Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 12

ಯೆಹೋವನನ್ನು ಆರಾಧಿಸುವ ಸ್ಥಳ

12 “ನಿಮಗೆ ಸಿಗುವ ಹೊಸ ದೇಶದಲ್ಲಿ ಈ ಕಟ್ಟಳೆಗಳನ್ನು ನೀವು ಅನುಸರಿಸಬೇಕು. ನೀವು ಭೂಮಿಯ ಮೇಲೆ ಜೀವಿಸುವವರೆಗೆ ಆ ಕಟ್ಟಳೆಗಳನ್ನು ತಪ್ಪದೇ ಅನುಸರಿಸಬೇಕು. ನಮ್ಮ ಯೆಹೋವನು ನಮ್ಮ ಪೂರ್ವಿಕರ ದೇವರಾಗಿದ್ದಾನೆ. ಆತನೇ ಈ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಈಗ ಆ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಜನರಿಂದ ತೆಗೆದುಕೊಂಡು ನಿಮಗೆ ಅದನ್ನು ಕೊಡುತ್ತಾನೆ. ಅಲ್ಲಿ ನೀವು ಹೋದಾಗ ಆ ಜನರ ವಿಗ್ರಹಾರಾಧನೆಯ ಸ್ಥಳಗಳನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅವರ ಪೂಜಾಸ್ಥಳಗಳು ಎತ್ತರವಾದ ಬೆಟ್ಟಗುಡ್ಡಗಳ ಮೇಲೆಯೂ ಹಸುರಾಗಿರುವ ಮರಗಳ ಕೆಳಗೂ ಇರುತ್ತವೆ. ನೀವು ಅವರ ಯಜ್ಞವೇದಿಕೆಗಳನ್ನು ಪುಡಿಪುಡಿಮಾಡಿ, ಅವರ ಸ್ಮಾರಕ ಕಲ್ಲುಗಳನ್ನು ಕೆಡವಬೇಕು. ಅವರ ಅಶೇರ ಕಂಬಗಳನ್ನು ಸುಟ್ಟುಬಿಡಬೇಕು ಮತ್ತು ದೇವರುಗಳ ವಿಗ್ರಹಗಳನ್ನು ಕತ್ತರಿಸಿಹಾಕಬೇಕು. ಹೀಗೆ ನೀವು ಅವುಗಳ ಹೆಸರನ್ನು ಆ ಸ್ಥಳದಿಂದ ನಿರ್ಮೂಲ ಮಾಡಬೇಕು.

“ಆ ಜನರು ತಮ್ಮ ದೇವರುಗಳನ್ನು ಆರಾಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಾರದು. ನಿಮ್ಮ ದೇವರಾದ ಯೆಹೋವನು ನಿಮ್ಮ ಕುಲದವರ ಪ್ರಾಂತ್ಯಗಳಿಂದ ಒಂದು ವಿಶೇಷ ಸ್ಥಳವನ್ನು ಆರಿಸಿಕೊಂಡು ಅದಕ್ಕೆ ತನ್ನ ಹೆಸರಿಡುವನು. ಅಲ್ಲಿ ಆತನ ಆಲಯ ಕಟ್ಟಲ್ಪಡುವುದು. ಆತನನ್ನು ಆರಾಧಿಸಲು ನೀವು ಅಲ್ಲಿಗೆ ಹೋಗಬೇಕು. ಅಲ್ಲಿಗೆ ನೀವು ನಿಮ್ಮ ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ನಿಮ್ಮ ಬೆಳೆಗಳಲ್ಲಿ ಮತ್ತು ಪಶುಗಳಲ್ಲಿ ದಶಾಂಶವನ್ನು, ನಿಮ್ಮ ವಿಶೇಷ ಕಾಣಿಕೆಗಳನ್ನು, ಯೆಹೋವನಿಗೆ ನೀವು ಹರಕೆ ಹೊತ್ತುಕೊಂಡ ಯಾವುದೇ ಕಾಣಿಕೆಗಳನ್ನು, ನೀವು ಕೊಡಲಿಚ್ಛಿಸುವ ಯಾವುದೇ ವಿಶೇಷ ಕಾಣಿಕೆಗಳನ್ನು, ನಿಮ್ಮ ಮಂದೆ ಮತ್ತು ಹಿಂಡುಗಳ ಚೊಚ್ಚಲುಮರಿಗಳನ್ನು ತರಬೇಕು. ನೀವೂ ಮತ್ತು ನಿಮ್ಮ ಕುಟುಂಬಗಳವರೂ ಅಲ್ಲಿ ಒಟ್ಟಿಗೆ ಊಟ ಮಾಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿರುವನು. ನೀವು ದುಡಿದು ಸಂಪಾದಿಸಿದ ಎಲ್ಲಾ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಂಡು ಆ ಸ್ಥಳದಲ್ಲಿ ಆನಂದಿಸುವಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ಆ ಎಲ್ಲಾ ಒಳ್ಳೆಯವುಗಳನ್ನು ನಿಮಗೆ ಕೊಟ್ಟನೆಂದು ನೀವು ಜ್ಞಾಪಿಸಿಕೊಳ್ಳುವಿರಿ.

8-9 “ನೀವು ಇನ್ನೂ ವಾಗ್ದಾನದ ದೇಶವನ್ನು ಪ್ರವೇಶಿಸಲಿಲ್ಲದ ಕಾರಣ ನೀವು ಯೆಹೋವನಿಗೆ ನಿಮ್ಮ ಇಷ್ಟಾನುಸಾರವಾಗಿ ಆರಾಧನೆ ಮಾಡುತ್ತಿದ್ದೀರಿ. ಆದರೆ ಇದನ್ನೇ ಮುಂದುವರಿಸಬೇಡಿ. 10 ನೀವು ಜೋರ್ಡನ್ ನದಿಯನ್ನು ದಾಟಿ, ಯೆಹೋವನು ನಿಮಗೆ ಕೊಡುವ ದೇಶದಲ್ಲಿ ವಾಸಿಸುವಿರಿ. ನಿಮ್ಮ ಎಲ್ಲಾ ವೈರಿಗಳಿಂದ ತಪ್ಪಿಸಿ ದೇವರು ನಿಮಗೆ ಸಮಾಧಾನವನ್ನು ಅನುಗ್ರಹಿಸುವನು; ನೀವು ಅಲ್ಲಿ ಸುರಕ್ಷಿತವಾಗಿರುವಿರಿ. 11 ಆಗ ನಿಮ್ಮ ಯೆಹೋವನು ತನ್ನ ಹೆಸರಿಗಾಗಿ ಒಂದು ಸ್ಥಳವನ್ನು ಆರಿಸಿಕೊಳ್ಳುವನು. ಆ ಸ್ಥಳಕ್ಕೆ ನೀವು ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ಯಜ್ಞಾದಿಗಳನ್ನು ಸಮರ್ಪಿಸಬೇಕು; ನಿಮ್ಮ ಹರಕೆಯ ಕಾಣಿಕೆಗಳನ್ನು, ಚೊಚ್ಚಲ ಪಶುಗಳನ್ನು, ದಶಾಂಶವನ್ನು ಸಲ್ಲಿಸಬೇಕು. 12 ಅಲ್ಲಿಗೆ ನಿಮ್ಮ ಹೆಂಡತಿ ಮಕ್ಕಳೊಂದಿಗೆ, ನಿಮ್ಮ ಸೇವಕರೊಂದಿಗೆ ಮತ್ತು ನಿಮ್ಮ ಪಟ್ಟಣದಲ್ಲಿ ಸ್ವಾಸ್ತ್ಯವನ್ನು ಹೊಂದದೆ ಇರುವ ಲೇವಿಯರೊಂದಿಗೆ ಹೋಗಿ ಯೆಹೋವನ ಸಮಕ್ಷಮದಲ್ಲಿ ಸಂತೋಷಪಡಬೇಕು. 13 ನಿಮಗೆ ಇಷ್ಟಬಂದ ಸ್ಥಳಗಳಲ್ಲಿ ನೀವು ಬಲಿಯನ್ನು ಅರ್ಪಿಸಬೇಡಿ. 14 ಯೆಹೋವನು ತನ್ನ ವಿಶೇಷವಾದ ಸ್ಥಳವನ್ನು ನಿಮ್ಮ ಕುಲಗಳವರ ಮಧ್ಯದಿಂದ ಆರಿಸಿಕೊಳ್ಳುವನು. ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ನಾನು ನಿಮಗೆ ಹೇಳಿದವುಗಳೆಲ್ಲವನ್ನು ಅದೇ ಸ್ಥಳದಲ್ಲಿ ಮಾಡಿರಿ.

15 “ನೀವು ನಿಮ್ಮ ಸ್ಥಳಗಳಲ್ಲಿ ವಾಸಿಸುವಾಗ ಅಲ್ಲಿರುವ ಜಿಂಕೆ, ಟಗರು ಇತ್ಯಾದಿ ಶುದ್ಧ ಪ್ರಾಣಿಗಳನ್ನು ಕೊಂದು ತಿನ್ನಬಹುದು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವಷ್ಟು ಮಾಂಸದಲ್ಲಿ ಎಷ್ಟುಬೇಕಾದರೂ ತಿನ್ನಿರಿ. ಶುದ್ಧರೂ ಅಶುದ್ಧರೂ ಯಾರು ಬೇಕಾದರೂ ಆ ಮಾಂಸವನ್ನು ತಿನ್ನಬಹುದು. 16 ಆದರೆ ಅದರ ರಕ್ತವನ್ನು ಮಾತ್ರ ತಿನ್ನಬಾರದು. ಅದರ ರಕ್ತವನ್ನು ನೀರಿನಂತೆ ನೆಲದ ಮೇಲೆ ಚೆಲ್ಲಿಬಿಡಬೇಕು.

17 “ನೀವು ವಾಸಿಸುವ ಆ ಸ್ಥಳದಲ್ಲಿ ಕೆಲವನ್ನು ತಿನ್ನಕೂಡದು. ಅವು ಯಾವುವೆಂದರೆ: ದೇವರಿಗೆ ಮೀಸಲಿಟ್ಟ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಯ ಪಾಲು; ದೇವರಿಗೆ ಸಮರ್ಪಿಸಲು ಇಟ್ಟಿರುವ ಚೊಚ್ಚಲ ಪಶುಗಳು ಮತ್ತು ಹಿಂಡಿನ ಮರಿಗಳು, ನೀವು ಹರಕೆ ಹೊತ್ತುಕೊಂಡ ಕಾಣಿಕೆಗಳು ಮತ್ತು ದೇವರಿಗಾಗಿ ಮೀಸಲಿಟ್ಟಿದ್ದ ವಸ್ತುಗಳು. 18 ನಿಮ್ಮ ದೇವರಾದ ಯೆಹೋವನು ಆರಿಸಿಕೊಂಡಿರುವ ಮತ್ತು ಆತನು ನಿಮ್ಮೊಂದಿಗಿರುವ ಆ ವಿಶೇಷ ಸ್ಥಳದಲ್ಲಿಯೇ ನೀವು ಆ ಕಾಣಿಕೆಗಳನ್ನು ತಿನ್ನಬೇಕು. ನೀವು ಅಲ್ಲಿಗೆ ನಿಮ್ಮ ಗಂಡುಹೆಣ್ಣು ಮಕ್ಕಳೊಂದಿಗೆ, ನಿಮ್ಮ ಎಲ್ಲಾ ಸೇವಕರೊಂದಿಗೆ ಮತ್ತು ನಿಮ್ಮ ಊರುಗಳಲ್ಲಿ ವಾಸವಾಗಿರುವ ಲೇವಿಯರೊಂದಿಗೆ ಹೋಗಿ ನಿಮ್ಮ ದೇವರಾದ ಯೆಹೋವನೊಂದಿಗೆ ಆನಂದಿಸಿರಿ; ನೀವು ದುಡಿದು ಸಂಪಾದಿಸಿದವುಗಳನ್ನು ಅನುಭವಿಸಿರಿ. 19 ಆದರೆ ಯಾವಾಗಲೂ ಈ ಊಟವನ್ನು ಲೇವಿಯರೊಂದಿಗೆ ಹಂಚಿಕೊಂಡು ತಿನ್ನಬೇಕೆಂಬುದನ್ನು ಜ್ಞಾಪಕದಲ್ಲಿಡಿರಿ. ನೀವು ನಿಮ್ಮ ದೇಶದಲ್ಲಿ ವಾಸಿಸುವಷ್ಟು ಕಾಲ ಹೀಗೆ ಮಾಡಿರಿ.

20-21 “ನಿಮ್ಮ ದೇವರಾದ ಯೆಹೋವನು ನಿಮ್ಮ ದೇಶವನ್ನು ವಿಸ್ತಾರ ಮಾಡುವನು. ಆ ಸಮಯದಲ್ಲಿ ನೀವು ಇರುವ ಸ್ಥಳಗಳು ಆತನು ತನ್ನ ಹೆಸರಿಗಾಗಿ ಆರಿಸಿದ ಸ್ಥಳದಿಂದ ತುಂಬಾ ದೂರವಿರಬಹುದು. ಆಗ ನಿಮಗೆ ಮಾಂಸ ಊಟಮಾಡಲು ಆಸೆಯಾದರೆ ನಿಮ್ಮ ಹಿಂಡಿನಿಂದಾಗಲಿ ಹಟ್ಟಿಯಿಂದಾಗಲಿ ಪ್ರಾಣಿಯನ್ನು ಕೊಂದು ತಿನ್ನಬಹುದು. ನಾನು ತಿಳಿಸುವ ರೀತಿಯಲ್ಲಿ ತಿನ್ನಿರಿ. ನಿಮಗೆ ಬೇಕಾದಾಗಲೆಲ್ಲಾ ಹೀಗೆ ಮಾಡಿರಿ. 22 ಜಿಂಕೆಯನ್ನಾಗಲಿ ಸಾರಂಗವನ್ನಾಗಲಿ ತಿನ್ನುವಂತೆ ನೀವು ಈ ಮಾಂಸವನ್ನು ತಿನ್ನಬಹುದು. ಶುದ್ಧರಾಗಿರುವವರೂ ಅಶುದ್ಧರಾಗಿರುವವರೂ ಈ ಮಾಂಸವನ್ನು ತಿನ್ನಬಹುದು. 23 ಆದರೆ ರಕ್ತವನ್ನು ಮಾತ್ರ ತಿನ್ನಬಾರದು. ಯಾಕೆಂದರೆ ರಕ್ತವು ಪ್ರಾಣಕ್ಕೆ ಆಧಾರ. ಮಾಂಸದಲ್ಲಿ ಇನ್ನೂ ಜೀವಕಣಗಳು ಇರುವುದರಿಂದ ರಕ್ತದೊಂದಿಗೆ ಮಾಂಸವನ್ನು ತಿನ್ನಬೇಡಿರಿ. 24 ರಕ್ತವನ್ನು ನೀರಿನಂತೆ ನೆಲದಲ್ಲಿ ಚೆಲ್ಲಿಬಿಡಬೇಕು. 25 ಆದ್ದರಿಂದ ನೀವು ಅದನ್ನು ತಿನ್ನದೆ ಯೆಹೋವನು ನಿಮಗೆ ತಿಳಿಸಿದಂತೆ ಮಾಡಿರಿ. ಆಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.

26 “ನೀವು ನಿಮ್ಮ ದೇವರಿಗೆ ವಿಶೇಷ ಕಾಣಿಕೆಗಳನ್ನು ಸಮರ್ಪಿಸಲು ಇಷ್ಟಪಟ್ಟರೆ ಆಗ ನೀವು ದೇವರು ಆರಿಸಿರುವ ಸ್ಥಳಕ್ಕೆ ಹೋಗಿ ಅಲ್ಲಿ ಅದನ್ನು ಸಮರ್ಪಿಸಿರಿ. ನಿಮ್ಮ ಸರ್ವಾಂಗಹೋಮವನ್ನೂ ಆ ಸ್ಥಳದಲ್ಲಿಯೇ ಸಮರ್ಪಿಸಬೇಕು. 27 ನಿಮ್ಮ ದೇವರಾದ ಯೆಹೋವನ ಯಜ್ಞವೇದಿಕೆಯ ಮೇಲೆ ನಿಮ್ಮ ಸರ್ವಾಂಗಹೋಮದ ಪಶುವಿನ ಮಾಂಸವನ್ನು ಮತ್ತು ರಕ್ತವನ್ನು ಸಮರ್ಪಿಸಬೇಕು. ನಿಮ್ಮ ಯಜ್ಞಗಳಲ್ಲಿ ರಕ್ತವನ್ನು ಬಲಿಪೀಠದಲ್ಲಿ ಸುರಿದು ಮಾಂಸವನ್ನು ನೀವು ತಿನ್ನಬಹುದು. 28 ಯೆಹೋವನು ಕೊಡುವ ಕಟ್ಟಳೆಗಳನ್ನು ನೀವು ಅನುಸರಿಸಿರಿ. ನಿಮ್ಮ ದೇವರಾದ ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡುವಾಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.

29 “ನೀವು ಬೇರೆಯವರ ದೇಶವನ್ನು ವಶಪಡಿಸಿಕೊಳ್ಳಲು ಹೋಗುತ್ತಿದ್ದೀರಿ. ನಿಮ್ಮ ದೇವರಾದ ಯೆಹೋವನು ಆ ಜನರನ್ನು ನಿಮಗಾಗಿ ನಾಶಮಾಡುವನು. ಆ ಜನರನ್ನು ಅಲ್ಲಿಂದ ಹೊಡೆದೋಡಿಸಿ ಅವರ ಸ್ಥಳದಲ್ಲಿ ನೀವು ವಾಸಿಸುವಿರಿ. 30 ಅಲ್ಲಿ ವಾಸಿಸುವ ಅನ್ಯಜನರನ್ನು ನೀವು ನಾಶಮಾಡಬೇಕು. ಇಲ್ಲದಿದ್ದಲ್ಲಿ ಅವರು ನಿಮಗೆ ಉರುಲಾಗುವರು; ಅವರ ವಿಗ್ರಹಗಳನ್ನು ಪೂಜಿಸದಂತೆ ಎಚ್ಚರಿಕೆಯಿಂದಿರಿ. ಆ ಸುಳ್ಳುದೇವರುಗಳಿಗೆ ಪ್ರಾರ್ಥಿಸಬೇಡಿ. ‘ಆ ಜನರು ಆ ಸುಳ್ಳುದೇವರುಗಳನ್ನು ಪೂಜಿಸಿದ ಹಾಗೆ ನಾನೂ ಪೂಜಿಸುವೆನು’ ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳಬೇಡಿ! 31 ನಿಮ್ಮ ದೇವರಾದ ಯೆಹೋವನಿಗೆ ನೀವು ಆ ರೀತಿ ಮಾಡಬಾರದು. ಆ ರೀತಿಯಾಗಿ ಆತನನ್ನು ಆರಾಧಿಸಬಾರದು. ಯಾಕೆಂದರೆ ಅವರು ತಮ್ಮ ದೇವರೆದುರಿನಲ್ಲಿ ಅಸಹ್ಯವಾದ ಕಾರ್ಯಗಳನ್ನು ಮಾಡುತ್ತಾರೆ. ಅದನ್ನು ನಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ. ಅವರು ತಮ್ಮ ಮಕ್ಕಳನ್ನೇ ದೇವರಿಗೆ ಬಲಿ ಅರ್ಪಿಸುತ್ತಾರೆ.

32 “ನಾನು ಆಜ್ಞಾಪಿಸಿದ ಪ್ರಕಾರವೇ ನೀವು ಮಾಡಿರಿ. ಅದಕ್ಕೆ ಏನೂ ಕೂಡಿಸಬಾರದು; ಅದರಿಂದ ಏನೂ ತೆಗೆಯಬಾರದು.

ಕೀರ್ತನೆಗಳು 97-98

97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
    ದೂರ ದೇಶಗಳೆಲ್ಲಾ ಹರ್ಷಿಸಲಿ.
ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
    ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
ಬೆಂಕಿಯು ಆತನ ಮುಂದೆ ಹೋಗಿ
    ಆತನ ಶತ್ರುಗಳನ್ನು ನಾಶಮಾಡುವುದು.
ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
    ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
    ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
    ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!

ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
    ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
    ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
ಚೀಯೋನೇ, ಕೇಳಿ ಸಂತೋಷಪಡು!
    ಯೆಹೂದದ ಪಟ್ಟಣಗಳೇ, ಆನಂದಿಸಿರಿ.
    ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
    ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
    ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
    ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
    ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!

ಸ್ತುತಿಗೀತೆ.

98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
    ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
    ಆತನಿಗೆ ಜಯವನ್ನು ಉಂಟುಮಾಡಿವೆ.
ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
    ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
    ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
    ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
ಸಮುದ್ರವೂ ಭೂಮಿಯೂ
    ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
ನದಿಗಳೇ, ಚಪ್ಪಾಳೆ ತಟ್ಟಿರಿ!
    ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
ಯೆಹೋವನ ಎದುರಿನಲ್ಲಿ ಹಾಡಿರಿ,
    ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
    ಆತನು ಜನರನ್ನು ನೀತಿಯಿಂದ ಆಳುತ್ತಾನೆ.

ಯೆಶಾಯ 40

ಇಸ್ರೇಲಿನ ಶಿಕ್ಷೆಯು ಅಂತ್ಯವಾಗುವದು

40 ನಿನ್ನ ದೇವರು ಹೇಳುವುದೇನೆಂದರೆ:
“ನನ್ನ ಜನರನ್ನು ಸಂತೈಸು, ಸಂತೈಸು.
ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು.
    ಜೆರುಸಲೇಮಿಗೆ ಹೀಗೆ ಹೇಳು,
‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು.
    ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’
ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”

ಒಬ್ಬ ಮನುಷ್ಯನು ಕೂಗಿಹೇಳುವುದನ್ನು ಕೇಳಿರಿ:
“ಯೆಹೋವನಿಗೆ ಅಡವಿಯಲ್ಲಿ ದಾರಿಯನ್ನು ಸಿದ್ಧಮಾಡಿರಿ!
    ನಮ್ಮ ದೇವರಿಗೆ ಅಲ್ಲಿ ಮಾರ್ಗವನ್ನು ನೆಟ್ಟಗೆಮಾಡಿರಿ!
ತಗ್ಗುಗಳನ್ನು ಸಮತಟ್ಟು ಮಾಡಿರಿ.
    ಎಲ್ಲಾ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿರಿ.
ಕೊರಕಲು ರಸ್ತೆಗಳನ್ನು ನೆಟ್ಟಗೆ ಮಾಡಿರಿ.
    ಏರುತಗ್ಗು ನೆಲವನ್ನು ಸಮಗೊಳಿಸಿರಿ.
ಆಗ ಯೆಹೋವನ ಮಹಿಮೆಯು ಪ್ರದರ್ಶಿಸಲ್ಪಡುವದು.
    ಆಗ ಎಲ್ಲರೂ ಯೆಹೋವನ ಮಹಿಮೆಯನ್ನು ನೋಡುವರು.
ಯೆಹೋವನೇ ಇವುಗಳನ್ನು ಸ್ವತಃ ನುಡಿದಿದ್ದಾನೆ.”

ಒಂದು ಸ್ವರವು “ಮಾತನಾಡು” ಎಂದಿತು.
    ಅದಕ್ಕೆ ಮನುಷ್ಯನು, “ಏನು ಮಾತಾಡಲಿ” ಅಂದನು.
ಆಗ ಸ್ವರವು, “ಜನರು ಶಾಶ್ವತವಾಗಿ ಜೀವಿಸುವದಿಲ್ಲ, ಅವರೆಲ್ಲರೂ ಹುಲ್ಲಿನಂತಿದ್ದಾರೆ.
    ಅವರ ಒಳ್ಳೆಯತನವು ಕಾಡುಹೂವಿನಂತಿದೆ.
ಯೆಹೋವನ ಕಡೆಯಿಂದ ಒಂದು ಬಲವಾದ ಗಾಳಿಯು ಹುಲ್ಲಿನ ಮೇಲೆ ಬೀಸಿತು.
    ಆ ಹುಲ್ಲು ಒಣಗಿಹೋಯಿತು.
    ಕಾಡಿನ ಪುಷ್ಪವು ಬಾಡಿಹೋಯಿತು.
ಜನರೆಲ್ಲರೂ ಹುಲ್ಲಿನಂತಿದ್ದಾರೆ. ಹುಲ್ಲು ಸಾಯುತ್ತದೆ. ಪುಷ್ಪಗಳು ಉದುರುತ್ತವೆ.
    ಆದರೆ ನಮ್ಮ ದೇವರ ಮಾತುಗಳು ಶಾಶ್ವತವಾಗಿವೆ” ಎಂದು ಹೇಳಿತು.

ದೇವರ ಸುವಾರ್ತೆ-ರಕ್ಷಣೆ

ಚೀಯೋನೇ, ಸಾರಿ ತಿಳಿಸಲು ನಿನಗೆ ಒಂದು ಶುಭವಾರ್ತೆಯಿದೆ.
    ಉನ್ನತ ಪರ್ವತಕ್ಕೆ ಏರಿಹೋಗಿ ಶುಭವಾರ್ತೆಯನ್ನು ಗಟ್ಟಿಯಾಗಿ ಸಾರು!
ಜೆರುಸಲೇಮೇ, ನಿನಗೆ ತಿಳಿಸಲು ಒಳ್ಳೆಯ ವಾರ್ತೆ ಇದೆ.
    ಹೆದರಬೇಡ, ಅದನ್ನು ಗಟ್ಟಿಯಾಗಿ ಸಾರು.
ಯೆಹೂದದ ಎಲ್ಲಾ ನಗರಗಳಲ್ಲಿ ತಿಳಿಸು:
    “ಇಗೋ! ನಿನ್ನ ದೇವರು ಇಲ್ಲಿದ್ದಾನೆ.”
10 ಇಗೋ, ನನ್ನ ಒಡೆಯನಾದ ಯೆಹೋವನು ಬಲಸಾಮರ್ಥ್ಯಗಳೊಡನೆ ಬರುತ್ತಿದ್ದಾನೆ.
    ಆತನು ತನ್ನ ಪರಾಕ್ರಮದಿಂದ ಎಲ್ಲಾ ಜನರನ್ನು ಆಳುವನು.
ಆತನು ತನ್ನ ಜನರಿಗೆ ಪ್ರತಿಫಲಗಳನ್ನು ತರುವನು.
    ಅವರ ಸಂಬಳವು ಆತನ ಕೈಯಲ್ಲಿದೆ.
11 ಯೆಹೋವನು ತನ್ನ ಜನರನ್ನು ನಡಿಸುತ್ತಾನೆ.
    ಕುರಿಗಳನ್ನು ನಡಿಸುವ ಕುರುಬನಂತೆ ಯೆಹೋವನು ತನ್ನ ಭುಜಬಲದಿಂದ ತನ್ನ ಕುರಿಗಳನ್ನು ಒಟ್ಟುಗೂಡಿಸುವನು.
ಯೆಹೋವನು ಕುರಿಮರಿಗಳನ್ನು ಎತ್ತಿಕೊಂಡು ಅಪ್ಪಿಕೊಳ್ಳುವನು.
    ಅದರ ತಾಯಿ ಆತನ ಪಕ್ಕದಲ್ಲೇ ನಡೆಯುವವು.

ಪ್ರಪಂಚವನ್ನು ಸೃಷ್ಟಿಸಿದವನು ದೇವರೇ

12 ತನ್ನ ಅಂಗೈಯಿಂದ ಸಾಗರಗಳನ್ನು ಅಳತೆ ಮಾಡಿದವರ್ಯಾರು?
    ತನ್ನ ಹಸ್ತದಿಂದ ಆಕಾಶವನ್ನು ಅಳತೆ ಮಾಡಿದವರ್ಯಾರು?
ಭೂಮಿಯ ಧೂಳನ್ನೆಲ್ಲಾ ಒಂದು ಬೋಗುಣಿಯಲ್ಲಿ ಅಳೆದವರ್ಯಾರು?
    ಪರ್ವತಗಳನ್ನು ಮತ್ತು ಬೆಟ್ಟಗಳನ್ನು ಅಳೆಯಲು ಅಳತೆಕೋಲನ್ನು ಯಾರು ಉಪಯೋಗಿಸಿದರು?
13 ಯೆಹೋವನ ಆತ್ಮಕ್ಕೆ ಆತನು ಮಾಡಬೇಕಾದದ್ದನ್ನು ತಿಳಿಸಿದವರು ಯಾರೂ ಇಲ್ಲ.
    ಆತನು ಮಾಡಿದ ಕಾರ್ಯಗಳನ್ನು ಹೀಗೆ ಮಾಡಬೇಕೆಂದು ಹೇಳಿದವರಿಲ್ಲ.
14 ಯೆಹೋವನು ಯಾರಿಂದಾದರೂ ಸಹಾಯ ಕೇಳಿದನೋ?
    ಯಾರಾದರೂ ಆತನಿಗೆ ನ್ಯಾಯನೀತಿಯನ್ನು ಕಲಿಸಿದರೋ?
    ಯಾರಾದರೂ ಆತನಿಗೆ ಜ್ಞಾನವನ್ನು ತಿಳಿಸಿಕೊಟ್ಟರೋ?
    ಯಾವನಾದರೂ ಯೆಹೋವನಿಗೆ ತಿಳುವಳಿಕೆಯನ್ನು ಹೇಳಿಕೊಟ್ಟನೋ?
15 ಇಗೋ, ಈ ಪ್ರಪಂಚದ ಜನಾಂಗಗಳು ಕೊಡದಲ್ಲಿರುವ ಒಂದು ಹನಿ ನೀರಿನಂತಿವೆ.
ದೂರದಲ್ಲಿರುವ ಎಲ್ಲಾ ಜನಾಂಗಗಳನ್ನು ಯೆಹೋವನು ಒಟ್ಟುಗೂಡಿಸಿ ತಕ್ಕಡಿಯಲ್ಲಿ ತೂಗಿದರೆ
    ಅವು ಧೂಳಿನ ಕಣದಂತಿವೆ.
16 ಯೆಹೋವನಿಗೆ ಲೆಬನೋನಿನಲ್ಲಿರುವ ಮರಗಳನ್ನೆಲ್ಲಾ ಸುಟ್ಟರೂ ಸಾಲದು,
    ಲೆಬನೋನಿನಲ್ಲಿರುವ ಪ್ರಾಣಿಗಳು ಆತನ ಯಜ್ಞಕ್ಕೆ ಸಾಲವು.
17 ಲೋಕದ ಜನಾಂಗದವರೆಲ್ಲರೂ ಯೆಹೋವನೆದುರು ಏನೂ ಅಲ್ಲ.
    ಆತನೆದುರು ಎಲ್ಲಾ ಜನಾಂಗದವರು ಏನೂ ಅಲ್ಲ.

ದೇವರ ರೂಪವು ಜನರಿಗೆ ತಿಳಿಯದು

18 ದೇವರನ್ನು ಬೇರೆ ಯಾವುದಕ್ಕಾದರೂ ಹೋಲಿಸಬಹುದೇ?
    ದೇವರ ಚಿತ್ತವನ್ನು ಬರೆಯಬಹುದೇ?
19 ಇಲ್ಲ, ಆದರೆ ಕೆಲವರು ವಿಗ್ರಹಗಳನ್ನು ಕಲ್ಲಿನಿಂದ ಅಥವಾ ಮರದಿಂದ ತಯಾರಿಸುತ್ತಾರೆ.
    ಅವುಗಳನ್ನು ಅವರು ದೇವರು ಎಂದು ಕರೆಯುತ್ತಾರೆ.
ಒಬ್ಬನು ಒಂದು ವಿಗ್ರಹವನ್ನು ಮಾಡುತ್ತಾನೆ.
    ಇನ್ನೊಬ್ಬನು ಅದಕ್ಕೆ ಬಂಗಾರದ ತಗಡನ್ನು ಹೊದಿಸುತ್ತಾನೆ ಮತ್ತು ಬೆಳ್ಳಿಹಾರವನ್ನು ಮಾಡಿಹಾಕುತ್ತಾನೆ.
20 ಅದರ ಪೀಠಕ್ಕಾಗಿ ವಿಶೇಷ ಜಾತಿಯ ಮರವನ್ನು ಆರಿಸುವನು.
    ಈ ಬಗೆಯ ಮರವು ಕೊಳೆತುಹೋಗುವದಿಲ್ಲ.
ಆ ಬಳಿಕ ಅವನು ಒಳ್ಳೆಯ ಬಡಗಿಯನ್ನು ನೇಮಿಸುವನು.
    ಆ ಬಡಗಿಯು ವಿಗ್ರಹ ನಿಲ್ಲಿಸಿದಾಗ ಅದು ಪಕ್ಕಕ್ಕೆ ವಾಲಿ ಬೀಳದಂತೆ ಮಾಡುವನು.
21 ಈ ವಿಷಯಗಳನ್ನೆಲ್ಲಾ ನೀವು ಸರಿಯಾಗಿ ತಿಳಿದಿದ್ದೀರಲ್ಲವೆ?
    ಇದರ ವಿಚಾರವಾಗಿ ನೀವು ಕೇಳಿರುವಿರಿ.
    ಎಷ್ಟೋ ವರ್ಷಗಳ ಹಿಂದೆ ಯಾರೋ ನಿಮಗೆ ಹೇಳಿದ್ದಿರಬಹುದು.
    ಖಂಡಿತವಾಗಿಯೂ ಭೂಮಿಯನ್ನು ಯಾರು ನಿರ್ಮಿಸಿದ್ದಾರೆಂದು ನೀವು ತಿಳಿದಿರುವಿರಿ.
22 ಯೆಹೋವನು ಸತ್ಯವಾದ ದೇವರು.
ಆತನು ಉನ್ನತವಾದ ಆಕಾಶದಲ್ಲಿ ಕುಳಿತುಕೊಳ್ಳುವನು.
    ಆತನಿಗೆ ಹೋಲಿಸಿದರೆ ಜನರು ಮಿಡತೆಗಳಂತಿರುವರು.
ಆತನು ಬಟ್ಟೆಯಂತೆ ಆಕಾಶಮಂಡಲವನ್ನು ಸುರುಳಿಯಾಗಿ ಸುತ್ತುವನು.
    ಆಕಾಶಮಂಡಲವನ್ನು ಆತನು ಎಳೆದು ಗುಡಾರದಂತೆ ಅಗಲಮಾಡಿ ಅದರಡಿಯಲ್ಲಿ ಕುಳಿತುಕೊಳ್ಳುವನು.
23 ಆತನು ಅಧಿಪತಿಗಳನ್ನು ಅಯೋಗ್ಯರನ್ನಾಗಿ ಮಾಡುವನು.
    ಆತನು ಲೋಕದ ನ್ಯಾಯಾಧೀಶರನ್ನು ನಿಷ್ಪ್ರಯೋಜಕರನ್ನಾಗಿ ಮಾಡುವನು.
24 ಇವರು ನೆಲದಲ್ಲಿ ನೆಟ್ಟಿರುವ ಸಸಿಗಳಂತಿರುವರು.
    ಅವುಗಳ ಬೇರುಗಳು ನೆಲದೊಳಗೆ ಆಳವಾಗಿ ಹೋಗುವ ಮೊದಲೇ
ದೇವರ ಉಸಿರಿಗೆ ಅವು ಬಾಡಿ ಸಾಯುವವು;
    ಗಾಳಿಯು ಒಣಹುಲ್ಲಿನಂತೆ ಅವುಗಳನ್ನು ಬಡಿದುಕೊಂಡು ಹೋಗುವದು.
25 ಪರಿಶುದ್ಧನಾದ ದೇವರು ಹೇಳುವುದೇನೆಂದರೆ: “ನನ್ನನ್ನು ಯಾರಿಗಾದರೂ ಹೋಲಿಸಲು ಸಾಧ್ಯವೇ?
    ನನಗೆ ಸಮಾನರು ಯಾರೂ ಇಲ್ಲ.”

26 ಆಕಾಶಮಂಡಲದ ಕಡೆಗೆ ನೋಡಿರಿ!
    ಆ ನಕ್ಷತ್ರಗಳನ್ನೆಲ್ಲಾ ಮಾಡಿದವರು ಯಾರು?
    ಆಕಾಶದಲ್ಲಿರುವ ಆ “ಸೈನ್ಯಗಳನ್ನು” ಸಿದ್ಧ ಮಾಡಿದವರು ಯಾರು?
    ಪ್ರತಿಯೊಂದು ನಕ್ಷತ್ರವನ್ನು ಹೆಸರೆತ್ತಿ ಕರೆಯುವವರು ಯಾರು?
ಆತನು ಬಲಿಷ್ಠನೂ ಪರಾಕ್ರಮಶಾಲಿಯೂ ಆಗಿದ್ದಾನೆ.
    ಆದ್ದರಿಂದ ಆ ನಕ್ಷತ್ರಗಳಲ್ಲಿ ಒಂದೂ ನಾಶವಾಗಲಿಲ್ಲ.

27 ಯಾಕೋಬೇ, ಇದು ಸತ್ಯ!
    ಇಸ್ರೇಲೇ, ನೀನದನ್ನು ನಂಬಬೇಕು.
ಹೀಗಿರಲು ನೀನು, “ಯೆಹೋವನು ನನ್ನ ನಡತೆಯನ್ನು ಗಮನಿಸುವದಿಲ್ಲ.
    ನನ್ನನ್ನು ಕಂಡುಹಿಡಿದು ಶಿಕ್ಷಿಸುವದಿಲ್ಲ” ಎಂದು ಹೇಳುವೆ.

28 ದೇವರಾದ ಯೆಹೋವನು ಜ್ಞಾನಿಯೆಂಬುದನ್ನು
    ನೀನು ಖಂಡಿತವಾಗಿಯೂ ಕೇಳಿರುವೆ.
ಆತನು ತಿಳಿದಿರುವ ಪ್ರತಿಯೊಂದನ್ನೂ ಕಲಿತುಕೊಳ್ಳಲು ಜನರಿಗೆ ಸಾಧ್ಯವಿಲ್ಲ.
    ಆತನು ಆಯಾಸಗೊಳ್ಳುವದಿಲ್ಲ; ಆತನಿಗೆ ವಿಶ್ರಾಂತಿಯ ಅವಶ್ಯವಿಲ್ಲ.
ಭೂಮಿಯಲ್ಲಿರುವ ದೂರ ಸ್ಥಳಗಳನ್ನೆಲ್ಲಾ ಮಾಡಿದವನು ಆತನೇ.
    ಆತನು ನಿರಂತರಕ್ಕೂ ಜೀವಿಸುವಾತನಾಗಿದ್ದಾನೆ.
29 ಬಳಲಿಹೋದವರನ್ನು ಆತನು ಬಲಶಾಲಿಗಳನ್ನಾಗಿ ಮಾಡುತ್ತಾನೆ.
    ಬಲಹೀನರನ್ನು ಶಕ್ತಿವಂತರನ್ನಾಗಿ ಮಾಡುತ್ತಾನೆ.
30 ಯೌವನಸ್ಥರು ಆಯಾಸಗೊಳ್ಳುವರು.
    ಅವರಿಗೆ ವಿಶ್ರಾಂತಿ ಬೇಕು; ಹುಡುಗರೂ ಮುಗ್ಗರಿಸಿಬೀಳುವರು.
31 ಆದರೆ ಯೆಹೋವನಲ್ಲಿ ಭರವಸೆಯಿಟ್ಟವರು ಮತ್ತೆ ಬಲಹೊಂದುವರು.
ಹದ್ದು ಹೊಸಗರಿಗಳನ್ನು ಹೊಂದುವಂತೆ ಅವರು ಹೊಸ ಬಲವನ್ನು ಹೊಂದುವರು.
    ಅವರು ಓಡಾಡಿದರೂ ಆಯಾಸಗೊಳ್ಳುವದಿಲ್ಲ.
    ನಡೆದಾಡಿದರೂ ಬಳಲಿಹೋಗುವುದಿಲ್ಲ.

ಪ್ರಕಟನೆ 10

ದೇವದೂತನು ಮತ್ತು ಚಿಕ್ಕ ಸುರುಳಿ

10 ನಂತರ ಮತ್ತೊಬ್ಬ ಬಲಿಷ್ಠನಾದ ದೇವದೂತನೊಬ್ಬನು ಪರಲೋಕದಿಂದ ಇಳಿದುಬರುವುದನ್ನು ನಾನು ನೋಡಿದೆನು. ಆ ದೇವದೂತನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಸುತ್ತಲೂ ಕಾಮನಬಿಲ್ಲಿತ್ತು. ಆ ದೇವದೂತನ ಮುಖವು ಸೂರ್ಯನಂತೆಯೂ ಅವನ ಕಾಲುಗಳು ಬೆಂಕಿಯ ಕಂಬಗಳಂತೆಯೂ ಇದ್ದವು. ಆ ದೇವದೂತನು ಒಂದು ಚಿಕ್ಕ ಸುರುಳಿಯನ್ನು ಹಿಡಿದಿದ್ದನು. ಅವನ ಕೈಯಲ್ಲಿದ್ದ ಸುರುಳಿಯು ಬಿಚ್ಚಿತ್ತು. ಅವನು ತನ್ನ ಬಲಪಾದವನ್ನು ಸಮುದ್ರದ ಮೇಲೆಯೂ, ತನ್ನ ಎಡಪಾದವನ್ನು ಭೂಮಿಯ ಮೇಲೆಯೂ ಇಟ್ಟು, ಸಿಂಹ ಗರ್ಜಿಸುವಂತೆ ಗಟ್ಟಿಯಾಗಿ ಆರ್ಭಟಿಸಿದನು. ಆ ಬಳಿಕ ಏಳು ಗುಡುಗುಗಳ ಧ್ವನಿಯು ಮಾತನಾಡಿತು.

ಅದನ್ನು ನಾನು ಬರೆಯಬೇಕೆಂದಿದ್ದಾಗ ಪರಲೋಕದಿಂದ ಬಂದ ಒಂದು ಧ್ವನಿಯು ನನಗೆ, “ಏಳು ಗುಡುಗುಗಳು ಹೇಳಿದ್ದನ್ನು ನೀನು ಬರೆಯಬೇಡ. ಅವುಗಳನ್ನು ರಹಸ್ಯವಾಗಿಟ್ಟಿರು” ಎಂದು ಹೇಳಿತು.

ಅನಂತರ ಭೂಮಿಯ ಮೇಲೆ ಮತ್ತು ಸಮುದ್ರದ ಮೇಲೆ ನಿಂತಿದ್ದ ಒಬ್ಬ ದೇವದೂತನನ್ನು ಕಂಡೆನು. ಅವನು ತನ್ನ ಬಲಗೈಯನ್ನು ಪರಲೋಕದತ್ತ ಚಾಚಿದನು. ಆ ದೇವದೂತನು ಯುಗ ಯುಗಾಂತರಗಳಲ್ಲಿಯೂ ನೆಲೆಸಿರುವಾತನ ಮತ್ತು ಆಕಾಶವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಭೂಮಿಯನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಸಮುದ್ರವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸ್ಟಿದಾತನ ಶಕ್ತಿಯಿಂದ ಹೀಗೆ ವಾಗ್ದಾನವನ್ನು ಮಾಡಿದನು: “ಇನ್ನು ಕಾಯುವ ಅಗತ್ಯವಿಲ್ಲ; ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯು ನೆರವೇರುವುದು. ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ತೆಯೇ ಈ ಯೋಜನೆ.”

ಬಳಿಕ ಪರಲೋಕದಿಂದ ಮತ್ತೆ ಅದೇ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು ನನಗೆ, “ಹೋಗು, ದೇವದೂತನ ಕೈಯಲ್ಲಿರುವ ಬಿಚ್ಚಿದ ಸುರುಳಿಯನ್ನು ತೆಗೆದುಕೊ. ಆ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತಿದ್ದಾನೆ” ಎಂದು ಹೇಳಿತು.

ಆದ್ದರಿಂದ ನಾನು ಆ ದೇವದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಆ ದೇವದೂತನು ನನಗೆ, “ಸುರುಳಿಯನ್ನು ತೆಗೆದುಕೊಂಡು ಅದನ್ನು ತಿಂದುಬಿಡು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು. 10 ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ನಾನು ತೆಗೆದುಕೊಂಡು ತಿಂದೆನು. ನನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಬಳಿಕ, ಅದು ನನ್ನ ಹೊಟ್ಟೆಯಲ್ಲಿ ಕಹಿಯಾಯಿತು. 11 ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಜೆಗಳ, ಭಾಷೆಗಳ ಮತ್ತು ರಾಜರುಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International