಮೇಲಾಗಲಿ ಅಥವಾ ತಮ್ಮ ಹಣೆಗಳ ಮೇಲಾಗಲಿ ಗುರುತು ಹಾಕಿಕೊಳ್ಳಬೇಕೆಂದು ಒತ್ತಾಯಪಡಿಸಿತು. 17 ಈ ಗುರುತಿಲ್ಲದೆ ಯಾರೂ ಕೊಳ್ಳುವಂತಿಲ್ಲ ಮತ್ತು ಮಾರುವಂತಿಲ್ಲ. ಈ ಗುರುತು ಏನೆಂದರೆ ಆ ಮೃಗದ ಹೆಸರು ಅಥವಾ ಅದರ ಹೆಸರಿನ ಸಂಖ್ಯೆ.
18 ತಿಳುವಳಿಕೆಯುಳ್ಳ ಮನುಷ್ಯನು ಮೃಗದ ಸಂಖ್ಯೆಯ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲಿ ಜ್ಞಾನದ ಅಗತ್ಯವಿದೆ. ಈ ಸಂಖ್ಯೆಯು ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆ 666.
Kannada Holy Bible: Easy-to-Read Version. All rights reserved. © 1997 Bible League International